ಮಾರ್ಚ್ 25,2008ರ ಒಂದು ಬರೆಹ


ಎಂದಿನಂತೆ, ಬ್ಲಾಗಲ್ಲೇನೋ ಗಲಾಟೆಯಾಗಿ, ಬ್ಲಾಗಿಂಗ್ ಶುರು ಮಾಡಿದ ವರ್ಷದೊಳಗೇ ಡಿಲೀಟ್ ಮಾಡಿಬಿಟ್ಟಿದ್ದೆ. ಆಗಿನ ಬರೆಹಗಳ ಸಾಫ್ಟ್ ಕಾಪಿ ಒಂದು ಕಡೆ ಇದ್ದಿದ್ದು ಅಚಾನಕ್ ಇವತ್ತು (ಮತ್ತೊಮ್ಮೆ) ಸಿಕ್ತು. ಕೆಲವೆಲ್ಲ ‘ಅರ್ರೆ!’ ಅನಿಸಿ, ಮತ್ತೆ ಇಲ್ಲಿ…

ಈ ಬರೆಹ, ನೈಪಾಲರು ತಮ್ಮ ಬಯಾಗ್ರಫಿಯಲ್ಲಿ ಬರೆದುಕೊಂಡಿದ್ದ ಒಂದು ಸಂಗತಿಯನ್ನಾಧರಿಸಿ ಬರೆದಿದ್ದಾಗಿತ್ತು…

ಬರೋಬ್ಬರಿ ನಲವತ್ತು ವರ್ಷಗಳ ಕಾಲ ಹೆಂಡತಿಯನ್ನ ಹುರಿದುಮುಕ್ಕಿದ ನೈಪಾಲರು ಕನ್ಫೆಸ್ ಮಾಡಿಕೊಂಡಿದ್ದಾರೆ. “ಬಹುಶಃ ನಾನು ನಿರಂತರವಾಗಿ ನೀಡಿದ ಮಾನಸಿಕ ಹಿಂಸೆಯೇ ಅವಳನ್ನು ಕೊಂದಿತು” ಎಂದು ಹೇಳಿಕೊಂಡಿದ್ದಾರೆ.  ಪ್ಯಾಟ್ರಿಕ್ ಫ್ರೆಂಚ್ ಮೂಲಕ ಬರೆಸಲಾಗಿರುವ ತಮ್ಮ ಆತ್ಮ ಕಥನ ‘ದ ವರ್ಲ್ಡ್ ಇಸ್ ವ್ಹಾಟ್ ಇಟ್ ಇಸ್’ ಕೃತಿಯಲ್ಲಿ ತಮ್ಮ ಬೆಡ್ ರೂಂ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ ನೈಪಾಲ್.

ಇದುವರೆಗೂ ಜಗತ್ತು ಸರ್ ವಿದ್ಯಾಧರ ಸೂರಜ್ ಪ್ರಸಾದ್ ನೈಪಾಲರನ್ನು ಧೀಮಂತ ಲೇಖಕ, ಪ್ರಬಂಧಕಾರ ಎಂದೆಲ್ಲ ಗೌರವಿಸ್ತಿತ್ತು. ಇದೀಗ ಅವರೊಬ್ಬ ಪತ್ನೀಪೀಡಕರಾಗಿದ್ದರು ಎಂಬುದು ಬಯಲಾಗಿದೆ. ಇದರಿಂದೇನಾಗುತ್ತದೆ?
ನನ್ನನ್ನು ಕೇಳುವುದಾದರೆ ಅಂಥದೇನೂ ಆಗುವುದಿಲ್ಲ. ಎಪ್ಪತ್ತೈದರ ನೈಪಾಲರು ಮುದಿಸಿಂಹದಂತೆ ಯಾವ ವಿಶೇಷ ಶ್ರಮವೂ ಇಲ್ಲದೆ ಮತ್ತಷ್ಟು ಜನಪ್ರಿಯತೆಯ ಬೇಟೆ ದಕ್ಕಿಸಿಕೊಳ್ತಾರಷ್ಟೆ.

ಇಷ್ಟಕ್ಕೂ ನೈಪಾಲ್ ಹೇಳಿಕೊಂಡಿರುವ ಸಂಗತಿಗಳಲ್ಲಿ ಅಸಂಗತ ಎನ್ನುವಂಥದ್ದಾದರೂ ಏನಿದೆ? ಅವರೇನೂ ನೀತಿ ಪಾಠ ಮಾಡುವ ಉಪನ್ಯಾಸಕರಾಗಿರಲಿಲ್ಲ. ಅವರ ಬರಹದ ವ್ಯಾಪ್ತಿ, ಆಯ್ಕೆಗಳ ನೆಲೆ ಬೇರೆಯೇ ಇತ್ತು. ಈ ವರೆಗೂ ಜಗತ್ತು ಅವರನ್ನು ಅವರ ಕೃತಿಗಳಿಗಾಗಿ ಗೌರವಿಸುತ್ತಿತ್ತೇ ಹೊರತು, ಅವರ ವ್ಯಕ್ತಿತ್ವವನ್ನು ಕಂಡಲ್ಲ. (ಇಲ್ಲಿ ಲೇಖಕನ ಸಾಮಾಜಿಕ ಜವಾನ್ದಾರಿ ಇತ್ಯಾದಿ ಪ್ರಶ್ನೆಗಳನ್ನು ಬಿಟ್ಟುಬಿಡಿ)

ಇಪ್ಪತ್ತನಾಲ್ಕು ವರ್ಷಗಳ ಕಾಲ ಅನೈತಿಕ ಸಂಬಂಧ ಹೊಂದಿದ್ದೆ ಎಂದು ನೈಪಾಲ್ ಹೇಳಿಕೊಂಡಿದ್ದಾರೆ. ಇದಕ್ಕೆ ಕೆಲವರು ವಿಪರೀತ ಕಮೆಂಟುಗಳನ್ನು ಮಾಡಿದ್ದಾರೆ. ದಿಗ್ಭ್ರಮೆ ಸೂಚಿಸಿದ್ದಾರೆ. ಅದೆಲ್ಲ ಯಾಕೆ? ಇಷ್ಟು ವರ್ಷಗಳ ನಂತರವಾದರೂ ಅವರು ತಮ್ಮ ದೌಷ್ಟ್ಯವನ್ನ ಜಾಹೀರುಗೊಳಿಸಿದ್ದಾರಲ್ಲ, ಅಷ್ಟು ಸಾಲದೇ? ಕೊನೆ ದಿನದವರೆಗೂ ಆತ್ಮವಂಚನೆ ಮಾಡಿಕೊಳ್ಳುತ್ತ ಮುಖವಾಡ ಹಾಕಿಕೊಂಡೇ ಸತ್ತುಬಿಡುವ ಅದೆಷ್ಟೋ ಪ್ರಸಿದ್ಧ ವ್ಯಕ್ತಿಗಳಿಗಿಂತ ನೈಪಾಲ್ ವಿಭಿನ್ನವಾಗಿ ನಿಲ್ಲುವುದಿಲ್ಲವೇ?

ಈ ಸಂಗತಿಯನ್ನ ಮಾನವೀಯ ನೆಲೆಗಟ್ಟಿನಲ್ಲಿ ನೋಡಿದಾಗ, “ಛೀ! ಹಾಳು ಗಂಡಸು!” ಅನ್ನಿಸುತ್ತೆ ನಿಜ. ಆದರೆ, ಒಬ್ಬ ಬರಹಗಾರನಾಗಿ ಅವನಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಲೊಚಗುಟ್ಟುವುದು ಎಷ್ಟು ಸರಿ?
ಕವಿ, ಕಲಾವಿದ, ಸಾಹಿತಿ, ರಾಜಕಾರಣಿ- ಇವರೆಲ್ಲರ ಬದುಕು ಬಹುತೇಕ ಒಡೆದ ಸಂಸಾರದ ಗಂಟು ಹೊತ್ತು ತಿರುಗುತ್ತಿರುತ್ತದೆ ಎಂದು ಜನ ತಿಳಿಯುತ್ತಾರೆ. ಆದರೆ, ಹಾಗೇನಿಲ್ಲ. ಸಾಮಾನ್ಯ ಸಂಸಾರಗಳಲ್ಲೂ ಇವೆಲ್ಲ ನಡೆಯುವಂಥದೇ. ಆದರೆ ಸೆಲೆಬ್ರಿಟಿಗಳ ಖಾಸಗಿ ಸಂಗತಿಗಳ ಬಗ್ಗೆ ಸಹಜವಾಗಿ ಇರುವ ಕುತೂಹಲ, ಅಂಥವರ ಬದುಕನ್ನ ಬಹಳ ಬೇಗ ಮತ್ತು ಹೆಚ್ಚು ರುಚಿಕಟ್ಟಾಗಿ ಬಯಲಿಗಿಡುತ್ತವೆಯಷ್ಟೆ.

ನಮ್ಮಲ್ಲೇ ನೋಡಿ. ಲಂಕೇಶರು, ಪಟೇಲರು ಇವರೆಲ್ಲ ತಮ್ಮ ಅಫೇರುಗಳನ್ನ ಖುಲ್ಲಂಖುಲ್ಲ ಹೇಳಿಕೊಂಡು ನಕ್ಕವರು. ಅಷ್ಟಾಗಿಯೂ ಮತ್ತೊಂದನ್ನ ಪ್ರಶ್ನಿಸುವ, ಖಂಡಿಸುವ ನೈತಿಕ ಮೌಲ್ಯವನ್ನ ಉಳಿಸಿಕೊಂಡವರು. ನೈಪಾಲ್ ಗೂ ಈ ಬಗೆಯ ಆಂತರಿಕ ಮೌಲ್ಯವಿದೆಯೇ?
ದೂರದ ಮನುಷ್ಯ. ಇನ್ನು ಮುಂದಷ್ಟೆ ತಿಳಿಯಬೇಕು.

ಆದರೆ ನನ್ನದೊಂದು ಅನುಮಾನ. ಇಷ್ಟು ವರ್ಷಗಳಿಂದ ಬರೆಯುತ್ತಿರುವ ನೈಪಾಲ್, ಈಗ ತಮ್ಮೆಲ್ಲ ಸಾಂಸಾರಿಕ ವಿಷಯವನ್ನ ಬಹಿರಂಗಗೊಳಿಸಿದ್ದು ಯಾಕೆ? ಹೋಗಲಿ, ೧೯೯೬ರಲ್ಲೇ ಅವರ ಪತ್ನಿ ತೀರಿಕೊಂಡರಲ್ಲ, ಅವರ ಜ್ಞಾನೋದಯಕ್ಕೆ ೧೨ವರ್ಷಗಳು ಬೇಕಾದವೇ? ಈಗ ತಮ್ಮ ಮತ್ತೊಂದು ಮುಖವನ್ನು ಅನಾವರಣಗೊಳಿಸಿಕೊಂಡಿರುವುದರ ಹಿಂದೆ ಬೇರೇನಾದರೂ ಉದ್ದೇಶವಿದೆಯೇ? ಅಥವಾ ಅವೆಲ್ಲವನ್ನೂ ಅವರು ತೀರ ಉಡಾಫೆಯಿಂದ ಬರೆದುಕೊಂಡಿದ್ದಾರೆಯೇ? ಇಲ್ಲಾ, ಅದು ನಿಜವಾದ ಪಶ್ಚಾತ್ತಾಪವೋ?
ಇವೆಲ್ಲ, ಇಡಿಯ ಪುಸ್ತಕ ಓದಿದರೆ ಒಂದಷ್ಟು ಗ್ರಹಿಕೆಗೆ ನಿಲುಕಬಹುದೇನೋ?

ಏನೇ ಆಗಲಿ, ದಿವಂಗತ ಪೆಟ್ರೀಷಿಯಾಗಂತೂ ಇನ್ನು ನ್ಯಾಯ ದೊರಕಲಾರದು.
ಈ ಇಡಿಯ ಪ್ರಹಸನವನ್ನು ಬರಹಗಾರನೊಬ್ಬನ ‘ಗಂಡಸುತನ’ದ ಪ್ರದರ್ಶನ ಅಂದುಕೊಂಡು ಸುಮ್ಮನಾಗುವುದು ಒಳ್ಳೆಯದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: