ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…


‘ಸತ್ತು ಬಿದ್ದಿತ್ತು ಭಾರತ’ – ಇದು ಡಿಸೆಂಬರ್ 2, 2007ರಂದು ಬರೆದು ನನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದ ಲೇಖನ.
ಆ ದಿನ ಅಸ್ಸಾಮಿನ ಬುಡಕಟ್ಟು ಜನಾಂಗವೊಂದು ತನ್ನ ಹಕ್ಕುಗಳಿಗಾಗಿ ಒತ್ತಾಯಿಸಿ ಧರಣಿ ಹೂಡಿತ್ತು. ಅದರಲ್ಲಿ ಹೆಂಗಸರೂ ಇದ್ದರು. ದಿಬ್ರುಗಡ್ ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿತ್ತು. ಅದೇ ಸಮಯಕ್ಕೆ ಗುವಹಾಟಿಯ ಬೀದಿಯೊಂದರಲ್ಲಿ ಒಬ್ಬ ಟ್ರೈಬಲ್ ಹೆಣ್ಣುಮಗಳು ಪ್ರತಿಭಟನೆಯ ಬೋರ್ಡ್ ಹಿಡಿದು ತನ್ನ ಪಾಡಿಗೆ ನಿಂತಿದ್ದಳು. ತನ್ನ ಜನಾಂಗದ ಹಕ್ಕಿಗಾಗಿ ಶಾಂತಿಯುತ ಪ್ರತಿರೋಧ ತೋರುತ್ತಿದ್ದ ಆ ಹೆಣ್ಣನ್ನು ಗುವಹಾಟಿಯ ಕೆಲವು ಗಂಡಸರು ಅಟ್ಟಾಡಿಬಿಟ್ಟಿದ್ದರು. ಜನಾಂಗೀಯ ದ್ವೇಷ, ಮತ್ತೆಲ್ಲೋ ನಡೆದ ಹಿಂಸೆಗೆ ಪ್ರತಿಯಾಗಿ ಇಲ್ಲಿ ಅಸಹಾಯಕ ಹೆಣ್ಣಿನ ಮೇಲೆ ಮುಗಿಬಿದ್ದಿದ್ದರು. ಆಗಲೂ ಒಬ್ಬ ಮೀಡಿಯಾ ಹುಡುಗ ಫೋಟೋಗಳನ್ನ ತೆಗೆದು “ಭೇಷ್” ಆಗಿದ್ದ!
~
2012ರ ಜುಲೈ 13. ಪಬ್ ನಿಂದ ಹೊರಬಂದು ಸ್ನೇಹಿತರ ಜತೆ ಜಗಳಾಡುತ್ತಿದ್ದ ಹುಡುಗಿಯ ಮೇಲೆ 20 ಜನ ಗಂಡಸರು ಕೈಮಾಡಿದರು. ಕೈಹೋದಲ್ಲೆಲ್ಲ ಮುಟ್ಟಿ ತೆವಲು ತೀರಿಸಿಕೊಂಡರು. ಅವಳ ಬಟ್ಟೆ ಚಿಂದಿಯಾಯ್ತು. ಇದು ಕೂಡ ನಡೆದಿದ್ದು ಗುವಹಾಟಿಯಲ್ಲೇ. ಆಗಲೂ ಒಬ್ಬ ಲೋಕಲ್ ಮೀಡಿಯಾದ ಫೋಟೋಗ್ರಾಫರ್ ಇದ್ದ. ಘಟನೆಯನ್ನ ವಿಡಿಯೋ ಮಾಡಿದ. ನನ್ನಿಂದ ಸಹಾಯ ಅಂತೂ ಮಾಡಲಾಗಲಿಲ್ಲ, ಅದಕ್ಕೆ ಚಿತ್ರೀಕರಣ ಮಾಡಿದೆ ಅಂದ. ಶೂಟ್ ಮಾಡುವಾಗ ವಿಡಿಯೋಗೆ ಬೆಳಕು ಸಾಕಾಗ್ತಿಲ್ಲ, ಅವಳನ್ನ ಈಚೆ ಎಳಕೊಂಡು ಬನ್ನಿ ಅಂತ ಅವನಂದಿದ್ದು ರಟ್ಟಾಯ್ತು.
~
2009ರ ಜನವರಿ 24. ಮಂಗಳೂರಿನ ಪಬ್ ಒಂದರ ಮೇಲೆ ಶ್ರೀರಾಮ ಸೇನೆಯ ವಾನರರು ದಾಳಿ ಮಾಡಿದರು. ಹೆಣ್ಣುಮಕ್ಕಳನ್ನ ಹಿಗ್ಗಾಮುಗ್ಗ ಬಡಿದರು. ಚಾನೆಲ್ ಒಂದು ಅಚ್ಚುಕಟ್ಟಾಗಿ ಚಿತ್ರೀಕರಿಸಿ ಟಿ ಆರ್ ಪಿ ಹೆಚ್ಚಿಸಿಕೊಂಡಿತು. ತಪ್ಪಿಸುವ ಗೋಜಿಗೆ ಹೋಗುವುದು ಹಾಗಿರಲಿ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು.
~
2012ರ ಜುಲೈ28. ಮತ್ತೆ ಮಂಗಳೂರು. ಹೋಮ್ ಸ್ಟೇ ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ಹುಡುಗ ಹುಡುಗಿಯರನ್ನ ಥಳಿಸಲಾಯ್ತು. ಹುಡುಗಿಯ ಕಪಾಳಕ್ಕೆ ಬಿಗಿದು, ಮೈಮುಟ್ಟಿ ಹಿಂಸಿಸಲಾಯ್ತು. ಇದನ್ನೆಲ್ಲ ಮಾಡಹೊರಟ ಫಟಿಂಗರು ಚಾನೆಲ್ ಒಂದರ
ಕ್ಯಾಮೆರಾಪರ್ಸನ್ ಗಳನ್ನು ಜೊತೆಯಲ್ಲೇ ಒಯ್ದಿದ್ದರು!
***
ಹೆಣ್ಣುಮಕ್ಕಳು ಏನು ಮಾಡಿದರೂ ತಪ್ಪು. ಹೋರಾಟ ಮಾಡಿದರೂ, ಪಾರ್ಟಿ ಮಾಡಿದರೂ. ಮೈತುಂಬ ಸೀರೆ ತೊಟ್ಟವಳ ಬಟ್ಟೆಯನ್ನೂ ಎಳೆಯಲಾಗುತ್ತೆ, ಸ್ಕರ್ಟ್ ತೊಟ್ಟವಳದ್ದೂ. ನಾವು ಗಂಡಸರ ಮರ್ಜಿಗೆ ತಕ್ಕ ಹಾಗೆ, ಅವರ ತಾಳದ ಲಯಕ್ಕೆ ಹೆಜ್ಜೆ ಹಾಕಬೇಕು ಅನ್ನೋದು ಅವರ ಬಲಾತ್ಕಾರ. ಹೆಣ್ಣು ಅರೆನಗ್ನಳಾಗಿದ್ರೆ ಕಾಮ ಪ್ರಚೋದನೆಯಾಗತ್ತೆ, ಅದಕ್ಕೇ ರೇಪ್ ಕೇಸ್ ಗಳು ಜಾಸ್ತಿ ಆಗೋದು ಅಂತ ಬೊಬ್ಬೆ ಹೊಡೆಯೋರಿಗೆ ನಾಚಿಕೆಯಾಗ್ಬೇಕು. ಎಂಟು ತಿಂಗಳ ಸ್ವಂತ ಮಗಳನ್ನ ಅಪ್ಪ ಅನ್ನಿಸಿಕೊಂಡ ಗಂಡಸು ರೇಪ್ ಮಾಡ್ತಾನೆ. ಮಗುವಿನ ನಗ್ನತೆಗೂ ಕಾಮ ಕೆರಳಿಸ್ಕೊಳ್ಳುವ ಗಂಡಸಿನ ಲಂಪಟತನಕ್ಕೆ ಲಗಾಮು ಹಾಕಬೇಕಾ? ಹೆಣ್ಣುಮಕ್ಕಳನ್ನ ಹುಟ್ಟಿದಾಗಿಂದಲೇ ಘೋಷಾದೊಳಗೆ ಬಚ್ಚಿಡಬೇಕಾ!?
ಸಂಸ್ಕೃತಿ ಕಾವಲಿನ ಹೆಸರಿನಲ್ಲಿ ನಮ್ಮ ಮೈಕೈ ಮುಟ್ಟಲು ಬರುವ ಈ ಲಫಂಗರಿಗೆ ಎಷ್ಟು ಧಿಕ್ಕಾರ ಹೇಳಿದರೂ ಸಾಲದು. ನನ್ನ ಭಾರತ ಏನು, ನನ್ನ ಸಂಸ್ಕೃತಿ ಏನು ಅನ್ನೋದು ನನಗೆ ಗೊತ್ತು. ನಮಗೆಲ್ಲರಿಗೂ ಗೊತ್ತು. ಅದಕ್ಕೆ ಯಾವ ಕಾವಲು ನಾಯಿಗಳೂ ಬೇಕಿಲ್ಲ.
ಕೈಮುಗೀತೀವಿ, ನಮ್ಮ ಸಂಸ್ಕೃತಿಯನ್ನ ಹೀಗೆಲ್ಲ ವಿಕೃತ ಮಾಡಬೇಡಿ… ಅಥವಾ ನಾವೂ ಕೈ ಎತ್ತುವ ತನಕ ಈ ಹರ್ಕತ್ ಗಳನ್ನ ಮುಂದುವರೆಸ್ತೀರೋ? – ಈ ಪ್ರಶ್ನೆ ಹೆಣ್ಣು ಮತ್ತು ಹಿಂಸಾಚಾರವನ್ನು ಟಿ ಆರ್ ಪಿ ಏರಿಕೆಗೆ ಕ್ಯಟಲಿಸ್ಟ್ ನಂತೆ ಬಳಸಿಕೊಳ್ತಿರುವ ಮೀಡಿಯಾಗಳಿಗೂ ಅನ್ವಯಿಸುತ್ತೆ…

ಸತ್ತುಬಿದ್ದಿತ್ತು ಭಾರತ….

December 2, 2007 at 1:20 pm | In ಕನವರಿಕೆ | 10 Comments | Edit this post

(ಇದು ನನ್ನ ಡಿಸೆಂಬರ್2, 2007ರ ಬರಹ)

ನಾವು ಭಾರತೀಯರು!”
ಅವಳಿಗೆ ಹೆಮ್ಮೆ. ಅಪ್ಪ, ಯಾವಾಗಲೂ ಹೇಳುವನು, “ಮಗಳೇ, ನಮ್ಮದು ಸುಸಂಸ್ಕೃತ ದೇಶ. ಹೆಣ್ಣಿಗೆ ಇಲ್ಲಿ ಸದಾ ಎತ್ತರದ ಸ್ಥಾನ”
ಕಾಸಗಲ ಬೊಟ್ಟಿಟ್ಟು ಬೈತಲೆ ತೆಗೆಯುವಾಗಲೆಲ್ಲ ಅವಳ ಮುಖದಲ್ಲಿ ಗತ್ತಿನ ನಗು,
“ಜಗತ್ತಿಗೆ ಮರ್ಯಾದೆಯ ಪಾಠ ಹೇಳಿಕೊಟ್ಟವರು ನಾವೇ!”
* * *
ದಿನಾ ಅಮ್ಮನ ವಟ ವಟ.
ಮಗಳು ಹಿಂಗೆ ಬಾವುಟ ಹಿಡಿದು ಹಾದಿಬೀದಿ ಸುತ್ತಿದ್ರೆ ನಾಳೆ ಯಾರು ಮದುವೆಯಾಗ್ತಾರೆ?”
ಅಪ್ಪನಿಗೆ ನಗು. ಝಾನ್ಸಿ ರಾಣಿ, ದುರ್ಗಾ ಭಾಭಿ… ಹತ್ತಾರು ಹೆಸರು ಹೇಳಿ ಕನವರಿಸುವನು.
ಮನೆ ಮುದ್ದಿನ ಮಗಳು ಅಲ್ಲೆಲ್ಲೋ ನಡು ರಸ್ತೆಯಲ್ಲಿ ” ಮುರ್ದಾಬಾದ್ ಮುರ್ದಾಬಾದ್” ಕೂಗುತ್ತ ನಿಲ್ಲುವಳು.
ಅಮ್ಮ, ‘ಹುಡುಗಾಟದ ಹುಡುಗಿ’ ಅಂದು ಮುಖ ತಿರುವಿದರೆ, ಅಪ್ಪ, ‘ ಹೋರಾಟದ ಹುಡುಗಿ!’ ಅಂತ ಸೆಡ್ಡು ಹೊಡೆದು ಮೀಸೆ ತಿರುವುವನು!!
* * *
ಮತ್ತೆ ಮತ್ತೊಂದು ಕರಿ ಬಾವುಟದ ದಿನ. ಬಯಲಲ್ಲಿ ಹುಡುಗರು, ಬಗಲಲ್ಲಿ ಇವಳು.
ಪ್ರತಿಭಟನೆಯ ಕಾವಿಗೆ ಊರಿಗೆ ಊರೇ ಸುಡುತ್ತಿತ್ತು. ಮೊದಲು ಕಲ್ಲೆಸೆದವರು ಯಾರೋ? ಜೇನು ಗೂಡು ಚದುರಿತ್ತು.
ನ್ಯಾಯಕ್ಕೆ ನಿಂತ ದಂಡು ಚೆಲ್ಲಾಪಿಲ್ಲಿ. ಗಂಡು ಹುಳಗಳು ಎಲ್ಲಿಂದಲೋ ದೌಡಾಯಿಸಿ ದೌಡಾಯಿಸಿ ಬಂದವು.
ಊಹೂಂ… ಇವಳು ಅಲ್ಲಾಡಲಿಲ್ಲ.
” ನನ್ನಲ್ಲಿ ಸತ್ಯವಿದೆ. ನನ್ನಲ್ಲಿ ನ್ಯಾಯವಿದೆ!”
* * *
ಹೌದು. ಅವಳಲ್ಲಿ ಎಲ್ಲವೂ ಇತ್ತು. ಕಿಚ್ಚು ಹಚ್ಚುವ ಕೆಚ್ಚಿತ್ತು. “ನಾವು ಭಾರತೀಯರು”- ನಂಬಿಕೆ ಇತ್ತು.
ಅವಳು ಹಾಗೆ ನಂಬುತ್ತ ನಿಂತಿರುವಾಗಲೇ…..
ಕಾರು- ಬಂಗಲೆಯ ಗಂಡಸರು ಅವಳ ಮೇಲೇರಿ ಬಂದರು. ಊರು ಕೇರಿ ಅಟ್ಟಾಡಿಸಿ ಬಟ್ಟೆ ಹರಿದು ಒಗೆದರು.
ಜೊತೆಯ ಹುಡುಗರ ಶೌರ್ಯ ಸೊರಸೊರ ಸೋರಿಹೋಗಿ ಷಂಡರಂತೆ ಮರದ ಮರೆಯಲ್ಲಿ ಬೇರು ಬಿಟ್ಟು ನಿಂತಿದ್ದರು!
ಸತ್ಯ, ಚಿಂದಿಯಾಗಿ ಬಿದ್ದಿತ್ತು.
ನ್ಯಾಯ ಸಾಯುತ್ತಿದೆ!- ಇವಳು ಕನಲಿದಳು. ನಿಂತಲ್ಲಿಂದ ಕದಲಿದಳು.
ಅಪ್ಪನ ಪಾಠ ತಲೆಯಲ್ಲಿ ಗಿರಗಿರಗಿರ ಗಿರಕಿ…
ಓ! ಇದು ಯಾವ ನೆಲ? ಎಲ್ಲಿ ನನ್ನ ಜನ!?
ನಂಬಿಕೆ ಸೋತ ಗಳಿಗೆಯಲ್ಲೇ ಕಾಲು ಎಡವಿ ಬಿದ್ದಳು.
ಎದುರಿಗೊಬ್ಬ ಬಿಳಿ ಬೂಟಿನ ಗಂಡಸು.
ಎಲ್ಲೆಲ್ಲಿಯ ಹೊಲಸು ಮೆಟ್ಟಿ ಬಂದಿದ್ದನೋ!? ಅದೇ ಬೂಟು ಕಾಲನೆತ್ತೆತ್ತಿ ಜೀವ ಸ್ಥಳಕ್ಕೆ ಒದ್ದ.
ಝಾಡಿಸಿ ಝಾಡಿಸಿ ಒದ್ದ.
ಹಾಗೆ ಅಂವ ತನ್ನ ‘ಗಂಡಸು’ತನವನ್ನ ಸಾಬೀತುಪಡಿಸುತ್ತಿದ್ದರೆ, ದೂರದಲ್ಲೊಬ್ಬ ಚೌಕಟ್ಟನೆಯ ಕ್ರಾಪಿನ ಹುಡುಗ, ನೀಟಾಗಿ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದ!
* * *
ಬಟ್ಟೆ ಕಳೆದು ಸಾಕಷ್ಟು ಹೊತ್ತಾಗಿದ್ದರೂ, ಈಗ ಅವಳಿಗೆ ತಾನು ಬೆತ್ತಲಾಗಿದ್ದೇನೆ ಅನಿಸತೊಡಗಿತ್ತು…
ಅವಳ ಪಾಲಿನ ಹೆಮ್ಮೆಯ ಭಾರತ, ಸದ್ದಿಲ್ಲದೆ ಸತ್ತು ಬಿದ್ದಿತ್ತು!

9 thoughts on “ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…

Add yours

 1. ಇತ್ತೀಚೆಗೆ ಜನ ಕಾನೂನು ಕೈಗೆ ತೆಗೆದುಕೊಳ್ಳುವುದು ಹೆಚ್ಚಾಗುತ್ತಿದೆ. ಇದು ಅರಾಜಕತೆಯ ಸಂಕೇತ. ಯಾರಿಗೋ ಹೊಡೆಯಲು ಮಾಧ್ಯಮದವರನ್ನು ಜೊತೆಯಲ್ಲೇ ಕರೆದುಕೊಂಡು ಹೋಗುವುದು ಗುಟ್ಟಾಗೇನೂ ಉಳಿದಿಲ್ಲ. ಇಂಥ ಕೃತ್ಯಗಳಲ್ಲಿ ಮಾಧ್ಯಮದವರ ಪಾಲೂ ಇದೆ ಎಂದು ಭಾವಿಸಿದರೆ ಯಾವ ತಪ್ಪೂ ಇಲ್ಲ!

 2. dharmada hesaralli ivaru madodella bari ‘Karma’gale. ee gandasarige maryade illa hennu maklu uddara adre hottekicchu pado jaati ivrdu, hennu maado yaavude kelsanu ivrige Patya agalla, avrenu madtare annodralle hecchu aasakti ivrige. yella hennu maklu serkond jadsi jasi odibeku ee mundevukke.

 3. ಹೆಣ್ಣು ಕೇವಲ ಆಟದ ವಸ್ತುವಾಗಿದ್ದಾಳೆ…..! ಎಲ್ಲ ಹಂತಗಳಲ್ಲೂ ಅವಳನ್ನು ದರ್ಬಳಕೆ ನಡೆಯುತ್ತಲೇ ಸಾಗಿದೆ. ಸ್ತ್ರೀ ಸಮೂಹ ಒಗ್ಗಟ್ಟಾಗಿ ನಿಂತಾಗ ಮಾತ್ರ ಈ ಹುಚ್ಚಾಟಗಳು ನಿಲ್ಲಲಿವೆ….!

 4. ಸೆರಗು ಸೊಂಟಕೆ ಸುತ್ತಿಕೋ ತಂಗ್ಯವ್ವ ಕುಡುಗೋಲು ಕೈಗೆತ್ತಿಕೋ ತಂಗ್ಯವ್ವ..
  ಅನ್ನುವ ಹೋರಾಟದ ಹಾಡು ನೆನಪಾಗುತ್ತಿದೆ…. ನಮ್ಮ ಹೆಣ್ನು ಮಕ್ಕಳು ಹೀಗ ಅದನ್ನಷ್ಟೆ ಮಾಡಬೇಕಾಗಿದೆ.. ಇಲ್ಲದಿದ್ದರೆ ಈ ದೇಶದಲ್ಲಿ ಉಳಿಗಾಲವಿಲ್ಲ.

 5. ಗಲಾಟೆ ಆಯಿತು, ಅವರನ್ನ ಹಿಡಿಯೋಣ, ಚಚ್ಚೋಣ, ನೇಣಿಗೂ ಹಾಕೋಣ….ಆದ್ರೆ
  ಈ ರೀತಿ ಆಗಲಿಕ್ಕೆ ಕಾರಣವಾದರು ಏನು, ನಾವೇಕೆ (ಪುರುಷರು), sudden ಆಗಿ ಈ ರೀತಿ ಲಜ್ಜೆ ಗೆಟ್ಟವ್ರು ಆಗಿ ಬಿಟ್ಟಿದ್ದೀವಿ, ಕೆಲವೇ ವರುಷಗಳ ಹಿಂದೆ ಇದ್ದ ಭಯ ಭಕ್ತಿ ಏನಾಯಿತು.
  ಬೀದಿಯಲ್ಲಿ ಯಾರನ್ನೇ ನೀವು ಗಮನಿಸಿದರೂ, maximum ಅವರ ಕಣ್ಣುಗಳು most of the times, ಹುಡುಗಿಯರ ಎದೆಯ ಮೇಲೆಯೇ ಇರುತ್ತದೆ, ನನ್ನನ್ನೂ ಸೇರಿಸಿಯೇ ಹೇಳುತ್ತಿದ್ದೇನೆ.
  ಇದು ಯಾರು ಒಪ್ಪಲಿ ಬಿಡಲಿ, this is universal truth and everyone knows that.
  ನಿಮ್ಮ ಅಕ್ಕ ತಂಗಿಯರನ್ನು ಇದೆ ರೀತಿ ನೋಡುತ್ತೀರಾ ಎನ್ನುವವರಿಗೆ, ಆ ಹೊಲಸು incest ಬಹುಷಃ ಈಗಾಗಲೇ ಬಹಳಷ್ಟು ಮಂದಿಯ ಮನಸ್ಸನ್ನು ಹೊಕ್ಕಿಯಾಗಿದೆಯೇನೋ..!
  ಇಷ್ಟು ಧೈರ್ಯವಾಗಿ ಅಂಜಿಕೆ ಇಲ್ಲದೆ ಈ comment ಬರೆಯುತ್ತಿರುವುದು ಕೂಡ ಒಂದು ರೀತಿಯ ನೈತಿಕ ಅದಃಪತನವೆ? i don’t know?
  ಪ್ರಶ್ನೆ ಒಂದೇ…! ಇದಕ್ಕೆ ಕಾರಣವಾದರೂ ಏನು (ಯಾರು ಅಲ್ಲ )
  Any biological transition in our hormones?
  ಯೋಚಿಸ್ಬೇಕಾದಂತ ವಿಷಯ ಅನ್ಸುತ್ತೆ
  “Its better to operate Cancer rather than wrapping bandage” isn’t it?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: