ಬೇಸಿಗೆ, ಚಳಿಗಾಲ, ಮತ್ತೀಗ ಮಳೆ


ಮೊದಲ ಸಾರ್ತಿ ವಿಮಾನ ಹತ್ತಿದ್ದೆ. ಅಣ್ಣ ನನ್ನ ಆತಂಕ, ಸಂಭ್ರಮವೆಲ್ಲ ನೋಡುತ್ತ ಖುಷಿಯಾಗಿದ್ದ. ನಾನು ಕಲ್ಕತ್ತಕ್ಕೆ ಹೊರಟಿದ್ದೂ ಅದೇ ಮೊದಲ ಸಾರ್ತಿ.

ಬಂಗಾಳಿಗಳೆಲ್ಲರ ಕಣ್ಣು ದೊಡ್ಡದೊಡ್ಡ ಇರೋದಿಲ್ಲ. ನೂರಕ್ಕೆ ಐವತ್ತು ಚಿಕ್ಕ ಕಣ್ಣಿನವರೂ ಇದ್ದಾರಲ್ಲಿ. ನನ್ನ ಜಪಾನೀ ಕಣ್ಣುಗಳು ನನ್ನನ್ನ ಒಡಿಶಾದವಳೋ ಅಸೋಮ್ ಕಡೆಯವಳೋ (ಒರಿಸ್ಸಾ- ಅಸ್ಸಾಮ್‌ಗಳನ್ನು ಹಂಗನ್ನಬೇಕಂತೆ) ಅನ್ನುವಂತೆ ಮಾಡಿದ್ದವು. ಸಾಲದ್ದಕ್ಕೆ ನಂಗೆ ಚಿಕ್ಕವಳಿರುವಾಗಿಂದ್ಲೂ ಈಶಾನ್ಯ ರಾಜ್ಯಗಳ ಬಗ್ಗೆ ಮೋಹ. ಭಾನುವಾರಗಳ ಬಂಗಾಳಿ, ಒರಿಯಾ, ಅಸ್ಸಾಮಿ, ಮಣಿಪುರಿ ಪ್ರಾದೇಶಿಕ ಭಾಷಾ ಫಿಲಮ್‌ಗಳನ್ನು ತಪ್ಪಿಸದೆ ನೋಡುತ್ತ ಬೆಳೆದವಳು ನಾನು. ಸಾಲದ್ದಕ್ಕೆ, ಅಮ್ಮ ಬೇರೆ ಆಗೀಗ ‘ಪಕ್ಕದಲ್ಲೊಬ್ಬಳು ಸ್ವೆಟರ್ ಮಾರುವವಳು ಹಡೆದಿದ್ದಳು. ಅವಳಿಗೆ ಗಂಡುಮಗು ಬೇಕಿತ್ತಂತೆ. ಎಲ್ಲೋ ನಂಗೆ ಗಂಡ್ ಹುಟ್ಟಿ ತನ್ ಮಗೂನ ಬದಲಾಯ್ಸಿ ತಗಂಡ್ ಹೋದ್ಲೇನೋ. ಅದ್ಕೇ ನಿನ್ ಮುಖದಲ್ಲಿ ಬ್ರಾಮಣ್ರ ಲಕ್ಷಣವೂ ಇಲ್ಲ, ಮಲೆನಡಿನ ಮುಖವೂ ಇಲ್ಲ,  ಕರ್ನಾಟಕದ ಕಳೆಯೇ ಇಲ್ಲ’ ಅಂತಿದ್ದಳು. ಆಗೆಲ್ಲ ನಂಗೆ ನಿಜ್ಜ ಖುಷಿಯೇ ಆಗ್ತಿತ್ತು.

ಸೋ… ನಂಗೆ ಕಲ್ಕತ್ತಾಗೆ ರಾಮಕೃಷ್ಣಾಶ್ರಮಕ್ಕೆ ಹೋಗ್ತಿದೀನಿ ಅನ್ನುವಷ್ಟೇ ಪ್ರಮಾಣದ ಖುಷಿ ‘ನನ್ನ ನೆಲಕ್ಕೆ ಹೋಗ್ತಿದೀನಿ’ ಅನ್ನುವ ಭಾವದಿಂದ ಹುಟ್ಟಿಕೊಂಡುಬಿಟ್ಟಿತ್ತು. ಆಗ ಬೇಸಿಗೆಕಾಲ.

~

ಮಾರ್ಚ್ ತಿಂಗಳ ಸುಡುಸುಡು. ಕಲ್ಕತ್ತಾವೇ ಕಾವಲಿಯಾಗಿ ಜನರನ್ನ ರೊಟ್ಟಿಯ ಹಾಗೆ ಬೇಯಿಸ್ತಿತ್ತು. ಫ್ಲೈಟ್ ಒಳಗೆ ತಣ್ಣಗೆ ಕುಂತಿದ್ದ ನನಗೆ ಕೆಳಗೆ ಇಳಿದ ಕೂಡಲೆ ತಲೆ ಚಿಟ್ಟಂದುಹೋಗಿತ್ತು. ಅಣ್ಣ ಕಾಳಜಿ ತೊಗೊಂಡು ಏಸಿ ಟ್ಯಾಕ್ಸಿಗೆ ಹುಡುಕಾಡಿದ. ಅದು ಸಿಕ್ಕು ಲಗೇಜ್ ಹಾಕಲು ಡೋರ್ ತೆಗೆದರೆ ರೊಂಯ್ಯನೆ ಸೊಳ್ಳೆಸೇನೆ!

ಆಶ್ರಮದಲ್ಲಿ ಉಳಿದುಕೊಂಡಿದ್ದ ಅತಿಥಿ ಕೊಠಡಿಯಲ್ಲಿ ಫ್ಯಾನ್ ಬಿಸಿಗಾಳಿ ಬೀಸಿ ಇಡ್ಲಿಯ ಹಾಗೆ ಉಸಿರುಗಟ್ಟಿಸುತ್ತಿತ್ತು. ಊಟಕ್ಕೆ ಸಾಸುವೆ ಎಣ್ಣೆಯ ಪದಾರ್ಥಗಳು ಮತ್ತು ಹೆಸರು ಕಾಳು/ಬೇಳೆ ಖಿಚಡಿ. ಗಂಗೆ ಪ್ರಶಾಂತವಾಗಿದ್ದಳು. ಜನ ಅವಳನ್ನು ಕೊಳೆಗಟ್ಟಿಸಿಹಾಕಿದ್ದರು. ಆದರೂ ಪುಣ್ಯಾತ್ಗಿತ್ತಿ… ಇನ್ನೂ ಹೇಗೆ ಅಷ್ಟು ಅಗಾಲಕೆ ಹರೀತಲೇ ಇದ್ದಾಳೆ!

ಬೇಸಗೆ ತಾನೆ? ಗುರುಮಹರಾಜರ ಪಟಕ್ಕೆ, ಶಾರದಾ ಮಾತೆಯ ಪಟಕ್ಕೆಲ್ಲ ಬೀಸಣಿಗೆ ಗಾಳಿ ಹಾಕುವ ವ್ಯವಸ್ಥೆಯಿತ್ತು. ಪಟದಲ್ಲೂ ಜೀವ ಕಾಣುವ ಭಕ್ತಿಭಾವ ಎಂಥ ಸೊಗಸು! ಎಷ್ಟು ಮಾಧುರ್ಯವಿದೆ ಅಲ್ವಾ?

~ * ~

ನಾವು ಹತ್ತು ಜನ- ಹತ್ತು ದಿನ ಅಂದ್ಕೊಂಡು ಕಲ್ಕತ್ತೆಗೆ ಟ್ರೈನು ಹತ್ತಿದಾಗ ಅದು ಎರಡನೆ ಭೇಟಿ. ಆ ಹೊತ್ತಿಗೆ ಅಣ್ಣನ ಬೆಂಬಲ, ಆಸರೆಗಳೆಲ್ಲ ನನ್ ಮುಖದಲ್ಲಿ ನಿರಂತರ ಹೆಪ್ಪುಗಟ್ಟಿಹೋಗಿದ್ದ ಆತಂಕವನ್ನ ಅಳಿಸಿ ಹಾಕಿದ್ದವು. ಡಿಸೆಂಬರ್ ತಿಂಗಳಲ್ಲಿ ನಾವು ಹೊರಟಿದ್ದು. ಚಳಿಗಾಲವೆಂದು ಸ್ವೆಟರ್, ಶಾಲ್ ಎಲ್ಲಾ ತುಂಬಿಕ್ಜೊಂಡು ಹೊರಟಿದ್ದ ನಮಗೆ ಕಲ್ಕತ್ತದಲ್ಲಿ ಎದುರ್ಗೊಂಡಿದ್ದು ದಿನಪೂರ ಎಳೆಬಿಸಿಲು, ಬೆಚ್ಚಬೆಚ್ಚಗೆ ಹೊದ್ದು ಓಡಾಡ್ತಿದ್ದ ಜನರು. ಅವರನ್ನ ನೋಡಿ ಬೆವರು ಒರೆಸ್ಕೊಳ್ಳುವ ಸರದಿ ನಮ್ಮದಾಗಿತ್ತು.

ಹಾಗೆ ನಂಗೆ ಸೆಖೆಯಾಗೊದು ಕಡಿಮೆಯೇ. ಸ್ವೆಟರ್ ಹಾಕ್ಕೊಳೋದು ಅಂದ್ರೆ ಭಾಳ ಇಷ್ಟ ಜೊತೆಗೆ. ನಾ ಚಿಕ್ಕವಳಿರುವಾಗ ಯಾಕೋ ನನ್ನಪ್ಪ ಬಟ್ಟೆ ಕೊಡಿಸ್ತಿದ್ದಿದ್ದು ಕಡಿಮೆ. ಅಥವಾ ಆಗಿನ ಕಾಲದ ಅಪ್ಪಂದಿರಲ್ಲಿ ಬಹುತೇಕ ಹಾಗೇ ಇದ್ದರೇನೊ. ಆದ್ರೆ ತೀರ್ಥಳ್ಳಿ ಒಂಥರಾ ‘ಜುಟ್ಟಿಗೆ ಮಲ್ಲಿಗೆ ಹೂ’ವಿನ ಊರು. ಎಲ್ಲ ಚೆಂದಚೆಂದ ಹಾಕ್ಕೊಂಡು ಬರೋರು. ಪುಣ್ಯಕ್ಕೆ ಅಪ್ಪಂಗೂ ಸ್ವೆಟರಿನ ಷೋಕಿ ಇದ್ದು ಬೆಂಗಳೂರಿಂದ ಸ್ಟೈಲುಸ್ಟೈಲಿನ ಸ್ವೆಟರ್ಸ್ ತಂದಿದ್ದರು. ಬೋಟ್ ನೆಕ್ಕಿನದು, ಕ್ವೀನ್ ಕಾಲರಿನದು, ಬಾಡಿ ಫಿಟ್ಟಿಂಗಿನದು ಅಂತೆಲ್ಲ. ನಾನು ಚಳಿ ಅನ್ನುವ ಕಾರಣದಷ್ಟೇ ನಾನು ಹಾಕುವ ಹಳೆ ಟಾಪ್‌ಗಳನ್ನು ಮರೆಮಾಚಲು ಸ್ವೆಟರನ್ನು ತೊಡುತ್ತಿದ್ದೆ. ಬೆಳ್ಲಗೆ, ಕುಳ್ಳಗೆ, ಮುದ್ದುಮುದ್ದಾಗಿ ಕೆಂಪಗೆ, ಪುಟಪುಟಾಣಿ ಕಣ್ಣುಗಳಿದ್ದ ನಾನು ಅದನ್ನೆಲ್ಲ ತೊಟ್ಟುಬಿಟ್ಟರಂತೂ ಹುಡುಗರು ‘ಚೀನೀ ಹುಡುಗಿ’ ಅಂತ ರೇಗಿಸ್ಕೊಂಡು ನಗಾಡ್ತಿದ್ದರು. ಬರಬರುತ್ತ ಸ್ವೆಟರ್ ನನ್ನ ಐಡೆಂಟಿಟಿಯಾಯ್ತು. ಆಮೇಲೆ ವೇಸ್ಟ್ ಕೋಟಿಗೆ ಬಡ್ತಿ ಪಡೆದೆ.

ಚಳಿಗಾಲದಲ್ಲಿ ಕಲ್ಕತ್ತೆಯ  ಆಶ್ರಮಗಳಲ್ಲಿ ಪಟಗಳಿಗೆ, ಮೂರ್ತಿಗಳಿಗೆ ಶಾಲು ಹೊದೆಸುತ್ತಿದ್ದ ಸಂಗತಿ ಒಂದುಕಡೆ ಬರೆದಿದೇನ…ಕೆಂಡಸಂಪಿಗೆಯಲ್ಲಿ. ಅದನ್ನಿಲ್ಲಿ ಮತ್ತೆ ಹಾಕುವವಳಿದ್ದೇನೆ. ಪುರಿಯಲ್ಲೂ ಜಗನ್ನಾಥನಿಗೆ ಹಾಗೆ ಹೊದೆಸುತ್ತಾರೆ. ಪ್ರಣವ ಹುಟ್ಟಿದ ಮೇಲೂ ಸ್ವಲ್ಪ ದಿವಸ ನನ್ನ ಗೊಂಬೆಗಳಿಗೆ ಕಾಲಕಾಲಕ್ಕೆ ಡ್ರೆಸ್ ಹಾಕುತ್ತಿದ್ದೆ. ಬೇಸಗೆಯಲ್ಲಿ ಸ್ಲೀವ್ ಲೆಸ್, ಚಳಿಯಲ್ಲಿ ಫುಲ್ ಕಪ್… ಹೀಗೆ… ನನ್ನ ಹತ್ತಿರ ಬಹಳಷ್ಟು ಗೊಂಬೆಗಳಿದ್ದವು. ಈಗಲೂ ನಂಗೆ ಅದೆಲ್ಲ ಭಾಳ ಇಷ್ಟ. ಅವನ್ನ ಮುದ್ದಿಸಲಿಕ್ಕಾದರೂ ನಂಗೆ ವಯಸಾಗಬಾರದಿತ್ತು ಅನಿಸತ್ತೆ ಗೊತ್ತಾ!?

~*~

ಇಲ್ಲಿ ಮಳೆ ಈ ಸಾರ್ತಿ ಕಡಿಮೆ. ಕಲ್ಕತ್ತದಲ್ಲಿ ಹೇಗೋ ಗೊತ್ತಿಲ್ಲ. ನಾವು 6 ಜನ ಹೊರಟಿದೇವೆ. ಈ ಸಾರ್ತಿ 6ಜನ 6ದಿನ ಥೀಮ್!

ಬೇಸಗೆಯಲ್ಲಿ ಖಿಚಡಿ, ಚಳಿಗಾಲದಲ್ಲಿ ಮಂಡಕ್ಕಿ, ಮೆಣ್ಸಿನ ಕಷಾಯ ರುಚಿ ನೋಡಿದ್ದ ನನಗೆ ಮಳೆಗಾಲದಲ್ಲಿ ಏನು ಊಟ ಇದ್ದೀತೆಂಬ ಕುತೂಹಲವೂ ಇದೆ! ಮಳೆಗಾಲದ ಅಲಂಕಾರ ಏನಿದ್ದೀತೆಂಬ ಅಚ್ಚರಿಯೂ.

ಈ ಮಳೆಗಾಲಕ್ಕೆ, ಕಳೆದ ಭೇಟಿಯ ಚಳಿ ಕಳೆದು ಒಂದೂಮುಕ್ಕಾಲು ವರ್ಷ. ಮತ್ತಷ್ಟು ಬದಲಾಗಿದೇನೆ. ನನ್ನ ಹಳೆಯ ಬಜಾರಿತನಗಳೆಲ್ಲ ಮರುಕಳಿಸಿ ನಾರ್ಮಲ್ ಆಗುವ ಪ್ರಕ್ರಿಯೆಯಲ್ಲಿದೇನೆ. ಅಣ್ಣನ ಮುಖದಲ್ಲಿ ಸಾರ್ಥಕತೆ ನೋಡಿಯೇ ಈ ಐದು ವರ್ಷಗಳೂ ಸಾರ್ಥಕವಾಗಿಬಿಡುತ್ತವೆ.

ಮೊದಲ ಸಾರ್ತಿ – ಬೇಸಗೆಯಲ್ಲಿ ಹೊರಟಾಗ ‘ಪ್ರಪಂಚ ಪತ್ರಿಕೆ’ಯಲ್ಲಿದ್ದೆ. ಎರಡನೇ ಸಾರ್ತಿ- ಚಳಿಗಾಲದಲ್ಲಿ ಹೋದಾಗ ಇಸ್ಕಾನಿನಲ್ಲಿ.  ಈಗ ಇಲ್ಲಿದ್ದೇನೆ. ಮತ್ತೆ ಬೇಸಿಗೆ ಬರುತ್ತದೆ. ನನ್ನ ತುಡಿತ ಕಾಡದೆ ಬಿಡುವುದಿಲ್ಲ. ಮತ್ತೆ ಹೊರಡುತ್ತೇನೆ. ಆಗ ಎಲ್ಲಿರುತ್ತೇನೋ?

ಏನಾದರಾಗಲಿ, ಈ ಆಫೀಸ್ ಚೆನ್ನಾಗಿದೆ. ಬೆಳ್ಳಗೆ ಬೇರೆ ಮಾಡಿದ್ದಾರೆ.

(ವಿ.ಸೂ: ಯಾರಾದರೂ ಸಹನೆಯಿದ್ದವರು ಓದಿದರೆ, ಪ್ಯಾರಾಗಳ ನಡುವಿನ ಲಿಂಕನ್ನು ನೀವೇ ಕೊಟ್ಟುಕೊಂಡು ಇಷ್ಟ ಬಂದಹಾಗೆ ಅರ್ಥ ಮಾಡಿಕೊಳ್ಳಬೇಕಾಗಿ ವಿನಂತಿ. ಅಂದಹಾಗೆ, ಶಿರೋನಾಮೆಗೆ ಸ್ಫೂರ್ತಿ ‘ಸ್ಪ್ರಿಂಗ್ ಸಮ್ಮರ್…’ ಸಿನೆಮಾ. ಏನೂ ತೋಚದೆ ಅದನ್ನೇ ಕದ್ದುಬಿಟ್ಟೆ!- , ಚೇತನಾ ತೀರ್ಥಹಳ್ಳಿ)

5 thoughts on “ಬೇಸಿಗೆ, ಚಳಿಗಾಲ, ಮತ್ತೀಗ ಮಳೆ

Add yours

  1. tumbaa chennaagi barediddeeri Chetana!!
    kendasampige article bahaLa hindene Odidde.
    enjoy maaDi nimma trip. soLLe ondu bitre, i must say i enjoyed Kolkota. Even the sasive eNNe food, especially road side!!matte sweetgaLa bagge hEL bEkillaa…mmmmmmmm yummy.
    🙂
    malathi S

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: