ಝೆನ್ ತಿಳಿಗೊಳದ ನುಣುಪು ಕಲ್ಲು

ಹಿರಿಯ ಗೆಳೆಯ ರವೀಂದ್ರನಾಥ್ ಕನ್ನಡಕ್ಕೆ ಹಾಯ್ಕು ಪ್ರಕಾರದ ವಿಶಿಷ್ಟ ಕೊಡುಗೆ ನೀಡಿದವರು. ಅವರ 3ನೇ ಹಾಯ್ಕು ಪುಸ್ತಕ “ಕೊಡೆಯಡಿಯ ಒಂದು ಚಿತ್ರ”ಕ್ಕೆ ಬರೆದ ನನ್ನ ಮುಮ್ಮಾತು ಇದು. ಈ ಬೆಳಕಿನ ಹನಿಳನ್ನು ಓದಿನ ಆಸಕ್ತಿಯುಳ್ಳವರೆಲ್ಲರೂ ಒಮ್ಮೆ ಚಪ್ಪರಿಸಲೇಬೇಕು….

***

“ಹಾಯ್ಕು…
ಅದು ಬೀಜದೊಳಗಿನ ಮರಗಳ ಸಾಧ್ಯತೆ.”
ಬಹುಶಃ ಇಷ್ಟು ಹೇಳಿದರೆ ಹಾಯ್ಕುವಿನ ಓದಿಗೆ ಒಂದು ಬಾಗಿಲು ತೆರೆದಿಟ್ಟಂತಾಗುವುದು. ಆದರೆ ಹಾಯ್ಕು ಕಾವ್ಯ ಗೋಡೆಗಳಿಲ್ಲದ ಬಯಲಿನಂತೆ. ಒಳ ಹೊಕ್ಕಲೊಂದು ನಿರ್ದಿಷ್ಟ ಪ್ರವೇಶ ಬೇಡುವ ಬಯಲದು. ಇದನ್ನು ದಕ್ಕಿಸಿಕೊಳ್ಳಲು ಮಾನಸಿಕ ಸಿದ್ಧತೆ ಇರಬೇಕಾಗುತ್ತದೆ. ಮೂರೇ ಸಾಲಿನ ಕಾವ್ಯವಾದರೂ ಹಾಯ್ಕು ಹನಿಗವಿತೆಯಂತೆ ಓದಿ ಮುಗಿಸುವ ಅಥವಾ ಮರೆಯುವಂಥದ್ದಲ್ಲ. ಇದು ನುಡಿ ಚಿತ್ರದಂತೆ. ಹಾಯ್ಕು ಅಕ್ಷರಗಳ ಮೂಲಕ ದೃಶ್ಯ ಮತ್ತು ಅನುಭವಗಳನ್ನು ಕಟ್ಟಿಕೊಡುವುದು ಮಾತ್ರವಲ್ಲದೆ, ಅವೆರಡನ್ನೂ ಮೀರಿದ ದರ್ಶನಕ್ಕೂ ದಾರಿಯಾಗುತ್ತದೆ. ಎಂತಲೇ ಇದು ಝೆನ್ ಪರಂಪರೆಯ ಆಧಾರವನ್ನು ತಬ್ಬಿ ಹರಡಿದ್ದು.

zenಹಾಯ್ಕು ಒಂದು ಅನುಭಾವ ಕಾವ್ಯ. ‘ಯಾವುದೂ ಅಮುಖ್ಯವಲ್ಲ’ ಎನ್ನುವುದನ್ನು ಬಿಂಬಿಸುತ್ತಾ ಜೀರುಂಡೆಯ ಕೂಗು, ಕಪ್ಪೆಯ ಕುಪ್ಪಳಿಕೆಗಳ ಒಳಗಿಂದಲೇ ಹೊಳಹುಗಳನ್ನು ಒದಗಿಸಿಕೊಡುತ್ತದೆ. ಇದು ಹೂವು ಅರಳುವ ಸದ್ದನ್ನೂ ನಮಗೆ ಕೇಳಿಸಬಲ್ಲದು. ಹಕ್ಕಿ ಹೆಜ್ಜೆ ಜಾಡನ್ನೂ ತೋರಬಲ್ಲದು. ಮೀನೊಂದು ಆಗ ತಾನೆ ಸುಳಿದು ಹೋಗಿ ಉಂಟಾದ ಕಂಪನದಲೆಗಳನ್ನೇ ಒಂದು ಕಾವ್ಯವಾಗಿಸಿ, ಆ ಮೂಲಕವೇ ಹೊಸತೊಂದು ಒಳನೋಟ ದಕ್ಕಿಸಿಕೊಡಬಲ್ಲದು. ಹಾಯ್ಕುವೊಂದರ ಆರಂಭ ಮತ್ತು ಅಂತ್ಯಗಳು ನಡುವಿಂದ ಹುಟ್ಟಿ, ನಡುವೆಯೇ ಮುಗಿಯುವ ಬೆರಗಿನದ್ದು. ಇವನ್ನು ಊಹಿಸಿಟ್ಟುಕೊಳ್ಳುವುದು ಕಷ್ಟಸಾಧ್ಯ. ಕೊಳದಲ್ಲಿ /ಕಾಲ/ಪಾಚಿ – (ಕೊಡೆಯಡಿ ಒಂದು ಚಿತ್ರ, ರವೀಂದ್ರನಾಥ್) ಅಂತಹ ಒಂದು ಊಹಾತೀತ ವಿವರಣೆಯ ಹಾಯ್ಕು. ಇದರ ಓದಿನ ಜೊತೆಯಲ್ಲೇ ಹುಟ್ಟಿಕೊಳ್ಳುವ ಚಿಂತನೆ, ನಮ್ಮ ಇತರೆಲ್ಲ ಯೋಚನೆಗಳನ್ನು ಗೌಣ ಮಾಡಿ ಖಾಲಿಯಾಗಿಸಿದರೆ ಅದೇ ಧ್ಯಾನ. ಇಂತಹ ಸಾಧ್ಯತೆಯಿಂದಲೇ ಹಾಯ್ಕು ಕಾವ್ಯ ಝೆನ್ ಪರಂಪರೆಯ ಒಂದು ಭಾಗವಾಗಿ ಬೆಳೆದಿದ್ದು. ಇದನ್ನು ಝೆನ್ ತಿಳಿಗೊಳದ ನುಣುಪು ಕಲ್ಲು ಎನ್ನಬಹುದು.
ಹಾಯ್ಕು ಕಾವ್ಯ ಸಹಜವಾಗಿಯೇ ಬೌದ್ಧ ಧರ್ಮದ ಪ್ರಭಾವವಿದ್ದ ಚೀನಾ, ಜಪಾನ್‌ಗಳಲ್ಲಿ ಸಂಚಲನ ಉಂಟುಮಾಡಿತ್ತು. ತಿಳಿವು, ಸೊಗಸು, ಜನರ ನಡುವಿನದ್ದೇ ರೂಪಕ ಮತ್ತು ಭಾಷೆಗಳನ್ನು ಒಳಗೊಂಡು ಹಬ್ಬಿ ಹರಡಿತು ಹಾಯ್ಕು. ಆದ್ದರಿಂದಲೇ ಇದು ಜನರ ಕಾವ್ಯವಾಗಿಯೂ ಹೊಮ್ಮಿತು. ಬಹುಶಃ ಹಾಯ್ಕು ಕಾವ್ಯ ಕನ್ನಡಕ್ಕೆ ಬಂದಿದ್ದು ಈ ಗುಣದಿಂದಾಗಿಯೇ ಇರಬೇಕು. ಈ ಮೊದಲು ಅಂಕುರ್ ಬೆಟಗೇರಿ ಜನಪ್ರಿಯ ಹಾಯ್ಕುಗಳನ್ನು ಅನುವಾದಿಸಿ ‘ಹಳದಿ ಪುಸ್ತಕ’ವನ್ನು ಪ್ರಕಟಿಸಿದ್ದರು. ಹಾಯ್ಕುವಿನ ಮತ್ತು ಕವಿಗಳ ಸವಿಸ್ತಾರ ಪರಿಚಯದೊಂದಿಗೆ ಕನ್ನಡಕ್ಕೆ ಬಂದ ಮೊದಲ ಪುಸ್ತಕ ಇದಾಗಿತ್ತು.
ರವೀಂದ್ರನಾಥ್ ಜಪಾನಿ ಹಾಯ್ಕುಗಳನ್ನು ಇಂಗ್ಲಿಶ್‌ನಿಂದ ಅನುವಾದ ಮಾಡಿ ಪ್ರಕಟಿಸಿದ್ದಾರಾದರೂ (ಒಂದು ಹನಿ ಬೆಳಕು ಸಂಕಲನ) ಅಪ್ಪಟ ಕನ್ನಡತನದ, ನೆಲಕ್ಕೆ ಹತ್ತಿರವಾಗಿರುವ ಸ್ವರಚಿತ ಹಾಯ್ಕುಗಳೆ ಹೆಚ್ಚು ಗಟ್ಟಿ ಹಾಗೂ ಪ್ರಭಾವಶಾಲಿ ಎನ್ನಿಸುತ್ತವೆ. ಸುಮಾರು ಐನೂರು ಹಾಯ್ಕುಗಳ ಇವರ ‘ಮೂರು ಸಾಲು ಮರ’ ಸಂಕಲನ ಕನ್ನಡ ಸಾಹಿತ್ಯಕ್ಕೆಒಂದು ಗಣನೀಯ ಕೊಡುಗೆ. ನಮಗೆ ಹೊಸತಾದ ಕಾವ್ಯಪ್ರಕಾರವನ್ನು ಈ ಕೃತಿ ಸಮರ್ಥವಾಗಿ ಪರಿಚಯಿಸುತ್ತದೆ. ತಮ್ಮ ಭಾಷೆ, ಶೈಲಿ, ಸಂವೇದನೆ ಹಾಗೂ ನಿರೂಪಣಾ ಗುಣಗಳಿಂದ ಕವಿತೆಗಳನ್ನೂ ಕಥೆಗಳನ್ನೂ ಬರೆಯಬಹುದಾದ ರವೀಂದ್ರನಾಥ್, ಹಾಯ್ಕು ಕಾವ್ಯಝರಿಗೆ ತಮ್ಮನ್ನು ಸಂಪೂರ್ಣ ಒಡ್ಡಿಕೊಂಡು ಬಿಟ್ಟಿರುವಂತಿದೆ. ಹಾಗೆಂದೇ ಇದು ಅವರ ಮೂರನೆ ಹಾಯ್ಕು ಪುಸ್ತಕವಾಗಿ ಹೊರಬರುತ್ತಿದೆ. ಈ ನಿಟ್ಟಿನಲ್ಲಿ ರವೀಂದ್ರನಾಥ್ ಕನ್ನಡದಲ್ಲಿ ಹಾಯ್ಕುವಿಗೆ ಮುಖ್ಯ ನೆಲೆಯೊದಗಿಸಿದ ಕವಿಯಾಗಿ ನಿಲ್ಲುತ್ತಾರೆ.
ರವೀಂದ್ರರ ಹಾಯ್ಕುಗಳಲ್ಲಿ ಜಪಾನಿ ಹಾಯ್ಕುಗಳಂತೆ ಪ್ರಕೃತಿಯೇ ಮುಖ್ಯ ಕೇಂದ್ರ. ಸೃಷ್ಟಿಯ ಸೂಕ್ಷ್ಮಗಳನ್ನು ಬೆರಗಿನಿಂದ ನೋಡಲು ಅವರಿಗೆ ಸಾಧ್ಯವಾಗಿದೆ. ಹಾಗೆಂದೇ, ಹರಿದಾಡುವ/ಮಣ್ಣು/ಎರೆಹುಳು – ಎನ್ನುವ ಸಾಲುಗಳು ಇವರಲ್ಲಿ ಒಡಲುಗಟ್ಟುತ್ತದೆ. ಸೃಷ್ಟಿಯನ್ನು ಇವರು ನೋಡುವ ಕ್ರಮವೇ ವಿಶಿಷ್ಟ. ಉದುರುತ್ತಿವೆ/ಗುಲಾಬಿ ದಳಗಳು/ಮುಳ್ಳಿಗೆ ನೋವು – ಎನ್ನುವ ಹಾಯ್ಕು ಇದಕ್ಕೆ ನಿದರ್ಶನ.
ಝೆನ್ ಪರಂಪರೆಯಲ್ಲಿ ‘ಕೊಆನ್’ ಒಂದು ಬೋಧನಾ ಕ್ರಮ. ಕೊಆನ್ ಒಗಟಿನಂಥದ್ದು. ಮೇಲ್ನೋಟಕ್ಕೆ ವಿರೋಧಾಭಾಸದ ಹೇಳಿಕೆಯಂತೆ ಕಾಣುವ ಕೊಆನ್‌ನ ಅರ್ಥ ಮಥಿಸುತ್ತ ಹೋದಂತೆಲ್ಲ ಅನುಭಾವದ ಬೆಣ್ಣೆ. ಹಾಯ್ಕು ಕಾವ್ಯ ಕೊಂಚ ಕೊಆನ್ ಸ್ವಾದವನ್ನು ಒಳಗೊಳ್ಳುತ್ತದೆ. ರವೀಂದ್ರನಾಥ್ ಕೂಡ ಇದನ್ನು ತಮ್ಮ  ಹಾಯ್ಕುಗಳಲ್ಲಿ ಒಳಗೊಳಿಸಿಕೊಂಡಿದ್ದಾರೆ. ಹಾಕುತ್ತದೆ ಏಕೆ/ ಪುಟ್ಟ ಮಗು/ ಬಲಗಾಲಿಗೆ ಎಡ ಚಪ್ಪಲಿ? ; ಪರೀಕ್ಷೆ ನಡೆಯುತ್ತಿದೆ/ಕಿಟಕಿಯಲ್ಲಿ/ಬೆಳೆದು ನಿಂತ ಮರ – ಇಂತಹಾ ಹಾಯ್ಕುಗಳು ಕೊಆನ್ ಧ್ವನಿಯನ್ನು ಹೊಮ್ಮಿಸುತ್ತವೆ. ಹೀಗೆ ರವೀಂದ್ರನಾಥ್ ಹಾಯ್ಕು ಕಾವ್ಯ ಪ್ರಕಾರವನ್ನು ಸಂಪೂರ್ಣವಾಗಿ ಕನ್ನಡಕ್ಕೆ ತರುವ ಯಶಸ್ವಿ ಪ್ರಯೋಗ ಮಾಡಿದ್ದಾರೆ.
ಆದರೆ, ‘ಕೊಡೆಯಡಿ ಒಂದು ಚಿತ್ರ’ ಸಂಕಲನದಲ್ಲಿ ಒಂದು ಸಣ್ಣ ದೋಷ. ಇಲ್ಲಿ ಕೆಲವು ‘ಹನಿಗವಿತೆ’ಗಳೂ ‘ಹಾಯ್ಕು’ಗಳಾಗಿ ಸೇರಿಕೊಂಡಿವೆ. ಅವಳ ನಗು/ಇಳಿಜಾರಿನಲ್ಲಿ ಹರಿವ/ಮಳೆ ನೀರು; ಸೂರ್ಯ ಹುಟ್ಟುತ್ತಾನೆ/ ಅವಳ ಕಣ್ಣಲ್ಲಿ ಅರಳುತ್ತಿದೆ/ಜಾಜಿ – ಇತ್ಯಾದಿ ಕೆಲವು ‘ಅವಳ’ ಸುತ್ತಮುತ್ತಲಿನ ಸಾಲುಗಳು ಹನಿಗವಿತೆಗಳೆ ಆಗಿವೆ. ಸುಂದರವಾಗಿವೆ, ಆದರೆ ಹಾಯ್ಕುತನ ಹೊಂದಿಲ್ಲವಾಗಿವೆ. ಈ ಹಿಂದಿನ ‘ಮೂರು ಸಾಲು ಮರ’ ಸಂಕಲನದಲ್ಲಿ ಇಂಥಾ ದೋಷ ಇರಲಿಲ್ಲ.
ಇದರ ಹೊರತಾಗಿ, ಇಷ್ಟು ಸಮಗ್ರವಾಗಿ, ಸ್ವಾದಿಷ್ಟವಾಗಿ ನಮಗೆ ‘ಹಾಯ್ಕು ಹಬ್ಬ’ ಮಾಡಿಸುತ್ತಿರುವ ರವೀಂದ್ರ ನಾಥ್ ಅವರ ಹುಮ್ಮಸ್ಸನ್ನು ಮೆಚ್ಚಲೇಬೇಕು. ಅವರ ಈ ಪ್ರಯೋಗ ಒಂದಷ್ಟು ಜನರನ್ನಾದರೂ ಹಾಯ್ಕು ರಚನೆಗೆ ಪ್ರೇರೇಪಿಸಿದೆ. ರವೀಂದ್ರನಾಥ್ ಮತ್ತಷ್ಟು ಬರೆಯಲಿ.

ಪರಂಪರೆ ಕಂಡ ಮೊದಲ ಪೊಸೆಸ್ಸಿವ್‌ ಗಂಡು

ಮೀಸೆ ಚಿಗುರಿದ್ದ ಶ್ವೇತಕೇತು ಬಹುಶಃ ನಮ್ಮ ಪರಂಪರೆ ಕಂಡ ಮೊದಲ ಪೊಸೆಸ್ಸಿವ್ ಗಂಡು ಇರಬೇಕು. ಅಪ್ಪನ್ನ ತರಾಟೆಗೆ ತಗೊಂಡ. ಅಮ್ಮ ಹಾಗೆ ಹೊರಟೇಬಿಟ್ಟಳಲ್ಲ, ಯಾಕೆ ತಡೀಲಿಲ್ಲ ಅಂದ. ‘ಯಾರಾದರೂ ಕರೆದಾಗ ಅವಳು ಹೋದಳೆಂದರೆ ಅವಳಿಗೂ ಅದು ಇಷ್ಟವೇ ಹುಡುಗಾ. ಇಲ್ಲದಿದ್ದರೆ ಅವಳು ನಿರಾಕರಿಸಬಹುದಿತ್ತು. ಅವಳನ್ನ ಯಾರು ತಾನೆ ಒತ್ತಾಯಪಡಿಸಬಹುದು ಹೇಳು? ಈ ನೆಲದ ರಿವಾಜೇ ಹೀಗೆ’ ಅಂದ ಅಪ್ಪ.

ಈ ಎಲ್ಲ ಪೀಠಿಕೆ ಯಾಕೆಂದರೆ…. ಉಳಿದ ವಿಷಯಕ್ಕೆ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ. 

ನೊಂದ ನಾಯಿಯ ಸಂಕಟ ಮತ್ತು ಅಸಹಾಯಕತೆ

ಕನ್ನಡಿಯಂಥ ಪರದೆಯಾಚೆ ಅವಳು ಕೂತು ಹೇಳಿಕೊಳ್ತಿದ್ದಳು.
ಬಹುಶಃ ತನ್ನ ಬದುಕಿನ ಯಾವುದನ್ನೂ ಅವಳು ಹೀಗೆ ಅಂಜುತ್ತ ದಾಖಲಿಸಿರಲಿಲ್ಲವೇನೋ…. ಹೆಣ್ತನದ ಅಭಿಮಾನ, ಹೆಣ್ಣೆಂಬ ಹೆಮ್ಮೆಯ ಪುಟ್ಟ ಹೆಂಗಸು. ತನಗೆ ಅನ್ಯಾಯವಾಗ್ತಿದೆ ಅನ್ನಿಸಿದಾಗ ತಣ್ಣಗೆ ಮನೆ ಬಿಟ್ಟು ಬಂದಿದ್ದವಳು. ಸೊನ್ನೆಯಿಂದ ಬದುಕು ಕಟ್ಟುತ್ತ ಸೊನ್ನೆಯ ಹಿಂದೆ ನಾಲ್ಕಂಕಿಗಳು ಬರುವಷ್ಟು ಬದುಕು ಕಂಡಿದ್ದಳು. ಸತ್ತುಬಿಡುತ್ತೇನೆ ಅಂತ ಎರಡು ಬಾರಿ ಪ್ರಯತ್ನ ಪಟ್ಟಿದ್ದವಳು ‘ನಾನು ಬದುಕಲೇಬೇಕು’ ಅನ್ನುತ್ತ ಅವಡುಗಚ್ಚುವ ಛಲಗಾತಿಯಾಗಿ ಬದಲಾಗಿದ್ದಳು.
ಅವಳು ತಾನು ‘ಸೂಳೆ’ಯಾದ ದಿನದ ಕತೆ ಹೇಳುತ್ತೀನಂದಾಗ ಕೇಳಿಸಿಕೊಳ್ಳಲು ನನಗೇ ಧೈರ್ಯವಿರಲಿಲ್ಲ. ಕಿವಿಯಾಗಿ ಕೂರದೆ ನಾನೂ ಅವಳೂ ಹಗುರಾಗಲು ಸಾಧ್ಯವಿರಲಿಲ್ಲ.

ಅವಳ ಕಥೆ ನನ್ನ ಕಥೆ, ಬಹಳಷ್ಟು ಆ ನಮ್ಮ ಕಥೆ ಇಲ್ಲಿದೆ

ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…

‘ಸತ್ತು ಬಿದ್ದಿತ್ತು ಭಾರತ’ – ಇದು ಡಿಸೆಂಬರ್ 2, 2007ರಂದು ಬರೆದು ನನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದ ಲೇಖನ.
ಆ ದಿನ ಅಸ್ಸಾಮಿನ ಬುಡಕಟ್ಟು ಜನಾಂಗವೊಂದು ತನ್ನ ಹಕ್ಕುಗಳಿಗಾಗಿ ಒತ್ತಾಯಿಸಿ ಧರಣಿ ಹೂಡಿತ್ತು. ಅದರಲ್ಲಿ ಹೆಂಗಸರೂ ಇದ್ದರು. ದಿಬ್ರುಗಡ್ ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿತ್ತು. ಅದೇ ಸಮಯಕ್ಕೆ ಗುವಹಾಟಿಯ ಬೀದಿಯೊಂದರಲ್ಲಿ ಒಬ್ಬ ಟ್ರೈಬಲ್ ಹೆಣ್ಣುಮಗಳು ಪ್ರತಿಭಟನೆಯ ಬೋರ್ಡ್ ಹಿಡಿದು ತನ್ನ ಪಾಡಿಗೆ ನಿಂತಿದ್ದಳು. ತನ್ನ ಜನಾಂಗದ ಹಕ್ಕಿಗಾಗಿ ಶಾಂತಿಯುತ ಪ್ರತಿರೋಧ ತೋರುತ್ತಿದ್ದ ಆ ಹೆಣ್ಣನ್ನು ಗುವಹಾಟಿಯ ಕೆಲವು ಗಂಡಸರು ಅಟ್ಟಾಡಿಬಿಟ್ಟಿದ್ದರು. ಜನಾಂಗೀಯ ದ್ವೇಷ, ಮತ್ತೆಲ್ಲೋ ನಡೆದ ಹಿಂಸೆಗೆ ಪ್ರತಿಯಾಗಿ ಇಲ್ಲಿ ಅಸಹಾಯಕ ಹೆಣ್ಣಿನ ಮೇಲೆ ಮುಗಿಬಿದ್ದಿದ್ದರು. ಆಗಲೂ ಒಬ್ಬ ಮೀಡಿಯಾ ಹುಡುಗ ಫೋಟೋಗಳನ್ನ ತೆಗೆದು “ಭೇಷ್” ಆಗಿದ್ದ!
~
2012ರ ಜುಲೈ 13. ಪಬ್ ನಿಂದ ಹೊರಬಂದು ಸ್ನೇಹಿತರ ಜತೆ ಜಗಳಾಡುತ್ತಿದ್ದ ಹುಡುಗಿಯ ಮೇಲೆ 20 ಜನ ಗಂಡಸರು ಕೈಮಾಡಿದರು. ಕೈಹೋದಲ್ಲೆಲ್ಲ ಮುಟ್ಟಿ ತೆವಲು ತೀರಿಸಿಕೊಂಡರು. ಅವಳ ಬಟ್ಟೆ ಚಿಂದಿಯಾಯ್ತು. ಇದು ಕೂಡ ನಡೆದಿದ್ದು ಗುವಹಾಟಿಯಲ್ಲೇ. ಆಗಲೂ ಒಬ್ಬ ಲೋಕಲ್ ಮೀಡಿಯಾದ ಫೋಟೋಗ್ರಾಫರ್ ಇದ್ದ. ಘಟನೆಯನ್ನ ವಿಡಿಯೋ ಮಾಡಿದ. ನನ್ನಿಂದ ಸಹಾಯ ಅಂತೂ ಮಾಡಲಾಗಲಿಲ್ಲ, ಅದಕ್ಕೆ ಚಿತ್ರೀಕರಣ ಮಾಡಿದೆ ಅಂದ. ಶೂಟ್ ಮಾಡುವಾಗ ವಿಡಿಯೋಗೆ ಬೆಳಕು ಸಾಕಾಗ್ತಿಲ್ಲ, ಅವಳನ್ನ ಈಚೆ ಎಳಕೊಂಡು ಬನ್ನಿ ಅಂತ ಅವನಂದಿದ್ದು ರಟ್ಟಾಯ್ತು.
~
2009ರ ಜನವರಿ 24. ಮಂಗಳೂರಿನ ಪಬ್ ಒಂದರ ಮೇಲೆ ಶ್ರೀರಾಮ ಸೇನೆಯ ವಾನರರು ದಾಳಿ ಮಾಡಿದರು. ಹೆಣ್ಣುಮಕ್ಕಳನ್ನ ಹಿಗ್ಗಾಮುಗ್ಗ ಬಡಿದರು. ಚಾನೆಲ್ ಒಂದು ಅಚ್ಚುಕಟ್ಟಾಗಿ ಚಿತ್ರೀಕರಿಸಿ ಟಿ ಆರ್ ಪಿ ಹೆಚ್ಚಿಸಿಕೊಂಡಿತು. ತಪ್ಪಿಸುವ ಗೋಜಿಗೆ ಹೋಗುವುದು ಹಾಗಿರಲಿ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು.
~
2012ರ ಜುಲೈ28. ಮತ್ತೆ ಮಂಗಳೂರು. ಹೋಮ್ ಸ್ಟೇ ಒಂದರಲ್ಲಿ ಪಾರ್ಟಿ ಮಾಡುತ್ತಿದ್ದ ಹುಡುಗ ಹುಡುಗಿಯರನ್ನ ಥಳಿಸಲಾಯ್ತು. ಹುಡುಗಿಯ ಕಪಾಳಕ್ಕೆ ಬಿಗಿದು, ಮೈಮುಟ್ಟಿ ಹಿಂಸಿಸಲಾಯ್ತು. ಇದನ್ನೆಲ್ಲ ಮಾಡಹೊರಟ ಫಟಿಂಗರು ಚಾನೆಲ್ ಒಂದರ
ಕ್ಯಾಮೆರಾಪರ್ಸನ್ ಗಳನ್ನು ಜೊತೆಯಲ್ಲೇ ಒಯ್ದಿದ್ದರು!
***
ಹೆಣ್ಣುಮಕ್ಕಳು ಏನು ಮಾಡಿದರೂ ತಪ್ಪು. ಹೋರಾಟ ಮಾಡಿದರೂ, ಪಾರ್ಟಿ ಮಾಡಿದರೂ. ಮೈತುಂಬ ಸೀರೆ ತೊಟ್ಟವಳ ಬಟ್ಟೆಯನ್ನೂ ಎಳೆಯಲಾಗುತ್ತೆ, ಸ್ಕರ್ಟ್ ತೊಟ್ಟವಳದ್ದೂ. ನಾವು ಗಂಡಸರ ಮರ್ಜಿಗೆ ತಕ್ಕ ಹಾಗೆ, ಅವರ ತಾಳದ ಲಯಕ್ಕೆ ಹೆಜ್ಜೆ ಹಾಕಬೇಕು ಅನ್ನೋದು ಅವರ ಬಲಾತ್ಕಾರ. ಹೆಣ್ಣು ಅರೆನಗ್ನಳಾಗಿದ್ರೆ ಕಾಮ ಪ್ರಚೋದನೆಯಾಗತ್ತೆ, ಅದಕ್ಕೇ ರೇಪ್ ಕೇಸ್ ಗಳು ಜಾಸ್ತಿ ಆಗೋದು ಅಂತ ಬೊಬ್ಬೆ ಹೊಡೆಯೋರಿಗೆ ನಾಚಿಕೆಯಾಗ್ಬೇಕು. ಎಂಟು ತಿಂಗಳ ಸ್ವಂತ ಮಗಳನ್ನ ಅಪ್ಪ ಅನ್ನಿಸಿಕೊಂಡ ಗಂಡಸು ರೇಪ್ ಮಾಡ್ತಾನೆ. ಮಗುವಿನ ನಗ್ನತೆಗೂ ಕಾಮ ಕೆರಳಿಸ್ಕೊಳ್ಳುವ ಗಂಡಸಿನ ಲಂಪಟತನಕ್ಕೆ ಲಗಾಮು ಹಾಕಬೇಕಾ? ಹೆಣ್ಣುಮಕ್ಕಳನ್ನ ಹುಟ್ಟಿದಾಗಿಂದಲೇ ಘೋಷಾದೊಳಗೆ ಬಚ್ಚಿಡಬೇಕಾ!?
ಸಂಸ್ಕೃತಿ ಕಾವಲಿನ ಹೆಸರಿನಲ್ಲಿ ನಮ್ಮ ಮೈಕೈ ಮುಟ್ಟಲು ಬರುವ ಈ ಲಫಂಗರಿಗೆ ಎಷ್ಟು ಧಿಕ್ಕಾರ ಹೇಳಿದರೂ ಸಾಲದು. ನನ್ನ ಭಾರತ ಏನು, ನನ್ನ ಸಂಸ್ಕೃತಿ ಏನು ಅನ್ನೋದು ನನಗೆ ಗೊತ್ತು. ನಮಗೆಲ್ಲರಿಗೂ ಗೊತ್ತು. ಅದಕ್ಕೆ ಯಾವ ಕಾವಲು ನಾಯಿಗಳೂ ಬೇಕಿಲ್ಲ.
ಕೈಮುಗೀತೀವಿ, ನಮ್ಮ ಸಂಸ್ಕೃತಿಯನ್ನ ಹೀಗೆಲ್ಲ ವಿಕೃತ ಮಾಡಬೇಡಿ… ಅಥವಾ ನಾವೂ ಕೈ ಎತ್ತುವ ತನಕ ಈ ಹರ್ಕತ್ ಗಳನ್ನ ಮುಂದುವರೆಸ್ತೀರೋ? – ಈ ಪ್ರಶ್ನೆ ಹೆಣ್ಣು ಮತ್ತು ಹಿಂಸಾಚಾರವನ್ನು ಟಿ ಆರ್ ಪಿ ಏರಿಕೆಗೆ ಕ್ಯಟಲಿಸ್ಟ್ ನಂತೆ ಬಳಸಿಕೊಳ್ತಿರುವ ಮೀಡಿಯಾಗಳಿಗೂ ಅನ್ವಯಿಸುತ್ತೆ…

ಸತ್ತುಬಿದ್ದಿತ್ತು ಭಾರತ….

December 2, 2007 at 1:20 pm | In ಕನವರಿಕೆ | 10 Comments | Edit this post

(ಇದು ನನ್ನ ಡಿಸೆಂಬರ್2, 2007ರ ಬರಹ)

ನಾವು ಭಾರತೀಯರು!”
ಅವಳಿಗೆ ಹೆಮ್ಮೆ. ಅಪ್ಪ, ಯಾವಾಗಲೂ ಹೇಳುವನು, “ಮಗಳೇ, ನಮ್ಮದು ಸುಸಂಸ್ಕೃತ ದೇಶ. ಹೆಣ್ಣಿಗೆ ಇಲ್ಲಿ ಸದಾ ಎತ್ತರದ ಸ್ಥಾನ”
ಕಾಸಗಲ ಬೊಟ್ಟಿಟ್ಟು ಬೈತಲೆ ತೆಗೆಯುವಾಗಲೆಲ್ಲ ಅವಳ ಮುಖದಲ್ಲಿ ಗತ್ತಿನ ನಗು,
“ಜಗತ್ತಿಗೆ ಮರ್ಯಾದೆಯ ಪಾಠ ಹೇಳಿಕೊಟ್ಟವರು ನಾವೇ!”
* * *
ದಿನಾ ಅಮ್ಮನ ವಟ ವಟ.
ಮಗಳು ಹಿಂಗೆ ಬಾವುಟ ಹಿಡಿದು ಹಾದಿಬೀದಿ ಸುತ್ತಿದ್ರೆ ನಾಳೆ ಯಾರು ಮದುವೆಯಾಗ್ತಾರೆ?”
ಅಪ್ಪನಿಗೆ ನಗು. ಝಾನ್ಸಿ ರಾಣಿ, ದುರ್ಗಾ ಭಾಭಿ… ಹತ್ತಾರು ಹೆಸರು ಹೇಳಿ ಕನವರಿಸುವನು.
ಮನೆ ಮುದ್ದಿನ ಮಗಳು ಅಲ್ಲೆಲ್ಲೋ ನಡು ರಸ್ತೆಯಲ್ಲಿ ” ಮುರ್ದಾಬಾದ್ ಮುರ್ದಾಬಾದ್” ಕೂಗುತ್ತ ನಿಲ್ಲುವಳು.
ಅಮ್ಮ, ‘ಹುಡುಗಾಟದ ಹುಡುಗಿ’ ಅಂದು ಮುಖ ತಿರುವಿದರೆ, ಅಪ್ಪ, ‘ ಹೋರಾಟದ ಹುಡುಗಿ!’ ಅಂತ ಸೆಡ್ಡು ಹೊಡೆದು ಮೀಸೆ ತಿರುವುವನು!!
* * *
ಮತ್ತೆ ಮತ್ತೊಂದು ಕರಿ ಬಾವುಟದ ದಿನ. ಬಯಲಲ್ಲಿ ಹುಡುಗರು, ಬಗಲಲ್ಲಿ ಇವಳು.
ಪ್ರತಿಭಟನೆಯ ಕಾವಿಗೆ ಊರಿಗೆ ಊರೇ ಸುಡುತ್ತಿತ್ತು. ಮೊದಲು ಕಲ್ಲೆಸೆದವರು ಯಾರೋ? ಜೇನು ಗೂಡು ಚದುರಿತ್ತು.
ನ್ಯಾಯಕ್ಕೆ ನಿಂತ ದಂಡು ಚೆಲ್ಲಾಪಿಲ್ಲಿ. ಗಂಡು ಹುಳಗಳು ಎಲ್ಲಿಂದಲೋ ದೌಡಾಯಿಸಿ ದೌಡಾಯಿಸಿ ಬಂದವು.
ಊಹೂಂ… ಇವಳು ಅಲ್ಲಾಡಲಿಲ್ಲ.
” ನನ್ನಲ್ಲಿ ಸತ್ಯವಿದೆ. ನನ್ನಲ್ಲಿ ನ್ಯಾಯವಿದೆ!”
* * *
ಹೌದು. ಅವಳಲ್ಲಿ ಎಲ್ಲವೂ ಇತ್ತು. ಕಿಚ್ಚು ಹಚ್ಚುವ ಕೆಚ್ಚಿತ್ತು. “ನಾವು ಭಾರತೀಯರು”- ನಂಬಿಕೆ ಇತ್ತು.
ಅವಳು ಹಾಗೆ ನಂಬುತ್ತ ನಿಂತಿರುವಾಗಲೇ…..
ಕಾರು- ಬಂಗಲೆಯ ಗಂಡಸರು ಅವಳ ಮೇಲೇರಿ ಬಂದರು. ಊರು ಕೇರಿ ಅಟ್ಟಾಡಿಸಿ ಬಟ್ಟೆ ಹರಿದು ಒಗೆದರು.
ಜೊತೆಯ ಹುಡುಗರ ಶೌರ್ಯ ಸೊರಸೊರ ಸೋರಿಹೋಗಿ ಷಂಡರಂತೆ ಮರದ ಮರೆಯಲ್ಲಿ ಬೇರು ಬಿಟ್ಟು ನಿಂತಿದ್ದರು!
ಸತ್ಯ, ಚಿಂದಿಯಾಗಿ ಬಿದ್ದಿತ್ತು.
ನ್ಯಾಯ ಸಾಯುತ್ತಿದೆ!- ಇವಳು ಕನಲಿದಳು. ನಿಂತಲ್ಲಿಂದ ಕದಲಿದಳು.
ಅಪ್ಪನ ಪಾಠ ತಲೆಯಲ್ಲಿ ಗಿರಗಿರಗಿರ ಗಿರಕಿ…
ಓ! ಇದು ಯಾವ ನೆಲ? ಎಲ್ಲಿ ನನ್ನ ಜನ!?
ನಂಬಿಕೆ ಸೋತ ಗಳಿಗೆಯಲ್ಲೇ ಕಾಲು ಎಡವಿ ಬಿದ್ದಳು.
ಎದುರಿಗೊಬ್ಬ ಬಿಳಿ ಬೂಟಿನ ಗಂಡಸು.
ಎಲ್ಲೆಲ್ಲಿಯ ಹೊಲಸು ಮೆಟ್ಟಿ ಬಂದಿದ್ದನೋ!? ಅದೇ ಬೂಟು ಕಾಲನೆತ್ತೆತ್ತಿ ಜೀವ ಸ್ಥಳಕ್ಕೆ ಒದ್ದ.
ಝಾಡಿಸಿ ಝಾಡಿಸಿ ಒದ್ದ.
ಹಾಗೆ ಅಂವ ತನ್ನ ‘ಗಂಡಸು’ತನವನ್ನ ಸಾಬೀತುಪಡಿಸುತ್ತಿದ್ದರೆ, ದೂರದಲ್ಲೊಬ್ಬ ಚೌಕಟ್ಟನೆಯ ಕ್ರಾಪಿನ ಹುಡುಗ, ನೀಟಾಗಿ ನಿಂತು ಫೋಟೋ ಕ್ಲಿಕ್ಕಿಸುತ್ತಿದ್ದ!
* * *
ಬಟ್ಟೆ ಕಳೆದು ಸಾಕಷ್ಟು ಹೊತ್ತಾಗಿದ್ದರೂ, ಈಗ ಅವಳಿಗೆ ತಾನು ಬೆತ್ತಲಾಗಿದ್ದೇನೆ ಅನಿಸತೊಡಗಿತ್ತು…
ಅವಳ ಪಾಲಿನ ಹೆಮ್ಮೆಯ ಭಾರತ, ಸದ್ದಿಲ್ಲದೆ ಸತ್ತು ಬಿದ್ದಿತ್ತು!

ಪುಸ್ತಕ ಹುಡುಕುತ್ತಾ ಹುಟ್ಟಿಕೊಂಡ ಹರಟೆ

ನನಗೆ ಏನನ್ನಾದರೂ ಓದಬೇಕು ಅನ್ನಿಸಿ, ಯಾವ ಪುಸ್ತಕವೂ ಕೈಕೂರದೆ ಇದ್ದಾಗ ನೆರವಿಗೆ ಬರೋದು ಎರಡು ಪುಸ್ತಕಗಳು. ತೇಜಸ್ವಿಯವರ ‘ಪರಿಸರದ ಕತೆಗಳು’ ಮತ್ತು ರಾಹುಲ ಸಾಂಕೃತ್ಯಾಯನರ ವೋಲ್ಗಾ ಗಂಗಾ. ನಾಗರಿಕತೆ ಮತ್ತು ಆರ್ಯನ್ನರ ಹುಟ್ಟು ವೋಲ್ಗಾದತಟದಲ್ಲಾಗಿ ಅದು ಗಂಗೆಯ ವರೆಗೆ ಸಾಗಿ ಬಂತೆನ್ನುವ ಅದರ ಎಳೆಯ ಬಗ್ಗೆ ಚೂರೂ ಸಮ್ಮತಿ ಇಲ್ಲದೆ ಇದ್ದರೂ ವೋಲ್ಗಾ ಗಂಗಾದ ಬಿಡಿಬಿಡಿ ಕಥೆಗಳು ಯಾವತ್ತೂ ನನ್ನನ್ನ ಸಿದ್ಧ ಮಾದರಿಯಾಚೆಗಿನ ಚಿಂತನೆಗೆ ಹಚ್ಚುತ್ತವೆ. ಅಲ್ಲದೆ, ಯಾವುದೇ ವಿಷಯವನ್ನ ಗ್ರಹಿಸುವಾಗ ಸಾಮಾನ್ಯ ಊಹೆಗೆ ನಿಲುಕದ ದಿಕ್ಕಿನಲ್ಲೇ ಯೋಚಿಸೋ ಹಾಗೆ ಮಾಡುತ್ತದೆ.
ಈ ಹೊತ್ತು ಪುಸ್ತಕದ ಬಗ್ಗೆ ಮಾತಾಡಲು ಕಾರಣವೂ ಇದೆ. ನನಗೆ ಎಲ್ಲಾದರೂ ಪ್ರಯಾಣ ಹೋಗುವಾಗ ಒಂದು ಪುಸ್ತಕ ಜತೆಗಿರಲೇ ಬೇಕು. ಅದು ಎಂಥದ್ದೇ ಟೈಟ್ ಶೆಡ್ಯೂಲ್ಡ್ ಟ್ರಿಪ್ ಆಗಿರಲಿ, ಪ್ರಯಾಣದ ಹೊತ್ತಲ್ಲಿ ಮಾತು ಬಿಸಾಕಿ ಪುಸ್ತಕದ ಒಳಗೆ ಹುದುಗಿಹೋಗುವ ಆನಂದವೇ ಬೇರೆ. ಮೂರು ತಿಂಗಳ ಹಿಂದೆ ಕೋಲ್ಕೊತಾ ಹೋಗುವಾಗ ಓಶೋರ ‘ಬುಕ್ ಆಫ್ ಮೆನ್’ ನನ್ನ ಬ್ಯಾಗ್ ಸೇರಿತ್ತು. ಇಷ್ಟಕ್ಕೂ ಈ ಗಂಡಸು ಏನು? ಅಂತ ತಿಳಿಯೋ ಕುತೂಹಲದಿಂದಲೇ ಹಿಡಿದುಕೊಂಡ ಪುಸ್ತಕವದು. ಆ ಪುಸ್ತಕದ ಓದಿನ ನಂತರ ಗಂಡು ಜಾತಿಯ ಬಗ್ಗೆ ನನ್ನೊಳಗೊಂದು ಸಹಾನುಭೂತಿ ಬೆಳೆಯಿತೆಂದೇ ಹೇಳಬಹುದು. ಯಾಕಂದ್ರೆ, ಪಾಪ, ಅವರ ಪ್ರತಿಯೊಂದು ಸಮಸ್ಯೆಯೂ ಲಿಂಗದಿಂದ ಹುಟ್ಟಿಕೊಂಡ ಅಹಮ್ಮಿನ ಬೀಜದಿಂದ್ಲೇ ಶುರುವಾಗೋದು. ಅಸಹಾಯಕತೆ, ಕೋಪ, ದುಗುಡ, ಗೆಲುವು, ಅಬ್ಬರ, ದಬ್ಬಾಳಿಕೆ… ಈ ಎಲ್ಲದರ ಹಿಂದೂ ಗಂಡೆಂಬ ಅಹಂಕಾರದ್ದೇ ವಿಜೃಂಭಣೆ.ಈ ಎಲ್ಲವನ್ನು ಓಶೋ ಬಹಳ ಚೆಂದವಾಗಿ ಹೇಳಿದ್ದಾರೆ.
ಅದಿರಲಿ. ಈ ಸಾರ್ತಿಯ ಹದಿನೆಂಟು ದಿನಗಳ ಊದ್ದನೆ ಪ್ರವಾಸಕ್ಕೆ ಯಾವ ಪುಸ್ತಕ ಹಿಡಿದುಕೊಳ್ಳೋದು? ಮನೆಯ ಒಂದಿಡೀ ರೂಮ್ ತುಂಬಿಕೊಂಡಿರುವ ಎರಡು ಸಾವಿರ ಪುಸ್ತಕಗಳ ಪೈಕಿ ಯಾವುದನ್ನ ಆಯ್ದುಕೊಳ್ಳೋದು? ಸುಮಾರು ಹೊತ್ತು ತಲೆ ಕೆಡಿಸಿಕೊಳ್ತಾ ಕಪಾಟಿನಲ್ಲಿ ಕಣ್ಣು ನೆಟ್ಟು ಕುಳಿತಿದ್ದೆ. ನಿರ್ಮಲ್ ವರ್ಮಾರ An inch and a half above groundನ ಸಾಕಷ್ಟು ಕಥೆಗಳ ಓದು ಬಾಕಿ ಇತ್ತು. ಆದರೆ ಪುಸ್ತಕ ವಿಪರೀತ ದಪ್ಪ. ಮೊದಲೇ ಲಗೇಜು ಜಾಸ್ತಿ. ಒಲ್ಲದ ಮನಸಿಂದಲೇ ವಾಪಸು ಇಟ್ಟೆ. Tao of Physics ನ ಓದಿಗೆ ಇಷ್ಟೂ ದಿನ ಕಾಲ ಕೂಡಿ ಬಂದಿರಲಿಲ್ಲ. ಆದರೆ ಪ್ರಯಾಣದ ಕಾಲದಲ್ಲಿ ಅರ್ಥ ಮಾಡಿಕೊಳ್ಳುತ್ತಾ ಓದಿನ ಓಘ ಉಳಿಸಿಕೊಳ್ಳೋದು ಕಷ್ಟವೆನಿಸಿತು.
ಕೊನೆಗೆ ನನ್ನಿಷ್ಟದ ಸತ್ಯಕಾಮರ ಕತೆಗಳ ಎಲ್ಲ ಪುಸ್ತಕಗಳನ್ನೂ ಹರವಿಕೊಂಡು ಕುಳಿತೆ. ಸತ್ಯಕಾಮರ ಹೆಸರು ಎತ್ತಿದಾಗಲೇ ಒಂದು ಮಾತು ಹೇಳಬೇಕು. ಈ ನಾನು ನೋಡದ ಹಿರಿಯರು ನನಗೆ ಸ್ತ್ರೀಸಂವೇದನೆಯ ಮೊದಲ ಪಾಠ ಮಾಡಿದ ಗುರುಗಳು. ನಾನು ಕದ್ದೋದಿದ ಮೊದಲ ಪುಸ್ತಕ (ಈ ಬಗ್ಗೆ ಸುಮಾರು ಸರ್ತಿ ಹೇಳಿದ್ದರೂ ತೃಪ್ತಿಯಿಲ್ಲ) ಶೃಂಗಾರ ತೀರ್ಥದಲ್ಲಿ ಅವರು ಬರೆದಿದ್ದ ಅಪ್ಸರೆ ಮೇನಕೆಯ ಕಥೆ, ಹೆಣ್ಣಿನ ಒಳತೋಟಿಯನ್ನು ಗಮನಿಸುವ ಹೊಸ ಕಣ್ಣು ಕೊಟ್ಟಿತ್ತು. ಆರನೇ ಕ್ಲಾಸಿನ ಆ ಪುಟ್ಟ ತಲೆಗೆ ಎಷ್ಟು ಹೊಕ್ಕಿತ್ತೋ, ನನ್ನೊಳಗೊಂದು ಕಿಡಿ ಹೊತ್ತುಕೊಂಡಿದ್ದು ಆಗಲೇ ಅನ್ನೋದಂತೂ ನಿಜ. ಆದರೆ ಪ್ರಯಾಣಕ್ಕೆ ಕೊಂಡೊಯ್ಯಲಿಕ್ಕೆ ಆ ಹನ್ನೆರಡು ಪುಸ್ತಕಗಳ ಪೈಕಿ ಯಾವುದೂ ಬೇಡವೆನ್ನಿಸಿತು.
ನನ್ನ ಕ್ಯಟಗರಿ ಮುಗಿಸಿ ಅಣ್ಣನ ಪುಸ್ತಕ ಸಂತೆಯತ್ತ ಕಣ್ಣು ಹಾಯಿಸಿದೆ. ಅಲ್ಲಿ ಒಂದಕ್ಕಿಂತ ಒಂದು ಅಧ್ಯಾತ್ಮಿಕ, ತಾತ್ವಿಕ, ಐತಿಹಾಸಿಕ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ್ದ ಪುಸ್ತಕಗಳಿದ್ದವು. ನೋಡಿಯೇ ಗಾಬರಿಯಾಯ್ತು.ಇದನ್ನೆಲ್ಲ ಓದೋಕೆ ಇವನಲ್ಲಿ ಆಸಕ್ತಿಯಾದರೂ ಹೇಗೆ ಹುಟ್ಟಿಕೊಳ್ಳತ್ತೆ! ನನ್ನ ಯಾವತ್ತಿನ ಪ್ರಶ್ನೆ ಮತ್ತೆ ಜಿಗಿದೆದ್ದಿತು. ಕೊನೆಗೆ ಒಂದಷ್ಟು ವೇದೋಪನಿಷತ್ತಿನ ಕಥೆಗಳ ಸಂಗ್ರಹ ಪುಸ್ತಕಗಳನ್ನ ಬಗಲಿಗಿಟ್ಟುಕೊಂಡೆ.
ಬಹಳ ಜನ ಸ್ನೇಹಿತರು ವೇದೋಪನಿಷತ್ತಿನ ಕಥೆಗಳು ಅಂದ ಕೂಡಲೆ ಹುಬ್ಬು ಹಾರಿಸ್ತಾರೆ. ಕೆಲವ್ರು ನನ್ನ ಕಾಲೆಳೆಯೋದೂ ಉಂಟು. ಅದೇನೇ ಇರಲಿ. ಈ ಪುಸ್ತಕಗಳಲ್ಲಿನ ಕಥೆಯ ಮೊಳಕೆಗಳನ್ನ ಹೆಕ್ಕಿ, ನಮ್ಮ ಒಳನೋಟ, ವ್ಯಾಖ್ಯಾನಗಳ ಮೂಲಕ ಹೊಸತೊಂದನ್ನೇ ಹೆಣೆಯೋದು ಸಾಧ್ಯವಾಗುತ್ತೆ. ಮತ್ತಿದು ಗಟ್ಟಿಯಾಗಿರುತ್ತೆ ಕೂಡ. ಇಲ್ಲೀತನಕ ಹಿಂದೂ ಪುರಾಣ ಗಿರಾಣಗಳ, ವೇದೋಪನಿಷತ್ತು, ಮಹಾಕಾವ್ಯಗಳ ಮೂಲವನ್ನಿಟ್ಟುಕೊಂಡು ಹಾಗೆಲ್ಲ ನಮ್ಮ ನಮ್ಮ ಮನೋಕನ್ನಡಿ ಪ್ರತಿಬಿಂಬಿಸಿದ್ದನ್ನ ಕಟ್ಟಿಕೊಡುವ ಅವಕಾಶ ಬಹಳ ಚೆನ್ನಾಗಿಯೇ ಇತ್ತು. ಎಲ್ಲ ಥರದ ವ್ಯಾಖ್ಯೆ- ಟೀಕೆಗಳಿಗೂ ಮುಕ್ತ ಅವಕಾಶವಿತ್ತು. ಸಾವಿರಾರು ವರ್ಷಗಟ್ಟಲೆ ವಿಭಿನ್ನವಾಗಿ ಹರಡಿಕೊಂಡೂ ಮೂಲವನ್ನು ಉಳಿಸಿಕೊಂಡು ಬಂದಿರೋದಕ್ಕೆ ಈ ಮುಕ್ತತೆಯೇ ಕಾರಣವಾಗಿತ್ತು. ಆದರೀಗ, ‘ಒಳ್ಲೆಯದು ಎಲ್ಲ ಕದೆಯಿಂದಲೂ ಹರಿದು ಬರಲಿ’ ಅನ್ನುವುದಕ್ಕೆ ವಿರುದ್ಧವಾಗಿ ಧರ್ಮಗ್ರಂಥಗಳನ್ನ ಮುಟ್ಟಕೂಡದು, ತಿದ್ದಕೂಡದು, ಇಂಟರ್‌ಪ್ರಿಟ್ ಮಾಡಕೂಡದು ಅನ್ನುವಂಥ ತಕರಾರುಗಳು ಶುರುವಾಗಿಬಿಟ್ಟಿವೆ. ಈಗ ಇದು ಸಣ್ಣ ಪ್ರಮಾಣದಲ್ಲೆ ಇದ್ದರೂನು ಮುಂದೆ ಹರಡಿ ಹೆಮ್ಮರವಾದರೆ ಸಮಾಜದ ಸ್ವಾಸ್ಥ್ಯ ಕೆಡೋದು ಖಂಡಿತ.
ಮೊನ್ನೆ ಹೀಗಾಯ್ತು. ಒಂದು ಒಳ್ಳೆ ಚಿತ್ರವಿತ್ತು. ದ್ರೌಪದಿ ವಸ್ತ್ರಾಪಹರಣ ನಡೀತಾ ಇರುವಾಗ ಕೃಷ್ಣ ಸೀರೆಯನ್ನ ಕರುಣಿಸೋ ದೃಶ್ಯವದು. ಅದರ ಮೇಲೆ ‘Don’t wait for God, Report Abuse’ ಅಂತ ಬರೆದಿತ್ತು. ಯಾರೋ ಅದನ್ನ Face bookನಲ್ಲಿ ಹಾಕಿಕೊಂಡಿದ್ದರು. ಬಹಳ ಸರಿ ಎನ್ನಿಸಿ ನಾನೂ ಅದನ್ನ ಶೇರ್ ಮಾಡಿಕೊಂಡೆ. ಆಮೇಲೆ ನನ್ನಿಂದ ಸುಮಾರು ಜನ ಅದನ್ನ ಹಂಚಿಕೊಂಡರು.
ಸರಿ… ಆದರೆ ಒಬ್ಬ ಮಹಾಶಯ ಮಾತ್ರ ಅದರ ಹೂರಣವನ್ನ ಅರ್ಥ ಮಾಡಿಕೊಳ್ಳದೆ, ಎಂಥದೋ ಹಿಂದೂ ಧರ್ಮ… ಅದೂ ಇದೂ ಅಂತೆಲ್ಲ ಬೊಬ್ಬೆ ಹೊಡೆದು ಕಮೆಂಟ್ ಹಾಕಿದ. ಮತ್ತೊಬ್ಬ ಮಹಾಶಯನೂ ಹಾಗೇ ಮೆಸೇಜ್ ಮಾಡಿದ್ದ. ಈಗೊಂದು ಪೀಳಿಗೆಯ ಹಿಂದೆ ಬೇರೆಲ್ಲ ಥರದ ಸಂಕುಚಿತತೆಗಳು ಇದ್ದವಾದರೂ ಈ ಥರದ್ದು ಇರಲಿಲ್ಲ ಅಂದುಕೊಂಡಿದ್ದೀನಿ. ಆಗೆಲ್ಲ ಹುಸಿ ಧರ್ಮ ರಕ್ಷಕರ ಕಾಟ ಇರಲಿಲ್ಲ ಅಂತ ಕೇಳಿಪಟ್ಟಿದ್ದೀನಿ. ಸ್ವತಃ ಎರಡೂ ಹೊತ್ತು ಆರತಿ ಬೆಳಗುವ ನನ್ನ ಅಮ್ಮನೇ ಈ ಹು.ಧ.ರ ರ ಕಾಟಕ್ಕೆ ಹಿಡಿ ಶಾಪ ಹಾಕುತ್ತಾಳೆ. ವ್ಯಾಖ್ಯಾನ ಮುಕ್ತತೆಯ ಮಾತು ಬಂದಿದ್ದಕ್ಕೆ ಇದನ್ನ ನೆನೆಸ್ಕೊಂಡೆ ಅಷ್ಟೆ.
ಎಲ್ಲಿದ್ದೆ…ಹಾ! ವೇದೋಪನಿಷತ್ತಿನ ಕಥೆಗಳು… ನನ್ನ ಬ್ಯಾಗಿನೊಳಗೆ ಬೆಚ್ಚಗೆ ಕುಳಿತಿವೆ. ಪ್ರವಾಸದ ಹೊಸ ಅನುಭವ, ಜಮ್ಮು ಕಾಶ್ಮೀರದ ಸೌಂದರ್ಯ ಮತ್ತು ವೈಭವ, ಒಳ್ಳೆಯ ಓದಿನ ಸಾತಥ್ಯ ಇವೆಲ್ಲ ನನ್ನ ಹದಿನೆಂಟು ದಿನಗಳನ್ನು ಆವರಿಸಿಕೊಳ್ಳಲಿವೆ.
(ಹೆಗೋ ಶುರುವಾಗಿ ಹೇಗೆಹೆಗೋ ಮುಗಿದ ಈ ಲೇಖನವೂ ಓಲ್ಗಾ- ಗಂಗಾದ ಓಟದ ಹಾಗೆ ಅನ್ನಿಸಿದರೆ ನನ್ನ ತಪ್ಪಲ್ಲ! ಆದರೆ, ಒಮ್ಮೆ ಖಂಡಿತ ಆ ಪುಸ್ತಕವನ್ನೊಮ್ಮೆ ಓದಿ. ಎರಡನೆ ಓದಿಗೆ ಯಾರೂ ಒತ್ತಾಯ ಮಾಡುವ ಪ್ರಶ್ನೆಯೇ ಹುಟ್ಟೋದಿಲ್ಲ!!)

ಮಾರ್ಚ್ ಎಂಟು ಮತ್ತು ಏಳರಾಟ

ಈ ‘ಹೆಣ್ಣುದಿನ’ ನಂಗಿಷ್ಟ ಆಗೋದು ಎರಡು ಕಾರಣಕ್ಕೆ. ನಾನು ಹೆಣ್ಣು ಅನ್ನೋ ಹೆಮ್ಮೆಗೆ, ನಾನು ಬದುಕು ಕಟ್ಟಿಕೊಂಡ ದಿನ ಅನ್ನೋ ಖುಷಿಗೆ.
ಏಳು ವರ್ಷ ಹಿಂದಿನ ಮಾತು. ಮಾರ್ಚ್ 8ರ ರಾತ್ರಿ ತೀರ್ಥಹಳ್ಳಿಯನ್ನ ಕಣ್ತುಂಬಿಕೊಳ್ತಾ ಊರು ಬಿಟ್ಟಾಗ, ಇದು ಇಂಥಾ ದಿನ ಅಂತೇನೂ ಗೊತ್ತಿರಲಿಲ್ಲ. ಆಮೇಲೆ ತಿಳಿದುಕೊಂಡ ಹಾಗೆ, ಈ ದಿನವನ್ನ ಶುರು ಮಾಡಿದ್ದು ‘ದುಡಿಯೋ ಹೆಣ್ಣುಮಕ್ಕಳ ದಿನ’ ಅಂತಲಂತೆ. ಇದೇ ದಿನ ನಾನೂ ದುಡಿಯುವ ಹೆಣ್ಣಾಗಲು ಹೊರಟಿದ್ದು, ಅದು ಕೂಡಾ ಸೇರಿದ್ದ ಮನೆಮಂದಿಯ ಕಾಟ, ಆ ಜನಗಳ ಧೋರಣೆಗಳನ್ನ ತಣ್ಣಗೆ ತಿರಸ್ಕರಿಸಿ ಹೊರಟಿದ್ದು, ಹತ್ತಾರು ಆರೋಪಗಳು- ಸಮಾಜದ ಕಟ್ಟುಪಾಡಿನ ಹದಗಳನ್ನೂ ಮೀರಿ ಹೊಸ್ತಿಲು ದಾಟಿದ್ದು…. ಈ ಎಲ್ಲವೂ ಮಾರ್ಚ್ ಎಂಟರ ಜತೆ ತಳಕು ಹಾಕಿಕೊಂಡಿದ್ದು ಒಂದು ಪವಾಡ.
ಆರೂ ಮುಕ್ಕಾಲು ವರ್ಷಗಳ ಮೆಗಾ ಸೀರಿಯಲ್ ನಂಥ ಬದುಕು ಎಲ್ಲ ಬಣ್ಣಗಳನ್ನೂ ತೋರಿಸಿಬಿಟ್ಟಿತ್ತು. ಕನಸಿನ ಹಾಗೆ ಕೆಲಸ ಸಿಕ್ಕು ಬೆಂಗಳೂರಿನತ್ತ ಮುಖ ಮಾಡಿದ್ದೆ. ಅವತ್ತು ಶಿವರಾತ್ರಿ ಬೇರೆ. ಬಸ್ಸಲ್ಲಿ ನನಗೆ ಗಡದ್ದು ನಿದ್ದೆ. ಅದು ಬಂದಿದ್ದು ನಿರುಮ್ಮಳಕ್ಕೋ, ಭಯ ತಪ್ಪಿಸ್ಕೊಳ್ಳಲಿಕ್ಕೋ ಅಂತ ನೆನಪಾಗ್ತಾ ಇಲ್ಲ. ಮೊದಲ ಬೆಂಚಲ್ಲೇ ಕೂತು ನೋಟ್ಸಿನ ಬದಲು ಗೀಚುತ್ತಿದ್ದ ಕಥೆ ಕವಿತೆಗಳೇ ಈಗ ಕರೆದು ಕೆಲಸ ಕೊಡಿಸಿದ್ದವು. ಬಹುತೇಕ ಎಲ್ಲ ‘ಓಡಿ ಹೋದವರ’ ಹಾಗೆ ನನ್ನ ಪರ್ಸಲ್ಲಿ ಇದ್ದುದು ಆರುನೂರು ರುಪಾಯಿಗಳಷ್ಟೆ. ಅದು ಕೂಡಾ ಯಾವುದೋ ಅನುವಾದದಿಂದ ಸಿಕ್ಕಿದ್ದ ರೆಮ್ಯುನರೇಷನ್ನು.
~
ಜೀವಮಾನದಲ್ಲೆ ಮೊದಲ ಸಾರ್ತಿ ಅಷ್ಟು ದೂರದ ಪ್ರಯಾಣ ನಾನೊಬ್ಬಳೇ ಮಾಡಿದ್ದೆ. ಮೆಜಸ್ಟಿಕ್ ತಲುಪಿಕೊಂಡಾಗ ಅಕ್ಷರಶಃ ಅನಾಥೆ.*1 ನನ್ನ ಕರೆದೊಯ್ದು ಹಾಸ್ಟೆಲ್ ಮುಟ್ಟಿಸಬೇಕಿದ್ದ ಅಣ್ಣನ ಬಸ್ ಲೇಟಾಗಿತ್ತು. ಅವನು ಭಾಷಣ ಮಾಡೋಕೆ ಗುಲ್ಬರ್ಗಕ್ಕೋ ಬಿಜಾಪುರಕ್ಕೋ ಹೋಗಿದ್ದ ನೆನಪು. ಒಂದು ಗಂಟೆಗೂ ಹೆಚ್ಚು ಕಾಲ ಬೆಂಚೊಂದರ ಮೇಲೆ ಕಳೆದಿದ್ದೆ. ಅಣ್ಣನ ನಗುಮುಖ ನೋಡ್ತಿದ್ದ ಹಾಗೇ ಆಯಾಸ ನೆಗೆದುಬಿದ್ದು ಹೋಗಿತ್ತು. ಸ್ವಲ್ಪ ಹೊತ್ತಿನಲ್ಲೇ ನಾನು ಅವನ ಜತೆ ಸುಕೃಪಾ ಎದುರು ನಿಂತಿದ್ದೆ.
ಈಗ ನೆನೆಸ್ಕೊಂಡರೆ ಮಜಾ ಅನ್ನಿಸತ್ತೆ. ನನ್ನ ಬದುಕಲ್ಲಿ ಎಷ್ಟೆಲ್ಲ ಕಾಕತಾಳೀಯಗಳು!
ರಸ್ತೆಯ ಈ ತುದಿಯಿಂದ ಆ ತುದಿಗೆ ನಾಲ್ಕು ಸಾರ್ತಿ ದಾರಿ ತಪ್ಪುವ ನನಗೆ ಕೆಲಸದ ಜಾಗವೆಲ್ಲೋ, ಹಾಸ್ಟೆಲಿಂದ ದೂರವೆಷ್ಟೋ ಅನ್ನುವ ಆತಂಕ. ಆಗಿನ್ನೂ ಇಪ್ಪತ್ತಮೂರು ವರ್ಷ ದಾಟುತ್ತಿದ್ದ ನನಗಿಂತ ಚಿಕ್ಕ ವಯಸ್ಸಿನ ಅಣ್ಣನಿಗೂ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಮರಿಯಪ್ಪನ ಪಾಳ್ಯ ಅಂತ ಹುಡುಕಿಕೊಂಡು ಹೋದರೆ, ಅರ್ರೆ! ನಡೆಯೋಕೆ ಹೆಚ್ಚೆಂದರೆ ಹತ್ತು ನಿಮಿಷದ ದಾರಿ, ಗಾಯತ್ರಿ ನಗರದಿಂದ!!
~
ಒಂದು ದಿನ ರೆಸ್ಟ್ ಪಡೆದು, ಮಾರ್ಚ್ 10ರಿಂದ ನನ್ನ ದುಡಿಮೆ ಶುರುವಾಗಿತ್ತು. ಹಾಸ್ಟೆಲಿಂದ ಬಂಡಾಯವೆದ್ದು ಹುಡುಗಿಯರ ಜತೆ ಮನೆ ಮಾಡಿ, ಅವರೆಲ್ಲ ಮದುವೆಯಾದ ಮೇಲೆ ಒಬ್ಬಳೇ ಇರುತ್ತಾ- ಚೂರು ಚೆಂದದ ಮನೆ, ಚೂರು ದೊಡ್ಡ ಮನೆ; ಅಮ್ಮನ್ನ ಕರೆತಂದು, ಮಗನ್ನ ಕರೆಸ್ಕೊಂಡು ಮತ್ತಷ್ಟು ಸವಲತ್ತುಗಳ ಮತ್ತಷ್ಟು ದೊಡ್ಡ ಮನೆ… ಆಫೀಸಿಂದ ಮಿನಿಮಮ್ ದೂರ, ಹತ್ತು ರುಪಾಯಿ ಹೆಚ್ಚು… ದಿನಕ್ಕೆ ಒಟ್ಟು ಅರವತ್ತು ರುಪಾಯಿ ಅಂತರ… ಹೀಗೆ.
ಮೊದಲ ಕೆಲಸದ ಬಾಸ್ ರಗಳೆಗೆ ತಲೆಕೆಟ್ಟು ಬೇರೆ ಕೆಲಸ ಸೇರಿ; ಅದನ್ನೂ ಬಿಟ್ಟು ಮತ್ತೊಂದಕ್ಕೆ ಹಾರಿ; ಬೆಂಗಳೂರು ಸೇರಿದ 7 ವರ್ಷದಲ್ಲಿ ಈಗಿನದ್ದು 6ನೇ ಆಫೀಸು. ಉಹು… ಓಡಿದ್ದು ಸಾಕು ಅನ್ನಿಸ್ತಿದೆ. ಇಲ್ಲಿ ಒಂದಷ್ಟು ಕಾಲ ನಿಲ್ಲುವ ನಿರ್ಧಾರ.
~
ಹಹ್ಹ… ಇದನ್ನೆಲ್ಲ ಬರೀತಾ ಇದೇನು ನನ್ನ ಚರಮಗದ್ಯ ಬರೆದುಕೊಳ್ತಾ ಇದ್ದೀನಾ ಅನ್ನಿಸಿ ನಗು ಬರ್ತಾ ಇದೆ. ಆದರೂ ಇವತ್ತೇನೋ ಹುಕ್ಕಿ. ಎಲ್ಲವನ್ನೂ ಹೀಗೆ ಬರೆದುಕೊಂಡು ನನಗೆ ನಾನೆ ಓದಿಕೊಳ್ಳೋಕೆ. ಈ ನಡುವೆ ಒಂದಷ್ಟು ಪುಸ್ತಕ, ರಗಳೆ, ರೂಮರ್ರು…
ನನ್ನ ಪಾಡಿಗೆ ನಾನು ಹರಾ ಶಿವಾ ಇರುವಾಗ ಊರಲ್ಲಿ ನಾನು ಯಾರೊಟ್ಟಿಗೋ ಓಡಿ ಹೋದ, ಹುಚ್ಚಾಸ್ಪತ್ರೆಯಲ್ಲಿರುವ, ಸತ್ತೇಹೋಗುವ ಕೆಟ್ಟ ಕಾಯಿಲೆ ಬಂದಿದೆ ಅನ್ನುವ ಥರಾವರಿ ಗಾಸಿಪ್ಪುಗಳು, ಅವನ ಮನೆಯಿಂದ ಹುಟ್ಟಿಕೊಂಡು ಊರು ತುಂಬ ಮಾತಿನ ಮಕ್ಕಳು. ಅವಾದರೂ ಎಷ್ಟು ದಿನ? ಈ ಮಾತಿನ ಮಕ್ಕಳಿಗೆ ಸರಿಯಾದ ಪುಷ್ಟಿ ಸಿಕ್ಕದೆ ಅವೆಲ್ಲ ಸತ್ತೂ ಹೋಗಿದ್ದಾವೆ ಅಂದುಕೊಂಡಿದ್ದೀನಿ ನಾನು.
~
ಇವತ್ತು ಮಾರ್ಚ್ 8. ಮೊದಲೇ ಹೇಳಿದೆನಲ್ಲ. ನನಗೆ ಇದು ಎರಡು ಥರದಲ್ಲಿ ಮಹತ್ವದ ದಿನ. ಈ ಸಾರ್ತಿಯೇ ಯಾಕೆ ಇದೆಲ್ಲ ಅಂದ್ರೆ, ಈ ‘ಏಳು’ ಅನ್ನೋ ಸಂಖ್ಯೆ ನನ್ನ ಬದುಕಲ್ಲಿ ಸಾಕಷ್ಟು ಆಟ ಆಡಿದೆ (ಏಳರಾಟದ ಶನಿ ಥರ :-)) ಇದು ನನ್ನ ನೆಮ್ಮದಿಯ ಬದುಕಿನ ಏಳನೇ ವರ್ಷದ ಸೆಲೆಬ್ರೇಷನ್ನು ಅಂದುಕೊಳ್ಬಹುದು. ಜೊತೆಗೆ, ನನ್ನ ‘ಆಲ್ ಮೆನ್ ಆರ್ ಬಾಸ್ಟರ್ಡ್ಸ್’ ನಂಬಿಕೆಯೂ ಬದಲಾಗಿದೆ. ನಾನು ಬದುಕಿದ್ದೀನಿ ಅಂದ್ರೆ ಅದಕ್ಕೆ ಯಾರು ಕಾರಣಾನೋ ಆ ಪುಣ್ಯಾತ್ಮ ನನ್ನ ಅಣ್ಣ ಚಕ್ರವರ್ತಿ ಇದ್ದಾನಲ್ಲ, ಅವನ ಒಡನಾಟದಲ್ಲಿದ್ದ ಮೇಲೂ ಹಾಗೆ ಜನರಲೈಸ್ ಮಾಡೋದು ಹೇಗೆ ಸಾಧ್ಯ? ಮತ್ತೆ ನನಗೆ ಮಗನೊಬ್ಬ. ಸಾಲದ್ದಕ್ಕೆ ನನಗೆ ಬ್ಲಾಗಿನಲ್ಲಿ, ಜೀಮೇಲು, ಫೇಸ್ ಬುಕ್ಕು, ಆಫೀಸು- ಎಲ್ಲ ಕಡೆ, ಬಹಳ ಕಡೆ ಅಸಂಖ್ಯಾತ ಅಣ್ಣ ತಮ್ಮಂದಿರು, ಗೆಳೆಯರು… ಅವರೆಲ್ಲರ ಪ್ರೀತಿ- ನಡವಳಿಕೆ ನೋಡಿದ ಮೇಲೂ…
ಹಾಗೇನೇ, ‘ರೂಹಿಲ್ಲದ ಕೇಡಿಲ್ಲದ’ ಅವನೆಂಬ ಅವನೊಬ್ಬ ಸಜೀವ ಸದೇಹ ಇರುವಾಗಲೂ…
ಮನಸ್ಸು ತಿಳಿಯಾಗದೆ ಇರೋಕೆ ಹೇಗೆ ಸಾಧ್ಯ?
~
ಕೊನೆಗೊಂದು ಕಥೆ ಹೇಳಿ ಮುಗಿಸೋಣ ಅಂತ….
ಒಂದು ಕಾರವಾನ್ ಒಂದೂರಿಂದ ಮತ್ತೊಂದೂರಿಗೆ ಮರಳುಗಾಡಲ್ಲಿ ಹೊಗ್ತಾ ಇರತ್ತೆ. ಮುಸ್ಸಂಜೆ ಆಗ್ತಿದ್ದ ಹಾಗೇ ಒಂದು ಕಡೆ ಬೀಡು ಬಿಡಬೇಕಾಗತ್ತೆ. ಅವರ ಬಳಿ 7 ಒಂಟೆಗಳಿವೆ. ಆದ್ರೆ, ಇರೋದು ಆರೇ ಗೂಟ, ಆರೇ ಹಗ್ಗ. ರಾತ್ರಿ ಒಂಟೆ ಏನಾದ್ರೂ ತಪ್ಪಿಸ್ಕೊಂಡ್ರೆ ದೇವರೇ ಗತಿ!
ಅಲ್ಲೇ ಒಂದ್ಕಡೆ ಒಬ್ಬ ಸಾಧು ಬಾಬಾ ಕೂತಿರ್ತಾನೆ. ಅವನ ಹತ್ರ ಅವರಲ್ಲೊಬ್ಬ ಹೋಗಿ ಕೇಳ್ತಾನೆ, ‘ಹಿಂಗಿಂಗಾಗಿದೆ, ಏನ್ಮಾಡೋದೀಗ?’
ಬಾಬಾ ಹೇಳ್ತಾನೆ, ‘ಆ ಏಳನೇ ಒಂಟೆಯ ಸುತ್ತ ಮುತ್ತ ಓಡಾಡಿ ಅದನ್ನ ಕಟ್ತಾ ಇರೋ ಹಾಗೆ ನಟನೆ ಮಾಡಿ ಸಾಕು’
ಹಂಗೇ ಮಾಡಿ ಮಲಗ್ತಾರೆ. ಬೆಳಗಾಗತ್ತೆ. ಸದ್ಯ! ಸುಳ್ಳು ಗೂಟದ ಒಂಟೆ ಪೆದ್ದರ ಹಾಗೆ ಮಲಕ್ಕೊಂಡೇ ಇದೆ!!
ಉಳಿದವನ್ನೆಲ್ಲ ಬಿಚ್ಚಿ, ಕಾರವಾನ್ ಹೊರಡಿಸ್ತಾರೆ. ಆದ್ರೆ, ಅರ್ರೆರ್ರೇ…. ಈ ಏಳನೆ ಒಂಟೆ ಜಪ್ಪಯ್ಯ ಅನ್ತಾ ಇಲ್ಲ! ಟುರ್… ಅಂದ್ರೂ ಇಲ್ಲ, ಹೋಯ್ ಅಂದ್ರೂ ಇಲ್ಲ… ಒಂದು ಹೆಜ್ಜೆ ಮುಂದೆ ಇಡೋದಿಲ್ಲ ಅಂತ ಮುಷ್ಕರ ಮಾಡ್ತಾ ನಿಂತುಬಿಟ್ಟಿದೆ…
ಈ ಜನರಲ್ಲೊಬ್ಬ ಸಾಧು ಬಾಬಾ ಏನೋ ಮೋಡಿ ಹಾಕಿದಾನೆ ಅಂತ ಅನುಮಾನ ಮಾಡಿ ಅವನ ಹತ್ರ ಹೋಗ್ತಾನೆ.
ಬಾಬಾ ಹೇಳ್ತಾನೆ, ‘ನೀವು ಕಟ್ಟೋ ಥರ ನಟಿಸಿದ್ರಿ ಸರಿ. ಬಿಚ್ಚೋ ಥರ ನಟಿಸಿದ್ರಾ? ಮೊದಲು ಆ ಕೆಲಸ ಮಾಡಿ…’
ಹಾಗೇ ಮಾಡಿದ ಮೇಲೆ ಒಂಟೆ ವಿಧೇಯವಾಗಿ ಹೊರಡತ್ತೆ.
ನೀತಿ: ನಾವು ಹೆಣ್ಮಕ್ಳು, ಒಂಟೆ ಥರ
(ಧೈರ್ಯವಂತರಷ್ಟೆ ಸುಳ್ಳು ಗೂಟವನ್ನ ಗುರುತಿಸ್ತಾರೆ)

 

 

 

 

ನಾವು ತರಕಾರಿ ಹಾಗೆ, ಸಾಕು ಕೋಳಿಯ ಹಾಗೆ

ಏನೆಲ್ಲ ಹೇಳ್ತಾರೆ. ಕೆಲವರಂತೂ ‘ಹೆಣ್ಣುಮಕ್ಕಳಿಗೆ ಪಾಪ ಅನ್ನೋದಾ? ಅವರು ಕೊಡೋ ಹಿಂಸೆ ನಿಮಗೇನು ಗೊತ್ತು?’ ಅಂತ ಬೆದರುಗಣ್ಣು ಮಾಡ್ಕೊಂಡು ಕೈ ತಿರುಗಿಸ್ತಾರೆ. ನಿಜಕ್ಕೆ ಹಿಂಗಾಗಿರುತ್ತೆ. ದಿಟ್ಟ ಹೆಣ್ಣುಮಕ್ಕಳ ಹೆಜ್ಜೆ ಗಂಡಸಿನ ಅಹಂಕಾರಕ್ಕೆ ಪೆಟ್ಟುಕೊಟ್ಟಿರುತ್ತೆ. ಆದರೆ ಎಲ್ಲ ಹೆಣ್ಣುಗಳು ಹಾಗೆ ಸಿಡಿದೇಳೋಕೆ ಆಗಲ್ಲ. ಎದ್ದು ಬದುಕುಳಿಯೋಕೆ ಆಗಲ್ಲ. ಇದಕ್ಕೆ ಕಾರಣ, ಗಂಡಸರು ಮಾತ್ರ ಅಲ್ಲ, ಮತ್ತಷ್ಟು ಹೆಣ್ಣುಗಳೂ ಅನ್ನೋದು ದುರಂತ. ಅದಕ್ಕೇ ನೋಡಿ, ಮುರಿಯುವ- ಮೀರುವ ಹೆಣ್ಣುಮಕ್ಕಳಿಗೆ ಸಾವಿರದೆಂಟು ಹೆಸರುಗಳನ್ನಿಡೋದು!

ಈ ಹೊತ್ತು ಇದನ್ನೆಲ್ಲ ಯೋಚಿಸುವ ಹಾಗೆ ಮಾಡಿದ್ದು ಮರ್ಯಾದಾ ಹತ್ಯೆ ಪ್ರಕರಣ. ಎಲ್ಲೋ ಬಿಹಾರದಲ್ಲಿ, ರಾಜಸ್ಥಾನದಲ್ಲಿ, ಮೂಲಭೂತವಾದ ಮೈಹೊಕ್ಕ ಸಮುದಾಯಗಳಲ್ಲಿ, ಅಂಥ ದೇಶಗಳಲ್ಲಿ ಇದು ನಡೆಯುತ್ತಿದ್ದು ಕೇಳಿತಿಳಿದಿದ್ದೆವು. ಅಥವಾ ಹಾಗೆ ಅಪ್ಪನೋ ಅಮ್ಮನೋ ಪ್ರೇಮದಲ್ಲಿ ಬಿದ್ದ ಮಗಳನ್ನು ಹೊಡೆದು ಕೊಂದದ್ದು ಬೆಳಕಿಗೆ ಬರುತ್ತಿರಲಿಲ್ಲ; ಬಂದರೂ ಮರ್ಯಾದಾ ಹತ್ಯೆಯ ಹೆಸರು ಇರುತ್ತಿರಲಿಲ್ಲ. ಆದರೀಗ ಬೆಚ್ಚಿಬೀಳುವಂತೆ, ಊರಿನವರೆದುರೇ ಒಬ್ಬ ಹೆಣ್ಣನ್ನು ಹೊಡೆದು ನೇಣಿಗೆ ಹಾಕಲಾಗಿದೆ.

ಸಾಯುವುದು ನಮ್ಮ ಹಕ್ಕು. ನಮ್ಮ ಮರ್ಜಿಯಂತೆ ನಮ್ಮನ್ನ ಸಾಯಲಿಕ್ಕಾದರೂ ಬಿಡಿ… ಹಿತ್ತಲಿನ ತರಕಾರಿ ಹಾಗೆ, ಸಾಕಿದ ಕೋಳಿ ಹಾಗೆ, ನಿಮಗೆ ಮನಸ್ಸು ಬಂದಾಗ ಹಿಡಿದು ಕೊಯ್ಯುತ್ತೀರಲ್ಲ? ಪ್ರತಿ ಹೆಣ್ಣು ಹೊಡೆತ ತಿಂದು ಸತ್ತಾಗಲೂ ಮೈ ಉರಿಯುತ್ತೆ. ನೂರೆಂಟು ನೆವಗಳ ನಿಷ್ಕ್ರಿಯತೆ ಮತ್ತು ಭಯಗಳೇ ದನಿಯೆತ್ತಲು ಅಡ್ಡಿಯಾ? ನನ್ನಮಟ್ಟಿಗಂತೂ ಹೌದು ಅನ್ನಿಸುತ್ತೆ. ಆದರೂ ಪ್ರತಿಭಟನೆಗೆ ಹೊರಟವರ ಜತೆ ದನಿಗೂಡಿಸುವ ಕೆಲಸವನ್ನಾದರೂ ಮಾಡಬಲ್ಲೆ. ಅಷ್ಟರಮಟ್ಟಿನ ಸಂವೇದನೆ ಉಳಿಸಿಕೊಂಡಿದ್ದೀನಿ ಅನ್ನುವ ಬಗ್ಗೆ ಕೊಂಚ ಸಮಾಧಾನವೂ ಇದೆ.

ಸುವರ್ಣಳ ಸಾವಿಗೆ ಕಾರಣರಾದವರನ್ನ ಶಿಕ್ಷಿಸಿ ಅನ್ನುವ ಒತ್ತಾಯವನ್ನಿಟ್ಟುಕೊಂಡು  ಸಹೃದರು ಪ್ರತಿಭಟನೆಗೆ ಮುಂದಾಗಿದ್ದಾರೆ. ದಯವಿಟ್ಟು ಬೆಂಬಲಿಸಿ. ಮತ್ತೆ ಇಂಥಾ ಸಾವುಗಳು ಆಗೋದು ಬೇಡ…. ಕೊನೆಯ ಪಕ್ಷ ಕಡಿಮೆಯಾದರೂ ಆಗಲಿ ಅನ್ನುವ ಆಶಯ…

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.. ಅದಕ್ಕೇ ನಮ್ಮ ಐಕಾನ್ ಆಗಿರುವರು

ನಮಗಿದೆಲ್ಲ ಮೊದಲೇ ಗೊತ್ತಿತ್ತು. ಅವೆಲ್ಲ ಆಕ್ಷೇಪಾರ್ಹಅಂತೇನೂ ಅನ್ನಿಸದೆ ಸಾಧಕನಾಗಿ ನಾವು ಅವರನ್ನ ನೋಡಿದ್ದೆವು. ಈಗೊಬ್ಬ ಮನುಷ್ಯರು ಹೊಸತಾಗಿ ಓದಿಕೊಂಡು ಗಾಬರಿ ಬಿದ್ದಿದ್ದಾರೆ. ಇಂಥಾ ವಿವೇಕಾನಂದ ಐಕಾನ್ ಹೇಗಾದನಪ್ಪಾ ಅಂತ ನಿದ್ದೆಬಿಟ್ಟಿದ್ದಾರೆ. ದಡ್ಡ, ಕಾಯಿಲೆಯ, ಬಡವ, ಅಬ್ರಾಹ್ಮಣ ನರೇಂದ್ರ ನಮ್ಮ ಐಕಾನ್ ‘ಸ್ವಾಮಿ ವಿವೇಕಾನಂದ’ ಆಗಿರೋದು ಯಾಕೆ ಗೊತ್ತಾ?

ಅವರು…..
ಶ್ರೀಮಂತ ಮನೆತನದಲ್ಲಿ ಹುಟ್ಟಿಯೂ ಬಡತನದ ಕಷ್ಟಗಳನ್ನೆಲ್ಲ ಎದುರಿಸಿದ್ದರು.
ತಮ್ಮೆಲ್ಲ ಅನಾರೋಗ್ಯಗಳ ನಡುವೆಯೂ ನಿರಂತರ ಓಡಾಟದಲ್ಲಿ ತೊಡಗಿಕೊಂಡು ಸೇವೆಗೆ, ಅಧ್ಯಾತ್ಮಕ್ಕೆ ತಮ್ಮನ್ನು ಕೊಟ್ಟುಕೊಂಡಿದ್ದರು. ಸ್ಟೀಫನ್ ಹಾಕಿಂಗ್ ನಂತೆ ಆನಾರೋಗ್ಯದಿಂದ ಇದ್ದೂ….
ಮಾಂಸಾಹಾರಿಯಾಗಿ, ಬ್ರಾಹ್ಮಣೇತರನಾಗಿದ್ದು ಗುರುವಿನ ಮನ್ನಣೆ ಪಡೆದಿದ್ದ ಭಾರತದ ಪರಂಪರೆಯ ನೂರಾರು ಅಧ್ಯಾತ್ಮ ಸಾಧಕರಲ್ಲಿ ವಿವೇಕಾನಂದರೂ ಒಬ್ಬರಾಗಿದ್ದರು.
ಸಾಂಪ್ರಾದಯಿಕ ಶಿಕ್ಷಣ ಪಡೆಯದೆ ಜಾಗತಿಕ ಮನ್ನಣೆ ಪಡೆದ ಐನ್ ಸ್ಟೀನನಂತೆ, ವಿವೇಕಾನಂದ ಕಡಿಮೆ ಅಂಕಗಳ ಅಸಾಧಾರಣ ಬುದ್ಧಿವಂತನಾಗಿದ್ದರು.
ವಾಯ್ಸ್ ಚೆನ್ನಾಗಿಲ್ಲ ಅಂತ ತಿರಸ್ಕರಿಸಲ್ಪಟ್ಟಿದ್ದ ಅಮಿತಾಭನಂತೆ(ಈಗಿನ ನಮ್ಮ ಬಾಲಿವುಡ್ ಬಾದ್ ಷಾಹ್) ಅವರೂ ‘ಪಾಠ ಕಲಿಸೋಕೆ ಬರೋದಿಲ್ಲ’ ಅಂತ ಅವಕಾಶ ನಿರಾಕರಿಸಲ್ಪಟ್ಟಿದ್ದರು.

ವಿವೇಕಾನಂದರು ತಮ್ಮ ಅನಾರೋಗ್ಯ ಕೆಲಸಕ್ಕೆ ತಡೆಯಾಗಿದೆ ಅಂತಲೇ ಮಿಕ್ಕವರಿಗೆ ದೇಹವನ್ನ ಹುರಿಗಟ್ಟಿಸಿಕೊಳ್ಳಿ ಅಂತ ಹೇಳ್ತಿದ್ದದ್ದು. ಅವರಿಗೆ ಗೊತ್ತಿತ್ತು, ದೇಹ ಚೆನ್ನಾಗಿದ್ದರೆ ಮಾತ್ರ ಕೆಲಸ ಸುಸೂತ್ರ ನಡೆಯುವುದು ಅಂತ. ವಿವೇಕಾನಂದ ಹೇಳಿದ್ದರು, ‘ಭಗವದ್ಗೀತೆ ಮುಚ್ಚಿಟ್ಟು ಫುಟ್ ಬಾಲ್ ಆಡಿ ಹೋಗಿ, ಬದುಕು ಏನೂಂತ ಗೊತ್ತಾಗುತ್ತೆ’ ಅಂತ.
ಅದಕ್ಕಾಗೇ ಅವರು ನಮ್ಮ ಐಕಾನ್.

ವಿವೇಕಾನಂದರು ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರು. ನಾಲ್ಕೂ ವರ್ಣಗಳ ಲಕ್ಷಾಂತರ ಅಧ್ಯಾತ್ಮಜೀವಿಗಳನ್ನು ಮೆರೆದಾಡಿಸಿದ ಭಾರತಕ್ಕೆ ನರೇಂದ್ರನೊಬ್ಬ ಹೆಚ್ಚೆ? ಅಧ್ಯಾತ್ಮ ಜೀವಿಗಳು ಪರಸ್ಪರ ‘ಸೋದರ’ ಅಂತ ಕರೆದುಕೊಳ್ಳೋದು ಸಾಮಾನ್ಯರಿಗೆ ಗೊತ್ತಿರೋದಿಲ್ಲ. ಸ್ವಾಮೀಜಿ ಕೂಡ ಬೇರೆಯವರನ್ನ ಸೋದರ, ಸೋದರಿ ಅಂತಲೇ ಕರೀತಿದ್ದಿದ್ದು, ನಡೆದುಕೊಳ್ತಿದ್ದಿದ್ದು.
ಇಂಥ ಜಾಗತಿಕ ಸೋದರತ್ವ ಕಟ್ಟಿಕಟ್ಟರಲ್ಲ. ಅದಕ್ಕಾಗೇ ಅವರು ನಮ್ಮ ಐಕಾನ್.

ವಿವೇಕಾನಂದರಿಗೆ ಚಿಕನ್ ಕಬಾಬ್ ತುಂಬಾ ಇಷ್ಟ. ಹಾಗಂತ ಈ ತಿಂಡಿಪೋತ ವಾರಗಟ್ಟಲೆ ಖಾಲಿ ಹೊಟ್ಟೆಯಲ್ಲಿ ಇರಬಲ್ಲವರಾಗಿದ್ದರು. ಬಾರಾನಾಗೊರ್ ಮಠದಲ್ಲಿರುವಾಗ ಬೇವಿನ ಸಾರು, ಮಂಡಕ್ಕಿ ತಿಂದು ಬದುಕಿದ್ದರು. ಬಹುತೇಕ ಬಂಗಾಳಿಗಳ ಹಾಗೆ ಅವರೂ ಹುಕ್ಕಾ ಗುಡುಗುಡಿ ಸೇದ್ತಾ ಇದ್ದರು. ಆದರೆ ಆ ಯಾವ ಸಂಪ್ರದಾಯವೂ ಅವರಿಗೆ ಚಟವಾಗಿರಲಿಲ್ಲ. ಬದುಕಿನ ವೈಭವದ ಎಲ್ಲ ಸಾಧ್ಯತೆಗಳನ್ನು ಒಳಗೊಳ್ಳುತ್ತಲೇ ಅಂಟಿಕೊಳ್ಳದ ವಿರಾಗಿಯಾಗಿದ್ದರು ವಿವೇಕಾನಂದ.
ಈ ಕಾರಣಕ್ಕಾಗಿಯೂ ಅವರು ನಮ್ಮಐಕಾನ್.

ವಿವೇಕಾನಂದ ತಮ್ಮ ಆಸಕ್ತಿ ಕ್ಷೇತ್ರದ ಯಾವುದನ್ನೇ ಓದಿದರೂ ಪ್ರತಿ ಪುಟದ ಬರಹ ನೆನಪಿಟ್ಟುಕೊಳ್ಳುತ್ತಿದ್ದರು. ಅವರು ಒಮ್ಮೆ ಕೇಳಿತಿಳಿದ ವಿಷಯವನ್ನು ಮರೆಯುತ್ತ ಇರಲಿಲ್ಲ. ಜಗತ್ತಿನಲ್ಲಿ ಮೊದಲಿಂದಲೂ ಹಂಗೇನೇ. ರಾಜಯಕ್ಕೆ- ದೇಶಕ್ಕೆ ಫಸ್ಟ್ ರ್ಯಾಂಕ್ ಬಂದ ಯಾವ ವ್ಯಕ್ತಿಯೂ ಶತಮಾನಗಟ್ಟಲೆ ನಿಲ್ಲುವಂಥ ಸಾಧನೆ ಮಾಡಿಲ್ಲ. ಪ್ರೈಮರಿ, ಹತ್ತನೆ ತರಗತಿ ಹೀಗೆಲ್ಲ ಓದಿನಿಲ್ಲಿಸಿಕೊಂಡ ನಮ್ಮ ವಿಜ್ಞಾನಿಗಳು, ಕವಿಗಳು, ಶಿಕ್…. ಉಫ್… ಲಿಸ್ಟು ಕೊಡಬೇಕಾ!?
ಅದಕ್ಕೇ ವಿವೇಕಾನಂದ ನಮ್ಮ ಐಕಾನ್.

ಜಗತ್ತಿನ ಬಹುತೇಕ ಸಾಧಕರ ಮನೆ ಸ್ಮಶಾನವಾಗಿರುತ್ತೆ. ವಿವೇಕಾನಂದ ಹೊರತಲ್ಲ. ಇವತ್ತು ಕೊಂಡಾಡುವ ನಾವು ಅವತ್ತು ಇದ್ದಿದ್ದರೆ ಸ್ವಾಮೀಜಿಗೆ ಕಿರೀಟವೇನೂ ತೊಡಿಸ್ತಾ ಇರಲಿಲ್ಲ. ಯಾವುದೇ ವ್ಯಕ್ತಿಯ ಮಹತ್ತು ಗೊತ್ತಾಗೋದು ಅವನು ಸತ್ತ ಮೇಲೇನೇ. ಹೀಗೆ ನಾವಿಷ್ಟು ಗೋಳಾಡಿಸಿದ್ದರೂ ‘ನನ್ನ ಭಾರತ… ನನ್ನ ಭಾರತ…’ ಅನ್ನುತ್ತಾ ಇಲ್ಲಿಯವರನ್ನು ನೆನೆದು ಅಮೆರಿಕದಲ್ಲಿ ತಾವು ನೆಲದ ಮೇಲೆ ಮಲಗಿದ್ದರಲ್ಲ, ಅದಕ್ಕೇ ಸ್ವಾಮೀಜಿ ನಮ್ಮ ಐಕಾನ್.

ಸೆಕ್ಸ್ ಮತ್ತು ಅಧ್ಯಾತ್ಮ ಒಟ್ಟಿಗೆ ಇರಲಾರದು ಅನ್ನುವ ಮನಸ್ಥಿತಿ ಇಟ್ಟುಕೊಂಡ ಭಾರತ- ಅವೆರಡನ್ನೂ ಬೆರೆಸಿ ಬೋಧಿಸಿದ್ದ ಓಶೋ ಅಂಥವರನ್ನೆ ಒಪ್ಪಿಕೊಂಡು ‘ಆಚಾರ್ಯ ರಜನೀಶ್’ ಅಂತ ಕರೆದಿದೆ. ಚಿನ್ನದ ಹಲ್ಲು ಕಟ್ಟಿಸಿಕೊಂಡಿದ್ದ ಇಸ್ಕಾನ್ ಸನ್ಯಾಸಿ ಅಭಯಚರಣ ಡೇಯವರನ್ನು ಶ್ರೀಲ ಪ್ರಭುಪಾದ ಅಂತ ಗೌರವಿಸಿದೆ. ನಡುವಿನೊಂದಷ್ಟು ವರ್ಷ ಕಳೆದುಹೋಗಿದ್ದ ಕ್ರಿಸ್ತನ ಬದುಕು ಕೆದಕದೆ ಹನ್ನೊಂದನೆ ಅವತಾರ ಮಾಡಿಕೊಂಡು ಅರಗಿಸಿಕೊಂಡಿದೆ. ಕಲ್ಲೇಟಿನಿಂದ ತಪ್ಪಿಸ್ಕೊಳ್ಳೋಕೆ ವಿವರಗಳನ್ನ ಬಿಟ್ಟು ಹೇಳ್ತಿದ್ದೀನಿ; ………………………………………………….. ರನ್ನೂ ನಮ್ಮವರಲ್ಲಿ ಒಬ್ಬರಾಗಿಸಿಕೊಂಡು, ಮುಸ್ಲಿಮ್ ಜನಾಂಗದೊಡನೆ ಸ್ನೇಹದಿಂದಿದೆ.
ಹೀಗಿರುವಾಗ;
ಚಾಟಿ ಏಟಿನಂಥ ಮಾತು ಬೀಸಿ ನಮ್ಮ ಜಾತೀಯ ಮಾನಸಿಕ ರೋಗಕ್ಕೆ ಮದ್ದು ನೀಡಿದ, ಹಿಂದೂ ಧರ್ಮದ ಸುಧಾರಣೆಗೆ ಅತ್ಯಗತ್ಯವಾಗಿದ್ದ ಜೀವಶಿವಸೇವೆಯನ್ನು ನೆನಪು ಮಾಡಿಕೊಟ್ಟ, ನಮ್ಮೆಲ್ಲರ ನೋಟವನ್ನು ವಿಸ್ತಾರಗೊಳಿಸಿದ ಸ್ವಾಮಿ ವಿವೇಕಾನಂದ ನಮ್ಮ ಐಕಾನ್ ಆಗಬಾರದು ಅಂದರೆ ಹೇಗೆ?
ನಮ್ಮ ನಡುವಿನ ಮನುಷ್ಯರೊಬ್ಬರು ಇತ್ತೀಚೆಗೆ ಪುಸ್ತವೊಂದನ್ನು ಓದಿಕೊಂಡು ಇದೇ ಮಾತುಗಳನ್ನ ಆಕ್ಷೇಪದ ದನಿ ಹೊರಡಿಸುವಂತೆ ಬರೆದಿದ್ದಾರೆ. ಈ ಎಲ್ಲ ವಿಷಯ ವಿವೇಕಾನಂದರನ್ನ ಐಕಾನ್ ಮಾಡಿಕೊಂಡವರಿಗೆ ಗೊತ್ತಿಲ್ಲ, ತಾನು ಮಹಾಜ್ಞಾನವೊಂದನ್ನು ಬೋಧಿಸುತ್ತಿರುವ ಅನ್ನುವ ಧಾಟಿ ಇದೆ. ಅಥವಾ ತಮ್ಮ ಈ ‘ಸತ್ಯಶೋಧಕ ಲೇಖನ’ದಿಂದ ಸಾವಿರಾರು ಜನ ವಿವೇಕಾನಂದರ ಮೇಲಿನ ಅಭಿಮಾನವನ್ನು ಹಿಂಪಡೆಯುತ್ತಾರೆ ಅಂತ ಅವರು ಭಾವಿಸಿರಬಹುದು.
ಬರೆದ ಮನುಷ್ಯರೇ ತಿಳಿಯಿರಿ. ಯಾರೋ ಮಡಿಮಠದ ಆಚಾರ್ಯರನ್ನೋ ಮನು ಮಹಾತ್ಮರನ್ನೋ ಹಿಂದೂ ಕುಲ ತನ್ನ ಐಕಾನ್ ಅಂತ ಕರೆದು ಮೆರೆಸಿದ್ದರೆ ಗಾಬರಿ ಪಡಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಸರಿಯಾದ ಆಯ್ಕೆಯನ್ನೇ ಮಾಡಿಕೊಂಡಿದೆ. ನೀವು ಅಂದುಕೊಂಡಷ್ಟು ಪೆದ್ದರಲ್ಲ ಯುವ ಸಮೂಹ. ನೆಟ್ಟಿನಲ್ಲಿ ಸ್ವಾಮೀಜಿಯ ಸಾಧ್ಯವಿರುವ ಎಲ್ಲ ವಿಷಯಗಳನ್ನು ಕಲೆಹಾಕಿಯೇ ಜೈಕಾರ ಕೂಗುತ್ತದೆ. ನೀವು ಬರೆಯದೆ ಬಿಟ್ಟಿರುವ ರೂಮರ್ ಗಳನ್ನು ಸಹ ಅದು ಓದಿಕೊಂಡಿದೆ. ಹೀಗಿರುತ್ತ, ಸಂಕುಚಿತ ಹಿಂದುತ್ವದಿಂದ ವಿವೇಕಾನಂದರ ವಿಶ್ವಮಾನವ ತತ್ತ್ವಕ್ಕೆ ತೆರೆದುಕೊಳ್ಳಲು ಹೊರಟು, ಅವರನ್ನ ಮುಂದಿಟ್ಟುಕೊಂಡು ಸಂಭ್ರಮದ 150ನೆ ಜನ್ಮೋತ್ಸವ ಆಚರಿಸ್ತಿರೋದಕ್ಕೆ ಸಂತೋಷಪಡಿರಿ.
ನಾವು ವಿವೇಕಾನಂದರನ್ನು ಶೈಕ್ಷಣಿಕ ವೈಫಲ್ಯದವ, ಕಾಯಿಲೆಯವ, ಮಾಂಸಾಹಾರಿ, ಬ್ರಾಹ್ಮಣೇತರನಾಗಿದ್ದೂ ಸಾಧನೆ ಮಾಡಿದವ ಅಂತ ಅಪ್ಪಿಕೊಂಡಿದ್ದೀವಿ. ನೀವು, ತಿಳಿದವರು ಅಂತ ಅನ್ನಿಸಿಕೊಂಡವರು ಈ ವಿಷಯಗಳನ್ನು ಕೀಳಾಗಿ ಬಿಂಬಿಸುತ್ತ ಅವರನ್ನು ಅನರ್ಹಗೊಳಿಸುವ ಯತ್ನಕ್ಕೆ ಯಾಕೆ ಕೈಹಾಕಿದ್ದೀರಿ!?
ವಿಕೃತಿ ಅಂದರೆ ಇದೇನಾ?

ಹೊಸ ವರ್ಷ ನನಗೆ ಹೊಸ ನಂಬರ್ ಮಾತ್ರ

ನಿಶಾಚರ ಪಿಚಾಚಿಯ ಹಾಗೆ 7 ಗಂಟೆಯಾದರೂ ಹೊರಳಾಡುತ್ತಿದ್ದ ನನ್ನ ಮೇಲೆ ಹಾರಿ, ಹೊದಿಕೆ ಕಿತ್ತು ಎಬ್ಬಿಸಿದ ಮಗ. ನಾವಿಬ್ಬರೂ ಕೆಲ್ವಿನ್- ಹಾಬ್ಸ್ ಹಾಗೆ ಕಿತ್ತಾಡಿ ಅಮ್ಮನ ಹತ್ತಿರ ಬಯ್ಸಿಕೊಂಡು, ಏನೂ ಆಗೇ ಇಲ್ಲ ಅನ್ನುವಂತೆ ಹೆಗಲೆಗಲ ಮೇಲೆ ಕೈಹಾಕ್ಕೊಂಡು ನಗುತ್ತ ರೂಮಾಚೆ ಬಂದೆವು. ಅಡುಗೆ ಮನೆಯಲ್ಲಿ ಅವರೆ ಕಾಳು ಸಾಗು ಮತ್ತು ಅಕ್ಕಿ ರೊಟ್ಟಿಯ ಘಮ ತುಂಬಿಕೊಳ್ಳುತ್ತಿತ್ತು. ಮಗ ತಕಪಕ ಕುಣಿಯುತ್ತ ಇವತ್ತು ಇಯರ್ ಎಂಡ್… ರಜ ಹಾಕು ಅಂತ ರಾಗ ತೆಗೆದಿದ್ದ.

ನಾವು ಮೂರು ಜನಕ್ಕೆ ಮತ್ತೆ ಮೂರು ಮಕ್ಕಳು... 🙂

ನನ್ನ ಕಾಫಿ ಕಟ್ಟೆಯ ಮೇಲೆ ಕುಂತು ಕಪ್ ನಿಂದ ತೆಳುವಾಗಿ ಏಳುತ್ತಿದ್ದ ಹಬೆಯನ್ನೆ ನೋಡುತ್ತ ಉಳಿದೆ. ಇಂಥಾ ಸಮಯದಲ್ಲೆ ಫ್ಲಾಶ್ ಬ್ಯಾಕ್ ಗೆ ಹೋಗುವಂತೆ ನನ್ನ ಮನಸ್ಸು ಯಾಂತ್ರಿಕವಾಗಿ ಪ್ರೋಗ್ರಾಮ್ ಆಗಿದೆ ಅನ್ನಿಸುತ್ತೆ. ನಮ್ಮ ಶಾಲಾ ದಿನಗಳ ವರ್ಷಾಂತ್ಯದ ನೆನಪು. ಕಾನ್ವೆಂಟ್ ನಲ್ಲಿ ಓದುತ್ತಿದ್ದ ನನಗೆ ಹೊಸ ವರ್ಷವನ್ನ ಸ್ವಾಗತಿಸೋದು ಕೂಡ ಒಂದು ಸಾಂಪ್ರದಾಯಿಕ ಹಬ್ಬದ ಹಾಗೆ. ಚರ್ಚ್ ನಲ್ಲಿ ನಡುರಾತ್ರಿ ಮೂರು ಸರ್ತಿ ಗಂಟೆ ಬಾರಿಸಿದರೆ ಹೊಸ ವರ್ಷ ಬಂತು ಅಂತಲೇ ಅರ್ಥ. ನಮ್ಮ ಮನೆವರೆಗೂ ಕೇಳುತ್ತಿದ್ದ ಗಂಟೆ ಸದ್ದನ್ನ, ಅದಿಲ್ಲದಿದ್ದರೆ ವರ್ಷ ಮುಗಿಯುವುದೆ ಇಲ್ಲವೇನೋ ಅನ್ನುವಂತೆ ಕಾಯುತ್ತ ಕೂತಿರುತ್ತಿದ್ದೆವು. ಅಮ್ಮ ಊರೆಲ್ಲ ಹುಡುಕಿ ಪ್ಲಮ್ ಕೇಕ್ ತಂದಿಟ್ಟಿರುತ್ತಿದ್ದಳು. ನಮ್ಮ ಚಡಪಡಿಕೆಗೆ ಅದೂ ಒಂದು ಕಾರಣವಾಗಿರುತ್ತಿತ್ತು. ಅಮ್ಮ ಹೊಸ ವರ್ಷದ ಸ್ವಾಗತಕ್ಕೆ ತನ್ನದೇ ಒಂದು ಸಂಪ್ರದಾಯ ರೂಢಿಸಿದ್ದಳು. ದೇವರ ಕೋಣೆಯಲ್ಲಿ ನೀಲಾಂಜನ ಹಚ್ಚಿ ಬಂದು ಟೇಬಲ್ ಮೇಲೆ ಕೇಕನ್ನಿಟ್ಟು ಕಟ್ ಮಾಡುತ್ತಿದ್ದಳು. ನಾವು ಅಪ್ಪನಿಗೆ ಹೆದರುತ್ತಾ ಸಣ್ಣಗೆ ಕೂಗಾಡುತ್ತಾ (ಕೂಗಾಡಿದರೇನೆ ಖುಷಿ ತೋರಿಸಿಕೊಂಡ ಹಾಗೆ ಅಂದುಕೊಂಡಿದ್ದರಿಂದ) ನಮನಮಗೆ ಹೊಸ ವರ್ಷದ ಶುಭಾಶಯ ಹೇಳಿಕೊಳ್ತಿದ್ದೆವು. ದೂರದರ್ಶನದಲ್ಲಿ ನಡುರಾತ್ರಿವರೆಗೂ ಹೊಸವರ್ಷಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದರು. ಅವನ್ನೆಲ್ಲ ನೋಡಿಕೊಂಡು, ಹನ್ನೆರಡು ಗಂಟೆ ಮೀರಿಯೂ ಎದ್ದಿರುವುದು ಅತಿದೊಡ್ಡ ಸಾಹಸ ಎನ್ನುವಂತೆ ಜಂಭಜಂಭದ ಭಾವ ಹೊತ್ತು ಮಲಗುತ್ತಿದ್ದೆವು.
ಹೊಸ ವರ್ಷ ಬರಮಾಡಿಕೊಳ್ಳುವ ಈ ಪದ್ಧತಿ ಅಣ್ಣ ಹೈಸ್ಕೂಲಿಗೆ ಕಾಲಿಡುವ ತನಕ ನಡೆದಿತ್ತು. ಆಮೇಲೆ ಅವನು ನಾವ್ಯಾಕೆ ಇದನ್ನೆಲ್ಲ ಮಾಡಬೇಕು ಅಂತ ರಗಳೆ ತೆಗೆಯತೊಡಗಿದ್ದ. ಅವನ್ಯಾಕೆ ಹಾಗಾಡ್ತಾನೆ ಅಂತ ಗೊತ್ತಾಗದ ನಾನೂ ತಮ್ಮನೂ ಅವನನ್ನ ಬಯ್ಕೊಳ್ಳುತ್ತ ಗೊಣಗುತ್ತಿದ್ದೆವು. ನನ್ನ ಪ್ರೈಮರಿ ದಿನಗಳು ಮುಗಿಯುವ ಹೊತ್ತಿಗೆ ಎಲ್ಲವೂ ಬದಲಾಗತೊಡಗಿದ್ದವು. ಊರಿನ ಒಂದು ದೊಡ್ಡ ಬಯಲಲ್ಲಿ ಭಾರೀ ಟೆಂಟ್ ಹಾಕಿ ‘ನ್ಯೂ ಇಯರ್ ದೋಸೆ ಕ್ಯಾಂಪ್’ ಅಂತ ಶುರುವಾಯ್ತು. ರಾತ್ರಿಯಿಂದ ಬೆಳಗಿನ ತನಕ ಅಲ್ಲಿ ಬಗೆಬಗೆಯ ದೋಸೆಗಳನ್ನ ತಿನ್ನುತ್ತ ಹೊಸವರ್ಷವನ್ನ ಕರೆದುಕೊಳ್ಳುವ ಕಾನ್ಸೆಪ್ಟ್ ಅದು! ಇದರೊಂದಿಗೆ ಈ ಆಚರಣೆ ಚರ್ಚಿನಿಂದ ಆಚೆಗೂ ವಿಸ್ತರಿಸಿಕೊಳ್ಳತೊಡಗಿತು. ಬರಬರುತ್ತ ನಡುರಾತ್ರಿ ಹಾಡು ಹಸೆ, ನಗೆ ಕಾರ್ಯಕ್ರಮ ಇತ್ಯಾದಿಗಳೆಲ್ಲ ಶುರುವಾದವು. ನನ್ನೊಳಗೆ ಸಂಭ್ರಮಿಸುವ ಉತ್ಸಾಹ ಬತ್ತುತ್ತ ಹೋಯ್ತು.
ಈ ನಡುವೆ ಕಾಲೇಜಿಗೆ ಕಾಲಿಟ್ಟಿದ್ದ ಅಣ್ಣ ತನ್ನ ಧೋರಣೆಯಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಿಕೊಂಡಿದ್ದ. ‘ಇದು ವ್ಯವಾಹರಕ್ಕೆ ಹೊಸತಷ್ಟೇ, ನಾವು ಆಚರಿಸೋದು ಬೇಡ’ ಅನ್ನುತ್ತಲೆ, `ನಾವು ಹುಡುಗರು ಒಂದ್ಕಡೆ ಸೇರ್ತೀವಿ’ ಅಂತ ಹೊರಟುಬಿಡ್ತಿದ್ದ. ಅವನ ಹಿಂದೆಹಿಂದೆಯೇ ಕಾಲೇಜು ತುಳಿದಿದ್ದ ನಾನು, ಹುಡುಗರು ಬ್ಯಾಗಿನಲ್ಲಿಟ್ಟು ಹೋಗ್ತಿದ್ದ ಗ್ರೀಟಿಂಗ್ ಕಾರ್ಡ್ ಗಳನ್ನ ಅಮ್ಮ ನೋಡದ ಹಾಗೆ ಮುಚ್ಚಿಡುವ ಆತಂಕದಲ್ಲೆ ರಾತ್ರಿ ಕಳೆಯುತ್ತಿದ್ದೆ.
ನನ್ನ ಕಾಲೇಜ್ ಅವಧಿ ತೀರ ಚಿಕ್ಕದಿತ್ತು. ಬರೀ ಎರಡೂ ವರೆ ವರ್ಷದ್ದು ಅದು. ಮದುವೆಯಾಗಿ ಹೋದವನ ಮನೆಯಲ್ಲಿ ನ್ಯೂ ಯಿಯರ್ ಪಾರ್ಟಿ ಬಹಳ ಸಿನಿಮೀಯವಾಗಿರುತ್ತಿತ್ತು. ಒಂದೆರಡು ವರ್ಷ ಅನ್ನುವ ಹೊತ್ತಿಗೆ ನನ್ನ ಪಾಲಿಗೆ ದಿನಮಾನಗಳೆಲ್ಲವೂ ಅರ್ಥ ಕಳಕೊಂಡಂತಾಗಿಬಿಟ್ಟಿದ್ದವು. ನಾನು ಉಳಿದೆಲ್ಲರ ಸಡಗರದಲ್ಲೆ ಖುಷಿ ಹುಡುಕುತ್ತ ಸಾಕ್ಷಿಯಾಗಿರುತ್ತಿದ್ದೆ.
~
ಇತ್ತೀಚೆಗೆ ಮಜಾ ಇದೆ. ಮೊನ್ನಿನ ವರ್ಷದ ತನಕ ನನ್ನ ಪಾಲಿಗೆ ವರ್ಷಗಳು ಬಂದು ಹೋಗ್ತಿದ್ದವು ತಮ್ಮ ಪಾಡಿಗೆ. ನನ್ನ ಘಮಂಡಿತನದಿಂದ ಎಳೆದುಕೊಳ್ತಿದ್ದ ನೂರೆಂಟು ಅಪಾಯಗಳಿಂದ ಪಾರಾಗುವುದರಲ್ಲಿ ದಿನ ಕಳೆಯುವುದೆ ಗೊತ್ತಾಗುತ್ತಿರಲಿಲ್ಲ. ನಾನು ಇರುವಲ್ಲೆ ಇರುವೆನೇನೋ ಅನ್ನಿಸಿಬಿಡುತ್ತಿತ್ತು.
ಈಗ, ಈ ಹೊತ್ತು ಇನ್ನೊಂಥರ ಗಮ್ಮತ್ತು. ಪ್ರತಿ ಕ್ಷಣವೂ ಹೊಸತೆನ್ನುವಷ್ಟು ನಿರಾಳ. ನನ್ನೆಲ್ಲ ತಲೆಹರಟೆಗಳ ಸಹಿತವೇ ನಾನು ನವೀಕರಣಗೊಳ್ತಿದ್ದೀನಿ, ಪ್ರತಿ ಘಳಿಗೆಯೂ. ಬಹುಶಃ ಅದಕ್ಕೇ ಹೊಸ ವರ್ಷ ನನ್ನ ಪಾಲಿಗೆ ಹೊಸ ನಂಬರ್ ಮಾತ್ರ.

– ಹಾಗಂದುಕೊಂಡು ಸುಮ್ಮನಿರುವ ಹಾಗಿಲ್ಲ. ಮಗ ಇನ್ನೂ ಎಗರಾಡ್ತಲೇ ಇದ್ದಾನೆ. ಅಮ್ಮನಿಗೆ ಹೇಳಬೇಕು ಪ್ಲಮ್ ಕೇಕ್ ತರಲಿಕ್ಕೆ. ರಾತ್ರಿ ನೀಲಾಂಜನ ಹಚ್ಚಲಿಕ್ಕೆ. ಮೊದಲಿನಂತೆ ಹೆದರಿಕೊಂಡಲ್ಲದೆ ರಾತ್ರಿ ಸಮಾ ಕೂಗಾಡಿ ಹ್ಯಾಪಿ ನ್ಯೂ ಇಯರ್ ಹೇಳಬೇಕು, ನನ್ನೆಲ್ಲರ ಪ್ರೀತಿಪಾತ್ರರ ಖುಷಿಗೆ…

ಕನ್ಫೆಶನ್

ನಾನು ಬಹಳ ಇಷ್ಟಪಟ್ಟ ಬದುಕುಗಳಲ್ಲಿ ವಾಂಗರಿಯದ್ದೂ ಒಂದು. ಇಂಥವರಲ್ಲದೆ ನಮಗೆ ಇನ್ಯಾರು ತಾನೆ ಪ್ರೇರಣೆ? ಕೊನೆಪಕ್ಷ ಆ ದಿನವಾದರೂ ಒಂದು ಕ್ಷಣ ಮೌನದ ಗೌರವ ನನ್ನಿಂದ ಸಂದಾಯವಾಗಬೇಕಿತ್ತು.

ಬಹುಶಃ ಈ ಶಿರೋನಾಮೆಯಲ್ಲದೆ ಬೇರೆ ಯಾವುದೂ ಸರಿ ಹೊಂದೋದಿಲ್ಲ ಇಲ್ಲಿ.
ನಾನು ನಿಯಮಿತವಾಗಿ ಪೇಪರ್ ಓದೋದಿಲ್ಲ. ರೆಗ್ಯುಲರ್ ಆಗಿ ಟೀವಿ ನ್ಯೂಸ್ ನೋಡೋದು ಮತ್ತು ಪೇಪರ್ ಓದೋದನ್ನ ಬಿಟ್ಟು ಆರೇಳು ವರ್ಷಗಳಾಗಿಹೋಗಿವೆ. ಕಾರಣ ನೂರೆಂಟಿವೆ.
ಇಂಥ ನನ್ನ ಮೊಂಡುತನದಿಂದ ಹಲವಷ್ಟು ಸಂಗತಿಗಳು ತಡವಾಗಿ ಗೊತ್ತಾಗ್ತವೆ. ಹಾಗೆ ತಡವಾಗಿ ಗೊತ್ತಾದ ವಿಶಯಗಳು ಮಹತ್ವ ಕಳಕೊಂಡಿರ್ತವೇನೋ ಸರಿ. ಯಾವ ಭೂತವೂ ಭವಿಷ್ಯದ ಹೆಗಲೇರಲಾಗದು. ಆದರೂ ಕೆಲವೊಂದು ಸಂಗತಿಗಳಿಗೆ ಆಯಾ ಹೊತ್ತೇ ಸ್ಪಂದಿಸಬೇಕು. ಖುಷಿಪಡಲಾದರೂ ಸರಿ, ನೊಂದುಕೊಳ್ಳಲಾದರೂ ಸರಿ…
ಈ ಎಲ್ಲ ತಟವಟ, ವಾಂಗರಿ ಮಥಾಯಿ ಸಾವಿಗಾಗಿ.
ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಹೆಣ್ಣು ಮಕ್ಕಳ ಲಿಸ್ಟ್ ಹುಡುಕುತ್ತಿದ್ದಾಗಲೇ ಗೊತ್ತಾಗಿದ್ದು ಈ ಕಪ್ಪು ಹೆಣ್ಣುಮಗಳು ಸೆಪ್ಟೆಂಬರ್ 25ರಂದೇ ಇಲ್ಲವಾಗಿಬಿಟ್ಟಿದಾಳೆ ಅಂತ. ನಾನು ಬಹಳ ಇಷ್ಟಪಟ್ಟ ಬದುಕುಗಳಲ್ಲಿ ವಾಂಗರಿಯದ್ದೂ ಒಂದು. ಇಂಥವರಲ್ಲದೆ ನಮಗೆ ಇನ್ಯಾರು ತಾನೆ ಪ್ರೇರಣೆ? ಕೊನೆಪಕ್ಷ ಆ ದಿನವಾದರೂ ಒಂದು ಕ್ಷಣ ಮೌನದ ಗೌರವ ನನ್ನಿಂದ ಸಂದಾಯವಾಗಬೇಕಿತ್ತು.

ವಾಂಗರಿಯ ಯಶೋಗಾಥೆ ಶುರುವಾಗೋದು ಮರವೊಂದರ ದುರಂತ್ಯದಿಂದ. ಆಕೆ ಕಪ್ಪು ಗುಲಾಮನ ಮಗಳು. ಪಟ್ಟಣದಲ್ಲಿ ಓಡಾಟಕ್ಕೆ ಇದ್ದ ನಿಷೇಧ ಅವಳನ್ನು ಕಾಡಿನ ಹತ್ತಿರಕ್ಕೆ ತಂದಿತ್ತು. ಅಲ್ಲೊಂದು ದೈತ್ಯ ಮರದ ಕೆಳಗೆ ಅಮ್ಮನೊಟ್ಟಿಗೆ ಹರಟುತ್ತಲೋ ಗೆಳೆಯರೊಟ್ಟಿಗೆ ಆಡುತ್ತಲೋ ಕುಳಿತಿರುತ್ತಿದ್ದಳು ಮಥಾಯಿ. ಬೇರುಗಳು ಆಳಕ್ಕಿಳಿದು ನೀರು ಹೀರಿ ಆಕಾಶಕ್ಕೆ ರವಾನಿಸುವ ವಿಸ್ಮಯವನ್ನು ಅವಳ ಪುಟ್ಟ ಕಣ್ಣು ಶೋಧಿಸುತ್ತಿತ್ತು. ‘ನಮ್ಮ ಬದುಕಿಗಂತಲೇ ಈ ಮರಗಳು ಬದುಕಿವೆ!’ ವಾಂಗರಿಗೆ ಸ್ಪಷ್ಟವಾಗಿತ್ತು. ಆ ದೈತ್ಯ ಮರ ಕೊಡಲಿ ಸೋಕಿ ಉರುಳಿಬಿದ್ದಾಗ ವಾಂಗರಿಯೂ ಕುಸಿದುಹೋಗಿದ್ದಳು.
ಹಸಿರಿನೊಂದಿಗೆ ಆತ್ಮಸಂಬಂಧವಿರಿಸಿಕೊಂಡಿದ್ದ ವಾಂಗರಿ ಕಾಡಿನ ಕುರಿತು ಹೆಚ್ಚಿನ ತಿಳಿವಳಿಕೆ ಪಡೆಯಲೆಂದೇ ಶಿಕ್ಷಣ ಪಡೆಯಹೊರಟಿದ್ದು. ಅದು ಕೂಡ ಹೆಣ್ಣುಮಕ್ಕಳಿಗೆ, ಅದರಲ್ಲೂ ಗುಲಾಮರ ಮಕ್ಕಳಿಗೆ ವಿದ್ಯೆ ನಿಷೇಧಿಸಲಾಗಿದ್ದ ಬ್ರಿಟಿಷ್ ದಬ್ಬಾಳಿಕೆಯ ಕಾಲದಲ್ಲಿ.
ವಾಂಗರಿ ಮಥಾಯಿ ಮೊದಲ ಬಾರಿ ಜೈಲು ಸೇರಿದ್ದು ಹದಿನಾರನೆ ವಯಸ್ಸಿಗೆ, ಬ್ರಿಟಿಷ್ ಶೋಷಣೆಯ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ. ಅವರು ಮನುಷ್ಯರನ್ನ ಕತ್ತರಿಸಿ ಬಿಸಾಡ್ತಿದ್ದ ಹಾಗೇ ಮರಗಳನ್ನೂ ಕತ್ತರಿಸಿ ಬಿಸಾಡ್ತಿದ್ದರು. ತಮ್ಮ ನೌಕೂಲಕ್ಕೆ ಕಟ್ಟಡ- ರಸ್ತೆಗಳನ್ನ ನಿರ್ಮಿಸಿಕೊಳ್ಳಲು ಆಪ್ರಿಕಾದ ಮಳೆಕಾಡುಗಳ ಮಾರಣಹೋಮ ಮಾಡುತ್ತಿದ್ದರು. ಮನುಷ್ಯ ಸಂತಾನವಾದರೂ ಬೇಕಾದಷ್ಟು ಬೆಳೆಯುವುದು. ಜಾಗವೇ ಉಳಿಯದೆ ಮರಗಳು ಬೆಳೆಯುವುದೆಲ್ಲಿ?
ವಾಂಗರಿ ಮಥಾಯಿ ವಿಶಿಷ್ಟ ಎನಿಸೋದು ಇಲ್ಲೇ. ಅಮೆರಿಕ, ಜರ್ಮನಿಗಳಲ್ಲಿ ಓದಿ ಶಿಕ್ಷಣದ ಆತ್ಮವಿಶ್ವಾಸ ಪಡೆದಿದ್ದ ವಾಂಗರಿ, ಹೆಣ್ಣುಮಕ್ಕಳ ಸ್ಥಿತಿ ಸುಧಾರಣೆ, ಸ್ವಾವಲಂಬನೆ ಮತ್ತು ಪರಿಸರ ರಕ್ಷಣೆಗಳ ಸೂತ್ರ ರಚಿಸಿಕೊಂಡು ಗ್ರೀನ್ ಬೆಲ್ಟ್ ಚಳವಳಿಯ ಮೂಲಕ ಹೋರಾಟಕ್ಕಿಳಿದರು. ಹೆಜ್ಜೆಹೆಜ್ಜೆಗೂ ಬಂಧನ ಬಿಡುಗಡೆಗಳ ತೊಡಕು. ಎಲ್ಲವನ್ನೂ ಎದುರಿಸಿ ಗೆದ್ದು, ಬಹಳ ಸಾರ್ತಿ ಕೊಲೆಗಟುಕರ ಜಾಲಕ್ಕೆ ಸಿಲುಕಿ ಪಾರಾಗಿ, ಪಡೆದದ್ದು ಅದ್ಭುತ ಫಲಿತಾಂಶ.
ಇಂದು ಕೀನ್ಯಾದಲ್ಲಿ ಮಳೆಕಾಡುಗಳ ಪುನರ್‌ನಿರ್ಮಾಣವಾಗಿದೆ ಎಂದರೆ ಅದಕ್ಕೆ ವಾಂಗರಿ ಮಥಾಯಿಯ ಬದುಕಿನ ನೀರು ಗೊಬ್ಬರವಿದೆ.  ಈಕೆಯನ್ನ ಅಲ್ಲಿನ ಜನ ಪ್ರೀತಿಯಿಂದ ಟ್ರೀ ವುಮನ್ ಅಂತಲೇ ಕರೆಯುತ್ತಾರೆ. ಗಟ್ಟಿಗಿತ್ತಿಯಾದ ಈಕೆ ಐರನ್ ಲೇಡಿಯೂ ಹೌದು. ವಾಂಗರಿಯ ಮಥಾಯಿ (ಗಂಡ) ಇಂಥಾ ಗಟ್ಟಿಗಿತ್ತಿಯ ಜತೆ ಬಾಳೋದು ಕಷ್ಟ ಅಂತ ದೂರವಾಗಿಬಿಟ್ಟಿದ್ದರು. ಇವರದು ಸಮೂಹವನ್ನ ಬೆನ್ನಿಗಿಟ್ಟುಕೊಂಡು ಒಂಟಿ ಹೋರಾಟ. ಮನುಷ್ಯರ ನಾಡಿಮಿಡಿತ ಚೆನ್ನಾಗಿ ಗೊತ್ತಿದ್ದ ವಾಂಗರಿ, ‘ನಮ್ಮದೇ ಸ್ವಾರ್ಥಕ್ಕಾದರೂ ಮರಗಳನ್ನು ಉಳಿಸಿ’ ಎನ್ನುವ ಸ್ಲೋಗನ್ ಹೊತ್ತು ಜಗತ್ತು ಸುತ್ತಿದ್ದರು.

ಈಗ ವಾಂಗರಿ ಮಥಾಯಿ ಇಲ್ಲವಾಗಿದ್ದಾರೆ. ಅಂಥವರು ಇನ್ನೂ ನೂರಾರು ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ ಸರಿಯೇ. ಅವರೆಲ್ಲರಲ್ಲಿ, ಮುಂಬರುವ ಪೀಳಿಗೆಯಲ್ಲೂ ಅವರ ಹೋರಾಟದ ಕಸುವು, ಪರಿಸರ ಪ್ರೀತಿ ಹರಿದುಬರಲೆಂದು ಆಶಯ.