ಮೊದಲು, ಬಣ್ಣದ ಕನ್ನಡಕಗಳನ್ನು ಕಳಚಿಡಿ


ಕ್ಷಮಿಸಿ. ಮುಂಬಯ್ ನರಮೇಧಕ್ಕೆ ಸಂಬಂಧಿಸಿದಂತೆ ನನ್ನ ಕೊನೆಯ ಪ್ರತಿಕ್ರಿಯೆ ಎಂದು ಹಿಂದಿನ ಪೋಸ್ಟಿನಲ್ಲಿ ಹೇಳಿಕೊಂಡಿದ್ದೆ. ಆದರೆ ಸಾಧ್ಯವಾಗುತ್ತಿಲ್ಲ. ಯಾವತ್ತೂ ಭಯೋತ್ಪಾದಕರ ಸಂಗತಿ ಹೀಗೆ ವಿಷಯಾಂತರಗೊಳ್ಳುತ್ತ ಸಾಗಿ, ನಮ್ಮ ನಮ್ಮ ನಡುವಿನ ಗಲಭೆಯಾಗಿ ಉಳಿದು ಅಸಲು ಸಂಗತಿ ಡೈಲ್ಯೂಟ್ ಆಗಿಹೋಗುತ್ತದೆ.

ಇಲ್ಲಿ, ಪೀರ್ ಭಾಷಾ ಅವರ ಪ್ರತಿಕ್ರಿಯೆ ಇದೆ. ಅವನ್ನು ಯಥಾವತ್ತಾಗಿ ಹಾಕಿದ್ದೇನೆ. ಜೊತೆಗೆ ನನ್ನ ಪ್ರತ್ಯುತ್ತರವನ್ನೂ. ಗಾಳಿಯ ಜತೆ ಗುದ್ದಾಡಿ ಪ್ರಯೋಜನವಿಲ್ಲವೆಂದು ಈಗಾಗಲೇ ಅರಿವಾಗಿದ್ದರೂ ಮತ್ತೊಂದು ಹುಂಬ ಪ್ರಯತ್ನ ಮಾಡುತ್ತ, ಈ ಲೇಖನ ಸರಣಿಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.

“ಗಾನಾಜ್ಯೊಯಿಸ್ಸ್ ಎಂಬ ಸೆನ್ಸಿಟಿವ್ ಬರಹಗಾರ್ತಿ ಚೇತನಾ ಆಗಿ ಮಾರ್ಪಾಟ್ಟ ಹಿಂದೆಯೇ ಬಹಳಷ್ಟು ಎಡವಟ್ಟುಗಳಿವೆ. ಒಬ್ಬ ಸೂಕ್ಷ್ಮ ಬರಹಗಾರ್ತಿ ಪ್ಯಾಸಿಸ್ಟ್ ರಾಜಕಾರಣದ ಕೇಸರಿ ಕರಪತ್ರವಾಗಿ ಮಾರ್ಪಾಟ್ಟದ್ದನ್ನು ಹೀಗೆ ಹೇಳಬೇಕಾಯಿತು.
ಚೇತನಾ ಬಗ್ಗೆ ನನಗೆ ಗೌರವವಿದೆ. ಮುಂಬೈ ಘಟನೆಯಾದಾಗ ಎರಡು ದಿನ ನೋವಿನಿಂದ ನಾವೂ ತತ್ತರಿಸಿದ್ದೇವೆ. ಕೋಮುವಾದವನ್ನಾಗಲಿ, ಮೂಲಭೂತವನ್ನಾಗಲಿ ಸರಿಯಾಗಿ ಅರ್ಥೈಸಿಕೊಳ್ಳಲು ಚರಿತ್ರೆಯ ಅರಿವಿನ ಜೊತೆ ವಿವೇಕದ ಅಗತ್ಯವೂ ಇದೆ. ಯಾಕೆ ಹಾಗೆ ಅವೇಶದಿಂದ ವಿವೇಕ ಕಳೆದುಕೊಳ್ಳುತ್ತೀರಿ ಚೇತನಾ.
ಗುಜರಾತಿನಲ್ಲಿ ಬಸಿರು ಹೆಂಗಸಿನ ಗರ್ಭಕ್ಕೆ ಚೂರಿ ಹಾಕಿ, ತ್ರಿಶೂಲಕ್ಕೆ ಭ್ರೂಣ ಸಿಕ್ಕಿಸಿಕೊಂಡು ಮೆರವಣಿಗೆ ಮಾಡಿದಾಗ ನೀವು ಯಾವ ಶ್ರೀಕೃಷ್ಣನ ಪೂಜೆಯಲ್ಲಿ ಕೂತಿದ್ದಿರಿ. ಇನ್ನೊಬ್ಬ ಬಸುರಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದರಲ್ಲ, ಹೇಳಿ, ನೀವು ಒಬ್ಬ ಹೆಣ್ಣು. ಅಂತಹ ಸಂದರ್ಭದಲ್ಲಿ ನೀವು ಹೇಗೆ ಯೋಚಿಸುತ್ತೀರಿ ಎನ್ನುವುದು ನನಗೆ ಕಾಡಿಸುತ್ತಿದೆ ಅಥವಾ ಅಂತಹ ಹೆಣ್ಣಿನ ತಮ್ಮನೋ, ಅಣ್ಣನೋ ಮುಂದೆ ಏನಾಗಬೇಕೆಂದು ಪ್ರತಿಜ್ಞೆ ಮಾಡಿರಬಹುದು. ಬಹುಶಃ ತಾಜ್ ದುರಂತದಲ್ಲಿ ಸತ್ತವರ ಸಂಬಂಧಿಗಳು ಹಾಗೇ ಯೋಚನೆ ಮಾಡಬಹುದು. ಇವರೆಡರ ನಡುವೆ ನನಗೆ ವ್ಯತ್ಯಾಸ ಕಾಣಿಸುತ್ತಿಲ್ಲ. ಆದರೆ ನನಗೆ ಘಾಸಿ ಎನಿಸುವುದು ಅತ್ಯಾಚಾರಿಗಳ ಪರವಾಗಿ, ಗರ್ಭ ಹಂತಕರ ಪರವಾಗಿ ಕೋಮಲ ಮನಸ್ಸಿನ ನಿಮ್ಮಂತವರೂ ದುರ್ಗಾವಾಹಿನಿಯ ಕೇಡಿಗಳಾಗಿ ಕಾವಲಿಗೆ ನಿಂತು ಬಿಡುತ್ತೀರಲ್ಲಾ ಅದು.
ಈ ಹೊತ್ತಿನ ದುರಂತವೆಂದರೆ ಹೆಣ್ಣು ಹೆಣ್ಣಾಗದೆ, ತಾಯಿ ತಾಯಿಯಾಗದೆ, ತ್ರಿಶೂಲ, ಬಂದೂಕಗಳಾಗಿ ಮಾತನಾಡುತ್ತಿರುವುದು. ಚೇತನಾ ನೀವು ಹೆಣ್ಣಾದರೆ ನಾನೊಬ್ಬ ಗೆಳೆಯ. ತಾಯಿಯಾದರೆ ನಾನು ನಿಮ್ಮ ಮಡಿಲ ಮಗು. ನೆನಪಿಡಿ, ನೀವು ಬಂದೂಕಾದರೆ ನಾನು ಖಂಡಿತ ಗುಲಾಬಿ ಅಲ್ಲ.

– ಬಿ.ಪೀರ್‌ಭಾಷ, ಹೂವಿನ ಹಡಗಲಿ

ಪೀರ್ ಭಾಷಾ,

‘ಗಾನಾ ಜೋಯ್ಸ್’ ಎಂಬ ಸೆನ್ಸಿಟಿವ್ ಬರಹಗಾರ್ತಿ ‘ಚೇತನಾ ತೀರ್ಥಹಳ್ಳಿ’ ಆಗಿ ಮಾರ್ಪಾಡಾದುದರ ಹಿಂದೆ ಖಂಡಿತ ಯಾವ ‘ಎಡ’ವಟ್ಟೂಗಳೂ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಹೆಣ್ತನದ ಮೇಲಾಗುವ ದಾಳಿಯನ್ನು, ಅನಾಚಾರವನ್ನು ಖಂಡಿಸುವ ಹೆಣ್ಣುಮಗಳು ಸೆನ್ಸಿಟಿವ್ ಆಗಿರುತ್ತಾಳೆ. ಅಟ್ ದ ಸೇಮ್ ಟೈಮ್, ದೇಶದ ಮೇಲಾಗುವ ದಾಳಿಯನ್ನು, ಅನಾಚಾರವನ್ನು ಖಂಡಿಸುವ ಹೆಣ್ಣುಮಗಳು ಫ್ಯಾಸಿಸ್ಟಳಾಗುತ್ತಾಳೆ! ಚೆನ್ನಾಗಿದೆ ನಿಮ್ಮ ಗ್ರಹಿಕೆ.

ನೀವು ಯಾವ ಬಣ್ಣದ ಕನ್ನಡಕವನ್ನು ಹಾಕಿಕೊಂಡು ನನ್ನನ್ನು ನೋಡುತ್ತೀರೋ ನಾನು ಅದೇ ರೀತಿ ಕಾಣುತ್ತೇನೆ. ನಾನಂತೂ ಇರುವ ಹಾಗೇ ಇದ್ದೇನೆ. ಮೊದಲು ನಿಮ್ಮ ಸಂಕುಚಿತ ಮನಸುಗಳಿಗೆ ಚಿಕಿತ್ಸೆ ಮಾಡಿಸಿಕೊಳ್ಳಿ. ಮೊದಲು ಬಣ್ಣದ ಕನ್ನಡಕಗಳನ್ನು ಕಳಚಿಡಿ.

ಹೌದು. ಗುಜರಾತಿನಲ್ಲಿ ಬಸುರಿ ಹೆಂಗಸಿಗೆ ಚೂರಿ ಹಾಕಿದ ಸಂಗತಿಯನ್ನು ನಾನೂ ಕೇಳಿದ್ದೇನೆ. ಗುವಾಹಟಿಯಲ್ಲಿ ಪ್ರತಿಭಟನಾ ನಿರತ ಹೆಣ್ಣುಮಗಳನ್ನು ಬೆತ್ತಲೆಗೊಳಿಸಿದ ಸೇನಾಸಿಬ್ಬಂದಿ ಯೋನಿಗೆ ಬೂಟುಕಾಲಲ್ಲಿ ಒದ್ದಿದ್ದನ್ನೂ ನೋಡಿದ್ದೇನೆ. ಹಿಂದೂ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದ ಗುಲ್ನಾಜ್ ಎಂಬ ಗೆಳತಿಯನ್ನು ಅವಳ ಮನೆಯ ಜನ ಎತ್ತಿಕೊಂಡು ಹೋಗಿ, ಎಚ್ಚರವನ್ನೂ ತಪ್ಪಿಸದೆ ಹಾಗೇ ಹೊಟ್ಟೆ ಕೊಯ್ದು ಗರ್ಭ ತೆಗೆದು, ಅವಳು ಸತ್ತು ಹೋದಳೆಂದು ನಡುಬೀದಿಯಲ್ಲಿ ಬಿಸಾಡಿಹೋಗಿದ್ದು, ತಿಂಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಗುಲ್ನಾಜ್ ಕೊನೆಗೂ ಸತ್ತುಹೋಗಿದ್ದು- ಇವೆಲ್ಲಾ ನನಗೂ ಗೊತ್ತಿದೆ. ಈ ಎಲ್ಲದರ ಬಗ್ಗೆ ನಾನು ಆಯಾ ಸಂದರ್ಭಗಳಲ್ಲಿ ಬರೆದಿರುವುದನ್ನು ನೀವು ಓದಿಲ್ಲವಾದರೆ ಅದು ನಿಮ್ಮ ಸಮಸ್ಯೆ. ನಾನು ಹೊಣೆಗಾರಳಲ್ಲ. ಮಾಹಿತಿಗೆ ಮತ್ತೊಂದು ವಿಷಯ- ಈ ಗುವಾಹಟಿ ಪ್ರಕರಣದ ಬಗ್ಗೆ ಬಹುಶ್ರುತ ಬ್ಲಾಗೊಂದರ ನನ್ನ ರೆಗ್ಯುಲರ್ ಅಂಕಣಕ್ಕಾಗಿ ಬರೆದಿದ್ದ ‘ಸತ್ತು ಬಿದ್ದಿತ್ತು ಭಾರತ’ ಎಂಬ ಲೇಖನವನ್ನು ಅವರು ಪ್ರಕಟಿಸಿರಲೇ ಇಲ್ಲ. ಕೊನೆಗೆ ಅದನ್ನೇ ನನ್ನ ಬ್ಲಾಗಿನಲ್ಲಿ ಹಾಕಿಕೊಂಡು ಚರ್ಚೆ ಮುಂದುವರೆಸಿದ್ದೆ. ಗೋಧ್ರಾ ಪ್ರಕರಣದ ಬಗ್ಗೆ ಬರೆದಿದ್ದು ಬಹಳ ಹಿಂದೆ. ಅದರ ಪ್ರತಿ ಸಿಕ್ಕರೆ, ಖಂಡಿತ ತಮಗೆ ಕಳುಹಿಸಿಕೊಡುತ್ತೇನೆ.

ಇಷ್ಟಕ್ಕೂ ನೀವು ಒಬ್ಬ ಕೌಸರ್ ಬಾನು ಬಗ್ಗೆ ಮಾತಾಡುತ್ತಿದ್ದೀರಿ. ( ಕೌಸರಳ ಆತ್ಮಕ್ಕೆ ಶಾಂತಿಯಿರಲಿ. ಅವಳ ಸಾವಿಗೆ ತೀವ್ರ ವಿಷಾದವಿದೆ). ಅದರ ಜೊತೆಗೇ ಕಾಶ್ಮೀರದ ‘ಭಟ್ನಿ’ಗಳ ಬಗ್ಗೆಯೂ ಮಾತಾಡಬೇಕಲ್ಲವೆ? ಕುನನ್ ಪೋಷ್ಪೋರಾ ಬಗ್ಗೆ ಮಾತಾಡುತ್ತಲೇ ನಾನು ಕಾಶ್ಮೀರದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಂದ ಅತ್ಯಾಚಾರಕ್ಕೊಳಗಾದ ಪಂಡಿತರ ಹೆಣ್ಣುಮಕ್ಕಳ ಬಗ್ಗೆಯೂ ಮಾತಾಡಬೇಕು. ಒಂದೇ ಸಲಕ್ಕೆ ಅಲ್ಲವಾದರೂ ಬೇರೆ ಬೇರೆ ಸಂದರ್ಭಗಳಲ್ಲಿ…. ನಿಮ್ಮಿಂದ ಯಾಕೆ ಅದು ಸಾಧ್ಯವಾಗೋದಿಲ್ಲ?

ವಾಹ್! ನಿಮ್ಮ ಕೊನೆಯ ಮಾತುಗಳು ಮತ್ತೂ ಸೊಗಸಾಗಿವೆ. “ನೀವು ಬಂದೂಕಾದರೆ ನಾನು ಖಂಡಿತ ಗುಲಾಬಿ ಅಲ್ಲ” ಎಂದಿರುವಿರಲ್ಲವೆ? ಅದರೆ ನಾನು ಹಾಗೆ ಹೇಳುವುದಿಲ್ಲ. ನಾನು ಅಪ್ಪಟ ಭಾರತೀಯಳು. ನೀವು ಬಂದೂಕಾದರೂ ನಾನು ಗುಲಾಬಿಯಾಗಿಯೇ ಉಳಿಯುತ್ತೇನೆ. ನನ್ನ ಸಾತ್ತ್ವಿಕತೆ ನನ್ನ ರಕ್ಷಣೆಗೆ ‘ಮುಳ್ಳಿನಂತೆ’ ನಿಂತು, ಕಿತ್ತಲು ಬರುವವರನ್ನು ಹಿಮ್ಮೆಟ್ಟಿಸುತ್ತದೆ ಎಂಬ ನಂಬಿಕೆ ನನ್ನದು.

 ವಂದೇ,
ಚೇತನಾ ತೀರ್ಥಹಳ್ಳಿ

14 thoughts on “ಮೊದಲು, ಬಣ್ಣದ ಕನ್ನಡಕಗಳನ್ನು ಕಳಚಿಡಿ

Add yours

 1. ಬೌದ್ಧಿಕ ಸ್ವಾತಂತ್ರ್ಯ, ಅಭಿವ್ಯಕ್ತಿಯ ಮಹತ್ವ ಎಂದೆಲ್ಲಾ ಮಾತಾಡುವವರು ತಮ್ಮ ದುಷ್ಟಿಕೋನಕ್ಕೆ ಭಿನ್ನವಾದ ವಿಚಾರಗಳನ್ನು ಹತ್ತಿಕ್ಕುವುದಕ್ಕೆ ಬಳಸುವ ನುಡಿಗಟ್ಟುಗಳು ನಿಜಕ್ಕೂ ಮಜವಾಗಿರುತ್ತವೆ. ಫ್ಯಾಸಿಸಂ, ಕೋಮುವಾದ, ಕೇಸರಿ ಎಂಬೆಲ್ಲಾ ಪದಗಳನ್ನು ಬಳಸುತ್ತಾ ಎದುರಿನವರನ್ನು ಕೀಳಾಗಿ ಬಿಂಬಿಸುವ ಆಮೂಲಕ ಪ್ರವಾದಿಯ ಫೋಸು ಕೊಡುತ್ತಾ ಮಾತಾಡುವವರನ್ನು ಅಧ್ಯಯನ ಮಾಡುತ್ತಾ ಹೋದರೆ ಒಂದು ಪಿಎಚ್‌ಡಿ ಪಡೆಯುವಷ್ಟು ಸಾಮಗ್ರಿ ಕಲೆ ಹಾಕಬಹುದು.

  ಸುಪ್ರೀತ್

 2. ಪರಶುರಾಮ ಕುಲಾಲರೇ ,

  ತಾಜ್ ಹೋಟೇಲಿಗೆ NSG commandos ಬದಲಿಗೆ ನಿಮ್ಮನ್ನೇ ಕಳಿಸನಹುದಿತ್ತು ಮೊದಲೇ ಗೊತ್ತಿದ್ರೆ!

  ನೀವು ಆಯುಧವಿಲ್ಲದೆ ಬರೀ ಮಾತಿನಿಂದ ಅವರನ್ನು ಒಲಿಸಿ ಒತ್ತೆಯಾಳುಗಳನ್ನು ಬಿಡಿಸಿ ತರ್ತಾ ಇದ್ರಿ ಅಲ್ವ??

  ನಾನೆಷ್ಟೊ ಸಲ ಹೇಳಿದ್ದೀನಿ .ಎಲ್ಲಾ ತತ್ವಗಳನ್ನು ಎಲ್ಲಾ ಕಡೆ ಉಪಯೋಗಿಸಲು ಆಗೋದಿಲ್ಲ.

  ಗಾಂಧೀಜಿಯ ತತ್ವಗಳನ್ನು ತಾಜ್ ದಾಳಿಯ ಸಮಯದಲ್ಲಿ ಉಪಯೋಗಿಸಲು ಆಗೋದಿಲ್ಲ.

  ಹಿಂದಿಯಲ್ಲಿ ಒಂದು ಮಾತಿದೆ “ಲಾತೋಂಕೇ ಭೂತ್ ಬಾತೋಂ ಸೇ ನಹಿ ಮಾನ್ ತೇ ” ಅಂತ ಯಾವತ್ತೂ ನೆನಪಿರಲಿ ಈ ಮಾತು.

  ನಿಮ್ಮ ಮನೆಯವರು ಯಾರಾದ್ರೂ ಈ ಘಟನೆಯಲ್ಲಿ ಸಿಲುಕಿದ್ದು ಆಗಲೂ ನೀವು ಇಂಥ ಪರಿಸ್ಥಿತಿಯನ್ನು ಮಾತಿನಿಂದಲೇ ಬಗೆಹರಿಸಬಹುದು ಅಂತ ಪ್ರತಿಪಾದಿಸೋದ್ರೆ ಹೇಳಿ. ಅಭಿನಂದಿಸ್ತೀನಿ ನಿಮ್ಮನ್ನ.

  ಗಾನಾ ಜೋಯಿಸರ ಪರಿಚಯ ನನಗಿಲ್ಲ.ಚೇತನಾರ ಪರಿಚಯ ಕೂಡಾ ನನಗಿಲ್ಲ .
  ಆದರೆ ಚೇತನಾ ಕೆಲವೆ ಕೆಲವು ಜನರ ಮುಂದೆ ತಮ್ಮನ್ನು ತಾವು ಸಮರ್ಥಿಸೋದನ್ನು ಕಂಡು ನಂಗೆ ಬೇಜಾರಾಗುತ್ತೆ.

  ಚೇತನಾ ನನ್ಗೆ ಗೊತ್ತು ನಿಮ್ಮನ್ನು ಕೆಲವರು ಅಪಾರ್ಥ ಮಾಡಿಕೊಂಡಿದ್ದಾರೆ ಅನ್ನೋ ಕೊರಗು ನಿಮ್ಮನ್ನು ಕಾಡ್ತಾ ಇದೆ. ನೀವು ಅದನ್ನು ನಿವಾರಿಸಲು ಪ್ರಯತ್ನಿಸ್ತಾ ಇರ್ತೀರಾ ಯಾವಾಗ್ಲೂ !
  ಆದ್ರೆ it’s waste of time!

  ಒಬ್ಬ ಹುಡುಗ ಒಂದು ಪುಟ್ಟ ಹುಡುಗಿಯನ್ನು ಮುದ್ದಿಸ್ತಾ ಇದ್ರೆ ಕೆಲವರಿಗೆ ’ಪಾಪ ಅವನಿಗೆ ಮಕ್ಕಳನ್ನು ಕಂಡ್ರೆ ತುಂಬಾ ಪ್ರೀತಿ ಅಂತ ಕಾಣ್ಸುತ್ತೆ ’ ಅಂತಾರೆ. ಆದ್ರೆ ಅದೇ ದೃಶ್ಯ ನೋಡಿ ಕೆಲವರು ’ಛೆ ಮೈಕಲ್ ಜಾಕ್ಸನ್ ಥರ ಚಿಕ್ಕ ಮಕ್ಕಳನ್ನೂ ಬಿಡಲ್ಲ ಕಳ್ ನನ್ ಮಗ ಅಂತಾರೆ ’.

  ನೋಡುವವವರ ದೃಷ್ಟಿಯನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ.
  ನಿಮ್ಮ ಪಾಡಿಗೆ ನೀವು ಬರೆಯಿರಿ .ಎಲ್ಲಾದಕ್ಕೂ ಸಮರ್ಥನೆ ನೀಡ್ತಾ ಇದ್ರೆ ಈ ಜನ್ಮ ಸಾಕಾಗಲ್ಲ ಬಿಡಿ.

 3. ನಿಜ, ಸಂದೀಪ್.
  ಆದರೂ, ಬೇರೆಯವರು ಹೊರಿಸುವ ನಾನಲ್ಲದ ನನ್ನತನವನ್ನ ಒಪ್ಪಿಕೊಳ್ಳೋದಕ್ಕೆ ಬೇಸರವಾಗತ್ತೆ. ಅಸಲು ವಿಷಯ ಬಿಟ್ಟು ಹೀಗೆ ವೈಯಕ್ತಿಕ ಸಂಗತಿಗಳ ತಗಾದೆ ತೆಗೆದರೆ ಏನು ಮಾಡೋಕಾಗತ್ತೆ ಹೇಳಿ?
  ಆದರೂ, ನಿಮ್ಮ ಸಲಹೆಯನ್ನ ಪರಿಗಣಿಸ್ತೇನೆ. ಇನ್ನು ಮುಂದೆ ಸಮಜಾಯಿಶಿ ಕೊಡದಿರಲು ಪ್ರಯತ್ನಿಸ್ತೇನೆ.

  ಸುಪ್ರೀತ್,
  ನಿಜ. ಬೇಸರವಾಗೋದು ಅದಕ್ಕೇ. ಬಿಡು. ಇದಕ್ಕೆ ಮದ್ದಿಲ್ಲ. ಇವತ್ತು ನನಗೆ ನಾನೇ ಪ್ರಮಾಣ ಮಾಡ್ಕೊಂಡಿದೇನೆ. ವಿಷಯಕ್ಕೆ ಸಂಬಂಧಿಸದ ವೈಯಕ್ತಿಕ ದಾಳಿಯ ಕಮೆಮ್ಟುಗಳನ್ನು ಇನ್ನು ಮುಂದೆ ಅಪ್ರೂವ್ ಮಾಡೋದಿಲ್ಲ, ಉತ್ತರಿಸೋದೂ ಇಲ್ಲ. ಸರಿ ಅಲ್ವಾ?

 4. ಎಲ್ಲರಿಗೂ ತಮಗೆ ಮುಳ್ಳು ನಾಟಿದಾಗಲೆ ನೊವು ಆಗುವುದು, ಖಂಡನೆಗೆ ಎಲ್ಲ ಜಾತಿಯ ಭಯೊತ್ಪಾದಕರು ಅರ್ಹರೆ, ಹಾಗೆಯೇ ಭಯೊತ್ಪಾದಕರಿಗೆ ಜಾತಿಯಿಲ್ಲ ಎಂದು ಬುದ್ದಿಜೀವಿಯ ಹಾಗೆ ಮಾತನಾಡಲಾರೆ, ಎಲ್ಲರಿಗೂ ಜಾತಿಗಳಿವೆ ಊರಿನ ಸುದ್ದಿ ಬಂದಾಗ ಒಬ್ಬ ಊರಿನ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರೆಂದರೆ ಎಲ್ಲ ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರಲ್ಲ. ಆದರೆ ಸರಾಸರಿಯಲ್ಲಿ ಕೆಟ್ಟವರ ಸಂಖ್ಯೆ ಜಾಸ್ತಿ ಬಂದರೆ “ಹೆಚ್ಚಿನ ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರು” ಎಂದಾಗುತ್ತದೆ, ಅದೇ ಬರಬರುತ್ತಾ “ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರು”…ಎಂದಾಗೆ ಒಮ್ಮೆ “ಎಲ್ಲ ಊರ ಗೌಡ, ಸ್ವಾಮಿ, ಶಾನಭೋಗರು ಕೆಟ್ಟವರು” ಎಂದಾಗುತ್ತದೆ.

  ಮತ್ತು ಉದಾಹರಣೆ ಎಂದರೆ “ಕಿತ್ತೂರು ಸಂಸ್ಥಾನ”ಕ್ಕೆ ಮೋಸಮಾಡಿ ದ್ರೋಹದಿಂದ ಚೆನ್ನಮ್ಮನನ್ನು ಸೇರೆ ಹಿಡಿಸಿದ ಮಲ್ಲಪ್ಪ ಶೆಟ್ಟಿಯಿಂದಾಗಿ, ಇವತ್ತಿಗೂ ಗೆಳೆಯರೊಡನೆಯ ಜಗಳಗಳಲ್ಲಿ, ಮಾತಿನ ಚಕಮಕಿಗಳಲ್ಲಿ ನಾನೂ ಕೂಡಾ ‘ಮಲ್ಲಪ್ಪ ಶೆಟ್ಟಿಯೇ” ಎನ್ನುತ್ತಾರೆ, ಅದು ನಮ್ಮ ನಮ್ಮ ಕರ್ಮವಷ್ಟೆ, ಆ ಹೆಸರನ್ನು ಕಳೆದುಕೊಳ್ಳಲು ನಾನು ಮತ್ತು ‘ಈ’ ಹೆಸರನ್ನು ಕಳೆದುಕೊಳ್ಳಲು ನಾವೇನು ಮಾಡಬೇಕು ಎನ್ನುವುದಷ್ಟೆ ಪ್ರಶ್ನೆ?

  ಉತ್ತರ ಹೂದುಕೋಣ, ಎಲ್ಲರೂ ಒಂದಾಗಿ..

  ಪ್ರೀತಿಯಿರಲಿ

  ಶೆಟ್ಟರು, ಮುಂಬಯಿ

 5. ಇಲ್ಲೊಬ್ಬ ಓದೀ ಕೇಳೀ ಬೇಜಾರಾಗಿ, ಈ ಹಾಡು ಗುನುಗುತ್ತಾ ಇದಾನೆ ನೋಡಿ,

  ಯ್ಯಾರೇ ಕೂಗಾಡಲಿ.. ಊರೇ ಹೋರಾಡಲಿ.. ನಿನ್ನ ನೆಮ್ಮದಿಗೆ ಭಂಗವಿಲ್ಲ.. ಎಮ್ಮೇ ನಿನಗೆ ಸಾಟಿಯಿಲ್ಲ.. ಬಿಸಿಲು ಮಳೆಗೆ ಬಿರುಗಾಳಿ ಚಳಿಗೆ ನೀ ಅಳುಕದೇ ಮುಂದೇ ಸಾಗುವೇ.. ಅರೆ ಹುಂಯ್ ಅರೆ ಹುಂಯ್ ಅರೆ ಹುಂಯ್ ಅರೆ ಹುಂಯ್ ಟುರ್ರ್ರಾಆಆಅ..

 6. ಪೀರ್ ಬಾಷಾ, ಅವರೆ, ಬರೀ ಗುಜರಾತ್ ಭ್ರೂಣ ತ್ರಿಶೂಲ ಹುಡುಕುವ ನೀವೇಕೆ, ಸ್ವಂತ ಅಣ್ಣನಂತೆ ಕಂಡವನಿಂದಲೆ ಅತ್ಯಾಚಾರಕ್ಕೊಳಗಾದವಳ ಬಗ್ಗೆ ಸೊಲ್ಲೆತ್ತುವುದಿಲ್ಲ? ಗುಜರಾತ್ಗಿಂತ ಹೇಯವಾಗಿ ಕಾಶ್ಮೀರಗಳನ್ನು ನರಮೇಧ ಮಾಡಿ ಶತಶತಮಾನಗಳಿಂದ ಬಾಲಿ ಬದುಕಿದ್ದ ಒಂದು ಜನಾಂಗವನ್ನೆ ಹೆಳ ಹೆಸರಿಲ್ಲದಂತೆ ಅಲ್ಲಿಂದ ಅವರ್ ಆಸ್ತಿ ಪಾಸ್ತಿ ಹಣ ಅಂತಸ್ತು ಎಲ್ಲ ಕಿತ್ಕೊಂಡು ಓಡಿಸಿದವರು ನಿಮಗೇಕೆ ಕಾಣಲಿಲ್ಲ. ಮಾಲೆಗಾವ್, ಕಂಧಮಾಲ್ ಗುಜರಾತ್ ನರಮೇದ ಮಾತ್ರ ನಿಮ್ಮ ಕಣ್ಣಿಗೆ ಕಾಣುತ್ತಲ್ಲ? ಗೋಧ್ರಾ, ಅಸ್ಸಾಂ ಸ್ಪೋಟ, ಸ್ವಾಮೀಜಿ ಹತ್ಯೆ ಕಾಶ್ಮೀರದ ನರಮೇಧಕ್ಕೆ ಯಾಕೆ ಜಾಣ ಕುರುಡು?
  ಹೌದು ಹಿಂದೂ ಉಗ್ರಗಾಮಿ ಸಿದ್ದವಾಗುತ್ತೆ ಅದರ ಕಾರಣ ಕರ್ತರು ಹಿಂದೂಗಳೋ ಮೂಲಭೂತವಾದಿ ಭಯೋತ್ಪಾದಕರನ್ನು ಮನೆಗಳಲ್ಲಿ ಬಚ್ಚಿಟ್ಟುಕೊಂಡು ಆಶ್ರಯ ನೀಡುತ್ತಿರುವ ಮುಸಲ್ಮಾನರೋ?

 7. “ಮಾತು ಮಾತು ಮಾತು ನಾವು ಮಾತನಾಡಬೇಕು” ?? ಏನ್ರೀ ಇದು?.. ಪರುಶುರಾಮ ಕಲಾಲರೇ, ಬರೇ ಮಾತಿನಿಂದೇನೂ ಆಗೋದಿಲ್ಲ. ಗಾಂಧೀಜಿಯವರು ಕೇವಲ ಮಾತನಾಡುತ್ತಾ ಕುಳಿತಿರಲಿಲ್ಲ. ಪ್ರತಿಭಟನೆಗೆ ರಸ್ತೆಗಿಳಿದಿದ್ದರು. ದೇಶಕ್ಕೆ ಮಾತಿನ ಮಲ್ಲರಲ್ಲ, ಕಾರ್ಯಸಾಧಕರು ಬೇಕು.

 8. ಯಾರ್ಯಾರಿಗೆ ಯಾವ್ಯಾವುದು ಹ್ಯಾಗೆ ಹೇಳಿದರೆ ಅರ್ಥವಾಗುತ್ತೋ ಅವರಿಗೆ ಅದೇ ಭಾಷೆಯಲ್ಲಿ ಉತ್ತರ ಕೊಡಬೇಕು… ಪಾಕಿಸ್ತಾನದೊಂದಿಗೆ ಇಷ್ಟು ವರ್ಷ ಮಾತನಾಡಿದ್ದು ಸಾಕು… ಮಾತಡಿ ಕೈಕುಲುಕಿ ಫೋಟೋ ತೆಗೆಸಿಕೊಂಡು ವಿಮಾನವೇರಿದ ಬೆನ್ನಲ್ಲೇ ಇಲ್ಲಿ ನರಮೇಧ ನಡೆಯೋದೂ ಸಾಕು…
  ಚೇತನಾ ಅವರೆ ಸರಿಯಾಗಿ ಹೇಳಿದ್ರಿ ‘ಜಾಣನಿಗೆ ಮಾತಿನ ಪೆಟ್ಟು… ದಡ್ಡನಿಗೆ ದೊಣ್ಣೆ ಪೆಟ್ಟು…’ ಅವರಿಗೆ ಪೆಟ್ಟಿನ ಭಾಷೆ ಬಿಟ್ರೆ ಬೇರೆ ಅರ್ಥ ಆಗೊಲ್ಲ.

  ನಾವು ಹ್ಯಾಗೆ ಪ್ರತಿಕ್ರಿಯೆ ತೋರ್ಬೇಕು ಅನ್ನೋದಕ್ಕೆ ನಂಗೆ ಬಹಳ ಹಿಂದೆ ಓದಿದ ಮಕ್ಕಳ ಕಥೆ ಒಂದು ನೆನಪಿಗೆ ಬರ್ತಾ ಇದೆ. ಸನ್ಯಾಸಿಯೊಬ್ಬ ಹಾವನ್ನು ಸಾಧು ಪ್ರಾಣಿ ಮಾಡ್ಬೇಕು ಅಂತ ಅದಕ್ಕೆ ಉಪದೇಶ ಮಾಡಿ ,ಅದರ ಮನಃ ಪರಿವರ್ತನೆ ಮಾಡಿ ಅದು ಯಾರನ್ನೂ ಕಚ್ಚದ ಹಾಗೆ ಮಾಡಿದ್ನಂತೆ. ಹಾಗೆ ಉಪದೇಶ ಮಾಡಿ ದೇಶಾಂತರ ಹೋದನಂತೆ. ಅವನು ವಾಪಸ್ಸು ಬಂದು ನೋಡೋವಾಗ ಹಾವಿನ ಮೈಯೆಲ್ಲ ಗಾಯವಾಗಿ, ಸಾಯೋ ಸ್ಥಿತಿಯಲ್ಲಿ ಇತ್ತಂತೆ. ಏನೆಂದು ವಿಚಾರಿಸಿದಾಗ ಚಿಕ್ಕ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರೂ ಅದಕ್ಕೆ ಕಲ್ಲು ಹೊಡೆದು, ಹಿಂಸೆಕೊಟ್ಟು ಅದು ಆ ಸ್ಥಿತಿಗೆ ಬರೋ ಹಾಗೆ ಮಾಡಿದ್ರಂತೆ. ಅದಕ್ಕೆ ಸನ್ಯಾಸಿ ಹೇಳಿದ್ನಂತೆ…’ಅಯ್ಯೋ ಮಂಕೆ… ಕಚ್ಚಬೇಡ ಅಂತ ನಾ ಹೇಳಿದೆನೆ ಹೊರತು, ನಿನ್ನ ರಕ್ಷಣೆ ನೀ ಮಾಡಿಕೊಳ್ಳಬೇಡ ಅಂತ ಹೇಳಿದ್ನಾ? ಕಚ್ಚೋದು ಬ್ಯಾಡ.. ಕೊನೆಪಕ್ಷ ನೀನು ಬುಸುಗುಟ್ಟಿದ್ರೆ ಸಾಕಿತ್ತಲ್ಲ’

  ಹಾಗೇ ನಾವೇನೂ ಅವರ ಹಾಗೆ ಪಾಕಿಸ್ಥಾನಕ್ಕೆ ತೆರಳಿ ಭಯೋತ್ಪಾದನೆ ಮಾಡಬೇಕಾಗಿಲ್ಲ. ಆದ್ರೆ ಕಡೇ ಪಕ್ಷ ಬುಸುಗುಟ್ಟಿ ನಮ್ಮ ರಕ್ಷಣೆಯಾದ್ರೂ ಮಾಡಿಕೊಳ್ಳಬೇಕಲ್ಲ

 9. ಚೇತನಾ ಸೇರಿದಂತೆ ಅನೇಕರು ನನ್ನ ಮಾತಾಡಲೇ ಕುಳಿತರಬೇಕೇ? ಎಂದು ಕೇಳಿದ್ದಾರೆ. sಸಂದೀಪ್ ಕಾಮತ್ ಎಂಬುವರಂತೂ ತಾಜ್ ಹೊಟೇಲ್‌ಗೆ ನಾನೇ ಹೋಗಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ.
  ಇದನ್ನು ಉಡಾಫೆ ಎಂದು ತೆಗೆದುಕೊಳ್ಳಬಹುದು. ಆದರೆ ನಾನು ಹಾಗೇ ಮಾಡುವುದಿಲ್ಲ.
  ಮಾತು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಭಯೋತ್ಪಾದನೆ, ಮೂಲಭೂತವಾದ ಎನ್ನುವುದು ಒಂದು ಐಡಿಯಾಲಾಜಿ. ಐಡಿಯಾಲಾಜಿಯನ್ನು ಮಾತಿನಿಂದಲೇ ಸೋಲಿಸಬೇಕು ಎನ್ನುವುದು ನನ್ನ ಮುಖ್ಯವಾಗಿ ಹೇಳಬೇಕಿತ್ತು. ಮಾತು ಬೇರೆ ಕೃತಿ ಬೇರೆ ಎಂದು ನಾನು ತಿಳಿದುಕೊಂಡಿಲ್ಲ. ಬುದ್ಧನಿಗೆ ಭೋದಿವೃಕ್ಷದ ಕೆಳಗೆ ಕುಳಿತೊಡನೆ ಜ್ಞಾನೋದಯವಾಗಲಿಲ್ಲ. ಬುದ್ಧ ಜಗತ್ತನ್ನು ನೋಡಿದ. ಜಗದಗಲ ಓಡಾಡಿದ. ತನ್ನ ಈ ಕೃತಿಯ ಮೂಲಕವೇ ಆತನಿಗೆ ಜ್ಞಾನ ಪ್ರಾಪ್ತವಾಯಿತು. ಆಗ ಆತನ ಮಾತಿಗೆ ಶಕ್ತಿ ಬಂತು. ಮಾತಿಗೆ ಶಕ್ತಿ ಬರುವುದು ಎಂದರೆ ಹೀಗೆ. ಪಾಕಿಸ್ತಾನ ವಿಭಜನೆಯಾದಾಗ ಉಂಟಾದ ಹಿಂಸಾಚಾರ, ದೊಂಬಿ, ಕೋಮುಗಲಭೆಯನ್ನು ಬಂದೂಕಿನಿಂದ ನಿವಾರಿಸಲು ಆಸಾಧ್ಯವಾಗಿತ್ತು. ಅಂತಹ ಸ್ಥಿತಿಯಲ್ಲಿ ಗಾಂಧೀಜಿಯವರು ತಮ್ಮ ಕೊನೆಯ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಮಾತುಕೂಡಾ ಇಲ್ಲ. ಮೌನದ ಈ ಉಪವಾಸ ಸತ್ಯಾಗ್ರಹ ಇದನ್ನೆಲ್ಲಾ ನಿಲ್ಲಿಸುತ್ತಿದ್ದೆಯೇ? ಎಂದು ಎಲ್ಲರೂ ಆಗ ಗಾಂಧೀಜಿಯವರನ್ನು ಟೀಕೆ ಮಾಡಿದ್ದರು. ಆದರೆ ಎರಡು ಮೂರು ದಿನದಲ್ಲಿಯೇ ಗಾಂಧೀಜಿಯವರ ದೇಹಸ್ಥಿತಿ ವಿಷಮಿಸುತ್ತಿದ್ದಂತೆ ಎಲ್ಲೆಡೆ ಗಾಂಧೀಜಿ ಸತ್ಯಾಗ್ರಹ ನಿಲ್ಲಿಸುವಂತೆ ಚಳವಳಿಗಳು ಪ್ರಾರಂಭಗೊಂಡವು. ನಿರ್ಜನವಾಗಿದ್ದ ಬೀದಿಗಳು ಮನುಷ್ಯರ ಮಾತಿನಿಂದ, ಐಕ್ಯ ಹೋರಾಟದಿಂದ ಜೀವಂತವಾಯಿತು. ಇಲ್ಲಿ ಗಾಂಧೀಜಿಯವರ ಮಾತಿಗೆ ಅಂತಹ ಶಕ್ತಿಯನ್ನು ನೀಡಿದರು. ಮಾತು ಬೇರೆ ಕೃತಿ ಬೇರೆ ಎಂದು ನಾನು ಎಂದೂ ನಂಬಿಲ್ಲ. ಕೃತಿಯಿಂದಲೇ ಮಾತು ಪರಿಪಕ್ವತೆ ಪಡೆಯುತ್ತದೆ. ಕೃತಿ ಎಂದರೆ ಅದೊಂದು ಅಪ್ಪಟ ಮಾನವೀಯ, ವಿಶಾಲವಾಗಿ ಎಲ್ಲವನ್ನೂ ಗ್ರಹಿಸಿ ಹೆಜ್ಜೆ ಹಾಕುವ ವಿಧಾನ. ಈ ವಿಧಾನದಲ್ಲಿಯೇ ಮಥನ ನಡೆದು ಮಾತು ಮುಖ್ಯವಾಗುತ್ತದೆ.
  ನಾವೆಲ್ಲರೂ ಭಯೋತ್ಪಾದನೆಯ ಬಗ್ಗೆ ಮಾತಿನಿಂದಲೇ ಚರ್ಚೆ ಮಾಡುತ್ತಿಲ್ಲವೇ? ಈ ಚರ್ಚೆಯಿಂದ ಸ್ವಲ್ಪಮಟ್ಟಿಗಾದರೂ ಭಯೋತ್ಪಾದನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆಯಲ್ಲವೇ? ಇದರಿಂದ ಭಯೋತ್ಪಾದನೆಗೆ ಹಿನ್ನೆಡೆಯಾದಂತೆಯೇ. ಮಾತು ಮನುಷ್ಯನ ಸಂಸ್ಕಾರವನ್ನು ಹೇಳುತ್ತದೆ. ಆತ ಯಾವ ಮಾತನಾಡುತ್ತಿದ್ದಾನೆ ಎನ್ನುವ ಮೂಲಕವೇ ಆತನ ವ್ಯಕ್ತಿತ್ವ ಹೊರ ಹೊಮ್ಮುತ್ತದೆ. ಅದು ಮುಂದಿನ ಕ್ರಿಯೆಗೆ ಮಾರ್ಗದರ್ಶಿಯೂ ಆಗಿರುತ್ತದೆ.
  ಜನರ ನಿಜವಾದ ಸಮಸ್ಯೆಗಳ ಬಗ್ಗೆ ನೀವು ದೊಡ್ಡ ರೀತಿ ಮಾತನಾಡಲು ಆರಂಭಿಸಿದರೆ ಅಥವಾ ಅಂತಹ ಚಳವಳಿಗಳು ಆರಂಭವಾದರೆ ಸುಳ್ಳು ಮಾತುಗಳು, ಮೂಲಭೂತವಾದ, ಭಯೋತ್ಪಾದನೆಯ ಭೂತಗಳು ಹಿಂದೆ ಸರಿಯುತ್ತವೆ. ಮುನ್ನೆಡೆಗೆ ಬರಬೇಕು ಇಂತಹ ಮಾತುಗಳು.
  ’ನಾವು ಮಾತನಾಡಲೇ ಬೇಕು, ಈ ನಾಡಿನ ಅಗ್ನಿ ಪರ್ವತಗಳ ಬಗ್ಗೆ, ನೋಡಿ ಬೀದಿಯ ಮೇಲೆ ರಕ್ತವಿದೆ. ರಕ್ತವಿದೆ ಬೀದಿಯ ಮೇಲೆ’ ಎಂದು ನೆರೂದ ತನ್ನ ಕವಿತೆಯಲ್ಲಿ ಹೇಳುವಂತೆ ಮಾತಿಗೆ ಇಂತಹ ಮಾಂತ್ರಿಕ ಶಕ್ತಿ ಪ್ರಾಪ್ತವಾಗುತ್ತದೆ.
  – ಪರುಶುರಾಮ ಕಲಾಲ್

 10. ಪರಶುರಾಮ ಕುಲಾಲರೇ ,
  ನನ್ನ ಮಾತಿಂದ ನಿಮಗೆ ಬೇಜಾರಾಗಿದ್ರೆ ದಯವಿಟ್ಟು ಕ್ಷಮಿಸಿ(ಆದರೆ ನನ್ನ ಮಾತಿಗೆ ನಾನು ಈಗಲೂ ಬದ್ಧ).

  ನೀವು ಹೇಳಿದ್ದು ಸ್ವಲ್ಪ ಮಟ್ಟಿಗೆ ನಿಜ.ಆದರೆ ಅದು ಥಿಯರಿ .ನಮ್ಮದೇನಿದ್ರೂ ಪ್ರ್ಯಾಕ್ಟಿಕಲ್!

  ಮಾತುಕತೆಯ ಒಂದು ಪ್ರಮುಖ ಅಂಶವೆಂದರೆ ಎದುರಿಗಿರುವವನು ಕೇಳಲು ತಯಾರಿರಬೇಕು.ನೀವು ಒಸಾಮ ಬಿನ ಲಾಡೆನ್ ನ ಕರೆಸಿ ಯಾವುದಾದರೂ ಹೋಟೇಲ್ ಗೆ ,ಹಾಗೆಯೆ ಉಳಿದ ಉಗ್ರಗಾಮಿಗಳನ್ನೂ ಕರೆಸಿ .ಒಟ್ಟಿಗೆ ಕೂತು ಮಾತನಾಡೋಣವಂತೆ.

  ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಜೆಹಾದ್ ಅಂದ್ರೇನೆ ಮಾತಿನಿಂದ ಮರುಳು ಮಾಡಿರೋದು! ಕೊನೆ ಉಸಿರಿರುವವರೆಗೆ ಕೊಲ್ಲೋದೆ ನಿಮ್ಮ ಕೆಲಸ ಅಂತ ಉಗ್ರಗಾಮಿಗಳಿಗೆ ಹೇಳಿದವರೂ ಮಾತಿನಿಂದಲೇ ಅವರನ್ನು ಮರುಳು ಮಾಡಿ ಮುಂಬೈ ಗೆ ಕಳಿಸಿರೋದು.ಇಸ್ಲಾಂ ಒಂದೇ ಶ್ರೇಷ್ಟ ಅಂತ ಅವರಿಗೆ ಮನದಟ್ಟಾಗುವ ಹಾಗೆ ಮಾಡಿರೋದೂ ಮಾತಿನಿಂದಲೆ.

  ಮಾತಿನಿಂದ ಎಲ್ಲವೂ ಸಾಧ್ಯ ಆದರೆ ’ಯಾರು ’ ಮಾತನಾಡುತ್ತಾರೆ ಅನ್ನೋದರ ಮೇಲೆ ಅವಲಂಬಿತವಾಗಿದೆ!

  ಪರಶುರಾಮ ಅಥವ ಸಂದೀಪನ ಮಾತು ಅವರಿಗೆ ಅರ್ಥ ಆಗಲ್ಲ ಅಲ್ವಾ?

 11. ಕುಲಾಲರೇ,
  ಭಯೋತ್ಪಾದನೆ ಕೇವಲ ಒಂದು ಐಡಿಯಾಲಜಿಯಲ್ಲ ಎಂಬುದನ್ನು ನಾನು ನೇರವಾಗಿ ಹೇಳಲು ಇಚ್ಚಿಸುವೆ. ಅದರ ಜೊತೆಗೇ ಮತಾಂಧ ಮೃಗೀಯತೆಯೂ ಇದೆ. ಭಯೋತ್ಪಾದನೆಯ ಐಡಿಯಾಲಜಿಕಲ್ ಮುಖವನ್ನು ಮಣಿಸುವುದಕ್ಕೆ ಮಾತು ಅತ್ಯವಶ್ಯಕ ಎಂಬುದನ್ನು ನಾನು ನಿಮ್ಮಷ್ಟೇ ಪ್ರಖರವಾಗಿ ಬೆಂಬಲಿಸುತ್ತೇನೆ. ಆದರೆ ಅದರ ಮತಾಂಧ ಮೃಗೀಯ ಮುಖಕ್ಕೆ ಮಾತಿನ ಅಂಕುಶ ಸಾಲುವುದಿಲ್ಲ.

  ಗಾಂಧೀಜಿಯವರ ಮಾತಿನ ಶಕ್ತಿಗೆ ಭಾರತದಲ್ಲಿ ಹಿಂದೂ ಮುಸಲ್ಮಾನ ದಂಗೆಯೇನೋ ನಿಂತಿತು. ಏಕೆಂದರೆ ಅದೊಂದು ಐಡಿಯಾಲಜಿಕಲ್ ಕದನವಾಗಿತ್ತು. ಆದರೆ ‘ಭಾರತದ ವಿಭಜನೆಯಾಗುವುದು ನನ್ನ ಅಸ್ಥಿಯ ಮೇಲೆಯೇ’ ಎಂಬ ಗಾಂಧಿಯ ಮಾತು ಸೋತು ಹೋಯಿತು.

  ಮಾತಿನ ಮಹತ್ವವನ್ನು ಗೌರವಿಸುತ್ತಲೇ ನಾವು ಬಂದೂಕಿನ ನಳಿಕೆಯನ್ನು ಸ್ವಚ್ಛ ಮಾಡುತ್ತಿರಬೇಕು.

  supreeth

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: