ವಿವಾದ ಮತ್ತು ನನಗನಿಸಿದ್ದು….


ತಸ್ಲಿಮಾ ಬುರ್ಖಾಕೆ ಬೆಂಕಿ ಹಾಕಿ ಅಂದಿದ್ದಳು. ಜನ ಸಾರ್ವಜನಿಕ ಆಸ್ತಿಗೆ ಬೆಂಕಿ ಇಟ್ಟರು. ದೊಂಬಿ ಹತ್ತಿಕ್ಕಲು ನಡೆದ ಗೋಲೀಬಾರಿನಲ್ಲಿ ಒಬ್ಬ ಅಮಾಯಕ ಪ್ರಾಣ ತೆತ್ತರೆ, ಏನೂ ಅರಿಯದ ಹುಡುಗ ಇರಿತಕ್ಕೊಳಗಾದ. ಸಾಕಷ್ಟು ನಷ್ಟವಾಯ್ತು. ಎಲ್ಲಕ್ಕಿಂತ ಜನರ ಮನಸುಗಳು ಮತ್ತಷ್ಟು ಮುರುಟಿಹೋದವು.

ಈ ಹೊತ್ತು ನನ್ನ ನೋವು, ಸಮಾಜ ಯಾಕಿಷ್ಟು ಅಸಹಿಷ್ಣುವಾಗಿದೆ ಅನ್ನುವುದರ ಬಗ್ಗೆ. ತಸ್ಲಿಮಾಳ ಬರಹಗಳು ಹೊಸತೇನಲ್ಲ. ಸಾರ್ವಜನಿಕ ಓದಿಗೆ ಸಿಗುತ್ತಿರುವುದೂ ಮೊದಲ ಸಾರ್ತಿಯಲ್ಲ. ಈ ಬಾರಿ ಪತ್ರಿಕೆ ಆಕೆಯ ಲೇಖನವನ್ನು ಪ್ರಕಟಿಸಿದ ಸಮಯ ಸರಿಯಿಲ್ಲ. ಹಬ್ಬದ ದಿನವೇ ಇಂತಹದನ್ನು ಓದಿ ತಕ್ಕಮಟ್ಟಿಗೆ ನೋವಾಗುವುದು ಸಹಜ. ಆದರೆ, ಅದು ಮಾರಣಾಂತಿಕ ಗಲಭೆ ಎಬ್ಬಿಸುವಷ್ಟು ತೀಕ್ಷ್ಣವಾಗಿತ್ತೇ? ಹೌದೆ? ಆ ಲೇಖನ ಅಷ್ಟೊಂದು ಕಟುವಾಗಿತ್ತೆ?

ಶಿಕ್ಷಣ, ಪ್ರಗತಿ, ವೈಚಾರಿಕತೆಯ ಈ ಶತಮಾನದಲ್ಲು ನಮ್ಮ ಸಹಜೀವಿಗಳು ಕೆಲವರು ಅದೇಕೆ ಅಷ್ಟೊಂದು ಹಿಂದೆ ಉಳಿದಿದ್ದಾರೆ? ಅದು ನೋವಿನ ವಿಷಯ. ಯಾಕೆ ಈ ಪರಿಯ ಅಂಧತೆ, ಕುರುಡುಪ್ರೇಮ ತುಂಬಿಕೊಂಡಿದೆ ಅಲ್ಲಿ? ಅದು ವಿಷಾದ.

ಲೇಖನ, ಅದನ್ನು ಪ್ರಕಟಿಸಿದ ಪತ್ರಿಕೆಯ ಜವಾಬ್ದಾರಿತನಗಳಿಗಿಂತ ಹೆಚ್ಚು ಚರ್ಚೆಯಾಗಬೇಕಿರುವುದು ಇದು ಅನಿಸುತ್ತದೆ. ಪ್ರತಿ ಸಾರ್ತಿಯೂ ವಿಷಯಾಂತರ ಮಾಡಿ ದಿಕ್ಕು ತಪ್ಪಿಸುತ್ತ ಹೋದರೆ ನಮ್ಮ ಬಂಧುಗಳು ಹಾಗೇ ಉಳಿದುಹೋಗುತ್ತಾರಲ್ಲವೆ?

ಬಹುಶಃ ನಾವೆಲ್ಲರೂ ಓದಿದ್ದೇವೆ. ಭಗವದ್ಗೀತೆ ಹೇಳಿದ ಕೃಷ್ಣ ಜಾರ, ಚೋರ, ಹಿಂಸೆಯನ್ನು ಉದ್ದೀಪಿಸಿದವ ಅಂತೆಲ್ಲ. ರಾಮನ ಬಗ್ಗೆ, ಇರುವ ಮುಕ್ಕೋಟಿ ಚಿಲ್ಲರೆ ದೇವತೆಗಳ ಬಗೆಗೆಲ್ಲ ಟೀಕೆಗಳಿವೆ. ಇತ್ತೀಚೆಗೆ ನಮ್ಮಲ್ಲೂ ಕೆಲವು ಅಸಹಿಷ್ಣು ಸಂಘಟನೆಗಳು ಹುಟ್ಟಿಕೊಂಡು ಕಿಡಿಗೇಡಿತನ ಮಾಡುತ್ತಿವೆ ಅನ್ನುವುದು ಆತಂಕದ ವಿಷಯ ಹೌದು. ಆದರೆ ಈ ಪರಂಪರೆಯ ಜತೆ ಗುರುತಿಸ್ಕೊಂಡಿರುವ ನಾವು ಒಗ್ಗಟ್ಟಾಗಿ ಅಂತಹ ಶಕ್ತಿಗಳ ವಿರುದ್ಧ ಮಾತಾಡುತ್ತೇವೆ. ನಮ್ಮ ಆಚಾರ ವಿಚಾರ ನಂಬಿಕೆಗಳ ಬಗ್ಗೆ ಬರುವ ಟೀಕೆಯನ್ನ ತೆರೆದ ಹೃದಯದಿಂದ ಸ್ವೀಕರಿಸ್ತೇವೆ. ಅದೇ ನಮ್ಮ ಜೊತೆಯಿರುವ ನಮ್ಮ ಜನರೇಕೆ ಇವೆಲ್ಲದರಿಂದ ದೂರ? ಮೊದಲಿಂದಲೂ ಈ ನಮ್ಮವರನ್ನು ಆಡಳಿತದ ಅನುಕೂಲಕ್ಕಾಗಿ ಮುಸುಕಲ್ಲಿ ಪ್ರತ್ಯೇಕವಾಗಿಟ್ಟು ಇಟ್ಟು ಸರ್ಕಾರಗಳು ತಪ್ಪು ಮಾಡಿದವಲ್ಲವೆ? ಅಥವಾ ನಾವೂ ನಮ್ಮವರನ್ನೇ ಬೇರೆಯಾಗಿ ನೋಡುತ್ತ ಅಂತರವನ್ನು ಕಾಯ್ದಿಟ್ಟುಕೊಂಡು ಅಭದ್ರತೆ ಮೂಡಿಸಿದೆವಾ?

ಇದು ಎಲ್ಲರೂ ಯೋಚಿಸಬೇಕಿರುವ ಕಾಲ. ಕೋಮು ಸೌಹಾರ್ದದ ಹೆಸರಲ್ಲಿ ಒಡಕು ಮೂಡಿಸುತ್ತಿರುವವರು ಹಾಗೂ ಧರ್ಮ ಶ್ರೇಷ್ಟತೆಯ ಹೆಸರಲ್ಲಿ ಭಾವನೆಗಳನ್ನು ಕೆರಳಿಸುತ್ತ ಕೋಮು ವಿಭಜನೆ ಮಾಡುತ್ತಿರುವವರು. ಇಲ್ಲಿ ಯಾರನ್ನೂ ವಹಿಸಿಕೊಳ್ಳುವ ಅಥವಾ ದೂರುವ ಉದ್ದೇಶವಲ್ಲ. ಎರಡು ಜೀವಗಳು ಅಕಾರಣವಾಗಿ ಕಳೆದುಹೋದ ನೋವಿನಿಂದ, ಅದಕ್ಕೆ ಕಾರಣವಾಗಿದ್ದು ಒಂದು ಲೇಖನ- ಅದು ಕೂಡ ಸ್ತ್ರೀವಾದಿ ಹೆಣ್ಣುಮಗಳೊಬ್ಬಳು ತನ್ನ ಧರ್ಮ ಹೇರಿರುವ ನಿಯಮವನ್ನು ವಿರೋಧಿಸಿ ಬರೆದ ಲೇಖನ ಅನ್ನುವುದು.

ವೈಯಕ್ತಿಕವಾಗಿ ನನಗನ್ನಿಸುವ ಹಾಗೆ ಇದೀಗ ಹೆಣ್ಣುಮಕ್ಕಳ ಕಾಲ. ನಾವು ಒಂದಾಗದ ಹೊರತು ಜಗತ್ತಿನಲ್ಲಿ ಶಾಂತಿ ಸಾಧ್ಯವಿಲ್ಲ. ರಾಜಕಾರಣ ಹುತ್ತಗಟ್ಟಿಹೋಗಲಿ ಬಿಡಿ. ನಾವೆಲ್ಲರೂ ನಮ್ಮನಮ್ಮವರನ್ನು ಕೂಡಿಕೊಂಡು ಜಾತಿ ಮತಗಳಿಲ್ಲದ, ಮೌಢ್ಯವಿಲ್ಲದ, ವಿಕೃತಿಯಿಲ್ಲದ ಸ್ವಸ್ಥ ಸಮಾಜವೊಂದನ್ನು ನಿರ್ಮಿಸಲು ಸಾಧ್ಯ. ನಮಗೆ ಮಾತ್ರವೇ ಧರ್ಮದ ದರ್ಪದಿಂದ, ಅಧಿಕಾರದ ದಾಹದಿಂದ ಹೊರಗಿದ್ದು ಬರೀ ಪ್ರೀತಿಯನ್ನು, ಬೆಸುಗೆಯನ್ನು ಅರಸಿ ದುಡಿಯಲು ಸಾಧ್ಯ. ಅದಕ್ಕೆ ನಾವು ಕೇವಲ ಮಮತೆಯ ನಮ್ಮ ಹೆಣ್ತನವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ.

ನೋವಾಯ್ತು…. ಗೆಳತಿಯೊಬ್ಬಳು ಈ ಸಂದರ್ಭದಲ್ಲಿ ಕುಹಕವೆನಿಸುವಂತೆ ಪ್ರತಿಕ್ರಿಯಿಸಿದಳು. ನನ್ನ ‘ಸಮೂಹ ಗಾನ’ ಪುಟದಲ್ಲಿದೆ ಕಮೆಂಟು. ಹೆಣ್ಣು, ಜವಾಬ್ದಾರಿಯುತ ಪತ್ರಕರ್ತೆ, ಸಾಮಾಜಿಕ ಕಳಕಳಿ ಕೂಡ ಇರುವ ಆಕೆಯಿಂದ ಇಂತಹದನ್ನು ನಿರೀಕ್ಷಿಸಿರಲಿಲ್ಲ.

ಬಹುಶಃ ಇದು ನಿಯತಿಯ ಸಂಚು. ಯಾವುದರ ಒಗ್ಗೂಡುವಿಕೆಯಿಂದ ಜಗತ್ತಿಗೆ ಒಳಿತಾಗುತ್ತದೋ, ಅವು ಒಗ್ಗೂಡದಂತೆ ತಡೆಯುವುದು. ನನಗನಿಸುತ್ತೆ, ಅದಕ್ಕೇ ನಾವು- ಹೆಣ್ಣುಮಕ್ಕಳು ಒಟ್ಟಾಗಿ ಅಭಿಪ್ರಾಯಗಳನ್ನು ಹಂಚಿಕೊಂದು ಒಪ್ಪಿ- ಒಪ್ಪಿಸಿ ಮುನ್ನಡೆಯಲು ಸಾಧ್ಯವಾಗುತ್ತಿಲ್ಲ.

ಈ ಸನ್ನಿವೇಶದಲ್ಲಿ ಇಲ್ಲವಾದ ಎರಡು ಜೀವಗಳಿಗೆ ಶಾಂತಿ ಕೋರುತ್ತಾ, ನಮ್ಮ ಎಲ್ಲ ಜನರಿಗೂ ವಿಮರ್ಶೆ ಸಹಿಸುವ- ಸಹಿಷ್ಣುತೆಯ ಮನಸ್ಸು ಸಿದ್ಧಿಸಲೆಂದು ಬೇಡಿಕೊಳ್ಳುತ್ತಾ, ಮಾಧ್ಯಮಗಳು ಮತ್ತಷ್ಟು ಎಚ್ಚರದಿಂದ ಮುಂದುವರೆಯಲೆಂದು ಆಶಿಸುತ್ತಾ….

ವಿಷಾದ ಮತ್ತು ಪ್ರೀತಿಯಿಂದ,
ಚೇತನಾ

ಟಿಪ್ಪಣಿಗಳನ್ನು ನಿಲ್ಲಿಸಲಾಗಿದೆ.

Blog at WordPress.com.

Up ↑

%d bloggers like this: