ಕಟ್ಟುಬೀಳುವ ಭಯ


ನೀನಂದ್ರೆ ನಂಗಿಷ್ಟ. ನೀನಿಲ್ಲಾಂದ್ರೆ ನಂಗೆ ಬದುಕೇ ಇಲ್ಲ. ನಿನ್ನಿಂದ್ಲೇ ಹಗಲು, ನಿನ್ನಿಂದ್ಲೇ ರಾತ್ರಿ… ಅಂತೆಲ್ಲಾ ಹಾಡು ಹೇಳೊ ಹುಡುಗ, ಹಗಲೂ ರಾತ್ರಿ ನಿನ್ನ ಜತೆಗೇನೇ ಇರ್ತೀನಿ ಕಣೋ ಅಂದಾಗಿಂದ ದೂರವಾಗತೊಡಗಿದ್ದಾನಲ್ಲ!? – ಹೆಸರು ಬೇಡ, ದೂರದೂರು.
ಈ ಥರದ ಪ್ರಶ್ನೆ ಯಾವುದಾದ್ರೂ ಆಪ್ತಸಲಹೆ ಕಾಲಮ್‌ನಲ್ಲಿ ಕಾಣಸಿಕ್ಕೀತು. ಈ ಪ್ರಶ್ನೆ ಓದಿಯೇ ಸುಮಾರು ಜನರಲ್ಲಿ `ಅರ್ರೆ! ಅವನೂ/ ಅವಳೂ ಹಿಂಗೇ ಮಾಡ್ತಾಳಲ್ಲ ‘ ಅಂತಲೋ, `ನಾನೂ ಹಿಂಗೇ ಅಲ್ವಾ?’ ಅಂತಲೋ ಅನ್ನಿಸಲು ಶುರುವಾಗಬಹುದು. ಆಗೋದು ಹಾಗೇನೆ. ಬೇರೆಯವರ ಸಮಸ್ಯೆ ಗೊತ್ತಾದಾಗ, ನಮ್ಮಲ್ಲೂ ಅದನ್ನ ಹುಡುಕತೊಡಗುತ್ತೇವೆ. ಸಿಗದೆ ಹೋದರೆ ಹುಟ್ಟಿಸ್ಕೊಳ್ತೇವೆ. ಅದರ ಸಂಗತಿ ಪೂರಾ ಬೇರೆ.
ಈ ಮೇಲಿನ ಪ್ರಶ್ನೆಗೆ ಉತ್ತರ – `ಅವನೊಬ್ಬ ಸುಳ್ಳುಗಾರ, ಜೋಪಾನ’ ಅಂದುಬಿಟ್ಟರೆ ತಪ್ಪಾದೀತು. ಅಂವ ಸುಳ್ಳುಗಾರ ಅಲ್ಲದೆಯೂ ಇರಬಹುದು. ಅವನಿಗೆ ಅವಳ ಮೆಲೆ ನಿಜ್ಜನಿಜ ಪ್ರೀತಿ ಇದ್ದಿರಲೂಬಹುದು. ಹಾಗಾದರೆ ಹಗಲಿರುಳು ಜತೆಗಿರುವಂತೆ ಮದುವೆಯಾಗಲಿಕ್ಕೇನು ಪ್ರಾಬ್ಲಮ್? `ಅದು ಕಮಿಟ್‌ಮೆಂಟ್‌ಫೋಬಿಯಾ’.
ಇದನ್ನ ಬೇರೆ ಬೇರೆ ವಿಷಯಗಳಲ್ಲಿ ನೋಡಬಹುದಾದರೂ ಲವ್‌ಲೈಫಿನಲ್ಲಿ ತ್ರಾಸು ಕೊಡೋದು ಹೆಚ್ಚು. ಯಾಕಂದರೆ, ಕೆಲಸ, ಯಾವುದೋ ಒಂದು ವಸ್ತುವಿನ ಆಯ್ಕೆ- ಇವುಗಳನ್ನ ಯಾವಾಗ ಬೇಕಾದರೂ ಬದಲಿಸಬಹುದು. ಅವುಗಳೊಟ್ಟಿಗೆ ಮಾನವೀಯ ಅಟ್ಯಾಚ್‌ಮೆಂಟ್ ಇರೋದಿಲ್ಲ. ಆದರೆ ಸಂಗಾತಿಯ ವಿಷಯದಲ್ಲಿ ಹಾಗಲ್ಲ. ಕಮಿಟ್‌ಮೆಂಟ್‌ಫೋಬಿಯಾ ಕಾಡತೊಡಗಿ, ಮುರಿದುಕೊಂಡು ಹೊರಬಂದರೂ ಪ್ರೀತಿಯ ಎಳೆಯೊಂದು ಯಾವಾಗಲೂ ಮೀಟುತ್ತ ಇರುತ್ತೆ. ಕೆಲವೊಮ್ಮೆ ಅದರ ನೋವು ಹಾಗೇ ಉಳಿದುಬಿಡುತ್ತೆ.

ಪ್ರೇಮ ಕಾರಣ
`ಎಲ್ಲೀವರೆಗೂ ಭಯ ಇರುತ್ತೋ ಅಲ್ಲೀವರೆಗೆ ಯಾರನ್ನೂ ಪ್ರೀತಿಸೋಕೆ ಸಾಧ್ಯವಾಗೋಲ್ಲ. ಭಯ ಹೋದ ಹೊತ್ತಲ್ಲೇ ಪ್ರೀತಿ ನೆಲೆಯಾಗುತ್ತೆ’ ಅನ್ನುತ್ತಾರೆ ಓಶೋ. ಯಾರನ್ನಾದರೂ ಪ್ರೀತಿಸ್ತೇವೆ ಅನ್ನುವ ಭಾವನೆಯ ಜತೆಗೇ ಕೆಲವರಲ್ಲಿ ಪ್ರೇಮಿಯನ್ನ ಕಳಕೊಂಡುಬಿಟ್ಟರೆ! ಅನ್ನುವ ಸ್ಟುಪ್ಪಿಡ್ ಭಯ ಹುಟ್ಟಿಕೊಂಡುಬಿಡುತ್ತೆ. ಹಾಗೆ ಕಳಕೊಂಡಮೇಲೆ ಸೈರಿಸ್ಕೊಳ್ಳುವ ಶಕ್ತಿ ಬೇಕಾಗುತ್ತಲ್ಲ, ಆಗ ಬಾಂಧವ್ಯದ ಬದ್ಧತೆಯಿಂದ, ಅಂದರೆ ಕಮಿಟ್‌ಮೆಂಟ್‌ನಿಂದ ದೂರ ಸರಿಯತೊಡಗುತ್ತಾರೆ. ಆಗಲೇ ಶುರುವಾಗೋದು ಕಮಿಟ್‌ಮೆಂಟ್‌ಫೋಬಿಯಾ.
ಕೊನೆತನಕ ಬಾಳುವ ಪ್ರೀತಿ ಬೇಕು, ತಾನು ಇನ್ನಿಲ್ಲದಂತೆ ಪ್ರೀತಿಸಲ್ಪಡಬೇಕು ಅನ್ನುವ ಅತಿಯಾದ ನಿರೀಕ್ಷೆ ಇದಕ್ಕೆ ಮೂಲ. ಇಂಥಹಾ ನಿರೀಕ್ಷೆಯ ಜತೆಗೇ ಜಗತ್ತು ಅದಕ್ಕೆ ಪೂರಕವಾಗಿಲ್ಲವೆಂಬ ರಿಯಾಲಿಟಿ ಅನುಭವಕ್ಕೆ ಬರತೊಡಗುತ್ತದೆ. ತನ್ನ ಹಂಬಲ ನೆರವೇರುವುದಿಲ್ಲ ಅನ್ನಿಸತೊಡಗಿದಾಗ, ಇನ್ನು ಸಂಬಂಧದಿಂದ ಪ್ರಯೋಜನವೇನು ಅನ್ನುವ ಹುಸಿ ವೈರಾಗ್ಯ ಮೂಡುತ್ತದೆ. ನನಗೆ ಬೇಕಾದ್ದು ಸಿಗಲಾರದ ಮೇಲೆ ನಾನೇಕೆ ಕಟ್ಟುಬೀಳಬೇಕು ಅನ್ನುವ ಧೋರಣೆ ತೀವ್ರವಾಗಿ, ಸಂಬಂಧದಿಂದ ಹೊರಬರುವ ತುಡಿತ ತೀವ್ರವಾಗುತ್ತದೆ. ಕೆಲವರು ಸಮಾಜ ಮತ್ತು ಪ್ರತಿಷ್ಠೆಯ ಚೌಕಟ್ಟಿಗೆ ಢಿಕ್ಕಿ ಹೊಡೆಯುತ್ತಾ ಅದರೊಳಗೇ ಚಡಪಡಿಸುತ್ತ ಉಳಿದುಹೋಗುತ್ತಾರೆ. ಇನ್ನು ಕೆಲವರಿಗೆ ಅದನ್ನು ಮೀರಿ ಹೊರಬರಲು ಸಾಧ್ಯವಾಗುತ್ತದೆ. ಒಳಗೇ ಉಳಿದು ಹೋದವರು ತಮ್ಮ ಸ್ಥಿತಿಯ ಬಗ್ಗೆ ಸ್ವಾನುಕಂಪ ಹೊಂದುತ್ತ ದುಃಖಪಡುತ್ತಾರೆ. ದುರಂತ ಎಂದರೆ, ಹೊರಹೋದವರೂ ಹೀಗೆ ನನ್ನವರು ಯಾರಿಲ್ಲವೆಂಬ ಸ್ವಾನುಕಂಪಕ್ಕೆ ಸಿಕ್ಕು ನೋವು ತಿನ್ನುತ್ತಾರೆ. ಇಂಥವರಲ್ಲಿ ಕೆಲವರು ಮುರಿದ ಸಂಬಂಧಕ್ಕೆ ಮರಳುವುದೂ ಉಂಟು. ಮೂಲ ಮನಸ್ಥಿತಿ ಮರುಕಳಿಸಿ ಮತ್ತೆಮತ್ತೆ ಬೇರೆಯಾಗುವುದೂ ಉಂಟು.

ಥರಾವರಿ ಭೀತಿ
ಕಮಿಟ್‌ಮೆಂಟ್‌ಫೋಬಿಯಾಕ್ಕೆ ಹಲವು ಆಯಾಮಗಳಿವೆ. ಬರೀ ಪ್ರೇಮಸಂಬಂಧಗಳ ವಿಷಯವನ್ನೇ ತೆಗೆದುಕೊಂಡರೆ, ಸಂಗಾತಿಯನ್ನು ಕಳಕೊಳ್ಳುವ ಭೀತಿ ಹೇಗೋ ಹಾಗೆ ತನ್ನತನವನ್ನು ಕಳಕೊಳ್ಳುವ ಭೀತಿಯೂ ಈ ಫೋಬಿಯಾಕ್ಕೆ ಎಡೆಮಾಡಿಕೊಡುತ್ತದೆ. ನನ್ನ ಖಾಸಗಿತನವೆ ನನಗೆ ಮುಖ್ಯ. ನನ್ನ ಇರುವಿಕೆಯಲ್ಲಿ ಸ್ವಲ್ಪ ಮಾತ್ರದ ಬದಲಾವಣೆಯನ್ನೂ ಮಾಡ್ಕೊಳ್ಳಲಾರೆ ಅನ್ನುವ ಧೋರಣೆ, ಹೊಂದಾಣಿಕೆಯನ್ನ ನಿರಾಕರಿಸುವ ಇಗೋ ಕೂಡಾ ಕಮಿಟ್‌ಮೆಂಟಿನೆಡೆಗೆ ಹಿಂಜರಿಕೆಯನ್ನು ಹುಟ್ಟುಕಾಕುತ್ತೆ.
ನಾನು ನಿಭಾಯಿಸಲಾರೆ. ನಾನು ಹೊಂದಾಣಿಕೆ ಮಾಡ್ಕೊಳ್ಳಲಾರೆ. ನಾನು ತೆಗೆದುಕೊಳ್ಳುವ ನಿರ್ಧಾರಗಳು ಬಹಳ ಕಾಲ ನಿಲ್ಲುವುದಿಲ್ಲ,. ಯಾರಿಗೂ ನಾನು ಇಷ್ಟವಾಗೋದಿಲ್ಲ. ಯಾರೂ ನನ್ನ ಜತೆ ಬಹಳ ಕಾಲ ಉಳಿದುಕೊಳ್ಳೋದಿಲ್ಲ… ಇಂಥಾ ಇಲ್ಲಗಳ ಪಟ್ಟಿ ವ್ಯಕ್ತಿಯ ಸುತ್ತ ನೆಗೆಟಿವಿಟಿಯನ್ನು ಸುತ್ತುಗಟ್ಟಿಸುತ್ತದೆ. ಇಂಥ ಮನೋಭಾವದವರು ಸಂಬಂಧ ಮಾತ್ರವಲ್ಲ, ಉದ್ಯೋಗದಲ್ಲೂ ಒಂದು ಕಡೆ ಕಟ್ಟುಬೀಳಲಾರರು. ಸ್ನೇಹವನ್ನೂ ಸರಿಯಾಗಿ ನಿಭಾಯಿಸಲಾರರು. ತಮ್ಮಿಂದ ಅದೆಲ್ಲ ಸಾಧ್ಯವಿದ್ದರೂ ಸ್ವಯಂ ನಿರಾಕರಣೆ ಅವರ ಕಾನಿಡೆನ್ಸ್ ಅನ್ನು ನುಂಗಿಹಾಕಿರುತ್ತೆ. ಮತ್ತೆ ಮತ್ತೆ ಸೋಲು ಅವರದಾಗುತ್ತೆ.
ಇಂತಹ ಫೋಬಿಯಾಕ್ಕೆ ಒಳಗಾಗಿರುವವರು ಚಂಚಲ ಮನಸ್ಕರಾಗಿರುತ್ತಾರೆ. ಕೆಲಸ ಬಿಡುವಾಗ, ರಿಲೇಶನ್‌ಶಿಪ್‌ನಿಂದ ಹೊರಬರುವಾಗ ಅಥವಾ ಜವಾಬ್ದಾರಿಯಿಂದ ನುಣುಚಿಕೊಳ್ಳುವಾಗ ತಮ್ಮ ಪಾಲಿನ ತಪ್ಪುಗಳನ್ನು ಗೌಣವಾಗಿಸಿ, ಮತ್ತೊಂದು ತುದಿಯ ವ್ಯಕ್ತಿಯನ್ನೇ ಬ್ಲೇಮ್ ಮಾಡತೊಡಗುತ್ತಾರೆ. ಸೆಲ್‌ಪಿಟಿಯ ಅತಿರೇಕದಲ್ಲಿರುವ ಇಂಥವರ ಮಾತು ಕೇಳುಗರು ನಂಬಿಕೊಳ್ಳುವಂತೆಯೇ ಇರುತ್ತವೆ. ತಮ್ಮ ವೀಕ್‌ನೆಸ್ ಮುಚ್ಚಿಕೊಳ್ಳಲು ಅಷ್ಟರ ಮಟ್ಟಿನ ಚಾಣಾಕ್ಷತೆ ನಟಿಸುತ್ತಾರೆ. ಇವರು ತಮ್ಮಿಂದಾಗಿಯೇ ಸಂಬಂಧ ಮುರಿಯಿತು ಅನ್ನುವ ಆರೋಪ ಬರದಂತೆ ಎಚ್ಚರ ವಹಿಸುವಷ್ಟು ಜಾಣರು ; ನಿರಂತರ ಸಂಗಾತಿಗೆ ಇರಿಟೇಟ್ ಮಾಡುತ್ತಾ ಇಲ್ಲವೇ ತಪ್ಪುಗಳನ್ನ ಹೊರಿಸುತ್ತಾ, ಅವರು ತಾವಾಗಿಯೇ ದೂರ ಸರಿಯುವಂತೆಯೂ ಪ್ರಚೋದಿಸಬಲ್ಲವರು. ಆದರೆ ಇಂಥವರು ಕೈಬಿಟ್ಟುಹೋಗದಂತೆ ತಡೆಯುವುದು ಕಷ್ಟವೇನಲ್ಲ. ಅದು ಉಳಿಸಿಕೊಳ್ಳುವವರ ಬದ್ಧತೆಯನ್ನು ಅವಲಂಬಿಸಿರುತ್ತದೆ.

ಸರಿ ಮಾಡಬಹುದು
ಫೋಬಿಯಾ ಹೊಂದಿರುವ ಸಂಗಾತಿಯ ಮನಸ್ಸಿನಲ್ಲಿ ಆಪ್ತತೆ ಗಳಿಸಿ, ಚೂರು ಡೆಡಿಕೇಟೆಡ್ ಆಗಿ ಮೂವ್ ಮಾಡಿದರೆ ಸಂಬಂಧ ಛಿದ್ರವಾಗೋದನ್ನ ತಡೆಯಬಹುದು.
ಕಮಿಟ್‌ಮೆಂಟ್‌ಫೋಬಿಯಾಕ್‌ಗಳೊಂದಿಗೆ ಡೀಲ್ ಮಾಡಲು ಇವರು  ಕೊಡುವ ಕೆಲವು ಟಿಪ್ಸ್ ಹೀಗಿವೆ:
ಸಂಬಂಧ ಉಳಿಯಬೇಕು ತಾನೆ? ದಯವಿಟ್ಟು ಫೋಬಿಯಾಕ್ ಸಂಗಾತಿಯನ್ನು ತಾಳಿಕೊಳ್ಳಿ.
ಸಹಾನುಭೂತಿಯಿಂದ ವರ್ತಿಸಿ. ನಿಮ್ಮ ನಿರೀಕ್ಷೆಗಳು ಹೇರಿಕೆಯಾಗದಂತೆ ಎಚ್ಚರವಿಡಿ.
ನಿನ್ನ ಸ್ಪೇಸ್ ನಾನು ಕಸಿದುಕೊಂಡಿಲ್ಲ. ನಿನ್ನ ಪ್ರೈವೆಸಿಗೆ ನನ್ನಿಂದ ಧಕ್ಕೆಯಾಗೋಲ್ಲ ಅನ್ನೋದನ್ನ ಮನವರಿಕೆ ಮಾಡಿಕೊಡಿ.
ಫೋಬಿಯಾಕ್ ಸಂಗಾತಿಗಳು ವಿಪರೀತ ಟೀಕೆ ಮಾಡುವಂಥವರು. ನೀವು ಸುಮ್ಮನಿದ್ದರೆ ಸಾಕು. ಮಾತು ಬೆಳೆಸಿ, ಬ್ರೇಕ್ ಅಪ್‌ನ ಅವರ ಹುನ್ನಾರ ಗೆಲ್ಲಲು ಚಾನ್ಸ್ ಕೊಡಬೇಡಿ.
ಎಲ್ಲಕ್ಕಿಂತ ಮುಖ್ಯ, ನಿಮ್ಮ ಪ್ರ್ರೇಮವನ್ನ ಮಾತುಗಳ ಮೂಲಕ, ಗಿಫ್ಟ್‌ಗಳ ಮೂಲಕ ಎಕ್ಸ್‌ಪ್ರೆಸ್ ಮಾಡುವುದು, ಹಾಗೇನೇ ಅವರಿಂದ ಅಂಥದನ್ನ ಬಯಸದೆ ಇರುವುದು. ನಾನು ಬಯಸ್ತಿಲ್ಲ ಅನ್ನೋದನ್ನ ಸ್ಪಷ್ಟ ಸಾಬೀತುಪಡಿಸುವುದು ಕೂಡಾ.

ಹೆಸರು – ಹುಟ್ಟು
ಕಮಿಟ್‌ಮೆಂಟ್‌ಫೋಬಿಯಾ ಯಾವಾಗಿನಿಂದ ಇದ್ದರೂ ಅದಕ್ಕೆ ಹಾಗೊಂದು ಹೆಸರು ಹುಟ್ಟಿಕೊಂಡಿದ್ದು ನಾಲ್ಕು ದಶಕದ ಹಿಂದೆ, `ಮೆನ್ ಹೂ ಕಾನ್ಟ್ ಲವ್’ ಪುಸ್ತಕದ ಮೂಲಕ. ಮೊದಲೆಲ್ಲ ಗಂಡಸರಿಗೆ ಮಾತ್ರ ಇಂಥದೊಂದು ಭಯ ಇರುತ್ತೆ ಅನ್ನುವ ನಂಬಿಕೆ ಇತ್ತು. ಅದರ ಗುಣಲಕ್ಷಣಗಳನ್ನ ಸರಿಯಾಗಿ ಪಟ್ಟಿ ಮಾಡಿಕೊಂಡಮೇಲೆ, ಹಾಗೇನಿಲ್ಲ ಅಂತ ಖಾತ್ರಿಯಾಯ್ತು. ಈಗ, ಸುಮಾರು ಅಧ್ಯಯನಗಳ ನಂತರ- ಸೆಲ್ ಸೆಂಟರ್ಡ್ ಆಟಿಟ್ಯೂಡ್ ಹೊಂದಿರುವ,  ಅತಿಯಾದ ನಿರೀಕ್ಷೆಗಳುಳ್ಳ ಹಾಗೂ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವಂಥವರಲ್ಲಿ ಕಮಿಟ್‌ಮೆಂಟ್‌ಫೋಬಿಯಾ ಕಂಡುಬರುತ್ತೆ ಅನ್ನುತ್ತಾರೆ ಸೈಕೋಥೆರಪಿಸ್ಟ್‌ಗಳು. ಇದು ಯಾವುದೇ ವ್ಯಕ್ತಿ ತಾನಾಗಿ ತಂದುಕೊಳ್ಳುವ ಸಮಸ್ಯೆ. ಅಪರೂಪದ ಸಂದರ್ಭಗಳಲ್ಲಿ ಇಂತಹ ಫೋಬಿಯಾಕ್ಕೆ ಹಿನ್ನೆಲೆ ಇರುವುದುಂಟು. ಮುರಿದ ಕುಟುಂಬದಲ್ಲಿ ಬೆಳೆದು ಬಂದವರು, ಡಾಮಿನೇಟಿಂಗ್ ಅಪ್ಪ ಅಥವಾ ಅಮ್ಮನ ವರ್ತನೆ ಮತ್ತು ಅದರ ಪರಿಣಾಮಗಳಿಂದ ಹೆದರಿದವರು ಕೆಲವೊಮ್ಮೆ ಬಾಂಧವ್ಯದ ಬದ್ಧತೆಗೆ ಹಿಂಜರಿಯುತ್ತಾರೆ. ಸಂಬಂದಕ್ಕೆ ಒಳಗಾಗಿ ಜೀವಮಾನವಿಡೀ ಸಫರ್ ಮಾಡಬೇಕಾಗಿ ಬರುತ್ತದೆ ಎಂಬುದು ಇವರ ಮನದಲ್ಲಿ ಆಳವಾಗಿ ಹುದುಗಿರುತ್ತದೆ. ಉದ್ಯೋಗ ಸ್ಥಳದಲ್ಲಿನ ರಾಜಕಾರಣ, ತಮ್ಮ ಎಥಿಕ್ಸ್ ಬಿಟ್ಟುಕೊಡಲಾಗದು ಅನ್ನುವ ಧೋರಣೆ, ಅವರ ಮಾತಿನಂತೆ ನಡೆದು ಸ್ವಂತಿಕೆ ಬಿಟ್ಟುಕೊಡಬೇಕಾಗುವುದು ಅನ್ನವ ಭಯ-ಭ್ರಮೆಗಳೆಲ್ಲವೂ ಕಮಿಟ್‌ಮೆಂಟ್‌ಫೋಬಿಯಾಕ್ಕೆ ದಾರಿ. ಜಗತ್ತು ತೀರ ಕೆಟ್ಟದಾಗಿ ಏನಿಲ್ಲ. ಎಲ್ಲರ ಬದುಕಲ್ಲೂ ಅವರವರ ಸ್ವೇಚ್ಛೆ ಹಾಗೂ ನಿಗದಿತ ಅವಕಾಶಗಳಿವೆ ಅನ್ನುವುದನ್ನು ಇಂಥವರಿಗೆ ಅರ್ಥ ಮಾಡಿಸಬೇಕು. ಇದರ ಹೊರತು ಈ ಫೋಬಿಯಾಕ್ಕೆ ಚಿಕಿತ್ಸೆ ಕಷ್ಟ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog at WordPress.com.

Up ↑

%d bloggers like this: