ಗಾಂಧಿ, ಅಪ್ಪ ಮತ್ತು ವ್ಯವಸ್ಥೆಯ ಮೇಲಿನ ದ್ವೇಷ!


ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ವ್ಯವಸ್ಥೆಯನ್ನೂ ದ್ವೇಷಿಸ್ತೇನೆ” ಅಂತ ಅಂವ ಪತ್ರ ಬರೆದಿಟ್ಟು ಹೋಗಿದ್ದ!

ಹಾಗೇನೂ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಗಾಂಧೀಜಿ ಏನಲ್ಲ. ತುಂಡು ಲಂಗೋಟಿ ಉಟ್ಟು ಉಪವಾಸ ಕುಂತ ಮಾತ್ರಕ್ಕೆ ಬಿಳಿಯರು ಓಡಿಹೋಗಿಬಿಟ್ರು ಅನ್ನೋದು ಮೂರ್ಖತನ!” ಅಣ್ಣ ವಾದಿಸ್ತಿದ್ದ. ಅಪ್ಪನ ಮುಖ ಸುಟ್ಟ ಬದನೆಕಾಯಿ ಆಗಿತ್ತು. ಮಾತಿಗೆ ಮಾತು ಬೆಳೀತು. “ಗಾಂಧೀಜಿ ಅಹಿಂಸಾವಾದಿಯಾಗಿದ್ರು, ಸಹನಾಮೂರ್ತಿಯಾಗಿದ್ರು…” ಅಂತ ಅಂವ ಕಿರುಚಾಡಿದ. ” ಅವರು ಯಾವತ್ತೂ ಯಾರನ್ನೂ ನೋಯಿಸಿದೋರಲ್ಲ. ಬಡ್ಡೀ ಮಗನೇ, ನಾನು ಓದಿದ ಕಾಲು ಭಾಗದಷ್ಟೂ ತಿಳಿದ್ಕೊಂಡಿಲ್ಲ ನೀನು, ನಂಗೇ ಎದುರಾಡ್ತೀಯಾ? ಅಂತ ಅವನಿಗೆ ಧಬಧಬ ಹೇರತೊಡಗಿದ.
ಅಂತೂ ಗಾಂಧೀಜಿ ವಿಷಯಕ್ಕೆ ಅವತ್ತು ಮನೆಯಲ್ಲೊಂದು ರಾದ್ಧಾಂತವೇ ನಡೆದುಹೋಯ್ತು. ಅವನಿಗಡ್ಡ ಬಂದ ಅಮ್ಮನ್ನ, ಅವಳ ಹಿಂದೆ ನಿಂತಿದ್ದ ನನ್ನನ್ನ ಕೆಕ್ಕರಿಸಿ ನೋಡ್ತಾ ಅಪ್ಪ ರೂಮು ಸೇರಿ ತಲೆ ಮೇಲೆ ಕೈಹೊತ್ತು ಮಲಗಿಬಿಟ್ಟ.

ಭಾನುವಾರ ಅಂತೂ ಹಾಗೆ ಕಳೆದುಹೋಯ್ತು. ಸಹಪಾಠಿಗಳೆಲ್ಲ ಶನಿವಾರ ಬಂತಂದರೆ ಕುಣಿದಾಡ್ತಿದ್ದರು. ಆದ್ರೆ ನಾವಿಬ್ಬರು ಮಾತ್ರಹಾಳಾದ್ದು, ಯಾಕಾದ್ರೂ ರಜ ಬರುತ್ತೋಅಂತ ಗೊಣಗಿ ಗೋಳಾಡಿಬಿಡ್ತಿದ್ದೆವು.
ಅಪ್ಪ ಮನೆಯಲ್ಲಿರ್ತಾರೆ ಅಂದ್ರೆ ಸಾಕು, ನಮಗೆ ಜೀವನವೆಲ್ಲ ಜಿಗುಪ್ಸೆ ಹುಟ್ಟಿದಂತಾಗಿಬಿಡ್ತಿತ್ತು
.
ಅಣ್ಣ ದೊಡ್ಡವನಾದಂತೆಲ್ಲ ತಿರುಗಿ ಹೇಳೋ ಅಭ್ಯಾಸ ಬೇರೆ ಬೆಳೆಸ್ಕೊಂಡ. ಈಗ ಅಂವ ಗಾಧಿ ಪಾಳಯಕ್ಕೆ ಜಿಗಿದಿದ್ದ. ಅಪ್ಪ, ಎಂದಿನಂತೆ ಅವನ ವಿರೋಧಿ.

ಮತ್ತೊಂದು ಭಾನುವಾರಅಪ್ಪಮಗನ ಲೋಕಾಭಿರಾಮ ಸಾಗಿತ್ತು. ಮನೇಲಿ ಹಾಗೇಎಲ್ಲ ಕೂಡಿ ಮಾತಾಡೋದು ಅಂದ್ರೆ, ಜಗಳಕ್ಕೇ ನಾಂದಿಯಾಗಿಬಿಡ್ತಿತ್ತು. ಅಣ್ಣ ಈಗ, ಗಾಂಧಿ ಪಿಚ್ಚರಿನ ಕೊನೆ ಸೀನಿಗೆ ಬಂದಿದ್ದ.
ಫಿಲಮ್ಮಲ್ಲಿ ಗೋಡ್ಸೆ ಶೂಟ್ ಮಾಡಿದಾಗ ಡಾಕ್ಟರ್ ಜೀ ಕೆಲಸ ಮುಗೀತು ಅನ್ನೋಹಾಗೆ ತಲೆ ಆಡಿಸೋದು ತೋರಿಸಿದಾರೆ. ಅದರ ಮರ್ಮ ಏನು ಅಂತ ಚಡ್ಡಿ ಮೂರ್ತಿಯನ್ನ ಕೇಳಿದ್ರೆ, ಅಂವ ಹಾಗೆಲ್ಲ ಮಾತಾಡ್ಬಾರ್ದು ಅಂತ ಗದರಿಬಿಟ್ಟ. ಅದು ನಿಜಾನೇ ಹಾಂಗಾರೆಅಂತ ವಾದ ಹೂಡಿದ
.
ಸರಿ. ಅಪ್ಪನ ವರಸೆ ಶುರುವಾಯ್ತು. ಗಾಂಧೀಜಿ ಹೆಂಡ್ತಿಯನ್ನ ಹೊಡೀತಿದ್ರಂತೆ ಅನ್ನುವಲ್ಲಿಂದ ಹಿಡಿದು, ಪಾಕಿಸ್ತಾನ ಅವನಪ್ಪನ ಆಸ್ತಿ ಅನ್ನೋಹಾಗೆ ಹಂಚಿಬಿಟ್ರು. ನೆಹರೂವನ್ನ ಪ್ರಧಾನಿ ಮಾಡಿ ದೇಶ ಕುಲಗೆಡಿಸಿದ್ದು ಅವ್ರೇ ಅನ್ನೋವರೆಗೂ ಅಸಂಬದ್ಧ ಮಾತಾಡಿದ. ಕೊನೆಗೆ ಇಬ್ಬರೂ ಕೈ ಎತ್ತಿ ಇಳಿಸುವಲ್ಲಿಗೆ ದಿನದ ರಜೆ ಕಳೆದಿತ್ತು
.
ಹೀಗೆ ಸುಡು ಕಾವಲಿಯ ಮನೆಯಲ್ಲಿ ನಾವು ದ್ವಂದ್ವಗಳನ್ನೇ ಉಂಡುಟ್ಟು ಬೆಳೆದ್ವಿ. ಹರೆಯಕ್ಕೆ ಕಾಲಿಟ್ಟಮೇಲಂತೂ ಅಪ್ಪಹೊರೆಅನಿಸತೊಡಗಿದ. ಹಾಗೆ ನೋಡಿದರೆ, ಕಾಲಕ್ಕೆ ಅಂವ ಸಾಕಷ್ಟು ಮೆತ್ತಗಾಗಿಬಿಟ್ಟಿದ್ದ. ಅವನ ಪೌರುಷವೆಲ್ಲ ಅಡುಗೆ ಮನೆಯಲ್ಲಿ ಅಮ್ಮನ್ನ ಹಿಡಿದು ಬಾರಿಸುವುದಕ್ಕಷ್ಟೆ ಮುಗಿದು ಹೋಗ್ತಿತ್ತು.

ಅಣ್ಣ ಈಗ ಕೇಸರಿ, ಬಿಳಿ ಪಡೆಗಳೆರಡನ್ನೂ ಬಿಟ್ಟುಕೆಂಪು ಹಾದಿಹಿಡಿದಿದ್ದ. ಬಿತ್ತಿದ ಬೀಜಕ್ಕೆ ತಕ್ಕ ಬೆಳೆ. ಅಪ್ಪನ ಜಗಮೊಂಡುತನ, ಮೂಗಿನ ನೇರದ ಮಾತುಅಹಂಕಾರಗಳು ಅವನನ್ನ ದಾರಿಗೆ ತಳ್ಳಿತ್ತು. ಅಂವ ಅಪ್ಪನಲ್ಲಿ ದೇಶವನ್ನೇ ಕಂಡ. ಅಪ್ಪನ ಮೇಲೆ ತಿರುಗಿ ಬಿದ್ದಷ್ಟೆ ಸಲೀಸಾಗಿ ವ್ಯವಸ್ಥೆಯ ಮೇಲೆ ತಿರುಗಿ ಬಿದ್ದ. ಅಂವ ಮನೆ ಬಿಟ್ಟು ಹೋಗುವ ಮುಂಚೆ ಬರೆದ ಪತ್ರದಲ್ಲಿ ಅದು ಎದ್ದು ಕಂಡಿತ್ತು. “ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ವ್ಯವಸ್ಥೆಯನ್ನೂ ದ್ವೇಷಿಸ್ತೇನೆ!”
ದೇವಾ!! ಎಲ್ಲಿಯ ಅಪ್ಪ, ಎಲ್ಲಿಯ ವ್ಯವಸ್ಥೆ? ಅರ್ಥಹೀನ ಆವೇಶದ, ಆಡಂಬರದ ಸಾಹಿತ್ಯವೇ ಅವನನ್ನ ಹಾದಿ ತಪ್ಪಿಸಿದ್ದಿರಬೇಕು!

ಇತ್ತ ನಾನೂ ಬೆಳೆದು, ಅಣ್ಣ ಲಾಜಾ ಹೋಮಕ್ಕೆ ಅರಳು ಸುರಿಯದೇ ನನ್ನ ಮದುವೆಯೂ ಆಗಿ ಹೋಯ್ತು. ಮನೆಸಂಸಾರಗಳ ಹಡದಿಯಲ್ಲಿ, ಅಪ್ಪನ ರಿಟೈರ್ಮೆಂಟ್, ಪೆನ್ಷನ್ನುಗಳ ಅಲೆದಾಟದಲ್ಲಿ ಅಣ್ಣನ ನೆನಪು ದೂರದೂರ ಸರಿಯುತ್ತಿತ್ತು. ಅಂವ ಎಲ್ಲಿ ಹೋದನೋ, ಯಾರಿಗೆ ಗೊತ್ತಿತ್ತು?

* *

ಇದ್ದಕ್ಕಿದ್ದ ಹಾಗೇ ಒಂದು ರಾತ್ರಿ ಕನಸಿನಲ್ಲಿ ಅಣ್ಣ. ದಟ್ಟ ಕಾಡಿನ ಮಧ್ಯದಲ್ಲಿ ಅವನನ್ನ ಕಟ್ಟಿಹಾಕಲಾಗಿತ್ತು. ಅಂವ, “ನಾನು ಮನೆಗೆ ಹೋಗ್ತೀನಿ ಬಿಡ್ರೋನಿಮ್ ದಮ್ಮಯ್ಯ! ನಿಮ್ ವಿಷ್ಯ ಯಾರಿಗೂ ಹೇಳಲ್ಲ ಕಣ್ರೋ…” ಅಂತ ದೀನನಾಗಿ ಕೂಗಿಕೂಗಿ ಅಳುತ್ತಿದ್ದ. ಅವನೆದುರು ಕಾಡು ಕೋಳಿ ಸುಡುತ್ತ ಕುಂತಿದ್ದ ನಾಲ್ಕು ಮಂದಿ ಪೋಲಿಪೋಲಿ ಬೈಗುಳ ಬಯ್ಯುತ್ತ ಕಳ್ಳು ಹೀರುತ್ತಿದ್ದರು. ಅಣ್ಣನ ದನಿ, ಕನಸಲ್ಲೂ ಕರಳು ಕತ್ತರಿಸುವ ಹಾಗಿತ್ತು.

* * 

ಕಾಡಿನ ಅಂಚಲ್ಲಿ ಗುರುತು ಸಿಗದ ಶವ ಪತ್ತೆ
ಮಾರನೆ ದಿನದ ಹೆಡ್ ಲೈನು. ಮುಖಚಹರೆಯ ಗುರುತುಗಳನ್ನೆಲ್ಲ ಪೇಪರಲ್ಲಿ ಹಾಕಿದ್ದರು
.
ಹೌದು! ಅವನೇಎಡ ಹುಬ್ಬಿನ ತುದಿಯಲ್ಲಿ ಮಚ್ಚೆ. ಕುತ್ತಿಗೆ ಮೇಲಿನ ತಿರುವಲ್ಲಿ ಇನ್ನೊಂದುಎಣ್ಣೆಗೆಂಪು ಬಣ್ಣ, ದುಂಡು ಮುಖ

ಅಮ್ಮ ಸಣ್ಣಗೆ ಚೀರಿದಳು
.
ಪೋಸ್ಟ್ ಮಾರ್ಟಮ್ ರಿಪೋರ್ಟಿನಲ್ಲಿ ಅವನನ್ನ ಚಿತ್ರ ಹಿಂಸೆ ಕೊಟ್ಟು ಕೊಂದಿದ್ದು ತಿಳಿದುಬಂತು. ಹಿಂದಿನಿರುಳ ಕನಸು ನೆನಪಾಗುತ್ತಲೇ ನಾನು ಮೈ ನರಗಳೆಲ್ಲ ಲಟಲಟನೆ ಬಿರಿದು ಹರಿಯುವಂತೆ ಉಬ್ಬಿ ಉಬ್ಬಿ ಅತ್ತೆ. ಯಾಕೋ, ಅಪ್ಪನ ಮೇಲೆ ವಿಪರೀತ ಅಸಹನೆ ಹುಟ್ಟಿತು. ಅಂವ ಆಸುಪಾಸಿನ ಮನೆಯವರ, ಪೋಲೀಸರ ಪ್ರಶ್ನೆಗಳಿಗೆ ಹೆದರಿದ್ದನೇನೋ? ಮತ್ತೆ ರೂಮು ಸೇರಿ ತಲೆ ಮೇಲೆ ಕೈ ಹೊತ್ತು ಮಲಗಿಬಿಟ್ಟಿದ್ದ. ಸತ್ತವನ ಮೈಮೇಲೆ ಕೆಂಪು ಕೊಲೆಗಡುಕರ ಯೂನಿಫಾರಮ್ಮು! ಏನು ಉತ್ತರ ಕೊಡುವುದು ಅಂತ ಅವನಿಗೆ ತಲೆಬಿಸಿಯಾಗಿದ್ದಿರಬೇಕು.

ಹಾಗೆ ತನ್ನ ಪಾಡಿಗೆ ಮಲಗಿದ್ದ ಅಪ್ಪ ಇದ್ದಕ್ಕಿದ್ದ ಹಾಗೇ ಎದ್ದು ಬಂದ. ನೆರೆ ಮನೆಯವರು ಏನೇನೋ ಕೇಳುತ್ತ ಅಮ್ಮನ ದುಃಖ ಹೆಚ್ಚಿಸುತ್ತ ಕುಂತಿದ್ದರು.   ಅಪ್ಪ ಬಂದವನೇ ಒಮ್ಮೆ ಅಮ್ಮನ್ನ ಗುರಾಯಿಸಿ ನೋಡಿದ.
ಇವತ್ತೇನಾದ್ರೂ ತರಲೆ ತೆಗೆಯಲಿ. ನಾನು ಮಗಳೇ ಅಲ್ಲ ಅನ್ನಿಸಿಬಿಡ್ತೀನಿ!” ಹುಚ್ಚುಚ್ಚಾಗಿ ಹಲ್ಲು ಕಡಿದೆ
.
ಆದರೆ ಹೊರ ಬಂದ ಅಪ್ಪ , ಜೋಲಿ ಹೊಡೆದುಕೊಂಡೇ ತನ್ನ ಮಾಮೂಲಿ ಚೀಲ ಹಿಡಿದು ತನ್ನ ಪಾಡಿಗೆ ಹೊರಟ. ಯಾರ ಮಾತೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ
.
ಇಂಥಾ ದಿನಗಳಲ್ಲೂ ಇವನ ತಿಕ್ಕಲು ನೋಡು!” ಅಂತ ನೆಂಟರಿಷ್ಟರು ಆಡಿಕೊಂಡು ನಾವು ತಲೆ ಎತ್ತದ ಹಾಗೆ ಆಗಿಬಿಟ್ಟಿತ್ತು.

ಅವತ್ತು ಹಾಗೆ ಹೋದ ಅಪ್ಪ ಬಂದಿದ್ದು, ಮೂರು ದಿನಗಳ ನಂತರ. ಮುಖ ಊದಿಕೊಂಡಿತ್ತು. ತಲೆ ಬೋಳಿಸಿದ್ದ. ಎದೆ ಮೇಲಿಂದ ಕೈ ತೆಗೆಯದೇ, ನನ್ನ ಕೈಗೊಂದು ಕವರ್ರು ಕೊಟ್ಟ.
ಅವನ ಮುಖದಲ್ಲಿ ನೋವು ಒಡೆದು ಕಾಣುತ್ತಿತ್ತು. ಆದರೂ ಇನ್ನೇನು ಉಸಾಬರಿಯೋ ಅಂತ ಸಿಡುಕುತ್ತಲೇ ಗಂಟು ಬಿಚ್ಚಿದೆ ನಾನು
.
ಕವರಿನಲ್ಲಷ್ಟು ವಡೆರವೆ ಉಂಡೆ. ಫ್ರೇಮು ಹಾಕಿ ಕುಂಕುಮವಿಟ್ಟ ಅಣ್ಣನ ಫೋಟೋ!

ಕುಸಿಯುತ್ತಿದ್ದ ಅಪ್ಪನ್ನ ಗಟ್ಟಿಯಾಗಿ ಹಿಡಿದುಕೊಂಡೆ. ಹುಟ್ಟಿದ ಅಷ್ಟು ವರ್ಷಗಳಲ್ಲಿ ಮೊದಲ ಸಾರ್ತಿ ಅಪ್ಪನ ಕಣ್ಣಲ್ಲಿ ನೀರು ಕಂಡೆ. ಆವರೆಗೂ ಅರ್ಥವಾಗದಿದ್ದ ಅಪ್ಪ ಮತ್ತೂ ಒಗಟಾಗುತ್ತ ಮುದುಡಿಕೊಂಡಹಾಗನಿಸಿತು. ಹಾಗೇ ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಿದೆ.

ಅಣ್ಣ, ತನಗೆ ಸಿಗದ ಅಪ್ಪನನ್ನ ನನಗೆ ಕೊಡಿಸಿಹೋಗಿದ್ದ.  

 

18 thoughts on “ಗಾಂಧಿ, ಅಪ್ಪ ಮತ್ತು ವ್ಯವಸ್ಥೆಯ ಮೇಲಿನ ದ್ವೇಷ!

Add yours

 1. ಪ್ರಸಾದ್,
  ನಮ್ಮೂರ ಹತ್ರ ಬಿದರಹಳ್ಳಿಯಲ್ಲಿ ಮೊನ್ನೆ ರಾತ್ರಿ ಒಂದು ಮನೆ ಸುಟ್ಟುಹಾಕಿದಾರೆ ನಕ್ಸಲರು…

  ಶಂಕರ್,
  ಪ್ರತಿಕ್ರಿಯೆಗೆ ಧನ್ಯವಾದ.

 2. ” ಅವರು ಯಾವತ್ತೂ ಯಾರನ್ನೂ ನೋಯಿಸಿದೋರಲ್ಲ. ಬಡ್ಡೀ ಮಗನೇ, ನಾನು ಓದಿದ ಕಾಲು ಭಾಗದಷ್ಟೂ ತಿಳಿದ್ಕೊಂಡಿಲ್ಲ ನೀನು, ನಂಗೇ ಎದುರಾಡ್ತೀಯಾ? ಅಂತ ಅವನಿಗೆ ಧಬಧಬ ಹೇರತೊಡಗಿದ.”
  *********
  ಅಹಿಂಸಾವಾದ ಸಮರ್ಥಿಸಲು ಹಿಂಸೆ…! ವಾಸ್ತವ ವಿಚಾರ..

 3. ಪರಮೇಶ್ವರ ಗುರುಸ್ವಾಮಿ ಅವರೇ,
  ನಿಮ್ಮ ಮೆಚ್ಚುಗೆ ನನಗೆ ತುಂಬಾ ಖುಷಿ. ಬರ್ತಾ ಇರಿ.

  ಹರೀಶ್,ನೀವು ಹೇಳಿದ್ದು ಸರಿ ಆದರೆ,
  ಇದು ವಾಸ್ತವ ಅನ್ನೋದೇ ವಿಪರ್ಯಾಸ. ಅಲ್ವೇ?

  ಕೇಶವ ಸರ್,
  ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ಗಡಿಬಿಡಿ… ಗೊತ್ತಿಲ್ಲ.

  ವಂದೇ,
  ಚೇತನಾ ತೀರ್ಥಹಳ್ಳಿ

 4. ಚೇತನಾ,

  ಇಂಥ ಬರಹಗಳನ್ನು “ಚೆಂದ” ಇದೆ ಅನ್ನಲು ಹಿಂಸೆ. ಚೆಂದ ಇಲ್ಲ ಅಂದರೆ ಸುಳ್ಳಾದೀತು.. ಏನೆನ್ನಲಿ ? ಗಾಢ ವಿಷಾದವನ್ನು ಕಟ್ಟಿ ಕೊಟ್ಟಿದ್ದು ಮಾತ್ರ ಸತ್ಯ .

  – ಶಮ, ನಂದಿಬೆಟ್ಟ

 5. ಧನ್ಯವಾದ ಶಮಾ. 🙂

  ಮಯೂರ, ಅವಧಿಯಲ್ಲಿ ಅಲ್ಲ, ನನ್ನದೇ ಹಳೇ ಪೋಸ್ಟಿನಲ್ಲಿ!!

  ರಮೇಶ್,
  😦 ಸಿಕ್ ಹಾಕ್ಕೊಂಡೆ!!
  ಇಲ್ಲ, ಡಿಲೀಟ್ ಮಾಡುವ ಮುನ್ನ ಇದ್ದ ಪೋಸ್ಟ್ ಗಳನ್ನ ಹಾಕಬೇಕಂತಲೇ ಹಾಕ್ತಿದೆನಷ್ಟೆ.
  ಸದ್ಯದಲ್ಲೇ ಬೇರೆ ಹಾಕುವೆ.

  ಪ್ರೀತಿಯಿಂದ,
  ಚೇತನಾ

 6. “ಅಣ್ಣ, ತನಗೆ ಸಿಗದ ಅಪ್ಪನನ್ನ ನನಗೆ ಕೊಡಿಸಿಹೋಗಿದ್ದ.” ಆತುರದಲ್ಲಿ ಬರೆದಂತೆನಿಸಿದರೂ, ಇಷ್ಟೇ ಇದ್ದದ್ದಕ್ಕೆ ಇಷ್ಟವಾಯಿತೇನೋ…. ಒಳ್ಳೆಯ ಬರಹ.

 7. ನಮಸ್ತೆ.. ಚೇತನಾ … . ದಯವಿಟ್ಟು ಬನ್ನಿ…ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ನೀವು ಬಸವೇಶ್ವರ ನಗರಕ್ಕೆ ದೂರದವರಲ್ಲದ್ದರಿಂದ ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ಕಾಯುತ್ತೇನೆ. ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
  ಶುಭವಾಗಲಿ,
  – ಶಮ, ನಂದಿಬೆಟ್ಟ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: