ಎಂದೆಂದಿಗೂ ಸಲ್ಲುವ ’ಎದೆಗೆ ಬಿದ್ದ ಅಕ್ಷರ’


ಹಾಗೆಂದು ಈ ಪುಸ್ತಕದ ಅಂಶಗಳೆಲ್ಲವನ್ನೂ ಒಪ್ಪಲೇಬೇಕು, ಹಿರಿಯರೆಂಬ ಕಾರಣಕ್ಕೆ ಆರಾಧ್ಯ ಭಾವದಿಂದ ಕಾಣಬೇಕೆಂದೇನೂ ಇಲ್ಲ. ಮುಂದಿನ ಚರ್ಚೆಗೆ ಗ್ರಾಸವಾಗಲಿ ಎಂದಾದರೂ ಒಂದು ತಲೆಮಾರಿನ ಚಿಂತನಾಕ್ರಮ ಹೇಗಿತ್ತೆಂಬ ಪರಿಚಯಕ್ಕಾಗಿಯಾದರೂ ಅದರ ಅಗತ್ಯವಿದೆಯಷ್ಟೆ.

ಇಂದಿನ ತುರ್ತಿಗೆ ಸಲ್ಲುವ ಪುಸ್ತಕ ಈ ಹೊತ್ತು ಯಾವುದಿದೆ? ಯೋಚಿಸಲು ಕುಳಿತರೆ ಎಲ್ಲಕ್ಕಿಂತ ಮೊದಲು ತೋಚುವುದು ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’. ಇತ್ತೀಚಿನ ಕೆಲ ತಿಂಗಳುಗಳಿಂದ ಸಂವೇದನಾಶೀಲ ಓದುಗರ ವಲಯದಲ್ಲಿ ಒಂದು ಕೋಲಾಹಲವನ್ನೆ ಎಬ್ಬಿಸಿದ ಕೃತಿ ಇದು. ಮತ್ತಷ್ಟು ಚರ್ಚೆಗೆ ಒದಗಬೇಕಿತ್ತು ಎನ್ನಿಸಿದರೂ ಇಂದಿನ ‘ಕನವರಿಕೆ’ಸಾಹಿತ್ಯದ ರುಚಿ ಒಗ್ಗಿರುವ ಸಂದರ್ಭದಲ್ಲಿ ಈ ಪ್ರತಿಕ್ರಿಯೆ ಕಡಿಮೆಯದೇನಲ್ಲ.
ಎದೆಗೆ ಬಿದ್ದ ಅಕ್ಷರ ಕೃತಿಯಲ್ಲಿರುವುದು ಒಟ್ಟಾರೆ ನಾಲ್ಕು ದಶಕಗಳಲ್ಲಿ ಮಹಾದೇವ ಆಗಾಗ ಬರೆದ ಲೇಖನಗಳು, ಪ್ರತಿಕ್ರಿಯೆಗಳು, ಅವರು ನಡೆಸಿದ ಸಂದರ್ಶನ, ಮಾತುಕತೆ ಇತ್ಯಾದಿ. ಈ ಎಲ್ಲವುಗಳಲ್ಲಿ ಹಾದು ಹೋಗುವ ಚಿಂತನೆಯ ಎಳೆಗಳು ಇಂದಿಗೂ ಸಲ್ಲುವಂಥವು.
ಇತ್ತೀಚಿನ ವರ್ಷಗಳಲ್ಲಿ ಹೊಸತಾಗಿ ಬರೆಯತೊಡಗಿರುವ ಎಷ್ಟೆಲ್ಲ ಬರಹಗಾರರಿದ್ದರೂ ಮಹಾದೇವರೇ ಯಾಕೆ ಮುಂದೆ ನಿಲ್ಲುತ್ತಾರೆ? ಜಾಗತಿಕ ವ್ಯಾಪ್ತಿಯ ಮಹಮಹಾ ಚರ್ಚೆ ನಡೆಸುವ ಕೃತಿಗಳೂ ಅಲ್ಲಲ್ಲಿ ಮಿಂಚಿವೆ. ಹಾಗಿದ್ದೂ ಎದೆಗೆ ಬಿದ್ದ ಅಕ್ಷರ ಯಾಕೆ ಮತ್ತು ಹೇಗೆ ಭಿನ್ನವಾಗಿ ನಿಲ್ಲುತ್ತದೆ? ಇದಕ್ಕೆ ಉತ್ತರ ಕಂಡುಕೊಂಡರೆ, ದೇವನೂರರ ಚಿಂತನೆಯ ಅಗತ್ಯ ಎಷ್ಟಿದೆ ಎನ್ನುವುದು ಅರಿವಾಗುತ್ತದೆ.

ನಾಳೆಯ ಫಲಕ್ಕಾಗಿ…
ಭೂಮಿಗೆ ಬಿದ್ದ ಬೀಜ/ಎದೆಗೆ ಬಿದ್ದ ಅಕ್ಷರ/ಇಂದಲ್ಲ ನಾಳೆ ಫಲ ಕೊಡುವುದು – ಈ ಹೇಳಿಕೆ ಪುಸ್ತಕದ ಓದಿನ ಆರಂಭದಲ್ಲೆ ನಮಗೆ ಎದುರಾಗುತ್ತದೆ. ಇದು ಮುಂದಿನ ಓದನ್ನು ನಿರ್ದೇಶಿಸುವ ನುಡಿಯೂ ಆಗಿದೆ.
ಮಹಾದೇವರನ್ನು ಇಂದಿನ ಪೀಳಿಗೆ ಅಗತ್ಯವಾಗಿ ಓದಬೇಕು. ಜಾಗತೀಕರಣದ ಬೆರಗಿನಲ್ಲಿ, ಸವಲತ್ತುಗಳ ಮೈಮರೆವಲ್ಲಿ ಏನೆಲ್ಲ ಸಮಸ್ಯೆಗಳನ್ನು ‘ಇಲ್ಲ’ ಅಂದುಕೊಂಡಿದ್ದಾರೋ ಹಾಗೂ ಯಾವುದೆಲ್ಲ ‘ಇದೆ’ಯೆಂದು ತಿಳಿದಿಲ್ಲವೋ ಅವುಗಳ ಪರಿಚಯವನ್ನು ಮಾಡಿಸುತ್ತದೆ ಈ ಪುಸ್ತಕ. ಹಾಗೇ ಯಾವುದೆಲ್ಲವನ್ನು ಮಹಾದೇವರು ಮುಖ್ಯವೆಂದು ಗ್ರಹಿಸಿ ಪ್ರತಿಕ್ರಿಯಿಸಿದ್ದಾರೆ ಎನ್ನುವುದನ್ನು ಗಮನಿಸಿ, ಆ ಅಂಶಗಳ ಪ್ರಸ್ತುತತೆಯನ್ನು ತುಲನೆ ಮಾಡಲಿಕ್ಕೂ ಸಹಕಾರಿಯಾಗುತ್ತದೆ. ಮೇಲಿನ ಹೇಳಿಕೆಯಂತೆ ಈ ಓದಿನ ಮೂಲಕ ದಕ್ಕಿಸಿಕೊಳ್ಳುವ ಅರಿವು ‘ಇಂದಲ್ಲ ನಾಳೆ ಫಲ ಕೊಡುವುದು’.
ಈ ಹೊತ್ತು ಯಾಕೆ ಮಹಾದೇವರನ್ನೆ ಮುಖ್ಯವಾಗಿಟ್ಟುಕೊಂಡು ಓದಬೇಕು ಎನ್ನುವ ಪ್ರಶ್ನೆ ಮೂಡಿದರೆ, ಅದಕ್ಕೂ ಉತ್ತರವಿದೆ. ಮಹಾದೇವ ದಲಿತ ವರ್ಗದಿಂದ ಬಂದವರಾಗಿಯೂ ದಲಿತ ’ಪಕ್ಷಪಾತಿ’ಯಲ್ಲ. ಅವರದ್ದು ಸಮನ್ವಯ ದೃಷ್ಟಿ. ದಲಿತಪರ  ಹೋರಾಟಗಳನ್ನು ಅವರು ಅತೀವ ಕಳಕಳಿಯಿಂದಲೇ ನಡೆಸಿದ್ದಾರೆ. ಆದರೆ ಕುರುಡು ಮೋಹ ತೋರದಂತೆ ಎಚ್ಚರ ವಹಿಸುತ್ತ ಬಂದು, ಆ ಕಾರಣದಿಂದಲೇ ಕೆಲವು ಕಟ್ಟರ‍್ ದಲಿತ ಚಳವಳಿಕಾರರ ಕಟು ಟೀಕೆಗೂ ಗುರಿಯಾಗಿದ್ದಾರೆ. ಸಾಮಾಜಿಕ ಚಿಂತನೆಗಳ ಸಂದರ್ಭದಲ್ಲಿ ಇದೊಂದು ವಿಲಕ್ಷಣ ಸಂಗತಿ. ಯಾವ ವ್ಯಕ್ತಿಯನ್ನು ಸ್ವತಃ ಆತನ ಸಮಾಜ ಬಹಿಷ್ಕರಿಸುತ್ತದೆಯೋ, ಆತನತ್ತ ಬೆಟ್ಟು ಮಾಡುತ್ತ ದೂಷಿಸುತ್ತದೆಯೋ ಆ ವ್ಯಕ್ತಿಯ ಮಾತುಗಳು ಒಂದಲ್ಲ ಒಂದು ರೀತಿಯಲ್ಲಿ ಚಿಂತನಾರ್ಹವೇ ಆಗಿರುತ್ತವೆ. ಮಹಾದೇವ ತನ್ನ ಒಲವು ನಿಲುವಿನ ಬಗ್ಗೆ ದೃಢತೆ ತೋರುತ್ತಲೇ ಅದರೊಳಗಿನ ಕುಂದು ಕೊರತೆಗಳನ್ನೂ ಎತ್ತಿ ಹೇಳುತ್ತಾರೆ. ಸಮಾಜದ ಬಗ್ಗೆ ಮಾತನಾಡುವಾಗ ತಮ್ಮನ್ನೂ ತಮ್ಮ ಸಮುದಾಯವನ್ನೂ ಒಳಗೊಳಿಸಿಕೊಳ್ಳುತ್ತಾರೆ. ಶಾಂತಿ ಕದಡುವ ಸಂಘಟನೆಗಳ ಬಗ್ಗೆ ಅವರ ಆಕ್ರೋಶ, ಪ್ರತಿಭಟನೆಗಳು ಕೇವಲ ರಚ್ಚಿನ ಹೇಳಿಕೆಗಳಿಗೆ ಸೀಮಿತವಾಗದೆ, ವಿರೋಧಿಗಳನ್ನು ಯೋಚನೆಗೆ ಹಚ್ಚುವ, ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸುವಷ್ಟು ವೈಚಾರಿಕವಾಗಿರುತ್ತವೆ. ಇಂದಿನ ಮನಸ್ಸುಗಳಿಗೆ ಬೇಕಿರುವುದು ಇಂತಹ ಚಿಂತನೆ, ಇಂತಹ ಓದು.

ಕೇಂದ್ರವಿಲ್ಲದಿದ್ದರೂ…
ಅತ್ಯಂತ ಕಡಿಮೆ ಅವಧಿಯಲ್ಲಿ ಸುಮಾರು ಆರೇಳು ಮುದ್ರಣಗಳನ್ನು ಕಂಡ ‘ಎದೆಗೆ ಬಿದ್ದ ಅಕ್ಷರ’ ಕೃತಿಯನ್ನು ಕೆಲವರು ’ಕೇಂದ್ರವೆ ಇಲ್ಲದ ಸಂಕಲನ’ ಎಂದು ಟೀಕಿಸಿದ್ದಿದೆ. ಹಳೆಯ ಸರಕನ್ನೆಲ್ಲ ಒಟ್ಟುಗೂಡಿಸಿ ಪ್ರಕಟಿಸುವ ಅವಶ್ಯಕತೆಯೇ ಇರಲಿಲ್ಲವೆಂದೂ, ಮಹಾದೇವರು ಹೆಚ್ಚಿನದೇನನ್ನೂ ಬರೆದಿಲ್ಲವಾಗಿ, ಹಳೆಯ ಬರಹಗಳನ್ನೆ ರೀಸೈಕಲ್ ಮಾಡಿದ್ದಾರೆಂದೂ ಜರೆದವರಿದ್ದಾರೆ.
ಇರಲಿ. ಈ ಕೃತಿಗೆ ಕೇಂದ್ರವಿಲ್ಲ ಎನ್ನುವ ಮಾತನ್ನು ಒಪ್ಪಿಕೊಳ್ಳೋಣ. ವಾಸ್ತವವಾಗಿ ಈ ಅಂಶವೇ ಪುಸ್ತಕದ ವೈಶಿಷ್ಟ್ಯತೆ. ಕಾಲಕ್ರಮದಲ್ಲಿ ಹಂಚಿಹೋದ ವಿವಿಧ ಸಂಗತಿಗಳು, ಪ್ರತಿಯೊಂದೂ ಒಂದು ಪ್ರತ್ಯೇಕ ಕೇಂದ್ರವೇ. ಆದರೆ ಇದರೊಳಗಿನ ಅಷ್ಟೂ ಬರಹಗಳು ಸಾಮಾಜಿಕ ಸಂಗತಿಗಳನ್ನು ಚರ್ಚಿಸುತ್ತವೆ. ಆದ್ದರಿಂದ ಈ ಆಶಯವೇ ಪುಸ್ತಕದ ಮುಖ್ಯ ಕೇಂದ್ರವೆಂದು ಹೇಳಬಹುದು. ಈ ಆಶಯದ ಸೂತ್ರದಲ್ಲಿ ಎಲ್ಲ ಬರಹಗಳೂ ಪೋಣಿಸಲ್ಪಟ್ಟಿವೆ.
ಇನ್ನು, ಬರಹದ ಪ್ರಮಾಣ ಸ್ವಲ್ಪವಿದ್ದರೂ ಮೌಲಿಕತೆ ಮತ್ತು ಪ್ರಸ್ತುತತೆಯ ದೃಷ್ಟಿಯಿಂದ ಅರ್ಥಪೂರ್ಣವಾಗಿರುವ ಈ ಪುಸ್ತಕವನ್ನು ಹಳೆಯ ಕಂತೆ ಎಂದು ದೂರುವುದರಲ್ಲಿ ಅರ್ಥವಿಲ್ಲ. ಅನಂತಮೂರ್ತಿಯವರ ‘ಮಾತು ಸೋತ ಭಾರತ’ ಪ್ರಕಟಗೊಂಡಾಗಲೂ ಇಂತಹ ಅಭಿಪ್ರಾಯಗಳು ಬಂದಿದ್ದವು. ನಮ್ಮ ನಾಡಿನ ಪ್ರಮುಖ ಚಿಂತಕರ ಸಾಂದರ್ಭಿಕ ಬರಹ, ಪ್ರತಿಕ್ರಿಯೆ ಹಾಗೂ ಹೇಳಿಕೆಗಳನ್ನು ದಾಖಲಿಸಿಡುವುದು ನಮ್ಮ ಜವಾಬ್ದಾರಿಯೇ ಆಗಿದೆ. ಹೀಗಿರುತ್ತ ಅವನ್ನು ಹಳೆಯ ಸರಕಿನ ಸಂಕಲನವೆಂದು ದೂರುವುದು, ನಮ್ಮ ಅಸೂಕ್ಷ್ಮತೆಯನ್ನು ತೋರುತ್ತದೆ. ಹಾಗೆಂದು ಈ ಪುಸ್ತಕದ ಅಂಶಗಳೆಲ್ಲವನ್ನೂ ಒಪ್ಪಲೇಬೇಕು, ಹಿರಿಯರೆಂಬ ಕಾರಣಕ್ಕೆ ಆರಾಧ್ಯ ಭಾವದಿಂದ ಕಾಣಬೇಕೆಂದೇನೂ ಇಲ್ಲ. ಮುಂದಿನ ಚರ್ಚೆಗೆ ಗ್ರಾಸವಾಗಲಿ ಎಂದಾದರೂ ಒಂದು ತಲೆಮಾರಿನ ಚಿಂತನಾಕ್ರಮ ಹೇಗಿತ್ತೆಂಬ ಪರಿಚಯಕ್ಕಾಗಿಯಾದರೂ ಅದರ ಅಗತ್ಯವಿದೆಯಷ್ಟೆ.

ಮುಖ್ಯ ಚರ್ಚೆಗಳು
‘ಎದೆಗೆ ಬಿದ್ದ ಅಕ್ಷರ’ ತೆರೆದುಕೊಳ್ಳೋದು ‘ನನ್ನ ದೇವರು’ ಬರಹದಿಂದ. ಇಲ್ಲಿ ನಾಸ್ತಿಕ – ಆಸ್ತಿಕವಾದಗಳ ಚರ್ಚೆ ನಡೆಯುವುದಿಲ್ಲ. ದೇವರೆಂಬ ಅಸ್ತಿತ್ವದ ತರ್ಕವನ್ನೂ ಮೀರಿ, ದೇವರು ಹೇಗಿರಬೇಕೆಂಬ ಜಿಜ್ಞಾಸೆ ನಡೆಸುತ್ತಾರೆ ಮಹದೇವ, ಒಂದು ಚಿಕ್ಕ ಘಟನೆಯನ್ನು ನೆನಪಿಸಿಕೊಳ್ಳುವುದರ ಮೂಲಕ. ‘ಛಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯ – ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ’ ಎಂದು ಹೇಳುತ್ತಾ ಬರೆಹ ಕೊನೆಗೊಳಿಸುತ್ತಾರೆ. ಅವರ ಈ ಹೇಳಿಕೆ ವೈಚಾರಿಕತೆಯ ಸ್ಥಾಪನೆಗಾಗಿ ದೇವರ ಅಸ್ತಿತ್ವವನ್ನೆ ನಿರಾಕರಿಸುವ ಮೊಂಡುತನದಿಂದ ಹೊರತಾಗಿದೆ. ತಿಳಿವಳಿಕಸ್ಥರ ಯೋಚನೆ ಅದೇನೇ ಆಗಿದ್ದರೂ ಜನರ ನಡುವೆ ಮಾತನಾಡುವಾಗ ಅವರಿಗೂ ದಕ್ಕುವಂತೆ ಹೇಳುವುದು ಬುದ್ಧಿವಂತಿಕೆ. ಇಲ್ಲಿ ಮಹಾದೇವ ಮಾಡುವುದೂ ಅದನ್ನೇ. ಜನ ಸಾಮನ್ಯರ ನಂಬಿಕೆಯನ್ನು ದೂಷಿಸಲಿಕ್ಕಾಗಲೀ ಲೇವಡಿ ಮಾಡುವುದಕ್ಕಾಗಲೀ ಕೈಹಾಕದೆ, ಅತ್ಯಂತ ಡಿಗ್ನಿಫೈಡ್ ಆಗಿ ದೇವರಿಗೊಂದು ನಿರ್ವಚನೆ ಒದಗಿಸಿಕೊಡುವ ಅವರ ಈ ಪುಟ್ಟ ಬರೆಹ, ಕೈದೀವಿಗೆಯಂತೆ ದಾರಿ ನಡೆಸುತ್ತದೆ.
ಈ ಪುಸ್ತಕದಲ್ಲಿ ಮನವ ಕಾಡುತಿದೆ, ಒಳನೋಟ, ಮತಾಂಧರ ಮೆದುಳೊಳಗೆ, ಹೀಗೇ ಮುಂದುವರೆದರೆ, ಮುತ್ತು ಮುಳುಗ ಮತ್ತು ಇತರ, ಮುಖಾಮುಖಿ ಹಾಗೂ ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ – ಎಂಬ ಏಳು ವಿಭಾಗಗಳಿವೆ. ಈ ವಿಭಾಗಗಳಲ್ಲಿ ಒಳಗೊಳಿಸಲಾಗಿರುವ ಬರೆಹಗಳ ನಿರೂಪಣಾ ಕ್ರಮದಲ್ಲಿ ಭಿನ್ನತೆಯಿದೆ. ಓದುತ್ತ ಹೋದಂತೆಲ್ಲ ಈ ಧ್ವನಿ ವ್ಯತ್ಯಾಸ ಅರಿವಾಗುತ್ತದೆ.
ಕೃತಿಯ ಎಂಭತ್ತಕ್ಕೂ ಹೆಚ್ಚು ಬರಹಗಳಲ್ಲಿ ಕೆಲವು ವೈಚಾರಿಕತೆಯನ್ನೂ ಮೀರಿ ಮನ ಕಲಕುವ ಭಾವುಕತೆಯನ್ನೊಡ್ಡಿ ಉಳಿದುಬಿಡುತ್ತವೆ. ಮಹಾದೇವರ ಮಿಡಿತ ಯಾವುದೇ ಸೀಮೆ ಚೌಕಟ್ಟುಗಳಿಗೆ ಒಳಗಾದುದಲ್ಲ. ಅವರು ‘ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು ಅವುಗಳನ್ನು ತಿನ್ನುತ್ತವೆ. ಅವುಗಳು ನನ್ನನ್ನು ತಿನ್ನುತ್ತವೆ…’ ಎಂದು ಬರೆಯುವಾಗ ತಮ್ಮದೇ ನೆರಕೆಯ ಕ್ಷಾಮದಿಂದ ಅನುಭವಿಸುವ ಭಾವತೀವ್ರತೆಯನ್ನೇ ಅನುಭವಿಸಿದಂತೆ ತೋರುತ್ತದೆ. ಇಂದು ಜಾಗತೀಕರಣದ ಅಗತ್ಯವಿರುವುದು ಇಂತಹಾ ತುಡಿತದ ದೃಷ್ಟಿಯಿಂದ. ಮಾನವೀಯ ಕಳಕಳಿಗಳು ಜಾಗತೀಕರಣಗೊಳ್ಳಬೇಕು. ಜಗತ್ತಿನ ಯಾವುದೋ ಭಾಗದ ಮಾಲಿಗೆ ಇನ್ಯಾವದೂ ಭಾಗದ ಗ್ರಾಹಕ ಒದಗುವಂತೆ, ಒಂದು ಭಾಗದ ನೋವಿಗೆ ಮತ್ತೊಂದು ಭಾಗದಲ್ಲಿ ಶಮನ ಒದಗಬೇಕು. ಇದನ್ನು ಮಹಾದೇವ ‘ಮೂರ್ಛಾವಸ್ಥೆಯಲ್ಲಿ ಕಾರುಣ್ಯ’ ಲೇಖನದಲ್ಲಿ ಹೇಳುತ್ತಾರೆ; ‘ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು – ಅದು ಘಾಸಿಗೊಳಿಸುವುದು – ತನ್ನ ಆಳದ ಒಳ ಸಮಷ್ಟಿ ಮನಸನ್ನೆ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ. ನಾವು ಮನುಷ್ಯರು ಗುಣವಾಗಬೇಕಾಗಿದೆ. ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ. ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ’ ಎಂದು. ಇದನ್ನು ಹಿಂದಿನವರು ಅರ್ಥ ಮಾಡಿಕೊಳ್ಳಲಿಲ್ಲ. ಮುಂದಿನ ಪೀಳಿಗೆಯಾದರೂ ಅರ್ಥ ಮಾಡಿಕೊಂಡು ನಡೆಯುವಂತಾದರೆ ಚೆನ್ನ.
ಈ ಕೃತಿಯ ಬಹುಪಾಲು ಲೇಖನಗಳು ಇಂತಹ ಮಾರ್ಗದರ್ಶಿ ಚಿಂತನೆಗಳನ್ನು ಒಳಗೊಂಡಿದೆ. ಕೇವಲ ಮನುಷ್ಯನಾಗುವುದೆಂದರೆ, ಅಸ್ಪೃಷ್ಯನಾಗುವುದೆಂದರೆ, ಯಾರಿಗೆ ಯಾವ ಚಿಕಿತ್ಸೆ, ದಯೆಗಾಗಿ ನೆಲ ಒಣಗಿದೆ ಮೊದಲಾದ ಬರೆಹಗಳನ್ನು ಅವರು ಯಾವಾಗ ಬರೆದಿದ್ದರೂ ಯಾವ ಕಾಲದಲ್ಲಾದರೂ ಓದಿ ಸಮೀಕರಿಸಿಕೊಳ್ಳಬಹುದಾದ ವಸ್ತುವಿಷಯಗಳಿಂದ ಕೂಡಿದೆ.
‘ಕೇವಲ ಮನುಷ್ಯನಾಗುವುದೆಂದರೆ’ ಶೀರ್ಷಿಕೆಯ ಲೇಖನದಲ್ಲಿ ತಿರುಗಿ ನಿಂತ ಉಡುಪಿ ಕೃಷ್ಣನನ್ನು ಕಂಡು ಯಾರ‍್ಯಾರು ಹೇಗೆಲ್ಲ ಶ್ರೇಷ್ಠತೆ ಹಾಗೂ ಕನಿಷ್ಠತೆಯ ಭಾವಗಳನ್ನು ತಳೆಯಬಹುದು ಎಂದು ಹೇಳಿತ್ತಾ ಅಂತಿಮವಾಗಿ ಕನಕ ಇಂಥವರನ್ನು ನೋಡಿ ಹೇಗೆ ಭಾವಿಸಬಹುದು ಎಂದು ಊಹಿಸುತ್ತಾರೆ ಮಹದೇವ. ಕನಕನಿಗೆ  ‘ಮಾಧ್ವ – ಕುರುಬ ಇಬ್ಬರೂ ಮೇಲು ಕೀಳೆಂಬ ಜಾತಿಯ ಬಚ್ಚಲಲ್ಲಿ ಹುಳಗಳಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ಇವರನ್ನು ಮನುಷ್ಯರನ್ನಾಗಿಸು ಪರಮಾತ್ಮ’- ಹೀಗೆನ್ನಿಸಬಹುದೇ? ಎಂದು ಪ್ರಶ್ನಿಸುತ್ತಾ ಮನುಷ್ಯನ ಮೇಲರಿಮೆ – ಕೀಳರಿಮೆಗಳೆರಡ ದುರಂತವನ್ನು ಮುಂದಿಡುತ್ತಾರೆ.
’ಹೆಣ್ಣು ಜಾತಿ ಮತ್ತು ದಲಿತ ಜಾತಿ’ ಲೇಖನ ಹೆಣ್ಣು ಹಾಗೂ ದಲಿತರ ಯಾವತ್ತಿಗೂ ಬದಲಾಗದ ಸಂಘರ್ಷಕ್ಕೆ ಹಿಡಿದ ಕನ್ನಡಿಯಂತಿದೆ. ಹೆಣ್ಣು ಮಕ್ಕಳು ಮತ್ತು ದಲಿತರು ಕೈಯಲ್ಲಿ ಕೈಯಿಟ್ಟು ನಡೆದರೆ ಬದಲಾವಣೆ ಸಾಧ್ಯವೆಂಬ ಭರವಸೆ ಹುಟ್ಟಿಸುತ್ತದೆ.
ನಿಜಾರ್ಥದಲ್ಲಿ ಭಾರತ ನಿರ್ಮಾಣ ಸಾಧ್ಯವಾಗುವುದು ದಲಿತರ ಹಾಗೂ ಹೆಣ್ಣು ಮಕ್ಕಳ ಮೇಲಿನ ಶೋಷಣೆ ಅಂತ್ಯಗೊಂಡ ಅನಂತರವೇ. ನಗರ ಜೀವನದ ಕನಸು ಮತ್ತು ಭ್ರಮೆಗಳಲ್ಲಿ ಮುಚ್ಚಿ ಹೋಗುತ್ತಿರುವ ಈ ಶೋಷಣೆಗಳತ್ತ ಗಮನ ಸೆಳೆದು, ಉದ್ಧಾರ ಸೂತ್ರದ ಹುಡುಕಾಟಕ್ಕೆ ‘ಎದೆಗೆ ಬಿದ್ದ ಅಕ್ಷರ’ ಪ್ರೇರೇಪಿಸುತ್ತದೆ. ಪ್ರೇರೇಪಿಸುವಂತಾಗಬೇಕು. ಈ ಕಾರಣಕ್ಕೆ ಈ ಪುಸ್ತಕವನ್ನು ಹೊಸತಲೆಮಾರಿನ ಪ್ರತಿಯೊಬ್ಬರೂ ಓದುವಂತಾಗಬೇಕು.

***********

ಈ ತಲೆಮಾರನ್ನು ತಟ್ಟಿದ ಬಗೆ
ಎದೆಗೆ ಬಿದ್ದ ಅಕ್ಷರ ಕೃತಿಗೆ ಹಿರಿಯ ಲೇಖಕ ಹಾಗೂ ಚಿಂತಕರ ಸ್ವಾಗತ ಹಾಗೂ ಅಭಿಪ್ರಾಯಗಳು ಒಂದೆಡೆಯಾದರೆ, ಹೊಸತಲೆಮಾರಿನ ಮೆಚ್ಚುಗೆಯೂ ಹಾಗೆಯೇ ಇವೆ. ತಂತ್ರಜ್ಞಾನದ ಮೂಲಕ ಸಂವಹನ ಸಾಧ್ಯವಾಗಿರುವ ಇಂದಿನ ಸಂದರ್ಭದಲ್ಲಿ ಸಾಮಾಜಿಕ ತಾಣಗಳು ಹಾಗೂ ಅಂತರ್ಜಾಲ ತಾಣಗಳಲ್ಲಿ ಸಾಕಷ್ಟು ಚರ್ಚೆಯನ್ನೂ ಈ ಪೀಳಿಗೆಯವರು ನಡೆಸಿದ್ದಾರೆ. ಇಲ್ಲಿನ ಬರೆಹಗಳ ಬಹುಪಾಲು ಹೇಳಿಕೆಗಳು ಈಗಲೂ ಸಮಾನ ಮನಸ್ಕರ ನಡುವೆ ಹರಿದಾಡುತ್ತಲೇ ಇವೆ. ಇಂದಿನ ಓದಿನ ಅಭಿರುಚಿ ಮತ್ತು ಆಧುನಿಕ ವಸ್ತುವಿಷಯಗಳ ನಡುವೆಯೂ ಗಂಭೀರ ಚಿಂತನೆಗಳ ಬರಹ ಗುಚ್ಛವೊಂದು ಹೊಸ ಪೀಳಿಗೆಯನ್ನು ತಟ್ಟಿದ ಬಗೆ ಹೀಗಿದೆ.

ಚಿಂತನೆಯ ಬೀಜಗಳು
* ಯಾವುದೇ ಚಿಂತಕನೂ ಪೂರ್ಣನಲ್ಲ, ಯಾವುದೇ ಚಿಂತನೆಯೂ ಪೂರ್ಣವಲ್ಲ. ಅಂಬೇಡ್ಕರ‍್, ಗಾಂಧಿ, ಲೋಹಿಯಾ, ಮಾರ್ಕ್ಸ್‌ ಯಾರೇ ಆಗಿರಲಿ, ಅವರ ನಡುವೆ ಸಾಮ್ಯ ಗುರುತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಾಗಿದೆ. ಕಸಿ ಮಾಡುವ ಐಕ್ಯತೆಯ ಕಣ್ಣು ನಮ್ಮದಾಗಬೇಕಾಗಿದೆ.
(- ಯಾರಿಗೆ ಯಾವ ಚಿಕಿತ್ಸೆ?)
* ಯಾವ ಮತವೂ ಬೇಡ ಅನ್ನುವ ನನ್ನ ನಾಲಿಗೆಯು ನನ್ನ ಜನರ ಪ್ರಾಣಪಕ್ಷಿ ಮತ್ತು ಛಿದ್ರರಾಗಿರುವ ದಲಿತ ಸಮುದಾಯಗಳು ಕನಿಷ್ಠ ಹೀಗಾದರೂ ಒಂದಾಗಬಹುದಾದ ಆಸೆಯಿಂದಾಗಿ ಮತಾಂತರ ಬೇಡ ಎಂದು ನುಡಿಯದಂತಾಗಿದೆ.
(ಬೇಡ ಎನಲಿ ಯಾವ ನಾಲಗೆಯಲಿ?)
*  ಹೋರಾಟಗಾರರು ಆದರ್ಶವಾದಿಗಳು ಇನ್ನೂ ಹುಟ್ಟದ ‘ನಾಳೆ’ಗಳಲ್ಲಿ ಹೆಚ್ಚಾಗಿ ಜೀವಿಸುತ್ತಿದ್ದಾರೆ. ಅವರು ‘ಇಂದು’ ಹೆಚ್ಚಾಗಿ ಬದುಕುತ್ತಿರುವುದಿಲ್ಲ. ಈ ನಾಳೆಗಳವರಲ್ಲಿ ಒಬ್ಬೊಬ್ಬರಲ್ಲೂ ಒಂದೊಂದು ನಾಳೆಗಳಿದ್ದು ಅವೂ ಜಗಳ ಆಡುತ್ತಿರುತ್ತವೆ. ಆದ್ದರಿಂದ ದಯವಿಟ್ಟು ಇಂದು ಜೀವಿಸಿ.
(- ನಾಳೈ ನಮದೈ)
* ಜಾತಿ ಎಂಬುದು ಭಾರತ ಎಂಬ ವೃಕ್ಷದ ಕೊಂಬೆಗಳನ್ನು ಕತ್ತರಿಸುತ್ತಿದ್ದರೆ, ಮತಾಂಧತೆ ಎಂಬುದು ವೃಕ್ಷದ ಬೇರುಗಳನ್ನು ಕತ್ತರಿಸುತ್ತದೆ. ನಮ್ಮೊಳಗೇ ಇರುವ ಈ ಜಾತಿ ಮತಾಂಧತೆಗಳಿಂದ ನಾವು ತಪ್ಪಿಸಿಕೊಂಡು ದೇಶ ಉಳಿಸಬೇಕಾಗಿದೆ! ಆಮೇಲೆ ದೇಶಭಕ್ತಿ!! ಅಥವಾ ಇದೇ ದೇಶಭಕ್ತಿ.
(- ‘ದೇಶಭಕ್ತಿ’ಯಲ್ಲಿ ನನ್ನ ಕಾಡುತ್ತಿರುವ ಶಂಕೆ)
* ಒಂದು ಪ್ರದೇಶದಲ್ಲಿ ವಾಸಿಸುವ ಜನರ ಮೊತ್ತವೇ ದೇಶ ಅನ್ನಿಸಿಕೊಂಡರೆ ಆಗ ಅಲ್ಲಿನ ಪ್ರತಿಯೊಂದು ಜೀವಕ್ಕೂ ಬೆಲೆ ಬರುತ್ತಿತ್ತು. ಆಗ ಅಲ್ಲಿ ಅಸ್ಪೃಷ್ಯತೆ, ಜಾತಿ ಮತ, ಭಾಷೆಗಾಗಿ ಇಷ್ಟೊಂದು ರಕ್ತ ಸುರಿಯುತ್ತಿರಲಿಲ್ಲವೇನೊ.
( – ಕನ್ನಡಕ್ಕೂ ಒಂದು ‘ರಾಷ್ಟ್ರೀಯತೆ’?)
* ಇಂದು ನಗರ ಉಸಿರಾಡಲು ಕಷ್ಟಪಡುತ್ತಿದೆ. ಹಳ್ಳಿ ನಡೆದಾಡಲು ತ್ರಾಣವಿಲ್ಲದೆ ಕಷ್ಟಪಡುತ್ತಿದೆ. ಅನ್ನ ನೀಡುವಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಎಲ್ಲರಿಗೂ ಈಗ ಉಳಿಯಲು ಇರುವ ದಾರಿ ಒಂದೇ – ಇಲ್ಲಿ ಮತ್ತೆ ಸಮಾನತೆಯ ಕನಸನ್ನು ಬಿತ್ತಬೇಕಾಗಿದೆ.
(- ಸಮಾನತೆಯ ಕನಸನ್ನು ಮತ್ತೆ ಕಾಣುತ್ತಾ)
* ಬಸ್ಸು, ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೋಟೆಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ. ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: