ಭೀಮೇಶ್ವರನ ಭಂಡಾರ ಮತ್ತು “ಎಲ್ಲ ಕರಗಿ ಕರಗಿ ಕರಗಿ…”


ಉಜ್ವಲಾ, ಕಿಶೋರಿ, ಗಿರಿಧಾರಿ… ಮೂವರೂ ಒಬ್ಬರ ಹಿಂದೊಬ್ಬರು ಸೊಂಯ್ ಸೊಂಯ್ ಅಂತ ಓಡೋಡಿ ಬಂದು ನನ್ನ ಡೆಸ್ಕಿನ ಕೆಳಗೆ ಬಚ್ಚಿಟ್ಟುಕೊಳ್ಳಲು ಪೈಪೋಟಿ ಶುರುವಿಟ್ಟರು. ಯಾಕೋ ಬೆಳಗಿಂದಲೂ ‘ಇವತ್ತು ಶನಿವಾರ’ ಅನ್ನುವ ಭ್ರಮೆಯಲ್ಲಿದ್ದ ನನಗೆ ಇನ್ನೇನು ಅದು ಖಚಿತವಾಗ್ಬೇಕು, ನನ್ನ ಕಲೀಗು, ‘ಯಾಕೆ? ಸ್ಕೂಲ್ ಬಿಟ್ ಬಿಟ್ರ?’ ಕೇಳೇಬಿಟ್ಟರು.
ಆ ಮಕ್ಕಳಲ್ಲಿ ಇಬ್ಬರು ‘ಎಕ್ಲಿಪ್ಸಿಗೆ ಹಾಲಿಡೇ’ ಅಂತ ನುಲಿದರೆ, ಉಜ್ವಲಾ ‘ಇವತ್ತೂ… ಅಮವಾಸ್ಯಾ’ ಅಂತ ಗಿಳಿಯ ಹಾಗೆ ಉಲಿದಳು.

~

ಅಮವಾಸ್ಯೆ?
ಈ ಪುಟಾಣಿಗೆ ಗ್ರಹಣದ ಸಂಗತಿ ಗೊತ್ತಿಲ್ವೇನೋ, ಅದಕ್ಕೇ ಹೀಗೆ ಹೇಳ್ತಿದೆ ಅಂತ ತಿಳಿದೆ.
ಲೀಸರಿನಲ್ಲಿ ಕೆಳಗೆ ಹಾಡುತ್ತ- ಕುಣಿಯುತ್ತ ಉನ್ಮತ್ತರಾಗಿದ್ದ ಭಕ್ತರನ್ನ ನೋಡುತ್ತ ಮೈಮರೆತಿದ್ದೆವು. ಜತೆಯಲ್ಲಿದ್ದವಳು ಏನೋ ಜ್ಞಾನೋದಯವಾದವರ ಹಾಗೆ “ನನ್ ಮಗಂಗೆ ಇವತ್ತು ಹಾಫ್ ಡೇ. ಭೀಮನ್ ಅಮವಾಸ್ಯೆ ಅಂತೆ!? ನಿಮ್ ಬ್ರಾಹ್ಮಿನ್ಸಲ್ಲಿ ಮಾಡ್ತೀರಲ್ವಾ ಅದ್ನ?”
ಭೀಮನ ಅಮಾವಾಸ್ಯೆ?
ಮೈಮೇಲೆ ತಣ್ಣೀರು ಚೆಲ್ಲಿದ ಹಾಗಾಯ್ತು ಒಮ್ಮೆಗೆ!
ಮೊಬೈಲು ಕೈಗೆ ಬಂದಮೇಲೆ ಬಹುಶಃ ಕ್ಯಾಲೆಂದರು ನೋಡಿದ್ದೇ ಇಲ್ಲ ನಾನು! ಪಂಚಾಂಗ ಬಿಡಿ, ದೂರದ ಮಾತು.
ಕಳೆದೆರಡು ವರ್ಷ ಮೇಲಿನ ಮನೆಯ ಘಮಘಮದಿಂದಲಾದ್ರೂ ಹಬ್ಬ- ಹುಣ್ಣೀಮೆ ತಿಳೀತಿತ್ತು. ಈ ಸಾರ್ತಿ ಅದೂ ಇಲ್ಲ. ಓನರಜ್ಜ ಇಲ್ಲವಾದ ಸೂತಕ ಅವರ ಮನೆಯಲ್ಲಿ…
ಆದ್ರೂ, ಭೀಮನ ಅಮವಾಸ್ಯೆ…

ಬಿಡಿ. ಅದೇನೂ ನಾನು ಆಚರಿಸೋ ಅಂತ ಹಬ್ಬವಲ್ಲ. ಅದಕ್ಕಷ್ಟು ಪ್ರಾಮುಖ್ಯತೆಯೂ ಇಲ್ಲ.
ಊರ ಕಡೆ ‘ನಾವು’ ಅದ್ನ ಭೀಮನ ಅಮಾವಸ್ಯೆ ಅಂತ ಆಚರಿಸಿದ್ರೆ, ‘ಬೇರೆಯವ್ರು’ ಅದ್ನ ಕೊಡೆ ಅಮಾವಾಸ್ಯೆ ಅಂತ ಕರ್ದು, ಕಹೀ ಔಷಧಿ ಕುಡಿದು ಸೆಲೆಬ್ರೇಟ್ ಮಾಡ್ತಿದ್ರು.
ಆದ್ರೆ ನಾನು ಅನ್ನೋ ನಂಗೆ ಈ ಗಣೇಶನ ಹಬ್ಬಕ್ಕಿಂತ ಸ್ವರ್ಣ ಗೌರೀವ್ರತ, ದೀಪಾವಳಿಗಿಂತ ತುಳಸೀ ಪೂಜೆ, ದೊಡ್ಡ ದೊಡ್ಡ ಹಬ್ಬಗಳಿಗಿಂತ ನಾಗರ ಚೌತಿ- ಪಂಚಮಿ, ಭೀಮನ ಅಮಾವಾಸ್ಯೆ, ಸಿರಿಯಾಳ ಷಷ್ಟಿ ಇವುಗಳೇ ಬಹಳ ಇಷ್ಟದ ಹಬ್ಬಗಳಾಗಿಬಿಡ್ತಿದ್ವು.

ಭೀಮನ ಅಮಾವಾಸ್ಯೆ…
ಆಸು ಪಾಸಲ್ಲಿದ್ದ ದೊಡ್ಡಮ್ಮ, ಮಾವನ ಮನೆಗಳಲ್ಲಿ ಹಸೀ ಭಂಡಾರ ಮಾಡಿ ಅಣ್ಣಂದಿರು ಒಡೀತಿದ್ರೆ, ನಮ್ಮನೇಲಿ ಅಮ್ಮ ಕರಿದ ಪೂರಿ ಹಾಗಿನ ಭಂಡಾರ ಮಾಡ್ತಿದ್ಲು!
ಅವರ ಮನೆಗಳಲ್ಲಿ ಭಂಡಾರ ಒಡೆದ ಅಣ್ಣ ತಮ್ಮಂದಿರಿಗೆ ಅಕ್ಕ- ತಂಗಿಯರು ದಕ್ಷಿಣೆ ಕೊಡಲಿಕ್ಕಿದ್ರೆ, ನಮ್ಮನೇಲಿ ಅವರೇ ನಂಗೆ ಕೊಡ್ಬೇಕು!
ಇಷ್ಟರ ಮಧ್ಯೆ ಜ್ಯೋತಿರ್ಭೀಮೇಶ್ವರ ವ್ರತ ಅನ್ನೋ ವ್ರತ ಅವತ್ತು. ಕೈಗೆ ಮಲ್ಲಿಗೆ ಹೂ ಸಿಗಿಸಿದ ಅರಿಷಿಣ ದಾರ ಕಟ್ಕೊಂಡು ಚೆಂದ ಚೆಂದದ ಹೂಗಳಿಂದ ಈಶ್ವರನ ಪೂಜೆ ಮಾಡೋದಿತ್ತು ಆಗೆಲ್ಲಾ.
ಆಹಾ! ಆ ಅರಿಷಿಣ ಒದ್ದೆಗೆ ಕ್ದಡಿಕೊಂಡು ಬೆಳ್ಳನೆ ಕೈತುಂಬ ಹರಿದು, ಅದೆಂಥದೋ ಬಣ್ಣ ಬಣ್ಣ! ಜತೆಗೆ, ಪೂಜೆ ಮಾಡಿ ಕೇಳಿಕೊಂಡ ‘ಒಳ್ಳೇ ಗಂಡನ’ ಕನಸು! ಮೊದಲೇ ಮಳೆಗಾಲ… ಅಪರೂಪಕ್ಕೆ ಹೂ ಮುಡಿದು ಕಾಲೇಜಿಗೆ…. ಓಹ್! ಯಾವ ಯಾವ ಹಿಂದೀ ಹಡುಗಳೋ, ಸಾಲುಗಟ್ಟಿ ನಿಲ್ತಿದ್ವು.

ಈ ಭೀಮನ ಅಮವಾಸ್ಯೆ ಮಾಡಿದ ಸಂಜೆ ವ್ರತ ಕಲಶದ ವಿಸರ್ಜನೆ ಮಾಡಲಿಕ್ಕಿತ್ತು. ಆಗ ಅಮ್ಮ ವ್ರತ ಕಥೆಯನ್ನು ರಾಗವಾಗಿ ಓದಿ ಹೇಳ್ತಿದ್ಲು. ಎಲ್ಲ ಮುಗಿದು ಪ್ರಸಾದದ ನೆವದಲ್ಲಿ ತಿಂಡಿ- ತೀರ್ಥ ಮುಗಿಸಿದ ಮೇಲೆ ತಲೆ ಹರಟೆ ಪ್ರಶ್ನೆಗಳನ್ನ ಕೇಳಿ ಬೈಸಿಕೊಳ್ಳೋದಿತ್ತು ನಾನು.

ವ್ರತದ ಕಥೆ…
ಈ ಕಥೆಯಲ್ಲಿ ಒಬ್ಬ ಬದ ಹುಡುಗಿಯನ್ನ ಸತ್ತ ರಾಜಕುಮಾರನ ಕಳೇವರದ ಜತೆ ಮದುವೆ ಮಾಡಿಕೊಡಲಾಗುತ್ತೆ. ಇಲ್ಲಿ ಮೊದಲೇ ಹುಡುಗಿ ಹಣೇಲಿ ಹಾಗಿತ್ತು… ಅವರೂ ಅನುಕೂಲಸ್ಥರೇ… ಇತ್ಯಾದಿ ಪಾಠಾಂತರಗಳಿವೆ. ಹಾ! ಹೀಗೆ ಮದುವೆ ಮಾಡಿದ್ರೆ ರಾಜ ಕುಮಾರ ಬದುಕಿ ಬರುವನೆಂಬ ಅಶರೀರ ವಾಣಿಯೂ ಮೊಳಗಿದ್ದಿರಬೇಕು!
ಮದುವೆ ಮುಗಿದ ಸಂಜೆ ಮದುಮಗಳನ್ನ ಸ್ಮಶಾನದಲ್ಲೇ ಬಿಟ್ಟು ಎಲ್ರೂ ಹೊರಟುಹೋಗ್ತಾರೆ. ಜೋರು ಮಳೆ ಬೇರೆ. ಹರೆಯದ ಹುಡುಗಿಗೆ ಭಯವೋ ಭಯ. ಆ ರಾತ್ರಿ ಪೂರ್ತಿ ಶಿವನ ಪೂಜೆಯಲ್ಲಿ ಕಳೆಯೋ ಹುಡುಗಿ ಮಾರನೆ ಬೆಳ್ಸುತ್ತ ಸ್ಮಶಾನಗ್ಗೆ ಮರಳಲ್ಲಿ ಶಿವ ಲಿಂಗ ಮಾಡಿ ಮತ್ತೆ ಪೂಜಿಸಿ, ಮರಳಲ್ಲೇ ಭಂಡಾರ ಮಾಡಿ ‘ಇದನ್ನ ಒಡೀಲಿಕ್ಕೆ ಬಾ ತಂದೇ… ಶಿವನೇ…’ ಅಂತ ಮೊರೆಯಿಡ್ತಾಳೆ. ಭೀಮೇಶ್ವರ ಬಂದು ಭಂಡಾರ ಒಡೆದು, ‘ತಂಗೀ, ಏನು ವರ ಬೇಕು?’ ಅಂತ ಕೇಳ್ತಾನೆ. ಯಥಾ ಪ್ರಕಾರ, ಗಂಡನ ಪ್ರಾಣ!

ಸರಿ. ರಾಜ ಕುಮಾರ ‘ನಿದ್ದೆಯಿಂದ ಎದ್ದ ಹಾಗೆ’ ಎದ್ದು ಬರ್ತಾನೆ. ಅವನಿಗೆ ತಾನು ಸತ್ತು ಹೋಗಿದ್ದೆ ಅಂತ ಗೊತ್ತೇ ಇರೋದಿಲ್ಲ. ಸುತ್ತ ಸ್ಮಶಾನ, ಎದುರಲ್ಲಿ ಸುಂದರಿ! ಅಂವ ‘ಇದ್ಯಾವುದೋ ಪಿಶಾಚಿ ಇರಬೇಕು’ ಅಂತ ಗಾಬರಿಯಾಗಿ ಅವಳನ್ನ ಹೀಯಾಳಿಸಿ ಓಡಿ ಹೋಗ್ತಾನೆ.
ಪಾಪ…ಇಲ್ಲಿ ಈ ಹುಡುಗಿ…
ಮತ್ತೆ ಅದೂ ಇದೂ ಆಗಿ, ರಾಜಕುಮಾರನ ಅಪ್ಪ ಅಮ್ಮ ಬೇರೆ ಹುಡುಗಿ ಮದ್ವೆ ಮಾಡಿಸ್ಲಿಕ್ಕೆ ಸಂಚು ಹೂಡಿ, ಆ ಹೊತ್ತಿಗೆ ಈಕೆ ಮತ್ತೆ ಶಿವನನ್ನ ಒಲಿಸ್ಕೊಂಡು ಅವನಿಂದ್ಲೇ ಸಾಕ್ಷಿ ಹೇಳಿಸಿ…
ಅಂತೂ ಎಲ್ಲವೂ ಸುಖಾಂತ್ಯ.
ರಾಜ ಕುಮಾರ, ಅವನ ಹೆಂಡ್ತಿ ನೂರ್ಕಾಲ ಸುಖವಾಗಿ ಬಾಳ್ತಾರೆ.

~
ಮದುವೆಯಾದ ಮೇಲೆ ಒಂಭತ್ತು ವರ್ಷ ಈ ವ್ರತ ಮಾಡೋದಿದೆ. ಮಾಡಿ, ಕೊನೆಯಲ್ಲಿ ಅಷ್ಟೂ ವರ್ಷ ಭಂಡಾರ ಒಡೆದ ಅಣ್ಣ- ತಮ್ಮಂದಿರಿಗೆ ದೀಪದ ಕಂಬ ಉಡುಗೊರೆ ಕೊಡಬೇಕು. ಹೀಗೇ ಏನೇನೋ…
ಅರಿಷಿನಕೆನ್ನೆಯ ಗಲಗಲದ ಹೆಣ್ಣುಗಳು ಅವೆಲ್ಲವನ್ನೂ ಮಾಡ್ತಾರೆ. ಗಂಡಂದಿರ ಜತೆ ಗುದ್ದಾಡಿ ತವರಿಗೆ ಉಡುಗೊರೆ ಕಳಿಸಿ ಬೀಗ್ತಾರೆ. ತಮ್ಮ ಹೆಣ್ಣುಮಕ್ಕಳನ್ನ ಕೂರಿಸ್ಕೊಂಡು ವ್ರತ ಕಥೆ ಹೇಳ್ತಾರೆ.

~

ಊರಲ್ಲಿ ಆಷಾಡದ ಮಳೆ ಜೋರು. ಎಲ್ಲ ಕರಗಿ ಕರಗಿ ಹೋಗ್ತಿದೆ.
ಮೂವತ್ತು ವರ್ಷಗಳೂ ಕರಗಿ ಹೋದವು. ಆ ಏಳು ವರ್ಷಗಳೂ, ಈ ನಾಲ್ಕು ವರ್ಷಗಳೂ…
ಭಂಡಾರವೂ ಕರಗಿ, ಅಮಾವಾಸ್ಯೆಯೂ ಕರಗಿ, ಭೀಮೇಶ್ವರನೂ ಕರಗಿ ಕರಗಿ…

ಕೊನೆಯಲ್ಲೇನು ಉಳಿಯಬಹುದು? ನಾನೇನು ಉಳಿಸಿ ಕರಗಬಹುದು?

11 thoughts on “ಭೀಮೇಶ್ವರನ ಭಂಡಾರ ಮತ್ತು “ಎಲ್ಲ ಕರಗಿ ಕರಗಿ ಕರಗಿ…”

Add yours

 1. ….‘ಒಳ್ಳೇ ಗಂಡನ’ಕನಸು!
  In my humble opinion, ‘good husband’ is an oxymoron 🙂

  ಮದುವೆಯಾದ ಮೇಲೆ ಒಂಭತ್ತು ವರ್ಷ ಈ ವ್ರತ ಮಾಡೋದಿದೆ.
  It is as if whoever started the tradition knew there was not going to be a ‘good husband’ and therefore women had to continue with the ವ್ರತ for nine more years after being married!

  ಅರಿಷಿನಕೆನ್ನೆಯ ಗಲಗಲದ ಹೆಣ್ಣುಗಳು ಅವೆಲ್ಲವನ್ನೂ ಮಾಡ್ತಾರೆ….ತಮ್ಮ ಹೆಣ್ಣುಮಕ್ಕಳನ್ನ ಕೂರಿಸ್ಕೊಂಡು ವ್ರತ ಕಥೆ ಹೇಳ್ತಾರೆ.

  You have zeroed in on an important issue right here. It is up to women to start questioning and rethinking traditions, more importantly, there is the need to stop propagating the meaningless ones. I say women need to question and rethink because men have demonstrated that they are not going to, in all these thousands of years. A good blend of active participation by both men and women appears to be too far away from happening, at this point :(.

  ಕೊನೆಯಲ್ಲೇನು ಉಳಿಯಬಹುದು? ನಾನೇನು ಉಳಿಸಿ ಕರಗಬಹುದು?
  I find this extremely interesting. You are trying to find out who you are beyond all the traditions and expectations of the society. This sums up the challenge that Indian women face in the modern society.

  A very thoughtful piece Chetana, good job! – VK

 2. ಚೇತೂ,
  ಬೇಕಾದ್ರೆ ಸೊಲ್ಪ ದಿನ ರಜ ತಗೊ, ಹೋಗ್ಬರ್ತೀನಿ ಅಂತ ಹೇಳು.ಆದ್ರೆ ಇನ್ನೊಂದ್ಸಾರೆ, ಹೇಳದೆ ಕೇಳದೆ ರೆಸಿಗ್ನೇಶನ್ನು ಕೊಡುವ ದುಸ್ಸಾಹಸ ಮಾಡಬೇಡ. ಇದು ವಾರ್ನಿಂಗೇನೇ. ತಿಳೀತಾ? ನಾನು ಒಂಟಿಭೂತದ ಥರ ಗಾಸಿಪ್ಪು ಮಾಡಲಿಕ್ಕೂ ಯಾರೂ ಗತಿಯಿಲ್ಲದೆ ಇರೋಕೆ ರೆಡಿಯಿಲ್ಲ ಮಾರಾಯಿತಿ.
  ಆಮೇಲೆ ಇವೆಲ್ಲ ಗ್ರಹಣ, ಅಮಾವಾಸ್ಯೆ, ಇತ್ಯಾದಿ ಗ್ರಹಗತಿಗಳಿಂದ ಪ್ರೇರಣೆ ಪಡೆದು ನಾನು ಲಿಂಡಾ ಗುಡ್ಮನ್ನಳ ಥರ ಭವಿಷ್ಯ ಹೇಳಿ ಸೆಲೆಬ್ರಿಟಿಯಾಗಲು ಸೀರಿಯಸ್ಸಾಗಿ ಯೋಚನೆ ಮಾಡುತ್ತಿದೇನೆ. 🙂 ಅಂದ ಹಾಗೆ ಭಾಗವತರ ಪತ್ರಕ್ಕೆ ನೀನು ಏನು ಉತ್ತರಿಸಿದೆ ತಿಳಿಯಲಿಲ್ಲ.

  ನೀನು ಕರಗಿ ಕರಗಿ ತಾನೆ ನಿನ್ನ ಅಕ್ಷರಗಳಿಗೆ ಬಣ್ಣ ತುಂಬುತ್ತಿರುವುದು? Coelho ಹೇಳುವ ಹಾಗೆ ‘it is written’.

  -ಪ್ರೀತಿಯಿಂದ, ಟೀನಾ.

 3. ಚೇತನ,
  ನಿಮ್ಮ ಬರಹ ಓದಿ, ಮಳೆಗಾಲ (ನಮ್ಮ ಮಲೆನಾಡಿನದು), ಭೀಮನ ಅಮಾವಾಸ್ಯೆ, ನಾಗರ ಪಂಚಮಿ, ಭಂಡಾರ, ನಾಗರ ಪಂಚಮಿಯ ಕಡುಬು, ಎಲ್ಲ ಒಟ್ಟಿಗೆ ನೆನಪಿಗೆ ಬಂತು. ಕಳೆದ ಮೂರು ನಾಲ್ಕು ವರ್ಷಗಳಿಂದ, ತಂದೆ ತಾಯಿ, ತಂಗಿ, ಅಣ್ಣ, ಒಬ್ಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿದ್ದು ಇವೆಲ್ಲ ಮರೆತು ಹೋದ ಹಾಗಿತ್ತು.

  ಕೆಲವಾರು ಸಂಪ್ರದಾಯ ಹಾಗೂ ಆಚರಣೆ ಗಳಿಂದ ಸಂಬಧ ಗಳು ಗಟ್ಟಿಯಾಗುತ್ತೋ?, ಅಥವಾ ಗಟ್ಟಿಯಾದ ಸಂಬಂಧ ಗಳಿಂದ ಈ ಆಚರಣೆಗಳಿಗೆ ಅರ್ಥ ಬರುತ್ತೋ? ಅನ್ನೊ ಪ್ರಶ್ನೆ ನನಗೆ ಯಾವಾಗಲು ಬರುತ್ತೆ.

  -ಪ್ರಸಾದ್.

 4. VK(?)
  ನನಗೆ ನಮ್ಮ ಸಂಸ್ಕೃತಿ, ಇತಿಹಾಸಗಳನ್ನ ನೆನಪಿಸುವ, ಜನಪದೀಯ ಅಚರಣೆಗೆ ಮಹತ್ವವಿರುವ ಹಬ್ಬಗಳೆಂದರೆ ಖುಶಿಯೇ. ಹಾಗಂತ ಕೆಲವೊಂದು ಅರ್ಥವಿಲ್ಲದ ಆಚರಣೆಗಳಿಗೆ ಮೂಕವಾಗಿ ಹೆಗಲು ಕೊಡೋದು ನನಗೆ ಇಷ್ಟವಾಗಲ್ಲ.ಹಬ್ಬದ ಹೆಸರಲ್ಲಿ ನಡೆಯುವ ಅನರ್ಥಗಳಂತೂ ಮೈಯುರಿಸತ್ತೆ. ಆದರೇನು ಮಾಡೋದು? ಜನವೂ ಮರುಳು, ಜಾತ್ರೆಯೂ ಮರುಳು!
  ನಿರ್ದಿಷ್ಟವಾಗಿ ಈ ಭೀಮನ ಅಮಾವಾಸ್ಯೆ ವ್ರತ, ನನಗೆ ಆ ಪಾಪದ ಹುಡುಗಿಯನ್ನ ಹೆಣಕ್ಕೆ ಕಟ್ಟಿ ಸ್ಮಶಾನದಲ್ಲಿ ಬಿಟ್ಟರಲ್ಲಾ ಅನ್ನೋ ಕಾರಣಕ್ಕೆ ಹೆಚ್ಚು ಕಾಡುತ್ತೆ. ಆಮೇಲೂ ಈ ವ್ರತ ಹಿಡಿಯೋದು ಒಳ್ಳೆ ಗಂಡನ್ನ ಪಡೀಲಿಕ್ಕೆ, ಅವನನ್ನ ಉಳಿಸ್ಕೊಳ್ಳಲಿಕ್ಕೆ! ಇದೊಂದು ವಿಪರ್ಯಾಸವಲ್ಲವೆ?
  ಆದರೆ ಒಂದಂತೂ ಪುಣ್ಯ. ನಮ್ಮಲ್ಲಿ ನಮ್ಮನ್ನು ಕಾಪಾಡಬಲ್ಲ ‘ಶಿವ’ರು ಇದ್ದಾರೆ. ಖಂಡಿತ ಇದ್ದಾರೆ. ಧರ್ಮದಿಂದ ಸತ್ತರೂ ಧರ್ಮದಿಂದಲೇ ಬದುಕುವ ಅವಕಾಶ ಸಾಕಷ್ಟಿದೆ. ಆದರೆ ಇಂಥ ಯಾವ ಬೆಳಕಿನ ಕನಸೂ ಇಲ್ಲದ ಹೆಂಗಸರ ಬಗ್ಗೆ ನಾನು ಯೋಚಿಸ್ತಿರುತ್ತೇನೆ. ಪಾಪ. ಅವರ ನಂಬಿಕೆಗೊಂದು ‘ದೇವರೂ’ ಇರುವುದಿಲ್ಲವಲ್ಲ?
  ಮತ್ತೆ, ಹೌದು. ನಾನು ಈ ಎಲ್ಲ ಆಚರಣೆಗಳ ಹೊರತಾಗಿಯೂ, ಸಮಾಜದ ಚೌಕಟ್ಟಿನ ಹೊರಗೆ ನಿಂತುಕೊಂಡು ಧ್ಯಾನಿಸ್ತಿದ್ದೇನೆ; ‘ನಾನೇನು ಉಳಿಸಿ ಕರಗಬಹುದು!?’

  ಟೀನ್,
  ಪಾಪೋಹಂ, ಪಾಪ ಕರ್ಮಾಹಂ!!
  ಇನ್ಯಾವತ್ತೂ ಇಂಥ ಪಾಪ ಕಾರ್ಯಕ್ಕೆ ಕೈ ಹಾಕೋಲ್ವೇ ತಾಯೀ…

  Yes. “It’s written”

  ಅಆಇಈ ಕನ್ನಡದಾ ಅಕ್ಷರ ಮಾಲೇ…(ಯಾರು ಯಾರು ನೀವ್ಯಾರು!?)
  ಹೌದು ಹೌದು… ಬ್ಲಾಶ್ಪೆಮಿಯೇ ಸರಿ!

  ಪ್ರಸಾದ್,
  ಇಂತಹ ಆಚರಣೆಗಳಿಂದ ಸಂಬಂಧಗಳು, ಸಂಬಂಧಗಳಿಂದ ಆಚರಣೆಗಳು… ಎರಡೂ ಪರಸ್ಪರ ಅರ್ಥಗಳನ್ನ ಕೊಟ್ಟುಕೊಂಡು ಹೋಗುತ್ತವೆ. ಯಾವುದಾದರೂ ರಜೆಗಳ್ನ ಅಡ್ಜಸ್ಟ್ ಮಡ್ಕೊಂಡು ನೀವೆಲ್ಲ ಸಹೋದರ/ದರಿಯರು ಊರಿಗೆ ಹೋಗಿ ಬನ್ನಿ. ಮಜವಾಗಿರಿ. ಆಹ್! ಅಂಥದೊಂದು ಮಿಲನದ ನಂತರ ಅದರ ಮೆಲುಕೇ ಎಷ್ಟು ಕಾಲ ಮುದಕೊಡುತ್ತದಲ್ವಾ?

  ~ ಚೇತನಾ

 5. ’ಇಳಿದು ಬಾ ತಾಯಿ, ಇಳಿದು ಬಾ…’ ಅಂತ ಜನರೆಲ್ಲ ಹಾಡಿದ್ದು ವ್ಯರ್ಥವಾಗಲಿಲ್ಲ. ನಮ್ಮನ್ನೆಲ್ಲ ಅನುಗ್ರಹಿಸಲು ಮತ್ತೆ ಅವತರಿಸಿದ್ದೀಯೆ!

 6. ನಾನು ವೆಬ್ ಲೋಕದ ವಿಹಾರಿ ಆದ್ರೂ ….ನಿಮ್ಮ ಬ್ಲಾಗ್ ಬಗಗೆ ಕೇಳಿದ್ದೇ but
  ಓದಿರ್ಲಿಲ್ಲ. ಮತ್ತೆ ಚೇತನಾ ಬಂದ್ರೂ ಅಂತೆಲ್ಲೋ ಓದಿದ ನೆನಪು . ಆ ನೆನಪು ರಾತ್ರಿಯಿಂದ ಕಾಡಿ ಬೆಳಿಗ್ಗೆ ಎದ್ದೊಡನೆ office ನ ಕೆಲ್ಸನೆಲ್ಲಾ ಬದಿಗಿರಿಸಿ ನಿಮ್ಮ ಒಂದು ಲೇಖನ ಓದಿದೆ ತುಂಬಾ ಸೊಗಸಾಗಿದೆ.

  ಜನಪದೀಯ ಆಚರಣೆಗಳ ಹಿಂದೆ ಒಂದಲ್ಲಾ ಒಂದು ಅಥ೵ ಇರ್ತದೆ ಮೇಡಂ ಅದನ್ನ ಮೂಢನಂಬಿಕೆ ಅಂತ ನಿವಾಳಿಸಿ ಬೀಸಾಕೋದು ನನಗೆ ಅಷ್ಟೇನೂ ಸರಿ ಕಾಣೋದಿಲ್ಲ.

  ಕೊನೆಯಲ್ಲೇನು ಉಳಿಯಬಹುದು? ನಾನೇನು ಉಳಿಸಿ ಕರಗಬಹುದು?

  ಅಂತ ಪ್ರಶ್ನೆ ಕೇಳಿದಿರಲ್ಲ . ನೀವು ಉಳಿಸಿ ಹೋಗೋದು ಈ ಸುಂದರ ಬ್ಲಾಗ್, ಇದನ್ನು ಓದಿದ ಸವಿ ಸವಿಯಾದ ನೆನಪು ಅಷ್ಟೇ ಅಲ್ವಾ…?

  any way thank you very much

  ನಿಮ್ಮ ಬರಹ ಓದಿ ನಿಜಕ್ಕೂ ಮನಸ್ಸು ಅಹ್ಲಾದಗೊಂಡಿತು. ಇನ್ನೂ ರಾಯಿಟರ್ಸನಿಂದ, ಪಿಟಿಐನಿಂದ, ಯುಎನ್ಐ ನಿಂದ ಸುದ್ದಗಳ ಸರಮಾಲೆಯೇ ಇದೆ ಅದನ್ನ ಭಾಷಾಂತರಿಸಬೇಕು . ಮತ್ತೆ free ಆದಾಗ ನಿಮ್ಮ ಬ್ಲಾಗ್ ಗೆ ಬರೋದಿಕ್ಕೆ ಅನುಮತಿ ಕೊಡಿ.

  ಶಿರಸಾಷ್ಟಾಂಗ ಪ್ರಣಾಮಗಳು

  ಗಿರಿ
  girisha_giri123@yahoo.co.in

 7. I apologize for writing in English again, I can express myself better and faster this way…

  ಆದರೆ ಒಂದಂತೂ ಪುಣ್ಯ. ನಮ್ಮಲ್ಲಿ ನಮ್ಮನ್ನು ಕಾಪಾಡಬಲ್ಲ ‘ಶಿವ’ರು ಇದ್ದಾರೆ. ಖಂಡಿತ ಇದ್ದಾರೆ. ಧರ್ಮದಿಂದ ಸತ್ತರೂ ಧರ್ಮದಿಂದಲೇ ಬದುಕುವ ಅವಕಾಶ ಸಾಕಷ್ಟಿದೆ. ಆದರೆ ಇಂಥ ಯಾವ ಬೆಳಕಿನ ಕನಸೂ ಇಲ್ಲದ ಹೆಂಗಸರ ಬಗ್ಗೆ ನಾನು ಯೋಚಿಸ್ತಿರುತ್ತೇನೆ. ಪಾಪ. ಅವರ ನಂಬಿಕೆಗೊಂದು ‘ದೇವರೂ’ ಇರುವುದಿಲ್ಲವಲ್ಲ?

  There are certainly men who are decent and understand women’s issues. However, I have noticed that they don’t feel as passionate about these issues as women. This is probably because they never face the kind of humiliation and demeaning treatment on account of their gender (they might face them for other reasons such as caste, economic differences, etc). A man never hears: ‘gandaagi huttideeyalla, kashta anubhavisuvudashte ninna haneyalli barediruvudu’ 🙂

  For women who lack support from family/friends, we need to have a support network built with strict laws and opportunities for temporary support. But above all, women need to be empowered by education and economic independence. One of the hopes associated with education is that the women can achieve the ability and strength to question and modify traditions without losing the charm or gaiety of these celebrations. Also, another hope is that when a woman is in danger of being forced to marry a corpse, as in the story, with education and economic freedom she will have the courage and the resources to steadfastly refuse to get into it.

  I wish there was a movement in the entire country for the sake of women, that is, for an extended period of time we should only be writing, thinking about women, making/modifying policies that affect women….-VK

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: