ಎಲ್ಲಿಂದೆಲ್ಲಿಗೋ ಹರಿದು ಹರಟೆ…


ಇತ್ತೀಚೆಗೆ ಲೈಕ್ ವಾಟರ್ ಫಾರ್ ಚಾಕೊಲೇಟ್ ಮೂವಿ ನೋಡಿದೆ. ಅದಕ್ಕಿಂತ ಮುಂಚೆ ನಾವೆಲ್ ಓದಿದ್ದೆ. ಆಮೇಲೆ ಗೆಳತಿ ಟೀನಾ, ‘ಎನ್ನ ಭವದ ಕೇಡು’ ಹಾಗೇ ಇದೆ ಕಣೇ ಅಂದಳು. ಅದನ್ನೂ ಓದಿದೆ. ಹೌದು. ಚೆಂದ ಭಾವಾನುವಾದ ಮಾಡಿದಾರೆ. ನೇಟಿವಿಟಿಗೆ ಇಳಿಸಿದರೆ ಹಾಗೆ ಇಳಿಸಬೇಕು. ನಿಜ್ಜ ದಾವಣಗೆರೆಯಲ್ಲಿ ನಡೆದಿತ್ತೇನೋ ಅನ್ನುವ ಹಾಗೆ. ಓದಿ ಖುಷಿ ಆಗಿ, ಇನ್ನೂ ಅದರದೆ ಗುಂಗಲ್ಲಿದ್ದಾಗ, ‘ಗಾನ್ ವಿದ್ ದ ವಿಂಡ್’ ಮೂವಿ ನೋಡುವ ಯೋಗ. ನಾವೆಲ್ ಓದುವಾಗ ಏನೆಲ್ಲ ಕಲ್ಪಿಸ್ಕೊಂಡಿದ್ದೆನೋ ಹಾಹಾಗೇ ಪಾತ್ರಗಳು… ಅಷ್ಟು ದೊಡ್ಡ ಕಾದಂಬರಿಯನ್ನ ಸಿನೆಮಾದಲ್ಲಿ ಎಷ್ಟು ಚತುರತೆಯಿಂದ ಕಟ್ಟಿಕೊಟ್ಟಿದಾರೆ ಅಂದ್ರೆ… ಬಿಡಿ, ಅದು ಹಳೆ ಕಥೆ, ಹಳೆ ಸಿನೆಮಾ. ನಾನು ನೋಡಲಿಕ್ಕೆ ಇಷ್ಟು ದಿನ ಬೇಕಾಯ್ತು.

ನಂಗೆ ಮುಂಚೆ ಗೊತ್ತಿರ್ಲಿಲ್ಲ, ವರ್ಲ್ಡ್ ಕ್ಲಾಸಿಕ್ ಸಿನೆಮಾಗಳು ಎಲ್ಲಿ ಸಿಗ್ತವೆ ಅಂತ. ಸುಮ್ನೆ ಎಲ್ರನ್ನೂ ಕೇಳ್ಕೊಂಡು ಗೋಗರೀತಿದ್ದೆ. ಒಳ್ಳೊಳ್ಳೆ ಪುಸ್ತಕಗಳನ್ನ, ಸಿನೆಮಾಗಳನ್ನ ಖುಷಿಯಿಂದ ಶೇರ್ ಮಾಡಿಕೊಳ್ಳುವ ಗೆಳೆಯ ಚಂದ್ರು, ‘ಶಾಪ್ ನಂ.೩೩’ ಸೀಕ್ರೆಟ್ ಹೇಳಿದರು. ಗಿಜಿಗುಟ್ಟುವ ಪುಟಾಣಿ ಗೂಡಂಗಡಿಯಲ್ಲಿ (ಲಿಟರಲಿ, ಅದು ನ್ಯಾಶನಲ್ ಮಾರ್ಕೆಟ್ಟಿನ ಗೂಡಂಗಡಿಯೇ!) ‘ಸಿನೆಮಾ ಪ್ಯಾರಡಿಸೋ’ವೇ ಇದೆ! ಅಂದ್ರೆ, ಆಲ್ಮೋಸ್ಟ್ ಸಿನೆಮಾ ಸ್ವರ್ಗ!!. ಅಮ್ಮ ಜತೆಗಿಲ್ಲದಿದ್ದರೆ ದೊಡ್ಡ ತಿರುಪತಿಯೇ ಆಗ್ತಿತ್ತು. ಅವಳಿದ್ದುದರಿಂದ ಚಿಕ್ಕತಿರುಪತಿಗೇ ಎಲ್ಲ ಮುಗೀತು. ನಾನು ಕೊಂಡಿದ್ದು ಪೂರಾ ೨೫ ಸಿನೆಮಾಗಳನ್ನ. ಒಂದಕ್ಕಿಂತ ಒಂದು ಕ್ಲಾಸಿಕ್. ಅವನ್ನೆಲ್ಲ ನೋಡಲು ಮುಂದಿನ ಮೂರು ಜನ್ಮ ರಿಜಿಸ್ಟರ್ ಮಾಡಿಕೋಬೇಕು. ಇಲ್ಲಾ, ಭಾನುವಾರಗಳನ್ನ ನಂದಲ್ಲ ಅಂತ ತೆಗೆದಿಡಬೇಕು. ಯಾಕಂದ್ರೆ, ನನ್ ಪಾಲಿಗೆ ಸಿನೆಮಾ ನೋಡೋದಂದ್ರೆ, ಅದೊಂದು ರಿಚುವಲ್. ಕೆಲವ್ರೆಲ್ಲ ಹೇಳೋ ಹಾಗೆ ನಂಗೆ ಸಿನೆಮಾನ ಸಿನೆಮಾ ಆಗಿ ನೋಡಕ್ಕೆ ಬರಲ್ಲ, ಕಥೆ-ಕವಿತೆ ಇತ್ಯಾದಿಗಳನ್ನ ಅದದೇ ಆಗಿ ಓದಕ್ಕೆ ಬರಲ್ಲ :(.

ತೊಗೊಂಡು ವಾಪಸು ಬರುವಾಗ ಏನಾಯ್ತು ಅಂದ್ರೆ, ಯಥಾ ಪ್ರಕಾರ ಸಿಗ್ನಲ್ಲಲ್ಲಿ ಮಫ್ಲರು ಕಟ್ಕೊಂಡ ಹೆಂಗಸೊಬ್ಬಳು ಮಗುವನ್ನ ಜೋಳಿಗೆಗೆ ಹಾಕ್ಕೊಂಡು ಕಯ್ಯೊಡ್ಡಿದ್ಲು. ಸಿಕ್ಕಾಪಟ್ಟೆ ರೇಗಿಹೋಯ್ತು. ಅದೆಲ್ಲಿತ್ತೋ ವಾಯ್ಸು, ಚೆನ್ನಾಗಿ ಕಿರುಚಾಡಿಬಿಟ್ಟೆ. ಆ ವಮ್ಮ ಅಲ್ಲೇ ಆಟೋಗೆ ಉಗಿದು ಹೋಯ್ತು! ಅದೂ ತೆಲುಗಲ್ಲಿ ಶಾಪ ಹಾಕ್ಕೊಂಡು. ಎಲ್ಲಿ ಓದಿದ್ದು… ಬಹುಶಃ ಅಣ್ಣನ ನೆನಪುಗಳಲ್ಲಿ. ಕರು ಸತ್ತ ಹಸುವಿನ ಹಾಲು ಕರೆಯೋದಕ್ಕೆ, ಸತ್ತ ಕರುವಿನ ಚರ್ಮದೊಳಗೆ ಹುಲ್ಲು ತುಂಬಿಸಿ, ಪಕ್ಕ ನಿಲ್ಲಿಸಿ ಅದಕ್ಕೆ ಕರುವಿದೆ ಅಂತ ನಂಬಿಸಿ ಹಾಲು ಕರೀತಿದ್ನಂತೆ, ಕುವೆಂಪು ಮನೆಗೆ ಹಾಲು ಕೊಡೋ ಗೌಳಿ. ಅದನ್ನ ನೋಡಲಾಗದೆ ಕುವೆಂಪು ನಾಳೆಯಿಂದ ಹಾಲು ಬೇಡ ಅಂತ ನಿಲ್ಲಿಸಿದರಂತೆ. ಅದೆಲ್ಲಿ ಲಿಂಕೋ? ಇದರೊಟ್ಟಿಗೆ ಅದು ನೆನಪಾಗಿ ಒಂಥರಾ ಸಂಕಟ.

‘ಯಾಕೋ ಈ ಸಂವತ್ಸರಾನೇ ಸರಿಯಿಲ್ಲ.’ ಹಾಗೇ, ಸಿಗ್ನಲ್ ಬಿದ್ದು ಆಟೋ ಹೊರಡುವಾಗ ಅಮ್ಮ ಅಂದಳು. ‘ಯಾಕೆ?’ ‘ರಾಘಣ್ಣ ಹೋದ. ಯೋಗೀಶಂಗೆ ಆಕ್ಸಿಡೆಂಟ್ ಆಯ್ತು, ಓನರಂಕಲ್‌ಗೆ ಸ್ಟ್ರೋಕ್ ಆಯ್ತು, ನಾಗೇಂದ್ರನ್ನ ಮಣಿಪಾಲಿಗೆ ಅಡ್ಮಿಟ್ ಮಾಡಿದಾರಲ್ಲ, ಕಾಲು ಮುಂದೆ ಉಪಯೋಗಕ್ಕೆ ಬರತ್ತೋ ಇಲ್ಲೋ… ಸಂವತ್ಸರ ಸರಿ ಇಲ್ಲ…’
‘ಕಳೆದ ವರ್ಷ ಹಿಂಗೇ ಯಾರದಾದ್ರೂ ಮನೇಲಿ ಸರಣಿ ಅಪಘಾತ ಆಗಿರ್ಬಹುದಲ್ವ? ಅದೂ ಸರಿ ಇರ್ಲಿಕ್ಕಿಲ್ಲ…’
‘ತಲೆ ನಿಂದು’
ಅಮ್ಮ ಅಳು ನುಂಗ್ತಿದ್ದುದ್ದು ಗೊತ್ತಾಗಿ ಬಾಯ್ಮುಚ್ಚಿದೆ. ಅವಳ ಸಂಕಟ ಅವಳಿಗೆ.

ನಂಗೆ ಅದ್ಯಾಕೋ ಸಂಸಾರ ಅನ್ನುವ ಪದದೊಟ್ಟಿಗೇ ಕ್ಯಾಕ್ಟಸ್ ಗಿಡ ನೆನಪಾಗುತ್ತೆ. ಯಾವ ಕಡೆ ಮುಟ್ಟಿದ್ರೂ ಮುಳ್ಳೇ. ಇದು ಗೊತ್ತಾಗಿ ನಿರುಮ್ಮಳವಾಗಿರೋಹಾಗೆ ಆಗಲಿಕ್ಕೆ ವರ್ಷಗಟ್ಟಲೆ ತಪಸ್ಸು ಮಾಡಬೇಕಾಗಿ ಬರ್ಲಿಲ್ಲ ಅನ್ನೋದೇ ದೊಡ್ಡ ಖುಷಿ. ‘ಕ್ಯಾಕ್ಟಸ್ ಗಿಡಾನ ಶೋಗೆ ಇಟ್ಕೊತಾರಲ್ಲ ಮನೇಲಿ? ಹಂಗೇ ಸಂಸಾರವೂ ಶೋಗಿರ್ಲಿ ಸಾಕು. ಮೋಹ ಅಂತ ಮುದ್ದಿಸೋಕೋದ್ರೆ ಚುಚ್ಚಿ ರಂಪ ಮಾಡತ್ತೆ. ಇದೊಂದು ಸಿಂಪಲ್ ಕಾನ್ಸೆಪ್ಟ್’ ಅಂತ ಒಬ್ಬರಿಗೆ ದೃಷ್ಟಾಂತದ ಸಹಿತ ಉಪದೇಶ ಮಾಡೋಕೆ ಹೋದೆ. ಆಚೆ ತುದಿ ಸೈಲೆಂಟಾಗಿತ್ತು. ಅಬ್ಬ, ಗೆದ್ದುಹೊಡೆದೆ ಅಂದ್ಕೊಳ್ವಾಗಲೇ, ‘ಅಲ್ಲ, ದಡ್‌ಮುಂಡೇಗಂಡ ಕೊನೆಗೆ ಮಿಕ್ಸೀನಾದ್ರೂ ತಂದ್ಕೋಬಾರದಿತ್ತ? ಇವತ್ತು ಈ ಚಿಕ್ಕಪುಟ್ಟದನ್ನ ಬೇಡ ಅಂದ್ರೆ, ನಾಳೆ ಆಸ್ತೀನು ಕೇಳ್ದೆ ಬಾಯ್ಮುಚ್ಕೋಬೇಕಾಗತ್ತೆ…’
ಸದ್ಯ… ನಂಗೆ ಮೂರ್ಛೆ ಹೋಗುವ ಅಭ್ಯಾಸವಿಲ್ಲ!

ಯಾರೋ (ಒನ್ಸ್ ಅಗೈನ್) ಫಿಲಾಸಫರ್ ಹೇಳಿದ್ದು, ‘ಪ್ರಪಂಚದಲ್ಲಿ ಎಲ್ಲಾನೂ ಒಂದಲ್ಲ ಒಂದುಕಡೆ ಕನೆಕ್ಟ್ ಆಗೇ ಇರತ್ತೆ’ ಅಂತ. ಲೈಕ್ ವಾಟರ್…, ಗಾನ್ ವಿದ್…, ಸ್ಪ್ರಿಂಗ್ ಸಮ್ಮರ್…, ಸ್ಕಾರ್ಲೆಟ್, ಸತ್ಯವತಿ, ಅಮ್ಮ, ಸಂಸಾರ, ಭಿಕ್ಷೆಯ ಹೆಂಗಸು…. ಎಲ್ಲ ನನ್ನ ತಲೆಯಲ್ಲಿ ಪೋಣಿಸಿಕೊಂಡುಬಿಟ್ಟಿವೆ. ಅರ್ಜೆಂಟಾಗಿ ಒಂದು ಕಾಮಿಡಿ ಮೂವಿ ನೋಡ್ಬೇಕು.

‘ಲಗೇ ರಹೋ ಮುನ್ನಾಭಾಯಿ’ ಕೈಗೆ ಸಿಕ್ಕಿದೆ. ನೂರಾ ಏಳನೆ ಸಾರ್ತಿಗೆ ಅದನ್ನ ನೋಡಲಿದ್ದೇನೆ :)…

7 thoughts on “ಎಲ್ಲಿಂದೆಲ್ಲಿಗೋ ಹರಿದು ಹರಟೆ…

Add yours

 1. ಗುಲಾಬಿಗಿಡದಲ್ಲಿ…
  ಸುವಾಸನೆಯನ್ನೂ ಆಹ್ಲಾದಿಸಬಹುದು…
  ಎಳೆ ಎಲೆಗಳ..
  ಜೊತೆ..
  ಮುಳ್ಳು…
  ಮರಳು ಮಾಡುವ..
  ಅಂದವನ್ನೂ..
  ಕಾಣ ಬಹುದು… ಅಲ್ಲವೆ ?

  ನೀವು ಏನೇ ಬರೆದರೂ ಸೊಗಸು…

  ಅಭಿನಂದನೆಗಳು…

 2. ನಂಗೆ ಅದ್ಯಾಕೋ ಸಂಸಾರ ಅನ್ನುವ ಪದದೊಟ್ಟಿಗೇ ಕ್ಯಾಕ್ಟಸ್ ಗಿಡ ನೆನಪಾಗುತ್ತೆ. ಯಾವ ಕಡೆ ಮುಟ್ಟಿದ್ರೂ ಮುಳ್ಳೇ. chennaagide

 3. I am visiting your blog after couple of years and has got quite interesting in terms of squeezing the juice out of an event/concept. Associating cactus to ‘family’ is quite amazing yet seemingly true. Since decades I have been wondering reasons for that, however, not so lucky (yet?).
  One of the possible (scientific, pardon me for my infectious approach-Science) reasons could be that, the marriage relationship (hubby-wife) has a multitude (many) of possibilities. For instance, there is physical love, mental games, possibility for verbal quarreling, possibility of divorce, and much more. In other relationships, for instance, father-son, there are fixed possibilities and therefore things go wrong/out of hand rarely (!).

  That’s from a purely probabilistic view. I would luv to hear your opinion, if possible.

  Regards
  D.M.Sagar,Dr.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: