ಕಳೆದ ಜನ್ಮದ ಎಳೆಯೊಂದು ಹುಡುಕಿ ಬಂದಂತೆ


ಚಳಿ ಬಿದ್ದಿದೆ. ಹಾಡುಗಳ ಕೌದಿ ಹೊದ್ದು ಬೆಚ್ಚಗೆ ಕೂತಿದೇನೆ. ಎದೆಯಲ್ಲಿ ನೆನಪುಗಳ ಅಗ್ಗಿಷ್ಟಿಕೆ. ಕಾವಿಗೆ ಮೈ, ಮನಸು ಹಿತವಾಗಿದೆ. ಎಲ್ಲ ನೆನಪಾಗಲಿಕ್ಕೆ ಮಳೆಯೇ ಸುರಿಯಬೇಕೆಂದಿಲ್ಲ. ಒಂದಷ್ಟು ಹಾಡುಗಳ ಸಾಲು ಸುರಿದರೂ ಸಾಕು. ಆದರೇಕೋ ಈ ಹೊತ್ತು ಯಾವ ಹೊಸ ಹಾಡೂ ತುಟಿ ಹತ್ತುತ್ತಿಲ್ಲ. ಎದೆಯೊಳಕ್ಕೆ ಇಳಿದ ಹಳೆಯ ಗಂಧ ಹಾಗೆ ದಟ್ಟ, ಗಾಢ. ಅಪ್ಪನ ಹುಡುಗುತನದ ಕಾಲಕ್ಕೆ ಹಾಡಾಗುತ್ತಿದ್ದ ಸಾಹಿರನ ಮೇಲೆ ನನ್ನ ಪ್ರೀತಿ. ಗುಲ್ಜಾರ ನನ್ನ ಅಂತರಂಗ ಬಲ್ಲ ಗೆಳೆಯನಂತೆ. ಇವರೆಲ್ಲ ಮುಪ್ಪೇ ಇಲ್ಲದ ಆತ್ಮಸಖರು. ನನ್ನಂಥವರಿಗೆ ಚಿರಕಾಲದ ಪ್ರಿಯತಮರು!

ರಾತ್ರಿ ರೇಡಿಯೋ ತಿರುಗಿಸುತ್ತೇನೆ. ಹಳೆ ಹಾಡುಗಳನ್ನ ಕೇಳಲಿಕ್ಕೆಂದೇ. ಮೊದಲೇ ಹಾಡಿನ ಪಟ್ಟಿ ಗೊತ್ತಾಗಿಬಿಡುವ ಎಮ್‌ಪಿಥ್ರೀ ಅಷ್ಟೊಂದು ಮಜ ಕೊಡಲಾರದು. ಮೂಗು ಕಟ್ಟಿದಂಥ ದನಿಯ ನಿರೂಪಕರು ಮಂದ ಬೆಳಕಿನ ಮೆಹಫಿಲ್ಲಿನಲ್ಲಿ ಲತಾ, ರಫಿ, ಮುಖೇಶ, ಕಿಶೋರರನ್ನೆಲ್ಲ ಕೂರಿಸಿಕೊಂಡ ಗತ್ತಿನಲ್ಲಿ ‘ಭೂಲೇ ಬಿಸ್ರೇ ಗೀತ್’ ನಡೆಸಿಕೊಡ್ತಾರಲ್ಲ, ಅದನ್ನ ಕೇಳುವ ಸುಖವೇ ಸುಖ. ಅಂದ ಹಾಗೆ, ಭೂಲೇ ಬಿಸ್ರೇ ಗೀತ್? ಮರೆತು ಮರಗಟ್ಟಿರುವವರಾದರೂ ಯಾರು!?

~

ಅಪ್ಪ ಜತನದಿಂದ ಜೋಡಿಸಿಟ್ಟಿದ್ದ ಕ್ಯಸೆಟ್ಟುಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಭಾನುವಾರದಂತೆ ಹಾಡುವ ಸರದಿ. ಹಿಂದಿ ಕಲಿತ ಹೊಸತಿನ ದಿನಗಳವು. ಪ್ರತಿ ಪದವನ್ನ ಒಡೆದು ತಿಳಿಯುತ್ತಲೂ ಜಗತ್ತು ತಿಳಿದಂತೆ ಖುಷಿ. ರಾಗದೊಳಕ್ಕೆ ಮುಳುಗಿ, ಅರ್ಥಕ್ಕೆ ಆರ್ದ್ರವಾಗುವ ಸೂಕ್ಷ್ಮತೆ ಕಲಿಸಿಕೊಟ್ಟಿದ್ದು ಈ ಹಳೆಯ ಹಾಡುಗಳೇ. ಕೇಳಿದರೆ ಚಿತ್ರಗೀತೆ, ಓದಿಕೊಂಡರೆ ಅದ್ಭುತ ಕವಿತೆ. ಗಾಳಿಯದೊಂದು ಅಲೆ ಬೀಸಿತುಕೊಂಬೆಯಿಂದ ಹೂ ಕಳಚಿತುಗಾಳಿಯದಲ್ಲ, ಹೂವಿನದಲ್ಲತಪ್ಪಾದರೂ ಯಾರದು?ಅನ್ನುವಂಥ ಸಮಜಾಯಿಷಿಕೆಯ ಸಾಲುಗಳು, ಸಮಾಧಾನ ಹೇಳುವ ಭಗವದ್ಗೀತೆ. ಬಹಳ ಸಾರ್ತಿ, ಬಹುವಾಗಿ ಎಲ್ಲ ಸಾರ್ತಿ, ಇವು ಒಂಟಿತನ ನೀಗುವ ಗೆಳೆಯನಂತೆ. ಉಹುಂ… ಒಂದು ಕೂಡ ಹಾಡನ್ನಿಲ್ಲಿ ಎತ್ತಿ ಹೇಳಲಾರೆ. ನೂರು ಸಾವಿರ ಆಯ್ಕೆಯಲ್ಲಿ ಬೆರಳು ತೋರಲಾದರೂ ಯಾವುದಕ್ಕೆ? ಎರೆಹುಳುವಿನ ಹಾಗೆ ಮಿಳಗುಟ್ಟುವ ಮನಸ್ಸು, ಮುಖೇಶನೆದುರು ಮೌನಿ. ಅದಕ್ಕೆ ಗೊತ್ತಿರುವುದೆಲ್ಲ ಅದೊಂದೇ ಭಾಷೆಯೇನೋ ಅನ್ನುವಂತೆ. ಆ ಭಾಷೆ ಹಿಂದಿಯಲ್ಲ. ಹಾಡಿನ ರಾಗವಾದರೂ ಗುರುತಿಸಲು ಗೊತ್ತಿಲ್ಲ. ಆ ಎಲ್ಲರು ಹಾಡುತ್ತಿದ್ದರು, ಕಳೆದ ಜನ್ಮದ ಎಳೆಯೊಂದು ಹುಡುಕಿ ಬಂದಂತೆ…. ಅದಕ್ಕೆ ತಗುಲಿಕೊಂಡು, ಬಿಟ್ಟವರ ಸೇರಿಕೊಂಡೆವೋ  ಅನಿಸುವಂತೆ…

~

ಹರೆಯ ಕಾಲಿಟ್ಟ ಕಾಲೇಜಿನ ದಿನಗಳವು. ಹೊಸಹೊಸ ಸಿನೆಮಾ, ರ್‍ಯಾಪ್ ಸಾಂಗ್ ಜಮಾನಾ. ಈ ನಡುವೆ ಕೂಡ ‘ಚಾಂದ್ ಆಹೇ ಭರೇಗಾ’ ಹಾಡಿದವನಿಗೆ ಸೋತಿದ್ದೇ ಮೊದಲನೆಯದು ಮತ್ತು ಕೊನೆಯದಾಯ್ತು. ಅಂವ ನನ್ನ ಮದುವೆ ಫಿಕ್ಸ್ ಆದಾಗ ‘ತೇರಿ ಗಲಿಯೋಂ ಮೆ ನ ರಖ್ಖೇಂಗೆ ಕದಮ್…’ ಹಾಡು ಕಳಿಸಿಕೊಟ್ಟಿದ್ದ. ಮದುವೆ ದಿನ ಗ್ರೀಟಿಂಗ್ ಕಾರ್ಡ್ ಜತೆ ‘ಕೊಯೀ ಜಬ್ ತುಮ್ಹಾರಾ ಹೃದಯ್ ಥೋಡ್‌ದೇ…’ ಇತ್ತು. ಹೀಗೆ ಬರೀ ಮೂರು ಹಾಡುಗಳಲ್ಲಿ ಮುಗಿದುಹೋಗಿತ್ತು ಎಳಸು ಪ್ರೇಮಪ್ರಕರಣ!ಆಮೇಲೆ ಸಾಕಷ್ಟು ನೀರು ಬತ್ತಿದೆ ಭೂಮಿಯಲ್ಲಿ. ಆ ಹುಡುಗನೀಗ ಅಪರಿಚಿತ. ಹಾಡುಗಳು? ಕೇಳುವ ಪ್ರತಿಕ್ಷಣವೂ ಹೊಸ ಪ್ರೀತಿ ಚಿಗುರಿನ ಭಾವ.

~

‘ಸತ್ತ್ವ ಇರೋದು ಉಳಕೊಳ್ತದೆ’, ಬಲ್ಲವರ ಮಾತು. ಬಹುತೇಕ ಹಳೆ ಹಾಡುಗಳಿಗೆ ಆತ್ಮವಿದೆ- ನಾನು ಅಂದುಕೊಳ್ತೇನೆ. ಅದಕ್ಕೇ ಈಗಲೂ ಅವು ಹೊಸ ರಾಗ, ರೀಮಿಕ್ಸುಗಳ ದೇಹ ಹೊತ್ತು ಬರುತ್ತಲೇ ಇವೆ. ಇವತ್ತಿಗೂ ಅಂತಾಕ್ಷರಿಯಲ್ಲಿ ಥಟ್ಟನೆ ಹೊಳೆಯೋದು ಹಳೆ ಹಾಡುಗಳೇ. ಆಪ್ತವಾದವೇ ಆಪತ್ತಿಗೂ ಆಗೋದು, ಅಲ್ಲವಾ? ~ನಮ್ಮದೀಗ ಫೇಸ್‌ಬುಕ್ಕಿನಲ್ಲಿ ಸಾಮಾಜಿಕ ಬದುಕು. ಸ್ಟೇಟಸ್ ಕಾಪಾಡಿಕೊಳ್ಳೋದು ಅಲ್ಲಿ ಕೂಡ ಮುಖ್ಯ. ಚೂರು ಗಮನ ಕಡಿಮೆಯಾಯ್ತು ಅನಿಸಿದರೂನು ಅಲ್ಲೊಂದು ಹಳೆ ಹಿಂದೀ ಹಾಡು ಹಾಜರ್! ಹಿಗ್ಗಿನದೊಂದು ಹಾಡನ್ನ ಗೂಗಲಿಸಿ ಶೇರ್ ಮಾಡಿಕೊಂಡಿದ್ದೇ ತಡ ಹತ್ತಾರು ಕಮೆಂಟುಗಳು, ಮೆಚ್ಚುಗೆಗಳು ತುಂಬಿಕೊಳ್ತವೆ. ಗೆಳೆಯರೆಲ್ಲ ಹಾಡಿನೊಂದಿಗ ತಮ್ಮ ತಮ್ಮ ನೆನಪು-ಬಯಕೆಗಳ ಸುಖದೊಳಕ್ಕೆ ಜಾರುತ್ತಾರೆ. ‘ಹಾಡನ್ನ ಹಂಚಿ ಕೇಳಬೇಕು’ ಅನ್ನೋದು ಈ ಸಮಾಜದ ಗಾದೆ.

~

ಇಷ್ಟೆಲ್ಲ ಹೇಳೀಕೊಂಡರೂನು ಮುಗಿಯದ ಉತ್ಸಾಹ. ಯಾಕಂದರೆ ಈ ಹಳೆಯ ಹಿಂದಿ ಹಾಡುಗಳಿವೆಯಲ್ಲ, ಅವು ಭಾವಗೀತೆಗಳಂತೆ, ಗಝಲುಗಳಂತೆ. ಕೆಲವು ಗಝಲುಗಳೂ ಸಿನೆಮಾದೊಳಕ್ಕೆ ಸೇರಿಕೊಂಡಿರುವುದೂ ಕಾರಣವೇನೋ… ನಮ್ಮ ಭಾವಕೋಶದೊಳಗೇ ಅವಕ್ಕೆ ಜಾಗ. ಭಾವುಕರ ಪಾಲಿಗೆ ಅಮ್ಮನ ಲಾಲಿಯ, ಕೈತುತ್ತಿನ ನೆನಪಿನಂತೆ ಇವು ಕೂಡ.

ನೆನಪಿದೆಯಾ? ಅಯೋಧ್ಯೆ ತೀರ್ಪಿನ ದಿನ ಹೆಚ್ಚು ಹರಿದಾಡಿದ್ದು  ಯಾವ ದೇಶನಾಯಕರ ಸಂದೇಶಗಳಲ್ಲ, ಹೇಳಿಕೆಗಳಲ್ಲ. ಅವತ್ತು ಹೆಚ್ಚು ಮಟ್ಟಿಗೆ ರವಾನೆಯಾಗಿದ್ದು, ‘ತು ಹಿಂದು ಬನೇಗ ನ ಮುಸಲ್ಮಾನ್ ಬನೇಗ… ಇನ್ಸಾನ್ ಕಿ ಔಲಾದ್ ಹೆ ಇನ್ಸಾನ್ ಬನೇಗ’ ಅನ್ನುವ ರಫಿ ಹಾಡಿದ್ದ ಸಾಹಿರನ ಸಾಲುಗಳು. ಇದೇ ಸಾಹಿರ್, ‘ಮೆ ಪಲ್ ದೋ ಪಲ್ ಕ ಶಾಯರ್ ಹೂಂ’ ಅನ್ನುತ್ತಾ ‘ಕಲ್ ಕೋಯಿ ಮುಝ್‌ಕೋ ಯಾದ್ ಕರೆ, ಕ್ಯೋಂ ಕೋಯಿ ಮುಝ್‌ಕೋ ಯಾದ್ ಕರೇ…’ ಅಂದಿದ್ದ. ಅವನಿಗೆ, ಅವರೆಲ್ಲರಿಗೆ ಹೇಳಬೇಕು, ನಿಮ್ಮ ನಾಳೆಗಳ ನಾವು, ನಿಮ್ಮನ್ನೆಲ್ಲ ನೆನೆಯುತ್ತಿದ್ದೇವೆ. ಯಾಕಂದರೆ, ನೀವು ತಾಳಕ್ಕೆ ಪದ ಪೋಣಿಸಿ ವರ್ಷದ ಸೂಪರ್ ಹಿಟ್ ಕೊಟ್ಟು ಮರೆಯಾದವರಲ್ಲ. ನೀವಿನ್ನೂ ನಮ್ಮೊಳಗೆ ಹಾಡಾಗಿ ಹರಿಯುತ್ತಿದ್ದೀರಿ, ನಮ್ಮ ಭಾವುಕತನವನ್ನ ಉಳಿಸಿಕೊಡುತ್ತಾ…

(ಇದ್ದನ್ನ ಬರೆದಿದ್ದು ಚಳಿಗಾಲದಲ್ಲಿ, ತಿಂಗಳು ಹೊಸ ವರ್ಷದ ಸಂಚಿಕೆಗಾಗಿ…. ಜನವರಿ ಸಂಚಿಕೆಯಲ್ಲಿ ಪ್ರಕಟಿತ.)

15 thoughts on “ಕಳೆದ ಜನ್ಮದ ಎಳೆಯೊಂದು ಹುಡುಕಿ ಬಂದಂತೆ

Add yours

 1. ಬಹಳ ಸುಂದರ ಬರಹ…

  ಹಳೆಯ ಹಾಡುಗಳು ಆತ್ಮೀಯ ಗೆಳೆಯನ ಹಾಗೆ..
  ಯಾವಾಗಲೂ ಬೇಕು..
  ಮತ್ತು ಅತೀ ಸುಂದರ..
  ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತು…

  ಗುಲ್ಜಾರ್ ಒಂದು ಅದ್ಭುತ… !

 2. ಅದ್ಭುತ ಬರಹ! ಹಳೆಯ ಹಾಡುಗಳನ್ನು ಆಲಿಸುವಾಗ ನಿಜಕ್ಕೂ ಹಾಗೇ ಅನಿಸುತ್ತದೆ, ಕಳೆದ ಜನ್ಮದ ಎಳೆಯೊಂದು ಹುಡುಕುತ್ತ ಬಂದಂತೆ…
  ನಿಮ್ಮ ಲೇಖನದ ಮೂಲಕ ಹಲವು ಹಾಡುಗಳನ್ನೂ ನೆನಪಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್..

 3. ಚೇತನ ಮೇಡಂ,
  ಮೊದಲ ಸಲ ನಾನು ನಿಮ್ಮ ಬ್ಲಾಗಿಗೆ ಬರ್ತಾ ಇದೀನಿ..!
  ನನಗೆ ನೀವು ‘ಭಾವುಕ’ ನಾಗಿಸಿದಿರಿ.
  ನನಗೆ ‘ಹಳೆಯ ಹಿಂದಿ’ ಹಾಡುಗಳ ಹುಚ್ಚು.
  ಕೆಲವು ಸಲ ಹಾಡು ಕೇಳುತ್ತ ನನ್ನನ್ನ ನಾನು ಮರೆತಿದಿನಿ..!
  ಹಾಗೇನೆ, ‘ಗುಲ್ಜಾರ್ ಸಾಬ್’ ನನಗೆ ತುಂಬಾ ತುಂಬಾ ಇಷ್ಟ.

  ಮತ್ತೊಂದು ಮಾತು:
  ಮದುವೆ ದಿನ, “ಖುಷ ರಹೇ ತು ಸದಾ ಏ ದುವಾ ಹೈ ಮೆರಿ”
  ಹಾಡು ನೆನಪಾಗಲಿಲ್ವಾ..? 🙂
  ಧನ್ಯವಾದಗಳು. 🙂
  -ಅನಿಲ್ ಬೇಡಗೆ

 4. ಸುಂದರ ಬರಹ.
  ಹಳೆಯ ಹಿಂದೀ ಹಾಡುಗಳನ್ನು ಆಸ್ವಾದಿಸುವವರಲ್ಲಿ ನಾನೂ ಒಬ್ಬ.
  ಬಹುಷಃ ೧೯೮೦ರ ದಶಕದ ಹಿಂದಿನ ಹಾಡುಗಳನ್ನು ಆಲಿಸುವುದರಿಂದ ಸಿಗುವ ಆನಂದ, ಆ ಕಾಲಘಟ್ಟದ ನಂತರದ ಹಾಡುಗಳನ್ನು ಆಲಿಸುವುದರಿಂದ ಸಿಗುವುದೇ ಇಲ್ಲ ಎಂದು ನನ್ನ ಅನಿಸಿಕೆ.

 5. ಆ ಮಧುರ ಹಾಡುಗಳ ತಾಕತ್ತೇ ಅಂತಹದು;
  ನಮ್ಮನ್ನು ಹೊಸದೊಂದು ಲೋಕಕ್ಕೆ ಸೆಳೆದೊಯ್ದು,
  ಲೌಕಿಕದ ತಲ್ಲಣಗಳಿಂದ ಕೆಲಕಾಲವಾದರು ನಮ್ಮನ್ನು
  ಬೇರೆ ಮಾಡಿ ಇಡುವ ಅನುಭವ ಕೊಡುತ್ತಿತ್ತು.
  ಬಾಲ್ಯದಲ್ಲಿ ನಾನು ಇಷ್ಟಪಟ್ಟು ಕೇಳುತ್ತಿದ್ದ
  ‘ಬೀನಾಕ ಗೀತ್ ಮಾಲ’ ದ ಹಾಡುಗಳು ನನಗೆ ತುಂಬಾ
  ಖುಷಿ ಕೊಡುತ್ತಿದ್ದವು. ನನ್ನ ನೆನಪಿನ ಭಾವ ಕೋಶದಲ್ಲಿ
  ಬಾಲ್ಯದಲ್ಲಿ ಕೇಳಿದ ಆ ಮಧುರ ಹಾಡುಗಳು ಶಾಶ್ವತವಾಗಿ
  ಅಚ್ಚಾಗಿವೆ.
  ನಿಜಕ್ಕೂ, ಮನಸ್ಸು ಕಾಡಿದ ಹಳೆಯ ಆ ಗೀತೆಗಳನ್ನು ನೆನಪು ಮಾಡಿಸಿ ಖುಷಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

 6. ಅಕ್ಕೋ ತುಂಬು ಹೃದಯದ ಧನ್ಯವಾದ

  ಇನ್ನೊಮ್ಮೆ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿಕೊಟ್ಟಿದ್ದಕ್ಕೆ.ಮನದ ಮೂಲೆಯಲ್ಲಿ ಎಲ್ಲೋ ಅಡಗಿಹೋಗಿರುವ All Most ನಮ್ಮವೆ ಆಗಿ ಹೋಗಿರುವ ಇಂಥಾ ಹಳೆಯ ಹಾಡುಗಳ ಮೇಲೆ ಬರೆದಿರುವ ಲೇಖನ ನಿಜವಾಗ್ಲೂ ಇನ್ನೊಂದು ಗಝಲ್ ಥರಾನೇ ಇದೆ.

  “ಮೆರಾ ಕುಛ್ ಸಾಮಾನ್” ಹಾಡಿನಲ್ಲಿ ಬರೋ ಆ ಸಾಹಿತ್ಯಕ್ಕೆ ಕಿಚ್ಚು ಹಚ್ಚೋ ಥರಾ ಇದೆ ಬರಹ ಅಕ್ಕಾ!! ತುಂಬಾ ಧನ್ಯವಾದ.

 7. Chetana,

  Thanks for making me nostalgic once again with these old songs. Also please write about old kannada songs of the same time period (PBS/S Janaki/P Susheela) which were also equally melodious.

  Bhule Bisre Geeth was being broadcast at 10.00 PM. The 7.00 PM program was called Jaimala (not the actress) which was for the Fauji Bhaiyo ( the army) 🙂

  Regards,

  Mounaprasad

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: