ಬದಲಾದ ನನ್ನೂರು… ಬಯಲಾದ ನಾನು.


ಊರಿಗೆ ಹೋಗ್ಬೇಕು…
ಹಾಗಂದಕೂಡಲೆ, ಸಂಭ್ರಮ ಮತ್ತು ವಿಷಾದಗಳೆರಡೂ ನನ್ನ ಆವರಿಸ್ಕೊಂಡು ಬಿಡುತ್ತೆ. ಎಷ್ಟೋ ಬಾರಿ ಊರಿಗೆ ಹೋಗಬೇಕಾದಾಗಲೆಲ್ಲ ಏನಾದರೊಂದು ನೆವ ತೆಗೆದು ಅದನ್ನ ತಪ್ಪಿಸಿಕೊಂಡು ಕುಂತಿದ್ದೂ ಇದೆ. ಇದೆಂಥ ಪಲಾಯನವೋ.. ಗೊತ್ತಾಗದೆ ಸುಮ್ಮನುಳಿದಿದ್ದೇನೆ.

ನಾನ್ಯಾಕೆ ಚೇತನಾ ಹೆಸರಿನ ಜೊತೆ ತೀರ್ಥಹಳ್ಳಿಯನ್ನ ಅಂಟಿಸ್ಕೊಂಡೆ? ಚೇತನಾ ಬೆಂಗಳೂರು ಅನ್ನುವ ಹೆಸರು ಅಷ್ಟೇನೂ ಆಕರ್ಷಕವಾಗಿ ಕಾಣುವುದಿಲ್ಲವೆಂದೇ? ತೀರ್ಥಹಳ್ಳಿಯೆಂಬ ಹೆಸರಿಂದಲಾದರೂ ಒಂದಷ್ಟು ಜನ ನನ್ನ ಗಮನಿಸಲೆಂದೇ? ಅಥವಾ, ಹಳೆಯ ಐಡೆಂಟಿಟಿ ಕಳಚಲೆಂದು ಅಂದುಕೊಂಡರೂ, ನಾನು ಪೂರ್ತಿ ಕಳೆದುಹೋಗಿಬಿಡಬಾರದೆಂಬ ಎಚ್ಚರಿಕೆಯಿಂದಲೇ? ಇವನ್ನೆಲ್ಲ ಯೋಚಿಸುತ್ತ ಇದ್ದರೆ ನನ್ನೆದುರು ನನ್ನ ನಿಜಬಣ್ಣ ಬಯಲಾಗಿಬಿಡುವ ಭಯಕ್ಕೆ ಯೋಚಿಸದೆ ಇದ್ದೇನೆ. ಈ ಸಂಗತಿ ತಲೆ ಹೊಕ್ಕಾಗಲೆಲ್ಲ, ಲಿಂಕ್ ಲೆಸ್ಸಾಗಿ ತೀರ್ಥಹಳ್ಳಿ ಈಗ ಹಳೆಯ ನನ್ನ ಊರಾಗಿ ಉಳಿಯದಿರುವುದನ್ನೂ, ನಾನೂ ಬದಲಾಗಿರುವುದನ್ನೂ ತಾಳೆ ಹಾಕುತ್ತ, ಸಮಜಾಯಿಷಿಗಳಲ್ಲಿ ಖುಷಿಪಡುತ್ತೇನೆ.

                                   img_1906

ನನ್ನೂರು ಬದಲಾಗಿದೆ… ಎಲ್ಲ ಊರುಗಳ ಹಾಗೇ… ವಿಶೇಷವೇನಿಲ್ಲ. ಹುಡುಗರೆಲ್ಲ ಖಾಲಿಯಾಗಿ, ಹುಡುಗಿಯರೆಲ್ಲ ಮದುವೆಯಾಗಿ, ಹೊಸ ಪೀಳಿಗೆ ಸ್ಕೂಲು ಕಾಲೇಜಿನ ಹಾದಿ ಸವೆಸುತ್ತಾ ಊರುಬಿಡುವ ಹೊಂಚಿನಲ್ಲಿ ಕರಗುತ್ತಿದೆ. ನನ್ನಪ್ಪ ಅಮ್ಮನಂಥವರು ಮನೆ ಮಾರಿ ಮಕ್ಕಳ ಜತೆಯಿರಲು ಬೆಂಗಳೂರಿಗೆ ಬಂದುಬಿಡುತ್ತೇವೆ ಅಂತ ಹೇಳುತ್ತಲೇ, ಊರು ಬಿಟ್ಟು ಬರಲಾಗದ ಸಂಕಟದಲ್ಲಿ ಕಾಲಯಾಪನೆ ಮಾಡುತ್ತ ಉಳಿದಿದ್ದಾರೆ.
ಮುಂಚಿನಂತೆ ಊರಲ್ಲಿ ಈಗ ಬಡವರ ಸಂಖ್ಯೆ ಹೆಚ್ಚೇನಿಲ್ಲ. ಭಿಕ್ಷುಕರಂತೂ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಊರಿನವರಿಗೆ ಅಚ್ಚುಮೆಚ್ಚಿನವನಾಗಿದ್ದ ಹುಚ್ಚುಪಾಂಡು, ಹುಚ್ಚು ಬಿಟ್ಟು ಸರಿಯಾದ ಸ್ವಲ್ಪ ವರ್ಷದಲ್ಲೇ ಸತ್ತುಹೋಗಿಯಾಗಿದೆ. ಯಾವುದೋ ಊರಿನವರು ಬಿಟ್ಟು ಹೋಗಿದ್ದ ಹುಚ್ಚಿಯೊಬ್ಬಳನ್ನ ಆಗೊಂದಷ್ಟು ಜನ ರೇಪು ಮಾಡಿದ ಮೇಲೆ, ಹುಚ್ಚಿಯರೂ ಇಲ್ಲವಾಗಿದ್ದಾರೆ.
ಹಸುಗಳ ಸಂಖ್ಯೆ ಕಡಿಮೆಯಾಗಿದೆ. ಕತ್ತೆಗಳು ತೀರ್ಥಹಳ್ಳಿಯಲ್ಲಿ ಯಾವತ್ತೂ ಇರಲಿಲ್ಲ! ಹಂದಿಗಳನ್ನಂತೂ ತೀರ್ಥಳ್ಳಿಯ ಬೀದಿಗಳಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲ.
ಮನೆ ಹಿತ್ತಿಲಲ್ಲಿ ಬುಟ್ಟಿಯಲ್ಲಿ ಬೆಚ್ಚಗೆ ಕೂತ ಕೋಳಿಗಳನ್ನು ನಾವೀಗ ಕಾಣಲಾರೆವು. ಮೆಟ್ಟಿಲ ತುದಿಯಲ್ಲಿ ಬಾಲ ಆಡಿಸುತ್ತ ಕೂತ ನಾಯಿಯನ್ನೂ…

ಊರಲ್ಲೀಗ ಗಂಧದ ಮರಗಳು ಉಳಿದಿಲ್ಲ. ದಬ್ಬೆ ಬೇಲಿಗಳಿಲ್ಲ. ಹೊಸತಾಗಿ ಯಾರೂ ಹೆಂಚಿನ ಮನೆಗಳನ್ನ ಕಟ್ಟುತ್ತಿಲ್ಲ. ಮನೆಯೆದುರು ಕೈತೋಟಕ್ಕೆ ಜಾಗ ಖಾಲಿ ಬಿಡುತ್ತಿಲ್ಲ. ಗದ್ದೆಗಳೆಲ್ಲ ಸೈಟುಗಳಾಗಿ, ಮನೆಗಳಾಗಿ, ಮಳಿಗೆಗಳಾಗಿ ಮಲಗಿವೆ. ಇಷ್ಟಾದರೂ ಹುಡುಗರಿಗೆ ಊರಲ್ಲೇ ಇದ್ದುಕೊಂಡು ಮಾಡಲು ಕೆಲಸವಿಲ್ಲ. ಇದ್ದು, ಮಾಡಿದರೂ ಆ ಹುಡುಗರಿಗೆ ಅಷ್ಟೇನೂ ಮನ್ನಣೆಯಿಲ್ಲ. ನನ್ನ ಸ್ಕೂಲು- ಕಾಲೇಜಿನ ದಾರಿ, ಆಟವಾಡಿದ ಗ್ರೌಂಡು, ಮೊದಲ ಪ್ರೇಮ ಪತ್ರ ಇಸ್ಕೊಂಡ ಜಾಗ…, ಮೊದಲ ನಾಚಿಕೆಯ ಸಾಕ್ಷಿ… ಯಾವುದೂ ಇದ್ದ ಹಾಗೆ ಇಲ್ಲ!

ಊರ ಮಕ್ಕಳೀಗ ಕಾಲೇಜಿಗೆ ನಡೆದು ಹೋಗುವುದಿಲ್ಲ. ಸಂಕ ದಾಟುವುದು, ಗದ್ದೆಬೇಲಿ ಹಾರುವುದು… ಇವೆಲ್ಲ ಅವರಿಗೆ ಗೊತ್ತಿಲ್ಲ. ಹಳ್ಳಗಳಲ್ಲಿ ನೀರಿಲ್ಲ. ಮಾಗಿಯಲ್ಲೂ ಚಳಿಯಿಲ್ಲ. ಮಲೆನಾಡಿನ ಮಳೆ, ಹೇಗಿತ್ತೆಂದೇ ಮರೆತುಹೋಗಿದೆ. ಅಷ್ಟಾದರೂ ಅಲ್ಲೇ ಹುಟ್ಟಿ ಬೆಳೆದು ಜೀವನ ಮಾಡ್ತಿರುವ ಅಮ್ಮ, ‘ಕೇಡು ಮಳೆ, ಸುರೀತಲೇ ಇರತ್ತೆ’ ಅಂತ ಗೊಣಗೋದು ಬಿಟ್ಟಿಲ್ಲ.

ಹಾದಿಬದಿಗಳಲ್ಲಿ ಇದ್ದವಲ್ಲ, ಮಾಸ್ತಿಕಲ್ಲು- ವೀರಗಲ್ಲುಗಳು? ಅವೀಗ ಯಾರ ಮನೆಯ ಚಪ್ಪಡಿಗಳಾಗಿವೆಯೋ? ಶಿವಪ್ಪ ನಾಯಕನ ಕಾಲದ ಕಲ್ಲಿನ ಪುಟ್ಟಪುಟ್ಟ ದೇಗುಲಗಳೆಲ್ಲ ಸುತ್ತ ಸಿಮೆಂಟಿನ ಗೋಡೆ ಕಟ್ಟಿಸಿಕೊಂಡು ಬರೀ ಆಡಂಬರದ ವಸ್ತುಗಳಾಗಿಬಿಟ್ಟಿವೆ. ಆದರೂ, ಹುಡುಗಿಯರಿಗೆ ಲೈನು ಹೊಡೆಯಲು ಹುಡುಗರೀಗ ಅಲ್ಲಿಗೆ ಬರೋದಿಲ್ಲ. ಆಮೇಲೆ ಹುಡುಗೀರು ತಮ್ಮನ್ನ ‘ಗುಗ್ಗು’ ಅಂದ್ಕೊಂಡುಬಿಟ್ಟರೆ?

– ಹೀಗೆಲ್ಲ ಗೊಣಗಿಕೊಳ್ಳುತ್ತ, ಊರಿಗೆ ಹೋಗಲು ಇಷ್ಟವಿಲ್ಲದರ ನೆವಗಳು ಇವು ಎಂದು ನನ್ನನ್ನು ನಾನು ನಂಬಿಸ್ಕೊಳ್ಳುತ್ತ ಕುಳಿತಿದ್ದೆ. ಊರಿಗೊಂದು ಅವಕಾಶ ಕೊಟ್ಟರೆ, ನನ್ನ ‘ಇಲ್ಲ’ಗಳ ಪಟ್ಟಿಯಲ್ಲಿ ಏನೆಲ್ಲ ಹೇಳಬಹುದು? ಬದಲಾವಣೆಯನ್ನ ಹೇಗೆಲ್ಲ ಗುರುತಿಸಬಹುದು? ಚಿಂತೆಯಾಯ್ತು.

“ಊಹೂಂ… ನಾನು ಊರಿಗೆ ಹೋಗೋದಿಲ್ಲ!” ದಿಗಿಲಿನ ದಾರಿಯನ್ನೇ ಮುಚ್ಚಿಹಾಕಿದೆ.

17 thoughts on “ಬದಲಾದ ನನ್ನೂರು… ಬಯಲಾದ ನಾನು.

Add yours

 1. SSLC fail ಅದೋನಿಂದ ಹಿಡಿದು engineering, medical, or any other graduation or PG ಮಾಡಿದವರ ತನಕ ಕೆಲಸ ಬೇಕು ಅಂದ್ರೆ, Metropolitin, or Capital cities ಗಳಿಗೆ ಹೋಗಬೇಕಂದ್ರೆ, ಹನ್ನೊಂದನೆ ಪಂಚವಾರ್ಷಿಕ ಯೋಜನೆ ಹೊಸ್ಥಿಲಲ್ಲಿರೊ ಸಂಧರ್ಭದಲ್ಲೂ ನಮ್ಮ ಸರ್ಕಾರ ಗಳ ಕೈಗಾರಿಕಾ ವೀಕೇಂದ್ರೀಕರಣ , inclusive growth, ಅನ್ನುವ concept ಗಳು ಇನ್ನು theory ರೂಪದಲ್ಲೇ ಇದಿಯಲ್ಲ ಅಂತ ಬೇಜಾರಾಗುತ್ತೆ.

  -ಪ್ರಸಾದ್.

 2. ಅಕ್ಕ,
  ಹಾಗೆ ನೋಡಿದ್ರೆ ಬೆಂಗಳೂರಿನಲ್ಲಿ ಬದಲಾವಣೆ ಕಡಿಮೆ ಅನ್ಸುತ್ತೆ, ಅಥವಾ ಬೆಂಗಳೂರಿಗರು ಬದಲಾವಣೆಗಳಿಗೆ ಹೊಂದಿಕೊಂಡುಬಿಟ್ಟಿರ್ತಾರಾ? ಆದರೂ ಹುಟ್ಟಿ ಬೆಳೆದ ಊರು ಹೀಗೆ ಬಣ್ಣಕಳಚಿ ಬೀಳೋದು ನೋಡ್ಲಿಕ್ಕೆ ಬೇಜಾರಾಗುತ್ತೆ ಅಲ್ವೆ?

 3. ನೀವು ಚೇತನಾ ತೀರ್ಥಹಳ್ಳಿ ಅಂತ ಜನ ಗಮನಿಸಲಿ ಅಂತ ಇಟ್ಟುಕೊಂಡರೋ ಗೊತ್ತಿಲ್ಲ ಆದರೆ ನಾನು ಗಮನಿಸಿದ್ದಂತೂ ತೀರ್ಥಹಳ್ಳಿ ಅನ್ನೋದಿಂದ್ರಲೇ. ತೀರ್ಥಹಳ್ಳಿ ಆದ್ಮೇಲೆ ಭಾಮಿನಿ ಷಟ್ಪದಿ ಎಲ್ಲ ಗಮನಿಸಿದ್ದು 😉
  ನಾನು ಪ್ರೈಮರಿ ಮತ್ತು ಹೈಸ್ಕೂಲ್ ಓದಿದ್ದು ಮಾಸ್ತಿಕಟ್ಟೆಯಲ್ಲಿ, ನಮಗೆ ಹತ್ತಿರದ ಪಟ್ಟಣ ಅಂದ್ರೆ ತೀರ್ಥಹಳ್ಳಿ. ಹಬ್ಬಕ್ಕೆ ಹೊಸ ಬಟ್ಟೆ ಬೇಕು ಅಂದ್ರೆ ತೀರ್ಥಹಳ್ಳಿ, ಖಾಯಿಲೆ ಬಿದ್ದರೂ ತೀರ್ಥಹಳ್ಳಿ, ತೆಪ್ಪೋತ್ಸವಕ್ಕು ತೀರ್ಥಹಳ್ಳಿ. ಹತ್ತು ವರ್ಷ ಆಯ್ತು!!
  ತುಂಬಾ ಬದಲಾಗಿದೆ ಅನ್ನೋದನ್ನು ಅದು ಹೇಗೆ ಬರ್ದಿದೀರ, ತುಂಬಾ ಯೋಚನೆ ಮಾಡೊ ಹಾಗೆ ಮಾಡ್ತು.
  ನೀವು ಊರಿಗೆ ಹೋಗಲ್ಲ ಅಂದಿ, ನಾನು ೧೦ ವರ್ಷದ ನಂತರ ಮಾಸ್ತಿಕಟ್ಟೆ ಮತ್ತು ಸುತ್ತ ಮುತ್ತ ಹೋಗೋಣ ಅಂತ ಪ್ಲಾನ್ ಹಾಕಿದ್ದೀನಿ.
  ಏನೋ ಕಾಮೆಂಟ್‍ನಲ್ಲಿ ಗೀಚ್ತಾ ಇದೀನಿ, ನೀವು ಚೇತನಾ ಬೆಂಗಳೂರು ಬದಲು ಚೇತನಾ ತೀರ್ಥಹಳ್ಳಿ ಆಗರೊದಿಕ್ಕೆ ಸ್ವಲ್ಪ ಆತ್ಮೀಯತೆ 🙂

 4. ಗುರು, ಹರೀಶ್… 🙂

  ಕನ್ನಂತ,
  ನನ್ನ ಪ್ರಕಾರ, ಬಿಟ್ಟು ಬಂದ ಊರಿನ ಹೆಸರೇ ನಾಸ್ಟಾಲ್ಜಿಯಾ!!

  ಹೌದು ಪ್ರಸಾದ್, ಹೀಗೆ ಕೆಲಸವೆಂದರೆ ನಗರಕ್ಕೇ ಜೋತುಬೀಳಬೇಕಾಗಿರುವುದು ಅತಿದೊಡ್ಡ ದುರಂತ. ನಮ್ಮೂರುಗಳು ಎಷ್ಟು ಬದಲಾದರೂ ಅಷ್ಟೇ…

  ತವಿಶ್ರೀ ಅವರೆ, ನಿಜ. ಬದಲಾವಣೆಯೇ ಜಗದ ನಿಯಮ. ಊರೂ ಹೊರತಲ್ಲ, ನಾನೂ…

  ಹೇಮಾ, ಹೌದು. 😦

  ಸಂದೀಪ್,
  “ಚೇತನಾ ಬೆಂಗಳೂರು ಅಂದ್ರೆ ’ಹಾಯ್ ಬೆಂಗಳೂರು’ ಥರ ಯಾವುದೋ ಪತಿಕೆ ” – ಅಂದ್ರೆ? ಚೇತನಾ= ಹಾಯ್ ಅಂತಲಾ!? 🙂

  ಮನೋಜ್,
  ನೀವೂ ನಮ್ಮ್ಮ್ ತೀರ್ಥಳ್ಳಿಯವ್ರಾ? ಗೀಚಿ, ಗೀಚಿ… ನಂಗೆ ಖುಷೀನೇ. ಆಗಾಗ ಇತ್ತ ಹಣಕುತ್ತಿರಿ. ಛೆ! ನಾನು ನನ್ನ ‘ಕನವರಿಕೆ’ ಯಲ್ಲಿ ಮಾಸ್ತಿಕಟ್ಟೆ ಹುಡುಗ/ಗಿ ಯರ ಬಗ್ಗೆ ಏನೋ ನಾಲ್ಕು ಸಾಲು ಬರೀಬೇಕು ಅಂತ ಇದ್ದೆ. ಈಗ ಕ್ಯಾನ್ಸೆಲ್!!

 5. ಓಹ್ ಅದು ಪತ್ರಿಕೆ ಆಗ್ಬೇಕಿತ್ತು ಸಾರಿ!

  ಏನಿಲ್ಲ ಚೇತನಾ ಬೆಂಗಳೂರು ಅಂದ್ರೆ ಒಂದು ಪೇಪರ್ ಹೆಸರಿನ ಥರ ಇರುತ್ತೆ ಅಂದೆ ಅಷ್ಟೆ. ಅದೂ ತಮಾಷೆಗಾಗಿ ಅಂದೆ!

  ಹೆಸರೇನೆ ಇದ್ರು ಜನ ಕೊನೆಗೆ ಮೆಚ್ಚೋದು ನಮ್ಮ ವ್ಯಕ್ತಿತ್ವವನ್ನು ಅಲ್ವ??

 6. ಚೆನ್ನಾಗಿದೆ nostalgic ಬರಹ. ನಮ್ಮಂತವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಬದಲಾವಣೆಯಲ್ಲಿ ಭಾಗಿಗಳಾಗಿ, ನಮ್ಮದು ಅಂತ ಹೇಳಿಕೊಳ್ಳೋಕೆ ಬೇರೆ ಊರು ಅಂತ ಇಲ್ಲದೆ, ಬದಲಾವಣೆಯನ್ನು ಸಹಿಸಿಕೊಳ್ಳಲು ಆಗದೆ ಒದ್ದಾಡ್ತಿದೀವಿ.
  This post made me think of all the things that I miss due to ‘change’

 7. ಸಂದೀಪ್,
  ಆ ಹುಡುಗೀರಲ್ಲಿ ಕೆಲವರು ನನ್ನ ಅಣ್ಣ ಪವನ್ ಅನ್ನು ರ್ಯಾಗ್ ಮಾಡ್ತಿದ್ರು! ಹೀಗೇ ಮತ್ತಷ್ಟು ಮಜಗಳಿದ್ದವು. ನಮ್ಮೂರಿನ ಕಡೆಯ ಸಾಕಷ್ಟು ಜನ ನೋಡ್ತಿದಾರೆ ಅಂತ ಗೊತ್ತಾದಮೇಲೆ ಬರಿಯೋಕೆ ಮುಜುಗರ. ಮತ್ತೆ ಅವ್ರು ಬೇಸರ ಮಾಡ್ಕೊಳ್ಬಾರ್ದಲ್ವ?

  ಶಶಿ, ಥ್ಯಾಂಕ್ಸ್.

 8. Chetana…i agree with manoj. Just the ‘teerthahalli’tag made me curious to know about ur blogs.
  Though serious matters just fly above my head, i like to read ur blog.There is an intensity in you that never fails to amaze me.But believe me i am at a loss to make intelligent comments.
  Take care da
  🙂
  malathi S

 9. Maastikatte anda mele kelavu haleya vishayagalu nenapaaguttade. Rashi, Shallini nanage rag maadiddu, naanu principalge complaint maadiddu, principal avarige warn maadiddu, aamele avaribbaru nanna friend aagiddu, nantara aaaaa dummiya parichaya aggiddu, e ella vishyagalu kannina munde bandu nilluttade.

 10. ನಮಸ್ತೆ ಚೇತನರವರೆ,
  “ಹಸುಗಳ ಸಂಖ್ಯೆ ಕಡಿಮೆಯಾಗಿದೆ. ಕತ್ತೆಗಳು ತೀರ್ಥಹಳ್ಳಿಯಲ್ಲಿ ಯಾವತ್ತೂ ಇರಲಿಲ್ಲ! ಹಂದಿಗಳನ್ನಂತೂ ತೀರ್ಥಳ್ಳಿಯ ಬೀದಿಗಳಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲ.
  ಮನೆ ಹಿತ್ತಿಲಲ್ಲಿ ಬುಟ್ಟಿಯಲ್ಲಿ ಬೆಚ್ಚಗೆ ಕೂತ ಕೋಳಿಗಳನ್ನು ನಾವೀಗ ಕಾಣಲಾರೆವು. ಮೆಟ್ಟಿಲ ತುದಿಯಲ್ಲಿ ಬಾಲ ಆಡಿಸುತ್ತ ಕೂತ ನಾಯಿಯನ್ನೂ…”
  ಈ ಮೇಲಿನ ಸಾಲುಗಳನ್ನು ಓದುವಾಗ ಕಂಡು ಕಾಣದೆ ಕಣ್ಣು ತೇವವಾಯ್ತು, ನೀವು ಬರೆದ ಘಟನಾವಳಿಗಳ ಕಾಲದಲ್ಲಿ ನಾನು ೪-೫ ನೆ ತರಗತಿ ಓದುತ್ತ ಇದ್ದೆ, ಸೊಪ್ಪುಗುದ್ದೆಯ ಮನೆಯಿಂದ, ಬಸ್ ಸ್ಟ್ಯಾಂಡ್ ಬಳಿಯ ಶಾಲೆಗೆ ಬರುವಾಗ ಪಾಂಡು ಎಲ್ಲಾದರೂ ಸಿಕ್ಕೇ ಸಿಗುತ್ತಿದ್ದ, ಅವನ ಕಡೆಗೊಂದು ಬಾಲಿಶ ನೋಟ ಬೀರಿ ಓಡುತ್ತಿದ್ದೆ, ಇವತ್ತಿಗೂ ಆಗಿನ ಕಾಲದ ತೀರ್ಥಹಳ್ಳಿಗರಿಗೆ ಪಾಂಡು ಎಂದರೆ ಹುಚ್ಚಿಗೆ ಅನ್ವರ್ಥ ನಾಮ ಎಂಬ ಭಾವನೆ ಇದೆ. ತೀರ್ಥಹಳ್ಳಿ ಯನ್ನು ಚೆನ್ನಾಗಿ ಮೂಡಿಸಿದ್ದೀರಿ ನಿಮ್ಮ ಲೇಖನಿಯಲ್ಲಿ.
  -ರಾಜೇಶ್ ಮಂಜುನಾಥ್

 11. ಎಲ್ರಿಗೂ ಥ್ಯಾಂಕ್ಸ್.
  ಪೋನಿ, (ನನ್ನಣ್ಣ ಪವನ್ ಗೆ), ಸಧ್ಯ! ನೀನೇ ನಿನ್ನ ರ್ಯಾಗಿಂಗ್ ಕಥೆಯ ಸುಳಿವು ಬಿಟ್ಟುಕೊಟ್ಟು ನನ್ನ ಮುಜುಗರ ತಪ್ಪಿಸಿದೆ. ಮಾರಾಯಾ ಇನ್ನು ನಾನು ಹಳೆ ಕಥೆಗಳನ್ನ ಹೇಳಲಡ್ಡಿಯಿಲ್ಲ! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: