ಜಮ್ಮು, ಕಾಶ್ಮೀರ ಮತ್ತು ಲಡಾಖ್


ಇದು ನಮ್ಮ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರವಾಸದ ಕಥನ. ಹದಿನೆಂಟು ದಿನಗಳ ಈ ಪ್ರವಾಸ ಒಂದು ದಿವ್ಯಾನುಭೂತಿಯೇ ಆಗಿತ್ತು. ಈ ಕಥನದ ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್‌ ಮಾಡಿ…

೨. ಸೆಖೆಯ ಸ್ವಾಗತ

ಹಾಗೆ ನಾವು ಒಟ್ಟು ಆರು ಜನ ಹೊರಟೆವಲ್ಲ, ಈ ಪ್ರವಾಸದ ಹಿಂದೆ ನಮ್ಮೆಲ್ಲರಿಗೂ ನಮ್ಮದೇ ಆಸಕ್ತಿ- ಕಾರಣಗಳಿದ್ದವು. ಯೋಗೀಶ್‌ ಮತ್ತು ಸಚಿನ್‌ ಶತಾಯ ಗತಾಯ ಅಮರನಾಥಕ್ಕೆ ಹೋಗಿಯೇ ಬರುವುದು ಅಂತ ನಿರ್ಧರಿಸಿಕೊಂಡಿದ್ದರು. ಅವರ ಪೂರ್ತಿ ಗಮನ ಅದರತ್ತಲೇ ಇತ್ತು. ಅನೂಪನಿಗೆ ಒಂದು ಸಾರ್ತಿ ಉತ್ತರಕ್ಕೆ ಹೋಗ್ತಿದ್ದೀನಿ, ಎಷ್ಟು ಸಾಧ್ಯವೋ, ಏನೆಲ್ಲವೂ ಸಾಧ್ಯವೋ ನೋಡಿಕೊಂಡು ಬರೋಣ ಅನ್ನುವ ಹುಮ್ಮಸ್ಸು. ಚಂದ್ರಣ್ಣನಿಗೆ ಅಣ್ಣನೊಡನೆ ಹದಿನೈದಿಪ್ಪತ್ತು ದಿನ ಅಡಚಣೆಯಿಲ್ಲದೆ ಓಡಾಡಿಕೊಂಡಿರುವ ಖುಷಿ ಮತ್ತು ‘ಹಿಂದೂ’ ಸಂಸ್ಕೃತಿಯ ಮುಖ್ಯ ನೆಲೆಗೆ ಹೋಗಿಬರುವ ಉದ್ದೇಶ. ಅಣ್ಣನಿಗೆ ದೇಶದ ಇತಿಹಾಸದ ಮುಖ್ಯ ಭಾಗವೊಂದನ್ನು ಸಂದರ್ಶಿಸುವ, ಅಲ್ಲಿನ ಸುಖ ದುಃಖಗಳನ್ನು ಕಣ್ಣಾರೆ ಕಂಡು ಬರುವ, ಅರಿಯುವ ಅಧ್ಯಯನ ಪ್ರವಾಸ. ನನ್ನ ಪಾಲಿಗೆ…
ಇದೊಂಚೂರು ವಿಚಿತ್ರ ಕಾರಣ. ನನಗೆ ನನ್ನ ಪುಟಾಣಿ ಕಣ್ಣುಗಳು ಮತ್ತು ದಕ್ಷಿಣದ್ದಲ್ಲದ ಮುಖ ಚಹರೆಯ ಬಗ್ಗೆ ಭಾರೀ ಅಭಿಮಾನ! ಚಿಕ್ಕವಳಿರುವಾಗ ನನ್ನ ‘ಸ್ವೆಟರ್‌ ಮಾರೋರ ಮಗಳು’ (ಅಂದ್ರೆ ಟಿಬೆಟನ್ಸ್‌!) ಅಂದ್ರೆ ಭಾಳಾ ಖುಷಿಪಡ್ತಿದ್ದೆ. ಅಣಕಿಸಿ ಗೋಳುಹೊಯ್ದುಕೊಳ್ಳಬೇಕು ಅಂತ ಪ್ಲಾನ್ ಮಾಡಿದವರು ಬೇಸ್ತು ಬೀಳ್ತಿದ್ರು. ಅಲ್ಲದೆ, ನನ್ನ attitude ಕೂಡಾ ಒಂಥರಾ ಪಹಾಡಿ typeನದ್ದು. ನನ್ನ ಕನಸುಗಳಲ್ಲಿ ಕಾಣಿಸ್ಕೊಳ್ಳುವ ಲ್ಯಾಂಡ್‌ಸ್ಕೇಪ್ ಕೂಡಾ ಪಹಾಡ್ ಪಹಾಡಿಯೇ! ಹೀಗೆಲ್ಲ ಇರುತ್ತ, ನನಗೆ ಒಂದು ಸಾರ್ತಿ ಆ ನನ್ನ ಊರಿಗೆ ಹೋಗಿಬರಬೇಕು ಅಂತನ್ನಿಸಿಬಿಟ್ಟಿತ್ತು. ಜತೆಗೆ ನಾನು ಬರೆಯಬೇಕು ಅಂದುಕೊಂಡಿರುವ ಕಾದಂಬರಿಯ ನೆಲೆ ಕೂಡ ಈ ನೆಲವೇ. ಅದಕ್ಕೆ ಅಲ್ಲಿ ಒಂಚೂರು ಓಡಾಟ ಮಾಡಿಬಂದರೆ ಅಧಿಕೃತತೆ ಇರುತ್ತೆ ಅಂತಲೂ ಅನ್ನಿಸಿತ್ತು. ನನ್ನ ಈ ಗುಂಗಿನ ಅರಿವಿದ್ದ ಅಣ್ಣ ಜಾಸ್ತಿ ಸತಾಯಿಸದೆ ನನ್ನನ್ನೂ ಕರೆದುಕೊಂಡುಹೋಗಲು ಒಪ್ಪಿಕೊಂಡಿದ್ದ.

ಡೆಲ್ಲಿಯಿಂದ ಜಮ್ಮುವಿಗೆ…
ಸಾಮಾನ್ಯವಾಗಿ ಜಮ್ಮು ಮತ್ತು ಕಾಶ್ಮೀರ ಅಂದರೆ ಬರಿಯ `ಕಾಶ್ಮೀರ’ ಅಂತಲೇ ತಿಳಿಯುತ್ತಾರೆ. ಆದರೆ ಜಮ್ಮು ಪ್ರಾಂತ್ಯ ಕಾಶ್ಮೀರ ಕಣಿವೆಗಿಂತ ವಿಸ್ತಾರದಲ್ಲೂ ಜನಸಂಖ್ಯೆಯಲ್ಲೂ ದೊಡ್ಡದು. ಈ ರಾಜ್ಯದಲ್ಲಿ ಮತ್ತೊಂದು ಪ್ರಾಂತ್ಯವಿದೆ. ಅದೇ `ಲಡಾಖ್’. ಲಡಾಖ್, ಜಮ್ಮುವಿಗಿಂತ ದೊಡ್ಡದು; ಕಾಶ್ಮೀರಕ್ಕಿಂತ ಚೆಂದ ಇರುವುದು. ನಮಗೆ ಗೊತ್ತೇ ಇರುವಂತೆ ಮೈಸೂರು ಪೇಟದಂತೆ ಇದ್ದ ನಮ್ಮ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಪಶ್ಚಿಮ ಭಾಗವನ್ನ ಪಾಕಿಸ್ತಾನಕ್ಕೂ ಪೂರ್ವ ಭಾಗವನ್ನ ಅವರ ಮೂಲಕ ಚೀನಾಕ್ಕೂ ದಾನ ಕೊಡಲಾಗಿದೆ. ಹೀಗಾಗಿ ನಮಗೆ ಉಳಿದಿರುವುದು ಹರಕುಮುರುಕು ಕಾಶ್ಮೀರ ಮತ್ತು ಅರ್ಧಭಾಗ ಲಡಾಖ್. ಆದರೆ ಉಳಿದಿರುವಷ್ಟು ಭಾಗದಲ್ಲೇ ಸ್ವರ್ಗದ ಸೊಗಸನ್ನು ಹಿಡಿದಿಟ್ಟುಕೊಂಡಿರುವ ಹೆಮ್ಮೆ ಈ ಭೂಭಾಗಗಳದ್ದು ಅಂದರೆ ಖಂಡಿತಾ ಉತ್ಪ್ರೇಕ್ಷೆಯಲ್ಲ.
ಬೆಂಗಳೂರಿನಿಂದ ಬೆಳಗ್ಗೆ ಎಂಟು ಗಂಟೆ ಫ್ಲೈಟಿಗೆ ಹೊರಟಿದ್ದ ನಾವು ಹತ್ತೂವರೆ- ಹನ್ನೊಂದಕ್ಕೆಲ್ಲ ದೆಹಲಿ ಏರ್‌ಪೋರ್ಟ್ ತಲುಪಿದ್ದೆವು. ಅಲ್ಲಿ ಬಿಸಿಲಿಗೆ ಮೈ ತೆರೆಯದೆ ಒಳೊಳಗೆ ಓಡಾಡಿಕೊಂಡು ಜಮ್ಮುವಿನ ಕಡೆಗೆ ಹಾರಲಿದ್ದ ಫ್ಲೈಟ್‌ಗಾಗಿ ಕಾಯುತ್ತ ಕುಳಿತೆವು. ಹೀಗಾಗಿ ನಮಗೆ ವಿಮಾನ ಇಳಿಯುವ ಮುನ್ನ `ದಿಲ್ಲಿ ಕಾ ತಾಪ್‌ಮಾನ್ ೩೭ ಡಿಗ್ರಿ ಸೆಲ್ಷಿಯಸ್’ ಅಂತ ಅನೌನ್ಸ್ ಮಾಡಿದ್ದು ವಿಶೇಷ ಪರಿಣಾಮ ಏನೂ ಬೀರಿರಲಿಲ್ಲ. ಏರ್‌ಪೋರ್ಟ್ ಹೇಗೂ ಏರ್‌ಕಂಡಿಷನ್ಡ್. ಛಾವಣಿಯಾಚೆಯ ಸೂರ್ಯ ಕಾಣುವ ಪ್ರಮೇಯವೂ ಇರಲಿಲ್ಲವಷ್ಟೆ?
ಹಾಗೂಹೀಗೂ ಸಮಯ ಕಳೆದು ಅರ್ಧ ಗಂಟೆ ತಡ ಮಾಡಿಕೊಂಡು ಬಂದ ವಿಮಾನವನ್ನು ಏರುವಾಗ ಗಂಟೆ ಮೂರು ದಾಟುತ್ತ ಇತ್ತು. ನಮ್ಮನ್ನು ಅದು ಜಮ್ಮುವಿನಲ್ಲಿ ಇಳಿಸುವಾಗ ಇಳಿಮಧ್ಯಾಹ್ನದ ನಾಲಕ್ಕೂವರೆ. ನಮ್ಮ ಟೀಮ್‌ನಲ್ಲಿದ್ದ ಹುಡುಗರ ಮನಸಿನಲ್ಲಿ ಜಮ್ಮು ನಮ್ಮನ್ನ ಹಿಮ ಹೊದ್ದುಕೊಂಡೆ ಸ್ವಾಗತಿಸುತ್ತದೆ ಅಂತ ಇತ್ತು. ಆದರೆ ಏರ್‌ಪೋರ್ಟಿಂದ ಹೊರಬಂದ ನಮ್ಮ ಪರಿಸ್ಥಿತಿ ಮಾತ್ರ ಫ್ರಿಜ್ ನಿಂದ ಬಾಣಲೆಗೆ ಬಿದ್ದಂತೆ ಆಗಿತ್ತು! ಮೊದಲೇ ಸೂಚನೆ ಕೊಟ್ಟಿದ್ದಂತೆ ಅಲ್ಲಿನ ತಾಪಮಾನ ನಲವತ್ತು ಡಿಗ್ರಿಯಷ್ಟಿತ್ತು.
ಜಮ್ಮು ಏರ್‌ಪೋರ್ಟ್‌ ಬಹಳ ಚಿಕ್ಕದು. ನಮ್ಮ ಜಿಲ್ಲಾ ಕೇಂದ್ರಗಳ ಮುಖ್ಯ ಬಸ್‌ಸ್ಟ್ಯಾಂಡ್‌ನಂತೆ ಇದೆ. ಅದರ ಉಸ್ತುವಾರಿಯನ್ನು ಸೇನಾಡಳಿತವೇ ನೋಡಿಕೊಳ್ಳುತ್ತದೆ. ಜಮ್ಮುವಿನ ಅಸ್ತಿತ್ವವೇ ಅದರ ಮಂದಿರಗಳಿಂದ ಇರಬೇಕು… ಇಲ್ಲಿನ ಏರ್‌ಪೋರ್ಟ್‌ ಕೂಡ ಗೋಪುರಗಳನ್ನು ಹೊತ್ತುಕೊಂಡು ಅದರ ಪ್ರಾಮುಖ್ಯವನ್ನು ಸಾರುತ್ತದೆ.
ನಾವು ಲಗೇಜ್ ತೆಗೆದುಕೊಂಡು ಹೊರಗೆ ಅಡಿಯಿಟ್ಟಾಗ, `ಏನಕ್ಕಾ, ಒಂದೂ ಬೆಟ್ಟಾನೇ ಕಾಣಿಸ್ತಿಲ್ಲ! ಸೆಖೆ ಬೇರೆ… ನಾನು ಏನೇನೋ ಇಮ್ಯಾಜಿನ್ ಮಾಡ್ಕೊಂಡಿದ್ದೆ’ ಬೆವರೊರೆಸಿಕೊಳ್ತಾ ಅನೂಪ ಅಂದ. ಚಳಿಗಾಲದಲ್ಲಿ ಎರಡರಿಂದ ಹನ್ನೆರಡು ಡಿಗ್ರಿವರೆಗೆ ತೊಯ್ದಾಡುವ ಇಲ್ಲಿನ ತಾಪಮಾನ ಬೇಸಗೆಯಲ್ಲಿ ಮೂವತ್ತರಿಂದ ಐವತ್ತರತನಕ ಇರುತ್ತದೆ ಅನ್ನೋದನ್ನ ನಾನು ಮೊದಲೇ ನೆಟ್ಟಾಡಿಸಿ ತಿಳಿದುಕೊಂಡಿದ್ದೆ. ಸೋ, ಮನಸು ಅದಕ್ಕೆ ತಯಾರಾಗಿಯೇ ಇತ್ತು.

8 thoughts on “ಜಮ್ಮು, ಕಾಶ್ಮೀರ ಮತ್ತು ಲಡಾಖ್

Add yours

  1. I liked this admission: ಚಿಕ್ಕವಳಿರುವಾಗ ನನ್ನ ‘ಸ್ವೆಟರ್‌ ಮಾರೋರ ಮಗಳು’ (ಅಂದ್ರೆ ಟಿಬೆಟನ್ಸ್‌!) ಅಂದ್ರೆ ಭಾಳಾ ಖುಷಿಪಡ್ತಿದ್ದೆ. ಅಣಕಿಸಿ ಗೋಳುಹೊಯ್ದುಕೊಳ್ಳಬೇಕು ಅಂತ ಪ್ಲಾನ್ ಮಾಡಿದವರು ಬೇಸ್ತು ಬೀಳ್ತಿದ್ರು. Looking forward to ur novel

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: