`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….


ಕನ್ನಡದ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡುಹದಿಮೂರು ವರ್ಷಗಳ ನಂತರ ಬಂದು  ವ್ಯಾಜ್ಯ ಹೂಡಿದ್ದನ್ನ ಅವರುಪರಿಸರದ ಕತೆಯಲ್ಲಿ  ಬರೆದುಕೊಂಡಿದ್ದಾರೆ.

ಇತ್ತೀಚಿಗೆ ನನ್ನ ಗೆಳೆಯನಿಗೂ ಇಂಥದೇ ಅನುಭವ ಆಯಿತು. ಅಂವ ಬರೆದ ಸಾಮತಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡ ಮಹಾಶಯರೊಬ್ಬರುನನ್ನ ಕತೆ ಯಾಕೆ ಬರೆದೆ? ನಾನೇನೂ ಅಂಥವ ಅಲ್ಲಅಂತ ಪರಸ್ಪರ ವಿರುದ್ಧಾರ್ಥದ ಮಾತಾಡಿ ತಗೋಬಿಡು ವಾದ ಹೂಡಿದ್ದರು.
ಹೀಗೇ ನನ್ನನ್ನೂ ಒಂದಿಬ್ಬರುನಮ್ಮ ಬಗ್ಗೆ ಬರೆದಿದ್ಯಂತೆ?’ ಅಂತ ವಿಚಾರಿಸಿದ್ದಿದೆ. ಆಗೆಲ್ಲ ನನಗೆ ಮಜವೋ ಮಜ ಅನಿಸತ್ತೆ. ಯಾಕೆಂದರೆ, ನಾನು ಅಂಥದ್ದೇನಾದರೂ ಬರೆದಾಗ ಯಾರುಯಾರೋ ಗುರುತು ಪರಿಚಯ ಇಲ್ಲದವರೆಲ್ಲಇದು ನನ್ನ ಕತೆ.’ ’ಇದು ನನ್ನ ಪರಿಚಿತರೊಬ್ಬರ ಕತೆಅಂದಿರ್ತಾರೆ! ಆಗೆಲ್ಲ ನಾನುಹಂಗಾರೆ ಎಲ್ರ ಮನೆ ಕತೆಯೂ ಒಂದೇಯ. ಎಲ್ರ ಮನೆ ಕಾವಲಿಯೂ ತೂತೇ!” ಅಂತ ನಿಸೂರಾಗೋದಿದೆ
.
ಮ್ಹಿಂಗೆ ಕತೆಯಾಗೋದ್ರಲ್ಲೂ ಒಂದು ಮಜ ಇದೆ. ಆದ್ರೆ, ಕತೆಯ ನಮ್ಮ ಪಾತ್ರ ಅನುಕಂಪ ತರಿಸಬಾರದಷ್ಟೆ. ಕೆಲವು ಸಾರ್ತಿ, ನಾವು ಆಗ ಹೊರಟಿದ್ದೇ ಒಂದು ಕಥೆಯಾದರೆ, ಅದು ಹಬ್ಬಿಕೊಳ್ಳುವ ಪರಿಯೇ ಬೇರೆ ರೀತಿಯದ್ದಾಗಿಬಿಡುತ್ತೆ.

                     the_storyteller

ಹೀಗೊಂದು ಜಾನಪದ ಕತೆಯಿದೆ.
ಒಬ್ಬ ಬ್ರಾಹ್ಮಣ ನದಿಯಲ್ಲಿ ಅರ್ಘ್ಯ ಕೊಟ್ಟು ಆಚಮನ ಮಾಡುವಾಗ ಅವನ ಬಾಯಿಗೊಂದು ಬಿಳಿಯ ಯಾವುದೋ ಹಕ್ಕಿಯ ಸಣ್ಣ ಗರಿ ಹೋಗಿಬಿಡುತ್ತೆ. ಗಂಟಲಲ್ಲಿ ಗುಳುಗುಳು ಆಗಿ ಅಂವ ಕ್ಯಾಕರಿಸಿ ಉಗಿದಾಗ ಗಂಟಲಿಂದ ರೆಕ್ಕೆ ಹೊರ ಬಂದು ಬೀಳುತ್ತೆ. ಗಾಬರಿಯಿಂದ ಅಂವ ಮನೆಗೆ ಬಂದು ಹೆಂಡತಿ ಹತ್ತಿರ, “ಯಾರಿಗೂ ಹೇಳ್ಬೇಡ ಕಣೇ. ಇವತ್ತು ನಾನು ಉಗಿದಾಗ ಗಂಟಲಿಂದ ಬಿಳಿಯ ಪುಟಾಣಿ ರೆಕ್ಕೆ ಹೊರಬಿತ್ತು! ಏನು ಕರ್ಮವೋ, ಕೊಂಚ ಗೋಮೂತ್ರ ತೆಗೆದಿಡು. ಶುದ್ಧಿಯಾಗಿಬಿಡ್ತೀನಿಅಂದ. ಅಂವ ಹೇಳಿದಂತೆ ಮಾಡಿ, ಒಂದು ರಾತ್ರಿಯಿಡೀ ಅವನ ಹೆಂಡತಿ ಗುಟ್ಟು ಬಚ್ಚಿಟ್ಟುಕೊಂಡು ಹೊರಳಾಡಿದಳುಮಾರನೇ ದಿನ ತಡೆಯಲಾರದೆ ನೆರೆ ಮನೆಯವಳ ಬಳಿಯಾರಿಗೂ ಹೇಳಬೇಡ್ರೀ, ನನ್ನ ಗಂಡ ನೆನ್ನೆ ಉಗಿದಾಗ ಅವರ ಗಂಟಲಿಂದ ದೊಡ್ಡ ದೊಡ್ಡ ಕೊಕ್ಕರೆ ರೆಕ್ಕೆಗಳು  ಹೊರಬಂದವಂತೆ!” ಅಂದಳು
!!
ಸೈ. ಪಕ್ಕದ ಮನೆಯವಳೂ ಒಂದು ರಾತ್ರಿ ಹೊರಳಾಡಿ ತನ್ನ ವಾರಗಿತ್ತಿಯ ಹತ್ತಿರ, ಪಕ್ಕದ ಮನೆಯವಳ ಗಂಡ ತುಪ್ಪಿದಾಗ ಒಂದು ಕೊಕ್ಕರೆ ಮರಿ ಹೊರಬಂತಂತೆ!” ಅಂದಳು
.
ಮುಗಿಯಿತು. ಮುಂದೆ ಅದು ದೊಡ್ಡದೊಂದು ಕೊಕ್ಕರೆಯಾಗಿ, ಕೊಕ್ಕರೆ ಹಿಂಡಾಗಿ, ಮತ್ತೆ ಸುತ್ತಿ ಬಳಸಿ ಬ್ರಾಹ್ಮಣನ ಕಿವಿ ತಲುಪುವ ಹೊತ್ತಿಗೆ ಅಂವ ಉಗಿದಾಗ ಗಂಟಲಿಂದ ಕೊಕ್ಕರೆಗಳು ಹಾರಿ ಹಾರಿ ಬರುತ್ತವಂತೆ ಎನ್ನುವವರೆಗೂ ಹರಡಿ ಹೋಗಿತ್ತು
!
ಅದನ್ನು ಕಣ್ಣಾರೆ ಕಾಣಲು ಅವನ ಮನೆ ಮುಂದೆ ಊರ ಜನವೆಲ್ಲ ನೆರೆಯಿತು. ಆದರೆ ಬ್ರಾಹ್ಮಣನಿಂದ ಅಂಥದ್ದೇನೂ ವಿಶೇಷ ನಡೆಯದೇ ಹೋದದ್ದು ಬೇಸರ ತರಿಸಿ, ತಮ್ಮ ತಮ್ಮ ಕತೆಯನ್ನೇ ನೆಚ್ಚಿಕೊಂಡು, ಅದನ್ನೇ ಮೆಲುಕು ಹಾಕುತ್ತ ಹೊರಟುಹೋದರು. ಆವರೆಗೂಕಥಾ ನಾಯಕನಾಗಿ ರೋಚಕತೆಯಿಂದ ಮೆರೆಯುತ್ತಿದ್ದ ಬ್ರಾಹ್ಮಣ, ಸತ್ಯ ಸಂಗತಿ ತಿಳಿಯುತ್ತಲೇ ಸಾಧಾರಣ ವ್ಯಕ್ತಿಯಾಗಿಹೋದ.

ಹೀಗೆ ಕಥೆಯಾಗುವ, ಕತೆಯಾಗಿಸುವ  ಎರಡು ಕ್ಯಟಗರಿಗಳ ನಡುವೆ ಕಥೆ ಕಟ್ಟುವವರದೊಂದು ಕ್ಯಟಗರಿಯಿದೆ. ಅವರ ಕತೆಗೆ ತಳಹದಿಯೇ ಇರದು. ಇದ್ದರೂ, ಅದು ಮೂಲಕ್ಕೆ ಪೂರ್ಣವಾಗಿ ವಿರುದ್ಧವಾಗಿರುತ್ತದೆ.
ಒಮ್ಮೆ ಹೀಗೊಬ್ಬಳು ಹುಡುಗಿ ನನಗೆ ಪರಿಚಯವಾಗಿದ್ದಳು. ನಾಲ್ಕು ದಿನದ ಒಡನಾಟದಲ್ಲಿ ತುಂಬ ಹತ್ತಿರವಾಗಿದ್ದಳು. ಐದನೇ ದಿನ, ’ನಿನ್ನ ನೋಡಿದ್ರೆ ನನ್ನ ಅಕ್ಕನ ನೆನಪಾಗತ್ತೆಅಂತ ಅಳಲು ಶುರುವಿಟ್ಟಳು. ಅವಳ ಅಕ್ಕನಿಗೇನಾಗಿದೆ ಅಂತ ವಿಚಾರಿಸಿದೆ. ಅವಳ ಪ್ರಕಾರ, ಅವಳ ಅಕ್ಕನನ್ನ ಯಾರೋ ಕೊಲೆ ಮಾಡಿದ್ದರು. ಆಮೇಲೆ ಅದನ್ನ ಆತ್ಮಹತ್ಯೆ ಅಂತ ಮುಚ್ಚಿ ಹಾಕಲಾಯ್ತುಅದನ್ನೆಲ್ಲ ಹೇಳಿ, “ಯಾರಿಗೂ ಹೇಳಬೇಡ್ವೇ. ಸಂಕಟ ತಡಿಯೋಕಾಗದೆ ಹೇಳ್ದೆ. ಅವಳು ಸಾಯೋ ದಿನ ನೀ ಹಾಕಿದ ಥರದ್ದೇ ಚೂಡಿದಾರ ಹಾಕಿದ್ಲು.” ಅಂದಳು. ನಾನೂ ಸುಮ್ಮನಾದೆ.

ಆಕೆ ಹೊರಟು ಹೋಗಿ ವಾರ ಕಳೆದರೂ ಅವಳ ಅಕ್ಕನ ಕೊಲೆ ನನ್ನನ್ನು ಕಾಡ್ತಲೇ ಇತ್ತು. ನನ್ನ ಅನ್ಯಮನಸ್ಕತೆ ಕಂಡ ಗೆಳೆಯ ಏನು ಅಂತ ವಿಚಾರಿಸಿದ. ಹುಡುಗಿ ಪರಿಚಯವಾಗಿದ್ದು ಅವನಿಂದ್ಲೇ ಆದ್ದರಿಂದ ಅವಳು ಹೇಳಿದ ಕತೆ ಹೇಳಿದೆ. ಅಂವ ಬಾಯಿ ಕಟ್ಟಿದಹಾಗೆ ಸುಮ್ಮನುಳಿದುಬಿಟ್ಟ.
ಕೊನೆಗೆ ನೋಡಿದರೆ, ಅವಂಗೂ ಹುಡುಗಿ ಅದೇ ಕಥೆ ಹೇಳಿದ್ದಳು. ಯಾರಿಗೂ ಹೇಳಬೇಡ ಅಂದಿದ್ದಳು. ಅವರ ಮನೆಗೆ ಹೋದಾಗ ಅವನ ತಂಗಿಯನ್ನ ನೋಡಿ, ನನ್ನ ಅಕ್ಕ ಹೀಗೇ ಇದ್ಲು ಅಂದಿದ್ದಳು, ಸಾಯೋ ದಿನ ಥರದ್ದೇ ಚೂಡಿ ಹಾಕಿದ್ದಳು ಅಂತಲೂ ಹೇಳಿದ್ದಳು
!!
ಆಮೇಲೆ ಅವಳ ಊರಿನ ಗೆಳೆಯರನ್ನ ವಿಚಾರಿಸಿದಾಗ ಅಸಲು ವಿಷಯ ತಿಳಿಯಿತು
.
ಅವಳ ಅಕ್ಕ ಸತ್ತಿದ್ದು ನಿಜವೇ ಆಗಿತ್ತು. ಆದರೆ ಅವಳು ಹೇಳಿದ ಹಾಗೆ ಅದು ಕೊಲೆಯಾಗಿರಲಿಲ್ಲ. ಆಕೆ ಸಾಯುವ ಹಿಂದಿನ ದಿನ ಅಕ್ಕತಂಗಿಗೆ ಏನೋ ವಿಷಯಕ್ಕೆ ರಾದ್ಧಾಂತವಾಗಿತ್ತಂತೆ. ತಂಗಿಯಿಂದ ಕೆಟ್ಟದಾಗಿ ಬೈಸಿಕೊಂಡ ಅಕ್ಕನ ಮನಸ್ಸು ತೀರಾ ನೊಂದುಹೋಗಿತ್ತಂತೆ. ಆಕೆ ಹೀಗೆನಾನು ಸಾಯುತ್ತಿದ್ದೇನೆಅಂತ ಬರೆದಿಟ್ಟೇ ಸತ್ತಿದ್ದಳಂತೆ. ತಂಗಿಗೆ ಆಮೇಲಾಮೇಲೆ ಗಿಲ್ಟು ಕಾಡಲು ಶುರುವಾಗಿ, ಅದು ಯಾರೋ ಮಾಡಿದ ಕೊಲೆ ಅಂತೆಲ್ಲ ಕತೆ ಕಟ್ಟಿಕೊಂಡು ತಿರುಗುತ್ತಿದ್ದಳು
.
ಗೆಳೆಯರು, ಅವಳ ಉಸಾಬರಿಗೆ ಹೋಗಬೇಡಿ  ಅಂದರು. ನಾನು ಮಾತ್ರ, ಅವಳಿಗೆ ಮಾನಸಿಕ ತೊಂದರೆ ಆಗಿರಬಹುದಾ ಅಂತ ಯೋಚಿಸುತ್ತ ಉಳಿದೆ.

ಕೆಲವೊಮ್ಮೆ ನನಗೆ ಕತೆ ಮತ್ತು ಕಥೆಯ ವ್ಯತ್ಯಾಸ ಕಾಡೋದಿದೆ. ವ್ಯಾಕರಣ ವಿದ್ವಾಂಸರು ಕೊಡೋ ಉತ್ತರಗಳು ಗಹನವಗಿರುತ್ತವಾದ್ದರಿಂದ ಅದರ ಗೋಜಿಗೆ ನಾನು ಹೋಗಿರಲಿಲ್ಲ.

ತದ್ದಲಸೆ ವಿನಾಯಕ ಭಟ್ಟರುಸ್ವಾಹಾಕಥಾ ಸಂಕಲನದಲ್ಲಿಕಥೆಮತ್ತುಕತೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಅವರು ಅಲ್ಲಿ ಹೇಳಿರುವ ಒಟ್ಟಾರೆ ಅರ್ಥಎಂದೋ ನಡೆದಿದ್ದರ ನಿರೂಪಣೆ, ’ಕಥೆ’. ಹೀಗೇ ಯಾವುದೋ ಎಳೆಯ ಮೇಲೆ ಸುಮ್ಮಸುಮ್ಮನೆ ಹುಟ್ಟಿಸಿಕೊಂಡು ಹೆಣೆಯೋದು  ’ಕತೆ’.
ಆದರೆ ಕೆಲವೊಮ್ಮೆ ಕಥೆಯೇ ರೆಕ್ಕೆ ಪುಕ್ಕ ಹಚ್ಚಿಕೊಂಡು ಕತೆಯಾಗಿಬಿಡೋದಿದೆ. ಆಗೆಲ್ಲ ಬದುಕಿನ ಗಾಂಭೀರ್ಯ ಲಘುತ್ವವನ್ನನುಭವಿಸಿ ಗೇಲಿಯ ವಸ್ತುವಾಗಿಬಿಡೋದಿದೆಇದು ನಮ್ಮ ನಿಮ್ಮ ಜೀವನದಲ್ಲೂ ಸಾಕಷ್ಟು ಬಾರಿ ಅನುಭವಕ್ಕೆ ಬಂದಿರಬಹುದು
.
ಹೀಗೇ, ಕೆಲವೊಮ್ಮೆಕಥೆಯಾಗ ಹೊರಟವರುಕತೆಯಾಗಿಬಿಡುತ್ತಾರೆ. ಏನನ್ನೋ ಸಾಧಿಸ ಹೊರಟವರು ಜನರ ಬಾಯಿಗೆ ಬಿದ್ದು ಹಗುರಾಗಿಬಿಡುತ್ತಾರೆ
.
ಅದಕ್ಕಿಂತ ದುರಂತ ಬೇರೊಂದಿಲ್ಲ. ಅಲ್ಲವೇ?

( ಇದು ಹಳೆಯ ಬರಹ. ಇದೇ ಬ್ಲಾಗಲ್ಲಿ ಬಹಳ ಹಿಂದೆ ಹಾಕಿದ್ದು. ಬ್ಲಾಗ್ ಡಿಲೀಟ್ ಮಾಡಿದ್ದೆನಲ್ಲ, ಅದಕ್ಕೆ ಮುಂಚೆ ಬರೆದಿದ್ದ ಕೆಲವನ್ನ ಮತ್ತೆ ಇಲ್ಲಿ ಹಾಕೋಣವೆನಿಸಿತು. ಗೆಳೆಯರಾದ ಗುರು ಮತ್ತು ವೀಣಾ ಕೊಟ್ಟ ಐಡಿಯಾದಂತೆ ಈ ತಂಗಳನ್ನು ಮತ್ತೆ ಬಡಿಸುತ್ತಿರುವೆ. ಇಷ್ಟವಾದ್ರೆ, ಅವ್ರಿಗೆ ಥ್ಯಾಂಕ್ಸ್ ಹೇಳಿ. ಇಲ್ಲವಾದ್ರೆ ಅವ್ರನ್ನೇ ಚೆನ್ನಾಗಿ ಬಯ್ಕೊಳಿ! )

One thought on “`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….

  1. ನೀವು ಬ್ಲಾಗ್ ಡಿಲೀಟ್ ಮಾಡಿದ್ದೆ ಗೊತ್ತಿರಲಿಲ್ಲ.. ಹೋಗ್ಲಿ ಬಿಡಿ..

    ಕಥೆ ಅನ್ನೋದು ಸಂಸ್ಕೃತ ಪದ, ಕತೆ ಅನ್ನೋದು ಅದರ ತದ್ಭವ ರೂಪ… ಅಷ್ಟೆ ಅನ್ನೋದು ನನ್ನ ಅನಿಸಿಕೆ.. ವಿನಾಯಕ ಭಟ್ಟರ ವಾದ ಯಾಕೋ ಸರಿ ಕಾಣುತ್ತಿಲ್ಲ.

ಟಿಪ್ಪಣಿಗಳನ್ನು ನಿಲ್ಲಿಸಲಾಗಿದೆ.

Blog at WordPress.com.

Up ↑

%d bloggers like this: