ಇದನ್ನ ಅಪ್ಪ ಮಗಳ ಕಥೆಯಿಂದ ಶುರು ಮಾಡೋಣ.
ಆತನಿಗೆ ಮಗಳೆಂದರೆ ತುಂಬಾ ಪ್ರೀತಿ. ತಾನು ಏನು ಮಾಡಿದರೂ ಅವಳ ಒಳ್ಳೆಯದಕ್ಕೇ ಅನ್ನುವ ನೆಚ್ಚಿಕೆ. ಒಮ್ಮೆ ಅವನು ಮಗಳನ್ನ ಕರೆದುಕೊಂಡು ಅಮ್ಯೂಸ್ಮೆಂಟ್ಪಾರ್ಕಿಗೆ ಹೊರಡ್ತಾನೆ. ದಾರಿಯಲ್ಲಿ ಒಂದು ದೊಡ್ಡ ಐಸ್ಕ್ರೀಮ್ ಪಾರ್ಲರ್. ಅದರ ಹತ್ತಿರ ಬರ್ತಿದ್ದ ಹಾಗೇ ಮಗಳು, `ಅಪ್ಪಾ…’ ಅನ್ನುತ್ತಾಳೆ. ಆತ ಕಾರ್ ನಿಲ್ಲಿಸಿ, `ಹಾ, ಹಾ… ನನಗ್ಗೊತ್ತು, ತರ್ತೀನಿ ಇರು…’ ಅನ್ನುತ್ತಾ ಹೋಗಿ ದೊಡ್ಡ ಸ್ಕ್ರೀಮ್ ಕೋನ್ ತರುತ್ತಾನೆ.
ಮುಂದೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮಗಳು ಮತ್ತೆ `ಅಪ್ಪಾ…’ ಅನ್ನುತ್ತಾಳೆ. ಅವಳು ಹಾಗಂದ ಕಡೆ ಮುಸುಕಿನ ಜೋಳದ ಗಾಡಿಯವ ಇರುತ್ತಾನೆ. ಅಪ್ಪ ಮುಗುಳ್ನಕ್ಕು, `ನೀನು ಕೇಳೋದೇ ಬೇಡ…’ ಅನ್ನುತ್ತಾ ಅದನ್ನೂ ತಂದು ಮಗಳ ಬಾಯಿಗಿಡುತ್ತಾನೆ. ಅಮ್ಯೂಸ್ಮೆಂಟ್ ಪಾರ್ಕ್ ತಲುಪೋವರೆಗೂ ಮಗಳು ತುಟಿಪಿಟಕ್ ಅನ್ನುವುದಿಲ್ಲ. ಅಲ್ಲಿ ಇಳೀತಿದ್ದ ಹಾಗೇ ಅಪ್ಪ ಜೈಂಟ್ವೀಲ್ಗೆ ಟಿಕೆಟ್ ಕೊಂಡು ತರುತ್ತಾನೆ. ಅದನ್ನು ಏರುವ ಮೊದಲೇ ಮಗಳು ವಾಮಿಟ್ ಮಾಡಲು ಶುರುವಿಡುತ್ತಾಳೆ. ಅಪ್ಪನಿಗೆ ಆತಂಕ. `ನಾನು ನಿನಗಾಗಿ ಇಷ್ಟೆಲ್ಲಾ ಮಾಡಿದೆ, ನಿನಗೆ ವಾಮಿಟ್ ಬರತ್ತೆ ಅಂತ ಮೊದಲೇ ಹೇಳೋಕೆ ಏನಾಗಿತ್ತು?’ ಅಂತ ಗದರುತ್ತಾನೆ. ಮಗಳು ಕಣ್ತುಂಬಿಕೊಂಡು, `ನಾನು ಮನೆಯಿಂದ ಅದನ್ನ ಹೇಳ್ಬೇಕಂತನೇ ನಿನ್ನ ಕರ್ದೆ. ನೀನು ನಂಗೆ ಮಾತಾಡಕ್ಕೆ ಬಿಡ್ಲೇ ಇಲ್ಲ. ನಂಗೆ ಈ ಅಮ್ಯೂಸ್ಮೆಂಟ್ ಪಾರ್ಕ್ ಇಷ್ಟ ಇಲ್ಲ. ಭಯ ಆಗತ್ತೆ ಇದರಲ್ಲೆಲ್ಲ ಕೂರೋದಿಕ್ಕೆ’ ಅನ್ನುತ್ತಾಳೆ.
ಮಗಳನ್ನ ಸಾಧ್ಯವಾದಷ್ಟು ಖುಷಿಯಾಗಿಡಬೇಕು ಅಂತ ಟ್ರೈ ಮಾಡೋ ಅಪ್ಪ, ಯಾವುದರಿಂದ ಅವಳು ಖುಷಿಯಾಗಿರ್ತಾಳೆ ಅಂತ ತಿಳ್ಕೊಳೋ ಗೋಜಿಗೇ ಹೋಗೋದಿಲ್ಲ. ಮಗಳು ಕೂಡ ಅಪ್ಪನಿಗೆ ಬೇಜಾರಾಗಬಾರ್ದು ಅಂತ ಎಲ್ಲವನ್ನೂ ಅಕ್ಸೆಪ್ಟ್ ಮಾಡ್ತಾ ಇರ್ತಾಳೆ. ತನಗೆ ಇಂಥಾದ್ದು ಬೇಕು ಅಂತ ಬಾಯಿಬಿಟ್ಟು ಕೇಳೋದಿಲ್ಲ. ಇದರಿಂದ ಒಂದಕ್ಕೊಂದು ಇಂಟರ್ಲಿಂಕ್ ಹೊಂದಿದ ಸಮಸ್ಯೆಗಳ ದೊಡ್ಡ ಚೈನ್ ಕುತ್ತಿಗೆಗೆ ಉರುಳಾಗುತ್ತೆ. ಹೀಗೆ ಭಾವನೆಗಳನ್ನ ಅದುಮಿಟ್ಟುಕೊಳ್ಳೋದು, ಎಕ್ಸ್ಪ್ರೆಸ್ ಮಾಡದೆ ಇದ್ದುಬಿಡೋದು ಇದೆಯಲ್ಲ, ಇದನ್ನೇ ರಿಪ್ರೆಶನ್ ಅನ್ನೋದು. ಹೀಗೆ ಮನಸಿನ ಮೂಲೆಗೆ ದಬ್ಬಿಟ್ಟ ಅನ್ನಿಸಿಕೆಗಳು, ಬಯಕೆಗಳೆಲ್ಲ ಯಾವತ್ತೋ ಒಂದಿನ ವಾಲ್ಕೆನೋ ಥರ ಉಕ್ಕಿ ಹರಿದು, ತಮಗೂ ಇತರರಿಗೂ ಸಾಕಷ್ಟು ಕಿರುಕುಳ ಕೊಡುವುದು.
`ರಿಪ್ರೆಶನ್’ ಬರೀ ಪರ್ಸನಲ್ ಲೆವೆಲ್ ಮಾತ್ರ ಅಲ್ಲ, ಆಡಳಿತ, ದುಡ್ಡು ಈ ಥರದ ಲೆವೆಲ್ಗಳಲ್ಲೂ ಸರಿಸುಮಾರು ಇದೇ ಅರ್ಥದ ಬೇರೆ ಆಯಾಮಗಳಲ್ಲಿಯೂ ಇರುತ್ತದೆ. ಮನಸ್ಸನ್ನ ಅದುಮಿಟ್ಟುಕೊಳ್ಳುವ ಸೈಕಿಕ್ ರಿಪ್ರೆಶನ್ ಹಲವು ಮಾನಸಿಕ ಸಮಸ್ಯೆಗಳ ತಾಯಿ ಎನ್ನುತ್ತದೆ ಸೈಕಾಲಜಿ. ಇದು ಕೀಳರಿಮೆ, ಹೊಟ್ಟೆಕಿಚ್ಚು, ಸ್ಪರ್ಧೆ, ವಿಕೃತಿಗಳನ್ನು ಪ್ರಚೋದಿಸುತ್ತದೆ.
ಮನೆಮನೆ ಕಥೆ
ಅಪ್ಪ ಅಮ್ಮನಿಗೆ, ಮಕ್ಕಳಿಗೇನು ಬೇಕು ಅನ್ನೋದು ತಮಗೆ ಚೆನ್ನಾಗಿ ಗೊತ್ತಿದೆ ಅನ್ನುವ ಓವರ್ ಕಾನಿಡೆನ್ಸ್. ಗಂಡನಿಗೆ, ಹೆಂಡತಿಗಿಂತ ತಾನು ಚೆನ್ನಾಗಿ ತಿಳಿದವನು, ವ್ಯವಹಾರ ಬಲ್ಲವನು ಅನ್ನುವ ಜಂಭ. ಹಿರಿಯರಿಗೆ ತಾವು ಅನುಭವಸ್ಥರೆನ್ನುವ ಮೇಲರಿಮೆ. ಇಂತಹ ತಮಗೆ ತಾವೇ ಆರೋಪಿಸಿಕೊಂಡ ಗುಣಗಳಿಂದ ಗೊತ್ತೇ ಆಗದಂತೆ ಮತ್ತೊಬ್ಬರ ಮಾತನ್ನು, ಸ್ಪೇಸ್ ಅನ್ನು ಕಸಿಯುತ್ತಿರುತ್ತಾರೆ. ಕೆಲವೊಮ್ಮೆ ಒಂದು ಬದಿಯಲ್ಲಿರುವವರ ಈ ಥರದ ಮೇಲ್ಮೆ ನಿಜವೂ ಆಗಿರುತ್ತದೆ. ಹಾಗಂತ ತಮ್ಮ ಅಭಿಪ್ರಾಯವನ್ನೇ ಎಲ್ಲರ ಮೇಲೆ ಹೇರುತ್ತ ಹೋದರೆ, ಆಯಾ ಸಂದರ್ಭಗಳಲ್ಲಿ ಸುಮ್ಮನಿರುವ ಉಳಿದ ಸದಸ್ಯರು ಇನ್ಯಾವುದೋ ದಿನ ಕಹಿಯನ್ನೆಲ್ಲ ಹೊರಹಾಕುತ್ತಾರೆ. ಅಕಾರಣ ವಾಗ್ವಾದಗಳು, ಅಸಹನೆಗಳಿಂದಾಗಿ ಮನಸುಗಳು ಮುರಿಯುತ್ತ ಹೋಗುತ್ತವೆ. ಯಾಕೆಂದರೆ, ಪ್ರತಿ ವ್ಯಕ್ತಿಯೂ ತನ್ನ ಇರುವಿಕೆ ಐಡೆಂಟಿಫೈ ಆಗಲೆಂದು ಬಯಸುತ್ತಾನೆ. ಒಂದು ಚಿಕ್ಕ ಮಗುವಿನಿಂದ ಹಿಡಿದು ಮುದುಕರವರೆಗೂ `ತಮ್ಮ ಅಭಿಪ್ರಾಯವನ್ನೂ’ ಕೇಳಬೇಕೆಂದು ಅಂದುಕೊಳ್ಳುತ್ತಾರೆ. ಇದು ಸಹಜ. ಮನೆಯ ಹಿರಿಯರು ಅಂತಿಮ ನಿರ್ಧಾರ ಏನೇ ತೆಗೆದುಕೊಳ್ಳಿ, ಎಲ್ಲರೊಡನೆ ಕುಳಿತು ಡಿಸ್ಕಸ್ ಮಾಡೋದು ಅಗತತ್ಯ. ಹಾಗೆ ಮಾಡಿದಾಗ ಎಲ್ಲರಿಗೂ ಸಮಾಧಾನ ಮೂಡುತ್ತದೆ ಮಾತ್ರವಲ್ಲ, ಒಂದು ಹಾರ್ಮೊನಿಯಸ್ ಆದ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಕೂಡ.
ಸುಮ್ಮನಿದ್ದರೆ ಸೋಲು
ಸಾಮಾನ್ಯವಾಗಿ ರಿಪ್ರೆಶನ್ನಲ್ಲಿ ಇರುವವರಿಗೆ ಅದರ ಅರಿವಿರುತ್ತದೆ. ಬೇರೆಯವರ ಮಾತಿಗೆ ನಾನು ತಾಳ ಹಾಕಬೇಕು, ನನಗೆ ನನ್ನದೇ ಆದ ಬದುಕಿಲ್ಲ ಅನ್ನುವ ಗೊಣಗಾಟ ಇಂಥವರಲ್ಲಿ ಸಾಮಾನ್ಯ. ತಮ್ಮ ಅನ್ನಿಸಿಕೆಗಳನ್ನ ಹೇಳಿಕೊಳ್ಳೋದಕ್ಕೆ ಬೇರೆಯವರು ಅವಕಾಶ ಕೊಡಲೆಂದು ಕಾಯುತ್ತಾ ಕೂರೋದು ಸರಿಯಲ್ಲ. ಎಕ್ಸ್ಪ್ರೆಸ್ ಮಾಡೋದು ಕೂಡ ಒಂದು ಕೌಶಲ್ಯ. ತಮ್ಮ ಒಪೀನಿಯನ್ ಬಗ್ಗೆಯೂ ಒಮ್ಮೆ ಯೋಚಿಸುವಂತೆ ನಿರೂಪಿಸುವ ಜಾಣತನ ರೂಢಿಸ್ಕೊಳ್ಳಬೇಕು. ಅನ್ನಿಸಿದಾಗೆಲ್ಲ ಮಾತಾಡಿಬಿಡಬೇಕು. ತಮ್ಮ ಬೇಕು ಬೇಡಗಳನ್ನು ಸ್ಪಷ್ಟ ಹೇಳಿಕೊಳ್ಳಬೇಕು. ಹಾಗೆಲ್ಲ ಅನ್ನಿಸಿದ್ದನ್ನು ಹೇಳುತ್ತ ಹೋದರೆ ಎಲ್ಲಿ ಇತರ ಪ್ರಿವಿಲೇಜ್ಗಳನ್ನ ಕಳ್ಕೊಳ್ಳಬೇಕಾಗುತ್ತೋ ಎಂದು ಹೆದರಿ ಸುಮ್ಮನಿದ್ದರೆ ರಿಪ್ರೆಶನ್ನಿಂದ ಹೊರಬರಲು ಸಾಧ್ಯವೇ ಇಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೆ ಉಂಟಾಗುವ ರಿಪ್ರೆಶನ್ ಕ್ರಮೇಣ ಜನರ ಭಯ, ಹಿಂಜರಿಕೆ, ಕೀಳರಿಮೆಗಳ ಮೊತ್ತವಾಗಿ ಹಬ್ಬುತ್ತಾ ವ್ಯಕ್ತಿಯ ಅಂತಃಸ್ಸತ್ವವನ್ನೇ ಹೀರಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅವರನ್ನು ಪ್ರೀತಿ ವಿಶ್ವಾಸಗಳಿಂದ ಹೊರಮುಖಿಯಾಗಿಸಬೇಕು. ಮಾತಾಡಲು, ಸ್ವತಃ ಡಿಸಿಶನ್ಸ್ ತೆಗೆದುಕೊಳ್ಳಲು ಬಿಡಬೇಕು. ಅವರಿಗೆ ತಾವೆಷ್ಟು ಇಂಪಾರ್ಟೆನ್ಸ್ ಕೊಡುತ್ತೇವೆ ಎಂಬುದು ಎದ್ದು ತೋರುವಂತೆ ವರ್ತಿಸಬೇಕು. ಹೀಗೆ ಮಾಡುವುದರಿಂದ ಆ ವ್ಯಕ್ತಿ ಮಾತ್ರ ಅಲ್ಲ, ಮನೆಯೂ ಖುಷಿಯ ಆರೋಗ್ಯದಿಂದ ಸೊಂಪಾಗಿರುತ್ತದೆ.
ನಿಮ್ಮದೊಂದು ಉತ್ತರ