ಡಂಡರಡಟ್ಟರ ಡಂಡರಡಟ್ಟರ ಡಂಡರ….
ಪಟ್ಟೆಪಟ್ಟೆ ಹುಲಿರಾಯ ಬಾಯಲ್ಲಿ ನಿಂಬೆ ಹಣ್ಣು ಕಚ್ಚಿಕೊಂಡು ಕುಣೀತಿದ್ದರೆ ಕಾಲು ನಿಲ್ಲುತ್ತಿರಲಿಲ್ಲ ನಂದು. ಕುಣಿತದ ಲಯಕ್ಕೆ ನನ್ನ ಕೊಟ್ಟುಕೊಳ್ಳುತ್ತಾ ಹುಲಿಯ ಚೂಪು ಉಗುರು, ಕೋರೆ ಹಲ್ಲುಗಳೆಲ್ಲ ಮರೆತು ಬರೀ ಶಬ್ದದ ಮೋಡಿ ಉಳಿಯುತ್ತಾ ಹುಲಿ ವೇಷ ತೊಟ್ಟು ಕೆಂಪಗಿನ ಕಣ್ಣು ಗಿರ್ರನೆ ತಿರುಗಿಸ್ತಾ ಕುಣಿಯುತ್ತಿದ್ದವರ ಪಟ್ಟಿನಲ್ಲಿ ಕಳೆದುಹೋಗುತ್ತಾ…
ಅಪ್ಪ ಬಯ್ತಿದ್ದರು. ಗಂಡುಬೀರಿ ಹಾಂಗೆ ನಡೂ ಅಂಗಳದಲ್ಲಿ ನಿಂತುಕೊಳ್ಳೋದು ಎಂತಕ್ಕೆ? ಬಾರೆ ಒಳಗೆ…
ನಾನು ಒಳಗೆ ಹೋಗುತ್ತಿದ್ದೆ, ಜಾಣ ಮಗಳಂತೆ. ಹಿತ್ತಿಲ ಬಾಗಿಲು ನನಗಾಗಿ ಇರಿಸಿದ ಹಾಗಿತ್ತು. ಕಡತ ಹರಡ್ಕೊಂಡುಬಿಟ್ಟರೆ ಜಪ್ಪಯ್ಯ ಅಂದರೂ ಹೊರಬಾರದ ಅಪ್ಪನ್ನ ನೆಚ್ಚಿಕೊಂಡು ಹುಲಿಯವನ ಹಿಂದೆ ಹೊರಟು ಹೋಗುತ್ತಿದ್ದೆ.
ಒಂದರ್ಧ ಗಂಟೆ… ಕೇರಿ ಪೂರ್ತಿ ಬೇಟೆಯಾಡಿ ಹುಲಿವೇಷದವರು ಯಾವುದಾದರೂ ಗಡಂಗಿನಂಗಡಿ ಹೊಕ್ಕುತ್ತಿದ್ದರು, ನಾನು ಮನೆಗೆ.
ಆಮೇಲೆ ತುಂಬಾ ಹೊತ್ತು ಮೌನ. ನನ್ನ ಮೈ ಮನಸ್ಸಿನೊಳಗೆಲ್ಲಾ ಹುಲಿ ಹುಲಿ. ಯಾವುದೆಲ್ಲ ಜನ್ಮದ ಉರಿಗಳು ನೆನಪಾಗಿ ಡಂಡರಗುಟ್ಟುತ್ತಿದ್ದವು, ನಾನು ಕುಣಿಯುತ್ತಿದ್ದೆ, ಒಳಗೊಳಗೆ….
~
ನಮ್ಮೂರಲ್ಲಿ ಹಿಂಗೆ ಹುಲಿವೇಷ ಕಟ್ಟುವುದು ದಸರೆಯ ಸಮಯದಲ್ಲಾಗಿತ್ತು. (ಈಗಲೂ)
ನವರಾತ್ರಿ, ದಸರಾ ನನಗೆ ಒಂಥರಾ ಖುಷಿಖುಷಿಯ ಹಬ್ಬ. ಮನೆಯ ಹಳೆ ಹಸಿರು ಕಬ್ಬಿಣದ ಟೇಬಲ್ಲಿಗೆ ಆಗ ರಾಜಮರ್ಯಾದೆ. ನಾವು ಕೊಬ್ಬರಿ ಮಿಠಾಯಿ ಶಾಲು ಅಂತ ಕರೀತಿದ್ದ ಆರೆಂಜ್ ಶಾಲನ್ನ (ಯಾಕೆ ಹಂಗನ್ತಿದ್ವಿ ಅನ್ನೋದು ಮತ್ತೊಂದು ಸ್ಟುಪಿಡ್ ಕಥೆ!) ಅದರ ಮೇಲೆ ಹಾಸಲಾಗ್ತಿತ್ತು. ಚೌಕ ಚೌಕದ ಡಬ್ಬಗಳನ್ನ ಹಿಂದಕ್ಕೆ ಜೋಡಿಸಿ, ಅದರ ಮೇಲೆ ಬಣ್ಣದ ಕಾಗದ ಹಾಕಿ ಮುಚ್ಚಿ, ನಮ್ಮಜ್ಜನ ಅಪ್ಪನ ಕಾಲದ ರಾಮ ಸೀತೆ ಲಕ್ಷ್ಮಣರನ್ನ ನಿಲ್ಲಿಸ್ತಿದ್ದೆವು. ಕೆಳಗೆ ಹನುಮ ಮಂಡಿಯೂರಿ ಕುಂತಿರುತ್ತಿದ್ದ. ಅದರ ಮುಂದಿನ ಸಾಲುಗಳಲ್ಲಿ ರಾಧಾ ಕೃಷ್ಣ, ಶಿವ ಸಂಸಾರ, ಮಣ್ಣಿನ ಮಾಡ್ರನ್ ಗೊಂಬೆಗಳು ಇತ್ಯಾದಿ. ಆಮೇಲೆ ಕವಲೊಡೆದ ಸಾಲುಗಳಲ್ಲಿ ಪಿಂಗಾಣಿ ಗೊಂಬೆಗಳು. ಆಮೇಲೆ, ಎದುರುಗಡೆ ಒಂದಷ್ಟು ಕಪ್ಗಳಲ್ಲಿ- ಅವು ನಮ್ಮಪ್ಪನ ಟೈಪ್ ರೈಟರಿನ ಟೇಪಿನ ಬಾಕ್ಸ್ ಗಳು- ಅಕ್ಕಿ, ಬೇಳೆ ಇತ್ಯಾದಿಗಳನ್ನ ಹಾಕಿ, ಒಂದು ಚಿಕ್ಕ ಸ್ಟೂಲ್ ಆಟಿಕೆ ಮೇಲೆ ಉದ್ದ ಮೂಗಿನ ರಬ್ಬರ್ ಗಂಡಸನ್ನ ಕೂರಿಸ್ತಿದ್ದೆವು. ‘ತ್ತಿದ್ದೆವು’ ಅಂದ್ರೆ, ನಮ್ಮಪ್ಪ ಹೀಗೆಲ್ಲಾ ಕೂರಿಸ್ತಿದ್ದರು. ಗೊಂಬೆ ಕೂರಿಸೋದು ಹುಡುಗೀರ ಹಬ್ಬವಾದರೂ ಎಲ್ಲಾದೂ ತನ್ನಂತೆ ನಡೆಯಬೇಕು ಅಂದುಕೊಳ್ತಿದ್ದ ಅಪ್ಪ, ಅಮ್ಮನಿಗಾಗಲೀ ನನಗಾಗಲೀ ಓರಣ ಮಾಡಲಿಕ್ಕೆ ಬರುತ್ತೆ ಅಂತ ಯಾವತ್ತೂ ನಂಬಿರಲಿಲ್ಲ.
ನಂಗೆ ದೊಡ್ಡ ದೊಡ್ಡ ಕಣ್ಣು ಬಿಟ್ಕೊಂಡ ಕಾಳಿ ತುಂಬಾ ಇಷ್ಟ. ಅವಳನ್ನೇ ಸ್ವಲ್ಪ ಕೆಂಪಗೆ ಮಾಡಿ ದುರ್ಗೆ ಅಂದರೆ, ಅವಳೂ ಇಷ್ಟಾನೇ. ನಾನು ಚಿಕ್ಕವಳಿದ್ದಾಗಿಂದ ಕೇಳಿದ್ದಂತೆ, ‘ಹೆಂಗಸರಿಂದ ಮಾತ್ರ ಸಾವು ಬರಲಿ’ ಅಂದನಂತೆ ಮುಟ್ಠಾಳ ರಾಕ್ಷಸ. ‘ಹೆಂಗ್ಸಿನ ಕೈಲೇನಾಗತ್ತೆ ಗೊಲ್ಟೆ?’ ಅಂದುಕೊಂಡಿದ್ದನೇನೋ? ಅಂತೂ ಹಂಗೇ ಬಳೆ ತೊಟ್ಟ ಕೈಯಿಂದ ಶೂಲ ತಿವಿಸಿಕೊಂಡೇ ಸತ್ತನಲ್ಲ! ಅಂತ ನಂಗೆ ಖುಷಿಯಾಗುವುದಿತ್ತು. ಹಂಗಂತ ಹೇಳಿದ್ದಕ್ಕೆ ಅಪ್ಪ, ‘ಹಂಗೇನಿಲ್ಲ, ಎಲ್ಲಾ ದೇವ್ರುಗಳೂ ಒಂದೊಂದು ಶಕ್ತೀನ ಅವಳ ಮೈಯೊಳಗೆ ತುಂಬಿದ್ರು. ಅವಳು ಕೊಂದ ಶೂಲನೂ ಶಿವಂದೇ’ ಅಂದು ನೀರೆರಚಲು ಟ್ರೈ ಮಾಡುತ್ತಿದ್ರು.
ವಾದ ಮಾಡಿದರೆ ಆಗುವ ಗತಿ ಗೊತ್ತಿರುತ್ತಿದ್ದರಿಂದ, ನನ್ನ ಪಾಡಿಗೆ ಖುಷಿ ಕಂಟಿನ್ಯೂ ಮಾಡಿಕೊಳ್ತಿದ್ದೆ. ಉದ್ದ ಲಂಗ ತೊಟ್ಟು ‘ಗೊಂಬೆ ಕೂರ್ಸಿದೀವಿ, ಅರಿಷಿಣ ಕುಂಕುಮಕ್ಕೆ ಬನ್ನಿ’ ಅಂತ ಕರೆಯಲು ಹೋಗುತ್ತಿದ್ದೆ. ಅಷ್ಟೂ ದಿನ ಗೊಂಬೆಗಳನ್ನ ನೋಡಿ ಸಂಭ್ರಮಪಡುತ್ತಿದ್ದೆ.
ಗೊಂಬೆ ಬಾಗಿನ ತೆಗೆದ್ಕೊಂಡವರು, ‘ಒಳ್ಳೆ ಗೊಂಬೆ ಹಾಗೆ ಆಗಿದಾಳೆ ಮಗಳು’ ಅನ್ನುತ್ತಾ ಅಮ್ಮನ ಕಡೆ ನಿಗೂಢವಾದ ನಗು ವಗಾಯಿಸಿ ಹೋಗ್ತಿದ್ದರು.
~
ಈಗ ಮತ್ತೆ ದಸರೆ.
ನನ್ನೊಳಗಿನ ಗಂಡುಬೀರಿತನ ಹಾಗೇ ಇದೆ. ಖುಷಿಯಿಂದ ಅದನ್ನ ಒಳಗಿಟ್ಟುಕೊಂಡಿದೇನೆ.
ಅಜ್ಜನ ಅಪ್ಪನ ಕಾಲದ ರಾಮ ಸೀತೆ ಲಕ್ಷ್ಮಣರ ಗೊಂಬೆಗಳು ಅಣ್ಣನ ಮನೆ ಶೋಕೇಸಿನಲ್ಲಿ ಅನಾಥ ನಿಂತಿವೆ. ಹನುಮಂತ ಯಾವತ್ತೋ ಬಾಲ ಮುರಿದುಕೊಂಡು ಅರಳೀ ಮರದ ಕೆಳಗೆ ಹೂತು ಹೋಗಿದ್ದಾನೆ.
ಅಪ್ಪನಿಗೆನೋ ಗೊಂಬೆ ಜೋಡಿಸುವ ಆಸೆ, ಚಿರಂಜೀವಿ ಕೊಬ್ಬರಿಮಿಠಾಯಿ ಶಾಲಿನಂತೆ ಬಲವಾಗಿದೆ. ಆದರೆ ಆ ಹಸಿರು ಕಬ್ಬಿಣದ ಟೇಬಲ್, ಅದನ್ನಿಡಲೊಂದು ಜಾಗ ಎಲ್ಲೂ ಸಿಗುತ್ತಿಲ್ಲ.
ಇಷ್ಟಕ್ಕೂ ಈಗ ಅಪ್ಪನ ಮರ್ಜಿ ನಡೆಯೋದಿಲ್ಲ.
ಆದರೂ ದಸರೆ ಅಂದರೆ ಖುಷಿಯೇ. ಗೆಲ್ಲುವ ಹೆಣ್ಣುಗಳ ಉತ್ಸವ, ನನಗೆ ನನ್ನನ್ನೇ ಆಚರಿಸ್ಕೊಳ್ತಿರುವಂತೆ ಅನಿಸುತ್ತೆ.
ಜೋಡಿಸಿಟ್ಟ ಗೊಂಬೆಗಳೆಲ್ಲ ಮಾತು ಕಲಿತಿದ್ದಾವೆ. ಅವು ನಿಲ್ಲಿಸಿದಲ್ಲಿ ನಿಲ್ಲದೆ, ಎದುರು ಬಾಗಿಲಿಂದಲೇ ಹುಲಿವೇಷದ ಸದ್ದಿನ ಜಾಡು ಹಿಡಿದು ಹಾರಿಹೋಗುತ್ತಿವೆ ಅನಿಸುತ್ತೆ.
ha ha 🙂 Nammure chandavo 😉
ಜೋಡಿಸಿಟ್ಟ ಗೊಂಬೆಗಳೆಲ್ಲ ಮಾತು ಕಲಿತಿದ್ದಾವೆ. ಅವು ನಿಲ್ಲಿಸಿದಲ್ಲಿ ನಿಲ್ಲದೆ, ಎದುರು ಬಾಗಿಲಿಂದಲೇ ಹುಲಿವೇಷದ ಸದ್ದಿನ ಜಾಡು ಹಿಡಿದು ಹಾರಿಹೋಗುತ್ತಿವೆ ಅನಿಸುತ್ತೆ.:) bhala chanda baraha
ಚೇತನ ನಮ್ಮೂರ ಹುಲಿವೇಷ ನೆನಪಿಸಿದ್ದಿರ.. ಅದರ ಜೊತೆಗೆ ಗೊಂಬೆ ಜೋಡಿಸುವ ನೆನಪು…ನನ್ನ ಇನ್ನೊಂದು ನೆನಪೆಂದರೆ ವಿಜಯದಶಮಿಯ ದಿನ ನಮ್ಮ ಪಾರ್ಕನಲ್ಲಿ ನಡೆಯುವ ಬನ್ನಿ ಹಬ್ಬ…ಸಾವಿರ ಸಾವಿರ ನೆನಪುಗಳು… :))