ಬ್ಯಾಕ್ ಟು ಬ್ಯಾಕ್ ಬೊಗಳೋ ಕಥೆಗಳು

ಸುಮ್ಮನೆ ಮೈ ಮೇಲೆ ಇರುವೆ ಬಿಟ್ಕೊಳ್ಳೋ ನನ್ನತನದ ವ್ಯರ್ಥ ಪ್ರಲಾಪ ಅರಿವಾದ ಹೊತ್ತಲ್ಲಿ ಒಂದರ ಹಿಂದೆ ಮತ್ತೊಂದು ನೆನಪಾದ ಕಥೆಗಳಿವು. ಅಥವಾ ಈ ಕಥೆಗಳು ನೆನಪಾದ ಬೆನ್ನಲ್ಲೇ ನನ್ನ ರೀತಿಯ ವ್ಯರ್ಥತೆ ಅರಿವಿಗೆ ಬಂತು ಅನ್ನಲೂಬಹುದು. ತಾವೋ ಹೇಳುತ್ತೆ, ಸುಮ್ಮನಿರು. ಪ್ರತಿಯೊಂದೂ ತನ್ನ ಪಾಡಿಗೆ ನಡೆಯುತ್ತೆ. ಹಾಗಂತ ನೀನು ನಿಜವಾಗ್ಲೂ ಸುಮ್ಮನಿರಬೇಕು ಮತ್ತೆ! ಕಾಲದ ಹರಿವಿಗೆ ನಿನ್ನ ಸಂಪೂರ್ಣವಾಗಿ ಕೊಟ್ಟುಕೋಬೇಕು ಮತ್ತೆ!

~ ಕಥೆ ೧ ~
ಅದೊಂದು ಬೀದಿ ನಾಯಿ.
ಅದು ತನ್ನದೇ ಅಂತ ಅಂದುಕೊಂಡಿರುವ ಬೀದಿಯ ಮೂಲೆಯೊಂದರಲ್ಲಿ ಮುದುಡಿಕೊಂಡು ಮಲಗಿರುತ್ತೆ. ಯಾರಾದರೂ ಅಪರಿಚಿತ ದಾರಿಹೋಕ ಹಾದು ಹೋದರೆ ವೀರಾವೇಶದಿಂದ ತನ್ನ ನಾಲ್ಕೂ ಕಾಲುಗಳನ್ನೂರಿ ನಿಂತು ತಲೆ ಎತ್ತರಿಸ್ಕೊಂಡು “ಊ…………………ಅವ್….ವವ್ವವೌ…..” ಅಂತ ಬೊಬ್ಬೆ ಹೊಡೆಯುತ್ತೆ.
ಬೀದಿ ಜನ ಬಾಗಿಲ ಸಂದಿ ಇಂದ ಹಣಕಿಯೋ ಕಿಟಕಿಯಾಚೆ ಕಣ್ತೂರಿಯೋ ನೋಡಿ ಬಯ್ದುಕೊಳ್ತಾರೆ, “ಛೆ! ಇದೆಲ್ಲೀ ಪ್ರಾರಬ್ಧ!!” ಆದರೆ ಅವರ ಹಣಕುತಲೆಗಳನ್ನ ಕಂಡು ನಾಯಿ ಅಂದುಕೊಳ್ಳುತ್ತೆ, “ಓಹೋ, ನನ್ನ ಬೀದಿ ಕಾಯೋ ಕೆಲಸ ಇವರಿಗೆ ಮೆಚ್ಚುಗೆಯಾಗಿದೆ!” ಗಡಿಯರದ ಮುರಿದ ಲೋಲಕದ ಹಾಗೆ ಬಾಲವನ್ನೊಮ್ಮೆ ಬೀಸಿ ಮತ್ತೆ ಮುದುಡಿ ಮಲಗಿಬಿಡುತ್ತೆ, ಬೆಳಗ್ಗೆ ಅವರೆಲ್ಲರ ಮನೆಗಳಿಂದ ಹೊರಬೀಳಬಹುದಾದ ತಂಗಳಿನ ಕನಸು ಕಾಣುತ್ತಾ.
ಆ ನಾಯಿಗೆ ಯಾರೂ ಹೇಳಿಲ್ಲ, ನೀನು ಈ ಬೀದಿಯನ್ನ ಕಾಯಬೇಕಂತ. ಆದರೂ ತಾನು ಸುಮ್ಮಸುಮ್ಮನೆ ಆ ಹೊಣೆಯನ್ನ ನೆತ್ತಿಗೇರಿಸಿಕೊಂಡಿದೆ. ಯಾರಿಗೂ ಬೇಕಿಲ್ಲ, ಆದರೂ ತನ್ನ ಕರ್ತವ್ಯ ಇದು ಅಂದುಕೊಂಡಿದೆ.
ಬೇಕು, ಬೇಡ; ಹೊತ್ತು, ಗೊತ್ತುಗಳಿಲ್ಲದ ಆ ಅಷಡ್ಡಾಳ ನಾಯಿ ಇನ್ನೂ ಕೂಗ್ತಲೇ ಇದೆ.

~ ಕಥೆ ೨ ~
ಅದೊಂದು ಅಗಸನ ಮನೆ. ಅಲ್ಲೊಂದು ಕತ್ತೆ, ಮತ್ತೆ ಮತ್ತೊಂದು ನಾಯಿ.
ಒಂದು ರಾತ್ರಿ ಆ ಮನೆಗೆ ಕಳ್ಳ ಬರ್ತಾನೆ. ಕತ್ತೆಗೆ ಎಚ್ಚರ ಆಗತ್ತೆ. ನಾಯಿಯನ್ನ ತಿವಿದು, “ಏಯ್! ಕಳ್ಳ ಬಂದಿದಾನೆ, ಕೂಗು. ಅಗಸನ್ನ ಎಬ್ಬಿಸು…” ನಾಯಿ ಗೊಣಗುತ್ತೆ. “ಉಹು… ಅಂವ ಸರಿಯಾಗಿ ಅನ್ನ ಹಾಕೋದೇ ಇಲ್ಲ. ನಿನಗಂತೂ ಅಷ್ಟು ದುಡಿದು ಪೆಟ್ಟು ತಿನ್ನೋದೇ ಕೆಲ್ಸ. ತೆಪ್ಪಗೆ ಬಿದ್ದುಕೋಬಾರದಾ?”
ಪಾಪ ಕತ್ತೆ, ಎಷ್ಟಂದರೂ ಕತ್ತೆ. ನಾನೇ ಎಬ್ಬಿಸ್ತೀನಿ ಅಂದುಕೊಂಡು ಜೋರಾಗಿ ಬಡಕೊಳ್ಳುತ್ತೆ. ಕತ್ತೆಯ ಕಿರುಚಾಟಕ್ಕೆ ಹೆದರಿ ಕಳ್ಳ ಓಡಿಹೋಗ್ತಾನೆ. ಅಗಸಂಗೆ ಎಚ್ಚರವಾಗಿಬಿಡತ್ತೆ.
ಕಳ್ಳಗಿಳ್ಳ ಬಂದಿದ್ರೆ ನಾಯಿ ಕೂಗಬೇಕಿತ್ತು. ಈ ಅಪರಾತ್ರೀಲಿ ಕತ್ತೆ ಯಾಕೆ ಬಡಕೊಳ್ತಿದೆ ಅಂತ ಸಿಟ್ಟೇ ಬಂದುಬಿಡತ್ತೆ. ಸೀದಾ ಎದ್ದುಬಂದು ಕತ್ತೆಯನ್ನ ಮನಸಾರೆ ಬಡಿದು, ಹೋಗಿ ಬಿದ್ದುಕೊಳ್ತಾನೆ.
ಕತ್ತೆ ಮತ್ತೆ ಮತ್ತೆ ಕತ್ತೆಯಾಗ್ತಲೇ ಇರುತ್ತೆ.

~
ಬಹಳ ಚಿಕ್ಕವಳಿರುವಾಗ ಓದಿದ್ದ ಈ ಕಥೆಗಳ ಆಕರ ನೆನಪಿಲ್ಲ. ಈ ಎರಡನೆಯದ್ದು ಹಿತೋಪದೇಶ ಕಾಮಿಕ್ ಬುಕ್ಕಲ್ಲಿ ಓದಿದ್ದು ಅಂತ ನೆನಪು.
ಓದಿದ್ದು ಹಾಹಾಗೇ ನೆನಪಿದ್ದರೂ ಅನುಸರಿಸುವ ಗೋಜಿಗೆ ಹೋಗಿದ್ದೆನಾ?  ಬೊಗಳುವ ಕರ್ತವ್ಯ ಯಾ ಜವಾಬ್ದಾರಿ ನನ್ನದು ಅನ್ನೋ ಹುಂಬ ನಂಬುಗೆಯಲ್ಲಿ…. ಮಾಡಬೇಕಾದವರು ತಮ್ಮ ಕರ್ತವ್ಯ ಮಾಡದೆ ಸುಮ್ಮಗಿರೋದ್ರಿಂದ ನಾನು ಮಾಡೋದು ಧರ್ಮ ಅನ್ನುವ ಪೊಳ್ಳು ಹೆಚ್ಚುಗಾರಿಕೆಯಲ್ಲಿ….
ನನ್ನದೇ ಮೂರ್ಖತನದ ವೇಳೆಯಲ್ಲಿ ಎದ್ದುನಿಂತ ಪ್ರಶ್ನೆಯಿದು. ಕೆಲವು ಸಲ ನಮಗೆ ಥಿಯರಿ ಗೊತ್ತಿರತ್ತೆ. ಅದರ ಸಾಕ್ಷಾತ್ಕಾರ ಆಗೋದು ಮಾತ್ರ ಯಾವುದೋ ಅನೂಹ್ಯ ಹೊತ್ತಿನಲ್ಲಿ.
ಈಗ ಅನುಭವಕ್ಕೆ ಬಂದಿದೆ ಅಂತ ನಂಬಿಕೊಂಡಿದ್ದೀನಿ. ಅನುಭವದ ತಿಳಿವು ಗಟ್ಟಿಯಾಗಿ ಉಳಿಯುತ್ತೆ ಅಂದುಕೊಂಡಿದ್ದೀನಿ.

ಮೇಣದ ಚರಟ

ಹತ್ತು, ಇಪ್ಪತ್ತು… ನಲವತ್ತು ಮುಂಬತ್ತಿಗಳು!! ಮುಗಿದ ಬದುಕಿನ ಲೆಕ್ಕ. ಬೆಳಕು ಹರಡಿದ ಸಾರ್ಥಕ ಘಳಿಗೆಗಳೂ ಇವೆಯಿದರಲ್ಲಿ. ಈಗ ಉಪಯೋಗವಿಲ್ಲದ ಮೇಣದ ಚರಟದ ಹಾಗೆ ಉಳಿದಿದೀನಾ? ಯೋಚಿಸಬೇಕಿದೆ.
 
ಬೆಳಗಿಂದ ಒಂದೇ ಸಮ ಫೋನ್ ಕಾಲ್ ಗಳು. ಹರಕೆ ಹೊತ್ತಂತೆ ಶುಭ ಹಾರೈಕೆಯ ಶಾಸ್ತ್ರ ಮುಗಿಸ್ತಿದಾರೆ. ಗೊತ್ತಿರುವ ಗೆಳೆಯ ಗೆಳತಿಯರೆಲ್ಲರೂ ‘ಇನ್ನೇನು ಆಂಟಿಯಾದೆ’ ಅಂತ ಛೇಡಿಸುವವರೇ. ಹೀಗೆ ಎಲ್ಲರ ಹಾರೈಕೆಯೂ ಬಂದಿದೆ, ಬರುತ್ತಿದೆ. ಅವರಿಬ್ಬರದನ್ನ ಬಿಟ್ಟು. ‘ನನ್ನತನ ಮೀರಿದ ಜೀವ’ ಅಂದುಕೊಂಡ ವ್ಯಕ್ತಿಗಳು ಬಹಳಷ್ಟು ಸಾರ್ತಿ ಬದಲಾಗಿದಾರೆ. ಕೊನೆಗೂ ಉಳಿದವರು ಇವರಿಬ್ಬರೇ. ಇವರು ನಾನು ಬಿಟ್ಟವರಲ್ಲ, ನನ್ನ ಬಿಟ್ಟವರು. ಅರಸ ಸುಲಭಕ್ಕೆ ಸೋಲುವುದಿಲ್ಲ. ಸೋತರೆ, ಗುಲಾಮನಿಗಿಂತ ಗುಲಾಮನಾಗ್ತಾನೆ. ಪ್ರೇಮದ ಗುಲಾಮಗಿರಿ ಎಷ್ಟು ಚೆಂದ!

ನನ್ನ ಕಿವಿ ಮುಟ್ಟದ ಅವರನ್ನ ಇಷ್ಟು ಹೊತ್ತು ಕಾದಿದ್ದಾಯ್ತು. ಕಾದು ಕಾದು ಕುದಿಬಂದು ಆವಿಯಾಗತೊಡಗಿದ್ದೇನೆ. ಇನ್ನು ನಿರೀಕ್ಷೆ ಸಾಧ್ಯವಿಲ್ಲ. ಇಬ್ಬರದೂ ಒಂದೇ ಹಾದಿ. ಪರಸ್ಪರ ಸಂಬಂಧವೇ ಇರದ ಅವರಿಬ್ಬರು ನನ್ನ ಸೂತ್ರದಿಂದ ಒಂದೇ ರೇಖೆಯಲ್ಲಿರುವರಲ್ಲ? ನನ್ನ ಈಗಿನ ನಿರ್ಧಾರ ಅವರ ಕಾರಣದಿಂದ ಅಲ್ಲ ಅನ್ನೋದನ್ನ ಸ್ಪಷ್ಟ ಮಾಡಿಡಬೇಕು. ಅವರಿಗೆ ನೋವಾಗ್ತದೆ ಅಂತಲ್ಲ. ‘ನನ್ನ ಈ ಪರಿ ಪ್ರೇಮಿಸಿದ್ದಳು’ ಅನ್ನುವ ಅಹಂಕಾರ ಬರಬಾರದಲ್ಲ, ಅದಕ್ಕೆ.
 
ಇವತ್ತು ಬೆಳಗಿನ ಮೊದಲ ಕಾಲ್ ನನ್ನ ಪ್ರಿಯ ಶತ್ರುವಿನದು. ಆಮೇಲೆ ಅಮ್ಮ ಕಾಲ್ ಮಾಡಿದ್ದಳು. ವೆಂಕಟರಮಣನಿಗೆ ಪಂಚಾಮೃತ ಅಭಿಷೇಕಕ್ಕೆ ಕೊಟ್ಟಿದಾಳಂತೆ. ‘ಮನೇಲಿ ಒಂದು ದೀಪಾನಾದ್ರೂ ಹಚ್ಚು. ತಲೆಗೆ ಎಣ್ಣೆ ಇಟ್ಕೊಂಡು ನೀರು ಹಾಕ್ಕೋ’ ಅಂದಿದ್ದಳು. ಅಪ್ಪ ‘ಒಳ್ಳೇದಾಗ್ಲಿ ಕಣಮ್ಮಾ’ ಅಂದಿದ್ದ. ಅದು ಎಷ್ಟು ವಿಚಿತ್ರವಾಗಿ ಕೃತಕವಾಗಿ ಅನ್ನಿಸ್ತೆಂದರೆ, ಅಂವ ‘ಹಾಳಾಗಿ ಹೋಗು’ ಅಂದುಬಿಟ್ಟಿದ್ದರೆ ತೃಪ್ತಿಯಾಗಿ ಖುಷಿಪಡಬಹುದಿತ್ತೇನೋ. ಅವನ ದನಿಗೆ ಈ ಹಾರೈಕೆ ಒಗ್ಗುವುದೇ ಇಲ್ಲ!
 
‘ಪಾರ್ಟಿ ಯಾಕೆ ಅರೇಂಜ್ ಮಾಡಿಲ್ಲ? ನಾವು ಬಂದೇ ಬರ್ತೀವಿ ಮನೇಗೆ’ ಗೆಳೆಯರ ತಾಕೀತು. ನಾನಂತೂ ಊರಲ್ಲಿ ಇಲ್ಲವೆಂದುಬಿಟ್ಟಿದೇನೆ. ಹೇಗಿದ್ದರೂ ಅವರೆಲ್ಲ ಇವತ್ತು ರಾತ್ರಿಯೋ, ನಾಳೆ ಬೆಳಗ್ಗೆಯೋ ಸುದ್ದಿ ತಿಳಿದು ಬಂದೇಬರಬೇಕು, ಬರುತ್ತಾರೆ ಕೂಡ. ನಾನೀಗ ಈ ನನ್ನ ನೆಚ್ಚಿನ ಕಿಟಕಿ ಪಕ್ಕದ ಟೇಬಲಿನ ಮೇಲೆ ನಲವತ್ತು ಮುಂಬತ್ತಿಗಳನ್ನ ಉರಿಸುವವಳಿದ್ದೇನೆ. ಮುಂಬತ್ತಿಯ ಮೇಣದ ಹಾಗೆ ಕರಗಿಳಿದು ಹೆಪ್ಪುಗಟ್ಟೋದಿಲ್ಲ ಕಂಬನಿ. ಲಾವಾದಂತೆ ಕಣ್ಣಿಂದ ಎದೆಯೊಳಗಿಳಿದು ಸ್ಫೋಟಕ್ಕೆ ಕಾಯುತ್ತದೆ. ಎದೆಯೊಳಗೆ ಹೂತ ನೆನಪು ಕನಸುಗಳೆಲ್ಲ ಶಾಖಕ್ಕೆ ಬೇಯತೊಡಗುತ್ತವೆ. ಬೆಂದು ಬೆಂದು ಕರಗಿ ಕಳೆದುಹೋಗುತ್ತವೆ.
 
ಸ್ಫೋಟ!
ವರ್ಷಗಳ ಹಿಂದೆ ಅಂವ ಕೌನ್ಸೆಲಿಂಗಿಗೆ ಕರೆದೊಯ್ದಿದ್ದ. ‘ಎಲ್ಲಾದ್ಕೂ ಓವರ್ ರಿಯಾಕ್ಟ್ ಮಾಡ್ತಾಳೆ’ ಅಂತ. ಸೈಕಿಯಾಟ್ರಿಸ್ಟ್, ಈಕೆ ತುಂಬಾ ನಾರ್ಮಲ್ ಆಗಿದಾರೆ ಅಂತ ರಿಪೋರ್ಟ್ ಕೊಟ್ಟರು. ‘ಪ್ರತಿಭಟಿಸೋದು ಈಕೆಯ ಹುಟ್ಟುಗುಣ. ತಪ್ಪೇನಿಲ್ಲ’ ಅಂದರು. ಕರಕೊಂಡು ಹೋದವ, ‘ಇವರೆಲ್ಲ ಬಾಯಿಪಾಠದ ಡಾಕ್ಟರುಗಳು. ಪುಸ್ತಕ ನೋಡಿ ಮನಸ್ಸು ತಿಳಿಯೋಕಾಗತ್ತಾ?’ ಅಂತೇನೋ ಗೊಣಗಿದ್ದ. ಅವನ ಅವಸ್ಥೆ ನೋಡುವಾಗೆಲ್ಲ ಅವಂಗೇ ಸೈಕಿಯಾಟ್ರಿಸ್ಟರ ಅಗತ್ಯವಿದೆ ಅಂತನ್ನಿಸಿ ಹೋಗ್ತಿತ್ತು. ‘ನಿನಗಿಂತ ಜಾಸ್ತಿ ನೊಂದ….’ ಉಪನ್ಯಾಸ ಶುರುವಿಡುತ್ತಿದ್ದ. ನಾನು ಕೇವಲ ‘ನಾನು’ ಆಗಿದೇನಂತ ತಿಳಿಸಿಕೊಡಲು ಪಟ್ಟ ಪ್ರಯತ್ನವೆಲ್ಲ ಹುಸಿಹೋಗುತ್ತಿತ್ತು. ನಾನೊಂದು ಪ್ರತ್ಯೇಕ ವ್ಯಕ್ತಿ. ನಿನ್ನ ಹಾಗಲ್ಲದ, ಮತ್ಯಾರದೋ ಹಾಗಲ್ಲದ ಇಂಡಿವಿಜುವಲ್. ಪಕ್ಷಿಯ ಹಾಗೆ, ಪ್ರಾಣಿಯ ಹಾಗೆ, ಬ್ಯಾಕ್ಟೀರಿಯಾ, ವೈರಸ್ಸುಗಳ ಹಾಗೆ, ಕೋಟ್ಯಂತರ ಮನುಷ್ಯರು ಪ್ರತಿಯೊಬ್ಬರಿಗೂ ಅಸ್ತಿತ್ವವಿರುವ ಹಾಗೆ ನಾನೂ…. ಒಳಗೊಳಗೆ ಚೀರಿಕೊಳ್ಳುತ್ತಿದ್ದೆ. ಅವನ ಪ್ರೀತಿ ಉಳಿದೆಲ್ಲ ಭಿನ್ನಾಭಿಪ್ರಾಯಗಳನ್ನೂ ಮರೆಸಿಹಾಕ್ತಿತ್ತು. ಮರೆಸಿದ್ದಕ್ಕಿಂತ, ಮರುಮಾತನ್ನ ತಳ್ಳಿ ಹಾಕ್ತಿತ್ತು ಅನ್ನುವುದೇ ಸರಿಯೇನೋ?

~

ಈ ಹೊತ್ತು, ಕೊನೆಯಾಗಬೇಕನ್ನುವ ನಿಶ್ಚಯ ಹೊತ್ತು ಕುಳಿತಿದೇನೆ. ಮುಂಬತ್ತಿಗಳು ಒಂದೊಂದೇ ಹೊತ್ತುರಿದು ಕರಗಿ ಮುಗಿಯುವವರೆಗೆ, ಬರದಿರುವ ಅವನ ನಿರೀಕ್ಷೆಯನ್ನ ಮೆಟ್ಟಿನಿಲ್ಲಲು ಬಿಟ್ಟ ಹೆಜ್ಜೆಗಳನ್ನ ಎಣಿಸಿಕೊಳ್ಳಲೆ?

~

ಇವತ್ತಿಗೆ ಸರಿಯಾಗಿ ನಲವತ್ತು ವರ್ಷಗಳ ಮೇಲೊಂದು ದಿನದ ಹಿಂದೆ….
 
ಶ್ರಾವಣದ ಮಳೆ. ಬಿಡಾರದವರ ಹುಂಜ ಮೈಮುರಿದು ಕೂಗಿದ್ದೇ ಅವತ್ತು ಏಳು ಗಂಟೆಗೆ. ಆ ಹೊತ್ತಿಗೆ ಸರಿಯಾಗಿ ನಡುಮನೆಯಲ್ಲಿ ಹದಿನಾರರ ಎಳೆಬಸುರಿಗೆ ಹೆರಿಗೆ ನೋವು. ದೊಡ್ಡಮ್ಮ, ಮಂಜಿ ಅವಳ ಪಕ್ಕ ಕೂತು ‘ಸ್ವಲ್ಪ ಮುಕ್ಕು ತಾಯೀ’ ಅಂತ ಧೈರ್ಯ ಹೇಳ್ತಿದ್ದರು. ಗಾಬರಿಯಾಗಿಹೋಗಿದ್ದ ಅವಳು ಅವರು ಹೇಳಿದ ಹಾಗೇ ಕಾಲಗಲಿಸಿ ಮುಕ್ಕುತ್ತ ನೋವಿಗೆ ಚೀರುತ್ತಿದ್ದಳು. ಅಷ್ಟೇನೂ ತ್ರಾಸಾಗದೆ ಸಪೂರ ಮೈಯಿನ ಮಗು ಭೂಮಿಗಿಳಿಯಿತು. ನಾನು ‘ಹುಟ್ಟಿದ್ದೆ’. ಮಂಗಳವಾರದ ಬೆಳಗಿನ ಏಳೂಕಾಲರ ಸಮಯ. ದೊಡ್ಡಮ್ಮ ಘಳಿಗೆ ಬರೆದಿಟ್ಟರು. ನಾನಂತೂ ಅಳುತ್ತಿದ್ದೆ. ಸಜೀವವಿರುವುದರ ಸಂಕೇತವಾಗಿ ನಾನು ಅಳಲೇಬೇಕಿತ್ತು. ನನ್ನ ನೊಡಿದ್ದೇ ಅಮ್ಮನೂ ಮುಸುಗರೆಯತೊಡಗಿದ್ದಳು. ದೊಡ್ಡಮ್ಮನ ಬಾಣಲೆಯಗಲದ ಮುಖವೂ ಹಿಡಿಯಾಗಿಹೋಗಿತ್ತು. ನನ್ನ ಅಳು ಕೇಳ್ತಲೇ ನಡುಮನೆಯತ್ತ ಜೋಡಿ ಕಾಲ್ಗಳು ನಡೆದುಬಂದವು. ಬಾಗಿಲಿಗೆ ಕಿವಿಯಾನಿಸಿ, ‘ಇವ್ಳೇ’ ಅಂದವು. ದೊಡ್ಡಮ್ಮ ಬಾಯಿಬಿಡಲಿಲ್ಲ. ಮಂಜಿ ಹಗೂರ ದನಿಯಲ್ಲಿ ‘ಲಕ್ಷ್ಮಿ ಒಡೇರೇ’ ಅಂದಳು.
 
ಬಳ್ಳಿ ಕತ್ತರಿಸಿ ಅಮ್ಮನ ಜೀವದಿಂದ ನನ್ನದನ್ನ ಬೇರೆ ಮಾಡಲಾಯ್ತು. ಆ ಕ್ಷಣದಿಂದ ನಾನೊಬ್ಬಳು ಸ್ವತಂತ್ರ ವ್ಯಕ್ತಿಯಾಗಿದ್ದೆ.

( ಸಶೇಷ)

 (ಶಾಸನ ವಿಧಿಸಿದ ಎಚ್ಚರಿಕೆ: ಇದು ಏನು, ಏನಾಗಲಿದೆ ಅಂತ ನಮಗೆ ಬ್ಲಾಗೇಶ್ವರಿಯಾಣೆ ಗೊತ್ತಿಲ್ಲ. ಯಾರೂ ತಲೆಕೆಡಿಸ್ಕೊಬಾರದು.)

ಗಾಂಧಿ, ಅಪ್ಪ ಮತ್ತು ವ್ಯವಸ್ಥೆಯ ಮೇಲಿನ ದ್ವೇಷ!

ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ವ್ಯವಸ್ಥೆಯನ್ನೂ ದ್ವೇಷಿಸ್ತೇನೆ” ಅಂತ ಅಂವ ಪತ್ರ ಬರೆದಿಟ್ಟು ಹೋಗಿದ್ದ!

ಹಾಗೇನೂ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಗಾಂಧೀಜಿ ಏನಲ್ಲ. ತುಂಡು ಲಂಗೋಟಿ ಉಟ್ಟು ಉಪವಾಸ ಕುಂತ ಮಾತ್ರಕ್ಕೆ ಬಿಳಿಯರು ಓಡಿಹೋಗಿಬಿಟ್ರು ಅನ್ನೋದು ಮೂರ್ಖತನ!” ಅಣ್ಣ ವಾದಿಸ್ತಿದ್ದ. ಅಪ್ಪನ ಮುಖ ಸುಟ್ಟ ಬದನೆಕಾಯಿ ಆಗಿತ್ತು. ಮಾತಿಗೆ ಮಾತು ಬೆಳೀತು. “ಗಾಂಧೀಜಿ ಅಹಿಂಸಾವಾದಿಯಾಗಿದ್ರು, ಸಹನಾಮೂರ್ತಿಯಾಗಿದ್ರು…” ಅಂತ ಅಂವ ಕಿರುಚಾಡಿದ. ” ಅವರು ಯಾವತ್ತೂ ಯಾರನ್ನೂ ನೋಯಿಸಿದೋರಲ್ಲ. ಬಡ್ಡೀ ಮಗನೇ, ನಾನು ಓದಿದ ಕಾಲು ಭಾಗದಷ್ಟೂ ತಿಳಿದ್ಕೊಂಡಿಲ್ಲ ನೀನು, ನಂಗೇ ಎದುರಾಡ್ತೀಯಾ? ಅಂತ ಅವನಿಗೆ ಧಬಧಬ ಹೇರತೊಡಗಿದ.
ಅಂತೂ ಗಾಂಧೀಜಿ ವಿಷಯಕ್ಕೆ ಅವತ್ತು ಮನೆಯಲ್ಲೊಂದು ರಾದ್ಧಾಂತವೇ ನಡೆದುಹೋಯ್ತು. ಅವನಿಗಡ್ಡ ಬಂದ ಅಮ್ಮನ್ನ, ಅವಳ ಹಿಂದೆ ನಿಂತಿದ್ದ ನನ್ನನ್ನ ಕೆಕ್ಕರಿಸಿ ನೋಡ್ತಾ ಅಪ್ಪ ರೂಮು ಸೇರಿ ತಲೆ ಮೇಲೆ ಕೈಹೊತ್ತು ಮಲಗಿಬಿಟ್ಟ.

ಭಾನುವಾರ ಅಂತೂ ಹಾಗೆ ಕಳೆದುಹೋಯ್ತು. ಸಹಪಾಠಿಗಳೆಲ್ಲ ಶನಿವಾರ ಬಂತಂದರೆ ಕುಣಿದಾಡ್ತಿದ್ದರು. ಆದ್ರೆ ನಾವಿಬ್ಬರು ಮಾತ್ರಹಾಳಾದ್ದು, ಯಾಕಾದ್ರೂ ರಜ ಬರುತ್ತೋಅಂತ ಗೊಣಗಿ ಗೋಳಾಡಿಬಿಡ್ತಿದ್ದೆವು.
ಅಪ್ಪ ಮನೆಯಲ್ಲಿರ್ತಾರೆ ಅಂದ್ರೆ ಸಾಕು, ನಮಗೆ ಜೀವನವೆಲ್ಲ ಜಿಗುಪ್ಸೆ ಹುಟ್ಟಿದಂತಾಗಿಬಿಡ್ತಿತ್ತು
.
ಅಣ್ಣ ದೊಡ್ಡವನಾದಂತೆಲ್ಲ ತಿರುಗಿ ಹೇಳೋ ಅಭ್ಯಾಸ ಬೇರೆ ಬೆಳೆಸ್ಕೊಂಡ. ಈಗ ಅಂವ ಗಾಧಿ ಪಾಳಯಕ್ಕೆ ಜಿಗಿದಿದ್ದ. ಅಪ್ಪ, ಎಂದಿನಂತೆ ಅವನ ವಿರೋಧಿ.

ಮತ್ತೊಂದು ಭಾನುವಾರಅಪ್ಪಮಗನ ಲೋಕಾಭಿರಾಮ ಸಾಗಿತ್ತು. ಮನೇಲಿ ಹಾಗೇಎಲ್ಲ ಕೂಡಿ ಮಾತಾಡೋದು ಅಂದ್ರೆ, ಜಗಳಕ್ಕೇ ನಾಂದಿಯಾಗಿಬಿಡ್ತಿತ್ತು. ಅಣ್ಣ ಈಗ, ಗಾಂಧಿ ಪಿಚ್ಚರಿನ ಕೊನೆ ಸೀನಿಗೆ ಬಂದಿದ್ದ.
ಫಿಲಮ್ಮಲ್ಲಿ ಗೋಡ್ಸೆ ಶೂಟ್ ಮಾಡಿದಾಗ ಡಾಕ್ಟರ್ ಜೀ ಕೆಲಸ ಮುಗೀತು ಅನ್ನೋಹಾಗೆ ತಲೆ ಆಡಿಸೋದು ತೋರಿಸಿದಾರೆ. ಅದರ ಮರ್ಮ ಏನು ಅಂತ ಚಡ್ಡಿ ಮೂರ್ತಿಯನ್ನ ಕೇಳಿದ್ರೆ, ಅಂವ ಹಾಗೆಲ್ಲ ಮಾತಾಡ್ಬಾರ್ದು ಅಂತ ಗದರಿಬಿಟ್ಟ. ಅದು ನಿಜಾನೇ ಹಾಂಗಾರೆಅಂತ ವಾದ ಹೂಡಿದ
.
ಸರಿ. ಅಪ್ಪನ ವರಸೆ ಶುರುವಾಯ್ತು. ಗಾಂಧೀಜಿ ಹೆಂಡ್ತಿಯನ್ನ ಹೊಡೀತಿದ್ರಂತೆ ಅನ್ನುವಲ್ಲಿಂದ ಹಿಡಿದು, ಪಾಕಿಸ್ತಾನ ಅವನಪ್ಪನ ಆಸ್ತಿ ಅನ್ನೋಹಾಗೆ ಹಂಚಿಬಿಟ್ರು. ನೆಹರೂವನ್ನ ಪ್ರಧಾನಿ ಮಾಡಿ ದೇಶ ಕುಲಗೆಡಿಸಿದ್ದು ಅವ್ರೇ ಅನ್ನೋವರೆಗೂ ಅಸಂಬದ್ಧ ಮಾತಾಡಿದ. ಕೊನೆಗೆ ಇಬ್ಬರೂ ಕೈ ಎತ್ತಿ ಇಳಿಸುವಲ್ಲಿಗೆ ದಿನದ ರಜೆ ಕಳೆದಿತ್ತು
.
ಹೀಗೆ ಸುಡು ಕಾವಲಿಯ ಮನೆಯಲ್ಲಿ ನಾವು ದ್ವಂದ್ವಗಳನ್ನೇ ಉಂಡುಟ್ಟು ಬೆಳೆದ್ವಿ. ಹರೆಯಕ್ಕೆ ಕಾಲಿಟ್ಟಮೇಲಂತೂ ಅಪ್ಪಹೊರೆಅನಿಸತೊಡಗಿದ. ಹಾಗೆ ನೋಡಿದರೆ, ಕಾಲಕ್ಕೆ ಅಂವ ಸಾಕಷ್ಟು ಮೆತ್ತಗಾಗಿಬಿಟ್ಟಿದ್ದ. ಅವನ ಪೌರುಷವೆಲ್ಲ ಅಡುಗೆ ಮನೆಯಲ್ಲಿ ಅಮ್ಮನ್ನ ಹಿಡಿದು ಬಾರಿಸುವುದಕ್ಕಷ್ಟೆ ಮುಗಿದು ಹೋಗ್ತಿತ್ತು.

ಅಣ್ಣ ಈಗ ಕೇಸರಿ, ಬಿಳಿ ಪಡೆಗಳೆರಡನ್ನೂ ಬಿಟ್ಟುಕೆಂಪು ಹಾದಿಹಿಡಿದಿದ್ದ. ಬಿತ್ತಿದ ಬೀಜಕ್ಕೆ ತಕ್ಕ ಬೆಳೆ. ಅಪ್ಪನ ಜಗಮೊಂಡುತನ, ಮೂಗಿನ ನೇರದ ಮಾತುಅಹಂಕಾರಗಳು ಅವನನ್ನ ದಾರಿಗೆ ತಳ್ಳಿತ್ತು. ಅಂವ ಅಪ್ಪನಲ್ಲಿ ದೇಶವನ್ನೇ ಕಂಡ. ಅಪ್ಪನ ಮೇಲೆ ತಿರುಗಿ ಬಿದ್ದಷ್ಟೆ ಸಲೀಸಾಗಿ ವ್ಯವಸ್ಥೆಯ ಮೇಲೆ ತಿರುಗಿ ಬಿದ್ದ. ಅಂವ ಮನೆ ಬಿಟ್ಟು ಹೋಗುವ ಮುಂಚೆ ಬರೆದ ಪತ್ರದಲ್ಲಿ ಅದು ಎದ್ದು ಕಂಡಿತ್ತು. “ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ವ್ಯವಸ್ಥೆಯನ್ನೂ ದ್ವೇಷಿಸ್ತೇನೆ!”
ದೇವಾ!! ಎಲ್ಲಿಯ ಅಪ್ಪ, ಎಲ್ಲಿಯ ವ್ಯವಸ್ಥೆ? ಅರ್ಥಹೀನ ಆವೇಶದ, ಆಡಂಬರದ ಸಾಹಿತ್ಯವೇ ಅವನನ್ನ ಹಾದಿ ತಪ್ಪಿಸಿದ್ದಿರಬೇಕು!

ಇತ್ತ ನಾನೂ ಬೆಳೆದು, ಅಣ್ಣ ಲಾಜಾ ಹೋಮಕ್ಕೆ ಅರಳು ಸುರಿಯದೇ ನನ್ನ ಮದುವೆಯೂ ಆಗಿ ಹೋಯ್ತು. ಮನೆಸಂಸಾರಗಳ ಹಡದಿಯಲ್ಲಿ, ಅಪ್ಪನ ರಿಟೈರ್ಮೆಂಟ್, ಪೆನ್ಷನ್ನುಗಳ ಅಲೆದಾಟದಲ್ಲಿ ಅಣ್ಣನ ನೆನಪು ದೂರದೂರ ಸರಿಯುತ್ತಿತ್ತು. ಅಂವ ಎಲ್ಲಿ ಹೋದನೋ, ಯಾರಿಗೆ ಗೊತ್ತಿತ್ತು?

* *

ಇದ್ದಕ್ಕಿದ್ದ ಹಾಗೇ ಒಂದು ರಾತ್ರಿ ಕನಸಿನಲ್ಲಿ ಅಣ್ಣ. ದಟ್ಟ ಕಾಡಿನ ಮಧ್ಯದಲ್ಲಿ ಅವನನ್ನ ಕಟ್ಟಿಹಾಕಲಾಗಿತ್ತು. ಅಂವ, “ನಾನು ಮನೆಗೆ ಹೋಗ್ತೀನಿ ಬಿಡ್ರೋನಿಮ್ ದಮ್ಮಯ್ಯ! ನಿಮ್ ವಿಷ್ಯ ಯಾರಿಗೂ ಹೇಳಲ್ಲ ಕಣ್ರೋ…” ಅಂತ ದೀನನಾಗಿ ಕೂಗಿಕೂಗಿ ಅಳುತ್ತಿದ್ದ. ಅವನೆದುರು ಕಾಡು ಕೋಳಿ ಸುಡುತ್ತ ಕುಂತಿದ್ದ ನಾಲ್ಕು ಮಂದಿ ಪೋಲಿಪೋಲಿ ಬೈಗುಳ ಬಯ್ಯುತ್ತ ಕಳ್ಳು ಹೀರುತ್ತಿದ್ದರು. ಅಣ್ಣನ ದನಿ, ಕನಸಲ್ಲೂ ಕರಳು ಕತ್ತರಿಸುವ ಹಾಗಿತ್ತು.

* * 

ಕಾಡಿನ ಅಂಚಲ್ಲಿ ಗುರುತು ಸಿಗದ ಶವ ಪತ್ತೆ
ಮಾರನೆ ದಿನದ ಹೆಡ್ ಲೈನು. ಮುಖಚಹರೆಯ ಗುರುತುಗಳನ್ನೆಲ್ಲ ಪೇಪರಲ್ಲಿ ಹಾಕಿದ್ದರು
.
ಹೌದು! ಅವನೇಎಡ ಹುಬ್ಬಿನ ತುದಿಯಲ್ಲಿ ಮಚ್ಚೆ. ಕುತ್ತಿಗೆ ಮೇಲಿನ ತಿರುವಲ್ಲಿ ಇನ್ನೊಂದುಎಣ್ಣೆಗೆಂಪು ಬಣ್ಣ, ದುಂಡು ಮುಖ

ಅಮ್ಮ ಸಣ್ಣಗೆ ಚೀರಿದಳು
.
ಪೋಸ್ಟ್ ಮಾರ್ಟಮ್ ರಿಪೋರ್ಟಿನಲ್ಲಿ ಅವನನ್ನ ಚಿತ್ರ ಹಿಂಸೆ ಕೊಟ್ಟು ಕೊಂದಿದ್ದು ತಿಳಿದುಬಂತು. ಹಿಂದಿನಿರುಳ ಕನಸು ನೆನಪಾಗುತ್ತಲೇ ನಾನು ಮೈ ನರಗಳೆಲ್ಲ ಲಟಲಟನೆ ಬಿರಿದು ಹರಿಯುವಂತೆ ಉಬ್ಬಿ ಉಬ್ಬಿ ಅತ್ತೆ. ಯಾಕೋ, ಅಪ್ಪನ ಮೇಲೆ ವಿಪರೀತ ಅಸಹನೆ ಹುಟ್ಟಿತು. ಅಂವ ಆಸುಪಾಸಿನ ಮನೆಯವರ, ಪೋಲೀಸರ ಪ್ರಶ್ನೆಗಳಿಗೆ ಹೆದರಿದ್ದನೇನೋ? ಮತ್ತೆ ರೂಮು ಸೇರಿ ತಲೆ ಮೇಲೆ ಕೈ ಹೊತ್ತು ಮಲಗಿಬಿಟ್ಟಿದ್ದ. ಸತ್ತವನ ಮೈಮೇಲೆ ಕೆಂಪು ಕೊಲೆಗಡುಕರ ಯೂನಿಫಾರಮ್ಮು! ಏನು ಉತ್ತರ ಕೊಡುವುದು ಅಂತ ಅವನಿಗೆ ತಲೆಬಿಸಿಯಾಗಿದ್ದಿರಬೇಕು.

ಹಾಗೆ ತನ್ನ ಪಾಡಿಗೆ ಮಲಗಿದ್ದ ಅಪ್ಪ ಇದ್ದಕ್ಕಿದ್ದ ಹಾಗೇ ಎದ್ದು ಬಂದ. ನೆರೆ ಮನೆಯವರು ಏನೇನೋ ಕೇಳುತ್ತ ಅಮ್ಮನ ದುಃಖ ಹೆಚ್ಚಿಸುತ್ತ ಕುಂತಿದ್ದರು.   ಅಪ್ಪ ಬಂದವನೇ ಒಮ್ಮೆ ಅಮ್ಮನ್ನ ಗುರಾಯಿಸಿ ನೋಡಿದ.
ಇವತ್ತೇನಾದ್ರೂ ತರಲೆ ತೆಗೆಯಲಿ. ನಾನು ಮಗಳೇ ಅಲ್ಲ ಅನ್ನಿಸಿಬಿಡ್ತೀನಿ!” ಹುಚ್ಚುಚ್ಚಾಗಿ ಹಲ್ಲು ಕಡಿದೆ
.
ಆದರೆ ಹೊರ ಬಂದ ಅಪ್ಪ , ಜೋಲಿ ಹೊಡೆದುಕೊಂಡೇ ತನ್ನ ಮಾಮೂಲಿ ಚೀಲ ಹಿಡಿದು ತನ್ನ ಪಾಡಿಗೆ ಹೊರಟ. ಯಾರ ಮಾತೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ
.
ಇಂಥಾ ದಿನಗಳಲ್ಲೂ ಇವನ ತಿಕ್ಕಲು ನೋಡು!” ಅಂತ ನೆಂಟರಿಷ್ಟರು ಆಡಿಕೊಂಡು ನಾವು ತಲೆ ಎತ್ತದ ಹಾಗೆ ಆಗಿಬಿಟ್ಟಿತ್ತು.

ಅವತ್ತು ಹಾಗೆ ಹೋದ ಅಪ್ಪ ಬಂದಿದ್ದು, ಮೂರು ದಿನಗಳ ನಂತರ. ಮುಖ ಊದಿಕೊಂಡಿತ್ತು. ತಲೆ ಬೋಳಿಸಿದ್ದ. ಎದೆ ಮೇಲಿಂದ ಕೈ ತೆಗೆಯದೇ, ನನ್ನ ಕೈಗೊಂದು ಕವರ್ರು ಕೊಟ್ಟ.
ಅವನ ಮುಖದಲ್ಲಿ ನೋವು ಒಡೆದು ಕಾಣುತ್ತಿತ್ತು. ಆದರೂ ಇನ್ನೇನು ಉಸಾಬರಿಯೋ ಅಂತ ಸಿಡುಕುತ್ತಲೇ ಗಂಟು ಬಿಚ್ಚಿದೆ ನಾನು
.
ಕವರಿನಲ್ಲಷ್ಟು ವಡೆರವೆ ಉಂಡೆ. ಫ್ರೇಮು ಹಾಕಿ ಕುಂಕುಮವಿಟ್ಟ ಅಣ್ಣನ ಫೋಟೋ!

ಕುಸಿಯುತ್ತಿದ್ದ ಅಪ್ಪನ್ನ ಗಟ್ಟಿಯಾಗಿ ಹಿಡಿದುಕೊಂಡೆ. ಹುಟ್ಟಿದ ಅಷ್ಟು ವರ್ಷಗಳಲ್ಲಿ ಮೊದಲ ಸಾರ್ತಿ ಅಪ್ಪನ ಕಣ್ಣಲ್ಲಿ ನೀರು ಕಂಡೆ. ಆವರೆಗೂ ಅರ್ಥವಾಗದಿದ್ದ ಅಪ್ಪ ಮತ್ತೂ ಒಗಟಾಗುತ್ತ ಮುದುಡಿಕೊಂಡಹಾಗನಿಸಿತು. ಹಾಗೇ ಗಟ್ಟಿಯಾಗಿ ತಬ್ಬಿಕೊಂಡು ಬಿಕ್ಕಿದೆ.

ಅಣ್ಣ, ತನಗೆ ಸಿಗದ ಅಪ್ಪನನ್ನ ನನಗೆ ಕೊಡಿಸಿಹೋಗಿದ್ದ.  

 

ಕಥೆಯ ದಿನದಲ್ಲೊಂದು ಬೆಳಗು

ಕೌಸಲ್ಯಾ ಸುಪ್ರಜಾ ರಾಮ
ಪೂರ್ವಾ ಸಂಧ್ಯಾ ಪ್ರವರ್ತತೇ…
ಬಡ್ಕೊಳ್ತಲೇ ಇದೆ ಅಲರಾಮು. ಈ ಹೊಸ ಹ್ಯಾಂಡ್ ಸೆಟ್ ಕೊಂಡಾಗಿಂದ ಇದನ್ನೇ ಅಲರಾಮ್ ಟೋನ್ ಮಾಡ್ಕೊಂಡಿದಾನೆ. ಬೆಳಬೆಳಗಿನ ಸುಪ್ರಭಾತ ಕೇಳುವಾಗೆಲ್ಲ ಅವನಿಗೆ ಐದು ಗಂಟೆಗೆ ಎದ್ದು ಬಾಗಿಲಿಗೆ ನೀರು ಹಾಕ್ತಿದ್ದ ಅಮ್ಮನ ನೆನಪು. ಇತ್ತೀಚೆಗೆ ಅವನು ಅಮ್ಮನ್ನ ನೆನೆಸ್ಕೊಳ್ಳೋದು ಜಾಸ್ತಿಯಾಗಿದೆ.

ಅಲಾರಮ್ಮು ಸ್ನೂಜ್ ಮಾಡಿ ಮತ್ತೈದು ನಿಮಿಷ ಹೊರಳಾಡಿದವನು ಏಳಲೇಬೇಕಾದ ಅನಿವಾರ್‍ಯತೆಗೆ ಗೊಣಗುತ್ತಲೇ ಎದ್ದು ಕುಂತ. ಚಳಿಗಾಲ ಬೇರೆ. ತಾನೆದ್ದ ಅದೆಷ್ಟೋ ಹೊತ್ತಿನ ಮೇಲೆ ಕಾಣಿಸ್ಕೊಳ್ತಾನೆ ಸೂರ್ಯ. ಸೂರ್ಯನ ಮೇಲೆ ಹರಿಹಾಯುತ್ತ ಬಾತ್ ರೂಮಿಗೆ ಹೋದವ ಕನ್ನಡಿ ನೋಡಿ ತಲೆ ಚಚ್ಚಿಕೊಂಡ. ಗಲ್ಲದ ಮೇಲೆ ನಾಲ್ಕು ಕೂದಲು ಕಾಣುವ ಹಾಗಿಲ್ಲ, ಬಾಸ್ ಅನಿಸ್ಕೊಂಡವ ಭಾಗವತ ಬೋಧನೆ ಶುರು ಮಾಡಿಬಿಡ್ತಾನೆ!
ಪರಪರನೆ ಕೆನ್ನೆ ಕೆರಕೊಂಡು, ಹಲ್ಲುಜ್ಜಿ ಹೊರಬಂದ. ನೀರು ಕಾಯುವುದರೊಳಗೆ ತಿಂಡಿ ಮಾಡ್ಕೊಳ್ಳಬೇಕು. ಅಮ್ಮ ರವೆ ಇಡ್ಲಿಯ ಮಿಕ್ಸ್ ಮಾಡಿ ಕಳ್ಸಿದಾಳೆ. ಮೊಸರಿಗೆ ಹಾಕಿ ಕಲಸಿ ಬೇಯಿಸ್ಕೊಂಡರಾಯ್ತು.

ಡಬ್ಬಿಯ ಮುಚ್ಚಳ ತೆಗೆದವನ ಮೂಗಿಗೆ ಕರಿಬೇವಿನ ಘಮ ಮುತ್ತಿಕ್ಕಿತು. ಹದವಾಗಿ ಹುರಿದ ಗೋಡಂಬಿ ಚೂರುಗಳು, ಕಡಲೆಬೇಳೆ, ಒಣಮೆಣಸು… ಅಮ್ಮ ಶ್ರದ್ಧೆಯಿಂದ ಮಾಡಿ ಒತ್ತೊತ್ತಿ ತುಂಬಿ ಕಳಿಸಿದ್ದಳು, ಅಪ್ಪನ ಕಣ್ತಪ್ಪಿಸಿ.
ಅಪ್ಪ! ದೂರದೂರಲ್ಲಿ ನಿಂತೂ ಅವಂಗೆ ಕಾಲ್ನಡುಕ. ಅಪ್ಪನಿಗಿಂತ ಎತ್ತರ ಬೆಳೆದಿದ್ದಾನೆ. ಒಂದೆರಡು ಸಾರ್ತಿ ಇಬ್ಬರಿಗೂ ಹೊಯ್ ಕೈ ಕೂಡ ಆಗಿಬಿಟ್ಟಿದೆ. ಆದರೂ, ಅಪ್ಪ ಅಂದರೆ ನಡುಕ.

ಇದೇ ಅಪ್ಪ ತನ್ನ ಡಿಗ್ರಿ ಮುಗಿದು ಒಂದು ತಿಂಗಳು ಮನೇಲಿ ಕುಂತಗ ಹಂಗಿಸ್ತಿದ್ದುದು. ತಾನು ಎಲೆಕ್ಟ್ರಿಕ್ ಕೆಲಸ ಹಿಡಿದು ದಾರಿಯ ಲೈಟುಕಂಬ ಹತ್ತಿ ರಿಪೇರಿ ಮಾಡ್ತಿದ್ದಾಗ ನೋಡಿ ಕೆಂಡಾಮಂಡಲವಾಗಿ ಕೂಗಾಡಿದ್ದುದು. ಅವನ ಮರ್ಯಾದೆ ಬೀದೀಲಿ ಹರಾಜಾಗಿತ್ತಂತೆ ಅವತ್ತು! ಇದೇ ಅಪ್ಪನೇ ತಾನು ದೋಸೆ ತಿನ್ನುವಾಗ ಹೊರಗೆ ಕುಂತು ಲೆಕ್ಕವಿಡುತ್ತಿದ್ದುದು. ಕೂತು ನಿಂತಲ್ಲೆಲ್ಲ ತಪ್ಪು ಹುಡುಹುಡುಕಿ ಹೈರಾಣು ಮಾಡ್ತಿದ್ದುದು ಇದೇ ಅಪ್ಪನೇ. ಅವನೇ ತನ್ನ ವಿಷಯ ತೆಗೆದು ಅಮ್ಮನ ಗಂಟಲಲ್ಲಿ ನೀರೂ ಇಳಿಯದ ಹಾಗೆ ಕಾಡ್ತಿದ್ದುದು.
ಇಷ್ಟೆಲ್ಲಾ ಆದರೂ ಈಗ ಅವನಿಗೆ ಅಪ್ಪನ ಮೇಲೇನೂ ಕೋಪವಿಲ್ಲ. ಅಂವ ಅಷ್ಟೆಲ್ಲ ಮಾಡದೆ ಹೋಗಿದ್ದರೆ ತಾನಾದರೂ ಮನೆಬಿಟ್ಟು ಓಡಿಬರ್ತಿದ್ದನಾ? ಇವತ್ತು ಐರನ್ ಮಾಡಿದ ಬಟ್ಟೆ ತೊಟ್ಟು, ಶೂ ಹಾಕಿ, ಬೈಕಲ್ಲಿ ಕೆಲಸಕ್ಕೆ ಹೋಗ್ತಿದ್ದನಾ?

ಬೈಕು! ಅವನು ಮನೆಬಿಟ್ಟು ಓಡಿಬರಲಿಕ್ಕೆ ಕಾರಣ ಅಪ್ಪ ಮಾತ್ರ ಅಲ್ಲ. ಅವಳೂ ಕೂಡ. ಎಲೆಕ್ಟ್ರಿಕ್ ಕೆಲಸ ಕೈಹತ್ತಿ ನಾಲ್ಕು ಕಾಸಾದಾಗ ಚೂಡಿದಾರ ಕೊಡಿಸಿ ಮದುವೆಯ ಮಾತಾಡಿದ್ದ. “ಮನೇಲಿ ಬಂದು ಏನೂಂತ ಕೇಳ್ತೀಯೋ? ನಿನ್ ಹತ್ರ ಒಂದು ಬೈಕೂ ಇಲ್ಲ!?” ಅಂದುಬಿಟ್ಟಿದ್ದಳು. ಇತ್ತ, ಜೀವಮಾನವಿಡೀ ದುಡಿದು ಕೂಡಿಟ್ಟ ಹಣದಲ್ಲಿ ಚೆಂದದ ಮನೆ ಕಟ್ಟಿಕೊಂಡಿದ್ದ ಅಪ್ಪ, “ಇದೇ ಊರಲ್ಲಿದ್ರೆ ನಿಂಗ್ಯಾರೂ ಹೆಣ್ಣು ಕೊಡೋದಿಲ್ಲ ತಿಳ್ಕಾ” ಅಂತ ಪ್ರವಾದ ನುಡಿದಿದ್ದ. ಒಬ್ಬೊಬ್ಬರೇ ಕಸಿನ್ನುಗಳ ಮದುವೆಯಾಗುತ್ತಿದ್ದ ಹಾಗೆ ಅಮ್ಮನೂ ಚಡಪಡಿಸತೊದಗಿದ್ದಳು. ಇಂವ ಅವರೆಲ್ಲರಿಗಿಂತ ಏಳೆಂಟು ವರ್ಷ ಚಿಕ್ಕವನೆಂದು ಯಾರೂ ಯೋಚಿಸಲೇ ಇಲ್ಲ!
ಹಾಗಂತ ಅವನಮ್ಮನಿಗೆ ಗೊತ್ತಿದೆ… ಈಗಲೂ ಅಂವ ಮನೆಗೆ ಹೋದಾಗಲೊಮ್ಮೆ ತಲೆ ನೇವರಿಸಿ ಗಲ್ಲ ಹಿಂಡುತ್ತಾಳೆ. ಇವಂಗೇನೂ ಅದರಿಂದ ಸಂಕೋಚವಾಗೋದಿಲ್ಲ. ಊರಲ್ಲಿದ್ದಷ್ಟೂ ದಿನ ‘ಅಮ್ಮನ ಬಾಲ’ ಅಂತಲೇ ಕರೆಸಿಕೊಳ್ತಿದ್ದನಲ್ಲವೆ?

ಸ್ಟೌವ್ ಆರಿಸಿ ಅಮ್ಮನ ನೆನಪಲ್ಲಿ ಕಣ್ಣೊರೆಸ್ಕೊಂಡವ ಸ್ನಾನ ಮುಗಿಸಿ ಬಂದ. ಹಿತವಾದ ಘಮ ಬೀರುತ್ತ ಇಡ್ಲಿ ಹಬೆಯಾಡುತ್ತಿತ್ತು. ತಿಂದು ಹೊರಟ. ವಾಪಸು ಬರುವ ಹೊತ್ತಿಗೆ ಒಂಟಿತನ ಬಾಗಿಲಲ್ಲೆ ಕಾದು ನಿಂತಿರುತ್ತದೆ! ನೆನೆಸಿಕೊಂಡು ನಕ್ಕ. ‘ಬೈಕೂ ಇಲ್ವಲ್ಲೋ?’ ಅಂದಿದ್ದ ಹುಡುಗಿಯ ಗಂಡನ ಬಳಿ ಕಾರಿದೆ. ತಾನು ಕಾರ್ ಕೊಳ್ಳುವುದು ಯಾವಾಗಲೋ? ಚಿಂತಿಸುತ್ತ ಬೈಕ್ ಸ್ಟಾರ್ಟ್ ಮಾಡಿದ.
‘ಅಮ್ಮಾ, ನಿನ್ನ ಎದೆಯಾಳದಲ್ಲಿ…’ ಫೋನ್ ರಿಂಗಾಯ್ತು. ಟೋನಿನಲ್ಲೇ ಇದು ಅಮ್ಮನ ಕಾಲ್ ಎಂದು ಪತ್ತೆಹಚ್ಚಿದವ ರಿಸೀವ್ ಮಾಡಿದ.
ಆಚೆಯಿಂದ ಅಮ್ಮ ಸೊರಗುಟ್ಟುತ್ತಿದ್ದಳು. “ಅಪ್ಪಂಗೆ ಸೀರಿಯಸ್ ಕಣೋ, ಅಡ್ಮಿಟ್ ಮಾಡಿದೀನಿ” ಅಂದು ಬಿಕ್ಕತೊಡಗಿದಳು….

ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…

ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…” ಒಂದೇ ಸಮ ಬಡ್ಕೊಳ್ತಿತ್ತು ಫೋನು.

ಅದು ನೀನಿಲ್ಲದ ಮೊದಲ ಭಾನುವಾರ. ಈವರೆಗೆ ನೂರಿಪ್ಪತ್ತೆಂಟು ಭಾನುವಾರಗಳನ್ನ ನಾವು ಒಟ್ಟಿಗೆ ಕಳೆದಿದ್ದೆವು, ಒಮ್ಮೆಯೂ ತಪ್ಪದ ಹಾಗೆ. ನಾನು ಆರು ದಿನವೂ ಬರವಣಿಗೆಯ ಬದುಕಲ್ಲಿ ಹೈರಾಣಾಗಿರುತ್ತಿದ್ದೆ. ನೀನು ಮೀಸೆ ಬೆಳೆದ ಮಕ್ಕಳೆದುರು, ಪುಸ್ತಕದಲ್ಲಿರದ ಚರಿತ್ರೆಯ ಪಾಠವನ್ನೆಲ್ಲ ಹೇಳೋದ್ರಲ್ಲಿ ಸುಸ್ತು ಹೊಡೆದಿರುತ್ತಿದ್ದೆ.

ಹೌದಲ್ಲಾ!? ಪಾಠ ಮಾಡಯ್ಯಾ ಅಂದ್ರೆ ನೀನು ಪಾಠದಲ್ಲಿರದ್ದನ್ನೆಲ್ಲ ಹೇಳ್ತಾ ಮೈಮರೆತುಬಿಡ್ತಿದ್ದೆಕ್ಯಾಂಪಸ್ಸಿನ ತುಂಬೆಲ್ಲಕ್ರಾಂತಿಕಾರಿಅನ್ನೋ ಪಟ್ಟ ನಿಂದಾಗಿತ್ತು. ಅದೆಷ್ಟು ಸಾರ್ತಿ ಪ್ರಿನ್ಸಿಯ ಕನ್ನಡಕ ನಿನ್ನ ಗುರಾಯಿಸಿತ್ತೋ?

ಬಿಡು. ಅದೀಗ ಮುಗಿದ ವಿಚಾರ. ಅವತ್ತೊಂದು ದಿನ ಕಾಲೇಜು ರಾಜಕೀಯದ ನೂರೆಂಟು ಹೊಟ್ಟೆಕಿಚ್ಚುಗಳಲ್ಲಿ ನನ್ನನಿನ್ನ ಸಂಬಂಧದ ಬಣ್ಣ ಎರಚಿ, ನೀ ರಿಸೈನು ಮಾಡಿಬಂದೆ ನೋಡು, ಅವತ್ತಿಗೇ ಅದರ ಕಥೆ ಮುಗ್ದುಹೋಯ್ತು.

ಆಮೇಲೆ ನೀ ಭಾಷಣಬರಹ ಅಂತ ಉಳಿದುಬಿಟ್ಟೆ. ಹೊಟ್ಟೆಪಾಡು ನಿಂಗ್ಯಾವತ್ತೂ ಮುಖ್ಯವಾಗಲೇ ಇಲ್ಲ! ಜೊತೆಜೊತೆಗೆ ನಮ್ಮಲ್ಲೊಂದು ಪ್ರಬುದ್ಧತೆ ಬೆಳೀತಾ ಹೋಯ್ತು.

ನಂಗನ್ನಿಸತ್ತೆ,  ನಾವ್ಯಾವತ್ತೂ ಪ್ರೀತಿಸಲೇ ಇಲ್ಲ ಅಂತ. ಈವತ್ತು ಲೋಕ ಯಾವುದನ್ನ ಪ್ರೀತಿ ಅನ್ನುತ್ತಿದೆಯೋ, ಅಂಥದೊಂದು ಕೊಡುಕೊಳ್ಳುವಿಕೆಯ ಭಾವ ನಮ್ಮದಾಗಿರ್ಲಿಲ್ಲ. ಕೊನೆಗೂ ನಮ್ಮ ನಂಟಿಗೊಂದು ಹೆಸರು ಸೃಷ್ಟಿಯಾಗ್ಲೇ ಇಲ್ಲ.

ಇವೆಲ್ಲಾ ನೆನಪಾಗಿದ್ದು ನೀನಿಲ್ಲದ ಮೊದಲನೇ ಭಾನುವಾರ. ಬರೋಬ್ಬರಿ ನಾಲ್ಕು ವರ್ಷ ನನ್ನ ಈ ಸಂಭ್ರಮದ ರಜಾದಿನದಲ್ಲಿ ಶಾಮೀಲಾಗಿದ್ದ ನೀನು ಅವತ್ತು ಹೇಳದೇ ಕೇಳದೇ ಇಲ್ಲವಾಗಿಬಿಟ್ಟಿದ್ದೆ. ಹಿಂದಿನ ದಿನ ಹೋಟೆಲ್ಲಲ್ಲಿ ಕುಂತು ಮೃದುವಾಗಿ ಕೈತಟ್ಟುತ್ತಾ, “ಸಾಧನೆ ಮಾಡ್ಬೇಕು ಕಣೇ ನೀನುಸುಮ್ನೆ ಹೀಗೇ ಇದ್ದುಬಿಡೋದಲ್ಲಅಂದಾಗಲೇ ನಂಗೇನೋ ಅನುಮಾನ. ನೀನೇನೋ ಮಸಲತ್ತು ನಡೆಸಿದ್ದೀ ಅಂತಅದು ನಿಜವಾಗಿಹೋಗಿತ್ತು!

ಆಫೀಸೂ ಇಲ್ಲದ ದಿನವಿಡೀ ನಾನು ಮನೆಯ ದೂಳು ಹೊಡೆಯುತ್ತ ಉಳಿದುಬಿಟ್ಟೆ. ಮಧ್ಯೆ ಮಧ್ಯೆ ನಿನ್ನ ನಂಬರ್ ಒತ್ತುವುದು ನಡೆದೇ ಇತ್ತು. ಹಾಳು ಗಂಟಲಿನ ಹುಡುಗಿಮತ್ತೆ ಮತ್ತೆ, ’ನೀವು ಕರೆ ಮಾಡಿದ ಚಂದಾದಾರ….’ ಅವತ್ತಿಂದ ನಾನೂ ಹುಚ್ಚಿಹಾಗೆ ಗಂಟೆಗೊಂದು ಸಾರ್ತಿ ನಿನಗೆ ಕಾಲ್ ಮಾಡ್ತಲೇ ಇದ್ದೀನಿ. ಆದರೂ ಅವಳು ಮಾತ್ರ ಹಾಗೆ ಬಡಕೊಳ್ಳೋದು ನಿಲ್ಲಿಸಿಲ್ಲ.

ಆವತ್ತು ನಾನು ಅಮ್ಮ ಸಾಯ್ತೀನಂದ್ರೂ ಕೇಳದೆ ನಿನ್ನ ಹಿಂದೆ ಬಂದುಬಿಟ್ಟಿದ್ದೆ. ಮದುವೆಯಾಗೋದು ನಮ್ಮ ಉದ್ದೇಶವಲ್ಲ ಅಂದಾಗಲಂತೂ ಅಪ್ಪ ಗಂಟಲು ಕಿತ್ತುಬರುವ ಹಾಗೆ ಕೂಗಾಡಿದ್ದ.

ಈವತ್ತಿಗೆ ನಾಲ್ಕು ತಿಂಗಳಾಯ್ತು, ನೀನು ವ್ಯಾಪ್ತಿಪ್ರದೇಶದ ಹೊರಗೆ ಹೋಗಿಇಷ್ಟೂ ದಿನ ಮಾತಾಡದ ಅಪ್ಪ, ’ಏನು ಸಾಧಿಸಿದೆ ಮಗಳೇ ಅಂದರೆ, ಅಮ್ಮ, ’ನಿಂಗೆ ಇನ್ನು ಯಾರು ದಿಕ್ಕು?’ ಕೇಳ್ತಿದ್ದಾಳೆಬರೀ ಇಂಥವೇ…. ಆದರೆ ನಾನು ಮಾತ್ರ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲ. ನಾ ನಿನ್ನ ಆಸರೆಗಾಗಿ ಅವಲಂಬಿಸಲಿಲ್ಲ. ನಿನ್ನ ಸಂಬಂಧದ ಸರ್ಟಿಫಿಕೇಟು ಹಿಡ್ಕೊಂಡು ಮೆರಿಯೋದೂ ನಂಗೆ ಬೇಕಿರಲಿಲ್ಲ. ನೀನು ಬೇಕು, ನಿನ್ನೊಡನಿರಬೇಕೆಂಬ ಅದೆಂಥದೋ ಉನ್ಮಾದವಷ್ಟೇ ನನ್ನಲ್ಲಿದ್ದದ್ದು. ಅದು, ಇವರ್ಯಾರಿಗೂ ಅರ್ಥವಾಗೋಲ್ಲ.

ನನಗೆ ಗೊತ್ತು. ನೀನು ಹಾಗೆ ಹೊರಟುಬಿಡಲು ಕಾರಣವೇನು ಅಂತಬಿಡು. ಬಂದೂಕು ಹಿಡಿದು ಕಾಡಲ್ಲಿ ಮೈ ತರಚಿಕೊಂಡ್ರೆ ಕ್ರಾಂತಿಯಾಗೋಲ್ಲ! ನಿನಗೆ ನಾನು ಪಾಠ ಹೇಳ್ಬೇಕಾ? ಆದರ್ಶದ ಬೆನ್ನು ಹತ್ತಿದರೆ ಯಾವತ್ತೂ ಹೀಗೇ ಆಗೋದು

ಈಗ ಪೇಪರ್ ನೋಡಿದೆ. ಕಾಡೊಳಗೆ ಎಸ್ ಟಿ ಎಫ್ ನುಗ್ಗಿಸ್ತಾರಂತೆ. ಯಾರ ಗುಂಡು ಯಾರ ಎದೆಗೋ? ಸುಮ್ಮನೆ ಕಾಡಬೇಡ. ನೀನು ಹಾಗೆಲ್ಲ ಇಲ್ಲವಾಗೋದು ನಂಗೆ ಬೇಕಿಲ್ಲ.

ಈಗ ನಿನ್ನ ಫೋಟೋ ನನ್ನ ಎದೆಯ ಮೇಲೆ. ನೀನು…. ಎದೆಯೊಳಗೆ. ಅಂದ ಹಾಗೆ ಇದು ನೀನಿಲ್ಲದ ಕೊನೆಯ ಭಾನುವಾರ. ಹಾಗೇ , ನನ್ನ ಕಟ್ಟಕಡೆಯದು ಕೂಡಾ. ನಾನೀಗ ಹೊರಟೆ.

ನೀನು ಕಾಡಲ್ಲಿ ಅಲೆದಿದ್ದು ಸಾಕು. ಇಲ್ಲೂ ಪರಿವರ್ತನೆಗಳಿಗೆ ಅವಕಾಶಗಳಿವೆ.

ಪ್ಲೀಸ್…. ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…. ಪ್ರಾಮಿಸ್! ನಾನು ಇನ್ಯಾವತ್ತೂ (ಕರ) ಕರೆ ಮಾಡೋಲ್ಲ!!

ಇದನ್ನ ಹೇಳಬಹುದಿತ್ತಾದರೂ ಹೇಗೆ!?

ಡಾರ್ಕ್ ರೂಮ್

ಇದರ ತುಂಬ ಬರೀ ಮಡಚಿಟ್ಟ ಪುಟಗಳೇ. ಈ ರೂಮಿಗೆ ಬೀಗ ಹಾಕಿ, ನಾನೇ ಕೀಲಿ ಕಳೆದು ಹಾಕಿದ್ದೇನೆ. ಹೀಗೆ ಕತ್ತಲಲ್ಲಿ ಕೂಡಿಟ್ಟರೂ ಈ ಕತೆಗಳು ನೂರಾಗಿ, ಸಾವಿರವಾಗಿ, ಕೊಳೆತ ತರಕಾರಿಯ ಮೇಲೆ ಗಿಜಿಗುಟ್ಟುವ ಹುಳಗಳಂತೆ ತೆವಳುತ್ತ ತೆವಳುತ್ತ ಎಲ್ಲೆಲ್ಲೂ ಹರಿದಾಡಿ, ಗೋಡೆಯೊಳ ತೂರಿ, ಇತ್ತಲಿಂದ ಹೊರಬರುತ್ತಿವೆ, ನನ್ನ ಹುರಿದು ಮುಕ್ಕುತ್ತಿವೆ. …… (ಒಂದು ಹಳೆಯ ಬರಹ)

 ಎಲ್ಲರೂ ಕೇಳ್ತಾರೆ. ಮೂವತ್ತು ದಾಟಿದ್ರೂ ಮದುವೆಯತ್ತ ಮನಸ್ಯಾಕೆ ಮಾಡಿಲ್ಲ ಅಂತ. ಈಗಿನ ಕಾಲದಲ್ಲಿ ಮದುವೆಗೆ ಇಂತಿಷ್ಟೇ ವಯಸ್ಸಾಗಿರಬೇಕು ಅಂತೇನಿಲ್ಲ ಬಿಡಿ. ಆದ್ರೂ,   ಸಂಪ್ರದಾಯಸ್ಥ  ಮನೆತನ, ಕೆಳ್ತಾರೆ.

ಹಾಗಂತ ನಾನು ಚೆಂದವಿಲ್ಲ ಅಂತೆನಲ್ಲ. ಅವತ್ತಿನ ಸಹಪಾಠಿಗಳಿಂದ ಹಿಡಿದು, ಇವತ್ತಿನ   ಸಹೋದ್ಯೋಗಿಗಳವರೆಗೂ ಎಲ್ರೂ ನನ್ನ ಸ್ಮಾರ್ಟ್ ಅಂತಾರೆ. ಇಪ್ಪತ್ತೈದರ ಹಾಗೆ ಕಾಣುವ ನನ್ನ ಮೂವತ್ತರ ಬಗ್ಗೆ ನನಗೂ ಹೆಮ್ಮೆ ಇದೆ. ಆದರೆ, ಯಾವ ಪುರುಷಾರ್ಥಕ್ಕೆ?

ಅವನೊಬ್ಬನಿದ್ದ. ಅಂದಗಾರ. ಚಂದಿರ ಮುಖ, ಬೋಳು ಮೀಸೆ, ನುಣ್ಣನೆ ಗಡ್ಡ.ಕಣ್ಣಲ್ಲಿ ತೀರದ ತುಂಟತನ. ನನಗಿಷ್ಟವಾಗುವ ಬಣ್ಣ ಅವಂಗೂ ಇಷ್ಟ. ನಾನಿಷ್ಟಪಡುವ ಪರ್ಫ್ಯೂಮ್, ಐಸ್ ಕ್ರೀಮ್ ಎಲ್ಲವೂ ಅವನಿಗಿಷ್ಟ. ಅವಂಗೆ ಕಂಪನಿ ಕೊಡಲೆಂದೇ ಕುಡಿಯೋದು ಕಲ್ತಿದ್ದೆ ನಾನು.

ನಾನವನkitaki jpgನ್ನ ಹುಚ್ಚುಚ್ಚಾಗಿ ಪ್ರೀತಿಸ್ತಿದ್ದೆ. ಅವನನ್ನ ಮಾತ್ರ. ಅವನ ಕೈಬೆರಳ ತುದಿ ಸೋಂಕಿದರೂ ರೋಮ ನಿಮಿರಿ ನಿಲ್ತಿತ್ತು. ಉಸಿರಾಟ ಏರುಪೇರಾಗಿ ಹೋಗ್ತಿತ್ತು. ಸಧ್ಯ. ಯರೂ ಇದನ್ನ ಗಮನಿಸ್ತಿರಲಿಲ್ಲ ಅನ್ನೋದೇ ಸಮಾಧಾನ! ಆದರೆ… ಅಂವ ಕೂಡ ಇದನ್ನ ತಲೆಗೆ ತೊಗೊಳ್ಳದೆ ಉಳಿದುಬಿಟ್ಟ. ಉಳಿದೆಲ್ಲ ಗಂಡಸರ ಹಾಗೆ ಅವನಿಗೂ ಒಬ್ಬಳು ಸುಂದರಿ ಗಂಟು ಬಿದ್ದಳು. ನಾನು ಅವನ ಬಳಿ ಪ್ರೀತಿ ತೋರಿಕೊಳ್ಳುವ ಸಾಹಸವನ್ನೇ ಮಾಡಲಿಲ್ಲ.

ಮನೆಯಲ್ಲಿ ನನ್ನ ಮದುವೆ ಮಾತುಕಥೆ. “ಜೀವ ಕಳ್ಕೊಳ್ತೀನಿ ಹೊರತು, ಮದ್ವೆಯಾಗೋಲ್ಲ” ನಾನೂ ಹಟ ಹಿಡಿದೆ. “ಯಾರನ್ನದ್ರೂ ಪ್ರೀತಿಸ್ತಿದೀಯಾ?” ಕೇಳಿದರು. ನನು ಹೌದೆಂದೆ. ಅದು ಯಾರು ಯಾರೆಂದು ಪೀಡಿಸಿದರು.

ಊಹೂಂ… ಹೇಗೆ ಹೇಳಲಿ? ನಾನು ಡಾರ್ಕ್ ರೂಮಲ್ಲಿ ಕೂಡಿಟ್ಟಿರೋದು ಅದನ್ನೇ.  ಈ ಮನೆಮಂದಿ ಬೇಕಿದ್ದರೆ ಹೀಗೆ ಜೀವಮಾನವಿಡೀ ದೇವದಾಸನಂತೆ ಇರೋದನ್ನ ನುಂಗಿಕೊಂಡು ನಕ್ಕಾರು.

ಆದರೆ…. ನಾ ಪ್ರೀತಿಸಿದ್ದು ಒಬ್ಬ ಗಂಡಸನ್ನ ಅಂದರೆ ಸಹಿಸಿಯಾರು? ಅದರಲ್ಲೂ,

ಹತ್ತು ದೇವರಿಗೆ ಹರಕೆ ಹೊತ್ತು ಹುಟ್ಟಿದ ಕಿರಿಮಗ ನಾನಾಗಿರುವಾಗ!?

ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…

ಬೆಂಗಳೂರಿಂದ ಹೊರಟು ಹೊಸಕೋಟೆ ಸ್ಟಾಪಲ್ಲಿಳಿದಾಗ ನೀಲಿ ಕಲರಿನ ಸ್ವಾಗತ್ ಬಸ್ಸು ರೊಂಯ್… ರೊಂಯ್ಯ್ಯ್ಯ್ ಅಂತ ಸದ್ದು ಮಾಡುತ್ತ, ಇನ್ನೇನು ನೀ ಬರುವುದರಳೊಗೆ ಹೊರಟೇಬಿಟ್ಟೆ ಅಂತ ಹೆದರಿಸ್ತ ನಿಂತಿತ್ತು. ಟಾಕೀಸಿನೆದುರು ದೊಂಬರಾಟದ ಮಜ ತೊಗೊಳ್ತ ಹೆಜ್ಜೆಯೆಣಿಸ್ತಿದ್ದವಳಿಗೆ ಅದು ಕಂಡು ಎದ್ದೆನೋ ಬಿದ್ದೆನೋ ಅಂತ ದಾಪುಗಾಲುಹಾಕಿ ನಡೆದೆ, ಮತ್ತೆ ನೂರಾ ಅರವತ್ತೇಳನೇ ಸಾರ್ತಿ ಮೋಸ ಹೋಗಿದ್ದೆ!
ಮತ್ತಿನ್ನೇನು!? ಹಾಗೆ ಹೊಸಕೋಟೆಯಿಂದ ಹೊರಡುವ ಪ್ರತಿ ಬಸ್ಸೂ ಸ್ಟಾರ್ಟ್ ಮಾಡಿಕೊಂಡಾದಮೇಲೂ ಅರ್ಧ ಗಂಟೆ ಕಾದು ತನ್ನ ಟಾಪು ಭರ್ತಿಯಾಗುವ ತನಕವೂ ನಿಂತಿರುತ್ತದೆ ಅನ್ನೋದು ಗೊತ್ತಿದ್ದೂ….

ಆ ಬೆಳಗಿನ ಒಂಬತ್ತು ಗಂಟೆಗೇ ಬಸ್ಸು ಹುಳ್ಳಗಾಗಿತ್ತು. ಒಂಥರಾ ಹಾಳಾದ ಹುಳಿ ಮಜ್ಜಿಗೆ ವಾಸನೆ. ದೊಗಲೆ ಡ್ರಾಯರ್ರು ಹಾಕಿ ಅದು ಕಾಣುವಷ್ಟು ಮೇಲೆ ಲುಂಗಿ ಎತ್ತಿ ಕಟ್ಟಿ, ಹೆಗಲ ಮೇಲೊಂದು ಶಾಲು, ಟವೆಲು… ಅವರವರ ಅಂತಸ್ತಿಗೆ ತಕ್ಕ ಹಾಗೆ. ಅದಾಗಲೇ ಒಂದಷ್ಟು ತಾವೂ ಹುಳ್ಳಗಾಗಿ ಬೀಡಿ ಸೇದುತ್ತಲೋ ನಶ್ಯ ನುರಿಯುತ್ತಲೋ ಬಸ್ಸು ಹೊರಡೋದನ್ನೇ ಕಾಯುತ್ತ ಬಸ್ಸಿನ ತುಂಬ ಚಡಪಡಿಸ್ತಿದ್ದರು ಒಂದಷ್ಟು ಗಂಡಸರು.
ಝರಿಝರಿಯ ಸೀರೆ ಉಟ್ಟು, ಬಾಯಿ ತುಂಬ ತಂಬಾಕು- ಎಲೆ ತುಂಬಿಕೊಂಡು ಕಚಪಚ ಮಾಡುತ್ತ ಬಸ್ಸು ಊರು ಮುಟ್ಟೋದು ತಡವಾದಷ್ಟೂ ಚೆನ್ನ ಅಂತ ಹಾರೈಸ್ತ ಕೂತಿದ್ದರು ಹೆಂಗಸರು.
ಅವರೆಲ್ಲರ ನಡುವೆ ಕಿಸಿಕಿಸಿ ಅನ್ನುತ್ತ ಕಂಡಕ್ಟರನ ಕಟಾಕ್ಷಕ್ಕೆ ಪೈಪೋಟಿ ನಡೆಸ್ತಿದ್ದ ಹರೆಯದ ಒಂದಷ್ಟು ಹೆಣ್ಣುಗಳು. ಇವೆಲ್ಲವನ್ನೂ ಮೀರಿ, ಡ್ರೈವರನ ಪಕ್ಕದ ಮೂಲೆಯಲ್ಲೊಂದು ಭಾರೀ ಸೈಜಿನ ಟೀವಿ ಅಲ್ಲಿದ್ದವರೆಲ್ಲರನ್ನೂ ಒಟ್ಟಾಗಿ ಸೆಳೆಯುತ್ತಿತ್ತು. ಅದರಲ್ಲೊಂದು ತೆಲುಗು ಸಿನೆಮಾ. ದಪ್ಪಕೆ ತೀಡಿದ ಹುಬ್ಬಿನ ಹೀರೋ ಹೀರೋಇನ್ನಿನ ಕೆನ್ನೆ ತಿನ್ನುತ್ತಿದ್ದ. ನೋಡುತ್ತ ಕುಂತಿದ್ದ ಹೆಂಗಸರೆಲ್ಲ ‘ಅಯ್ಯಾ…. ತಗಿ ತಗೀ… ’ ಅನ್ನುತ್ತಲೇ ಎಲೆಯಡಿಕೆ ಜಗಿತದ ವೇಗ ಹೆಚ್ಚಿಸ್ಕೊಂಡು ಮುಸಿನಗತೊಡಗಿದರು. ಅವರ ಸಂಕೋಚಕ್ಕೆ ಸವಾಲಾಗಿ ಬಸ್ಸಿನ ಬಾರು ಹಿಡಿದು ನೇತಾಡ್ತಿದ್ದ ಹುಡುಗರು ಪೋಲಿ ಪೋಲಿ ತೆಲುಗು ಡೈಲಾಗು ಹೊಡೆಯುತ್ತ ವಾತಾವರಣವನ್ನ ಮತ್ತಷ್ಟು ನಶೀಲಾ ಆಗಿಸತೊಡಗಿದರು. ಇವೆಲ್ಲದರ ಮಧ್ಯೆ ಬಸ್ಸು ಹೊರಟಿದ್ದೇ ಯಾರ ಗಮನಕ್ಕೂ ಬರಲಿಲ್ಲ!

ಬಸ್ಸು ತೆವಳುತ್ತ ನಿಲ್ಲುತ್ತ ಏದುಸಿರು ಬಿಡುತ್ತ ಹೋಗುತ್ತಲೇ ಇತ್ತು. ನಡುವಲ್ಲೊಂದು ಯನಗುಂಟೆ ಸ್ಟಾಪು. ಅಲ್ಲಿ ಸುಮಾರು ಎಂಟು- ಹತ್ತು ವಡ್ಡರ ಹೆಂಗಸರು ಹತ್ತಿಕೊಂಡರು. ಅವರೊಳಗೊಬ್ಬ ದುಂಡುದುಂಡನೆಯ ಹೆಣ್ಣು. ಹರಿದ ಉದ್ದನೆ ಜಾಕೀಟಿನ ಕೆಳಗೆ ಎಂಥದೋ ಬಗೆಯ ಲಂಗ ಹಾಕಿದ್ದಳು. ಅವಳು ಬಂದು ನಿಂತಿದ್ದೇ ಹೆಂಡದ ಮತ್ತಲ್ಲಿ ತೇಲಾಡ್ತಿದ್ದ ಕೆಲವರಿಗೆ ಏನೋ ಹುಕ್ಕಿ ಬಂದ ಹಾಗಾಯ್ತು. ಅವಳ ಹಿಂದಿನ ಸೀಟಿಗೆ ಆತುಕೊಂಡು ನಿಂತಿದ್ದ ಮುದುಕ ಮುಂದೆ ಬಂದು ಹೆಚ್ಚೂ ಕಡಿಮೆ ಅವಳಿಗೆ ಅಂಟಿಕೊಂಡೇ ನಿಂತ. ಬಹುಶಃ ಅವನ ಕೈ ಎಲ್ಲೆಲ್ಲೋ ತಡಕಾಡಿರಬೇಕು… “ಏ ಥೂತ್….” ಅಂತ ಅವಳು ಕ್ಯಾಕರಿಸಿ ಉಗಿದಿದ್ದು ಸ್ವಲ್ಪ ಮುಂದೆ ಕುಂತಿದ್ದ ನನ್ನ ವರೆಗೂ ಸಿಡಿಯಿತು.
ಅವಳ ಉಗಿತ ಅವನಿಗೆ ಮತ್ತಷ್ಟು ಹುರುಪು ತುಂಬಿರಬೇಕು, ಎಲ್ಲರೆದುರೇ ತನ್ನ ಲೀಲೆಗೆ ಶುರುವಿಟ್ಟ. ಹೌದು… ಎಲ್ಲರೆದುರೇ!!
ಬಸ್ಸಲ್ಲಿ ಕುಂತಿದ್ದವರೆಲ್ಲರೂ ನಾನೂ ಅದನ್ನ ನೋದಿಯೂ ನೋಡದವರಂತೆ ಇದ್ದುಬಿಟ್ಟಿದ್ದೆವು. ಆ ಹೆಂಗಸು “ತೆಗೆಯಲಾ ಮಾದರ್ ಛೋತ್…” ಅಂತೆಲ್ಲ ಅನ್ನುತ್ತ ಕೊಸರಾಡ್ತಲೇ ಇದ್ದಳು. ಅಂವ ಕೊನೆಗೂ ಏನೂ ಮಾಡಲಾಗದೆ ಸುಸ್ತು ಹೊಡೆದು ಅತ್ತಿಬೆಲೆಯಲ್ಲಿ ಇಳಿಯಹೊರಟಾಗ ‘ಮಡಗಲಾ ದುಡ್ನ’ ಅಂತ ಕಂಕುಳಲ್ಲಿ ಅವನ ಕುತ್ತಿಗೆ ಅವುಚಿ ನಿಂತುಬಿಟ್ಟಳು!

ಇವೆಲ್ಲ ರಂಪಾಟ ಮುಗಿಯುವ ಹೊತ್ತಿಗೆ ಕೆಯಿಬಿಯೆದುರು ಬಸ್ಸು ನಿಂತು ನಾನು ಇಳಿದುಕೊಂಡೆ. ಅಲ್ಲಿ ನನಗಾಗಿ ಕಾದು ನಿಂತಿದ್ದ ಬಿಳಿ ಪಂಚೆ ಹುಡುಗರು, ಸೀರೆ- ತುರುಬಿನ ಹೆಂಗಸರು, ಮನೆಯೊಳಗಿಂದ ತೇಲಿ ಬರುತ್ತಿದ್ದ ಧೂಪದ ಘಮ, ಅಂಗಳದ ಹಾದಿಯುದ್ದಕ್ಕೂ ನೆಟ್ಟಿದ್ದ ಧ್ಯೇಯ ವಾಕ್ಯಗಳು…. ಇವೆಲ್ಲವೂ ಟೀವಿಯಲ್ಲಿ ತೋರುವ ಹಾಗೆ ಕಾಣತೊಡಗಿ, ಬರೀ ಬಸ್ಸಿನ ತುಂಬ ತುಂಬಿದ್ದ ಜನರೇ ಸುತ್ತ ಮುತ್ತ ಆವರಿಸತೊಡಗಿದರು. ನನ್ನದೇ ಒಂದು ಚಿಕ್ಕ ಕೋಟೆ ಕಟ್ಟಿಕೊಂಡು ಜಗತ್ತೆಲ್ಲ ಅದರಲ್ಲೇ ಇದೆ ಅಂದುಕೊಂಡಿದ್ದ ಭ್ರಮೆ ಕಳಚತೊಡಗಿತು.
ಒಳಗೆಲ್ಲೋ ಅಮ್ಮನ ದನಿ ಜೋರಾಗಿ ಕೇಳ್ತಿತ್ತು. “ಹಾಲು ಕರಿಯೋ ಮೊದಲು ಕೊಟ್ಟಿಗೆ ತೊಳೀಬೇಕು… ಓಹೋ…!! ಮೈಕೈ ಕೊಳೆಯಾಗದ ಕೆಲಸಕ್ಕೆ ಬಂದ್ಬಿಡ್ತಾರೆ ಇವ್ರು!”
ಹೌದಲ್ಲ!?
ಹಾಲು ಕರೆಯುವ ಮೊದಲು ಕೊಟ್ಟಿಗೆ ಗುಡಿಸಬೇಕು. ಆದರೆ, ಪೊರಕೆ ಎಲ್ಲಿದೆ!?

(ಇದು ಕೆಂಡ ಸಂಪಿಗೆಗಾಗಿ ಬರೆದಿದ್ದು)