ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…


ಬೆಂಗಳೂರಿಂದ ಹೊರಟು ಹೊಸಕೋಟೆ ಸ್ಟಾಪಲ್ಲಿಳಿದಾಗ ನೀಲಿ ಕಲರಿನ ಸ್ವಾಗತ್ ಬಸ್ಸು ರೊಂಯ್… ರೊಂಯ್ಯ್ಯ್ಯ್ ಅಂತ ಸದ್ದು ಮಾಡುತ್ತ, ಇನ್ನೇನು ನೀ ಬರುವುದರಳೊಗೆ ಹೊರಟೇಬಿಟ್ಟೆ ಅಂತ ಹೆದರಿಸ್ತ ನಿಂತಿತ್ತು. ಟಾಕೀಸಿನೆದುರು ದೊಂಬರಾಟದ ಮಜ ತೊಗೊಳ್ತ ಹೆಜ್ಜೆಯೆಣಿಸ್ತಿದ್ದವಳಿಗೆ ಅದು ಕಂಡು ಎದ್ದೆನೋ ಬಿದ್ದೆನೋ ಅಂತ ದಾಪುಗಾಲುಹಾಕಿ ನಡೆದೆ, ಮತ್ತೆ ನೂರಾ ಅರವತ್ತೇಳನೇ ಸಾರ್ತಿ ಮೋಸ ಹೋಗಿದ್ದೆ!
ಮತ್ತಿನ್ನೇನು!? ಹಾಗೆ ಹೊಸಕೋಟೆಯಿಂದ ಹೊರಡುವ ಪ್ರತಿ ಬಸ್ಸೂ ಸ್ಟಾರ್ಟ್ ಮಾಡಿಕೊಂಡಾದಮೇಲೂ ಅರ್ಧ ಗಂಟೆ ಕಾದು ತನ್ನ ಟಾಪು ಭರ್ತಿಯಾಗುವ ತನಕವೂ ನಿಂತಿರುತ್ತದೆ ಅನ್ನೋದು ಗೊತ್ತಿದ್ದೂ….

ಆ ಬೆಳಗಿನ ಒಂಬತ್ತು ಗಂಟೆಗೇ ಬಸ್ಸು ಹುಳ್ಳಗಾಗಿತ್ತು. ಒಂಥರಾ ಹಾಳಾದ ಹುಳಿ ಮಜ್ಜಿಗೆ ವಾಸನೆ. ದೊಗಲೆ ಡ್ರಾಯರ್ರು ಹಾಕಿ ಅದು ಕಾಣುವಷ್ಟು ಮೇಲೆ ಲುಂಗಿ ಎತ್ತಿ ಕಟ್ಟಿ, ಹೆಗಲ ಮೇಲೊಂದು ಶಾಲು, ಟವೆಲು… ಅವರವರ ಅಂತಸ್ತಿಗೆ ತಕ್ಕ ಹಾಗೆ. ಅದಾಗಲೇ ಒಂದಷ್ಟು ತಾವೂ ಹುಳ್ಳಗಾಗಿ ಬೀಡಿ ಸೇದುತ್ತಲೋ ನಶ್ಯ ನುರಿಯುತ್ತಲೋ ಬಸ್ಸು ಹೊರಡೋದನ್ನೇ ಕಾಯುತ್ತ ಬಸ್ಸಿನ ತುಂಬ ಚಡಪಡಿಸ್ತಿದ್ದರು ಒಂದಷ್ಟು ಗಂಡಸರು.
ಝರಿಝರಿಯ ಸೀರೆ ಉಟ್ಟು, ಬಾಯಿ ತುಂಬ ತಂಬಾಕು- ಎಲೆ ತುಂಬಿಕೊಂಡು ಕಚಪಚ ಮಾಡುತ್ತ ಬಸ್ಸು ಊರು ಮುಟ್ಟೋದು ತಡವಾದಷ್ಟೂ ಚೆನ್ನ ಅಂತ ಹಾರೈಸ್ತ ಕೂತಿದ್ದರು ಹೆಂಗಸರು.
ಅವರೆಲ್ಲರ ನಡುವೆ ಕಿಸಿಕಿಸಿ ಅನ್ನುತ್ತ ಕಂಡಕ್ಟರನ ಕಟಾಕ್ಷಕ್ಕೆ ಪೈಪೋಟಿ ನಡೆಸ್ತಿದ್ದ ಹರೆಯದ ಒಂದಷ್ಟು ಹೆಣ್ಣುಗಳು. ಇವೆಲ್ಲವನ್ನೂ ಮೀರಿ, ಡ್ರೈವರನ ಪಕ್ಕದ ಮೂಲೆಯಲ್ಲೊಂದು ಭಾರೀ ಸೈಜಿನ ಟೀವಿ ಅಲ್ಲಿದ್ದವರೆಲ್ಲರನ್ನೂ ಒಟ್ಟಾಗಿ ಸೆಳೆಯುತ್ತಿತ್ತು. ಅದರಲ್ಲೊಂದು ತೆಲುಗು ಸಿನೆಮಾ. ದಪ್ಪಕೆ ತೀಡಿದ ಹುಬ್ಬಿನ ಹೀರೋ ಹೀರೋಇನ್ನಿನ ಕೆನ್ನೆ ತಿನ್ನುತ್ತಿದ್ದ. ನೋಡುತ್ತ ಕುಂತಿದ್ದ ಹೆಂಗಸರೆಲ್ಲ ‘ಅಯ್ಯಾ…. ತಗಿ ತಗೀ… ’ ಅನ್ನುತ್ತಲೇ ಎಲೆಯಡಿಕೆ ಜಗಿತದ ವೇಗ ಹೆಚ್ಚಿಸ್ಕೊಂಡು ಮುಸಿನಗತೊಡಗಿದರು. ಅವರ ಸಂಕೋಚಕ್ಕೆ ಸವಾಲಾಗಿ ಬಸ್ಸಿನ ಬಾರು ಹಿಡಿದು ನೇತಾಡ್ತಿದ್ದ ಹುಡುಗರು ಪೋಲಿ ಪೋಲಿ ತೆಲುಗು ಡೈಲಾಗು ಹೊಡೆಯುತ್ತ ವಾತಾವರಣವನ್ನ ಮತ್ತಷ್ಟು ನಶೀಲಾ ಆಗಿಸತೊಡಗಿದರು. ಇವೆಲ್ಲದರ ಮಧ್ಯೆ ಬಸ್ಸು ಹೊರಟಿದ್ದೇ ಯಾರ ಗಮನಕ್ಕೂ ಬರಲಿಲ್ಲ!

ಬಸ್ಸು ತೆವಳುತ್ತ ನಿಲ್ಲುತ್ತ ಏದುಸಿರು ಬಿಡುತ್ತ ಹೋಗುತ್ತಲೇ ಇತ್ತು. ನಡುವಲ್ಲೊಂದು ಯನಗುಂಟೆ ಸ್ಟಾಪು. ಅಲ್ಲಿ ಸುಮಾರು ಎಂಟು- ಹತ್ತು ವಡ್ಡರ ಹೆಂಗಸರು ಹತ್ತಿಕೊಂಡರು. ಅವರೊಳಗೊಬ್ಬ ದುಂಡುದುಂಡನೆಯ ಹೆಣ್ಣು. ಹರಿದ ಉದ್ದನೆ ಜಾಕೀಟಿನ ಕೆಳಗೆ ಎಂಥದೋ ಬಗೆಯ ಲಂಗ ಹಾಕಿದ್ದಳು. ಅವಳು ಬಂದು ನಿಂತಿದ್ದೇ ಹೆಂಡದ ಮತ್ತಲ್ಲಿ ತೇಲಾಡ್ತಿದ್ದ ಕೆಲವರಿಗೆ ಏನೋ ಹುಕ್ಕಿ ಬಂದ ಹಾಗಾಯ್ತು. ಅವಳ ಹಿಂದಿನ ಸೀಟಿಗೆ ಆತುಕೊಂಡು ನಿಂತಿದ್ದ ಮುದುಕ ಮುಂದೆ ಬಂದು ಹೆಚ್ಚೂ ಕಡಿಮೆ ಅವಳಿಗೆ ಅಂಟಿಕೊಂಡೇ ನಿಂತ. ಬಹುಶಃ ಅವನ ಕೈ ಎಲ್ಲೆಲ್ಲೋ ತಡಕಾಡಿರಬೇಕು… “ಏ ಥೂತ್….” ಅಂತ ಅವಳು ಕ್ಯಾಕರಿಸಿ ಉಗಿದಿದ್ದು ಸ್ವಲ್ಪ ಮುಂದೆ ಕುಂತಿದ್ದ ನನ್ನ ವರೆಗೂ ಸಿಡಿಯಿತು.
ಅವಳ ಉಗಿತ ಅವನಿಗೆ ಮತ್ತಷ್ಟು ಹುರುಪು ತುಂಬಿರಬೇಕು, ಎಲ್ಲರೆದುರೇ ತನ್ನ ಲೀಲೆಗೆ ಶುರುವಿಟ್ಟ. ಹೌದು… ಎಲ್ಲರೆದುರೇ!!
ಬಸ್ಸಲ್ಲಿ ಕುಂತಿದ್ದವರೆಲ್ಲರೂ ನಾನೂ ಅದನ್ನ ನೋದಿಯೂ ನೋಡದವರಂತೆ ಇದ್ದುಬಿಟ್ಟಿದ್ದೆವು. ಆ ಹೆಂಗಸು “ತೆಗೆಯಲಾ ಮಾದರ್ ಛೋತ್…” ಅಂತೆಲ್ಲ ಅನ್ನುತ್ತ ಕೊಸರಾಡ್ತಲೇ ಇದ್ದಳು. ಅಂವ ಕೊನೆಗೂ ಏನೂ ಮಾಡಲಾಗದೆ ಸುಸ್ತು ಹೊಡೆದು ಅತ್ತಿಬೆಲೆಯಲ್ಲಿ ಇಳಿಯಹೊರಟಾಗ ‘ಮಡಗಲಾ ದುಡ್ನ’ ಅಂತ ಕಂಕುಳಲ್ಲಿ ಅವನ ಕುತ್ತಿಗೆ ಅವುಚಿ ನಿಂತುಬಿಟ್ಟಳು!

ಇವೆಲ್ಲ ರಂಪಾಟ ಮುಗಿಯುವ ಹೊತ್ತಿಗೆ ಕೆಯಿಬಿಯೆದುರು ಬಸ್ಸು ನಿಂತು ನಾನು ಇಳಿದುಕೊಂಡೆ. ಅಲ್ಲಿ ನನಗಾಗಿ ಕಾದು ನಿಂತಿದ್ದ ಬಿಳಿ ಪಂಚೆ ಹುಡುಗರು, ಸೀರೆ- ತುರುಬಿನ ಹೆಂಗಸರು, ಮನೆಯೊಳಗಿಂದ ತೇಲಿ ಬರುತ್ತಿದ್ದ ಧೂಪದ ಘಮ, ಅಂಗಳದ ಹಾದಿಯುದ್ದಕ್ಕೂ ನೆಟ್ಟಿದ್ದ ಧ್ಯೇಯ ವಾಕ್ಯಗಳು…. ಇವೆಲ್ಲವೂ ಟೀವಿಯಲ್ಲಿ ತೋರುವ ಹಾಗೆ ಕಾಣತೊಡಗಿ, ಬರೀ ಬಸ್ಸಿನ ತುಂಬ ತುಂಬಿದ್ದ ಜನರೇ ಸುತ್ತ ಮುತ್ತ ಆವರಿಸತೊಡಗಿದರು. ನನ್ನದೇ ಒಂದು ಚಿಕ್ಕ ಕೋಟೆ ಕಟ್ಟಿಕೊಂಡು ಜಗತ್ತೆಲ್ಲ ಅದರಲ್ಲೇ ಇದೆ ಅಂದುಕೊಂಡಿದ್ದ ಭ್ರಮೆ ಕಳಚತೊಡಗಿತು.
ಒಳಗೆಲ್ಲೋ ಅಮ್ಮನ ದನಿ ಜೋರಾಗಿ ಕೇಳ್ತಿತ್ತು. “ಹಾಲು ಕರಿಯೋ ಮೊದಲು ಕೊಟ್ಟಿಗೆ ತೊಳೀಬೇಕು… ಓಹೋ…!! ಮೈಕೈ ಕೊಳೆಯಾಗದ ಕೆಲಸಕ್ಕೆ ಬಂದ್ಬಿಡ್ತಾರೆ ಇವ್ರು!”
ಹೌದಲ್ಲ!?
ಹಾಲು ಕರೆಯುವ ಮೊದಲು ಕೊಟ್ಟಿಗೆ ಗುಡಿಸಬೇಕು. ಆದರೆ, ಪೊರಕೆ ಎಲ್ಲಿದೆ!?

(ಇದು ಕೆಂಡ ಸಂಪಿಗೆಗಾಗಿ ಬರೆದಿದ್ದು)

10 thoughts on “ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…

Add yours

 1. ರಾಧಿಕಾ,
  ಇದು ನಿಜವಾಗಿ ನಡೆದಿದ್ದು. ಖಂಡಿತ ಇದು ಒಟ್ಟು ಸಮಾಜದ ಅಸಾಹಯಕತೆ.
  ನನ್ನ ಮಟ್ಟಿಗೆ ಕ್ಲಾರಿಫಿಕೇಶನ್ನು ಕೊಡಬಹುದಾದರೆ,ಅಲ್ಲಿ ನನ್ನ ಮಾತಿಗೆ ಬೆಂಬಲ ಕೊಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಸ್ವತಃ ಆ ಹೆಂಗಸು ಕೂಡ! ಆದರೆ ಇಂತಹ ಮಾತುಗಳು ಎಲ್ಲೋ ಕೇವಲ ಸಮಜಾಯಿಶಿಯಾಗಿ ಉಳಿದುಬಿಡುತ್ತದೆ.
  ಅದರೂ,
  ಬಸ್ಸಲ್ಲಿ ಯಾವನದೋ ಕೈ ಸೋಕಿ ದಿನವಿಡೀ ಮೈಮೇಲೆ ಚೇಳು ಹರಿದಂತೆ ಹೀಕರಿಸಿಕೊಳ್ಳುವ ನಮಗೆ, ಬಸ್ಸಲ್ಲಿ ಅಂಥದೊಂದು ಕಿರುಕುಳಕ್ಕೆ ಒಳಗಾಗಿಯೂ ಕೊನೆಯಲ್ಲಿ, ‘ದುಡ್ ಮಡಗಿ ಹೋಗೋ’ ಎಂದು ಅರಚಿಕೊಳ್ಳುವ ಆ ಹೆಂಗಸಿನಂಥವರ ಅಸಹಾಯಕತೆ, ಅಥವಾ ಅವರ ಮನಸ್ಥಿತಿ ಅರಗಿಸಿಕೊಳ್ಳಲು ಬರುವುದೇ ಇಲ್ಲ.
  ಪರಿಸ್ಥಿತಿ ಹೀಗಿರುವುದರಿಂದಲೇ ನನ್ನ ‘ಪೊರಕೆ’ಯ ಹುಡುಕಾಟ ಹಾಗೇ ನಿಂತುಬಿಟ್ಟಿದೆ.
  ಈ ಬಗ್ಗೆ ನೀವು ನಿಮ್ಮ ಸಲಹೆ ಕೊಡುವುದಿದ್ದರೆ ಬಹಳ ಒಳ್ಳೆಯದು.

  ವಂದೇ,
  ಚೇತನಾ

 2. Chetana, I wonder demanding money was her way of protesting against the misbehavior OR her consent for it.
  I for one believe every girl should be taught from young age to resist misbehavior by men even if it’s from a family member. My daughter is all of 2.5 years – wouldn’t allow anybody(sometimes including us parents!) to kiss her or pinch her cheeks – as I’ve taught her it’s not good. We need to be equipped to face the world and fight as we cannot eliminate men who are beasts but we can keep them away for sure.

 3. ಕೊನೆಯಲ್ಲಿ ದುಡ್ ಮಡಗಿ ಹೋಗೋ ಎಂಬುದು ’ಅಸಹಾಯಕತೆ’ಯನ್ನು encash ಮಾಡಿಕೊಳ್ಳುವ ಬುದ್ದಿವಂತನಿಕೆಯೋ!! ಭೇಷ್.

  ನಿಜ, ನಮ್ಮ ಕೋಟೆಯೊಳಗೇ ನಾವಿದ್ದಾಗ ಹೊರಗೆ ಏನು ನೆಡೆಯುತ್ತಿದೆ ಎಂಬುದು ಸರಿಯಾಗಿ ಕಾಣುವುದೇ ಇಲ್ಲ, ಕಂಡರೂ ಸರಿಯಾಗಿ ಗೊತ್ತಾಗುವುದೇ ಇಲ್ಲ! ಕಿಂಡಿಯಲ್ಲೇ ಕಂಡದ್ದನ್ನು ಇಡೀ ಜಗತ್ತಿಗೆ ಅನ್ವಯಿಸಿ ಜೆನೆರಲೈಸ್ ಮಾಡಿಬಿಡುತ್ತೇವೆ.

 4. ದುಡ್ ಮಡಗಿ ಹೋಗೋ’ ಅನ್ನೋದು ಯಾವ ದೃಷ್ಟಿಯಿಂದಲೂ ಅಸಾಹಯಕತೆ ಅಲ್ಲ!
  ಇಂಥ ಗಂಡಸರ ಬಗ್ಗೆ ನನಗೂ ಸಿಟ್ಟು ಇದೆ .
  ನಂಗೆ ನೀವು ಹುಡುಗಿಯರ ಕಷ್ಟ ಖಂಡಿತ ಅರ್ಥ ಆಗುತ್ತೆ!
  ಯಾಕಂದ್ರೆ ನಾವು ’ಗಂಡಸರೂ’ ಇಂಥ ಕಷ್ಟ ಬಸ್ ನಲ್ಲಿ ಅನುಭವಿಸ್ತೀವಿ.ಅದು ’ಗೇ ’ಗಳಿಂದ!
  .ನಿಮಗೆ ಇದು ಮಹಾ ಸಮಸ್ಯೆ ಅನ್ನಿಸದಿರಬಹುದು .ಆದ್ರೆ ನಮಗೆ ಇದು ದೊಡ್ಡ ಸಮಸ್ಯೆ .ಯಾಕಂದ್ರೆ ನೀವು ಸ್ವಲ್ಪ ಧೈರ್ಯ ಪಟ್ಟು ಧ್ವನಿ ಎತ್ತಿದ್ರೆ ಅಲ್ಲೇ ಇರೋ ಕೆಲವು ಗಂಡಸರಾದ್ರೂ ಧರ್ಮದೇಟು ನೀಡದೆ ಇರುವುದಿಲ್ಲ ಅಂಥ ಕಾಮುಕರಿಗೆ.ಆದ್ರೆ ನಾವು ಧ್ವನಿ ಎತ್ತಿದ್ರೆ ಯಾರೂ ನಂಬಲ್ಲ ನಮ್ಮನ್ನ 😦

  ಇಷ್ಟವಿಲ್ಲದ ಸ್ಪರ್ಷ ಯಾವತ್ತಿದ್ರೂ ಅಸಹ್ಯ ಅಲ್ವ??

  (ಅಂದ ಹಾಗೆ ಗೇ ಗಳು ಯಾವ ರೀತಿ ಕಾಟ ಕೊಡುತ್ತಾರೆ ಅನ್ನೋದನ್ನು ಇಲ್ಲಿ ಬರೆಯಲು ಅಸಾಧ್ಯ ! ಅದರ ಕಷ್ಟ ಅನುಭವಿರೋರಿಗೆ ಗೊತ್ತು)

 5. ರಾಧಿಕಾ ರವರ ಸಲಹೆ ತುಂಬಾ ಚೆನ್ನಾಗಿದೆ.ಹುಡುಗಿಯರು ಚಿಕ್ಕವರಿರುವಾಗ್ಲೇ ಇಂಥ ಕಿರುಕಳದ ಬಗ್ಗೆ ಸರಿಯಾದ ಮಾಹಿತಿ ನೀಡ್ಬೇಕು .ಬೇಸರದ ಸಂಗತಿ ಅಂದ್ರೆ ಇಂಥ ಕೆಲಸ ಪರಿಚಿತರಿಂದ್ಲೇ ಆಗೋದು !
  ಇಲ್ಲಿ ಇನ್ನೊಂದು ವಿಷಯನ್ನು ಗಮನಿಸಬೇಕು ! ಈ ರೀತಿ ಪುಟ್ಟ ಹುಡಿಗಿಯರಿಗೆ ತಿಳುವಳಿಕೆ ನೀಡೋದೇನೋ ಸರಿ ,ಆದ್ರೆ ಇದನ್ನೆ ’ಅಸಹ್ಯ ’ ,ತಪ್ಪು ಅಂತ ಪದೇ ಪದೇ ಹೇಳ್ತಾ ಇದ್ರೆ ಹುಡುಗಿಯರು ಅದನ್ನೇ ಮನಸ್ಸಲ್ಲಿ ಅಚ್ಚೊತ್ತಿ ಬಿಡ್ತಾರೆ ! ಆಮೇಲೆ ಕಷ್ಟ ಪಡೋದು ಗಂಡ ! ಗಂಡನನ್ನು ಕೂಡಾ ಅವರು ಹತ್ತಿರ ಬಿಟ್ಟು ಕೊಡಲ್ಲ !

 6. ನಮಸ್ತೇ
  ವಿಕಾಸ್ ಗೆ ಉತ್ತರ ಕೊಡೋದು ನಂಗೆ ಸ್ವಲ್ಪ ಕಷ್ಟ. ಅವರು ಯಾವುದೆಲ್ಲವನ್ನು ಯಾವೆಲ್ಲ ರೀತಿ ಗ್ರಹಿಸುತ್ತ ಬಂದಿದಾರೆ ಅನ್ನೋದನ್ನ ಕಳೆದ ಕೆಲವು ದಿನಗಳಿಂದ ಗಮನಿಸ್ತ ಬಂದಿದೇನೆ. (ಅವರ ಬ್ಲಾಗಲ್ಲಿ ಕೂಡ ಅದಕ್ಕೆ ಪುರಾವೆ ಇದೆ) ಹೀಗಾಗಿ ‘ಅಸಹಾಯಕತೆಯನ್ನು ಎನ್ ಕ್ಯಾಶ್’ ಮಾಡಿಕೊಳ್ಳುವುದಕ್ಕೆ ಅವರಿತ್ತ ವ್ಯಂಗ್ಯಕ್ಕೆ ಉತ್ತರವಿದ್ದರೂ,ಇಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ.
  ಆದರೆ ವಿಕಾಸ್,
  ಎಲ್ಲರೂ ಎಲ್ಲಾ ಕಾಲದಲ್ಲೂ ಎಲ್ಲದರ ಬಗ್ಗೆಯೂ ಮಾತಾಡಲು ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿದೆ ಎಂದುಕೊಳ್ಳುತ್ತೇನೆ. ಇಷ್ಟಕ್ಕೂ ‘ಜನರಲೈಸ್’ ಮಾಡುವುದು ಅಂದರೆ ಏನು? ಭಾರತದಲ್ಲಿ ಕುಂತ ರಿಪೋರ್ಟರು ‘ಜಪಾನಲ್ಲಿ ಭಾರೀ ಭೂಕಂಪ’ ಅಂತ ಹೆಡ್ಡಿಂಗ್ ಕೊಟ್ಟರೆ, ಅದನ್ನ ನೀವು ‘ಇಡಿಯ ಜಪಾನ್ ಗಡಗಡ ನಡುಗಿತು’ ಅಂದುಕೊಳ್ತೀರೇನು? ಸಾವಧಾನದಿಂದ ಓದಿದಾಗ ಎಲ್ಲೆಲ್ಲಿ? ಏನು ಸಂಗತಿ? ಎಲ್ಲ ಅರ್ಥವಾಗುವುದು. ಹಾಗೇ ‘ಗಂಡಸು’ ಅಂದಾಗ ಆ ಕಾನ್ಸೆಪ್ಟಿನಲ್ಲಿ, ಆ ಕಥೆ-ಸಂದರ್ಭದಲ್ಲಿ ಬರುವ ‘ಅವನಂಥವರು’ ಎಂದು ಮಾತ್ರ ಅರ್ಥ.
  ನಾನು ನಿಮ್ಮನ್ನೊಮ್ಮೆ ಖಂಡಿತ ಭೇಟಿಯಾಗಲೇಬೇಕು. ನೀವು ಸ್ತ್ರೀಪರ ದನಿಯನ್ನು ಅನುಮಾನ ಮತ್ತು ವ್ಯಂಗ್ಯದಿಂದ ನೋಡುತ್ತಿರುವಿರಿ ಎಂದು ನನಗನಿಸುತ್ತಿದೆ. ಪರಸ್ಪರ ಚರ್ಚೆಯಿಂದ ಪೂರ್ವಗ್ರಹಗಳನ್ನು ಸರಿಪಡಿಸಿಕೊಳ್ಳಬಹುದು.
  ರಾಧಿಕಾ,
  ನಿಮ್ಮ ಸಲಹೆ ಸರಿಯಾಗಿಯೇನೋ ಇದೆ. ಆದರೆ, ಮಗುವಿಗೆ ‘ಸ್ಪರ್ಷ’ದ ಬಗ್ಗೆ ತಿಳುವಳಿಕೆ ನೀಡಲು ಹೋಗಿ ಸಂದೀಪ್ ಹೇಳಿದ ಹಾಗೆ ದ್ವೇಷ ಹುಟ್ಟುವಂತೆ ಆಗದಿರಲಿ ಅನ್ನುವುದಕ್ಕೆ ನನ್ನದೂ ಸಹಮತವಿದೆ.

  ಮತ್ತೊಂದು ಸಂಗತಿ,ನನ್ನ ಈ ಲೇಖನದ ಚಿಂತನೆ ಬಸ್ಸಿನ ಹೆಂಗಸಿನ ಕುರಿತಾದದ್ದು ಅನ್ನುವುದು ಎಂದು ಸ್ಪಷ್ಟ ಪಡಿಸಬಯಸುತ್ತೇನೆ. ಆಕೆಯಂಥ, ಅಂತಹ ಹಿನ್ನೆಲೆಯ (ಅವರು ಸದಾ ಊರೂರು ಅಲೆಯುತ್ತ ಕೆಲಸ ಮಾಡುವ ಜನ) ಹೆಣ್ಣುಮಕ್ಕಳನ್ನ ಯಾರು, ಹೇಗೆ ಎಜುಕೇಟ್ ಮಾಡಬಹುದು? ದಿಕ್ಕು ದೆಸೆ ಇಲ್ಲದವಳಾದರೂ ಸಹ ಅಕೆಗೆ ತನ್ನತನ ಇದ್ದೇ ಇರುತ್ತದೆ. ಯಾವನದೋ ಮುಟ್ಟುವಿಕೆ ಅಸಹ್ಯ ತರಿಸಿದರೂ ಅವಳು ತನ್ನ ‘ಅಂತರಂಗ’ದ ಭಾವ ಸರಿಯಾಗಿ ವ್ಯಕ್ತಪಡಿಸಲಾರದವಳಾಗಿರು ತ್ತಾಳೆ. ಇಲ್ಲಿ ನನಗೆ ಆಕೆಯ ಸ್ಥಿತಿಯ ಬಗ್ಗೆ ಮರುಕವಿದೆ. ಆದರೆ, ಅದಕ್ಕೊಂದು ಪರಿಹಾರ ಹುಡುಕುವ ದಾರಿ ಗೊತ್ತಿಲ್ಲ. ಇಂತಹ ನನ್ನ ಸೋಲಿನ ಬಗ್ಗೆಯೂ ನನಗೆ ಮರುಕವಿದೆ.
  ನಾನು ಬಿಳಿ ಸೀರೆಯ (ಅಂದರೆ ಇಲ್ಲಿ ಸೂಚ್ಯವಾಗಿ ನಾಗರಿಕ ಅಥವಾ ವೈಟ್ ಕಾಲರ್ ಅರ್ಥದ) ಹುಡುಗಿಯರಿಗೆ ಭಾಷಣ ಮಾಡಿ ನಮ್ಮ ಸಂಸ್ಕೃತಿಯ ಬಗ್ಗೆ ಹೇಳಬಲ್ಲೆ. ಆತ್ಮ ರಕ್ಷಣೆ, ಆತ್ಮಾಭಿಮಾನದ ಬಗ್ಗೆ ಭಾಷಣ ಬಿಗಿಯಬಲ್ಲೆ. ಲೇಖನದ ಕೊನೆಯಲ್ಲಿನ ಅಮ್ಮನ ಮಾತಿನಂತೆ ಹಾಲುಕರೆಯುವ ಕೆಲಸ ನನ್ನದು. ಯಾವುದೇ ರಿಸ್ಕಿಲ್ಲದ, ಶ್ರಮವಿಲ್ಲದ ಕೆಲಸ! ಆದರೆ ಕೊಟ್ಟಿಗೆ ಗುಡಿಸುವುದು? ತಾನು- ತನ್ನ ಪಾಡಿನ, ಅನಕ್ಷರಸ್ತ ಕೂಲಿ ಹೆಂಗಸಿನ- ಅಂತಹವರ ದನಿಯಾಗಬೇಕೆನ್ನುವ ಹಂಬಲವಿದ್ದರೂ ದಾರಿ ತಿಳಿಯದೆ ಹೋಗಿದೆ ಅನ್ನುವುದೇ ನನ್ನ ಕೊರಗು.

  ವಂದೇ,
  ಚೇತನಾ

 7. Chetana, I think the problem is the other way round. The people whom we think are uneducated (rather illiterate) have voice in them to raise against atrocities than the literate community. In a similar situation a college going girl OR any other woman from the privileged class would go away (in most cases) from the man than try shouting and create a scene.

 8. ನಿಜ ಬಸ್ನಲ್ಲಿ ಅಂತಹ ಪ್ರಕರಣಗಳು ಬೇಕಾದಷ್ಟು ನಡೆತವೆ … ಈ ಹಿಂದೊಮ್ಮೆ ಕನ್ನಡ ಪ್ರಭದ ಸಖಿ ಸಂಚಿಕೆಯಲ್ಲಿ ಈ ಬಗ್ಗೆ ನಾನೋ ಕೊಡ ಒಂದು ವಿವರವಾದ ಲೇಖನ ಬರೆದಿದ್ದೆ … ಕಿರುಕುಳ ನೀಡುವ ಮಾನವ ಕೀಟಗಳು ಅಂತ .. ಅಂದ ಹಾಗೆ ಗಡ್ಡದ ತಾತ ಓಶೋ ಕೊಡ ಇದರ ಬಗ್ಗೆ ಮಾತಾಡಿದ್ದಾರೆ …

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: