ಅವನಿಗೆ ಕ್ರಿಕೆಟ್ ಇಷ್ಟ ಇಲ್ಲ. ಅವನು ಹುಡುಗರೊಟ್ಟಿಗೆ ಕುಸ್ತಿ ಆಡೋದಕ್ಕೆ ಹೋಗೋದಿಲ್ಲ. ಆಕ್ಷನ್ ಸಿನಿಮಾಗಳಿಗಿಂತ ರೊಮ್ಯಂಟಿಕ್ ಕಾಮಿಡೀಸ್ ನೋಡೋದೇ ಜಾಸ್ತಿ. ಗರ್ಲ್ ಫ್ರೆಂಡ್ಗೆ ದಿನಕ್ಕೆ ಹತ್ತು ಸಲ ಕಾಲ್ ಮಾಡ್ತಾನೆ. ಊಟ ಆಯ್ತಾ, ತಿಂಡಿ ಆಯ್ತಾ ವಿಚಾರಿಸ್ತಾನೇ ಇರ್ತಾನೆ. ನೆಂಟರಿಷ್ಟರಮನೆಗಳಿಗೆ ಹೋಗೋದು, ಯಾವ ಫಂಕ್ಷನ್ ಅನ್ನೂ ಮಿಸ್ ಮಾಡದೆ ಇರೋದು ಇವನ ಹೆಚ್ಚುಗಾರಿಕೆ.
ಅವನು ಚಿಕ್ಕವನಿರುವಾಗಿಂದ್ಲೂ ಹಾಗೇನೇ. ಅಡುಗೆ ಮನೇಲಿ ಅಮ್ಮನಿಗೆ ಜತೆಯಾಗೋದು ಅಂದ್ರೆ ಅವಂಗೆ ಇಷ್ಟ. ರಂಗೋಲಿ ಹಾಕೋದಿರಲಿ, ಹೂ ಕಟ್ಟೋದಿರಲಿ,ಕಸೂತಿ ಹಾಕೋದಿರಲಿ… ಎಲ್ಲಾದರಲ್ಲೂ ಸಿಕ್ಕಾಪಟ್ಟೆ ಆಸಕ್ತಿ. ಅಕ್ಕ ತಂಗಿಯರು ಅದನ್ನೆಲ್ಲ ಮಾಡುವಾಗ ಮೂಗು ತೂರಿಸಿ, `ಗಂಡ್ಸಿಗ್ಯಾಕೆ ಗೌರೀ ಸಂಗ್ತಿ? ಹೋಗೋ ಅತ್ಲಾಗಿ’ ಅಂತ ಬೈಸಿಕೊಂಡೇ ಬೆಳೆದವನು. ದೊಡ್ಡವನಾದ್ಮೇಲೂ ಅದೇ ಪಾಡು. ಗೆಳೆಯರ ಜತೆ ಶಾಪಿಂಗಿಗೆ ಹೋದಾಗ್ಲೂ ಈ ಫಿಲ್ಟರ್ರು, ಆ ಹೂಜಿ ಅಂತ ಕೊಂಡು ತರುವ ಕಾಳಜಿ. ಮದುವೆಯಾದ ಮೇಲೆ ಹೆಂಡತಿಯ ಸೀರೆ ಆರಿಸೋದಕ್ಕೆ, ಅಡಿಗೆಯ ಉಪ್ಪು ಖಾರ ನೋಡಲಿಕ್ಕೆ, ಹಬ್ಬದ ಡೆಕೋರೇಷನ್ನಿಗೆ ನಡುನಡುವೆ ಕಾಲ್ತೊಡರಿ `ಒಳ್ಳೆ ಹೆಂಗಸರ ಹಾಗೆ ಆಡ್ತಾರಪ್ಪ’ ಅನ್ನೋ ಅಸಹನೆಗೆ ಒಳಗಾದವನು. ಗಳಗಳನೆ ಅತ್ತು ಹಗುರಾಗುವ ರೂಢಿಗೆ ಬಿದ್ದವನು. ಹಾಗಂತ ಇವನನ್ನ ಮೂರನೆ ಥರ ಅಂತ ತಿಳಿದರೆ ಪ್ರಮಾದವಾಗಿಬಿಟ್ಟೀತು. ಹಾಗೇನಿಲ್ಲ. ಅವನ ಆಸಕ್ತಿ, ಇಷ್ಟಾನಿಷ್ಟಗಳೆಲ್ಲ ಹೆಣ್ಣುಹೆಣ್ಣಾಗಿರತ್ತೆ ಅಷ್ಟೆ. ಅರ್ರೆ! ಇದೆಂಥ ಸ್ವಭಾವ?
ಹೆಣ್ಣಿಗ ಅನ್ನುತ್ತಾರೆ
ಇಂಥ ಗಂಡಸರನ್ನ `ಹೆಣ್ಣಪ್ಪಿಗಳು’ ಅಂತಾರೆ ಹಳ್ಳಿಗರ ಭಾಷೇಲಿ. `ಹೆಣ್ಣಿಗ’ ಅಂದ ಕೂಡಲೆ ಏನೋ ಬಯ್ತಿದ್ದಾರೆ ಅನ್ನಿಸುತತೆ ಅಲ್ವೆ? ಇದು ಇಂಥಾ ಸ್ವಭಾವದವರನ್ನು ಕರೆಯಲು ಬಳಸುವ ಪದ. ಇಂಗ್ಲೀಷಿನಲ್ಲಿ ಇಂಥವರನ್ನ `ಸಿಸ್ಸೀಸ್’ ಅಂತಾರೆ. ಈ ಹೆಸರೇ ಒಂಥರಾ ಜಿಗುಪ್ಸೆಯನ್ನ, ಅವಗಣನೆಯನ್ನ ಸೂಚಿಸತ್ತೆ. ಯಾಕೋ ಈ ಸಮಾಜ ಕೂಡ ಹೆಣ್ಣಪ್ಪಿ – ಸಿಸ್ಸೀಗಳನ್ನ, ಗಂಡುಬೀರಿ – ಟಾಮ್ಬಾಯ್ಗಳಿಗಿಂತ ಹೆಚ್ಚು ಅವಮಾನಕರ ಅಂತ ಭಾವಿಸುತ್ತೆ.
`ಈ ಹೆಣ್ಣು ಸ್ವಭಾವ ಹೊಂದಿರುವ ಗಂಡಸರ ಬಗ್ಗೆ ಜಿಗುಪ್ಸೆ ಪಡಬೇಕಾಗಿಲ್ಲ. ಹೇಗೆ ಹೆಣ್ಣುಮಕ್ಕಳಲ್ಲಿ ಗಂಡುಬೀರಿಯರು ಇರುತ್ತಾರೋ, ಹಾಗೇ ಇವರೂ ಗಂಡಸರಿಗೆ ಸಹಜ ಎನ್ನಿಸದ ಸ್ವಭಾವಗಳನ್ನು ಹೊಂದಿರುತ್ತಾರಷ್ಟೆ. ಇಂಥವರನ್ನು ಗೇಲಿಮಾಡುವುದು ಕಿಡಿಗೇಡಿತನವಾಗುತ್ತದೆ.’ ಎಂದು ಹೇಳುವ ಸಲಹಾತಜ್ಞ ಶ್ರೀನಾಗೇಶ್, `ಅವರ ಆಸಕ್ತಿ ಮತ್ತು ಭಾವನೆಗಳಿಗೆ ಸಹಜವಾಗಿ ಸ್ಪಂದಿಸುತ್ತ ಅಂಥವರಲ್ಲಿ ಕೀಳರಿಮೆ ಮೂಡದಂತೆ, ತಾನು ಉಪೇಕ್ಷಿತ ಅನ್ನುವ ಕೊರಗು ಬರದಂತೆ ಸಹಕರಿಸಬೇಕು. ಹಾಗಿಲ್ಲವಾದರೆ ಇಂಥ ಹೆಣ್ಣುಮನಸಿನ ಗಂಡಸರು ಅಂತರ್ಮುಖಿಗಳಾಗಿ, ಬಾಡಿಹೋಗುವ ಅಪಾಯವಿರುತ್ತದೆ’ ಎನ್ನುವ ಕಿವಿಮಾತನ್ನೂ ಹೇಳುತ್ತಾರೆ.
ಹಾಗಂತ ಛೇಡಿಸ್ತಾರೆ
ಕೆಲವರು ನಿಜಕ್ಕೂ ಹೆಣ್ಣುಮಕ್ಕಳಂಥ ಅಭಿರುಚಿ ಹೊಂದಿರ್ತಾರೆ, ಹೆಣ್ಣಿಗ ಅನ್ನಿಸಿಕೊಳ್ತಾರೆ. ಆದರೆ ಕೆಲವೊಮ್ಮೆ ಈ ಪದವನ್ನ ಛೇಡಿಸೋದಕ್ಕೆ, ಪ್ರಚೋದಿಸಲಿಕ್ಕೆ ಕೂಡಾ ಬಳಸಲಾಗುತ್ತೆ. ಸಿಗರೇಟ್ ಒಲ್ಲೆ ಎನ್ನುವ, ಜತೆಯ ಗೆಳೆಯರ ಗ್ಲಾಸಿಗೆ ಗ್ಲಾಸು ತಾಕಿಸಿ ಬಿಯರ್ ಕುಡಿಯದ, ರಾತ್ರಿ ವೇಳೆ ಹೊತ್ತೊ ಮೀರುವ ಮುನ್ನ ಮನೆಯಲ್ಲಿ ಆತಂಕಪಡ್ತಾರೆ ಅಂತಲೋ ಹೆಂಡತಿ ಗಲಾಟೆ ಮಾಡ್ತಾಳೆ ಅಂತಲೋ ಮನೆ ಸೇರಿಕೊಳ್ಳುವ ಗಂಡುಗಳನ್ನ ಹೀಗೆಲ್ಲ ಆಡಿಕೊಳ್ಳಲಾಗತ್ತೆ. ಈ ನಿಟ್ಟಿನಿಂದ ನೋಡಿದರೆ, ಹೆಣ್ಣಪ್ಪಿ ಅಂತ ಕಾಲೆಳೆಸಿಕೊಂಡ್ರೂ ಪರವಾಗಿಲ್ಲ, ಹುಡುಗರು ತಮ್ಮ ಪಾಡಿಗೆ ತಾವು `ನೀಟಾಗಿ’ ಇರೋದಷ್ಟೆ ಮುಖ್ಯ ಅನ್ನಿಸಿಬಿಡುತ್ತೆ. ಕೆಲವು ಪೋಷಕರು ಈ ಬಗ್ಗೆ ಸಮಾಧಾನ ಪಡುವುದೂ ಸುಳ್ಳಲ್ಲ. ಪದವಿಯ ಕೊನೆ ತರಗತಿಯಲ್ಲಿರುವ ನಿಕೇತ್ನ ತಾಯಿ ಈ ಬಗ್ಗೆ ಹೇಳುತ್ತಾ, `ಮೊದಲೆಲ್ಲ ಮನೆಯಿಂದ ಹೊರಗೆ ಹೋಗದ, ತಂಗಿಯ ಜೊತೆ ಆಡುತ್ತ ಕೂರುವ ನಿಕೇತನ ಬಗ್ಗೆ ಆತಂಕವಿತ್ತು. ಅವನು ಹೊರಗಿನ ಆಟಗಳಿಗಿಂತ ಡ್ರಾಯಿಂಗ್, ಹಾಡು- ಹಸೆ ಅಂದುಕೊಂಡು ನನ್ನ ಸೆರಗು ಹಿಡಿದು ಸುತ್ತುತ್ತಿದ್ದ. ಆದರೆ ಈಗ ಅವನು ಹಾಗಿರೋದೇ ಎಷ್ಟೋ ಮೇಲು ಅನ್ನಸಿತೊಡಗಿದೆ. ಇಷ್ಟು ವರ್ಷದಲ್ಲಿ ಒಮ್ಮೆಯೂ ಮನೆ ಬಾಗಿಲಿಗೆ ಕಂಪ್ಲೇಂಟ್ ತಂದಿಲ್ಲ. ಒಳ್ಳೆ ಹುಡುಗ ಅಂತಲೇ ಹೆಸರು ಪಡೆದಿದ್ದಾನೆ’ ಅನ್ನುತ್ತಾರೆ.
ಹುಡುಗಿಯರಿಗೆ ಇಷ್ಟ
ಸಿಸ್ಸೀ ಬಾಯ್ಸ್ ಸಾಮಾನ್ಯವಾಗಿ ಹುಡುಗಿಯರಿಗೆ ಇಷ್ಟವಾಗ್ತಾರೆ. ಸಾಮಾನ್ಯ ಬಯಕೆಯಂತೆ ದೇಹದಲ್ಲೇನೂ ಕುಂದಿಲ್ಲದ ಈ ಗಂಡುಗಳ ಮನಸ್ಸು ಮೃದುವಾಗಿಯೂ ನಾಜೂಕಿನದ್ದೂ ಆಗಿರುತ್ತದಲ್ಲ, ಅದೇ ಪ್ಲಸ್ ಪಾಯಿಂಟ್ ಅನ್ನಿಸಿಕೊಳ್ಳುತ್ತದೆ. ತನ್ನ ಎಲ್ಲ ಆಯ್ಕೆ, ಕೆಲಸಗಳಲ್ಲಿ ಮೂಗು ತೂರಿಸುವಿಕೆ ಅತಿರೇಕಕ್ಕೆ ಹೋದರೆ ಮಾತ್ರ ಹೆಣ್ಣುಮಕ್ಕಳು ಇಂಥವರನ್ನು ದೂರುತ್ತಾರಷ್ಟೆ. ಉಳಿದಂತೆ ತಮ್ಮಂತೆಯೇ ಭಾವುಕರಾದ, ತಮಗೆ ಸ್ಪಂದಿಸಬಲ್ಲ ಹಾಗೂ ತಮ್ಮ ಅಭಿರುಚಿಯನ್ನು ಮೆಚ್ಚಿ ಶ್ಲಾಘಿಸಬಲ್ಲ ಇಂಥ ಹುಡುಗರನ್ನು ಅವರು ಮೆಚ್ಚಿಕೊಳ್ತಾರೆ ಹಾಗೂ ಇಂಥವರ ಜತೆ ಸಂಸಾರ ಸೇಫ್ ಎಂದು ಭಾವಿಸುತ್ತಾರೆ. ಆದರೆ ಟಾಮ್ಬಾಯ್ಗಳಿಗೆ ಈ ಸಿಸ್ಸೀ ಬಾಯ್ಸ್ ಇಷ್ಟವಾಗೋದಿಲ್ಲ!
ನಿಮ್ಮದೊಂದು ಉತ್ತರ