ವ್ಯವಸ್ಥೆಯ ತಲೆ ಕಡಿದರೆ ಆದರ್ಶ ಚಿಗುರುವುದಂತೆ!


“ಹಂಗಂದ್ರೆ ಹೆಂಗೇ ಅಮ್ಮಿ? ಸುಖಾಸುಮ್ನೆ ಯಾರೋ ಅಡ್ನಾಡಿಗಳು ಕೇಳಿದ್ರು ಅಂತ ಹಂಗೆಲ್ಲ ಮನೆ- ಜಮೀನು ಕೊಟ್ಬಿಡಕ್ಕಾಗ್ತದಾ? ಅದ್ಕೇಯ, ನಾ ನಿಮ್ಮಪ್ಪನ್ ಹತ್ರ ಬಡ್ಕಂಡಿದ್ದು. ಓದ್ಸೋ ಉಸಾಬ್ರಿ ಬೇಕಾಗಿಲ್ಲ, ಸುಮ್ನೆ ನಮ್ಮಣ್ಣನ ಮಗನ ಕೈಲಿ ತಾಳಿ ಕಟ್ಟಿಸ್ಬಿಡಿ ಅಂತ”
ಅಮ್ಮ ವಟಗುಡ್ತಿದ್ದಳು. ಹಾಗೆ ಅವಳು ನನ್ನ ಮೇಲೆ ಹರಿಹಾಯೋದಕ್ಕೆ ಕಾರಣವೂ ಇತ್ತು…

ಅದೇ ತಾನೆ ನಾನು ಕಾಲೇಜಿಂದ ಮನೇಗೆ ಹೊರಟಿದ್ದೆ. ಈಗ ಇಲ್ಲವಾಗಿರೋ ಆ ಇಬ್ಬರು ಹೆಣ್ಮಕ್ಕಳು ನನ್ನ ದಿಕ್ಕು ತಪ್ಪಿಸಿದ್ದರು. ತಿಳಿಯಾಗಿದ್ದ ನನ್ನ ಮನಸಿಗೆ ಆದರ್ಶಗಳ ಕಲ್ಲೆಸೆದು ರಾಡಿ ಎಬ್ಬಿಸಿದ್ದರು. ಅವರು ಅದಕ್ಕಾಗಿ ಬಿಗಿದಿದ್ದ ಭಷಣವಾದ್ರೂ ಎಂಥದು!?
ಊರಿಗೇ ದೊಡ್ಡ ಮನೆತನ ನಮ್ಮದು. ಅಜ್ಜ ಕಷ್ಟಪಟ್ಟು ಒಂದೊಂದು ಅಡಿಕೆ ಸಸಿಯನ್ನೂ ಕೈಯಾರೆ ನೆಟ್ಟು ಬೆಳೆಸಿದ್ದರಂತೆ. ಅಜ್ಜಿ ಒಂದೊಂದಕ್ಕೂ ಬಾವಿಯಿಂದ ನೀರು ಸೇದಿ ಹೊತ್ತು ಹಾಕಿದ್ದಳಂತೆ. ಅಜ್ಜ, ಅಜ್ಜಿ, ಅತ್ತೆ, ಅಪ್ಪಯ್ಯ ಎಲ್ರೂ ಒಪ್ಪತ್ತು ಊಟ ಮಾಡಿ, ಗಿಡಗಳಿಗೆ ಲೋಡುಗಟ್ಟಲೆ ಕಾನುಗೊಬ್ಬರ ಉಣಿಸಿ ಬೆಳೆಸಿದ್ದ ಐವತ್ತೆಕರೆ ಅಡಿಕೆ ತೋಟ ಅದು.
ಅಂಥಾ ಅಡಿಕೆ ತೋಟದ ಮಧ್ಯದಲ್ಲಿದ್ದ ಗಂಧದ ಮರವನ್ನ ಮಂಜ ಅನ್ನುವವನೊಬ್ಬ ಕಡಿದು ಸಾಗಿಸಿದ್ದನಂತೆ. ಸಿಕ್ಕಿಬಿದ್ದಿದ್ದ ಅವನನ್ನು ದಿನವಿಡೀ ಕಟ್ಟಿಹಾಕಿ ಅಜ್ಜ ಪಂಚಾಯ್ತಿ ಮಾಡಿದ್ದರಂತೆ. ಒಡೇರ ಮನೆ ಗಂಧ ಕದ್ದ ಅಂತ ಊರವರು ಅವಂಗೆ ಬಹಿಷ್ಕಾರ ಹಾಕಿದ್ದರಂತೆ. ಅವಮಾನ ತಡೀಲಾರದೆ ಮಂಜ ಮೈಲುತುತ್ತ ತಿಂದು ಸತ್ತಿದ್ದನಂತೆ.

ಹಾಗೆ ಆ ಇಬ್ಬರು ಸಿಕ್ಕು ಈ ಕಥೆ ಹೇಳೋ ಮುಂಚೆಯೇ ನಂಗದೆಲ್ಲ ಗೊತ್ತಿತ್ತು. ಆವರೆಗೂ ಆ ಕಥೆಯನ್ನ ನೆನೆಸ್ಕೊಂಡು ‘ಅಜ್ಜ ಅವತ್ತು ಹಂಗೆ ಮಾಡಿದ್ಕೇ ಈವರ್ಗೂ ಯಾವ ಕಳ್ಳನೂ ತೋಟದ ಬೇಲಿ ಕೂಡ ಮುಟ್ಟೋ ಸಾಹಸ ಮಾಡಿಲ್ಲ’ ಅನ್ನೋ ಹೆಮ್ಮೆ ನಂಗಿತ್ತು. ಆದರೆ ಆ ಹೆಮ್ಮೆಯನ್ನ ಅವಮಾನ ಅಂದ್ಕೊಳ್ಳುವ ಹಾಗೆ ಮಾಡಿಬಿಟ್ಟರು ಅವರು.
ಅದೇನೋ ಭಾರೀ ಭಾರದ ಪದಗಳು. ಪುರೋಹಿತಷಾಹಿ ಅಂದರು. ನನಗರ್ಥವಾಗಲಿಲ್ಲ. ಅಧಿಕಾರಷಹಿ ಅಂದರು. ಅಪ್ಪಯ್ಯ, ಅಜ್ಜ ಯಾರೂ ದಬ್ಬಾಳಿಕೆ ಮಾಡಿದ್ದನ್ನ ನಾನಂತೂ ನೋಡಿರಲಿಲ್ಲ.

ನಾನು ಹಂಗೂ ಅಪ್ಪಯ್ಯ ಅಡ್ಕೆ ಸುಲ್ತದ ಸೋಮನಿಗೆ ಇಪ್ಪತ್ತು ಸಾವಿರ ಕೊಟ್ಟು ಪಂಗನಾಮ ತಿಕ್ಕಿಸಿಕೊಂಡಿದ್ದನ್ನ, ಬಿಡಾರದ ಲಚ್ಚುವಿಗೆ ಹೊಟ್ಟೆನೋವು ಬಂದಾಗ ಅಣ್ಣನೇ ಜೀಪಲ್ಲಿ ಕರ್ಕೊಂಡು ಹೋಗಿ ಅಡ್ಮಿಟ್ ಮಾಡಿಸಿಬಂದಿದ್ದನ್ನ ಎಲ್ಲಾ ಹೇಳಿದೆ. ಅವರಿಗೆ ಅದ್ಯಾವ್ದೂ ಒಪ್ಪಿಗೆ ಆಗಲಿಲ್ಲ. ಉದ್ದುದ್ದದ ಭಾಷಣ ಬಿಗೀತಾ ವೀರಾವೇಶವಾಡಿದ್ದರು.
ನೆಗೆದುಬಿದ್ದು ಮೂವತ್ತೈದು ವರ್ಷದ ಮೇಲಾಗಿರೋ ಮಂಜನ ಮೊಮ್ಮಗ ಈಗ ಮೆಜಾರಿಟಿಗೆ ಬಂದಿದಾನೆ. ಅವಂಗೆ, “ಪರಿಹಾರ ಅಂತ ನಲ್ಕೆಕರೆ ಜಮೀನು ಬಿಟ್ಕೊಡಕ್ಕೆ ಹೇಳು” ಅಂತಂದು ಕೈಗೆ ಕೆಂಪು ಪಟ್ಟಿ ಕಟ್ಟಿ ಕಳಿಸಿದ್ದರು, ಆ ಹುಡುಗಿಯರ ಜೊತೆಗಿರುತ್ತಿದ್ದ ಬಂದೂಕಿನ ಜನರು.
ಅವರು ಬಳಸಿದ್ದ ಭಾರೀ ಪದಗಳ ಭಾರದಿಂದ್ಲೋ, ಆದರ್ಶಗಳ ತೆವಲಿಂದ್ಲೋ, ಅಂತೂ ಅವರು ಹೇಳಿದ್ದು ಸರಿ ಅಂತ ಅನ್ನಿಸಿಹೋಗಿತ್ತು. ಮನೆಗೆ ಹೋದವಳೆ ನಾನು ಅವರ ಪರ ವಕಾಲತ್ತು ವಹಿಸಿ ಅಮ್ಮನ ತಲೆ ತಿಂದಿದ್ದೆ. ಅದಕ್ಕೇ ಅವಳು ಹಾಗೆ ಹರಿಹಾಯ್ದಿದ್ದು.

~
ನಾನು ತಂದಿದ್ದ ವರದಿಯನ್ನ ಅಪ್ಪಯ್ಯ ಸೀರಿಯಸ್ಸಾಗಿ ತೊಗೊಂಡಿರಲಿಲ್ಲ. ವಾರ ಕಳೆದಮೇಲೆ ಅವರಿಗೊಂದು ಬೆದರಿಕೆ ಪತ್ರ ಬಂತು. ಅಪ್ಪಯ್ಯ ರೇಗಿ ಮಂಜನ ಮೊಮ್ಮಗನ್ನ ಕರೆಸಿ ವಿಚಾರಿಸಿದ. ಕಳ್ಳನಾಟದ ಧಂಧೆ ಮಾಡ್ಕೊಂಡು ತನ್ನ ಪಾಡಿಗೆ ತಾನಿದ್ದ ಅವನನ್ನು ಆ ಕೆಂಪುಮಂದಿಯೇ ಕರೆಸಿ, ಇಂವ ಬೇಡ ಬೇಡಾಂತ ದಮ್ಮಯ್ಯಗುಡ್ಡೆ ಹಾಕಿದ್ರೂ ಕೇಳದೆ ‘ನ್ಯಾಯ ಕೊಡಿಸ್ತೀವಿ, ಪರಿಹಾರ ಕೊಡಿಸ್ತೀವಿ’ ಅಂತೆಲ್ಲ ಶಪಥ ಮಾಡಿ, ತಮಟೆ ಬಡಿಯುತ್ತ ಹಾಡಿ ಕುಣಿದು ಕುಪ್ಪಳಿಸಿದ್ದರಂತೆ!
ಅಂವ ಹೇಳಿದ ಹರಿಕಥೆ ಮೇಲೆ ಅಪ್ಪಯ್ಯನಿಗೆ ನಂಬಿಕೆ ಬಂದಹಾಗೆ ಕಾಣಲಿಲ್ಲ. ಮಂಜ ಸತ್ತಮೇಲೆ ಆವರೆಗೆ ಅವನ ಸಂಸಾರಕ್ಕಾಗಿ ಮನೆಯಿಂದ ಕೊಟ್ಟ ಹಣ, ಇನ್ನಿತರ ಸಹಾಯಗಳ ಲಿಸ್ಟು ಬಿಚ್ಚಿಟ್ಟ ಅಂವ, ಇದನ್ನ ತೀರಿಸು, ನಾಲ್ಕೆಕರೆ ಏನು, ಎಂಟೆಕರೆಯೇ ಕೊಟ್ಟೇನು ಅಂದುಬಿಟ್ಟ.
ಆ ಎಲ್ಲ ರಾದ್ಧಾಂತಗಳೂ ಅವತ್ತಿಗೇ ಮುಗಿದುಹೋಯ್ತು. ಆದರೆ ಆ ಇಬ್ಬರು ಹುಡುಗಿಯರು ಮಾತ್ರ ನನ್ನ ದಾರಿಗಡ್ಡವಾಗಿ ನಿಂತು ತಲೆ ತಿನ್ನೋದು ತಪ್ಪಲಿಲ್ಲ. ನನಗೂ ಅವರತ್ತ ಎಂಥದೋ ಆಕರ್ಷಣೆ ಬೆಳೆಯತೊಡಗಿತ್ತು. ಪ್ರತಿ ಸಂಜೆ ನಾನೇ ಅವರು ಸಿಕ್ಕಾರು ಎಂದು ಹಾರೈಸಿ ನಡೆಯತೊದಗಿದ್ದೆ.
ಹೀಗೇ ಒಂದಿನ… ನಾವು ಮಾತಾಡುತ್ತ ಹೆಜ್ಜೆ ಹಾಕ್ತಿದ್ದೆವು. ಅವರಿಬ್ಬರ ಹೊಟ್ಟೆ ಹಸಿದಿತ್ತು. ನಾನು ಅವರನ್ನ ಬ್ಯಾಣದಲ್ಲಿ ನಿಲ್ಲಿಸಿ ಮನೆಯಿಂದ ಕದ್ದುಮುಚ್ಚಿ ತಿನ್ನಲಿಕ್ಕೆ ತೊಗೊಂಡುಹೋಗಿ ಕೊಟ್ಟಿದ್ದೆ. ಅವತ್ತಿನಿಂದ ಅದು ನನ್ನ ನಿತ್ಯದ ಕೆಲಸವಾಗಿಹೋಯ್ತು. ಅವರೂ ಧಾರಾಳವಾಗಿ ನನ್ನ ಕೂರಿಸ್ಕೊಂಡು ಇತಿಹಾಸದ ಪಾಠ ಹೇಳ್ತಿದ್ದರು. ಕಾಲೇಜು ಬಂಕು ಮಾಡಿ ನಾನು ಅವರೊಟ್ಟಿಗೆ ಕಾಡು ಸುತ್ತೋದು ಮಾಮೂಲಿಯಾಯ್ತು. ಮನೆಯಿಂದ ಊಟ ಕದೀತಿದ್ದ ನಾನು ಬರಬರುತ್ತಾ ಅಪ್ಪಯ್ಯನ ತಿಜೋರಿಗೆ ಕೈಹಾಕತೊಡಗಿದೆ.

ಹೀಗೇ ನನ್ನ ಕಳ್ಳತನದ ವಹಿವಾಟು ಶುರುವಾಗಿ ಏಳೆಂಟು ತಿಂಗಳಾಗಿರಬೇಕು. ಅಪ್ಪಯ್ಯ ಸಿಗಂಧೂರಿನಿಂದ ನಿಂಬೆಹಣ್ಣು ತಂದುಕಟ್ಟಿದ್ದ. ಅದೇನು ಗ್ರಹಚಾರವೋ, ಒಂದಿನ ತಿಜೋರಿ ಬೀಗ ತಿರುವುವಾಗ ನಾನು ಸಿಕ್ಕುಬಿದ್ದೆ.
ಅಮ್ಮ ಸೂರು ಹಾರೋ ಹಾಗೆ ಕೂಗಾಡಿದಳು. ಅಪ್ಪಯ್ಯ ಅಂತೂ, ‘ನೀನು ಆ ಬೋಳೀಮಕ್ಕಳ ಸಹವಾಸ ಮಾಡೋದಾದ್ರೆ ನಿನ್ನೂ ಸಾಯ್ಸಿ, ನಾವೂ ನೇಣು ಹಕ್ಕೊಳ್ತೀವಿ’ ಅಂತ ಬಂದೂಕು ಕುತ್ತಿಗೆಗಿಟ್ಟ. ನಾನು ರೊಚ್ಚಿಗೆದ್ದೆ.

ಅದೇ ಕೊನೆ. ಅವತ್ತು ರಾತ್ರಿ ಅಪ್ಪಯ್ಯ ಅಮ್ಮ ಉಪವಾಸ ಮಲಗಿದರು. ನಾನು ಹೊಟ್ಟೆ ತುಂಬಾ ಉಂಡು ಮಲಗಿದೆ. ನಾನು ಮಲಗಿದೆ ಅಂತ ಅವರು ನೆಮ್ಮದಿಯ ನಿದ್ದೆಗೆ ಜಾರಿರಬೇಕು…

ನಾನು ಎದ್ದಿದ್ದೆ!
ಬ್ಯಾಣದಲ್ಲಿ ನನ್ನ ಸಂಗಾತಿಗಳು ಕಾದಿದ್ದರು. ನನ್ನ ಒಡವೆ ವಸ್ತುಗಳನ್ನ, ಒಂದಷ್ಟು ಹಣವನ್ನ ಗಂಟುಕಟ್ಟಿಕೊಂಡೆ. ಬೆಳಗಾಗೋ ಹೊತ್ತಿಗೆ ಕಾಡಿನ ಕಾಲುದಾರಿ ತುಳೀತಿದ್ದೆ!
ಕಾಲಿನ ತುಂಬ ಇಂಬಳ ಕಚ್ಕೊಂಡು ರಕ್ತ ಸುರೀತಿತ್ತು. ಎಲ್ಲಾ ಕೆಂಪು ಕೆಂಪು… ಸಂಗಾತಿಗಳೂ ರಕ್ತದ್ದೇ ಮಾತಾಡ್ತಿದ್ದರು. ನಾನೂ ಕೆಂಪಲ್ಲಿ ಮುಳುಗಿಹೋದೆ. ಬರ್ಕಣದ ನೆತ್ತಿ ಮೇಲೆ ಕುಂತು ‘ಹೋರಾಡಬೇಕು’ ಅಂತ ಪ್ರತಿಜ್ಞೆ ಮಾಡಿದೆ.

ಹೌದು. ಹೋರಾಡಬೇಕಿತ್ತು. ಆದರೆ, ಯಾವುದಕ್ಕಾಗಿ? ಯಾರ ವಿರುದ್ಧ? ಯಾವ ರೀತಿಯಲ್ಲಿ? ಒಂದೂ ಸ್ಪಷ್ಟವಿರಲಿಲ್ಲ. ಮನೆಯಿಂದ ಹೊತ್ತು ತಂದಿದ್ದ ತೋಟಾಕೋವಿ ಜತೆಗಿತ್ತು. ಒಂದು ಜತೆ ಯೂನಿಫಾರಮ್ ಕೊಟ್ಟರು. ಸಂಭ್ರಮವಾಯ್ತು. ಅದನ್ನ ತೊಟ್ಟುಕೊಂಡು ದಿನವಿಡೀ ಕಾಡು ಅಲೆಯೋದು, ಒಂದಷ್ಟು ಬೇಯಿಸ್ಕೊಂಡು ತಿನ್ನೋದು. ವಾರಕ್ಕೊಂದು ಸಲ ಮೀಟಿಂಗು. ತಿಂಗಳಿಗೆ ನಾಲ್ಕು ದಿನ ಉಪವಾಸ, ತೀರ್ಮಾನ…

ಹೀಗೆ ಉರುಳಿದ್ದು ಎರಡು ವರ್ಷಗಳು. ಆ ವೇಳೆಗೆ ಎರಡುಬಾರಿ ನನ್ನ ಪ್ರೇಮ ಮುರಿದುಬಿದ್ದಿತ್ತು. ಒಬ್ಬ ಎನ್ ಕೌಂಟರ್ ನಲ್ಲಿ ಸತ್ತು ಹೋಗಿದ್ದರೆ, ಮತ್ತೊಬ್ಬ ಹೊಸ ಹುಡುಗಿಗೆ ತರಬೇತಿ ಕೊಡುವ ನೆಪದಲ್ಲಿ ಅವಳೊಟ್ಟಿಗೆ ಮರ ಸುತ್ತುತ್ತಿದ್ದ. ಹೇಗೇ ಇದ್ದರೂ ಕ್ರಾಂತಿ, ಹೋರಾಟ, ಕೊಲೆ ಅಂದ ತಕ್ಷಣ ಎಲ್ಲರೂ ಸೆಟೆದು ನಿಲ್ತಿದ್ದರು. ಗಣ ಬಂದಹಾಗಾಡುವ ಮುಖ್ಯಸ್ಥರು, ಏನೋ ಆಗಬಾರದ್ದು ಆದ ಹಾಗೆ ಸೂತಕದ ಮುಖ ಹೊತ್ತು ಕುಂತುಬಿಡ್ತಿದ್ದರು.

~
ನಾನು ಮನೆ ಬಿಟ್ಟು ಬಂದಮೇಲೆ ಅಲ್ಲಿ ಅನಾಹುತಗಳದ್ದೇ ಮೆರವಣಿಗೆ ನಡೆಯಿತಂತೆ. ಅಪ್ಪ ಸ್ಟ್ರೋಕಾಗಿ ಮೂಲೆ ಸೇರಿದರೆ, ಅಮ್ಮ ಭ್ರಾಂತಿ ಹಿಡಿದು ಪೆದ್ದುಪೆದ್ದಾಗಿಬಿಟ್ಟಳಂತೆ. ಮೆಡಿಕಲ್ಲು ಓದ್ತಿದ್ದ ಅಣ್ಣ, ಓದನ್ನ ನಿಲ್ಲಿಸಿ ಅಪ್ಪ ಅಮ್ಮನ್ನ ನೋಡ್ಕೊಳ್ಳಲಿಕ್ಕೆ ವಾಪಸು ಬಂದುಬಿಟ್ಟನಂತೆ.
ರಾತ್ರೋರಾತ್ರಿ ಓಡಿಬಂದ ನಾನು ಆದರ್ಶದ ಒಂದೆರಡಾದ್ರೂ ಹೆಜ್ಜೆ ತುಳಿದಿದ್ದರೆ ಅವರೆಲ್ಲರ ಹೊಟ್ಟೆಯುರಿಸಿದ್ದಕ್ಕೂ ಸಾರ್ಥಕವಾಗ್ತಿತ್ತೇನೋ. ಆದರೆ ನನ್ನ ಕೈಗೆ ಮೆತ್ತಿರುವ ರಕ್ತ, ಕ್ರಾಂತಿಯದಲ್ಲ, ಭ್ರಾಂತಿಯದು. ಆದರ್ಶದ್ದಲ್ಲ, ಮೂರ್ಖತನದ್ದು!

ಕಳೆದ ವಾರ ಇಲ್ಲಿನ ಮುಖ್ಯಸ್ಥರು ಬೇರೆ ರಾಜ್ಯಕ್ಕೆ ಹೋಗಿದ್ದರು. ಅಲ್ಲಿ ಎಲ್ಲಾ ಸೇರಿ ಜೈಲಿಗೆ ಬೆಂಕಿ ಹಚ್ಚಿ ಪೋಲಿಸರನ್ನು ಕೊಂದು ಬಂದರಂತೆ. ಹ್ಹ್! ಅದೆಷ್ಟು ಹೆಂಗಸರ ಹಣೆಯ ಕೆಂಪು ತೊಳೆದುಬಂದರೋ?

ನೆನ್ನೆ ನಮಗೆಲ್ಲ ಊಟೋಪಚಾರಕ್ಕೆ ಸರಬರಾಜು ಮಾಡ್ತಿದ್ದವ ಒಂದು ದೂರು ತಂದ. ಪಕ್ಕದ ಮನೆಯವನೊಟ್ಟಿಗೆ ಅದೆಂಥದೋ ಕೋಳಿಜಗಳ ಅವನದ್ದು. ಸರಿ. ನಾವೆಲ್ಲ ಅವನ ಮನೆ ಮುತ್ತಿಗೆ ಹಾಕಿದೆವು. ಆ ರೈತನ ತಲೆ ಕಡಿದು, ಅವನ ಹೆಂಡತಿಗೆ ಉಡುಗೊರೆ ಕೊಡಲಾಯಿತು. ಅವಳು ಚಿಟಾರನೆ ಚೀರಿ ಎಚ್ಚರ ತಪ್ಪಿಬಿದ್ದರೆ, ತೊಟ್ಟಿಲ ಮಗು ಗಿಲಗಿಲನೆ ನಗುತ್ತ ಆಡುತ್ತಿತ್ತು.

~
ವ್ಯವಸ್ಥೆಯ ತಲೆ ಕಡಿದರೆ ಆದರ್ಶ ಚಿಗುರುತ್ತದಂತೆ! ಹಾಗಂತ ಪಕ್ಕದಲ್ಲಿ ಕುಂತವರು ಆಡ್ಕೊಳ್ತಿದಾರೆ. ಬಂದೂಕೇರಿಸಿ ಇನ್ಯಾರದೋ ತಲೆ ಕಡಿಯಲು ಹೊರಟಿದ್ದಾರೆ. ನನಗೀಗ ಕೊಂಚ ಕನ್ಸೆಶನ್. ಹತ್ತಿರದ ರೈತರ, ಕಾಲೇಜು ಹುಡುಗಿಯರ ತಲೆ ಕೆಡಿಸೋದಷ್ಟೆ ನನ್ನ ಕೆಲಸ.
ರಕ್ತ ನೋಡಿದರೆ ನನ್ನ ತಲೆ ತಿರುಗುತ್ತದೆ. ಆದರ್ಶದ ಮಾತಾಡಿದರೆ ವಾಂತಿ ಬರುತ್ತದೆ. ಇಷ್ಟಕ್ಕೂ ನನಗೀಗ ಎರಡು ತಿಂಗಳು. ವಾಂತಿ ಬರುವಂಥದ್ದೇ. ಇನ್ನೊಂದು ತಿಂಗಳಷ್ಟೇ. ಆಮೇಲೆ ಬಸಿರು ಬಗೆದು ನನ್ನ ಬಂಜೆ ಮಾಡುತ್ತಾರೆ.
~

ಅಮ್ಮ ನೆನಪಾಗ್ತಿದಾಳೆ. ಅಪ್ಪಯ್ಯ ತರ್ತಿದ್ದ ಹಸಿರು ಬಳೆ, ಅವನ ಬೆಳ್ಳಂಬೆಳ್ಳ ಮನಸ್ಸು ಎಲ್ಲ ಕಾಡ್ತಿದೆ. ಯಾವತ್ತೂ ನೆನಪಾಗದ ಮಾವನ ಮಗ ಕಣ್ತುಂಬ್ತಿದಾನೆ. ಈಗ ಹೋಗಿ ನಿಂತರೂ ಅಂವ ನನ್ನ ಬರಸೆಳೆದು ಅಪ್ಪಬಹುದು.
ಅಮ್ಮ ಖುಷಿಯಿಂದ ಕುಣಿದಾಡಬಹುದು.
ಅಣ್ಣನ ಕನಸುಗಳು ಮರಳಬಹುದು.
ಅಪ್ಪಯ್ಯನಂತೂ ಊರ ಹಬ್ಬ ಮಾಡಬಹುದು.

ನನಗೆ ಆ ಎಲ್ಲ ಭಾಗ್ಯವುಂಟೇ?

ಓ  ಡಿ  ಹೋ  ಗ  ಬ  ಹು  ದೇ  ನಾನು?

20 thoughts on “ವ್ಯವಸ್ಥೆಯ ತಲೆ ಕಡಿದರೆ ಆದರ್ಶ ಚಿಗುರುವುದಂತೆ!

Add yours

 1. ವಾವ್.. ಅದ್ಭುತ್..

  ಈ ನಕ್ಸಲೀಯರು ಮತ್ತಿತರರ ಮೊದಲಿನ/ಕೊನೆಯ ಮನಸ್ಥಿತಿಯನ್ನು ಅವರ ಹೆಸರನ್ನೆಲ್ಲೂ ಹೇಳದೆ ನಮ್ಮ ಮನಸ್ಸಿಗೆ ತಟ್ಟುವಂತೆ ವಿವರಿಸುತ್ತದೆ.

  ಉತ್ತಮ್… ಅತೀ ಉತ್ತಮ್…

 2. ಕಥಾ ನಾಯಕಿಯವರೇ,
  ನಿಮ್ ಪೈಕಿಯವ್ರು ಬೆಂಗಳೂರಲ್ಲೂ ಬಾಷಣ ಹಂಚತಾರಲ್ಲ..
  ವಿಚಾರಿಸಿದ್ದಕ್ಕೆ ಆದರ್ಶ ಗುರಿ ಅಂತೆಲ್ಲ ಮಾತಾಡಿದ್ರು..
  ಸಿಂಗೂರಿಗೆ ನ್ಯಾಯ ದೊರಕಿಸಿ ಕೊಟ್ರಂತೆ..
  ಎರಡು ರೂಪಾಯಿ ಈಸ್ಕೊಂಡು, ಒಂದ್ ಪೇಪರ್ ಬೇರೆ ಕೊಟ್ರು..
  ಇಬ್ರಿದ್ರೂ.. ನಾವೇನೂ ಆರ್ಡಿನರಿ ಮನುಷ್ಯರಲ್ಲ, ಕಾಲೇಜಲ್ಲಿ ಲೆಕ್ಚರರ್ಸ್.. ನ್ಯಾಯ, ಸಮಾನತೆ ಅಂತೆಲ್ಲ ಹೇಳ್ದ್ರು.
  ನನ್ಗೂ ನಿಮ್ಮ ಕೆಲವು ವಿಚಾರಗಳು ಇಷ್ಟ ಆಗ್ತವೆ. ಆದ್ರೆ ನೀವು ವಿಚಾರಗಳ ಅನುಷ್ಟಾನಕ್ಕೆ ಹಿಡಿದಿರೋ ಕೆಲವು ದಾರಿ ಮತ್ತು ಸಮಯ ಸರಿಯಾದವಲ್ಲ ಅನ್ಸಿದೆ.
  ನೀವು ತುಂಬಾ ಓದ್ಕೋಂಡಿರೋರಂತೆ.. ಓಶೋ ರ “Beware of Socialism” ಕೂಡ ಓದಿ.
  http://www.oshoworld.com/onlinebooks/BookXMLMain.asp?BookName=translations+from+hindi/beware%20of%20socialism.txt

  -ಸಾಮಾನ್ಯ ಪ್ರಜೆ

 3. ಅಕ್ಕಾ ತುಂಬಾ ಇಷ್ಟವಾಯಿತು. ಯೌವನದಲ್ಲಿ ಯಾವ ಆದರ್ಶವನ್ನೂ ಸಹ ಬೆನ್ನತ್ತಿ ಹೊರಡುವ ಹುಂಬತನ ಸಿದ್ಧಿಸುತ್ತದೆ. ಆದರೆ ಆದರ್ಶವನ್ನು ಬೆನ್ನು ಹತ್ತುವ ಮುನ್ನ ವಾಸ್ತವದ ಚಿತ್ರಣದ ಅರಿವು ಪಡೆಯುವ ಸಂಯಮ ಇರುವುದಿಲ್ಲ.ಈ ಸಂಯಮದ ಕೊರತೆಯೇ ಎಲ್ಲಾ ಸಂಘಟನೆಗಳಿಗೆ ವರದಾನವಿದ್ದ ಹಾಗೆ.
  ಇದು ಎಡಪಂಥೀಯತೆ, ಬಲಪಂಥೀಯತೆ, ಇನ್ಯಾವುದೇ ಸಂಘಟನೆ, ಹಿಂಸಾತ್ಮಕ ಹೋರಾಟಗಳು ಎಲ್ಲವಕ್ಕೂ ಅನ್ವಯಿಸುತ್ತವೆ.
  ಒಳ್ಳೆಯ ಬರಹ

  ಸುಪ್ರೀತ್

 4. ತುಂಬಾ ಸಮಯದ ನಂತರ… ನಂಗಿಷ್ಟವಾಯಿತು ಈ ಬರಹ… ನೆನ್ನೆ ವರ್ಲ್ಡ್ ಮಾವೀಸಲ್ಲಿ ‘ದ ಟೆರರಿಸ್ಟ್’ ನೋಡುತ್ತಿದ್ದೆ, ಅದೇ ಹ್ಯಾಂಗೋವರಲ್ಲಿದ್ದೆ, ಓದಿ ಖುಷಿಯಾಯ್ತು…

 5. ಹರೀಶ್, ಧನ್ಯವಾದ್.

  ನೀಲಗಿರಿ, ಶ್ರೀ, ಸುಶ್ರುತ… ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

  ಸುಪ್ರೀ, ಹೌದು ಕಣೋ. ಯುವಕರಲ್ಲಿ ವಿವೇಚನೆ ಮೂಡಿದಾಗ ಮಾತ್ರ ಅವರನ್ನು ಮುಂದಿಟ್ಟುಕೊಂಡು ಮೇಯುತ್ತಿರುವವರೆಲ್ಲರೂ ಹಳ್ಳಹತ್ತುತ್ತಾರೆ.

  ಸಾಮಾನ್ಯ ಪ್ರಜೆಗಳಾದ ರಮೇಶರೇ, ಕಥಾ ನಾಯಕಿಗೆ ನಿಮ್ಮ ಪ್ರತಿಕ್ರಿಯೆ ತಲುಪಿಸಲು ಸಾಧ್ಯವಾಗ್ತಿಲ್ಲ. ಅವಳೀಗಾಗಲೇ ಎನ್ ಕೌಂಟರಲ್ಲಿ ಸತ್ತು ಹೋಗಿರಬಹುದು, ಜೈಲಲ್ಲಿರಬಹುದು ಅಥವಾ… ಅತ್ಮ ಹತ್ಯೆ ಮಾಡ್ಕೊಂಡಿರಬಹುದು 😦 ಕ್ಷಮಿಸಿಬಿಡಿ.

  ಹೌದು ಪ್ರಸಾದ್, ನಂಗೂ ಕೆಲವೊಂದು ವಿಷಯಗಳನ್ನು ಬರಹದ ಮೂಲಕ ತಲುಪಿಸಬೇಕೆನ್ನುವ ಉದ್ದೇಶವಿದೆ. ಇತರ ಎಲ್ಲ ಲಘು ಬರಹಗಳು ನನ್ನ ಖುಷಿಗೆ ಬರೆದುಕೊಳ್ಳುವುದಾದರೂ ಅಪ್ಪಟ ರಾಷ್ಟ್ರ ಪ್ರೇಮಿಯಾಗಿ, ದೇಶದ ಒಳಿತಿಗೆ ಅರ್ಪಣೆಯಾಗದ ಬರಹಸಿದ್ಧಿ, ಸಿದ್ಧಿಸಿಯೂ ಉಪಯೋಗವಿಲ್ಲ ಅನ್ನೋದು ನನ್ನ ಅನಿಸಿಕೆ ಕೂಡ ಆಗಿದೆ. ಥ್ಯಾಂಕ್ಸ್.

  ವಂದೇ,
  ಚೇತನಾ

 6. ಹ್ಹ್! ಅದೆಷ್ಟು ಹೆಂಗಸರ ಹಣೆಯ ಕೆಂಪು ತೊಳೆದುಬಂದರೋ?…

  ನಿಜ ಬದಲಾವಣೆಯ ಹಾದಿಯಲ್ಲಿ ಇದೆಲ್ಲ ಸಹಜ ಅಂತ ಯಾರೆಷ್ಟೇ ಬೊಬ್ಬಿರಿದರೂ ಹಿಂಸೆಗೆ ಪ್ರತಿಹಿಂಸೆ ಉತ್ತರವಾಗಲಾರದು… ಯಾವ ಕ್ಷೇತ್ರ, ವಿಷಯದಲ್ಲೂ..ಯಾವತ್ತಿಗೂ..
  ಚಿಂತನೆಗೆ ಹಚ್ಚುವ ಒಳ್ಳೆಯ ಬರಹ

 7. neevu kaNNu mUgu bAyi ashTU hallugaLirO, kai kAlugaLirO, talEli buddhi irO manushya andkonDidEne. 3ralli yAvdAdrU ondu gender navaru AgiyE irteeri. hAganda mEle nimagondu hesarU irutte. tamma hesarina samEta comment mADOdanna rUdhiskonDare nimma comment na hinde munde nODade hAkOdanna rUDhiskoLLabahaudu.

 8. monne vande mataram anno cinema noduttidde, bhaayanaka annisuttade adaralli chikka chikka makkallanna karkond hogi heegella tale keDisodanna nodidre.. avaralli astondu dwesha manobhaava huTTihokodu sariya.. abba!!
  and aadarshagaLu ankondiro anthaha prayojanavillada dweshakke avaru iTTa hesru nodi?
  ee kathe tumba chennagi bardeedira, onthara odisikondu kadeya line ge nillisibiDo astu.
  ee katheya climax nodidre maatra sikkapaTTe besara aagatte avara stiti nenskondu…

 9. ವೀಣಾ,
  ನಾನು ಕೇಳಿರೋಮಟ್ಟಿಗೆ ಈ ಥರದ ಘಟನೆಗಳು ಅಸಂಗತವೇನಲ್ಲ. ನಮ್ಮೂರು ನಕ್ಸಲರ ನೆರಳು ವಕ್ಕರಿಸ್ಕೊಂದಿರೋ ಪ್ರದೇಸಕ್ಕೆ ಸೇರಿದೆ. ಈ ಥರದ ಕಥೆಗಳಿಗೆ ಪುರಾವೆಯಿದೆಯಾದರೂ, ಅವು ಕಾನ್ಫಿಡೆನ್ಷಿಯಲ್. ಬಟ್, ಇಂಥವರಿಂದ ಸಮಾಜಕ್ಕೆ ಸುಖವಿಲ್ಲ ಅನ್ನೋದಂತೂ ಸತ್ಯ.

  ವಂದೇ,
  ಚೇತನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: