ನನ್ನ ಪಾಲಿಗೆ ಈ ವರ್ಷ ಕಲಿಕೆಯ ಅದ್ಭುತ ಅವಕಾಶವಿತ್ತ ವರ್ಷ. ಎಷ್ಟೆಲ್ಲ ಸವಾಲುಗಳು ಸಾಲುಗಟ್ಟಿ ಬಂದಿದ್ದವು! ನನ್ನೆದೆಯೊಳಗಿನ ಹೋಮಾ ಹಕ್ಕಿ, ಉರಿದು ಬಿದ್ದರೂನು ಬೂದಿಯಾಗಲಿಲ್ಲ. ಮಾಯಾಳ ಮಾತು ಕಾಪಿ ಹೊಡೆದೆ. ‘ದೂಳ ಕಣವಾಗಿಯಾದರೂನು, ಮೇಲೇಳುತ್ತೇನೆ ನಾನು’ ಅಂದೆ. ಹಾಗೇ ಎದ್ದು ಬಂದೆ ಕೂಡಾ.
ಹೀಗೆ ವರ್ಷಕ್ಕೊಂದು ಸಾರ್ತಿ ಹೊಸ್ತಿಲ ಮೇಲೆ ನಿಂತುಕೊಂಡು ಒಳಹಣಕಿ ನೋಡೋದೊಂದು ಮಜಾ. ಆಯಾ ಹೊತ್ತಿನಲ್ಲಿ ಖುಷಿಯವು, ದುಃಖದವು ಎನ್ನಿಸಿದ್ದ ಘಟನೆಗಳೆಲ್ಲವನ್ನ ಸಿನೆಮಾದಂತೆ ನೋಡಿ ಒಂದು ನಿರುಮ್ಮಳದ ಉಸಿರು ತಳ್ಳುವುದು ಕೂಡ. ಅದೊಂದು ನೋವಿಗೆ ನಾನು ಎದೆ ಬಿರಿದು ಅತ್ತಿದ್ದು ಹಾಹಾಗೇ ನೆನಪಾದರೂ ಈ ಕ್ಷಣ ಅದರ ಕಾವು ತಟ್ಟುತ್ತಿಲ್ಲ. ಸಂತಸದ ಬಿಸುಪು ಕೂಡಾ. ಅವತ್ತಿನ ಪುಳಕವನ್ನ ಅದೇ ತೀವ್ರತೆಯಲ್ಲಿ ಮೂಡಿಸುತ್ತಿಲ್ಲ.
~
ನಾವು ಎಷ್ಟೇ ಹಿಡಿದಿಡುತ್ತೀವೆಂದರೂ ಬದುಕು ಮೂಡಿಸೋದು ಗಾಳಿಯಲ್ಲಿನ ಹಕ್ಕಿ ಹೆಜ್ಜೆಯ ಗುರುತಿನಷ್ಟೇ ಛಾಪು.
ಆದರೂ ನಾನು ಹೆಕ್ಕುತ್ತೇನೆ, ಕಾಪಿಡಬಹುದಾದ ನೆನಪುಗಳನ್ನ. ಹೀಗೆ ಸಿಕ್ಕು ಹಾಗೆ ಹೊರಟುಹೋದ ಸಹಯಾತ್ರಿಗಳನ್ನ. ಮಿಂಚಿ ಮರೆಯಾದ ಕನಸುಗಳನ್ನ. ಹಾಗೆಯೇ ಹೆಕ್ಕುತ್ತೇನೆ ಅವೆಲ್ಲ ಕಹಿಯನ್ನ, ಕೆಡುಕರನ್ನೂ. ಕೆಲವರನ್ನ ನೋಡಿ ಹೇಗಿರಬೇಕೆಂದು ಕಲಿಯಬೇಕಲ್ಲವೇ? ಹಾಗೇ ಕೆಲವರನ್ನ ನೋಡಿ ಹೇಗಿರಬಾರದು ಅಂತಲೂ ಕಲಿಯಬೇಕು. ಅದಕ್ಕಾಗಿ…ಹಳೆ ತಪ್ಪುಗಳನ್ನ ನೆನಪಿಟ್ಟುಕೊಂಡರೆ ಹೊಸ ತಪ್ಪುಗಳನ್ನ ಮಾಡೋಕೆ ಅನುಕೂಲ.
ನನ್ನ ಪಾಲಿಗೆ ಈ ವರ್ಷ ಕಲಿಕೆಯ ಅದ್ಭುತ ಅವಕಾಶವಿತ್ತ ವರ್ಷ. ಎಷ್ಟೆಲ್ಲ ಸವಾಲುಗಳು ಸಾಲುಗಟ್ಟಿ ಬಂದಿದ್ದವು! ನನ್ನೆದೆಯೊಳಗಿನ ಹೋಮಾ ಹಕ್ಕಿ, ಉರಿದು ಬಿದ್ದರೂನು ಬೂದಿಯಾಗಲಿಲ್ಲ. ಮಾಯಾಳ ಮಾತು ಕಾಪಿ ಹೊಡೆದೆ. ‘ದೂಳ ಕಣವಾಗಿಯಾದರೂನು, ಮೇಲೇಳುತ್ತೇನೆ ನಾನು’ ಅಂದೆ. ಹಾಗೇ ಎದ್ದು ಬಂದೆ ಕೂಡಾ.
ಶ್ಶ್… ಬೆನ್ನು ತಟ್ಟಿಕೊಳ್ಳಬಾರದು ಹಾಗೆಲ್ಲ… ಹ್ಮ್.. ಆ ಎಚ್ಚರವಿದೆ 🙂 . ಆದರೂ ಇಂಥಾ ಜಂಭಗಳು ನನ್ನೊಳಗಿನ ಹೋರಾಟಕ್ಕೆ ಜೀವ ಕೊಡುತ್ತವೆ. ಆತ್ಮವಿಶ್ವಾಸ ತುಂಬುತ್ತವೆ… ಹಾಗೆ ಈ ಗೆಲುವಿನ ಭ್ರಮೆಗಳು ತಲೆಗೇರದಂತೆ ಅಸ್ತಿತ್ವ ಕೊಟ್ಟ ಚಪ್ಪಲಿಯೇಟುಗಳನ್ನೂ ಸಾಕಷ್ಟು ತಿಂದಿದ್ದೀನಿ. ಸಮತೋಲನ ಉಳಿಸಿಕೊಂಡಿದ್ದೀನಿ.
~
ಈ ವರ್ಷದ ಶುರುವಲ್ಲಿ ನಾನು ಒಂದು ದಿನವನ್ನೂ ಬಾಕಿ ಉಳಿಸದೆ ಡೈರಿ ಬರೀತೀನಿ ಅಂದುಕೊಂಡಿದ್ದೆ. ಹಾಗೇನೂ ಆಗಲಿಲ್ಲ. ಫೆಬ್ರವರಿಗೆ ದಿನಗಳು ಹಾರುತ್ತಾ ಮಾರ್ಚಿಗೆ ವಾರಗಳು ಉರುಳಿ, ಏಪ್ರಿಲ್ – ಮೇ ಹೊತ್ತಿಗೆ ನಿಂತೇ ಹೋಗಿತ್ತು. ನಿರೀಕ್ಷೆಯಷ್ಟು ಏರದ ಸ್ಯಾಲರಿಯ ಬಗ್ಗೆ ಬರೆದುಕೊಂಡ ಅಸಮಾಧಾನದೊಂದಿಗೆ ಡೈರಿ ಮುಗಿದಿತ್ತು.
ನಾನು ಬರೆದಿದ್ದರೂ ಪುಟ ಮಡಚಿಡಬೇಕಿದ್ದ ಎಷ್ಟೆಲ್ಲ ಗುಟ್ಟುಗಳು ಹಾಗೇ ಉಳಿದುಹೋದವು? ಇದರ ಪಟ್ಟಿ ಉದ್ದವಿದೆ. ಅದರಲ್ಲಿ ಅವನ ಹೆಸರೇ ಮೊದಲನೆಯದ್ದು. ಆಮೇಲಿನದ್ದೂ ಅವನ ಸುತ್ತಮುತ್ತವೇ…
ಮಗನ್ನ ನನ್ನ ಜತೆಗೇ ಉಳಿಸಿಕೊಂಡಿದ್ದು, ನನ್ನ ಕಳೆದ ಜನ್ಮದೂರು (ಓಹ್, ನಿಜ್ಜ…) ಲಡಾಖಿಗೆ ಹೋಗಿ ಬಂದಿದ್ದು, ಬೇಕು-ಬೇಡ ಎನ್ನುತ್ತಾ ಎರಡು ಪುಸ್ತಕ ಪ್ರಕಟಿಸಿದ್ದು, ಫೇಸ್ಬುಕ್ನಲ್ಲಿ ಪಿಎಚ್ಡಿ ಮಾಡ್ತಿರೋದು (!?), ಬ್ಲಾಗಿಂಗ್ ಕಡಿಮೆ ಮಾಡಿದ್ದು, ಕೆಲಸ ಜಾಸ್ತಿ ಮಾಡ್ತಿರೋದು,ಹುಟ್ಟಿದ ಇಷ್ಟು ವರ್ಷಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದು, ಅರ್ಥ ಕಳಕೊಂಡು ಏಳು ವರ್ಷಗಳಾಗಿದ್ದರೂ ಹದಿನೈದು ವರ್ಷದ ಲೆಕ್ಕವಿಟ್ಟುಕೊಂಡಿದ್ದ ಗಂಟು ಬಿಡಿಸಿಕೊಂಡಿದ್ದು…. ಈ ಎಲ್ಲವೂ ನನ್ನ ಪಾಲಿಗೆ ಈ ವರ್ಷದ ಮುಖ್ಯ ಘಟನೆಗಳೇ.
~
ಮುಂದಿನ ವರ್ಷಕ್ಕೇನು ಮಾಡೋದು?
ಈವರೆಗಿನ ಹೆಜ್ಜೆಗಳೆಲ್ಲ ಹೆಸರಿಲ್ಲದೆ ಅಳಿಸಿಹೋಗಲಿ ಎಂಬ ತುಡಿತವಿರುವಾಗ, ಮುಂದಿನ ಹೆಜ್ಜೆಗಳ ಬಗ್ಗೆ ಯೋಜನೆ ಮಾಡಿಕೊಳ್ಳೋದು ಹೇಗೆ?
ಬಂಡೆಯಾಗಿದ್ದು ಸಾಕು ಅನ್ನಿಸುತ್ತಿದೆ. ಎದೆಕಟ್ಟಿ ಬಿಗುವಾಗಿ ನಿಂತೂನಿಂತ ಸುಸ್ತು.
ಗಾಳಿಯಾಗುವಾಸೆ. ಆವಿಯಾಗಿ ಇಲ್ಲವಾಗಿಬಿಡುವಾಸೆ…
ನನ್ನ ಹೆಜ್ಜೆ ಹೆಜ್ಜೆಗೆ ಹೊಸ ಭೂಮಿ ತೆರೆದುಕೊಳ್ಳಲಿ. ಮುಂದಿನ ಪ್ರತಿ ಕ್ಷಣ ನಿಗೂಢವೇ ಆಗಿರಲೆನ್ನುವ ಬಯಕೆ.
ಹಾರೈಸಿ ನೀವೂ. ನಿಮಗೆ ನನ್ನ ಹಾರೈಕೆ.
all the best akka 🙂
ನನ್ನ ಕಡೆಯಿಂದ ನಿಮಗೆ ಶುಭಹಾರೈಕೆಗಳು. 🙂
ಹಿಂದಿರುಗಿ ನೋಡದ ಗಂಗೆ, ತಾನು ಹರಿದು ಬಂದ ದಾರಿಯನ್ನೇಕೆ ವರ್ಣಿಸಿದಳು? – ದೇವವ್ರತನ ಜನ್ಮವಾಯ್ತೆ?! 🙂