ಕಾಲೇಜ್ಗೋದ್ರೆ ಲವ್ ಆಗತ್ತೆ!
ಹಾಗಂತ ಬಹಳಷ್ಟು ಹುಡುಗರು ಅಂದ್ಕೊಂಡ್ಬಿಟ್ಟಿರ್ತಾರೆ. ಓದು ಬರಹ ಎಲ್ಲಾ ಸರಿ, ಅಷ್ಟರ ನಡುವೇನೂ ಅವರ ಕಣ್ಣುಗಳು ತಮ್ಮನ್ನ ನೋಡಿ ನಾಚ್ಕೊಳ್ಬಹುದಾದ, ಮೆಲ್ಲಗೆ ನಗಬಹುದಾದ ಹುಡುಗಿಯನ್ನ ಹುಡುಕ್ತಿರುತ್ತವೆ. ಯಾವುದೇ ಸಿನಿಮಾದಲ್ಲಿ ನೋಡಿರಬಹುದಾದ ಹೀರೋ ಥರ ತಾನು ಹೇಗೆಲ್ಲ ಹುಡುಗೀನ್ನ ಪ್ರಪೋಸ್ ಮಾಡಬಹುದು? ಅದಕ್ಕಿಂತ ಮುಂಚೆ ಅವಳು ತನಗೆ ಎಲ್ಲಿ, ಯಾವಾಗ, ಯಾವ ಸೀನ್ನಂತೆ ತಾನೇ ನನ್ನ ಪ್ರೇಮಿ ಅಂತ ಸಾಬೀತು ಮಾಡಬಹುದು?ಅನ್ನುವೆಲ್ಲ ಯೋಚನೆ ನಶೆಯಂತೆ ಮುತ್ತಿಕ್ಕುತ್ತ ಇರುತ್ತದೆ. ಹಾಗಿರುತ್ತ ಇರುವಾಗ ಕಾಲ್ತೊಡರಿದ ಯಾರದೋ ಇಯರ್ ರಿಂಗ್ ಹಿಡಿದಾಗ ಬ್ಯಾಕ್ಗ್ರೌಂಡಿನಲ್ಲಿ ಹಳತಾದರೂ `ಇಕ್ ಲಡ್ಕೀ ಕೋ ದೇಖಾ ತೋ….’ ಹಾಡು ಪ್ಲೇ ಆಗತ್ತೆ. ಆಲ್ ಆಫ್ ಎ ಸಡನ್, ನಾನು ಲವ್ವಲ್ಲಿ ಬಿದ್ದಿದೀನಿ ನ್ನೋ ಫೀಲಿಂಗ್ ಮೇಲೆಯೇ ಪ್ರೀತಿ ಹುಟ್ಟಿಬಿಡತ್ತೆ!
ಹೀಗೆ ಟೀನೇಜ್ ಮಕ್ಕಳು ತಮಗೆ ಲವ್ ಆಗ್ಬಿಟ್ಟಿದೆ ಅಂತಲೋ ಕ್ರಶ್ ಆಗ್ಬಿಟ್ಟಿದೆ ಅಂತಲೋ ಹೇಳುವುದುಂಟು. ದೊಡ್ಡವರು ಅದನ್ನ ಇನ್ಫ್ಯಾಚುಯೇಶನ್ ಅಂತಲೋ ಅಟ್ರಾಕ್ಷನ್ ಅಂತಲೋ ತಳ್ಳಿ ಹಾಕುವುದುಂಟು. ಮಜಾ ಅಂದರೆ, ಹುಡುಗರ ಈ ಅವಸ್ಥೆ ಎಲ್ಲವೂ ಮತ್ತು ಯಾವುದೂ ಅಲ್ಲದ್ದು!
ಕಾಲೇಜ್ ಟೀನೇಜ್
ಮೊದಲೇ ಈಗಷ್ಟೆ ಚಿಗುರಿದ ಮೀಸೆಯಷ್ಟು ಎಳೆಯ ಟೀನೇಜು. ಅದರ ಜೊತೆ, ಅಂಥದ್ದೇ ಎಳಸುತನದ ಸ್ನೇಹಿತರು ಸಿಗುವ ಕಾಲೇಜು. ಅದು ಮಂಗಕ್ಕೆ ಭಂಗಿ ಕುಡಿಸಿದಂಥ ಕಾಂಬಿನೇಶನ್ನು ಅಂತ ದೊಡ್ಡವರು ನಗುವುದುಂಟು. ತಮ್ಮ ಭ್ರಮಾಲೋಕದಲ್ಲಿ ಹೆಣೆದುಕೊಂಡ ರಮ್ಯ ಕಲ್ಪನೆಗಳನ್ನೇ ಸತ್ಯ ಅಂದುಕೊಳ್ಳುವ ಈ ಹದಿಹುಡುಗರ ಅಮಾಯಕತನ ಕೆಲವೊಮ್ಮೆ ಗಂಭೀರವಾಗೋದೂ ಉಂಟು. ತೀರ ಹದಿನೆಂಟು ಹತ್ತೊಂಬತ್ತು ವರ್ಷಕ್ಕೆಲ್ಲಾ `ನಾನು ದೊಡ್ಡವನಾಗಿದ್ದೇನೆ’ ಅನ್ನುವ ಭಾವನೆ ಬೆಳೆಸಿಕೊಂಡುಬಿಟ್ಟಿರುತ್ತಾರೆ ಕೆಲವು ಹುಡುಗರು. ಇವರಿಗೆ ಪ್ರೀತಿ ಪ್ರೇಮದ, ಹುಡುಗಿಯ ಸಾಂಗತ್ಯದ ಕಚಗುಳಿಯ ಘಳಿಗೆಗಳಷ್ಟೆ ನಿರಂತರ ಸತ್ಯವಾಗಿ ಕಾಣುತ್ತದೆ. ತನಗಿಷ್ಟವಾಗುವ ಹುಡುಗಿಯನ್ನ ಓದಿಗಿಂತಲೂ ಮನೆಗಿಂತಲೂ ತನ್ನದೇ ಭವಿಷ್ಯಕ್ಕಿಂತಲೂ ತೀವ್ರವಾಗಿ ಹಚ್ಚಿಕೊಂಡು ಬದುಕನ್ನೇ ಹಾಳುಮಾಡಿಕೊಳ್ಳುವ ಹುಚ್ಚುತನ ಇವರಲ್ಲಿ ಹುಟ್ಟಿಬಿಟ್ಟಿರುತ್ತದೆ. ಅದಕ್ಕೆ ಸರಿಯಾಗಿ ಪಕ್ಕವಾದ್ಯ ಬಾರಿಸುವಂತೆ ಕೆಲವು ಸಹಪಾಠಿಗಳೂ ಅವನ ಪ್ರೇಮಿಯನ್ನ `ಅತ್ತಿಗೆ’ ಅಂತಲೋ `ಭಾಭಿ’ ಅಂತಲೋ ಕರೆದು ಸಂಭ್ರಮಿಸ್ತಾರೆ! ಇಂತಹ ಅತ್ತಿಗೆಯರನ್ನು – ಸ್ನೇಹಿತರನ್ನು ಒಟ್ಟುಗೂಡಿಸುವುದಕ್ಕಾಗಿ ತಮ್ಮ ಓದನ್ನೂ ಬದುಕನ್ನೂ ಪಣಕ್ಕಿಡುವ ಹುಡುಗರಿಗೇನು ಕಡಿಮೆ ಇಲ್ಲ. ಒಟ್ಟಿನಲ್ಲಿ ಈ ಹುಡುಗರು ತಮ್ಮದೇ ಒಂದು ಲೋಕ ಸೃಷ್ಟಿಸ್ಕೊಂಡು, ತಮ್ಮ ಮಾತುಕತೆಯನ್ನ ಗುಪ್ತವಾಗಿಡೋಕೆ ಕೋಡ್ವರ್ಡ್ಗಳನ್ನು ರೂಪಿಸ್ಕೊಂಡು, ಕಾಲೇಜಿನಲ್ಲಿ ಏಲಿಯನ್ಗಳ ಹಾಗೆ ಓಡಾಡ್ಕೊಂಡಿರುತ್ತಾರೆ. ಇವರಿಗೆ ತಮ್ಮ ಫೂಲಿಶ್ನೆಸ್ಸಿನ ಅರಿವಾಗೋದು ಎಗ್ಸಾಮ್ ಹಾಲ್ನಲ್ಲೇ.
ಅತ್ತ ಹುಡುಗೀರು ಆಗೀಗ ಅವರ ಕಡೆ ಮುಗುಳ್ನಗೆ ಬಿಸಾಕಿಕೊಂಡು ತಮ್ಮ ಪಾಡಿಗೆ ಓದಿಕೊಂಡಿರುತ್ತಾರೆ. ಪಾಸ್ ಮಾಡಿಕೊಂಡು ಮುಂದಿನ ಕ್ಲಾಸಿಗೂ ದಾಟಿಕೊಳ್ತಾರೆ. ಹಾಗೆ ಪಾಸಾದವಳನ್ನ `ಕೈಕೊಟ್ಟವಳು’ ಅಂತ ಶಪಿಸ್ತಲೋ, ಹೋದಲ್ಲೆಲ್ಲ ಹಿಂಬಾಲಿಸಿ ಅವಳಣ್ಣನ ಕೈಲಿ ಪೆಟ್ಟು ತಿನ್ನುತ್ತಲೋ ಹಾಳಾಗುವ ಹುಡುಗರದೊಂದು ಕ್ಯಟಗರಿ. ಮತ್ತೆ, ಅದನ್ನ `ಲವ್ ಫೈಲ್ಯೂರ್’ ಅಂತ ಕರೆದು ಹೊಸ ಹುಡುಗಿಯರ ಎದುರು ಕಥೆ ಕಟ್ಟಿ ಅನುಕಂಪದ ಮೂಲಕ ಪ್ರೀತಿ ಗಿಟ್ಟಿಸೋಕೆ ಟ್ರೈ ಮಾಡೋರದ್ದು ಬೇರೆಯೇ ಥರ. ಇಂಥವರ ನಡುವೆಯೂ ಒಂದಷ್ಟು ದಿನ ಹಾಳುಬಿದ್ದು, ಫೀನಿಕ್ಸ್ನ ಹಾಗೆ ಎದ್ದು, ಸೀರಿಯಸ್ಸಾಗಿ ಓದು ಬರೆದು ಮಾಡಿಕೊಂಡು ಗೆಲ್ಲುವ ಹುಡುಗರೂ ಇಲ್ಲದೆ ಇಲ್ಲ. ಅಂಥ ಚಾಲೆಂಜಿಂಗ್ ಮನಸ್ಥಿತಿ ಬಂದುಬಿಟ್ಟರೆ, ಒಂದು ಸಲದ ಇಂಥ `ಟೆಂಪೊರರಿ ಅಫೇರ್’ಗಳಿಂದ ಸಮಸ್ಯೆಯೇನೂ ಆಗದು.
ಆಮೇಲೇನು?
ಈ ಹುಡುಗರದ್ದು ಇಷ್ಟೇ. ಇಂಥ ಆಕರ್ಷಣೆಯಿಂದಲೋ ಕುತೂಹಲದಿಂದಲೋ ಹುಟ್ಟಿಕೊಳ್ಳೋ ಪ್ರೀತಿ ಕಾಲೇಜಿನ ದಿನಗಳು ಇದ್ದಷ್ಟು ದಿನ ಬಾಳುತ್ತವೆ. ಹಾಗೆ ಹೇಳಬೇಕೆಂದರೆ, ಓದಿನ ಕೊನೆಯ ಹಂತ ತಲುಪುತ್ತಿದ್ದಂತೆಲ್ಲಾ ಅವರಿಗೆ ತಮ್ಮ ಹುಚ್ಚಾಟಗಳು ಎಷ್ಟು ನಾನ್ಸೆನ್ಸ್ ಅನ್ನುವ ಅರಿವಾಗಲಿಕ್ಕೆ ಶುರುವಾಗಿರತ್ತೆ. ತೀರಾ ಆ ವಯಸ್ಸಿಗೇ ಹುಡುಗಿ ಜತೆ ಓಡಿ ಹೋಗುವವರು, ಸುಯ್ಸೈಡ್ ಮಾಡ್ಕೊಳ್ಳುವವರು ಅಥವಾ ಪ್ರೀತಿಸೋಲ್ಲ ಅಂತ ಅಂದ ಹುಡುಗಿ ಅಥವಾ ಪ್ರೀತಿಸಿ ಕೈಕೊಟ್ಟ ಹುಡುಗಿಯ ಮೇಲೆ ಸೇಡು ತೀರಿಸ್ಕೊಳ್ಳುವವರು ಬಹಳ ಕಡಿಮೆ. ಅಷ್ಟರ ಮಟ್ಟಿಗೆ ಕಳಂಕ ತಟ್ಟದ ಮುಗ್ಧ ಪ್ರೀತಿ ಈ ವಯಸ್ಸಿನ ಹುಡುಗರದ್ದು.
ಇಷ್ಟಕ್ಕೂ ಹುಡುಗ ಹುಡುಗಿಯರ ನಡುವೆ ಆಕರ್ಷಣೆ ಹದಿವಯಸ್ಸಲ್ಲಿ ಅಲ್ಲದೆ ಮತ್ಯಾವಾಗ ಹುಟ್ಟಿಕೊಳ್ಬೇಕು? ಆದ್ರೆ ಅದನ್ನೇ ಜನ್ಮಾಂತರದ ಪ್ರೇಮ ಅಂತ ನಂಬಿಕೊಂಡು ಎಜುಕೇಶನ್ ಹಾಳುಮಾಡಿಕೊಳ್ಬಾರದಷ್ಟೆ. ಆಯಾ ವಯಸ್ಸಿನಲ್ಲಿ ಆಗಿಯೇ ತೀರುವ ಅನುಭವಗಳನ್ನ ಪಡೆದ್ಕೊಳ್ಳುತ್ತ ಅವರವರ ಎಚ್ಚರಿಕೆಯಲ್ಲಿ ಅವರು ಇದ್ದಬಿಟ್ಟರೆ ಲೈಫು ಸಲೀಸು.
ನಿಮ್ಮದೊಂದು ಉತ್ತರ