ಯಾವುದೋ ಒಂದು ಕಾಂಪಿಟೇಶನ್. ಅಂತಿಮ ಸುತ್ತಿಗೆ ಬಂದಿದೆ. ಅಲ್ಲಿ ಇಬ್ಬರು ಸಮಾನ ಅರ್ಹತೆಯ ಹುಡುಗಿಯರು. ಇಬ್ಬರೂ ಒಬ್ಬರಿಗೊಬ್ಬರು ಸವ್ವಾಸೇರು. ಇನ್ನು ಚೀಟಿ ಹಾಕಿ ವಿನ್ನರ್ ಅನ್ನು ಆರಿಸಬೇಕಷ್ಟೆ. ಆ ಇಬ್ಬರಲ್ಲಿ ಒಬ್ಬಳು ಬಹಳ ಚೆಂದ ಡ್ರೆಸ್ ಮಾಡಿಕೊಂಡಿದ್ದಾಳೆ, ಮತ್ತೊಬ್ಬಳದು ಸಾಧಾರಣವಾಗಿದೆ. ಆ ಸ್ಪರ್ಧೆಯಲ್ಲಿ ಅದಕ್ಕೆನೂ ಮಹತ್ವವಿಲ್ಲ. ಆದರೂ ನೋಡುತ್ತ ಕುಳಿತವರಲ್ಲಿ ಬಹುಪಾಲು ಜನಕ್ಕೆ ಚೆಂದದ ಡ್ರೆಸ್ಸಿನವಳು ಗೆಲ್ಲಲೆಂಬ ಮನಸ್ಸು. ಅವರಲ್ಲಿ ನಾವು ಸೇರಿದ್ದರೂ ಆಶ್ಚರ್ಯ ಪಡಬೇಕಿಲ್ಲ. ಚೆಂದಕ್ಕೇ ಬಹುಮತ ಅನ್ನೋದನ್ನ ಹೇಳುವುದಕ್ಕೆ ಇದೊಂದು ತೀರ ಸರಳ ಉದಾಹರಣೆಯಷ್ಟೆ. ರೂಪಕ್ಕಿಂತ ಗುಣ ಮುಖ್ಯ, ಪ್ರತಿಭೆ ಮುಖ್ಯ ಅಂತೆಲ್ಲ ಭಾಷಣ ಬಿಗಿಯುವವರು ಕೂಡ ಆಯ್ಕೆಯ ಸಂದರ್ಭ ಬಂದಾಗ ಬೊಟ್ಟು ಮಾಡೋದು `ಚೆಂದ’ದ ಕಡೆಗೇ. ಹಾಗಂತ ಇದು ಸಾಮಾಜಿಕವಾಗಿ, ವೈಯಕ್ತಿಕವಾಗಿ ವ್ಯಕ್ತಿಯೊಬ್ಬರನ್ನು ಹರ್ಟ್ ಮಾಡದ ಹೊರತು, ಇದನ್ನು ತಾರತಮ್ಯ ಎಂದು ಪರಿಗಣಿಸಬೇಕಿಲ್ಲ, ಮುಜುಗರ ಪಟ್ಟುಕೊಳ್ಳಬೇಕಾಗಿಯೂ ಇಲ್ಲ. ಚೆಂದವಾಗಿ, ಆಕರ್ಷಕವಾಗಿ ಕಾಣಿಸಿಕೊಳ್ಳುವ ವಸ್ತುಗಳನ್ನ ಯಾರಾದರೂ ಇಷ್ಟಪಡೋದು ಸಹಜ. ಇದಕ್ಕೆ ಹಾರ್ಮೋನುಗಳ ಸ್ರಾವದ ವೈಜ್ಞಾನಿಕ ವಿವರಣೆಗಳೂ ಇವೆ.
ಈ ಸೌಂದರ್ಯ ಅನ್ನೋದು ದೇಹದ ಯಾವುದೋ ಒಂದು ಭಾಗದಲ್ಲಿ ಇರೋದಿಲ್ಲ. ಮುಖದ ಸಹಜ ಚೆಲುವಿಗೆ ಅದರದ್ದೇ ಮೌಲ್ಯವಿದೆ, ನಿಜ. ಆದರೆ ಎಲ್ಲರ ಮನ್ನಣೆ ಪಡೆಯುಂತಹ ಸೌಂದರ್ಯ ಇದೆಯಲ್ಲ, ಅದು ಒಟ್ಟು ವ್ಯಕ್ತಿತ್ವದ ಮೊತ್ತ. ಬಿಹೇವಿಯರ್, ಬುದ್ಧಿವಂತಿಕೆ, ಒಪ್ಪ- ಓರಣ ಮತ್ತು ತನ್ನ ಇರುವಿಕೆಯನ್ನು ತಾನು ನಿರೂಪಿಸಿಕೊಳ್ಳುವ ಜಾಣತನ- ಇವೆಲ್ಲವೂ ಸೇರಿ ಹೊಮ್ಮುವ ಆಕರ್ಷಣಾ ವಲಯವೇ ಸೌಂದರ್ಯ. ಇವುಗಳಲ್ಲಿ ನಾಲ್ಕನೆಯ ಅಂಶ `ನೋಟ’ಕ್ಕೆ ದಕ್ಕುವಂಥದ್ದು. ಆ ಕಾರಣದಿಂದಲೇ ಅದು ಸ್ವಲ್ಪ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ನಮ್ಮ ಇರುವಿಕೆಯನ್ನ ನಾವು ನಿರೂಪಿಸಿಕೊಳ್ಳೋದು ಅಂದರೆ- ನಮ್ಮನ್ನ ನಾವು `ಹೀಗಿದ್ದೇವೆ’ ಅಂತ ಪ್ರೆಸೆಂಟ್ ಮಾಡ್ಕೊಳ್ಳೋದು. ಈವತ್ತಿನ ಯಾವುದೇ ವಲಯ ಅಥವಾ ಉದ್ಯೋಗದ ಅರ್ಹತೆಗಳಲ್ಲಿ `ಗುಡ್ ಲುಕಿಂಗ್’ ಕೂಡ ಒಂದಾಗಿರುವಾಗ, ನಾವು ಮಾತ್ರ ಅದಕ್ಕೆ ಮನ್ನಣೆ ಕೊಡುವುದಿಲ್ಲ ಎಂದರೆ ಅರ್ಥವಿರುವುದಿಲ್ಲ. ಮತ್ತು, ಈ `ಗುಡ್ ಲುಕಿಂಗ್’ ಅನ್ನುವುದು ಸಹಜ ಸೌಂದರ್ಯವನ್ನು ಸೂಚಿಸುವ ಪದವಲ್ಲ. ಅದು ಚೆನ್ನಾಗಿ `ಕಾಣುವುದು’ ಹೊರತು, ಚೆನ್ನಾಗಿ `ಇರುವುದು’ ಎಂದಲ್ಲ. ಸಮಯ ಸಂದರ್ಭಕ್ಕೆ ಹೊಂದುವ ಡ್ರೆಸ್, ಹಾವ ಭಾವಗಳು, ಸಂವಹನ ಕೌಶಲ್ಯ, ಅವೇರ್ನೆಸ್- ಇವೆಲ್ಲ ಸೇರಿ ನಮ್ಮನ್ನು ಚೆಂದಗಾಣಿಸುತ್ತವೆ.
ಬ್ಯೂಟಿ ಸೀಕ್ರೆಟ್ಸ್
ಪ್ರತಿಯೊಬ್ಬ ಹೆಣ್ಣೂ ಕನ್ನಡಿಯೆದುರು ತಾನೇ ಸುಂದರಿ ಅಂದುಕೊಳ್ಳುತ್ತಾಳೆ. ಅಥವಾ ಹಾಗಂದುಕೊಂಡ ಹೊತ್ತಲ್ಲೇ ಅವಳು ಸುಂದರಿಯಾಗಿಬಿಡುತ್ತಾಳೆ. ಆದರೆ ಎಲ್ಲರ ವಿಷಯದಲ್ಲೂ ಹಾಗಿಲ್ಲ. ಕೆಲವರ ಪಾಲಿಗೆ ಕನ್ನಡಿ ಎದುರು ನಿಲ್ಲುವುದೆಂದರೆ ಹಿಂಸೆ. ತಮ್ಮ ದೇಹದ ಅಷ್ಟೂ ಕುಂದುಕೊರತೆಗಳನ್ನು ನೋಡಿಕೊಳ್ಳುತ್ತಾ ಕೀಳರಿಮೆಯ ಪಾತಾಳಕ್ಕಿಳಿದು ಹೋಗುತ್ತಾರೆ. ಸ್ವಲ್ಪ ನಿಷ್ಠುರವಾಗಿ, ಆದರೆ ಸ್ಪಷ್ಟವಾಗಿ ಹೇಳಬೇಕೆಂದರೆ, ಕೇವಲ ದೇಹ ಸೌಂದರ್ಯದ ಕಾರಣಕ್ಕೆ ಹಿಂಜರಿಕೆ ತಂದುಕೊಳ್ಳುವವರು ಮೂರ್ಖರು. ದುಬಾರಿ ಮೇಕಪ್, ಮೇಕ್ಓವರ್ಗಳಿಲ್ಲದೆಯೂ ನಾವು ಇರುವ ಹಾಗೇ ಚೆಂದ ಕಾಣಲಿಕ್ಕೆ ಕೆಲವು ಸೂತ್ರಗಳಿವೆ. ಆತ್ಮ ವಿಸ್ವಾಸ ಅವುಗಳಲ್ಲಿ ಮೊದಲನೆಯದು. ಮುಗುಳ್ನಗು ಎರಡನೆಯದು. ಮುಖದಲ್ಲಿ ಆತ್ಮವಿಶ್ವಾಸ ಕಟ್ಟಿಕೊಡುವ ಜಂಭ, ತಿಳಿವಿನ ನಗೆ ಹೊಂದಿರುವವರ ಪ್ರೆಸೆನ್ಸ್, ಯಾವುದೇ ಪರಿಸರಕ್ಕೊಂದು ಕಳೆ ತಂದುಕೊಡುತ್ತದೆ.
ಬ್ಯೂಟಿ ಇಸ್ ಇನ್ ದ ಐಸ್ ಆಫ್ ಬಿಹೋಲ್ಡರ್ ಅನ್ನುವ ಮಾತಿದೆ. ನಿಜ, ಬ್ಯೂಟಿ ಅನ್ನೋದೊಂದು ಮೈಂಡ್ಸೆಟ್. ಹತ್ತು ಸರ್ತಿ ನಮಗೆ ನಾವೇ ಚೆಂದ ಅಂದುಕೊಂಡರೆ, ನಾವು ಹಾಗೇ ಆಗಿರುತ್ತೇವೆ. ಇಂತಹ ನಂಬಿಕೆ, ವಿಶ್ವಾಸ ನಮಗಿಲ್ಲವಾದರೆ, ನಿಜವಾಗಿ ಚೆಲುವಿದ್ದೂ ಅದು ಹೊರತೋರದಂತೆ ಉಳಿದುಬಿಡುತ್ತದೆ. ಕನ್ನಡಿ ಮುಂದೆ ನಿಂತಾಗ ನಮ್ಮಲ್ಲಿನ ಪಾಸಿಟಿವ್ಗಳನ್ನೇ ಹೆಕ್ಕಿ ಹೆಕ್ಕಿ ನೋಡಿಕೊಳ್ಳಬೇಕು. ನಮ್ಮ ರೂಪದಲ್ಲಿನ ಮತ್ತು ವ್ಯಕ್ತಿತ್ವದಲ್ಲಿನ ಹೆಚ್ಚುಗಾರಿಕೆಗಳನ್ನೇ ಫೋಕಸ್ ಮಾಡಿ ನೋಡಿಕೊಳ್ಳಬೇಕು. ನಮ್ಮನ್ನು ನಾವೇ ಮೆಚ್ಚಿಕೊಳ್ಳದೆ ಬೇರೆಯವರನ್ನು ಮೆಚ್ಚಿಸಲು ಸಾಧ್ಯವಿಲ್ಲ. ನಮ್ಮ ಒಟ್ಟು ವ್ಯಕ್ತಿತ್ವದ ಸೌಂದರ್ಯ, ಬರಿಯ ದೇಹ ಚೆಲುವಿಕೆಯ ಸೌಂದರ್ಯಕ್ಕಿಂತಲೂ ಹೆಚ್ಚು ಆಕರ್ಷಕವಾಗಿರುತ್ತದೆ, ಹೆಚ್ಚು ಜನರನ್ನು ಸೆಳೆಯುತ್ತದೆ.
ಆದರೆ ಇವುಗಳ ಜೊತೆಗೆ, ಕಾಲದೊಂದಿಗೆ ಹೆಜ್ಜೆ ಹಾಕುತ್ತಾ ಕೊಂಚ ಡ್ರೆಸ್ ಸೆನ್ಸ್ ಅನ್ನೂ ಬೆಳೆಸಿಕೊಳ್ಳಬೇಕಾಗುತ್ತದೆ. ಈವತ್ತು ಪಾರ್ಲರುಗಳಲ್ಲಿ `ಬ್ಯೂಟಿ ಅಡ್ವೈಸರ್’ಗಳು ನಮ್ಮನ್ನು ಚೆಂದವಾಗಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಅಥವಾ ಬೆರಳ ತುದಿಯಲ್ಲೇ ಜಗತ್ತು ತೆರಕೊಳ್ಳುವ ಈ ದಿನಗಳಲ್ಲಿ ನಾವು ಅವರ ಮರ್ಜಿಗೂ ಕಾಯಬೇಕಿಲ್ಲ. ನಮ್ಮ ಮುಖದ ಉದ್ದ- ಅಗಲ, ನಮ್ಮ ಎತ್ತರ- ದಪ್ಪಗಳಿಗೆ ತಕ್ಕಂತೆ ನಾವು ಉಡುತೊಡುವ ಬಟ್ಟೆ, ಅಲಂಕಾರಗಳನ್ನೇ ಹೇಗೆ ಮಾಡಿಫೈ ಮಾಡ್ಕೊಳ್ಳಬೇಕು, ಎಂಥದನ್ನ ಆರಿಸ್ಕೊಳ್ಳಬೇಕು ಅನ್ನುವ ಮಾಹಿತಿಗಳೆಲ್ಲ ಸಿಕ್ಕು ಹೋಗುತ್ತವೆ.
ನಮ್ಮನ್ನು ಸಿಂಗರಿಸಿಕೊಳ್ಳುವುದು ಒಂದು ಕಲೆ. ಯಾವ ಅಕ್ಸೆಸರೀಸ್ ಇಲ್ಲದೆಯೂ ನಾವು ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಸ್ವಲ್ಪ ತಿದ್ದು-ತೀಡುವಿಕೆಗಳು ಗೊತ್ತಿರಬೇಕಷ್ಟೆ. ಯಾರು ಕೂಡ ಪರಿಪೂರ್ಣ ಚೆಲುವು ಹೊಂದಿರುವುದಿಲ್ಲ. ವಿಶ್ವ ಸುಂದರಿಯರು ಕೂಡ ಮುಖ- ಮೂಗುಗಳನ್ನು ಸರ್ಜರಿ ಮಾಡಿಸಿಕೊಳ್ಳುತ್ತಾರೆ ಅನ್ನೋದು ಗೊತ್ತಿರಲಿ.
ನಿಮ್ಮದೊಂದು ಉತ್ತರ