ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು…


ಮಾರ್ಚ್ ೨೭ರ ಯುಗಾದಿಯ ದಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷವೇನೂ ಇರಲಿಲ್ಲ. ಸಿಬ್ಬಂದಿಗಳೊಂದಷ್ಟು ಜನ ಯೂನಿಫಾರಮ್ಮಲ್ಲದೆ ಸಾಮಾನ್ಯ ಉಡುಗೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಅವತ್ತು ಹಬ್ಬ ಎಂಬುದರ ಸಾಕ್ಷಿಯಾಗಿತ್ತಷ್ಟೆ. ಯುಗಾದಿಯ ದಿನವನ್ನ ಕಾರಾಗೃಹದಲ್ಲಿರುವ ಸಹೋದರರ ಜೊತೆ ಕಳೆಯಬೇಕು, ದೇಶ ಪ್ರೇಮ ಉದ್ದೀಪಿಸುವ ಗೀತ ಗಾಯನ ನಡೆಸಿಕೊಡಬೇಕು ಎಂದೆಲ್ಲ ಉಮ್ಮೇದಿಯೊಂದಿಗೆ ಹೋಗಿದ್ದ ಜಾಗೋಭಾರತ್ ತಂಡಕ್ಕೆ, ಅಲ್ಲಿ ಎದುರಾದ ವಾತಾವರಣ ಅಷ್ಟೇನೂ ಪ್ರೋತ್ಸಾಹದಾಯಕವಾಗಿರಲಿಲ್ಲ. “ನೋಡೋಣ, ಎಷ್ಟು ಸಾಧ್ಯವೋ ಅಷ್ಟು ಹಾಡಿ ಬರೋಣ. ನಮ್ಮ ಸಂಕಲ್ಪ ನಾವು ನೆರವೇರಿಸುವುದಷ್ಟೆ ನಮ್ಮ ಕೆಲಸ. ಸೆರೆವಾಸಿಗಳು ಅದನ್ನ ಹೇಗೆ ಸ್ವೀಕರಿಸುವರೋ ಚಿಂತೆ ಬೇಡ. ನಾವಂತೂ ‘ದಿ ಬೆಸ್ಟ್’ ಪರ್ಫಾರ್ಮೆನ್ಸ್ ಕೊಡಬೇಕು…” ಅಂತ ತಂಡದ ಉಸ್ತುವಾರಿ ಹೊತ್ತಿದ್ದ ಅಣ್ಣ ಚಕ್ರವರ್ತಿ, ಎಲ್ಲರಲ್ಲೂ ಹುರುಪು ತುಂಬುತ್ತಿದ್ದ.

ಎಷ್ಟು ಜನಕ್ಕೆ ಅವಕಾಶವಿದೆಯೋ? ನಾನೂ ಹೋಗಬಹುದೋ? ಅಂತೆಲ್ಲ ಚಿಂತೆಯಲ್ಲಿದ್ದ ನನಗೆ ಅಂತೂ ಹೊಸ ಥರದ ಯುಗಾದಿಯನ್ನ ಆಚರಿಸುವ ಅವಕಾಶ ಸಿಕ್ಕಿಬಿಟ್ಟಿತು. ಸೆರೆಮನೆಯೆಂದರೆ ಕೈಕೋಳ ತೊಟ್ಟ ಕೆಂಪುಕಣ್ಣಿನ ‘ಕೇಡಿ’ಗಳು ಇರುವರು ಎಂಬ ತೀರ ಬಾಲಿಶ ಊಹೆಯೊಂದಿಗೆ ಅಲ್ಲಿಗೆ ತೆರಳಿದ್ದವಳು ನಾನು. ಆದರೆ, ಹಾಗೇನೂ ಇಲ್ಲದೆ ಬಹುತೇಕರು ಬಣ್ಣಬಣ್ಣದ ಸಾಮಾನ್ಯ ಉಡುಗೆಯಲ್ಲಿ ತಮ್ಮ ಪಾಡಿಗೆ- ನಮ್ಮಂತೆಯೇ ಇದ್ದುದನ್ನು ಕಂಡು ನಾಚಿಕೆಯಾಯ್ತು. ಇನ್ನೂ ಅಚ್ಚರಿಯೆಂಬಂತೆ ಅಲ್ಲಿ ನೀಟಾಗಿ ಬೆಳ್ಳನೆ ಪಂಚೆ ಉಟ್ಟು ಶಿಸ್ತಿನ ಸಾಕಾರದಂತೆ ಓಡಾಡಿಕೊಂಡಿದ್ದವರೂ ಕೆಲವರಿದ್ದರು.

ಜಾಗೋ ಭಾರತ್ ತಂಡ ಕೇಂದ್ರ ಕಾರಾಗೃಹದಲ್ಲಿ ಕಾರ್ಯಕ್ರಮ ನೀಡುವುದು ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ಅದಕ್ಕೆ ಕೆಲ ವಾರಗಳ ಮುನ್ನ ಪರ್ಮಿಶನ್ನು ಪಡೆಯಲಾಗಿತ್ತು. ಮೊದಲೇ ಚುನಾವಣೆಯ ಕಾವು. ದೇಶಪ್ರೇಮದ ಮಾತಾಡುವ ತಂಡವೆಲ್ಲಾದರೂ ಕ್ಯಾಂಪೇನಿಗೆ ಶುರುವಿಟ್ಟರೆ? ಅಥವಾ ‘ಪೊಲಿಟಿಕಲಿ’ ಸರಿಯಲ್ಲದ ಸತ್ಯಗಳನ್ನ ಬಿಚ್ಚಿಟ್ಟರೆ? ಹಾಗೆಂದೇ ಕಾರ್ಯಕ್ರಮಕ್ಕೆ ಮೊದಲೇ ಚಕ್ರವರ್ತಿಯವರನ್ನ ಕೂರಿಸಿಕೊಂಡು, ಡು/ಡೋಂಟ್ಸ್ ಗಳ ಪಟ್ಟಿ ಕೊಡಲಾಯ್ತು. ನಿಜಕ್ಕೂ ಹೀಗೆ ಚೌಕಟ್ಟಿನಲ್ಲಿ ದೇಶಪ್ರೇಮದ ಕುರಿತು ಮಾತನಾಡುವುದೊಂದು ಸವಾಲಿನ ಕೆಲಸ. ಇನ್ನು ನಮ್ಮ ‘ಬಂಧಿ’ಬಾಂಧವರು “ತೆಗೀರ್ರೀ ನಿಮ್ಮ್ ಗೋಳನ್ನಾ, ಯವ್ದಾರಾ ಪಿಚ್ಚರ್ ಹಾಡು ಹಾಡ್ಸಿ” ಅಂದುಬಿಟ್ಟರೆ? “…..ರೆ” ಅಂತ ಯೋಚಿಸಿ ಮುಗಿಯುವ ಹೊತ್ತಿಗೆ ಅದಾಗಲೆ, ಹೊರಗೆ ನಿಂತ ತಂಡದ ಕೆಲ ಸದಸ್ಯರಿಗೆ ಅದರ ಅನುಭವವೂ ಆಗಿಹೋಯ್ತು. “ನಾವು ದೇಶ ಭಕ್ತಿ ಗೀತೆಗಳನ್ನ ಹಾಡ್ತೀವಿ” ಎಂದುದಕ್ಕೆ ಅಲ್ಲೊಬ್ಬರು, “ಯಾಕೆ? ದುನಿಯಾ ಪಿಚ್ಚರ್ ಹಾಡು ಹಾಡಿ” ಅಂದು ತಣ್ಣೀರೆರಚಿದ್ದರು!

ಇದಿನ್ನೂ ಆರಂಭವಷ್ಟೆ. ಮುಂದೆ ನಡೆದುದನೆಲ್ಲ ನೀವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಬಿಡಿ!
~
ಕೇಂದ್ರ ಕಾರಗೃಹದಲ್ಲಿ ಎರಡು ಬ್ಯಾರಕ್ ಗಳು. ಹೆಂಗಸರು, ಗಂಡಸರಿಗೆ ಬೇರೆ ಬೇರೆ. ಒಟ್ಟಿಗೆ ಒಂದೇ ಗ್ರೌಂಡಿನಲ್ಲಿ ಹಾಡುವುದು ಅಂದುಕೊಂಡಿತ್ತು ತಂಡ. ಆದರೆ, ಹೆಂಗಸರನ್ನ ಗಂಡಸರ ಬ್ಯಾರಕ್ ನಲ್ಲಿರುವ ಗ್ರೌಂಡಿಗೆ ಬಿಡುವುದಿಲ್ಲ ಅಂದಾಗ ನಿರಾಶೆ ಪರಮಾವಧಿ ತಲುಪಿತು. ಜೊತೆಗೆ, ಹೆಂಗಸರ ಬ್ಯಾರಕ್ ಗೆ ಗಂಡಸರನ್ನ ಅಲೋ ಮಾಡುವುದಿಲ್ಲ ಎನ್ನುವ ನಿಯಮ ಬೇರೆ!!
ಕೊನೆಗೆ, ಮಹಿಳಾ ‘ಬಂಧಿಭಗಿನಿ’ಯರಿಗೆ ಹಬ್ಬದ ಸೀರೆ ಇತ್ತು ಗೌರವಿಸಲೆಂದು ಬಂದಿದ್ದ ಅಲಸೂರು ರಾಮಕೃಷ್ಣಾಶ್ರಮದ ಶ್ರೀ ತ್ಯಾಗೀಶ್ವರಾನಂದ ಜೀ ಹಾಗೂ ಶ್ರೀ ಪರಮ ಸುಖಾನಂದ ಜೀ ಮತ್ತು ಜಾಗೋ ಭಾರತ್ ತಂಡದ ನಿರೂಪಕ, ಕಲಾವಿದರನ್ನ ಮಾತ್ರ ಅಲ್ಲಿ ಬಿಡಲಾಯ್ತು. ನಾವು ಐವರು ಹೆಣ್ಣುಮಕ್ಕಳಂತೂ ಅಲ್ಲಿಗೆ ಹೋಗಿಯೇ ಹೋದೆವು.

ಮಹಿಳಾ ಬಂಧಿಗಳು ಅಲ್ಲಿದ್ದುದು ಒಟ್ಟು ೨೦೪. ಅವರಲ್ಲಿ ಮರಣದಂಡನೆಗೆ ಗುರಿಯಾಗಿದ್ದವರು ಒಬ್ಬರಿದ್ದರು. ಉಳಿದಂತೆ ಹದಿನಾಲ್ಕು ಮಕ್ಕಳು ತಮ್ಮ ತಾಯಂದಿರೊಟ್ಟಿಗಿದ್ದರು. ನಾವು ಅಲ್ಲಿ ತಲುಪುವ ಹೊತ್ತಿಗೆ ಅವರೆಲ್ಲ ಸಾಲಾಗಿ ನಿಶ್ಶಬ್ದವಾಗಿ (ನಿಜವಾಗ್ಲೂ!) ಕುಳಿತಿದ್ದರು. ವರದಕ್ಷಿಣೆ ಕಿರುಕುಳ ನೀಡಿ ಒಳಸೇರಿದ ಮುದುಕಿಯಿಂದ ಹಿಡಿದು, ಆಗತಾನೆ ಲಾಡ್ಜಿನಲ್ಲಿ ಸಿಕ್ಕಿಬಿದ್ದ ಎಳೆವಯಸಿನ ಅಮಾಯಕಿಯವರೆಗೆ ಥರಥರಾವರಿ ಹೆಣ್ಣುಮಕ್ಕಳಿದ್ದರು.
ಅವರು ಅದೆಂಥದೇ ಅಪರಾಧ ಮಾಡಿರಬಹುದು, ಒಂದು ಕ್ಷಣ – ಸರಳುಗಳ ಹಿಂದೆ ಜೀವನ ತಳ್ಳುತ್ತಿರುವ ಅವರನ್ನ ಕಂಡು ಚುರ್ರೆಂದಿತು. ‘ಇಲ್ಲಿಂದ ಹೋದಮೇಲಿನ ಅವರ ಬದುಕು?’ ಯೋಚನೆ ಮಾಡಲಾಗದೆ ಮನಸನ್ನ ಬೇರೆಡೆ ಹರಿಬಿಟ್ಟೆ.

ಆ ವೇಳೆಗೆ ಸ್ವಾಮೀಜಿ ಭಗಿನಿಯರಿಗೆ ನಾಲ್ಕು ಹಿತವಚನ ಹೇಳಿದರು. ಅವರ ಮಾತನ್ನ ಶ್ರದ್ಧೆಯಿಂದ ಕೇಳುತ್ತಿದ್ದ ಹೆಣ್ಣುಮಕ್ಕಳನ್ನ ಕಂಡು ನನಗೆ ಖುಶಿಯಾಯ್ತು. ಆಮೇಲೆ ಗಣೇಶ್ ದೇಸಾಯಿ ಹಾಡಲು ಶುರುವಿಟ್ಟರು. ಹೆಂಗಸರು ತಮಗೆ ಗೊತ್ತಿರುವ ಹಾಡನ್ನು ಒಳಗೊಳಗೆ ಗುನುಗುತ್ತ, ಇಲ್ಲವೇ ಗಟ್ಟಿಯಾಗಿ ದನಿಗೂಡಿಸಿ ಹಾಡುತ್ತ ಕಳೆಕಟ್ಟಿಸಿದರು. ಆಮೇಲಾಮೇಲೆ ಸಂಕೋಚ ಬಿಟ್ಟು ಚಪ್ಪಾಳೆ ತಟ್ಟುತ್ತ ಒಳಗಿನ ಕಟ್ಟುಗಳನೆಲ್ಲ ಬಿಡಿಸಿಕೊಂಡು ಹಗುರಾಗುತ್ತ ಹಾಡಿದರು. ಲೌಕಿಕ ಬುದ್ಧಿಗೆ ಮಾತ್ರ ಎಲ್ಲ ಕಶ್ಮಲಗಳು. ಚೇತನಕ್ಕೆ ಯಾವುದರ ಸೋಂಕು? ದೇಹಕ್ಕೆ ಬಂಧನದ ಬೇಡಿ. ಮನಸ್ಸನ್ನ ಬಂಧಿಸುವವರು ಯಾರು? ಅಲ್ಲಿ ಕುಳಿತು ನೋಡುತ್ತಿದ್ದ ನಾವೆಲ್ಲ ಅವರ ತನ್ಮಯತೆಗೆ ಬೆರಗಾಗಿದ್ದೆವು. ನಿಜಕ್ಕೂ, ಅವರು ಹಾಡುತ್ತಿದ್ದಷ್ಟು ಹೊತ್ತು ಅರಳಿದ ಮುಖದಿಂದ ತಮ್ಮ ಸದ್ಯದ ಸ್ಥಿತಿಯನ್ನು ಮರೆತು ಅದರಲ್ಲಿ ಲೀನವಾಗಿಹೋಗಿದ್ದರು. ಈ ತಲ್ಲೀನತೆ ಎಷ್ಟಿತ್ತೆಂದರೆ, ಹೊರಗೆ ಸ್ವಾಮೀಜಿ ಸೀರೆ ವಿತರಿಸುತ್ತಿದ್ದರೂ ಎದ್ದು ಹೋಗದೆ ಕುಳಿತು ಹಾಡುವಷ್ಟು!!

ಸ್ವಾಮಿ ತ್ಯಾಗೀಶ್ವರಾನಂದರ ಮಾತುಗಳು ಆ ಹೆಣ್ಣುಮಕ್ಕಳನ್ನು ಕಲಕಿದ್ದವು. ಅವರೆಲ್ಲರನ್ನೂ ಶಾರದಾ ಮಾತೆಯ ಅಂಶ ಎಂದೇ ತುಂಬು ಗೌರವದಿಂದ ಮಾತನಾಡಿದ ಸ್ವಾಮೀಜಿಯವರ ಕಾಲು ಮುಟ್ಟಿ ನಮಸ್ಕರಿಸಿದ ಅವರು ಭಾವುಕರಾಗಿಬಿಟ್ಟಿದ್ದರು.
ಅರೆ! ಇದು ಜಾಗೋ ಭಾರತ್ ತಂಡದ ಅಂದಿನ ಕಾರ್ಯಕ್ರಮದ ಮೊದಲ ಯಶಸ್ಸು!!
~
ಈಗ ನಮ್ಮ ನಡಿಗೆ, ಗಂಡಸರ ಬ್ಯಾರಕ್ ಕಡೆಗೆ.
ಅದು ಹೆಂಗಸರ ಬ್ಯಾರಕ್ ನಂತಿಲ್ಲ. ದೊಡ್ಡ ದೊಡ್ಡ ಕಲ್ಲಿನ ಕಟ್ಟಡಗಳು, ಮಧ್ಯದಲ್ಲೊಂದು ವಿಶಾಲವಾದ ಮೈದಾನ. ಅಲ್ಲೊಂದು ಸ್ಟೇಜು ಕೂಡ.
ಸುಮಾರು ಎರಡೂ ಸಾವಿರ ಚಿಲ್ಲರೆ ಬಂಧಿಗಳನ್ನಿಡಬಹುದಾದ ಈ ಕೇಂದ್ರದಲ್ಲೀಗ ೪,೭೩೩ ಖೈದಿಗಳಿದ್ದಾರೆ. ಅವರಲ್ಲಿ ಶೇ.೬೫ರಷ್ಟು ವಿಚಾರಣಾಧೀನ ಖೈದಿಗಳು.

ಇಲ್ಲಿನ ನೋಟ ಮಹಿಳಾ ಬ್ಯಾರಕ್ ಗಿಂತ ಬಹಳ ಭಿನ್ನವಿತ್ತು. ಲೂಸ್ ಮಾದನ ಹಾಗಿರುವವರು, ಜೋಗಿ ಹೇರ್ ಸ್ಟೈಲಿನವರು, ಮೆಂಟಲ್ ಮಂಜನ ಸಂಬಂಧಿಕರು, ಅಜ್ಜಂದಿರು, ಮೀಸೆ ಮೂಡದ ಹೈಕಳು ಇವರೆಲ್ಲರ ನಡುವಲ್ಲಿ ಒಂದಷ್ಟು ವೈಟ್ ಕಾಲರು, ಪಂಚೆಗಳವರು… ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇಷ್ಟಾದರೂ ವೈವಿಧ್ಯವಿರದೆ ಹೋದರೆ ಹೇಗೆ ಅಂದಿರಾ? ಆದರೆ ಇಂಥ ಸಮೂಹವನ್ನ ಹಿಂದೆಂದೂ ಎದುರಿಸದ ತಂಡ ಈಗ ಇವರೆದುರು ಹಾಡಬೇಕಿದೆ, ಮಾತಾಡಬೇಕಿದೆ! ಅದಾಗಲೇ ಪೆಂಡಾಲಿನಲ್ಲಿ ನೆರೆದ ಬಂಧಿಬಂಧುಗಳು ಉಡಾಫೆ ಕಣ್ಣೆಸೆದು ಕಾಯುತ್ತ ನಿಂತಿದ್ದಾರೆ. ಸ್ವಾಮಿ ತ್ಯಾಗೀಶ್ವರಾನಂದರ ಮಾತು ಮುಗಿದಿದೆ. “ಕಳೆದ ಸಾರ್ತಿಗಿಂತ ಈ ಸಾರ್ತಿ ಯುವಕರ ಸಂಖ್ಯೆ ಜಾಸ್ತಿಯಾಗಿದೆ” ಎಂದ ಸ್ವಾಮೀಜಿಯವರ ವಿಷಾದಕ್ಕೆ ಚಪ್ಪಾಳೆ ತಟ್ಟಿ ಬೇಸ್ತು ಬೀಳಿಸಿದ್ದಾರೆ! ಇನ್ನೀಗ ತಂಡದ ಸರದಿ….

ಅಲ್ಲಿ ಕಾರ್ಯಕ್ರಮದ ನಿರೂಪಣೆ ಇತ್ಯಾದಿ ಉಸ್ತುವಾರಿ ಹೊತ್ತು ಗಂಭೀರವಾಗಿ ಓಡಾಡಿಕೊಂಡಿದ್ದ ಸೂರ್ಯ ಎನ್ನುವ ಬಂಧಿ(ನಂಗವರು ಬಂಧಿಯೆಂದು ಗೊತ್ತಾಗಿದ್ದು ಲಾಸ್ಟಿಗೆ!)ಗೆ ಯಾಕೋ ತಳಮಳ. ಅವರು ಅಣ್ಣನ ಬಳಿ ಬಂದು, “ಕಾರ್ಯಕ್ರಮಕ್ಕೆ ಮೊದಲು ನಾಲ್ಕು ಮಾತಾಡಿ ಕೇಳುಗರ ಮನಸನ್ನ ಇತ್ತ ಕರೆತನ್ನಿ” ಅಂತ ಕೇಳಿಕೊಂಡರು. ಸ್ವಾಮೀಜಿಯವರದ್ದೂ ಅದೇ ಅಭಿಮತ. ಕೊನೆಗೆ, ಪೂರ್ವನಿಯೋಜಿತವಲ್ಲದ ಚಕ್ರವರ್ತಿಯ ಪುಟ್ಟ ಬಾಷಣವೂ ನಡೆದುಹೋಯ್ತು. ಐದು ನಿಮಿಷದ ಭಾಷಣಕ್ಕೆ ಎರಡು ಚಪ್ಪಾಳೆ ಬಿದ್ದಿದ್ದೇ, ಎಲ್ಲವೂ ಹಿಡಿತಕ್ಕೆ ಬರುತ್ತಿದೆ ಎನ್ನುವ ಸಮಾಧಾನ ಶುರುವಾಯ್ತು.

ಮೊದಲನೆಯದು ‘ಜಾಗೋ ಭಾರತ್’ ಥೀಮ್ ಸಾಂಗ್. ಎರಡನೆಯದು ‘ಸಾರೇ ಜಹಾಂ ಸೆ ಅಚ್ಚಾ’. ಅಮೇಲೆ ‘ಇದೇನಸಭ್ಯತೆ…?’ ಮುಂದೆ, ‘ಕನ್ನಡ ನಾಡಿನ ವೀರರಮಣಿಯ…’ ನಂತರ ‘ಓ ನನ್ನ ದೇಶ ಬಾಂಧವರೇ..’ ಆಮೇಲೆ ‘ಹೇ ಜವನ ಜನನಿ’ ಹೀಗೇ ಮುಂದುವರೆದು ಒಂದೂವರೆ ಗಂಟೆ ಕಾಲಾವಧಿಯಲ್ಲಿ ಒಟ್ಟು ಹತ್ತು ಹಾಡುಗಳು. ನೋಡನೋಡುತ್ತ ಮೈದಾನ ತುಂಬತೊಡಗಿ, ಕೊನೆಯ ‘ವಂದೇ ಮಾತರಮ್’ ಹಾಡಿನ ವೇಳೆಗೆ ಸ್ಟೇಜಿನ ಮೇಲೂ ಬಂಧಿಗಳು ಹತ್ತಿ ಕುಳಿತುಬಿಟ್ಟಿದ್ದರು!
ಪ್ರತಿ ಹಾಡಿಗೆ ಚಪ್ಪಾಳೆ ತಟ್ಟುತ್ತ ಖುಷಿಯಿಂದ ಕೂಗುತ್ತ, ನಿರೂಪಣೆಯ ಮಾತುಗಳಿಗೆ ಬೆರಗುಗಣ್ಣಾಗುತ್ತ, ತಾವೂ ಅದರ ಜೊತೆ ಉತ್ತರವಾಗಿ ಬೆರೆಯುತ್ತ, ಖುಷಿ ಕಂಡ ವಿಷಯಕ್ಕೆ ಮೆಚ್ಚುಗೆ ಸೂಚಿಸುತ್ತ…..
ಓಹ್! “ಇಂಥದೊಂದು ಯಶಸ್ವೀ ಕಾರ್ಯಕ್ರಮ ಆಗಿರಲೇ ಇಲ್ಲ!” ಹಾಗಂದುಬಿಟ್ಟರು, ಸ್ವತಃ ಜಾಗೋಭಾರತ್ ತಂಡದ ಸದಸ್ಯರು!!
ಇದೇ ಮಾತನ್ನ ಹೇಳಿದ ಮತ್ತಿಬ್ಬರು- ಅಲ್ಲಿನ ಸಿಬ್ಬಂದಿ ಪೋಲಿಸರು ಮತ್ತು ಹನ್ನೊಂದು ವರ್ಷಗಳಿಂದ ಸೆರೆಯಲ್ಲಿರುವ ಒಬ್ಬ ಬಂಧಿ.
“ಏನ್ಸಾರ್, ಒಳ್ಳೆ ಪುಂಗಿ… ಪುಂಗಿ ಊದಿ ಹಾವನ್ನ ಆಡ್ಸೋ ಹಂಗ್ ಆಡ್ಸಿಬಿಟ್ರಿ ನಮ್ಮನ್ನ!” ಅಂದಿದ್ದು, ಉದ್ದಕೆ ಜೋಗಿ ಹೇರ್ ಸ್ಟೈಲಿನ ತರುಣ!!

ಕಾರ್ಯಕ್ರಮ ಮುಗಿದ ನಂತರ ಆಶ್ರಮದವತಿಯಿಂದ ಅಲ್ಲಿದ್ದ ಐದುಸಾವಿರ ಮಂದಿಗೂ ಉಸಲಿ ಮತ್ತು ಲಡ್ಡು ಪ್ರಸಾದ ವಿತರಿಸಲಾಯ್ತು. ‘ಲಡ್ಡುವನ್ನು ನಿಮ್ಮ ಕೋಣೆಗೆ ಕಳಿಸಲಾಗುತ್ತದೆ’ ಎಂದಿದ್ದೇ, ಬಂಧಿಗಳು ಆನಂದದ ಕೂಗು ಹಾಕಿದ್ದು ನಮ್ಮ ಹೊಟ್ಟೆ ತುಂಬುವಂತೆ ಮಾಡಿತು. ಇವುಗಳ ಜೊತೆಗೆ ಆಶ್ರಮದ ಕೆಲವು ಪುಸ್ತಕಗಳನ್ನು ಕೂಡ ಸೆರೆಮನೆಯ ವಾಚನಾಲಯಕ್ಕೆ ಕೊಡಲಾಯ್ತು. ಅಂತೂ ನಮ್ಮ ಯುಗಾದಿ ಆಚರಣೆ ಅತ್ಯಂತ ಅರ್ಥಪೂರ್ಣವಾಗಿ, ಸಂಭ್ರಮದಿಂದ ನೆರವೇರಿತ್ತು.
~
ಜಾಗೋ ಭಾರತ್, ಸಂಸ್ಕಾರ ಭಾರತಿಯ ಒಂದು ಅಂಗಭಾಗ. ಕಲೆ, ಸಂಸ್ಕಾರದ ಮೂಲಕ ಜನರಲ್ಲಿ ರಾಷ್ಟ್ರಪ್ರಜ್ಞೆಯನ್ನು ಉದ್ದೀಪಿಸುವುದು ಸಂಸ್ಕಾರ ಭಾರತಿಯ ಧ್ಯೇಯ. ಜಾಗೋಭಾರತ್, ಕಥನ ನಿರೂಪಣೆಯನ್ನೊಳಗೊಂಡ ಗೀತಗಾಯನ ಕಾರ್ಯಕ್ರಮಗಳನ್ನು ನೀಡುತ್ತ, ಸಂಸ್ಕಾರಭಾರತಿಯ ಧ್ಯೇಯದ ಈಡೇರಿಕೆಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಮೂರು ತಿಂಗಳ ಹಿಂದಷ್ಟೆ ಆರಂಭಗೊಂಡ ಈ ತಂಡ, ಅದಾಗಲೇ ರಾಜ್ಯದ ವಿವಿಧೆಡೆ ಹಲವು ಯಶಸ್ವೀ ಕಾರ್ಯಕ್ರಮಗಳನ್ನು ನೀಡಿದೆ. ಈ ತಂಡದಲ್ಲಿ ಚಕ್ರವರ್ತಿ ಸೂಲಿಬೆಲೆ (ನಿರೂಪಣೆ), ಗಣೇಶ್ ದೇಸಾಯಿ, ಮಾಲಿನೀ ಕೇಶವಪ್ರಸಾದ್, ಸಿಂಚನಾ ಮೂರ್ತಿ, ಗಣೇಶ್ ಹೆಗಡೆ (ಹಾಡುಗಾರರು) ಇದ್ದಾರಾದರೂ ಇದು ಇಷ್ಟು ಜನರ ತಂಡ ಮಾತ್ರವಲ್ಲ. ರ್‍ಆಷ್ಟ್ರ ಪ್ರೇಮವಿರುವ ಯಾವ ಕಲಾವಿದರಿಗೂ ಈ ತಂಡದಲ್ಲಿ ಅವಕಾಶವಿದೆ. ಹಾಗೆಯೇ ವಾದ್ಯ ಕಲಾವಿದರಿಗೂ ಕೂಡ. ಮೊನ್ನೆಯ ಯುಗಾದಿಯ ಕಾರ್ಯಕ್ರಮದಲ್ಲಿ ಗುರು ಮೂರ್ತಿ ವೈದ್ಯ, ರಾಜೀವ್, ಪ್ರಕಾಶ್ ಹೆಗಡೆ, ವಾದಿ ಮೊದಲಾದವರಿದ್ದರು. ಮೊದಲೇ ಹೇಳಿದಂತೆ, ಇದು ರಾಷ್ಟ್ರ್‍ಆಸಕ್ತರ ತಂಡ. ಈ ಕಾರ್ಯಕ್ರಮಕ್ಕಾಗಿ ಇವರೆಲ್ಲರೂ ತಮ್ಮ ಬೇರೆ ಕಾರ್ಯಗಳನ್ನು ಬದಿಗೊತ್ತಿ ಬರುವವರೇ.

‘ಕಾರಾಗೃಹದಲ್ಲಿ ಯುಗಾದಿ’ ಈ ಆಚರಣೆಯ ಹಿಂದೆ ‘ಸಂಸ್ಕಾರಭಾರತಿ ಚಕ್ರವರ್ತಿ’ ಎಂದು ತಮ್ಮ ಸಂಸ್ಥೆಯೊಂದಿಗೆ ಅಂಟಿಕೊಂಡೇ ಗುರುತಿಸಲ್ಪಡುವ ಚಕ್ರವರ್ತಿ ತಿರುಮಗನ್ ಅವರ ಬೆಂಬಲ, ಮಾರ್ಗದರ್ಶನ, ಪ್ರೋತ್ಸಾಹಗಳು ಅಗಾಧವಾಗಿತ್ತು. ಹೊರಡುವ ಮುನ್ನ, ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಹರ್ಷಾನಂದಜೀ ಹಾಗೂ ಸ್ವಾಮೀ ಸ್ವಾತ್ಮಾರಾಮಾನಂದರ ಆಶೀರ್ವಾದವೂ ದೊರೆತಿತ್ತು. ಚಕ್ರವರ್ತಿಯವರೂ (ತಿರುಮಗನ್) ಸೇರಿದಂತೆ, ರಾಷ್ಟ್ರ ಶಕ್ತಿ ಕೇಂದ್ರದ ಕೆಲ ಯುವಕರು, ಜಾಗೋಭಾರತ್ ತಂಡದವರು ಮತ್ತು ನಾನು ಸೇರಿ ಒಟ್ಟು ಇಪ್ಪತ್ತೈದು ಮಂದಿ ಅಲ್ಲಿದ್ದೆವು. ಗಣೇಶ್ ದೇಸಾಯಿ ಪತ್ನಿ, ಮೂಡಲ ಮನೆ ಇತ್ಯಾದಿ ಧಾರಾವಾಹಿಗಳ ಖ್ಯಾತಿಯ ನಟಿ, ನೃತ್ಯಗಾತಿ ನಮಿತಾ ದೇಸಾಯಿ ವಿಶೇಷವಾಗಿ ಮಹಿಳಾ ಬಂಧಿಗಳ ಸಂಭ್ರಮಕ್ಕೆ ಕಾರಣವಾದರು. ಅವರು ‘ಸೀರಿಯಲ್ ನವ್ರು’ ಅನ್ನುತ್ತ ನಮಿತಾರನ್ನ ಮಾತಾಡಿಸಿ ಸುಖಿಸಿದರು.
~
ಹೀಗೆ, ಆತಂಕದೊಂದಿಗೆ ಆರಂಭಗೊಂಡ ನಮ್ಮ ಯುಗಾದಿ ಅಚರಣೆ, ಸಂತೃಪ್ತಿಯಿಂದ ಕೊನೆಗೊಂಡಿತು. ಆದರೂ,  ಬಂಧಿಗಳ ಭೋಲೆ ಅನ್ನಿಸುವ ಮುಖಗಳು, ಅದರ ಹಿಂದಿರಬಹುದಾದ ಕ್ರೌರ್ಯ, ವಂಚಕತನ, ಯಾರ ಅಪರಾಧಕ್ಕೋ ಶಿಕ್ಷೆಯುಣ್ಣುತ್ತಿರುವ ಅಮಾಯಕರ ಪಾಡು; ಇವೆಲ್ಲದರ ನಡುವೆ, ಕೋಟಿ ಕೋಟಿ ನುಂಗಿಯೂ ಸಾಯುವವರೆಗೆ ಸುಖಜೀವನ ನಡೆಸುವ ‘ದೊಡ್ಡ ಮನುಷ್ಯರ’ ಹಾಳು ನೆನಪು ಮತ್ತು ಕಂಪ್ಯಾರಿಸನ್ನು…. ಇವೇ ಮೊದಲಾದ ಆಲೋಚನೆಗಳು ನನ್ನೊಳಗೆ ಉಳಿದುಹೋದವು….

13 thoughts on “ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು…

Add yours

 1. ನಾನು ಎಲ್ಲೂ ಹೋಗಲಿಕ್ಕಾಗಲಿಲ್ಲ, ಮನೆಯಲ್ಲೇ ಅಡಿಗೆ, ಊಟ ಬಿಟ್ರೆ ಬೇರೇನೂ ಸಾಧಿಸಲಿಲ್ಲ. ಯುಗಾದಿ ಅರ್ಥಪೂರ್ಣವಾಗಿ ಕಳೆದಿದ್ದಕ್ಕೆ ಅಭಿನಂದನೆ…
  ಸಮಯವಿದ್ದಾಗ ಈ ಪೋಸ್ಟ್ ನೋಡಿ, ನಾವೆಲ್ಲ ಈ ಪ್ರತಿಜ್ಞೆಯ ಜತೆಗೇ ಬೆಳೆದವರು. ರಾಷ್ಟ್ರೀಯ ಭಾವೈಕ್ಯ ಪ್ರತಿಜ್ಞೆ ಶಾಲೆಗಳಲ್ಲಿ ಕಡ್ಡಾಯ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಅದನ್ನು ನಮ್ಮ ಶಾಲೆಗಳಲ್ಲಿ ಕನಿಷ್ಠ ಪಕ್ಷ ಅನುಷ್ಠಾನಕ್ಕೆ ತರಬೇಕು, ತಂದರೆ ನಾಳೆಗಳು ಚೆನ್ನಾಗಿರುತ್ತವೆ ಎನ್ನುವುದು ನನ್ನ ಅನಿಸಿಕೆ. ಜಾಗೋ ಭಾರತ್- ಅಥವಾ ಇಂತಹದೇ ಇನ್ಯಾವುದಾದರೂ ಸಂಘಸಂಸ್ಥೆಯಗಳಲ್ಲಿ ಇಂತಹ ಯೋಚನೆಗಳಿಗೆ ಸ್ಪಂದನವೇನಾದರೂ ಇರುವ ಸಾಧ್ಯತೆಯಿದೆಯಾ ಅಂತ ತಿಳಿಸುವಿರಾ?

 2. ನಾನು ಎಲ್ಲೂ ಹೋಗಲಿಕ್ಕಾಗಲಿಲ್ಲ, ಮನೆಯಲ್ಲೇ ಅಡಿಗೆ, ಊಟ ಬಿಟ್ರೆ ಬೇರೇನೂ ಸಾಧಿಸಲಿಲ್ಲ. ಯುಗಾದಿ ಅರ್ಥಪೂರ್ಣವಾಗಿ ಕಳೆದಿದ್ದಕ್ಕೆ ಅಭಿನಂದನೆ…
  ಸಮಯವಿದ್ದಾಗ ಈ ಪೋಸ್ಟ್ ನೋಡಿ… http://noorukanasu.blogspot.com/2008/12/blog-post.html. ನಾವೆಲ್ಲ ಈ ಪ್ರತಿಜ್ಞೆಯ ಜತೆಗೇ ಬೆಳೆದವರು. ರಾಷ್ಟ್ರೀಯ ಭಾವೈಕ್ಯ ಪ್ರತಿಜ್ಞೆ ಶಾಲೆಗಳಲ್ಲಿ ಕಡ್ಡಾಯ ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಅದನ್ನು ನಮ್ಮ ಶಾಲೆಗಳಲ್ಲಿ ಕನಿಷ್ಠ ಪಕ್ಷ ಅನುಷ್ಠಾನಕ್ಕೆ ತರಬೇಕು, ತಂದರೆ ನಾಳೆಗಳು ಚೆನ್ನಾಗಿರುತ್ತವೆ ಎನ್ನುವುದು ನನ್ನ ಅನಿಸಿಕೆ. ಜಾಗೋ ಭಾರತ್- ಅಥವಾ ಇಂತಹದೇ ಇನ್ಯಾವುದಾದರೂ ಸಂಘಸಂಸ್ಥೆಯಗಳಲ್ಲಿ ಇಂತಹ ಯೋಚನೆಗಳಿಗೆ ಸ್ಪಂದನವೇನಾದರೂ ಇರುವ ಸಾಧ್ಯತೆಯಿದೆಯಾ ಅಂತ ತಿಳಿಸುವಿರಾ?

 3. ಚೇತನಾ ಮೇಡಮ್ ,ನಿಜ ಹೇಳಲೆ ನಿಮ್ಮನ್ನು ನೋಡಿ ಹೊಟ್ಟೆಕಿಚ್ಚು ಆಯಿತು. ನಾವು ನೋಡಿ ಹೊಸ ಯುಗಾದಿಯನ್ನು ಅದೇ ಹಳೆ ಚಿರಪರಿಚಿತ ರೀತಿಯಲ್ಲಿ ಆಚರಿಸಿದೆವು. ಅದೇ ಹೋಳಿಗೆ,ಅದೇ ನಿದ್ದೆ ಅದೇ
  ಹೆಂಡತಿಯ ಸಂಭ್ರಮ…ಏನು ಹೇಳಲಿ ನನ್ನ ಪಾಡು. ನಿಮ್ಮಲ್ಲಿ ಒಂದು ಕೋರಿಕೆ ಇದೆ. ಮುಂದೆ ಎಂದಾದರೂ
  ಇಂತಹ ಕಾರ್ಯಕ್ರಮ ಇದ್ದಾಗ ತಿಳಿಸಿ ನಾ ಬರುವೆ.

 4. ಚೇತನಾ ಅವರೆ,
  ಅಂತೂ ನೀವು ಜೈಲಿಗೆ ಹೋಗಿ ಬಂದ್ರಿ! ಅದು ಕೂಡ ಸಂತೋಷದಿಂದ, ನಗುನಗುತ್ತಾ… ಯುಗಾದಿಯನ್ನೂ ಅರ್ಥಪೂರ್ಣವಾಗಿ ಆಚರಿಸಿದ್ರಿ. ಬೇವಿನ ನಡುವೆ ಬೆಲ್ಲ ಹಂಚಿ ಬಂದ್ರಲ್ಲಾ…

 5. Dear CheTs

  ನಿವೇನೋ ಸೆರೆಮನೆಗೆ ಹೋಗಿ ಯುಗಾದಿ ಆಚರಿಸಿದ್ರಿ. ನಾವು ನಿಮ್ಮನ್ನು ಭೇಟಿಯಾಗುವ ಅಂತ ISKCON ಗೆ ಬಂದಿದ್ವಿ. ಯುಗಾದಿ ದಿನ ನಾವು ಶ್ರೀಕಾಂತ್ ತಾಯಿ ಹೆಸರಲ್ಲಿ iskcon ನ ಅಕ್ಷಯ ಪಾತ್ರೆ ಯೋಜನೆಗೆ,ಕಳೆದ ಆರು ವರ್ಷದಿಂದ ದೇಣಿಗೆ ನೀಡ್ತಾ ಬಂದ್ದಿದ್ದೇವೆ
  glad da that you celebrated Yugadi differently.
  take care
  🙂
  ms

 6. ನಿಮ್ಮ ಯುಗಾದಿಯ ಆಚರಣೆ ಎಲ್ಲರಿಗೂ ಅನುಕರಣೀಯವಾಗಿದೆ. ಪರದೇಶದಲ್ಲಿರುವ ನಾವು ಮನೆಯಲ್ಲಿ ಪೂಜೆ ಮಾಡಿ ಭಾರತೀಯ ಶೈಲಿಯ ಸಾಂಪ್ರದಾಯಿಕ ಹಬ್ಬ ಆಚರಿಸಿದೆವು. ಹಬ್ಬದ ದಿನ ಬರುವ ಗೆಸ್ಟ್ಸ್ ಮರುದಿನ ಶನಿವಾರ ಇದ್ದುದರಿಂದ ಅಂದು ಮನೆಗೆ ಬಂದು ಹೋದರು. ಆದ್ದರಿಂದ್ ಕುಕಿಂಗ್ ಮತ್ತು ಇತರ ಕೆಲಸಗಳಲ್ಲೇ ಸಮಯ ಕಳೆದು ಹೋಯಿತುನನಗು ನಿಮ್ಮಂತೆಯೇ ಹಬ್ಬದ ಆಚರಣೆ ಂದುವ ಆಸೆಯಾಗುತ್ತಿದೆ.. ನಿಮ್ಮ ಬೇವು ಬೆಲ್ಲದ ವಿನಿಮಯ ತುಂಬಾ ಚೆನ್ನಾಗಿದೆ….

 7. ಶ್ರೀ,
  ಧನ್ಯವಾದ. ನಿಮ್ಮ ಸಲಹೆ ಸೂಕ್ತವಾಗಿದೆ. ಜಾಗೋ ಭಾರತ್ ಕಾರ್ಯಕ್ರಮಗಳಲ್ಲಿ ಈ ಸಂಕಲ್ಪ ಸ್ವೀಕಾರವನ್ನು ಅಳವದಿಸಿಕೊಳ್ಳುವುದಾಗಿ ಸದಸ್ಯರು ಹೇಳಿದ್ದಾರೆ.

  ನೀಲಾಂಜನ, ಖುಶಿಗೆ ಖುಷಿ…

  ಉಮೇಶ್,
  ಆಗಲಿ. ಮುಂದಿನ ಸಾರ್ತಿ ಖಂಡಿತ ತಿಳಿಸ್ತೇನೆ…

  LBS,
  Thank you very much

  ಅನ್ವೇಷಿ,
  ಜೈಲಲ್ಲಿ ಜಾಗೋ ಭಾರತ್ ಮಾಡಿದ್ದನ್ನ ನಿಮ್ಮ ಬೊಗಳೆ ಪತ್ರಿಕೇಲಿ ’ಭಾಗೋ ಭಾರತ್’ ಅಂತ ಹಾಕ್ಬೇಡಿ ಮತ್ತೆ 😉

  ರವಿ, ರಂಜನಾ, ಪ್ರಸಾದ್…
  ತುಂಬಾ ಥ್ಯಾಂಕ್ಸ್. (ನಿಮ್ಮ ಸ್ಪಂದನೆಗೆ…)

  ಮಾಲತಿ,
  🙂
  ಹತ್ತಿರವಿದ್ದರೂ ದೂರ ದೂರಾ… 😉

  ಅಬ್ದುಲ್,
  ಹೌದು. ನಿಮ್ಮ ಉತ್ತರ ತಲುಪಿತ್ತು.
  ಪ್ರತಿಕ್ರಿಯೆಗೆ ಧನ್ಯವಾದ.
  (ಓ… ನೀವು ನಮ್ಮ ಭದ್ರಾವತಿಯವ್ರು!!)

  ಪ್ರೀತಿಯಿಂದ,
  ಚೇತನಾ ತೀರ್ಥಹಳ್ಳಿ

 8. ಅರೇ.. ಸೆಂಟ್ರಲ್ ಜೈಲು!! ಎಷ್ಟು ಪುಣ್ಯ ಮಾಡಿದ್ರಿ ನೀವು..
  ನಂಗೂ ಭಾಳಾ ದಿನದಿಂದ ಜೈಲಿಗೆ ಹೋಗಿಬರಬೇಕು ಅಂತ ಅನ್ಸಿದೆ… ಆದ್ರೆ ಏನ್ಮಾಡೋದು? ಎಲ್ಲದಕ್ಕೂ ಕೇಳ್ಕೊಂಡ್ ಬಂದಿರ್ರ್ಬೇಕು.. 😦

  ~ಯಾರು ನಾನು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: