ಪುಂಡಾಟಿಕೆ ಬಗ್ಗೆ ಮಾತಾಡಿ ಅಂದ್ರೆ, ‘ನೀವು ಕುಡೀತೀರಾ?’ ಕೇಳ್ತಾರೆ!


ಪ್ರತಿಕ್ರಿಯೆ ಅಂತ ಬರೆದಿದ್ದನ್ನೆಲ್ಲ ಚರ್ಚೆ ಅಂತ ಹಾಕಿಬಿಡೋದು ಸರಿಯಾ? ಅಂತ ಕೇಳಿದ್ದಾರೆ ವಿಕಾಸ್. ಯಾವುದೇ ಒಂದು ವಿಷಯಕ್ಕೆ ವಿಭಿನ್ನ  ಅಥವಾ ಪೂರಕ ಪ್ರತಿಕ್ರಿಯೆಗಳು ಬರತೊಡಗಿದಾಗ ಅದು ಚರ್ಚೆಯ ರೂಪ ಪಡಕೊಳ್ಳುತ್ತದೆ ಅನ್ನೋದು ನನ್ನ ಅನಿಸಿಕೆ. ಅದು ಸರಿಯೇ ಅನ್ನುವುದನ್ನ ತಿಳಿದವರು ಹೇಳಬೇಕಷ್ಟೆ.
ಮತ್ತಷ್ಟು ಚಿಂತನಾರ್ಹ ಕಮೆಂಟುಗಳೊಂದಿಗೆ ಈ ಚರ್ಚೆ ಮುಂದುವರೆದಿದೆ.  ಜೊತೆಗೆ, ಸಂಕೇತ್ ಬರೆದಿರುವ ‘ಸಂರಕ್ಷಕನೆ’ ಎನ್ನುವ ಸ್ವಾರಸ್ಯಕರ- ಅರ್ಥಪೂರ್ಣ ಲೇಖನದ ಲಿಂಕ್ ಮತ್ತು ಮೌನ ಕಣಿವೆಯ ಒಂದು ಲೇಖನದ ಲಿಂಕ್ ಕೊಟ್ಟಿರುವೆ.

ಮತ್ತೊಂದು ಮಾತು… 

ಸಹಬ್ಲಾಗಿಗರೊಬ್ಬರು ಈ ವಿಕೃತಿಯನ್ನು ಸಮರ್ಥಿಸಿಕೊಂಡು  ಬರೆದಿದ್ದಾರೆ. ವಿಕಾಸ್ ಅದರ ಲಿಂಕ್ ಕೊಟ್ಟಿದ್ದರು. ನಾನು ಅದನ್ನು ಸಮ್ಮತಿಸುವುದಿಲ್ಲವಾದ್ದರಿಂದ ಅದನ್ನು ಕಮೆಂಟ್ ಲಿಸ್ಟಿಂದ ಡಿಲೀಟ್ ಮಾಡಿಬಿಟ್ಟಿದೇನೆ.

ಇದರೊಂದಿಗೆ ಈ ಚರ್ಚೆ ಮುಗಿಸುವ ಇರಾದೆಯಿದೆ.

~

ವಿಕಾಸ,
ನಾನು ಅಕ್ಷರವಿಹಾರ ಓದಿದೆ. ಜೈಲಿಗೆ ಹೋಗಿರುವ ಸೇನೆಯವರ ಮನೆಯವರ ಬಗ್ಗೆ, ಚರ್ಚು ಮುರಿದವರ ಬಗ್ಗೆ ಸಂತಾಪ ವ್ಯಕ್ತಪಡಿಸುವ ತಮ್ಮ ಸ್ನೇಹಿತ ಮಹಾಶಯರಿಗೆ ಆ ಧರ್ಮಾಂಧರು ಮಾಡಿರುವ ಕೆಲಸದ ಕರ್ಮಾಂತರಗಳ ಬಗ್ಗೆ , ಅವರು ಮುರಿದಿರುವ ಮನಸ್ಸುಗಳ ಬಗ್ಗೆ ಅರಿವೇ ಇದ್ದಂತಿಲ್ಲ. ಅವರಿಗೆ ವಿವೇಚನೆಯಿಂದ ಒಂದು ಘಟನೆಯೆಡೆ ನೋಡುವ, ವಿಶ್ಲೇಷಿಸುವ ಶಕ್ತಿಯೆ ಹೊರಟುಹೋಗಿದೆ ಅನ್ನಿಸ್ತಿದೆ. ಸಾಧ್ಯವಾದರೆ ಅವರಿಗೆ ಸ್ನೇಹಿತ ಮಯೂರ ಕಳಿಸಿರುವ ಈ ಕ್ಜೆಳಗಿನ ಲಿಂಕು ಕೊಡಿ. ಹೆಣ್ಣುಮಕ್ಕಳ ಮೇಲೆ ಹಲ್ಲೆಯಾದರೆ ಅದನ್ನು ಪ್ರತಿಭಟಿಸುವವರು ನಿಮ್ಮ ಸ್ನೇಹಿತರ ಪ್ರಕಾರ ಬಾಯಿಬಡಾಯಿ ಮಾಡುವ ಫೆಮಿನಿಸ್ಟರು. ದಾಳಿಯನ್ನು ಪ್ರತಿಭಟಿಸುವವರ ಮನೆಯ ಹೆಣ್ಣುಮಕ್ಕಳು ಕೂಡ ನಾಳೆ ಪಬ್ಬಿನಲ್ಲಿ ಸಿಗಬಹುದು ಎಂದು ಉಡಾಫೆಯಾಗಿ ಮಾತನಾಡುವ ಇವರು ನಾಳೆ ಇವರ ಮನೆಯ ಹೆನ್ಣುಮಕ್ಕಳನ್ನು ಯಾರಾದರು ಛೇಡಿಸಿದರೂ ಸುಮ್ಮನಿರುವರೆ? ನನ್ನ ಪ್ರಕಾರ ನಿಮ್ಮ ಸ್ನೇಹಿತನಿಗೆ ಹಗಲುಕುರುಡು.ವಿಕಾಸ್, ದಯವಿಟ್ಟು ಯಾರೊ ಹೇಳಿದ್ದನ್ನೆಲ್ಲ ಸರಿ ಅನ್ನುವುದು, ಅದಕ್ಕೆ ವಿಶ್ಲೇಷಣೆಯ ಹೆಸರು ಕೊಡುವುದನ್ನ ಬಿಟ್ಟು ಆಗಿದ್ದು ಸರಿಯೊ ತಪ್ಪೊ ನಿಮ್ಮ ಸ್ವಂತ ಅಭಿಪ್ರಾಯ ತಿಳಿಸಿ . ಓದಿದ ಮೇಲೂ ನಿಮ್ಮ ಸ್ನೇಹಿತ ತನ್ನ ವಿತಂಡವಾದವನ್ನ ಬಿಡಲಾರರೆಂದು ತಿಳಿದಿದ್ದೂ ಈ ಪ್ರಯತ್ನ ಮಾಡುತ್ತಿದೇನೆ.
http://www.hindu.com/2009/01/27/stories/2009012759421000.htm
ವಿಷಾದದೊಡನೆ, ಟೀನಾ.

~

ಅಕ್ಕಾ,
ಮಾಡರೇಟ್ ಮುಸ್ಲೀಮರು ಎಂಬ ಒಂದು ಸಂಕೀರ್ಣವಾದ ವರ್ಗವೊಂದರ ತಲ್ಲಣಗಳ ಬಗ್ಗೆ ಹೆಚ್ಚು ಸ್ಪಷ್ಟವಾದ ಸಂಗತಿಗಳು ಈಗೀಗ ಕಾಣಿಸತೊಡಗಿವೆ. ಮಲೆಗಾವ್‌ನಲ್ಲಿ ಬಾಂಬ್ ಸ್ಪೋಟಿಸಿದ್ದು ಹಿಂದೂ ಸಂಘಟನೆಯವರು. ಹಿಂದುತ್ವದ ರಕ್ಷಣೆಯಲ್ಲಿ ನಿಂತವರು ಚರ್ಚುಗಳ ಮೇಲೆ ದಾಳಿ ಮಾಡುವರು. ಪಬ್ ಹಿಂದೂ ಸಂಸ್ಕೃತಿಯನ್ನು ಹಾಳುಗೆಡವುತ್ತದೆ ಎಂದು ದಾಳಿ ಮಾಡುವರು. ನಾವು ಅವರನ್ನು ಚುನಾಯಿಸಿದ್ದೇವಾ, ನಮ್ಮ ರಕ್ಷಣೆಯನ್ನು ಮಾಡುವುದಕ್ಕೆ? ನಮ್ಮ ಒಳಿತು ಕೆಡುಕು ನಿರ್ಧರಿಸುವುದಕ್ಕೆ ಅವರಿಗೇನು ಹಕ್ಕಿದೆ? ಕಾನೂನು ಕೈಗೆ ತೆಗೆದುಕೊಳ್ಳುವ ಎಲ್ಲಾ ಸಂಘಟನೆ, ವೇದಿಕೆ, ಸೇನೆಗಳಿಗೂ ಈ ಮಾತು ಅನ್ವಯವಾಗುತ್ತದೆ. ಇವರು ತಾವು ಸಂವಿಧಾನ ಬದ್ಧರಾದ ಸಂಘಟನೆಗಳು ಹೌದೋ ಅಲ್ಲವೋ ಎಂಬುದನ್ನು ಮೊದಲು ಸ್ಪಷ್ಟ ಪಡಿಸಬೇಕು. ಮುತಾಲಿಕ್‌ರನ್ನು ಬಿಡುಗಡೆ ಮಾಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸೇನೆಯ ಮುಖಂಡನೊಬ್ಬ ಸರಕಾರಕ್ಕೆ ಸವಾಲೆಸೆಯುತ್ತಾನೆಂದರೆ, ಠಾಕ್ರೆಯಂಥವರು ಇಡೀ ಪೊಲೀಸು ವ್ಯವಸ್ಥೆಯನ್ನು ನಿಷ್ಕ್ರಿಯರಾಗಿಸುತ್ತಾರೆಂದರೆ ಇವರು ಸಮಾಜ ವಿದ್ರೋಹಿ ಎಲಿಮೆಂಟುಗಳಲ್ಲದೆ ಮತ್ತೇನು?

ಈ ಘಟನೆಗೆ ಇನ್ನೊಂದು ಮುಖವೂ ಇದೆ ಎಂದು ವಾದಿಸುವ ವಿಕಾಸ್, ವಿನಾಯಕರ ವಾದ ಹಾಸ್ಯಾಸ್ಪದವೆನ್ನಿಸುತ್ತದೆ. ನಕ್ಸಲರ ಬಗ್ಗೆ ಇವರು ಬರೆದಿರುವ ಲೇಖನಗಳ ಧಾಟಿಯನ್ನು, ಬಳಸಿರುವ ಭಾಷೆಯನ್ನು ಗಮನಿಸಿದರೆ- ಅವರಿಗೆ ಯಾವ ಹೋರಾಟವನ್ನಾದರೂ ಸಂವಿಧಾನ ಬದ್ಧವಾಗಿ ನಡೆಸಬೇಕು ಎಂದು ಉಪದೇಶಿಸಿದ್ದನ್ನು ನೋಡಿದರೆ ಈಗಿನ ಅಭಿಪ್ರಾಯವು ದ್ವಂದ್ವ ನೀತಿಯಲ್ಲದೆ ಮತ್ತೇನಲ್ಲ. ಬಹುಶಃ ಈ ಯಾವುದೇ ಘಟನೆಗಳಿಗೆ ವೈಯಕ್ತಿಕವಾಗಿ ಭಾಗಿಯಾಗದೆ ಸುಮ್ಮನೆ ದೂರದಲ್ಲಿ ಕೂತು ಅಭಿಪ್ರಾಯ ರೂಪಿಸಿಕೊಳ್ಳುವ ಎಲ್ಲರಲ್ಲೂ (ನನ್ನನ್ನೂ ಸೇರಿಸಿ) ಈ ರೀತಿಯ ಗೊಂದಲ ಉಂಟಾಗುತ್ತದೆಯೇನೋ!

ಘಟನೆಗೆ ಕಾರಣರಾದವರನ್ನೆಲ್ಲಾ ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಕಾನೂನು ರೀತಿ ಸರಿಯಾದ ಶಿಕ್ಷೆಯಾಗಬೇಕು. ಜತೆಗೆ ಇಂಥ ಕೃತ್ಯಗಳಿಗೆ ಸೈಲಂಟ್ ಮೆಜಾರಿಟಿಯ ಬೆಂಬಲ ದೊರಕದಂತೆ ಎಚ್ಚರವಹಿಸಬೇಕು. ಅಲ್ಲದೆ ಇದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ರಾಜಕೀಯ ಲಾಭವನ್ನು ಮಾಡಿಕೊಳ್ಳಲು ಯತ್ನಿಸುವವರನ್ನು, ವಿಕೃತಿಯನ್ನೇ ಆಧುನಿಕತೆ ಎಂದು ಪ್ರಚಾರ ಮಾಡುವ ಸ್ವಹಿತಾಸಕ್ತಿಯನ್ನೇ ಜನರ ಭಾವನೆ ಎನ್ನುವ ಮಾಧ್ಯಮಗಳನ್ನು, ಇಂಟಲೆಕ್ಛುಯಲ್‌ಗಳನ್ನು ವಿರೋಧಿಸಬೇಕು.  ಇದಕ್ಕೆಲ್ಲಾ ನಿಮ್ಮ ಬ್ಲಾಗು ವೇದಿಕೆಯಾದದ್ದಕ್ಕೆ ನಿಮಗೆ ಅಭಿನಂದನೆಗಳು.        ಸುಪ್ರೀತ್.ಕೆ.ಎಸ್

~

Chetana,

Please visit this link. There seems to be something very fishy about this whole episode.

http://www.hindu.com/2009/01/27/stories/2009012759421000.htm

I do not support any voilence against women. It is upto them what they want to do. However, the reaction of oscar fernandes and veerappa moily who were sitting in delhi to this incident and added to that the loksabha election slated for mangalore and congress ticket for that seat all have added a murky twist to this whole episode. We need a impartial probe into this incident to bring out the truth.

Regards,   Mayura

ನನ್ನ ಮಾತು…

ಮಂಗಳೂರು ಪಬ್ ದಾಳಿ ಘಟನೆಯನ್ನ ವಿರೋಧಿಸುವುದು ಇವತ್ತು ಸುಲಭದ ಕೆಲಸವಾಗಿ ಉಳಿದಿಲ್ಲ. ಈ ಬಗ್ಗೆ ದನಿಯೆತ್ತಿದರೆ, ಪೂರ್ವಿ ಕೇಳಿದ ಹಾಗೆ ‘ನೀವೂ ಕುಡಿಯುವಿರೇ? ’ ಎಂದು ಕೇಳುವವರೇ ಹೆಚ್ಚು! ಪಬ್ ಸಂಸ್ಕೃತಿಯನ್ನು ನೀವು ಬೆಂಬಲಿಸುತ್ತೀರಾ? ಎಂದೂ ಕೇಳುವವರಿದ್ದಾರೆ. ನಮ್ಮನ್ನು ಗುಮಾನಿಯ ಕಣ್ಣುಗಳಿಂದ ನೋಡುತ್ತ ಕರಿಬೇವಿನೆಲೆಯ ಹಾಗೆ ಬದಿಗಿಟ್ಟು ಉಂಡು ಹೊಟ್ಟೆ ಕೆಡಿಸಿಕೊಳ್ಳುವವರೂ ಇದ್ದಾರೆ.

ಹೀಗೆ ವಿತಂಡ ವಾದ ಹೂಡುತ್ತಿದ್ದವರನ್ನು ಕೇಳಿದೆ. ಪಬ್ ಯಾಕೆ ಕೂಡದು? ಅಂತ. ಅವರು ಹೇಳಿದರು. ಥೇಟು ತೊಗಾಡಿಯಾ ಕೊಟ್ಟ ಪತ್ರಿಕಾ ಹೇಳಿಕೆಯ ಕಾಪಿಯಾಗಿತ್ತು ಅದು! ಪಬ್ಬಲ್ಲಿ ಹೆಣ್ಮಕ್ಕಳು ಕುಡೀತಾರೆ. ಮೈಮರೀತಾರೆ. ಗರ್ಭವತಿಯರಾಗ್ತಾರೆ. ಅಬಾರ್ಷನ್ ಮಾಡ್ಕೊಳ್ತಾರೆ. ಸಂಸ್ಕೃತಿ ಹಾಳಾಗತ್ತೆ….
ನಾನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ. ನನಗೆ ನೂರಕ್ಕೆ ನೂರು ಗೊತ್ತಿತ್ತು. ನನ್ನ ಉತ್ತರಗಳು ಅವರ ಕಿವಿ ಸವರಿ ಗಾಳಿಗೆ ತೂರುತ್ತದೆ ಅಂತ.

ನನ್ನದೊಂದಷ್ಟು ಪ್ರಶ್ನೆಗಳಿವೆ.
ಇಲ್ಲಿವರೆಗಿನ ಭಾರತದ ಅಬಾಷನ್ ಕೇಸುಗಳನ್ನ ಮೊದಲು ತೆಗೆದುಕೊಳ್ಳೋಣ. ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಅಬಾರ್ಷನ್ ಮಾಡಿಸ್ಕೊಳ್ಳುವವರಲ್ಲಿ ಶೇ.೭೦ರಷ್ಟು ಹೆಣ್ಣೂ ಮಕ್ಕಳು ಮಧ್ಯಮ ವರ್ಗದವರಾಗಿರುತ್ತಾರೆ. ಇದರಲ್ಲಿ ಹೆಚ್ಚಿನ ಪಾಲು ‘ಹೆಣ್ಣು ಭ್ರೂಣ ಹತ್ಯೆ’ಯಾಗಿರುತ್ತದೆ. ಒಂದು ಸಿಂಪಲ್ ಊಹೆ… ಹೀಗೆ ಹೊಟ್ಟೆ ಇಳಿಸಿಕೊಳ್ಳುವ ಹೆಣ್ಣು ಮಕ್ಕಳು ಝೋಪಡಿಯ ಜನರಾಗಿರಲು ಸಾಧ್ಯವೇ ಇಲ್ಲ. ಯಾಕೆಂದರೆ, ಭ್ರೂಣ ಲಿಂಗ ಪತ್ತೆಗೆ ಹಣ ಸುರಿಯಲು ಅವರಿಂದ ಸಾಧ್ಯವಿಲ್ಲ. ತುಂಬಾ ಮುಂದುವರಿದ (ಅಂತ ಕರೆಯಲ್ಪಡುವ) ಹೆಣ್ಣುಗಳೇನೂ ಪಬ್ಬಿಗೆ ಹೋಗಲಾಗುವುದಿಲ್ಲವಲ್ಲ ಅಂತ ಹಾಗೆ ಮಾಡ್ಕೊಳ್ಳೋದಿಲ್ಲ. ನಿಮಗೆ ಗೊತ್ತು, ನಮ್ಮ ದೇಶದಲ್ಲಿ ಆ ಸಂಖ್ಯೆ ನಗಣ್ಯ ಅನಿಸುವಷ್ಟು ಕಡಿಮೆ. ಉಳಿಯುವುದು ಸಾಂಪ್ರದಾಯಿಕ ಮನೋಭವದ ಕುಟುಂಬಗಳು (ಇಲ್ಲಿ ಜಾತಿ- ಪಂಥ ಮನದಂಡವಲ್ಲ). ‘ಗಂಡು ಸಂತಾನ’ದ ಅಪೇಕ್ಷೆಯಿಂದ, ಹೆಣ್ಣಿನ ಬಗೆಗಿನ ತಾತ್ಸಾರದಿಂದಲೇ ಗರ್ಭಪಾತ ಮಾಡಿಸಿಕೊಳ್ಳುವ ಸಂಖ್ಯೆ ಹೆಚ್ಚು.
ನಮ್ಮ ದೇಶದ ಹೆಣ್ಣುಗಳ ಆರೋಗ್ಯ ಹಾಳಾಗುತ್ತಿರುವುದು ಇಂತಹ ಮೌಢ್ಯ ಮನೋಭಾವದ, ತಮ್ಮನ್ನು ತಾವು ಸುಸಂಸ್ಕೃತರೆಂದು ಕರೆಸಿಕೊಳ್ಳುವ ಜನರಿಂದ ಎಂದಾಯ್ತು. ಅಲ್ಲಿಗೆ, ತೊಗಾಡಿಯಾ ವಾದ ಹುಸಿಯಾಯ್ತು!

ಇನ್ನು, ಮರ್ಯಾದೆಯ ಪ್ರಶ್ನೆ.
ಪಬ್ಬಿನಲ್ಲಿ ಹೆಣ್ಮಕ್ಕಳು ಅರೆನಗ್ನರಾಗಿರುತ್ತಾರೆ, ಮರ್ಯಾದೆ ಹೋಗುತ್ತದೆ. ಅಲ್ಲವೇ?
ನಮ್ಮ ಸ್ಲಮ್ಮುಗಳಲ್ಲಿ ಚಿಂದಿಯುಟ್ಟು ಅರೆನಗ್ನರಾಗಿ ಬದುಕಲು ಹೆಣಗುತ್ತಿರುವ ಹೆಣ್ಣುಗಳಿಂದ ದೇಶದ ಮರ್ಯಾದೆ ಹೋಗುವುದಿಲ್ಲವೆ? ಇಲ್ಲಿನ ಅರೆನಗ್ನ ಹುಡುಗಿಯರನ್ನ ಬೇಕಾಬಿಟ್ಟಿ ಚಚ್ಚಿದರಲ್ಲ, ಒಮ್ಮೆಯಾದರೂ ಇವರಿಗೆ ಕೊಳೆಗೇರಿಗಳ ಹುಡುಗಿಯರಿಗೆ ಮೈತುಂಬ ಉಡಲು ಕೊಡಬೇಕು, ಮಾನವುಳಿಸಬೇಕು ಎನಿಸಿದ್ದಿದೆಯೇ? ಹ್ಹ್! ಮಾತನಾಡುತ್ತಾರೆ…

ಈ ಎಲ್ಲ ಪ್ರಶ್ನೆಗಳನ್ನು ಕೇಳಿದರೂ, ಉತ್ತರಗಳನ್ನು ನೀಡಿದರೂ ಅವರು ಕೇಳುತ್ತಿದ್ದಾರೆ…
ನೀವು ‘ಪಬ್ ಸಂಸ್ಕೃತಿಯನ್ನು ಬೆಂಬಲಿಸುವಿರಾ? ಕುಡಿತ ತಪ್ಪಲ್ಲವಾ?’ ಅಂತ.
ಇರಲಿ. ಕುಡಿತ ಮತ್ತದರ ದುಷ್ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಬೇಕಿದ್ದರೆ ಸೆಮಿನಾರನ್ನೇ ಇಟ್ಟುಕೊಳ್ಳೋಣ. ಸಧ್ಯಕ್ಕೆ ಹೆಣ್ಣುಮಕ್ಕಳನ್ನ ಜಗ್ಗಾಡಿ, ಹದ್ದು ಮೀರಿ ವರ್ತಿಸಿದ ರಾಮಸೇನೆಯ ವಿಕೃತಿಯನ್ನು ಖಂಡಿಸೋಣ. ಅಗದೇ?

ವಂದೇ, ಚೇತನಾ ತೀರ್ಥಹಳ್ಳಿ.

15 thoughts on “ಪುಂಡಾಟಿಕೆ ಬಗ್ಗೆ ಮಾತಾಡಿ ಅಂದ್ರೆ, ‘ನೀವು ಕುಡೀತೀರಾ?’ ಕೇಳ್ತಾರೆ!

Add yours

 1. ಟೀನಾ ಅವರೇ,

  ’ಈ ಕುರಿತು ಬರೆದ ಇತರ ಲೇಖನಗಳಿದ್ದರೆ ದಯವಿಟ್ಟು ತಿಳಿಸಿ ’ ಅಂತ ಚೇತನಾ ಅವರು ತಮ್ಮ ಬ್ಲಾಗಿನಲ್ಲಿ ಬರೆದಿದ್ದರಿಂದ ಆ ಬ್ಲಾಗ್ ಕೊಂಡಿಯನ್ನು ಕೊಟ್ಟೆ. ಅದರಲ್ಲಿ ಏನು ತಪ್ಪೋ ತಿಳಿಯುತ್ತಿಲ್ಲ ! ಬರೇ ’ರಾಮಸೇನೆ-ತಾಲಿಬಾನು’ ಅಂತ ಬರೆದಿರುವ ಬ್ಲಾಗ್ ಲಿಂಕ್ ಗಳನ್ನು ಮಾತ್ರ ಕೊಡಿ ಅಂತ ಹೇಳಿದ್ದರೆ ನಾನು ಕೊಟ್ಟ ಲಿಂಕ್ ತಪ್ಪಾಗುತ್ತಿತ್ತು. ಘಟನೆ ಖಂಡನಾರ್ಹವೆ ಹೌದು. ಆದರೆ ಅದನ್ನು ಬೇರೆ ಬೇರೆ ಕೋನಗಳಿಂದ ಹೇಗೆ ವಿಶ್ಲೇಷಿಸಬಹುದು, ಅದಕ್ಕೆ ಏನೇನು ಆಯಾಮಗಳಿರುತ್ತವೆ ಎಂಬುದನ್ನು ತಿಳಿಯುವ ಪ್ರಯತ್ನ ಅದು. ಯಾರೊ ಹೇಳಿದ್ದನ್ನೆಲ್ಲ ಸರಿ ಅನ್ನುವುದು ಉದ್ದೇಶವಲ್ಲ. “ಅಕ್ಷರ ವಿಹಾರ ಬ್ಲಾಗ್ ನಲ್ಲಿ ಈ ವಿಷಯವಾಗಿ ಬರೆಯಲಾಗಿದೆ. ಘಟನೆಯನ್ನು ಮತ್ತೊಂದು ದೃಷ್ಟಿಕೋನದಿಂದ ವಿಶ್ಲೇಷಿಸಲಾಗಿದೆ ” ಎಂದು ಬರೆದಿದ್ದೇನೇ ಹೊರತು ಅದೇ ಸರಿ, ಇದೇ ಸರಿ ಅಂತ ಎಲ್ಲೂ ಹೇಳಿಲ್ಲ. ಇನ್ನು ನೀವು ಕೊಟ್ಟ ಲಿಂಕ್ ಬಗ್ಗೆ. ಈ ವಿಷಯದಲ್ಲಿ ಇನ್ನೂ ಮಾಧ್ಯಮಗಳನ್ನು ನಂಬುವ ಸ್ಥಿತಿಯಲ್ಲಿ ನಮ್ಮಂತ ಜನಸಾಮಾನ್ಯರು ಇಲ್ಲ. ಇವತ್ತು ಹೀಗೆ ಹೇಳಿಕೆ ಕೊಟ್ಟ ಹುಡುಗಿ ನಾಳೆ ಇನ್ನೊಂದು ರೀತಿ ಹೇಳಿಕೆ ಕೊಡಬಹುದು. ಘಟನೆ ರಾಜಕೀಯವಾಗಿ ಹೋಗಿದೆ. ಮಾಧ್ಯಮಗಳದ್ದು ಸುದ್ದಿ ಹಾದರ! ಪಬ್ಬು, ಬಟ್ಟೆ ಅಂತ ಚರ್ಚೆ ಮಾಡುವುದರಲ್ಲಿ ನನಗೆ ಆಸಕ್ತಿ ಇಲ್ಲ. totally ನಿಮಗೆ, ನಿಮ್ಮ ಗೆಳತಿಗೆ ಸ್ಸಾರಿ ಕೇಳುತ್ತಿದ್ದೇನೆ. ಈ ಕಮೆಂಟು ಚರ್ಚೆಗೋಸ್ಕರ ಹಾಕಿಲ್ಲ , just clarification only.

 2. ರೀ ಚೇತನಾ

  ಸ್ಲಮ್ ಮಕ್ಕಳ ಬಗ್ಗೆ ಚಿತ್ರ ತೆಗೆದೋರ ವಿರುದ್ಧ ನಮ್ಮ ಸಂಸ್ಕೃತಿಗೆ ಅವಹೇಳನ ಮಾಡಿದ್ರ ಎಂದು ಕೇಸು ಹಾಕಿದ್ದಾರಂತೆ.

  ಏನೋಪ್ಪ. ನೀವು ಪಬ್‌ಅಲ್ಲಿ ಕುಡಿಯುವ ಹುಡುಗಿಯಾಗಿದ್ರೆ ಮುಂದಿನ ಸರತಿ ಸೀರೆಯಲ್ಲೇ ಹೋಗಿ ಕುಡಿಯಿರಿ. 🙂

  ಹೆಂಡ ಕುಡಿದ ಆರೋಗ್ಯಕ್ಕೆ ಹಾನಿ ಮಾಡುವುದು.( ಶಾಸನವಿದಿಸಿದ್ದು)

 3. ವಿಕಾಸ್ ಅವರೆ,
  ನಾನು ಕೂಡ ಇಲ್ಲಿ ಯಾವುದೇ ಚರ್ಚೆ ಮಾಡಲು ಬಯಸುತ್ತಿಲ್ಲ. ನಾನು ನೀವು ಕೊಟ್ಟ ಲಿಂಕಿನ ಬಗ್ಗೆ ಏಕೆ ಆಕ್ಷೇಪ ಎತ್ತಿದೆ ಎಂದು ಕ್ಲಾರಿಫಿಕೇಶನ್ನು ಕೊಡುತ್ತಿದೇನೆ. “ನಿಜ. ತಮ್ಮ ವಿವೇಚನಾ ಶಕ್ತಿಯನ್ನು ಕಳಕೊಂಡವರಂತೆ ಕೆಲವರು, ಮಾಧ್ಯಮಗಳು ಘಟನೆಯ ಒಂದೇ ಮಗ್ಗುಲನ್ನು ವೈಭವೀಕರಿಸಿ, ಭಾರೀ ವಿರೋಧ ವ್ಯಕ್ತ ಪಡಿಸಿ, ಬಾಯಿಬಡಿದುಕೊಂಡು ಧನ್ಯರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಿಮ್ಮ ಈ ಎರಡೂ ಬರಹಗಳಲ್ಲಿನ ವಿಶ್ಲೇಷಣೆ, ವಿಚಾರಗಳು ಯೋಚಿಸುವಂತೆ ಮಾಡಿದವು. thanx” – ಇವು ಅಕ್ಷರವಿಹಾರ ಬ್ಲಾಗಿನಲ್ಲಿ ನೀವು ಅವರ ಪಬ್ ದಾಳಿಯನ್ನು ಸಮರ್ಥಿಸುವ ಲೇಖನಗಳಿಗೆ ಹಾಕಿದ ಕಮೆಂಟು.
  ಮೊದಲನೆಯದು ನೀವು ಲೇಖನಕ್ಕೆ ನೀಡಿದ ’ವಿಶ್ಲೇಷಣೆ’ ಅನ್ನುವ ಹಣೆಪಟ್ಟಿ. ನಾನು ಕೂಡ ಆ ಲೇಖನವನ್ನ ಓದಿದೆ. ಇಗ್ನೋರ್ ಮಾದಲು ಲಾಯಖ್ಖಾದುದು ಅನ್ನಿಸಿದ್ದರಿಂದ ಕಮೆಂಟು ಮಾಡುವ ತೊಂದರೆ ತೆಗೆದುಕೊಳ್ಳಲಿಲ್ಲ. ನನ್ನ ಪ್ರಕಾರ ಆ ಲೇಖನಗಳು ’ತನ್ನ ಮೂಗಿನ ನೇರಕ್ಕೆ ಅನ್ನಿಸಿದ್ದನ್ನ ಬರೆದ ಕೆಲವು ವಾಕ್ಯಗಳು’ ಅಷ್ಟೆ.
  ಅಲ್ಲಿ ಆ ಲೇಖಕರು ಉದ್ಧರಿಸಿರುವ ರಾಮಸೇನೆಯ ವಕ್ತಾರರೊಬ್ಬರ ಮಾತುಗಳಿವು – *ಹುಡುಗಿರನ್ನು ನಾವೇನು ಅತ್ಯಾಚಾರ ಮಾಡಿಲ್ಲ ಅಥವಾ ಅವರ ಜತೆ ಅಸಭ್ಯವಾಗಿಯೂ ವರ್ತಿಸಿಲ್ಲ. ದಾಳಿ ಉತ್ಸಾಹದಲ್ಲಿ 4 ಏಟನ್ನು ಕಾರ್ಯಕರ್ತರು ಹೊಡೆದಿದ್ದಾರೆ.’ ವಾಹವಾ! ನಾಳೆ ಯಾರೊ ಪರಿಚಿತರು ಇವರನ್ನು ಹಿಗ್ಗಾಮುಗ್ಗಾ ಚಚ್ಚಿ ಅವಮಾನಮಾಡಿ ’ಏನೊ ಉತ್ಸಾಹದಲ್ಲಿ ನಾಕೇಟು ಹಾಕಿದ್ವಿ’ ಅಂದರೆ!! ಯಾರಿಗೋ ಬಿದ್ದ ಏಟುಗಳ ಬಗ್ಗೆ ಅವರಿಗೆ ಬೇಸರವಿಲ್ಲ. ದೂರದ ಬೆಟ್ಟ ನುಣ್ಣಗೆ. ಅಲ್ಲ? ಇದನ್ನು ಉದ್ಧರಿಸಿ ಬರೆವ ಮನುಷ್ಯನಿಗೆ ವಿಶ್ಲೇಷಣೆಯ ತಾಕತ್ತು ಇರುವುದು ಸಾಧ್ಯವೆ?
  ಇನ್ನು ನಿಮ್ಮ ಮಾಧ್ಯಮಗಳ ಮೇಲಿನ ಬೇಸರದ ಬಗ್ಗೆ ಮಾತಾಡುವ. ದಾಳಿ ನಡೆವ ಮುನ್ನ ಮಾಧ್ಯಮಗಳು ಅಲ್ಲಿ ಹೋಗಿ ಘಟನೆಯ ಚಿತ್ರೀಕರಣ ನಡೆಸಿದ್ದರ ಬಗ್ಗೆ ನನಗೂ ರೇಜಿಗೆ ಇದೆ. ಅವರ ತಪ್ಪನ್ನು ಅವರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಆದರೆ ಮಾಧ್ಯಮದವರು ಇದಕ್ಕೆ ಸೂಕ್ತ ಪ್ರಚಾರ ನೀಡದೆ ಹೋಗಿದ್ದಿದ್ದರೆ ಇದಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ದೊರಕುತ್ತಿತ್ತೆ? ಇದಕ್ಕೆ ವ್ಯಕ್ತವಾದ ಕಂಡನೆಯಿಂದ ಇನ್ನು ಮುಂದೆ ಈ ರೀತಿ ಕೆಲಸ ಮಾಡಲು ಬಯಸುವವರು ಹಿಂದೇಟು ಹಾಕುವಂತೆ ಆಗಲಿಲ್ಲವೆ? ನಾಳೆ ಇಅವರು ನಾವು ಸುಮ್ಮನಿದ್ದರೆ, ಎಲ್ಲರೂ ಆರುಗಂತೆಯ ಒಳಗೆ ಮನೆಸೇರಿಕೊಳ್ಳಲೆಬೇಕು, ಎಂದು ಕೊಲೆಸುಲಿಗೆ ಅತ್ಯಾಚಾರಗಳ ರೀಸನ್ನು ಕೊಟ್ಟು ಫತ್ವಾ ಹೊರಡಿಸಿದರೆ ಒಪ್ಪಿಕೊಳ್ಳಲಾದೀತೆ? ಅದು ಹಾಗಿರಲಿ, ಅಂಥ ಹೆಸರಾಂತ ಸುದ್ದಿಮಾಧ್ಯಮಗಳನ್ನು ನೀವು ಅಲ್ಲಗಳೆಯುತ್ತೀರಿ. ಸರಿ, ಒಪ್ಪಿಕೊಳ್ಳೋಣ. ಹಾಗೆ ಅವನ್ನು ಒಪ್ಪದ ನೀವು ಅಕ್ಷರವಿಹಾರದ ಲೇಖಕ ಹೇಳಿದ್ದನ್ನು ಹೇಗೆ ’ನಿಜ’ ಎಂದು ಸುಲಭವಾಗಿ ಒಪ್ಪಿಕೊಡುಬಿಟ್ಟಿರಿ? ಆ ಹೆಣ್ಣುಮಕ್ಕಳು ತಮ್ಮನ್ನು ಹೇಗೆ ವಿವಸ್ತ್ರಗೊಳಿಸಿ ಮೈಮುಟ್ಟಿ ಅಶ್ಲೀಲ ಭಾಷೆ ಬಳಸಿ ಅವಮಾನಿಸಲಾಯಿತು ಎಂದು ಕೊಟ್ಟ ಹೇಳಿಕೆಯ ಬಗ್ಗೆ ನಿಮಗೆ ಏನೂ ಅನಿಸುವುದಿಲ್ಲವಾದರೆ ರಾಮಸೇನೆಯ ರಾಜಕೀಯ ನಾಯಕರ ಹೇಳಿಕೆಯ ಬಗ್ಗೆ ನಿಮಗೆ ಹೇಗೆ ನಂಬಿಕೆ ಬಂದಿತು?
  ಇನ್ನು ಪಬ್ ಸಂಸ್ಕೃತಿಯ ಬಗ್ಗೆ ಚೇತನಾರನ್ನು ಆಕೆ ಕುಡಿಯುತ್ತಾಳೆಯೆ ಎಂಬಂಥ ಅಸಂಬದ್ಧ ಪ್ರಶ್ನೆ ಎತ್ತಿರುವ ಪೂರ್ವಿಯವರಿಗೆ ಪಬ್ಬುಗಳಲ್ಲಿ ನಡೆವ ಅನೈತಿಕ ಚತುವಟಿಕೆಗಳ ಬಗ್ಗೆ ಚೆನ್ನಾಗಿ ಅರಿವಿರುವಂತಿದೆ. ಅವರು ತಮ್ಮ ಅರಿವನ್ನು ನಮ್ಮ ಜತೆ, ಪೊಲೀಸರ ಜತೆ, ಮಾಧ್ಯಮದವರ ಜತೆ ಹಂಚಿಕೊಂಡಲ್ಲಿ ಒಳ್ಳೆಯದಲ್ಲವೆ?ಅಂಥ ಚಟುವಟಿಕೆಗಳನ್ನು ನಿಲ್ಲಿಸಲು ನನ್ನ ಸಂಪೂರ್ಣ ಬೆಂಬಲವಿದೆ. ಹಾಗೆ ನೋಡಿದರೆ ವೇಶ್ಯಾವಾಟಿಕೆ ಮುಂತಾದವು ನಮ್ಮ ಬೆಂಗಳೂರ ಮೆಜೆಸ್ಟಿಕಿನ ಬಸ್ಟಾಂಡಿನಲ್ಲು ಹಾಡಹಗಲೆ ನಡೆಯುತ್ತದೆ. ಅದರ ಬಗ್ಗೆ ರಾಮಸೇನೆಯವರು ಜಾಗೄತರಾಗದೆ ಪಬ್ಬಿನೆಡೆ ಸಾಗಿರುವದು ಅವರ ಕಾಳಜಿ, ಆಸಕ್ತಿಗಳನ್ನು ತೋರುತ್ತದೆ.
  ಯಾರೊ ಪಬ್ಬಿಗೆ ಹೋದಮಾತ್ರಕ್ಕೆ ಆಕೆ ನಾಚಿಕೆಗೆಟ್ಟವಳು ಅನ್ನುವವರ ಬಗ್ಗೆ ನನಗೆ ಸಂತಾಪವಿದೆ, ಅವರ ಇಗ್ನೋರೆನ್ಸಿನ ಬಗ್ಗೆ ಬೇಸರವಿದೆ.ಆದರೆ ಇಲ್ಲಿ ಮಾತು ನನ್ನ ನಿಮ್ಮ ಸ್ವಾತಂತ್ರ್ಯದ್ದು. ಪಬ್ಬಿನದಲ್ಲ.ನನ್ನ ಜೀವನ ನನ್ನದು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಕ್ಕಿರುವದು ನನಗೆ ಮಾತ್ರ. ನಾನು ಜೀವಿಸುತ್ತಿರುವುದು ಡೆಮಾಕ್ರಸಿ ಇರುವ ದೇಶದಲ್ಲಿ. ನಾನು ಸ್ವತಂತ್ರಳು. I have freedom of movement. It is one of my basic rights. ಇಲ್ಲಿ ರಾಮಸೇನೆಯವರು ನಮ್ಮ ದೇಶದ ಕಾನೂನನ್ನ ಉಲ್ಲಂಘಿಸಿದಾರೆ ಅಂದಮೇಲೆ ಅವರನ್ನು ಯಾರಾದರು ಸಪೋರ್ಟು ಮಾದಲು ಹೇಗೆ ಸಾಧ್ಯ? ಸಲ್ಲದು ಇದು ವಿಕಾಸ್ ಅವರೆ, ನನಗೆ ಸಲ್ಲದು.
  ಕೊನೆಯದಾಗಿ ಒಂದು ಮಾತು. ಇದು ವ್ಯಕ್ತಿಗತ ವಿಚಾರ. ಇದು ಈ ಪಬ್ ದಾಳಿಯ ಚರ್ಚೆಯ ಜತೆಗೇ ನನ್ನ ಹಾಗೂ ನನ್ನ ಗೆಳತಿಯ ಕುರಿತು ಬದಲಾದ ನಿಮ್ಮ ಧೋರಣೆಯ ಬಗೆಗಿನದು.”ಅಕ್ಕ’ ಅನ್ನುವದು ಬಲು ದೊಡ್ಡ ಪದ ವಿಕಾಸ್ ಅವರೆ. ನಾನು ಇದನ್ನು ಎಂದೂ ಕೇವಲವಾಗಿ ಭಾವಿಸಿಲ್ಲ. ಈ ವಿಚಾರದ ಬಗ್ಗೆ ನನಗೂ ಇವರಿಬ್ಬರಿಗೂ ಸಹಮತವಿಲ್ಲದುದರಿಂದ ಇನ್ನು ಮುಂದೆ ನಾನು ಇವರಿಬ್ಬರೊಡನೆ ಫಾರ್ಮಲ್ಲಾಗಿ ವರ್ತಿಸುತ್ತೇನೆ ಎಂದು ನೀವು ನಡೆದುಕೊಳ್ಳುವದಾದರೆ ನಾನೂ ಅಂತೆಯೆ ನಡೆದುಕೊಳ್ಳುವೆ. ಆ ಬೇಸರದಲ್ಲಿಯೆ ನಾನೂ ನಿಮ್ಮನ್ನು ನಿಮ್ಮಂತೆಯೆ ಸಂಬೋಧಿಸಿದ್ದು.ಭಿನ್ನಾಭಿಪ್ರಾಯಗಳು ಬರೆ ವಿಷಯಗಳಿಗಷ್ಟೆ ಸೀಮಿತವಾಗಿರಬೇಕು ಎಂದು ನಂಬುವವಳು ನಾನು. ನೀವೂ ನನ್ನಂತೆ ಎನ್ನುವದಾದರೆ ರೋಡಿನಲ್ಲೆಲ್ಲೊ ಗುರುತುಹಿಡಿದು ಮಾತನಾಡಿಸಿದ ತಮ್ಮನೊಬ್ಬನ ಬಗ್ಗೆ ನನಗೆ ಸದಾ ಅಕ್ಕರೆಯಿದ್ದೇ ಇರುತ್ತದೆ.

 4. ಚೇತನಾ,

  ಇಲ್ಲಿ ಕರ್ನಾಟಕ ಸರ್ಕಾರಕ್ಕೊಂದು ಬಹಿರಂಗ ಪತ್ರವಿದೆ:

  http://youngfeminists.wordpress.com/2009/01/29/an-open-letter-to-the-state-government-from-the-women-of-karnataka/#comment-2088

  ತಾಲಿಬಾನ್ ರೀತಿಯ ಪಬ್ ಮೇಲಿನ ದಾಳಿಯ ಸುತ್ತ ಮುತ್ತಿರುವ ರಾಜಕಾರಣವನ್ನು ಮೀರಿ ತಮ್ಮ ಸ್ವಂತ ಅಭಿಪ್ರಾಯ ಏನೆಂದು ನಿರ್ಧರಿಸಲು ಹಿಂಜರಿಯುತ್ತಿರುವ, ಹಿಂಜರಿಯುತ್ತಲೇ ಅಸಂವಿಧಾನಾತ್ಮಕ ನಡವಳಿಕೆಯನ್ನು ಸಮರ್ಥಿಸುತ್ತುರುವ ’ಜನಸಾಮಾನ್ಯರು’ ಈ ಲಿಂಕ್ ನಲ್ಲಿರುವ ಈ ಘಟನೆಯ ಬಗೆಗಿನ ದೃಷ್ಟಿಕೋನ, ಆಯಾಮಗಳನ್ನು ಓದಿ ಆನಂದಿಸಬಹುದು.

 5. ಹಾಯ್,

  ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

  ಧನ್ಯವಾದಗಳು,

  ಶಮ, ನಂದಿಬೆಟ್ಟ

  ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
  http://minchulli.wordpress.com

 6. ಇದೊಳ್ಳೆ ಕಥೆಯಾಯಿತಲ್ಲ ಟೀನಕ್ಕ. ಅಕ್ಷರ ವಿಹಾರದಲ್ಲಿ ಬರೆದ ಬರಹಕ್ಕೆ ನಿಮಗೆ ಸಹಮತವಿಲ್ಲದಿದ್ದರೆ ಅಲ್ಲಿ ಹೋಗಿ ಅವರ ಹತ್ತಿರವೇ ಚರ್ಚಿಸಬಹುದಿತ್ತಲ್ವಾ. ಅದು ಬಿಟ್ಟು ಇಲ್ಲಿ ನನ್ನನ್ನು ಉದ್ದೇಶಿಸಿ “ನಿಮ್ಮ ಸ್ನೇಹಿತನಿಗೆ ವಿವೇಚನೆಯಿಲ್ಲ, ನಿಮ್ಮ ಸ್ನೇಹಿತನಿಗೆ ಬುದ್ದಿಯಿಲ್ಲ ” ಎಂದು ಹೇಳಿದುದರಲ್ಲಿ ಯಾವ ಅರ್ಥವೂ ಇಲ್ಲ. ನಿರ್ಲಕ್ಷ್ಯ ಮಾಡುವುದಾದರೆ ಅದನ್ನು ಈ ಬ್ಲಾಗಲ್ಲಿ ಟೀಕೆ ಮಾಡುವ ಅಗತ್ಯವೂ ಇರಲಿಲ್ಲ. ನಿಮಗೆ ಅದು ವಿಶ್ಲೇಷಣೆ ಅನ್ನಿಸದಿದ್ದರೆ I can’t help it. ನನಗೆ ಅನ್ನಿಸಿತು ಅಷ್ಟೆ.
  ಅದಕ್ಕೇ ’ಯೋಚಿಸುವಂತೆ ಮಾಡಿತು’ ಎಂದಿದ್ದೇನೆ. ಪಬ್ ವಿಷಯಕ್ಕೆ ಬಂದರೆ.. ಪಬ್ ಗೆ ಹೋಗುವುದು ಒಳ್ಳೆಯದೋ, ಕೆಟ್ಟದ್ದೋ ಅವರಿಷ್ಟ. ಆ ರೀತಿ ಧಾಳಿ ಮಾಡಿದ್ದು ತಪ್ಪು ಎಂದು ನಾನೂ ಖಂಡಿಸುತ್ತೇನೆ. ಆದರೆ ನೀವು ನಂಬುವಂತಹ, ಹೆಮ್ಮೆಪಡುವಂತಹ ಮಾಧ್ಯಮಗಳು ಈ ಧಾಳಿ ಖಂಡಿಸುವ ವಿಷಯದಲ್ಲಿ ಯಾವ ರೀತಿ ವರ್ತಿಸಿವೆ,ವರ್ತಿಸುತ್ತಿವೆ ಎಂಬುದನ್ನು ಅರಿತರೆ ಒಳ್ಳೆಯದು. ಅದನ್ನೇ ನಾನು ’ಇನ್ನೊಂದು ಮಗ್ಗುಲು, ಬಾಯಿಬಡುಕತನ ಇತ್ಯಾದಿ’ ಎಂದು ಹೇಳಿದ್ದು. ನೀವು ಹೆಮ್ಮೆ ಯಿಂದ ಹೇಳಿಕೊಂಡ ಮಾಧ್ಯಮಗಳಲ್ಲೊಂದು ಭಾರತದಲ್ಲಿ ಹೆಣ್ಣುಮಕ್ಕಳು ಬದುಕಲಾಗದಂತಹ ಸ್ಥಿತಿ ಇದೆ ಎಂದು ೩ ದಿನದಿಂದ ಸಾರುತ್ತಿದೆ. ಇದು ಭಾರತದಲ್ಲಿ ಇಡೀ ಹೆಣ್ಣುಕುಲದ ಮೇಲಾದ ಧಾಳಿ,ಸ್ತ್ರೀತ್ವದ ಸ್ವಾತಂತ್ರ್ಯ ಹರಣ ಎಂದೆಲ್ಲಾ ಬಿಂಬಿಸಲಾಗುತ್ತಿದೆ. ನಿಜವಾಗಿಯೂ ಹಾಗಿದೆಯಾ? ಆ ಪಬ್ ಹೆಣ್ಣುಗಳು ನಮ್ಮ ದೇಶದ ಎಲ್ಲಾ ಸ್ತ್ರೀಯರನ್ನು ಹೇಗೆ ಪ್ರತಿನಿಧಿಸುತ್ತಾರೆ? ಪಬ್ ನಲ್ಲಿ ಕುಡಿಯುವ,ಕುಣಿಯುವ ಕೆಲವರು ಧಾಳಿಗೊಳಗಾದಾಕ್ಷಣ ನಮ್ಮ ಅಕ್ಕ, ತಂಗಿ, ತಾಯಂದಿರು, ಇನ್ನಿತರರು ಗೌರವದಿಂದ ಬಾಳಲಾಗುತ್ತಿಲ್ಲವಾ ಈ ದೇಶದಲ್ಲಿ? ನೀವಾಗಲೀ, ಚೇತನಕ್ಕ ಆಗಲೀ, ನಮ್ಮ , ನಿಮ್ಮ ತಾಯಿ, ಅಕ್ಕ, ತಂಗಿಯರಾಗಲೀ, ಇನ್ನಿತರ ಹೆಣ್ಣುಮಕ್ಕಳಾಗಲೀ ಈ ದೇಶದ ಸ್ತ್ರೀಯರಲ್ವಾ? ಅವರಿಗೆ ಯಾರಾದರೂ ಧಾಳಿಮಾಡಿದ್ದಾರಾ? ಮಾಡಲು ಸಾಧ್ಯವೂ ಇಲ್ಲ ಹಾಗೂ ಮಾಡಲು ಬಂದರೆ ಅಂತವರನ್ನು ಮಟ್ಟಹಾಕಲು, ರಕ್ಷಣೆ ಮಾಡಿಕೊಳ್ಳಲು ನಮ್ಮ ದೇಶದ ಸಭ್ಯ ಹೆಣ್ಣುಮಕ್ಕಳಿಗೆ ಸಾಮರ್ಥ್ಯವಿದೆ. ಮೆಜೆಸ್ಟಿಕ್ಕಿನ ಬೆಲೆವೆಣ್ಣುಗಳ ಬಗ್ಗೆ ರಾಮಸೇನೆಯವರು ಏನು ಮಾಡಿದ್ದಾರೆ ಎಂದು ಕೇಳುವವರು ಪಬ್ ಧಾಳಿಯನ್ನು ಚರ್ಚೆಗೊಳಪಡಿಸಿದಷ್ಟು, ಖಂಡಿಸಿದಶ್ಟು ಬೇರೆ ಬೇರೆ ರೀತಿಯಲ್ಲಾಗುವ, ಆಗುತ್ತಿರುವ ಸ್ತ್ರೀ ದೌರ್ಜನ್ಯದ ಬಗ್ಗೆ ಖಂಡಿಸಿದ್ದಾರಾ? ಮೂರ್ಮೂರು ದಿನ ಬ್ರೇಕಿಂಗ್ ನ್ಯೂಸ್ ಮಾಡಿದ್ದಾರಾ? ಪಬ್ ಹೆಣ್ಮಕ್ಕಳ್ಳು ಮಾತ್ರ ಈ ದೇಶದ ಹೆಣ್ಮಕ್ಕಳ ಪ್ರತಿನಿಧಿಗಳಾ? ಅದೇ ದರಿದ್ರ ಮಾಧ್ಯಮ ನಿನ್ನೆ ಹಾಕಿದ್ದ ವ್ಯಂಗ್ಯ ಚಿತ್ರ ನೋಡಿ. ಅದರಲ್ಲಿ ಇಬ್ಬರು ಹೆಂಗಸರು ಕೂತು ಎದುರಿಗೆ ಮಗ್ ಇಟ್ಟುಕೊಂಡು I need sex change, women can’t lead a normal life in India ಎಂದು ಮಾತನಾಡುತ್ತಿದ್ದಾರೆ. ಅವರು ನಮ್ಮ ದೇಶವನ್ನು ಯಾವ ರೀತಿ defame ಮಾಡುತ್ತಿದ್ದಾರೆ ಎಂದು ತಿಳಿದು ಮೈ ಉರಿಯುವುದಿಲ್ಲವಾ ಹೇಳಿ. ಅದು ಇನ್ನೊಂದು ಭಯಂಕರ ಸಲಹೆಯನ್ನು ಪ್ರಕಟಿಸಿತ್ತು, ಈ ಧಾಳಿ ಖಂಡಿಸುವುದಕ್ಕೋಸ್ಕರ ಫೆಬ್ರವರಿ ೧೪ ರಂದು ಎಲ್ಲಾ ಹೆಣ್ಣುಮಕ್ಕಳೂ, ಗಂಡುಮಕ್ಕಳೂ , ತಂದೆ ತಾಯಂದಿರೂ ಪಬ್ಬು, ಬಾರು, ಡಿಸ್ಕೋಥೆಕ್ ಗಳಿಗೆ ಹೋಗಿ ಕುಡಿದು ಕುಣಿಯಬೇಕಂತೆ! ಇದನ್ನು ನೀವು ಸಮರ್ಥಿಸುತ್ತೀರಾ ಎಂದಾದರೆ I am sorry. ಇಲ್ಲವಾದರೆ ’ಯಾರುಕೊಟ್ಟರು ಮಾಧ್ಯಮದವರಿಗೆ ಈ ಹಕ್ಕು’ ಅಂತ ನೀವ್ಯಾಕೆ ಖಂಡಿಸಿ ಲೇಖನ ಬರೆಯುವುದಿಲ್ಲ? ಪಬ್ ಧಾಳಿ ವಿರೋಧಿಸುವುದಕ್ಕೆ ಕಾಲೇಜಿನ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಅವರಿಗೂ ಇದಕ್ಕೂ ಏನು ಸಂಬಂಧ? ಅವರಿಗೆ ಕಾಲೇಜಿಗೆ ಹೋಗದಂತೆ ಯಾರಾದರೂ ಧಾಳಿ ಮಾಡಿದ್ದಾರಾ? ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳ ultimate destination ಪಬ್ಬುಗಳಾ? ಇದನ್ನು ಖಂಡಿಸಿ ’ಯಾರು ಕೊಟ್ಟರು ಇವರಿಗೆ ಹೆಣ್ಣು ಮಕ್ಕಳನ್ನು ಬಳಸಿಕೊಳ್ಳಲು ಹಕ್ಕು’ ಅಂತ ನೀವ್ಯಾಕೆ ಲೇಖನ ಬರೆದು ಖಂಡಿಸುವುದಿಲ್ಲ? ಅಂದರೆ ಒಂದು ಘಟನೆಗೆ ಹಲವಾರು ಮಗ್ಗುಲುಗಳಿರುತ್ತವೆ. ಒಂದೊಂದು ಘಟನೆಯ ಹಿಂದೂ, ಅವುಗಳನ್ನು ವರದಿ ಮಾಡುತ್ತಿರುವ ಮಾಧ್ಯಮಗಳ ಹಿಂದೂ ಹಲವಾರು ಉದ್ದೇಶ, ತಂತ್ರ, ಕುತಂತ್ರಗಳಿರುತ್ತವೆ. ನಾವು ಒಂದನ್ನು ಖಂಡಿಸುತ್ತಿರುವಾಗ ನಮಗರಿವಿಲ್ಲದಂತೆಯೇ ಇನ್ಯಾವುದಕ್ಕೋ ಬಲಿಯಾಗಿರುತ್ತೇವೆ. 😦

  ಇರಲಿ ಬಿಡಿ ಚರ್ಚೆಗೆ ಕೂತರೆ ಶ್ರೀಮಾನ್ ಸುಪ್ರೀತರ ಹಾಗೆ ವಾದಗೋಸ್ಕರವೇ ವಾದ ಮಾಡುತ್ತಾ ಇರಬಹುದು. ಇನ್ನು ನೀವು ಹೇಳಿದ ಅಕ್ಕ ಮುಂತಾದ ಕೆಲವು ವೈಯಕ್ತಿಕ ವಿಷ್ಯಗಳ ಬಗ್ಗೆ ನಾನು ಇಲ್ಲಿ ಪ್ರಸ್ತಾಪಿಸಿಯೂ ಇರಲಿಲ್ಲ, ಅದಕ್ಕೆ ಈ ಬ್ಲಾಗ್ ವೇದಿಕೆಯೂ ಅಲ್ಲ. ಅದೇ ಬೇರೆ ಇದೇ ಬೇರೆ. 🙂

  *******************

  ನನ್ನಿಂದ ತಪ್ಪಾಗಿದ್ದರೆ sorry. ಇದೇ ನನ್ನ ಕೊನೆ ಕಮೆಂಟು ಇಲ್ಲಿ. bye

 7. ನಿಜ, ಸಧ್ಯಕ್ಕೆ ಹೆಣ್ಣುಮಕ್ಕಳನ್ನ ಜಗ್ಗಾಡಿ, ಹದ್ದು ಮೀರಿ ವರ್ತಿಸಿದ ಕೃತಿಯನ್ನು ಖಂಡಿಸೋಣ. ಅದು ರಾಮಸೇನೆಯೋ ಇನ್ನೊಂದು ಸೇನೆಯೊ. ಅದು ನನಗೆ ಸೆಕೆಂಡರಿ.

 8. ನನ್ನ ಜೀವನ ನನ್ನದು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಕ್ಕಿರುವದು ನನಗೆ ಮಾತ್ರ. ನಾನು ಜೀವಿಸುತ್ತಿರುವುದು ಡೆಮಾಕ್ರಸಿ ಇರುವ ದೇಶದಲ್ಲಿ. ನಾನು ಸ್ವತಂತ್ರಳು. I have freedom of movement. It is one of my basic rights.

  Idannu odi ella kudukaru haage helidre yenu gati teena madam, ashtu work stress adre yoga madli, dyana madli, illa kudilebeku andre maneyalli neetagi kuntu kudiyali. adu bittu pub ge hogodu. kudida mattinalli yendru hechchu kammi madikollodu ivella beka?

 9. ಈಗ ಪಬ್ ಎಂಬ ಒಳಾಂಗಣದಲ್ಲಿ ಕುಡಿಯುವುದಕ್ಕಿಂತ ಮನೆಯಲ್ಲಿ ಮಕ್ಕಳ ಮುಂದೆ ಕುಡಿಯೋ, ಸಿಗರೇಟು ಸೇದೋ ಭೂಪರು ಒಳ್ಳೆಯವರೇನು?
  ಕುಡಿಯುತ್ತಾ ತನ್ನ ಮಗಳ ಕಯ್ಯಲ್ಲೇ ಸಿಗರೇಟು ತರಿಸುವ, ಹೆಂಡತಿ ಕಯ್ಯಲ್ಲೇ ಮೊಟ್ಟೆ ಮಾಡಿಸಿ ಉಣ್ಣುವ ಸಭ್ಯರಿದ್ದಾರೆ. ಹಲವು ದೊಡ್ಡ ಮಂದಿಯ ಕತೆ ಇದು. ತಮ್ಮ ಮನೆಯ ಕೆಲಸದ ಹೆಣ್ಣು ಮಕ್ಕಳ ಕಯ್ಯಲೇ ಸೋಡಾ, ಸಿಗರೇಟಿನ ಸರಬರಾಜು. ಇವರೇ ನಮ್ಮನ್ನು ಆಳ್ತಾ ಇರೋದು ಕೂಡ ಅಲ್ವ!

 10. ಮಾಧ್ಯಮದ ಬಗೆಗಿನ ಪ್ರಶ್ನೆಗಳಲ್ಲಿ ಕೆಲವಕ್ಕೆ ಉತ್ತರ –
  1) ಘಟನೆ ನಡೆಯುವ ಮುನ್ನ ಸಂಘಟನೆಯ ಕಾರ್ಯಕರ್ತರು ದೂರವಾಣಿ ಮೂಲಕ 10-12 ಜನ ವರದಿಗಾರರಿಗೆ ಹೀಗೆ ಮಾಡಲಿದ್ದೇವೆ ಎಂದು ತಿಳಿಸಿದ ಕಾರಣ ಮಾಧ್ಯಮಗಳು ಅಲ್ಲಿ ಬಂದಿದ್ದವು. (ಇಂಥ ಸಂದರ್ಭದಲ್ಲಿ ಮಾಧ್ಯಮಗಳು ವರದಿ ಮಾತ್ರ ಮಾಡಬೇಕಾ ಅಥವಾ ಕ್ಯಾಮರಾ-ಪೆನ್ನು ಕೆಳಗಿಟ್ಟು ಬಲಿಯಾಗುತ್ತಿರುವವರನ್ನು ರಕ್ಷಿಸಬೇಕಾ ಎಂಬುದು ಐತಿಹಾಸಿಕ ಸಮಸ್ಯೆ, ಇದಕ್ಕೆ ಪ್ರಣಯ್ ರಾಯ್ ರಾಜ್-ದೀಪ್ ಸರ್ದೇಸಾಯಿಯಾದಿಯಾಗಿ ಯಾರಿಗೂ ಇಲ್ಲಿವರೆಗೂ ಉತ್ತರ ಸಿಕ್ಕಿಲ್ಲ)
  2) ಘಟನೆ ರಾಷ್ಟ್ರೀಯವಾಗುವಲ್ಲಿ ರಾಜಕೀಯದ ಪಾತ್ರವಿದೆಯೆಂದು ಹೇಳಲಾಗುತ್ತಿದೆ. ಇದನ್ನು ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಸ್ವತಹ ಒಪ್ಪಿಕೊಂಡಿದೆಂತೆ. ಆದರೆ, ಹಾಗಾಗದಿದ್ದರೆ ಆ ಸಂಘಟನೆಯ ಕುರಿತು ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಜನರಿಗೆ ಗೊತ್ತೇ ಆಗುತ್ತಿರಲಿಲ್ಲ. ಈ ಸಂಘಟನೆಯ ಕುರಿತು ನಿಜಕ್ಕೂ ರಾಷ್ಟ್ರಮಟ್ಟದಲ್ಲಿ, ಸರಕಾರದ, ಕಾನೂನಿನ ಗಮನ ಸೆಳೆಯಬೇಕಾದ ಅಗತ್ಯವಿದೆ. ಹುಬ್ಬಳ್ಳಿ ನ್ಯಾಯಾಲಯ ಸ್ಫೋಟ ಪ್ರಕರಣದ ಆರೋಪಿಗಳು ಶ್ರೀರಾಮಸೇನೆ ಕಾರ್ಯಕರ್ತರೇ. (ವಿವರಗಳಿಗೆ ಜನವರಿ 12ರ ಕನ್ನಡಪ್ರಭಾ ಓದಿ, ಕನ್ನಡಪ್ರಭಾ ಬಿಟ್ಟರೆ ಬೇರ್ಯಾವ ಪತ್ರಿಕೆಯೂ ಇದರ ಬಗ್ಗೆ ಬರೆಯುವ ಧೈರ್ಯತೋರಿಸಿಲ್ಲ) ಮಂಗಳೂರಿಗೆ ಮಾಲೆಗಾಂವ್ ಸ್ಫಓಟಕ್ಕೆ ಸಂಬಂಧಿಸಿಂತೆ ಮುತಾಲಿಕ್ ವಿಚಾರಣೆಗೆ ಮಹಾರಾಷ್ಟ್ರ ಎಟಿಎಸ್ ಬಂದಿದೆ, ಅವರ ಚಾರ್ಜ್-ಶೀಟ್ ಪ್ರಕಾರ ತಪ್ಪಿಸಿಕೊಂಡಿರುವ ಮೂರು ಜನರಲ್ಲಿ ಒಬ್ಬ ಪ್ರವೀಣ್ ಮುತಾಲಿಕ್, ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತನಾಗಿದ್ದನಂತೆ. ನಮಗೆಲ್ಲ ಇಂತಹ ಕೃತ್ಯಗಳೆಲ್ಲ ಎಷ್ಟು ಅಭ್ಯಾಸವಾಗಿದೆಯೆಂದರೆ, ನಮ್ಮ ರಾಜ್ಯದ ಮಾಧ್ಯಮಗಳು ಇವೆಲ್ಲ ಸಾಮಾನ್ಯವೆಂದು ಬದಿಗಿಟ್ಟುಬಿಡುವಷ್ಟು ಜಡ್ಡುಕಟ್ಟಿಹೋಗಿವೆ. ದೊಡ್ಡದಾಗಿ ವರದಿಯಾಗಿದ್ದು ಇದೊಂದು ಮಾತ್ರ. ವರದಿಯಾಗದಿರುವಂಥ ಕೃತ್ಯಗಳು ನೂರಾರಿವೆ. ಮುತಾಲಿಕ್ ಬೆಂಗಳೂರಿನಲ್ಲೇ ತನ್ನ ರಾಷ್ಟ್ರ ರಕ್ಷಾಸೇನೆಯ armed training photos ಬಿಡುಗಡೆ ಮಾಡಿದರೂ ಯಾರೂ ಆತನನ್ನು ಏನು ಮಾಡುತ್ತಿದ್ದೀಯಾ ಅಂತ ಪ್ರಶ್ನಿಸಲಿಲ್ಲ. ನಕ್ಸಲ್ ವಿರುದ್ಧ ಧ್ವನಿಯೆತ್ತುವ ನೂರಾರು ಮಂದಿಗೆ ಬಲಪಂಥೀಯ ಉಗ್ರವಾದದ ಬಗ್ಗೆ ಗೊತ್ತೇ ಇರಲಿಕ್ಕಿಲ್ಲ.ಈ ಘಟನೆಯಿಂದ ಸಂಘಟನೆಯ ನೂರಾರು ಮಗ್ಗಲುಗಳು ದೇಶಕ್ಕೆ ಪರಿಚಯವಾಗುತ್ತಿವೆ.

 11. ಚೇತನಾ,
  ಪ್ರಮೋದ್ ನಿನ್ನ ಬ್ಲಾಗಿಗೆ ಕೊಟ್ಟಿರುವ ಟಿವಿ ಚ್ಯಾನೆಲ್ಲಿನ ಕಾಂಪ್ಲಿಮೆಂಟು ಸಖತ್ತಾಗಿದೆ!! ವಿಕಾಸನೂ ಇದನ್ನೆ ಹೇಳಿದ್ದು ನೆನಪು. ಕಂಗ್ರಾಟ್ಸ್. ಎಷ್ಟು ಬ್ಲಾಗುಗಳಿಗೆ ಇಂಥ ಪಟ್ಟ ದಕ್ಕಿದೆ ಹೇಳು? ನಂಗಂತು ಹೊಟ್ಟೆ ಉರೀತಿದೆ!! 🙂
  ಪೂರ್ವಿ,
  ನೀವು ತುಂಬ ಗೊಂದಲದಲ್ಲಿದೀರಿ. ಕೊಂಚ ಧ್ಯಾನಿಸಿ. ತಿಳಿಯಾಗಬಹುದು. ಇನ್ನೂ ನಿಮಗೆ ಉತ್ತರ ಬರೆದು ವಿಷಯಾಂತರ ಮಾಡಲಾರೆ. ಗುಡ್ ಬೈ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: