ಥೇರಿಯರ ಹಾಡು

ಥೇರಿಯರ (ಹಿರಿಯ ಬೌದ್ಧ ಬಿಕ್ಖುಣಿಯರು) ರಚನೆಗಳ ಅನುವಾದ ಯತ್ನವಿದು….

ನನ್ನಿರುವ ಕಾಂತಿ, ಕಣ್ ಹೊಳಪು
ರೂಪ, ಮೈಬಣ್ಣಗಳಿಂದ
ನೆರಕೆಯ ಹೆಣ್ಣುಗಳ ಹೊಟ್ಟೆಯುರಿಸುತಿದ್ದೆ.
ಮೂರ್ಖ ಗಂಡಸರನ್ನ ಸೆಳೆಯಲಿಕ್ಕಾಗಿ
ದೇಹವಲಂಕರಿಸಿ ನಿಂತು
ಕೋಠಿ ಬಾಗಿಲ ಮುಂದೆ ಕಾಯುತಿದ್ದೆ.
ಬೇಟೆಗಾತಿಯ ಹಾಗೆ ಹೊಂಚುತ್ತ
ನನ್ನಾಭರಣಗಳ ಕುಲುಕಿ ಸೆಳೆದು
ಮೋಹದ ಬಲೆಗೆ ಕೆಡವುತಿದ್ದೆ,
ಬಿದ್ದವನ ಕಂಡು ಗುಂಪು ಸೀಳುವಂತೆ
ಅಬ್ಬರಿಸಿ ನಗುತಲಿದ್ದೆ.

ಈಗ…
ಅದೇ ದೇಹ ದುಪ್ಪಟಿ ಕಾವಿ ಸುತ್ತಿಕೊಂಡಿದೆ;
ತಲೆಗೂದಲು ತೆಗೆದು ಸಪಾಟು.
ಭಿಕ್ಷೆಗಾಗಿ ಅಲೆದ ದಣಿವಲ್ಲಿ
ಮರದ ಬೊಡ್ಡೆಗೆ ಮೈಯಾನಿಸಿ ಕೂತಿದೇನೆ.
ಯಾವ ಯೋಚನೆಯೂ ಇಲ್ಲದ
ನಿತ್ಯಾನಂದ ಸ್ಥಿತಿಯ  ಪಡೆದಿದೇನೆ.
ಎಲ್ಲ ಬಂಧಗಳ – ಮನುಷ್ಯ , ದೈವಿಕ ಬಂಧಗಳೆಲ್ಲದರ
ಹೊರೆ ಇಳಿಸಿ ಹಗುರಾಗಿದೇನೆ,
ತಣ್ಣಗೆ ಒಬ್ಬಂಟಿ, ಎಲ್ಲ  ಬಂಧಗಳ ಕಳಚಿ.
– ವಿಮಲಾ (ದೊರೆಸಾನಿ)

~

ನಾನೀಗ ಮುಕ್ತಳು!
ನಾನು ಸಂಪೂರ್ಣ ಮುಕ್ತಳು!!
ಒರಳು, ಒನಕೆ, ಮೂತಿಮುರುಕ ಪತಿಯ ಬಂಧ ಕಳಚಿ
ನಾನು ಪರಿಪೂರ್ಣ ಮುಕ್ತಳು..
– ಮುತ್ತಾ

~

ಭಿಕ್ಷೆಗಾಗಿ ಅಲೆಯುತ್ತ
ಬೆರಳ ತುದಿಗಳು ಕಂಪಿಸುತ್ತಿವೆ.
ಗೆಳತಿಯರ ಹೆಗಲ ಮೇಲೆ ಕೈಯೂರಿ ನಡೆಯುತ್ತೇನೆ.
ಕಾಲು ಸಾಗದೆ ಕೃಶ ಶರೀರವಿದು ನೆಲವನಪ್ಪುತ್ತಿದೆ.
ಓಹ್! ಈ ದೇಹದ ದುರ್ಗತಿಯನ್ನು
ನಾನು ಕಣ್ಣಾರೆ ಕಾಣುತ್ತಿದ್ದೇನೆ,
ಮನಸ್ಸು ಅದರಿಂದ ಮುಕ್ತವಾಗಿ ಹೊರ ಬರುತ್ತಿದೆ!
– ಧಮ್ಮಾ

~

ಪುನ್ನಾ,
ಸಕಲ ಸದ್ಗುಣಗಳಿಂದ ಬೆಳೆ- ಬೆಳಗು,
ಹುಣ್ಣಿಮೆಯ ಚಂದಿರನಂತೆ.
ಪಡೆದುಕೋ ಪರಿಪೂರ್ಣತೆಯ,
ಸಂಪನ್ನಳಾಗು
ಕತ್ತಲ ರಾಶಿಯ ತೊಡೆದು.
– ಪುನ್ನಾ

ಮತ್ತೆ ಮತ್ತೆ ನೆನಪಾಗುವ ಗೌರಿ ನನಗೇನಾಗಿದ್ದಳು?

ನನ್ನ ಅಮ್ಮನಿಗೆ ಈಗ ಐವತ್ತಾರು ವರ್ಷ. ಕಳೆದ ಕೆಲವು ದಿನಗಳಿಂದ ಬರೆಯಲು ಶುರು ಹಚ್ಚಿದ್ದಾಳೆ. ನನಗೆ ಇದಕ್ಕಿಂತ ಖುಷಿಯ ವಿಷಯ ಉಂಟೆ? ಅಪ್ಪಟ ಮಲೆನಾಡಿಗಳಾದ ಅಮ್ಮ ಒಂದು ಅನುಭವಗಳ ಕಂತೆ. ನನ್ನಲ್ಲಿ ಕೊಂಚವೇನಾದರೂ ಸೂಕ್ಷ್ಮತೆ, ಸಂವೇದನೆಗಳಿದ್ದರೆ ಅದು ಅಮ್ಮನಿಂದಲೇ. ನಾನು ಯಾವತ್ತೂ ಹೇಳಿಕೊಳ್ಳುವಂತೆ, ನಾನು ನೋಡಿದ ಮೊದಲ ಫೆಮಿನಿಸ್ಟ್‌ ನನ್ನಮ್ಮ. ಅವಳ ಒಂದು ಬರಹವನ್ನ  ’ಮಹಿಳಾ ದಿನಾಚರಣೆ’ಯ ಹೊತ್ತಿನಲ್ಲಿ ನಿಮ್ಮೆದುರು ಇಡುವ ಖುಷಿ ನನ್ನದು. ಅಂದ ಹಾಗೆ, ಅಮ್ಮನ ಹೆಸರು ಶೈಲಜಾ ಅಂತ.

`ಅಮ್ಮಾ… ಅಮ್ಮಾ… ‘
ಆ ಧ್ವನಿ ಕೇಳಿದ ಕೂಡಲೇ ಒಳಗಿದ್ದ ಯಾರಿಗೇ ಆಗಲಿಅ ದು ಗೌರಿಯದೇ ಅಂತ ಗೊತ್ತಾಗಿಬಿಡುತ್ತಿತ್ತು. ಹೌದು. ಗೌರಿ ನಮ್ಮನೆಗೆ ಬರುತ್ತಿದ್ದ ಖಾಯಂ ಅತಿಥಿ. ಪೇಟೆಯ ಯಾವುದೇ ಕೆಲಸಕ್ಕೆ ಬಂದರೂ ಮಧ್ಯಾಹ್ನದ ಊಟಕ್ಕೆ ಮಾತ್ರ ನಮ್ಮನೆಗೇ ಬರ‍್ತಿದ್ಲು. ಆಗೆಲ್ಲ ಅವರ ಹಳ್ಳಿಗಿದ್ದುದು ಎರಡು ಬಸ್‌ಗಳು ಮಾತ್ರ. ಹೀಗಾಗಿ ಬಸ್ ತಪ್ಪಿದ್ರೆ ನಮ್ಮನೆಯಲ್ಲೇ ಉಳಿದುಕೊಳ್ತಿದ್ಲು. ಬೆಳ್ಳಗೆ, ಎತ್ತರಕ್ಕೆ, ದುಂಡು ಮುಖದವಳಾಗಿದ್ದ ಗೌರಿ ನೀಟಾಗಿ ಸೀರೆಯುಟ್ಟು ಬರುತ್ತಿದ್ಲು.
ನನಗೂ ನನ್ನ ಎರಡನೇ ಅಣ್ಣನಿಗೂ ಹತ್ತು ವರ್ಷಗಳಷ್ಟು ಅಂತರ. ಆದರೂ ನಾವಿಬ್ಬರೂ ಯಾವಾಗಲೂ ಕಚ್ಚಾಡುತ್ತಿದ್ದೆವು. ಸಮಯ ಸಿಕ್ಕಾಗಲೆಲ್ಲ ನನ್ನನ್ನು ಅಳಿಸಲು ಅವನು ಉಪಯೋಗಿಸ್ತಿದ್ದ ಅಸ್ತ್ರ ಒಂದೇ, “ನಿನ್ನನ್ನ ಹೊಟ್ಟು ಕೊಟ್ಟು ತಂದಿದ್ದು. ನಮ್ಮನೆಗೆ ಬರ‍್ತಾಳಲ್ಲ ಗೌರಿ, ಅವಳ ಮನೆಯಿಂದ ತಂದಿದ್ದು ನಿನ್ನನ್ನ” ಅಂದು ಗೋಳಾಡಿಸ್ತಿದ್ದ. ನಾನು ಹೋ ಎಂದು ಗಲಾಟೆ ಮಾಡಿ ಇಬ್ರೂ ಅಮ್ಮನ ಹತ್ತಿರ ಬೈಸಿಕೊಳ್ತಿದ್ದೆವು. ಆದ್ರೆ ನಂಗೆ ಅವಾಗೆಲ್ಲ ಅನ್ನಿಸ್ತಿತ್ತು, “ಹೌದಿರಬಹುದೇನೋ… ನಾನು ನಮ್ಮನೇಲಿ ಯಾರ ಥರಾನೂ ಇಲ್ಲ. ಬ್ರಾಹ್ಮಣರ ಮನೇಲಿ ಹುಟ್ಕೊಂಡಿದ್ರೂ ಪೂಜೆ ಗೀಜೆ ಅಂದ್ರೆ ಮಾರು ದೂರ. ಸಾಲದ್ದಕ್ಕೆ ಕುಂಬಾರರವಳಾದ ಗೌರಿ ಹಾಗೆ ಬೆಳ್ಳಗೆ, ದುಂಡಗೆ ಬೇರೆ ಇದ್ದೀನಲ್ಲ!” ಅಂತ…
ದಿನ ಕಳಿತಾ ನಾನು ಹೈಸ್ಕೂಲಿಗೆ ಬಂದೆ. ಅಣ್ಣ ಆಗಲೇ ಕೆಲಸ ಹಿಡಿದು ಬೇರೆ ಊರಿಗೆ ಹೋಗಿಯಾಗಿತ್ತು. ಅಕ್ಕನ ಮದ್ವೇನೂ ಆಗಿತ್ತು. ಮನೇಲಿ ಅಪ್ಪಯ್ಯ, ಅಮ್ಮ ಮತ್ತು ನಾನು ಮಾತ್ರ. ಒಂದಿನ ಶಾಲೆಗೆ ರೆಡಿಯಾಗಿ ಹೊರಡೋ ಹೊತ್ತಿಗೆ ಹಳ್ಳಿಯಿಂದ ಒಬ್ಬಾಳು ಒಂದು ಸುದ್ದಿ ತಂದ. “ಗೌರಿ ಸತ್ ಹೋದ್ಲು ಅಯ್ಯ’ ಅಂದ. ಒಂದ್ನಿಮಿಷ ಅಮ್ಮ ಏನೂ ತೋಚದೆ ಕೂತುಬಿಟ್ಲು. ಅಪ್ಪಯ್ಯ ಆ ಆಳಿನ ಹಿಂದೇನೇ ಹಳ್ಳಿಗೆ ಹೋದ್ರು. ಅಮ್ಮ ಶಾಲೆಗೆ ಹೊರಟಿದ್ದ ನನ್ನ ತಡೆದು, ಬಚ್ಚಲು ಮನೆಗೆ ಒಯ್ದು ತಲೆ ಮೇಲೆ ಉಟ್ಟ ಬಟ್ಟೆ ಸಮೇತ ನೀರು ಹೊಯ್ದುಬಿಟ್ಲು. ಆಮೇಲೆ ಒಳಗೆ ಬಂದು ಬಟ್ಟೆ ಬದಲಾಯ್ಸು ಅನ್ನುವಾಗ ಅವಳ ಕಣ್ಣಲ್ಲಿ ನೀರು.
ಹಾಗೆ ನೀರು ಸುರಿದರೆ ಅದು ಮೈಲಿಗೆ ಕಳೆಯಲು ಅಂತಷ್ಟೆ ಗೊತ್ತಿದ್ದ ನನಗೆ ಅಮ್ಮನ ಕಣ್ಣೀರಿನ ಅರ್ಥ ತಿಳಿಯಲಿಲ್ಲ. ಶಾಲೆಗೆ ತಡವಾಗಿದ್ದರಿಂದ ಬೇರೆ ಬಟ್ಟೆ ತೊಟ್ಟು ಓಡಿದೆ.
ಇಷ್ಟು ವರ್ಷಗಳ ನಂತರ ಆ ಎಲ್ಲ ದೃಶ್ಯಗಳು ಕಣ್ಮುಂದೆ ಬರುತ್ತದೆ. ಗೌರಿಯ, ನನ್ನ ರೂಪದ ಸಾಮ್ಯತೆ, ಅವಳಿಗೆ ನಮ್ಮನೇಲಿ ದೊರೆಯುತ್ತಿದ್ದ ಆದರಾಥಿತ್ಯ, ಅವಳು ಸತ್ತಾಗ ಸುರಿಸಿಕೊಂಡ ತಣ್ಣೀರು ಮತ್ತು ಅಮ್ಮನ ಕಣ್ಣೀರು- ಇವಕ್ಕೆಲ್ಲ ಅರ್ಥ ಕೊಡ್ತಾ ಕೊಡ್ತಾ ತಲೆ ತಿರುಗತೊಡಗುತ್ತದೆ. ನಮ್ಮ ಮನೆಯಲ್ಲಿ ಇಂದಿಗೂ ನಾನೊಬ್ಬಳೆ ಬೇರೆ ಸ್ವಭಾವದವಳಾಗಿ ಹುಟ್ಟಿದ್ದೇನೆ ಎಂದು ಅಂದುಕೊಳ್ಳುವಾಗಲೆಲ್ಲ ಗೌರಿ ಮತ್ತಷ್ಟು ಹೆಚ್ಚಾಗಿ ನೆನಪಾಗುತ್ತಾಳೆ.

ಎ ಕಾಸ್ಮಿಕ್ ಜೋಕ್ ~ ಮತ್ತೊಂದು ಮಧ್ಯದ ಎಪಿಸೋಡ್

ಮಣಿ ಒಂದು ಮಧ್ಯಾಹ್ನ ನನ್ನನ್ನು ಊಟಕ್ಕೆ ಬರುವಂತೆ ಕರೆದಳು. ಏನೋ ಅಪರೂಪದ ತಿನಿಸು ಮಾಡಿದ್ದೀನಿ ಅಂತಲೂ ಹೇಳೀದಳು.
‘ಏನು ವಿಶೇಷ?’ ನಾನಂದೆ. ‘ಸಂತೋಷ ಪಡಲಿಕ್ಕೆ ನಿನಗೆ ಏನಾದರೂ ಕಾರಣ ಇರಲೇಬೇಕೇನು!?’ ಅಂದು ಬಾಯ್ಮುಚ್ಚಿಸಿದಳು.
ಮರುಘಳಿಗೆಯಲ್ಲಿ ನಾನು ಅವಳ ಮನೆ ಹೊಸ್ತಿಲು ತುಳಿದಿದ್ದೆ.
ಆದರೆ ಅಲ್ಲಿ ಬೇರೆಯೇ ಸ್ವಾಗತವಿತ್ತು.
ವಿಲಕ್ಷಣ ನೋಟದ, ತೆಳ್ಳಗಿನ, ಎತ್ತರದ ವ್ಯಕ್ತಿಯೊಬ್ಬ ಅಲ್ಲಿ ಕುಳಿತುಕೊಂಡಿದ್ದ. ಅವನ ದಟ್ಟ- ಗಾಢ- ನೀಳ ಕೂದಲು ಭುಜದವರೆಗೂ ಇಳಿಬಿದ್ದಿತ್ತು. ಅವನ ಉದ್ದನೆಯ ಮುಖದಲ್ಲಿನ ಕಣ್ಣುಗಳು ಶಾಂತಕೊಳದಂತೆ ಕುಳಿತಿದ್ದವು. ಮುಖದಲ್ಲಿ ಇದ್ದೂ ಇರದಂಥ ಚಿರಂತನ ಮಂದಹಾಸ. ಒಂದು ಸುದೀರ್ಘವಾದ ಉಲ್ಲಾಸದಾಯಕ ನಿದ್ರೆಯಿಂದ ಎಚ್ಚೆತ್ತು ಬಂದಂತೆ ಆತ ನಿರುಮ್ಮಳವಾಗಿ ಕಾಣುತ್ತಿದ್ದ. ಬೆನ್ನುಹುರಿಯನ್ನು ನೇರಗೊಳಿಸಿ ಕುಳಿತಿದ್ದ ಅವನ ಸುತ್ತ ಬೇರಾವ ಚಟುವಟಿಕೆಯೂ ಇರಲಿಲ್ಲ.
ಅವನು ತನ್ನ ಕೈಮುಂಚಾಚುತ್ತ ತನ್ನ ಪರಿಚಯ ಮಾಡಿಕೊಂಡ. ಲೇಡಿ ಡಾಕ್ಟರಳ ಕೈಗಳಂತೆ ಅವು ಮೃದುವಾಗಿಯೂ ಹಾಯೆನ್ನಿಸುವಂತೆಯೂ ಇದ್ದವು. ‘ಮೆದುವಾಗಿರುವವರೆಲ್ಲ ದುರ್ಬಲರೇನಲ್ಲ’ ಈ ಮಾತು ಇವನಂಥವನನ್ನು ನೋಡಿಯೇ ಹೇಳಿರಬೇಕು. ನಾನು ಸುಮ್ಮನೆ ಕುಳಿತುಕೊಂಡೆ. ಅಪರಿಚಿತರೊಡನೆ ಹೇಗೆ ಮುಂದುವರೆಯಬೇಕನ್ನೋದು ನನಗೆ ಇವತ್ತಿಗೂ ತಲೆಗೇರದ ಸಂಗತಿಯಾಗಿದೆ.
ಆ ಇಬ್ಬರು, ತಾವಾಗಿಯೇ ತೀರ ಕಡಿಮೆ ಮಾತನಾಡುವಂಥವರು. ‘ಏನೂ ಚಿಂತನೆಯನ್ನೆ ಇಟ್ಟುಕೊಳ್ಳದೆ ಉತ್ತಮ ಬದುಕು ಬಾಳಬೇಕು’ ಅನ್ನುವ ಹುಡುಗು ಯೋಚನೆಯ ನನ್ನ ಪಕ್ಕ ‘ಸರಳ ಬದುಕು, ಎತ್ತರದ ಚಿಂತನೆ’ ಇರಬೇಕೆನ್ನುವ ಮಣಿ ಕುಳಿತಿದ್ದಳು. ನಮ್ಮಿಬ್ಬರ ಎದುರಿಗೆ ‘ಸುಮ್ಮನೆ ಬದುಕೋದಷ್ಟೆ’ ಅನ್ನುವ ಯೋಚನೆಯ… ಉಹುಂ, ನಿರ್ಧಾರದ ಅವನು; ಜೀವನಪಾಠ ಕಲಿಸುವ ಚಿತ್ರಕಾರನಿದ್ದ.
ಮಣಿ ನಡುವಲ್ಲಿ ಎದ್ದು ಅಡುಗೆಮನೆಗೆ ಹೋದಳು. ನಾನು ಆ ವ್ಯಕ್ತಿಯನ್ನೆ ತುದಿಗಣ್ಣಲ್ಲಿ ಗಮನಿಸುತ್ತಾ ಯಾರಿರಬಹುದು ಅಂತ ಯೋಚಿಸುತ್ತಿದ್ದೆ. ನನ್ನನ್ನು ಓದಿಕೊಂಡವನಂತೆ ಆತ, ‘ಉಹು… ನಾನು ಸೈಕಿಯಾಟ್ರಿಸ್ಟ್ ಅಲ್ಲ. ಸಂನ್ಯಾಸಿ ಕೂಡ ಅಲ್ಲ…’ ಅಂದ. ದೃಢವಾದ, ಅಷ್ಟೇ ಮಧುರವಾದ ದನಿ.
ಅವೆರಡೂ ಅಲ್ಲದಿದ್ದ ಮೇಲೆ ಈತನಿಗೆ ನನ್ನ ಯೋಚನೆ ಗೊತ್ತಾಗಿದ್ದು ಹೇಗೆ? ನನಗೆ ಸೋಜಿಗವಾಯ್ತು. ಆತನ ತಲೆಯಿಂದ ಕಾಲಿನವರೆಗೆ ನೋಟ ಹರಿಸಿದೆ. ಅವನು ಹಸಿರು ಷರಟು, ಜೀನ್ಸ್ ತೊಟ್ಟಿದ್ದ. ಆದರೆ ಅವನ ಮುಖದಲ್ಲಿ ತಾನು ಈ ಲೋಕಕ್ಕೆ ಸೇರಿದವನಲ್ಲ ಎಂಬಂಥ ಭಾವವಿತ್ತು. ಇವನೂ ಮಣಿಯ ಹಾಗೇ ಇರುವ ಹುಚ್ಚನಿರಬೇಕು ಅಂದುಕೊಂಡೆ.
ಸದ್ಯ! ಮಣಿ ತಟ್ಟೆಗಳಲ್ಲಿ ಬಗೆಬಗೆಯ ತಿನಿಸುಗಳನ್ನಿಟ್ಟುಕೊಂಡು ಬಂದಳು. ನಾನು ಆ ಕ್ಷಣವೇ ಜಗತ್ತಿನೆಲ್ಲ ಯೋಚನೆಗಳನ್ನು ಪಕ್ಕಕ್ಕಿಟ್ಟು ಕೈಬಾಯಿಗಳಿಗೆ ಕೆಲಸ ಹಚ್ಚಿದೆ.
ಅವನು ತಿನ್ನುತ್ತಿದ್ದ ಬಗೆಯಲ್ಲೂ ಒಂದು ಮಾಧುರ್ಯವಿತ್ತು. ತಟ್ಟೆ ಖಾಲಿಯಾಗುವಷ್ಟೂ ಹೊತ್ತು ತಿನ್ನುವುದೇ ಆ ಗಳಿಗೆಯ ಏಕೈಕ ಘಟನೆಯೇನೋ ಅನ್ನುವಂತೆ ಅದನ್ನು ಆಸ್ವಾದಿಸುತ್ತಿದ್ದ. ಕಣ್ಣನ್ನು ಅರೆಮುಚ್ಚಿ ಸುದೀರ್ಘವಾಗಿ ಜಗಿಯುತ್ತಾ ಅದರ ಪ್ರತಿ ಕಣದ ಸ್ವಾದವನ್ನೂ ಸವಿಯುತ್ತಾ ತಿನ್ನುತ್ತಿದ್ದ.
ಮಣಿಯ ಸೂಚನೆಯಂತೆ ನಾನಾಗಿಯೇ ಮುಂದುವರೆದು ಅವನೊಟ್ಟಿಗೆ ಮಾತಾಡಿದೆ. ಆತ ನನ್ನನ್ನು ದೀರ್ಘಕಾಲದಿಂದ ಬಲ್ಲವನಂತೆ ವಿಶ್ವಾಸ ತೋರಿಸಿದ. ಅವನಲ್ಲಿ ಪ್ರೀತಿಯ ವಿನಾ ಬೇರೆ ಏನನ್ನೂ ನೋಡಲು ಸಾಧ್ಯವಿರಲಿಲ್ಲ. ಅಷ್ಟು ಪರಿಪೂರ್ಣವಾಗಿ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುತ್ತಿದ್ದ. ನಾನು ಗಮನವಿಟ್ಟು ತಾಳೆ ಹಾಕಿದೆ. ಆತ ಮಣಿಯನ್ನು ಎಷ್ಟು ಹಾರ್ದಿಕವಾಗಿ ಮಾತಾಡಿಸುತ್ತಿದ್ದನೋ ನನ್ನ ಬಳಿಯೂ ಅಷ್ಟೇ ಪ್ರೇಮಪೂರ್ಣನಾಗಿ ಮಾತನಾಡುತ್ತಿದ್ದ. ಅಲ್ಲಿ ಗಂಡು ಹೆಣ್ಣೆಂಬ ಬೇಧ ಕೂಡ ಹಣಕುತ್ತಿರಲಿಲ್ಲ.
ಅವನು ಅದೆಷ್ಟು ತೆರೆದುಕೊಂಡಿದ್ದ ಎಂದರೆ, ಅವನನ್ನು ಓದುವುದು ಭಲೇ ಕಷ್ಟ ಅನ್ನಿಸುವಂತೆ ಇತ್ತು.
ಅವತ್ತು ಹಾಗೆ ಭೇಟಿಯಾಗಿದ್ದ ಅಪರೂಪದ ಮನುಷ್ಯನೇ ಕಿರಣ್.

ಎ ಕಾಸ್ಮಿಕ್ ಜೋಕ್ ~ 18!

ಎ ಕಾಸ್ಮಿಕ್ ಜೋಕ್, ನಾನು ಸದ್ಯ ಅನುವಾದಿಸ್ತಿರೋ ಕಾದಂಬರಿ. ಇದರ ಭಾಗ 1 ಮತ್ತು 2 ಈಗಾಗಲೇ ಹಾಕಿದೀನಿ. ನಂತರದ 17 ಪೋಸ್ಟ್ ಗಳನ್ನು ಹಾರಿಸಿ 18ನೆಯದ್ದು ಇಲ್ಲಿದೆ 🙂

ಕುಂಜಮ್ ಕುಂಜಮ್ ಮನುಷ್ಯನ ಉಪಕಾರ

ನಾನು ಪೂರ್ತಿಯಾಗಿ ಈ ಲೋಕಕ್ಕೆ ಮರಳಿದ್ದು ಜನರಲ್ ಬೋಗಿ ಹತ್ತಿಕೊಂಡ ಮೇಲೇನೇ. ದೇಹಕ್ಕೆ ಚಿಕ್ಕ ಚಲನೆಯೂ ಸಾಧ್ಯವಾಗದಷ್ಟು ಅದು ಕಿಕ್ಕಿರಿದು ತುಂಬಿಕೊಂಡಿತ್ತು. ಉಸಿರುಗಟ್ಟುವ ಪರಿಸ್ಥಿತಿ. ಟ್ರೈನ್ ನಿಧಾನಕ್ಕೆ ಓಡಲು ಶುರುಮಾಡಿ ವೇಗ ಪಡೆದುಕೊಳ್ಳುತ್ತಿತ್ತು. ನಾನು ಟಾಯ್ಲೆಟ್ ಬಾಗಿಲಿನ ಬಳಿ ಕಾಲೂರಲು ನೆಲೆ ಕಂಡುಕೊಳ್ಳಲು ಬಹಳ ಹೊತ್ತೇ ಹಿಡಿಯಿತು.  ಹಿಂದೆ ಮುಂದೆ ನಿಂತವರ ಉಸಿರಾಟದೆದೆಗಳ ಉಬ್ಬರ ಇಳಿತಗಳ ನಡುವೆ ನಾನು ಸ್ಯಾಂಡ್ ವಿಚ್ ನಂತಾಗಿಬಿಟ್ಟಿದ್ದೆ. ನನಗೆ ಮುಂಭಾಗದಿಂದ ಅಂಟಿಕೊಂಡವನು ಕುಡಿದು ಹುಳ್ಳಗಾಗಿದ್ದ. ಅವನ ಅಮಲಿನ ವಾಸನೆ ಸಹಿಸಲಾಗದಂತಿತ್ತು. ನನ್ನ ಕಣ್ಣೊಳಗೆ ಹಣಕುತ್ತಾ ಹಲ್ಲು ಕಿರಿದವನ ಅರ್ಧಬಾಯಿ ತಂಬಾಕಿನಿಂದ ಕರಗಿಹೋಗಿತ್ತು. ನಾನು ಹೆಚ್ಚುಹೊತ್ತು ಅಲ್ಲಿ ನಿಲ್ಲಲಾಗದೆ, ಸಿಕ್ಕ ಸಿಕ್ಕಲ್ಲಿ ಕಾಲು ತೂರಿಸುತ್ತ ಭೋಗಿಯ ಒಳಕಡೆಗೆ ಜಾಗ ಮಾಡಿಕೊಂಡೆ. ಆಗಲೇ ಕತ್ತಲು ಕಪ್ಪುಗಟ್ಟಿತ್ತು. ನಮ್ಮ ಬೋಗಿಯೊಳಗೆ ಯಾರೂ ಏನನ್ನೂ ಮಾರಲಿಕ್ಕೆ ಬರುವ ಧೈರ್ಯ ಮಾಡಿರಲಿಲ್ಲ.

ನನ್ನ ಹೊಟ್ಟೆ ಚುರುಗುಟ್ಟಲು ಶುರುವಿಟ್ಟ ಹೊತ್ತಲ್ಲೇ ಅಲ್ಲಿ ಸಣ್ಣಗೆ ಜಗಳ ಹುಟ್ಟಿಕೊಂಡಿತು. ಯಾರೋ ನಾಲ್ಕಾರು ಮಂದಿ ಜಾಗಕ್ಕಾಗಿ ಕೂಗಾಡುತ್ತಿದ್ದರು. ನಾನು ಕುತ್ತಿಗೆಯನ್ನು ಭುಜದ ಮೇಲೆ ವಾಲಿಸಿಕೊಂಡು ನನಗೆ ನಾನೆ ಆಸರೆಯಾಗಿ ನಿಂತುಕೊಂಡಿದ್ದೆ. ಒಂದು ಕಡೆಯಿಂದ ಪರಸ್ಪರ ಮುಖ ಮಾಡಿದ್ದ ಟಾಯ್ಲೆಟ್ಟುಗಳ ವಾಸನೆ. ಒಳಗಿನ ನಾನಾ ಥರದ ಜನಗಳ ಬೆವರು, ಹೆಂಡ ಮತ್ತಿತರ ಥರಾವರಿ ನಾತಗಳು. ಇವೆಲ್ಲದಕ್ಕೆ ನನ್ನನ್ನು ಹೊಂದಿಸಿಕೊಳ್ತಿರುವಾಗ ಹಿಂದೆ ನಿಂತಿದ್ದವನು ಮತ್ತೊಬ್ಬನ ಮೇಲೆ ಧಪ್ಪನೆ ಕೈಹಾಕುತ್ತಾ ‘ಏ… ಇದು ನಿನ್ನಪ್ಪನ ಟ್ರೈನಲ್ಲ ಬೇನ್ ಚೋತ್’ ಅಂತ ಕ್ಯಾಕರಿಸಿ ಉಗಿದ. ತಾನೇನೂ ಕಡಿಮೆ ಇಲ್ಲದಂತೆ ಬಯ್ಸಿಕೊಂಡ ಮತ್ತೊಬ್ಬ, ’ ನಾನೇ ನಿನ್ನಪ್ಪ, ಮಾದರ್ ಚೋತ್’ ಅನ್ನುತ್ತ ಮತ್ತೂ ಜೋರಾಗಿ ಉಗಿದ.

ಈ ಎಲ್ಲ ಕಾದಾಟಗಳಿಂದ ವಿಮುಖನಾಗುತ್ತ ನಾನು ಮತ್ತೆ ಭುಜದ ಮೇಲೆ ಕುತ್ತಿಗೆಯನ್ನ ವಾಲಿಸಿ ಯೋಚಿಸತೊಡಗಿದೆ, ‘ಕಿರಣ್ ಓಶೋಯಿಂದ ಕಲಿತಂತೆ, ಬದುಕೊಂದು ಪ್ರಯಾಣ. ಪ್ರಯಾಣವನ್ನೆ ಗುರಿಯಾಗಲು ಬಿಡಬೇಕು….’
~

ಪೂರಾ ಹನ್ನೆರಡು ಗಂಟೆ ನಿಂತುಕೊಂಡೇ ಪ್ರಯಾಣ ಸಾಗಿತ್ತು. ಅಂತೂ ಒಬ್ಬ ಪುಣ್ಯಾತ್ಮ ಒಂಚೂರು ಕುಂಡೆ ಸರಿಸಿ ಕೂತುಕೊಳ್ಳಲು ಜಾಗ ಕೊಟ್ಟ. ಅದಾಗಲೇ ಆ ಸೀಟಿನಲ್ಲಿ ಅರ್ಧ ಡಜನ್ ಪ್ರಯಾಣಿಕರು ಕೂತಿದ್ದರು. ಅವರೆಲ್ಲರಲ್ಲಿ ನಾನೇ ದಪ್ಪನೆಯವನಾಗಿದ್ದೆ.

ನನ್ನ ಕಾಲುಗಳು ಹೆಚ್ಚೂಕಡಿಮೆ ಸಂವೇದನೆಯನ್ನೆ ಕಳಕೊಂಡುಬಿಟ್ಟಿದ್ದವು. ಅದರತ್ತಲೇ ಗಮನ ಇಟ್ಟುಕೊಂಡರೆ ನೋವು ಹೋಗುವುದೇ ಇಲ್ಲ ಅನ್ನಿಸಿ ಜೊತೆಗಿನವರೊಟ್ಟಿಗೆ ಬೀಡಿ ಸೇದುತ್ತ, ಅವರು ಕೊಟ್ಟ ಪಾನ್ ಕ ಗೋಲಾ ತಿನ್ನುತ್ತ ಯೋಚನೆ ತಿರುಗಿಸಿಕೊಂಡೆ. ಅವರು ವಿಳ್ಳೆದೆಲೆ, ಅಡಿಕೆ ಪುಡಿ ಸುಣ್ಣ, ತಂಬಾಕು- ಹೀಗೆ ಏನೇನೋ ಎಡ ಅಂಗೈ ಮೇಲೆ ಹಾಕಿಕೊಂಡು ಬಲ ಹೆಬ್ಬೆಟ್ಟಿನಿಂದ ನುರಿದು ಚಿಕ್ಕಚಿಕ್ಕ ಉಂಡೆಗಳನ್ನು ಮಾಡುತ್ತಿದ್ದರು. ಅದನ್ನ ನೋಡುವುದೇ ಒಂದು ಚೆಂದವಾಗಿತ್ತು.

~

ಈಗ ಟ್ರೈನ್ ಗುಲ್ಬರ್ಗಾ ಜಂಕ್ಷನ್ ಅನ್ನು ಬಿಟ್ಟು ಹೊರಟಿತು. ನಾನು ಜೊತೆಗಿನವರ ಹರಟೆಗಳನ್ನು ಕೇಳುತ್ತ ಪ್ರಯಾಣದ ಬೇಸರ ಕಳೆದುಕೊಳ್ಳತೊಡಗಿದೆ. ಹೊಟ್ಟೆ ಹೊರೆದುಕೊಳ್ಳಲು ನಮ್ಮ ರಾಜ್ಯದ ಬೇರೆಬೇರೆ ಊರುಗಳಿಗೆ ಬಂದು ಸೇರಿಕೊಳ್ತಿದ್ದ ಉತ್ತರಭಾರತೀಯರಿಗೆ ತಮ್ಮ ಬಗ್ಗೆ ವಿಪರೀತ ಹೆಮ್ಮೆ ಇದ್ದಂತಿತ್ತು. ಅವರಲ್ಲೊಬ್ಬ ದಕ್ಷಿಣದವರ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದ. ಅವನೆಲ್ಲಾ ಮಾತಿನ ಕೊನೆಗೆ “ಕುಂಜಮ್ ಕುಂಜಮ್” ಅನ್ನುತ್ತಾ ನಗಾಡುತ್ತಿದ್ದ. ಮಿಕ್ಕವರೂ ಅದಕ್ಕೆ ದನಿ ಸೇರಿಸುತ್ತಿದ್ದರು. ಅವರೆಲ್ಲ ಸೇರಿ ನನ್ನ ಕೆಣಕೋದಕ್ಕೆ ಪ್ರಯತ್ನಿಸ್ತಿದ್ದಾರೆಂದು ನನಗೆ ಗೊತ್ತಾಯ್ತು. ನಾನು ತಣ್ಣಗೆ ಅವರತ್ತ ನೋಡುತ್ತ, “ಅದು ಕೊಂಚಕೊಂಚ.. ಹಾಗಂದ್ರೆ ಸ್ವಲ್ಪ ಅಂತ ಅರ್ಥ. ಅದು ತಮಿಳು ಭಾಷೆ” ಅಂದೆ.

ನಮ್ಮ ರಾಜಕಾರಣಿಗಳು ಸೋದರತ್ವ, ಸೌಹಾರ್ದ ಅಂತೆಲ್ಲ ಯಾಕೆ ಬೊಂಬಡ ಬಜಾಯಿಸ್ತಾರೆ ಅಂತ ನನಗೆ ಚೂರು ಅರ್ಥವಾಗಿದ್ದು ಅವಾಗಲೇ. ಭ್ರಷ್ಟತೆ ಮತ್ತು ಬೇಧಭಾವಗಳೇ ನಮ್ಮ ದೇಶದಲ್ಲಿ “ವಿವಿಧತೆಯಲ್ಲಿ ಏಕತೆ” ಅನ್ನೋ ಹೆಸರಲ್ಲಿ ರಾರಾಜಿಸ್ತಿದೆ ಅಂತ ಅನ್ನಿಸಿತು. ಈ ಯೋಚನೆಯೊಟ್ಟಿಗೇ ನನ್ನ ಮನಸ್ಸು ಉತ್ತರ- ದಕ್ಷಿಣ, ದ್ವೇಷ ಅಸೂಯೆ ಅಂತೆಲ್ಲ ಸುತ್ತಾಡಿಬಂತು. ಅಲ್ಲಿನವರನ್ನ ಇಲ್ಲಿಯವರು ವಂಚಿಸಿದ್ರೆ, ಇಲ್ಲಿಯವರನ್ನ ಅವರು ಲೂಟಿ ಮಾಡ್ತಾರೆ. ಕೊನೆಗೂ ನಾವು ಏನು ಬಿತ್ತುತ್ತೇವೋ ಅದನ್ನೇ ಕೊಯ್ಲು ಮಾಡ್ತೇವೆ! ಹಾಗನ್ನಿಸಿ ನನ್ನ ಮೂಗನ್ನ ರಾಜಕಾರಣದಿಂದೀಚೆ ತೆಗೆದೆ. ಅದು ನನ್ನ ಆಸಕ್ತಿಯ ವಿಷಯವೇನೂ ಆಗಿರಲಿಲ್ಲ. ಸಾಲದ್ದಕ್ಕೆ ಹೊಟ್ಟೆಯೊಳಗೆ ಒದ್ದಾಟ ಹೆಚ್ಚುತ್ತಲೇ ಇತ್ತು.

ಸ್ವಲ್ಪ ಹೊತ್ತಿನಲ್ಲಿ ರೈಲು ಮಹಾರಾಷ್ಟ್ರದ ದೌಂಡ್ ಜಂಕ್ಷನ್ನಿನಲ್ಲಿ ನಿಂತಿತ್ತು. ನಾನು ಅಪ್ಪಟ ಮರಾಠಿ ತಿನಿಸು ವಡಾಪಾವ್ ಕೊಂಡುಕೊಂಡೆ. ಜೊತೆಗೊಂದಷ್ಟು ಬಾಳೆಹಣ್ಣು. ಒಟ್ಟು ೨೦ ರುಪಾಯಿ ಕೈಬಿಟ್ಟಿತ್ತು. ಈಗ ಪರ್ಸಿನಲ್ಲಿ ಉಳಿದಿದ್ದು ಇನ್ನೂರಾ ಎಂಭತ್ತು ರುಪಾಯಿ ಮಾತ್ರ.
ಆ ಕ್ಷಣದ ಸಂಪತ್ತಿನಂತಿದ್ದ ತಿನಿಸುಗಳನ್ನು ಒಂದು ಕೈಯಲ್ಲಿ ಸಂಭಾಳಿಸುತ್ತಲೇ ಮೆಲ್ಲಗೆ ಚಲಿಸುತ್ತ ಸೂಚನೆ ಕೊಡುತ್ತಿದ್ದ ರೈಲನ್ನು ಹತ್ತಿದೆ. ಮುಖ, ಕೈಗಳನ್ನಿರಲಿ, ಹಲ್ಲನ್ನು ಕೂಡ ಉಜ್ಜದೆ ಅವನ್ನು ತಿನ್ನತೊಡಗಿದ್ದೆ.  ಆದರೆ ನಾನು ಪ್ರಯಾಣಿಸುತ್ತಿದ್ದ ಗಬ್ಬು ನಾತದ ಬೋಗಿಯಲ್ಲಿ ಇಂಥಾ ಗಲೀಜುತನ ದೊಡ್ಡ ವಿಷಯವೇನೂ ಆಗಿರಲಿಲ್ಲ ಬಿಡಿ.
ನನ್ನ ಪಕ್ಕ ಕುಳಿತಿದ್ದ ಕುಂಜಮ್ ಕುಂಜಮ್ ಮನುಷ್ಯ ಕುಡಿಯಲು ನೀರು ಕೊಟ್ಟ. ಅದನ್ನು ಹೊಯ್ದುಕೊಳ್ಳುತ್ತಲೆ ಅವನ ಪ್ರಶ್ನೆಗಳಿಗೆ ಉತ್ತರಿಸಿದೆ. ನಾನು ಚಂಡೀಗಢಕ್ಕೆ ಹೋಗ್ತಿದ್ದೀನೆ ಅಂದಿದ್ದು ಕೇಳಿ,” ಹಾಗಾದರೆ ಒಳ್ಳೆಯದೆ ಆಯ್ತು, ನಾನು ಅಂಬಾಲಾಕ್ಕೆ ಹೋಗ್ತಾ ಇದ್ದೀನಿ, ಬಸ್ಸಿನಲ್ಲಿ ಇಬ್ಬರೂ ಒಟ್ಟಿಗೆ ಹೋಗೋಣ” ಅಂದ. ಸ್ಟೇಷನ್ನಿನಲ್ಲಿ ಇಳಿದಮೇಲೆ ಏನು ಮಾಡಬೇಕೆಂದು ಯೋಚನೆ ಮಾಡದಿದ್ದ ನನಗೆ ಬೆಳಕೇ ಹುಡುಕಿಬಂದ ಹಾಗೆ ಆಗಿತ್ತು. ನನ್ನ ಪ್ರಯಾಣ ಸುಗಮವಾಗ್ತಿದೆ ಅನ್ನಿಸಿ ನಿರಾಳವಾಯ್ತು.

ಎ ಕಾಸ್ಮಿಕ್ ಜೋಕ್ ~ 2

ಮೊದಲ ಭಾಗ ಇಲ್ಲಿದೆ

ಹಾಗೆ ನಾನು ಅವಳನ್ನ ನೋಡಿದ ತಕ್ಷಣ ಅನಿಸಿದ್ದನ್ನೇ ನೆಚ್ಚಿಕೊಂಡಿದ್ದರೆ ತಪ್ಪಾಗಿಬಿಡ್ತಿತ್ತು. ಕೆಲವರಿಗೆ ಹೀಗಾಗುತ್ತೆ. ಮೊದಲ ನೋಟದಲ್ಲಿ ಅನಿಸಿದ್ದಕ್ಕೇ ಜೋತುಬಿದ್ದು ಎಷ್ಟೋ ಅಮೂಲ್ಯವಾದ್ದನ್ನ ಕಳಕೊಂಡುಬಿಡ್ತೇವೆ, ಪಡೆಯುವ ಮೊದಲೇ. ಇಂತಹ ಸನ್ನಿವೇಶದ ಭೇಟಿಯಲ್ಲಿ ಅವಳು ಅಪರಿಚಿತತೆಯನ್ನ ಹೋಗಲಾಡಿಸ್ಕೊಳ್ಳಲು ಹಾಗೆ ಆಡಿದಳು ಅನಿಸುತ್ತೆ ಈಗ.
ಅವಳನ್ನೇ ನಾನು ಕಾಯ್ತಿದ್ದುದು ಅಂತ ಗೊತ್ತಾದ ಮೇಲೆ ಇಬ್ಬರೂ ನಾನು ಮೊದಲೇ ನೋಡಿಟ್ಟುಕೊಂಡಿದ್ದ ಕಾರ್ನರ್ ಟೇಬಲಿನೆಡೆಗೆ ಬಂದೆವು. ನನ್ನ ಕಣ್ಣು ಇನ್ನೂ ಕಿಟಕಿಯ ಗಾಜಿನಾಚೆ ನಡುರೋಡಿನ ಹುಡುಗಿಯನ್ನೇ ಹುಡುಕುತ್ತಿತ್ತು.
‘ಅವಳು ನನ್ನ ಫ್ರೆಂಡ್. ಬ್ಲೂ ಕ್ರಾಸ್‌ಗಾಗಿ ಕೆಲಸ ಮಾಡ್ತಾಳೆ’ ಅಂದವಳ ಮುಖ ನೋಡಿದೆ. ಕೊರಳ ತಿರುವಲ್ಲಿ ಉತ್ಸಾಹ ಗೂಡು ಕಟ್ಟಿತ್ತು. ಗಲಿಬಿಲಿಗೊಂಡವನಂತೆ ಇದ್ದ ನನ್ನ ನೋಡಿ ಏನನಿಸ್ತೋ, ‘ನಾನು ಮೀರಾ…’ ಅನ್ನುತ್ತ ಮತ್ತೊಮ್ಮೆ ಕೈ ಚಾಚಿದಳು. ಈಗ ನನ್ನ ಪಾಲಿನ ಅಭಿನಯ. ನಾನು ಕೂಡ ಕೈ ಚಾಚಬೇಕು. ಹೆಸರು ಹೇಳ್ಕೊಳ್ಳಬೇಕು… ‘ನಾನು…’ ಅನ್ನುತ್ತಿದ್ದ ಹಾಗೆ ತಡೆದಳು. ‘ನೀವು ರಾಜ್ ಅಥವಾ ಜಯ್, ವಿಜಯ್ ಆಗಿರಲಿಕ್ಕೆ ಸಾಧ್ಯ ಇಲ್ಲ. ಯಾಕಂದ್ರೆ ನೀವು ಶಾರುಖ್ ಯಾ ಅಮಿತಾಭ್ ಅಲ್ವಲ್ಲ!’
ಉಫ್… ಎಂಥಾ ಕೆಟ್ಟ ಜೋಕ್! ನಾನು ಪೆಚ್ಚುಪೆಚ್ಚಾಗಿ ನಗು ತಂದುಕೊಂಡೆ. ಅವಳಂತೂ ಜಗತ್ತಿನ ಎಲ್ಲ ಪ್ರಶ್ನೆಗಳನ್ನೂ ತಂದು ಸುರಿಯುತ್ತಿದ್ದಳು. ‘ಏನಾದ್ರೂ ಆರ್ಡರ್ ಮಾಡೋಣವಾ?’ ಅನ್ನುತ್ತ ಸುಮ್ಮನೆ ನಕ್ಕಳು. ‘ಏನು ಬೇಕೋ ಎಲ್ಲವನ್ನೂ ಗಳಪಿ ಮೊದಲು ತೊಲಗು ಇಲ್ಲಿಂದ’ ಅನ್ನುವ ಭಾವದಲ್ಲಿ ತಲೆ ಆಡಿಸಿದೆ.
ನಾನೇನೋ ಹಾಗಂದುಕೊಂಡೆ. ಅದು ಅವಳನ್ನು ತಟ್ಟಿದ ಯಾವ ಸೂಚನೆಯೂ ಕಾಣಲಿಲ್ಲ. ಅವಳು ನನ್ನ ಉಡಾಫೆಯನ್ನ ತಾಕಿಸಿಕೊಳ್ಳದೆ ಇರುವಳೆಂದ ಮೇಲೆ ಏನು ಪ್ರಯೋಜನ? ಯಾಕೋ ನನ್ನ ವೇಷ, ಪಾತ್ರಗಳ್ಯಾವುದೂ ಉಪಯೋಗಕ್ಕೆ ಬರುವ ಹಾಗೆ ಕಾಣಲಿಲ್ಲ. ಅವಳ ಪಾಡಿಗೆ ಅವಳು ವೈಟರನಿಗೆ ಕಾಫಿ, ಕೇಕ್‌ಗಳ ಪಟ್ಟಿ ಕೊಟ್ಟಳು. ಅವನಾದರೋ, ನಾವು ಅವನ ಖಾಸಾ ಅತಿಥಿಗಳು ಅನ್ನುವಂತೆ ಮುಖ ಮಾಡಿಕೊಂಡು, ಚೂರೆ ಸೊಂಟ ಬಗ್ಗಿಸಿ ಹೊರಟ.
ಆದರೆ ಅವನ ಈ ನೆಂಟಸ್ತನ ಬರೀ ಭಾವಭಂಗಿಗಷ್ಟೆ ಸೀಮಿತವಿತ್ತು. ಹೋದ ವೇಗದಲ್ಲಿ ವಾಪಸು ಬಂದವ ನಯವಾಗಿ ‘ಸರ್, ಕೌಂಟರಿನಲ್ಲಿ ಕೂಪನ್ ತೆಗೆದ್ಕೊಳ್ಳಿ’ ಅಂದ.
ಬಹಳ ಸಾರ್ತಿ ಆಗುವುದು ಹೀಗೇನೆ. ಯಾರದೋ ಬಯಕೆಗಳಿಗೆ ನಾವು ಬೆಲೆ ತೆರಬೇಕಾಗ್ತದೆ. ಇವಳು ತನ್ನಿಷ್ಟದ ಚೆರ್ರಿ ಕೇಕ್ ತಿನ್ನೋಕೆ ನಾನು ದಂಡ ಕಟ್ಟಬೇಕು. ಅದು ಕೂಡ ಎಂಥ ಗೋಳು ಗೊತ್ತಾ. ನನ್ನ ಈಗ ತಾನೆ ಒಣಗ್ತಿರೋ ಪಂಚೆಯನ್ನ ಮೇಲಕೆತ್ತಿ, ಅದರೊಳಗಿನ ನಿಕ್ಕರ್ ಜೇಬಿನಲ್ಲಿ ಜೋಪಾನ ಇಟ್ಟಿರುವ ಪರ್ಸಿಂದ ದುಡ್ಡು ತೆಗೆಯಬೇಕು. ನನ್ನ ಬಂಡುತನವೂ ಒಂದು ಘಳಿಗೆ ಹಿಂಜರಿಯಿತು. ಇಷ್ಟು ಜನರ ಎದುರೇನಾ? ಇಶ್ಶೀ…!
‘ಇಲ್ಲಿ ಟಾಯ್ಲೆಟ್ ಎಲ್ಲಿದೆ?’ ವೈಟರನನ್ನೇ ಕೇಳಿದೆ. ಅವಂಗೆ ಯಾಕಂತ ಅರ್ಥವಾಗಲಿಲ್ಲ. ‘ಕೂಪನ್‌ಗೆ ದುಡ್ಡು ಕೊಡಬೇಕಂದರೆ ದುಡ್ಡು ತೆಗೀಬೇಕಾಗ್ತದಲ್ಲ, ಅದಕ್ಕೆ ಕೇಳಿದ್ದು’ ಮೈಯನ್ನೆ ಕೊಶ್ಚನ್ ಮಾರ್ಕ್ ಮಾಡ್ಕೊಂಡವನ ಮೇಲೆ ರೇಗಿದೆ.
‘ಸರ್, ನಾವು ಟಾಯ್ಲೆಟ್ಟಲ್ಲಿ ದುಡ್ಡು ತೊಗೊಳೋದಿಲ್ಲ’ ಅಂದು ಮತ್ತಷ್ಟು ರೇಗಿಸಿದ. ಯಾಕೋ ನಾನು ಇಲ್ಲಿಗೆ ಬಂದಿದ್ದೇ ಸರಿಯಾಗಿಲ್ಲ ಅನ್ನಿಸಿಬಿಟ್ಟಿತು. ಅಂತೂ ಮಾತುಕತೆಯ ಕೆಟ್ಟ ಪ್ರಹಸನ ನಡೆದು ಕೌಂಟರಿಗೆ ಹೋಗಿ ಕೂಪನ್ ತಂದೆ.
ಹೊರಗೆ ಮಳೆಯ ಅಬ್ಬರ ಕಡಿಮೆಯಾಗತೊಡಗಿತ್ತು. ಎದುರು ಕುಂತವಳ ತೊನೆದಾಟವೂ. ನಾನಂತೂ ಅವಳು ತಿಂದು ಕುಡಿದು ಎದ್ದುಹೋಗುವುದನ್ನೇ ಕಾಯುತ್ತ ಸುಮ್ಮನೆ ಕುಳಿತಿದ್ದೆ.
~

ಸುಮಾರು ಅರ್ಧ ಗಂಟೆ ಕಳೆದಿರಬಹುದು. ನಮ್ಮ ನಡುವೆ ಮೌನ ಸುಳಿದಾಡುತ್ತಿತ್ತು. ಅದೀಗ ಇಷ್ಟವಾಗತೊಡಗಿತ್ತು. ಅವಳ ಮುಂಗುರುಳ ಮೇಲಿಂದ ಚಿಕ್ಕದೊಂದು ಹನಿ ಹಣೆಯ ಮೇಲೆ ಜಾರಲು ಹವಣಿಸುತ್ತಿತ್ತು. ಆ ಪುಟ್ಟ ಹನಿಯಲ್ಲಿ ಛಾವಣಿಯ ದೀಪಗೊಂಚಲಿನ ಪ್ರತಿಬಿಂಬ ಹೊಳೆದು ವಜ್ರದ ಮೆರುಗು. ಮಳೆಯ ನೀರಿಗೆ ಸೋಕಿ ಅವಳ ರೇಶಿಮೆಗೂದಲು ಅಲ್ಲಲ್ಲಿ ಸಿಕ್ಕುಗಟ್ಟಿತ್ತು. ಬಿಳಿಯ ಚೂಡಿದಾರಿನಲ್ಲಿ ಅವಳು ನನ್ನ ನೋಡಲೆಂದೇ ಏಳು ಸಾಗರ ದಾಟಿ ಬಂದ ದೇವಕನ್ನಿಕೆಯಂತೆ ಕಾಣ್ತಿದ್ದಳು. ಅವಳ ಕಣ್ಣುಗಳಲ್ಲೀಗ ಚಂಚಲತೆಯಿಲ್ಲ. ಅವಳ ಒಳಗೂ. ಮನಸಿನ ಶಾಂತತೆಯನ್ನ ಅವಳ ಕಣ್ಣುಗಳು ಸ್ಪಷ್ಟ ಘೋಷಿಸ್ತಿದ್ದವು. ಚಿರಕಾಲದಿಂದ ಅನ್ನುವಂತೆ ತೆಳುವಾದ ನಗುವೊಂದು ಅವಳ ತುಟಿಯಲ್ಲಿ ನೆಲೆಸಿತ್ತು.
‘ಸೋ… ನೀವ್ಯಾಕೆ ಬದುಕಿಗೆ ಬೆನ್ನು ಹಾಕ್ತಿದೀರಿ? ನಾನು ರಿಜೆಕ್ಟ್ ಮಾಡಲೀಂತ ತಾನೆ ಈ ಎಲ್ಲ ನಾಟಕ?’ ಒಂದು ಸಿಪ್ ಎಳೆದು ನನ್ನಲ್ಲೆ ನೋಟ ನೆಟ್ಟಳು.
ಅವಳು ನನ್ನಿಷ್ಟದ ಟ್ರಾಪಿಕಲ್ ಐಸ್‌ಬರ್ಗ್ ಅನ್ನು ಆರ್ಡರ್ ಮಾಡುವಾಗಲೇ ಅಂದುಕೊಳ್ತಿದ್ದೆ. ಎಲ್ಲೋ ಮಾಹಿತಿ ಲೀಕ್ ಆಗಿದೆ ಅಂತ. ಅನುಮಾನ ನಿಜವಾಗಿತ್ತು. ತಮ್ಮ ರಿಕಿ, ಅವಳಿಗೆ ನನ್ನೆಲ್ಲ ಮಸಲತ್ತುಗಳನ್ನೂ ಪೂರ್ವಪರಗಳನ್ನೂ ಹೇಳಿ ತಯಾರು ಮಾಡಿದ್ದ.
ಈ ರಿಕಿಯಾದರೂ ಎಂಥ ಹುಡುಗ… ಚಿಕ್ಕವರಿರುವಾಗ ನಾನು ಅವನು ಇದ್ದುದಕ್ಕೂ ಈಗ ನಾವು ಇರುವುದಕ್ಕೂ ಪೂರಾ ತಿರುಗುಮುರುಗು. ಆಗೆಲ್ಲ ಅಂವ ತನ್ನಷ್ಟಕ್ಕೆ ತಾನೆ ಇರುತ್ತಿದ್ದ. ಓದಿನಲ್ಲೂ ಅಷ್ಟಕ್ಕಷ್ಟೆ. ನಾನು ಆಗೆಲ್ಲ, ಪ್ರೈಮರಿ ಲೆವೆಲ್ಲಿನ ಓದಿನಲ್ಲಿರುವಾಗೆಲ್ಲ ಬಹುತೇಕ ಮುಂಚೂಣಿಯಲ್ಲಿ ಇರುತ್ತಿದ್ದೆ. ನನ್ನ ಮೇಲೆ ಭಾರೀ ಭರವಸೆ ಇಡಲಾಗಿತ್ತು. ನಾನು ಐಐಎಮ್‌ಎಸ್‌ನಿಂದ ಎಮ್‌ಬಿಎ ಪದವಿ ಪಡೆದು ಹೊರಬರುವೆನೆಂದು ನಿರೀಕ್ಷಿಸಲಾಗಿತ್ತು. ನನ್ನ ತಿಕ್ಕಲುತನಗಳಿಂದಾಗಿ ನನ್ನ ಓದು ತುಂಡಾಯ್ತು. ಡ್ರಾಪ್‌ಔಟ್ ಸ್ಟೂಡೆಂಟ್ ಅನ್ನುವ ಹಣೆಪಟ್ಟಿ ಹೊತ್ತು ಈಚೆ ಬಂದಿದ್ದೆ. ರಿಕಿಯ ಓದಿನ ಬದುಕು ಸರಾಗ ನಡೆಯಿತು. ಅವನು ಎಂಜಿನಿಯರ್ ಪದವಿ ಪಡೆದ. ಅವನೀಗ ನಮ್ಮ ಕುಟುಂಬದಲ್ಲಿ ಪ್ಲೇಬಾಯ್ ಅಂತಲೇ ಕರೆಸಿಕೊಳ್ಳುವಷ್ಟು ಅರಾಮದ ಹುಡುಗ. ರಿಕಿ ಇಂಥದ್ದೇನಾದರೂ ಮಾಡುವನೆಂದು ನನಗೆ ಗುಮಾನಿ ಇತ್ತಾದರೂ ಮಾಡೇಬಿಡುತ್ತಾನೆ ಅನಿಸಿರಲಿಲ್ಲ. ಈಗಲಾದರೂ ಎನು? ಅವನು ತನ್ನ ಇರುವಿಕೆಗೆ ತಕ್ಕನಾಗಿ ತನ್ನ ಪಾತ್ರ ನಿರ್ವಹಿಸಿದ್ದ ಅಷ್ಟೆ!
ಇಗ ಮೀರಾ ಕೇಳ್ತಿದಾಳೆ. ನಾನ್ಯಾಕೆ ಬದುಕಿಂದ ದೂರ ಓಡ್ತಿದೀನಿ ಅಂತ.
ಹೌದಾ? ನಾನು, ಬದುಕಿಂದ ದೂರ ಓಡ್ತಿದೀನಾ!?

ಎ ಕಾಸ್ಮಿಕ್ ಜೋಕ್

ಗೆಳೆಯ ರಾಘವ ಚಿನಿವಾರ್ ಬರೆದ ಇಂಗ್ಲಿಷ್ ನಾವೆಲ್  ‘ಎ ಕಾಸ್ಮಿಕ್ ಜೋಕ್’. ಅದನ್ನ ಕನ್ನಡದಲ್ಲಿ ನನ್ನ ಗ್ರಹಿಕೆ- ಶೈಲಿಯಲ್ಲಿ ನಿರೂಪಣೆ ಮಾಡಿದರೆ ಹೇಗಿರುತ್ತೆ ಅನ್ನುವ ಪ್ರಯೋಗ ನಡೆದಿದೆ. ಹುಡುಗನೊಬ್ಬನ biographyಯನ್ನ ಮತ್ತೆ ನಿರೂಪಿಸುವಾಗ ಗೊತ್ತಾಗ್ತಿದೆ, ಈ ಸಹಜೀವಗಳ ಒಳತೋಟಿಗಳು ಹೇಗೆಲ್ಲ ಇರ್ತವಲ್ಲ ಅಂತ…

~ ಕಂತು 1 ~

ಒಂದೇ ಸಮ ಮಳೆ. ನಾನು ಕಾಯುತ್ತ ನಿಂತಿದೇನೆ ಅನ್ನುವುದಷ್ಟೆ ಗೊತ್ತು. ಜೀನ್ಸು ಟೀ ಷರ್ಟುಗಳ ಹದಿ ಹುಡುಗ ಹುಡುಗಿಯರು ನನ್ನ ನೋಡಿಕೊಂಡು ಕಿಸಕ್ಕನೆ ನಕ್ಕು ಹೋಗ್ತಿರುವುದು ಕಾಣುತ್ತಿದೆ. ಸರಿಯೇ. ಬೆಂಗಳೂರಿನ ಆಧುನಿಕ ಏರಿಯಾದ ಕಾಫಿ ಬಾರಿನ ಮುಂದೆ ನಾನು ಹೀಗೆ ಏಲಿಯನ್ನನ ಹಾಗೆ ನಿಂತಿರುವಾಗ, ಅವರು ನಗಬಾರದೆಂದರೆ ಹೇಗೆ?
ನಾನು ನಿಂತಿದ್ದೇನೆ. ಅರೆಪಾರದರ್ಶಕ ಅಡ್ಡ ಪಂಚೆ, ಅದು ಬೀಳದಂತೆ ದಪ್ಪನೆ ಬೆಲ್ಟು ಹೊಟ್ಟೆಗೆ ಸುತ್ತಿಕೊಂಡು, ಮೇಲೊಂದು ಬಿಳಿ ಷರಟು. ಈ ಗೆಟಪ್ಪಿಗೆ ಮತ್ತಷ್ಟು ರಂಗು ತುಂಬಲು ಹಣೆ ಮೇಲೆ ಮೂರು ಪಟ್ಟೆ. ಅದು ಕೂಡ ಮಳೆ ಹನಿ ಎರಚಿ, ಕದಡಿ ಆಕಾರಗೆಟ್ಟು ಕೆನ್ನೆ ಮೇಲೆ ಹರಿದಿದೆ. ಈ ಅವತಾರದಲ್ಲಿ ನಾನು ಪಕ್ಕಾ ದೇವರ ದಲ್ಲಾಳಿ ಹಾಗೆ- ಅದೇ ಪೂಜಾರಿಗಳು ಅಂತಾರಲ್ಲ ಹಾಗೆ ಕಾಣ್ತಿದೇನೆ. ಹಾಗೆ ಕಾಣ್ಬೇಕು ಅನ್ನೋದು ನನ್ನ ಉದ್ದೇಶ ಕೂಡ.
ಇದೆಲ್ಲ ಅಪ್ಪ ಅಮ್ಮನ ರಗಳೆ. ಇವತ್ತಲ್ಲ ನಾಳೆ ನಾನು ಮದುವೆಯಾಗಲು ಒಪ್ಪಬಹುದು ಅಂದುಕೊಂಡಿದಾರೆ. ಹುಡುಗಿಯನ್ನೊಮ್ಮೆ ಖಾಸಗಿಯಾಗಿ ಮೀಟ್ ಮಾಡಿದರಾದರೂ ಮನಸು ಬದಲಾಯಿಸಬಹುದು ಅನ್ನೋ ಯೋಚನೆ ಬಹುಶಃ. ಅದಕ್ಕಾಗೇ ಇವತ್ತಿನ ಈ ಭೇಟಿ. ಅವಳಾಗೇ ನನ್ನ ರಿಜೆಕ್ಟ್ ಮಾಡುವ ಹಾಗೆ ಆಗಬೇಕು ಅನ್ನೋದು ನನ್ನ ಪ್ರಾಮಾಣಿಕ ಬಯಕೆ. ಈ ವೇಷವೆಲ್ಲ ಆ ನಿಟ್ಟಿನ ಪ್ರಯತ್ನವೇ.

ಮಳೆ ಸುರೀತಲೇ ಇದೆ. ತಲೆ ಮೇಲೆ ಕಾಫಿಬಾರಿನ ಮುಂಚಾಚಿದ ಛಾವಣಿ. ರಸ್ತೆಗೆ ಬಿದ್ದು ಸಿಡೀತಿರುವ ಹನಿ ಮಾತ್ರದಿಂದಲೇ ತೊಯ್ದು ಹೋಗ್ತಿದೇನೆ. ಬಟ್ಟೆ ಒದ್ದೆಯಾಗಿ ಮೈಗಂಟಿ ಫಜೀತಿ. ನನ್ನ ಅಸಂಗತ ವೇಷ ನೋಡಿ ಮಜಾ ತೊಗೊಳ್ತಿರುವ ಜನಗಳ ನಡುವೆ ಅವಳೊಬ್ಬ ಹುಡುಗಿ. ನನ್ನ ಅರೆಪಾರದರ್ಶಕ ಬಟ್ಟೆಯೊಳಗೆ ಅವಳ ಕಣ್ಣು ಹಾಯುತ್ತಿದೆ. ‘ದಪ್ಪ ಬಟ್ಟೆಯಲ್ಲಿ ಬಾಕ್ಸರ್ ಚಡ್ಡಿಗಳನ್ನ ಡಿಸೈನ್ ಮಾಡಿದವನಿಗೆ ಶರಣು’ ಅಂದುಕೊಳ್ತಾ ನಿಸೂರಾಗುತ್ತೇನೆ.
ಹೀಗೆ ಎಲ್ಲದರಿಂದ ದೂರಾಗಿ ಎಲ್ಲವನ್ನೂ ಒಳಗೊಳ್ಳುತ್ತ ನಿಂತ ಹೊತ್ತು, ತಾನೇ ಓಡ್ತಿದೆಯೇನೋ ಅನ್ನುವಂತಿದ್ದ ರಸ್ತೆ ಇದ್ದಕ್ಕಿದ್ದ ಹಾಗೆ ನಿಂತುಬಿಟ್ಟಿದೆ. ನೆನೆಯುತ್ತ ನಿಂತ ಬೈಕುಗಳಿಂದ ಅಸಹನೆಯ ಹಾರನ್. ಮುಂದಿನ ಸಾಲಿನ ಕಾರ್ ಹೆಡ್‌ಲೈಟುಗಳು ಡಿಪ್‌ಡಿಮ್ಮಾಗಿ ಚಡಪಡಿಸ್ತಿವೆ. ನಡೂ ಮಧ್ಯದಲ್ಲಿ ಆ ಹುಡುಗಿ, ಅರೆ! ನಾನಿಲ್ಲಿ ಹೀಗೆ ಮಳೆ ನೀರು ಸಿಡಿಸಿಕೊಂಡು ಕಾಯುತ್ತ ನಿಂತಿರುವಾಗ ಅವಳು ಅಲ್ಲೇನು ಮಾಡ್ತಿದಾಳೆ? ಬೆಂಗಳೂರಂಥ ಬೆಂಗಳೂರು ಟ್ರಾಫಿಕ್ಕನ್ನೂ ಹಾಗೆ ನಿಲ್ಲಿಸಬಲ್ಲ ತಾಕತ್ತು ಹುಡುಗಿಯರಿಗೆ ಮಾತ್ರ ಇರಬಲ್ಲದೇನೋ.
ಅವಳು ಚಿಕ್ಕದೊಂದು ನಾಯಿ ಮರಿಯನ್ನ ಅವುಚಿ ಹಿಡಿದುಕೊಂಡಿದಾಳೆ. ಸುರಕ್ಷಿತ ಜಾಗ ತಲುಪಿಸಿ ತಾನು ಸರಕ್ಕನೆ ಫುಟ್‌ಪಾತ್ ಏರುತ್ತಿದ್ದಾಳೆ. ಅಲ್ಲೊಂದು ಛಾವಣಿ ಕೆಳಗೆ ನಿಂತು ಕೂದಲನ್ನ ಅಲೆ ಅಲೆ ಆಡಿಸುತ್ತಾ ಕೈ ಮಾಡುತ್ತ ‘ಸಾರಿ’ ಕೇಳ್ತಿದಾಳೆ. ಯಾರಿಗೆ? ಹೊಂಡಾ ಸಿವಿಕ್‌ನ ಚಾಲಕನಿಗೆ. ಹಿಂದಿನ ಸೀಟಿಂದ ಒಬ್ಬ ಠೊಣಪ ಮುಂದೆ ಬಾಗಿ ‘ವೆಲ್ ಡನ್ ಯಂಗ್ ಲೇಡಿ’ ಅನ್ನುತ್ತಿದ್ದಾನೆ. ಹ್ಹ! ಏನೇ ತೊಂದರೆ ಕೊಟ್ಟರೂನು ಹುಡುಗಿಯರಿಗೆ ಎಕ್ಸ್‌ಕ್ಯೂಸ್ ಸಿಕ್ಕುಹೋಗ್ತದೆ. ಅದರಲ್ಲೂ ಹುಡುಗಿ ಚೆಂದವಿದ್ದರಂತೂ ಕೇಳುವುದೇ ಬೇಡ! ನನ್ನಲ್ಲಿ ಮತ್ತೂ ಏನಾದರೊಂದು ಯೋಚನೆ ಮೊಳೆಯುವ ಮೊದಲೇ ಬೆನ್ನ ಮೇಲೆ ಯಾರೋ ಹಗೂರ ತಟ್ಟಿದ ಅನುಭವ. ತಿರುಗಿದಾಗ ಕಂಡಿದ್ದು ಬಿಳಿ ಚೂಡಿದಾರ್ ತೊಟ್ಟ ಕಿನ್ನರಿಯಂಥ ಹುಡುಗಿ.
ತುಸುವೇ ಕೊರಳು ಕೊಂಕಿಸಿ, ಕೈ ಮುಂಚಾಚಿ ತನ್ನ ಪರಿಚಯ ಹೇಳಿಕೊಂಡಳು.
‘ಹೆಲೋ… ನಾನು ಮೀರಾ…’
ಓಹ್! ನಾನು ಕಾಯಬೇಕಿದ್ದುದು ಇವಳಿಗೇನಾ?

ಒಂದು ಸಾಫರ್‌ಜಾದೆ ಕವಿತೆ

ಸಾಫರ್‌ಜಾದೆ ಇರಾನಿ ಕವಯತ್ರಿ. ನೆಟ್ಟಲ್ಲಿ ಜಾಲಾಡುವಾಗ ಸಿಕ್ಕವಳು. ಈಕೆಯ ಕವಿತೆಗಳನ್ನೋದುವಾಗೆಲ್ಲ, ಮತ್ತೆ  ಬಹಳಷ್ಟು ದೇಶಗಳ- ಭಾಷೆಗಳ ಹೆಣ್ಣುಗಳನ್ನೋದುವಾಗೆಲ್ಲ, ಅರೆ! ನಮ್ಮ ಹಾಗೇನೇ… ಇವರೂ ನಮ್ಮಂತೇನೇ… ಅನ್ನಿಸಿ ಸಂಭ್ರಮ ಮತ್ತು ವಿಷಾದ. ಗೆಳೆಯನೊಬ್ಬನಿಗೆ ಈ ಸಾಮ್ಯತೆಯನ್ನು ಹೇಳಿದಾಗ ‘ನಾನ್‌ಸೆನ್ಸ್’ ಅಂದುಬಿಟ್ಟ. ಪರವಾಗಿಲ್ಲ. ಸಾಫರ್‌ಜಾದೆಯನ್ನ ಕನ್ನಡಕ್ಕೆ ತಂದುಕೊಂಡು ಸುಮ್ಮನಿದ್ದೆ. ಅವುಗಳಲ್ಲಿ ಕೆಲವು ಇಲ್ಲಿ ಕಂಡರೂ ಕಾಣಿಸಬಹುದು. ಸಾಮ್ಯತೆ, ನಿಮಗೇ ಗೊತ್ತಾಗುವುದು.

ಮೊದಲ ಮಿಡಿತದ ಜಾಗದಲ್ಲಿ...

ನನ್ನ ಹುಟ್ಟುನೆಲವನ್ನ ನೋಡಿಲ್ಲ.
ಅವಳೆಲ್ಲ ಒಳಗುದಿಗಳ ಸಹಿತ ಅಮ್ಮನ್ನ
ಇರಿಸಲಾಗಿತ್ತಲ್ಲ, ಆ ಮನೆಯನ್ನ.
ಅಲ್ಲಿನ್ನೂ ಜೀವಂತವಿದೆ
ನನ್ನ ಪುಟ್ಟ ಎದೆಯ ಮೊದಲ ಬಡಿತ
ಮೊದಲ ಅಳುವಿನ ಸದ್ದು
ಇಟ್ಟಿಗೆ ಬಿರುಕಲ್ಲಿ ಸಿಲುಕಿಕೊಂಡಿದೆ…
ಅಲ್ಲಿನ್ನೂ ಜೀವಂತವಿದೆ,
ಆ ಬಾಗಿಲಲ್ಲಿ, ಗೋಡೆಗಳಲ್ಲಿ
‘ಹೆಣ್ಣು ಮಗು’ ಅಂದ ಮಖೇಡಿ ದನಿಗೆ
ದುರುಗುಟ್ಟಿದ ಅಪ್ಪ, ಅಜ್ಜನ ದೃಷ್ಟಿ
ತಪ್ಪಿಸಿ
ಅಮ್ಮನ ಕಣ್ಣಿಂದ ಎರಚಿತ್ತಲ್ಲ
ಆ ಅವಮಾನದ ನೋಟ….
~
ನನ್ನ ಹುಟ್ಟೂರಿಗೆ
ಮೊದಲ ಯಾತ್ರೆ ಹೋಗ್ತೇನಲ್ಲ,
ಅಲ್ಲಿನ ಗೋಡೆಗಳ ಮೇಲಿಂದ
ಅಮ್ಮನ ಅವಮಾನಿತ ನೋಟದ ಕಲೆಯನ್ನ
ಒರೆಸಿ ಹಾಕುತ್ತೇನೆ
ಮೊದಲ ಮಿಡಿತದ ಜಾಗದಲ್ಲಿ ನಿಂತು,
ಈ ಕಾಂತಿಯುಕ್ತ ಕೈಗಳಿಗೆ
ಮುಷ್ಟಿಕಟ್ಟುವ ತೆವಲಿಲ್ಲ
ಬಡಿವ, ಕುಟ್ಟುವ ಮೋಹವಿಲ್ಲ
ಅರಚಬೇಡಿ ಸುಮ್ಮನೆ!
ಕೊಲ್ಲುವುದು ನನಗೆ ಹೆಮ್ಮೆಯಲ್ಲ
– ಎಂದೆಲ್ಲ ಜಗತ್ತಿಗೆ ಹೇಳಬೇಕಿದೆ…

ಮೇಲೇಳುತ್ತೇನೆ ನಾನು

ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನ
ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ
ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ,
ದೂಳ ಕಣವಾಗಿಯಾದರೂನು
ಮೇಲೇಳುತ್ತೇನೆ ನಾನು

ನನ್ನ ಭಾವಭಂಗಿ ಬೇಸರವೇನು?
ಮುಖ ಸೋತು ಕುಳಿತಿರುವೆ ಯಾಕೆ?
ಕೋಣೆ ಮೂಲೆಯಲ್ಲಿ ನೂರು
ತೈಲಬಾವಿಗಳನಿರಿಸಿಕೊಂಡಂಥ
ಠೀವಿ ನನ್ನ ನಡೆಯಲಿದೆಯೆಂದೆ?

ಸೂರ್ಯರಂತೆ, ಚಂದ್ರರಂತೆ
ಕಡಲ ಮಹಾಪೂರದಂತೆ
ಚಿಮ್ಮುಕ್ಕುವ ಭರವಸೆಯಂತೆ
ಮೇಲೇಳುತ್ತೇನೆ ನಾನು

ನಾನು ಮುರಿದು ಬೀಳುವುದ ನೋಡಬೇಕೆ?
ತಲೆತಗ್ಗಿಸುವುದನ್ನು, ಕಣ್ ಕುಗ್ಗುವುದನ್ನು?
ಎದೆಯ ಚೀರಾಟಕ್ಕೆ ಸೋತು
ಕುಸಿದು ಬೀಳುವುದನ್ನು?

ನನ್ನ ಗತ್ತು ನೋಯಿಸಿತೆ ನಿನ್ನ?
ಹಿತ್ತಲಲ್ಲಿ ಚಿನ್ನದ ಗಣಿ
ಹೂತಿಟ್ಟುಕೊಂಡಂಥ ನನ್ನ ನಗುವನ್ನ
ಅರಗಿಸಿಕೊಳ್ಳಲು ಕಷ್ಟವಾದೀತು ನಿನಗೆ

ಬರಿ ಮಾತಲ್ಲೆ ಹೊಡೆಯಬಹುದು,
ಕಣ್ಣಲ್ಲೆ ಸೀಳಬಹುದು
ದ್ವೇಷದಲೆ ನೀ ನನ್ನ ಕೊಲ್ಲಬಹುದು
ಆದರೂನು ಗಾಳಿಯಂತೆ
ಮೇಲೇಳುತ್ತೇನೆ ನಾನು

ನನ್ನ ಹಾವ್ಭಾವ ಮಂಕಾಗಿಸುವುದೆ ನಿನ್ನ?
ತೊಡೆಗಳ ನಡುವೆ ವಜ್ರವಿರುವ ಹಾಗೆ
ನರ್ತಿಸುವ ನನ್ನ ಬಗೆ
ನಿನಗೆ ಅಚ್ಚರಿ ತರಬಹುದು

ನಾಚಿಗ್ಗೆಟ್ಟ ಚರಿತ್ರೆಯ ಗುಡಿಸಲಿಂದ
ಮೇಲೇಳುತ್ತೇನೆ ನಾನು
ನೋವಲ್ಲೆ ಬೇರುಬಿಟ್ಟ ಭೂತದಿಂದ
ಮೇಲೇಳುತ್ತೇನೆ ನಾನು
ನಾನೊಂದು ವಿಶಾಲ ಕಪ್ಪು ಸಾಗರ
ಉಬ್ಬುತ್ತ, ಮಾಯುತ್ತ ಪೂರಗಳ ಸಹಿಸುತ್ತೇನೆ
ಭಯದ ಕರಾಳ ರಾತ್ರಿಗಳ ಹಿಂದಿಕ್ಕಿ
ಮೇಲೇಳುತ್ತೇನೆ ನಾನು
ನಿಚ್ಚಳ ಕಾಣುವ ಅರುಣೋದಯದ ಬೆಳಕಲ್ಲಿ
ಮೇಲೇಳುತ್ತೇನೆ ನಾನು
ಪೂರ್ವಜರು ನನಗಿತ್ತ ಕೊಡುಗೆಗಳ ಹೊತ್ತು
ಗುಲಾಮರೆಲ್ಲರ ಕನಸು, ಭರವಸೆಯಂತೆ
ಮೇಲೇಳುತ್ತೇನೆ
ಮೇಲೇಳುತ್ತೇನೆ
ಮೇಲೇಳುತ್ತೇನೆ

– ಮಾಯಾ ಏಂಜೆಲೋ

ಬೇಳೂರು ಸುದರ್ಶನರ ಕವಿತೆ, ಅನುಮತಿಯಿಲ್ಲದೆ…

ಇದು ನನ್ನ `ಸಿಡಿಲಾಗಲು ಕಾದಿದ್ದೇನೆ’ ಕವಿತೆಗೆ ಸುದರ್ಶನ ಬೇಳೂರು ಅವರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ಕವಿತೆ. ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದು!! ನನಗಿಷ್ಟವಾಯ್ತು ಅಂತಲೇ ನಿಮ್ಮ ಜತೆ ಹಂಚಿಕೊಳ್ತಿದೇನೆ, ಅವರ ಅನುಮತಿ ಪಡೆಯದೆ… ಅವರು ಮನ್ನಿಸಿಯಾರು ಎನ್ನುವ ಭರವಸೆಯಿಂದ!     ~ಚೇತನಾ

ನನಗೆ ಶಬ್ದಗಳ ಪರಿಚಯವಿದೆ
ಎಂದ ಮಾತ್ರಕ್ಕೆ
ಮಾತನಾಡುತ್ತೇನೆ ಎಂದೆಲ್ಲ
ಖುಷಿಪಡಬೇಡಿ. ನಾನು
ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು.

ನನಗೆ ನಿಶ್ಶಬ್ದದ ಬಗ್ಗೆ ಒಲವಿದೆ
ಎಂದಮಾತ್ರಕ್ಕೆ
ಸುಮ್ಮನಿರುತ್ತೇನೆ ಎಂದೆಲ್ಲ
ದುಃಖಿಸಬೇಡಿ. ನಾನು
ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು.

ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ
ನೀವು ದುಃಖಿಸುತ್ತಿದ್ದರೆ ಮಾತನಾಡುತ್ತೇನೆ
ಎಂಬ ಹೊಂದಾಣಿಕೆಗೂ ಬಂದಿದೆ ನನ್ನ
ಬದುಕು.
A compromise which is much hated
Yet
Inevitable

 ಸುದರ್ಶನ ಬೇಳೂರು

ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…

ಮೊನ್ನೆವರೆಗೂ ಸೃಜನ್ ಚೆಂದದ ಚಿತ್ರಗಳನ್ನು ಬರೆಯುತ್ತಾರೆ, ಸೊಗಸಾದ ವಿನ್ಯಾಸ ಮಾಡುತ್ತಾರೆ ಎಂದಷ್ಟೆ ಗೊತ್ತಿದ್ದ ನನಗೆ, ಅವರು ಕಥೆಯನ್ನೂ ಕವನವನ್ನೂ ಬರೆಯುವುದಲ್ಲದೆ ಒಳ್ಳೆಯ ಅನುವಾದವನ್ನೂ ಮಾಡುತ್ತಾರೆಂದು ತಿಳಿಯಿತು. ನಮ್ಮ ವಾರಗೆಯ ಬರಹಗಾರರ ಬಗ್ಗೆ ಇರುವ ಅಜ್ಞಾನಕ್ಕೆ ನಾಚಿಕೆಯಾಗುವುದರ ಜೊತೆಗೇ ಓದಿನ ಕೊರತೆ ಮುಖಕ್ಕೆ ಹೊಡೆದಂತಾಯ್ತು!

ಈ ಜ್ಞಾನೋದಯವಾಗಿದ್ದು, ಸೃಜನ್ ಅವರ ‘ಯಶೋಧರೆ, ಈ ವ್ಯಥೆಯೇತಕೆ?’ ಎಂಬ ಅನುವಾದಿತ ಕವಿತೆಯನ್ನೋದಿದಾಗ.
ಈ ಕವಿತೆಯ ಮೂಲ ತೆಲುಗಿನದು. ಅಲ್ಲಿನ ಸ್ತ್ರೀ ಸಂವೇದನೆಯ ಕವಯತ್ರಿ ಡಾ.ಜಯಪ್ರಭಾ ಅವರ ಅದೇ ಹೆಸರಿನ ಕವನ ಸಂಕಲನದ ಹಲವು ಕವಿತೆಗಳನ್ನು ಸೃಜನ್ ಕನ್ನಡಕ್ಕೆ ತಂದಿದ್ದಾರೆ.
ಈ ಯಶೋಧರೆಯಂಥವರು ಎಲ್ಲ ನೆಲದ, ಗಾಳಿಯ, ಜೀವನ ಶೈಲಿಯ ಹೆಣ್ಣುಮಕ್ಕಳನ್ನೂ ಏಕಕಾಲದಲ್ಲಿ, ಬಹುತೇಕ ಏಕರೀತಿಯಲ್ಲಿ ತಟ್ಟುತ್ತಾಳೆಂಬುದು ನನಗೆ ವಿಸ್ಮಯವಾಗಿ ಕಾಡಿದೆ. ಯಾಕೆಂದರೆ, ‘ಪ್ರತಿ ಹೆಣ್ಣೂ ತನ್ನಷ್ಟಕ್ಕೆ ತಾನೊಂದು ದ್ವೀಪ’ ಎನ್ನಲಾಗುತ್ತದೆ. ಹೀಗೆ ಪ್ರತ್ಯೇಕ ಅಸ್ತಿತ್ವದ ನಡುವೆಯೂ ಹೆಣ್ಣುಭಾವದ ಏಕಸೂತ್ರ ವಿಭಿನ್ನ ದೇಶಕಾಲಗಳ ನಮ್ಮನ್ನು ಬೆಸೆಯುತ್ತದೆ, ಪರಸ್ಪರ ಸ್ಪಂದಿಸುವಂತೆ, ಮಿಡಿಯುವಂತೆ ಮಾಡುತ್ತದೆ.

ಜಯಪ್ರಭಾ ಅವರ   ಕವನವನ್ನು ಸೃಜನ್ ಅನುವಾದದ ಮೂಲಕವೂ ಉಳಿದವುಗಳಲ್ಲಿ ೨೨ ಕವಿತೆಗಳನ್ನು ನೆಟ್ಟಿನಲ್ಲಿ ಇಂಗ್ಲೀಶಿನಲ್ಲೂ ಓದಿದೇನೆ. ಉಳಿದಂತೆ, ನನ್ನ ಮಿತಿ ಚಿಕ್ಕದು.

 ಜಯಪ್ರಭಾ ಅವರು ಈವರೆಗೆ ಒಟ್ಟು ಏಳು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಕೆಲವು ಇಂಗ್ಲಿಶ್, ಹಿಂದೀ ಭಾಷೆಗಳಿಗೆ ಅನುವಾದಗೊಂಡಿವೆ. ಒಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಹಾಗೂ ಎಮ್.ಫಿಲ್ ಪದವಿಗಳನ್ನು ಪಡೆದಿರುವ ಇವರು ಅದಕ್ಕಾಗಿ ಸಂಶೋಧನೆ ನಡೆಸಿದ್ದು ಕೂಡ ಸ್ತ್ರೀಕೇಂದ್ರಿತ ವಿಷಯಗಳ ಕುರಿತೇ. ತಾಯ್ನುಡಿಯ ಮೇಲೆ ಅಪಾರ ಹಿಡಿತವಿರುವ ಜಯಪ್ರಭಾ, ಎರಡು ವರ್ಷ ಅಮೆರಿಕೆಯ ವಿಶ್ವವಿದ್ಯಾಲಯವೊಂದರಲ್ಲಿ ತೆಲುಗು ಭಾಷೆ ಹಾಗು ಸಂಸ್ಕೃತಿ ಕುರಿತು ಅಧ್ಯಾಪನ ನಡೆಸಿದ್ದರು. ೧೯೯೧ರಿಂದೀಚೆಗೆ ಸಂಪೂರ್ಣವಾಗಿ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಳ್ಳುವ ಬಯಕೆಯಿಂದ ಶಿಕ್ಷಣಕ್ಷೇತ್ರದ ದುಡಿಮೆಗೆ ವಿದಾಯ ಹೇಳಿದರು.

– ಈ ಎಲ್ಲ ಸಂಗತಿ ತಿಳಿದಿದ್ದು ಸೃಜನ್ ಅವರಿಂದ. ಉಳಿದಂತೆ, ಅಂತರ್ಜಾಲ ತಾಣದ ಮಾಹಿತಿ.
ಓದಬೇಕೆನ್ನುವ ಅದಮ್ಯ ಆಸೆಯ ಹೊರತಾಗಿ ಸಾಹಿತ್ಯ ಕ್ಷೇತ್ರದ ಅಕ್ಷರಮಾಲೆಯೂ ಗೊತ್ತಿಲ್ಲದ ನನಗೆ ಇಂತಹ ಸ್ನೇಹಿತರೇ ಗೈಡ್ ಗಳು ಎಂದರೆ ಅತಿಶಯವಲ್ಲ.

ಇರಲಿ. ಸದ್ಯಕ್ಕೆ,
ಸೃಜನ್ ಅನುವಾದಿಸಿರುವ ಜಯಪ್ರಭಾ ಅವರದೊಂದು ಕವಿತೆಯನ್ನು ಓದಿಕೊಳ್ಳೋಣ…           

ಸೃಜನ್ ತೆಲುಗಿನ ಇತರ ಪ್ರಮುಖ ಕವಿಗಳನ್ನೂ ಕನ್ನಡಕ್ಕೆ ಪರಿಚಯಿಸಿದ್ದಾರೆ. ಅವನ್ನು ಓದುವ ಅವಕಾಶ ಸಿಕ್ಕಿದ್ದು ಸಂತಸ. ಮುಂದೆಂದಾದರೂ ನಿಮ್ಮೊಂದಿಗೆ ಅವನ್ನೂ ಹಂಚಿಕೊಳ್ಳುವೆ.

ಯಶೋಧರೆ ಈ ವ್ಯಥೆ ಏತಕೆ?

ಯಶೋಧರೆ ಈ ವ್ಯಥೆ ಏತಕೆ?
ಅವರು ಸಂತರು, ಯೋಗಿಗಳು
ಆವರಿಸದು ಚಿಂತೆ ಎಂದೂ ಅವರನ್ನು

ಹುಟ್ಟು ಸಾವಿನ ಭಯವಿರುವುದಿಲ್ಲ
ಬೋಧಿ ವೃಕ್ಷದ ಕೆಳಗೆ
ಜ್ಞಾನೋದಯವಾಗುತ್ತದೆಯೆಂದು
ಅವರಿಗೆ ಮೊದಲೇ ಗೊತ್ತಿತ್ತು

ಆ ಅರ್ಧ ರಾತ್ರಿಯ ಅನಂತ ಯಾತ್ರೆಯ ಆರಂಭ
ಗೊತ್ತಿಲ್ಲದ್ದು ನಿನಗೇ ಕಣೇ
ಯಶೋಧರೆ ಈ ವ್ಯಥೆಯೇತಕೆ ಹೇಳೆ?

ಗೋಡೆಗೊರಗಿ ಗವಾಕ್ಷಿ ಕಡೆ
ಕಣ್ಣೀರಿನ ನೋಟವೇಕೆ?
ನಿನಗೆ ಬೆಳಗೆಂದರೆ ಭಯವೇ ಗೆಳತಿ?
ಹೋಗಲಿ ಬಿಡು
ನಿನ್ನ ಕಾಯುವಿಕೆ ವ್ಯರ್ಥವಾಗುವುದಿಲ್ಲ
ಎಂದೋ ಒಂದು ದಿನ ದೀಕ್ಷೆಪಡೆದ ಕಾವಿಧಾರಿಯೊಬ್ಬ
ಭಿಕ್ಷಾಪಾತ್ರೆ ಹಿಡಿದು
ನಿನ್ನ ಮನೆಯೆದುರು ಕೈಚಾಚಿ ಬರುತ್ತಾನೆ

ಶಿಥಿಲ ದೇಹದಿಂದ
ದೀನ ಮೊಗದಿಂದ ನೀನು
ಎದಿರುಗೊಳ್ಳುತ್ತೀಯ

ಯಾವ ಜೀವನವನ್ನು ಭಿಕ್ಷೆ ಹಾಕುತ್ತೀಯೆಂದು
ಅವರ ಮನದಲ್ಲೆಲ್ಲೋ ಒಂದು ಕಡೆ ಇರುತ್ತದೆ ಬಹುಶಃ
ಯಶೋಧರೆ ಈ ವ್ಯಥೆ ಏತಕೆ?
ಅವರು ಸಂತರು ಯೋಗಿಗಳು
ಚಿಂತೆ ಆವರಿಸುವುದಿಲ್ಲ ಅವರನ್ನು
ಹುಟ್ಟು ಸಾವಿನ ಭಯವಿರುವುದಿಲ್ಲ

ಅಷ್ಟಾಂಗ ಮಾರ್ಗದಲ್ಲಿ ನೀನು ಮಾತ್ರ
ಹಾಗೆ ತಾರೆಗಳನ್ನು ನೋಡದಿರು ಯಶೋಧರೆ
ನೀನಿನ್ನು ತ್ಯಾಗಗಳನ್ನೂ ಮಾಡದಿರು ಗೆಳತಿ