ಆಗಾಗ ನನಗೆ ನಾನೊಬ್ಬ ಶಾಪಗ್ರಸ್ಥ ಕಿನ್ನರಿ ಅಂತ ಅನ್ನಿಸೋದಿದೆ. ಪ್ರತಿ ಜೀವಕೋಶ ಹುಚ್ಚೆದ್ದು ಕುಣೀವಾಗಲೂ ಕುಣಿಯಲಾಗದ, ಜೀವವೇ ಹಾಡಾಗಿ ಹರೀವಾಗಲೂ ಹಾಡಲು ಬರದ, ಚಿತ್ರಗಳನ್ನ ತಿಂದುಬಿಡುವಷ್ಟು ಲಾಲಸೆಯಿಂದ ನೋಡುವುದಿದ್ದರೂ ಕುಂಚ ಕೈಯಲ್ಲಿ ಹಿಡಿಯಲೂ ಬರದ ಈ ಜನ್ಮ, ಏನೋ ತರಲೆ ಮಾಡಿ ಭೂಮಿಗೆ ದಬ್ಬಿಸ್ಕೊಂಡ ಕಿನ್ನರಿಯದ್ದೇ ಅನ್ನೋದು ನನ್ನೊಳಗಿನ ಆಲೀಸ್ಗಂತೂ ಖಾತ್ರಿ ಇದೆ. ಅದು ಆಲೀಸಳ ಜಗತ್ತಿನಿಂದ ಹೊರಗೂ ಖಾತ್ರಿಯಾಗತೊಡಗಿದ್ದು, ಮಲ್ಲಿಗೆ ಸುಗಂಧ ನನ್ನ ಜೀವ ಬೇಡಲು ಮುಂದಾದ ಸಂದರ್ಭದಲ್ಲಿ…
~
ನಾನು ಓದುವ ಕಾಲಕ್ಕೆ ಸಿಟಿ ಕಾನ್ವೆಂಟುಗಳಲ್ಲಿ ಮಾತ್ರ ಶಾಲೆಗೆ ಹೂ ಮುಡಿದು ಬರುವ ಹಾಗೆ ಇರಲಿಲ್ಲ. ಚೋಟುಗೂದಲಿನ ನನಗೆ ಅಮ್ಮ ಆಗೀಗ ನಾಲ್ಕು ಕನಕಾಂಬರವನ್ನೋ ಒಂದು ಗುಲಾಬಿ ಮೊಗ್ಗನ್ನೋ ಸಿಕ್ಕಿಸಿ ಚೆಂದ ಮಾಡುತ್ತಿದ್ದುದು ಬಿಟ್ಟರೆ, ನನಗೂ ಹೂ ಮುಡಿಯೋದರಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ಆಮೇಲಿನ ಹೈಸ್ಕೂಲು, ಕಾಲೇಜುಗಳ ಕಾಲಕ್ಕೆ ಸ್ಟೈಲ್ ಸ್ಟೇಟ್ಮೆಂಟುಗಳು ಬದಲಾಗಿ ಹೂಮುಡಿಯೋದು ಅತ್ಯಂತ ಅನಾಕರ್ಷಕ ಸಂಗತಿ ಅನ್ನುವಂತೆ ಆಗಿಹೋಗಿತ್ತು.ಎಷ್ಟೆಂದರೆ, ಅಕಸ್ಮಾತ್ ಯಾರಾದರೂ ಕಾಲೇಜಿಗೆ ಹೂಮುಡಿದು ಬಂದರೆ, ಅದರಲ್ಲೂ ಮಲ್ಲಿಗೆಯದ್ದೋ ಕನಕಾಂಬರದ್ದೋ ದಂಡೆ ಮುಡಿದು ಬಂದರಂತೂ ‘ಗ್ಯಾರೇಜ್ ಪೂಜೆ’ ಅಂತ ಟೀಸ್ ಮಾಡುತ್ತಿದ್ದೆವು. ಶುದ್ಧ ಗಂಡುಬೀರಿಯಾದ ನನಗೆ ಹೂಮುಡಿಯುವ ಮನಸ್ಸಿನ ಸೂಕ್ಷ್ಮತೆ, ಹೂವಿನ ಪ್ರೀತಿಗಳು, ಅದರ ಹಿಂದಿನ ಹೆಣ್ತನಗಳು ಅರ್ಥವೇ ಆಗ್ತಿರಲಿಲ್ಲ.
~
ಮುಂದೊಂದು ಕಾಲಕ್ಕೆ ನಾನೇ ಹೂವಾಗಿ, ಹಣ್ಣು ಬಿಡುವ ಕಾಲಕ್ಕೆ ಜಾಜಿ ಮಲ್ಲಿಗೆಯ ಆಸೆ ಶುರುವಾಯ್ತು. ಮನೆಯ ತೋಟದಲ್ಲೆ ಬಿಡುತ್ತಿದ್ದ ನಾಲ್ಕಾರು ದುಂಡುಮಲ್ಲಿಗೆಗಳನ್ನೂ ಕನಕಾಂಬರವನ್ನೂ ಸೂಜಿಯಲ್ಲಿ ಪೋಣಿಸಿ ನನ್ನ ಪುಟ್ಟ ಜಡೆಗೆ ಸಿಕ್ಕಿಸಿ ಸಂಭ್ರಮ ಪಡುವುದಿತ್ತು. ಇದ್ದಕ್ಕಿದ್ದಂತೆ ಉದ್ಭವವಾದ ನನ್ನ ಹೂಪ್ರೀತಿಯನ್ನ ಕಂಡ ಅಮ್ಮ, ನನ್ನ ಸೀಮಂತಕ್ಕೆ ದುಂಡುಮಲ್ಲಿಗೆ ಮೊಗ್ಗಿನ ಜಡೆಯನ್ನೇ ಮಾಡಿಸಿದ್ದಳು, ನಡುನಡುವೆ ಕೆಂಗುಲಾಬಿಗಳು ಇರುವಂತೆ ನೋಡಿಕೊಂಡಿದ್ದಳು. ಆಮೇಲೆ ನಾನು ಬಾಣಂತನದಲ್ಲಿ ಕಷ್ತವಾಗಬಾರದು ಅಂತ ಮುಂಜಾಗ್ರತೆ ಕ್ರಮವಾಗಿ ಪುಟ್ಟ ಜಡೆಯನ್ನ ಮತ್ತಷ್ಟು ಪುಟ್ಟದಾಗಿ ಕತ್ತರಿಸಿಕೊಂಡರೂ ಹೂ ಮುಡಿಯೋದು ಮಾತ್ರ ಮುಂದುವರೆದಿತ್ತು.
ಆದರೆ ಒಂದು ಸಂಜೆ ಹೀಗಾಯ್ತು… ಇನ್ನೇನು ಮುತ್ತುಮಲ್ಲಿಗೆ ಮೊಗ್ಗಿಗೆ ಕೈಹಾಕಿ ಎಳೆಯಬೇಕು… ಹೊಟ್ಟೆಯೊಳಗಿನ ಕಂದಮ್ಮ ಮೃದುವಾಗಿ ಒದೆಯತೊಡಗಿತು. ಅದರ ಮುದ್ದು ಕಾಲುಗಳು ಎಳೆ ಮೊಗ್ಗಿನ ಥರ ಅನ್ನಿಸಿ, ಕೈ ಹಿಂಜರಿಯಿತು. ಅಲ್ಲಿಂದ ಮುಂದೆ ಇಲ್ಲೀತನಕ ಹೂ ಕೀಳಲು ಅದು ಮುಂದಾಗಿಲ್ಲ, ದೇವರ ಪೂಜೆಗೆ ಕೂಡ.
~
ಮಗ ಹುಟ್ಟಿದ. ಆಗಿನ ದೇಹದೊಳಗಿನ ಬದಲಾವಣೆಗಳ ಜತೆ ಸೈನಸ್ ಅದರಿಕೊಂಡಿತು. ಎಂದೂ ಇಲ್ಲದ್ದು ನನ್ನ ಹತ್ತೊಂಬತ್ತನೇ ವಯಸ್ಸಿಗೆ ಹೊಸತಾಗಿ ಶುರುವಾಗಿತ್ತು. ಅದೊಂದು ವಿಚಿತ್ರ ಬಗೆಯ ಅಲರ್ಜಿ. ಮೊದಮೊದಲು ಕರ್ಪೂರ, ನಿರ್ದಿಷ್ಟ ಸುವಾಸನೆಯ ಧೂಪ, ಹೂವಿನ ಫ್ರಾಗ್ರೆನ್ಸ್ ಗಳ ಊದುಬತ್ತಿಗಳು ತಲೆನೋವು ತರಿಸತೊಡಗಿದವು. ಚೆನ್ನಾಗಿ ನೆನಪಿರುವಂತೆ, ‘ಮೋಗ್ರಾ’ ಮತ್ತು ‘ಚಂಪಕ್’ ಊದುಬತ್ತಿಗಳು ನನ್ನ ಕಣ್ಣು ಕೆಂಪಗಾಗಿಸಿ ಜ್ವರ ಮಲಗಿಸಿಬಿಡ್ತಿದ್ದವು. ನಾನು ಪೂಜೆ ಕೋಣೆಯಿಂದ ದೂರದೂರವೆ ಇರತೊಡಗಿದೆ. ನಾನು ಒಳಗೊಳ್ಳಲೇಬೇಕಾದ ಪೂಜೆಗೀಜೆಗಳಿಗೆ ‘ಗಂಧದ ಸ್ಮೆಲ್ ಊದುಬತ್ತಿ ತಂದ್ರೆ ಮಾತ್ರ ಕೂರ್ತೀನಿ. ಮೊಲ್ಲೆ ಬೇಡ- ಕಾಕಡ, ಕನಕಾಂಬರ ಆದ್ರೆ ಓಕೆ’ ಅಂತೆಲ್ಲ ಕಂಡಿಶನ್ ಹಾಕತೊಡಗಿದೆ. ಅವರು ಒಳಗೊಳಗೆ ‘ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ’ ಅಂತ ಅಂದುಕೊಳ್ತಿದ್ದರೇನೋ, ಕೆಲಸವಾಗಬೇಕಿದ್ದರಿಂದ ನನ್ನ ಕಾಲು ಕಟ್ಟಿ ಸಮ್ಮತಿಸುತ್ತಿದ್ದರು. ಉಳಿದಂತೆ ದೊಡ್ದ ಮನೆಯಾಗಿದ್ದರಿಂದ ಒಳಗೆ ಘಮ ಹಬ್ಬಿದಾಗೆಲ್ಲ ನಾನು ಮೂಗು ತಪ್ಪಿಸ್ಕೊಂಡು ಅಲೆಯಲು ಸಾಕಷ್ಟು ಅವಕಾಶ ಇರುತ್ತಿತ್ತು.
ನನಗೆ ಬಂದಿರೋ ಈ ವಿಚಿತ್ರ ಕಾಯಿಲೆ ಎಂಥದ್ದು ಅಂತ ಜೀವಂಧರ ಜೈನರ ಬಳಿ ಕೇಳಿದಾಗ ಅದು ಸೈನಸ್ ಪ್ಲಸ್ ಫ್ರಾಗ್ರೆನ್ಸ್ ಅಲರ್ಜಿ ಅಂತ ಒಂದು ಹೆಸರಿಟ್ಟರು. ನಾನು ವಾರಗಟ್ಟಲೆ ಜ್ವರ ಮಲಗುವುದರಿಂದ ಬಚಾವಾಗಬೇಕು ಅಂದರೆ ಕೆಲವು ಪಥ್ಯದ ಜತೆ ಹೂವಿಂದಲೂ ಮಾರ್ಟಿನ್ ಇತ್ಯಾದಿಯಿಂದಲೂ ದೂರವುಳಿಯಬೇಕು ಅಂದರು. ಒಂದೈದು ನಿಮಿಷ ಈ ಕೀಟನಾಶಕದ ಸ್ಮೆಲ್ ಉಸಿರಾಡಿದರೂ ನನ್ನ ಪರಿಸ್ಥಿತಿ ಬಿಗಡಾಯಿಸಿಹೋಗುತ್ತಿತ್ತು. ಅನ್ನುವಲ್ಲಿಗೆ, ನಾನು ಕೀಟದಷ್ಟು ಕಡೆಯಾಗಿ ಹೋಗಿದ್ದೆ!
~
ಬೆಂಗಳೂರು ಸೇರಿದೆ. ದಿನದ ಹಡದಿಗಳಲ್ಲಿ ರೋಗ ಊರು ಸೇರಿತ್ತು. ಆಗೀಗ ಬುಕ್ ಶೆಲ್ಫ್ ಕ್ಲೀನ್ ಮಾಡಿದಾಗ ಒಳಸೇರಿದ ದೂಳು, ಜಿರಳೆ ಕೊಂದ ಪಾಪದ ಫಲವಾಗಿ ಅದರ ಗಬ್ಬು ವಾಸನೆ + ಮಾರ್ಟಿನ್ಗಳು ಪಪ್ಪುಸ ಸೇರಿದ್ದು, ಇಸ್ಕಾನಿನಲ್ಲಿ ಕೆಲಸ ಮಾಡುವಾಗ ವಿಶೇಷ ಹಬ್ಬಗಳಲ್ಲಿ ಮಾಡ್ತಿದ್ದ ಅಲಂಕಾರದ ಘಮ ಹಬ್ಬಿ ತಲೆನೋವು- ಇತ್ಯಾದಿಗಳಿಂದ ಸೈನಸ್ ಮರುಕಳಿಸುತ್ತಿತ್ತು. ಆಮೇಲೆ ಬುದ್ಧಿ ಕಲಿತು ದೂಳು ಹೀಡಿಯುವ ತನಕ ಕಾಯದೆ ಶೆಲ್ಫ್ ಕ್ಲೀನ್ ಮಾಡತೊದಗಿದೆ. ‘ನಾಕ್ರೋಚ್’ ಇಟ್ಟು ಜಿರಳೆಗಳನ್ನು ಬರದಂತೆ ತಡೆಯುವಲ್ಲಿ ಯಶಸ್ವಿಯಾದೆ. ಉಳಿದ ಸಮಯ ಆಫೀಸಲ್ಲೆ ಇರುತ್ತಿದ್ದರಿಂದ, ಮತ್ಯಾವ ಆತಂಕವೂ ಇರಲಿಲ್ಲ. ಇಷ್ಟಕ್ಕೂ ಬೆಂಗಳೂರಲ್ಲಿ (ನಾನು ಹಳ್ಳಿ ಹೆಣ್ಣು. ನನ್ ಪಾಲಿಗೆ ಬೆಂಗಳೂರು ಬರೀ ಆಧುನಿಕರ ಗೂಡು ಅಂತ ಆಗಿತ್ತು) ಯಾರು ತಾನೆ ಮಲ್ಲಿಗೆ ಮುಡಿದು ಆಫೀಸಿಗೆ ಬರ್ತಾರೆ? ಅನ್ನೋ ಧೈರ್ಯವೂ ಇತ್ತು. ಬದಲಾಯಿಸಿದ ಯಾವ ಆರು ಆಫೀಸುಗಳಲ್ಲೂ ಹೂವಿನ ಕಾಟ ಇರಲಿಲ್ಲ.
ಈಗ…
ಬೆಂಗಳೂರು ಹುಡುಗೀರ ಬಗ್ಗೆ ಇದ್ದ ನನ್ನ ಎಣಿಕೆ ತಪ್ಪಾಗಿದೆ.
ಇಷ್ಟಕ್ಕೂ ಒಂದು ಹೆಣ್ಣು ಮಗುವಿಗೆ ಹೂ ಮುಡೀಬೇಡ ಅಂತ (ಅದು ರಿಕ್ವೆಸ್ಟ್ ಆಗಿದ್ದರೂ ಅಷ್ಟೇ) ಹೇಳೋದು ಅಮಾನವೀಯ. ಈ ಮಲ್ಲಿಗೆ ಋತು ಯಾವಾಗ ಮುಗೀತದೋ ಅಂತ ಕಾಯುತ್ತ ಇದ್ದೀನಿ.
ಹೆಣ್ಣಾಗಿ ಹೂ ಸಹಿಸಲಾಗದ ಅಸಹಾಯಕತೆಗೆ ನನ್ನೊಳಗಿನ ಕಿನ್ನರಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ.
ನಂಗೆ ಅಸಾಧ್ಯ ತಲೆನೋವು ಬರುತ್ತೆ, ಸಹಿಸಿಕೊಳ್ತೀನಿ ಪ್ರತಿಸಲ. ಧೂಳಿನ ಅಲರ್ಜಿ, ಗಂಟಲು ಕೆರೆತವಂತೂ ತಡೆಯಲಾಗದಷ್ಟು ಕಿರಿಕಿರಿ. ನಂಗೆ ನಿಮ್ಮ ಯಾತನೆ ಸರಿಯಾಗಿ ಅರ್ಥ ಆಗುತ್ತೆ. ಕಿನ್ನರಿ, ಇನ್ನೂ ಬೇರೆ ಏನಾದರೂ ದಾರಿ ಇದೆಯಾ ಹುಡುಕಿ, ನೇರವಾಗಿ ಹೇಳಕ್ಕೆ ಆಗದಿದ್ದಲ್ಲಿ.
sooper chetanaa…ninnolagina kinnariya yaatane aakege ondu dina artha aage agutte anno aase aashaya nannadu
ayyo paapa
lovely write up CheTs…though i do not have allergies to anything only thing i cant bear is cigarette smoke esp when travelling in buses.. but i can understand ur prob..both of my sis’s daughter are allergic to many things. (whenever she visits India she has to travel with a huge bag full of anti-allergens)
malathi S
ಇಷ್ಟಕ್ಕೂ ಒಂದು ಹೆಣ್ಣು ಮಗುವಿಗೆ ಹೂ ಮುಡೀಬೇಡ ಅಂತ (ಅದು ರಿಕ್ವೆಸ್ಟ್ ಆಗಿದ್ದರೂ ಅಷ್ಟೇ) ಹೇಳೋದು ಅಮಾನವೀಯ. ಈ ಮಲ್ಲಿಗೆ ಋತು ಯಾವಾಗ ಮುಗೀತದೋ ಅಂತ ಕಾಯುತ್ತ ಇದ್ದೀನಿ.
ಹೆಣ್ಣಾಗಿ ಹೂ ಸಹಿಸಲಾಗದ ಅಸಹಾಯಕತೆಗೆ ನನ್ನೊಳಗಿನ ಕಿನ್ನರಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ.
:((((
ಅಯ್ಯೋ ಪಾಪ…
ಚೇತನ ಅವ್ರೆ-
ಮಲ್ಲಿಗೆ ಹೂ ಬಗ್ಗೆ ಬೆನ್ಗಳೂರ ಬಾಲೆಯರ ಬಗ್ಗೆ ಹೇಳುತ್ತಾ, ಕೊನೆಗೆ ಹೂವಿನ ಅಲ್ಲರ್ಜಿಯಿಂದಾಗಿ ಹೂ ಮುಡಿಯದೇ -ಅದನ್ನು ಆಘ್ರಾಣಿಸದೆ ಇರುವುದಕ್ಕಾಗಿ ಕಿನ್ನರಿ ಪಟ್ಟ ವ್ಯಥೆ ….ಮನ ಕಲಕಿತು….
ಈಗಂತೂ ಆಫೀಸಿಗೆ ಶಾಲೆಗೇ ಕಾಲೇಜಿಗೆ ಹೂ ಮುಡಿದುಕೊಂಡು ಬರುವವರನ್ನ ಕಾಣೋದು ಸಾಧ್ಯವೇ ಇಲ್ಲವೇನೋ ಅನ್ನಿಸುತ್ತಿದೆ…..
ನಾರಿಗೆ ಜಡೆ ಚಂದ ,ಅದರ ಮೇಲೆ ಮಲ್ಲಿಗೆ ಹೂ ಇನ್ನೂ ಚೆಂದ….!!
ಆದರೆ ಅಲರ್ಜಿ ….:()00
ಶುಭವಾಗಲಿ…
ಬರಹಕ್ಕಾಗಿ ನನ್ನಿ
\|/
http://sampada.net/user/venkatb83
ಕಿನ್ನರಿ ನಿಜ… ಶಾಪಗ್ರಸ್ಥೆಯಲ್ಲ…
ಹೂವಿನ ಘಮ ಆಘ್ರಾಣಿಸಲಾಗದ ನೋವು ನಿಜಕ್ಕೂ ಸಂಕಟವೇ…
ಗಿರಿಯ ಗೆಳೆಯರೊಬ್ಬರಿದ್ದಾರೆ .. ಅವರಿಗೆ ಆಘ್ರಾಣ ಶಕ್ತಿಯೇ ಇಲ್ಲ.. ಇದನ್ನು ಓದುವಾಗ ಅವರ ನೆನಪಾಯಿತು.
chetana..kinnariya alargi samasye nijakku sahisalu asaadhya..mana muttuvantaha niroopane.. ishta aaytu..
ಪಾಪದ ಹೂವುಗಳು
hmm.. nangoo dust alergy. 😮
ಮುಂದೊಂದು ಕಾಲಕ್ಕೆ ನಾನೇ ಹೂವಾಗಿ, ಹಣ್ಣು ಬಿಡುವ ಕಾಲಕ್ಕೆ ಜಾಜಿ ಮಲ್ಲಿಗೆಯ ಆಸೆ ಶುರುವಾಯ್ತು…..
ಕಿನ್ನರಿಯ ವ್ಯಥೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಬಹುಶಃ ನಿಮಗೆ ಸಂಕಟ ಕೊಡೋದು ಬೇಡ ಎಂದು ಸ್ವಲ್ಪ ದಿನ ಹೂ ಮುಡಿಯೋ ಹುಡುಗಿಯರು ಮುಡಿಯದೆ ಬರಬಹುದೇನೋ! ಅಷ್ಟು ಚೆನ್ನಾಗಿ ಬರೆದಿದ್ದೀರಿ ಚೇತನಾ..ತುಂಬಾ ಇಷ್ಟವಾಯಿತು. ಆದರೆ, ನಾನೂ ಮಲ್ಲಿಗೆ ಇಷ್ಟಪಡುತ್ತೇನೆ, ಆದರೆ, ನಂಗೂ ತಲೆನೋವು ಕಾಟ. ಮುಡಿಯೋ ಭಾಗ್ಯವಿಲ್ಲ.