ಸುಳ್ಳಾದಳು ಕೇದಗೆ….


ನನಗೆ ಬೇಜಾರಾಗಿದೆ. ಇದೇನೂ ಅಂಥ ದೊಡ್ಡ ಸಂಗತಿ ಅಲ್ಲದಿರಬಹುದು. ಸಾಮಾನ್ಯ ಮನುಷ್ಯರ ಮಾತುಗಳಿಗೆ ಬೆಲೆ ಇರದ, ದನಿ ಇರದ ಜಗತ್ತಿದು ಅನ್ನುವುದು ಗೊತ್ತಾದ ಬೇಸರ. ಏನೂ ಅಲ್ಲದವರಿಗೆ ಅಸ್ತಿತ್ವವೇ ಇಲ್ಲವಲ್ಲ ಅನ್ನುವ ಬೇಸರ. ನನ್ನ ‘ಪ್ರಕಟವಾಗದ’ ಪುಸ್ತಕದ ರಿವ್ಯೂ ಪ್ರಕಟಗೊಂಡಿದ್ದನ್ನ ಪ್ರಶ್ನಿಸಿ ಇಶ್ಯೂ ಮಾಡುವುದು ಉದ್ದೇಶವಲ್ಲ. ಇದರ ಹಿನ್ನೆಲೆಯಲ್ಲಿ, ಯಾವುದೇ ವ್ಯಕ್ತಿಯ ಭಾವನೆಗೆ ಸ್ಥಾಪಿತ, ಪ್ರಸಿದ್ಧ  ಮತ್ತು ಉನ್ನತ ಜಾಗದಲ್ಲಿರುವವರು ತೋರುವ ಅಲಕ್ಷ್ಯವನ್ನು ಕುರಿತು ಮಾತಾಡುವುದಷ್ಟೆ ನನ್ನ ಬಯಕೆ. ನಾನು 2ಬಾರಿ ನನ್ನ ಪುಸ್ತಕ ಪ್ರಕಟವಾಗಿಲ್ಲ ಎಂದು ಸ್ಪಷ್ಟಪಡಿಸಿದ ಅನಂತರವೂ ಯಾಕೆ ಅದನ್ನು ಮಾನ್ಯ ಮಾಡಲಿಲ್ಲ? ನನ್ನ ಮಾತನ್ನು ಗಣಿಸುವ ಅವಶ್ಯಕತೆ ಇಲ್ಲವೆಂದಾಗಿದ್ದರೆ ನನ್ನನ್ನು ಸಂಪರ್ಕಿಸಿದ್ದು, ಪ್ರತಿಕ್ರಿಯಿಸಿದ್ದಾದರೂ ಯಾಕೆ? ಈಗ ಅದೇ ಟೈಟಲಿನಲ್ಲಿ ನಾನು ಪುಸ್ತಕವನ್ನು ಹೊರತರುವವಳಿದ್ದೆ. ಈಗ ಅದನ್ನು ಪ್ರಕಟಿಸುತ್ತೇನೆಂದ ಪ್ರಕಾಶಕರು ಹಿಂಜರಿದರೆ ಅದೊಂಥರಾ ಮುಜುಗರ. ಅವರಿಗೂ, ನನಗೂ… ಈ ವೈಯಕ್ತಿಕ ನಷ್ಟ ಮತ್ತು ಬೇಸರವನ್ನು ಶಮನ ಮಾಡುವವರು ಯಾರು?

ಈ ಸಂಗತಿಯ ಪೂರ್ಣ ವಿವರ ಮತ್ತು ಪೂರಕ maiಗಳು ಕೆಳಗಿವೆ.

ನಮಸ್ತೇ
ಪ್ರಜಾವಾಣಿಯಲ್ಲಿ  ಯಾವುದೇ ಬರಹಗಾರರ ಪುಸ್ತಕದ ಬಗ್ಗೆ ಪ್ರಕಟವಾಗುವುದು ನಿಜಕ್ಕೂ ಒಂದು ಸಂಭ್ರಮ. ಅದೊಂದು ಸ್ಪೇಸ್ ನಮಗೆ ಸಾಧ್ಯವಾಗದಲ್ಲ ಎಂದು ಹಪಹಪಿಸುವವರ ನಡುವೆ ನನ್ನ ‘ಪ್ರಕಟವಾಗದ ಸಂಕಲನಕ್ಕೆ’ ಚಿಂತಾಮಣಿಯವರು ಮೆಚ್ಚುಗೆ ಸೂಚಿಸಿದ ರಿವ್ಯೂ ಬರೆದಿರುವಾಗ ಖುಷಿಯಲ್ಲಿ ನಾನು ತೇಲಾಡಿಬಿಡಬೇಕಿತ್ತು. ಆದರೆ, ಆ ಮನಸ್ಥಿತಿ ಸಾಧ್ಯವಾಗ್ತಿಲ್ಲ. ಕಾರಣ ನನ್ನ ಪುಸ್ತಕ ಪ್ರಕಟವಾಗಿಯೇ ಇಲ್ಲ.

ದಯವಿಟ್ಟು ಮೊದಲು ನಾನು ಜುಲೈ 18ರಂದು ಕಳುಹಿಸಿದ್ದ ಈ mail ಅನ್ನು ಓದಿ

to editorpv@deccanherald.co.in
date Sun, Jul 18, 2010 at 12:35 PM
subject ನಿಜ ಘಮದ ಕೇದಗೆ ಪುಸ್ತಕ ಪ್ರಕಟವಾಗಿಲ್ಲ
mailed-by gmail.com

ನಮಸ್ತೆ
ಇಂದಿನ ಸಾಪ್ತಾಹಿಕದಲ್ಲಿ ಚಾಣಕ್ಯ ಪ್ರಕಾಶನದ ವತಿಯಿಂದ ನನ್ನ ಅಂದರೆ ಚೇತನಾ
ತೀರ್ಥಹಳ್ಳಿಯ ‘ನಿಜಘಮದ ಕೇದಗೆ’ ಕವನ ಸಂಕಲನ ಪ್ರಕಟವಾಗಿದೆ ಎಂಬ ಕಿರುಮಾಹಿತಿ
ಅಚ್ಚಾಗಿದೆ.
ನನ್ನ ಕವನ ಸಂಕಲನ ಪ್ರಕಟವಾಗಿಲ್ಲ ಮತ್ತು ನಾನು ಅದರ ಪ್ರಕಾಶಕರಿಗೆ ಪ್ರಕಟಿಸಲು
ಅನುಮತಿಕೊಟ್ಟಿರುವುದಿಲ್ಲ.
ದಯವಿಟ್ಟು ಮಾಹಿತಿಯನ್ನು ತಿದ್ದುಪಡಿ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ.

ವಿಶ್ವಾಸದಿಂದ,
ಚೇತನಾ ತೀರ್ಥಹಳ್ಳಿ


ಈ ಕ್ಲಾರಿಫಿಕೇಶನ್ ನಂತರವೂ ದಿನಾಂಕ 31.08.2010ರ ಮಂಗಳವಾರ ನಿಮ್ಮ ಪತ್ರಿಕೆಯಿಂದ ಸಂದೀಪ್ ನಾಯಕ್ ಕರೆ ಮಾಡಿ ಸಂಕಲನದ ಬಗ್ಗೆ ಪ್ರಜಾವಾಣಿಯಲ್ಲಿ ಪ್ರಕಟಿಸುವ ಬಗ್ಗೆ ಕೇಳಿದಾಗ ಅದು ‘ಪ್ರಕಟಗೊಂಡಿಲ್ಲ’ ಎಂದು ಕ್ಲಾರಿಫೈ ಮಾಡಿದ್ದೆ. ಪ್ರತ್ಯೇಕವಾಗಿ, ವೈಯಕ್ತಿಕವಾಗಿ ಅವರಿಗೆ ಅದರ ಹಿನ್ನೆಲೆಯನ್ನು ವಿವರಿಸಿ ಪತ್ರವನ್ನೂ ಬರೆದಿದ್ದೆ.
ಇಷ್ಟಾಗಿಯೂ ಪ್ರಜಾವಾಣಿ ಅದೆಲ್ಲವನ್ನೂ ಕಡೆಗಣಿಸಿ ನನ್ನ ಪ್ರಕಟವಾಗದ ಪುಸ್ತಕಕ್ಕೆ ರಿವ್ಯೂ ಹಾಕಿರುವುದು ತ್ತೀವ್ರ ನೋವು ತಂದಿದೆ. ನಾನು ಪ್ರಮುಖ ಬರಗಾರ್ತಿ ಅಲ್ಲದಿರಬಹುದು. ಇದರಿಂದ ನನಗೆ ಸಾಮಾಜಿಕ ನಷ್ಟವೇನೂ ಆಗದಿರಬಹುದು. ಆದರೆ ಅದೇ ಟೈಟಲ್ಲಿನಲ್ಲಿ ಈಗ ನನ್ನ ಸಂಕಲನ ಹೊರತರಲು ಹೊರಟಿರುವ ಮತ್ತೊಬ್ಬ ಪ್ರಕಾಶಕರಿಗೆ ನಾನು ಏನು ಉತ್ತರ ಕೊಡಲಿ? ನಾನೊಬ್ಬಳಾದರೂ ಸಡಗರಪಡಬಹುದಾಗಿದ್ದ ನನ್ನ ಸಂಕಲನ ಕೊನೆಗೂ ಹಾಗೇ ಮುಸುಕಲ್ಲಿ ಉಳಿದುಬಿಡುವಂತಾಯ್ತು.

ಕ್ಲಾರಿಫಿಕೇಶನ್ ಗಳ ನಂತರವೂ ನಿಮ್ಮ ಪತ್ರಿಕೆಯ ಈ ಧೋರಣೆಗೆ ನನಗೆ ಸ್ಪಷ್ಟೀಕರಣ ಬೇಕು. ವೈಯಕ್ತಿಕವಾಗಿ ನನಗೆ ನಷ್ಟ ಮತ್ತು ತೀವ್ರ ನೋವಾಗಿದೆ.  ದೊಡ್ಡಣ್ಣನಂತಿರುವ ನೀವು ಪುಡಿಸಾಹಿತಿಯೆಂದು ಉಡಾಫೆ ತೋರುವುದಿಲ್ಲವೆಂದು ಭರವಸೆ ಇರಿಸಿಕೊಳ್ಳುತ್ತೇನೆ.

ವಂದೇ,
ಚೇತನಾ ತೀರ್ಥಹಳ್ಳಿ~

ಇದನ್ನ ಹೇಗೆ ವಿರೋಧಿಸಬೇಕು? ಗೊತ್ತಾಗ್ತಿಲ್ಲ….
ಚಿಕ್ಕಲ್ಲಿಂದ ಕೈಲಿ ಹಿಡಿದುಕೊಂಡು ಓದಿಸುತ್ತ ಬೆಳೆಸಿದ ಪತ್ರಿಕೆ. ನನ್ನ ಕನ್ನಡಪ್ರಭದಷ್ಟೇ ನಾನು ಗೌರವಿಸುವ, ಪ್ರೀತಿಸುವ ಪತ್ರಿಕೆಯದು. ಯಾಕೆ ಇಂಥಹ ಬೇಜವಾಬ್ದಾರಿಯ ಕೆಲಸ ನಡೆಯಿತು? ಇದನ್ನು ಬೇಜವಾಬ್ದಾರಿ ಎಂದು ಕರೆಯುವಷ್ಟು ದೊಡ್ಡವಳು ನಾನಲ್ಲದಿರಬಹುದು. ಆದರೆ ಅದು ಜವಾಬ್ದಾರಿಯುತರು ಮಾಡುವ ತಪ್ಪಂತೂ ಅಲ್ಲ. ಬೇರೆ ಪದ ಬಳಕೆ ಗೊತ್ತಾಗ್ತಿಲ್ಲ.
ಇಷ್ಟಕ್ಕೂ ನಾನು ಖುಷಿಯೇ ಪಡಬೇಕಿತ್ತು. ಚಿಂತಾಮಣಿ ಸರ್ ಮೆಚ್ಚಿ ಬರೆದಿದಾರೆ. ಅಷ್ಟೊಂದು ಜನ ಓದುವ ಪತ್ರಿಕೇಲಿ ನನ್ನ ಹೆಸರು! ಅದರಿಂದೆಲ್ಲ ಖುಷಿಯಾಗೋಲ್ಲ ಅನ್ನೋದು ತೋರಿಕೆಯ ಪ್ರತಿಷ್ಠೆಯಾದೀತೇನೋ.

~
ಬೆಳಗ್ಗೆ ಏಳು ಗಂಟೆ ಇರಬಹುದು. ಸೋಮಾರಿ ನಿದ್ದೆಯಲ್ಲಿದ್ದೆ. ಬಂದ ಮೆಸೇಜುಗಳು ಹಾಗೇ ಉಳಿದಿದ್ದವು. ಗೆಳೆಯ ಕಾಲ್ ಮಾಡಿ ‘ಕತ್ತೆ, ಎಷ್ಟು ಜಂಭಾನೇ ನಿಂಗೆ?’ ಅಂದಾಗಲೆ ನಾನು ಚುರುಕಾಗಿದ್ದು. ‘ದೊಡ್ಡವಳಾಗ್ಬಿಟ್ಟಿದೀಯಪ್ಪಾ! ನಮಗೆಲ್ಲ ಯಾಕೆ ಹೇಳ್ತಿ ಬುಕ್ ರಿಲೀಸ್ ಆಗಿದ್ದು…’ ಅಂತ ದನಿ ತೆಗೆದಾಗಲೇ ನಂಗೆ ವಿಷಯ ಗೊತ್ತಾಗಿಹೋಯ್ತು. ಯಾಕೆಂದರೆ ನನ್ನ ‘ಪುಸ್ತಕ’ದ ಬಗ್ಗೆ ಕಳೆದ ಎರಡು ತಿಂಗಳಿಂದ ಸಮಜಾಯಿಷಿಕೆಗಳು ನಡೀತಲೇ ಇದ್ದವಲ್ಲ?

ನಾನು ಚೊಕ್ಕಾಡಿಯವರಿಗೆ ಮಾತು ಕೊಟ್ಟಿದೇನೆ. ಪುಸ್ತಕ ಪ್ರಕಟಣೆಯನ್ನು ನಿರಾಕರಿಸಿ ಪ್ರಾಜೆಕ್ಟ್ ವಾಪಸ್ ತೆಗೆದುಕೊಂಡಿದ್ದರ ಕಾರಣವನ್ನು ಬಹಿರಂಗಪಡಿಸೋದಿಲ್ಲ ಅಂತ.
ಪ್ರಜಾವಾಣಿಯಲ್ಲಿ ಚಿಕ್ಕದಾಗಿ ನನ್ನ ಪುಸ್ತಕದ ಹೆಸರು ಬಂದಾಗಲೇ ಚಾಣಕ್ಯ ಪ್ರಕಾಶನಕ್ಕೆ ಕರೆ ಮಾಡಿ ಕ್ಲಾರಿಫೈ ಮಾಡಿಕೊಂಡಿದ್ದೆ. ಚೊಕ್ಕಾಡಿ ಕೂಡ ಅದಾಗಲೇ ಪುಸ್ತಕದ ಪ್ರತಿ ಕಳುಹಿಸಿದ್ದ ಎಲ್ಲ ಪತ್ರಿಕೆಗೂ ಪತ್ರ ಬರೆದು ಪುಸ್ತಕ ಹಿಂಪಡೆದ ಬಗ್ಗೆ ಕ್ಲಾರಿಫೈ ಮಾಡಿರುವುದಾಗಿ ಹೇಳಿದ್ದರು. ಆದರೂ ಹೀಗ್ಯಾಕಾಯ್ತು?
~
ಓರಗೆಯವರೊಬ್ಬರು ಹೇಳಿದಂತೆ ‘ನನ್ನನ್ನು ಇಷ್ಟಪದುವ’ ಕೆಲವೇ ಮಂದಿಗೆ ನನ್ನ ಬರಹ/ಕವಿತೆ ಇಷ್ಟವಾಗುವುದು ನಿಜವಿರಬಹುದು. ಅದೇನೇ ಇದ್ದರೂ ನನ್ನ ಸ್ವಾಭಿಮಾನ ನನ್ನದಲ್ಲವೆ?
‘ನಿಜಘಮದ ಕೇದಗೆ’ ನನ್ನ ಇಷ್ಟದ ಟೈಟಲ್ಲು. ಹೊಸ ಪೆನ್ಸಿಲಿನಲ್ಲಿ ಅಕ್ಕರೆಯಿಂದ ಚಿತ್ರ ಬರೆದು ಚೆನಾಗಿದೆ ಅಂತ ಸಂಭ್ರಮಿಸುವ ಮಗುವಿನ ಹಾಗೇ ಅದನ್ನ ಸಿದ್ಧ ಮಾಡಿಕೊಂಡಿದ್ದೆ. ಆದ್ದರಿಂದಲೇ ಮೊದಲು ಪುಸ್ತಕ ಅಚ್ಚಾಗಿ ಬಂದಾಗ ಪ್ರಿಂಟಿಂಗ್ ತೀರ ಅತೃಪ್ತಿಕರವಾಗಿತ್ತು ಅಂತ ಪುಸ್ತಕವನ್ನ ನಿರಾಕರಿಸಿದೆ. ದಯವಿಟ್ಟು ಸರಿಪಡಿಸಿಕೊಡಿ ಅನ್ನುವ ಕೋರಿಕೆಗೆ ಪ್ರಕಾಶನ ಮಾಲಿಕೆಯ ಸಂಪಾದನೆಯ ಜವಾಬ್ದಾರಿ ಹೊತ್ತಿದ್ದವರು ಧೋರಣೆಯ ಉತ್ತರ ನೀಡಿದ್ದರು. ಅದು ಸಹಜವಾಗಿ ನನ್ನ ಸ್ವಾಭಿಮಾನವನ್ನು ಕೆಣಕಿತ್ತು. ಅವರ ಬಿರುಮಾತಿನಂತೆಯೇ ನಾನು ಅವರಿತ್ತ ಸಂಭಾವನೆ ಹಿಂದಿರುಗಿಸಿ ಪುಸ್ತಕ ಪ್ರಕಟಣೆಯ ಒಪ್ಪಂದವನ್ನು ರದ್ದುಗೊಳಿಸಿದ್ದೆ.
~
ಬೇಸರವಂತೂ ಆಗಿದೆ. ಯಾರ ಬಗ್ಗೆ, ಎಲ್ಲಿ ಹೊರಹಾಕಬೇಕು? ತನ್ನ ಅಷ್ಟಗಲ ಸ್ಪೇಸ್ ನಲ್ಲಿ ವಿಮರ್ಶೆ ಪ್ರಕಟವಾಗಗೊಟ್ಟಿದ್ದಕ್ಕೆ ಇವಳು ಖುಷಿಯನ್ನೇ ಪಡಬೇಕಿತ್ತು, ಹೀಗ್ಯಾಕೆ ವಿರೋಧಿಸ್ತಿದಾಳೆ ಅಂದುಕೊಳ್ಳುತ್ತಾ ಪ್ರಜಾವಾಣಿ? ಆ ಖುಷಿಯನ್ನೂ ಮೀರಿದ ಬೇಸರ ನನ್ನದು. ಹುಟ್ಟಿ ಮೊದಲ ದಿನಕ್ಕೇ ಸತ್ತ ಕೂಸಿನ ನಾಮಕರಣ ಮಾಡಿದಂತೆ ಅನಿಸುತ್ತಿದೆ. ಈ ನೋವನ್ನ ಪತ್ರಿಕೆ ಅರ್ಥ ಮಾಡಿಕೊಳ್ಳುತ್ತದೆಯೇ?
ನನ್ನ ಎರಡೆರಡು ಸ್ಪಷ್ಟೀಕರಣದ ನಂತರವೂ ಪ್ರಕಟಿಸಿದ್ದಕ್ಕೆ ವಿಷಾದವನ್ನಾದರೂ ಪಡುತ್ತದೆಯೆ? ಕ್ಲಾರಿಫೈ ಮಾಡ್ತದೆಯೇ?  ಇಷ್ಟಕ್ಕೂ ನನ್ನ ಬಳಿ ಮಾತಾಡಿ ‘ಪುಸ್ತಕ ಪ್ರಕಟವಾಗಿಲ್ಲ, ದಯವಿಟ್ಟು ರಿವ್ಯೂ ಹಾಕಬೇಡಿ’ ಎನ್ನುವ ನನ್ನ ವಿನಂತಿಯನ್ನ ಕೇಳಿಸಿಕೊಂಡಿದ್ದ, ನನ್ನ ವೈಯಕ್ತಿಕ mailಗೆ ಉತ್ತರವನ್ನೂ ನೀಡಿದ್ದ ಸಂದೀಪ್ ನಾಯಕ್ ಹೀಗೇಕೆ ಉಡಾಫೆ ತೋರಿದರು?
ನಾನೂ ಮುಖ್ಯ ಪತ್ರಿಕೆಯೊಂದರಲ್ಲೆ ಕೆಲಸ ಮಾಡ್ತಿರುವವಳು. ಮತ್ತೊಂದು ಪತ್ರಿಕೆ ವಿರುದ್ಧ ಮಾತಾಡುವುದೂ ಕಷ್ಟವೇ. ಪತ್ರಿಕೆಯ ಕೆಲಸದೊಳಗಿನ ನಿತ್ಯ ಮಾರ್ಜಿನ್- ಡೆಡ್ ಲೈನ್‌ಗಳನ್ನು ಬಲ್ಲವಳು. ನನ್ನ ಜೊತೆಯ ಪತ್ರಕರ್ತರು ಇಷ್ಟು ಬೇಜವಾಬ್ದಾರಿಯಿಂದ ಹೇಗೆ ನಡೆದುಕೊಂಡರು ಅನ್ನುವುದನ್ನ ಯೋಚಿಸ್ತಿದೇನೆ.

ನನ್ನ ಭಾನುವಾರವನ್ನು ಬೆಳಗಿನಲ್ಲೇ ಹಾಳೆಬ್ಬಿಸಿದ ಎಲ್ಲರನ್ನೂ ಬಯ್ದುಕೊಳ್ಳುತ್ತಾ…

ನಿಮ್ಮ,
ಚೇತನಾ ತೀರ್ಥಹಳ್ಳಿ

ಟಿಪ್ಪಣಿಗಳನ್ನು ನಿಲ್ಲಿಸಲಾಗಿದೆ.

Create a free website or blog at WordPress.com.

Up ↑