ಮಗು ತಲೆ ತಗ್ಗಿಸಿ ನಿಂತುಕೊಂಡಿದೆ. ಆ ಹೊತ್ತಿನ ತನಕ ಹೀರೋ ಆಗಿ ಮೆರೀತಿದ್ದುದು ಇದ್ದಕಿದ್ದಹಾಗೆ ಭೂಮಿಗಿಳಿದು ಹೋಗಿದೆ. ಅವಮಾನಿತ ಮುಖ, ಕಣ್ಣಲ್ಲಿ ಬಿಗಿಹಿಡಿದ ನೀರ ಹನಿ. ಸಹಪಾಠಿಗಳಲ್ಲಿ ಕೆಲವರಿಗೆ ಅನುಕಂಪ, ಕೆಲವರಿಗೆ ಆತಂಕ, ಮತ್ತೆ ಕೆಲವರಿಗೆ ನಾವು ಗೆದ್ದೆವೆಂಬ ಹೆಮ್ಮೆ. ವಿಷಯ ಇಷ್ಟೇ. ಆ ಮಗುವಿನ ಮನೆಯಲ್ಲಿ `ಅಪ್ಪ’ ಇಲ್ಲ. ಅಂವ ಓಡಿಹೋಗಿದಾನೆ ಅಥವಾ ಅಮ್ಮನೇ ಮನೆಯಿಂದ ಈಚೆ ಬಂದಿದಾಳೆ. ಒಟ್ಟಿನಲ್ಲಿ ಮಗುವಿಗೆ ಅದು ಸಂಕಟದ ವಿಷಯ. ಸ್ವಂತಕ್ಕೆ ಅಪ್ಪನ ಕೊರತೆ ಕಾಡದಿದ್ದರೂ ಸುತ್ತಲಿನವರ ಜತೆ ಏಗಲಿಕ್ಕಾದರೂ ಅಪ್ಪ ಬೇಕು ಆ ಮಗುವಿಗೆ, ಅಂತಹ ಎಷ್ಟೋ ಮಕ್ಕಳಿಗೆ.
ಈವತ್ತು ಇಂತಹ ಸೀನ್ ಅಪರೂಪ. ವಿಭಜಿತ ಸಂಸಾರಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅಪ್ಪ ಅಥವಾ ಅಮ್ಮ ಜತೆಗಿಲ್ಲದಿರುವುದು ಭಾವನಾತ್ಮಕ ವಿಷಯವಾಗಷ್ಟೆ ಕೌಂಟ್ ಆಗುತ್ತಿದೆ. ಈ ಕುರಿತಂತೆ ಸಾಮಾಜಿಕ ಕೊಂಕು ಸಾಕಷ್ಟು ಮಟ್ಟಿಗೆ ತಗ್ಗಿರುವುದು ಸಮಾಧಾನದ ಸಂಗತಿ. ಇಂದು ಸುತ್ತಲಿನವರು ಮಾತು ಮೌನಗಳ ಚಿಂತೆ ಬಿಟ್ಟು, ಮಕ್ಕಳಿಗೆ ಸಂಗಾತಿಯ ಇಲ್ಲದಿರುವ ಕೊರತೆ ಕಾಡದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು.
ಹಿಂದೆಲ್ಲ ಹೆಚ್ಚಾಗಿ ಹೆಂಗಸರು ಒಂಟಿಯಾಗಿ ಮಕ್ಕಳನ್ನು ಬೆಳೆಸುವ ಪರೀಕ್ಷೆಗೆ ಒಳಗಾಗುತ್ತಿದ್ದರು. ಎರಡನೆ ಹೆಣ್ಣಿನ ಹಿಂದೆ ಹೋಗಿಯೋ, ಸಂಸಾರದಿಂದ ಓಡಿ ಸಂನ್ಯಾಸಿಯೋ ಆಗಿಬಿಡುವ ಅಪ್ಪಂದಿರು ಇಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದರು. ಮರುಮದುವೆಗಳು ಅಪರಾಧವಾಗಿದ್ದ ಕಾಲಕ್ಕೆ ಅಮ್ಮನಾದವಳೊಬ್ಬಳೇ ಮಕ್ಕಳನ್ನು ಸಾಕುವುದು ಅನಿವಾರ್ಯವಾಗಿರುತ್ತಿತ್ತು. ಕಡಿಮೆ ಅವಕಾಶಗಳು, ಸೀಮಿತ ಸವಲತ್ತುಗಳ ನಡುವೆಯೂ ಅವತ್ತಿನ ಒಂಟಿ ಅಮ್ಮಂದಿರು ತಮ್ಮ ಮಕ್ಕಳನ್ನು ದಡ ಹತ್ತಿಸುವಲ್ಲಿ ಯಶಸ್ಸು ಕಾಣ್ತಿದ್ದರು.
ಇಂದಿನ ಸ್ಥಿತಿ ಚೂರು ಬೇರೆ. ಈವತ್ತು ಸಂಸಾರ ಬಿಡುವ ಆಯ್ಕೆ, ಸದವಕಾಶ ಅಥವಾ ದುರ್ಬುದ್ಧಿಗಳು ಹೆಣ್ಣಿಗೂ ಇವೆ. ಹೆಂಗಸರಂತೆಯೇ ಗಂಡಸರು ಕೂಡ ಒಂಟಿಯಾಗಿ ಮಕ್ಕಳನ್ನು ಸಾಕುವುದರ ಅನುಭವ ಪಡೆಯುತ್ತಿದ್ದಾರೆ. ಗಂಡು- ಹೆಣ್ಣುಗಳಿಬ್ಬರಿಗೂ ಮರುಮದುವೆಯ ಸಾಕಷ್ಟು ಅವಕಾಶಗಳಿವೆ. ಹಾಗಿದ್ದೂ ಏಕಾಂಗಿತನದ ಸುಖಕ್ಕೆ ಸೋತಿರುವ ಇಂದಿನ ಪೀಳಿಗೆ ಒಮ್ಮೆ ಸಂಸಾರ ಮುರಿದ ನಂತರ ಮತ್ತೆ ಅದರ ಜಾಲಕ್ಕೆ ಬೀಳಲು ಒಪ್ಪುತ್ತಿಲ್ಲ. ಆದ್ದರಿಂದ ಸಿಂಗಲ್ ಪೇರೆಂಟಿಂಗ್ ಇಂದು ಸಾಮಾನ್ಯ ಸಂಗತಿ ಎನ್ನುವಂತಾಗಿಬಿಟ್ಟಿದೆ. ಸಮಾಜದ ಒಟ್ಟು ಮನಸ್ಥಿತಿಯ ಬದಲಾವಣೆ ಕೂಡ ಅದಕ್ಕೆ ಪೂರಕವಾಗಿ ಸಹಕರಿಸುತ್ತಿದೆ. ಇನ್ನು ಮಕ್ಕಳು ಒಂಟಿತನದ ಭಾವನೆ ಬೆಳೆಸಿಕೊಳ್ಳದಂತೆ ಕಾಳಜಿ ವಹಿಸುವುದಷ್ಟೆ ಮುಂದುಳಿಯುವ ಚಾಲೆಂಜ್.
ಕಲಿಕೆಗೆ ಕಾಲ
ಸಿಂಗಲ್ ಪೇರೆಂಟ್ ಆಗುವುದು ಅಂದರೆ ಹೆಚ್ಚುವರಿ ಜವಾಬ್ದಾರಿ ಹೊತ್ತಂತೆ ಎಂದು ಕೆಲವರು ಆತಂಕಪಡುತ್ತಾರೆ. ಲೈಫಲ್ಲಿ ಅಚಾನಕ್ ಎದುರಾಗುವ ಯಾವ ತಿರುವನ್ನೂ ನೆಗೆಟಿವ್ ಆಗಿ ನೋಡಬಾರದು. ಎಂಥದೋ ಮನಸ್ಥಿತಿ- ಪರಿಸ್ಥಿತಿಗಳ ಫಲವಾಗಿ ಏಕಾಂಗಿ ಬದುಕು ಸಿಕ್ಕಿರುತ್ತದೆ. ಜೊತೆಯಲ್ಲಿ ಸಂಗಾತಿ ಬಿಟ್ಟುಹೋದ ಮಗುವಿದೆ. ಈ ಸನ್ನಿವೇಶದಲ್ಲಿ ಜವಾಬ್ದಾರಿ ಹೊತ್ತವರು ಅಪ್ಪ ಅಮ್ಮ ಎರಡೂ ರೋಲ್ಗಳನ್ನು ನಿಭಾಯಿಸುತ್ತ ಬೆಳೆಸುವುದು ಕಷ್ಟವೇ. ನಿಜ ಏನೆಂದರೆ, ಹಾಗೆ ಮತ್ತೊಂದು ಪಾತ್ರವನ್ನು ನಿಭಾಯಿಸಬೇಕಾದ ಅಗತ್ಯವಿಲ್ಲ. ಏನಿದ್ದರೂ ಅಮ್ಮ ಅಪ್ಪನಂತೆ ಹಾಗೂ ಅಪ್ಪ ಅಮ್ಮನಂತೆ ನಟಿಸಬಲ್ಲರು ಹೊರತು ಯಥಾವತ್ ಅವರೇ ಆಗಿ ವರ್ತಿಸಲು ಸಾಧ್ಯವೇ ಇಲ್ಲ. ಮೊದಲು ಇಷ್ಟನ್ನು ತಿಳಿದುಕೊಂಡರೆ, ಮುಂದಿನ ಹೆಜ್ಜೆಗಳು ಸಲೀಸು.
ಸಿಂಗಲ್ ಪೇರೆಂಟಿಂಗ್ ಅನ್ನು ಶಿಕ್ಷೆಯಾಗಿ ತೆಗೆದುಕೊಳ್ಳದೆ, ಅದನ್ನು ಮಗುವಿನೊಟ್ಟಿಗೆ ನಮ್ಮ ವ್ಯಕ್ತಿತ್ವವನ್ನೂ ರೂಪಿಸ್ಕೊಳ್ಳುವ ಅವಕಾಶವನ್ನಾಗಿ ನೋಡಬೇಕು. ಇದು ನಮ್ಮಿಂದ ಹೆಚ್ಚಿನ ಅವೇರ್ನೆಸ್ ಅನ್ನು, ಕಮಿಟ್ಮೆಂಟ್ ಅನ್ನು ಬೇಡುವಂಥ ಪ್ರಕ್ರಿಯೆ. ಅಪ್ಪ ಅಮ್ಮ ಇಬ್ಬರೂ ಇರುವ ಮನೆಗಳಲ್ಲಿ ಮಗುವಿನ ಬೆಳವಣಿಗೆಯ ಲೋಪ ದೋಷಗಳನ್ನು ಪರಸ್ಪರರ ತಲೆಗೆ ಕಟ್ಟಿ ನುಣುಚಿಕೊಳ್ಳಬಹುದು. ಆದರೆ ಸಿಂಗಲ್ ಪೇರೆಂಟ್ ವಿಷಯದಲ್ಲಿ ಹಾಗಿಲ್ಲ. ಮಗುವಿನ ಒಳಿತಿಗೂ ಕೆಡುಕಿಗೂ ಅವರೇ ಜವಾಬುದಾರರು. ಎಲ್ಲಿದ್ದರೂ ಬೆಳೆಯುವ ಮಕ್ಕಳಿಗೆ ಬೇಕಾದ ಆಪ್ತತೆ, ಶಿಕ್ಷಣ ಮತ್ತು ಸನ್ನಡತೆಯ ಪಾಠಗಳು- ಇವಿಷ್ಟನ್ನು ಒದಗಿಸಿಕೊಟ್ಟರೆ `ಬೆಸ್ಟ್ ಸಿಂಗಲ್ ಪೇರೆಂಟ್’ ಅನ್ನುವ ಹೆಮ್ಮೆ ದಕ್ಕಿಸಿಕೊಳ್ಳಬಹುದು. ಮಾತು ಇಲ್ಲಿ ಪೇರೆಂಟ್ ಮತ್ತು ಮಗುವನ್ನು ಬೆಸೆಯುವ ಮ್ಯಾಜಿಕ್ ಬಾಂಡ್ನಂತೆ ಕೆಲಸ ಮಾಡುತ್ತದೆ. ಮನೆಯ ಪ್ರತಿ ಸಂಗತಿಯನ್ನೂ ಮಗುವಿನೊಂದಿಗೆ ಚರ್ಚಿಸುವುದು, ಮಕ್ಕಳ ಅಭಿಪ್ರಾಯಕ್ಕೆ, ಸಲಹೆಗೆ ಬೆಲೆ ಕೊಡುತ್ತಾ ತಾವೆಷ್ಟು ಮನ್ನಣೆ ನೀಡುತ್ತೇವೆ ಎಂದು ತಿಳಿಯಪಡಿಸುತ್ತಿರುವುದು- ಇವೆಲ್ಲ ಇಲ್ಲಿ ಮುಖ್ಯವಾಗುತ್ತದೆ. ಬೆಳೆಯುತ್ತಿರುವ ಮಕ್ಕಳ ಖಾಸಗಿ ದಿನಚರಿಯನ್ನು ಹಕ್ಕಿನಿಂದ ಕೇಳುವಂತೆಯೇ ತಮ್ಮ ಖಾಸಾ ಸಂಗತಿಗಳನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುವುದು ಕೂಡ ಅವರೊಡನೆ ಆಪ್ತತೆ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ.
ಮಿಥ್ಗಳಿಂದ ದೂರ
ಸಿಂಗಲ್ ಪೇರೆಂಟಿಂಗ್ ಅನ್ನು `ಆಯ್ಕೆ’ ಮಾಡಿಕೊಳ್ಳುವ ಸನ್ನಿವೇಶ ನಮ್ಮ ದೇಶದಲ್ಲಿ ಇನ್ನೂ ಇಲ್ಲ. ತೀರ ಅಪರೂಪಕ್ಕೆ ಸೆಲೆಬ್ರಿಟಿಗಳು ಮದುವೆಯಿಲ್ಲದೆ ಮಕ್ಕಳನ್ನು ಪಡೆದು ಗೌರವದಿಂದಲೇ ಅವರನ್ನು ಬೆಳೆಸಿದ ಉದಾಹರಣೆಗಳಿವೆ ಅಷ್ಟೆ. ಇಲ್ಲಿ ಸಿಂಗಲ್ ಪೇರೆಂಟಿಂಗ್ ಮದುವೆ ಮುರಿತ ಅಥವಾ ಸಂಗಾತಿಯ ಮರಣದ ನಂತರದ ಅನಿವಾರ್ಯ ಪಾತ್ರ. ಪ್ರಿಕಾಶನ್ ಇಲ್ಲದೆ ಬಂದೆರಗುವ ಇದಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವಾಗಲೇ ಭಯ ಕಾಡತೊಡಗಿರುತ್ತದೆ. ಒಂಟಿಯಾಗಿ ಬೆಳೆಯುವ ಮಕ್ಕಳು ದಾರಿ ತಪ್ಪುತ್ತಾರೆ, ಮಾನಸಿಕವಾಗಿ ಕುಗ್ಗಿಹೋಗುತ್ತಾರೆ ಇತ್ಯಾದಿ ಮಿಥ್ಗಳು ಹೆದರಿಸುತ್ತವೆ. ವಾಸ್ತವ ಹಾಗಿಲ್ಲ. ಸಿಂಗಲ್ ಪೇರೆಂಟ್ ಕೇರ್ನಲ್ಲಿ ಬೆಳೆಯುವ ಮಕ್ಕಳು ಕೂಡ ಎಲ್ಲ ಮಕ್ಕಳಂತೆ ನಾರ್ಮಲ್ ಇರುವರು. ಸಹಜ ಸಂಸಾರದಲ್ಲಿ ಬೆಳೆದ ಮಕ್ಕಳು ದಾರಿ ತಪ್ಪಿದಾಗ ಅದು ವಿಶೇಷವಾಗಿ ಗುರುತಿಸಲ್ಪಡುವುದಿಲ್ಲ ಅಷ್ಟೆ.
ಹಾಗೆ ನೋಡಿದರೆ ಸಿಂಗಲ್ ಪೇರೆಂಟಿಂಗ್ನಲ್ಲಿ ಮಕ್ಕಳನ್ನು ಹೆಚ್ಚು ಸ್ವತಂತ್ರರೂ ಸ್ವಾಭಿಮಾನಿಗಳೂ ಆಗಿ ಬೆಳೆಸಬಹುದು. ಅದು ಮಕ್ಕಳನ್ನು `ಬೆಳೆಸುವ’ ಪ್ರಾಸೆಸ್ಗಿಂತ ಅವರೊಟ್ಟಿಗೆ ಬದುಕನ್ನು `ಶೇರ್ ಮಾಡಿಕೊಳ್ಳುವ’ ಪ್ರಕ್ರಿಯೆಯಾಗಬೇಕು. ಆಗ ಪೇರೆಂಟ್ ಮತ್ತು ಮಗು ಇಬ್ಬರ ಬದುಕೂ ಉಲ್ಲಾಸ ಹಾಗೂ ಒಳ್ಳೆಯ ಬೆಳವಣಿಗೆಗಳಿಂದ ಶ್ರೀಮಂತವಾಗುತ್ತದೆ. ಸಿಂಗಲ್ ಅಮ್ಮಂದಿರ ವಿಷಯ ಬಂದಾಗ ಖರ್ಚು ನಿರ್ವಹಣೆಯ ಆತಂಕವೇ ದೊಡ್ಡದು ಎನಿಸುವುದುಂಟು. ಈ ವರೆಗೆ ಅದನ್ನು ಯಶಸ್ವಿಯಾಗಿ ಮೀರಿದವರ ಉದಾಹರಣೆಗಳು ಈ ನಿಟ್ಟಿನಲ್ಲಿ ಸ್ಫೂರ್ತಿಯಾಗಬಲ್ಲವು. ಇಂತಹ ಸಂದರ್ಭಗಳಲ್ಲಿ ಮಕ್ಕಳಲ್ಲಿ ಕೀಳರಿಮೆ ಮೂಡದಂತೆ, ಬದುಕಿನ ಸೂಕ್ಷ್ಮಗಳನ್ನು ಗೊತ್ತುಮಾಡಿಕೊಳ್ಳುವಂತೆ ಜವಾಬ್ದಾರಿಯಿಂದ ಬೆಳೆಸುವುದು ಅಗತ್ಯ.
ಇಂದು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿಂಗಲ್ಪೇರೆಂಟ್ ಸಮುದಾಯಗಳು, ಕ್ಲಬ್ಗಳು ಅಸ್ತಿತ್ವದಲ್ಲಿವೆ. ಇಲ್ಲಿ ಪೆರೆಂಟ್ಗಳು ಪರಸ್ಪರ ಕಲೆತು ತಮ್ಮ ಅನುಭವ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಏಕಾಕಿಯಾಗಿ ಮಕ್ಕಳನ್ನು ಬೆಳೆಸುವಾಗ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳೂ ಇಲ್ಲಿ ಇರುತ್ತವೆ. ಅನಿವಾರ್ಯ ಸಂದರ್ಭಗಳಲ್ಲಿ ಸಮುದಾಯದ ಇದರ ಸದಸ್ಯರು ತಮ್ಮ ಮಗುವನ್ನು ಮತ್ತೊಬ್ಬ ಸಿಂಗಲ್ ಪೇರೆಂಟ್ ಮನೆಯಲ್ಲಿ ಬಿಡಬಹುದಾದ ಅವಕಾಶಗಳೂ ಇಲ್ಲಿರುತ್ತವೆ. ಒಬ್ಬರಿಗೊಬ್ಬರು ಆಸರೆಯಾಗುತ್ತಾ ಸಿಂಗಲ್ ಪೇರೆಂಟಿಂಗ್ ಅನ್ನು ಹೊರೆಯಾಗಿಸಿಕೊಳ್ಳದೆ ನಿಭಾಯಿಸುವ ಅನುಕೂಲವನ್ನು ಇಂತಹ ಸಮುದಾಯಗಳು ಮಾಡಿಕೊಡುತ್ತವೆ. ಈ ನೆಟ್ವರ್ಕ್ ಇನ್ನೂ ಚಿಗುರಿನ ಹಂತದಲ್ಲಿದ್ದು ಮತ್ತಷ್ಟು ಚಾಚಿಕೊಳ್ಳಬೇಕಿದೆ.
ನಿಮ್ಮದೊಂದು ಉತ್ತರ