ಹಳಬನಾಗೋದಿಲ್ಲ ರಾಮ….

ch39

ನಕ್ಕರೆ, ನೋಡಿದರೆ, ಬೆವರಿದರು – ಸೀನಿದರೂ ಮಕ್ಕಳಾಗ್ತವೆ ಪುರಾಣಗಳಲ್ಲಿ.
ರಾಮ ನಡೆದಲ್ಲೆಲ್ಲ ರೋಮ ಉದುರಿಸಿದ್ದನೇನೋ!
ನಮ್ಮ ಬಹಳಷ್ಟು ಗಂಡಸರಿಗೆ ಸಂಶಯ ವಂಶವಾಹಿ!!
~
ಬೆಂಕಿಗೆ ಸೀತೆಯನ್ನ ಸುಡಲಾಗಲಿಲ್ಲ
ರಾಮನ ಸಂಶಯವನ್ನೂ…
~
ಹಳಬನಾಗೋದಿಲ್ಲ ರಾಮ, ಅವನ ಕಥೆಯೂ…
ಇಲ್ಲಿ ಹೆಣ್ಣುಗಳು ಇನ್ನೂ ತಿರಸ್ಕರಿಸಲ್ಪಡುತ್ತಲೇ ಇದ್ದಾರೆ
ಅನುಮಾನದಲ್ಲಿ.
~

ರಾಮನಿಗೆ ಅಗ್ನಿದಿವ್ಯಕ್ಕಿಂತ ಮಡಿವಾಳನ ಮಾತೇ ಹೆಚ್ಚಾಗಿದ್ದು
ಅವು ತನ್ನವೂ ಆಗಿದ್ದವೆಂದೇ ತಾನೆ?
ಇಲ್ಲದಿದ್ದರೆ ಅಂವ ಶಂಭೂಕನನ್ನ ಕೊಲ್ತಿರಲಿಲ್ಲ…
~

ಶಂಭೂಕರು ಮತ್ತು ಸೀತೆಯರನ್ನು  ಗೋಳಾಡಿಸುವ ನೆಲಕ್ಕೆ
ನೆಮ್ಮದಿ ಮರೀಚಿಕೆ.
ರಾಮನಿಗಾಗಿ ಇಟ್ಟಿಗೆ ಹೊರುವವರಿಗೆ ತಾವು
ದೇಶದ ಗೋರಿ ಕಟ್ಟುವ ತಯಾರಿಯಲ್ಲಿರೋದು ಗೊತ್ತಿಲ್ಲವಾ?
~

ಭಾಮಿನಿ ಷಟ್ಪದಿ

bs

ಭಾಮಿನಿ ಷಟ್ಪದಿಯ ಪ್ರತಿಗಳು ಖಾಲಿಯಾಗಿವೆ. ಪುನರ್‌ಮುದ್ರಣ ಮಾಡುವ ಬದಲು ಹೀಗೆ ಪಿಡಿಎಫ್ ಪ್ರತಿ ಅಪ್‌ಲೋಡ್‌ ಮಾಡಿದರೆ ಆಸಕ್ತರೆಲ್ಲರೂ ಓದಿಕೊಳ್ಳಬಹುದು. ಇಷ್ಟವಾಗಲಿಲ್ಲವೆಂದರೆ ದುಡ್ಡು ದಂಡವಾಯ್ತೆಂದು ಗೊಣಗಿಕೊಳ್ಳುವ ಗೋಜಿಲ್ಲ…  bhamini ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಪುಟಗಳು ತೆರೆದುಕೊಳ್ಳುವವು….    bhamini

ಎರಡು ಪದ್ಯಗಳ ನಡುವಿನ ಅಂತರ….

ನೆನ್ನೆ ಒಂದು ಪದ್ಯ ಬರೆದೆ…

~ ಕಲ್ಲು ದೇವರನ್ನೆ ಪ್ರೇಮಿಸಬೇಕು!~

ಬಹಳ ಸರ್ತಿ ಅನ್ನಿಸತ್ತೆ
ಕಲ್ಲು ದೇವರನ್ನೆ
ಪ್ರೇಮಿಸೋದು ಒಳ್ಳೇದು.
ಅಂವ ಮೈ ಮುಟ್ಟೋದಿಲ್ಲ,
ಕೂಡು ಬಾರೆಂದು ಕಾಡೋದಿಲ್ಲ.
ಅಕ್ಕ, ಮೀರಾ, ಲಲ್ಲಾ, ಆಂಡಾಳ್,
ನಾಚ್ಚಿಯಾರ‍್, ಅವ್ವೈಯಾರ‍್
ಜಾಣೆಯರ ಸಾಲು
ಹೇಳಿ ಹೋದ ಪಾಠ
ಇದೇ ಇರಬೇಕು!
– ಅಂತ….

~

ಬಹಳ ಹಿಂದೆ, ಸುಮಾರು ಏಳೆಂಟು ವರ್ಷಗಳ ಹಿಂದೆ ಒಂದು ಪದ್ಯ ಬರೆದಿದ್ದೆ…

~ ಆತ ಸಜೀವ ಗಂಡಸಾಗಿದ್ದ~

ಮಹಾದೇವಿ ಅಕ್ಕ ಆಗಿದ್ದು
ಕೈ ಹಿಡಿದವನ ಬಿಟ್ಟು
ಕಲ್ಲು ಚೆನ್ನ ಮಲ್ಲಿಕಾರ್ಜುನನ್ನೇ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ಅವನ ಮೇಲೆ ಹಾಡು ಕಟ್ಟಿದ್ದಕ್ಕೆ…..
ಮೀರಾ ಸಂತಳೆನಿಸಿದ್ದೂ
ಪತಿಯನ್ನ ತೊರೆದು
ಗೊಂಬೆ ಮಾಧವನ್ನ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ತಂಬೂರಿ ಹಿಡಿದು ಹಾಡಿದ್ದಕ್ಕೆ….
ಮಹಾದೇವಿ ಅಕ್ಕ ಆಗಿದ್ದು
ಕೈ ಹಿಡಿದವನ ಬಿಟ್ಟು
ಕಲ್ಲು ಚೆನ್ನ ಮಲ್ಲಿಕಾರ್ಜುನನ್ನೇ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ಅವನ ಮೇಲೆ ಹಾಡು ಕಟ್ಟಿದ್ದಕ್ಕೆ…..
ಮೀರಾ ಸಂತಳೆನಿಸಿದ್ದೂ
ಪತಿಯನ್ನ ತೊರೆದು
ಗೊಂಬೆ ಮಾಧವನ್ನ
ಗಂಡನೆಂದು ಬಗೆದಿದ್ದಕ್ಕೆ
ದೇವರಂತೆ ಪೂಜಿಸಿದ್ದಕ್ಕೆ
ತಂಬೂರಿ ಹಿಡಿದು ಹಾಡಿದ್ದಕ್ಕೆ….
ನಾನೂ ಗಂಡನ್ನ ಬಿಟ್ಟೆ
ಮತ್ಯಾರನ್ನೋ ಧೇನಿಸಿದೆ,
ಅವನ ಮೇಲೆ ಹಾಡೂ ಕಟ್ಟಿದೆ….
ಆದರೆ ಜನ ನನ್ನನ್ನ
ಹಾದರಗಿತ್ತಿ ಅಂದರು!
ಯಾಕೆ ಗೊತ್ತಾ?
ಅಂವ ಕಲ್ಲಾಗಿರಲಿಲ್ಲ,
ಅಂವ ಗೊಂಬೆಯಾಗಿರಲಿಲ್ಲ….
ಆ ನನ್ನ ದೇವರಂಥವ,
ಸಜೀವ ಗಂಡಸಾಗಿದ್ದ.
– ಅಂತ…
ಈ ಎರಡು ಪದ್ಯಗಳ ನಡುವಿನ ಕಾಲದ ಅಂತರ ಮತ್ತು ಕಾಣ್ಕೆಯ ಅಂತರಗಳನ್ನ ತಾಳೆ ಹಾಕ್ತಿದ್ದೀನಿ.
ಕಾಲ ಕಳೆದ ಹಾಗೆ ಮನಸ್ಸು ಮಾಗಲೇಬೇಕು. ಮಾಗಿದ್ದೀನಿ, ಬಹುಶಃ…

’ಕಬ್ಬಿ’ಗಳ ಹಳ್ಳಿಕಥೆಯು….

ಗೆಳೆಯ ಕಬ್ಬಿನ ತುಂಡುಗಳನ್ನು ತಂದಿದ್ದ. ತಿನ್ನಲು ಅನುಕೂಲವಾಗಲೆಂದು ಸಿಪ್ಪೆಯನ್ನ ತೆಳುವಾಗಿ ಹೆರೆಸಿದ್ದ. ಮನೆಗೊಯ್ದ ನಾನು ಅವುಗಳಲ್ಲೊಂದು ತುಂಡು ಎತ್ತಿಕೊಂಡೆ.ಹಳ್ಳಿಯಲ್ಲೆ ಹುಟ್ಟಿ ಬೆಳೆದಿದ್ದರೂ ಹಳ್ಳಿತನ ಬಗೆದರೂ ಸಿಗದ ಮಗನೆದುರು ’ನಮ್ಮ ಕಾಲದ’ ಭಾಷಣ ಬಿಗಿಯುತ್ತ ನೀನೂ ತಿನ್ನು ಅಂತ ಒತ್ತಾಯಪಡಿಸಿದೆ.
ಕೈಗೆತ್ತಿಕೊಂಡಿದ್ದೇನೋ ಸರಿ… ಜನವರಿಯಲ್ಲಿ ಚಳಿಗಾಲ, ಕಬ್ಬು ತಿಂದರೆ ತುಟಿ ಒಡೆಯೋದಿಲ್ವಾ? ಅಮ್ಮನ್ನ ಕೇಳಿದ್ದಕ್ಕೆ ’ತಲೆಕಾಯಿ ಬಜ್ಜಿ’ ಅಂದಳು.

ಆಮೇಲೆ… ಇಲ್ಲಿ ನೋಡಿ 🙂

ಹಕ್ಕಿ ಹೆಜ್ಜೆಯ ಗುರುತು

ನನ್ನ ಪಾಲಿಗೆ ಈ ವರ್ಷ ಕಲಿಕೆಯ ಅದ್ಭುತ ಅವಕಾಶವಿತ್ತ ವರ್ಷ. ಎಷ್ಟೆಲ್ಲ ಸವಾಲುಗಳು ಸಾಲುಗಟ್ಟಿ ಬಂದಿದ್ದವು! ನನ್ನೆದೆಯೊಳಗಿನ ಹೋಮಾ ಹಕ್ಕಿ, ಉರಿದು ಬಿದ್ದರೂನು ಬೂದಿಯಾಗಲಿಲ್ಲ. ಮಾಯಾಳ ಮಾತು ಕಾಪಿ ಹೊಡೆದೆ. ‘ದೂಳ ಕಣವಾಗಿಯಾದರೂನು, ಮೇಲೇಳುತ್ತೇನೆ ನಾನು’ ಅಂದೆ. ಹಾಗೇ ಎದ್ದು ಬಂದೆ ಕೂಡಾ.

ಹೀಗೆ ವರ್ಷಕ್ಕೊಂದು ಸಾರ್ತಿ ಹೊಸ್ತಿಲ ಮೇಲೆ ನಿಂತುಕೊಂಡು ಒಳಹಣಕಿ ನೋಡೋದೊಂದು ಮಜಾ. ಆಯಾ ಹೊತ್ತಿನಲ್ಲಿ ಖುಷಿಯವು, ದುಃಖದವು ಎನ್ನಿಸಿದ್ದ ಘಟನೆಗಳೆಲ್ಲವನ್ನ ಸಿನೆಮಾದಂತೆ ನೋಡಿ ಒಂದು ನಿರುಮ್ಮಳದ ಉಸಿರು ತಳ್ಳುವುದು ಕೂಡ. ಅದೊಂದು ನೋವಿಗೆ ನಾನು ಎದೆ ಬಿರಿದು ಅತ್ತಿದ್ದು ಹಾಹಾಗೇ ನೆನಪಾದರೂ ಈ ಕ್ಷಣ ಅದರ ಕಾವು ತಟ್ಟುತ್ತಿಲ್ಲ. ಸಂತಸದ ಬಿಸುಪು ಕೂಡಾ. ಅವತ್ತಿನ ಪುಳಕವನ್ನ ಅದೇ ತೀವ್ರತೆಯಲ್ಲಿ ಮೂಡಿಸುತ್ತಿಲ್ಲ.
~
ನಾವು ಎಷ್ಟೇ ಹಿಡಿದಿಡುತ್ತೀವೆಂದರೂ ಬದುಕು ಮೂಡಿಸೋದು ಗಾಳಿಯಲ್ಲಿನ ಹಕ್ಕಿ ಹೆಜ್ಜೆಯ ಗುರುತಿನಷ್ಟೇ ಛಾಪು.
ಆದರೂ ನಾನು ಹೆಕ್ಕುತ್ತೇನೆ, ಕಾಪಿಡಬಹುದಾದ ನೆನಪುಗಳನ್ನ. ಹೀಗೆ ಸಿಕ್ಕು ಹಾಗೆ ಹೊರಟುಹೋದ ಸಹಯಾತ್ರಿಗಳನ್ನ. ಮಿಂಚಿ ಮರೆಯಾದ ಕನಸುಗಳನ್ನ. ಹಾಗೆಯೇ ಹೆಕ್ಕುತ್ತೇನೆ ಅವೆಲ್ಲ ಕಹಿಯನ್ನ, ಕೆಡುಕರನ್ನೂ. ಕೆಲವರನ್ನ ನೋಡಿ ಹೇಗಿರಬೇಕೆಂದು ಕಲಿಯಬೇಕಲ್ಲವೇ? ಹಾಗೇ ಕೆಲವರನ್ನ ನೋಡಿ ಹೇಗಿರಬಾರದು ಅಂತಲೂ ಕಲಿಯಬೇಕು. ಅದಕ್ಕಾಗಿ…ಹಳೆ ತಪ್ಪುಗಳನ್ನ ನೆನಪಿಟ್ಟುಕೊಂಡರೆ ಹೊಸ ತಪ್ಪುಗಳನ್ನ ಮಾಡೋಕೆ ಅನುಕೂಲ.

blog
ನನ್ನ ಪಾಲಿಗೆ ಈ ವರ್ಷ ಕಲಿಕೆಯ ಅದ್ಭುತ ಅವಕಾಶವಿತ್ತ ವರ್ಷ. ಎಷ್ಟೆಲ್ಲ ಸವಾಲುಗಳು ಸಾಲುಗಟ್ಟಿ ಬಂದಿದ್ದವು! ನನ್ನೆದೆಯೊಳಗಿನ ಹೋಮಾ ಹಕ್ಕಿ, ಉರಿದು ಬಿದ್ದರೂನು ಬೂದಿಯಾಗಲಿಲ್ಲ. ಮಾಯಾಳ ಮಾತು ಕಾಪಿ ಹೊಡೆದೆ. ‘ದೂಳ ಕಣವಾಗಿಯಾದರೂನು, ಮೇಲೇಳುತ್ತೇನೆ ನಾನು’ ಅಂದೆ. ಹಾಗೇ ಎದ್ದು ಬಂದೆ ಕೂಡಾ.
ಶ್ಶ್… ಬೆನ್ನು ತಟ್ಟಿಕೊಳ್ಳಬಾರದು ಹಾಗೆಲ್ಲ… ಹ್ಮ್.. ಆ ಎಚ್ಚರವಿದೆ 🙂 . ಆದರೂ ಇಂಥಾ ಜಂಭಗಳು ನನ್ನೊಳಗಿನ ಹೋರಾಟಕ್ಕೆ ಜೀವ ಕೊಡುತ್ತವೆ. ಆತ್ಮವಿಶ್ವಾಸ ತುಂಬುತ್ತವೆ… ಹಾಗೆ ಈ ಗೆಲುವಿನ ಭ್ರಮೆಗಳು ತಲೆಗೇರದಂತೆ ಅಸ್ತಿತ್ವ ಕೊಟ್ಟ ಚಪ್ಪಲಿಯೇಟುಗಳನ್ನೂ ಸಾಕಷ್ಟು ತಿಂದಿದ್ದೀನಿ. ಸಮತೋಲನ ಉಳಿಸಿಕೊಂಡಿದ್ದೀನಿ.
~
ಈ ವರ್ಷದ ಶುರುವಲ್ಲಿ ನಾನು ಒಂದು ದಿನವನ್ನೂ ಬಾಕಿ ಉಳಿಸದೆ ಡೈರಿ ಬರೀತೀನಿ ಅಂದುಕೊಂಡಿದ್ದೆ. ಹಾಗೇನೂ ಆಗಲಿಲ್ಲ. ಫೆಬ್ರವರಿಗೆ ದಿನಗಳು ಹಾರುತ್ತಾ ಮಾರ್ಚಿಗೆ ವಾರಗಳು ಉರುಳಿ, ಏಪ್ರಿಲ್ – ಮೇ ಹೊತ್ತಿಗೆ ನಿಂತೇ ಹೋಗಿತ್ತು. ನಿರೀಕ್ಷೆಯಷ್ಟು ಏರದ ಸ್ಯಾಲರಿಯ ಬಗ್ಗೆ ಬರೆದುಕೊಂಡ ಅಸಮಾಧಾನದೊಂದಿಗೆ ಡೈರಿ ಮುಗಿದಿತ್ತು.
ನಾನು ಬರೆದಿದ್ದರೂ ಪುಟ ಮಡಚಿಡಬೇಕಿದ್ದ ಎಷ್ಟೆಲ್ಲ ಗುಟ್ಟುಗಳು ಹಾಗೇ ಉಳಿದುಹೋದವು? ಇದರ ಪಟ್ಟಿ ಉದ್ದವಿದೆ. ಅದರಲ್ಲಿ ಅವನ ಹೆಸರೇ ಮೊದಲನೆಯದ್ದು. ಆಮೇಲಿನದ್ದೂ ಅವನ ಸುತ್ತಮುತ್ತವೇ…
ಮಗನ್ನ ನನ್ನ ಜತೆಗೇ ಉಳಿಸಿಕೊಂಡಿದ್ದು, ನನ್ನ ಕಳೆದ ಜನ್ಮದೂರು (ಓಹ್‌, ನಿಜ್ಜ…) ಲಡಾಖಿಗೆ ಹೋಗಿ ಬಂದಿದ್ದು, ಬೇಕು-ಬೇಡ ಎನ್ನುತ್ತಾ ಎರಡು ಪುಸ್ತಕ ಪ್ರಕಟಿಸಿದ್ದು, ಫೇಸ್‌ಬುಕ್‌ನಲ್ಲಿ ಪಿಎಚ್‌ಡಿ ಮಾಡ್ತಿರೋದು (!?), ಬ್ಲಾಗಿಂಗ್ ಕಡಿಮೆ ಮಾಡಿದ್ದು, ಕೆಲಸ ಜಾಸ್ತಿ ಮಾಡ್ತಿರೋದು,ಹುಟ್ಟಿದ ಇಷ್ಟು ವರ್ಷಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದು, ಅರ್ಥ ಕಳಕೊಂಡು ಏಳು ವರ್ಷಗಳಾಗಿದ್ದರೂ ಹದಿನೈದು ವರ್ಷದ ಲೆಕ್ಕವಿಟ್ಟುಕೊಂಡಿದ್ದ ಗಂಟು ಬಿಡಿಸಿಕೊಂಡಿದ್ದು…. ಈ ಎಲ್ಲವೂ ನನ್ನ ಪಾಲಿಗೆ ಈ ವರ್ಷದ ಮುಖ್ಯ ಘಟನೆಗಳೇ.
~
ಮುಂದಿನ ವರ್ಷಕ್ಕೇನು ಮಾಡೋದು?
ಈವರೆಗಿನ ಹೆಜ್ಜೆಗಳೆಲ್ಲ ಹೆಸರಿಲ್ಲದೆ ಅಳಿಸಿಹೋಗಲಿ ಎಂಬ ತುಡಿತವಿರುವಾಗ, ಮುಂದಿನ ಹೆಜ್ಜೆಗಳ ಬಗ್ಗೆ ಯೋಜನೆ ಮಾಡಿಕೊಳ್ಳೋದು ಹೇಗೆ?
ಬಂಡೆಯಾಗಿದ್ದು ಸಾಕು ಅನ್ನಿಸುತ್ತಿದೆ. ಎದೆಕಟ್ಟಿ ಬಿಗುವಾಗಿ ನಿಂತೂನಿಂತ ಸುಸ್ತು.
ಗಾಳಿಯಾಗುವಾಸೆ. ಆವಿಯಾಗಿ ಇಲ್ಲವಾಗಿಬಿಡುವಾಸೆ…
ನನ್ನ ಹೆಜ್ಜೆ ಹೆಜ್ಜೆಗೆ ಹೊಸ ಭೂಮಿ ತೆರೆದುಕೊಳ್ಳಲಿ. ಮುಂದಿನ ಪ್ರತಿ ಕ್ಷಣ ನಿಗೂಢವೇ ಆಗಿರಲೆನ್ನುವ ಬಯಕೆ.
ಹಾರೈಸಿ ನೀವೂ. ನಿಮಗೆ ನನ್ನ ಹಾರೈಕೆ.

ಸರಳ ರೇಖೆಯ ಸಂಕೀರ್ಣ ಅಳತೆ

ಇವತ್ತು ಸಖತ್ ಹರ್ಟ್ ಆಗ್ಬಿಟ್ಟಿದೆ.
ತಗೋ, ಮತ್ತೊಂದು ಕಥೆ ಶುರು!
ಅದು ಆಗೊದೇ ಹಾಗೆ. ಎಲ್ಲ ಸುಕೂನವಿದ್ದುಬಿಟ್ರೆ ಕಥೆಗೆ ಜಾಗವಿರೋದಿಲ್ಲ. ಖುಷಿ ಇದ್ದಲ್ಲಿ ಕಥೆ ಮುಗೀತದೆ.
ಇವಳ ವಿಷಯ ಹಾಗಲ್ಲ. ‘ಸದ್ಯ, ದಡ ಹತ್ತಿದಳು’ ಅಂದ್ಕೊಳ್ಳುವಾಗಲೆ `ಸಶೇಷ’ ಅನ್ನುತ್ತಾಳೆ.
ಅವಳು ಮಗು ಥರ. ಪೂರಾ ಮಕ್ಕಳ ಥರ.
ಅವಕ್ಕೆ ಗೊತ್ತಿರುತ್ತೆ. ಅತ್ತರೇನೇ ಅಮ್ಮ ಬಂದು ಎತ್ಕೊಳೋದು. ರಚ್ಚೆ ಹಿಡಿದರೇನೇ ಮೊಲೆತೊಟ್ಟು ಬಾಯಿಗಿಡೋದು. ಇವಳೂ ಅಂದ್ಕೊಂಡುಬಿಟ್ಟಿದಾಳೆ, ನೋವುಗಳನ್ನೆಲ್ಲ ಮುಖಕ್ಕೆಳೆದು ಗುಡ್ಡೆ ಹಾಕ್ಕೊಂಡರೇನೆ ಗಮನ ಹರಿದು ಬರೋದು.

ಅವತ್ತು ಹಾಗೇ ಆಗಿತ್ತು. ಬೆಳಗಾಗೆದ್ದು ಭೋರೆಂದು ಅಳುತ್ತ ಮಲಗಿಬಿಟ್ಟಿದ್ದಳು, ಬೆನ್ನುನೋವೆಂದು. ವೊಲಿನಿ ಸ್ಪ್ರೇ ಮಾಡಿ ಮುಗಿಯಿತು. ಇವಳ ಬೆನ್ನೋವು ಹೋಗಲಿಲ್ಲ. ಇದ್ದವರೆಲ್ಲ ಬಂದು ತಲೆಗೊಂದು ಮದ್ದು ಹೇಳಿದರು. ಉಹು…. ಹಾಗೇ ಇದೆ ಬೆನ್ನು- ಮೇಲ್ಮುಖ ಮಾಡಿಕೊಂಡು, ಮತ್ತದರ ನೋವು.
ಅಷ್ಟೊತ್ತನಕ ಬ್ಯುಸಿ ಇದ್ದವ ಕೊನೆಗೂ ಬಂದ. ಮದ್ದು ಸಿಕ್ಕಿತು- ಮುದ್ದು. ಅಂವ ಉಳಿದ ಕೆಲಸ ಬಿಟ್ಹಾಕಿ ಪಕ್ಕದಲ್ಲೆ ಉಳಿದ. ಬೆನ್ನೋವು ಹೋಯ್ತು. ಅಥವಾ ಅದು ಇರಲೇ ಇಲ್ಲ. ಅಂವ ಬಗಲಲ್ಲಿದ್ದರೂ ತಾನು ಮಲಗಿರಲೇಬೇಕೀಗ ಸುಮ್ಮನೆ. ಸರಿ ಹೋಯ್ತಂದರೆ ಎದ್ದುಹೋಗ್ತಾನಲ್ಲ! ಅಂವ ಉಳಿಯಬೆಕಂದರೆ ತಾನು ನೋಯಬೇಕು, ಇಲ್ಲಾ ನೋವು ನಟಿಸಲಿಕ್ಕಾದರೂ ಬೇಕು.
ನಾವೂನೂ ಹಾಗೇ ಅಲ್ಲ? ನಟಿಸುತ್ತಲಾದರೂ ಸರಿ, ಇಷ್ಟದವರನ್ನ ಎದುರಿಟ್ಟುಕೊಳ್ಳಬೇಕು. ಅಷ್ಟೂ ಹೊತ್ತು ಖುಷಿ ಅನುಭವಿಸೋಕೆ ಆಗದೆಹೋದರು ಸರಿ.
ಈ ಎಲ್ಲದರ ಹೊರತು ಹಾಗೇ ಖುಷಿಯಲ್ಲಿರಬಹುದು. ನಮಗಂತೂ ನೋಯುವ ಚಟ. ಖುಷಿ ಯಾವನಿಗೆ ಬೇಕು!?

ಅವಳ ಗೋಳು. `ಹರ್ಟ್ ಆಗಿಬಿಟ್ಟಿದೆ’.
`ಮಾಡ್ಕೊಳ್ಬೇಡ ಬಿಡು..’ ನಾನಂದೆ. ಉಹು… ಮಾಡ್ಕೊಳ್ಳದಿದ್ದರೂ ಅದು ಆಗುತ್ತೆ ಅನ್ನುತ್ತಾಳೆ! ಅದು ಹೇಗೋ ಕಾಣೆ. ಹೆಜ್ಜೆ ಎತ್ತಿಟ್ಟರೇನೆ ತಾನೆ ಅದು ನಡಿಗೆಯಾಗೋದು? ಹೆಜ್ಜೆ ಸುಮ್ಮನೆ ಊರಿ ನಿಂತರೆ ನಡೆಯೋದು ಹೇಗೆ?
‘ನಾನು ನಡೀತಿದೇನೆ ಅಷ್ಟೆ. ಹೆಜ್ಜೆ ಎತ್ತಿಡುವ ತಂಟೆಗೆ ಹೋಗಿಲ್ಲ!’ ಅವಳ ವಾದ. ಸುಮ್ಮನಿರುವ ಸರದಿ ನನ್ನದು.
ಇಷ್ಟಕ್ಕೂ ಆಗಿದ್ದು ತೀರ ಸರಳ ರೇಖೆಯಂಥ ಸಂಗತಿ.
`ನಾನು ಇರೋದು ಹೀಗೇನೇ’ ಅಂವ ಅನ್ನುತ್ತಿದ್ದ. ‘ನಂಗೆ ಅದೇ ಇಷ್ಟ’ ಅಂತ ಇವಳಂದು ಜತೆಯಾಗಿದ್ದಳು.
‘ನಾನು ಇರೋದೇ ಹೀಗೆ’ ಅಂವ ಅಂದ. ‘ನಾನು ಸರಿ ಮಾಡ್ಕೊಳ್ತೀನಿ’ ಅಂತ ನಿಚ್ಚೈಸಿಕೊಂಡಳು.
‘ನಾನು ಇರೋದು ಹೀಗೆ ಮಾತ್ರ’ ಅಂವ ಅನ್ನುತ್ತಲೇ ಇದ್ದಾನೆ, ಇವಳಿಗೆ ಚಡಪಡಿಕೆ. ಅಂವ ನಂಗೆ ಬೇಕಾದಹಾಗೆ ಇರುತ್ತಿಲ್ಲ. ನಂಗೆ ಹರ್ಟ್ ಆಗಿಬಿಟ್ಟಿದೆ!
~
ಇಷ್ಟೆಲ್ಲ ಮಾತುಕತೆಯ ಕೊನೆಗೆ ಅವಳು ನಾನೇ ಆಗಿರುವ ನಿಜ ನನ್ನೆದುರು. ತಪ್ಪುಗಳು ಗೊತ್ತಿದ್ದೂ ಅದರಲ್ಲೆ ಇರುವಂಥ ಬೆಪ್ಪು.
ಎಲ್ಲರೆದುರೂ ಇರುತ್ತೆ, ಎರಡು ದಾರಿ. ಆಯ್ಕೆಯ ಆರೋಪ ಮತ್ತೊಬ್ಬರ ಮೇಲೆ ಹೊರೆಸದೆ ಇದ್ದರಾಯ್ತಷ್ಟೆ.
ದುಃಖ ಪಡಬೇಕೆಂದರೆ ಎಷ್ಟೆಲ್ಲ ಕಷ್ಟಪಡಬೇಕು. ಸುಮ್ಮನಿದ್ದರೆ ಸಾಕು, ಅದೇ ಖುಷಿ.
ಮಾತು ಸುಲಭ, ಅನುಸರಣೆ ಕಡುಕಷ್ಟ.
ನನ್ನ ತಪ್ಪುಗಳನ್ನ ನೋಡಿಕೊಳ್ಳುವಷ್ಟು ಸುಧಾರಣೆ ಕಂಡಿದೇನೆ ಅನ್ನೋದೆ ನಿರಾಳ.
ಬಹುಶಃ, ಸದ್ಯದಲ್ಲೆ
ಕಥೆಗಳು ಕೊನೆಯಾಗಬಹುದು.

 

ದಸರೆಯ ಬೆಳಗಿನಲ್ಲಿ ಹಣಕಿ ಬಂದ ಹುಲಿವೇಷ

ಡಂಡರಡಟ್ಟರ ಡಂಡರಡಟ್ಟರ ಡಂಡರ….
ಪಟ್ಟೆಪಟ್ಟೆ ಹುಲಿರಾಯ ಬಾಯಲ್ಲಿ ನಿಂಬೆ ಹಣ್ಣು ಕಚ್ಚಿಕೊಂಡು ಕುಣೀತಿದ್ದರೆ ಕಾಲು ನಿಲ್ಲುತ್ತಿರಲಿಲ್ಲ ನಂದು. ಕುಣಿತದ ಲಯಕ್ಕೆ ನನ್ನ ಕೊಟ್ಟುಕೊಳ್ಳುತ್ತಾ ಹುಲಿಯ ಚೂಪು ಉಗುರು, ಕೋರೆ ಹಲ್ಲುಗಳೆಲ್ಲ ಮರೆತು ಬರೀ ಶಬ್ದದ ಮೋಡಿ ಉಳಿಯುತ್ತಾ ಹುಲಿ ವೇಷ ತೊಟ್ಟು ಕೆಂಪಗಿನ ಕಣ್ಣು ಗಿರ್ರನೆ ತಿರುಗಿಸ್ತಾ ಕುಣಿಯುತ್ತಿದ್ದವರ ಪಟ್ಟಿನಲ್ಲಿ ಕಳೆದುಹೋಗುತ್ತಾ…
ಅಪ್ಪ ಬಯ್ತಿದ್ದರು. ಗಂಡುಬೀರಿ ಹಾಂಗೆ ನಡೂ ಅಂಗಳದಲ್ಲಿ ನಿಂತುಕೊಳ್ಳೋದು ಎಂತಕ್ಕೆ? ಬಾರೆ ಒಳಗೆ…
ನಾನು ಒಳಗೆ ಹೋಗುತ್ತಿದ್ದೆ, ಜಾಣ ಮಗಳಂತೆ. ಹಿತ್ತಿಲ ಬಾಗಿಲು ನನಗಾಗಿ ಇರಿಸಿದ ಹಾಗಿತ್ತು. ಕಡತ ಹರಡ್ಕೊಂಡುಬಿಟ್ಟರೆ ಜಪ್ಪಯ್ಯ ಅಂದರೂ ಹೊರಬಾರದ ಅಪ್ಪನ್ನ ನೆಚ್ಚಿಕೊಂಡು ಹುಲಿಯವನ ಹಿಂದೆ ಹೊರಟು ಹೋಗುತ್ತಿದ್ದೆ.
ಒಂದರ್ಧ ಗಂಟೆ… ಕೇರಿ ಪೂರ್ತಿ ಬೇಟೆಯಾಡಿ ಹುಲಿವೇಷದವರು ಯಾವುದಾದರೂ ಗಡಂಗಿನಂಗಡಿ ಹೊಕ್ಕುತ್ತಿದ್ದರು, ನಾನು ಮನೆಗೆ.
ಆಮೇಲೆ ತುಂಬಾ ಹೊತ್ತು ಮೌನ. ನನ್ನ ಮೈ ಮನಸ್ಸಿನೊಳಗೆಲ್ಲಾ ಹುಲಿ ಹುಲಿ. ಯಾವುದೆಲ್ಲ ಜನ್ಮದ ಉರಿಗಳು ನೆನಪಾಗಿ ಡಂಡರಗುಟ್ಟುತ್ತಿದ್ದವು, ನಾನು ಕುಣಿಯುತ್ತಿದ್ದೆ, ಒಳಗೊಳಗೆ….
~
ನಮ್ಮೂರಲ್ಲಿ ಹಿಂಗೆ ಹುಲಿವೇಷ ಕಟ್ಟುವುದು ದಸರೆಯ ಸಮಯದಲ್ಲಾಗಿತ್ತು. (ಈಗಲೂ)
ನವರಾತ್ರಿ, ದಸರಾ ನನಗೆ ಒಂಥರಾ ಖುಷಿಖುಷಿಯ ಹಬ್ಬ. ಮನೆಯ ಹಳೆ ಹಸಿರು ಕಬ್ಬಿಣದ ಟೇಬಲ್ಲಿಗೆ ಆಗ ರಾಜಮರ್ಯಾದೆ. ನಾವು ಕೊಬ್ಬರಿ ಮಿಠಾಯಿ ಶಾಲು ಅಂತ ಕರೀತಿದ್ದ ಆರೆಂಜ್ ಶಾಲನ್ನ (ಯಾಕೆ ಹಂಗನ್ತಿದ್ವಿ ಅನ್ನೋದು ಮತ್ತೊಂದು ಸ್ಟುಪಿಡ್ ಕಥೆ!) ಅದರ ಮೇಲೆ ಹಾಸಲಾಗ್ತಿತ್ತು. ಚೌಕ ಚೌಕದ ಡಬ್ಬಗಳನ್ನ ಹಿಂದಕ್ಕೆ ಜೋಡಿಸಿ, ಅದರ ಮೇಲೆ ಬಣ್ಣದ ಕಾಗದ ಹಾಕಿ ಮುಚ್ಚಿ, ನಮ್ಮಜ್ಜನ ಅಪ್ಪನ ಕಾಲದ ರಾಮ ಸೀತೆ ಲಕ್ಷ್ಮಣರನ್ನ ನಿಲ್ಲಿಸ್ತಿದ್ದೆವು. ಕೆಳಗೆ ಹನುಮ ಮಂಡಿಯೂರಿ ಕುಂತಿರುತ್ತಿದ್ದ. ಅದರ ಮುಂದಿನ ಸಾಲುಗಳಲ್ಲಿ ರಾಧಾ ಕೃಷ್ಣ, ಶಿವ ಸಂಸಾರ, ಮಣ್ಣಿನ ಮಾಡ್ರನ್ ಗೊಂಬೆಗಳು ಇತ್ಯಾದಿ. ಆಮೇಲೆ ಕವಲೊಡೆದ ಸಾಲುಗಳಲ್ಲಿ ಪಿಂಗಾಣಿ ಗೊಂಬೆಗಳು. ಆಮೇಲೆ, ಎದುರುಗಡೆ ಒಂದಷ್ಟು ಕಪ್‌ಗಳಲ್ಲಿ- ಅವು ನಮ್ಮಪ್ಪನ ಟೈಪ್ ರೈಟರಿನ ಟೇಪಿನ ಬಾಕ್ಸ್ ಗಳು- ಅಕ್ಕಿ, ಬೇಳೆ ಇತ್ಯಾದಿಗಳನ್ನ ಹಾಕಿ, ಒಂದು ಚಿಕ್ಕ ಸ್ಟೂಲ್ ಆಟಿಕೆ ಮೇಲೆ ಉದ್ದ ಮೂಗಿನ ರಬ್ಬರ್ ಗಂಡಸನ್ನ ಕೂರಿಸ್ತಿದ್ದೆವು. ‘ತ್ತಿದ್ದೆವು’ ಅಂದ್ರೆ, ನಮ್ಮಪ್ಪ ಹೀಗೆಲ್ಲಾ ಕೂರಿಸ್ತಿದ್ದರು. ಗೊಂಬೆ ಕೂರಿಸೋದು ಹುಡುಗೀರ ಹಬ್ಬವಾದರೂ ಎಲ್ಲಾದೂ ತನ್ನಂತೆ ನಡೆಯಬೇಕು ಅಂದುಕೊಳ್ತಿದ್ದ ಅಪ್ಪ, ಅಮ್ಮನಿಗಾಗಲೀ ನನಗಾಗಲೀ ಓರಣ ಮಾಡಲಿಕ್ಕೆ ಬರುತ್ತೆ ಅಂತ ಯಾವತ್ತೂ ನಂಬಿರಲಿಲ್ಲ.
ನಂಗೆ ದೊಡ್ಡ ದೊಡ್ಡ ಕಣ್ಣು ಬಿಟ್ಕೊಂಡ ಕಾಳಿ ತುಂಬಾ ಇಷ್ಟ. ಅವಳನ್ನೇ ಸ್ವಲ್ಪ ಕೆಂಪಗೆ ಮಾಡಿ ದುರ್ಗೆ ಅಂದರೆ, ಅವಳೂ ಇಷ್ಟಾನೇ. ನಾನು ಚಿಕ್ಕವಳಿದ್ದಾಗಿಂದ ಕೇಳಿದ್ದಂತೆ, ‘ಹೆಂಗಸರಿಂದ ಮಾತ್ರ ಸಾವು ಬರಲಿ’ ಅಂದನಂತೆ ಮುಟ್ಠಾಳ ರಾಕ್ಷಸ. ‘ಹೆಂಗ್ಸಿನ ಕೈಲೇನಾಗತ್ತೆ ಗೊಲ್ಟೆ?’ ಅಂದುಕೊಂಡಿದ್ದನೇನೋ? ಅಂತೂ ಹಂಗೇ ಬಳೆ ತೊಟ್ಟ ಕೈಯಿಂದ ಶೂಲ ತಿವಿಸಿಕೊಂಡೇ ಸತ್ತನಲ್ಲ! ಅಂತ ನಂಗೆ ಖುಷಿಯಾಗುವುದಿತ್ತು. ಹಂಗಂತ ಹೇಳಿದ್ದಕ್ಕೆ ಅಪ್ಪ, ‘ಹಂಗೇನಿಲ್ಲ, ಎಲ್ಲಾ ದೇವ್ರುಗಳೂ ಒಂದೊಂದು ಶಕ್ತೀನ ಅವಳ ಮೈಯೊಳಗೆ ತುಂಬಿದ್ರು. ಅವಳು ಕೊಂದ ಶೂಲನೂ ಶಿವಂದೇ’ ಅಂದು ನೀರೆರಚಲು ಟ್ರೈ ಮಾಡುತ್ತಿದ್ರು.
ವಾದ ಮಾಡಿದರೆ ಆಗುವ ಗತಿ ಗೊತ್ತಿರುತ್ತಿದ್ದರಿಂದ, ನನ್ನ ಪಾಡಿಗೆ ಖುಷಿ ಕಂಟಿನ್ಯೂ ಮಾಡಿಕೊಳ್ತಿದ್ದೆ. ಉದ್ದ ಲಂಗ ತೊಟ್ಟು ‘ಗೊಂಬೆ ಕೂರ್ಸಿದೀವಿ, ಅರಿಷಿಣ ಕುಂಕುಮಕ್ಕೆ ಬನ್ನಿ’ ಅಂತ ಕರೆಯಲು ಹೋಗುತ್ತಿದ್ದೆ. ಅಷ್ಟೂ ದಿನ ಗೊಂಬೆಗಳನ್ನ ನೋಡಿ ಸಂಭ್ರಮಪಡುತ್ತಿದ್ದೆ.
ಗೊಂಬೆ ಬಾಗಿನ ತೆಗೆದ್ಕೊಂಡವರು, ‘ಒಳ್ಳೆ ಗೊಂಬೆ ಹಾಗೆ ಆಗಿದಾಳೆ ಮಗಳು’ ಅನ್ನುತ್ತಾ ಅಮ್ಮನ ಕಡೆ ನಿಗೂಢವಾದ ನಗು ವಗಾಯಿಸಿ ಹೋಗ್ತಿದ್ದರು.
~
ಈಗ ಮತ್ತೆ ದಸರೆ.
ನನ್ನೊಳಗಿನ ಗಂಡುಬೀರಿತನ ಹಾಗೇ ಇದೆ. ಖುಷಿಯಿಂದ ಅದನ್ನ ಒಳಗಿಟ್ಟುಕೊಂಡಿದೇನೆ.
ಅಜ್ಜನ ಅಪ್ಪನ ಕಾಲದ ರಾಮ ಸೀತೆ ಲಕ್ಷ್ಮಣರ ಗೊಂಬೆಗಳು ಅಣ್ಣನ ಮನೆ ಶೋಕೇಸಿನಲ್ಲಿ ಅನಾಥ ನಿಂತಿವೆ. ಹನುಮಂತ ಯಾವತ್ತೋ ಬಾಲ ಮುರಿದುಕೊಂಡು ಅರಳೀ ಮರದ ಕೆಳಗೆ ಹೂತು ಹೋಗಿದ್ದಾನೆ.
ಅಪ್ಪನಿಗೆನೋ ಗೊಂಬೆ ಜೋಡಿಸುವ ಆಸೆ, ಚಿರಂಜೀವಿ ಕೊಬ್ಬರಿಮಿಠಾಯಿ ಶಾಲಿನಂತೆ ಬಲವಾಗಿದೆ. ಆದರೆ ಆ ಹಸಿರು ಕಬ್ಬಿಣದ ಟೇಬಲ್, ಅದನ್ನಿಡಲೊಂದು ಜಾಗ ಎಲ್ಲೂ ಸಿಗುತ್ತಿಲ್ಲ.
ಇಷ್ಟಕ್ಕೂ ಈಗ ಅಪ್ಪನ ಮರ್ಜಿ ನಡೆಯೋದಿಲ್ಲ.
ಆದರೂ ದಸರೆ ಅಂದರೆ ಖುಷಿಯೇ. ಗೆಲ್ಲುವ ಹೆಣ್ಣುಗಳ ಉತ್ಸವ, ನನಗೆ ನನ್ನನ್ನೇ ಆಚರಿಸ್ಕೊಳ್ತಿರುವಂತೆ ಅನಿಸುತ್ತೆ.
ಜೋಡಿಸಿಟ್ಟ ಗೊಂಬೆಗಳೆಲ್ಲ ಮಾತು ಕಲಿತಿದ್ದಾವೆ. ಅವು ನಿಲ್ಲಿಸಿದಲ್ಲಿ ನಿಲ್ಲದೆ, ಎದುರು ಬಾಗಿಲಿಂದಲೇ ಹುಲಿವೇಷದ ಸದ್ದಿನ ಜಾಡು ಹಿಡಿದು ಹಾರಿಹೋಗುತ್ತಿವೆ ಅನಿಸುತ್ತೆ.

ಜಮ್ಮು, ಕಾಶ್ಮೀರ ಮತ್ತು ಲಡಾಖ್ ~ 1

ಟೇಕ್ ಆಫ್

ನನ್ನ ಪಾಲಿಗೆ ಯಾವುದಾದರೂ ಒಂದು ಊರು ನೋಡೋದು ಅಂದರೆ ಅಲ್ಲಿನ ಪ್ರಸಿದ್ಧ ಸ್ಮಾರಕಗಳನ್ನೋ ಚೆಂದದ ಕಟ್ಟಡಗಳನ್ನೋ ಅಥವಾ ಜನಪ್ರಿಯ ಪ್ರವಾಸೀ ಆಕರ್ಷಣೆಯ ಸ್ಥಳಗಳನ್ನೋ ನೋಡುವುದಲ್ಲ. ಅಥವಾ ಹಾಗೆ ಅವಷ್ಟನ್ನು ನೋಡುವುದು ಮಾತ್ರ ಅಲ್ಲ. ನಾನು ಹೋಗುವ ಊರಿನ ಒಳಹೊಕ್ಕು ಅಲ್ಲಿಯೂ ಇರುವ ನನ್ನ ಜನರನ್ನೆಲ್ಲ ಹಾದು ಬಂದಾಗಲೇ ನನ್ನ ಪ್ರವಾಸ ಪರಿಪೂರ್ಣವಾಗೋದು. ಹೀಗೇ ಇತ್ತು ನಮ್ಮ ಈ ಸರ್ತಿಯ ಜಮ್ಮು- ಕಾಶ್ಮೀರ- ಲಡಾಖ್ ಪ್ರವಾಸ ಕೂಡಾ.

ನಮ್ ಟೀಮ್
ಸಾಮಾನ್ಯವಾಗಿ ನಾವು ಪ್ರವಾಸ ಹೊರಡುವಾಗ ಬರೀ ಹುಡುಹುಡುಗರೇ ಹೋಗೋದು. ಅದರಂತೆ ಈ ಬಾರಿ ಹೊರಟಿದ್ದು ನಾನೂ ಸೇರಿದಂತೆ ಆರು ಜನರ ತಂಡ. ಗಾಬರಿಯಾಗಬೇಡಿ. ನಮ್ಮ ಪ್ರವಾಸಗಳಲ್ಲಿ ಕನ್ನಡಿ ಎದುರು ಐದು ನಿಮಿಷ ಕೂಡ ವ್ಯಯ ಮಾಡೋಕೆ ಪುರುಸೊತ್ತು ಇರುವುದಿಲ್ಲ. ಕನ್ನಡಿ ಇಲ್ಲದಲ್ಲಿ ಹುಡುಗಿಯರೆಲ್ಲಿ? ಆದರೆ ಟಾಮ್ ಬಾಯ್ ಇಮೇಜಿನ ನನ್ನನ್ನ ತನ್ನ ಪ್ರವಾಸೀ ತಂಡದಲ್ಲಿ ಸೇರಿಸಿಕೊಳ್ಳೋಕೆ ಅಣ್ಣ ಯಾವತ್ತೂ ಹಿಂದೆ ಮುಂದೆ ನೋಡಿಲ್ಲ.
ಪ್ರತಿಸಲದಂತೆ ಈ ಸಲದ ನಮ್ಮ ತಂಡವೂ ಮಜವಾಗಿತ್ತು. ಇಬ್ಬರು ಮೀನುಗಾರ ಹುಡುಗರು- ಸಚಿನ್ ಮತ್ತು ಯೋಗೀಶ್ (ಫಿಶಿಂಗ್ ಇವರ ವೃತ್ತಿ, ಫಿಶ್ ಇವರ ಜೀವ. ಪ್ರವಾಸದುದ್ದಕ್ಕೂ ರಾಜ್ಮಾ ಚಾವಲ್ ನೋಡಿನೋಡಿಯೇ ಇವರು ನಾಲ್ಕೈದು ಕೇಜಿ ಇಳಿದು ಹೋಗಿದ್ದರು!), ಫ್ಯಾಕ್ಟರಿಯೊಂದರಲ್ಲಿ ಕೆಲಸಮಾಡುವ ಚಂದ್ರಶೇಖರ್ ಉರುಫ್ ಚಂದ್ರಣ್ಣ, ಐಐಎಸ್ಸಿಯಲ್ಲಿ ಕೆಲಸ ಮಾಡ್ತಿರುವ ಎಳೆ ಹುಡುಗ ಅನೂಪ, ಅಣ್ಣ ಚಕ್ರವರ್ತಿ ಮತ್ತು ನಾನು.
ನಮ್ಮ ಆರೂ ಜನರಲ್ಲಿ ಸಾಮಾನ್ಯವಾಗಿದ್ದ ಅಂಶಗಳೆಂದರೆ ಉತ್ಸಾಹ ಮತ್ತು ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಅಡ್ಜಸ್ಟ್ ಆಗಬಲ್ಲ ವ್ಯವಧಾನ. ಊರಿನ ಒಳಹೊಕ್ಕು ಜನರ ನಡುವೆ ಇರುವ ಉದ್ದೇಶದ ನಮಗೆ ಇಂಥವರೇ ಬೇಕಿದ್ದುದು. ಸುಖ ಸವಲತ್ತಿನ ಲಾಡ್ಜ್ ನಲ್ಲಿ ಉಳಿದುಕೊಂಡು, ಕಿಟಕಿಯಾಚೆಯಷ್ಟೆ ಕಾಣುವ ಊರು ಕಣ್ತುಂಬಿಕೊಳ್ಳುವುದರಲ್ಲಿ ನನಗೆ ಮತ್ತು ಅಣ್ಣನಿಂಗಂತೂ ಚೂರೂ ಆಸಕ್ತಿ ಇಲ್ಲ. ಮಿಕ್ಕೆಲ್ಲರು ನಮ್ಮನ್ನು ಅರ್ಥ ಮಾಡಿಕೊಂಡು ಬಹಳ ಸುಲಭವಾಗಿ ಒಗ್ಗಿಕೊಂಡೂಬಿಟ್ಟರು. ಜೂನ್ ಹದಿನೆಂಟರ ಬೆಳಗ್ಗೆ ವಿಮಾನಯಾನದ ಮೂಲಕ ಶುರುವಾಯ್ತು ನಮ್ಮ ಪ್ರವಾಸ. ಅಲ್ಲಿಂದ ಮುಂದಿನ ಹದಿನೇಳು ದಿನಗಳ ಪ್ರತಿಕ್ಷಣವೂ ಅನುಭೂತಿಯ ಮೊತ್ತವೇ.

ಮೊದಲ ಸಾಹಸ
ಹದಿನೆಂಟಕ್ಕೆ ವಿಮಾನ ಹತ್ತಬೇಕಿದ್ದ ನಾವು ಹದಿನೇಳಕ್ಕೇ ನಮ್ಮ ನಮ್ಮ ಮನೆಗಳನ್ನು ಬಿಡಲು ಕಾರಣವಿತ್ತು. ದೇವನಹಳ್ಳಿ ನನ್ನಣ್ಣನ ಸೂಲಿಬೆಲೆಗೆ ಹತ್ತಿರ ಇದ್ದುದರಿಂದ, ರಾತ್ರಿ ಅಲ್ಲಿ ಉಳಿದುಕೊಂಡು, ಬೆಳಗ್ಗೆ ಅಲ್ಲಿಂದಲೇ ಏರ್ ಪೋರ್ಟಿಗೆ ಡ್ರಾಪ್ ತೆಗೆದುಕೊಳ್ಳುವ ಯೋಜನೆ ಹಾಕಿದೆವು. ಅವತ್ತು ರಾತ್ರಿ ಅಲ್ಲಿ ಬಟರ್ ಸ್ಕಾಚ್ ಪೇಸ್ಟ್ರಿ ಕಟ್ ಮಾಡಿ ಸಂಭ್ರಮಪಟ್ಟು, ಮಮ್ಮಿ ಮಾಡಿದ ರುಚಿರುಚಿ ಸೊಪ್ಪು ಸಾರು- ಅನ್ನ ಹೊಟ್ಟೆ ಭರ್ತಿ ತಿಂದು ಮಲಗಿದೆವು. ಮಮ್ಮಿ ಬೇರೆ ಇನ್ನು ಹದಿನೈದು ದಿನ ಬೇಕಂದ್ರೂ ಇಲ್ಲಿನ ಊಟ ಸಿಗಲ್ಲ, ಸರಿಯಾಗಿ ತಿಂದುಬಿಡಿ ಅಂತ ಹೆದರಿಸಿಯೇ ನಮಗೆ ಹೊಟ್ಟೆ ಬಿರಿಯುವಷ್ಟು ಬಡಿಸಿದ್ದರು. ಬೆಳಗಾಗೆದ್ದು ಇಡ್ಲಿ, ಟೊಮೆಟೋ ಗೊಜ್ಜು (ಇದು ಮಮ್ಮಿಯ ಬ್ರಾಂಡ್ ಗೊಜ್ಜು. ಅವರ ಹಾಗೆ ಟೊಮೆಟೋ ಗೊಜ್ಜು ಮಾಡಬಲ್ಲವರು ಜಗತ್ತಲ್ಲೇ ಮತ್ತೊಬ್ಬರಿಲ್ಲ ಅಂತ ನಾನು ಧೈರ್ಯವಾಗಿ ಘೋಷಿಸಬಲ್ಲೆ!) ಮಾಡಿಟ್ಟರು.
ಆದರೆ ನನಗೆ ರಾತ್ರಿಯ ಊಟವೇ ಅರಗಿಲ್ಲದೆ ಡೈನಿಂಗ್ ಟೇಬಲ್ಲಿಂದ ದೂರವುಳಿದೆ. ನಾನು ತಿಂಡಿ ತಿಂದಿಲ್ಲವೆಂದು ಮಮ್ಮಿಯ ಗಮನಕ್ಕೆ ಬರದ ಹಾಗೆ ನೋಡಿಕೊಂಡೆ. ನನ್ನಣ್ಣ ತನಗೆ ಇಡ್ಲಿ- ಗೊಜ್ಜು ಪ್ಯಾಕ್ ಮಾಡಿಕೊಡೆಂದು ಕೇಳಿದ. ವಿಮಾನದಲ್ಲಿ ತಿನ್ನುವೆ ಅಂದ. ನನಗೆ ಗಾಬರಿ. ನೀರಿನ ಬಾಟಲಿಯನ್ನೇ ಒಳಬಿಡದ ಈ ಮಂದಿ ಇಡ್ಲಿ ತರಲು ಬಿಟ್ಟಾರೆಯೇ? ಕಲಿತ ಮಾತೆಲ್ಲ ಖರ್ಚು ಮಾಡಿ ಇಲ್ಲೇ ತಿಂದುಬಿಡೆಂದು ಒಪ್ಪಿಸಲು ಯತ್ನಿಸಿ ಸೋತೆ. ಅಂವ ಜಪ್ಪಯ್ಯ ಅನ್ನಲಿಲ್ಲ. ಚೆಕಿಂಗ್ ನವರು ಡಿಯೋಡ್ರೆಂಟ್ ಮೊದಲಾದವನ್ನ ತೆಗೆದು ಡಸ್ಟ್ ಬಿನ್ ಗೆ ಎಸೆಯೋದನ್ನ ನೋಡಿದ್ದ ನಾನು ತಿಂಡಿಯನ್ನೂ ಹಾಗೆ ಎಸೆದುಬಿಟ್ಟಾರೆಂದು ಹಿಂಜರಿದೆ. ಅಣ್ಣ ಮಾತ್ರ ವಿಪರೀತ ಹುಕ್ಕಿಯಲ್ಲಿದ್ದ. ನನ್ನ ಸಾಕಷ್ಟು ಸತಾಯಿಸಿ ಆಮೇಲೆ ತನ್ನ ಆತ್ಮವಿಶ್ವಾಸದ ಕಾರಣ ಏನೆಂದು ಬಾಯಿಬಿಟ್ಟ. ಅವನು ಹಿಂದಿನ ದಿನ ತಾನೆ ಮೌಂಟ್ ಅಬು ಇಂದ ವಾಪಸಾಗಿದ್ದ. ಅಲ್ಲಿಗೆ ಉಪನ್ಯಾಸ ಕೊಡಲಿಕ್ಕೆಂದು ಅವನು ಹೋಗಿದ್ದ. ಮರಳಿ ಕರೆತರುವಾಗ ಕಾರ್ಯಕ್ರಮದ ಆಯೋಜಕರು ಅವನಿಗೆ ತಾವು ಪ್ಯಾಕ್ ಮಾಡಿಸಿ ತಂದಿದ್ದ ತಿನಿಸನ್ನೇ ವಿಮಾನದಲ್ಲಿ ಕೊಟ್ಟಿದ್ದರಂತೆ. ಅಲ್ಲಿ ಹೀಗೆ ನಾವು ಕೊಂಡೊಯ್ಯುವ ತಿನಿಸು ಅಲೋ ಮಾಡ್ತಾರೆ ಹಾಗೂ ತಿನ್ನಲು ಅಡ್ಡಿಪಡಿಸೋಲ್ಲ ಅಂತ ಅವನಿಗೂ ಆಗಲೇ ಗೊತ್ತಾಗಿದ್ದಂತೆ!
ಸರಿ… ಅಮ್ಮ ಅಣ್ಣನಿಗೆ ಮತ್ತು ಯೋಗೀಶಣ್ಣನಿಗೆ (ಅವನು ತಿಂದಿದ್ದು ಸಾಕಾಗಿಲ್ಲ ಅಂತ ಅಮ್ಮನಿಗೆ ಬಹಳವಾಗಿ ಅನ್ನಿಸಿದ್ದರಿಂದ) ಅಂತ ಒಂದಷ್ಟು ಇಡ್ಲಿ- ಗೊಜ್ಜು ಕಟ್ಟಿಕೊಟ್ಟರು. ವಿಮಾನದಲ್ಲಿ ನಮ್ಮ ಬುತ್ತಿ ಬಿಚ್ಚಿದಾಗ ಯೋಗೀಶಣ್ಣ ನಿದ್ದೆ ಹೋಗಿದ್ದ. ಇದೇ ಸುಸಮಯ ಅಂದುಕೊಂಡ ನಾನು, ಅವನ ಪಾಳಿಗೆ ಕನ್ನ ಹಾಕಿ ಎರಡು ಇಡ್ಲಿ ಖಾಲಿ ಮಾಡಿದೆ. ನಮ್ಮ ಈ ತರಲೆ ಕೆಲಸ ಮುಂದಿನೆಲ್ಲ ಯಾತ್ರೆಯ ಸ್ವಾದಕ್ಕೆ ಸ್ವಸ್ಥ ಮುನ್ನುಡಿಯಾಗಿತ್ತು.

(ಮುಂದುವರೆಯುತ್ತದೆ………….)

ಶಾಪಗ್ರಸ್ಥ ಕಿನ್ನರಿಗೆ ಹೂಘಮವೇ ತಲೆನೋವು

ಆಗಾಗ ನನಗೆ ನಾನೊಬ್ಬ ಶಾಪಗ್ರಸ್ಥ ಕಿನ್ನರಿ ಅಂತ ಅನ್ನಿಸೋದಿದೆ. ಪ್ರತಿ ಜೀವಕೋಶ ಹುಚ್ಚೆದ್ದು ಕುಣೀವಾಗಲೂ ಕುಣಿಯಲಾಗದ, ಜೀವವೇ ಹಾಡಾಗಿ ಹರೀವಾಗಲೂ ಹಾಡಲು ಬರದ, ಚಿತ್ರಗಳನ್ನ ತಿಂದುಬಿಡುವಷ್ಟು ಲಾಲಸೆಯಿಂದ ನೋಡುವುದಿದ್ದರೂ ಕುಂಚ ಕೈಯಲ್ಲಿ ಹಿಡಿಯಲೂ ಬರದ ಈ ಜನ್ಮ, ಏನೋ ತರಲೆ ಮಾಡಿ ಭೂಮಿಗೆ ದಬ್ಬಿಸ್ಕೊಂಡ ಕಿನ್ನರಿಯದ್ದೇ ಅನ್ನೋದು ನನ್ನೊಳಗಿನ ಆಲೀಸ್‌ಗಂತೂ ಖಾತ್ರಿ ಇದೆ. ಅದು ಆಲೀಸಳ ಜಗತ್ತಿನಿಂದ ಹೊರಗೂ ಖಾತ್ರಿಯಾಗತೊಡಗಿದ್ದು, ಮಲ್ಲಿಗೆ ಸುಗಂಧ ನನ್ನ ಜೀವ ಬೇಡಲು ಮುಂದಾದ ಸಂದರ್ಭದಲ್ಲಿ…
~
ನಾನು ಓದುವ ಕಾಲಕ್ಕೆ ಸಿಟಿ ಕಾನ್ವೆಂಟುಗಳಲ್ಲಿ ಮಾತ್ರ ಶಾಲೆಗೆ ಹೂ ಮುಡಿದು ಬರುವ ಹಾಗೆ ಇರಲಿಲ್ಲ. ಚೋಟುಗೂದಲಿನ ನನಗೆ ಅಮ್ಮ ಆಗೀಗ ನಾಲ್ಕು ಕನಕಾಂಬರವನ್ನೋ ಒಂದು ಗುಲಾಬಿ ಮೊಗ್ಗನ್ನೋ ಸಿಕ್ಕಿಸಿ ಚೆಂದ ಮಾಡುತ್ತಿದ್ದುದು ಬಿಟ್ಟರೆ, ನನಗೂ ಹೂ ಮುಡಿಯೋದರಲ್ಲಿ ಅಂಥಾ ಆಸಕ್ತಿ ಏನೂ ಇರಲಿಲ್ಲ. ಆಮೇಲಿನ ಹೈಸ್ಕೂಲು, ಕಾಲೇಜುಗಳ ಕಾಲಕ್ಕೆ ಸ್ಟೈಲ್ ಸ್ಟೇಟ್‌ಮೆಂಟುಗಳು ಬದಲಾಗಿ ಹೂಮುಡಿಯೋದು ಅತ್ಯಂತ ಅನಾಕರ್ಷಕ ಸಂಗತಿ ಅನ್ನುವಂತೆ ಆಗಿಹೋಗಿತ್ತು.ಎಷ್ಟೆಂದರೆ, ಅಕಸ್ಮಾತ್ ಯಾರಾದರೂ ಕಾಲೇಜಿಗೆ ಹೂಮುಡಿದು ಬಂದರೆ, ಅದರಲ್ಲೂ ಮಲ್ಲಿಗೆಯದ್ದೋ ಕನಕಾಂಬರದ್ದೋ ದಂಡೆ ಮುಡಿದು ಬಂದರಂತೂ ‘ಗ್ಯಾರೇಜ್ ಪೂಜೆ’ ಅಂತ ಟೀಸ್ ಮಾಡುತ್ತಿದ್ದೆವು. ಶುದ್ಧ ಗಂಡುಬೀರಿಯಾದ ನನಗೆ ಹೂಮುಡಿಯುವ ಮನಸ್ಸಿನ ಸೂಕ್ಷ್ಮತೆ, ಹೂವಿನ ಪ್ರೀತಿಗಳು, ಅದರ ಹಿಂದಿನ ಹೆಣ್ತನಗಳು ಅರ್ಥವೇ ಆಗ್ತಿರಲಿಲ್ಲ.
~
ಮುಂದೊಂದು ಕಾಲಕ್ಕೆ ನಾನೇ ಹೂವಾಗಿ, ಹಣ್ಣು ಬಿಡುವ ಕಾಲಕ್ಕೆ ಜಾಜಿ ಮಲ್ಲಿಗೆಯ ಆಸೆ ಶುರುವಾಯ್ತು. ಮನೆಯ ತೋಟದಲ್ಲೆ ಬಿಡುತ್ತಿದ್ದ ನಾಲ್ಕಾರು ದುಂಡುಮಲ್ಲಿಗೆಗಳನ್ನೂ ಕನಕಾಂಬರವನ್ನೂ ಸೂಜಿಯಲ್ಲಿ ಪೋಣಿಸಿ ನನ್ನ ಪುಟ್ಟ ಜಡೆಗೆ ಸಿಕ್ಕಿಸಿ ಸಂಭ್ರಮ ಪಡುವುದಿತ್ತು. ಇದ್ದಕ್ಕಿದ್ದಂತೆ ಉದ್ಭವವಾದ ನನ್ನ ಹೂಪ್ರೀತಿಯನ್ನ ಕಂಡ ಅಮ್ಮ, ನನ್ನ ಸೀಮಂತಕ್ಕೆ ದುಂಡುಮಲ್ಲಿಗೆ ಮೊಗ್ಗಿನ ಜಡೆಯನ್ನೇ ಮಾಡಿಸಿದ್ದಳು, ನಡುನಡುವೆ ಕೆಂಗುಲಾಬಿಗಳು ಇರುವಂತೆ ನೋಡಿಕೊಂಡಿದ್ದಳು. ಆಮೇಲೆ ನಾನು ಬಾಣಂತನದಲ್ಲಿ ಕಷ್ತವಾಗಬಾರದು ಅಂತ ಮುಂಜಾಗ್ರತೆ ಕ್ರಮವಾಗಿ ಪುಟ್ಟ ಜಡೆಯನ್ನ ಮತ್ತಷ್ಟು ಪುಟ್ಟದಾಗಿ ಕತ್ತರಿಸಿಕೊಂಡರೂ ಹೂ ಮುಡಿಯೋದು ಮಾತ್ರ ಮುಂದುವರೆದಿತ್ತು.
ಆದರೆ ಒಂದು ಸಂಜೆ ಹೀಗಾಯ್ತು… ಇನ್ನೇನು ಮುತ್ತುಮಲ್ಲಿಗೆ ಮೊಗ್ಗಿಗೆ ಕೈಹಾಕಿ ಎಳೆಯಬೇಕು… ಹೊಟ್ಟೆಯೊಳಗಿನ ಕಂದಮ್ಮ ಮೃದುವಾಗಿ ಒದೆಯತೊಡಗಿತು. ಅದರ ಮುದ್ದು ಕಾಲುಗಳು ಎಳೆ ಮೊಗ್ಗಿನ ಥರ ಅನ್ನಿಸಿ, ಕೈ ಹಿಂಜರಿಯಿತು. ಅಲ್ಲಿಂದ ಮುಂದೆ ಇಲ್ಲೀತನಕ ಹೂ ಕೀಳಲು ಅದು ಮುಂದಾಗಿಲ್ಲ, ದೇವರ ಪೂಜೆಗೆ ಕೂಡ.
~
ಮಗ ಹುಟ್ಟಿದ. ಆಗಿನ ದೇಹದೊಳಗಿನ ಬದಲಾವಣೆಗಳ ಜತೆ ಸೈನಸ್ ಅದರಿಕೊಂಡಿತು. ಎಂದೂ ಇಲ್ಲದ್ದು ನನ್ನ ಹತ್ತೊಂಬತ್ತನೇ ವಯಸ್ಸಿಗೆ ಹೊಸತಾಗಿ ಶುರುವಾಗಿತ್ತು. ಅದೊಂದು ವಿಚಿತ್ರ ಬಗೆಯ ಅಲರ್ಜಿ. ಮೊದಮೊದಲು ಕರ್ಪೂರ, ನಿರ್ದಿಷ್ಟ ಸುವಾಸನೆಯ ಧೂಪ, ಹೂವಿನ ಫ್ರಾಗ್ರೆನ್ಸ್ ಗಳ ಊದುಬತ್ತಿಗಳು ತಲೆನೋವು ತರಿಸತೊಡಗಿದವು. ಚೆನ್ನಾಗಿ ನೆನಪಿರುವಂತೆ, ‘ಮೋಗ್ರಾ’ ಮತ್ತು ‘ಚಂಪಕ್’ ಊದುಬತ್ತಿಗಳು ನನ್ನ ಕಣ್ಣು ಕೆಂಪಗಾಗಿಸಿ ಜ್ವರ ಮಲಗಿಸಿಬಿಡ್ತಿದ್ದವು. ನಾನು ಪೂಜೆ ಕೋಣೆಯಿಂದ ದೂರದೂರವೆ ಇರತೊಡಗಿದೆ. ನಾನು ಒಳಗೊಳ್ಳಲೇಬೇಕಾದ ಪೂಜೆಗೀಜೆಗಳಿಗೆ ‘ಗಂಧದ ಸ್ಮೆಲ್ ಊದುಬತ್ತಿ ತಂದ್ರೆ ಮಾತ್ರ ಕೂರ್ತೀನಿ. ಮೊಲ್ಲೆ ಬೇಡ- ಕಾಕಡ, ಕನಕಾಂಬರ ಆದ್ರೆ ಓಕೆ’ ಅಂತೆಲ್ಲ ಕಂಡಿಶನ್ ಹಾಕತೊಡಗಿದೆ. ಅವರು ಒಳಗೊಳಗೆ ‘ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ’ ಅಂತ ಅಂದುಕೊಳ್ತಿದ್ದರೇನೋ, ಕೆಲಸವಾಗಬೇಕಿದ್ದರಿಂದ ನನ್ನ ಕಾಲು ಕಟ್ಟಿ ಸಮ್ಮತಿಸುತ್ತಿದ್ದರು. ಉಳಿದಂತೆ ದೊಡ್ದ ಮನೆಯಾಗಿದ್ದರಿಂದ ಒಳಗೆ ಘಮ ಹಬ್ಬಿದಾಗೆಲ್ಲ ನಾನು ಮೂಗು ತಪ್ಪಿಸ್ಕೊಂಡು ಅಲೆಯಲು ಸಾಕಷ್ಟು ಅವಕಾಶ ಇರುತ್ತಿತ್ತು.
ನನಗೆ ಬಂದಿರೋ ಈ ವಿಚಿತ್ರ ಕಾಯಿಲೆ ಎಂಥದ್ದು ಅಂತ ಜೀವಂಧರ ಜೈನರ ಬಳಿ ಕೇಳಿದಾಗ ಅದು ಸೈನಸ್ ಪ್ಲಸ್ ಫ್ರಾಗ್ರೆನ್ಸ್ ಅಲರ್ಜಿ ಅಂತ ಒಂದು ಹೆಸರಿಟ್ಟರು. ನಾನು ವಾರಗಟ್ಟಲೆ ಜ್ವರ ಮಲಗುವುದರಿಂದ ಬಚಾವಾಗಬೇಕು ಅಂದರೆ ಕೆಲವು ಪಥ್ಯದ ಜತೆ ಹೂವಿಂದಲೂ ಮಾರ್ಟಿನ್ ಇತ್ಯಾದಿಯಿಂದಲೂ ದೂರವುಳಿಯಬೇಕು ಅಂದರು. ಒಂದೈದು ನಿಮಿಷ ಈ ಕೀಟನಾಶಕದ ಸ್ಮೆಲ್ ಉಸಿರಾಡಿದರೂ ನನ್ನ ಪರಿಸ್ಥಿತಿ ಬಿಗಡಾಯಿಸಿಹೋಗುತ್ತಿತ್ತು. ಅನ್ನುವಲ್ಲಿಗೆ, ನಾನು ಕೀಟದಷ್ಟು ಕಡೆಯಾಗಿ ಹೋಗಿದ್ದೆ!
~
ಬೆಂಗಳೂರು ಸೇರಿದೆ. ದಿನದ ಹಡದಿಗಳಲ್ಲಿ ರೋಗ ಊರು ಸೇರಿತ್ತು. ಆಗೀಗ ಬುಕ್ ಶೆಲ್ಫ್ ಕ್ಲೀನ್ ಮಾಡಿದಾಗ ಒಳಸೇರಿದ ದೂಳು, ಜಿರಳೆ ಕೊಂದ ಪಾಪದ ಫಲವಾಗಿ ಅದರ ಗಬ್ಬು ವಾಸನೆ + ಮಾರ್ಟಿನ್‍ಗಳು ಪಪ್ಪುಸ ಸೇರಿದ್ದು, ಇಸ್ಕಾನಿನಲ್ಲಿ ಕೆಲಸ ಮಾಡುವಾಗ ವಿಶೇಷ ಹಬ್ಬಗಳಲ್ಲಿ ಮಾಡ್ತಿದ್ದ ಅಲಂಕಾರದ ಘಮ ಹಬ್ಬಿ ತಲೆನೋವು- ಇತ್ಯಾದಿಗಳಿಂದ ಸೈನಸ್ ಮರುಕಳಿಸುತ್ತಿತ್ತು. ಆಮೇಲೆ ಬುದ್ಧಿ ಕಲಿತು ದೂಳು ಹೀಡಿಯುವ ತನಕ ಕಾಯದೆ ಶೆಲ್ಫ್ ಕ್ಲೀನ್ ಮಾಡತೊದಗಿದೆ. ‘ನಾಕ್‌ರೋಚ್’ ಇಟ್ಟು ಜಿರಳೆಗಳನ್ನು ಬರದಂತೆ ತಡೆಯುವಲ್ಲಿ ಯಶಸ್ವಿಯಾದೆ. ಉಳಿದ ಸಮಯ ಆಫೀಸಲ್ಲೆ ಇರುತ್ತಿದ್ದರಿಂದ, ಮತ್ಯಾವ ಆತಂಕವೂ ಇರಲಿಲ್ಲ. ಇಷ್ಟಕ್ಕೂ ಬೆಂಗಳೂರಲ್ಲಿ (ನಾನು ಹಳ್ಳಿ ಹೆಣ್ಣು. ನನ್ ಪಾಲಿಗೆ ಬೆಂಗಳೂರು ಬರೀ ಆಧುನಿಕರ ಗೂಡು ಅಂತ ಆಗಿತ್ತು) ಯಾರು ತಾನೆ ಮಲ್ಲಿಗೆ ಮುಡಿದು ಆಫೀಸಿಗೆ ಬರ್ತಾರೆ? ಅನ್ನೋ ಧೈರ್ಯವೂ ಇತ್ತು. ಬದಲಾಯಿಸಿದ ಯಾವ ಆರು ಆಫೀಸುಗಳಲ್ಲೂ ಹೂವಿನ ಕಾಟ ಇರಲಿಲ್ಲ.
ಈಗ…
ಬೆಂಗಳೂರು ಹುಡುಗೀರ ಬಗ್ಗೆ ಇದ್ದ ನನ್ನ ಎಣಿಕೆ ತಪ್ಪಾಗಿದೆ.
ಇಷ್ಟಕ್ಕೂ ಒಂದು ಹೆಣ್ಣು ಮಗುವಿಗೆ ಹೂ ಮುಡೀಬೇಡ ಅಂತ (ಅದು ರಿಕ್ವೆಸ್ಟ್ ಆಗಿದ್ದರೂ ಅಷ್ಟೇ) ಹೇಳೋದು ಅಮಾನವೀಯ. ಈ ಮಲ್ಲಿಗೆ ಋತು ಯಾವಾಗ ಮುಗೀತದೋ ಅಂತ ಕಾಯುತ್ತ ಇದ್ದೀನಿ.
ಹೆಣ್ಣಾಗಿ ಹೂ ಸಹಿಸಲಾಗದ ಅಸಹಾಯಕತೆಗೆ ನನ್ನೊಳಗಿನ ಕಿನ್ನರಿ ಬಿಕ್ಕಿಬಿಕ್ಕಿ ಅಳುತ್ತಿದ್ದಾಳೆ.

ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ….

‘ಆಹ್! ಚೆಂದವಿದೆ!’ ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. – ಹಾಗನ್ನುತ್ತೆ ತಾವೋ.
‘ನಾ ನಿನ್ನ ಪ್ರೀತಿಸ್ತೀನಿ’ ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು.
~
ಎಷ್ಟು ನಿಜ ನೋಡಿ… ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ ಜಗತ್ತನ್ನೆಲ್ಲ ಸಮವಾಗಿ ಕಂಡ ದೊಡ್ಡವರು ಎಲ್ಲರನ್ನೂ ಹೀಗೇ- ದಾರಿಹೋಕರ ಹಾಗೇ ಕಂಡಿರಬೇಕು…
ಒಂದು ಇದೆ ಅಂದಾಗಲೇ ಮತ್ತೊಂದು ಹುಟ್ಟಿಕೊಳ್ಳೋದು. ಆ ಒಂದನೆಯದರ ಇರುವಿಕೆ ಸಾಬೀತಾಗಲೆಂದೇ ಮತ್ತೊಂದರ ಬರುವಿಕೆಗೆ ದಾರಿಯಾಗೋದು. ಬಂಧುಗಳ ಕಿವಿಮಾತು ಹೇಳೋಲ್ವೇ, ‘ಆಗಾಗ ಜಗಳಾಡ್ತ ಇದ್ರೇನೇ ಪ್ರೀತಿ ಎಷ್ಟಿದೆ ಅಂತ ಗೊತ್ತಾಗೋದು’ ಅಂತ!
ಪ್ರೀತಿಯ ಸಾಬೀತಿಗೆ ಶುರುವಾಗುವ ಜಗಳ ರೂಢಿಯಾಗಿಬಿಟ್ಟರೆ ಕಷ್ಟ. ಕೈಮೀರಿ ಹೋದರೆ ತುಂಬಾನೇ ಕಷ್ಟ.
~
ಅನ್ನಿಸುತ್ತೆ, ‘ನಿನ್ನ ಬಿಟ್ಟಿರಲಾರೆ ಕಣೋ’ ಅನ್ನುವಾಗಿನ ಆರ್ತತೆಯಲ್ಲಿ ಬಿಟ್ಟಿರ ಬೇಕಾದ ಭಯ ಮತ್ತು ಬಿಟ್ಟಿರಬೇಕೆಂಬ ಹಂಬಲಗಳೆರಡೂ ಹುದುಗಿರುತ್ತವೇನೋ!
ಅಂಥದ್ದೊಂದು ಹಂಬಲ ಹುಟ್ಟದ ಹೊರತು, ಅ ಭಯ ಬರೋದಾದರೂ ಎಲ್ಲಿಂದ!?
~
ಅದಕ್ಕೇ, ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ,
ಅಂಟಿಕೊಂಡಿಲ್ಲದ, ಬಿಡಲಾಗದ
ಚೆಂದದೊಂದು ಸಂಬಂಧ ಅವನೊಡನೆ ಸಾಧ್ಯವಾಗಬೇಕು.
ಆಗಲಾದರೂ ಅವನೂ ಒಬ್ಬ ಹಾದಿಹೋಕನಂತೆ, ಜೊತೆಯಾತ್ರಿಯಂತೆ, ಎಲ್ಲರಂತೆ ಅನ್ನಿಸುತ್ತ ಕೊನೆತನಕ ಜತೆ ನಡೆಯಬಹುದು.
ಅಥವಾ ಎಲ್ಲರನ್ನು ಅವನಂತೆ ಭಾವಿಸ್ತಾ, ಹರಿವಿನಲ್ಲಿ ಒಂದಾಗಿ ಕ್ಷಣಕ್ಷಣದ ತುದಿಯನ್ನ ಮುಟ್ಟುತ್ತ ಇರಬಹುದು.