ಚಾಕಲೇಟು, ಬ್ಲಾಗಿಂಗ್ ಚಟ ಇತ್ಯಾದಿ…


ಆ ನೀಲಿ ಹೊದಿಕೆಯನ್ನ ಚೂರೇ ಬಿಚ್ಚಿ, ಒಳಗಿನ ಬಂಗಾರದಪ್ಪುಗೆಯನ್ನ ಹಗೂರ ಬೇರ್ಪಡಿಸುತ್ತ, ಒಳಗಿನ ಲಘುಕಂದು ಬಣ್ಣದ ಚೌಕಗಳ ಘಮವನ್ನ ಹಾಗೇ ಒಮ್ಮೆ ಒಳಗೆಳೆದುಕೊಂಡು, ಅದರ ರುಚಿಗೆ ನನ್ನನ್ನೇ ಕೊಟ್ಟುಕೊಳ್ಳುತ್ತ ಚಾಕಲೇಟು ಕಡಿಯುವುದಂದರೆ ನನಗೆ ಸ್ವರ್ಗಸುಖ. ಮತ್ತು ಈ ಸ್ವರ್ಗ ನಿತ್ಯವೂ ನನ್ನ ಅಂಗೈಲಿ. ಈ ಕಾರಣಕ್ಕೇ ಬಹುಶಃ ನನ್ನ ಮುಖ ಹುಣ್ಣಿಮೆ ಚಂದ್ರನ ಹಾಗೆ ಕಲೆಮಯವೂ ಕುಳಿಪೂರ್ಣವೂ ಆಗಿರುವುದು. ಚಿಂತಿಯೇನಿಲ್ಲ. ಅಷ್ಟಕ್ಕೆಲ್ಲ ಚಾಕಲೇಟು ತಿನ್ನುವ ಸುಖವನ್ನ ಬಿಟ್ಟುಕೊಡಲಾಗುತ್ತೆಯೇ?
ಚಾಕಲೇಟು ಬಿಟ್ಟರೆ, ಆ ಸುಖವನ್ನ ಕೊಡೋದು ಕಾಫಿ ಮಾತ್ರ. ಅದೂ ನೆಸ್‌ಕೆಫೆಯ ಘಮದ್ದು. ಕುಡಿದರೆ ಹಾಗೇ ಕುಡಿಯಬೇಕನ್ನುವ ಕಡುನಿರ್ಧಾರದ ನಾನು ಹೊರಗೆ ಸುತರಾಂ ಕಾಫಿ ಕುಡಿಯೋದಿಲ್ಲ, ಕಾಫಿ ಡೇ ಬಿಟ್ಟು. ಅದೇನಂದರೂ ನಮ್ಮನಮ್ಮ ಚಾಯ್ಸ್ ಅಲ್ಲವೆ?
ಅಮ್ಮನ ಪ್ರಕಾರ ನನ್ನ ಮುಖದ ತುಂಬ ಇರುವ ಹವಳದ ದಿಣ್ಣೆಗಳಿಗೆ (ನನ್ನ ಪಿಂಪಲ್‌ಗಳು ಕೆಂಪಗಾಗಿಬಿಟ್ಟಿರ್ತವೆ ಕೆಲವು ಸಾರ್ತಿ) ಕಾರಣ ಈ ಸ್ಟ್ರಾಂಗ್ ಕಾಫಿಯ ಚಟ. ಏನು ಮಾಡೋದು? ೨೦೧೦ರ ರೆಸಲ್ಯೂಶನ್‌ನಲ್ಲಿ ‘ಕುಡಿತ ಬಿಡಬೇಕು’ ಅಂತ ಸೇರಿಸ್ಕೊಂಡಿದ್ದೆ. ಮುಂದಿನ ವರ್ಷಕ್ಕೆ ತಳ್ಳದೆ ವಿಧಿಯಿಲ್ಲ.
~
ನನ್ನ ಮುಖದ ತಂಟೆಗೆ ಬರದ, ಇವೆರಡನ್ನೂ ಮೀರಿದ ಚಟವೊಂದಿದೆ. ಅದು, ಪುಸ್ತಕ ಓದೋದು. ಅದರಿಂದ ಮುಖದ ಚರ್ಮ ಏನಾಗದಿದ್ದರೂ ಮುಖದ ಮೇಲಿರುವ ಕಣ್ಣುಗಳಿಗೆ ಕಾಟವಾಗುತ್ತೆ. ಹೊಸ ಕನ್ನಡಕ, ನಾಲ್ಕು ಥರದ ಐ ಡ್ರಾಪ್ಸ್, ಅರ್ಧ ದಿನ ರಜೆ, ರಜೆಯಲ್ಲಿ ಮತ್ತೆ ಕಂಪ್ಯೂಟರ್ ಮುಂದೆ… ಹೀಗೆ.
ಕಂಪ್ಯೂಟರ್ ಮುಂದೆ ಕೂತಿದ್ದು ಸಿನೆಮಾ ಚಟದಿಂದಾಗಿ. ಬಹಳ ದಿನಗಳಿಂದ ಪೆಂಡಿಂಗ್ ಇದ್ದ ‘ಗಾನ್ ವಿದ್ ದ ವಿಂಡ್’ ನೋಡಿದೆ. ಹೇಗೂ ಕುಳಿತಿದೇನಲ್ಲ ಅಂತ ‘ಸ್ಟ್ರಾಬೆರಿ-ಚಾಕೊಲೇಟ್’ ಅನ್ನೂ ನೋಡಿದೆ. ಅದರ ಕ್ಲೈಮ್ಯಾಕ್ಸ್ ಡೀವೀಡಿಯಿಂದ ಮಾಯವಾಗಿತ್ತು. ಏನಾಯ್ತೋ ಅಂತ ಅವತ್ತಿಡೀ ಪರಿತಪಿಸಿದೆ. ಗೂಗಲಿಸಿದಾಗಲೂ ತೃಪ್ತಿಯಾಗುವ ಹಾಗೆ ಕ್ಲೈಮ್ಯಾಕ್ಸ್ ವಿವರಣೆಯಿರಲಿಲ್ಲ. ಕಣ್ಣಿನ ಜತೆ ತಲೆನೋವೂ ಶುರುವಾಯ್ತು.
ರಾತ್ರಿ ಒಂದು ಗಂಟೆಯ ಆಸುಪಾಸಿಗೆ ಅಂತೂ ಮಲಗುವ ಯೋಚನೆ ಬಂತು. ಜೊತೆಗೇ, ‘ಒಳ್ಳೇದೋ ಕೆಟ್ಟದ್ದೋ… ಒಟ್ರಾಶಿ ಚಟದಿಂದ ಎಲ್ಲ ಹಾಳೇ’ ನೆನಪಾಯ್ತು.
~
ಹಾಳೇ ಇರಲಿ, ನಾವು ಇಷ್ಟಪಟ್ಟು, ಖುಷಿಪಟ್ಟು ಮೈಮೇಲೆಳೆದುಕೊಳ್ಳುವ ಹಾಳುತನವೂ ಸೊಗಸು.
ಎಗ್ಸಾಂಪಲ್ಲಿಗೆ, ನಂಗೆ ಅವನಂದರೆ ಚಟ ಅನಿಸುವಷ್ಟು ಇಷ್ಟ. ಅದರಿಂದಾಗಿ ಪೊಸೆಸ್ಸಿವ್‌ನೆಸ್ಸೂ ವಿಪರೀತ. ಅದರಿಂದಾಗೇ ಆಗೀಗ ಮಹಾಯುದ್ಧಗಳು ನಡೆದು ಭವಿಷ್ಯ ಅಂಧಕಾರದಲ್ಲಿ ಮುಳುಗೇಹೋಯ್ತು ಅಂತ ಡೈರಿ ಗೀಚ್ತಿರಬೇಕಾದರೆ ‘ನಾಲಾಯಕ್ ಕಣೋ ನೀನು’ ಅನ್ನುತ್ತ ಅವನ ಫೊನು. ಆ ಹೊತ್ತಿಂದಲೇ ಮತ್ತೆ ಅವನೆಂಬದ ಚಟದ ನವೀಕರಣ. ಲೈಫಲ್ಲಿ ಈ ಥರದ್ದೂ ನಡೆಯದೆ ಹೋದ್ರೆ ಥ್ರಿಲ್ ಏನಿರತ್ತೆ? ಹೀಗೆ ಜಗಳಗಳೂ ಒಂಥರಾ ಮಜಾ ಇರತ್ತೆ!
~
ಬ್ಲಾಗು ಶುರು ಮಾಡಿ, ಮುಚ್ಚಿ; ಶುರುಮಾಡಿ, ಬಿಟ್ಟು- ಶುರುಮಾಡಿದಾಗ ಒಬ್ಬರು ಹೇಳಿದ್ದರು, ‘ಬ್ಲಾಗಿಂಗ್ ಒಂದು ಚಟ ನೋಡು!’. ಇದರಿಂದ ಆಗೀಗ ಸಮಯ ಹಾಳು ಬಿಟ್ಟರೆ ಬ್ಲಾಗಿಂಗ್ ಚಟದಿಂದ ನನಗಂತೂ ಲಾಭವಾಗಿದ್ದೆ ಹೆಚ್ಚು. ಮತ್ತೆ ಬರೀಲಿಕ್ಕೆ ಶುರುಹಚ್ಚಿದ್ದು, ಈಗ ಆಪ್ತಳಾಗಿರುವ ಗೆಳತಿ ಸಿಕ್ಕಿದ್ದು, ಮತ್ತಷ್ಟು ಪರಿಚಯಗಳು, ಹಳೆಗೆಳೆಯರು ಹೊಸತಾಗಿದ್ದು…. ನನಗೆ ನಾನು ಈಗ ಮಾಡ್ತಿರುವ ಕೆಲಸ ಸಿಕ್ಕಿದ್ದೂ ಬ್ಲಾಗಿಂಗ್ ನಿಂದಲೇ. ಹೀಗೊಬ್ಬಳು ನಾನು ಏನಾದರೂ ಕೆಲಸ ಮಾಡಬಲ್ಲೆನೆಂದು ಪುರಾವೆ ದಕ್ಕಿಸಿಕೊಡಲಿಕ್ಕೆ ಬ್ಲಾಗ್ ಅಲ್ಲದೆ ಬೇರೆ ಏನೂ ಇರಲಿಲ್ಲವಲ್ಲ?
ಜೊತೆಗೆ, ಬ್ಲಾಗ್ ನೋಡಿಯೇ ಅನುವಾದದ ಆಫರ್ ಕೊಟ್ಟವರಿಬ್ಬರು ಇದ್ದಾರೆ. ಸ್ಕ್ರಿಪ್ಟ್ ಬರಹದ ಅವಕಾಶವೂ ಹುಡುಕಿ ಬಂದಿದ್ದಿದೆ. ಏನೋ ಎಂಥದೋ… ನನಗಂತೂ ಬ್ಲಾಗಿಂಗ್‌ನಿಂದಾಗಿ ಭರ್ಜರಿ ಪಾಕೆಟ್ ಮನಿ ಸಿಗತೊಡಗಿದ್ದು ಸುಳ್ಳಲ್ಲ!
ಹಾಳು ಚಟಗಳನ್ನೂ ಪಾಸಿಟಿವ್ ಮಾಡ್ಕೊಳೋದು ನಮ್ಮ ಕೈಲೇ ಇರುತ್ತೆ ಅಲ್ವ?
~
ವಿಷಯವನ್ನೀಗ ಚೂರು ಗಂಭೀರ ಮಾಡಬಹುದಾದರೆ,
ಮೊನ್ನೆ ಮೈಸೂರಲ್ಲಿ ಒಂದು ಕಾರ್ಯಕ್ರಮ ನಡೀತು. ಇವತ್ತಿನ ಆಸಕ್ತ ಬರಹಗಾರರು ಸೇರಿಕೊಂಡು ನಡೆಸಿಕೊಟ್ಟ ಒಳ್ಳೆಯ ಪ್ರಯತ್ನ ಅದು. ಪ್ರಯತ್ನವೇನೋ ಒಳ್ಳೆಯದಿತ್ತು. ಆದರೆ ಬಂದ ದೊಡ್ಡವರು ಅದನ್ನ ತಮ್ಮ ಐಡಿಯಾಲಜಿಗಳ ಸಮಜಾಯಿಷಿಗೆ  ಬಳಸಿಕೊಂಡರೆಂದೇ ನನಗೆ ಅನಿಸುತ್ತಿದೆ.
ಅದಿರಲಿ… ಈ ಕಾರ್ಯಕ್ರಮದಲ್ಲಿ ಈಗಿನ ಒಬ್ಬ ಬರಹಗಾರ್ತಿ ಬ್ಲಾಗಿಂಗ್ ಬಗ್ಗೆ, ಅದರಲ್ಲಿ ಹುಟ್ಟಿಕೊಳ್ತಿರುವ ಬರಹಗಳ ನಮೂನೆಯ ಬಗ್ಗೆ ಸ್ವಲ್ಪ ಹಗುರವೇ ಅನ್ನಿಸುವ ಕಮೆಂಟ್ ಮಾಡಿದರು, ತಮ್ಮ ಭಾಷಣದಲ್ಲಿ. ಬ್ಲಾಗ್‌ನಲ್ಲಿ ಬರುತ್ತಿರೋದು ‘ಸುಗಮ ಸಾಹಿತ್ಯ’ವೇ ಇರಬಹುದು. ಆದರೆ ಯಾಕೆ ಆರೋಪ ಹೊರಿಸ್ತಿರುವ ಘನಘೋರ ಗಂಭೀರ ಬರಹಗಾರರು ತಮ್ಮ ಬರಹಗಳನ್ನ ಜಾಲಕ್ಕುಣಿಸಿ ಕನ್ನಡ ಅಂತರ್ಜಾಲ ಲೋಕಕ್ಕೆ ತೂಕ ತಂದುಕೊಡಬಾರದು? ಕನ್ನಡ ಉಳಿಕೆಯ ಪ್ರಕ್ರಿಯೆಯಲ್ಲಿ ಕನ್ನಡ ಬಿಟ್ಟುಕೊಡ್ತಿರುವವರೆಂಬ ಆರೋಪಕ್ಕೆ ಒಳಗಾಗಿರುವ ಕಾರ್ಪೊರೇಟ್ ವರ್ಗವೇ ಬ್ಲಾಗಿಂಗ್ ಮೂಲಕ ತನ್ನ ಹಗುರವಾದರೂ ಗಣಿಸಬೇಕಾದಂಥ ಕಾಣಿಕೆ ಸಲ್ಲಿಸುತಿದೆ ಅನಿಸುವುದಿಲ್ಲವೆ? ಅದನ್ನ ಸಾಹಿತ್ಯಲೋಕಕ್ಕೆ ಕೊಡ್ತಿರುವ ಕಾಣಿಕೆ ಅನ್ನಲು ಬಾರದಿದ್ದರೆ ಬೇಡ ಹೋಗಲಿ. ಅಟ್‌ಲೀಸ್ಟ್ ಅವರು ಕನ್ನಡವನ್ನ ಬಿಟ್ಟುಕೊಡ್ತಿಲ್ಲ ಅನ್ನುವುದಕ್ಕಾದರೂ ಎರಡು ಒಳ್ಳೆಯ ಮಾತು ಬೇಡವೇ?
ಈ ವರ್ಗ ತನಗೆ ಸುಲಭ ಲಭ್ಯವಿರುವ ಅಂತರ್ಜಾಲದ ಮೂಲಕ ಭೇದ ಸೃಷ್ಟಿಸ್ತಿದೆ, ಗುಂಪುಗಾರಿಕೆ ಮಾಡ್ತಿದೆ ಅನ್ನುತ್ತಾರೆ. ಹೌದು ಅಂದುಕೊಳ್ಳೋಣ. ಮುದ್ರಣ ಮಾಧ್ಯಮದಲ್ಲಿ ಈ ಗುಂಪುಗಾರಿಕೆ ಇತ್ಯಾದಿಗಳಿಲ್ಲವಾ? ಹಾಗೆ ನೋಡಿದರೆ ಮುದ್ರಣಮಾಧ್ಯಮಕ್ಕಿಂತ ಅಂತರ್ಜಾಲ ಅಗ್ಗ ಮತ್ತು ಅವಕಾಶವೂ ಸುಲಭ ಲಭ್ಯ. ಅದನ್ನ ಎಲ್ಲರೂ ಬಳಸಿಕೊಳ್ಳಬಹುದು. ಅದರಬದಲು ಕಲಿಕೆಗೆ ಹಿಂಜರಿಕೆ ಮತ್ತು ವರ್ಗಗಳ ಕಾರಣ- ನೆವಗಳನ್ನು ಮುಂದಿಡುವುದು ಎಷ್ಟು ಸರಿ?
ವೀರಣ್ಣನಂತಹ ಗೆಳೆಯರು ಕಂಪ್ಯೂಟರ್ ಬಗ್ಗೆ ಏನೂ ತಿಳಿಯದು ಅನ್ನುವಾಗ ಬೇಸರವಾಗುತ್ತದೆ. ಕಂಪ್ಯೂಟರ್ ಅನಕ್ಷರತೆಯನ್ನು  ಮುಗ್ಧತೆಯೆಂದು ಪರಿಗಣಿಸುವ ಕಾಲ ಇದಲ್ಲ. ನಾವು ಹೇಳಬೇಕಾದುದನ್ನು ವ್ಯಾಪಕಗೊಳಿಸಲು ಯಾವುದೆಲ್ಲ ಲಭ್ಯವೋ ಆ ಎಲ್ಲ ಮಾಧ್ಯಮವನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಇರುತ್ತದೆ. ಹೊರಗೆಳೆದುಕೊಳ್ಲಬೇಕಾದವರು ನಾವೇ ಅನ್ನುವುದು ತಿಳಿದಿದ್ದರೆ ಸಾಕು.
~
ಮತ್ತೆ ಮೈಸೂರಿನ ವಿಷಯಕ್ಕೆ ಮರಳಿದರೆ,  ಬೆರಳತುದಿಯಲ್ಲಿ ದಕ್ಕುವ ಈ ಅದ್ಭುತ ಮಾಧ್ಯಮವನ್ನ ನಾವೂ ಉಪಯೋಗಿಸಿಕೊಂಡು ಜಗತ್ತಿಗೆ ಕನ್ನಡವನ್ನ ತಲುಪಿಸೋದು ಹೇಗೆ ಅಂತ ಯೋಚಿಸಬೇಕಾದ ಮುಖ್ಯವಾಹಿನಿಯ ಕೆಲವು ಬರಹಗಾರರು ಹೀಗೆ ಪೂರ್ವಾಗ್ರಹದಿಂದ ಮಾತಾಡಿದರೆ ಗತಿಯೇನಪ್ಪ ಅನಿಸಿಬಿಡ್ತು.
ಇವತ್ತು ಇಂಗ್ಲಿಶ್ ಭಾಷೆಯ ಯಾವುದೇ ಮಾಹಿತಿ ನಮಗೆ ನೆಟ್‌ನಲ್ಲಿ ಸಿಗುತ್ತದೆ. ಬಂಗಾಳಿಗಳು, ತೆಲುಗರು, ತಮಿಳರು, ಮಲಯಾಳಿಗಳು ಮತ್ತು ಗುಜರಾಥಿಗಳು ಅಂತರ್ಜಾಲವನ್ನು ತಮ್ಮ ಸಾಹಿತ್ಯ ತಲುಪಿಸುವ ಸಮರ್ಥ ಮಾಧ್ಯಮವಾಗಿ ಬಳಸ್ಕೊಳ್ತಿದಾರೆ. ನಮ್ಮ ಕನ್ನಡಿಗರಿಗೆ ಸಮಯ ಕೊಡಲಾಗದ ಸೋಮಾರಿತನದಿಂದುಂಟಾದ ಮಡಿವಂತಿಕೆ ಮತ್ತು ಉಡಾಫೆ! ಆದರೆ ಅವರು ಅದನ್ನು ತೋರಗೊಡದೆ, ‘ಯಾವ ವರ್ಗ ಕಂಪ್ಯೂಟರ್ ಮುಂದೆ ಕೂರುತ್ತದೆಯೋ ಅದಕ್ಕೆ ನಾವು ನಮ್ಮ ಗಂಭೀರ ಓದನ್ನು ತಲುಪಿಸಬೇಕಿಲ್ಲ’ ಅನ್ನುವ ಮಾತನ್ನಾಡುತ್ತಾರೆ. ಜೊತೆಗೆ, ನೆಟ್‌ನಲ್ಲಿ ಎಷ್ಟು ಜನ ಓದ್ತಾರೆ ಮಹಾ? ಅಂತಲೂ ಕೇಳ್ತಾರೆ.
ಸರಿ… ಒಂದು ಪುಸ್ತಕ ಸಾವಿರ ಪ್ರತಿ ಮುದ್ರಣವಾಗ್ತದೆ ಅಂದುಕೊಳ್ಳೋಣ. ಅದರ ಎಷ್ಟು ಪ್ರತಿ ಲೈಬ್ರರಿಗಳ ಹೊರಗೆ ವಿತರಣೆಯಾಗುತ್ತೆ? ಅದನ್ನೆಷ್ಟು ಜನ ಕೊಂಡು ಓದ್ತಾರೆ? ಹೆಚ್ಚೆಂದರೆ ಐನೂರು? ನೆಟ್‌ನಲ್ಲಿ ಕೆಲವು ಕೀವರ್ಡ್‌ಗಳೊಡನೆ ಡಿಸ್ಪ್ಲೇ ಆಗುವ ನಮ್ಮ ಬರಹವನ್ನು ಜಗತ್ತಿನ ಯಾವ ಮೂಲೆಯ ಕನ್ನಡಿಗನಾದರೂ ಓದಬಹುದು ಮತ್ತು ಇದರಿಂದ ದಿನಕ್ಕೆ ಕೊನೆಪಕ್ಷ ಒಬ್ಬರಾದರೂ ಓದಬಹುದಾದ ಸಾಧ್ಯತೆ ಇದೆಯಲ್ಲ!?
ಬೇಸರವಾಗಿದ್ದೆಂದರೆ, ಒಬ್ಬರು ಕೇಳಿದರು. ‘ಈಗೊಬ್ಬ ಬರಹಗಾರ… ಅವನ ತಾಯ್ತಂದೆಯರಿಗೆ ಕಂಪ್ಯೂಟರ್ ಅಂದರೇನೆಂದೇ ಗೊತ್ತಿರುವುದಿಲ್ಲ. ಅಂಥವನ ಬರಹ ಬ್ಲಾಗಲ್ಲಿ ಬಂದರೇಷ್ಟು ಬಿಟ್ಟರೆಷ್ಟು? ಅಪ್ಪ ಅಮ್ಮ ಓದಲಾಗದಂಥದನ್ನ ಮಾಡಬೇಕಾದರೂ ಯಾಕೆ?’
ಟಿ.ಎಸ್.ಗೊರವರ ಒಂದು ಕಥೆಯಲ್ಲಿ ಬರೀತಾರೆ. ಅವರದೊಂದು ಕಥೆಗೆ ಬಹುಮಾನ ಬಂದಾಗ, ಓದು ಬರಹ ಬರದ ತಾಯ್ತಂದೆಯರಿಗೆ ಅದನ್ನು ತಿಳಿಸುವಾಗ ಉಂಟಾದ ನೋವು… ಹೀಗೆ.
ಗೊರವರ ಹೊಸತಲೆಮಾರಿನ ಅರಳಿಕೊಳ್ತಿರುವ ಕಥೆಗಾರರಲ್ಲಿ ಒಬ್ಬರು. ಈ ನೋವನ್ನ ಮುಂದಿಟ್ಟುಕೊಂಡು ಯಾಕೆ ಬರೀಬೇಕು ಅಂದುಕೊಳ್ಳಲಾಗ್ತದೆಯೇ? ಹಾಗೇನಾದರೂ ಆದರೆ ಓದುವ ನಮಗೆ ದೊಡ್ಡ ನಷ್ಟ. ಖುದ್ದು ಅವರಿಗೂ ನಷ್ಟವೇ. ಗೊರವರ ಆ ನೋವನ್ನು ಮೀರಿ ಬರೆದರೆಂದೇ ಇವತ್ತು ಗುರುತಿಸಿಕೊಳ್ಳುವಂಥ ಕಥೆಗಾರರಾಗಿದ್ದಾರೆ ಅಲ್ವೆ?
ಇಷ್ಟಕ್ಕೂ ಕಂಪ್ಯೂಟರ್ ಅನ್ನು ಒಂದು ವರ್ಗದ ಸೊತ್ತಾಗಿಸಿರುವ ಬಗ್ಗೆಯೂ ಬೇಸರವಾಗುತ್ತೆ. ಅದನ್ನ ಯಾರು ಬೇಕಾದರೂ ಎಲ್ಲಿ ಬೇಕಾದರೂ ಉಚಿತವಾಗಿಯೇ ಬಳಸಬಹುದಿರುವಾಗ ಮೇಲ್ವರ್ಗದ ಜನಗಳಿಗೆ ಸೀಮಿತವಾಗಿದ್ದು ಅಂತ ಕೆಸರೆರಚೋದು ಎಷ್ಟು ಸರಿ? ನಮ್ಮಲ್ಲಿರುವಷ್ಟೇ ಸಂಖ್ಯೆಯ ಸೋಕಾಲ್ಡ್ ಮೇಲ್ವರ್ಗದವರಲ್ಲದವರು ತೆಲುಗಲ್ಲೂ ಇದ್ದಾರೆ, ತಮಿಳು, ಬಂಗಾಳಿಗಳಲ್ಲೂ ಇದ್ದಾರೆ. ಅವರೆಲ್ಲ ತಮ್ಮನ್ನು ಹಂಚಿಕೊಳ್ಳಲು ಈ ಮಾಧ್ಯಮವನ್ನು ಸಮರ್ಥವಾಗಿ ಬಳಸುತ್ತಿರುವಾಗ ಕನ್ನಡಿಗರದೇನು ಸಮಸ್ಯೆ? ತಿಳಿದವರು, ‘ಇದು ಅವರಿಗೆ ಹೇಳಿಸಿದ್ದಲ್ಲ’ ಅನ್ನುತ್ತಲೇ ಕಂಪ್ಯೂಟರ್ ನಿಂದ ದೂರ ಇರುವವರಲ್ಲಿ ಮತ್ತಷ್ಟು ಹಿಂಜರಿಕೆ ತುಂಬಿದಂತೆ ಆಗ್ತಿಲ್ಲವೇ? ಯಾಕೆ ಅಟ್ಲೀಸ್ಟ್ ಕಂಪ್ಯೂಟರ್ ಬಲ್ಲವರಾದರೂ ದೂರ ಇರುವವರ ಕೃತಿಗಳನ್ನು ಜಾಲಕ್ಕೆ ಉಣಿಸುವ ಪ್ರಯತ್ನ ಮಾಡಬಾರದು? (ನಾನೂ ಮಾಡಬಹುದು. ಹೊಸತಲೆಮಾರು ಬ್ಲಾಗ್ ಮೂಲಕ ಪ್ರಯತ್ನಕ್ಕೆ ಹೊರಟಿದ್ದೆ. ಮತ್ತೆ ಮುಂದುವರೆಸುವ ಇರಾದೆ ಇದೆ. ಸಹಕಾರ ಬೇಕು)
ತಂತ್ರಜ್ಞಾನವನ್ನು ನಮಗೆ ಬೇಕಾದಹಾಗೆ ದುಡಿಸಿಕೊಳ್ಳುವುದು ಜಾಣತನ. ಅದರ ಮಿತಿಗಳನ್ನು ದೂರುತ್ತ ಕೂರುವುದಲ್ಲ ಅಲ್ಲವೆ?
~
ಊಪ್ಸ್… ಸಾರಿ. ಚಟದ ಬಗ್ಗೆ ಬರೀತ ಇದೆಲ್ಲೋ ಅಡ್ಡ ಬಂತು. ನನ್ನ ಮತ್ತೊಂದು ಅತಿದೊಡ್ಡ ಚಟ ಕಲ್ಕತ್ತ. ಆಶ್ರಮ ಇಲ್ಲೂ ಇದೆಯಾದರೂ ದಕ್ಷಿಣೇಶ್ವರದಲ್ಲಿ ಕಣ್ಮುಚ್ಚಿ ಕುಳಿತಾಗ ಹುಟ್ಟುವ ನೆಮ್ಮದಿ ಇಲ್ಲಿ ಕಂಡುಕೊಳ್ಳಲು ಮನಸ್ಸು ಒಪ್ಪೋದೇ ಇಲ್ಲ!
ಅದಕ್ಕೇ, ಈ ತಿಂಗಳ ಕೊನೆಯಲ್ಲಿ ಮತ್ತೆ ಹೊರಟಿರುವೆ. ಕಡ್ಡಾಯ ನಿಲ್ ಬ್ಯಾಲೆನ್ಸ್ ಉಳಿಸಿಕೊಳ್ಳುವ ಚಟದ ನಾನು ದುಡ್ಡು ಏನಾದರೂ ಉಳಿಸಿದರೆ, ಅದು ವರ್ಷಕ್ಕೊಮ್ಮೆ ಕಲ್ಕತ್ತಾಕ್ಕೆ ಹೋಗಲಿಕ್ಕೇ ಸರಿ!
ಜಗತ್ತಲ್ಲಿ ಎಂಥಾ ವಿಚಿತ್ರ (ನನ್ನಂಥ) ಜನಗಳಿರ್ತಾರೆ ಅಲ್ವ!?
~
ಡೆಸ್ಕ್ ಟಾಪಿನ ಮೇಲೆ ನೀಲಿ ಹೊದಿಕೆಯೊಳಗಿನ ಡೈರಿಮಿಲ್ಕ್ ನನ್ನನ್ನ ಟೆಂಪ್ಟ್ ಮಾಡ್ತಿದೆ. ಬೈ…

7 thoughts on “ಚಾಕಲೇಟು, ಬ್ಲಾಗಿಂಗ್ ಚಟ ಇತ್ಯಾದಿ…

Add yours

 1. no comments about Mysore
  but I 100% agree on ಚಟ. next time meet ಮಾಡಿದಾಗ ನಿಮಗೆ ತುಂಬ chocolates…..
  ದಕ್ಷಿಣೇಶ್ವರ enjoy ಮಾಡಿ!!!ಸಾಧ್ಯವಾದರೆ ಸುಭಾಷಚಂದ್ರ ಬೋಸ್ ರ museum ನೋಡಿ ಬನ್ನಿ
  ಶುಭ ಹಾರೈಕೆಗಳು
  🙂
  ಮಾಲತಿ ಎಸ್.

 2. ನಮ್ಮ ಚಾಕಲೇಟ್ ಟೇಸ್ಟ್ (ಡೈರಿ ಮಿಲ್ಕ್) ಇನ್ನೂ ಪ್ರಾಚೀನ ಕಾಲದಲ್ಲೇ ಇದೆ ಅಲ್ಲವೇ, ಚೆನ್ನಾಗಿದೆ ಬ್ಲಾಗ್ ಪೋಸ್ಟ್. ಕನ್ನಡಿಗರು lethargy ಬದಿಗಿರಿಸಿ, ಮಡಿವಂತಿಕೆಗೆ ಬೈ ಹೇಳಿದಾಗ ಕನ್ನಡ ಇನ್ನಷ್ಟು ಅರಳುವುದು ಅಂತರ್ಜಾಲದ ತೋಟದಲ್ಲಿ. ನಮಸ್ಕಾರಗಳು. ಅಬ್ದುಲ್.

 3. ಅಕ್ಕ,
  ನಿಮ್ಮ ಆರೋಗ್ಯಕರವಾದ ‘ಹಾಳು’ ಚಟಗಳ ಬಗ್ಗೆ ಬರೆಯುತ್ತಲೇ ಕನ್ನಡ ಭಾಷೆಯ ವಕ್ತಾರರು ಎಂದು ತಮ್ಮನ್ನು ತಾವು ಭಾವಿಸಿಕೊಂಡಿರುವ ಸಾಹಿತಿಗಳನೇಕರ ಅನಾರೋಗ್ಯಕರ ಚಟವನ್ನೂ ದಾಖಲಿಸಿದ್ದೀರಿ.

  ಹೊಸ ಅವಕಾಶಗಳನ್ನು ತೆರೆಯಬಲ್ಲ, ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಷ್ಟು ಅಗಾಧ ಸಾಧ್ಯತೆಗಳಿಗೆ ಆಸ್ಪದ ಮಾಡಿಕೊಡುವ ಅಂತರ್ಜಾಲ, ಮೊಬೈಲು ಮೊದಲಾದವು ನಮ್ಮ ಬದುಕನ್ನು ಪ್ರವೇಶಿಸಿರುವಾಗಲೂ ತಮ್ಮ ಹಳೆ ಸಿದ್ಧಾಂತದ ಚೌಕಟ್ಟು ತೊಡಿಸಲು ಹೆಣಗುವವರ ಕಂಡರೆ ದುಃಖವಾಗುತ್ತದೆ.

 4. ಬ್ಲಾಗಿಂಗ್ ಕುರಿತಂತೆ ನಿಮ್ಮ ನಿಲುವು ಸರಿಯಾದುದು. ನಮ್ಮ ಬಹುತೇಕ ಹೊಸತಲೆಮಾರಿನವರಿಗೆ ಬ್ಲಾಗಿಂಗ್ ಗೊತ್ತಿದೆ. ಪುಸ್ತಕ ತಲುಪುವ ವೇಗಕ್ಕಿಂತಲೂ ಬ್ಲಾಗಿನ ವೇಗ ಜಾಸ್ತಿ ಒಪ್ಪೋಣ. ಆದರೆ ಎಷ್ಟು ಜನರ ಮನೇಲಿ ಕಂಪ್ಯೂಟರ್ ಇದೆ? ಇದ್ದವ್ರಲ್ಲಿ ಎಷ್ಟು ಜನ ಅಂತರ್ಜಾಲ ಇಟ್ಟುಕೊಂಡಿದ್ದಾರೆ? ಗೇಮ್ಸ್, ಹಾಡು ಸಿನಿಮಾ ಇಷ್ಟಕ್ಕೇ -ಮಲ್ಟಿಮೀಡಿಯ- ಅವರು ಕಂಪ್ಯೂಟರ್ ಕೊಳ್ಳೋದು. ನೀವು ಏನೇ ಹೇಳಿ, ಕಾಫಿ ಕುಡೀತಾ ಪುಸ್ತಕ ಓದುವ ಖುಷಿ desktopನಲ್ಲಿ ಸಿಗಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: