ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?


ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್ದು ಹೋಗಿಬಿಟ್ಟ. “ನಾಳೆಯಿಂದ ನಿನ್ನ ಮರೀತೇನೆ” ಅಂತ ಪತ್ರ ಬರೆದಿದ್ದ. ಯಾವ ನಾಳೆ ನನ್ನ ಮರೆತನೋ, ಮರಳಿ ಬರುವ ಮಾತಂತೂ ಇನ್ನು ಇಲ್ಲ.

ಪಾದಕ್ಕೆ ಮುತ್ತಿಟ್ಟವನ....
ಪಾದಕ್ಕೆ ಮುತ್ತಿಟ್ಟವನ....

ಈ ಕೋಣೆಯ ಕನ್ನಡಿಯಲ್ಲಿ ಅರೆ! ಅವನ ಬಿಂಬ ನಗುತ್ತಲೇ ಇದೆ. ‘ಒಡೆಯನೆಲ್ಲಿ?’ ನನ್ನ ಕಂಡ ಬಿಂಬಕ್ಕೆ ಗಾಬರಿ. ಅಂವ ಎದ್ದು ಹೋಗಿರುವ ಸುದ್ದಿ ನಂಬದೆ ಕುಳಿತಿದೆ ಇನ್ನೂ. ಅದಕ್ಕೆ ತಾನೊಂದು ಸುಳ್ಳು ಅನ್ನೋದು ಗೊತ್ತೇ ಇಲ್ಲ. ನಂಬಿಸಲಿ ಹೇಗೆ ಅದನ್ನ? ಗೋಡೆಗೊರಗಿದ ಮಂಚ ಘಮವಾಗಿ ಕಾಯ್ತಲೇ ಇದೆ ಇನ್ನೂ. ಅಲ್ಲಿ ಇನ್ನೆಂದೂ ಬರೀ ನನ್ನ ಕಳೇವರ ಮಲಗಲಿದೆ ಅಂತ ಹೇಳಬೇಕಿದೆ ಅದಕ್ಕೆ. ಆಡುಭಾಷೆಯಲ್ಲಿ ಜನ, ಕಳೇವರಕ್ಕೆ ಹೆಣ ಅಂತಾರಲ್ಲ? ಅವನಿಲ್ಲದ ಕೋಣೆಗೆ ಬೀಗವಿಕ್ಕಿದ ಎದೆಹೊತ್ತ ನಾನು ಹೆಣವೇ ಒಂಥರಾ.

ಒಳಗೊಳಗೇ ಸುಳಿದು ಬಿಸಿಗಟ್ಟಿದ ಗಾಳಿಗೆ ಅವನ ದನಿಯಪ್ಪುವ ತಹತಹ. ಒಂಟಿ ನನ್ನತ್ತ ಬೀಸದೆ ಉಸಿರುಗಟ್ಟಿಸುತಿದೆ ಹಾಗೇ, ಎದೆಯೊತ್ತಿ ಉಬ್ಬಸ. ಏದುಸಿರಿನ ತುಂಬ ಅವನದೆ ಕನವರಿಕೆ. ಹನಿಗಾಳಿಗೆ ಬೇಡಬೇಕಿರುವ ಜೀವ, ಅವನನ್ನೆ ಬೇಡುತ್ತ ಮೈಮರೆತುಹೋಗಿದೆ.

ಈ ಹಾಳು ಕೋಣೆಯ ಬಲ್ಬಿನಲ್ಲು ಅವನ ಕಣ್ಣಿನದೆ ಬೆಳಕು. ಎಂದೆಂದೂ ಆರದ ನಿತ್ಯನಂದಾದೀಪ. ಆರದಿರಲಿ ಸಧ್ಯ! ಕಣ್ಣೀರನ್ನೆ ಬತ್ತಿಯೊಳಗಿಟ್ಟು ಉರಿಸಿಯೇನು. ಆದರೇನು? ಅವನ ನೆನಪಲ್ಲಿ, ಕಣ್ಣಲ್ಲಿ ಹರಿದಿದ್ದು ಬರೀ ರಕ್ತ.

ಹೋ! ಆ ಕಪಾಟಿನ ಕೀಲಿಕೈ ಎಲ್ಲಿ? ಅದರಲ್ಲಿ ಎಷ್ಟೆಲ್ಲ ಪಿಸುಮಾತುಗಳು!! ಪಾದಕ್ಕೆ ಮುತ್ತಿಟ್ಟವನ ಕೆನ್ನೆ ಕೆಂಪು, ಮಳ್ಳು ನಗು, ಯುಗಯುಗಗಳ ಖಸ್ಮೇ ವಾದೇಂ, ಪ್ರೇಮಕಥೆ ನಾಚಿಸುವ ಆಶುಕವಿತೆಗಳು, ಪರಸ್ಪರ ಹೇಳಿಕೊಂಡ ಸಾವಿರದೆಂಟು ಸುಳ್ಳುಗಳು!! ಚಿಲಕ ಕಿಲುಬಿರುವ ಅದೊಂದು ಕಿಟಕಿ ತೆರೆದರೆ, ಆಚೆಗೇನಿದೆಯೋ? ಯಾವತ್ತೂ ನೋಡಲೇ ಇಲ್ಲ ನಾವು. ತೆರೆಯಲೇ ಇಲ್ಲ ಪ್ರೇಮಗೂಡಿನ ಕಿಟಕಿ. ಹೊರಗನ್ನ ಒಳಸುಳಿಯಲು ಬಿಡದೆ, ಒಳಗನ್ನ ಹೊರಗಿಗೆ ತೆರೆದಿಡದೆ, ಮಾಡಿ- ಮಾಡಿಕೊಂಡ ವಂಚನೆ. ಈಗಲಾದರೂ ತೆರೆದು, ಜಗದ ಅಸಲಿಯತ್ತನ್ನ ಕಂಡು ಕಲಿಯಲೆ?

ರಾಧೇ… ಕೃಷ್ಣನ ಮೈತುಂಬ ರಾಜಕಾರಣ ಕಣೇ. ಆಯತನ ನಿನ್ನ ಎಡಗಾಲಲ್ಲಿ ಒದ್ದಾನು. ಗೋಕುಲದ ಜನಕ್ಕಂತೂ ನೀನು ಸಂಜೆ ಮಾತು. ಪ್ರೇಮದ ಉಸಿರಿಲ್ಲದೆ ಕೊಳಲು ಕೂಡ ಮೂಕ. ಸರಿಯೇ! ಕೊನೆಗೂ ಗಂಡಸಿಗೆ ಬೇಕಾಗುವುದು ತೊಡೆಯೇರಿ ಮುದ್ದಿಸುವ ಪ್ರೇಯಸಿಗಿಂತ, ಕಾಲೊತ್ತಿ ಗುದ್ದಿಸಿಕೊಳ್ಳುವ ಹೆಂಡತಿಯೇ. ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?

ನನಗಿವತ್ತು ಝಾಡಮಾಲಿಯ ಕೆಲಸ. ಚೆಲ್ಲಾಪಿಲ್ಲಿ ಚಿತ್ರಗಳು ಎಷ್ಟಿವೆಯೆಂದರೆ, ಗುಡಿಸುತ್ತಲೇ ಸಾಯಬೇಕು ನಾನು. ಅಥವಾ ಸಾಯುವವರೆಗೂ…..

4 thoughts on “ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?

Add yours

 1. “ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?” ಇದೊಂದು ಸಾಲು ಸಾಕು ಚೇತೂ ನೂರು ಕಥೆ ಹೇಳುತ್ತದೆ. ಎದೆಯ ಕಸ ಗುಡಿಸುವಷ್ಟು ಕಷ್ಟದ ಕೆಲಸ ಬೇರಿಲ್ಲ… ಎಷ್ಟು ಏಗಿದರೂ ಅದು ಸ್ವಚ್ಚವಾಗದೇನೋ ಎನಿಸುವ ಭಾವ

 2. ಆತ್ಮೀಯ
  ಚ೦ದನೆಯ ಬರಹ
  ಗುಡಿಸಿಬಿಡಬೇಡಿ ಆ ಚಿತ್ರಪಟಗಳನ್ನು ಒಪ್ಪ ಓರಣ ಮಾಡಿ ಕಪಾಟಿನಲ್ಲಿಡಿ
  ಕಪಾಟಿಗೊ೦ದು ಬೀಗ ಜಡಿದುಬಿಡಿ ಬೇಕೆನಿಸಿದಾಗ ಹೆಕ್ಕಿ ಕನಸಾಗಿಬಿಡಿ
  ಗುಡಿಸಿಬಿಡುವುದಕ್ಕೆ ಸಾಯುವವರೆಗೂ ಸಮಯಬೇಕು ಆದರೆ …….
  ಹರೀಶ ಆತ್ರೇಯ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: