‘ಸ್ತ್ರೀವಾದ’ ಅಂದರೆ ಹಾದರದ ಮೊತ್ತವೇ ಭೈರಪ್ಪ ಸರ್?


ಬಳೆ ಇಲ್ಲದ, ಸರವಿಲ್ಲದ, ಹಣೆಗಿಲ್ಲದ, ಕ್ರಿಶ್ಚಿಯನ್ನರ ಥರವೋ ಮುಸಲ್ಮಾನರ ಥರವೋ ವಿಧವೆಯ ಥರವೋ ಕಾಣುವ ಹೆಂಗಸರೆಲ್ಲ ಸೂತಕದವರು. ಅವರು ಕೊನೆಪಕ್ಷ ಕಾಮವನ್ನು ಪ್ರಚೋದಿಸಲಿಕ್ಕೂ ನಾಲಾಯಖ್ಖಾದವರು. ಅವರು ಹೆಚ್ಚೂಕಡಿಮೆ ಹೆಂಗಸು ಜಾತಿಗಿಂತ ಹೊರಗೆ. ಅವರೆಲ್ಲ ಸ್ತ್ರೀವಾದಿಗಳು. ಶೋಷಣೆಯ ಪುಕಾರುಗಳನ್ನು ಸುಖಾಸುಮ್ಮನೆ ಹಬ್ಬಿಸಿ ಗಂಡಸಿನ ಬದುಕನ್ನು ಮೂರಾಬಟ್ಟೆ ಮಾಡಲೆಂದೇ ಹುಟ್ಟಿಕೊಂಡವರು. ನಿಮಗ್ಗೊತ್ತಾ? ಅವರು ಗಂಡನ್ನ, ಗಂಡಸರನ್ನ ಏಕವಚನದಲ್ಲೆ ಕರೀತಾರೆ! ಇದು ಸಂಸ್ಕೃತಿಗೆ ಹೊಂದುತ್ತದೆಯೇ? ಇವತ್ತಿನ ಭಾರತದ ಸಂಸಾರಗಳು ಇಂಥ ಮಹಿಳಾವಾದಿ ಹೆಂಗಸರಿಂದಲೇ ‘ಪುಡಿಪುಡಿ’ ಆಗಿಹೋಗ್ತಿದೆ….
ಇಂಥದೊಂದು ಪರಮಸಂಕಟದಿಂದ ಭೈರಪ್ಪನವರು ಬರೆದ ಕಾದಂಬರಿಯ ಹೆಸರು ‘ಕವಲು’. ಪುಟ ತೆರೆದ ಶುರುವಲ್ಲೇ ಅವರ ಫರ್ಮಾನು ಇದೆ, ‘ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಅಂತ. ಅಂದಮೇಲೆ ಇಡಿ ಕಾದಂಬರಿಯನ್ನು ಇವತ್ತಿಗೆ ಹೊಂದಿಸ್ಕೊಂಡೇ ಓದಬೇಕಾಗ್ತದೆ. ಹೆಂಗಸರು ಎಷ್ಟೆಲ್ಲ ಅನ್ಯಾಯ ಮಾಡ್ತಾರಲ್ಲವೆ? ಅದರಲ್ಲೂ ಬಳೆ-ಸರ ಹಾಕದ, ಕುಂಕುಮವಿಡದ, ಓದು-ಬರೆದು ಮಾಡಿಕೊಂಡಿರುವವರಂತೂ ಹಾದರಗಿತ್ತಿಯರೇ! ಓದು ಬರಹದ ಮಾತು ಬಂದಾಗಲೇ ಹೇಳಿಬಿಡಬೇಕು… ‘ಓದಿಕೊಂಡ ಗಂಡಸರು ಹೆಂಗಸಂತಾಗ್ತಾರೆ ಮತ್ತು ಓದಿಕೊಂಡ ಹೆಂಗಸರು ಗಂಡಸಂತಾಗ್ತಾರೆ’. ಇದು ಭೈರಪ್ಪನವರ ಹೊಸ ಸಂಶೋಧನೆ. ಅದಕ್ಕೇ ಅಪಘಾತದಿಂದ ಮಾನಸಿಕ ಸ್ವಾಸ್ಥ್ಯ ಕಳಕೊಳ್ಳುವ ಮಗಳು ವತ್ಸಲೆ ಬಗ್ಗೆ ‘ಓದು ಬರಹ ಕಲಿಸೋದೇನೂ ಬ್ಯಾಡ. ಮನೆ ಕೆಲ್ಸ ಹೇಳ್ಕೊಡ್ತೀನಿ ಒಂದೊಂದೇ’ ಅನ್ನುವ ಮಾತು ಹೊರಡುವುದು. ವೈಯಕ್ತಿಕವಾಗಿ ನನಗೆ, ಭೈರಪ್ಪಮವರಲ್ಲಿರುವ ವೈರುಧ್ಯದ ಬಗ್ಗೆ ಅಚ್ಚರಿಯಾಗುತ್ತೆ. ವತ್ಸಲೆಯ ಅಮ್ಮ ಜಯಂತಿ ಇಂಜಿನಿಯರ್ರು. ಓದಿಯೂ ಹೆಂಗಸಾಗಿ ಉಳಿದಿದ್ದವಳು. ಉದ್ದ ಜಡೆ, ಅದರ ತುಂಬ ಹೂವ… ಇಳೆ ಮತ್ತು ಮಂಗಳೆ ವಿಷಯದಲ್ಲಿ ಕಾರಿಕೊಳ್ಳುವಾಗ ಅವರು ಓದಿದವರು ಅನ್ನುವ ಫ್ಯಾಕ್ಟ್ ಅನ್ನು ಆಕ್ಷೇಪಣೆಯ ಹಾಗೆ ತೋರಿಸಿರೋದ್ಯಾಕೆ!?  ಅವರು ‘ನಾರೀಮಣಿಯರ’ ಥರ ಅಲಂಕರಿಸಿಕೊಳ್ಳೋಲ್ಲವೆಂದೇ?
ಮತ್ತೊಂದು ವಿಷಯ, ಹಣೆಗಿಣೆಗೆ ಇಡದೆ ಅಲಂಕರಿಸಿಕೊಳ್ಳದ ಮಾತ್ರಕ್ಕೆ ಆಕೆಯನ್ನು ವಿಜಾತೀಯಳಂತೆ ಕಳಾಹೀನವಾಗಿ ಕಾಣುತ್ತಾಳೆ ಎಂದು ಪಾತ್ರಗಳ ಬಾಯಿಂದ ಹೇಳಿಸಿದ್ದಾರೆ, ಆಕ್ಷೇಪಣೆಯ ಧಾಟಿಯಲ್ಲಿ.ಮ್ ಇತರ ಜಾತಿಯ ಹೆಣ್ಣುಮಕ್ಕಳ ಬಗ್ಗೆ ಈ ತಾತ್ಸಾರ ಯಾಕೋ ಕಾಣೆ! ಅವರನ್ನು ಏನೆಂದು ಬಿಂಬಿಸಲು ಹೊರಟಿದ್ದಾರೆ?
ಭೈರಪ್ಪ ಅದ್ಭುತ ಕಾದಂಬರಿಕಾರರು, ಎರಡು ಮಾತಿಲ್ಲ. ಅದರಿಂದಲೇ ಈ ಇಡೀ ಕಾದಂಬರಿಯಲ್ಲಿ ಅವರ ವಿಚಾರವನ್ನು ಪ್ರತ್ಯೇಕಿಸದ ಹಾಗೆ ‘ಅದು ಪಾತ್ರದ ಮನಸ್ಥಿತಿ’ಯಷ್ಟೆ ಎಂಬ ಸಮಜಾಯಿಷಿಗೆ ಅವಕಾಶವಿಟ್ಟುಕೊಂಡು ಅದನ್ನ ಹೆಣೆದಿದ್ದಾರೆ. ಇಳಾ ಮತ್ತು ಮಂಗಳೆಯ ಪಾತ್ರಗಳ ಹಿಕಮತ್ತುಗಳು ಕೋಪ ತರಿಸುವುದು ನಿಜ. ಆ ಕಾರಣ ಮುಂದಿಟ್ಟುಕೊಂಡು ಹೆಂಡತಿಯ ಕೆರಿಯರ್ ಹಕ್ಕನ್ನು ನಿರಾಕರಿಸುವ ವಿನಯಚಂದ್ರನ ಬಗೆಗಾಗಲೀ ಕಟ್ಟುಬೀಳದೆ ದೇಹಬಾಧೆ ತೀರಿದರೆ ತೀರಲಿ ಅನ್ನುವ ಮನಸ್ಥಿತಿಯಿಂದ ನೌಕರಳನ್ನು ಹಾಸಿಗೆಗೆಳೆಯುವ ಜಯಕುಮಾರನ ಬಗೆಗಾಗಲೀ, ನನ್ನ ಹೆಂಡತೀನ ನಾನು ಗೌರವಿಸ್ತೀನಿ, ಪ್ರೀತಿಸ್ತೀನಿ, ಅವಳಿಗೇ ಡೈವೋರ್ಸ್ ಕೊಡು ಅಂತಾಳೆ ಅಂತ ಬಯ್ಕೊಳ್ಳುವ ಮಂತ್ರಿಯ ಬಗೆಗಾಗಲೀ ಅನುಕಂಪ ತಾಳಿದರೆ ಅದರಷ್ಟು ಅಸಹ್ಯ ಯಾವುದೂ ಇರುವುದಿಲ್ಲ. ಆದರೆ, ಆ ಎಲ್ಲ ಗಂಡಸರ ಬಗೆಗೆ ಅನುಕಂಪ ತರಿಸುವ ಮತ್ತು ‘ಸಮಕಾಲೀನ ಭಾರತದ ಮಹಿಳಾವಾದಿಗಳ’ ಬಗ್ಗೆ ತಾತ್ಸಾರ ಮೂಡಿಸುವ ಕೆಲಸವನ್ನು ಭೈರಪ್ಪನವರ ಬರಹ ಸಮರ್ಥವಾಗಿ ಮಾಡುತ್ತದೆ! ‘ಕವಲು ದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುವ’ ಕೃತಿ ಅನ್ನುತ್ತಾ ಭಾರತದ ಹೆಣ್ಣುಮಕ್ಕಳ ಮಾನ ಹರಾಜಿಟ್ಟಿದ್ದು ಸಾಲದೇ ಅಮೆರಿಕೆಯ ಟ್ರೇಸಿ ಮತ್ತು ಲಿಂಡ್ಸೆಯರನ್ನೂ ಬೀದಿಗೆಳೆದಿದ್ದಾರೆ. ಮಹಿಳಾವಾದವನ್ನು ಜರಿಯುವ ಭರದಲ್ಲಿ ಹೆಣ್ಣಿನ ಕಡೆಯವರು ವರದಕ್ಷಿಣೆಯ ವಾಗ್ದಾನ ಮಾಡಿದ್ದನ್ನೇ ತಪ್ಪು (ಕೇಶವನ ಮಗಳ ಮದುವೆ ಸಂಗತಿ) ಎಂದು ಹೇಳುವಾಗಲಂತೂ ವಾಕರಿಕೆ ಬರುತ್ತದೆ. ಅಷ್ಟು ದುಡ್ಡನ್ನು ನಾಚಿಕೆಬಿಟ್ಟು ಕೇಳುವ ವರನ ಬಗ್ಗೆ ಏನೂ ಆಡಬಾರದೆ? ಇದು ಏನನ್ನು ಹೇಳುತ್ತದೆ? ‘ಕರೆವೆಣ್ಣನ್ನು ಕರೆಸ್ಕೊಂಡು ಜೈಲು ಸೇರಿದವರ ಸಾಕ್ಷಿ ಪೋಲಿಸರು ಒಪ್ತಾರೆಯೇ?’ ಎನ್ನುವಂಥ ಅತ್ತಿಗೆಯ ಮಾತು ಕೂಡ ಜಯಕುಮಾರನ ಬಗ್ಗೆ ಅನುಕಂಪ ಹುಟ್ಟಿಸುವ ಧಾಟಿಯಲ್ಲಿ, ಆಕೆಯ ಬಗ್ಗೆ ತಿರಸ್ಕಾರ ಬರುವ ರೀತಿಯಲ್ಲಿ ರಚಿಸಿರುವುದರ ಉದ್ದೇಶವಾದರೂ ಏನು?
ಹೆಣ್ಣುಮಕ್ಕಳು ತಮ್ಮ ಸಮುದಾಯಕ್ಕಾಗಿ ಹಿಂದೆಂದೂ ಇಲ್ಲದ ಒಗ್ಗಟ್ಟಿನಲ್ಲಿ ದನಿ ಎತ್ತುತ್ತಿರುವುದು ದಬ್ಬಾಳಿಕೆ ಮನೋಭಾವದ ಗಂಡಸರ ಅಹಮ್ಮಿಗೆ ಎಷ್ಟರಮಟ್ಟಿಗೆ ಘಾಸಿ ಕೊಟ್ಟಿದೆ ಅನ್ನುವುದನ್ನು ‘ಕವಲು’ ಸಮರ್ಥವಾಗಿ ತಿಳಿಸಿಕೊಡುತ್ತದೆ. ಇಲ್ಲಿನ ಪ್ರತಿಯೊಬ್ಬ ಸ್ತ್ರೀವಾದಿಯ ಚಿತ್ರ ಕೆತ್ತುವಾಗಲೂ ತನ್ನ ಅಹಮ್ಮಿಗಾದ ಪೆಟ್ಟಿನ ಸೇಡು ತೀರಿಸಿಕೊಳ್ಳುವ ವಿಕೃತಿ ದಟ್ಟವಾಗಿ ಕಾಣುತ್ತದೆ.  ರಾಷ್ಟ್ರಮಟ್ಟದ ಚಳವಳಿಗಾರ್ತಿ ಸರಾಫಳನ್ನು ಲೆಸ್ಬಿಯನ್ನಾಗಿ ತೋರಿಸುವ ಮೂಲಕ ತಮ್ಮ ವಿಕೃತ ಚಿಂತನೆಯ ಪೀಕ್ ಗೆ ಹೋಗಿದ್ದಾರೆ ಅನ್ನಬಹುದು. ಇಷ್ಟಕ್ಕೂ ಲೆಸ್ಬಿಯನ್ನಾದರೆ ಏನಾಯ್ತು? ‘ಆಕೆಗೆ ಕಳಕಳಿ ಇರೋದು ಮುಖ್ಯ’ ಅಂತ ಸಮರ್ಥಿಸಿಕೊಳ್ಳುವ ಜನಸಂಖ್ಯೆ ಕಡಿಮೆ ಇರೋದ್ರಿಂದ ಈ ಪಾಯಿಂಟ್ ಸಮರ್ಪಕವಾಗಿ ಓದುಗರ ತುಟಿಯಂಚಲ್ಲಿ ವ್ಯಂಗ್ಯದ ಕೊಂಕು ಮೂಡಿಸುತ್ತೆ.
ಹೆಣ್ಣನ್ನು ಲೈಂಗಿಕ ಅಭೀಪ್ಸೆಯ ದಾಸಿಯನ್ನಾಗಿ ಚಿತ್ರಿಸಿರುವ ಕಾದಂಬರಿಕಾರರ ರೀತಿ ಅಸಹ್ಯವನ್ನಲ್ಲದೆ ಮತ್ತೇನನ್ನೂ ಮೂಡಿಸುವುದಿಲ್ಲ. ಮತ್ತಿದನ್ನು ‘ಭಾರತೀಯ ಸಮಾಜದಲ್ಲಿ…’ ಇತ್ಯಾದಿ ಮುತ್ತುದುರಿಸಿ ಮತ್ತಷ್ಟು ಅಸಹ್ಯ ತರಿಸಿದ್ದಾರೆ. ಈ ಸ್ಟೇಟ್ಮೆಂಟ್ ಇಲ್ಲದೆ ಹೋಗಿದ್ದರೆ ಇಷ್ಟೆಲ್ಲ ಮನಸಿಗೆ ಕಸಿವಿಸಿಯಾಗ್ತಿರಲಿಲ್ಲವೇನೋ?
ಭೈರಪ್ಪನವರನ್ನೇ ನೇರವಾಗಿ ಕೇಳಬಹುದಾದರೆ, ಮಹಿಳಾವಾದ ಅಂದರೆ ಏನಂದ್ಕೊಂಡಿದೀರಿ ತಾವು? ಇಡೀ ಕಾದಂಬರಿಯಲ್ಲಿ ಸಮಾಜ ಮುಖಿಯಾಗಿರುವ ಅಥವಾ ಚಳುವಳಿಯಲ್ಲಿ ತೊಡಗಿರುವ ಯಾವೊಬ್ಬ ಹೆಣ್ಣೂ ನಿಮ್ಮ ಕಣ್ಣಿಗೆ ಒಳ್ಳೆಯವಳಾಗಿ ಯಾಕೆ ಕಾಣದೆಹೋದಳು? ಫೆಮಿನಿಸ್ಟ್‌ಗಳ ಸ್ನೇಹ ಮಾಡಬಹುದು ಹೊರತು ಮದುವೆಯಾಗಬಾರದು ಅನ್ನುವ ನಿಮ್ಮ ಪ್ರಭಾಕರನ ಸ್ಟೇಟ್‌ಮೆಂಟೇ ಪುರುಷನ ಅಹಂಕಾರದ ಧೋರಣೆಯನ್ನ ಬಿಂಬಿಸುತ್ತೆ ಅಲ್ವೆ? ಜನರಲೈಸ್ ಮಾಡುತ್ತಿಲ್ಲ. ‘ನಿಮ್ಮ ಮನಸ್ಥಿತಿಯನ್ನ’ ಎಂದಾದರೂ ಓದಿಕೊಳ್ಳಬಹುದು.  ಹೋಗಲಿ, ಈ ಕೃತಿ, ಇವತ್ತಿನ ತಲೆಮಾರಿನ ಓದುಗರಿಗೂ ಸೇರುವಂಥದು. ಅವರಿಗಾಗಿ ಯಾವ ಹೊಸತನ್ನು ನೀಡಿದ್ದೀರಿ ಕವಲಿನ ಮೂಲಕ ಎಂದು ಕೇಳಬಹುದೇ? ಮತ್ತದೆ ಅದೇ ಉದ್ಯೋಗಸ್ಥ ಮಹಿಳೆ ಕದ್ದು ಬಸಿರಾಗುವುದು, ಅದರ ಸುತ್ತ ಹೆಣೆದುಕೊಳ್ಳುವ ತೊಳಲಾಟ, ದೂರ ಸರಿಯುತ್ತ ಹತ್ತಿರಾಗುವ ತಿರುವುಗಳು…. ಕೊನೆಗೆ, ಯಾರೋ ಒಬ್ಬರಿಗೆ ಹೂ ಮುಡಿಸಿ (ಅಕ್ಷರಶಃ ಹೂವಿಟ್ಟು!) ‘ಸಾಂಸ್ಕೃತಿಕ ಮೌಲ್ಯವನ್ನ ಎತ್ತಿಹಿಡಿಯೋದು’! ಕವಲಿನಲ್ಲಿರುವ ಹೊಸತೆಂದರೆ, ಕಾದಂಬರಿಯ ತುಂಬೆಲ್ಲ ಹಾದರದ ವಾಸನೆಯೇ ತುಂಬಿರುವುದು. ಅವರಿವರು ನಮ್ಮ ಸಂಸ್ಕೃತಿಯ ಬಗ್ಗೆ ಸಲ್ಲದ್ದು ಬರೆದು ಯುವಜನರಲ್ಲಿ ತಪ್ಪು ಅಭಿಪ್ರಾಯ ಬಿತ್ತುತ್ತಿದ್ದಾರೆ ಎಂದು ಹೇಳುವ ನಿಮಗೆ ನೀವೂ ಅದನ್ನೇ ಮಾಡುತ್ತಿದ್ದೀರಿ ಎಂದು ಅನಿಸದೆ ಹೋಗಿದ್ದು ವಿಪರ್ಯಾಸ.
ಲೈಂಗಿಕ ಸ್ವಾತಂತ್ರ್ಯವನ್ನು ಗೌರವಿಸುವ ಹೆಣ್ಣು ಪರಮ ಅನೈತಿಕ, ನೀಚಳು ಮತ್ತು ಬೇರೆಹೆಮಳೆಂಬ ನಿಮ್ಮ ಅಕ್ಷರ ಬಿಂಬ ಈ ಹೊತ್ತೂ ಮೈ ನಡುಗಿಸುತ್ತಿದೆ.
ಭೈರಪ್ಪ ಅವರೇ, ನೀವೊಬ್ಬ ಯಶಸ್ವೀ ಕಾದಂಬರಿಕಾರರಿರಬಹುದು. ಆದರೆ, ಬಟ್ಟೆಯಲ್ಲಿ, ಅಲಂಕಾರದಲ್ಲಿ, ಯೋನಿ ಪಾವಿತ್ರ್ಯೀಕರಣದ ಮಾನದಂಡದಲ್ಲಿ, ಅವಳ ದನಿಯ ಅಬ್ಬರದಲ್ಲಿ ಅವಳ ಅಸ್ತಿತ್ವವನ್ನು ಪ್ರಶ್ನಿಸುತ್ತಾ ತುಚ್ಛೀಕರಿಸುತ್ತಾ ಬರೆಯುವಿರಾದರೆ, ಸಾಮಾನ್ಯ ಓದುಗಳಾದ ನನ್ನ ವಿರೋಧವೂ ನಿಮಗಿದೆ. ಬಟ್ಟೆ ಯಾವುದೇ ತೊಟ್ಟು, ಹಣೆಬೊಟ್ಟು ಕಳಚಿಟ್ಟರೂ ತುಡಿಯಬಲ್ಲ ಅಂತಃಕರಣ ಹೆಣ್ಣು ಜಾತಿಯದು. ಇಷ್ಟು ನಿಮಗೆ ಯಾವತ್ತು ಅರಿವಾಗ್ತದೆಯೋ ಅವತ್ತು ಬೆಡ್ ರೂಮಿನಾಚೆಗೂ ಲೋಕ ಇರುವುದನ್ನು ಕಾಣುವಿರಿ. ಮತ್ತು ಆ ಲೋಕದಲ್ಲಿ ಹೆಣ್ಣು ದಿನದಿನವೂ ಸಾಯುತ್ತಿರುವುದನ್ನು. ಇಷ್ಟೆಲ್ಲ ಓದು-ಬರಹ ಕಲಿತ ಗಂಡಸರು ಹೆಂಗಸರಾಗುತ್ತಾ ನಡೆದಿದ್ದರೂ ಭಾರತದಲ್ಲಿ ಅತ್ಯಾಚಾರ, ಹೆಣ್ಣುಭ್ರೂಣ ಹತ್ಯೆ ಮತ್ತು ವರದಕ್ಷಿಣೆ ಸಾವುಗಳ ಸಂಖ್ಯೆ ತನ್ನ ‘ಎತ್ತರ’ ಕಾಯ್ದುಕೊಂಡಿರುವುದನ್ನೂ…
ಹಾಗಂತ ಈ ಸಮಸ್ಯೆಗಳನ್ನೇ ‘ಭಾರತೀಯ ಸಮಾಜದ ಸಮಕಾಲೀನ ಜೀವನ’ ಅನ್ನುವ ದಾರ್ಷ್ಟ್ಯಕ್ಕೆ ನಾನು ಬಾಯಿಹಾಕಲಾರೆ. ಹಿರಿಯರಾದ ತಮ್ಮಲ್ಲೂ ಇದೇ ಅರಿಕೆ.
(ಜುಲೈ 18ರ ಭಾನುವಾರದಂದು ಕನ್ನಡಪ್ರಭದಲ್ಲಿ ಪ್ರಕಟಿತ)

29 thoughts on “‘ಸ್ತ್ರೀವಾದ’ ಅಂದರೆ ಹಾದರದ ಮೊತ್ತವೇ ಭೈರಪ್ಪ ಸರ್?

Add yours

 1. ನಿಮ್ಮ ಬರವಣಿಗೆ ತುಂಭಾ ಮೆಚ್ಚುಗೆಯಾಯಿತು. ನಾನಿನ್ನೂ “ಕವಲು” ಕಾದಂಬರಿಯನ್ನ ಓದಿಲ್ಲ. ಆದರೆ, ತಮ್ಮ ಬಹುತೇಕ ಕಾದಂಬರಿಗಳಲ್ಲಿ ಹೆಣ್ಣನ್ನು “ಮನುಷ್ಯ”ಳಂತೆ ನೋಡುತ್ತಾ ಬಂದಿರುವ ಭೈರಪ್ಪನವರು ಇದರಲ್ಲಿ ಹೀಗೇಕೆ ಮಾಡಿದ್ದಾರೋ ಅನ್ನಿಸುತ್ತಿದೆ….

 2. ನಾನು ನನ್ನ ವಿಮರ್ಶೆಯಲ್ಲಿ (http://mitramaadhyama.co.in/?p=1776)ಬರೆಯದ, ಆದರೆ ಬರೆಯಬೇಕು ಎಂದು ಆಮೇಲೆ ಅನ್ನಿಸಿದ ಹಲವು ವಿಚಾರಗಳನ್ನು ನೀವು ತುಂಬಾ ಯೋಗ್ಯವಾಗಿ ಬರೆದಿದ್ದೀರಿ. ವಂದನೆಗಳು. ಕಾಲ್‌ಗರ್ಲ್ಸ್‌ಗಳ ಜೊತೆ ಶಯನ ಅಭಿಯಾನ ಮಾಡುವ ಜಯಕುಮಾರನೇ ಅಮಾಯಕ ಎಂಬಂತೆ ಭೈರಪ್ಪ ಚಿತ್ರಿಸಿದ್ದಾರೆ ನೋಡಿ! ಜಯಕುಮಾರನಿಗೆ ಹೀಗೆ ಮಲಗು ಎಂದು ಉಪದೇಶ ಕೊಟ್ಟ ಶೇಖರಪ್ಪನೊಬ್ಬನೇ ಆತನ ಆತ್ಮೀಯ ಎಂದರೆ ಈ ಪಾತ್ರ ಎಷ್ಟು ಎಕ್ಕುಟ್ಟಿಹೋಗಿದೆ ಎಂದು ಊಹಿಸಿಕೊಳ್ಳಿ. ಸ್ತ್ರೀವಾದಿಗಳು ಎಂದರೆ ಸೈಕಿಕ್‌ಗಳು, ಸಂಸಾರದ್ವೇಷಿಗಳು; ಗಂಡಸರು ಮಾತ್ರ ಯಾರ ಮೇಲೆ ಕಣ್ಣು – ಕೈ ಹಾಕಿದರೂ ಪರವಾಯಿಲ್ಲ – ಇದು ಭೈರಪ್ಪನವರ ಕಾದಂಬರಿ ಹೇಳಹೊರಟಿರುವ ಅಂಶ. ಕಲಿತ ಹೆಂಗಸರ ಬಗ್ಗೇನೂ ಭೈರಪ್ಪನವರ ಡೈಲಾಗ್‌ಗಳು ವಾಚಾಮಗೋಚರವಾಗಿ ಉದುರಿವೆ. ಇಂಥ ಕಾದಂಬರಿಯನ್ನು ಕೊಂಡು ಓದಿದ್ದು ನನ್ನ ದೊಡ್ಡ ತಪ್ಪು. ಕೆಂಡಸಂಪಿಗೆಯಲ್ಲಿ ನನ್ನ ವಿಮರ್ಶೆ ಓದಿದ ಕೆಲವರು ೨೫೦ ರೂಪಾಯಿ ಉಳಿಸಿದಿರಿ ಎಂದಿದ್ದಾರೆ. ಅದೇ ಸಂತೋಷದ ಸಂಗತಿ.
  ಭೈರಪ್ಪನವರು ಲೈಂಗಿಕತೆಯನ್ನು ಒಂದು ಐಕನ್ ಆಗಿ ಬಳಸಿದ್ದಾರೆ ಎಂದು ನನ್ನ ಬ್ಲಾಗಿನಲ್ಲಿ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಲೈಂಗಿಕತೆಯನ್ನು ಯಾರು ಐಕನ್ ಆಗಿ ಬಳಸಿಲ್ಲ ಎನ್ನುವುದೇ ನನ್ನ ಪ್ರಶ್ನೆ! ಭಾರತೀಯ ಸಮಾಜ, ಭಾರತೀಯ ಸಮಾಜ ಎಂದು ಯಾವಾಗಲೂ ಬಡಬಡಿಸುವ ಕಾದಂಬರಿಕಾರರಿಗೆ ಮಲಗುವ ಮತ್ತು ಮುಲುಗುವ ವಿಷಯಗಳು ಬಿಟ್ಟರೆ ಬೇರೆ ಸಮಕಾಲೀನ ಸಂಗತಿಗಳು ಹೊಳೆಯುವುದೇ ಇಲ್ಲ.
  ಮಂದ್ರದಲ್ಲಿ ಸಂಗೀತಗಾರ ಅತಿ ಕಾಮುಕ. ಇಲ್ಲಿ ಸ್ತ್ರೀವಾದಿಗಳೆಲ್ಲರೂ ವಿತಂಡಜೀವಿಗಳು; ಕಾಮುಕಿಯರು, ಸಲಿಂಗಕಾಮಿಗಳು… ಮುಂದೆ?
  ತಗಡನ್ನು ‘ತಗಡು’ ಎಂದು ಕರೆಯುವ ಕಾಲ ಬಂದಿದೆ.

 3. ನಿಜ ಈ ಸಾರಿ ಭೈರಪ್ಪಾ ಅವರು ಹೆಣ್ಣನ್ನಾ ಇಷ್ಟು ಟಿಕಿಸಿ . . ಬರೇಯಬಾರದಿತ್ತು . .ನಮ್ಮ ನಡಿವಿನ ಸಮಾಜ ಇನ್ನೂ ಅಷ್ಟು ಹದಗೆಟ್ಟಿಲ್ಲಾ . .!! ಹಾ! ಎಲ್ಲೋ ನೂರಕ್ಕೆ ಒಂದು ಇಲ್ಲಾ ಸಾವಿರಕ್ಕೇ ಎರಡು ಅಂತಾ ಇರಬಹುದು ಆದರೆ ಅವರನ್ನು Parallel ಆಗೀ ಇಟ್ಟುಕೊಂಡು ಈ ಥರ ಬರೆದದ್ದು ಅಷ್ಟು ಸರಿಯೇನಿಸಲಿಲ್ಲ . .

  ನಿವ್ಹೇಳಿದ್ದು ನಿಜಾ ಅಕ್ಕಾ . .

 4. ನಾನು ಕವಲು ಕಾದಂಬರಿಯನ್ನು ಓದಿಲ್ಲ. ಅದರ ಬಗೆಗಿನ ವಿಮರ್ಷೆಗಳನ್ನು ಓದಿದ್ದೇನೆ. ಹೆಣ್ಣಿನ ವೈಯಕ್ತಿಕ ಬದುಕನ್ನು ಗೌರವಿಸದ; ಅದನ್ನು ಚೌಕಟ್ಟಿನೊಳಗಿರಿಸುವ, ಗಂಡಸಿನ ಸ್ವೇಚ್ಛೆಯನ್ನೇ ವೈಭವೀಕರಿಸಿ ಅದನ್ನೇ ಸಮರ್ಥಿಸುವ ಮನೋಭಾವಕ್ಕೆ ನನ್ನದೂ ಒಂದು ವಿರೋಧವಿದೆ!

 5. ಭೈರಪ್ಪನವರು “ಸ್ತ್ರೀವಾದ” ಎನ್ನುವ ವಿಷಯವನ್ನು ಕೆಲವು ಮಹಿಳೆಯರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಹೆಚ್ಚಾಗಿ ಒತ್ತುಕೊಟ್ಟು ಬರೆದಿದ್ದಾರೆ. ಅದು ಸರಿಯೋ ತಪ್ಪೋ ಎಂದು ನಾನು ಹೇಳಲಾರೆ. ಆದರೆ ಈ ಕಾದಂಬರಿ ಓದಿದ ಮೇಲೆ ಮದುವೆಯಾಗದೆ ಇರುವ ಹುಡುಗರಿಗೆ ಭಯ ಹುಟ್ಟುವುದಂತು ಗ್ಯಾರೆಂಟಿ….!!!!

 6. ಆತ್ಮೀಯ
  ನಿಮ್ಮಲ್ಲೊ೦ದು ಪುಟ್ಟ ಪ್ರಶ್ನೆ ನಿಮ್ಮ ದೃಷ್ಟಿಯಲ್ಲಿ ಸ್ತ್ರೀವಾದ ಸ೦ವೇದಿ ಚಿ೦ತನೆ ಹೋರಾಟ ಎ೦ದರೆ ಏನು. ಅದಕ್ಕಿರಬೇಕಾದ ಬದ್ದತೆ ಏನು? ಏಕಾಗಿ ಆ ಹೋರಾಟ?ಅದರಿ೦ದ ಅವರಿಗಾಗುವ ಉಪಯೋಗಗಳೇನು?
  ಪ್ರಸ್ತುತ ಸ೦ದರ್ಭದಲ್ಲಿ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಹೆಣ್ಮಕ್ಕಳ ಸ೦ಖ್ಯೆ ಎಷ್ಟಿದೆ ತಿಳಿದಿದೆಯೇ? ಒಬ್ಬಳೇ ನಾಲ್ಕಾರು ಮದುವೆಯಾಗಿ ಅವರಿ೦ದ ಕಾ೦ಪೆನ್ಸೇಶನ್ ಪಡೆದ ಘಟನೆಗಳು ಕಣ್ಮು೦ದೆ ಇದೆ. ಅದನ್ನೇ ಭೈರಪ್ಪನವರು ಹೇಳಿದ್ದಾರೆ. ಕಣ್ಮು೦ದೆ ಕಾಣುವಸ್ತ್ಯಗಳನ್ನು ಅಕ್ಷರಕ್ಕಿಳಿಸಿದಾಗ ನೋವಾಗುವುದೇಕೆ? ನೈತಿಕತೆ ಹೆಣ್ಣೊಬ್ಬಳಿಗೇ ಅಲ್ಲ ಗ೦ಡಿಗೂ ಇದೆ ಅಲ್ಲವೇ.ವೇಷ್ಯೆಯಬಳಿ ಹೋಗುವ ಗ೦ಡು ಹಾದರ ಮಾಡಿದ೦ತೆಯೇ. ಹೆಣ್ಣನ್ನು ತುಚ್ಚೀಕರಿಸಿ ಹೇಳಿದ್ದಾರೆ ಎನ್ನುವಿರಲ್ಲ ಅದರಲ್ಲಿ ಗ೦ಡನ್ನೂ ಕೂಡ ಅಥವಾ ಗ೦ಡಸಿನ ಮನೋ ದೌರ್ಬಲ್ಯವನ್ನೂ ಹೇಳಿದ್ದಾರೆ ಎನಿಸುವುದಿಲ್ಲವೇ. ನಿಮ್ಮ ವಿಮರ್ಷೆ ಏಕಮುಖವಾಗಿದೆ ಎ೦ದು ನಿಸ್ಸ೦ಕೋಚವಾಗಿ ಹೇಳುತ್ತೇನಮ್ಮ. ದಯವಿಟ್ಟು ಕವಲು ವಿನೊಳಗನ್ನ ಮತ್ತೊಮ್ಮೆ ಶೋಧಿಸಿ ಗ೦ಡು ಅಧಃಪತನಕ್ಕಿಳಿವುದುಅನ್ನು ಕಾಣುತ್ತೀರಿ. ಅದೇ ರೀತಿ ಹೆಣ್ಣು ಕೂಡ.
  ನಿಮ್ಮವ
  ಹರಿ

 7. ಜಯಕುಮರನು ಮಾಡಿದ್ದೂ ಸರಿ ಅಲ್ಲ ನಿಜ!
  ಆದರೆ ವಯ್ಯಕ್ತಿಕ ಸ್ವಾತಂತ್ರ್ಯ, ಲೈಂಗಿಕ ಸ್ವಾತಂತ್ರ್ಯವನ್ನು ಅಂತೆಲ್ಲ ಮಾತಾಡುವ ಮಂಗಳೆ ಜಯಕುಮರನನ್ನು ಬಲವಂತದ ಮದುವೆಗೆ ದೂಡುವುದು ತಪ್ಪೇ!

  ಭೈರಪ್ಪನವರು, ಸ್ತ್ರೀ ವಾದದ ಸೋಗಿನಲ್ಲಿ ಹೆಣ್ಣು ಲೈಂಗಿಕ ಸ್ವಾತಂತ್ರ್ಯದಿಂದ ಇರಲು ಬಯಸಿದರೆ, ಯಾವ ರೀತಿ ಈಗಿನ ಸಮಾಜದಲ್ಲಿ ಅವಳಿಗೆ ಅನ್ಯಾಯ ಆಗುತ್ತದೆ ಅಂತ ಹೇಳಲು ಹೊರಟಂತಿದೆ. (ಇಳೆಯನ್ನು ಮಂತ್ರಿ ನಡೆಸಿಕೊಳ್ಳುವುದು, ಕೆಲಸದವಳು ಮಂಗಳೆಯನ್ನು ಕೀಳಾಗಿ ಕಾಣುವುದು ಮತ್ತು ಪ್ರಭಾಕರ ಮಂಗಳೇ ಇಂದ ದೂರ ಆಗುವುದು etc)

  ಹೆಣ್ಣುಭ್ರೂಣ ಹತ್ಯೆ ಮತ್ತು ವರದಕ್ಷಿಣೆ ಸಾವುಗಳ ಬಗ್ಗೆ ನೀವು ಬರಿ ಗಂಡಸರನ್ನು ದೂರುವುದು ಸರಿಯ?
  ಹೆಣ್ಣು ಬ್ರೂಣ ಹತ್ಯೆಗೆ ತಾಯಿಯಾದ ಹೆಂಗಸು ಸಮಾನ ಹೊಣೆ ಹೊರಬೇಕು ಅಲ್ಲವೆ?
  ವರದಕ್ಷಿಣೆಯ ಸಾವಿನಲ್ಲೂ, ಅತ್ತೆಯಾದ ಹೆಣ್ಣು ಕೂಡ ಜವಾಬ್ದಾರಳು ಅಲ್ಲವೆ?

 8. ಮಾನ್ಯ ಬೇಳೂರು ಅವರೇ ,

  ನೀವು ಕಾಮೆಂಟ್ ಹಾಕು ವಾಗ ಸ್ವಲ್ಪ emotional ಆಗಿ ” ಇಂಥ ಕಾದಂಬರಿಯನ್ನು ಕೊಂಡು ಓದಿದ್ದು ನನ್ನ ದೊಡ್ಡ ತಪ್ಪು” ಎಂದಿದ್ದೀರಿ.”
  ನಿಮ್ಮ ವಿಮರ್ಶೆ, ಏನೆ ಇರಲಿ, ನಿಮ್ಮ ಅಭಿಪ್ರಾಯ ತಿಳಿಸುವ ಭರದಲ್ಲಿ, ಸ್ವಲ್ಪ, ಬಾಲಿಶ ವಾಯಿತೇನೋ ನಿಮ್ಮ ಮೇಲ್ಕಂಡ ಮಾತು ಅಂತ ಅನ್ನಿಸುತ್ತೆ.

  ಅಷ್ಟೊಂದು ಬೇಜಾರು ಆದರೆ, ಒಂದು ಇಪ್ಪತ್ತು ರುಪಾಯಿ ಕಮ್ಮಿ ಗೆ ಮಾರುತ್ತಿನಿ ಅಂತ, ಬ್ಲಾಗ್ ನಲ್ಲಿ, ಹಾಕಿ, ತುಂಬಾ ಜನ ಇದರ ಕಾಪಿ ಸಿಗದೇ, ಕಾಯುತ್ತಿದ್ದಾರೆ.

  ಪ್ರಸಾದ್

 9. ಸರಾಫ್ Lesbian ಅಂತ ಕೀಳಾಗಿ ತೋರಿಸಿದ್ದಾರೆ ಎಂದು ಹೇಳಿದ್ದೀರ,
  ಸರಾಫ್ ತನ್ನ ಕೈ ಕೆಳಗೆ ಕೆಲಸ ಮಾಡುವ ಮಂಗಳೆಯನ್ನು ಕೋಣೆಗೆ ಕರೆದು, ಕುಡಿಸಿ, ಅತ್ಯಾಚಾರ ಮಾಡಿದರೆ, ಅವಳಿಗೆ ಇಲ್ಲದ ಕಾನೂನು, ಮದುವೆಯ ಬಂದನ ಜಯಕುಮಾರನ್ನ ಇಕ್ಕಟ್ಟಿಗೆ ಸಿಕ್ಕಿಸುವುದು ಯಾಕೆ?
  ಮಂಗಳೆ ಜಯಕುಮಾರನ ಜೊತೆ ಪರಸ್ಪರ ಒಪ್ಪಿಗೆಯಿಂದ ಹೋದರೂ ಕೂಡ?
  ಇದು ನಮ್ಮ ಕಾನೂನು ವ್ಯವಸ್ಥೆಯ Bias ಎನ್ನಬೇಕೋ ಏನೋ ತಿಳಿಯುತ್ತಿಲ್ಲ..

 10. ವಿಮರ್ಶೆ ಏಕಮುಖವಾಗಿದೆ ಮತ್ತು ಸ್ತ್ರೀವಾದದ ಪೂರ್ವಗ್ರಹದಿಂದ ಕೂಡಿರುವುದು ಸ್ಪಷ್ಟವಾಗಿದೆ.

  ಸುನಾಥರಂತಹ ಹಿರಿಯರಿಂದ ನಾಡಿನ ಮುಖ್ಯ ಸಾಹಿತಿಯ ಬಗ್ಗೆ ಈ ರೀತಿಯ ಕೆಳಮಟ್ಟದ ಪ್ರತಿಕ್ರಿಯೆ ಅಸಹ್ಯವಾಗಿದೆ.

  ಬೇಳೂರರಿಗೆ ೨೫೦ ರೂಪಾಯಿ ಹೋಯಿತೆನಿಸಿದರೆ ಪ್ರಸಾದ್ ಹೇಳಿದಂತೆ ಅದನ್ನು ಕಡಿಮೆ ಅಥವಾ ಜಾಸ್ತಿ ಬೆಲೆಗೂ ಮಾರಿ ಖಂಡಿತಾ ವಾಪಸ್ ದುಡಿಯಬಹುದು 🙂

 11. ಖಂಡಿತವಾಗಿಯೂ ನಾನು ಖರೀದಿಸಿದ ‘ಕವಲು’ ಕಾದಂಬರಿಯ ಪ್ರತಿಯನ್ನು ಮರುಮಾರಾಟ ಮಾಡಲು ಸಿದ್ಧ. ಆದರೆ ಇಂಥ ಕಾದಂಬರಿಯನ್ನು ದುಡ್ಡು ಕೊಟ್ಟು ಓದುವುದ್ಯಾಕೆ, ಆದರೆ ಶ್ರೇಷ್ಠ ಲೇಖಕರ ಇಂಥ ಕೆಟ್ಟ ಕಾದಂಬರಿಯನ್ನು ಓದದೇ ಇರುವುದ್ಯಾಕೆ ಎಂದು ಕೆಲವು ಸ್ನೇಹಿತರು ನನ್ನ ಪುಸ್ತಕವನ್ನು ಕಡ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಅದು ಖಂಡಿತ ವಾಪಸು ಬರುತ್ತೆ. ಆಗ ಆನಂದ, ಪ್ರಸಾದ್ ಯಾರ್‍ಯಾದರೂ ಸರಿ, ೨೫೦ ರೂ. ಕೊಟ್ಟು (ನಾನು ಪುಸ್ತಕದಂಗಡಿಗೆ ಹೋಗಿ ಬಂದ ಪೆಟ್ರೋಲ್ ಚಾರ್ಜು ಕೇಳುವುದಿಲ್ಲ) ಖರೀದಿಸಿದರೆ ಭಾಳಾ ಒಳ್ಳೆಯದು. ಬೇರೆ ಯಾರ ತಲೆಗೋ ಖರ್ಚು ಕಟ್ಟುವ ಬದಲು ಅವರೇ ಖರೀದಿಸಬಹುದಲ್ಲ?
  ಸ್ತ್ರೀಯರೇ ಪುರುಷರನ್ನು ಶೋಷಿಸುವ ಕಥೆಗಳೇ ಇಲ್ಲಿ ಇವೆ, ಅಷ್ಟೆ ಎಂಬ ಉಡಾಫೆ ಮಾತಾಡುವವರಿಗೆ ಲೆಕ್ಕವಿಲ್ಲ. ಶತಮಾನಗಳಿಂದ ಮಹಿಳೆಯರನ್ನು ಅಸ್ಪೃಶ್ಯರಂತೆಯೇ ಕೀಳಾಗಿ ಕಂಡು, ಶಿಕ್ಷಣ ಕೊಡದೆ, ಅಡುಗೆಮನೆಯಲ್ಲೇ ಹೂತುಹಾಕಿದ ಬಹ್ವಂಶ ಸಮಾಜಕ್ಕೆ ಈಗ ಮಹಿಳೆಯರು ಕೊಂಚ ಕಲಿತಿರೋದೇ ತಲೆಬಿಸಿಯಾಗಿದೆ. ಸ್ತ್ರೀ ಅಂದಕೂಡಲೇ ಸೋನಿಯಾ, ಸುಷ್ಮಾ, ಮಮತಾ ದೀದಿ – ಇವರಷ್ಟೇ ಅಲ್ಲ, ಸಮಾಜದ ಎಲ್ಲ ರಂಗಗಳಲ್ಲೂ ಸ್ವಾಭಿಮಾನದಿಂದ ಮೇಲೆದ್ದ ಸ್ತ್ರೀಯರಿದ್ದಾರೆ. ಪುರುಷರಿರಲಿ, ಮೇಲ್ಜಾತಿಯ ಎಲ್ಲರೂ ಸೇರಿ ದಲಿತ ಮಹಿಳೆಯರನ್ನು ತುಳಿದ ಇತಿಹಾಸಕ್ಕೆ ಕನ್ನಡಿ ಬೇಕೆ?
  ಕೇವಲ ಒಂದೇ ಟೀಚರ್, ಅವನ ಶಿಷ್ಯೆ ಮತ್ತು ಶಿಷ್ಯರ ಕಥೆಯನ್ನಷ್ಟೇ ಐಸೋಲೇಟ್ ಮಾಡಿ ಬರೆದರೆ ಅದು ಕಾದಂಬರಿಯಾಗುವುದಿಲ್ಲ; ಉದ್ದಿಶ್ಯಪೂರ್ವಕ ಮಾಡಿದ ಗೇಲಿಯಾಗುತ್ತದೆ. ಅಲ್ಲದೆ, ಈ ಕಾದಂಬರಿಯಲ್ಲಿ ಬರುವ ಎರಡೂ ಪುರುಷ ಪಾತ್ರಗಳು ಇಂಥ ವಿಚಿತ್ರ ಹೆಂಗಸರನ್ನೇ ಮದುವೆಯಾಗುವುದು ಎಂದರೆ, ಅವರಿಬ್ಬರ ವ್ಯಥೆಗಳು ಮಾತ್ರವೇ ಸಮಕಾಲೀನ ಸಮಾಜದ ಚಿತ್ರಣ ಎಂದಾಗುವುದಾದರೆ ಇದರಂಥ ಕೂಪಮಂಡೂಕವಾದ ಇನ್ನೊಂದಿಲ್ಲ.
  ನಾನು ನನ್ನ ಬ್ಲಾಗಿನಲ್ಲಿ ಭೈರಪ್ಪನವರು ಬರೆದ, ನನಗೆ ಹಿಡಿಸಿದ ಕಾದಂಬರಿಗಳನ್ನೂ ಉಲ್ಲೇಖಿಸಿದ್ದೇನೆ. ಆದ್ದರಿಂದ ಒಬ್ಬ ಪ್ರಸಿದ್ಧ ಲೇಖಕ ಬರೆದ ಎಲ್ಲವೂ ಶ್ರೇಷ್ಠವಾಗಿರಲೇಬೇಕು ಎಂಬ ಡಿಫಾಲ್ಟ್‌ವಾದವನ್ನು ಬಿಡಿ. ಶ್ರೇಷ್ಠ ಸಿನೆಮಾ ನಿರ್ದೇಶಕರನ್ನು ಕೇಳಿ: ತೋಪು ಹೊಡೆದ ಸಿನೆಮಾಗಳ ಬಗ್ಗೆ ಎಷ್ಟು ಕಥೆ ಹೇಳುತ್ತಾರೆ…
  ದೂರ ಸರಿದರು ಎಂಬ ಒಂದು ಇಂಥದ್ದೇ ವಿಚಿತ್ರ ಕಾದಂಬರಿಯನ್ನು ಭೈರಪ್ಪನವರು ಕೊಟ್ಟಿದ್ದರು; ಅದರಲ್ಲಿ ಎಲ್ಲರೂ ಬುದ್ಧಿಜೀವಿಗಳೇ. ದಡ್ಡರಿಗೆ ಪ್ರವೇಶವೇ ಇಲ್ಲ! ಡಾ. ಶಿವರಾಮ ಕಾರಂತರ ಕೆಲವು ಕಾದಂಬರಿಗಳು ಸಾಮಾನ್ಯ ಎಂಬುದನ್ನು ಯಾರಾದರೂ ಒಪ್ಪಬಹುದು.

 12. ಕಾದಂಬರಿಯ ಹೂರಣದ ಕುರಿತು ನನ್ನಲ್ಲೂ ಪ್ರಶ್ನೆಗಳಿವೆ, ಸಮಸ್ಯೆಗಳಿವೆ. ಆದ್ರೆ 250 ರೂಪಾಯಿ ಇಷ್ಟು ಪ್ರಶ್ನೆಗಳನ್ನು ಹುಟ್ಟಿಸ್ತಿದ್ಯಲ್ಲಾ.. ಅನ್ನೋ ಖುಷಿ ನನಗಿದೆ. ಪುಸ್ತಕಕ್ಕೆ ಕೊಡುವ ಇಲ್ಲವೇ ಕೊಟ್ಟ ಹಣ ಬೇಸರಕ್ಕೆ ಕಾರಣವಾಗುವುದಾದಲ್ಲಿ ಬೇರೆ ಅನೇಕ ಮಾರ್ಗಗಳಿವೆ. ಬಿಟ್ಟಿಯಾಗಿ ಓದುವುದಾದಲ್ಲಿ ಲೈಬ್ರರಿಗಳಿವೆ, ಅಥವಾ ಇನ್ಯಾರಲ್ಲೋ ಕಡ ತಂದೂ ಓದಬಹುದು. ಅಥವಾ ಆ ಕೃತಿಯ ವಿಮರ್ಶೆಗೆ ಕಾದು ನಂತರ ಸೂಕ್ತವೆನಿಸಿದಲ್ಲಿ ಕೊಳ್ಳಬಹುದು. ಇದೆಲ್ಲವನ್ನೂ ಬಿಟ್ಟು ಕೊಟ್ಟದ್ದೆಲ್ಲ ನೀರಿನಲ್ಲಿ ಹೋಮ ಮಾಡಿದಂತೆ ಎಂದು ಕರುಬುವುದೋ ಅಥವಾ ಮತ್ತೊಬ್ಬರ ಹಣ ಉಳಿಸಿದೆ ಅಂತ ಬಿಗುಮಾನ ಪಟ್ಟುಕೊಳ್ಳುವುದೋ ನಿಜಕ್ಕೂ “ಚೀಪ್ ” ಅನ್ಸುತ್ತೆ…
  – ಪ್ರವೀಣ್

 13. ಬೇಳೂರರೇ ಕ್ಷಮಿಸಿ, ಹೊಸ ಪುಸ್ತಕವನ್ನು ನಾನು ಅಂಗಡಿಯಿಂದಲೇ ಖರೀದಿಸಿದ್ದೇನೆ. ಒಂದು ಹತ್ತು ದಿನ ಹಿಂದೆಯೇ ನೀವು ಹೇಳಿದ್ದರೆ ನಾನೇ ಕೊಂಡುಕೊಳ್ಳುತ್ತಿದ್ದೆ, ಪೆಟ್ರೋಲ್ ಛಾರ್ಜು ನಾನೇ ಹಾಕಿಕೊಂಡು!

  ಏನೋ ನಾವಂತೂ ಈ ಶತಮಾನದಲ್ಲಿ ಹುಟ್ಟಿದವರು. ನಾವು ಯಾವ ಹೆಂಗಸನ್ನೂ ಕೂಡಿಹಾಕಿಲ್ಲ, ಹೂತು ಹಾಕಿಲ್ಲ. ಅದಕ್ಕೇ ನಮಗೆ ನಿಮ್ಮ ನೋವು ಅರ್ಥಾಗದೇ ಇರಬಹುದು. ಡಾ. ಶಿವರಾಮ ಕಾರಂತರ ಕೆಲವು ಕಾದಂಬರಿಗಳು ಸಾಮಾನ್ಯ ಎಂಬುದನ್ನು ಯಾರಾದರೂ ಒಪ್ಪಬಹುದು ಎಂಬುದು ಕೂಡ ಡಿಫಾಲ್ಟ್ ವಾದವೇ ಆಯಿತು. ಹೋಗಲಿ. ಮುಂದಿನ ಬಾರಿ ಎಲ್ಲರನ್ನೂ ಕೇಳಿ ಎಲ್ಲರ ಒಪ್ಪಿಗೆ ಪಡೆದು ಎಲ್ಲರಿಗೂ ಸರಿ ಅನ್ನಿಸಿದ ಮೇಲೆಯೇ ಕಥೆಪಾತ್ರಗಳನ್ನು ಹೆಣೆಯುವಂತೆ ಭೈರಪ್ಪನವರನ್ನು ಆಗ್ರಹಿಸೋಣ 🙂

 14. ದುಡ್ಡು ನನ್ನದಿರಲಿ, ನಿಮ್ಮದಿರಲಿ, ಅದಕ್ಕೆ ಬೆಲೆ ಇದ್ದೇ ಇದೆ. ಹೀಗಿದ್ದೂ ನಾನು ೨೫೦ ರೂ. ವ್ಯರ್ಥ ಆಯ್ತು ಅಂದಿದ್ದನ್ನು ಫೇಸ್‌ವ್ಯಾಲ್ಯೂ ಮೇಲೆಯೇ ತೆಗೆದುಕೊಂಡು ಚರ್ಚೆ ಮಾಡುವವರ ಬಗ್ಗೆ ನನಗೆ ಅನುಕಂಪವಿದೆ. ಒಂದು ಕಡೆ ಕೊಂಡು ಓದುವವರಿಲ್ಲ ಎಂಬ ಗೋಳು; ಕೊಂಡು ಓದಿ ಕಾದಂಬರಿ ;ಚೀಪ್’ ಆಗಿತ್ತು ಎಂದು ವ್ಯಥಿಸುವುದೇ ‘ಚೀಪ್’ ಆಗಿ ಕಾಣಿಸುತ್ತದೆ. ನನ್ನ ದುಡ್ಡಿನಲ್ಲಿ ನಾನೇ ಮೋಸ ಹೋದೆನಲ್ಲ ಎಂದು ಹಳಿದುಕೊಳ್ಳಲು ನನಗೆ ಖಂಡಿತ ಹಕ್ಕಿದೆ. ಅದನ್ನು ಕೆಟ್ಟ ಸಿನೆಮಾ ನೋಡಿದಾಗಲೂ ಬಳಸುತ್ತೇನೆ.
  ನಾನು ಒಂದು ಹೆಣ್ಣಿಗೂ ಅನ್ಯಾಯ ಮಾಡಿಲ್ಲ ಎಂದು ಬಾವುಟ ಹಾರಿಸಿಕೊಳ್ಳುವವರಿಗೆ ಇತಿಹಾಸದ ಹೊಣೆಗಾರಿಕೆ ಗೊತ್ತಿಲ್ಲ. ಅಂಥ ವಿಸ್ಮರಣೆ ಇರುವವರಿಗೆಂದೇ ಭೈರಪ್ಪ ‘ಆವರಣ’ ಬರೆದಿದ್ದಾರೆ. ಒಂದು ವಿವಾದಿತ ಕಟ್ಟಡದ ಬಗ್ಗೆ ಐತಿಹಾಸಿಕ ಹೊಣೆಗಾರಿಕೆ ಇದೆ ಎಂದು ಹೇಳುವವರು, ಸ್ತ್ರೀ ಸಮುದಾಯವನ್ನು ಒಂದು ನಿರ್ದಿಷ್ಟ ಕಟ್ಟುಪಾಡಿಗೆ ಒಳಪಡಿಸಿದ್ದರ ಬಗ್ಗೆಯೂ, ಕೆಳಜಾತಿಯ ಹೆಸರಿನಲ್ಲಿ ಲಕ್ಷಾಂತರ ಕುಟುಂಬಗಳನ್ನು ಮೆಟ್ಟಿಹಾಕಿದ್ದರ ಬಗ್ಗೆಯೂ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕಲ್ಲವೆ? ಶೋಷಣೆಯನ್ನು ಮೀರಿದ ಮಹಿಳೆಯರ ಉದಾಹರಣೆಗಳು ಹೇಗೆ ವಿಶೇಷವೋ, ಶೋಷಣೆಯನ್ನೇ ಬಂಡವಾಳ ಮಾಡಿಕೊಳ್ಳುವ ಮಾಡರ್ನ್ ಸ್ತ್ರೀವಾದಿಗಳೂ ವಿಶೇಷವೇ. ಅದನ್ನೇ ವೈಭವೀಕರಿಸಿ, ಈ ಕುಲವೇ ಹೀಗೆ ಎಂದು ಸಾರಾಸಗಟಾಗಿ ಗೇಲಿ ಮಾಡುವುದು ವಿಕೃತಿಯಷ್ಟೆ.
  ಕಾದಂಬರಿಯನ್ನು ನನ್ನ ಅಪ್ಪಣೆ ಪಡೆದೇ ಬರೆಯಿರಿ ಎಂದು ನಾನೆಲ್ಲೂ ಹೇಳಿಲ್ಲ. ಬರೆದ ಕಾದಂಬರಿ ಹೀಗಿದೆ ಅಂತ ಹೇಳಿದ್ದೇನಷ್ಟೆ. ನಾನು ಅಕಸ್ಮಾತ್ ಕಾದಂಬರಿ ಬರೆದರೆ ನಿಮ್ಮ ಯಾರ ಅಪ್ಪಣೆಯನ್ನೂ ಪಡೆಯುವುದಿಲ್ಲ; ಬೇಕಾದರೆ ಓದಿ. ಇಲ್ಲಾದರೆ ಬಿಡಿ. ಓದಿದ ಮೇಲೆ ಚೆನ್ನಾಗಿಲ್ಲ, ತೋಪು ಎಂದು ಹೇಳಿದರೆ ರಾಂಗ್ ಆಗೋದಾದ್ರೂ ಯಾಕೆ? ನನ್ನ ಒಂದು ಅನುವಾದಿತ ಕಾದಂಬರಿಯನ್ನು ಒಂದು ಪತ್ರಿಕೆಯಲ್ಲಿ ನನ್ನ ಪ್ರಿಯರೇ ಸ್ವತಃ ಬರೆದು ‘ತೋಪು’ ಎಂದರು. ಅವರನ್ನು ನಾನೇನು ಹೂತುಬಿಡಬೇಕೆ? ಈಗಲೂ ಅವರು – ನಾನು ಆರಾಮಾಗಿ ಮಾತಾಡಿಕೊಂಡಿದ್ದೇವೆ.
  ವಿಮರ್ಶೆಯನ್ನು ವಿಮರ್ಶೆಯಾಗಿ ಮಾತ್ರ ಕಾಣದೆ ವ್ಯಕ್ತಿಗತ ಹಿತಾಸಕ್ತಿಗಳನ್ನು ತೂರಿಸಿದರೆ ನನ್ನ ವಿಮರ್ಶೆಯ ಮೇಲೆ ಹೀಗೆ ವೈಯಕ್ತಿಕ ಕಾಮೆಂಟ್‌ಗಳು ಬರೋದು ಸಹಜವೇ. ಅದಕ್ಕೇನೂ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ. ಬ್ಲಾಗಿನಲ್ಲಿ ಬರೆದು ಕಾಗದ ಉಳಿಸಿದ್ದಕ್ಕೆ ಈ ಟೀಕಾಕಾರರಿಗೂ ವಂದನೆಗಳು.

 15. ಕವಲಿನ ಚರ್ಚೆಯೇ ಕವಲು ದಾರಿ ಹಿಡಿದು ಬೇಳೂರರ ವ್ಯರ್ಥಗೊಂಡ ಹಣದ ಹಿಂದೆ ಬಿದ್ದಿರುವುದು ಬೇಸರವಾಯ್ತು. ಚರ್ಚೆಯಾಗಬೇಕಿರುವ ಸಂಗತಿಗಳಿಗಿಂತ ಇದೇ ಮಹತ್ವದ್ದೆಂದು ಭಾವಿಸುವ ಮನಸುಗಳು ಕವಲಿನ ಬಗ್ಗೆ ಸೂಕ್ಷ್ಮವಾಗಿ ಹೇಗೆ ತಾನೆ ಯೋಚಿಸಬಲ್ಲರು?
  ಇನ್ನುಮುಂದೆ ಬರುವ ‘ಹಣ ವ್ಯರ್ಥಗೊಂಡ’ ವಿಷಯದ ಬಗೆಗಿನ ಕಮೆಂಟ್ ಗಳನ್ನು ಮಾಡರೇಟ್ ಮಾಡುವುದಿಲ್ಲ. ಎಲ್ಲರೂ ಕ್ಷಮಿಸಬೇಕು.
  ಅಂದಹಾಗೆ, ಕೆಟ್ಟ ಸಿನೆಮಾ ನೋಡಿ ಹೊರಬಂದಾಗ ‘ಸುಮ್ನೆ ದುಡ್ ವೇಸ್ಟ್’ ಅಂದ್ಕೊಳ್ತಿದ್ದ ನಾನು, ಕವಲು ಕಾದಂಬರಿಗೆ ಹಣ ತೆತ್ತಿದ್ದರೂ ಹಾಗೇ ಅಂದುಕೊಳ್ತಿದ್ದೆ- ಪ್ರಾಮಾಣಿಕವಾಗಿ ಹೇಳ್ತಿದೇನೆ. ಪುಣ್ಯಕ್ಕೆ ನಾನು ಓದಿದ್ದು ಬಿಟ್ಟಿ ಪ್ರತಿ.
  – ಚೆ

 16. ಚೇ,

  ಇಲ್ಲಿ ನನ್ನ ಪ್ರಶ್ನೆ ಇರೊದು ಪುಸ್ತಕದ ಬಗ್ಗೆಯಲ್ಲಿ, ಲೇಖಕರ ಮನೋಭವದ ಬಗ್ಗೆ, ಆರೋಗ್ಯಕರವಾದ ಸೃಜನಶೀಲತೆ ಇಲ್ಲದ ವ್ಯಕ್ತಿಯಿಂದ ಇಂತಹ ಪುಸ್ತಕಗಳನ್ನಲ್ಲದೇ ಇನ್ನೆಂತ ಮಹತ್ವದ ಕೃತಿ ದೊರೆತೀತು. ಅವರ ಚಿಂತನಾ ಕ್ರಮವೇ ರೋಗಗ್ರಸ್ಥಗೊಂಡಿರಬೇಕಾದರೆ ಯಾರು ಏನನ್ನು ಮಾಡಲಾಗದು. ಅವರ ಕೃತಿ ಸಂಗ್ರಹಕ್ಕೆ ಯೊಗ್ಯವಲ್ಲ ಹಾಗೂ ಇತ್ತೀಚಿನ ಹೆಣ್ಣು ಮಕ್ಕಳು ಏನಾದ್ರು ಓದಿದರೆ ಮಾನಸಿಕ ಆಘಾತಕ್ಕೆ ಒಳಗಾಗುವುದು ಖಂಡಿತ. ಅವರ ಪುಸ್ತಕಕ್ಕೆ ನಿಮ್ಮ ವಿಮರ್ಶಯ ಒಂದು ಪ್ರತಿ ಲಗತ್ತಿಸಿ ಲೇಖಕರಿಗೆ ಮರಳಿಸಿ. ಇದು ಸಂವಾದಕ್ಕೆ ಮತ್ತು ಸಂಗ್ರಹಕ್ಕೂ ಯೋಗ್ಯವಲ್ಲ….

  -ರಾಜಿ.

 17. ಚೇತನಾರವರ ವಿಮರ್ಶೆ ಅದ್ಭುತವಾಗಿತ್ತು…ಭೈರಪ್ಪನವರು ಏನೇ ಬರೆದರೂ ಅದೇ ಸತ್ಯ,ಅದರಾಚೆಗೆ ಇನ್ನೊಂದಿಲ್ಲ ಎಂದು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸಮರ್ಥಿಸುವವರಲ್ಲಿ ಕೆಲವರನ್ನಾದರೂ,ಒಂದು ಸಲ ಕಣ್ಣ ಪಟ್ಟಿ ಕಳಚಿ ಜಗತ್ತನ್ನು ನೋಡುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದೆ…’ಕವಲು’ನಿಂದ ಕವಲಿನೆಡೆಗೆ…

  ತಾಜ್…

 18. ಏನಿದೆ ಭೈರಪ್ಪನವರ ಕವಲು ಕಾದಂಬರಿಯಲ್ಲಿ??? ಫೇಸ್ ಬುಕ್ ನಲ್ಲಿ, ಬಿ.ಸುರೆಶ್ ರವರು ಚೇತನಾ ತೀರ್ಥಹಳ್ಳಿಯವರಿಗೆ ಥ್ಯಾಂಕ್ಸ್ ಹೇಳಿ………………ಚೇತನಾ ಅವರ ವಿಮರ್ಶೆ ಅದ್ಭುತವಾಗಿದೆ. ಆ ಕಾದಂಬರಿ ಓದಿ ನನಗೆ ಹುಟ್ಟಿದ್ದ ಸಿಟ್ಟಿಗೆ ಚೇತನಾ ಅವರು ಅಕ್ಷರ ರೂಪಸ ಕೊಟ್ಟಿದ್ದಾರೆ. ಥ್ಯಾಂಕ್ಸ್ ಚೇತನಾ. ನನಗಿರುವ ಭಯ ಎಂದರೆ ನಾವು ಈ ಕಾದಂಬರಿಯ ಬಗ್ಗೆ ಮಾತಾಡಿದರೂ ಇನ್ನಾರಾದರೂ ಇದನ್ನು ಕೊಂಡು ಅದು ಮರುಮುದ್ರಣ ಆಗಬಹುದು ಎನ್ನುವುದು. ಸಾಮಾನ್ಯಜನ ಈ… ಪುಸ್ತಕದಿಂದ ದೂರ ಇರುವುದು ಅವರ ಆರೋಗ್ಯಕ್ಕೆ ಒಳ್ಲೆಯದು ಎಂದು ತಿಳಿಸಬೇಕಾಗಿದೆ………. ಎಂದು ಬರೆದಿದ್ದರು, ಇದನ್ನು ಓದಿದ ತಕ್ಷಣ ನನಗೆ ಅನ್ನಿಸಿದ್ದು ಬಹುಶ ಇವರು ಭೈರಪ್ಪನವರ ಕವಲು ಕಾದಂಬರಿಯ ಕುರಿತಾದ ಚರ್ಚೆ ಎಂದು ಹಾಗೆಯೆ ಬಿ.ಸುರೇಶ್ ರವರು ನೀಡಿದ್ದ ಲಿಂಕ್ ನಲ್ಲಿ ನೋಡಿದಾಗ ನನ್ನ ಅನಿಸಿಕೆ ನಿಜವಾಗಿತ್ತು ಅದು ಚೇತನಾ ತೀರ್ಥಹಳ್ಳಿಯವರು ಭೈರಪ್ಪನವರ ಕವಲು ಕಾದಂಬರಿಯ ಬಗ್ಗೆ ಬರೆದ ವಿಮರ್ಶೆ. ಬಿ.ಸುರೇಶ್ ರವರಿಗೆ ಒಂದು ಮಾತು ಭೈರಪ್ಪನವರ ಬರಹಗಳು ಚರ್ಚೆ ವಾದ ವಿವಾದಗಳ ಮುಖಾಂತರ ಸುದ್ದಿಗೆ ಬಂದು ಮಾರಾಟವಾಗಬಹುದಾದಂತಹ ಬರಹಗಳಲ್ಲ, ಬಿ.ಸುರೇಶ್ ರವರು ಹೇಳಿದಂತೆ ಆಗಿದ್ದರೆ ಬಿಡುಗಡೆಗೆ ಮುನ್ನವೇ ’ಕವಲು’ಕಾದಂಬರಿ ಎರಡು ಮುದ್ರಣಗಳನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ, ಅದು ಅವರ ಬರಹಕ್ಕಿರುವ ಶಕ್ತಿಯನ್ನು ತೋರಿಸುತ್ತದೆ ಅದನ್ನು ಅವರು ಅರ್ಥ ಮಾಡಿಕೊಂಡರೆ ಸಾಕು. ಸಧ್ಯಕ್ಕೆ ನಾನು ಬರ್ಲಿನ್ ನಲ್ಲಿದ್ದೇನೆ, ಬಂದು ಹದಿನೈದು ದಿನಗಳ ಮೇಲಾಯಿತು ಮತ್ತೆ ಭಾರತಕ್ಕೆ ಯಾವಾಗ ಬರುತ್ತೇನೆಯೊ ಗೊತ್ತಿಲ್ಲ, ನಾನು ಭಾರತದಿಂದ ಹೊರಡುವುದಕ್ಕೆ ಮುಂಚೆಯೆ ಭೈರಪ್ಪನವರ ಕವಲು ಕಾದಂಬರಿ ಬಿಡುಗಡೆಗೆ ಮುನ್ನವೇ ಎರಡು ಮುದ್ರಣಗಳನ್ನು ಕಂಡಿದೆ ಎಂದು ಓದಿದ್ದೆ ಆಗಲೆ ನನಗೆ ಅನಿಸಿತ್ತು ಈ ಕಾದಂಬರಿ ಒಂದು ದೊಡ್ಡ ಚರ್ಚೆ, ವಾದ ವಿವಾದಕ್ಕೆ ಎಡೆಮಾಡಿಕೊಡುತ್ತದೆ ಎಂದು.
  ಅದು ಒತ್ತಟ್ಟಿಗಿರಲಿ, ನಾನು ಮುಂಚಿನಿಂದಲೂ ಭೈರಪ್ಪನವರ ಬರಹಗಳ ಅಭಿಮಾನಿ, ಬಹುಶ ಭೈರಪ್ಪನವರ ಬರಹಗಳಲ್ಲಿ ನಾನು ಮೊದಲು ಓದಿದ್ದು ಗೄಹಭಂಗ, ನಾನಾಗ ಮೊದಲ ಪಿಯುಸಿ ವಿದ್ಯಾರ್ಥಿ. ಬೈರಪ್ಪನವರ ಗೄಹಭಂಗ ಆವತ್ತಿಗೆ ನನ್ನನ್ನು ಯಾವ ಪರಿ ಕಾಡಿತ್ತೆಂದರೆ ಇವತ್ತಿಗೂ ನಾನು ಅದನ್ನು ಮೊದಲು ಓದಿದಷ್ಟೇ ಪ್ರೀತಿಯಿಂದ ಓದುತ್ತೇನೆ, ಅದನ್ನು ಎಷ್ಟು ಬಾರಿ ಓದಿದ್ದೇನೆಯೊ ಕಾಣೆ. ಭೈರಪ್ಪನವರ ಬರಹಗಳು ನನಗೆ ಇಷ್ಟವಾಗಲು ಕಾರಣವೆಂದರೆ ಅವರ ಬರಹಗಳು ವಸ್ತುನಿಷ್ಟವಾಗಿರುತ್ತವೆ ಎಂಬ ಕಾರಣಕ್ಕೆ, ಬಹುಶ ವಸ್ತುನಿಷ್ಟವಾಗಿರುವ ಕಾರಣಕ್ಕೇ ಹೆಚ್ಚು ಚರ್ಚಿತ ಮತ್ತು ವಾದ ವಿವಾದಗಳು ಪ್ರಾರಂಭವಾಗುತ್ತವೆ ಎಂದು ನನ್ನ ಅಭಿಪ್ರಾಯ ಮತ್ತು ಅದು ಸರ್ವ ವೇದ್ಯ, ಏಕೆಂದರೆ ಕೆಲದಿನಗಳ ಹಿಂದೆ ವಿಜಯ ಕರ್ನಾಟಕ ಪತ್ರಿಕೆಯವರು ಮತಾಂತರದ ಬಗ್ಗೆ ನಡೆಸಿದ ಚರ್ಚೆಯಲ್ಲಿ ಭೈರಪ್ಪನವರು ಬರೆದ ಬರಹದ ಮೇಲೆ ವ್ಯಾಪಕ ಚರ್ಚೆಯಾಗಿತ್ತು ಏಕೆಂದರೆ ಆ ಬರಹ ಅಷ್ಟು ವಸ್ತುನಿಷ್ಟವಾಗಿತ್ತು, ಏಕೆಂದರೆ ಭೈರಪ್ಪನವರು ತಮ್ಮ ಬರಹದಲ್ಲಿ ಪ್ರತಿಯೊಂದನ್ನು ತಕ್ಕ ಸಾಕ್ಷ್ಯಗಳೊಂದಿಗೆ ಸಮರ್ಥಿಸಿದ್ದರು, ಪ್ರತಿಯೊಂದು ಅನಿಸಿಕೆಗೂ ನಾನು ಅದನ್ನು ಏಕೆ ಬರೆದಿದ್ದೇನೆ ಎಂಬುದನ್ನು ಸಾಕ್ಷ್ಯಗಳ ಸಮೇತ ವಿವರಿಸಿದ್ದರು ಆದರೂ ವ್ಯಾಪಕ ಚರ್ಚೆಯಾಗಿತ್ತು, ಭೈರಪ್ಪನವರನ್ನು ವೈಯಕ್ತಿಕವಾಗಿ ನಿಂದಿಸಿ ಬರೆಯುವವರೆವಿಗೂ ಹೋಗಿತ್ತು. ಕೇವಲ ಭೈರಪ್ಪನವರ ಬರಹಗಳು ಅಂತಲ್ಲ ಯಾವುದೇ ಲೇಖಕನ ಬರಹಗಳೆ ಆದರೂ ವಸ್ತುನಿಷ್ಟವಾಗಿದ್ದರೆ ವಾದ ವಿವಾದಗಳಿಂದ ದೂರವಿರುವುದಕ್ಕೆ ಸಾಧ್ಯವಿಲ್ಲ. ಇಲ್ಲಿ ಇನ್ನೊಂದು ಮುಖ್ಯವಾದ ವಿಷಯ ಯಾವುದೇ ಬರಹದ ಬಗ್ಗೆ ಪರ ವಿರೋಧ ಚರ್ಚೆಯಾದಷ್ಟೂ ಆ ಬರಹದ ಬರಹಗಾರನು ಪ್ರಸಿದ್ಧಿಗೆ ಬರುವುದು ಸ್ಪಷ್ಟ, ಆಗ ಲೇಖಕನ ಬರಹವನ್ನು ವಿರೋಧಿಸಿದಷ್ಟೇ ಜನರು ಅದನ್ನು ಒಪ್ಪಿಕೊಳ್ಳುವವರೂ ಸೄಷ್ಟಿಯಾಗುತ್ತಾರೆ ಅದೂ ಸತ್ಯ, ಬಿ.ಸುರೇಶ್ ರವರು ಹೇಳಿದಂತೆ ಭೈರಪ್ಪನವರ ಬರಹಗಳು ಹಾಗೆ ಚರ್ಚೆಯ ಮುಖಾಂತರ ಪ್ರಸಿದ್ದಿಗೆ ಬಂದು ಮಾರಟವಾಗುವಂತಹ ಬರಹಗಳಲ್ಲ. ಹಾಗೆಂದು ನಾನು ಇಲ್ಲಿ ಭೈರಪ್ಪನವರ ಕವಲು ಕಾದಂಬರಿಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಕಾರಣ ನಾನಿನ್ನೂ ಕಾದಂಬರಿಯನ್ನು ಓದಿಲ್ಲ, ಅದನ್ನು ನಾನಿಲ್ಲಿಗೆ ತರಿಸಿಕೊಂಡು ಓದಲು ಕನಿಷ್ಟ ಇನ್ನೂ ಮೂರು ತಿಂಗಳಾದರೂ ಬೇಕು, ಹಾಗಾಗಿ ನಾನು ಮುಂಚೆ ಓದಿದ ಭೈರಪ್ಪನವರ ಬರಹಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಮಾತುಗಳನ್ನು ಹೇಳಿದ್ದೇನೆ. ಕಾದಂಬರಿಯನ್ನು ಓದಿದ ಮೇಲೆ ನಾನು ಭೈರಪ್ಪನವರನ್ನು ಸಮರ್ಥಿಸಿಕೊಳ್ಳಬಹುದು ಹಾಗೆಯೆ ಅವರ ದೄಷ್ಟಿಕೋನ ತಪ್ಪಾಗಿದ್ದರೆ ಅದನ್ನು ನಾನು ಧಿಕ್ಕರಿಸಲೂಬಹುದು, ಚರ್ಚೆ ನಡೆಯುತ್ತಿದೆ ನಡೆಯಲಿ ಬಿಡಿ, ಇನ್ನು ಮೂರು ತಿಂಗಳ ನಂತರ ಪುಸ್ತಕ ಓದಿದ ನಂತರ ಮತ್ತೆ ಇಲ್ಲಿ ಬರೆಯುತ್ತೇನೆ, ಚರ್ಚೆ ಜಾರಿಯಲ್ಲಿದ್ದರೆ ಅವತ್ತಿಗೂ ಒಂದು ಆರೊಗ್ಯಕರ ಚರ್ಚೆ ನಡೆಯುತ್ತಿರುತ್ತದೆ ಆಗ ಮತ್ತೆ ಮಾತಾಡೋಣ.
  Harsha

 19. Harsha,

  ಮೂರು ತಿಂಗಳ್ಯಾಕೆ? ಯಾವುದಾದರೂ ದ್ವೀಪದಲ್ಲೋ ಅಥವಾ ಬೇರೆ ಗ್ರಹದಲ್ಲೋ ಇದ್ದೀರಾ? ಆನ್ ಲೈನ್ ಆರ್ಡರ್ ಮಾಡಿದರೆ ಹೆಚ್ಚೆಂದರೆ ಒಂದು ವಾರ ಆಗಬಹುದು. ಪ್ರಯತ್ನಿಸಿ . ಒಮ್ಮೆ ಓದಬೇಕಾದ ಪುಸ್ತಕವದು.

 20. I have gone through the discussions after reading the book. The book is good and worth reading. There are good and bad people among male & female. Opinion varies from person to person. If you ask a family affected due to dowry or a husband troubled by a lady, they definitely like Jayakumar or vinayachandra. similarly if you ask any womanizer he may like Prabhakar. Here as a reader let us understand the roles of all character in the novel and think positively for a good cause & discuss on what can be done. The novel forced us to think & react, that is the best part. Due to this reason there are so many reaction & counter reactions.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: