ನೀನು ಚೇಂಜ್ ಆಗಿದ್ದೀಯ!


ಪ್ರತಿ ಸಂಜೆ ಅಂವ ಕರೆಕ್ಟಾಗಿ ಇಂತಿಷ್ಟೇ ಸಮಯಕ್ಕೆ ಮನೆಗೆ ಬರ್ತಾನೆ. ಅವನು ಗೇಟು ತೆಗೆದು, ಅಂಗಳದುದ್ದ ನಡೆಯುತ್ತಾ ಇನ್ನೇನು ಹೊಸ್ತಿಲು ತಲುಪಿ ಕದ ತಟ್ಟಬೇಕು, ಅವಳ ಮುಗುಳ್ನಗು ಕದ ತೆರೆಯುತ್ತದೆ. ಅವರ ಮದುವೆಯಾದ ಮೊದಲ ದಿನದಿಂದ ಅಂವ ರಿಟೈರ್ ಆದ ದಿನದವರೆಗೂ ಹಾಗೇನೇ. ಒಂದು ದಿನವೂ ಈ ಸೀನ್ ತಪ್ಪಿದ್ದಲಿಲ್ಲ. ಆಶ್ಚರ್ಯವಾಗುತ್ತೆ ಅಲ್ವಾ? ಇದು ಭಾಗ್‌ಬನ್ ಸಿನಿಮಾ. ನಿಜ ಲೈಫಲ್ಲಿ ಈ ಥರದ್ದು ಇಲ್ಲವೇ ಇಲ್ಲ ಅಂತ ಹೇಳಬಹುದೇನೋ. ಆದ್ರೆ, ಮೊದಲ ದಿನದ ಹಾಗೇ ಪ್ರತಿ ದಿನವೂ ಇರಬೇಕು ಅಂಥ ಬಯಸುವ ಜನ ಎಲ್ಲೆಡೆ ಇದ್ದಾರೆ, ಅದು ವಾಸ್ತವಕ್ಕೆ ತಕ್ಕ ಬಯಕೆ ಅಲ್ಲವೆಂದು ಗೊತ್ತಿದ್ದರೂನು.
ಸಂಬಂಧಗಳ ನಡುವೆ ತಾಕಲಾಟ ಶುರುವಾಗೋದು ಇಂಥ ಸಮಯದಲ್ಲೇ.
`ನೀನು ಮೊದಲಿನ ಹಾಗೆ ಇಲ್ಲ!’ ಗಂಡು ಹೆಣ್ಣಿನ ಸಾಂಗತ್ಯದಲ್ಲಿ ಮಾತ್ರ ಅಲ್ಲ, ಸಾಧ್ಯವಿರುವ ಎಲ್ಲ ಥರದ ಸಂಬಂಧಗಳೂ ಈ ಒಂದು ಆರೋಪವನ್ನು ಎದುರಿಸುತ್ತವೆ. ಮಜದ ವಿಷಯ ಅಂದ್ರೆ, ಯಾರು ಇಂಥ ಆರೋಪಕ್ಕೆ ಒಳಗಾಗಿ ಕ್ಲಾರಿಫಿಕೇಶನ್ ಕೊಡುತ್ತಾ ನಾನು ಹಾಗೇ – ಹಿಂದಿನಂತೇ ಇದ್ದೀನಿ ಅಂತ ಸಾಬೀತು ಮಾಡೋಕೆ ಒದ್ದಾಡ್ತಾ ಇರ್ತಾರೋ ಅವರು ಕೂಡ ಮತ್ತೊಬ್ಬರ ಮೇಲೆ ಅದೇ ಆರೋಪ ಹೊರಿಸ್ತಾ ಇರ್ತಾರೆ! ಇದು ಮುಗಿಯದ ಗೊಣಗಾಟ.

ಮೊದಲ ಸಲ
ಎಲ್ಲ ಮೊದಲುಗಳೂ ಹಾಗೇನೆ. ಹೆಚ್ಚು ಕಾಳಜಿಯನ್ನ, ಗಮನವನ್ನ ಕೇಳ್ತವೆ. ಈ ಮೊದಮೊದಲ ದಿನಗಳೇ ತಾನೆ ಸಂಬಂಧದ ಫೌಂಡೇಶನ್? ಹೀಗಾಗಿ ಅಂಥ ಸಂವಹನದ ಅಗತ್ಯ ಇದ್ದೇ ಇರುತ್ತದೆ. ಒಂದು ಸಾರ್ತಿ ಈ ಸಂಬಂಧ ಗಟ್ಟಿಯಾಯ್ತು ಅಂತ ಅನ್ನಿಸಿಬಿಟ್ಟರೆ, ಆಮೇಲೆ ನಿರಾಳವಾಗಿ ಮುಂದಿನ ಕೆಲಸಗಳಲ್ಲಿ ಮಗ್ನರಾಗುತ್ತೇವೆ. ಆಗ ಸಹಜವಾಗೇ ಮೊದಲಿನ ರೀತಿನೀತಿಗಳು ಬದಲಾಗುತ್ತವೆ. ಗಂಟೆಗೊಮ್ಮೆ ಇರುತ್ತಿದ್ದ ಫೋನ್ ಕಾಲ್ ಮೂರುಗಂಟೆಗೊಂದು ಸರ್ತಿಯಂತೆ, ದಿನಕ್ಕೊಮ್ಮೆಯಂತೆ ಬದಲಾಗುತ್ತದೆ. ಡಿಸ್ಕಸ್ ಮಾಡ್ತಿದ್ದ ಚಿಕ್ಕಪುಟ್ಟ ಸಂಗತಿಗಳೆಲ್ಲ ಮಹತ್ವ ಕಳೆದುಕೊಳ್ತವೆ. `ನಮ್ಮನ್ನೀಗ ಔಪಚಾರಿಕ ಮಾತುಕತೆಗಳೇ ಹಿಡಿದಿಡಬೇಕಿಲ್ಲ ‘ ಅನ್ನುವ ಅರಿವು ಆಂತರ್ಯದಲ್ಲಿ ಹರಳುಗಟ್ಟಿರುತ್ತದೆ. ಆದರೆ ಇದು ಮೇಲರಿವಿಗೆ ಬಂದಿರೋದಿಲ್ಲ. ಆದ್ದರಿಂದಲೇ ನಮ್ಮ ನಡವಳಿಕೆಯಲ್ಲಿ ಆಗಿರುವಂಥದ್ದೇ ಬದಲಾವಣೆಯನ್ನು ನಮಗೆ ರಿಲೇಟ್ ಆಗಿರುವವರಲ್ಲಿ ಗುರುತಿಸಲು ನಾವು ಸೋಲುತ್ತೇವೆ.

ಇದು ಸಹಜ
ಮುಂದಿನ ಕ್ಷಣವೇ ಈ ಕ್ಷಣಕ್ಕಿಂತ ಬೇರೆಯಾಗಿರುತ್ತೆ. ಹೀಗಿರುವಾಗ ಮುಂದಿನ ಕ್ಷಣದ ನಾವಾಗಲೀ ಬೇರೆಯವರಾಗಲೀ ಈ ಹೊತ್ತಿನ ನಮ್ಮಂತೆ ಇರೋಕೆ ಹೇಗೆ ಸಾಧ್ಯ? ಇಷ್ಟು ಅರ್ಥವಾಗಿಬಿಟ್ಟರೆ ಸಂಸಾರ ಸಲೀಸು. ಆದರೆ ಈ ಮಾತನ್ನ ಪೂರ್ತಿಯಾಗಿ ಒಪ್ಪಲಾಗೋದಿಲ್ಲ. ಇದನ್ನ ಅರ್ಥ ಮಾಡಿಕೊಂಡವರು ಕೂಡ ಕೆಲವು ನಿರೀಕ್ಷೆಗಳನ್ನು ಹೇರಿಕೊಂಡಿರ್‍ತಾರೆ. ಆದರೆ ಎಲ್ಲ ಸರ್ತಿಯೂ ಹೀಗೇ ಅನಿವಾರ್ಯವಾಗಿ, ಸಹಜವಾಗಿ ಬದಲಾಗುವವರೇ ಇರುತ್ತಾರೆ ಅಂತಲ್ಲ. ಕೆಲವರು ಸಕ್ಸಸ್‌ನ ರುಚಿ ಕಂಡವರು ಮದದಿಂದಲೂ ಸೋತವರು ಕೀಳರಿಮೆಯಿಂದಲೂ ತಮ್ಮ ಬಿಹೇವಿಯರ್ ಬದಲಿಸಿಕೊಳ್ತಾರೆ. ಅಥವಾ ಒಬ್ಬರ ಮೇಲಿನ ಅತಿಶಯ ಪ್ರೀತಿ, ಆವರೆಗಿನ ಸಂಬಂಧಗಳನ್ನು ಗೌಣವಾಗಿಸಿ ವ್ಯಕ್ತಿಯನ್ನು ಬದಲಿಸಿಬಿಡುವ ಸಾಧ್ಯತೆಯೂ ಇರುತ್ತದೆ. ಇಂಥ ಸನ್ನಿವೇಶಗಳು ಅತ್ಯಂತ ನಾಜೂಕಿನದಾಗಿದ್ದು, ಸೌಹಾರ್ದ ವಾತಾವರಣ, ತಾಳ್ಮೆಯ ಮಾತುಕತೆ, ತೀವ್ರ ಪ್ರೀತಿಗಳಿಂದ ಮಾತ್ರವೇ ಪರಿಹಾರ ಕಾಣುವಂಥವಾಗಿರುತ್ತವೆ.
~~~
ಬದಲಾಗಿಯೂ ಮೊದಲಿನಂತಿರಲು
ಈ ಕೆಳಗಿನ ಕೆಲವು ಐಡಿಯಾಗಳು ಆರ್ಟಿಫಿಶಿಯಲ್ಲಾಗಿ ಕಂಡರೂ ಅನುಸರಿಸಿದರೆ ಒಳ್ಳೆಯ ರಿಸಲ್ಟ್ ಕೊಡುವಂಥವು. ಒಮ್ಮೆ ಇದನ್ನು ನಿಯಮದಂತೆ ಮಾಡುತ್ತಾ ಹೋದರೆ, ಕೆಲವೇ ದಿನಗಳಲ್ಲಿ ಸಹಜ ಅಭ್ಯಾಸದಂತಾಗಿ ನಿಮಗೆ ಒಗ್ಗಿಕೊಳ್ಳುತ್ತವೆ. ಸಂದರ್ಭಕ್ಕೆ ತಕ್ಕಂತೆ ನೀವು ಬದಲಾಗಿದ್ದರೂ ನಿಮ್ಮ ಪ್ರೀತಿ ಪಾತ್ರರಿಗೆ ಅದರ ಬಿಸಿ ತಟ್ಟದಂತೆ ಈ ಕೆಲವು ಉಪಾಯಗಳನ್ನು ಮಾಡಿ
* ವಾರದ `ಥಿಂಗ್ಸ್ ಟು ಡು’ ಪಟ್ಟಿ ರೆಡಿ ಮಾಡಿಕೊಳ್ಳಿ. ಅದರಲ್ಲಿ ನಿಮ್ಮ ಆಪ್ತರೊಂದಿಗೆ ಕಳೆಯಲೆಂದೇ ಒಂದಷ್ಟು ಸಮಯ ಎತ್ತಿಡಿ.
* ದಿನಕ್ಕೆ ಕನಿಷ್ಠ ಎರಡು ಬಾರಿ ನಿಮ್ಮ ಸಂಗಾತಿಗೆ ಕಾಲ್ ಮಾಡಿ. ಕಡೆಯಪಕ್ಷ ಊಟ- ತಿಂಡಿ ಸಮಯದಲ್ಲಿ ಅವರ ಬಗ್ಗೆ ವಿಚಾರಿಸಿ ಎಸ್‌ಎಮ್‌ಎಸ್ ಆದರೂ ಕಳುಹಿಸಿ.
* ನೀವು ಮಾಡಬೇಕಿದ್ದ ಅವರ ಕೆಲಸವೊಂದು ಹಾಗೇ ಉಳಿದುಹೋಗಿದೆ. ಮೊದಲೆಲ್ಲ ಎಂಥ ಒತ್ತಡವಿದ್ದರೂ ನೀವದನ್ನು ಮಾಡುತ್ತಿದ್ದಿರಿ. ಆದರೀಗ ಸಮಯದ ಕೊರತೆ ಮತ್ತು ಒತ್ತಡ. ನಿಮ್ಮ ಸಂಗಾತಿಗೆ, ಸಂಬಂತರಿಗೆ ಆ ಬಗ್ಗೆ ಒಂದು `ಸಾರಿ’ ಮೆಸೇಜ್ ಕಳುಹಿಸಿ. ಮಾತಾಡುವಾಗ ಅದನ್ನು ಉಲ್ಲೇಖಿಸಿ ಕ್ಷಮೆ ಕೇಳಿ .ಇದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ.
* ನಿಮ್ಮ ಆಫೀಸ್ ಕೆಲಸದ ಬಗ್ಗೆ, ಬೆಳವಣಿಗೆ- ಸವಾಲುಗಳ ಬಗ್ಗೆ ನಿಮ್ಮ ಸಂಬಂತರೊಡನೆ ಚರ್ಚಿಸಿ. ಅವರಿಗೆ ನೀವೇನು ಮಾಡುತ್ತಿದ್ದೀರಿ ಅನ್ನುವ ಮಾಹಿತಿ ಇರಲಿ. ಈ ಮೂಲಕ ಅವರು ನಿಮ್ಮ ಸಿಚುಯೇಶನ್ ಅರ್ಥ ಮಾಡಿಕೊಳ್ಳಲು ಅನುಕೂಲವಾಗುವುದು.
* ಮುಖ್ಯವಾಗಿ, `ಬದಲಾಗಿದ್ದೀರಿ’ ಎಂದು ನೀವು ಯಾರನ್ನೂ ದೂರಬೇಡಿ. ಒಂದು ಬೆಟ್ಟು ತೋರಿದರೆ ಮೂರು ಬೆಟ್ಟು ನಿಮ್ಮನ್ನೇ ಗುರಿ ಮಾಡುತ್ತವೆ ಅನ್ನುವ ಪಾಠ ನೆನಪಿರಲಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Create a free website or blog at WordPress.com.

Up ↑

%d bloggers like this: