ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.. ಅದಕ್ಕೇ ನಮ್ಮ ಐಕಾನ್ ಆಗಿರುವರು


ನಮಗಿದೆಲ್ಲ ಮೊದಲೇ ಗೊತ್ತಿತ್ತು. ಅವೆಲ್ಲ ಆಕ್ಷೇಪಾರ್ಹಅಂತೇನೂ ಅನ್ನಿಸದೆ ಸಾಧಕನಾಗಿ ನಾವು ಅವರನ್ನ ನೋಡಿದ್ದೆವು. ಈಗೊಬ್ಬ ಮನುಷ್ಯರು ಹೊಸತಾಗಿ ಓದಿಕೊಂಡು ಗಾಬರಿ ಬಿದ್ದಿದ್ದಾರೆ. ಇಂಥಾ ವಿವೇಕಾನಂದ ಐಕಾನ್ ಹೇಗಾದನಪ್ಪಾ ಅಂತ ನಿದ್ದೆಬಿಟ್ಟಿದ್ದಾರೆ. ದಡ್ಡ, ಕಾಯಿಲೆಯ, ಬಡವ, ಅಬ್ರಾಹ್ಮಣ ನರೇಂದ್ರ ನಮ್ಮ ಐಕಾನ್ ‘ಸ್ವಾಮಿ ವಿವೇಕಾನಂದ’ ಆಗಿರೋದು ಯಾಕೆ ಗೊತ್ತಾ?

ಅವರು…..
ಶ್ರೀಮಂತ ಮನೆತನದಲ್ಲಿ ಹುಟ್ಟಿಯೂ ಬಡತನದ ಕಷ್ಟಗಳನ್ನೆಲ್ಲ ಎದುರಿಸಿದ್ದರು.
ತಮ್ಮೆಲ್ಲ ಅನಾರೋಗ್ಯಗಳ ನಡುವೆಯೂ ನಿರಂತರ ಓಡಾಟದಲ್ಲಿ ತೊಡಗಿಕೊಂಡು ಸೇವೆಗೆ, ಅಧ್ಯಾತ್ಮಕ್ಕೆ ತಮ್ಮನ್ನು ಕೊಟ್ಟುಕೊಂಡಿದ್ದರು. ಸ್ಟೀಫನ್ ಹಾಕಿಂಗ್ ನಂತೆ ಆನಾರೋಗ್ಯದಿಂದ ಇದ್ದೂ….
ಮಾಂಸಾಹಾರಿಯಾಗಿ, ಬ್ರಾಹ್ಮಣೇತರನಾಗಿದ್ದು ಗುರುವಿನ ಮನ್ನಣೆ ಪಡೆದಿದ್ದ ಭಾರತದ ಪರಂಪರೆಯ ನೂರಾರು ಅಧ್ಯಾತ್ಮ ಸಾಧಕರಲ್ಲಿ ವಿವೇಕಾನಂದರೂ ಒಬ್ಬರಾಗಿದ್ದರು.
ಸಾಂಪ್ರಾದಯಿಕ ಶಿಕ್ಷಣ ಪಡೆಯದೆ ಜಾಗತಿಕ ಮನ್ನಣೆ ಪಡೆದ ಐನ್ ಸ್ಟೀನನಂತೆ, ವಿವೇಕಾನಂದ ಕಡಿಮೆ ಅಂಕಗಳ ಅಸಾಧಾರಣ ಬುದ್ಧಿವಂತನಾಗಿದ್ದರು.
ವಾಯ್ಸ್ ಚೆನ್ನಾಗಿಲ್ಲ ಅಂತ ತಿರಸ್ಕರಿಸಲ್ಪಟ್ಟಿದ್ದ ಅಮಿತಾಭನಂತೆ(ಈಗಿನ ನಮ್ಮ ಬಾಲಿವುಡ್ ಬಾದ್ ಷಾಹ್) ಅವರೂ ‘ಪಾಠ ಕಲಿಸೋಕೆ ಬರೋದಿಲ್ಲ’ ಅಂತ ಅವಕಾಶ ನಿರಾಕರಿಸಲ್ಪಟ್ಟಿದ್ದರು.

ವಿವೇಕಾನಂದರು ತಮ್ಮ ಅನಾರೋಗ್ಯ ಕೆಲಸಕ್ಕೆ ತಡೆಯಾಗಿದೆ ಅಂತಲೇ ಮಿಕ್ಕವರಿಗೆ ದೇಹವನ್ನ ಹುರಿಗಟ್ಟಿಸಿಕೊಳ್ಳಿ ಅಂತ ಹೇಳ್ತಿದ್ದದ್ದು. ಅವರಿಗೆ ಗೊತ್ತಿತ್ತು, ದೇಹ ಚೆನ್ನಾಗಿದ್ದರೆ ಮಾತ್ರ ಕೆಲಸ ಸುಸೂತ್ರ ನಡೆಯುವುದು ಅಂತ. ವಿವೇಕಾನಂದ ಹೇಳಿದ್ದರು, ‘ಭಗವದ್ಗೀತೆ ಮುಚ್ಚಿಟ್ಟು ಫುಟ್ ಬಾಲ್ ಆಡಿ ಹೋಗಿ, ಬದುಕು ಏನೂಂತ ಗೊತ್ತಾಗುತ್ತೆ’ ಅಂತ.
ಅದಕ್ಕಾಗೇ ಅವರು ನಮ್ಮ ಐಕಾನ್.

ವಿವೇಕಾನಂದರು ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರು. ನಾಲ್ಕೂ ವರ್ಣಗಳ ಲಕ್ಷಾಂತರ ಅಧ್ಯಾತ್ಮಜೀವಿಗಳನ್ನು ಮೆರೆದಾಡಿಸಿದ ಭಾರತಕ್ಕೆ ನರೇಂದ್ರನೊಬ್ಬ ಹೆಚ್ಚೆ? ಅಧ್ಯಾತ್ಮ ಜೀವಿಗಳು ಪರಸ್ಪರ ‘ಸೋದರ’ ಅಂತ ಕರೆದುಕೊಳ್ಳೋದು ಸಾಮಾನ್ಯರಿಗೆ ಗೊತ್ತಿರೋದಿಲ್ಲ. ಸ್ವಾಮೀಜಿ ಕೂಡ ಬೇರೆಯವರನ್ನ ಸೋದರ, ಸೋದರಿ ಅಂತಲೇ ಕರೀತಿದ್ದಿದ್ದು, ನಡೆದುಕೊಳ್ತಿದ್ದಿದ್ದು.
ಇಂಥ ಜಾಗತಿಕ ಸೋದರತ್ವ ಕಟ್ಟಿಕಟ್ಟರಲ್ಲ. ಅದಕ್ಕಾಗೇ ಅವರು ನಮ್ಮ ಐಕಾನ್.

ವಿವೇಕಾನಂದರಿಗೆ ಚಿಕನ್ ಕಬಾಬ್ ತುಂಬಾ ಇಷ್ಟ. ಹಾಗಂತ ಈ ತಿಂಡಿಪೋತ ವಾರಗಟ್ಟಲೆ ಖಾಲಿ ಹೊಟ್ಟೆಯಲ್ಲಿ ಇರಬಲ್ಲವರಾಗಿದ್ದರು. ಬಾರಾನಾಗೊರ್ ಮಠದಲ್ಲಿರುವಾಗ ಬೇವಿನ ಸಾರು, ಮಂಡಕ್ಕಿ ತಿಂದು ಬದುಕಿದ್ದರು. ಬಹುತೇಕ ಬಂಗಾಳಿಗಳ ಹಾಗೆ ಅವರೂ ಹುಕ್ಕಾ ಗುಡುಗುಡಿ ಸೇದ್ತಾ ಇದ್ದರು. ಆದರೆ ಆ ಯಾವ ಸಂಪ್ರದಾಯವೂ ಅವರಿಗೆ ಚಟವಾಗಿರಲಿಲ್ಲ. ಬದುಕಿನ ವೈಭವದ ಎಲ್ಲ ಸಾಧ್ಯತೆಗಳನ್ನು ಒಳಗೊಳ್ಳುತ್ತಲೇ ಅಂಟಿಕೊಳ್ಳದ ವಿರಾಗಿಯಾಗಿದ್ದರು ವಿವೇಕಾನಂದ.
ಈ ಕಾರಣಕ್ಕಾಗಿಯೂ ಅವರು ನಮ್ಮಐಕಾನ್.

ವಿವೇಕಾನಂದ ತಮ್ಮ ಆಸಕ್ತಿ ಕ್ಷೇತ್ರದ ಯಾವುದನ್ನೇ ಓದಿದರೂ ಪ್ರತಿ ಪುಟದ ಬರಹ ನೆನಪಿಟ್ಟುಕೊಳ್ಳುತ್ತಿದ್ದರು. ಅವರು ಒಮ್ಮೆ ಕೇಳಿತಿಳಿದ ವಿಷಯವನ್ನು ಮರೆಯುತ್ತ ಇರಲಿಲ್ಲ. ಜಗತ್ತಿನಲ್ಲಿ ಮೊದಲಿಂದಲೂ ಹಂಗೇನೇ. ರಾಜಯಕ್ಕೆ- ದೇಶಕ್ಕೆ ಫಸ್ಟ್ ರ್ಯಾಂಕ್ ಬಂದ ಯಾವ ವ್ಯಕ್ತಿಯೂ ಶತಮಾನಗಟ್ಟಲೆ ನಿಲ್ಲುವಂಥ ಸಾಧನೆ ಮಾಡಿಲ್ಲ. ಪ್ರೈಮರಿ, ಹತ್ತನೆ ತರಗತಿ ಹೀಗೆಲ್ಲ ಓದಿನಿಲ್ಲಿಸಿಕೊಂಡ ನಮ್ಮ ವಿಜ್ಞಾನಿಗಳು, ಕವಿಗಳು, ಶಿಕ್…. ಉಫ್… ಲಿಸ್ಟು ಕೊಡಬೇಕಾ!?
ಅದಕ್ಕೇ ವಿವೇಕಾನಂದ ನಮ್ಮ ಐಕಾನ್.

ಜಗತ್ತಿನ ಬಹುತೇಕ ಸಾಧಕರ ಮನೆ ಸ್ಮಶಾನವಾಗಿರುತ್ತೆ. ವಿವೇಕಾನಂದ ಹೊರತಲ್ಲ. ಇವತ್ತು ಕೊಂಡಾಡುವ ನಾವು ಅವತ್ತು ಇದ್ದಿದ್ದರೆ ಸ್ವಾಮೀಜಿಗೆ ಕಿರೀಟವೇನೂ ತೊಡಿಸ್ತಾ ಇರಲಿಲ್ಲ. ಯಾವುದೇ ವ್ಯಕ್ತಿಯ ಮಹತ್ತು ಗೊತ್ತಾಗೋದು ಅವನು ಸತ್ತ ಮೇಲೇನೇ. ಹೀಗೆ ನಾವಿಷ್ಟು ಗೋಳಾಡಿಸಿದ್ದರೂ ‘ನನ್ನ ಭಾರತ… ನನ್ನ ಭಾರತ…’ ಅನ್ನುತ್ತಾ ಇಲ್ಲಿಯವರನ್ನು ನೆನೆದು ಅಮೆರಿಕದಲ್ಲಿ ತಾವು ನೆಲದ ಮೇಲೆ ಮಲಗಿದ್ದರಲ್ಲ, ಅದಕ್ಕೇ ಸ್ವಾಮೀಜಿ ನಮ್ಮ ಐಕಾನ್.

ಸೆಕ್ಸ್ ಮತ್ತು ಅಧ್ಯಾತ್ಮ ಒಟ್ಟಿಗೆ ಇರಲಾರದು ಅನ್ನುವ ಮನಸ್ಥಿತಿ ಇಟ್ಟುಕೊಂಡ ಭಾರತ- ಅವೆರಡನ್ನೂ ಬೆರೆಸಿ ಬೋಧಿಸಿದ್ದ ಓಶೋ ಅಂಥವರನ್ನೆ ಒಪ್ಪಿಕೊಂಡು ‘ಆಚಾರ್ಯ ರಜನೀಶ್’ ಅಂತ ಕರೆದಿದೆ. ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದ ಇಸ್ಕಾನ್ ಸನ್ಯಾಸಿ ಅಭಯಚರಣ ಡೇಯವರನ್ನು ಶ್ರೀಲ ಪ್ರಭುಪಾದ ಅಂತ ಗೌರವಿಸಿದೆ. ನಡುವಿನೊಂದಷ್ಟು ವರ್ಷ ಕಳೆದುಹೋಗಿದ್ದ ಕ್ರಿಸ್ತನ ಬದುಕು ಕೆದಕದೆ ಹನ್ನೊಂದನೆ ಅವತಾರ ಮಾಡಿಕೊಂಡು ಅರಗಿಸಿಕೊಂಡಿದೆ. ಕಲ್ಲೇಟಿನಿಂದ ತಪ್ಪಿಸ್ಕೊಳ್ಳೋಕೆ ವಿವರಗಳನ್ನ ಬಿಟ್ಟು ಹೇಳ್ತಿದ್ದೀನಿ; ………………………………………………….. ರನ್ನೂ ನಮ್ಮವರಲ್ಲಿ ಒಬ್ಬರಾಗಿಸಿಕೊಂಡು, ಮುಸ್ಲಿಮ್ ಜನಾಂಗದೊಡನೆ ಸ್ನೇಹದಿಂದಿದೆ.
ಹೀಗಿರುವಾಗ;
ಚಾಟಿ ಏಟಿನಂಥ ಮಾತು ಬೀಸಿ ನಮ್ಮ ಜಾತೀಯ ಮಾನಸಿಕ ರೋಗಕ್ಕೆ ಮದ್ದು ನೀಡಿದ, ಹಿಂದೂ ಧರ್ಮದ ಸುಧಾರಣೆಗೆ ಅತ್ಯಗತ್ಯವಾಗಿದ್ದ ಜೀವಶಿವಸೇವೆಯನ್ನು ನೆನಪು ಮಾಡಿಕೊಟ್ಟ, ನಮ್ಮೆಲ್ಲರ ನೋಟವನ್ನು ವಿಸ್ತಾರಗೊಳಿಸಿದ ಸ್ವಾಮಿ ವಿವೇಕಾನಂದ ನಮ್ಮ ಐಕಾನ್ ಆಗಬಾರದು ಅಂದರೆ ಹೇಗೆ?
ನಮ್ಮ ನಡುವಿನ ಮನುಷ್ಯರೊಬ್ಬರು ಇತ್ತೀಚೆಗೆ ಪುಸ್ತವೊಂದನ್ನು ಓದಿಕೊಂಡು ಇದೇ ಮಾತುಗಳನ್ನ ಆಕ್ಷೇಪದ ದನಿ ಹೊರಡಿಸುವಂತೆ ಬರೆದಿದ್ದಾರೆ. ಈ ಎಲ್ಲ ವಿಷಯ ವಿವೇಕಾನಂದರನ್ನ ಐಕಾನ್ ಮಾಡಿಕೊಂಡವರಿಗೆ ಗೊತ್ತಿಲ್ಲ, ತಾನು ಮಹಾಜ್ಞಾನವೊಂದನ್ನು ಬೋಧಿಸುತ್ತಿರುವ ಅನ್ನುವ ಧಾಟಿ ಇದೆ. ಅಥವಾ ತಮ್ಮ ಈ ‘ಸತ್ಯಶೋಧಕ ಲೇಖನ’ದಿಂದ ಸಾವಿರಾರು ಜನ ವಿವೇಕಾನಂದರ ಮೇಲಿನ ಅಭಿಮಾನವನ್ನು ಹಿಂಪಡೆಯುತ್ತಾರೆ ಅಂತ ಅವರು ಭಾವಿಸಿರಬಹುದು.
ಬರೆದ ಮನುಷ್ಯರೇ ತಿಳಿಯಿರಿ. ಯಾರೋ ಮಡಿಮಠದ ಆಚಾರ್ಯರನ್ನೋ ಮನು ಮಹಾತ್ಮರನ್ನೋ ಹಿಂದೂ ಕುಲ ತನ್ನ ಐಕಾನ್ ಅಂತ ಕರೆದು ಮೆರೆಸಿದ್ದರೆ ಗಾಬರಿ ಪಡಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನೇ ಮಾಡಿಕೊಂಡಿದೆ. ನೀವು ಅಂದುಕೊಂಡಷ್ಟು ಪೆದ್ದರಲ್ಲ ಯುವ ಸಮೂಹ. ನೆಟ್ಟಿನಲ್ಲಿ ಸ್ವಾಮೀಜಿಯ ಸಾಧ್ಯವಿರುವ ಎಲ್ಲ ವಿಷಯಗಳನ್ನು ಕಲೆಹಾಕಿಯೇ ಜೈಕಾರ ಕೂಗುತ್ತದೆ. ನೀವು ಬರೆಯದೆ ಬಿಟ್ಟಿರುವ ರೂಮರ್ ಗಳನ್ನು ಸಹ ಅದು ಓದಿಕೊಂಡಿದೆ. ಹೀಗಿರುತ್ತ, ಸಂಕುಚಿತ ಹಿಂದುತ್ವದಿಂದ ವಿವೇಕಾನಂದರ ವಿಶ್ವಮಾನವ ತತ್ತ್ವಕ್ಕೆ ತೆರೆದುಕೊಳ್ಳಲು ಹೊರಟು, ಅವರನ್ನ ಮುಂದಿಟ್ಟುಕೊಂಡು ಸಂಭ್ರಮದ 150ನೆ ಜನ್ಮೋತ್ಸವ ಆಚರಿಸ್ತಿರೋದಕ್ಕೆ ಸಂತೋಷಪಡಿರಿ.
ನಾವು ವಿವೇಕಾನಂದರನ್ನು ಶೈಕ್ಷಣಿಕ ವೈಫಲ್ಯದವ, ಕಾಯಿಲೆಯವ, ಮಾಂಸಾಹಾರಿ, ಬ್ರಾಹ್ಮಣೇತರನಾಗಿದ್ದೂ ಸಾಧನೆ ಮಾಡಿದವ ಅಂತ ಅಪ್ಪಿಕೊಂಡಿದ್ದೀವಿ. ನೀವು, ತಿಳಿದವರು ಅಂತ ಅನ್ನಿಸಿಕೊಂಡವರು ಈ ವಿಷಯಗಳನ್ನು ಕೀಳಾಗಿ ಬಿಂಬಿಸುತ್ತ ಅವರನ್ನು ಅನರ್ಹಗೊಳಿಸುವ ಯತ್ನಕ್ಕೆ ಯಾಕೆ ಕೈಹಾಕಿದ್ದೀರಿ!?
ವಿಕೃತಿ ಅಂದರೆ ಇದೇನಾ?

44 thoughts on “ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.. ಅದಕ್ಕೇ ನಮ್ಮ ಐಕಾನ್ ಆಗಿರುವರು

Add yours

 1. ನಾವು ದಿವ್ಯಜ್ಯೋತಿಯ ಪುತ್ರರು ! ಭಗವಂತನ ಮಕ್ಕಳು ನಾವು ! ಭಗವಂತನಿಗೆ ಜಯವಾಗಲಿ , ನಾವು ಜಯಶಾಲಿಯಾಗುವುದು ಖಂಡಿತ .” ಹೃದಯ ಶೂನ್ಯರಾದ ಚತುರ ಬರಹಗಾರರನ್ನು ಮತ್ತು ವೃತ್ತ ಪತ್ರಿಕೆಗಳಲ್ಲಿ ಅವರು ಗೀಚುವ ನಿರ್ದಯ ಲೇಖನಗಳನ್ನು ಲೆಕ್ಕಿಸ ಬೇಡಿರಿ” . ಶೃದ್ಧೆಯಿರಲಿ ! ಜ್ವಲಂತ ಶೃದ್ಧೆಯಿರಲಿ ! ದೇವನಿಗೆ ಜಯವೆನ್ನಿ ! ಮುನ್ನಡೆಯಿರಿ , ಭಗವಂತನೇ ನಮ್ಮ ಸೇನಾಧಿಪತಿ ! ಹಿಂತಿರುಗಿ ನೋಡದಿರಿ . ಮುಂದುವರಿಯಿರಿ , ಮುಂದೆ ಮುಂದೆ ಸಾಗಿರಿ ! ಸೋದರರೇ , ನಾವು ನಿಲ್ಲದೆ ಹೀಗೆ ಮುನ್ನಡೆಯುತ್ತಲೇ ಇರೋಣ .
  -ಸ್ವಾಮಿ ವಿವೇಕಾನಂದ .( ‘ಚೈತನ್ಯ ಚಿಲುಮೆ’ )

 2. ಅಕ್ಕ..ಅದ್ಭುತವಾಗಿ ಮಂಡಿಸಿದ್ದೀರಿ..
  ಸ್ವಾಮೀಜಿಗಳೇ ಹೇಳಿಲ್ವೇ..” ನಮ್ಮನ್ನು ವಿರೋಧಿಸುವವರು ಯಾವಾಗಲೂ ಇರಬೇಕು. ಅವಗ್ಲೆ ನಾವು ಒಳ್ಳೆ ಹಾದಿಯಲ್ಲಿ ಹೋಗ್ತಾ ಇದ್ದೀವಿ ಅಂತ ಅರ್ಥ.” ಅಂತ..!!

 3. Chetna,

  I read his article in Prajavani & in his article he(writer) did not degraded Swamy Vivekananda any where. It was a very well article. He tries to showcase Vivekanda in a most realistic sense. Even I liked his article & his approach towards Vivekananda. It was one of the best articles I ever come across till date about Vivekananda. Dinesh is also one of the sensible writers of our time.

  It seems like you are over reacting emotionally to this article. You could have taken some more time to react…..?

  Rajesh

 4. ಸ್ವಲ್ಪ ಅವಸರದಲ್ಲಿ ನೀವು ಪ್ರತಿಕ್ರಿಯಿಸಿದಂತಿದೆ. ಇರಲಿ, ಇದರಿಂದ ವಿಚಾರಗಳು ಇನ್ನಷ್ಟು ಸ್ಪಷ್ಟವಾಗಿವೆ. ದಿನೇಶ್‌ ಅಮಿನ್‌ಮಟ್ಟು ಹೇಳಿದ್ದನ್ನೇ ನೀವೂ ಹೇಳಿದ್ದೀರಿ. ನಿಮ್ಮ ಬರಹದಲ್ಲಿ ಹೊಸತೇನಿದೆ? ವಿವೇಕಾನಂದ ಅವರನ್ನು ಅಮಿನ್‌ಮಟ್ಟು ಎಲ್ಲೂ ಅನುಮಾನಿಸಿಲ್ಲ. ಒಬ್ಬ ವ್ಯಕ್ತಿಯನ್ನು ದೈವತ್ವಕ್ಕೇರಿಸುವ ಅಪಾಯದ ಬಗ್ಗೆ ಅವರಿಗೆ ಭಯ. ಅವರು ಇಡೀ ಲೇಖನದಲ್ಲಿ ಹೇಳಿರುವುದು ಇಷ್ಟು –
  ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.
  ***
  ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.
  ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.
  ***
  ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.
  ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.
  ***
  ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು.
  ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.
  ***
  ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು.

 5. ಮೇಡಮ್ಮ (ಹಳ್ಳಿ ಜನ ನಾವು ಮಾತಾಡೋದೇ ಹೀಗೆ….ಮನ್ನಿಸಿ) ವಿವೇಕಾನಂದರ ಬಗ್ಗೆ ನಿಮಗಿರುವ ಕಕ್ಕುಲಾತಿಗೆ ಶರಣು. ಒಬ್ಬ ವ್ಯಕ್ತಿಯನ್ನು ನಿರ್ವಚಿಸುವ ಕೊಳ್ಳುವ ಕ್ರಮ ಯಾವಾಗಲೂ ಸಹಜವಾಗಿರುತ್ತೆ ಅಂತ ಹೇಳೋದಕ್ಕೆ ಆಗೋಲ್ಲ. ನಿಜದ ವ್ಯಕ್ತಿಗಳನ್ನು ಪುರಾಣೀಕರಿಸುವ ದೊಡ್ಡ ಪರಂಪರೆಯೇ ನಮ್ಮಲ್ಲಿದೆ. ವಿವೇಕಾನಂದ ಕೂಡ ಇದಕ್ಕೆ ಹೊರತಲ್ಲ. ಗಾಂಧಿಯೂ ಅಷ್ಟೇ, ಪುರಾಣ ಪುರುಷ ರಾಮನೂ ಆಷ್ಟೆ. ಬಿಜೆಪಿ ರಾಮನೇ ಬೇರೆ. ಯಾವುದೋ ಸಣ್ಣ ಹಳ್ಳಿಯಲ್ಲಿ ರೈತ/ಕೂಲಿಕಾರ,ಪುರೋಹಿತ/ ಶ್ರದ್ಧಾಳು ರಾಮನೇ ಬೇರೆ. ವಿವೇಕಾನಂದರ ಬಗ್ಗೆ ಎಲ್ಲಾ ಗೊತ್ತಿದ್ದೂ ಅವರ ಬಗ್ಗೆ ನೀವು ಅಭಿಮಾನ ಇಟ್ಟುಕೊಂಡಿದ್ದೀರ. ಒಳ್ಳೆಯದು. ನಿಮ್ಮದು ಯಾವುದೇ ರಾಜಕೀಯ ಹಿತಾಸಕ್ತಿ ಇಲ್ಲದ ಅಭಿಮಾನ. ಆದರೆ ಎಲ್ಲರೂ ಹೀಗೆ ಇರ್ತಾರೆ ಎಂದು ಹೇಳೋದಕ್ಕೆ ಆಗೋಲ್ಲ. ಇಂತಹವರನ್ನು ಬಿಜೆಪಿಗಳು ಹೈಜಾಕ್ ಮಾಡಿಕೊಂಡಿದ್ದಾರೆ. ತಮಗೆ ಬೇಕಾದ ವ್ಯಾಖ್ಯಾನಗಳಿಗೆ ಬಳಸಿಕೊಂಡಿದ್ದಾರೆ ಇಂತಹ ಸಂದರ್ಭಗಳಲ್ಲಿ ಸತ್ಯ, ಸುಳ್ಳು, ಇರೋದು ಇಲ್ಲದೇ ಇರೋದು ಎಲ್ಲ ಬೆರೆತುಕೊಳ್ಳುತ್ತೆ. ವಿವೇಕಾನಂದ ಅವರಂತಹ ಎಲ್ಲರ ಜೊತೆ ಬೆರೆತುಕೊಳ್ಳುವ ಮನುಷ್ಯ ಕೂಡ ಮಡಿವಂತನಾಗಿ ಬದಲಿಸಲಾಗುತ್ತದೆ. 2 ಸೀಟು ಇದ್ದ ಬಿಜೆಪಿ ರಾಮನ ಹೆಸರು ಮುಂದಿಟ್ಟುಕೊಂಡು ಗಳಿಸಿದ ಬಲವನ್ನು ಗಮನಿಸಿದರೆ ಈ ದೇಶದಲ್ಲಿ ಅಪೊಲಿಟಿಕಲ್ ಆಗಿರೋದು ಯಾವುದೇ ಇಲ್ಲ ಅನ್ನಿಸುತ್ತೆ. ಶುದ್ಧಾಂಗ ಮನುಷ್ಯನಾಗಿ ವಿವೇಕಾನಂದ ಹೇಗಿದ್ದರು ಅನ್ನೋದನ್ನು ದಿನೇಶ್ ಹೇಳಿದ್ದಾರೆ. ನೀವೂ ಕೂಡ ಅವರ ಮಾತುಗಳನ್ನೇ ಹೇಳಿದ್ದೀರಿ. ಮಧ್ಯಮವರ್ಗದ ಸದಾಶಯ, ಸದ್ಭಾವನೆಗಳ ಮೂಲಕ ಇಂತಹ ವಿಷಯಗಳನ್ನು ವಿಶ್ಲೇಷಿಸಲು ಆಗೋದಿಲ್ಲ ಅಲ್ಲವೇ ಚೇತನಕ್ಕ ?

 6. ಇಡೀ ಪ್ರತಿಕ್ರಿಯೆಯಲ್ಲಿ ನಮ್ಮ ಎಂದು ಬಳಸಿರುವ ಪದ ಯಾರನ್ನು ಸಂಬೋಧಿಸುತ್ತದೆ?
  ದಿನೇಶ್ ಆ ಧಾಟಿಯ ಬರಹವನ್ನು ಬರೆದಿರುವುದು ವಿವೇಕಾನಂದರನ್ನು ಹಿಂದುತ್ವ ರಾಜಕೀಯದ ‘ಐಕನ್’ ಮಾಡಿಕೊಂಡಿರುವ ಹಾಗೂ ಮಾಡಲು ಯತ್ನಿಸುತ್ತಿರುವ ಎಲಿಮೆಂಟುಗಳನ್ನು ಉದ್ದೇಶಿಸಿ. ನೀವು ಆ ಬಗೆಯಲ್ಲಿ ವಿವೇಕಾನಂದರನ್ನು ಐಕನ್ ಮಾಡಿಕೊಂಡಿಲ್ಲವಾದ್ದರಿಂದ ಈ ಪ್ರತಿಕ್ರಿಯೆಯ ಅಗತ್ಯವಿರಲಿಲ್ಲ. ದಿನೇಶ್ ಗಾಬರಿ ಬಿದ್ದು ಬರೆದ ಹಾಗೆ ಅವರ ಲೇಖನ ಕಾಣದೆ ಅವರು ನೀಡಿರುವ ಮಾಹಿತಿಯಿಂದ ವಿವೇಕಾನಂದರ ವ್ಯಕ್ತಿತ್ವಕ್ಕೇನೋ ಹಾನಿಯಾಯಿತು ಎಂಬಂತಿರುವ ನಿಮ್ಮ ಪ್ರತಿಕ್ರಿಯೆಯೇ ಗಾಬರಿಯಿಂದ ಕೂಡಿರುವಂತಿದೆ.

 7. ದಿನೇಶ ಅವರ ಲೇಖನ ಒಂಥರಾ ನಿಂದಾಸ್ತುತಿ ಇದ್ದಂತಿದೆ. ನದಿ ಮೂಲ, ಋಷಿ ಮೂಲ ಹುಡುಕಬಾರದಂತೆ! ಗ್ರೇಟ್ ಅನ್ನೋದಕ್ಕೆ ಆರಾಧನೆಯೇ ಬೇಕಿಲ್ಲ. ಮಾರಮ್ಮನ ಪೂಜಾರಿ ಬಳಸುವ ಬಯ್ಗಳದ ಪದಗಳಂತೆ ಇದೂ ಸಲ್ಲುತ್ತವೆ. ಮೆರವಣಿಗೆ ಬೇಕಿಲ್ಲ. ಯಥಾರ್ಥ ಜ್ಞಾನ ಇದ್ದರಷ್ಟೇ ಸಾಕು.

 8. ಸಂಪಾದಕೀಯ ದಲ್ಲಿ ಈ ವಿಶಯ ಬರುವವರೆಗು ನಮ್ಮ ಮನದಲ್ಲಿ ಇದ್ದ ವಿವೇಕನಂದರ ಸ್ವರೂಪವೆ ಬೇರೆ ಇತ್ತು. ಆದರೆ ಇದನ್ನು ಓದಿದ ನಂತರ ಅವರ ಮೇಲೆ ಇದ್ದ ಗೌರವ ನೂರ್ಮಡಿಯಾಯಿತು. ಅಂತಹದ್ದರಲ್ಲಿ ದಿನೇಶ್ ಅಮೀನ್ಮಟ್ಟು ರವರು ಬರೆದ ಲೇಖನದಲ್ಲಿ ಹುಳುಕು ಕಾಣುವ ವ್ಯರ್ಥ ಪ್ರಯತ್ನ ಬೇಡ. ಅಂದ ಹಾಗೆ ದಿನೇಶರ ಲೇಖನದ ಅರ್ಥವನ್ನೆ ನೀವು ಸಹ ಹೇಳಿದ್ದೀರಿ. ಇದರಲ್ಲಿ ಸತ್ಯವನ್ನು ತಿಳಿಸಿದವರು ಅವರೆ ಮೊದಲಿಗರು. ಇಲ್ಲವೆಂದರೆ ವಿವೇಕಾನಂದರು ಒಬ್ಬ ಮಾಮೂಲಿ ಸ್ವಾಮಿಜಿಯಾಗಿ ನಮ್ಮ ಮನದಲ್ಲಿ ಕಳೆದುಹೋಗುತಿದ್ದರು.

 9. ಎಲ್ಲರಿಗೂ ಧನ್ಯವಾದ
  ಕೆಲಕೆಲವು ಮಾತ್ರ ಕೆಲವರಿಗೆ ಅರ್ಥವಾಗುತ್ತೆ, ಅಪಾರ್ಥವಾಗುತ್ತೆ.
  ಯಾರೂ ಹೊರತಲ್ಲ, ನಾನೂ ಕೂಡ.
  ಎಲ್ಲರ ಪ್ರತಿಕ್ರಿಯೆಯನ್ನು ಗೌರವಿಸ್ತೀನಿ, ಒಪ್ಪಿಕೊಳ್ಳಬೇಕು ಅಂತೇನಿಲ್ಲ; ನಿಮಗೂ ಆ ಸ್ವಾತಂತ್ರ್ಯ ಇರುವ ಹಾಗೇನೇ.
  ಕೋಟ್ಯಂತರ ಜನ ಸ್ವಾಮೀಜಿಯನ್ನ ರಾಜಕೀಯೇತರವಾಗಿ ನೆಚ್ಚಿಕೊಂಡು ಪ್ರೀತಿಸೋರಿದ್ದಾರೆ. ಮತ್ತೊಬ್ಬರು ಎತ್ತಿ ಹೇಳುವ ತನಕ ನಮಗೆ ನಾವು ಪ್ತೀತಿಸುವ ವ್ಯಕ್ತಿಯ ಇತಿವೃತ್ತಗಳು ಬೇಕಾಗೇ ಇರೋದಿಲ್ಲ. ಅನಗತ್ಯವಾಗಿ ಕೊಂಕುಭಾಷೆ ಹೊಂದಿದ್ದ ಲೇಖನಕ್ಕೆ ನನ್ನ ಫಿಲ್ಟರ್ ಇಲ್ಲದ ಪ್ರತಿಕ್ರಿಯೆ ಇದು. ಇದರೊಳಗಿನ ‘ನಾವು’- ವಿವೇಕಾನಂದರ ಪ್ರೇಮಿಗಳು.
  ಅಷ್ಟೇ.
  ಪ್ರೀತಿಯಿರಲಿ.
  ಚೆ

 10. ದಿನೇಶ್ ಬರೆದಿದ್ದು ಕೇವಲ ವಿವೇಕಾನಂದರನ್ನು ಹೀಗಳೆದು ಅವರ ಬಗ್ಗೆ ಜನರಲ್ಲಿ ಕೀಳು ಅಭಿಪ್ರಾಯ ಬರಲಿ ಎಂಬ ಉದ್ದೇಶವಿಟ್ಟುಕೊಂಡು.
  ವ್ಯಕ್ತಿಯೊಬ್ಬ ತಾನು ಎಷ್ಟರ ಮಟ್ಟಿಗೆ ಕೀಳಾಗಬಲ್ಲೆ ಎಂಬುದು ಆತ ಸಾಧಕರ ಬಗ್ಗೆ ಹೀಗಳೆದು ಜರೆದು ಬರೆದಾಗಲೆ ತಿಳಿಯುತ್ತದೆ. ವಿವೇಕಾನಂದರು ಚಿಕನ್ ತಿಂದರು, ಅವರು ಶೂದ್ರರಾಗಿದ್ದರು ಎಂದು ಏಸಿ ರೂಮ್ನಲ್ಲಿ ಕೂತು ಪದೇ ಬರೆಯುವುದರಿಂದ ಏನನ್ನೂ ಸಾಧಿಸಿದಂತಾಗುವುದಿಲ್ಲ. ಅವರನ್ನು ಜಾತಿಯ ಕಣ್ಣಲ್ಲಿ ನೋಡಹೋದರೆ ಬ್ರಾಹ್ಮಣರು ಕೂಡ ಗೌರವಿಸುತ್ತಾರೆ ಎಂಬುದು ತಿಳಿದಿರಲಿ. ಅವರಂತೆ ದೇಶದ ಬಗ್ಗೆ ಚಿಂತನೆ ಮಾಡಿ ಬೇರೆ ದೇಶಗಳಲ್ಲಿ ಹೋಗಿ ಭಾರತದ ಬಗ್ಗೆ, ಇಲ್ಲಿಯ ಭವ್ಯ ಪರಂಪರೆಗಳ ಬಗ್ಗೆ, ಇಲ್ಲಿಯ ಸಹಜೀವನದ ಬಗ್ಗೆ ಗೌರವವನ್ನುಂಟು ಮಾಡುವುದೂ ಕೂಡ ಒಂದು ಸಾಧನೆ. ಸಣ್ಣ ಪ್ರಾಯದಲ್ಲೆ ಅಷ್ತೊಂದು ಅಧ್ಯಯನ ಮಾಡಿ ಅಸಾಧಾರಣ ಪ್ರತಿಭೆ ಮೆರೆದರವರರು. ಶಾಲೆಯಲ್ಲಿ ಕಲಿಸುವ ಪುಸ್ತಕದ ಬದನೆಕಾಯಿ ಓದದಿದ್ದರೆ ಹೆಡ್ಡ ಎಂದು ಬ್ರಾಂಡ್ ಮಾಡುವ ದಿನೇಶ್ ಇನ್ನೂ ಕೂಡ ಚಿಕ್ಕ ಮಕ್ಕಳಂತೆ ಇತರರ ಬಗ್ಗೆ ಹೀಗಳೆದು ಬರೆಯುವುದು ಬಿಟ್ಟು ತಮ್ಮ ವಯಸ್ಸಿಗೆ ತಕ್ಕ ಹಾಗೆ ವರ್ತಿಸುವುದು ಕಲಿತರೆ ಅವರ ಬಗ್ಗೆ ಜನರಲ್ಲಿ ಗೌರವ ಮೂಡುವುದು.

 11. Very good article.

  everyone will have their own past. We don’t have to pick up wrong things from their life and investigate it. Its better to pickup good things,their achievements and contributions towards society. Since youths are too sensitive ,please don’t highlight false/wrong/personal things about any youth icon and mislead them. No one is perfect. We should at least respect their effort towards perfectionism

 12. ವೆಂಕಟೇಶ್ ಮತ್ತು ನಟೇಶ್ ಅವರು ಗಮನಿಸಬೇಕಾದ ವಿಷಯ ಅಂದ್ರೆ, ವಿವೇಕಾನಂದರ ಚಿಂತನೆಗಳನ್ನು ಅರ್ಥಿಸಿಕೊಂಡ ಯಾವುದೇ ಮನುಷ್ಯನನ್ನು ಯಾರು ಕೂಡ ಹೈಜಾಕ್ ಮಾಡಲಾರರು ಅಷ್ಟೊಂದು ಪ್ರಭಲ ಚಿಂತನೆ ಅವರದು . ಗೋ ಮಾಂಸದ ಬಗ್ಗೆ ,ಭಗವದ್ಗೀತೆಯ ಬಗ್ಗೆ, ರಾಮ, ಕೃಷ್ಣ, ಬುದ್ಧ, ಸ್ವಾತಂತ್ರ, ಮತಾತಂರ, ಮುಸ್ಲಿಂ ಧರ್ಮ, ಕ್ರಿಸ್ತ ಧರ್ಮ, ಹಿಂಸೆ, ಅಹಿಂಸೆ ಬಹುಶ ಅವರು ವ್ಯಾಖಿನಿಸದ ವಿಷಯವೇ ಇಲ್ಲ ಅನಬಹುದು. ಹಿಂದೂ ಧರ್ಮದ ಬಗ್ಗೆ ಅತಿ ಹೆಚ್ಚು ಟೀಕೆ ಮಾಡಿದ ಹಿಂದೂ ಸನ್ಯಾಸಿ ಅವರೇ. ಹಿಂದೂ ಎಂಬುದು ಒಂದು ಧರ್ಮವಲ್ಲ ಅದು ಒಂದು ಸಂಸ್ಕೃತಿ ಎಂದವರು ಅವರು . ನಿಮ್ಮಲ್ಲಿ ಪ್ರಾರ್ಥಿಸುವುದು ಏನೆಂದರೆ ವಿವೇಕಾನಂದರು ಬರೆದ ಪುಸ್ತಕಗಳನ್ನು ಓದಿ ಅವರ ವೈಚಾರಿಕತೆಯಲ್ಲಿ ತಪ್ಪಿದ್ದರೆ ಚರ್ಚೆ ಮಾಡೋಣ. ಅದನ್ನ ಬಿಟ್ಟು ಬಿಜೆಪಿ ಯಾ ಮೇಲಿನ ಸಿಟ್ಟಿಗೂ, ಹಿಂದೂ ಧರ್ಮದ ಬಗ್ಗೆಗಿನ ತಾತ್ಸರಕ್ಕೋ ವಿವೇಕಾನಂದರನ್ನ ಟೀಕಿಸಬೇಡಿ. ಅವರನ್ನ ಯಾರು ಕೂಡ ದೈವಿಕರಿಸಿಲ್ಲ ಸ್ವತಹ ಅವರು ಕೂಡ ನಾನು ದೇವರು ಎಂದು ಹೇಳಿಕೊಳ್ಳಲಿಲ್ಲ . ನಿಮಂಥ ಸಾವಿರ ಜನ ಟೀಕಿಸಿದರು ಅವರ ಬಗೆಗಿನ ಅಭಿಮಾನ ಎಂದಿಂಗು ಕಮ್ಮಿಯಾಗುವುದಿಲ್ಲ. ಬದುಕ್ಕಿದ್ದು ೩೯ ವರ್ಷವಾದರೂ ಅವರ ವ್ಯಕ್ತಿತ್ವಕ್ಕೆ ೧೫೦ ರ ಸಂಬ್ರಮ. ನೀವು ಸತ್ತರೆ ನಿಮ್ಮನ್ನು ಜನ ಎಷ್ಟು ವರ್ಷ ನೆನಪಿದಬಹುದು ಎಂದು ಕಲ್ಪಿಸಿಕೊಳ್ಳಿ ಆಗ ಅವರ ಮೇರು ವ್ಯಕ್ತಿತ್ವ ಅರಿವಾಗುವುದು

 13. “ayam mE hatO bhagavAn ayam mE bhagavattaraH”
  One one hand am God, nay, on another hand am capable of becoming even greater

  Thus says Upanishads …

  Swamiji was one such soul who echoed this message all his life, lived this life.
  How will a creature like Dinesh Aminamattu who is willfully sleeping even comprehend Swamiji ?

  But this rejoinder is necessary, such self styled “Paid” Intellectuals who dance to the tunes of larger schemes of Western world where they do nto want the 150th Years Swami Vivekananda wave to douse the Christian Missionary activity, so naturally they want to keep their breeding ground ..

  The ignored, less educated poor segment away from Swami Vivekananda’s messages and Ideas …

  Hence this paid article in PrajavaNi.

  Smoe 28 years back Decccan Herald/PrajavaNi had published an article which contained some content that was objectionable to One Section of society (you guessed it right) , the next day 100 of them went to Prajavani press, burnt 4 printers which are too expensive ….
  End of Story, they never, never, never again let slip any such article.

  We, Hindus are not THEM you see, we will be civilized and cultured as we have been for over 10 millennia, we shall give intellectual and strategic rejoinders.

  I call upon all readers to renounce PrajavaNi/Deccan Herald.

 14. well said Mr. Sumanth Sharma, i agree with each and every letter of your comment, you have just spoken my words. we have been testing our patience from years…… atleast now we need to awake, arise as Swamiji has given call………
  who should be considered cultured here is the main question! no body can dare to stand next to Swami Vevekananda ji. just because of some article, one cannot change the feelings of one’s heart. any how feeling great for all the comments thanks every body special thanks to Chethana……

 15. Really it is interesting article. It has many dimensions. The online response received to this article in many blogs, facebook posts and through twitter is amazing. Dinesh Amin has brought the issue of intimate portrait of the little-known aspects of Swami Vivekananda’s life to Kannadigas from the over a lakh copies sold original Bengali book which is published in English as The Monk as Man by Sankar.
  The analysis has unveiled the brand icon who is supposed to promote certain brand ideology to its loyal brand followers. It says the simple truth that don’t believe that brand ambassador of Santro car, Shahrukh Khan travels by it. But Shahrukh helps to sell Santro cars!

 16. ಅಮೀನಮಟ್ಟು ಅವರ ಲೇಖನದಲ್ಲಿ ನನಗೆ ಯಾವ ಕೊಂಕು ಕಾಣಲಿಲ್ಲ . ಈ ಲೇಖನ ಓದಿದ ನಂತರ ನನಗೆ ವಿವೇಕಾನಂದರು ಇನ್ನಸ್ಟು ಆಪ್ತರಾದರು. ಅಪ್ಪಟ ಮನುಷ್ಯರಂತೆ ಕಂಡರು. ವಾಲ್ಮೀಕಿ ಋಷಿ ಪರಂಪರೆಯ ಮುಂದುವರಿಕೆಯಂತೆ ಕಂಡರು . ಮನುಷ್ಯ ತಲ್ಲಣಗಳನ್ನು ಅರಿತು ಸಹನೆ, ಪ್ರೇಮ ಮತ್ತು ಪ್ರಾಮಾಣಿಕತೆಯಿಂದ ವರ್ತಿಸಿದ ವಿವೇಕಾನಂದರನ್ನು veera , ಶೂರ, ಧೀರ ಎಂದೆಲ್ಲ ಅರಚುತ್ತ ಭಾಷಣ ಮಾಡುತ್ತಿದ್ದವರಿಗಿಂತ ಅಪ್ಪಟ ಮಾನವೀಯತೆಯ ಅನ್ಥಕರಣದ ವ್ಯಕ್ತಿಯಾಗಿ ಅವರನ್ನು ಚಿತ್ರಿಸಿದ ಈ ಬರಹ ನನ್ನಂತೆ ಹಲವರಲ್ಲಿ ವಿವೇಕಾನಂದರ ಬಗ್ಗೆ ಮತ್ತಷ್ಟು ಗೌರವ ಹೊಂದಲು ಪ್ರೇರೇಪಿಸುತ್ತದೆ ಎಂದು ನಾನು ನಂಬಿದ್ದೇನೆ

 17. ಬಹಳ ಚೆನ್ನಾಗಿ ಲೇಖಕನ ಮುಖಕ್ಕೆ ಹೊಡೆದ ಹಾಗೆ ಬರೆದಿದ್ದೀರಾ ಚೇತನಾ ಅಕ್ಕ. ಇಲ್ಲದ ಸಲ್ಲದ ವಿಷಯಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸ್ವಾಮೀಜಿಯವರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದ ಪ್ರಜಾವಾಣಿ ಪತ್ರಿಕೆ ಹಾಗೂ ಲೇಖಕರ ವಿರುಧ್ಧ ಯುವಕರು ಹೋರಾಡಲೇ ಬೇಕು. ನಾವಂತೂ ಹೋರಾಡಲು ಸಿಧ್ಧ.

 18. ತು೦ಬಾ ಚನ್ನಾಗಿದೆ ಲೇಖನ…ಪ್ರಜಾವಾಣಿಯ ’ಅಮೀನಮಟ್ಟು’ ವಿನ ಲೇಖನ ವಿವೇಕಾನ೦ದರ ಚಾರಿತ್ರ್ಯದ ಬಗ್ಗೆ ವಕೀಲರ ನೋಟೀಸ್ ಇದ್ದಹಾಗೆ ಆದರೆ..ಅದ್ಕ್ಕೆ ತಕ್ಕ೦ತೆ ಮುಟ್ಟಿನೋಡ್ಕೋಳ್ಳುವ೦ತೆ ಉತ್ತರಿಸಿದ್ದೀರಿ….ಹೌದು ಅಭಿವ್ಯಕ್ತಿ ಸ್ವಾ’ಅತ೦ತ್ರ’ ದ ಹೆಸರಿನಲ್ಲಿ (edited) ಪ್ರಕಟಿಸುವ ಮೊದಲು ಪತ್ರಿಕೆಯವರಿಗಾದರೂ ಅರಿವಿರಬಾರದೆ…..!!!!!!
  ಛೇ…..ಥೂ…ಇವರಿಗೊ೦ದು ನಮ್ಮ ಧಿಕ್ಕಾರವಿರಲಿ.

 19. ಬರವಣಿಗೆಯೆಂದರೆ ಹೀಗಿರಬೇಕು… ವಿವೇಕಾನಂದರ ಕುರಿತ ನಾನು ಮರೆಯದೆ ಇರುವ ಲೇಖನ ಮೂರು. ಒಂದು ಲಂಕೇಶ್ ಬರೆದದ್ದು, ಇನ್ನೊಂದು ದಿನೇಶ್ ಅಮ್ಮಿನಮಟ್ಟು ಬರೆದದ್ದು, ಮತ್ತೊಂದು ಕೆಲವು ತಕರಾರುಗಳೊಂದಿಗೆ ಈ ನಿಮ್ಮ ಲೇಖನ. ಒಂದು ಆರೋಗ್ಯಕರ ಚಚೆ೵ಯ ವಿನ್ಯಾಸಗಳು ಹೀಗೆಯೇ ಇರಬೇಕು… ತಾವು ಕಂಡು ಕೊಂಡ ಸತ್ಯಗಳ ಮತ್ತೊಬ್ಬರಿಗೆ ದಾಟಿಸುವ ತಾಕತ್ತಿನೊಂದಿಗೆ. ನಿಮ್ಮ ಚಿಂತನೆಯ ಹಿಂದಿನ ಶ್ರಮ, ಆಸಕ್ತಿ, ಪ್ರತಿಭೆಗೆ ಗ್ರೇಟ್ ಅನ್ನಲೇಬೇಕು… ತಾತ್ವಿಕತೆ ಯಾವುದೇ ಆಗಿದ್ದರೂ. ಈ ಲೇಖನ ತುಂಬ ಭಿನ್ನವಾಗಿದೆ. ದಿನೇಶ್ ರನ್ನು ವಿರೋಧಿಸಬೇಕೆನ್ನುವ ನಿಮ್ಮ ಮನೋಧೋರಣೆಗೆ ವಿರುದ್ಧವಾಗಿ ಇದು ಅವರನ್ನೇ ಬಹಳ ಸೋಜಿಗದ ರೀತಿಯಲ್ಲಿ ಬೆಂಬಲಿಸಿದೆ. ವಿವೇಕಾನಂದರನ್ನು ಸ್ಥಾವರಗೊಳಿಸಿ ದೇವರನ್ನಾಗಿ ಮಾಡಿಕೊಂಡವರು ನಿಮ್ಮ ವಿರುದ್ಧವೇ ತಿರುಗಿ ಬೀಳಬೇಕು ಅದು ನ್ಯಾಯ..

 20. “ವಿವೇಕಾನಂದರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ” ಅಂತ ಬೇಸರ ಮಾಡಿಕೊಳ್ಳುವವರಿಗೆ,ದೇಶ ಭಕ್ತಿಯನ್ನ ತಾವಾಗೇ ಒಂದು ಗುಂಪಿಗೆ ಗುತ್ತಿಗೆ ನೀಡಿ, ಉಗ್ರ ಹಿಂದುತ್ವ ಪ್ರತಿಪಾದಕರು ಅಂತ ಹೇಳುವ ಗುಂಪನ್ನ ಗುರಿಯಾಗಿರಿಸಿಕೊಳ್ಳಬೇಕಿದ್ದರೇ ಅವರ ಮೇಲೆಯೇ ನೇರಾ ನೇರ ಬರೆಯಬಹುದಿತ್ತಲ್ಲ.ಅದಕ್ಕೆ ವಿವೇಕಾನಂದರ ಹಿಂದೆ ಅವಿತುಕೂರಬೇಕಿತ್ತಾ!?

  http://wp.me/p14FzR-1cE

 21. Good article. Very nicely put up.. Hats off to you. Dinesh had no sense of what he wanted to write. It was such a cheap article. The cover up article that he wrote later should have been present at the first instance itself. What the article showed is the author’s erratic language and minimal understanding of what he is writing about. I heard he is the sub editor of Prajavani!. He doesnt have insights and is unfit to write on great men. He should know that writing on Swami Vivekananda is not as easy as writing about Politicians. What wonderful things he could have done by writing one detailed contribution of Swami Vivekananda instead he chose to make himself a fool and an object of contempt

 22. Well said sumanth. Satya shodaneya hesarinalli intaha huluku lekhana prakatisuvudu prabuddhara lakshana khandita alla.

  ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು.

  This last sentence can not hide his ill intentions of the article.

  `ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್‌ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.

  Swamiji is really great. This says how he respects even a ಯಃಕಶ್ಚಿತ್ human being who taught ” Be kind ” to mankind.

  Dinesh’s paid article has been wisely written to convey his bad intentions in diplomatic way, at the same time having the lines that “seem” to hide/defend those intentions. God knows.

  Great people see good in others and bad in himself. Dinesh Article is just opposite and so is he.
  May god bless him.

 23. Hinduism is not just a religion, it’s a way of life”‘ (ಹಿಂದುತ್ವವೆಂಬುದು ಒಂದು ಧರ್ಮ ಮಾತ್ರವಲ್ಲ, ಜೀವನ ವಿಧಾನವೂ ಹೌದು) ಎಂದು ಜಗತ್ತಿಗೆ ಹೇಳಿದ್ದು, ಮನವರಿಕೆ ಮಾಡಿಕೊಟ್ಟಿದ್ದೂ ವಿವೇಕಾನಂದ ಅವರೇ. ಭಾರತದಲ್ಲಿ ಇಷ್ಟೆಲ್ಲಾ ಅಲ್ಪಸಂಖ್ಯಾತರನ್ನು ಕಾಣಲು ಹಿಂದೂಗಳು ಬಹುಸಂಖ್ಯಾತರಾಗಿರುವುದೇ ಕಾರಣ. ಹಿಂದೂಯಿಸಂ ಎಂಬುದು ಧರ್ಮಮಾತ್ರವಲ್ಲ, ಅದೊಂದು ಸ್ಪಿರಿಚ್ಯುಯಾಲಿಟಿ ಎಂದವರು ಅವರು. ಸ್ಪಿರಿಚ್ಯುಯೆಲ್ ಅಂದರೆ ತನ್ನ ಹಿತವೇ ಮುಖ್ಯ ಎಂಬ ಆಲೋಚನೆ ಬಿಟ್ಟು ಇತರರ ಶ್ರೇಯೋಭಿವೃದ್ಧಿಯ ಬಗ್ಗೆಯೂ ಯೋಚಿಸಬೇಕು ಎಂಬುದು. ಅವತ್ತು ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತೀಯತೆ, ಹಿಂದೂ ಧರ್ಮದ ಹಿರಿಮೆ, ಸಹಿಷ್ಣುತೆ ಬಗ್ಗೆ ವಿವೇಕಾನಂದರು ಆಡಿದ ಮಾತುಗಳನ್ನು ಕೇಳಿದ ಅಮೆರಿಕದ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್್’ ಪತ್ರಿಕೆ ತನ್ನ ಮರುದಿನದ ಆವೃತ್ತಿಯಲ್ಲಿ “Church should be ashamed for sending its preachers to India…” ಎಂದು ಬರೆದಿತ್ತು!!
  ಹಾಗಾದರೆ ಸ್ವಾತಂತ್ರ್ಯ ಚಳವಳಿಗೆ ವಿವೇಕಾನಂದರ ಕೊಡುಗೆಯೇನು? ಹಾಗೆಂದು ಕೇಳಿದರೆ ನೇರವಾಗಿ ಅವರು ಭಾಗಿಯಾಗದಿದ್ದರೂ ಸ್ವಾತಂತ್ರ್ಯ ಹೋರಾಟಗಾರರಾದ ಸುಭಾಷ್್ಚಂದ್ರ ಬೋಸ್, ಚಂದ್ರಶೇಖರ್ ಆಜಾದ್, ಭಗತ್್ಸಿಂಗ್ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು. ಈ ದೇಶದ ಮೇರು ನಾಯಕ ಮಹಾತ್ಮ ಗಾಂಧೀಜಿಯವರು, ‘ನಾನು ವಿವೇಕಾನಂದರ ಚಿಂತನೆ ಹಾಗೂ ವಿಚಾರಧಾರೆಯನ್ನು ಆಮೂಲಾಗ್ರವಾಗಿ ಓದಿದ್ದೇನೆ. ಹಾಗೆ ಓದಿದ ಮೇಲೆ ನನ್ನಲ್ಲಿದ್ದ ರಾಷ್ಟ್ರಪ್ರೇಮ ಸಹಸ್ರ ಪಟ್ಟು ಹೆಚ್ಚಾಯಿತು’ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, If Gandhiji is the father of the nation, then Vivekananda is the grandfather of the nationಿ ಎಂದು ಹೇಳಬಹುದಲ್ಲವೇ?!
  ಒಂದು ಸಲ ಸ್ವಾಮಿ ವಿವೇಕಾನಂದರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಎದುರಲ್ಲೇ ಇಬ್ಬರು ಫಿರಂಗಿಗಳು ಕುಳಿತಿರುತ್ತಾರೆ. ಅವರು ಸನ್ಯಾಸಿ ವಿವೇಕಾನಂದರನ್ನು ಕಂಡು ಗೇಲಿ ಮಾಡಲಾರಂಭಿಸುತ್ತಾರೆ, ಆವರಿಗೆ ಇಂಗ್ಲಿಷ್ ಬರುವುದಿಲ್ಲ ಎಂಬುದು ಅವರ ಊಹೆಯಾಗಿರುತ್ತದೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಮುಂದಿನ ನಿಲ್ದಾಣದಲ್ಲಿ ವಿವೇಕಾನಂದರನ್ನು ಬಲ್ಲವರೊಬ್ಬರು ರೈಲು ಹತ್ತುತ್ತಾರೆ, ಅವರೊಂದಿಗೆ ವಿವೇಕಾನಂದರು ಬಹಳ ಸೊಗಸಾಗಿ ಇಂಗ್ಲಿಷ್್ನಲ್ಲಿ ಮಾತನಾಡುವುದನ್ನು ಕಂಡು ದಂಗುಬಡಿದಂತಾದ ಫಿರಂಗಿಗಳಲ್ಲಿ ಒಬ್ಬ ವಿವೇಕಾನಂದರ ಬಳಿಗೆ ಬಂದು, ‘ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂಬ ಕಾರಣಕ್ಕೆ ಏನೆಲ್ಲ ಮಾತನಾಡಿದೆವು. ಆದರೆ ನೀವೇಕೆ ಪ್ರತಿಕ್ರಿಯಿಸಲೂ ಇಲ್ಲ, ಕೋಪಿಸಿಕೊಳ್ಳಲೂ ಇಲ್ಲ’ ಎಂದು ಪ್ರಶ್ನಿಸುತ್ತಾನೆ. ಅಗ ವಿವೇಕಾನಂದರು ಹೇಳುತ್ತಾರೆ-’ನಾನು ಮೂರ್ಖರನ್ನು ನೋಡುತ್ತಿರುವುದು ಇದೇ ಮೊದಲಲ್ಲ’!
  ಹಾಗಂತ ವಿವೇಕಾನಂದರು ಎಲ್ಲ ಸಂದರ್ಭಗಳಲ್ಲೂ ಸುಮ್ಮನಿರುತ್ತಿದ್ದರು ಎಂದು ಭಾವಿಸಬೇಡಿ!
  ವಿಶ್ವಧರ್ಮ ಸಮ್ಮೇಳನ ಮುಗಿಸಿ ಸ್ವಾಮಿ ವಿವೇಕಾನಂದರು ಹಡಗಿನಲ್ಲಿ ವಾಪಸ್ಸಾಗುತ್ತಿರುತ್ತಾರೆ. ಅದೇ ಹಡಗಿನಲ್ಲಿ ಇಬ್ಬರು ಪಾದ್ರಿಗಳು ಮತಾಂತರ ಮಾಡಲು ಭಾರತಕ್ಕೆ ಆಗಮಿಸುತ್ತಿರುತ್ತಾರೆ. ವಿವೇಕಾನಂದರನ್ನು ಕಂಡ ಅವರು ಬಹಳ ಕೀಳಾಗಿ ಮಾತನಾಡಲು, ನಿಂದಿಸಲು ಆರಂಭಿಸುತ್ತಾರೆ. ವಿವೇಕಾನಂದರು ಏನೂ ಮಾತನಾಡುವುದಿಲ್ಲ. ಕೊನೆಗೆ ಪಾದ್ರಿಗಳು ಹಿಂದು ಧರ್ಮವನ್ನು, ಭಾರತವನ್ನು, ಭಾರತೀಯರನ್ನು ನಿಂದಿಸಲು ಆರಂಭಿಸುತ್ತಾರೆ. ಅದುವರೆಗೂ ಸುಮ್ಮನಿದ್ದ ದೃಢಕಾಯರಾದ ವಿವೇಕಾನಂದರು ಕುಪಿತಗೊಂಡು ಪಾದ್ರಿಗಳಿಬ್ಬರ ಕುತ್ತಿಗೆ ಪಟ್ಟಿ ಹಿಡಿದೆಳೆದು, ‘ಭಾರತ ಹಾಗೂ ಭಾರತೀಯರ ಬಗ್ಗೆ ಇನ್ನೊಂದು ಕೆಟ್ಟ ಮಾತನಾಡಿದರೆ ಸಮುದ್ರಕ್ಕೆಸೆಯುತ್ತೇನೆ’ ಎನ್ನುತ್ತಾರೆ. ಅವಕ್ಕಾದ ಪಾದ್ರಿಗಳು ಬಾಯಿಮುಚ್ಚಿಕೊಳ್ಳುತ್ತಾರೆ. ಆದರೆ ಇದನ್ನು ಕಂಡು ವಿವೇಕಾನಂದರ ಶಿಷ್ಯಂದಿರಿಗೇ ಆಶ್ಚರ್ಯವಾಗುತ್ತದೆ ‘ನೀವೊಬ್ಬ ಸ್ವಾಮಿಯಾಗಿ ಈ ರೀತಿ ಕೋಪಿಸಿಕೊಳ್ಳುವುದು, ಹಿಂಸಿಸಲು ಹೋಗುವುದು ಸರಿಯೇ?’ ಎಂದು ಪ್ರಶ್ನಿಸುತ್ತಾರೆ. ಆಗ ವಿವೇಕಾನಂದರು ಉತ್ತರಿಸುವ ಬದಲು ಶಿಷ್ಯಂದಿರನ್ನೇ ಪ್ರಶ್ನಿಸುತ್ತಾರೆ- ‘ನಿಮ್ಮ ತಾಯಿಯನ್ನು ಯಾರಾದರೂ ಕೆಣಕಿದರೆ, ಅವಮಾನಿಸಿದರೆ ಸುಮ್ಮನಿರುತ್ತೀರಾ? ಹಾಗೆ ಭಾರತ ಮಾತೆ ಕೂಡ ನನ್ನ ತಾಯಿ, ಭಾರತೀಯರು ನನ್ನ ಬಂಧುಗಳು. ಅವರನ್ನ ನಿಂದಿಸಿದರೆ, ಅಪಮಾನಿಸಿದರೆ ಸುಮ್ಮನಿರುವುದಕ್ಕಾಗುತ್ತದಾ?’ ಎನ್ನುತ್ತಾರೆ. ಪೂಜಿಸುವುದು, ರಕ್ಷಿಸುವುದೇ ಅವರಿಗೆ ನಾವು ತೋರುವ ನಿಜವಾದ ಗೌರವ.

 24. ದಿನೇಶ್ ಅಮಿನಮಟ್ಟು ಅವರ ಲೇಖನದಲ್ಲಿ.. ಅವರು ವಿವೇಕಾನಂದರನ್ನು ಸುಳ್ಳಾಗಿ ವೈಭವೀಕರಿಸುವವರ ಬಗ್ಗೆ ಬರೆದಿದ್ದಾರೆ ಎಂದುಕೊಂಡಿದ್ದೇನೆ. ಮಾಂಸಾಹಾರ ಅಗತ್ಯವೆಂದ, ನಮ್ಮ ಸಂಸ್ಕೃತಿಯ ಸೊಗಡನ್ನೇ ಹೀರಿ ಬೆಳೆದ ಸನ್ಯಾಸಿಯನ್ನು ಅವಮಾನ ಮಾಡುವ ಯಾವ ಉದ್ದೇಶವೂ ನನಗೆ ದಿನೇಶ್ ಅಮಿನಮಟ್ಟು ಲೇಖನದಲ್ಲಿ ಕಾಣಲಿಲ್ಲ. ನನಗೆ ಕಂಡದ್ದು, ವಿವೇಕಾನಂದರನ್ನು ದೈವತ್ವಕ್ಕೇರಿಸುವ ಹಠ ಹಿಡಿದ ಮಹನೀಯರ ಅರ್ಥಹೀನ ಮನೋಭಾವದ ಬಗೆಗಿನ ಜಿಗುಪ್ಸೆಯಷ್ಟೆ, ಅದಕ್ಕುತ್ತರವಾಗಿರುವ ಈ ಲೇಖನ ಈ ಅಂಶವನ್ನೇ ಬಿಟ್ಟು ವಿವೇಕಾನಂದರ ವ್ಯಕ್ತಿತ್ವಕ್ಕೇ ಧಕ್ಕೆ ಬಂದಂತೆ ಮಾತನಾಡುತ್ತದೆ. ಅಷ್ಟಕ್ಕೂ ನಾವು ಚಾರ್ವಾಕರನ್ನೂ ದ್ರಷ್ಟಾರರೆಂದು ಒಪ್ಪಿಕೊಳ್ಳುವವರು. ಭಗವದ್ಗೀತೆಯನ್ನು ಭೋದಿಸಿದ ಕೃಷ್ಣನೂ “ಯಥೇಚ್ಚಸಿ ತಥಾ ಕುರು” ಎಂದೇ ಹೇಳಿದ್ದು.

  ಜಾತೀಯತೆಯನ್ನು ತೊಲಗಿಸಿದೆ, ಹಿಂದೂ ಧರ್ಮೋದ್ಧಾರಕ್ಕಾಗಿ ಮಾಡುವ ಯಾವ ಕೆಲಸವೂ ಸಫಲವಾಗದು, ಎನ್ನುವ ವಾದ ದಿನೇಶ್ ಅಮಿನಮಟ್ಟು ಲೇಖನದ ಸಾರಾಂಶ ಎನ್ನುವುದು ನನ್ನ ಅಭಿಮತ. ಜಾತಿ ಪದ್ದತಿಯ ಆಚರಣೆಯಷ್ಟೇ ಕೆಟ್ಟದ್ದು, ಮಾಂಸ ಭಕ್ಷಣೆ ಅನೈತಿಕವೆಂಬ ನಂಬಿಕೆ. ಇವನ್ನು ಬಿಡಬೇಕೆಂಬುದು ವಿವೇಕಾನಂದರ ಅಭಿಮತ. ಅದು ಇಂದು ನಡೆಯುತ್ತಿದೆಯೇ..?

 25. @ಚೇತನಾ ತೀರ್ಥಹಳ್ಳಿ.. ಅಕ್ಕಾ, ಸ್ವಾಮಿ ವಿವೇಕಾನಂದರು ಯಾವ ಕಾರಣಕ್ಕಾಗಿ ನಮ್ಮ ಐಕಾನ್ ಅಂತಾ ತುಂಬಾ ಅರ್ಥಗರ್ಭಿತವಾಗಿ ನಿರೂಪಿಸಿದ್ದೀರಿ, ಧನ್ಯವಾದಗಳು. ಆ ದಿವ್ಯ ಚೇತನಕ್ಕೆ ನನ್ನ ಅನಂತ ಪ್ರಣಾಮಗಳು.
  ಜೈ ಗುರುಮಹಾರಾಜ್॥

 26. ‘ ಮಾಂಸ ಭಕ್ಷಣೆ ಅನೈತಿಕವೆಂಬ ನಂಬಿಕೆ. ಇವನ್ನು ಬಿಡಬೇಕೆಂಬುದು ವಿವೇಕಾನಂದರ ಅಭಿಮತ’. ಇದು ನಮಗೆ ಹೊಸ ವಿಚಾರ. ಕಾಳಿಘಾಟ್ನನಲ್ಲಿ ಪ್ರದಿದಿನ ಪ್ರಾಣಿಯ ರಕ್ತವನ್ನು ಕಾಳಿಗೆ ಅರ್ಪಿಸಿ ಪ್ರಾಣಿಯ ಮಾಂಸವನ್ನು ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರಲ್ಲ? ಒರಿಸ್ಸಾ , ಬಂಗಾಳ ಅಸ್ಸಾಂ ಕಾಶ್ಮೀರ -ಮುಂತಾದ ರಾಜ್ಯಗಳ ಬ್ರಾಹ್ಮಣರು ಮಾಂಸಾಹಾರಿಗಳು. ಭಾರತಾದ್ಯಂತ ಮಾಂಸಾಹಾರಿಗಳ ಸಂಖ್ಯೆ ಸುಮಾರು 90% . ಬಹುಸಂಖ್ಯಾತರ ಅಹಾರ ಪದ್ಧತಿಯನ್ನು ಅನೈತಿಕ ಎನ್ನುವುದು ಎಷ್ಟು ಸರಿ.

  ದೀನೇಶ್ ಅಮೀನ್ಮಟ್ಟು ಅವರು ಶೂದ್ರ ಸ್ವಾಮಿಯ ಬದುಕನ್ನು ಪರಿಚಯಿಸಿದ್ದಾರೆ. ಆದರೆ ಹನುಮಂತನಿಗೂ ಜನಿವಾರ ತೊಡಿಸುವವರಿಗೆ, ಗೊಲ್ಲನೆಂದು ಗೊತ್ತಿದ್ದೂ ಕೃಷ್ಣನಿಗೆ ಜನಿವಾರ ತೊಡಿಸುವವರಿಗೆ, ರಾಮ ಸಮುದ್ರ ದಾಟಿ ಹೋಗಿದ್ದರೂ ಅವನ್ನು ಪೂಜಿಸುತ್ತಾ ಸಮುದ್ರವನ್ನು ವಿಮಾನದಲ್ಲಿ ಕುಳಿತು ದಾಟಿದ್ದ ಉಡುಪಿಯ ಮಠದ ಸ್ವಾಮಿಜೀಗೆ ಕೆಲವು ಹಕ್ಕುಗಳನ್ನು ನಿಷೇಧಿಸುವವರಿಗೆ -ವಿವೇಕಾನಂದರು ಸಾಮಾನ್ಯ ಮನುಷ್ಯರಾಗಿ ಹುಟ್ದ್ದುಅಸಮಾನ್ಯರಾಗಿ ರೂಪುಗೊಂಡುವರು ಎಂದು ತಿಳಿಯಲಿ. ಅವರಿಗೂ ಜನಿವಾರ ತೊಡಿಸುವುದು ಬೇಡ ಎಂಬ ಉದ್ದೇಶವೂ ಅಮೀನ್ಮಟ್ಟು ಅವರಲ್ಲಿ ಇದ್ದಿರಬಹುದು.

 27. Swami vivekanandaru obbba manshya, ok. adare Yesu kristanu namma nimmante obba manshyane, avana bagge bareyiri….., avanu matra devadoota, devaru hegaada…? nimmanta kelavaru avanannu kooda daivatvakke erisiddare astte….

  ಬಹಳ ಚೆನ್ನಾಗಿ ಲೇಖಕನ ಮುಖಕ್ಕೆ ಹೊಡೆದ ಹಾಗೆ ಬರೆದಿದ್ದೀರಾ ಚೇತನಾ ಅಕ್ಕ. ಇಲ್ಲದ ಸಲ್ಲದ ವಿಷಯಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸ್ವಾಮೀಜಿಯವರ ಮುಖಕ್ಕೆ ಮಸಿ ಬಳಿಯಲು ಯತ್ನಿಸಿದ್ದ ಪ್ರಜಾವಾಣಿ ಪತ್ರಿಕೆ ಹಾಗೂ ಲೇಖಕರ ವಿರುಧ್ಧ ಯುವಕರು ಹೋರಾಡಲೇ ಬೇಕು. ನಾವಂತೂ ಹೋರಾಡಲು ಸಿಧ್ಧ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: