ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು!

ನನ್ಮಗ ಬೆಳಗ್ಗಿಂದ ಪುಸ್ತಕ ಹಿಡಿದು ತನ್ನ ಪಾಡಿಗೆ ತಾನು ಓದ್ಕೊಳ್ಳತೊಡಗಿದ್ದ. ನನಗಾಗಲೇ ಸಣ್ಣಗೆ ಅನುಮಾನ ಶುರುವಾಗಿತ್ತು. ಏನೂ ಲಾಭವಿಲ್ಲದೆ ಅಂವ ಹಂಗೆಲ್ಲ ಅಜ್ಜಿ ಹತ್ರ ಬೈಸ್ಕೊಳ್ಳದೆ ಪುಸ್ತಕ ಹಿಡಿಯೋ ಜನ ಅಲ್ಲ.
ಮಧ್ಯಾಹ್ನ ಒಂದು- ಒಂದೂವರೆ ಅನ್ನೋ ಹೊತ್ತಿಗೆ ನನ್ನ ಅನುಮಾನ ನಿಜವಾಯ್ತು. ಮಾವ- ಅಳಿಯನ ಮ್ಯಾಚ್ ಫಿಕ್ಸಿಂಗ್ ನಡೆದು, ಇಂವ ಅವನ ಹತ್ತಿರ ಮ್ಯಾಚ್ ಆನ್ ಲೈನ್ ಮ್ಯಾಚ್ ನೋಡಬಹುದಾದ ಲಿಂಕ್ ಗುರುತು ಮಾಡಿಟ್ಟುಕೊಂಡಿದ್ದ. `ಬೇರೆ ಆಗಿದ್ದಿದ್ರೆ ಗ್ಯಾರಂಟಿ ನೋಡ್ತಿರ್ಲಿಲ್ಲ ಮುನ್ನೀ, ಇದು ಇಂಡಿಯಾ ಪಾಕಿಸ್ತಾನ ಮ್ಯಾಚ್ ಅಲ್ವಾ…. ಅದಕ್ಕೆ…’ ಅಂತ ರಾಗ ಎಳೆದು, ಮಸ್ಕಾ ಹೊಡೆದ. ಸರಿ, ಇವನೊಬ್ಬ ಕಡಿಮೆ ಇದ್ದ ಅಂದ್ಕೊಂಡು, `ಎಲ್ಲಾ ಪ್ರಶ್ನೆ ಉತ್ರ ಒಪ್ಸಿದಾನೆ’ ಅನ್ನುವ ನನ್ನಮ್ಮನ ಶಿಫಾರಸಿನ ಮೇಲೆ ನಾನು ಸುಮ್ಮಗಾಗಬೇಕಾಯ್ತು.
~
ಕ್ರಿಕೆಟ್! ಮೊನ್ನೆ ಸಚಿನ್ನನ ನೂರನೇ ನೂರು ದಾಖಲೆ ಆದಾಗಿಂದ ಅದರ ಮಾತು ಮತ್ತೆ ಜೋರಾಗಿದೆ. ಅಥವಾ ನಾನು ಆ ಬಗೆಗಿನ ಮಾತುಗಳಿಗೆ ಕಿವಿ ತೆರೆದುಕೊಳ್ತಿದ್ದೀನಿ.
ಅದ್ಯಾಕೋ ನಂಗೆ ಮೊದಲಿಂದ್ಲೂ ಈ ಆಟಗಳು ದೂರ ದೂರ. ಹಾಗಂತ ನಾ ಏನೂ ಗೂಬೆ ಮರಿ ಹಾಗಿ ಮನೇಲಿ ಕೂರ್ತಿದ್ದವಳಲ್ಲ. ಚಿಕ್ಕವಳಿದ್ದಾಗ ಹುಡುಗರೊಟ್ಟಿಗೆ ಮಾವಿನ ಮರಕ್ಕೆ ಕಲ್ಲು ಹೊಡೆಯೋದು, ಹತ್ವಾರರ ಹಿತ್ತಲಿಂದ ಕಂಚಿ ಕಾಯಿ ಕದಿಯೋದು, ಕಲರ್ ಬಾಯಮ್ಮನ ಅಮಟೆ ಮರವನ್ನ ಧ್ವಂಸ ಮಾಡೋದು ಇತ್ಯಾದಿ ಸಾಹಸಗಳಲ್ಲಿ ಮುಳುಗಿರುತ್ತಿದ್ದವಳು. ಜತೆಗೆ ಸುಬ್ಬ ಸೂರಿಯೊಟ್ಟಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ‘ಕೊಲ್ಲೂರ್ ಬೆಂಗ್ಳೂರ್’ ಬಸ್ ಆಟ, ಗಾಳಿಪಟ, ಕೊಡ ದಬಾಕಿಕೊಂಡು ಈಜು ಕಲಿಯೋದು ಇತ್ಯಾದಿ ಮಂಗ ವಿದ್ಯೆಗಳನ್ನೂ ಎಗ್ಗಿಲ್ಲದೆ ನಡೆಸ್ತಿದ್ದವಳು. ನನ್ನಪ್ಪ ‘ಏನಮ್ಮ, ಶಟಲ್ ಕಾಕ್ ಗಿಟಲ್ ಕಾಕ್ ಆಡೋದ್ ಬಿಟ್ಟು, ಹೀಗೆ ಹುಡುಗರ ಜತೆ ಸುತ್ತುತೀಯಲ್ಲ’ ಅಂತ ಬಯ್ದು, ಬುದ್ಧಿ ಹೇಳಿದ್ದೆಲ್ಲ ನೀರಲ್ಲಿ ಹೋಮವಾಗ್ತಿತ್ತು. ಇಂಥಾ ಜಿಗಿಯುವ ಜೀವಕೋಶಗಳನ್ನ ಮೈತುಂಬ ಹೊತ್ತುಕೊಂಡಿದ್ದ ನಾನು ಮೂರಾರು ಗಂಟೆಗಳ ಕಾಲ ಟೀವಿ ಮುಂದೆ ಕುಂತು ‘ಸೋಮಾರಿಗಳ ಆಟ’ ನೋಡೋಕಾದರೂ ಹೇಗೆ ಸಾಧ್ಯವಿತ್ತು ಹೇಳಿ!? (ಬಿಡ್ತು… ಬಿಡ್ತು… ಬಿಡ್ತು… ಕ್ಷಮಿಸ್ಬಿಡಿ)
ಆದರೂ ನಾನೊಂದು ಸಲ ಕ್ರಿಕೆಟ್ ನೋಡಿಬಿಟ್ಟಿದ್ದೆ. ಅದು ಕೂಡಾ ಪೂರಾ ಮ್ಯಾಚು. ಬಹುಶಃ ನಾನು ಹತ್ತೋ ಹನ್ನೊಂದೋ ಕ್ಲಾಸಿನವಳು ಆಗ. ವಲ್ಡ್ ಕಪ್ ನಡೀತಿತ್ತು, ಇಂಡಿಯಾ ಪಾಕಿಸ್ತಾನ ಮ್ಯಾಚು ಬಿದ್ದಿತ್ತು. ಒಂಥರಾ ಯುದ್ಧ ಘೋಷಣೆಯಾದಂಥ ವಾತಾವರಣ. ಮೂರು ದಿನದಿಂದ ಅಣ್ಣಂದಿರು, ಕ್ಲಾಸ್ ಮೇಟ್ ಗಳು ಅದರ ಬಗ್ಗೆಯೇ ಮಾತಾಡೀ ಮಾತಾಡೀ ಈ ಮ್ಯಾಚ್ ನೋಡದವರು ದೇಶ ದ್ರೋಹಿಗಳು ಅನ್ನುವಂಥ ಭಾವ ಬಿತ್ತಿಬಿಟ್ಟಿದ್ರು. ಅದೇನು ಪುಣ್ಯವೋ, ನಾನು ಅವತ್ತಿಡೀ ಕುಂತು ನೋಡಿದ್ದ ಮ್ಯಾಚಲ್ಲಿ ಭಾರತ ಗೆದ್ದುಬಿಟ್ಟಿತ್ತು! ಖುಷಿಯಾದ ನನ್ನ ಕಸಿನ್, `ಗಾತಿ, ಇನ್ಮೇಲೆ ಭಾರತ- ಪಾಕಿಸ್ತಾನ ಮ್ಯಾಚ್ ಇದ್ದಾಗೆಲ್ಲ ನೀನು ನೋಡು ಆಯ್ತಾ? ಆಗ ನಾವು ಗೆಲ್ತೀವಿ’ ಅಂದು, ಹತ್ತು ರೂಪಾಯಿನ ಡೈರಿಮಿಲ್ಕ್ ಕೊಡಿಸಿದ್ದ. ಭಾರತವನ್ನ ಗೆಲ್ಲಿಸಲಿಕ್ಕೆ ನೋಡ್ತೀನೋ ಇಲ್ವೋ, ಡೈರಿ ಮಿಲ್ಕಿಗೋಸ್ಕರವಾದ್ರೂ ನಾ ತಪ್ಸೋದಿಲ್ಲ ಅಂತ ಅವನಿಗೆ ಮಾತು ಕೊಟ್ಟು ನಾನು `ದೊಡ್ಡ ಜನ’ ಆಗಿಬಿಟ್ಟಿದ್ದೆ!!
~
ಈವತ್ತು ಇದೆಲ್ಲ ನೆನಪಾಗಿದ್ದು ನನ್ಮಗನ ದೆಸೆಯಿಂದ.
ಅಂವ ಮ್ಯಾಚ್ ನೋಡ್ತಿದ್ನಾ, ಆಯಾ ಓವರಿನ ಸುಖ ದುಃಖಗಳನ್ನ ಹಂಚ್ಕೊಳ್ಳೋಕೆ ಅವಂಗೊಂದು ಕಿವಿ ಬೇಕಾಗಿತ್ತು. ಮೊನ್ನೆಮೊನ್ನೆ ಇನ್ನೂ ಆಫೀಸಲ್ಲಿ ಗೆಳೆಯರೊಬ್ಬರು ನಡೆಸಿದ ಕ್ರಿಕೆಟ್ ಕ್ವಿಜ್ಜಲ್ಲಿ ‘ಸ್ಟಂಪ್ ಅಂದ್ರೆ ಕಾಲಿಗೆ ಕಟ್ಕೊಳ್ತಾರಲ್ಲ, ಅದು…’ ಅಂದು ಕ್ಲೀನ್ ಬೋಲ್ಡ್ ಆಗಿದ್ದ ನನ್ನ ಕಥೆ ಅವಂಗೆ ಗೊತ್ತಿತ್ತು. ಅದಕ್ಕಾಗಿ ನನ್ನನ್ನ ಲೆಕ್ಕಕ್ಕೇ ಇಡದೆ ಹೊತ್ತು ಹೊತ್ತಿಗೂ ಹುಷಾರಿಲ್ಲದೆ ರೂಮಲ್ಲಿ ಮಲಗಿದ್ದ ನನ್ನಮ್ಮನ ಬಳಿಗೋಡಿ ‘ಅಜ್ಜೀ… ಪಾಕಿಸ್ತಾನ ಮುನ್ನೂರ್ ದಾಟ್ತು…’ ‘ಅಜ್ಜೀ…. ಸಚಿನ್ ಸೂಪ್ಪರು…’ ಅಂತೆಲ್ಲ ಕಮೆಂಟರಿ ಕೊಡ್ತಾ ಇದ್ದ. ಅಮ್ಮನೂ ಕೈಲೇನೂ ಸಾಗದೆ ಇದ್ದರೂ ಅವನಿಗೆ ಹೂಂ ಗುಟ್ಟುತ್ತ ಆ ಖುಷಿಯಲ್ಲೆ ಹುಷಾರಾಗುತ್ತ ಇದ್ದಳು.
ಈ ನಡುವೆ ಅಮ್ಮನ ಕ್ರಿಕೆಟ್ ಪ್ರೇಮವನ್ನ ಹೇಳಿಬಿಟ್ಟರೆ ಒಳ್ಳೇದು.
ನನ್ನಮ್ಮನಿಗೆ ಕ್ರಿಕೆಟ್ ಅಂದ್ರೆ ವಿಪರೀತ ಗೀಳು. 1984ರಲ್ಲಿ ನಮ್ಮನೆಗೆ ಈಸಿ ಟೀವಿ ತಂದಾಗಿನಿಂದ ಅಂಟಿಕೊಂಡಿದ್ದ ಈ ಸಂಭ್ರಮ ಈ ದಿನದ ತನಕವೂ ಅಷ್ಟೇ ತೀವ್ರತೆ ಉಳಿಸ್ಕೊಂಡಿದೆ. ಈ ಗವಾಸ್ಕರ್, ಶ್ರೀಕಾಂತ್, ಬಿನ್ನಿ, ಕಪಿಲ್, ಮನೋಜ್ ಪ್ರಭಾಕರ್, ಶ್ರೀನಾಥ್, ವೆಂಕಿ (!?), ಸಿದ್ದು, ರವಿ ಶಾಸ್ತ್ರಿ ಇತ್ಯಾದಿ ಹೆಸರುಗಳನ್ನೆಲ್ಲ ನಾನು ಮೊದಲು ಕೇಳಿದ್ದು ಅವಳ ಬಾಯಿಂದಲೇ.
ಗವಾಸ್ಕರನನ್ನ ಕುಳ್ಳ ಅಂತಲೂ ರವಿಯನ್ನ, ಮನೋಜನನ್ನ ಸ್ಮಾರ್ಟ್ ಅಂತಲೂ ಕಮೆಂಟ್ ಮಾಡಿಕೊಂಡು ನೋಡ್ತಿದ್ದ ಅಮ್ಮನಿಗೆ ಕ್ರಿಕೆಟ್ ನೂರಕ್ಕೆ ನೂರು ಅರ್ಥವಾಗಿತ್ತು ಅನ್ನೋದರ ಬಗ್ಗೆ ನಂಗೆ ಈಗಲೂ ಗುಮಾನಿ ಇದೆ. ಅವಳಿಗೆ ಗವಾಸ್ಕರ್ ಮೇಲೆ ಜಾಸ್ತಿ ಪ್ರೀತಿ. ಅವನ ಅಗಾಲ ಹ್ಯಾಟು ಇಷ್ಟ.
ರವಿ ಶಾಸ್ತ್ರಿಗೆ ಅಮೃತಾ ಸಿಂಗ್ ಕೈಕೊಟ್ಟಾಗ ಅಮ್ಮನಿಗೆ ಹೇಗೋ ಗೊತ್ತಾಗಿಬಿಟ್ಟು ಅವಳಿಗೆ ಹಿಡಿ ಶಾಪ ಹಾಕಿದ್ದಳು. ಅಜರುದ್ದೀನನ ಮ್ಯಾಚ್ ಫಿಕ್ಸಿಂಗ್ ಗಿಂತ ಬಿಜಲಾನಿ ಜತೆಗಿನ ಅಫೇರೇ ಹೆಚ್ಚು ಮುಖ್ಯವಾಗಿತ್ತು ಅವಳಿಗೆ. ಗವಾಸ್ಕರ್ ಮೌಸಮಿ ಚಟರ್ಜಿ ಅನ್ನುವ ಅಂದಿನ ಚೆಂದದ ಹೀರೋಇನ್ ಳ ಪ್ರಪೋಸಲ್ ಅನ್ನು ತಿರಸ್ಕರಿಸಿದಾಗಲಂತೂ ‘ಎಂಥಾ ಸಜ್ಜನ… ಅವಳಂಥಾ ಸ್ಟಾರನ್ನೆ ಬೇಡ ಅಂದುಬಿಟ್ಟ…’ ಅಂತ ಸಡಗರದಿಂದ ಕೊಂಡಾಡಿದ್ದಳು.
ಹೀಗೆ ನಮ್ಮ ಸ್ಕೂಲ್ ದಿನಗಳ ಕಾಲದಲ್ಲಿ ಗಂಟೆಗಟ್ಟಲೆ ಉಗುರು ಕಚ್ಚುತ್ತ ಕ್ರಿಕೆಟ್ ನೋಡ್ತಿದ್ದ, ಕ್ರಿಕೆಟರ್ ಗಳ ಬದುಕಿನ ವಿವರಗಳನ್ನ ಚಾಚೂ ತಪ್ಪದೆ ಕಲೆ ಹಾಕ್ತಿದ್ದ ಅಮ್ಮ, ಆಮೇಲೆ ಉಗುರು ಕಚ್ಚೋದು ಬಿಟ್ಟರೂ ಆ ಆಸಕ್ತಿಗಳನ್ನ ಬಿಟ್ಟಿರಲಿಲ್ಲ.
ಇಂಥಾ ಅಮ್ಮ ಇವತ್ತು ಸಂಜೆತನಕ ಸುಮ್ಮನಿದ್ದು, ಮೊಮ್ಮಗನ ಮೈಕಡಿತ ನೋಡಲಾಗದೆ ಎದ್ದುಬಂದು ಕೂತಳು, ಭಾರತದ ಬ್ಯಾಟಿಂಗ್ ಅಂದುಕೊಂಡು. ಸಚಿನ್ನನ ಬಹುಶಃ 94ನೆಯ 50ನ್ನು ನೋಡಿ ಖುಷಿಯಾದಳು. ವಿರಾಟನ ಬ್ಯಾಟಿಂಗಲ್ಲಿ ಮೈಮರೆತಳು.
ಕೊನೆಗೆ ಮೆಡಿಸನ್ನಿಗೆ ನಿದ್ದೆ ತೂಗಿ ಬಂದು ಮಲಗಲು ಹೊರಟಾಗ, ‘ಪಾಪ, ಆ ಮಗು ಪಕ್ಕ ಕೂತು ನೋಡಬಾರ್ದೇನೆ? ಒಂದೇ ನೋಡ್ತಿದೆ ಮುಂಡೇದು’ ಅಂತ ಕಿವಿಯೊಂದು ಹಿಂಡದೆ, ಹೆಚ್ಚೂಕಡಿಮೆ ಗದರುವ ದನಿಯಲ್ಲಿ ಆದೇಶ ಕೊಟ್ಟಳು.
ನನಗೂ ಚೂರು ಕುತೂಹಲ ಕೆರಳಿದಂತಾಗಿ ಮಗನ ಪಕ್ಕ ಕುಂತರೆ…. ಸಚಿನ್ ಔಟಾಗಿಬಿಡಬೇಕಾ!?
ತಗೋ, ಶುರು… ಸ್ವಲ್ಪ ಹೊತ್ತಿಗೇ ಮತ್ತೊಬ್ಬನೂ ಔಟಾದ. ಕಡಿಮೆ ಬಾಲಿಗೆ ಜಾಸ್ತಿ ರನ್ ಬೇಕಿತ್ತು. ನಾನು ಸೆಖೆ ಅಂತ ಚಿಕ್ಕ ಬ್ರೇಕ್ ತಗೊಂಡು (ಒಳ ಕಾರಣ-ಆಟ ನೋಡಲು ಬೋರಾಗಿ) ಹೊರಗೆ ಹೋದೆ. ಹಾಗೆ ಹೋದ ಐದು ನಿಮಿಷದಲ್ಲೆ ಎರಡ್ಮೂರು ಫೋರು, ಒಂದು ಸಿಕ್ಸು…
ಆಹ್! ಅಷ್ಟು ಹೊತ್ತೂ ಆಕಾಶ ಹೊತ್ತ ಹಾಗೆ ಕುಂತಿದ್ದ ನನ್ನ ಮಗ ಕುಣೀತಾ ಓಡಿ ಬಂದ. ಕೆನ್ನೆಗೊಂದು ಮುತ್ತು ಕೊಟ್ಟು, ‘ಮುನ್ನೀ, ನೀನು ಇಲ್ಲೇ ಕೂತಿರು ಆಯ್ತಾ? ನೀನು ಒಳಗ್ ಬಂದ್ರೆ ಔಟಾಗ್ತಾರೆ. ನೀನು ಹೊರಗಿದ್ರೆ ಫೋರು, ಸಿಕ್ಸು…’ ಅಂತ ಹಲ್ಲು ಕಿರಿದ.
ನನಗೆ ಗಲಿಬಿಲಿಯಾಗಿಹೋಯ್ತು! ಸುಧಾರಿಸ್ಕೊಳ್ಳಲು ಸುಮಾರು ಹೊತ್ತೇ ಬೇಕಾಯ್ತು. ಏನೋ ಹೇಳತ್ತೆ ಮಳ್ಳು ಮಗು ಅಂದುಕೊಂಡು ಒಳಬಂದರೆ, ಮೂತಿ ಉದ್ದ ಮಾಡ್ಕೊಂಡು, ‘ಪ್ಲೀಸ್… ಕಣೇ….’ ಅಂತ ಅಂಗಲಾಚಿದ.
ಮಗನ ಕೋರಿಕೆ (ಅರ್ಥಾತ್ ಆದೇಶ)ಯಂತೆ ಆಟ ಮುಗಿಯೋತನಕ ತಣ್ಣಗೆ ಕೂತುಕೊಂಡೆ, ಹೊರಗೆ ನಾನೊಬ್ಬಳೇ.
ಒಳಗೆ ಅವನ ಕುಣಿದಾಟ, ಸುತ್ತ ಮುತ್ತ ಬೀದಿಗಳಿಂದ ಸಿಡಿದ ಪಟಾಕಿ ಸದ್ದು- ಮ್ಯಾಚ್ ಗೆದ್ದುಮುಗೀತು ಅನ್ನೋದನ್ನ ಸಾರಿ ಹೇಳಿದವು.
ನಾನೂ ನನ್ನ ಮಗನೂ, ಅವನ ಖುಷಿಯಲ್ಲಿ ಭಾಗೀದಾರಳಾಗಲು ಎದ್ದುಕುಳಿತ ಅಮ್ಮನೂ ಕೆಂಪನೆ ಕೋಕಮ್ ಜ್ಯೂಸ್ ಮಾಡ್ಕೊಂಡು ‘ಚಿಯರ್ಸ್’ ಹೇಳಿ ಕುಡಿದೆವು.
~
ಎಲ್ಲ ಮುಗಿದ ಮೇಲೆ, ಕ್ರಿಕೆಟ್ ಮತ್ತು ಹೆಣ್ಮಕ್ಕಳ ನಡುವಿನ ನನ್ನ ಅಬ್ಸರ್ವೇಷನ್ನು ಲೆಕ್ಕ ಹಾಕುತ್ತಾ ಕೂತೆ. ಆಗ ಸಿಕ್ಕಿದ್ದಿಷ್ಟು:
(ವಿ.ಸೂ: ಇಲ್ಲಿ ಯಾವುದನ್ನೂ ಜನರಲ್ ಆಗಿ ಹೇಳಿಲ್ಲ…)
* ನಮ್ಮ (ಹೆಣ್ಣುಮಕ್ಕಳ) ಪಾಲಿಗೆ ಇದೊಂದು ಗ್ಲಾಮ್ ಗೇಮ್
* ಕ್ರಿಕೆಟ್ ಅಂದ್ರೆ ಪ್ರಾಣ ಬಿಡುವಂತೆ ಆಡೋ ಹೆಣ್ಣುಮಕ್ಕಳೂ ಕೂಡಾ ಹೆಂಗಸರ ಕ್ರಿಕೆಟ್ಟನ್ನ ನೋಡೋದಿಲ್ಲ 😦
* ಹುಡುಗರಿಗೆ ಇಷ್ಟ ಅನ್ನೋ ಕಾರಣಕ್ಕೇ ಕ್ರಿಕೆಟ್ಟನ್ನ ಇಷ್ಟಪಡೋ ಹುಡುಗೀರು ಸಾಕಷ್ಟಿದ್ದಾರೆ
* ಜಾಹೀರಾತುಗಳಲ್ಲಿ ನಟರಷ್ಟೇ ಜನಪ್ರಿಯ ಈ ಕ್ರಿಕೆಟ್ ಹೀರೋಗಳು. ಅಂದ ಮೇಲೆ….
* ಯಾರಾದರೂ ಕ್ರಿಕೆಟರ್ ಬಗ್ಗೆ ಆತ ಯಾಕಿಷ್ಟ ಅಂತ ಹುಡುಗೀರನ್ನ ಕೇಳಿ ನೋಡಿ. ‘ಹೀ ಇಸ್ ಸೋ ಕೂಲ್’ ‘ವಾವ್! ಹ್ಯಾಂಡ್ ಸಮ್…’ ‘ವೆರಿ ಡೀಸೆಂಟ್’ ಅನ್ನುವ ಉತ್ತರಗಳೇ ಹೆಚ್ಚಿಗೆ ಸಿಗೋದು!!

 

ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು

ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!……….. (ಇವತ್ತು ಸುಭಾಷ್ ಬಾಬು ಹುಟ್ಟುಹಬ್ಬ. ಈವತ್ತು ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ….

“ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ. ಹಾಗೇನಾದರೂ ವಿಧಿ ನಮ್ಮಿಬ್ಬರನ್ನು ಶಾಶ್ವತವಾಗಿ ಅಗಲಿಸಿದನೆಂದುಕೋ… ಮುಂದಿನ ಹುಟ್ಟಿನಲ್ಲಿ ಮತ್ತೆ ನಿನ್ನ ಸೇರಲು ನಾನು ಪರಿತಪಿಸುವೆ. ನನ್ನ ಕಿನ್ನರೀ… Jeden tag denke ich an sie- ನಿನ್ನನ್ನ ಪ್ರತಿದಿನವೂ ನೆನೆಸಿಕೊಳ್ಳುತ್ತೇನೆ”
( ಸುಭಾಷ್ ಚಂದ್ರ ಬೋಸ್, ಎಮಿಲೀ ಶೆಂಕಲ್ ಗೆ ಬರೆದ ಪತ್ರದಲ್ಲಿ)

ನರನರದಲ್ಲಿ ನೆಲದ ಉನ್ಮಾದ. ಹೋರಾಟದ ಕೆಚ್ಚು. ತನ್ನನ್ನೇ ದೇಶದ ಹೆಸರಿಗೆ ಬರೆದಿಟ್ಟ ಪ್ರೌಢ ಗಂಡಸಿನ ಎದೆಯಲ್ಲೂ ಒಂದು ಬೆಚ್ಚಗಿನ ಗೂಡು. ಪುಟ್ಟದೊಂದು ಖಾಸಗಿ ಬದುಕು. ಅಲ್ಲಿ, ಮೊಗೆದಷ್ಟೂ ಚಿಮ್ಮುವ ಪ್ರೀತಿ. ಎದೆ ಸೀಯುವ ವಿರಹದ ಕಾವು. ಕಾಸಗಲ ಕಣ್ಣೆದುರು ಮುಕ್ತ ಭಾರತದ ಕನಸು. ಒಳಗಿನೊಳಗಲ್ಲಿ ಅವಳ ಪ್ರೇಮ ಬಂಧನದ ನೆನಪು.

ಸುಭಾಷ್ ಚಂದ್ರ ಬೋಸ್…

ಹಾಗೆಂದ ಕೂಡಲೆ ಏನೆಲ್ಲ ಹಾದುಹೋಗುವುದು ಕಣ್ಣೆದುರು! ಭಾರತ, ಬ್ರಿಟಿಷರು, ಜಪಾನ್, ಹಿಟ್ಲರ್, ಗಾಂಧಿ, ವಿವೇಕಾನಂದ ಕೂಡಾ!!

ಎದೆಯಾಳದಲ್ಲಿ ಕೊರೆಯತೊಡಗುತ್ತಾಳೆ ಎಮಿಲೀ ಶೆಂಕಲ್ ಎನ್ನುವ ದಿಟ್ಟ ಹೆಣ್ಣು. ಭೋರ್ಗರೆಯುವ ಪ್ರವಾಹಕ್ಕೆ ಒಡ್ಡಾದವಳು. ಬೇಸಗೆಯಾಕಾಶದಲ್ಲಿ ಪ್ರೀತಿ ಹನಿಸಿ ಕಾಮನ ಬಿಲ್ಲು ಕಾಣಿಸಿದವಳು. ಇವಳ ನೆನಪು, ನಮಗೆ ಜಾಣ ಮರೆವು.

ವಿಯೆನ್ನಾದಲ್ಲಿ ಎಮಿಲಿ- ಸುಭಾಷರ ಭೇಟಿಯಾದಾಗ ಆಕೆಯ ವಯಸ್ಸಿನ್ನೂ ಇಪ್ಪತ್ತನಾಲ್ಕು. ಸುಭಾಷರಿಗೆ ನಲವತ್ತರ ಆಸುಪಾಸು. ಎಳಸು ಹುಡುಗಿ, ಪುರುಷ ಸಿಂಹ! ಅದು, ಸುಭಾಷರು ತಲೆಮರೆಸಿಕೊಂಡಿದ್ದ ಕಾಲ. ಅನಾಮಿಕತೆ, ಅಲೆಮಾರಿತನಗಳ ಜತೆ ಕಾಯಿಲೆಯೂ ಸೇರಿಕೊಂಡು ಅವರನ್ನ ಹೈರಾಣಾಗಿಸಿತ್ತು. ಚಿಕಿತ್ಸೆ- ವಿಶ್ರಾಂತಿಯ ಹೊತ್ತಲ್ಲಿ ಭಾರತದ ಇತಿಹಾಸ ಬರೆಯುವ ಕೆಲಸಕ್ಕೆ ಕೈಹಾಕಿದರು ಸುಭಾಷ್ ಬಾಬು. ಎಮಿಲಿ ಅವರ ಬಳಿ ಟೈಪಿಸ್ಟಳಾಗಿ ಸೇರಿಕೊಂಡಳು. ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಅಕ್ಕರೆಯಿಂದ ನೋಡಿಕೊಂಡಳು.

ಗಂಡಸು! ಎಂದಿಗೂ ತಲೆ ತಗ್ಗಿಸದ ವೀರ… ಯಾರೇ ಆದರೂ, ಹಿಡಿ ಪ್ರೀತಿಗೆ ಕರಗದ ಜೀವವುಂಟೆ? ಎಮಿಲಿಯ ಮುಗ್ಧತೆ, ಮಮತೆ, ಚಾಣಾಕ್ಷತೆಗಳು ಸುಭಾಷರನ್ನ ಸೆಳೆದೇ ಸೆಳೆದವು. ಬಹುದಿನದ ಒಡನಾಟ ಅವರಿಬ್ಬರನ್ನು ಬಂಧಿಸಿತು.

ಸುಭಾಷರ ಸಹಾಯಕಿಯಾಗಿ ಬಂದವಳು ಆಪ್ತ ಸಖಿಯಾದಳು. ಹೋರಾಟದ ಬೇಗೆಯಲ್ಲಿ ತತ್ತರಿಸಿಹೋಗುತ್ತಿದ್ದ ಮನಸಿಗೆ ತಂಪೂಡಿದಳು. ಕಿತ್ತು ತಿನ್ನುವ ಸಾವಿರ ಸಾವಿರ ಯೋಚನೆ- ಯೋಜನೆಗಳ ನಡುವೆಯೂ ಎಮಿಲಿಯ ಸಹವಾಸದಲ್ಲಿ ಸಾಂತ್ವನ ಕಂಡರು ಸುಭಾಷ್ ಬಾಬು. ಅದು, ಅವಳ ಪ್ರೇಮದ ತಾಖತ್ತು!

ಪ್ರಬುದ್ಧ ಹೆಣ್ಣು ಎಮಿಲಿ. ನೇತಾಜಿಯ ಅದೆಷ್ಟೋ ಚಿಂತನೆಗಳಿಗೆ ಕಿವಿಯಾದಳು. ಪ್ರಯೋಗಗಳಿಗೆ ಸಾಕ್ಷಿಯಾದಳು. ಸದಾ ನೆಲದ ಗುಂಗಲ್ಲೆ ಮುಳುಗಿರುತ್ತಿದ್ದ ಅವರಿಗೆ ಆಸರೆಯೂ ಆದಳು. ತನ್ನನ್ನ ತಾನು ಪೂರ್ತಿ ಇಲ್ಲವಾಗಿಸಿಕೊಂಡು, ಅವರ ಇರುವಿಕೆಯಲ್ಲಿ ಹೊಸ ಹುಟ್ಟು ಕಂಡುಕೊಂಡಳು.

ಆಸ್ಟ್ರಿಯಾದ ಹೆಣ್ಣು, ಭಾರತದ ಗಂಡು. ಜಾತಿ, ಭಾಷೆ, ಗಡಿಗಳನ್ನು ಮೀರಿದ ಪ್ರೇಮ. ಅವರಿಬ್ಬರ ಮದುವೆಯಾಯ್ತು. ಕಾಲ ಕರೆಯುತ್ತಲೇ ಇದ್ದ. ಎಲ್ಲರಂತಲ್ಲ ಸುಭಾಷ್… ಎಮಿಲಿಯ ಸಂಗದಲ್ಲಿ ಮೈಮರೆಯಲಿಲ್ಲ. ಕರ್ತವ್ಯದ ಕೈಹಿಡಿದು ಭಾರತಕ್ಕೆ ಮರಳಿದರು.

ಎಮಿಲಿ ಕೂಡ ಎಲ್ಲರಂತಲ್ಲ… ಬದುಕೆಂದರೆ ಬರೀ ಚರ್ಮದ ಹಪಾಹಪಿಯಲ್ಲ ಎನ್ನುವುದೆಲ್ಲ ಗೊತ್ತಿದ್ದ ಹೆಣ್ಣು. ಅತ್ತು ಕರೆದು ಕಾಡಲಿಲ್ಲ. ಅವರಿಗಾಗಿ ಕಾದಳು. ಕಾಯುತ್ತ ಕಾಯುತ್ತ ಪಕ್ವವಾದಳು. ಕೊನೆಗೂ ಧ್ಯಾನ ಸಿದ್ಧಿಸಿತು. ಕೋಲ್ಕೊತಾದಿಂದ ವೇಷ ಮರೆಸಿಕೊಂಡು ಹೊರಟ ಸುಭಾಷ್, ಆ ಹೊತ್ತಿಗಾಗಲೇ ಎಮಿಲಿಯನ್ನು ಕಾಣಲೇಬೇಕೆಂಬ ನಿಶ್ಚಯ ಮಾಡಿಕೊಂಡಿದ್ದರು- ತಮ್ಮ ಕರ್ತವ್ಯಕ್ಕೂ ಅಡ್ಡಿಯಾಗದ ಹಾಗೆ. ದೀರ್ಘ ಅಗಲಿಕೆಯ ನಂತರ ವಿಯೆನ್ನಾದಲ್ಲಿ ಸುಭಾಷರು ಎಮಿಲಿಯೊಂದಿಗೆ ಸಂಸಾರ ನಡೆಸುವಂತಾಯ್ತು. ದೂರವಿದ್ದಷ್ಟು ಕಾಲವಾದರೂ ಅವರು ಜೊತೆಯಲ್ಲಿರಲು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ಮಾತು.

ಮೂರು ವರ್ಷದ ಸಂಸಾರದಲ್ಲಿ ಒಡಲಕುಡಿ ಚಿಗುರೊಡೆದು ಹೊರಬಂತು. ಅನಿತಾ, ಅವರಿಬ್ಬರ ಪ್ರೇಮದ ವಾರಸುದಾರಳಾದಳು.

ಎಮಿಲಿ ಯಾವತ್ತೂ ತಮ್ಮ ಮದುವೆಯ ಸಂಗತಿಯನ್ನ ಜಾಹೀರು ಮಾಡೆಂದು ಸುಭಾಷರನ್ನ ಪೀಡಿಸಲಿಲ್ಲ. ಭಾರತದ ಮಡಿವಂತಿಕೆಯ ಅರಿವು ಅವಳಿಗಿತ್ತು. ಗಂಡನ ಎತ್ತರವೂ ಗೊತ್ತಿತ್ತು. ಅವಳಿಗೆಂದೂ ಸಂಬಂಧದ ಸರ್ಟಿಫಿಕೇಟು ಮುಖ್ಯವಾಗಲೇ ಇಲ್ಲ. ಹಾಗೆಂದೇ ಬೋಸ್ ಬಾಬು ಕಳೆದುಹೋದ ನಂತರವೂ ಎಷ್ಟೋ ಕಾಲ ಪರದೆಯ ಹಿಂದೆಯೇ ಇದ್ದಳು. ಆಮೇಲೂ ಅವರ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡದೆ ಉಳಿದಳು.

ಸುಭಾಷ್ ಬಾಬು ತಮ್ಮ ಮದುವೆಯ ಸಂಗತಿಯನ್ನ ಬಚ್ಚಿಟ್ಟಿದ್ದೇಕೆ? ಇದೊಂದು ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಆಗಿನ ಸಂದರ್ಭದಲ್ಲಿ, ಎಮಿಲಿ ವಿದೇಶೀಯನನ್ನು ಮದುವೆಯಾಗಿದ್ದುದು ಜಾಹೀರಾಗಿದ್ದಿದ್ದರೆ ಆಕೆ ತನ್ನ ದೇಶದ (ಜರ್ಮನ್) ನಾಗರಿಕತ್ವವನ್ನು ಕಳೆದುಕೊಂಡುಬಿಡುವ ಅಪಾಯವಿತ್ತು. ಹೀಗಾಗಿಯೇ ಅವರು ಅದನ್ನು ಮುಚ್ಚಿಟ್ಟರು ಎನ್ನುವುದೊಂದು ತರ್ಕ.

ಆದರೆ ಸುಭಾಷರು ತಮ್ಮ ಸಹೋದರನ ಹೊರತಾಗಿ ಇನ್ಯಾರ ಬಳಿಯೂ ಈ ವಿಷಯವನ್ನು ಹೇಳಿಕೊಂಡಿರಲಿಲ್ಲ. ಹೀಗೇಕೆ?

This slideshow requires JavaScript.

‘ಬ್ರಹ್ಮಚರ್ಯ’ವೇ ಉನ್ನತ ಸಾಧನೆಯೆಂದು ನಂಬಿಕೊಂಡ ಭಾರತೀಯರ ಕಣ್ಣಲ್ಲಿ ಕೆಳಗಿಳಿಯುವೆನೆಂದೇ? ವಿದೇಶಿ- ವಿಜಾತಿಯ ಹೆಣ್ಣನ್ನು ಅವರು ಒಪ್ಪಲಾರರೆಂದೇ? ಅದೇನೇ ಇರಲಿ… ತನ್ನ ಜನರ ನಂಬಿಕೆಗಳಿಂದ ಹೊರಡುವ ವಿರೋಧ, ತನ್ನ ಹೋರಾಟಕ್ಕೆ ಅಡ್ಡಿಯಾಗಬಾರದೆಂದೇ ಅವರು ಹಾಗೆ ಮಾಡಿದ್ದಿರಬೇಕು. ಅದರ ಹೊರತು, ಸುಭಾಷರಿಗೆ ಇನ್ಯಾರ ಮರ್ಜಿಯೂ ಇದ್ದಂತೆ ತೋರುವುದಿಲ್ಲ.

ಇವತ್ತಿಗೂ, ಸಾರ್ವಜನಿಕ ಜೀವನಕ್ಕೆ ತನ್ನನ್ನ ಕೊಟ್ಟುಕೊಂಡ ವ್ಯಕ್ತಿಗೆ ಖಾಸಗಿ ಜೀವನ ಇರಲೇಬಾರದೆಂದು ಬಯಸುವ ಜನರು ನಾವು. ಹಾಗೆಂದೇ, ಪಿಚ್ಚರಿನಲ್ಲಿ ಕೂಡ ಸುಭಾಷರ ‘ಪ್ರೇಮ ಜೀವನ’ದ ದೃಶ್ಯಗಳಿಗೆ ಕತ್ತರಿ ಹಾಕಿರೆಂದು ಎಡ-ಬಲವೆನ್ನದೆ ಬೊಬ್ಬಿಟ್ಟೆವು. ಎಮಿಲಿಯ ವ್ಯಕ್ತಿತ್ವವನ್ನೇ ಸಂಶಯಪಟ್ಟೆವು. ಸುಭಾಷ್ ಸಾವಿನಷ್ಟೇ ಅವರ ವಿವಾಹ ಜೀವನವೂ ವಿವಾದಾತ್ಮಕ ಸಂಗತಿಯೆಂದುಬಿಟ್ಟೆವು!

ಇಷ್ಟಕ್ಕೂ ಪುರಾವೆಯೇ ಬೇಕೆನ್ನುವುದಾದಲ್ಲಿ, ಸುಭಾಷರು ೧೯೩೪ರಿಂದ ೧೯೪೫ರ ವರೆಗಿನ ಅವಧಿಯಲ್ಲಿ ಎಮಿಲೀ ಶೆಂಕೆಲ್‌ಗೆ ಬರೆದ ೧೬೨ ಪತ್ರಗಳಿವೆ. ಅವು, ‘ಲೆಟರ್ಸ್ ಟು ಎಮಿಲೀ ಶೆಂಕೆಲ್ ’ ಹೆಸರಲ್ಲಿ ಪ್ರಕಟಗೊಂಡಿವೆ ಕೂಡಾ. ಈ ಪತ್ರಗಳಲ್ಲಿ, ಪ್ರಿಯತಮನ ಕನವರಿಕೆಗಳಿವೆ. ಪತ್ನಿಯ ಆರೋಗ್ಯದ ಕಾಳಜಿಯಿದೆ. ಮಗುವಿನ ಸಿಹಿ ನೆನಪಿದೆ. ಒಡನಾಟದ ನೆನಪುಗಳ ಘಮವಿದೆ…

ಅಷ್ಟೇ ಅಲ್ಲ, ಒಳ- ಹೊರಗಿನ ರಾಜಕಾರಣದ ತಲ್ಲಣಗಳ ಚಿತ್ರಣವಿದೆ. ತನ್ನ ಮತ್ತು ತನ್ನ ದೇಶದ ಏಳುಬೀಳುಗಳ ವರದಿಯಿದೆ. ಜೊತೆಗೆ, ‘ನಾನು ಸದಾ ನಿನ್ನ ನೆನಪಲ್ಲೇ ಇರುತ್ತೇನೆ… ನನ್ನ ಮೇಲೆ ಭರವಸೆ ಇಡು’ ಎನ್ನುವ ಅಪ್ಪಟ ಪ್ರೇಮಿಯ ಬಿನ್ನಹವೂ ಇದೆ!

ಆದರೆ, ಹೀಗೆ ಪುರಾವೆ ಕೇಳುವುದೇ ಒಂದು ನಾಚಿಕೆಗೇಡು.

ಮನುಷ್ಯನೊಬ್ಬನ ಪ್ರೇಮವನ್ನು ಅವಮಾನಿಸುವುದು ಖಂಡಿತ ಸಂಸ್ಕೃತಿಯಾಗಲಾರದು. ಹೀಗೆ ಯೋಚಿಸುವ ವಿವೇಚನೆ ನಮಗೆ ಇಂದಿಗೂ ಇಲ್ಲವಾಗಿದೆ.

ಕೊನೆಗೂ, ಸುಭಾಷರನ್ನು ಪ್ರೀತಿಸಿದ- ಮದುವೆಯಾದ ಎಮಿಲೀಗೆ ದಕ್ಕಿದ್ದೇನು? ಆಕೆಯೇ ಹೇಳಿಕೊಂಡಿರುವಂತೆ ಆತ್ಮ ತೃಪ್ತಿ. ಸುಭಾಷರ ಜೊತೆ ಆಕೆ ಜೀವಿಸಿದ್ದು ಹೆಚ್ಚೆಂದರೆ ೫ ವರ್ಷಗಳು. ಅವರ ನೆನಪುಗಳ ಜತೆ ಜೀವಿಸಿದ್ದು ೫೦ ವರ್ಷಗಳು!

ಯಾವತ್ತೂ ತನ್ನ- ಸುಭಾಷರ ಒಡನಾಟದ ಬಗ್ಗೆ ಹೇಳಿಕೊಳ್ಳಲು ಬಯಸದೆ ಉಳಿದ ಎಮಿಲೀಗೆ ಭಾರತೀಯರು ಸುಭಾಷರನ್ನು ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆಯಿತ್ತು. ಅವರನ್ನು ದೇವರಂತೆ ಮಾತ್ರವಲ್ಲದೆ, ಒಬ್ಬ ಮಾನವನಾಗಿಯೂ ಅರ್ಥ ಮಾಡಿಕೊಳ್ಳಬೇಕೆಂಬ ಬಯಕೆ ಅದು. ಆಕೆಯ ಪಾಲಿಗಂತೂ ಅವರು ಪ್ರಥಮ ಮತ್ತು ಪರಮೋನ್ನತ ಮನುಷ್ಯರಾಗಿದ್ದರು. ಈ ಮಾತನ್ನೆಲ್ಲ ಎಮಿಲೀ ತನ್ನ ಆಪ್ತರ ಬಳಿ ಮಾತ್ರವೇ ಬಿಚ್ಚಿಟ್ಟರುವಳು.

ನೆಲ, ನೆಲ, ನೆಲ ಎನ್ನುತ್ತಲೇ ತನ್ನ ಸಾಗರದ ಎದೆಯಲ್ಲಿ ಎತ್ತರದ ಜಾಗವನ್ನು ಎಮಿಲೀಗೆ ಬಿಟ್ಟುಕೊಟ್ಟಿದ್ದರು ಸುಭಾಷ್ ಬಾಬು. ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ?

ಅವರು ಹಂಬಲಿಸಿದ ನೆಲ ಭಾರತ. ಮತ್ತು,
ಅವರು ಪ್ರೇಮಿಸಿದ ಹೆಣ್ಣು ಎಮಿಲೀ!

(ಇದು ಹೆಚ್ಚೂಕಡಿಮೆ 3 ವರ್ಷಗಳಷ್ಟು ಹಳೆಬರಹ)

ಡಾರ್ಕ್ ರೂಮಿನ ಧರ್ಮ ಸಂಕಟಗಳು…

………………………………………….

“ಬಿಸಿಲು ಚೂರು…. ಕೊಂಚ ಓರೆ ಮಾಡಿದ ಕಬ್ಬಿಣದ ಜಾಲರಿ ಬಾಗಿಲಿಂದ ಉದ್ದಕೆ ಒಳಬಂದಿದೆ. ಬಾಗಿಲು ಹಾಕಿದ್ದರೆ ಬಿಸಿಲು ಕೇವಲ ಊಹೆ ಮಾತ್ರ. ಹಗಲು ಹೊತ್ತು ಬಿಸಿಲಿರ್ತದೆ ಅನ್ನುವ ಕಾಮನ್ ಸೆನ್ಸ್. ಅಂವ ಸ್ವಲ್ಪವಾದರೂ ಓಪನ್ ಆಗು ಅನ್ನುತಿದ್ದ. ಹೊರಗೆ ಒಳ್ಳೆಯ ಕೆಲವಾದರೂ ಸ್ನೇಹಿತರು ಕಾದಿರುತ್ತಾರೆ ಅನ್ನುವುದೂ ಕಾಮನ್‌ಸೆನ್ಸೇ ಅಲ್ಲ? ನಂಗೆ ಆ ‘ಸ್ವಲ್ಪ’ದ ಪ್ರಮಾಣ ಎಷ್ಟಂತ ಗೊತ್ತಾಗಲಿಲ್ಲ. ಈಗೀಗ ಅಂವ, ಪೂರಾ ಹಾರುಹೊಡೆದು ಕುಂತಿದೀಯ ಅನ್ನುತ್ತಾನೆ.”

…………………………………………

“ಬದುಕು ಪ್ರಯಾಣ ಅಲ್ಲವೇನೋ? ದಾರಿಯ ಮೋಹ ನಡಿಗೆಯ ಸುಖವನ್ನ ನುಂಗಿ ಹಾಕುತ್ತೆ… ದಾರಿಗಾಗೇ ನಡೆದರೆ ಪ್ರಯಾಣ ಒಂಟೊಂಟಿ. ಬಹುಶಃ ದಾರಿ ಬಿಟ್ಟು ನಡೆದರೂ.”

…………………………………………

‘ಮುಂದಿನ ಹೆಜ್ಜೆ ಇಡಬೇಕಂದರೆ ಈಗಿನ ಹೆಜ್ಜೆಯನ್ನ ಕಿತ್ತಿಡಬೇಕು – ಇದು ಪಾಸಿಟಿವ್.

ಮುಂದೆ ಇರೋದು ಸಿಗುವಾಗ ಈಗ ಇರೋದು ಕೈಬಿಟ್ಟು ಹೋಗುತ್ತೆ – ಇದು ನೆಗೆಟಿವ್.

ಏನಾದರೇನು? ಅರ್ಥ ಒಂದೇ…. ಪರಿಣಾಮ ಒಂದೇ.’

96 Likes, 58 comments…

………………………………………….

ಇದು ಡಾರ್ಕ್ ರೂಮಿನ ಧರ್ಮಸಂಕಟಗಳ ಕೆಲವು ಚೂರುಗಳು. ಪೂರಾ ಓದಬೇಕಂದರೆ ಇಲ್ಲಿದೆ… ನಿಜಘಮದ ಕೇದಗೆಯಲ್ಲಿ….

ಮಕ್ಕಳ ಪುಸ್ತಕದ ಒಂದು ಕತೆ ಮತ್ತು ನೀತಿ!

ಒಂದು ಕತೆ ಓದಿದೆ.

ಒಬ್ಬ ಇರ್ತಾನೆ. ಅವಂಗೆ ಒಂದು ಸಿಹಿ ತಿಂಡಿ ಇಷ್ಟ. ಅದನ್ನ ಯಾವಾಗಂದ್ರೆ ಆವಾಗ ತಿನ್ನುತಿರುತ್ತಾನೆ. ಅದಕ್ಕೆ ಅವಂಗೆ ಆ ತಿಂಡಿ ಹೆಸರು ವಿಶೇಷಣವಾಗಿ ಅಂಟಿಕೊಂಡುಬಿಡ್ತದೆ. ಅವಂಗೆ ಅದರಿಂದ ಮುಜುಗರವಾದ್ರೂ ತಿನ್ನುವ ಚಪಲ ಮಾತ್ರ ಬಿಟ್‌ಹಾಕೋಕೆ ಆಗೋದಿಲ್ಲ. ಅದ್ಕೆ, ಒಂದು ಟವೆಲನ್ನ ಯಾವಾಗ್ಲೂ ಕುತ್ತಿಗೆಗೆ ಸುತ್ತಿಕೊಂಡಿರ್ತಾನೆ. ಆ ತಿನಿಸು ತಿನ್ನುವಾಗೆಲ್ಲ ಟವೆಲನ್ನ ಚೂರು ಓರೆ ಮಾಡಿಕೊಂಡು, ಅದರ ಮರೆಯಲ್ಲಿ ಮುಕ್ಕುತಿರ್ತಾನೆ.

ಒಂದಿನ ಏನಾಗತ್ತೆ, ಅಂವ ಮಾಮೂಲಿ ಸಿಹಿತಿಂಡಿ ಅಂಗಡಿಗೆ ಬರ್ತಾನೆ. ಅಲ್ಲಿ, ಗಾಜಿನ ಕಪಾಟಿನಲ್ಲಿ ಆಗತಾನೆ ಮಾಡಿದ ಅವನ ಮೋಹದ ತಿಂಡಿ ಇಟ್ಟಿರ್ತಾರೆ. ಅಂವ ಅದನ್ನ ತರಿಸ್ಕೊಳ್ಳಬೇಕು, ಅಯ್ಯೋ! ಟವೆಲ್ಲೇ ಇಲ್ಲ! ಟವೆಲನ್ನ ಅಡ್ಡ ಹಿಡಿಯದೆ ತಿನ್ನೋದಾದ್ರೂ ಹೆಂಗೆ? ಅವಂಗೆ ಕೋಪ ಬರತ್ತೆ. ಇದೆಲ್ಲೋ ಹೆಂಡ್ತಿ ಕೆಲಸವೇ ಅಂದ್ಕೊಂಡು ಧುಮುಗುಡ್ತಾ ಮನೆಗೆ ಹೋಗ್ತಾನೆ. ಹೆಂಡತಿ ಹತ್ತಿರ, ಒಳ್ಳೇ ಮಾತಲ್ಲಿ ನನ್ನ ಟವೆಲು ಕೊಡು ಅಂತಾನೆ. ಅವಳು ಮುಸಿನಕ್ಕು ತನ್ನ ಕೆಲಸ ಮುಂದುವರೆಸ್ತಾಳೆ. ಅವಂಗೆ ಚಪಲ, ಕೋಪ ಎಲ್ಲ ಸೇರಿ ತಲೆ ಕೆಡುತ್ತೆ. ರೋಡಲ್ಲಿ ಆಡ್ತಿದ್ದ ಮಕ್ಕಳೇನಾದ್ರೂ ಟವೆಲು ತೆಗೆದಿರಬಹುದು ಅಂತ ಅವರ ಬಳಿ ಹೋಗ್ತಾನೆ. ಟವೆಲು ಕೊಡಿ ಅಂತ ರೇಗ್ತಾನೆ. ಮಕ್ಕಳು ಮುಖಮುಖ ನೋಡ್ಕೊಂಡು ಕಿಸಿಯುತ್ತ ಗೋಲಿ ಹೊಡೆದು ಆಟ ಮುಗಿಸ್ತಾರೆ.

ಎಲಾ! ಈ ಟವೆಲನ್ನೆಲ್ಲೊ ಆ ತಿಂಡಿ ಅಂಗಡಿಯವನೆ ಮುಚ್ಚಿಟ್ಟಿರಬೇಕು ಅಂದುಕೊಳ್ತಾನೆ. ಅಂಗಡಿ ಮೆಟ್ಟಿಲು ಹತ್ತಿ ಕೂಗಾಟ ಶುರು ಹಚ್ತಾನೆ. ಆ ಹೊತ್ತಿಗೆ ಮತ್ತೊಂದು ಒಬ್ಬೆ ಹಬೆಯಾಡುವ ತಿನಿಸು ಗಾಜಿನ ಕಪಾಟಲ್ಲಿ ಕುಂತಿರುತ್ತೆ. ಅವನ ಕಣ್ಣೆದುರೇ ಮತ್ತೊಬ್ಬ ಆಸಾಮಿ ಆ ತಿನಿಸನ್ನ ತಿನ್ನುತಿರ್ತಾನೆ. ಇವನ ಚಡಪಡಿಕೆ ಹೇಳಿ ಮುಗಿಸೋದಾ? ಕೂಗಾಟ ಮತ್ತೂ ಜೋರೇ! ಅಂಗಡಿಯವ, ‘ಹೋಗ್ಲಿ, ಬಂದು ತಿನ್ನಿ, ಎಲ್ಲ ಸರಿ ಹೋಗ್ತದೆ’ ಅಂದಿದ್ದೂ ಅಣಕದಂತೆ ಅನಿಸ್ತದೆ. ಇಲ್ಲ…. ಟವೆಲು ಅಡ್ಡ ಹಿಡಿಯದೆ ಗಂಟಲಲ್ಲಿ ತಿಂಡಿ ಇಳಿಯೋದೇ ಇಲ್ಲ! ಜನಕ್ಕೆ ಮೊದಲೇ ನಾನು ತಿನ್ನೋದರ ಮೇಲೆ ಕಣ್ಣು! ‘ದೇವಾ!’ ಅಂತ ತಲೆ ಮೇಲೆ ಕೈಹೊರುತ್ತಿದ್ದ ಹಾಗೆ…

ಅವನ ಮುಖ ಅರಳತ್ತೆ! ಟವೆಲನ್ನ ಯಾವಾಗಲೋ ತಲೆಗೆ ಮುಂಡಾಸಿನ ಹಾಗೆ ಕಟ್ಟಿಕೊಂಡುಬಿಟ್ಟಿರ್ತಾನೆ ಮಹರಾಯ!

– ಈ ಕತೆಯನ್ನ ಮಕ್ಕಳ ಕತೆ ಪುಸ್ತಕದಲ್ಲಿ ಓದಿದೆ.

~

ನಮ್ಮ ವ್ಯಸನಗಳು ಜಾಹೀರು. ಆದರೂ ನಮಗೊಂದು ಮುಖವಾಡ ಬೇಕು. ವ್ಯಸನ ಬೀಡಲಾರೆವು, ಮುಕ್ತವಾಗಿ ತೊಡಗಲಾರೆವು. ಜನದ ಮಾತು ನಮ್ಮನ್ನ ಕಳ್ಳುಬೀಳಿಸುತ್ತದೆ ಕೆಲವು ಸಾರ್ತಿ. ಆಮೇಲೆ ಕಳ್ಳ ಅನ್ನುತ್ತದೆ.  ಈ ಸಂಗತಿಯನ್ನ ಆಲ್ಜೀಬ್ರಾ ಸೂತ್ರದ ಥರ ಇಟ್ಟುಕೊಂಡರೆ, ಅಲ್ಲಿ ಯಾವ ಯಾವುದೋ ವಿಷಯವನ್ನ, ಸನ್ನಿವೇಶಗಳನೆಲ್ಲ ಹಾಕಿ- ತೆಗೆದು ಲೆಕ್ಕಾಚಾರ ಮಾಡಬಹುದು.

ನೀತಿ: ಮಕ್ಕಳ ಕಥೆಗಳನ್ನ ದೊಡ್ಡವರು ಮುದ್ದಾಮ್  ಓದಬೇಕು.

ಕೃಷ್ಣ ಬಿಕ್ಕಿದ್ದೂ ಕೇಳುತಿದೆ…

ಹೇಳಲಿಕ್ಕೆ ಬಹಳವೇನಿಲ್ಲ. ಕೇಳುವುದರಲ್ಲಿ ಕಳೆದುಹೋಗಿದೇನೆ. ರಾಧೆ ಹಿಂದೆ ಬಿದ್ದಿದ್ದೆ. ಗೆಳತಿ ಬಯ್ಯುವುದೊಂದು ಬಾಕಿ. ತಪ್ಪು ನನ್ನದಲ್ಲ.ಜಯದೇವನ ಗೀತ ಗೋವಿಂದ ಓದಬಾರದಿತ್ತು. ಚಂಡೀದಾಸನ ಕವಿತಗಳನ್ನಾದರೂ ಯಾಕೆ ಓದಬೇಕಿತ್ತು? ಸಾಲದ್ದಕ್ಕೆ ವಿದ್ಯಾಪತಿ ಬೇರೆ ಜತೆಗೆ. ಈ ಎಲ್ಲದರ ನಡುವೆ ಕನ್ನಡದ ಕಾಡುವ ಕೃಷ್ಣರು…

ಭಾಗವತದಲ್ಲಿ ರಾಧೆಯಿಲ್ಲ. ಅದ್ವೈತವಾದಕ್ಕೆ ಇಲ್ಲೊಂದು ಪಾಯಿಂಟ್ ಇದೆ. ರಾಧೆ ಇಲ್ಲದಲ್ಲಿ ಕೃಷ್ಣನೂ ಇಲ್ಲ. ಸೋ, ಅಲ್ಲಿ ಬ್ರಹ್ಮತತ್ತ್ವವೋ ಪರಮ ಸತ್ಯವೋ ಇದೆ ಹೊರತು ಅದು ಕೃಷ್ಣ ಕಥೆಯೇನಲ್ಲ. ರಾಧೆ ಇಲ್ಲದಲ್ಲಿ ಕೃಷ್ಣ ಇರೋದಾದ್ರೂ ಹೇಗೆ? ಇಷ್ಟಕ್ಕೂ ಹಾಗೊಬ್ಬಳು ಇದ್ದಿರಲಿಕ್ಕೇ ಬೇಕು ಅನ್ನುವ ಜಿದ್ದಾದರೂ ಯಾತಕ್ಕೆ? ಆದರೂ ಬೇಕನ್ನುವ ಹುಚ್ಚಿನಲ್ಲಿ ಹುಡುಕಿದ್ದೇ ಬಂತು. ಬ್ರಹ್ಮವೈವರ್ತ ಪುರಾಣದಲ್ಲಿ ಅವಳು ಪೂರ್ತಿಯಾಗಿ ಇದ್ದಳು. ರಾಧೆಯನ್ನು ರುಚಿಯಾಗಿ ಬರೆದಿಟ್ಟ ಮಹರಾಯ ಜಯದೇವ, ಕೃಷ್ಣನ್ನ ಎಷ್ಟು ಜೀವಪೂರ್ಣ ತೆರೆದಿಟ್ಟ! ಹಾಗೆ ಹುಡುಕಿಕೊಂಡ ರಾಧೆ ಮತ್ತವಳ ಕೃಷ್ಣ ಎಷ್ಟೆಲ್ಲ ಬೇರೆಯಾಗಿದ್ದರು!

ಮತ್ತೆ ಮುನ್ಶಿಯ ಸರಣಿ ಪುಸ್ತಕ ಶುರುವಿನಿಂದ. ತಿರುವಿ ಹಾಕಿದ್ದು ಚೈತನ್ಯರ ಪಾಠಗಳನ್ನ. ಕಾಲಕ್ಕೆ ತಕ್ಕ ಹಾಗೆ ರಾಧೆ, ಕಾಲಕ್ಕೆ ತಕ್ಕಂತೆ ಕೃಷ್ಣ. ಬಹುಶಃ ಒಳಗಿನ ಉರಿ ಕಡಿಮೆಯಾಗಿರಬೇಕು. ಅಥವಾ ಬೂದಿಯೂ ತಣ್ಣಗಾಗಿರಬೇಕು. ಅಥವಾ ಅವನ ಪ್ರೀತಿಯ ನಿಜ ಗೊತ್ತಾಗಿ….

ಯಾವುದೂ ಇದ್ದ ಹಾಗೇ ಉಳಿಯೋದಿಲ್ಲ. ಹಾಗಾಗಲಿಕ್ಕೆ ಕಾಲ ನಿಲ್ಲಬೇಕು. ಅದೇನು ಕಂಬವಾ!?

ಕೊಟ್ಟೆಯಲ್ಲಿಟ್ಟ ಒಂದೇ ಗುಲಾಬಿ ಸಸಿ ಕೆಂಪಾಗೋದು, ಚಿಗುರಿ ಸೊರಗೋದು ನಿಚ್ಚಳ ಕಾಣುತ್ತೆ. ನಮ್ಮೊಳಗಿನ ಭಾವ ಬಗೆ…..

ಗೂಗಲಿಸುವಾಗಲೂ ರಾಧಾಕೃಷ್ಣ. ಎಷ್ಟೊಂದು ಚಿತ್ರಗಳು! ಹೊಸ ಫೋಲ್ಡರಿನಲ್ಲಿ ಉಳಿಸುವಾಗ ಬರೆದವರ ಹೆಸರು ನೆನಪಿಲ್ಲ.

ಅಲ್ಲೂ ಕೃಷ್ಣ ಬೇರೆಯೇ ಸಿಕ್ಕ. ಅಂವ ರಾಧೆಯ ಕಾಲು ಹಿಡಿದಿದ್ದ, ಹೆಗಲೊತ್ತಿ ತಬ್ಬಿದ್ದ, ತಕ್ಕಡಿಯಲಿಟ್ಟು ಸಂಪತ್ತು ಸುರಿದು ತೂಗಿದ್ದ. ಆ ಚಿತ್ರಗಳ ಕೃಷ್ಣ ಕೊರಳುಬ್ಬಿಸಿಕೊಂಡು, ಹನಿಗಣ್ಣಾಗಿ…..

ಹೇಳಲಿಕ್ಕೆ ಏನೂ ಇಲ್ಲ.

ನಮ್ಮ ಬಣ್ಣಗಳಿಗೆ ತಕ್ಕ ಹಾಗೆ ರಾಧೆ, ಕೃಷ್ಣ.

ಈಗೀಗ

ಕೃಷ್ಣ ಬಿಕ್ಕಿದ್ದೂ ಕೇಳುತಿದೆ,

ಬದಲಾಗಬಹುದೆ ದಿಕ್ಕು?

~

(ನನ್ನ ಪ್ರೀತಿಯ ಚಿತ್ರಗಳು ನಿಮಗೂ ಇಷ್ಟವಾಗಲೆಂದು-)

This slideshow requires JavaScript.

ಕಳೆದ ಜನ್ಮದ ಎಳೆಯೊಂದು ಹುಡುಕಿ ಬಂದಂತೆ

ಚಳಿ ಬಿದ್ದಿದೆ. ಹಾಡುಗಳ ಕೌದಿ ಹೊದ್ದು ಬೆಚ್ಚಗೆ ಕೂತಿದೇನೆ. ಎದೆಯಲ್ಲಿ ನೆನಪುಗಳ ಅಗ್ಗಿಷ್ಟಿಕೆ. ಕಾವಿಗೆ ಮೈ, ಮನಸು ಹಿತವಾಗಿದೆ. ಎಲ್ಲ ನೆನಪಾಗಲಿಕ್ಕೆ ಮಳೆಯೇ ಸುರಿಯಬೇಕೆಂದಿಲ್ಲ. ಒಂದಷ್ಟು ಹಾಡುಗಳ ಸಾಲು ಸುರಿದರೂ ಸಾಕು. ಆದರೇಕೋ ಈ ಹೊತ್ತು ಯಾವ ಹೊಸ ಹಾಡೂ ತುಟಿ ಹತ್ತುತ್ತಿಲ್ಲ. ಎದೆಯೊಳಕ್ಕೆ ಇಳಿದ ಹಳೆಯ ಗಂಧ ಹಾಗೆ ದಟ್ಟ, ಗಾಢ. ಅಪ್ಪನ ಹುಡುಗುತನದ ಕಾಲಕ್ಕೆ ಹಾಡಾಗುತ್ತಿದ್ದ ಸಾಹಿರನ ಮೇಲೆ ನನ್ನ ಪ್ರೀತಿ. ಗುಲ್ಜಾರ ನನ್ನ ಅಂತರಂಗ ಬಲ್ಲ ಗೆಳೆಯನಂತೆ. ಇವರೆಲ್ಲ ಮುಪ್ಪೇ ಇಲ್ಲದ ಆತ್ಮಸಖರು. ನನ್ನಂಥವರಿಗೆ ಚಿರಕಾಲದ ಪ್ರಿಯತಮರು!

ರಾತ್ರಿ ರೇಡಿಯೋ ತಿರುಗಿಸುತ್ತೇನೆ. ಹಳೆ ಹಾಡುಗಳನ್ನ ಕೇಳಲಿಕ್ಕೆಂದೇ. ಮೊದಲೇ ಹಾಡಿನ ಪಟ್ಟಿ ಗೊತ್ತಾಗಿಬಿಡುವ ಎಮ್‌ಪಿಥ್ರೀ ಅಷ್ಟೊಂದು ಮಜ ಕೊಡಲಾರದು. ಮೂಗು ಕಟ್ಟಿದಂಥ ದನಿಯ ನಿರೂಪಕರು ಮಂದ ಬೆಳಕಿನ ಮೆಹಫಿಲ್ಲಿನಲ್ಲಿ ಲತಾ, ರಫಿ, ಮುಖೇಶ, ಕಿಶೋರರನ್ನೆಲ್ಲ ಕೂರಿಸಿಕೊಂಡ ಗತ್ತಿನಲ್ಲಿ ‘ಭೂಲೇ ಬಿಸ್ರೇ ಗೀತ್’ ನಡೆಸಿಕೊಡ್ತಾರಲ್ಲ, ಅದನ್ನ ಕೇಳುವ ಸುಖವೇ ಸುಖ. ಅಂದ ಹಾಗೆ, ಭೂಲೇ ಬಿಸ್ರೇ ಗೀತ್? ಮರೆತು ಮರಗಟ್ಟಿರುವವರಾದರೂ ಯಾರು!?

~

ಅಪ್ಪ ಜತನದಿಂದ ಜೋಡಿಸಿಟ್ಟಿದ್ದ ಕ್ಯಸೆಟ್ಟುಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಭಾನುವಾರದಂತೆ ಹಾಡುವ ಸರದಿ. ಹಿಂದಿ ಕಲಿತ ಹೊಸತಿನ ದಿನಗಳವು. ಪ್ರತಿ ಪದವನ್ನ ಒಡೆದು ತಿಳಿಯುತ್ತಲೂ ಜಗತ್ತು ತಿಳಿದಂತೆ ಖುಷಿ. ರಾಗದೊಳಕ್ಕೆ ಮುಳುಗಿ, ಅರ್ಥಕ್ಕೆ ಆರ್ದ್ರವಾಗುವ ಸೂಕ್ಷ್ಮತೆ ಕಲಿಸಿಕೊಟ್ಟಿದ್ದು ಈ ಹಳೆಯ ಹಾಡುಗಳೇ. ಕೇಳಿದರೆ ಚಿತ್ರಗೀತೆ, ಓದಿಕೊಂಡರೆ ಅದ್ಭುತ ಕವಿತೆ. ಗಾಳಿಯದೊಂದು ಅಲೆ ಬೀಸಿತುಕೊಂಬೆಯಿಂದ ಹೂ ಕಳಚಿತುಗಾಳಿಯದಲ್ಲ, ಹೂವಿನದಲ್ಲತಪ್ಪಾದರೂ ಯಾರದು?ಅನ್ನುವಂಥ ಸಮಜಾಯಿಷಿಕೆಯ ಸಾಲುಗಳು, ಸಮಾಧಾನ ಹೇಳುವ ಭಗವದ್ಗೀತೆ. ಬಹಳ ಸಾರ್ತಿ, ಬಹುವಾಗಿ ಎಲ್ಲ ಸಾರ್ತಿ, ಇವು ಒಂಟಿತನ ನೀಗುವ ಗೆಳೆಯನಂತೆ. ಉಹುಂ… ಒಂದು ಕೂಡ ಹಾಡನ್ನಿಲ್ಲಿ ಎತ್ತಿ ಹೇಳಲಾರೆ. ನೂರು ಸಾವಿರ ಆಯ್ಕೆಯಲ್ಲಿ ಬೆರಳು ತೋರಲಾದರೂ ಯಾವುದಕ್ಕೆ? ಎರೆಹುಳುವಿನ ಹಾಗೆ ಮಿಳಗುಟ್ಟುವ ಮನಸ್ಸು, ಮುಖೇಶನೆದುರು ಮೌನಿ. ಅದಕ್ಕೆ ಗೊತ್ತಿರುವುದೆಲ್ಲ ಅದೊಂದೇ ಭಾಷೆಯೇನೋ ಅನ್ನುವಂತೆ. ಆ ಭಾಷೆ ಹಿಂದಿಯಲ್ಲ. ಹಾಡಿನ ರಾಗವಾದರೂ ಗುರುತಿಸಲು ಗೊತ್ತಿಲ್ಲ. ಆ ಎಲ್ಲರು ಹಾಡುತ್ತಿದ್ದರು, ಕಳೆದ ಜನ್ಮದ ಎಳೆಯೊಂದು ಹುಡುಕಿ ಬಂದಂತೆ…. ಅದಕ್ಕೆ ತಗುಲಿಕೊಂಡು, ಬಿಟ್ಟವರ ಸೇರಿಕೊಂಡೆವೋ  ಅನಿಸುವಂತೆ…

~

ಹರೆಯ ಕಾಲಿಟ್ಟ ಕಾಲೇಜಿನ ದಿನಗಳವು. ಹೊಸಹೊಸ ಸಿನೆಮಾ, ರ್‍ಯಾಪ್ ಸಾಂಗ್ ಜಮಾನಾ. ಈ ನಡುವೆ ಕೂಡ ‘ಚಾಂದ್ ಆಹೇ ಭರೇಗಾ’ ಹಾಡಿದವನಿಗೆ ಸೋತಿದ್ದೇ ಮೊದಲನೆಯದು ಮತ್ತು ಕೊನೆಯದಾಯ್ತು. ಅಂವ ನನ್ನ ಮದುವೆ ಫಿಕ್ಸ್ ಆದಾಗ ‘ತೇರಿ ಗಲಿಯೋಂ ಮೆ ನ ರಖ್ಖೇಂಗೆ ಕದಮ್…’ ಹಾಡು ಕಳಿಸಿಕೊಟ್ಟಿದ್ದ. ಮದುವೆ ದಿನ ಗ್ರೀಟಿಂಗ್ ಕಾರ್ಡ್ ಜತೆ ‘ಕೊಯೀ ಜಬ್ ತುಮ್ಹಾರಾ ಹೃದಯ್ ಥೋಡ್‌ದೇ…’ ಇತ್ತು. ಹೀಗೆ ಬರೀ ಮೂರು ಹಾಡುಗಳಲ್ಲಿ ಮುಗಿದುಹೋಗಿತ್ತು ಎಳಸು ಪ್ರೇಮಪ್ರಕರಣ!ಆಮೇಲೆ ಸಾಕಷ್ಟು ನೀರು ಬತ್ತಿದೆ ಭೂಮಿಯಲ್ಲಿ. ಆ ಹುಡುಗನೀಗ ಅಪರಿಚಿತ. ಹಾಡುಗಳು? ಕೇಳುವ ಪ್ರತಿಕ್ಷಣವೂ ಹೊಸ ಪ್ರೀತಿ ಚಿಗುರಿನ ಭಾವ.

~

‘ಸತ್ತ್ವ ಇರೋದು ಉಳಕೊಳ್ತದೆ’, ಬಲ್ಲವರ ಮಾತು. ಬಹುತೇಕ ಹಳೆ ಹಾಡುಗಳಿಗೆ ಆತ್ಮವಿದೆ- ನಾನು ಅಂದುಕೊಳ್ತೇನೆ. ಅದಕ್ಕೇ ಈಗಲೂ ಅವು ಹೊಸ ರಾಗ, ರೀಮಿಕ್ಸುಗಳ ದೇಹ ಹೊತ್ತು ಬರುತ್ತಲೇ ಇವೆ. ಇವತ್ತಿಗೂ ಅಂತಾಕ್ಷರಿಯಲ್ಲಿ ಥಟ್ಟನೆ ಹೊಳೆಯೋದು ಹಳೆ ಹಾಡುಗಳೇ. ಆಪ್ತವಾದವೇ ಆಪತ್ತಿಗೂ ಆಗೋದು, ಅಲ್ಲವಾ? ~ನಮ್ಮದೀಗ ಫೇಸ್‌ಬುಕ್ಕಿನಲ್ಲಿ ಸಾಮಾಜಿಕ ಬದುಕು. ಸ್ಟೇಟಸ್ ಕಾಪಾಡಿಕೊಳ್ಳೋದು ಅಲ್ಲಿ ಕೂಡ ಮುಖ್ಯ. ಚೂರು ಗಮನ ಕಡಿಮೆಯಾಯ್ತು ಅನಿಸಿದರೂನು ಅಲ್ಲೊಂದು ಹಳೆ ಹಿಂದೀ ಹಾಡು ಹಾಜರ್! ಹಿಗ್ಗಿನದೊಂದು ಹಾಡನ್ನ ಗೂಗಲಿಸಿ ಶೇರ್ ಮಾಡಿಕೊಂಡಿದ್ದೇ ತಡ ಹತ್ತಾರು ಕಮೆಂಟುಗಳು, ಮೆಚ್ಚುಗೆಗಳು ತುಂಬಿಕೊಳ್ತವೆ. ಗೆಳೆಯರೆಲ್ಲ ಹಾಡಿನೊಂದಿಗ ತಮ್ಮ ತಮ್ಮ ನೆನಪು-ಬಯಕೆಗಳ ಸುಖದೊಳಕ್ಕೆ ಜಾರುತ್ತಾರೆ. ‘ಹಾಡನ್ನ ಹಂಚಿ ಕೇಳಬೇಕು’ ಅನ್ನೋದು ಈ ಸಮಾಜದ ಗಾದೆ.

~

ಇಷ್ಟೆಲ್ಲ ಹೇಳೀಕೊಂಡರೂನು ಮುಗಿಯದ ಉತ್ಸಾಹ. ಯಾಕಂದರೆ ಈ ಹಳೆಯ ಹಿಂದಿ ಹಾಡುಗಳಿವೆಯಲ್ಲ, ಅವು ಭಾವಗೀತೆಗಳಂತೆ, ಗಝಲುಗಳಂತೆ. ಕೆಲವು ಗಝಲುಗಳೂ ಸಿನೆಮಾದೊಳಕ್ಕೆ ಸೇರಿಕೊಂಡಿರುವುದೂ ಕಾರಣವೇನೋ… ನಮ್ಮ ಭಾವಕೋಶದೊಳಗೇ ಅವಕ್ಕೆ ಜಾಗ. ಭಾವುಕರ ಪಾಲಿಗೆ ಅಮ್ಮನ ಲಾಲಿಯ, ಕೈತುತ್ತಿನ ನೆನಪಿನಂತೆ ಇವು ಕೂಡ.

ನೆನಪಿದೆಯಾ? ಅಯೋಧ್ಯೆ ತೀರ್ಪಿನ ದಿನ ಹೆಚ್ಚು ಹರಿದಾಡಿದ್ದು  ಯಾವ ದೇಶನಾಯಕರ ಸಂದೇಶಗಳಲ್ಲ, ಹೇಳಿಕೆಗಳಲ್ಲ. ಅವತ್ತು ಹೆಚ್ಚು ಮಟ್ಟಿಗೆ ರವಾನೆಯಾಗಿದ್ದು, ‘ತು ಹಿಂದು ಬನೇಗ ನ ಮುಸಲ್ಮಾನ್ ಬನೇಗ… ಇನ್ಸಾನ್ ಕಿ ಔಲಾದ್ ಹೆ ಇನ್ಸಾನ್ ಬನೇಗ’ ಅನ್ನುವ ರಫಿ ಹಾಡಿದ್ದ ಸಾಹಿರನ ಸಾಲುಗಳು. ಇದೇ ಸಾಹಿರ್, ‘ಮೆ ಪಲ್ ದೋ ಪಲ್ ಕ ಶಾಯರ್ ಹೂಂ’ ಅನ್ನುತ್ತಾ ‘ಕಲ್ ಕೋಯಿ ಮುಝ್‌ಕೋ ಯಾದ್ ಕರೆ, ಕ್ಯೋಂ ಕೋಯಿ ಮುಝ್‌ಕೋ ಯಾದ್ ಕರೇ…’ ಅಂದಿದ್ದ. ಅವನಿಗೆ, ಅವರೆಲ್ಲರಿಗೆ ಹೇಳಬೇಕು, ನಿಮ್ಮ ನಾಳೆಗಳ ನಾವು, ನಿಮ್ಮನ್ನೆಲ್ಲ ನೆನೆಯುತ್ತಿದ್ದೇವೆ. ಯಾಕಂದರೆ, ನೀವು ತಾಳಕ್ಕೆ ಪದ ಪೋಣಿಸಿ ವರ್ಷದ ಸೂಪರ್ ಹಿಟ್ ಕೊಟ್ಟು ಮರೆಯಾದವರಲ್ಲ. ನೀವಿನ್ನೂ ನಮ್ಮೊಳಗೆ ಹಾಡಾಗಿ ಹರಿಯುತ್ತಿದ್ದೀರಿ, ನಮ್ಮ ಭಾವುಕತನವನ್ನ ಉಳಿಸಿಕೊಡುತ್ತಾ…

(ಇದ್ದನ್ನ ಬರೆದಿದ್ದು ಚಳಿಗಾಲದಲ್ಲಿ, ತಿಂಗಳು ಹೊಸ ವರ್ಷದ ಸಂಚಿಕೆಗಾಗಿ…. ಜನವರಿ ಸಂಚಿಕೆಯಲ್ಲಿ ಪ್ರಕಟಿತ.)

‘ಮಿಂಚುಹುಳು’- ಹನಿಗೊಂಚಲು (ಕೆಟ್ಟ ಟೈಟಲ್!)

ನಂಗೆ ಮಿಂಚುಳ ತುಂಬಾ ಇಷ್ಟ. ಚಿಕ್ಕವಳಿರುವಾಗ ತಮ್ಮನೊಟ್ಟಿಗೆ ಅವನ್ನ ಹಿಡಿದು ಮೈಮೇಲೆ ಬಿಟ್ಟುಕೊಳೋದೊಮ್ದು ಆಟವಾಗಿತ್ತು. ಗೊತ್ತಾ!? ನಮ್ಮ ಸಂಬಂಧಿಕರೊಬ್ಬರ ಮದ್ವೆ ಹಳ್ಳೀಲಾಗಿತ್ತು. ರಾತ್ರಿ ವರಪೂಜೆ ಹೊತ್ತಿಗೆ ಕರೆಂಟ್ ಹೊರ್ಟೋಯ್ತು. ಅಲ್ಲಿ ದೇವಸ್ಥಾನದ ದಬ್ಬೆ ಬೇಲಿ ಉದ್ದಕ್ಕೂ ಗೊಂಚಲುಗೊಂಚಲು ಬೆಳಕು! ಅವು ಮಿಂಚುಹುಳು!! ಆ ನೋಟ ಕಟ್ಟಿಕೊಟ್ಟ ಅನುಭಾವ (ಭಾ- ಸ್ಪೆಲಿಂಗ್ ಮಿಸ್ಟೇಕ್ ಅಲ್ಲ)ವನ್ನ ಮರೆಯೋದು ಹೇಗೆ? ಅದನ್ನ ನೆನೆಸ್ಕೊಂಡ್ರೆ ಈಗ್ಲೂ ಅಷ್ಟೇ ಪ್ರಮಾಣದಲ್ಲಿ ರೋಮಗಳು ಎದ್ದೇಳ್ತವೆ. ಹಾಗೆ ಎದ್ದ ಘಳಿಗೆಯಲ್ಲಿ ಹುಟ್ಟಿದ ಕೆಲವು ಮಿಣುಕುಗಳು……

~1~

ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.
~2~

ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ
~3~

ಅಗೋ!
ಬೆಳಕಿನ ಹನಿಗೆ
ರೆಕ್ಕೆ ಮೂಡಿದೆ
~4~

ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.

~5~

ನಕ್ಷತ್ರಗಳಿಗೆ
ಮಣ್ಣ ಮೋಹ,
ಶಾಪಕ್ಕೆ ಹುಳುವಾದವು
~6~

ಕತ್ತಲಲ್ಲಿ
ಸೂರ್ಯನ ಕಣ್ಣೀರು,
ಮೈದಳೆಯಿತು
ಮಿಂಚುಹುಳು.
~7~

ಬೆನ್ನಲ್ಲಿ ಬೆಳಕು,
ಮಿಂಚುಹುಳು
ದಾರಿತಪ್ಪುತ್ತಿದೆ.

‘ರಾಧಾಷ್ಟಮಿ’ ಹೊತ್ತಲ್ಲಿ ‘ದುಂಬಿಗೆ ಧ್ಯಾನದ ಸಮಯ….’

ಕೊಳಲ ತರಂಗ
ಕೊಳದ ತರಂಗ
ಸೆಳೆತಕೆ ಸಿಕ್ಕ ರಾಧೆ
ಯಂತರಂಗ
ಕ ಲ ಕಿ
ರಾಡಿ
~
ಕಣ್ಣಾ
ಒಳಗಿದ್ದು ಕಾಡಬೇಡ
ವಿಶ್ವರೂಪಿ
ನಿನ್ನಗಲ ಎತ್ತರಕೆ
ಸಾಲದಿದು ಪುಟ್ಟ ಹೃದಯ.
ತುಣುಕು ಮಾತಿಗೆ
ತುಂಬುವುದು
ನಗೆ ಮಿಂಚಿಗೆ
ಸುಳ್ಳು ಪ್ರೀತಿಗೂ
ತುಂಬುವುದು
ನೆನಪಿಗೂ
ವಿರಹಕೂ
ಸಾವಿರ ಬಾಳ ಫಲಗರೆವ
ಒಂದು ಧನ್ಯ ನೋಟಕೂ
~
ಮಧು ತೀರಿದ;
ರವಿ ತೆರಳಿದ…

ಮಧು ತೀರಿದ, ರವಿ ತೆರಳಿದ
ಹೊತ್ತೀಗ
ದುಂಬಿಗೆ ಧ್ಯಾನದ ಸಮಯ
ಮುದುಡದೆ ವಿಧಿಯೇ
ಕಮಲಕೆ?
ರಾಧೆಗೆ?

~ ~ ~

ಸೆಪ್ಟೆಂಬರ್ 15ಕ್ಕೆ ರಾಧಾಷ್ಟಮಿ…. ಕೃಷ್ಣಂಗೆ ಮಾತ್ರ ಅಲ್ಲ, ರಾಧೆಗೂ ಒಂದು ಹುಟ್ಟಿದ ದಿನ ಇದೆ. ಮತ್ತು ಕೆಲವರು, ಬಹಳಾಗಿ ಉತ್ತರದ ಜನರು ಅದನ್ನ ಹಬ್ಬವಾಗಿ ಆಚರಿಸ್ತಾರೆ.

ನನಗೆ ರಾಧೆಯದೊಂದು ವ್ಯಸನ. ಯಾವಾಗಲೂ ಕಾಡುತ್ತಿರುವ ಪಾತ್ರ ಅವಳು. ಪ್ರೇಯಸಿ, ಗೊಲ್ಲತಿ, ಹೆಂಡತಿ…

ಏನಂದರೆ, ಕೃಷ್ಣನ ಬಗ್ಗೇನೇ ಅಂತ ಹೇಳಲಾಗಿರೋ ಇಡೀ ಭಾಗವತದಲ್ಲಿ ಅವಳ ಹೆಸರಿಲ್ಲ! ಬರೆದ ಜಾಣರ ರಾಜಕಾರಣಗಳೇನಿದ್ದವೋ? ಇರುವ ಕಥೆ ಅಂದರೆ, ಶುಕದೇವನಿಗೆ ರಾಧೆಯ ಹೆಸರು ಹೇಳಿದರೆ ಭಾವ ಸಮಾಧಿಗೇರುತಿತ್ತು. ಪರೀಕ್ಷಿತ ಸತ್ತ ಹಾವನ್ನ ಶಮೀಕರ ಕೊರಳಿಗೆ ಹಾಕಿದ್ದರ ಹಿಂದೆ ನೂರು ಸಮಜಾಯಿಷಿ ಇದೆ. ಆ ಋಷಿಯ ಮಗ ಶೃಂಗಿ ಅವನಿಗೆ ಒಂದು ವಾರದಲ್ಲಿ ಹಾವು ಕಡಿದು ಸಾಯ್ತೀ ಅಂತ ಶಪಿಸಿದ್ದಕ್ಕೂ ಅಷ್ಟೇ ನಿಮಿತ್ತ ಕಾರಣಗಳಿವೆ. ಹಾಗೆ ವಾರದ ಗಡುವು ಪಡೆದ ಪರೀಕ್ಷಿತ ಪುರಾಣಪುಣ್ಯಕಥೇಲಿ ಕಾಲ ಕಳೆಯೋಣ ಅಂತ ಇದ್ದಾಗ ಶುಕ ಭಾಗವತ ವಾಚನ ಮಾಡ್ತಾನೆ. ಅಷ್ಟೇ ದಿನಗಳಲ್ಲಿ ರಾಧೆ ಹೆಸರು ಹೇಳಿ ಮೂರ್ಛೆ ತಪ್ಪುತ್ತ ಉಳಿದರೆ ಪೂರ್ತಿ ಪುರಾಣ ಹೇಳಿಮುಗಿಸೋಕಾಗೋಲ್ಲ ಎಂದು ರಾಧೆ ಹೆಸರನ್ನೆಲ್ಲ ನುಂಗಿಕೊಳ್ತಾನೆ…. ಶುಕಮುನಿಗೆ ರಾಧೆ ಬಗ್ಗೆ ಅಷ್ಟೊಂದು ಗೌರವ, ಭಕ್ತಿ… etc

ಇಷ್ಟಾಗಿ ಭಾಗವತದಲ್ಲೂ 9:22ರಲ್ಲಿ ‘ಅನಯಾರಾಧಿತೋ ನೂನಮ್ ಭಗವಾನ್ ಹರಿರೀಶ್ವರಃ’ ಶ್ಲೋಕ ಕೋಟ್ ಮಾಡಿ ಇಲ್ಲಿ ಬರೋ ‘ರಾಧಿ’ಯೇ ರಾಧಾ ಅನ್ನುತ್ತಾರೆ. ಅದಕ್ಕೆಲ್ಲ ಸಂಸ್ಕೃತ ವ್ಯಾಕರಣ ಹಾಕಿ ಕೂಡಿ ಕಳೀಬೇಕು ತರ್ಕವೇ ಬದುಕಾದವರು.

ನನ್ನ ಪಾಲಿಗಂತೂ ರಾಧೆ ಬುದ್ಧಿಕೋಶದಲ್ಲಿಲ್ಲ, ಮನೋಕೋಶದ ತುಂಬ ತುಂಬಿಕೊಂಡಿದಾಳೆ.  ಅವಳ ಹೆಸರೆತ್ತಿಕೊಂಡು ಎಷ್ಟು ಬರೆದರೂ ಏನು ಬರೆದರೂ ತೃಪ್ತಿಯಾಗದು. ನನ್ನೆಲ್ಲ ಕಸಿವಿಸಿಗೂ ಹೆಸರಾಗಬಲ್ಲ ರಾಧೆಯ ನೆವದಲ್ಲಿ ನಾನು ಹಗುರಾಗುತ್ತ ನಡೆಯಬಹುದಲ್ಲ!

~

‘ದುಂಬಿಗೆ ಧ್ಯಾನದ ಸಮಯ’ ಅಂಥಹ ರಾಧೆ ನೆವದ ಕವಿತೆಗಳಲ್ಲಿ ಒಂದು. ಕೃಷ್ಣನ ಜೀವಂತಿಕೆಯ ಸಾರವೇ ಆಗಿದ್ದ ರಾಧೆ ಯಾವತ್ತೂ ಪತ್ರಿಕಾಗೋಷ್ಠಿ ಕರೆದು ಜಾಹೀರು ಮಾಡಲಿಲ್ಲ. ತನ್ನ ಪಾಡಿಗೆ ತಾನುಳಿದೂ ಇವತ್ತು ನಮ್ಮೆಲ್ಲರಿಗೆ ಗೊತ್ತಿರುವಳು ರಾಧೆ.

ನನಗೂ ರಾಧೆಯೇ ಆಗಿಬಿಡುವಾಸೆ.

ಅಂದಹಾಗೆ, ‘ಕಣ್ಣ’ ಅಂದರೆ ಕೃಷ್ಣನಿಗೆ ರಾಧೆ ಮಾತ್ರ ಕರೆಯುತ್ತಿದ್ದ ಹೆಸರು. ಅದು ಕೃಷ್ಣಾವತಾರ ಸರಣಿ ಬರೆದ ಮುನ್ಶಿಯವರಿಗೆ ಮಾತ್ರ ಗೊತ್ತಿತ್ತು!

ಪ್ರವಾಸದಲ್ಲಿ ನಮ್ಮ ಕಥನ

ನಂಗೆ ಹೋದ ಸಾರ್ತಿಯೇ ನಮ್ಮ ಅನುಭವಗಳನೆಲ್ಲ ಒಟ್ಟು ಹಾಕಿ ಊದ್ದನೆಯದೊಂದು ಕಥನ ಬರೆದಿಟ್ಟುಕೋಬೇಕು ಅನಿಸಿತ್ತು. ಸೋಮಾರಿತನದಿಂದ ಆ ಪ್ರಾಜೆಕ್ಟ್ ಹಾಗೇ ಬಿದ್ದುಹೋಗಿ, ಕೆಂಡಸಂಪಿಗೆಯಲ್ಲಿ ಎರಡು ಕಂತಿಗೇ ಸರಣಿ ತುಂಡಾಗಿ ನೆನೆಗುದಿಗೆ (ನಂಗೆ ಈ ಪದ ಅದ್ಯಾಕೋ ಇಷ್ಟ!) ಬಿದ್ದಿತ್ತು. ಆ ಎರಡನ್ನು ಹೆಕ್ಕಿಕೊಂಡು ಬಂದಿದೇನೆ. ಮತ್ತೆ ಮುಂದುವರೆಸೋ ಇರಾದೆಯಿಂದ!

ಅಂವ ಒಂದೇ ಸಮ ಬೆನ್ನು ಬಿದ್ದಿದ್ದ.
“ಬಸ್ ಏಕ್ ಸೆಟ್ ಲೇಲೋ ಭಯ್ಯಾ!”
ನಾವಂತೂ ಡಿಸೈಡ್ ಮಾಡಿಯಾಗಿತ್ತು. ಜಪ್ಪಯ್ಯಾ ಅಂದ್ರೂ ಶಾಪಿಂಗ್ ಮಾಡೋದಿಲ್ಲ ಅಂತ!! ನಮ್ಮ ಹಿಂದೆಯೇ ಸುಮಾರು ದೂರ ನಡೆದು ಬಂದವನ ಕಾಟ ತಪ್ಪಿಸ್ಕೊಳ್ಳಲು ಅಣ್ಣ ಕೇಳಿದ, “ಪಚಾಸ್ ರುಪಯೇ ಮೆ ದೋಗೇ?”
ಒಂದು ಸೆಕೆಂಡೂ ತಲೆ ಕೆರಕೊಳ್ಳದ ಹುಡುಗ ಅದಾಗಲೇ ಪೇಪರಿನಲ್ಲಿ ಅದನ್ನು ಸುತ್ತತೊಡಗಿದ್ದ. ಮುನ್ನೂರು ರುಪಾಯಿಯ ಬಣ್ಣಬಣ್ಣದ ಬಳೆ ಸೆಟ್ ಅನ್ನು ಬರೀ ಐವತ್ತು ರುಪಾಯಿಗೆ ಅಂವ ಕೊಟ್ಟುಬಿಡಲು ತಯಾರಾಗಿದ್ದ!

ತಗೋ… ಜತೆಗಿದ್ದ ಇನ್ನಿಬ್ಬರೂ ತಮಗೆರಡು ಅಂತ ವ್ಯಾಪಾರ ಕುದುರಿಸಿದರು. ನಿಂತನಿಂತಲ್ಲೇ ಆರು ಸೆಟ್ ಬಳೆ ಮಾರಾಟವಾಗಿ ಹೋಗಿತ್ತು. ಯಾವತ್ತೂ ಚೌಕಶಿ ಮಾಡಿಯೇ ಗೊತ್ತಿಲ್ಲದ ಅಣ್ಣನ ಹೊಟ್ಟೆಯಲ್ಲಿ ಸಂಕಟ ಶುರುವಾಯ್ತು. “ನಿಂಗೆ ಲಾಸ್ ಆಗ್ಲಿಲ್ವೇನಪ್ಪಾ?” ಅಂದಾಗ ಹುಡುಗ ಸಣ್ಣಗೆ ನಕ್ಕ. “ಆಗದೆ ಏನು ಭಯ್ಯಾ? ಆದ್ರೆ ನೋಡ್ತಾ ಇರಿ… ಇನ್ನು ಹತ್ ನಿಮಿಷ ನನ್ ಜೊತೆ ಇರಿ. ಇದೇ ಸೆಟ್ಟನ್ನ ಸಾವಿರ ರುಪಾಯಿಗೆ ಮಾರಿ ತೋರಿಸ್ತೀನಿ. ಒಬ್ಬ ವಿದೇಶಿ ಸಿಕ್ರೂ ಸಾಕು, ಲಾಸಿನ ಡಬಲ್ ಲಾಭ ಮಾಡ್ಕೋಳ್ತೀನಿ!” ಅಂದ. ಅವನ ಕಾನ್ಫಿಡೆನ್ಸು ಖುಷಿ ಕೊಟ್ಟಿತು. ಅವನ ಲಾಭದ ಗಣಿತ ಚೆನ್ನಾಗಿತ್ತು. “ಇರೋರ ಹತ್ರ ತೊಗೊಂಡ್ರೆ ಯಾರಿಗೇನು ಲಾಸು? ನಮ್ಮವರಿಗೆ ಕಡಿಮೆಗೆ ಕೊಟ್ರೆ ವಿಶ್ವಾಸನಾದ್ರೂ ಉಳಿಯತ್ತೆ. ಒಬ್ರ ಹತ್ರಾನೇ ಎಲ್ಲ ಇರ್ಬೇಕು ಅಂದ್ರೆ ಹೆಂಗೆ?”

ಅರೆ! ಬಳೆ ಮಾರುವ ಹುಡುಗನ ಬಾಯಲ್ಲಿ ಸಮಾಜವಾದದ ಮಾತು!

ಸೋಜಿಗವಿಲ್ಲ. ಹೇಳಿಕೇಳಿ ಅದು ಸಮಾಜವಾದಿಗಳ ನೆಲ. ಅದು ಪಶ್ಚಿಮ ಬಂಗಾಳ… ಅದು ಕೋಲ್ಕೊತಾ!!

********

ಕಲ್ಕತ್ತಾ. ಇದೇ ಸುಲಭ ಮತ್ತು ಆಪ್ತ.
ಆಪ್ತ ಯಾಕೆಂದರೆ, ಈ ಬಂಗಾಳವೆಂಬ ಬಂಗಾಳದ ಊರುಗಳು ನಮ್ಮ ಬಾಲ್ಯ ಕಾಲದ ಸುತ್ತಮುತ್ತಲನ್ನ ನೆನಪಿಸಿಕೊಡುತ್ತವೆ. ನಮ್ಮ ಅಂದರೆ… ಸರಿ ಸುಮಾರು ಮೂವತ್ತು- ನಲವತ್ತರ ಆಸುಪಾಸಿನಲ್ಲಿರುವವರ…

ಮರದ ಬಾಡಿ ಹೊತ್ತ ಬಸ್ಸುಗಳು, ಅದಕ್ಕೆ ರಬ್ಬರಿನ- ಮಡಚುವ ಕಿಟಕಿ ಪರದೆಗಳು, ಮೀನು ಗಾಡಿಯ ಥರದ ಹಾರನ್ನು…ಮಣ್ಣಿನ ಗೋಡೆಯ ಮನೆಗಳು, ಚಿಕ್ಕ ಚಿಕ್ಕ ಗಲ್ಲಿಗಳು, ಹೆಜ್ಜೆಗೊಂದು ಕೆರೆ, ಕೆರೆ ತುಂಬ ನೀರು! ಕೈಉದ್ದದ ಕೆಂಪು ರವಿಕೆ, ಕೆಂಪಿನದೇ ಬಾರ್ಡರಿನ ಬಿಳಿ ಕಾಟನ್ ಸೀರೆ- ಉಟ್ಟು ತೊಟ್ಟು ಸೈಕಲ್ಲಿನಲ್ಲಿ ಸೊಂಯ್ಯನೆ ಹೈಸ್ಕೂಲಿಗೆ, ಕಾಲೇಜಿಗೆ ಹೋಗುವ ಹುಡುಗಿಯರು!

ನಮ್ಮ ಪ್ರವಾಸೀ ಗ್ಯಾಂಗಿನಲ್ಯಾರೋ ಸಣ್ಣಗೆ ಕೇಳಿದರು- “ನಾವು ಗುಜರಾತಿನಲ್ಲಿದ್ದೇವಾ?”

~

ನಾವು ಪಶ್ಚಿಮ ಬಂಗಾಳದಲ್ಲೇ ಇದ್ದೆವು. ಬರೋಬ್ಬರಿ ಹತ್ತು ದಿನಗಳ ಕಾಲ ಇದ್ದೆವು. ಮುಖ್ಯವಾಗಿ ಹೋಗಿದ್ದು ಆಶ್ರಮಕ್ಕೆ ಅಂತಲಾದರೂ ಇದ್ದಷ್ಟೂ ದಿನ ನಾನು ಹಳ್ಳಿ ಹಳ್ಳಿ ತಿರುಗಿ ಮನಸ್ಸು ತುಂಬಿಕೊಂಡೆ. ಪ್ರಗತಿಯ ಮನೆ ಹಾಳಾಗಿ ಹೋಗಲಿ, ಆ ಮರ, ಗಿಡ, ಕಾಡು, ಟಾರಿಲ್ಲದ ರಸ್ತೆ, ರಸ್ತೆ ಮಧ್ಯದ ಟ್ರಾಮು, ಮುಗ್ಧತೆ, ಸರಳತೆ, ಮಣ್ಣಿನ ಮಡಿಕೆಯ ಅನ್ನ- ಸಾಂಬಾರು…! ಯಾವುದನ್ನೆಲ್ಲ ನಾವು ಕಳಕೊಂಡಿದ್ದೇವೆ ಅಂತ ಹಲಬುತ್ತಿದ್ದೇವೆಯೋ ಸಧ್ಯಕ್ಕಂತೂ ಅವನ್ನು ಬಂಗಾಳದಲ್ಲಿ ಇನ್ನೊಂದು ದಶಕದ ಕಾಲವಾದರೂ ಕಟ್ಟಿಕೊಳ್ಳಬಹುದು ಅನಿಸುತ್ತದೆ ನನಗೆ.

ಹೀಗೆ ನನ್ನನ್ನ ನಾಸ್ಟಾಲ್ಜಿಯಾಕೆ ಒಳಪಡಿಸಿದ ಬಹಳ ಮುಖ್ಯ ಸಂಗತಿಯೆಂದರೆ ಅಲ್ಲಿನ ಬಸ್ಸುಗಳು. ಆಗೆಲ್ಲಾ, ಅಂದರೆ ಸರಿಸುಮಾರು ಇಪ್ಪತ್ತು ವರ್ಷದ ಕೆಳಗೆ ತೀರ್ಥಹಳ್ಳಿಯಲ್ಲಿ ‘ದೇವಂಗಿ ಬಸ್ಸು’ ಅಂತ ಒಂದಿತ್ತು. ಉಳಿದೆಲ್ಲವಕ್ಕಿಂತ ಅದು ಹಳತು, ಹಳೆ ಮಾಡೆಲ್ಲಿನದು. ಕಣ್ತೆರೆದಾಗಿಂದ ಗಾಜಿನ ಕಿಟಕಿಯ ಬಸ್ಸುಗಳಲ್ಲೇ ಓಡಾಡಿದ್ದ ನನಗೆ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗಬೇಕೆಂದರೆ ವಿಷಾದ ಉಕ್ಕುತ್ತಿತ್ತು. ಅದ್ಯಾಕೋ ನಮ್ಮಮ್ಮನಿಗೆ ದೇವಂಗಿ ಬಸ್ಸಲ್ಲಿ ಹೋಗೋದು ಅಂದ್ರೆ ಪ್ರೀತಿ. ನಮಗೋ, ಅದರ ಮಡಚಿ- ಎತ್ತಿಕಟ್ಟುವ ರಬ್ಬರಿನ ಪರದೆಯ ಕಿಟಕಿಯೆಂದರೆ ವಿಪರೀತ ದುಃಖ. ಈ ಓಲ್ಡ್ ಮಾಡೆಲಿನಲ್ಲಿ ಹೋಗೋದಂದರೆ ಪ್ರತಿಷ್ಟೆಗೆ ಕಡಿಮೆ ಅನ್ನುವ ಅಹಂಕಾರ ಬೇರೆ! ಹೀಗೆ ಸೊಕ್ಕು ಮಾಡಿಕೊಂಡು ಒಂದು ಸಾರ್ತಿ, “ದೇವಂಗಿ ಬಸ್ಸಿಗೆ ಆಕ್ಸಿಡೆಂಟ್ ಆಗಿಹೋಗ್ಲಿ” ಅಂದುಬಿಟ್ಟಿದ್ದ ತಮ್ಮ, ಅಮ್ಮನ ಕೈಸೋಲುವ ತನಕ ಪೆಟ್ಟು ತಿಂದು ಕೆಂಪಾಗಿದ್ದ. ಆಮೇಲಿಂದ ನನಗೆ ಹಠಾತ್ತನೆ ಅದರ ಮೇಲೆ ಅಕ್ಕರೆ ಮೂಡಿಬಿಟ್ಟಿತ್ತು.

ಉಳಿದೆಲ್ಲವಕ್ಕಿಂತ ಡಿಫರೆಂಟಾಗಿದ್ದ, ಕಂದು ಬಣ್ಣದ ಪಟ್ಟೆಗಳಿದ್ದ ಆ ಹಳೇ ಹಪ್ಪಟ್ಟು ಬಸ್ಸು ನನ್ನ ಭಾವಕೋಶದಲ್ಲಿ ಶಾಶ್ವತ ಜಾಗ ತೊಗೊಂಡುಬಿಟ್ಟಿತು. ಮೊದಮೊದಲು ಲಾಲ್ ಡಬ್ಬಾಗಳಲ್ಲಿ (ಇದು ಕೂಡ ಚಿಕ್ಕಂದಿನ ನಮ್ಮ ದುರಹಂಕಾರದ ಭಾಷೆ- ಕೆಂಪು ಬಸ್ಸಿಗೆ ಬಳಸುತ್ತಿದ್ದುದು), ಆಮೇಲಾಮೇಲೆ ತಗಣಿ ಬಸ್ಸುಗಳಲ್ಲಿ (ಅಂದ್ರೆ ಏಸಿ ಬಸ್ಸು ಅಂತ ಗೊತ್ತಿದೆ ಅಲ್ವ?) ಈಗೀಗ ಸ್ಲೀಪರ್ ಕೋಚುಗಳಲ್ಲಿ ಓಡಾಡತೊಡಗಿದ್ದರೂ ದೇವಂಗಿ ಬಸ್ಸಿನ ಪ್ರೀತಿ ಅಡಗಿರಲಿಲ್ಲ.

ನನ್ನ ಈ ಬಸ್ಸಿನಲ್ಲಿ ಓಡಾಡುವ ಹುಚ್ಚಿನಿಂದಾಗಿ ನಮ್ಮ ಗ್ಯಾಂಗು ಸಾಕಷ್ಟು ಪಡಿಪಾಟಲು ಪಡಬೇಕಾಯ್ತು. ಬರೀ ನಾಲ್ಕು ರುಪಾಯಿಗೆ ಕಲ್ಕತ್ತೆಯಿಂದ ಬೇಲೂರಿಗೆ ಓಡಾಡಿದ್ದೇ ಓಡಾಡಿದ್ದು!

~

ಚಾ ದುಕಾನು

ನಿಮಗೇನಾದರೂ ಜೀವಮಾನದ ರುಚಿಕಟ್ಟಾದ ಚಹಾ ಕುಡಿಯಬೇಕು ಅನ್ನುವ ಖ್ವಾಯಿಶ್ಶಿದ್ದರೆ, ಬಂಗಾಳಕ್ಕೇ ಹೋಗಬೇಕು. ಅಲ್ಲಿನ ತೆರೆದ ಗಟಾರದ ಎದುರಿಗಿರುವ, ನೊಣಗಳಿಂದ ಜೀರ್ಗುಡುವ, ಶತಮಾನದ ಹಿಂದಿನ ಮರದ ಬೆಂಚುಗಳ ದುಕಾನಿನಲ್ಲಿ ಕೂರಬೇಕು. ಅಲ್ಲಿ ಸುಕ್ಕು ಮುಖದ ನಲವತ್ತೈದರ ‘ಮುದುಕ’ ಮಲಾಯಿ ಹಾಕಿ ಮಡಿಕೆ ಲೋಟದ ಭರ್ತಿ ಕೊಡುವ ಚಾ ಕುಡಿಯಬೇಕು. ಅದೂ ಬರೀ ಮೂರು ರುಪಾಯಿಗೆ!! ಅದೇನು ಹಾಲಿನ ಸಮೃದ್ಧಿಯೋ, ಚಾಲಾಕಿತನದ ಕೊರತೆಯೋ, ಪ್ರಾಮಾಣಿಕತೆಯೋ ಅಥವಾ ಆ ಜನಗಳು ಅಲ್ಪ ತೃಪ್ತರೋ ಅಥವಾ ಸಂತೃಪ್ತರೋ? ಬಂಗಾಳದಲ್ಲಿ ಎಲ್ಲಿಂದ ಎಲ್ಲಿ ಹೋದರೂ ಅಂಥದೇ ಸಮೃದ್ಧ ಚಹಾ ಅಷ್ಟೇ ಮೊತ್ತಕ್ಕೆ ಲಭ್ಯ.

ಈ ಚಹಾ ಕುಡಿಯಲಿಕ್ಕಾಗಿ ಅವರು ಮಡಿಕೆ ಲೋಟಗಳನ್ನ ಬಳಸ್ತಾರಲ್ಲ, ಅದರಿಂದ ಅದೆಷ್ಟು ಕುಟುಂಬಗಳು ಉದ್ಯೋಗ ಮಾಡುತ್ತ ಊಟ ಮಾಡಿಕೊಂಡಿವೆಯೋ ಗೊತ್ತಿಲ್ಲ. ಜೊತೆಗೆ, ಇಲ್ಲಿ ಒಮ್ಮೆ ಬಳಸಿದ ಚಹಾ ಕುಡಿಕೆಯನ್ನ ಮತ್ತೆ ಬಳಸೋದಿಲ್ಲ. ಕುಡಿದು ಬಿಸಾಡುವ ನಿಯಮ. (ನಾವು ಮಾತ್ರ ಜೋಪಾನ ತೊಳೆದಿಟ್ಟುಕೊಂಡು ಬೆಂಗಳೂರಿನವರೆಗೆ ತಂದು ಕ್ಯಾಕ್ಟಸ್ ಪಿಳ್ಳೆಗಳನ್ನ ಹುಗಿದಿಟ್ಟಿದೀವಿ ಅನ್ನೋದು ಬೇರೆ ಮಾತು!)ಹೀಗಾಗಿ ಪ್ರತಿ ಬಾರಿಯ ಚಹಾಕೂ ಹೊಸ ಕುಡಿಕೆ. ಐಸ್ ಕ್ರೀಮ್, ಮೊಸರುಗಳಿಗೂ ಇಂಥದೇ ವ್ಯವಸ್ಥೆ. ಕೊನೆಗೆ, ಬಾವಿಗೆ- ಬೋರ್ವೆಲ್ಲಿಗೆ ಇಳಿಸುವ ರಿಂಗೂ ಮಣ್ಣಿನದೇ. ಮನೆ ಮೇಲಿನ ಸಿಂಟೆಕ್ಸಿನ ಥರದ ಟ್ಯಾಂಕೂ ಮಣ್ಣಿನದೇ!! ಎಲ್ಲರಿಗೂ ಬದುಕುವ ಹಕ್ಕು! ಜತೆಗಿದು ಪರಿಸರದ ಗೆಳೆಯ ಬೇರೆ!! ಮಣ್ಣಲ್ಲಿ ಕರಗಿ, ಮಣ್ಣಲ್ಲಿ ಮಣ್ಣಾಗಿ…
ಅದಕ್ಕೇ ಹೇಳಿದ್ದು, ಪ್ರಗತಿ, ಪಿಂಗಾಣಿ ಕಪ್ಪುಗಳಿಗಿಂತ ಮಾನವನ ಬದುಕಿಗೆ ದಾರಿಯಾಗುವ ಮಣ್ಣಿನ ಲೋಟ… ಯಾರಾದರೂ ಬಯ್ಯುವರೇನೋ ಬಹುಶಃ. ಅಷ್ಟಕ್ಕೂ ಈ ಕಾನ್ಸೆಪ್ಟೇ ಗೊಂದಲದ್ದು. ಪ್ರಗತಿಯೂ ಬೇಕು, ನೆಮ್ಮದಿಯೂ ಬೇಕು. ಪ್ರಗತಿ ತುಂಬಾ ತುಟ್ಟಿ. ಅದನ್ನ ನೆಮ್ಮದಿಯ ಬೆಲೆಗೇ ಕೊಳ್ಳಬೇಕು…

ಇದು ಚಹಾ ದುಕಾನಿನಲ್ಲಿ ಕುಂತು ನಾವು ನಡೆಸಿದ ಜಿಜ್ಞಾಸೆ.

ಚಹಾ ಮಾತ್ರವಲ್ಲ, ಬಂಗಾಳದಲ್ಲಿ ಬಹುತೇಕ ಆಹಾರ ಸಾಮಗ್ರಿಗಳು ಅಗ್ಗ. ಒಂದು ರೋಟಿಗೊಂದು ರುಪಾಯಿ, ಬಾಜಿ ಬೌಲಿಗೆ ಮೂರು ರುಪಾಯಿ, ನಾಲ್ಕು ರುಪಾಯಿಗೊಂದು ಭರ್ಜರಿ ಪರೋಟಾ, ಮೂರು ರುಪಾಯಿಗೆ ರಸರಸದ ರಸಗುಲ್ಲಾ, ಹತ್ತು ರುಪಾಯಿಗೆ ಪೊಟ್ಟಣದ ತುಂಬ ಬಿಸಿಬಿಸಿ ಜಿಲೇಬಿ!

ತಿನ್ನುವುದೇ ಜೀವಮಾನದ ಧ್ಯೇಯವಾಗಿದ್ದ ನಮ್ಮಲ್ಲನೇಕರು ‘ಒಂದು ನಾಲ್ಕು ವರ್ಷ’ ಅಲ್ಲಿದ್ದು, ತಿಂದುಂಡು ದುಡ್ಡುಳಿಸಿ, ಬೆಂಗಳೂರಿಗೆ ಮರಳಿ ಮನೆಕಟ್ಟುವ ಪ್ಲ್ಯಾನು ಹಾಕಿಬಿಟ್ಟಿದ್ದರು ಅಂದರೆ…

ಅರೆ ಹಾ! ರಸಗುಲ್ಲಾದ ಕಥೆ ಹೇಳಬೇಕಲ್ಲ? ಇದರ ಜತೆಗೆ ಅಲ್ಲಿನ ತಿಂಡಿ ತೀರ್ಥದ ಸಂಗತಿಯನ್ನೂ ಹೇಳ್ತೇನೆ ಕೇಳಿ.

ನಾವು ಬೇಲೂರಲ್ಲಿಳಿದ ಮರುದಿನ ಗ್ಯಾಂಗಿನ ಮೂವರು ಹೊರಸಂಚಾರಕ್ಕೆ ಹೋದರು. ಅಲ್ಲೆಲ್ಲಾ ಕರೆಕ್ಟಾಗಿ ಏಳು ಗಂಟೆಗೆ ತಿಂಡಿ ಕೊಟ್ಟುಬಿಡ್ತಾರೆ. ನಾವು ಉಳಿದಿದ್ದು ಆಶ್ರಮದ ಗೆಸ್ಟ್ ಹೌಸಿನಲ್ಲಾದ್ದರಿಂದ ತುಂಬಾ ಶಿಸ್ತು ಬೇರೆ. ಹೊತ್ತು ಅಂದರೆ ಹೊತ್ತಿಗೆ ಸರಿಯಾಗಿ ಜೋಡಿಸಿಟ್ಟ ತಾಟುಗಳ ಮುಂದೆ ಕುಂತುಬಿಡಬೇಕು.

ಏಳು ಗಂಟೆಗೆ ಅದೆಂಥಾ ತಿಂಡಿ ಕೊಡ್ತಾರಪ್ಪಾ ಅಂತ ಗಡಿಬಿಡಿಯಲ್ಲಿ ಆಶ್ರಮದಿಂದ ಓಡಿ ಬಂದು ಕುಂತಿದ್ದೆವು. ಈ ಮೂವರು ನಾಪತ್ತೆ. ಮಹರಾಜರ (ಅಡುಗೆ ಭಟ್ಟರನ್ನ ಹಾಗನ್ನುತ್ತಾರೆ) ಕೈಲಿ ಸಣ್ಣಗೆ ಬುದ್ಧಿ ಹೇಳಿಸ್ಕೊಂಡು ಉಳಿದವರೆಲ್ಲರೂ ತಿಂಡಿಗೆ ಕಾದು ಕುಳಿತೆವು.

ಬಂದೇಬಿಟ್ಟಿತು! ಒಂದು ದೊಡ್ಡ ಬೇಸನ್ನಿನ ತುಂಬ ಮಂಡಕ್ಕಿ. ನಾವು ಕುಳಿತ ಸಾಲಿನುದ್ದಕ್ಕೂ ಮಂಡಕ್ಕಿ ಹಾಕಿ ನಿಮಿಷ ಕಳೆದರೂ ಯಾರೂ ತಿನ್ನಲು ಶುರುವಿಟ್ಟಿರಲಿಲ್ಲ. ‘ಅನ್ನಪೂರ್ಣೇ ಸದಾ ಪೂರ್ಣೇ’ ಹೇಳಲಿಕ್ಕಿದೆಯೇನೋ ಅಂದುಕೊಂಡು ನಾವೂ ಸುಮ್ಮನಾದೆವು. ಅಷ್ಟಕ್ಕೂ ಹಗಲಾಗೆದ್ದು ‘ಬರಗೆಟ್ಟವರ’ ಹಾಗೆ ಮಂಡಕ್ಕಿ ತಿನ್ನುವ ಯೋಚನೆ ನಮಗೆ ಆಕರ್ಷಕವಾಗಿ ಕಾಣಲಿಲ್ಲ. ಎದ್ದು ಹೋಗುವಂತಿಲ್ಲ. ಪ್ರಸಾದ ಅನ್ನುವ ಸೆಂಟಿಮೆಂಟು ಬೇರೆ.

ಇನ್ನು ಹತ್ತು ದಿನ ಹೆಂಗಪ್ಪಾ ಅಂದುಕೊಳ್ತಿರುವಾಗಲೇ ಮತ್ತೊಂದು ಬೌಲಿನ ತುಂಬ ಅದನ್ನು ಬಡಿಸುತ್ತ ಬಂದರು. ಅದನ್ನ ಅಂದರೆ, ಆಲೂಗಡ್ಡೆ ಭಾಜಿಯನ್ನ! ಈಗಂತೂ ಮತ್ತಷ್ಟು ಗಲಿಬಿಲಿ. ಮಂಡಕ್ಕಿಯ ಜತೆ ಈ ಭಾಜಿಯನ್ನಿಟ್ಟುಕೊಂಡು ಮಾಡುವುದೇನು? ಅಕ್ಕ ಪಕ್ಕ ಮಂಗಗಳ ಹಾಗೆ ನೋಡುತ್ತ ಕುಂತೆವು. ಅವರೆಲ್ಲ ಭರ್ಜರಿಯಾಗಿ ಅದನ್ನ ಮಂಡಕ್ಕಿ ಬೇಸಿನ್ನಿಗೆ ಸುರಿದುಕೊಳ್ಳುತ್ತ, ಚಮಚೆಯಿಂದ ಕಲಸಿಕೊಳ್ಳುತ್ತ, ಆನಂದದಿಂದ ಸವಿಯುತ್ತ…

ಉಫ್! ಮಂಡಕ್ಕಿಗೆ ಭಾಜಿ ಹಾಕ್ಕೊಂಡು ತಿನ್ನೋದು! ಅರೆ!! ಈ ತಿಂಡಿ ಅದೆಷ್ಟು ಸುಲಭ! (ಮಾರನೆ ದಿನ ಮಂಡಕ್ಕಿ ಜೊತೆ ಭಾಜಿಗೆ ಬದಲು ಶಾವಿಗೆ ಪಾಯಸ ಕೊಟ್ಟಿದ್ದರು. ಅವರೆಲ್ಲ ಅದನ್ನ ಮಂಡಕ್ಕಿ ಮೇಲೆ ಸುರಿದುಕೊಂಡು ತಿನ್ನುತ್ತಿದ್ದರು. ನಾವು ಮಾತ್ರ ಮಂಡಕ್ಕಿಯನ್ನ ಬಳಿದು ಮುಕ್ಕಿ, ಪಾಯಸವನ್ನ ಆಮೇಲೆ ತಿಂದೆವು)

ಅಡುಗೆ ಮೈಗಳ್ಳತನಕ್ಕೆ ಕುಖ್ಯಾತಳಾಗಿದ್ದ ನನ್ನ ಮುಖವನ್ನೇ ಎಲ್ಲರೂ ಗುರಾಯಿಸಿದರು. “ಊರಿಗೆ ವಾಪಸಾದ ಮೇಲೆ ಚೇತನಕ್ಕ ಬೆಂಗಾಳಿ ಸ್ಪೆಶಲ್ ತಿಂಡಿ ಮಾಡ್ಕೊಡ್ತಾರೆ” ಅಣಕಿಸಿ ನಕ್ಕರು. ‘ಮೊದಲ ದಿನ ಮೌನ, ಅಳುವೇ ತುಟಿಗೆ ಬಂದಂತೆ’ ಗಬಗಬನೆ ತಿಂದು ಮುಗಿಸಿದರು. ನಮಗೆ ಮಾತ್ರ ಅದು ಪ್ರಸಾದ ಅನ್ನುವ ಒಂದೇ ಅಂಶ ಮಹದಾಕಾರವಾಗಿ ಬೆಳೆದು ಅಮೃತ ಸಮವಾಗಿ ನಿಂತು ಗಡದ್ದಾಗಿ ತಿಂದೆವು. ಹಿಂದಿನ ರಾತ್ರಿ ಊಟ ಬಿಟ್ಟಿದ್ದು ಒಳಗೊಳಗೆ ನೆನಪಾದರೂ ಪ್ರಸಾದದ ಗೌರವಕ್ಕೆ ಅನ್ನುವುದನ್ನೇ ಸ್ಥಾಪಿಸಿಕೊಂಡು ಸುಮ್ಮಗಾದೆವು!

ಈ ನಡುವೆ, ಹೊರಗೆ ಹೋಗಿದ್ದ ಆ ಮೂವರು ಮರಳಿದ್ದರು. ಒಬ್ಬನ ಮುಖ ಥೇಟು ಕೋತಿಮೂತಿಯಾಗಿತ್ತು. ಏನು ಅಂತ ಕೇಳಿದರೆ ಬಾಯಿ ಬಿಡುತ್ತಿಲ್ಲ. ಉಳಿದಿಬ್ಬರು ಬ್ಲ್ಯಾಕ್ ಮೇಲ್ ಮಾಡೋರ ಹಾಗೆ ಮುಸಿಮುಸಿ ಮಾಡ್ತಿದಾರೆ. ಮಿತ್ರ ಸಮ್ಮಿತ, ಕಾಂತಾ ಸಮ್ಮಿತಗಳೆಲ್ಲ ಮುಗಿದು, ಕೊನೆಗೆ ಪ್ರಭುಸಮ್ಮಿತಕ್ಕಿಳಿದು ಗದರಿದ ಮೇಲೆ ಒಬ್ಬ ಬಾಯ್ಬಿಟ್ಟ. ‘ಅವಂಗೆ ವಾಮಿಟ್ ಆಯ್ತು..’

ಅರ್ರೆ! ವಾಮಿಟ್ ಆದ್ರೆ ಮೊದ್ಲು ಹೆಳೋದಲ್ವಾ? ಮುಚ್ಚಿಡೋ ಅಂಥದೇನು? ಮುಟ್ಟು ತಪ್ಪಿದ ಕನ್ಯೆ ಹಾಗೆ? ರೇಗಿ ಬಂತು ನನಗೆ.

ಹಾಗೆ ರೇಗುವುದರೊಳಗೆ ಮತ್ತೊಬ್ಬ ಕಿಸಿದ, ‘ರಸಗುಲ್ಲಾ…’

ನಮ್ಮ ತಲೆಗಳು ಸಾವಿರ ಮೈಲು ವೇಗದಲ್ಲಿ ಓಡಿದವು. ‘ಇವಂಗೆ ವಾಮಿಟ್ ಆಗಿದ್ದು ರಸಗುಲ್ಲದಿಂದಲೇ!’ ಆದರೆ ಪಾಪ ನಾವು, ರಸಗುಲ್ಲದ ಖರಾಬು ಕ್ವಾಲಿಟಿ ವಾಂತಿ ಮಾಡಿಸಿತೇನೋ ಅಂದುಕೊಂಡು, ಅಂಗಡಿಯವನನ್ನ ತರಾಟೆಗೆ ತೆಗೆದುಕೊಳ್ಳಲು ರೆಡಿಯಾದೆವು. ಆ ಹೊತ್ತಿಗೆ ವಾಂತಿಮಹಾಶಯ ಖುದ್ದು ಬಾಯ್ಬಿಟ್ಟ. “ಮೂರು ರುಪಾಯಿಗೊಂದು. ಬೆಲ್ಲದ್ದು ಬೇರೆ. ಬಹಳ ಚೆನ್ನಾಗಿತ್ತು. ಫ್ರೆಶ್ಶು ಬೇರೆ. ಒಟ್ಗೆ ಆರೇಳು ತಿಂದ್ಬಿಟ್ಟೆ. ಅಭ್ಯಾಸವಿಲ್ಲ ನೋಡಿ, ದಾರೀಲಿ ಬರುವಾಗ… ಈಗ ಒಂಥರಾ ಹೊಟ್ಟೆ ತೊಳೆಸ್ತಿದೆ…”

ಅವನ ಹಣೆ ಬರಹಕ್ಕೆ ಹೊಟ್ಟೆ ತುಂಬ ನಕ್ಕ ನಾವು, ನಾವು ಕೂಡ ಅಷ್ಟನ್ನು ತಿಂದು ನೋಡುವ ಶಪಥ ಹೂಡಿ ಹೊರಟೆವು. ಮೂರಕ್ಕೇ ಮಕ್ಕಟ್ಟಿ ಹೋಗಿ, ಅವನ ರೆಕಾರ್ಡನ್ನ ಶಾಶ್ವತಗೊಳಿಸಿದೆವು.

ಹಾಗೆ ಬೆಳಗಿನ ಎಂಟು ಗಂಟೆಯ ಸಮಯದಲ್ಲಿ ರಸಗುಲ್ಲಾ ಜಿಲೇಬಿಗಳನ್ನು ಸತ್ತರೂ ಕರ್ನಾಟಕದ ನೆಲದಲ್ಲಿ ನಿಂತು ತಿನ್ನಲು ಸಾಧ್ಯವೇ ಇಲ್ಲವೇನೋ! ಅಲ್ಲಿನ ಮಾಹೋಲಿಗೆ ಅದು ಹೊಂದುತ್ತದೆ. ಅಷ್ಟು ಮಾತ್ರವಲ್ಲದೆ, ಅಲ್ಲಿ ಸೂರ್ಯ ನಮಗಿಂತ ಮುಂಚೆ ಹುಟ್ಟುತಾನೆ. ನಮಗಿಲ್ಲಿ ಏಳುಗಂಟೆಗೆ ಪೂರ್ತಿ ಬೆಳಗಾದರೆ, ಅಲ್ಲಿ ಆರು ಗಂಟೆಗೇ ಸೂರ್ಯ ಹೊಳೆಯುತ್ತಿರುತಾನೆ.
ಈ ಜಿಯಾಗ್ರಫಿಗೂ ರಸಗುಲ್ಲಾ ತಿಂದಿದ್ದಕ್ಕೂ ಏನಾದರೂ ಲಿಂಕ್ ಇದೆಯಾ ಅಂತ ತಲೆಕೆಡಿಸಿಕೊಳ್ಳೋಕೆ ಹೋಗಬೇಡಿ. ಅಷ್ಟು ಮುಂಚೆ ಹೊಟ್ಟೆಬಿರಿಯ ತಿಂದ ನಮ್ಮನ್ನ ನಾವು, ಅಲ್ಲಿ- ಆ ಹೊತ್ತಲ್ಲಿ ನಿಂತು ಸಮರ್ಥಿಸಿಕೊಂಡಿದ್ದು ಹೀಗೆ!