ಮತಕ್ಕೊಂದು ಬಣ್ಣ! ಅತಿ ಹೆಚ್ಚು ಕಚ್ಚಾಡುವ ಪ್ರಾಣಿಗಳು ಯಾವುವು?


ತೀರ ಇತ್ತೀಚಿನವರೆಗೂ ಅಂದರೆ ದಶಕದ ಹಿಂದಿನವರೆಗೂ ಇವೆಲ್ಲ ಇಷ್ಟು ಹದಗೆಟ್ಟಿರಲಿಲ್ಲ. ಅವರು ಮಾಡ್ತಾರೆ ಅಂತ ಇವ್ರು, ನೋಡ್ಕೊಂಡು ಸುಮ್ನಿರಬೇಕ ಅಂತ ಮತ್ತೊಬ್ರು ಎಲ್ರೂ ಕಾಂಪಿಟೇಷನ್ನಿನ ಮೇಲೆ ಧರ್ಮದ ಹೆಸರಲ್ಲಿ ಅನಾಚಾರ ಮಾಡೋರೇ. ಈ ಕರ್ಮಕಾಂಡಕ್ಕೆ ಹೊಸ ಸೇರ್ಪಡೆ- ಚರ್ಚಲ್ಲಿ ಕನ್ನಡದ ಬಾವುಟ ಹಾರಿಸಿದ್ದಕ್ಕೆ ತಕರಾರು ತೆಗೆದಿರುವ ಘಟನೆ. ಎಂಥ ಅಸಹ್ಯ-ವಿಕೃತ ಮನುಷ್ಯರು!

ವಂದೇ ಮಾತರಂ ಗೀತೆಯನ್ನ ‘ಹಿಂದೂ ದೇವಿಯ ಪೂಜೆ’ ನಾವು ಅದನ್ನ ತಿರಸ್ಕರಿಸ್ತೇವೆ ಅಂತ ಕೆಲವರಂದರು. ನಾಲ್ಕು ಹೆಜ್ಜೆ ಮುಂದೆ ಹೋಗಿ ಶ್ರದ್ಧಾವಂತರ ಮನನೋಯಿಸುವ ಜೋಶಾವೇಶದ  ಮಾತನ್ನೂ ಆಡಿದರು. ಅದಕ್ಕೆ ಸರಿಯಾಗಿ ಮತ್ತೆ ಕೆಲವರು ರೆಹಮಾನರಂಥ ಅದ್ಭುತ ಪ್ರತಿಭೆ ಪ್ರೀತಿಯಿಂದ ಹೆಣೆದ ‘ಮಾ ತುಝೆ ಸಲಾಮ್’ ಅನ್ನು ‘ಮಾ ತುಝೆ ಪ್ರಣಾಮ್’ ಎಂದು ಬದಲಿಸಿ ಹಾಡತೊಡಗಿದರು….. ಇಂಥ ಒಡಕುಗಳೆಲ್ಲ ತೊಲಗಿ, ಪರಸ್ಪರ ಗೌರವ, ಸಹನೆ ಬೆಳೆಯುವ ದಿನ ಬಂದೀತಾ ಅಂತ ಕಾಯ್ತಿದೇನೆ.  ಇಂಥ ‘ಅದಕ್ಕೇ ಹೀಗೆ, ಇದಕ್ಕೇ ಹಾಗೆ’ ಕಚ್ಚಾಟಗಳು ಹೇಸಿಗೆ ಹುಟ್ಟಿಸುತ್ತವೆ ನಿಜಕ್ಕೂ.

ನಿಮಗೆ ವಿಷಯ ಏನು ಅಂತ ಗೊತ್ತಿಲ್ಲದಿದ್ದರೆ, ಹೇಳ್ತೀನಿ ಕೇಳಿ… ನವೆಂಬರ್‌ನಲ್ಲಿ ಕಂಟೋನ್ಮೆಂಟಿನ ಸೈಂಟ್ ಝೇವಿಯರ್ ಚರ್ಚಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ. ನೆರೆ ಸಂತ್ರಸ್ತರಿಗಾಗಿ ಕಂಬನಿ ಮಿಡಿದು ಪರಿಹಾರ ಸಹಾಯದ ನಿರ್ಣಯವನ್ನೂ ಮಾಡಿದ್ದಾರೆ. ಈ ಮಾನವೀಯ ಕೃತ್ಯಕ್ಕೆ ದೊರೆತ ಬಹುಮಾನ ಏನು ಗೊತ್ತೆ? ಮತಾಂಧ ಕ್ರೈಸ್ತ ಸಂಘಟನೆಯೊಂದರಿಂದ ಚರ್ಚಿನ ಮೇಲೆ ಕಾನೂನು ಕ್ರಮಕ್ಕೆ ಅಹವಾಲು. ಸದರಿ ಚರ್ಚಿನ ಮೇಲೆ ದೂರು ನೀಡಿ ಈ ಪ್ರಕರಣವನ್ನು ನ್ಯಾಯಾಲಯಕ್ಕೆಳೆದಿದೆ. ಆ ಮತಾಂಧ ಸಂಘಟನೆ ಹೇಳೋದೇನು ಗೊತ್ತೆ? ಕನ್ನಡ ಬಾವುಟದಲ್ಲಿರುವ ಕೆಂಪು- ಹಳದಿ ಬಣ್ಣಗಳು ಅರಿಷಿಣ -ಕುಂಕುಮ ಸಂಕೇತವಾಗಿದ್ದು, ಹಿಂದೂ ಧರ್ಮದ ಪ್ರತೀಕವಾಗಿದೆ, ಅದನ್ನು ಚರ್ಚಿನ ಆವರಣದಲ್ಲಿ ಹಾರಿಸೋದು ಧರ್ಮಕ್ಕೆ ಅಪಚಾರ ಅಂತ!! ಅದರಿಂದ ಶಾಂತಿ ಭಂಗವೂ ಆಗುತ್ತದಂತೆ!!

ನನಗೇನು ಭಯ ಅಂದರೆ, ಈ ಕೆಲವು ಶಾಂತಿ- ಸೌಹಾರ್ದ ಚಿಂತನೆಗಳ ಜನರಿಗೆ ಇಷ್ಟು ದಿನದಿಂದ ಈ ಥರದ ಐಡಿಯಾ ಹೊಳೆಯದೆ ಇದ್ದು, ಈಗ ಕ್ಯಾತೆ ತೆಗೆಯಲಿಕ್ಕೊಂದು ವಿಷಯ ಸಿಕ್ಕು, ‘ಕನ್ನಡ ಬಾವುಟ ಬದಲಾಗಲಿ’ ಅಭಿಯಾನ ಶುರುವಿಡುತ್ತಾರಾ ಅಂತ….
ಹಾಗೇನೂ ಆಗದಿರಲಿ…. ಎಲ್ಲ ಮತಧರ್ಮಗಳ ಎಲ್ಲ ಮತಾಂಧರಿಗೂ, ಎಲ್ಲ ಸಿದ್ಧಾಂತಗಳ ಸಿದ್ಧಾಂತಾಂಧರಿಗೂ(!?) ಆಯಾ ಮತದ ದೇವರುಗಳು, ಆಯಾ ಸಿದ್ಧಾಂತಗಳ ಮೂಲ ಪುರುಷರು ಸದ್ಬುದ್ಧಿ ಕೊಡಲಿ ಅಂತ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ಪ್ರಾರ್ಥಿಸಿಕೊಳ್ತೀನಿ.

ಹಾಗೇನೇ ನಾವು ಕೂಡ ಒಟ್ಟಾರೆಯಾಗಿ ಈಗ ಕೇಸು ಹಾಕಿದವರು ಕ್ರಿಶ್ಚಿಯನ್ನರು ಅಂತ ಕ್ರೈಸ್ತರನ್ನೆಲ್ಲ ದೂರೋದು, ಅವರಿಗೆ ದೇಶಾಭಿಮಾನವೇ ಇರೋಲ್ಲ ಅನ್ನೋದು; ಭಯೋತ್ಪಾದಕರಲ್ಲಿ ಮುಸ್ಲಿಮರ ಮೇಲುಗೈ ಅಂದಮಾತ್ರಕ್ಕೆ ಇಡಿಯ ಮುಸ್ಲಿಮ್ ಜನಾಂಗವನ್ನ ದ್ವೇಷಿಸೋದು- ಅವಮಾನಿಸೋದು; ಹಾಗೇನೇ, ಮಾಲೆಗಾಂವ್ ಸ್ಫೋಟ, ಚರ್ಚಿಗೆ ಕಲ್ಲು, ಪಬ್ ದಾಳಿಗಳನ್ನ ದಾಳ ಮಾಡ್ಕೊಂಡು ಒಟ್ಟಾರೆ ಹಿಂದೂ ಸಂಸ್ಕೃತಿಯ ಬಗಗೇ ಕೇವಲವಾಗಿ ಮಾತಾಡೋದು ಇದನೆಲ್ಲ ಬಿಡ್ಬೇಕು. ಆದರೇನು ಮಾಡೋದು? ಇಂಥದನ್ನೆ ಬಂಡವಾಳ ಮಾಡ್ಕೊಂಡು ಬದುಕು ನಡೆಸ್ತಿರೋರ ಗತಿ ಕೊನೆಗೆ ಏನಾಗಬೇಕು? ಅದಕ್ಕೇನೇ ಜನ ತಮ್ಮ ಪಾಡಿಗೆ ತಾವಿದ್ರೂ ಅವರು ಇಂಥದೆಲ್ಲ ಮಾಡ್ತಲೇ ಇರ್ತಾರೆ. ನಮ್ಮ ಎಚ್ಚರಿಕೇಲಿ ನಾವಿರೋದಷ್ಟೆ ನಾವು ಮಾಡಬಹುದಾದ ಕೈಎಟುಕಿನ ಕೆಲಸ.

ಅಂದ ಹಾಗೆ, ಇದು ಚರ್ಚೆಗಿಲ್ಲ. ನಾನು ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಅದನ್ನ ಮಾತ್ರ ಬರೀಬೇಕು ಅಂತ ಇದ್ದೆ. ಸುಮ್ಮನಿರಲಾಗದೆ ಇದೊಂದು ಟಿಪ್ಪಣಿಯಷ್ಟೆ. ಪ್ರತಿ ಹಗಲೂ ಇಡೀ ಜಗತ್ತಲ್ಲೇ ಇಂಥದು ನಡೀತಿರತ್ತಲ್ಲ (ಜಾತಿ ವಿಷಯ ಅಲ್ದಿದ್ರೆ ಜನಾಂಗೀಯ ದ್ವೇಷದ್ದು), ಆ ಥರದ್ದು ಸಿಕ್ಕಾಗ ಮತ್ತೆ ಮಾತಾಡಬಹುದು ಅಂತ…
ಬಟ್ ಅಂಥ ಅವಕಾಶಗಳು ಯಾವತ್ತೂ ಸಿಗದ ಹಾಗೆ ಆಗಲಿ ಅಂತ ನೀವೂ ನನ್ನೊಟ್ಟಿಗೆ ಕೇಳ್ಕೊಳ್ತೀರಲ್ಲ?

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

ಟಿಪ್ಪಣಿಗಳನ್ನು ನಿಲ್ಲಿಸಲಾಗಿದೆ.

Create a free website or blog at WordPress.com.

Up ↑

%d bloggers like this: