ಈ ಛಳಿಯಲ್ಲಿ ಬೆಚ್ಚಗಿರಿ…


ಘಮ್ಮಗೆ ಮೈತುಂಬ ಸ್ನಾನ ಮಾಡಿ ಕುಳಿತಿದೇನೆ. ಮನೆಮುಂದೆ ಅಂಗಳದಷ್ಟು ವಿಶಾಲ ಜಾಗದಲ್ಲಿ… ಸೂರ್ಯ ಮೋಡ ಹೊದ್ದು ಮಲಗಿಬಿಟ್ಟಿದಾನೆ. ಅಬ್ಬ! ಇಬ್ಬನಿ ಇಲ್ಲದಿದ್ರೂ ಎಂಥ ಛಳಿ?
ಈ ಅಮ್ಮ ಮಸಾಲೆದೋಸೆ ಯಾಕಾದರೂ ಮಾಡಿದಳೋ? ಕಪ್ಪೆ ನುಂಗಿದ ಹೆಬ್ಬಾವಿನ ಹಾಗೆ ಆಗಿದೆ ಹೊಟ್ಟೆ. ಯಾವುದನ್ನ ಸುತ್ತುಗಟ್ಟಿ ಅರಗಿಸ್ಕೊಳ್ಳಲಿ?
ಮತ್ತೊಂದು ಹಬ್ಬದ ಸೀಸನ್ ಮುಗಿದಿದೆ. ಆಷಾಡದಲ್ಲಾ? ಅನ್ನಬೇಡಿ. ಅಂವ ಇರ್ತಾನಲ್ಲ… ಅಷ್ಟೂ ದಿನವೂ ಹಬ್ಬವೇ. ಧೂಪ ಹೊತ್ತಿಸಿ, ದೀಪ ಬೆಳಗಿ ಹೂವಿಟ್ಟಷ್ಟು ದಿವ್ಯದಿವ್ಯ, ಆ ಸಡಗರ ಸಂಭ್ರಮಗಳೆಲ್ಲ.
ಇನ್ನೀಗ ಅಂವ ಹೊರಟ. ಮತ್ತೆ ಶೂನ್ಯ ಮಾಸ.
‘ಅಮ್ಮಾ, ಬಿದಿರು ಹೂಬಿಟ್ಟಿದೆ ಈ ಸರ್ತಿ. ಬರ ಬೀಳತ್ತ ಹಂಗಾರೆ?’ ಫೋನ್ ಮಾಡಿದ ಮಗುವಿಗೆ ಆತಂಕ. ತೋಟದ ಮನೆ ಹುಡುಗ. ಇಂಥ ಕಾಳಜಿಗಳಿರೋದು ಖುಷಿ.
ಬಿದಿರು ಹೂತಳೆವ ಕಾಲವಿದು
ಕೊಳಲೂದುವ ನೀನರಿಯೆ
ಬರಗಾಲದ ಸೂಚನೆ
ಕೊನೆಗಾಲದ ಯಾತನೆ…
ನನ್ನ ಒಳಗೆ ಕವಿತೆ. ಯಾವಾಗಲೂ ಹಾಗೇ. ಎಲ್ಲಕ್ಕೂ ಕೃಷ್ಣನೊಟ್ಟಿಗೆ ಜಗಳ. ಬಿದಿರು ಹೂಬಿಟ್ಟರೂ ಅಷ್ಟೇ.
ಕೃಷ್ಣ…. ಅಂವ ಮಡಿ ಮಾಡಿ ಅಂಗಾರಾಕ್ಷತೆ ಬಳಿಸಿಕೊಂಡು ಕತ್ತಲ ಗರ್ಭದಲ್ಲಿ ಬಂಧಿಯಾದವನಲ್ಲ. ಬಂಗಾರದ ತಗಡು ಮೆತ್ತಿಸಿಕೊಂಡು ಪೋಸು ಕೊಡುವವನೂ ಅಲ್ಲ. ಪುರಾಣ-ದರ್ಶನಗಳ ಪುಣ್ಯಾತ್ಮನೂ ಅಲ್ಲ. ಅಂದಹಾಗೆ, ಪೀರಣ್ಣನ….. ನೆಕ್ಕುವ…. (ಸೆನ್ಸಾರ್ ಮಾಡಲಾಗಿದೆ. ಅವರ ಈ ಸಾಲುಗಳಿಗಾಗಿ ನಾನು ಅವರನ್ನು ಹೇಟ್ ಮಾಡದೆ ಇರಲಾರೆ!) ಖಂಡಿತ ಅಲ್ಲ. ನನ್ನ ಕೃಷ್ಣ, ಮುನ್ಶಿಯವರ ಕೃಷ್ಣಾವತಾರದ ಅಪ್ಪಟ ಮನುಷ್ಯ. ನಗುವ, ಅಳುವ, ನೋಯುವ, ಕಾಯುವ, ಹೆಗಲಾಗುವ ಗೆಳೆಯ.
ದ್ರೌಪದಿಗೆ ಕೃಷ್ಣ ಆಪ್ತ ಗೆಳೆಯನಂತೆ. ರಾಖಿ ಕಟ್ಟಿಸ್ಕೊಂಡು ಅಣ್ಣನೂ ಆಗಿದ್ದ. (ಲೋಕದ ಕೆಲವು ಕಣ್ಣುಗಳಿಗೆ ಇಂಥ ವಾಚ್ಯ ಪುರಾವೆಗಳು ಬೇಕಾಗುತ್ತೆ. ಜನರ ಮಧ್ಯದಲ್ಲೇ ಇರಬೇಕಲ್ಲ?) ಇಬ್ಬರೂ ಒಬ್ಬರಿಗೊಬ್ಬರು ಹೆಮ್ಮೆಯಾಗಿದ್ದರು. ಅವಳ ದಣಿದ ಕಣ್ಣಿಗೆ ನಾಳೆಯ ಕನಸು ಕೊಟ್ಟಿದ್ದ ಕೃಷ್ಣ. ಶಪಥಕ್ಕೆ ದನಿಯಾಗಿದ್ದ.
ಅಂಥ ಕೃಷ್ಣನೊಬ್ಬ ಇದ್ದಾನೆಂದೇ ಮುಡಿಕಟ್ಟುವ ದ್ರೌಪದಿಯಾಗುವ ಧೈರ್ಯ ಬಂದಿತಾ? ಯುದ್ಧ ಗೆದ್ದಿರುವೆನಾ? ಇನ್ನು ಬಾಕಿ ಇರುವುದೇನು? ಆತಂಕವಿಲ್ಲ.
ಬದುಕು ಒಂದು ಸುದೀರ್ಘ ಸಾಲಿನಂತೆ. ಫುಲ್‌ಸ್ಟಾಪ್ ಇಟ್ಟಾಗ ಮುಗಿತಾಯ. ಆದರದು ನಮ್ಮ ಕೈಲಿರುತ್ತದಾ? ಇರಬಹುದೇನೋ ಗೊತ್ತಿಲ್ಲ.
ಬಟ್, ಭಾನುವಾರದ ಈ ಒಣಹರಟೆಯನ್ನ ಮುಗಿಸುವ ಫುಲ್‌ಸ್ಟಾಪ್ ಅಂತೂ ಬೆರಳ ತುದಿಯಲ್ಲಿದೆ. ಇನ್ನೂ ಇಡದಿದ್ದರೆ ನನ್ನ ಅಡ್ರೆಸ್ ಹುಡುಕಿಬಂದು ಹೊಡೀತೀರಿ ನೀವು!
ಈ ಛಳಿಯಲ್ಲಿ ಬೆಚ್ಚಗಿರಿ. ಸಂಗಾತಿ, ನೆನಪು, ವಿರಹದುರಿ, ಕನಸು, ಏನೆಲ್ಲವನ್ನೂ ಮೈಮೇಲೆಳೆದುಕೊಂಡು….

4 thoughts on “ಈ ಛಳಿಯಲ್ಲಿ ಬೆಚ್ಚಗಿರಿ…

Add yours

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: