ಇದು ಹುಡುಗರ ‘ಸಡಗರ’


ಸುಮಾರು ಒಂದೂವರೆ- ಎರಡು ವರ್ಷದ ಹಿಂದಿನ ಮಾತು. ಯಾವುದೋ ಕಾರ್ಯಕ್ರಮ ಮುಗಿಸ್ಕೊಂಡು ಬಂದ ಅಣ್ಣ, “ಇದು ನೋಡು, ಹುಡುಗರು ಸೇರಿ ಮಾಡ್ತಿರೋ ಹೊಸ ಪತ್ರಿಕೆ. ಅದ್ರಲ್ಲೂ ಇಂಜಿನಿಯರಿಂಗ್ ಸ್ಟೂಡೆಂಟ್ಸು” ಅನ್ನುತ್ತಾ ಒಂದು ಪತ್ರಿಕೆಯ ಹಲವು ಪ್ರತಿಗಳನ್ನ ನನ್ನ ಮುಂದೆ ಹಿಡಿದ.
ನಾನು, ಹುಡುಗರು ತಾನೇ, ಒಂದಷ್ಟು ಪ್ರೇಮ ಕಥೆ – ಕಚ್ಚಾ ಕವಿತೆಗಳಿರುತ್ತೆ ಅಂತ ಉಡಾಫೆಯಿಂದ್ಲೇ ತೆಗೆದಿಡಲು ಹೋದೆ. ಅಂವ ಬಿಡದೆ, ‘ಚೆನ್ನಾಗಿದೆ ಕಣೋ, ಒಳ್ಳೆ ಪ್ರಯತ್ನ ಮಾಡಿದಾರೆ’ ಅಂತ ಶಿಫಾರಸು ಮಾಡಿದ ಮೇಲೆ, ರಾತ್ರಿಯೂಟದ ಜತೆ ಓದಲೆಂದು ತೆಗೆದಿಟ್ಟುಕೊಂಡೆ.

ಹೀಗೆ ನಾನು ಅನುಮಾನದಿಂದ ನೋಡಿದ ಪತ್ರಿಕೆ ಹೆಸರು, ‘ಕಲರವ’. ಮೊದಲ ಓದಿನಲ್ಲೇ ನನಗೆ ಅದು ಇಷ್ಟವಾಗಿಬಿಟ್ಟಿತ್ತು. ಹಾಗೆ ಇಷ್ಟವಾಗಲು ಅದರ ಗುಣಮಟ್ಟದ ಕೊಡುಗೆ ಶೇಕಡಾ ಎಂಭತ್ತಾದರೆ, ಅದು ಎಳೆಯ ತರುಣರ ಪ್ರಯತ್ನ, ಅದರಲ್ಲೂ ವಿದ್ಯಾರ್ಥಿಗಳದ್ದು ಎನ್ನುವುದರ ಪಾಲು ಶೇಕಡಾ ನೂರರಷ್ಟಿತ್ತು! ಗಂಭೀರವಾದ ಚರ್ಚೆ, ತಿಳಿ ಹಾಸ್ಯದ ಲೇಖನ, ಕಥೆ, ಯಾವುದೇ ಪ್ರಕಾರಕ್ಕೆ ಒಳಪಡದ ಲಹರಿಯಂಥ ಲೇಖನಗಳು, ವ್ಯಂಗ್ಯಚಿತ್ರ… ಎಲ್ಲದರ ಒಟ್ಟು ಮೊತ್ತವಾಗಿತ್ತು ಕಲರವ. ಆದರೆ, ಪತ್ರಿಕೆಯ ಲೇ ಔಟ್ ಅಷ್ಟಾಗಿ ಹಿಡಿಸಿರಲಿಲ್ಲ. ಒಂಥರಾ ಒತ್ತಿ ತುಂಬಿದ ಹಾಗನಿಸುತ್ತಿತ್ತು. ಜೊತೆಗೆ, ಈ ಹುಡುಗರು ‘ಓ ಮನಸೇ…’ ಯ ಕಾಪಿ ಹೊಡೀತಿದಾರಾ? ಅನಿಸಿದ್ರೂ, ಇದು ಬರಿಯ ಭಾವ ಸಾಮ್ರಜ್ಯಕ್ಕೆ ಮೀಸಲಾಗಿರದೆ, ಗಂಭೀರ ಚಿಂತನೆಗಳನ್ನೂ ಒಳಗೊಂಡಿದ್ದು ಸಮಾಧಾನ ತರಿಸಿತ್ತು.

~
ಅದಾಗಿ, ಸುಮಾರು ಒಂದು ವರ್ಷ… ಕಲರವ, ಹೆಚ್ಚೂಕಡಿಮೆ ಮರೆತೇ ಹೋಯಿತು. ಯಾರೋ ಮತ್ತಷ್ಟು ಯುವಕರು ‘ಸಾರ್ ಪತ್ರಿಕೆ ಮಾಡ್ಬೇಕು ಅಂತಿದೀವಿ, ಐಡಿಯಾ ಕೊಡಿ’ ಅಂದಾಗ, ಅಣ್ಣ, “ಏ, ಆ ಕಲರವ ಕೊಡೋ… ಫಾರ್ಮ್ಯಾಟ್ ನೋಡ್ಲಿ. ನಾನ್ ಬಾಯಲ್ಲಿ ಹೇಳೋಕ್ಕಿಂತ ಅವ್ರೇ ನೋಡೋದ್ ಒಳ್ಳೇದು” ಅಂದ. ಕರ್ಮ! ಯಾವತ್ತೂ ಹಾಗೇ… ನಾನು ಜೋಪಾನವಾಗಿ ಎತ್ತಿಟ್ಟ ಯಾವ ವಸ್ತುವೂ ನಂಗೆ ಬೇಕಂದಾಗ ಸಿಗೋದೇ ಇಲ್ಲ. ಅವತ್ತೂ ಸಿಗಲಿಲ್ಲ ಅಂತ ಸಪರೇಟಾಗಿ ಹೇಳಬೇಕಿಲ್ಲ ಅಲ್ವಾ?
~
ನಾನು ಬ್ಲಾಗ್ ಶುರು ಮಾಡಿದ ಮೊದಲ ದಿನಗಳು…. ಬ್ಲಾಗು ಬ್ಲಾಗಲ್ಲೇ ಸುಪ್ರೀತ ಅನ್ನುವ ಹುಡುಗನ ಪರಿಚಯವಾಯ್ತು. ಅವನ ಒಂಟಿ ಹಕ್ಕಿ ಬ್ಲಾಗು ನನಗಿಷ್ಟವಾಗ್ತಿತ್ತು. ವಿಶೇಷವಾಗಿ ಅಲ್ಲಿನ ಚರ್ಚೆಗಳು. ಅರೆ! ಇವನು ಅದೇ ಹುಡುಗ! ಕಲರವದ ಸಂಪಾದಕ!!

ಕಲರವ ಈಗ ‘ಸಡಗರ’ವಾಗಿತ್ತು. ಮತ್ತಷ್ಟು ಪ್ರಬುದ್ಧವಾಗಿತ್ತು. ಪತ್ರಿಕೆಯದೊಂದು ಬ್ಲಾಗೂ ಶುರುವಾಗಿ, ಅದರಲ್ಲಿನ ಲೇಖನಗಳನ್ನ ಓದಿದಮೇಲೆ ನನಗೆ ಹಾಗನ್ನಿಸಿತು. ಯಾವುದೋ ಒಂದು ಸಿದ್ಧಾಂತಕ್ಕೆ ಕುರುಡರಂತೆ ಜೋತು ಬೀಳದೆ, ಎಲ್ಲ ಪಂಥಗಳ ಒಳ್ಳೆಯ ಅಂಶಗಳನ್ನು ಸ್ವೀಕರಿಸಬೇಕೆನ್ನುವ ಮನೋಭಾವ ಇಂದಿನ ಹುಡುಗರದ್ದು. ಯಾವುದೇ ವ್ಯಕ್ತಿ ಕೇಂದ್ರಿತವಲ್ಲದ, ಯಾರದೂ ಮರ್ಜಿ ಇಲ್ಲದ ಅಭಿಪ್ರಾಯಗಳನ್ನು ಹೊಂದಿರಬೇಕೆನ್ನುವ  ಈ ಚಿಂತನೆ ಸಡಗರದ ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಯಲ್ಲಿ ಎದ್ದು ಕಾಣುತ್ತದೆ. ಯುವಕರು ಇಂಥದೊಂದು ದೃಷ್ಟಿಕೋನವನ್ನು ಬೆಳೆಸಿಕೊಳ್ಳುವುದು ಆರೋಗ್ಯಕರ ಎಂದು ನನ್ನ ಭಾವನೆ. ಇಲ್ಲಿ ನಡೆಯುವ ಚರ್ಚೆಗಳು ಹಿರಿಯರೆನಿಸಿಕೊಂಡವರ ಮಟ್ಟದಲ್ಲೂ ನಡೆಯುವಂಥದು. ಆದರೆ, ಕೆಲವೊಂದು ಸಂಗತಿಗಳಲ್ಲಿ, ಅವರಿಗಿಂತ ಈ ಹುಡುಗರೇ ಎಷ್ಟು ಮುಕ್ತವಾಗಿ, ಪ್ರಬುದ್ಧರಾಗಿ ಯೋಚಿಸುತ್ತಾರೆ ಎಂದು ಸಡಗರದ ‘ಡಿಬೇಟ್’ ಅಂಕಣವನ್ನೋದಿದಾಗ ಅನಿಸದಿರದು.

ಸಡಗರದಲ್ಲಿ ಬರೆಯುವವರೆಲ್ಲರೂ ತರುಣರೇ. ಯುವತಿಯರಲ್ಲಿ ಹೇಮಾ ಒಬ್ಬರ ಹೆಸರು ರೆಗ್ಯುಲರ್ರಾಗಿ ನನಗೆ ಈವರೆಗೆ ಕಂಡಿದೆ. ಬರಹ ವೈವಿಧ್ಯ ಇದೆಯಾದರೂ, ಒಬ್ಬರೇ ಹಲವು ಕಾಲಮ್ ಗಳನ್ನು ಬರೆಯುವುದು ಸಂಪಾದಕರ ಆಯ್ಕೆಯಾ ಅಥವಾ ಅನಿವಾರ್ಯತೆಯಾ ಅನ್ನುವುದು ತಿಳಿಯದ ಸಂಗತಿಯಾಗಿದೆ. ಸಡಗರದ ಈ ಪ್ರಯತ್ನಕ್ಕೆ ಮತ್ತಷ್ಟು ಸಮಾನ ಮನಸ್ಕರು ಸೇರಿಕೊಂಡರೆ ಚೆನ್ನ ಅನಿಸುತ್ತದೆ.

~
ನನಗಿಷ್ಟವಾಗಿದ್ದನ್ನ ಹಂಚಿಕೊಂಡರೆ, ಇಷ್ಟಪಟ್ಟಿದ್ದು ಸಾರ್ಥಕವಾಗತ್ತೆ ಅನ್ನೋದು ನನ್ನ ನಂಬಿಕೆ. ಈ ಕಾರಣದಿಂದ್ಲೇ ನಿಮಗೆ ಸಡಗರವನ್ನ ಪರಿಚಯಿಸ್ತಿರೋದು. ನೀವೂ ಪತ್ರಿಕೆಯನ್ನೊಮ್ಮೆ ನೋಡಿ. ಖಂಡಿತ ನಿಮಗೂ ಇಷ್ಟವಾಗತ್ತೆ. ಸಧ್ಯಕ್ಕೆ ಇಲ್ಲಿ ಬ್ಲಾಗ್ ಲಿಂಕ್ ಕೊಟ್ಟಿದೇನೆ. ಅಲ್ಲಿ ಪತ್ರಿಕೆಯ ಚಂದಾ ವಿವರ, ವಿಳಾಸಗಳಿವೆ. ಕೊಂಡು ಓದಿದರೆ, ಒಳ್ಳೆಯ ಪ್ರಯತ್ನವೊಂದನ್ನ ಪ್ರೋತ್ಸಾಹಿಸಿದಂತಾಗುತ್ತದೆ.
ಏನಂತೀರಿ?

4 thoughts on “ಇದು ಹುಡುಗರ ‘ಸಡಗರ’

Add yours

  1. ಚೇತನ ಅವರಿಗೆ ತುಂಬಾ ಧನ್ಯವಾದಗಳು. ನಾನು ಸುಮಾರು ದಿನಗಳಿಂದ ನಿಮ್ಮ ಬ್ಲಾಗನ್ನು ಓದುತ್ತಿದ್ದೇನೆ. ಕೆಂಡಸಂಪಿಗೆಯಿಂದ ನಿಮ್ಮ ಬ್ಲಾಗ್ ಮತ್ತು ಇನ್ನೂ ಅನೇಕ ಒಳ್ಳೆಯ ಲಿಂಕ್ ಗಳು ಸಿಕ್ಕಿದವು. ನಿಮ್ಮಿಂದ ಸಡಗರದ ಮಾಹಿತಿ ಸಿಕ್ಕಿತು. ನಾನು ಖಂಡಿತ ಸಡಗರದ ಚಂದಾದಾರ ಆಗುತ್ತೇನೆ.

  2. ಶಶಿ, ಧನ್ಯವಾದ.
    ನಿಮ್ಮ ವಿಶಾಲ ಮನಸ್ಸಿಗೆ ಇನ್ನೂ ಹೆಚ್ಚಿನ ಧನ್ಯವಾದ.

    ರಂಜಿತ್, ಇದರಲ್ಲಿ ನನ್ನ ಹೆಚ್ಚುಗಾರಿಕೆ ಇಲ್ಲ. ನಿಮ್ಮ ಪ್ರಯತ್ನ ದೊಡ್ಡದು. ಅದನ್ನು ಎಂದಿಗೂ ನಿಲ್ಲಿಸದೆ ಮುಂದುವರೆಸಿ ಎಂಬ ವಿನಂತಿ ನನ್ನದು.

    ವಿಕಾಸ್, ಸಡಗರ ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಸುಪ್ರೀತ್ ಮತ್ತು ತಂಡಕ್ಕೂ ಅದನ್ನು ತಲುಪಿಸಲಾಗುವುದು.

    – ಚೇತನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: