ಪಾಂಡಣ್ಣನ ನೆನಪಿನೊಂದಿಗೆ ಜಾನುವಾರು ಜಾತ್ರೆ ಬಯಲು


ನಾನು ಚಿಕ್ಕಿರುವಾಗಿಂದ ನೋಡಿದ್ದ ಪಾಂಡಣ್ಣ ಮೊನ್ನೆ, ಹಬ್ಬದ ಹಿಂದಿನ ದಿನ ಹೃದಯನಿಂತು ಇಲ್ಲವಾಗಿದ್ದಾರೆ. ನಾನೂ ಅಪ್ಪಿಯೂ ಪ್ರಿತಿಯಿಂದಲೂ ಚೇಷ್ಟೆಯಿಂದಲೂ ‘ಭಾಲು’ ಅಂತ ಕರೆಯುವುದಿತ್ತು ಅವರನ್ನ. ಪಾಂಡಣ್ಣ, ತಮ್ಮಪಾಡಿನ ಮನುಷ್ಯ. ಯಾರ ಉಸಾಬರಿಗೂ ಹೋಗದೆ ಇರುತ್ತಿದ್ದವರು. ಊರ ಜನರೆಲ್ಲ ಕಾರ್ತೀಕದ ಹೊತ್ತಿಗೆ ಮಾತ್ರ ವೆಂಕಟರಮಣ ಗುಡಿಗೆ ಸಿಂಗಾರ ಮಾಡಲು ಉತ್ಸಾಹ ತೋರ್ತಿದ್ದರೆ, ಇವರು ಮಾತ್ರ ಪ್ರತಿ ಬೆಳಗ್ಗೆ ಅಲ್ಲೊಂದು ರೌಂಡು ಓಡಾಡಿ, ಗುಡಿ ಸುತ್ತ ಗುಡಿಸಿ, ಅಗೀಗ ಕಳೆ ತೆಗೆದು ಬರುತ್ತಿದ್ರು. ಅದನ್ನವರು ‘ಸೇವೆ’ ಅಂತಲೂ ಅಂದುಕೊಳ್ತಿರಲಿಲ್ಲ, ಕರ್ತವ್ಯ ಅಂತಲೂ ಹೇಳ್ತಿರಲಿಲ್ಲ. ಮನೆ ಕಸ ಗುಡಿಸುವಷ್ಟೆ ಸಹಜ ಕೆಲಸ ಅವರಿಗಾಗಿತ್ತು ಅದು. ಈಗ ಪಾಂಡಣ್ಣ ಇಲ್ಲ. ಕಾರ್ತೀಕ ಶುರುವಾಗಿದೆ. ಅವರು ಮೂರನೆ ಸಾಲಿನ ಕೆಲಸವೆಲ್ಲ ಮಾಡಿ ಯಾವುದೋ ಹಿಂದಿನ ಕಂಬಕ್ಕೊರಗಿ ನಿಂತುಬಿಡ್ತಿದ್ದರು ಕಡೇ ಕಾರ್ತೀಕದ ದಿನ. ಪಾಂಡಣ್ಣ ಇಲ್ಲದೆ ಆ ಕಂಬವೀಗ ಅನಾಥ. ಗುಡಿ ಸುತ್ತ ಕಳೆಕಸ ಸೊಂಪಾಗಿ ಬೆಳೆದಾವು. ವೆಂಕಟರಮಣನೊಬ್ಬ ಇದ್ದರೆ, ಅವರ ಮನೆಜನಕ್ಕೆ ಸೈರಿಸುವ ಶಕ್ತಿ ಕೊಡಬೇಕಷ್ಟೆ…

ಇಲ್ಲಿಂದ ಮುಂದೆ- ಪಾಂಡಣ್ಣನೊಟ್ಟಿಗೆ ನೆನಪಾದ ಜಾನುವಾರು ಜಾತ್ರೆ ಬಯಲು. – ಮತ್ತೊಂದು ಹಳೆ ಬರಹ.

ಜಾನುವಾರು ಜಾತ್ರೆ ಬಯಲು…

ಇದು ತೀರ್ಥಹಳ್ಳಿ ಹೊರವಲಯದ ಬಾಳೆಬಯಲಿನ ಒಂದು ಪ್ರಮುಖ ತಾಣ. ತುಂಗೆ ಈ ಬಯಲಿನ ಪಕ್ಕ ಹರಿದೇ ತೀರ್ಥಳ್ಳಿ ತಲುಪೋದು. ಈ ಬಯಲಿನಲ್ಲಿ ಹಿಂದೆಲ್ಲ ವರ್ಷಕ್ಕೊಮ್ಮೆ ಎತ್ತುಗಳ ಮೇಳ ನಡೀತಿತ್ತು. ಹಿಂದೆ ಅಂದರೆ, ನನಗೆ ನೆನಪಿರೋ  ಹಾಗೆ ನಾನು ಹೈಸ್ಕೂಲು ಮುಗಿಸುವವರೆಗೂ (ಹದಿಮೂರು- ಹದಿನಾಲ್ಕು ವರ್ಷದ ಹಿಂದೆ) ಜಾತ್ರೆ ನಡೀತಿತ್ತು. ಅದು ಶುರುವಾಗಿದ್ದು ಯಾವಾಗ, ನಿಂತಿದ್ದು ಯಾಕೆ- ಇದೊಂದೂ ನನಗೆ ಗೊತ್ತಿಲ್ಲ. ಹಾ! ನಿಂತಿದ್ದು ಯಾಕೆ ಅನ್ನೋದನ್ನ ಊಹಿಸೋದು ಕಷ್ಟವಲ್ಲ, ಶುರುವಾಗಿದ್ದು ಹೇಗೆ ಅಂತ ಹೇಳಬಹುದಾದವರ್ಯಾರೂ ಈಗ ಅಲ್ಲಿ ಉಳಿದಿಲ್ಲ!

venkatramaNa temple sorroundings

ಈ ಬಯಲಿಗೆ ಸಾಕಷ್ಟು ದೀರ್ಘ ಇತಿಹಾಸವಿದೆ. ಅದು ಜಾತ್ರೆ ಬಯಲಾಗುವ ಮುಂಚೆ ಶಿವಪ್ಪನಾಯಕನ ಕಾಲದೊಂದು ಅಗ್ರಹಾರವಾಗಿತ್ತು. ತುಂಗೆ ಒಮ್ಮೆ ಉಕ್ಕಿ ಹರಿದಾಗ ಇಡಿಯ ಅಗ್ರಹಾರ ಕೊಚ್ಚಿಕೊಂಡು ಹೋಗಿ ಬರಿ ಬಯಲುಳಿದಿತ್ತು. ಅದೆಲ್ಲ ಶತಮಾನದ ಹಿಂದಿನ ಕಥೆ. ನಾವು ಚಿಕ್ಕವರಿರುವಾಗ ಹಲಸಿನ ಮರದ ಬುಡದಲ್ಲಿದ್ದ ಒಂದು ಹಳೆಯ ಒರಳು ಕಲ್ಲನ್ನು ಅದು ಇತಿಹಾಸದ ಒಂದು ಭಾಗವೆಂದು ಮತ್ತೆ ಮತ್ತೆ ಮುಟ್ಟಿ ರೋಮಾಂಚಿತರಾಗಿ ನೋಡುತ್ತಿದ್ದೆವು!

ಜಾತ್ರೆ ಬಯಲೆಂದರೆ, ಅದರ ತುದಿಯಲ್ಲೊಂದು ವೆಂಕಟರಮಣನ ಗುಡಿ. ಶುರುವಲ್ಲೊಂದು ನಾಗರ ಕಟ್ಟೆ. ಎರಡೂ ಕಡೆ ನದಿಗೆ ಕರೆದೊಯ್ಯುವ ಮೆಟ್ಟಿಲುಗಳು. ಒಂದು ಕಡೆ ಅಗಾಲದ್ದು, ಮತ್ತೊಂದು ಕಡೆ ಕಡಿದಾದ ಚಿಕ್ಕಚಿಕ್ಕದು. ಗುಡಿಯ ಪಕ್ಕ ಒಂದು ಮೇ ಫ್ಲವರ್ ಮರ. ಅದೇ, ನಮ್ಮ ಸಾಹಸಕ್ಕೆ ಸವಾಲಾಗಿ ನಿಂತಿದ್ದ ಮರ! ನಾನು, ವಿದ್ಯಾ ಸರಸರನೆ ಮರ ಏರುತ್ತಿದ್ದರೆ, ಅಪ್ಪಿ ಮಂಗನ ಹಾಗೆ ಪಿಳಿಪಿಳಿ ನೋಡ್ತ ನಿಂತು ಬಿಡುತ್ತಿದ್ದನಲ್ಲ, ಆಮೇಲೆ ತನಗೆ ಏರಲು ಬಾರದ ಸಂಕಟಕ್ಕೆ ಅಮ್ಮನ ಹತ್ರ ಚಾಡಿ ಹೇಳ್ತಿದ್ದನಲ್ಲ, ಅದಕ್ಕೆಲ್ಲ ಕಾರಣವಾಗಿದ್ದ ಮರ…

ಮನೆಯಿಂದ ಹುಣಿಸೆ ಹಣ್ಣು ಉಪ್ಪು ಕದ್ದು ನಾವಿಬ್ಬರು ಅಡುಗೆ ಆಟ ಆಡ್ತಿದ್ದಿದ್ದು ಆ ಮರದ ಬುಡದಲ್ಲೇ. ಆ ಇಡಿಯ ಬಯಲಲ್ಲಿ ಅದೆಷ್ಟು ಜೀವಂತಿಕೆ! ಕ್ರಿಕೆಟ್ ಆಡುವ ಧಾಂಡಿಗ ಹುಡುಗರೊಂದು ಕಡೆ, ಸೈಕಲ್ಲು ಕಲಿಯುತ್ತಿದ್ದ ‘ಮೂತಿ ಮುರುಕಿ’ ಸಹೋದರಿಯರೊಂದು ಕಡೆ (ಅವರು ಯಾರಂತ ಇಡಿಯ ಬಾಳೆಬಯಲಿಗರಿಗೆ ಗೊತ್ತು! ಅವರು ಈ ಬ್ಲಾಗನ್ನು ಓದೋದಿಲ್ಲ ಅನ್ನೋ ಧೈರ್ಯದ ಮೇಲೆ ಬರೀತಿದ್ದೇನೆ!), ಮೆಟ್ಟಿಲಿಳಿಯುವ ಜಾಗದಲ್ಲಿ ಸ್ವಲ್ಪ ಆಚೆಯ ಬಿದಿರು ಮಟ್ಟಿಯಲ್ಲಿ ಈಗ ಮದುವೆಯಾಗಿ ತಮ್ಮ ತಮ್ಮ ಗಂಡ- ಹೆಂಡತಿಯೊಟ್ಟಿಗೆ ಸುಖವಾಗಿರುವ ಅವರಿಬ್ಬರು, ಇವರೆಲ್ಲರ ಮಧ್ಯ ಉದ್ದನೆ ಚಳ್ಳೆದುರಿ ಹಗ್ಗ ಗಂಟುಕಟ್ಟಿ ‘ಕೊಲ್ಲೂರ್-ಬೆಂಗ್ಳೂರ್’ ಬಸ್ಸಾಟ ಆಡ್ತಿದ್ದ ನಾವು!

ಜಾತ್ರೆ ಬಯಲಿಂದ ಹೊರಹೋಗಿ ಹತ್ತು ಹೆಜ್ಜೆ ನಡೆದರೆ ಅಲ್ಲೊಂದು ವೀರಗಲ್ಲು. ಸ್ಕೂಲಲ್ಲಿ ಪಾಠ ಮಾಡಿದ ದಿನ ಸಂಜೆ ಮನೆಗೆ ಬರುವ ಹಾದಿಯಲ್ಲಿ ಅದರೆದುರು ನಿಂತು ನಾವು ಸಮಾಲೋಚನೆ ನಡೆಸಿದ್ದೇ ನಡೆಸಿದ್ದು. ಅದಾದಮೇಲೆ ಜಾತ್ರೆ ಬಯಲಿನಲ್ಲಿ ‘ಬ್ಲೂಷೆಡ್’ ನಾಗ ಒರಗಿ ಕೂರ್ತಿದ್ದ ಕರಿ ಕಲ್ಲಿಗೂ ಅದಕ್ಕೂ ಏನಾದರೂ ಸಾಮ್ಯವಿದೆಯಾ ನೋಡಲಿಕ್ಕೆ ಹೋದವರು ಮುಸ್ಸಂಜೆ ಕಳೆದರೂ ಅಲ್ಲೇ ಹೊಳೆಬುಡದಲ್ಲಿ ನಿಂತು ಅಮ್ಮನ ಹತ್ರ ಬಯ್ಸಿಕೊಂಡಿದ್ದೆವು. ಅಮ್ಮ “ಇವತ್ತು ಅಮಾವಾಸ್ಯೆ ಮುಂಡೇವಾ” ಅಂತ ಮಣಮಣ ಮಾಡಿ ಪೊರಕೆ ಕಡ್ಡಿ ನಿವಾಳಿಸಿ ಒಲೆಗೆ ಹಾಕಿದ್ದಳು.

ನಾವು ಚಿಕ್ಕವರಿದ್ದಾಗ ತುಂಗೆಗೆ ಹಾರಿ ಅಥವಾ ಈಜಲು ಹೋಗಿ ಪ್ರಾಣ ಕಳಕೊಂಡಿದ್ದವರ ಲಿಸ್ಟು ಸಣ್ಣದಿತ್ತು. ಯಾವಾಗಲೂ ಒಂದಲ್ಲ ಒಂದು ಮಕ್ಕಳ ಗುಂಪಿಂದ ಕಳಕಳಿಯಾಗಿದ್ದ ಜಾತ್ರೆ ಬಯಲಿನ ಕಾರಣದಿಂದ ಹೊಳೆಯಲ್ಲಿ ಯಾರಾದರೂ ಸತ್ತಿದ್ದಾರೆ ಅನ್ನುವ ವಿಷಯ ಮರೆತೇ ಹೋಗುತ್ತಿತ್ತು. ಜೊತೆಗೆ, ಹೊಳೆಬದಿಯ ಮರಗಳಿಗೆ ನೇಣು ಹಾಕಿಕೊಂಡವರ ಸಂಖ್ಯೆ ಸಾಕಷ್ಟಿದ್ದರೂ ಅವೆಲ್ಲ ನಮ್ಮ ಸಾಹಸಗಳೆದುರು ನಗಣ್ಯವೆನಿಸಿಬಿಡುತ್ತಿತ್ತು. ಹಾಗಂತಲೇ ನಾನು ಮೈನೆರೆದ ಮೇಲೆ ಅಮ್ಮ ‘ರಣ ಹಿಡಿಯುತ್ತೆ ನೋಡು’ ಅಂತ ಗದರಿಸಿದರೂ ಕೇರ್ ಮಾಡದೆ ಮಟಮಟ ಮಧ್ಯಾಹ್ನವೆಲ್ಲ ಮಾವಿನಕಾಯಿ ಆಯಲು ಹೋಗುತ್ತಿದ್ದೆ . ಅಮ್ಮನಿಗೆ ಗೊತ್ತಾಗದಹಾಗೆ ಕದ್ದು ಮುಚ್ಚಿ ಹೊಳೆಯಲ್ಲಿ ಈಜಾಡಿ ಬಟ್ಟೆ ಒಣಗಿಸಿಕೊಂಡು ಮರಳುತ್ತಿದ್ದೆ! ಓ… ಅದೆಲ್ಲ ಎಷ್ಟು ಗಮ್ಮತ್ತು ಗೊತ್ತೇನು?

ಜಾತ್ರೆ ಬಯಲಿನ ವಿಷಯ ಹೇಳುತ್ತ ಒಂದು ಗಮ್ಮತ್ತು ಹೇಳಲೇಬೇಕು. ಅದೊಂದು ಮೋಹಿನಿಗೆ ಸಂಬಂಧಪಟ್ಟಿದ್ದು!
ನನ್ನಪ್ಪ ಸರ್ಕಾರಿ ನೌಕರರಾಗಿದ್ದರು. ಎಲೆಕ್ಷನ್ ಡ್ಯೂಟಿಗೆ ಹಾಕಿದ್ದರು ಅವರನ್ನ. ಮನೆಗೆ ವಾಪಸು ಬರ್ತ ರಾತ್ರಿ ಒಂದು  ಗಂಟೆಯಾಗಿತ್ತು. ಪೇಟೆಯಿಂದ ನಮ್ಮ ಮನೆಗೆ ಹೋಗೋದಕ್ಕೆ ಎರದು ದಾರಿ. ಒಂದು ಜಾತ್ರೆ ಬಯಲು ಬಳಸಿ, ಮತ್ತೊಂದು- ಸೀದಾ ಟಾರ್ ರೋಡಿಂದ ಬಂದು ಚಿಕ್ಕದೊಂದು ಏರು ಹತ್ತಿ ಬರುವಂಥದು.
ಅಪ್ಪ ಮಾಮೂಲಿನಂತೆ ಜಾತ್ರೆ ಬಯಲಿಂದ ಬರ್ತಿದ್ದರಂತೆ. ಆಗ ಇದ್ದಕ್ಕಿದ್ದ ಹಾಗೇ ‘ಬಂದ್ಯಾ, ಬಾ…! ಬಾ…!’ ಅಂತ ಹೆಣ್ಣು ದನಿಯೊಂದು ನಕ್ಕಿತಂತೆ!! ಅದಾಗಲೇ ಒಂದು ದೆವ್ವದ ಜತೆ ವ್ಯವಹರಿಸಿ ಗೊತ್ತಿದ್ದ ಅಪ್ಪ, ಹಿಂದೆ ತಿರುಗಿ ನೋಡಬಾರದು ಅನ್ನೋ ಸೂತ್ರ ನೆನಪಿಸಿಕೊಂಡು, ಕೈಯಲ್ಲಿ ಜನಿವಾರ ಗಟ್ಟಿಯಾಗಿ ಹಿಡಿದು ‘ಗಾಯತ್ರಿ ಮಂತ್ರ’ ಹೇಳಿಕೊಂಡು ದಾಪುಗಾಲು ಹಾಕುತ್ತ ಬಂದರಂತೆ!
ಮನೆ ಸೇರಿದ ಅಪ್ಪ ಈ ರೋಚಕ ಕಥೆಯನ್ನ ಮನೆಗೆ ಬಂದವರಿಗೆಲ್ಲ ಹೇಳಿ ಬೆಚ್ಚಿಬೀಳಿಸುತ್ತಿದ್ದರು. ಹಗಲು ಹೊತ್ತು ಬಯಲಿಗೆ ಆಡಲು ಹೋಗ್ತಿದ್ದ ನಾವೂ ಆ ದೆವ್ವ ಎಲ್ಲಿಂದ ಕರೆದಿರಬಹುದು ಅಂತ ಬಹಳ ಕಾಲದವರೆಗೆ ಹುಡುಕಿ ಸೋಲುತ್ತಿದ್ದೆವು.
ಹಾ! ಇದನ್ನ ಹೇಳುತ್ತ ಹೇಳುತ್ತ, ನಮ್ಮೂರಿನ ದೆವ್ವದ ಕಥೆಗಳನ್ನ ಹೇಳುವ ಉಮ್ಮೇದಿ ಬಂದಿದೆ. ನಿಮಗೆ ಬೇಡವಾದರೂ ಮುಂದೊಮ್ಮೆ ಆ ಬಗ್ಗೆ ಬರೆಯುತ್ತೇನೆ, ಪ್ಲೀಸ್…

ಹೀಗೆಲ್ಲ ರುಚಿರುಚಿಯಾಗಿದ್ದ ಜಾತ್ರೆ ಬಯಲು ಊರ ರಾಜಕೀಯಕ್ಕೆ ಸಿಕ್ಕಿ ತನ್ನೆಲ್ಲ ಆಕರ್ಷಣೆ ಕಳಕೊಳ್ಳುತ್ತ ಬಂತು. ವೆಂಕಟರಮಣನ ಗುಡಿ ಸುತ್ತ ಸಭಾಭವನ ಕಟ್ಟಲಿಕ್ಕೆ ಹಾಕಿದ್ದ ಇಟ್ಟಿಗೆ- ನಾಟಾಗಳೆಲ್ಲ ಯಾರ್ಯಾರದೋ ಮನೆಯ ಗೋಡೆ- ಮಾಡಿಗೆ ಬಳಕೆಯಾಯ್ತು. ಈಜಲು ಹೋದ ಪರಊರ ಹುಡುಗರು ವರ್ಷಕ್ಕೊಬ್ಬರಂತೆ ಸಾಯುತ್ತ ಜನ ಅತ್ತ ಹೋಗಲು ಹಿಂದೇಟು ಹಾಕತೊಡಗಿದರು. ಒಂದಷ್ಟು ಹೆಣ್ಣುಗಳು ಅಲ್ಲಿ ಆತ್ಮಹತ್ಯೆ ಮಾಡಿಕೊಂಡು ಸತ್ತು, ಹೆಂಗಸರು ಬಟ್ಟೆ ಒಗಿಯಲಿಕ್ಕೆ ಹೋಗೋದನ್ನ ಹೆಚ್ಚೂಕಡಿಮೆ ನಿಲ್ಲಿಸೇಬಿಟ್ಟರು!

ಈಗ, ಮನೆಯೊಳಗೇ ಕಾರ್ಟೂನು ನೋಡುತ್ತ ಕೂರುವ ಮಕ್ಕಳು ಅಲ್ಲಿ ಅಡುಗೆ ಆಟ ಆಡಲಿಕ್ಕೆ ಹೋಗೋಲ್ಲ. ಮರ ಹತ್ತುವ, ಮಾವಿನ ಕಾಯಿ ಉದುರಿಸುವ ಸಾಹಸಗಳಂತೂ ಕನಸಿಗೂ ದೂರದ ಮಾತು!
ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ವೆಂಕಟರಮಣನಿಗೆ ಭರ್ಜರಿ ಪೂಜೆ. ಆಗೊಂದಷ್ಟು ದಿನ ಅಲ್ಲಿ ಗೆಲುವು, ಗಲಗಲ.
ಅದು ಬಿಟ್ಟರೆ ಆ ಇಡಿಯ ಬಯಲಿಗೆ ಸೂತಕದ ಕಳೆ. ಬಹುಶಃ ಒಂಟೊಂಟಿ ಇರಲು ಬೇಸರವಾಗಿ ಅಲ್ಲಿದ್ದ ಬ್ರಹ್ಮ ಪಿಶಾಚಿ, ರಣಗಳೂ, ಭೂತ ದೆವ್ವಗಳೂ, ಕಡೆಗೆ ಖುದ್ದು ವೆಂಕಟರಮಣನೂ ಓಡಿಹೋಗಿಬಿಟ್ಟಿರಬೇಕು! ಹಾಗೆ ಶೂನ್ಯಶೂನ್ಯ.

ಮೊನ್ನೆ ಸಾರ್ತಿ ಊರಿಗೆ ಹೋದಾಗ ಆಸೆ ಬಿದ್ದು ಜಾತ್ರೆ ಬಯಲಿಗೆ ಹೋದೆ. ನಿರಾಸೆಯಾಯ್ತು. ನನ್ನ ಬಾಲ್ಯಕ್ಕೆ ರಂಗುತುಂಬಿದ್ದ ಆ ವಿಶಾಲ ನೆಲ, ಮಕ್ಕಳ ಹೆಜ್ಜೆ ಎದೆಗೊತ್ತದೆ ನರಳುತ್ತ ಬಿದ್ದುಕೊಂಡಿತ್ತು.
ಹ್ಹ್! ಅಲ್ಲಿ, ಬಯಲಿನದೊಂದು ಮೂಲೆಗೆ ಬೇಲಿ ಹಾಕಿದ್ದರು. ಇದ್ದ ಬದ್ದ ಮರಗಿಡ ಕಡಿದು, ಹುಲ್ಲು ನೆಟ್ಟು ‘ಪಾರ್ಕು’ ಮಾಡಿದ್ದರು!
ಅದುಕೂಡ ಹಾಳುಬಿದ್ದು ಸ್ಮಶಾನದಂತೆ ಮಲಗಿತ್ತು.

ಮೊನ್ನೆ ಅಮ್ಮ ಜಾನುವಾರು ಜಾತ್ರೆ ಬಯಲಿನ ಮಾತು ತೆಗೆದಿದ್ದು ಅದೇ ಪಾರ್ಕಿನ ವಿಷಯಕ್ಕೇ. ಅದೇನೋ ಮತ್ತೆ ರಾಜಕೀಯಕ್ಕೆ ಸಿಕ್ಕಿದೆಯಂತೆ. ಯಾರ್ಯಾರೋ ಅದರ ದುಡ್ಡು ನುಂಗಿದರಂತೆ… ಹೀಗೇ, ಏನೋ ಒಂದಷ್ಟು ವರದಿ ಹೇಳಿದಳು. ನಿಟ್ಟುಸಿರುಬಿಟ್ಟ ನನಗೆ, ‘ಜೀವನದಲ್ಲಿ ಎಂತೆಂತದೋ ಬದಲಾಗತ್ತೆ, ಜಾತ್ರೆ ಬಯಲಿಂದೇನು ದೊಡ್ಡ ಸುದ್ದಿಯಾ?’ ಅಂತ ವೇದಾಂತ ಹೇಳುತ್ತ ನನ್ನ ವಿಷಯ ತೆಗೆದಳು.

ಪಾಪ ಅಮ್ಮ. ಈ ಐವತ್ತು ವರ್ಷಗಳಲ್ಲಿ ಎಂಥೆಂಥದೋ ಬದಲಾವಣೆಗಳನ್ನ ಅರಗಿಸಿಕೊಂಡು ಬಂದಿದಾಳೆ. ಅವಳ ಕಣ್ಣೆದುರೇ ತೀರ್ಥಹಳ್ಳಿ ಮೊದಲಿನ ಕುರುಹೇ ಉಳಿಯದ ಹಾಗೆ ಬದಲಾಗಿ ನಿಂತಿದೆ. ಹೀಗಿರುವಾಗ ಅವಳಪಾಲಿಗೆ ಜಾನುವಾರು ಜಾತ್ರೆ ಬಯಲು ಒಂದು ದೊಡ್ಡ ವಿಷಯವಲ್ಲ.
ಆದರೆ, ಬರಿ ಹತ್ತು ಹನ್ನೆರಡು ವರ್ಷಗಳಲ್ಲಿ ಇಂಥದೊಂದು ಸಂಗತಿ ಕಂಡ ನನ್ನ ಪಾಲಿಗೆ…?

4 thoughts on “ಪಾಂಡಣ್ಣನ ನೆನಪಿನೊಂದಿಗೆ ಜಾನುವಾರು ಜಾತ್ರೆ ಬಯಲು

Add yours

  1. Hmm… ಹೌದು ಕಣ್ರೀ.. ಹಳ್ಳಿಗಳೆಲ್ಲ, ಪಟ್ಟಣಗಲಾಗುತ್ತಿವೆ.. ಒಂದು ಕಾಲದ ಆಕರ್ಷಣೆಗಳು, ಮತ್ತೊಂದು ಕಾಲಕ್ಕೆ ತ್ಯಾಜ್ಯದಂತಾಗುತ್ತವೆ .. ಇನ್ನು ನಮ್ಮ ಮುಂದಿನ ಪೀಳಿಗೆಗಳು, ಈ ತರದ್ದು ಇತ್ತು ಅಂದ್ರೂ ನಂಬೋದಿಲ್ಲ … Super article.. ಮನಸಿಗೆ ಹತ್ತಿರವಾಯ್ತು ..

  2. ನನಗೆ ಬಹಳ ಇಷ್ಟವಾಯಿತು…….. ನನಗೆ ನನ್ನ ಬಾಲ್ಯದ ದಿನಗಳು ನೆನಪಾದವು………..

    It’s nice ,it took me back to my childhood. But really shook me a moment that Pandanna passed away, the changes my native place had suffered.

    Ananth Kallapur (anubalebailu………… Thirthahalli)—–anubalebail@gmail.com,

    ananthbhattthirthahalli@gmail.com

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: