ಛೆ! ನಾನು ಹುಡ್ಗಿಯಾಗಿ ಹುಟ್ಬೇಕಿತ್ತು…


ಚಂದಿರ  * ಚಂದಿರ

ನಾನು ಗಂಡಾಗಿ ಹುಟ್ಟಿದ್ದರ ಅಹಂಕಾರ ನನಗೆ ಖಂಡಿತ ಇತ್ತು. ಹಾಗಂತ ಹೆಣ್ಣುಮಕ್ಕಳಿಲ್ಲದ ನಮ್ಮ ಮನೆಯಲ್ಲಿ ನಾನೇ ಮಗನೂ ಮಗಳೂ ಆಗಿದ್ದೆ. ರಂಗೋಲಿ ಹಾಕೋದು, ಅಮ್ಮ ಮನೆ ಕ್ಲೀನು ಮಾಡುವಾಗ ಸಹಾಯಕ್ಕೆ ನಿಲ್ಲೋದು, ಅವಳ ಪೂಜೆ ಪುನಸ್ಕಾರಗಳಿಗೆ ಅಣಿ ಮಾಡ್ಕೊಡೋದು…
ನನಗದೆಷ್ಟು ದೇವರನಾಮಗಳು ಬಾಯಿಗೆ ಬರ್ತಿದ್ದವೆಂದರೆ, ನಮ್ಮ ಮನೆಗೆ ಬಂದುಹೋಗುವ ಆಂಟಿಯರೆಲ್ಲ “ಈ ಹುಡ್ಗನ್ನ ನೋಡಾದ್ರೂ ಕಲ್ತುಕೊಳ್ಳಿ” ಅಂತ ತಮ್ಮ ಹೆಣ್ಣುಮಕ್ಕಳ ಮೂತಿ ತಿವೀತಿದ್ದರು!
ಇದರ ಜೊತೆಗೆ ಓದಿನಲ್ಲಿ, ಆಟದಲ್ಲಿ ಎಲ್ಲಾದರಲ್ಲೂ ಮುಂದು. ನಮ್ಮಪ್ಪ ಅಮ್ಮನಿಗೆ ನಾನಂದರೆ ವಿಪರೀತ ಹೆಮ್ಮೆ.

ಆದರೆ, ನನ್ನ ಕಾಲೇಜಿನ ದಿನಗಳು ಮುಗಿದವು ನೋಡಿ… ಆಗ ಶುರುವಾಯ್ತು ಅಸಲಿ ಜೀವನ. ಡಿಗ್ರಿ ಮುಗಿಸಿದ ನಾನು ಕ್ಲಾಸಿಫೈಡುಗಳಲ್ಲಿ ಮುಳುಗಿಹೋದೆ. ಗುರುತು ಮಾಡಿಟ್ಟುಕೊಂಡ ವಿಳಾಸಗಳನ್ನ ಹುಡುಕಿಕೊಂಡು ಅಲೆದೆ. ಆದರೇನು? ನಾನು ಇಂಟರ್ವ್ಯೂಗೆ ಹಾಜರಾಗುವ ಹೊತ್ತಿಗೆ ‘ಕೆಲಸ ಖಾಲಿ ಇಲ್ಲ’ ಬೋರ್ಡು ನೇತಾಡತೊಡಗುತ್ತಿತ್ತು. ರಿಸೆಪ್ಷನ್ ಕೆಲಸ, ಟೆಲಿ ಮಾರ್ಕೆಟಿಂಗು, ಡಿಟಿಪಿ… ಊಹೂಂ! “ಅವೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ” ಅಂದುಬಿಡ್ತಿದ್ದರು. ಯಾಕೆ? ಟೆಲಿ ಮಾರ್ಕೆಟಿಂಗಲ್ಲೂ ನಾವು ಬೇಡ್ವಾ? ಅಂದ್ರೆ, ಕಾಲ್ ರಿಸೀವ್ ಮಾಡಿದವರಿಗೆ ಹೆಣ್ಣುದನಿ ಕೇಳಿದರೆ ಖುಷಿಯಾಗತ್ತೆ ಅನ್ನುವ ಉತ್ತರ!
ಇನ್ನು ಮಾಹಿತಿ, ದೂರು ವಿಭಾಗಗಳು? ಯಾರು ಉತ್ತರ ಕೊಟ್ಟರೇನು? ಸಮಸ್ಯೆ ಪರಿಹಾರವಾದ್ರೆ ಸಾಕಲ್ಲ? ಇಲ್ಲ…  ಹಾಗಲ್ವಂತೆ ಅದು. ಹೆಣ್ಣಿನ ದನಿ, ಕೇಳುಗರ ಕೋಪ ತಣಿಸುತ್ತಂತೆ. ಅದರಲ್ಲೊಂದು ಮಾದಕತೆ ಇರತ್ತಂತೆ!

ನಾನು ಅಲೆಯುತ್ತ ಅಲೆಯುತ್ತ ಕಾಲ ಕಳೆದಿದ್ದೊಂದೇ ಬಂತು. ಕೆಲಸ ಮಾತ್ರ ಸಿಗಲೇ ಇಲ್ಲ. ಈಗ ಅಪ್ಪನಿಗೂ ಅಸಹನೆ ಶುರುವಾಗಿತ್ತು. ಅರಿಶಿಣ ಕುಂಕುಮಕ್ಕೆ ಬರುವ ಅಂಟಿಯರು ‘ನಮ್ ಮಗ್ಳಿಗೆ ಬಿಪಿಓ ದಲ್ಲಿ ಕೆಲ್ಸ’ ಅಂದಾಗಲೆಲ್ಲ ಅಮ್ಮನ ಮುಖ ಸಣ್ಣಗಾಗ್ತಿತ್ತು. ನಾನು ಅಲ್ಲಿಗೆ ಮತ್ತೆ ಮತ್ತೆ  ಎಡತಾಕಿದ್ದು, ಅವರು ಹೆಣ್ಣುಗಳಿಗೆ ಮೊದಲ ಆದ್ಯತೆ ಅಂದಿದ್ದು, ಎಲ್ಲಾ ವಿವರಿಸಿ ಹೇಳಿದರೂ ಅವಳಿಗೆ ಅರ್ಥವಾಗಲೇ ಇಲ್ಲ.
ನಾನು ಮಾತ್ರ ಹತಾಶನಾಗದೆ ನನ್ನ ಹುಡುಕಾಟ ಮುಂದುವರಿಸಿದ್ದೆ.

ಈ ಬಾರಿ ಟೀವಿ ಕಛೇರಿಯೆದುರು ನಿಂತಿದ್ದೆ. ನನ್ನ ನಿರರ್ಗಳ ಮಾತು, ಶೈಲಿ, ಹಾಡುಗಾರಿಕೆಗಳು ನನಗೆ ಕೆಲಸ ಕೊಡಿಸಿಕೊಡಬಹುದೆಂಬ ಭರವಸೆ ಇತ್ತು. ಅಲ್ಲಿ ನಿರೂಪಣೆಗಾಗಿ ಸಂದರ್ಶನ ನಡೆಸಿದ್ದರು. ನಾನು ನೋದಲು ಚೆಂದವಿದ್ದೇನೆ ಅಂತಿದ್ರು ಎಲ್ಲರೂ.
ಸರಿ. ಸ್ಕ್ರೀನ್ ಟೆಸ್ಟ್ ಮುಗಿಯಿತು. ನಮ್ಮ ಮಂಜ ಮಾವ ಆ ಟೀವಿ ಚಾನೆಲ್ಲಿನ ಆವರಣದಲ್ಲಿ ಕ್ಯಾಂಟೀನ್ ನಡೆಸ್ತಾರೆ. ಅವರೇ ಸ್ಟುಡಿಯೋಗೆಲ್ಲ ಕರೆದುಕೊಂಡುಹೋದರು.
ನಾನಂತೂ ಚೂರೂ ಭಯವಿಲ್ಲದೆ ಕ್ಯಾಮೆರಾದೆದುರು ನಿಂತೆ. ಡೈರೆಕ್ಟರು ಪೀಚು ಹುಡುಗ. “ನಾನು ಹೇಳಿದಾಗ ಮಾತಾಡು, ಸನ್ನೆ ಮಾಡಿದಾಗ ನಿಲ್ಲಿಸು” ಅಂದ.

ನಾನು ಶುರು ಹಚ್ಚಿಕೊಮ್ಡೆ. “ವೀಕ್ಷಕರೇ, ನಿಮಗೆಲ್ಲ ಮುಟ್ಟಿದರೆ ಮುನಿ ಕಾರ್ಯಕ್ರಮಕ್ಕೆ ಸ್ವಾಗತ. ನಾವಿವತ್ತು ನಾರಿ ಮುನಿದರೆ ಮಾರಿ ಅನ್ನೋ ಟಾಪಿಕ್ ಚರ್ಚಿಸೋಣ. ಯಾರ್ ಚೆನ್ನಾಗಿ ಒಲೀತಾರೋ, ಯಾರ್ ಚೆನ್ನಾಗಿ ಮುನೀತಾರೋ ಅವರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾಣ. ಬನ್ನಿ ಹಾಗಿದ್ರೆ, ಮೊದಲ ಕಾಲರ್ ಯಾರು ನೋಡೋಣ…”
ಅರಳುಹುರಿದಹಾಗೆ ಮಾತಾಡ್ತಾ ಸಾಗಿದೆ. ಡೈರೆಕ್ಟರು ‘ಕಟ್’ ಹೆಳೋದು ಮರೆತು ನಿಂತಿದ್ದ.
ವಿಶ್ವಾಸ ಬಂದಹಾಗಾಗಿ ‘ನಂಗೆ ಹಾಡ್ಲಿಕ್ಕೂ ಬರತ್ತೆ’ ಅಂದು ಹಾಡಿ ತೋರಿಸಿದೆ. ಲೈಟ್ ಬಾಯ್ ಗಳಿಂದ ಹಿಡಿದು ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮೈಕು ತೆಗೀಲಿಕ್ಕೆ ಬಂದ ಹುಡುಗ ಕೂದ ‘ಚೆನಾಗಿ ಮಾತಾಡಿದ್ರಿ ಸಾರ್’ ಅಂದ. ನಾನು ಕೆಲಸ ಸಿಕ್ಕೇ ಬಿಡ್ತು ಅಂತ ನಿರಾಳವಾದೆ.

ಸ್ಟುಡಿಯೋ ಹೊರಗೆ ಬರೋ ವೇಳೆಗೆ ಡೈರೆಕ್ಟರು ಮಾತಾಡ್ತಿದ್ದದ್ದು ಕೇಳಿಸ್ತು. ‘ಸಾರ್, ಇವ್ನು ಹುಡುಗಿಯಾಗಿದ್ದಿದ್ರೆ ಮಜಾನೇ ಬೇರೆ ಇರ್ತಿತ್ತು ಸಾರ್. ಸಖತ್ ಪ್ರೋಗ್ರಾಮ್ ಮಾಡಬಹುದಿತ್ತು!”
ನನ್ನ ತಲೆ ಮೇಲೆ ತಣ್ಣೀರು ಸುರಿದಹಾಗಾಯ್ತು.

ಹೊರಗೆ ಬರುವಾಗ ನೋಡಿದೆ. ಟೀವಿಯಲ್ಲಿ ತುಂಡುಲಂಗದ ಹುಡುಗಿ “ಬನ್ನಿ, ಹಿಂದಿನ ನೇರ ಪ್ರಸಾರದಲ್ಲಿ ನಾವು ನೀವು ಒಸ ಹಾಟ ಹಾಡೋಣ” ಅಂತಿದ್ಲು! ಅಸಹ್ಯವಾಯ್ತು.
“ಛೆ! ನಾನೂ ಹುಡ್ಗಿಯಾಗಿ ಹುಟ್ಬೇಕಿತ್ತು”
ಹಾಗಂತ ಮೊದಲ ಬಾರಿಗೆ ಅನ್ನಿಸ್ತು.

11 thoughts on “ಛೆ! ನಾನು ಹುಡ್ಗಿಯಾಗಿ ಹುಟ್ಬೇಕಿತ್ತು…

Add yours

 1. ಸರಳವಾಗಿ ಪ್ರಾರಂಭವಾದ ಲೇಖನ ಅಲ್ಲಲ್ಲಿ ನಗೆಯುಕ್ಕಿಸುತ್ತಾ ಕಡೆಗೆ ಬದಲಾದ ಕಾಲದ ವಾಸ್ತವವನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದೆ.ಈ ಕಾಲದಲ್ಲಿ ಹೆಣ್ಣು ಮಕ್ಕಳ ಪ್ರಪಂಚದ ಬಾಗಿಲು ವಿಸ್ತಾರವಾಗಿ ತೆರೆದುಕೊಳ್ಳುತ್ತಿದ್ದರೂ ಹೆಣ್ಣು ಭ್ರೂಣಹತ್ಯೆ ಮಾತ್ರ ಕಡಿಮೆಯಾಗಿಲ್ಲದಿರುವುದು ವಿಪರ್ಯಾಸವಲ್ಲವೇ ?ಇದನ್ನು ಓದುತ್ತಿರುವಂತೆಯೇ ಇತ್ತೀಚೆಗೆ ಗಂಡುಮಕ್ಕಳ ತಾಯಂದಿರು ಮಕ್ಕಳ ಮದುವೆ ಮಾಡಲು ಪರದಾಡುತ್ತಿರುವ ದೃಶ್ಯ ಕಣ್ಮುಂದೆ ಬರುತ್ತದೆ. ಕಾರಣ ಈಗ ಹುಡುಗಿ ಹುಡುಗನನ್ನು ಆಯ್ಕೆಮಾಡುವ ಸ್ಥಾನದಲ್ಲಿದ್ದಾಳೆ !!

 2. ಪ್ರಸ್ತುತದಲ್ಲಿ ಸಣ್ಣ ನೌಕರಿಯುಳ್ಳ ಮತ್ತು ಊರಲ್ಲಿ ಜಮೀನು ಮನೆ ನೋಡಿಕೊಂಡು ಬದುಕುತ್ತಿರುವ ಹವ್ಯಕರ ಹುಡುಗರೂ ಹೀಗೇ ಅಂದುಕೊಳ್ಳುತ್ತಿದ್ದಾರಂತೆ.
  -ಚಿನ್ಮಯ

 3. ಎಲೈ ಚಂದಿರ,
  ಕೆಲ್ಸ ಹುಡ್ಕ್ತೀನಿ ಅಂತ, ರಿಸೆಪ್ಷನ್ ಕೆಲಸ, ಟೆಲಿ ಮಾರ್ಕೆಟಿಂಗು, ಡಿಟಿಪಿ, ಟೀವಿಯಲ್ಲಿ ಆಂಕರ್ ಇಂತಹುಕ್ಕೆ ಕೇಳೋಕೆ ಹೋದ್ರೆ, ಜನ ಆಬ್ಬಿಬಸ್ಲಿ(Siddaramaiah’s obviously!) ಹುಡ್ಗೀರ್ನೇ ಪ್ರಿಫ಼ರ್ ಮಾಡೋದು ಅನ್ನೋದು ಗೊತ್ತಿರೋದು ಬೇಡ್ವೇನಯ್ಯ..
  ಹುಡ್ಗೀರು ಕಾಂಪಿಟಿಶನಲ್ಲಿ ಇದ್ರೆ.. ಗಂಡಸ್ರಿಂದಲೇ ಗಂಡಸ್ರೀಗೆ ಅನ್ಯಾಯ ಆಗೋಗುತ್ತೆ.. 😦

  ಮರ್ದ್ ಹೋಕೆ, ರಂಗೋಲಿ ಹಾಕೋದು, ದೇವರ್ನಾಮ ಹಾಡೋದು ಇಂತವೆಲ್ಲ ಮಾಡಿ ಮನೇಗ್ಬರ್ತಿದ್ದ ಹೆಣ್ಮಕ್ಳನೆಲ್ಲ ಅವರಮ್ಮಂರಿಂದ ಬಯ್ಯೋ ಹಾಗೆ ಮಾಡಿದ್ರೆ ಅವ್ರು ಸುಮ್ನೆ ಇರ್ತಾರಾ? ಶಾಪ ಕೊಡ್ತಾರೆ..! ಅದ್ಕೆ ನೀನು ಅಷ್ಟೋಂದು ಗೋಳು ಅನುಭವಿಸಿದ್ದು.!

  -ಅಆಇಈ 😉

 4. ಈ ಚಂದಿರ ಕಾಲ್ಪನಿಕ ವ್ಯಕ್ತಿಯಾಗಿದ್ದರೆ ಇದನ್ನು ಧಾರಾಳವಾಗಿ ಪ್ರಕಟಿಸಬಹುದು. ಇಲ್ಲದಿದ್ದರೆ ಓದಿ ಸುಮ್ಮನಾಗಿಬಿಡಿ. ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ರಂಗೋಲಿ ಹಾಕುವುದು, ಕಸೂತಿ ಹಾಕುವುದು, ಇತ್ಯಾದಿಗಳನ್ನು ಇಷ್ಟಪಡುತ್ತ, ಅದರಲ್ಲಿ ಸಹಜ ಖುಷಿಯನ್ನು ಕಂಡುಕೊಳ್ಳುವ ಹಣ್ಣಪ್ಪಿ ಹುಡುಗರನ್ನು ಸ್ಕೂಲು ಕಾಲೇಜಿನ ದಿನಗಳಲ್ಲಿ ಅಲ್ಲಲ್ಲಿ ಕಂಡಿದ್ದೇನೆ. ಬಹುಶಃ ನಾವೆಲ್ಲ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಹುಡುಗರನ್ನು ನೋಡಿರುತ್ತೇವೆ. ಬಾಲ್ಯದಲ್ಲಿ ಮತ್ತು ಹದಿ ವಯಸ್ಸಿನ ಆದಿ ಭಾಗದಲ್ಲಿ ದೀರ್ಘಕಾಲ ಹೆಂಗಸರ ಮಧ್ಯೆ ಬೆಳೆದ ಹುಡುಗರು ಈ ರೀತಿಯ ಚಟುವಟಿಕೆಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಇಷ್ಟಪಡುತ್ತಾರೆ ಎಂಬುದು ನನ್ನ ಗ್ರಹಿಕೆ. ಮಾತೃ ಪ್ರಧಾನ ಕುಟುಂಬಗಳಲ್ಲಿ ಬೆಳೆದ ಹುಡುಗರೂ ಈ ರೀತಿಯಾಗುವುದುಂಟು. ಇದರಲ್ಲಿ ಬಹುಪಾಲು ಹುಡುಗರು ಮನೆಬಿಟ್ಟು ಹಾಸ್ಟೆಲ್ಲು ಅಲ್ಲಿ ಇಲ್ಲಿ ಹೋದನಂತರ ಅಥವಾ ಒಂದು ವಯಸ್ಸಿನ ನಂತರ ಸಹಜ ಹುಡುಗರಾಗಿಬಿಡುತ್ತಾರೆ.
  ಆದರೆ ನಾನು ಕಂಡುಕೊಂಡಿರುವ ಒಂದು ವಿಚಿತ್ರ ಸಂಗತಿಯೇನು ಗೊತ್ತೇ? ಇಂತಹ ಹುಡುಗರು ಹುಡುಗಿಯರಿಗೆ ಬಹು ಇಷ್ಟವಾಗುತ್ತಾರೆ. ಇಲ್ಲಿ ಇಷ್ಟವೆಂದರೆ ಲವ್ವು ಗಿವ್ವು ಎಂದುಕೊಳ್ಳಬೇಕಾಗಿಲ್ಲ. ಇವರೊಂದಿಗೆ ಸದಾ ಹುಡುಗಿಯರು ಕಂಡುಬರುತ್ತಾರೆ. ’ಇವನಾದರೆ ನಿರುಪದ್ರವಿ’ ಎಂಬ ಭಾವವಿದ್ದೀತು. ಪುರುಷನಾದ ನನಗೆ ಈ ಸಂವೇದನೆಗಳು ಅರ್ಥವಾಗಲಿಕ್ಕಿಲ್ಲ. ಸಲ್ಮಾನ್ ಖಾನ್ ತರ ಎದೆ ಉಬ್ಬಿಸಿ ತೋಳುಗಳನ್ನು ತುಸು ದೂರ ಇಟ್ಟುಕೊಂಡು ನಡೆವ ‘ಬೊಡಿ’ ಹುಡುಗರ ಕೆಂಗಣ್ಣಿಗೆ ಇಂತಹ ಹೆಣ್ಣಪ್ಪಿಗಳು ಗುರಿಯಾಗುತ್ತಿದ್ದದ್ದನ್ನು ಗಮನಿಸಿದ್ದೇನೆ.
  ನನ್ನ ಸಹಪಾಠಿಯೊಬ್ಬನಿಗೆ, “ಬ್ರಹ್ಮ ಕೊನೇ ಕ್ಷಣದಲ್ಲಿ ನಿರ್ಧಾರ ಬದಲಾಯಿಸಿದ ಹಾಗಿದೆ” ಎಂದು ನಮ್ಮ ಮೇಷ್ಟ್ರೊಬ್ಬರು ತಮಾಷೆ ಮಾಡಿದ್ದು ನನಗೆ ನೆನಪಿಗೆ ಬರುತ್ತದೆ.
  -ಚಿನ್ಮಯ.

 5. ಚಿನ್ಮಯ,
  ಬರಹದ ನಿರೂಪಣೆ ಆತ್ಮಕಥನದ ಶೈಲಿಯಲ್ಲಿದ್ದ ಮಾತ್ರಕ್ಕೆ ಅದು ಬರಹಗಾರನ ಸ್ವಂತ ಅನುಭವವಾಗಬೇಕಿಲ್ಲ ಅಲ್ವಾ? ಇಷ್ಟಕ್ಕೂ ಈ ‘ಚಂದಿರ’ ಕಾಲ್ಪನಿಕ ವ್ಯಕ್ತಿಯಲ್ಲ. ಹೆಸರು ಮಾತ್ರ ಬರಹಕ್ಕೆಂದೇ ಇಟ್ಟುಕೊಂಡಿದ್ದು. ಆದರೆ, ಇಲ್ಲಿನ ಕಥೆ ಕಾಲ್ಪನಿಕವೇ. ಆದರೆ ಅದು ಅಸಂಗತವೇನಲ್ಲ.

  ನಿಮ್ಮ ಪ್ರತಿಕ್ರಿಯೆಯಲ್ಲಿ ಹೇಳಿರುವಂತೆ ‘ಹೆಣ್ಣಪ್ಪಿ’ ಹುಡುಗರನ್ನ ಹುಡುಗಿಯರು (ಒಟ್ಟಾರೆ ಹೆಣ್ಮಕ್ಕಳನ್ನು ಪರಿಗಣಿಸಿದರೆ)ಇಷ್ಟಪಡೋದು ನಂಗೆ ಡೌಟು. ನನ್ನ ಮಟ್ಟಿಗಂತೂ, nnnevvver!

 6. ವಿಕಾಸ್, ಹಾಗಿದ್ದರೂ ಇರಬಹುದು. ಯಾಕಂದ್ರೆ, ಇದನ್ನೆಲ್ಲ ‘ಚಂದಿರ’ ನಾನು ಭಾಮಿನಿ ಷಟ್ಪದಿ ಬರೀತಿದ್ದ ಕಾಲದಲ್ಲಿ ಬರೆದಿದ್ದು. ಹೆಣ್ಮಕ್ಕಳದ್ದು ಮಾತ್ರ ಕಷ್ಟಾನಾ? ನಮಗೂ ಎಷ್ಟಿರತ್ತೆ ಗೊತ್ತಾ? ಅಂತ ಸವಾಲು ಹಾಕಿ!
  ಒಂದಿನ ವೈಟ್ ಮಾಡು. ಅಂವನ್ನೇ ಕೇಳಿ ಹೇಳಿಬಿಡ್ತೀನಿ. ಇದು ‘ಪುರುಷ ಸಂವೇದನೆ’ಯಾ ಅಂತ.

 7. ಚಿನ್ಮಯ ಅವರೆ,

  ಮೊದಲಿಗೆ ದಯವಿಟ್ಟು ತಪ್ಪು ತಿಳಿಯಬೇಡಿ. ನಿಮ್ಮನ್ನು ಹಂಗಿಸಲೋ ಇಲ್ಲಾ ಟೀಕೀಸಲೋ ಈ ರೀತಿ ಖಂಡಿತ ಹೇಳುತ್ತಿಲ್ಲ. ನಿಮ್ಮ ಪ್ರತಿಕ್ರಿಯೆಯನ್ನು ಮಾತ್ರ ಅಲ್ಲಗಳೆಯುತ್ತಿದ್ದೇನೆ. ಇಲ್ಲಿ ವೈಯಕ್ತಿಕವಾಗಿ ಎನನ್ನೂ ತೆಗೆದೊಳ್ಳಬಾರದೆಂದು ನನ್ನ ಕೋರಿಕೆ.

  ನೀವು ಹೇಳಿದ ರೀತಿಯ ಹೆಣ್ಣಪ್ಪಿ(ಈ ಪದವೇ ನನಗಿನ್ನೂ ಸರಿಯಾಗಿ ಅರ್ಥವಾಗಿಲ್ಲ..) ಹುಡುಗರನ್ನು ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೋ ಇಲ್ಲವೋ ತಿಳಿಯದು ಆದರೆ ನೀವು ಹೇಳಿರುವ ವಿಷಯ ಮಾತ್ರ ಖಂಡಿತವಾಗಿಯೂ ಸರಿಯಾದುದಲ್ಲ ಎಂದು ಮಾತ್ರ ತಿಳಿದಿದೆ.

  ಇಷ್ಟಾನಿಷ್ಟಗಳು, ಆಸಕ್ತಿ, ಅಭಿರುಚಿಗಳು ಇಂತವರಿಗೇ ಮಾತ್ರ ಸೀಮಿತವಾಗಿರಬೇಕೆಂಬ ನಿಯಮ ಬ್ರಹ್ಮ ಮಾಡಲಿಲ್ಲ.. ಅವನ ಸೃಷ್ಟಿಯಾಗಿರುವ ಮನುಷ್ಯರೇ ಮಾಡಿದ್ದು.

  ರಂಗೋಲಿ, ಕಸೂತಿ-ಇತ್ಯಾದಿಗಳಲ್ಲಿ ಆಸಕ್ತಿ ಕೇವಲ ಹೆಣ್ಣಿಗೆ ಮಾತ್ರ ಇರಬೇಕೆಂದಿದೆಯೇ? ಪುರುಷರಿಗಿದ್ದರೆ ಅದು ಪ್ರಕೃತಿ ವಿಪರ್ಯಾಸವೇ? ಆತ ಪುರುಷನೆಂದೆನಿಸಿಕೊಳ್ಳುವುದಿಲ್ಲವೇ? ಎಷ್ಟೋ ಹುಡುಗಿಯರಿಗೆ ಕರಾಟೆ, ಬಾಕ್ಸಿಂಗ್‌ ಇತ್ಯಾದಿಗಳಲ್ಲಿ ಆಸಕ್ತಿಗಳಿರುತ್ತದೆ. ಹಾಗಂತ ಅಂತಹವರು ಹೆಣ್ಣಾಗಿ ಹುಟ್ಟಿದ್ದೇ ತಪ್ಪೇ? ಈ ರೀತಿಯ ಅಸಮಾನತೆಯು ನಮ್ಮೊಳಗಿರುವುದರಿಂದಲೇ ಏನೋ ಈ ಪುರುಷ ಸಂವೇದನೆ/ಸ್ತ್ರೀ ಸಂವೇದನೆ ಎಂಬ ತಾರತಮ್ಯಗಳು ಹುಟ್ಟಿಕೊಂಡಿರುವುದು?!!

 8. ಹೆಗಡೆಯವರೆ,

  ಹಾಗೆ ಬೇಸರಗೊಳ್ಳುವ ಪ್ರಶ್ನೆಯೇನಿಲ್ಲ. ನನ್ನ ಅನುಭವಗಳಿಂದ ಜನಿತವಾದ ಒಂದು ಅನಿಸಿಕೆಯಷ್ಟೆ, ವಾದವಲ್ಲ. ಪುರುಷ ಮತ್ತು ಸ್ತ್ರೀ ಗೆ ಪ್ರಕೃತಿದತ್ತವಾದ ವಿಭಿನ್ನ ಸ್ವರೂಪದ ಮಾನಸಿಕ ಮತ್ತು ದೈಹಿಕ ಸಂವೇದನೆಗಳಿರುತ್ತವೆ ಎಂಬುದನ್ನು ನಂಬುವವನು ನಾನು. ಸಂಸಾರಿಕ ಸಮಸ್ಯೆಗಳಲ್ಲಿ ನನ್ನ ಪತ್ನಿ ಯೋಚಿಸುವ ಸೂಕ್ಷ್ಮ ಆಯಾಮಗಳನ್ನು ನನಗೆ ತಲುಪಲು ಸಾಧ್ಯವಾಗದಿದ್ದಾಗ ನಾನು ಯೋಚಿಸುವುದು ಇದನ್ನೇ. ಮತ್ತೆ ಇದು ನನ್ನ ನಂಬಿಕೆಯಷ್ಟೆ, ನನ್ನದೇ ಸರಿ ಎಂಬ ಹೋರಾಟವಿಲ್ಲ.
  ಸಮಾನತೆಯ ಬಗ್ಗೆ ಯಾವುದೇ ತರದ ಪೂರ್ವಾಗ್ರಹಗಳಿಲ್ಲ ನನಗೆ. ಪುರುಷ – ಸ್ತ್ರೀ ಸಮಾನತೆಯ ವಿಚಾರದಲ್ಲಿ ಭಾರತೀಯ ಸಮಾಜಕ್ಕಿಂತ ಉತ್ತಮ ಸ್ಥಿತಿಯ ಸಮಾಜದಲ್ಲಿ ಬದುಕುತ್ತಿರುವವನು ನಾನು. ಅವಿಭಕ್ತ ಕುಟುಂಬದ ಹಿನ್ನೆಲೆಯಿಂದ ಬಂದ ನಾನು ಸ್ತ್ರೀ (ಸಂ)ವೇದನೆಗಳನ್ನು ತುಂಬ ಹತ್ತಿರದಿಂದ ಬಲ್ಲೆ.

  ನಿಮ್ಮ ಹೇಳಿಕೆಯಿಂದ ಬೇಸರವೇನಿಲ್ಲ. ಸ್ತ್ರೀ ಸಂವೇದನೆಗಳನ್ನು ಅರ್ಥೈಸಿಕೊಳ್ಳುತ್ತಲೇ ಪುರುಷನಲ್ಲಿಯ ಮನುಷ್ಯ ಬಲಗೊಳ್ಳುತ್ತಾ ಹೋಗುವುದು.

  ನಮಸ್ತೆ
  -ಚಿನ್ಮಯ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: