ಸೆಕ್ಸ್‌: ನಿರಾಕರಣೆಯ ಹಕ್ಕು

ದೆಹಲಿ ಹೈಕೋರ್ಟ್ ಒಂದು ಐತಿಹಾಸಿಕ  ತೀರ್ಪು ನೀಡಿತು. ಹೆಂಡತಿ ಮೊದಲ ರಾತ್ರಿಯಿಂದ ಹಿಡಿದು ಮದುವೆಯಾದ ಐದು ತಿಂಗಳ ಪರ‍್ಯಂತ ಸೆಕ್ಸ್ ಅನ್ನು ನಿರಾಕರಿಸಿದಳು ಎನ್ನುವುದು ಫಿರ‍್ಯಾದಿಯ ದೂರಾಗಿತ್ತು. ದಂಪತಿಗಳಲ್ಲಿ ಯಾರೊಬ್ಬರ ಕಡೆಯಿಂದ ಸೆಕ್ಸ್ ನಿರಾಕರಿಸಲ್ಪಟ್ಟರೂ ಅದನ್ನು ಕ್ರೌರ‍್ಯವೆಂದು ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಆಧಾರವಾಗಿಟ್ಟುಕೊಂಡು ಡೈವೋರ್ಸ್ ಪಡೆಯಬಹುದು ಎಂದು ಹೈಕೋರ್ಟ್ ಹೇಳಿತು.
ಈಗ ಈ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಗಂಡಸರು ಈ ಅವಕಾಶದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಕೆಲವರು ವಾದಿಸಿದರೆ, ದೈಹಿಕ, ಮಾನಸಿಕ ಮೊದಲಾದ ಹತ್ತು ಹಲವು ಕಾರಣಗಳಿಂದಾಗಿ ಹೆಂಡತಿಯು ಸೆಕ್ಸ್ ನಿರಾಕರಿಸುವ ಹಕ್ಕನ್ನು ಇದು ಕಿತ್ತುಕೊಳ್ಳುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ತೀರ್ಪಿನಲ್ಲಿ ಗಂಡ ಮತ್ತು ಹೆಂಡತಿ – ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ಮತ್ತೆ ಕೆಲವರು ಸಮಾಧಾನ ಹೇಳುತ್ತಿದ್ದಾರೆ.
ಇವೆಲ್ಲ ಸರಿ. ಆದರೆ, ದಾಂಪತ್ಯದಲ್ಲಿ ಸೆಕ್ಸ್ ಅನ್ನುವ ವಿಷಯವನ್ನು ಮುಂದಿಟ್ಟುಕೊಂಡು ಮಾತಾಡಬೇಕಾದ ಅಂಶ ಮತ್ತೊಂದೇ ಇದೆ.

ಯಾರಿಗೆಷ್ಟು ಪಾಲು?
ಹೆಂಗಸರಿಗೆ ನಿರಾಕರಿಸಲ್ಪಟ್ಟಿರುವ ಹಲವಾರು ಹಕ್ಕುಗಳಲ್ಲಿ ಲೈಂಗಿಕತೆಯ ಹಕ್ಕೂ ಒಂದು ಎಂದು ಧಾರಾಳವಾಗಿ ಹೇಳಬಹುದು. ಅಥವಾ, ಹೆಂಗಸರು ಲೈಂಗಿಕತೆಯನ್ನು ನಿರಾಕರಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದೂ ಹೇಳಬಹುದು. ಯಾಕೆಂದರೆ ‘ಸೆಕ್ಸ್ ’, ಹೆಂಗಸರು ಉಚ್ಚರಿಸಲೂ ಬಾರದ ಪದ. ಒಂದೊಮ್ಮೆ ಹೆಂಡತಿ ತನ್ನ ವಾಂಛೆಯನ್ನು ಗಂಡನಲ್ಲಿ ತೋರಿಕೊಂಡರೆ ಆಕೆಯನ್ನು ಅಸಭ್ಯಳೆನ್ನುವಂತೆ ನೋಡಲಾಗುತ್ತದೆ. ಆಕೆ ಮುಕ್ತವಾಗಿ ಸೆಕ್ಸ್ ಅನ್ನು ಬಯಸುವಂತಿಲ್ಲ. ಹಾಗೆಯೇ ತನ್ನ ಆರೋಗ್ಯ, ಖಿನ್ನತೆ ಅಥವಾ ಮನೆವಾಳ್ತೆಯ ತಲೆಬಿಸಿಗಳಿಂದಾಗಿ ಗಂಡನೊಂದಿಗೆ ಸೆಕ್ಸ್ ನಿರಾಕರಿಸಿದರೆ ಆಕೆಯನ್ನು ಅವಿಧೇಯಳೆಂಬಂತೆ ನೋಡಲಾಗುತ್ತದೆ. ಅವಳು ಗಂಡನನ್ನು ವಂಚಿಸುತ್ತಿದ್ದಾಳೆಂದು ಅನುಮಾನಿಸಲಾಗುತ್ತದೆ. ಈ ನಿಟ್ಟಿನಿಂದ ಸೆಕ್ಸ್ ಹೆಣ್ಣು ಬಯಸಲೂಬಾರದ, ತಿರಸ್ಕರಿಸಲೂಬಾರದ ಸಂಗತಿ ಎನ್ನಬಹುದು.
ಸಾಮಾನ್ಯವಾಗಿ ಹೆಂಗಸರು ದಾಂಪತ್ಯದಲ್ಲಿ ಸೆಕ್ಸ್ ತಮಗೆ ತೃಪ್ತಿ ನೀಡುತ್ತಿದೆಯೇ ಇಲ್ಲವೇ ಎಂಬುದನ್ನು ಆಪ್ತರೊಡನೆ ಡಿಸ್ಕಸ್ ಮಾಡಲೂ ಹಿಂಜರಿಯುತ್ತಾರೆ. ಸಿನಿಮಾಗಳಲ್ಲಿ ತೋರಿಸುವಂತೆ ಮಲ್ಲಿಗೆ ಹೂ ಮುಡಿದು ಉಂಗುಷ್ಟದಿಂದ ನೆಲೆ ಕೆರೆಯುತ್ತಾ ನಿಂತುಬಿಟ್ಟರೆ ಅರ್ಥ ಮಾಡಿಕೊಳ್ಳುವಷ್ಟು ಸೂಕ್ಷ್ಮತೆ ಗಂಡಸರಿಗೆ ಇರುವುದಿಲ್ಲ. ಅಲ್ಲದೆ, ಸೆಕ್ಸ್ ಗಂಡ ಬಯಸಿದಾಗ ಮಾತ್ರ ನಡೆಯಬೇಕಿರುವ ಪ್ರಕ್ರಿಯೆ ಎಂಬ ಸಾಂಪ್ರದಾಯಿಕ ಮನೋಭಾವವೂ ಇಲ್ಲಿ ಕೆಲಸ ಮಾಡುತ್ತದೆ. ಹೆಂಡತಿಯ ಋತು ಸಮಸ್ಯೆ, ಆರೋಗ್ಯ, ಮೂಡ್ – ಇವೆಲ್ಲ ನಗಣ್ಯ ವಿಷಯಗಳಾಗಿಬಿಡುತ್ತವೆ.

ಲೀಗಲ್ ರೇಪ್
ಹೆಣ್ಣಿನ ಸಮ್ಮತಿ ಇಲ್ಲದೆ ನಡೆಸುವ ಸೆಕ್ಸ್ ಅನ್ನು ರೇಪ್ ಅನ್ನಬಹುದಾದರೆ, ಮದುವೆಯಾದ ಬಹುತೇಕ ಹೆಣ್ಣುಮಕ್ಕಳು ಪ್ರತಿನಿತ್ಯವೂ ‘ಲೀಗಲ್ ರೇಪ್’ಗೆ ಒಳಗಾಗುತ್ತಲೇ ಇರುತ್ತಾರೆ ಅನ್ನುವುದು ಬಹಳ ಹಳೆಯ ಅಬ್ಸರ್ವೇಷನ್. ಆದರೆ ಇದಕ್ಕೆ ಪರಿಹಾರ ಮಾತ್ರ ಈ ಕ್ಷಣಕ್ಕೂ ದೊರೆತಿಲ್ಲ. ಹಿಂದಿನ ದಿನಗಳಲ್ಲಿ ಬಹ್ವಂಶ ಹೆಂಗಸರಿಗೆ ತಾವು ಸೆಕ್ಸ್‌ಗೆ ಅಸಮ್ಮತಿ ತೋರಬಹುದು ಅಥವಾ ಒಳಗಿಂದೊಳಗೆ ಅಸಮಾಧಾನ ಪಟ್ಟುಕೊಳ್ಳಬಹುದು ಎಂಬುದೂ ತಿಳಿದಿರಲಿಲ್ಲ. ಇಂದಿನವರು ಕೊನೆಯ ಪಕ್ಷ ನಮಗೇನು ಬೇಕು, ಏನು ಬೇಡ ಎಂದಾದರೂ ಅರಿತುಕೊಳ್ಳಬಲ್ಲವರಾಗಿದ್ದಾರೆ. ನಡೆಯುತ್ತದೋ ಇಲ್ಲವೋ, ತಮ್ಮ ಮಟ್ಟಿನ ಪ್ರತಿರೋಧವನ್ನು ತೋರಬಲ್ಲವರಾಗಿದ್ದಾರೆ ಎನ್ನುವುದೇ ಸಮಾಧಾನ.
ಇಷ್ಟ ಇಲ್ಲದ ತಿಂಡಿಯನ್ನು ಮುಲಾಜಿಲ್ಲದೆ ಬೇಡ ಎಂದುಬಿಡುವ ನಾವು, ಇಷ್ಟವಿಲ್ಲದ ಸೆಕ್ಸ್ ಅನ್ನು ಯಾಕಾದರೂ ಒಪ್ಪಿಕೊಳ್ಳಬೇಕು? ಇಂಥ ನಿಲುವಿನ ಪ್ರಶ್ನೆಗಳು ದಾಂಪತ್ಯದ ತಳಪಾಯವನ್ನು ಅಲುಗಿಸುತ್ತವೆ ಎನ್ನುವುದೇನೋ ನಿಜ. ಆದರೆ ಎಲ್ಲ ಸಂದರ್ಭದಲ್ಲಿಯೂ ಹೆಂಗಸರೇ ಕಾಂಪ್ರೊಮೈಸ್ ಆಗಬೇಕು, ಧರ್ಮ, ಸಂಸ್ಕೃತಿ, ದಾಂಪತ್ಯ, ಕುಟುಂಬ- ಈ ಯಾವುದನ್ನು ಉಳಿಸಿಕೊಂಡು ಪರಂಪರೆಯನ್ನು ಸಾಗಿಸಿಕೊಂಡು ಹೋಗಬೇಕಾದರೂ ಹೆಂಗಸರೇ ಬಲಿಯಾಗಬೇಕು ಅಂತ ಬಯಸುವುದು ಮಾತ್ರ ಅನ್ಯಾಯ.
ಇಷ್ಟಕ್ಕೂ ಹೆಂಡತಿಯೊಂದಿಗೆ ಈ ನಿಟ್ಟಿನಲ್ಲಿ ಸಹಕರಿಸದೆ ಬ್ರಹ್ಮಚಾರಿಗಳಂತೆ ಇರುವ, ಸಮಾಜಕ್ಕೋ ಅಧ್ಯಾತ್ಮಕ್ಕೋ ಮುಡಿಪಾದ ಗಂಡಸರನ್ನು ನಾವು ಪೂಜ್ಯ ಭಾವನೆಯಿಂದ ಕಾಣುತ್ತೇವೆ.  ಅವರು ಕಾಮವನ್ನು ಗೆದ್ದವರೆಂದು ಗೌರವಿಸುತ್ತೇವೆ. ಆದರೆ ಮದುವೆಯ ನಂತರ ತಮ್ಮದೇ ಆಯ್ಕೆಯಿಂದ ಬ್ರಹ್ಮಚರ್ಯ ಅನುಸರಿಸುತ್ತೇನೆ, ಸಮಾಜ ಕಾರ್ಯಕ್ಕೆ ತನ್ನನ್ನು ಕೊಟ್ಟುಕೊಳ್ಳುತ್ತೇನೆ ಎಂದು ಹೊರಡುವ ಎಷ್ಟು ಹೆಂಗಸರನ್ನು ನಾವು ಗೌರವಿಸಿದ್ದೇವೆ? ಹೋಗಲಿ, ಅಂತಹದೊಂದು ನಿರ್ಧಾರಕ್ಕೆ ಅನುವು ಮಾಡಿಕೊಟ್ಟ ಗಂಡಸರ ಸಂಖ್ಯೆಯಾದರೂ ಎಷ್ಟಿದೆ!?

ಶೃಂಗಾರ ಸಮರಸ
ದಾಂಪತ್ಯದಲ್ಲಿ ಸೆಕ್ಸ್ ಗಂಡ ಹೆಂಡತಿಯರನ್ನು ಆಪ್ತವಾಗಿ ಬೆಸೆದಿಡುವ ಮುಖ್ಯ ಸೂತ್ರ. ಸೆಕ್ಸ್ ಇಲ್ಲದ ಮದುವೆ, ಮದುವೆಯಾದರೂ ಹೇಗೆ ಆದೀತು? ಆದರೆ ಪ್ರತಿಯೊಂದರಲ್ಲಿ ಇರಬೇಕಾದಂತೆ ಇಲ್ಲಿಯೂ ಸಮಾನತೆ ಇರಬೇಕು. ಪುರಾತನ ಸಾಹಿತ್ಯಕೃತಿ ಕಾಮಸೂತ್ರದಲ್ಲಿ ಹೇಳಿರುವಂತೆ ಗಂಡ ಹೆಂಡತಿಯರಿಬ್ಬರ ಬಯಕೆ, ಆಯ್ಕೆಗಳಿಗೆ ಸಮಾನ ಮನ್ನಣೆ ಇರಬೇಕು. ಮಂಚದ ಮೇಲೆ ಹೆಣ್ಣು ತನ್ನ ಬೇಕು- ಬೇಡಗಳನ್ನು ಎಗ್ಗಿಲ್ಲದೆ ಹೇಳಿಕೊಳ್ಳುವ ಮುಕ್ತತೆ ಇರಬೇಕು. ಆಗಷ್ಟೆ ದಾಂಪತ್ಯ ಅರ್ಥಪೂರ್ಣವಾಗುತ್ತದೆ.
ಸಂಗಾತಿಯಿಂದ ದೇಹದ ಕಾಮನೆಯನ್ನ ಪೂರೈಸಿಕೊಳ್ಳುವ ಬಯಕೆ ಸಾಮಾನ್ಯವೇ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ದೊರಕದಿದ್ದರೆ ಎಲ್ಲಿ ತಪ್ಪಾಗಿದೆ, ಏನು ತೊಂದರೆಯಾಗಿದೆ ಎನ್ನುವುದನ್ನ ಗಂಡ ಹೆಂಡತಿ ಕುಳಿತು ಚರ್ಚಿಸಬೇಕು. ವೈದ್ಯರು ಅಥವಾ ಆಪ್ತಸಲಹೆಗಾರರ ಬಳಿ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕು. ಕೂತು ಮಾತಾಡುವುದರಿಂದ ಬಗೆಹರಿಯದೆ ಇರುವುದು ಯಾವುದಿದೆ? ಹೆಣ್ಣು ಗಂಡುಗಳಲ್ಲಿ ಪರಸ್ಪರ ಗೌರವವೊಂದಿದ್ದರೆ ಯಾವುದೂ ಕಷ್ಟವಲ್ಲ ಅಲ್ಲವೆ?

ಅಪ್ಪನೂ ಅಮ್ಮನೂ ನೀನೇ…

ಮಗು ತಲೆ ತಗ್ಗಿಸಿ ನಿಂತುಕೊಂಡಿದೆ. ಆ ಹೊತ್ತಿನ ತನಕ ಹೀರೋ ಆಗಿ ಮೆರೀತಿದ್ದುದು ಇದ್ದಕಿದ್ದಹಾಗೆ ಭೂಮಿಗಿಳಿದು ಹೋಗಿದೆ. ಅವಮಾನಿತ ಮುಖ, ಕಣ್ಣಲ್ಲಿ ಬಿಗಿಹಿಡಿದ ನೀರ ಹನಿ. ಸಹಪಾಠಿಗಳಲ್ಲಿ ಕೆಲವರಿಗೆ ಅನುಕಂಪ, ಕೆಲವರಿಗೆ ಆತಂಕ, ಮತ್ತೆ ಕೆಲವರಿಗೆ ನಾವು ಗೆದ್ದೆವೆಂಬ ಹೆಮ್ಮೆ. ವಿಷಯ ಇಷ್ಟೇ. ಆ ಮಗುವಿನ ಮನೆಯಲ್ಲಿ `ಅಪ್ಪ’ ಇಲ್ಲ. ಅಂವ ಓಡಿಹೋಗಿದಾನೆ ಅಥವಾ ಅಮ್ಮನೇ ಮನೆಯಿಂದ ಈಚೆ ಬಂದಿದಾಳೆ. ಒಟ್ಟಿನಲ್ಲಿ ಮಗುವಿಗೆ ಅದು ಸಂಕಟದ ವಿಷಯ. ಸ್ವಂತಕ್ಕೆ ಅಪ್ಪನ ಕೊರತೆ ಕಾಡದಿದ್ದರೂ ಸುತ್ತಲಿನವರ ಜತೆ ಏಗಲಿಕ್ಕಾದರೂ ಅಪ್ಪ ಬೇಕು ಆ ಮಗುವಿಗೆ, ಅಂತಹ ಎಷ್ಟೋ ಮಕ್ಕಳಿಗೆ.
ಈವತ್ತು ಇಂತಹ ಸೀನ್ ಅಪರೂಪ. ವಿಭಜಿತ ಸಂಸಾರಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅಪ್ಪ ಅಥವಾ ಅಮ್ಮ ಜತೆಗಿಲ್ಲದಿರುವುದು ಭಾವನಾತ್ಮಕ ವಿಷಯವಾಗಷ್ಟೆ ಕೌಂಟ್ ಆಗುತ್ತಿದೆ. ಈ ಕುರಿತಂತೆ ಸಾಮಾಜಿಕ ಕೊಂಕು ಸಾಕಷ್ಟು ಮಟ್ಟಿಗೆ ತಗ್ಗಿರುವುದು ಸಮಾಧಾನದ ಸಂಗತಿ. ಇಂದು ಸುತ್ತಲಿನವರು ಮಾತು ಮೌನಗಳ ಚಿಂತೆ ಬಿಟ್ಟು, ಮಕ್ಕಳಿಗೆ ಸಂಗಾತಿಯ ಇಲ್ಲದಿರುವ ಕೊರತೆ ಕಾಡದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು.
ಹಿಂದೆಲ್ಲ ಹೆಚ್ಚಾಗಿ ಹೆಂಗಸರು ಒಂಟಿಯಾಗಿ ಮಕ್ಕಳನ್ನು ಬೆಳೆಸುವ ಪರೀಕ್ಷೆಗೆ ಒಳಗಾಗುತ್ತಿದ್ದರು. ಎರಡನೆ ಹೆಣ್ಣಿನ ಹಿಂದೆ ಹೋಗಿಯೋ, ಸಂಸಾರದಿಂದ ಓಡಿ ಸಂನ್ಯಾಸಿಯೋ ಆಗಿಬಿಡುವ ಅಪ್ಪಂದಿರು ಇಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದರು. ಮರುಮದುವೆಗಳು ಅಪರಾಧವಾಗಿದ್ದ ಕಾಲಕ್ಕೆ ಅಮ್ಮನಾದವಳೊಬ್ಬಳೇ ಮಕ್ಕಳನ್ನು ಸಾಕುವುದು ಅನಿವಾರ್ಯವಾಗಿರುತ್ತಿತ್ತು. ಕಡಿಮೆ ಅವಕಾಶಗಳು, ಸೀಮಿತ ಸವಲತ್ತುಗಳ ನಡುವೆಯೂ ಅವತ್ತಿನ ಒಂಟಿ ಅಮ್ಮಂದಿರು ತಮ್ಮ ಮಕ್ಕಳನ್ನು ದಡ ಹತ್ತಿಸುವಲ್ಲಿ ಯಶಸ್ಸು ಕಾಣ್ತಿದ್ದರು.
ಇಂದಿನ ಸ್ಥಿತಿ ಚೂರು ಬೇರೆ. ಈವತ್ತು ಸಂಸಾರ ಬಿಡುವ ಆಯ್ಕೆ, ಸದವಕಾಶ ಅಥವಾ ದುರ್ಬುದ್ಧಿಗಳು ಹೆಣ್ಣಿಗೂ ಇವೆ. ಹೆಂಗಸರಂತೆಯೇ ಗಂಡಸರು ಕೂಡ ಒಂಟಿಯಾಗಿ ಮಕ್ಕಳನ್ನು ಸಾಕುವುದರ ಅನುಭವ ಪಡೆಯುತ್ತಿದ್ದಾರೆ. ಗಂಡು- ಹೆಣ್ಣುಗಳಿಬ್ಬರಿಗೂ ಮರುಮದುವೆಯ ಸಾಕಷ್ಟು ಅವಕಾಶಗಳಿವೆ. ಹಾಗಿದ್ದೂ ಏಕಾಂಗಿತನದ ಸುಖಕ್ಕೆ ಸೋತಿರುವ ಇಂದಿನ ಪೀಳಿಗೆ ಒಮ್ಮೆ ಸಂಸಾರ ಮುರಿದ ನಂತರ ಮತ್ತೆ ಅದರ ಜಾಲಕ್ಕೆ ಬೀಳಲು ಒಪ್ಪುತ್ತಿಲ್ಲ. ಆದ್ದರಿಂದ ಸಿಂಗಲ್ ಪೇರೆಂಟಿಂಗ್ ಇಂದು ಸಾಮಾನ್ಯ ಸಂಗತಿ ಎನ್ನುವಂತಾಗಿಬಿಟ್ಟಿದೆ. ಸಮಾಜದ ಒಟ್ಟು ಮನಸ್ಥಿತಿಯ ಬದಲಾವಣೆ ಕೂಡ ಅದಕ್ಕೆ ಪೂರಕವಾಗಿ ಸಹಕರಿಸುತ್ತಿದೆ. ಇನ್ನು ಮಕ್ಕಳು ಒಂಟಿತನದ ಭಾವನೆ ಬೆಳೆಸಿಕೊಳ್ಳದಂತೆ ಕಾಳಜಿ ವಹಿಸುವುದಷ್ಟೆ ಮುಂದುಳಿಯುವ ಚಾಲೆಂಜ್.

ಕಲಿಕೆಗೆ ಕಾಲ
ಸಿಂಗಲ್ ಪೇರೆಂಟ್ ಆಗುವುದು ಅಂದರೆ ಹೆಚ್ಚುವರಿ ಜವಾಬ್ದಾರಿ ಹೊತ್ತಂತೆ ಎಂದು ಕೆಲವರು ಆತಂಕಪಡುತ್ತಾರೆ. ಲೈಫಲ್ಲಿ ಅಚಾನಕ್ ಎದುರಾಗುವ ಯಾವ ತಿರುವನ್ನೂ ನೆಗೆಟಿವ್ ಆಗಿ ನೋಡಬಾರದು. ಎಂಥದೋ ಮನಸ್ಥಿತಿ- ಪರಿಸ್ಥಿತಿಗಳ ಫಲವಾಗಿ ಏಕಾಂಗಿ ಬದುಕು ಸಿಕ್ಕಿರುತ್ತದೆ. ಜೊತೆಯಲ್ಲಿ ಸಂಗಾತಿ ಬಿಟ್ಟುಹೋದ ಮಗುವಿದೆ. ಈ ಸನ್ನಿವೇಶದಲ್ಲಿ ಜವಾಬ್ದಾರಿ ಹೊತ್ತವರು ಅಪ್ಪ ಅಮ್ಮ ಎರಡೂ ರೋಲ್‌ಗಳನ್ನು ನಿಭಾಯಿಸುತ್ತ ಬೆಳೆಸುವುದು ಕಷ್ಟವೇ. ನಿಜ ಏನೆಂದರೆ, ಹಾಗೆ ಮತ್ತೊಂದು ಪಾತ್ರವನ್ನು ನಿಭಾಯಿಸಬೇಕಾದ ಅಗತ್ಯವಿಲ್ಲ. ಏನಿದ್ದರೂ ಅಮ್ಮ ಅಪ್ಪನಂತೆ ಹಾಗೂ ಅಪ್ಪ ಅಮ್ಮನಂತೆ ನಟಿಸಬಲ್ಲರು ಹೊರತು ಯಥಾವತ್ ಅವರೇ ಆಗಿ ವರ್ತಿಸಲು ಸಾಧ್ಯವೇ ಇಲ್ಲ.  ಮೊದಲು ಇಷ್ಟನ್ನು ತಿಳಿದುಕೊಂಡರೆ, ಮುಂದಿನ ಹೆಜ್ಜೆಗಳು ಸಲೀಸು.
ಸಿಂಗಲ್ ಪೇರೆಂಟಿಂಗ್ ಅನ್ನು ಶಿಕ್ಷೆಯಾಗಿ ತೆಗೆದುಕೊಳ್ಳದೆ, ಅದನ್ನು ಮಗುವಿನೊಟ್ಟಿಗೆ ನಮ್ಮ ವ್ಯಕ್ತಿತ್ವವನ್ನೂ ರೂಪಿಸ್ಕೊಳ್ಳುವ ಅವಕಾಶವನ್ನಾಗಿ ನೋಡಬೇಕು. ಇದು ನಮ್ಮಿಂದ ಹೆಚ್ಚಿನ ಅವೇರ್‌ನೆಸ್ ಅನ್ನು, ಕಮಿಟ್‌ಮೆಂಟ್ ಅನ್ನು ಬೇಡುವಂಥ ಪ್ರಕ್ರಿಯೆ. ಅಪ್ಪ ಅಮ್ಮ ಇಬ್ಬರೂ ಇರುವ ಮನೆಗಳಲ್ಲಿ  ಮಗುವಿನ ಬೆಳವಣಿಗೆಯ ಲೋಪ ದೋಷಗಳನ್ನು ಪರಸ್ಪರರ ತಲೆಗೆ ಕಟ್ಟಿ ನುಣುಚಿಕೊಳ್ಳಬಹುದು. ಆದರೆ ಸಿಂಗಲ್ ಪೇರೆಂಟ್ ವಿಷಯದಲ್ಲಿ ಹಾಗಿಲ್ಲ. ಮಗುವಿನ ಒಳಿತಿಗೂ ಕೆಡುಕಿಗೂ ಅವರೇ ಜವಾಬುದಾರರು. ಎಲ್ಲಿದ್ದರೂ ಬೆಳೆಯುವ ಮಕ್ಕಳಿಗೆ ಬೇಕಾದ ಆಪ್ತತೆ, ಶಿಕ್ಷಣ ಮತ್ತು ಸನ್ನಡತೆಯ ಪಾಠಗಳು- ಇವಿಷ್ಟನ್ನು ಒದಗಿಸಿಕೊಟ್ಟರೆ `ಬೆಸ್ಟ್ ಸಿಂಗಲ್ ಪೇರೆಂಟ್’ ಅನ್ನುವ ಹೆಮ್ಮೆ ದಕ್ಕಿಸಿಕೊಳ್ಳಬಹುದು. ಮಾತು ಇಲ್ಲಿ ಪೇರೆಂಟ್ ಮತ್ತು ಮಗುವನ್ನು ಬೆಸೆಯುವ ಮ್ಯಾಜಿಕ್ ಬಾಂಡ್‌ನಂತೆ ಕೆಲಸ ಮಾಡುತ್ತದೆ. ಮನೆಯ ಪ್ರತಿ ಸಂಗತಿಯನ್ನೂ ಮಗುವಿನೊಂದಿಗೆ ಚರ್ಚಿಸುವುದು, ಮಕ್ಕಳ ಅಭಿಪ್ರಾಯಕ್ಕೆ, ಸಲಹೆಗೆ ಬೆಲೆ ಕೊಡುತ್ತಾ ತಾವೆಷ್ಟು ಮನ್ನಣೆ ನೀಡುತ್ತೇವೆ ಎಂದು ತಿಳಿಯಪಡಿಸುತ್ತಿರುವುದು- ಇವೆಲ್ಲ ಇಲ್ಲಿ ಮುಖ್ಯವಾಗುತ್ತದೆ. ಬೆಳೆಯುತ್ತಿರುವ ಮಕ್ಕಳ ಖಾಸಗಿ ದಿನಚರಿಯನ್ನು ಹಕ್ಕಿನಿಂದ ಕೇಳುವಂತೆಯೇ ತಮ್ಮ ಖಾಸಾ ಸಂಗತಿಗಳನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುವುದು ಕೂಡ ಅವರೊಡನೆ ಆಪ್ತತೆ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಮಿಥ್‌ಗಳಿಂದ ದೂರ
ಸಿಂಗಲ್ ಪೇರೆಂಟಿಂಗ್ ಅನ್ನು `ಆಯ್ಕೆ’ ಮಾಡಿಕೊಳ್ಳುವ ಸನ್ನಿವೇಶ ನಮ್ಮ ದೇಶದಲ್ಲಿ ಇನ್ನೂ ಇಲ್ಲ. ತೀರ ಅಪರೂಪಕ್ಕೆ ಸೆಲೆಬ್ರಿಟಿಗಳು ಮದುವೆಯಿಲ್ಲದೆ ಮಕ್ಕಳನ್ನು ಪಡೆದು ಗೌರವದಿಂದಲೇ ಅವರನ್ನು ಬೆಳೆಸಿದ ಉದಾಹರಣೆಗಳಿವೆ ಅಷ್ಟೆ. ಇಲ್ಲಿ ಸಿಂಗಲ್ ಪೇರೆಂಟಿಂಗ್ ಮದುವೆ ಮುರಿತ ಅಥವಾ ಸಂಗಾತಿಯ ಮರಣದ ನಂತರದ ಅನಿವಾರ್‍ಯ ಪಾತ್ರ. ಪ್ರಿಕಾಶನ್ ಇಲ್ಲದೆ ಬಂದೆರಗುವ ಇದಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವಾಗಲೇ ಭಯ ಕಾಡತೊಡಗಿರುತ್ತದೆ. ಒಂಟಿಯಾಗಿ ಬೆಳೆಯುವ ಮಕ್ಕಳು ದಾರಿ ತಪ್ಪುತ್ತಾರೆ, ಮಾನಸಿಕವಾಗಿ ಕುಗ್ಗಿಹೋಗುತ್ತಾರೆ ಇತ್ಯಾದಿ ಮಿಥ್‌ಗಳು ಹೆದರಿಸುತ್ತವೆ. ವಾಸ್ತವ ಹಾಗಿಲ್ಲ. ಸಿಂಗಲ್ ಪೇರೆಂಟ್ ಕೇರ್‌ನಲ್ಲಿ ಬೆಳೆಯುವ ಮಕ್ಕಳು ಕೂಡ ಎಲ್ಲ ಮಕ್ಕಳಂತೆ ನಾರ್ಮಲ್ ಇರುವರು. ಸಹಜ ಸಂಸಾರದಲ್ಲಿ ಬೆಳೆದ ಮಕ್ಕಳು ದಾರಿ ತಪ್ಪಿದಾಗ ಅದು ವಿಶೇಷವಾಗಿ ಗುರುತಿಸಲ್ಪಡುವುದಿಲ್ಲ ಅಷ್ಟೆ.
ಹಾಗೆ ನೋಡಿದರೆ ಸಿಂಗಲ್ ಪೇರೆಂಟಿಂಗ್‌ನಲ್ಲಿ ಮಕ್ಕಳನ್ನು ಹೆಚ್ಚು ಸ್ವತಂತ್ರರೂ ಸ್ವಾಭಿಮಾನಿಗಳೂ ಆಗಿ ಬೆಳೆಸಬಹುದು. ಅದು ಮಕ್ಕಳನ್ನು `ಬೆಳೆಸುವ’ ಪ್ರಾಸೆಸ್‌ಗಿಂತ ಅವರೊಟ್ಟಿಗೆ ಬದುಕನ್ನು `ಶೇರ್ ಮಾಡಿಕೊಳ್ಳುವ’ ಪ್ರಕ್ರಿಯೆಯಾಗಬೇಕು. ಆಗ ಪೇರೆಂಟ್ ಮತ್ತು ಮಗು ಇಬ್ಬರ ಬದುಕೂ ಉಲ್ಲಾಸ ಹಾಗೂ ಒಳ್ಳೆಯ ಬೆಳವಣಿಗೆಗಳಿಂದ ಶ್ರೀಮಂತವಾಗುತ್ತದೆ. ಸಿಂಗಲ್ ಅಮ್ಮಂದಿರ ವಿಷಯ ಬಂದಾಗ ಖರ್ಚು ನಿರ್ವಹಣೆಯ ಆತಂಕವೇ ದೊಡ್ಡದು ಎನಿಸುವುದುಂಟು. ಈ ವರೆಗೆ ಅದನ್ನು ಯಶಸ್ವಿಯಾಗಿ ಮೀರಿದವರ ಉದಾಹರಣೆಗಳು ಈ ನಿಟ್ಟಿನಲ್ಲಿ ಸ್ಫೂರ್ತಿಯಾಗಬಲ್ಲವು. ಇಂತಹ ಸಂದರ್ಭಗಳಲ್ಲಿ ಮಕ್ಕಳಲ್ಲಿ ಕೀಳರಿಮೆ ಮೂಡದಂತೆ, ಬದುಕಿನ ಸೂಕ್ಷ್ಮಗಳನ್ನು ಗೊತ್ತುಮಾಡಿಕೊಳ್ಳುವಂತೆ ಜವಾಬ್ದಾರಿಯಿಂದ ಬೆಳೆಸುವುದು ಅಗತ್ಯ.
ಇಂದು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿಂಗಲ್‌ಪೇರೆಂಟ್ ಸಮುದಾಯಗಳು, ಕ್ಲಬ್‌ಗಳು ಅಸ್ತಿತ್ವದಲ್ಲಿವೆ. ಇಲ್ಲಿ ಪೆರೆಂಟ್‌ಗಳು ಪರಸ್ಪರ ಕಲೆತು ತಮ್ಮ ಅನುಭವ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಏಕಾಕಿಯಾಗಿ ಮಕ್ಕಳನ್ನು ಬೆಳೆಸುವಾಗ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳೂ ಇಲ್ಲಿ ಇರುತ್ತವೆ. ಅನಿವಾರ್ಯ ಸಂದರ್ಭಗಳಲ್ಲಿ ಸಮುದಾಯದ ಇದರ ಸದಸ್ಯರು ತಮ್ಮ ಮಗುವನ್ನು ಮತ್ತೊಬ್ಬ ಸಿಂಗಲ್ ಪೇರೆಂಟ್ ಮನೆಯಲ್ಲಿ ಬಿಡಬಹುದಾದ ಅವಕಾಶಗಳೂ ಇಲ್ಲಿರುತ್ತವೆ. ಒಬ್ಬರಿಗೊಬ್ಬರು ಆಸರೆಯಾಗುತ್ತಾ ಸಿಂಗಲ್ ಪೇರೆಂಟಿಂಗ್ ಅನ್ನು ಹೊರೆಯಾಗಿಸಿಕೊಳ್ಳದೆ ನಿಭಾಯಿಸುವ ಅನುಕೂಲವನ್ನು ಇಂತಹ ಸಮುದಾಯಗಳು ಮಾಡಿಕೊಡುತ್ತವೆ. ಈ ನೆಟ್‌ವರ್ಕ್ ಇನ್ನೂ ಚಿಗುರಿನ ಹಂತದಲ್ಲಿದ್ದು ಮತ್ತಷ್ಟು ಚಾಚಿಕೊಳ್ಳಬೇಕಿದೆ.

ಎರಡನೇ ಮದ್ವೆ ಗೆಲ್ಲುತ್ತಾ?

ಮ್ಯಾಟ್ರಿಮೊನಿಯಲ್  ವೆಬ್‌ಸೈಟಿನ ಮೂಲೆಯಲ್ಲೊಂದು ಜಾಹೀರಾತು ಪಿಳಿಪಿಳಿ ಅನ್ನುತ್ತಿದೆ.
`ನನ್ ಹೆಸ್ರು ಅನಾಮಿಕಾ. ಡೈವೋರ್ಸಿ. ವಯಸ್ಸು ೩೨. ರೆಪ್ಯುಟೆಡ್ ಕಂಪೆನಿ ಒಂದ್ರಲ್ಲಿ ಕೆಲಸ ಮಾಡ್ತಿದೀನಿ. ನಂಗೆ ನನ್ನ ಮಗೂನ ಅಕ್ಸೆಪ್ಟ್ ಮಾಡ್ಕೊಳ್ಳಬಲ್ಲ, ಒಳ್ಳೆ ಮನಸ್ಸಿನ, ಹ್ಯಾಂಡ್‌ಸಮ್ ಆಗಿರೋ ಗಂಡು ಬೇಕು. ಕ್ಯಾಸ್ಟ್  ನೋ ಬಾರ್.  ಮತ್ತೆ ಮದ್ವೆಯಾಗಿ ಲೈಫ್‌ನಲ್ಲಿ ಸೆಟಲ್ ಆಗ್ಬೇಕು ಅನ್ನೋದು ನನ್ನಾಸೆ ಅಷ್ಟೆ…’ ಅನ್ನುತ್ತಾ ಫೋಟೋ ಅಟ್ಯಾಚ್ ಮಾಡಿರುವ ಹೆಣ್ಣು ನಿಜಕ್ಕೂ ಚೆಂದವಿದ್ದಾಳೆ. ನಗುಮುಖದ ಒಳಗೆ ಎಲ್ಲೋ ನೋವಿನ ಎಳೆ ಕಂಡಂತಾಗುತ್ತೆ. ಅವಳ ಹುಡುಕಾಟ ಗೆದ್ದು, ಒಳ್ಳೆ ಗಂಡು ಕೈಹಿಡಿಯಲಿ ಅನ್ನೋ ಹಾರೈಕೆ ತಾನಾಗಿ ಹೊಮ್ಮಿದರೆ ಆಶ್ಚರ್ಯವೇನಿಲ್ಲ. ಇಷ್ಟು ಲಕ್ಷಣವಾಗಿರೋ ಹುಡುಗಿಯ ಮೊದಲನೆ ಗಂಡ ಅದು ಹೆಂಗೆ ಬಿಟ್ಟನಪ್ಪಾ!? ಅನ್ನುವ ಯೋಚನೆಯೂ ಸುಳಿದುಹೋಗದೆ ಇರದು. ಏನು ಮಾಡೋದು? ಮದುವೆ ಸ್ವರ್ಗದಲ್ಲಿ ನಿಶ್ಚಯವಾದ ಹಾಗೆ, ಡೈವೋರ್ಸ್‌ಗಳು ನರಕದಲ್ಲಿ ನಿಶ್ಚಯವಾಗಿಬಿಟ್ಟಿರುತ್ತವೆ.
ಹೆಣ್ಣುಮಕ್ಕಳ ಬದುಕು ಶುರುವಾಗೋದು ಮದುವೆಯ ನಂತರ ಅನ್ನೋದು ಹಳೆ ಮಾತು. ಹಾಗಂತ ತಪ್ಪು ಮಾತೇನಲ್ಲ. ಇವತ್ತಿನ ಹೆಣ್ಣುಗಳು  ಓದು, ದುಡಿಮೆ, ಸಾಧನೆಗಳ ಬೇರೆ ಬೇರೆ ದಿಕ್ಕಿನಲ್ಲಿ ಬದುಕು ಕಂಡುಕೊಳ್ಳುತ್ತಿದ್ದರೂ ಮದುವೆಗೆ ಕೊಡುವ ಇಂಪಾರ್ಟೆನ್ಸ್ ಕಡಿಮೆ ಏನೂ ಆಗಿಲ್ಲ. ಎಲ್ಲ ಯಶಸ್ಸುಗಳ ಜತೆಗೆ ಅಚ್ಚುಕಟ್ಟಾದ ಮನೆ, ಬೆಚ್ಚಗಿನ ಸಂಸಾರಕ್ಕೆ ನಮ್ಮ ಆದ್ಯತೆ ಇದ್ದೇ ಇದೆ. ಆದರೆ ಈ ಕನಸು ಕೈಗೂಡದೆ ಹೋದಾಗ? ಮದುವೆಯೇ ಬದುಕಾಗಿದ್ದ ದಿನಗಳಲ್ಲಿ, ಎಲ್ಲವೂ ಮುಗಿದುಹೋಯ್ತು ಅನ್ನೋ ನಿಶ್ಚಯಕ್ಕೆ ಬಂದುಬಿಡ್ತಿದ್ದರು. ಈಗಿನ ಸ್ಥಿತಿ ಗತಿ ಅಷ್ಟು ಸಂಕುಚಿತವಾಗಿಲ್ಲ. ಸಮಾನತೆ, ಮೌಲ್ಯ ಇತ್ಯಾದಿಗಳ ಜತೆಗೆ ಕುಸೀತಿರೋ ಗಂಡು ಹೆಣ್ಣು ಅನುಪಾತ ಬೇರೆ ಎರಡನೆ ಮದುವೆಯ ಅವಕಾಶಗಳನ್ನ ದೊಡ್ಡ ಸಂಖ್ಯೆಯಲ್ಲಿ ಕಟ್ಟಿಕೊಡುತ್ತಿದೆ.

ಅದು ಸರಿ, ಆದ್ರೆ…
ಅವಕಾಶಗಳು ಇದ್ದೇ ಇವೆ. ಕಾಲವೂ ಬದಲಾಗಿ ಎರಡನೆ ಮದುವೆ ಕಾಮನ್ ಆಗ್ತಿದೆ. ಎಲ್ಲಾ ಸರಿ. ಆದ್ರೆ… ಈ ಸೆಕೆಂಡ್ ಮ್ಯಾರೇಜ್ ಸಕ್ಸೆಸ್ ಆಗತ್ತಾ? ಹೊಸ ಸಂಗಾತಿ, ಹೊಸತೇ ಒಂದು ಪರಿಸರ, ಸಂಬಂಧಗಳು, ಎಲ್ಲ ಸೇರಿ ಗೋಜಲಾಗಿಬಿಟ್ರೆ? ಇಂಥದೊಂದು ಆತಂಕದ ಜೊತೆಗೇ ಹೆಣ್ಣೂಮಕ್ಕಳು ಮತ್ತೆ ಮದುವೆಯಾಗೋ ಬಗ್ಗೆ  ಯೋಚಿಸ್ತಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಜಮಾನಾದಿಂದಲೂ ಗಂಡಿಗೆ ಹೆಣ್ಣು ತನ್ನೊಬ್ಬಳ ಸಂಗಾತಿಯಾಗಿರಬೇಕು ಅನ್ನುವ ಹಂಬಲ  ಇರೋದು ಮೊದಲ ಕಾರಣ. ಆದರೆ, ಇದು ತಪ್ಪು ಅಂತ ಹೇಳೋಕಾಗಲ್ಲ. ಇದು ಗಂಡಸಿನ ಇನ್‌ಬಿಲ್ಟ್ ಗುಣ. ಮೊದಲನೆಯ ಗಂಡ ಬದುಕಿಲ್ಲದೆ ಇದ್ದಾಗ ಎರಡನೆ ಮದುವೆಯಾದವರಿಗೆ ಈ ಸಮಸ್ಯೆ ಎದುರಾಗೋದು ಕಡಿಮೆ. ಡೈವೋರ್ಸ್ ನಂತರ ಮದುವೆಯಾದವರು ಸಾಮಾನ್ಯವಾಗಿ ಈ ವಿಷಯದಲ್ಲಿ ಹೊಸ ಸಂಗಾತಿಯ ಅನುಮಾನಗಳನ್ನು, ಅಸಹನೆಯನ್ನು ಎದುರಿಸಬೇಕಾಗುತ್ತೆ.
ಇಲ್ಲಿ ಮತ್ತೊಂದು ಭಾವನಾತ್ಮಕ ಸಮಸ್ಯೆಯೂ ಎದುರಾಗುತ್ತೆ. ಮಕ್ಕಳನ್ನು ಹೊಂದಿದ್ದು , ಎರಡನೆ ಮದುವೆಯ ಬಗ್ಗೆ ಯೋಚಿಸುವವರು ವಿಪರೀತ ತೊಳಲಾಟ ಅನುಭವಿಸ್ತಾರೆ. ವಯಸ್ಸಿದ್ದು, ಬದುಕಿಡೀ ಸಂಗಾತಿಯಿಲ್ಲದ ಒಂಟಿತನದಲ್ಲಿ ಕಳೆಯುವ ಯೋಚನೆಯೇ ಭಯಾನಕ ಎನಿಸುತ್ತಿರುವಾಗ, ಮಕ್ಕಳನ್ನು ಕಡೆಗಣಿಸಿ ಮದುವೆಯಾಗುವುದು ಹೇಗೆ ಎನ್ನುವ ಆತಂಕ. ಅಥವಾ ತನ್ನ ಎರಡನೆ ಮದುವೆಗೆ ಮಗು ಒಪ್ಪುತ್ತದೆಯೋ ಇಲ್ಲವೋ, ಅದು ಹೊಸ ಸಂಗಾತಿಯನ್ನು ಹೇಗೆ ಬರಮಾಡಿಕೊಳ್ಳುವುದೋ ಎನ್ನುವ ತುಮುಲ. ಇವನ್ನೆಲ್ಲ ಯೋಚಿಸಿ ಯೋಚಿಸಿಯೇ, ಅಂತಿಮವಾಗಿ ಒಂಟಿತನದ ಅನಿವಾರ್ಯತಯನ್ನೆ ಅಪ್ಪಿ ಮುಂದುವರೆಯುವವರು ಹೆಚ್ಚು.
ಹಾಗೊಮ್ಮೆ ಮಗುವನ್ನು ಒಪ್ಪಿಸಿ ಮದುವೆಯಾದರೆ ಇಂಥ ಸಮಸ್ಯೆ ಬರೋದಿಲ್ಲ ಅಂತಲ್ಲ. ಸಂಗಾತಿ ಸಹಜವಾಗಿ ತಾನೇ ಮೊದಲ ಆದ್ಯತೆಯಾಗಿರಬೇಕೆಂದು ಬಯಸುತ್ತಾನೆ. ಇತ್ತ ಮಗುವಿಗೂ ಅಮ್ಮನ ಮೊದಲ ಆದ್ಯತೆ ತಾನಾಗಿರಬೇಕೆಂಬ ನಿರೀಕ್ಷೆ ಇರುತ್ತೆ. ಮತ್ತೆ ಇವರಿಬ್ಬರಲ್ಲಿ ಯಾರು ಮೊದಲು? ಯಾರನ್ನ ಹೆಚ್ಚು ಫೋಕಸ್ ಮಾಡಬೇಕು? ಅನ್ನೋ ಗೊಂದಲದಲ್ಲಿ ಅವಳು ಹೈರಾಣಾಗುತ್ತಾಳೆ. ಈ ಗೊಂದಲ ಹೊಸ ಸಂಬಂಧದಲ್ಲಿ ಆಪ್ತತೆ ಬೆಳೆಯಲು ಅಡ್ಡಿಯಾಗುತ್ತೆ. ಇಷ್ಟು ಮಾತ್ರವಲ್ಲ, ಹಳೆ ಸಂಬಂಧದ ಬಗ್ಗೆಮತ್ತೆ ಮತ್ತೆ ಮಾತಾಡುತ್ತಲೇ ಇರುವುದು, ಆತನ ಬಗ್ಗೆ ಸಾಫ್ಟ್‌ಕಾರ್ನರ್ ವ್ಯಕ್ತಪಡಿಸೋದು ಕೂಡ ಈಗಿನ ಸಂಗಾತಿಯನ್ನ ಇರಿಟೇಟ್ ಮಾಡುತ್ತೆ.
ಹಾಗಂತ ಎರಡನೆ ಮದುವೆ ಸಕ್ಸಸ್ ಆಗೋದೇ ಇಲ್ಲ ಅಂತಲ್ಲ. ಅಥವಾ ಹಾಗೆ ಆಗುವ ಹೆಣ್ಣುಮಕ್ಕಳು ಎಲ್ಲವನ್ನೂ ಸಹಿಸ್ಕೊಂಡು ತಗ್ಗಿಬಗ್ಗಿ ನಡೀಬೇಕಂತಲೂ ಅಲ್ಲ. ಚೂರು ಜಾಣತನ, ಚೂರು ಕಾಂಪ್ರೊಮೈಸ್, ಮೊಗೆದಷ್ಟೂ ಪ್ರೀತಿ, ಬೆಟ್ಟದಷ್ಟು ಆತ್ಮವಿಶ್ವಾಸ – ಇಷ್ಟಿದ್ದರೆ ಸಾಕು. ಗಟ್ಟಿಮೇಳಕ್ಕೆ ಹೊತ್ತು ನಿಕ್ಕಿ ಮಾಡೋದೊಂದೇ ಬಾಕಿ!

ಬಹಳಷ್ಟು ಗೆದ್ದಿವೆ
ಯಾವಾಗಲೂ ಆಗೋದು ಹಾಗೇ. ಸಂಸಾರದಮಟ್ಟಿಗೆ ಗೆಲುವು ಅಷ್ಟು ಸುಲಭಕ್ಕೆ ಮನೆಮಾತಾಗೋದಿಲ್ಲ. ಅದೇನಿದ್ದರೂ ಸೋತವರ ಖಾತೆಯನ್ನ ತೆಗೆತೆಗೆದು ನೋಡುತ್ತೆ. ಮುರಿದುಬಿದ್ದ ಮನೆಗಳ ಬಗ್ಗೆ ಗಾಸಿಪ್ ಮಾಡೋದು, ಸುದ್ದಿ ಹರಡೋದು ಒಂಥರಾ ಕಡಿತದಂಥ ಖುಷಿ. ಈ ಕಾರಣದಿಂದ್ಲೇ ಗೆದ್ದು ಸುಖವಾಗಿರುವ ಎರಡನೆ ಮದುವೆಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಕಡಿಮೆ. ಜೊತೆಗೆ, ಮರುಮದುವೆಗೆ ಮುಂಚೆ ಯೋಚಿಸಬೇಕಾದ ವಿಷಯಗಳು ಕೆಲವಿದೆ. ಯಾಕಾಗಿ ನಾನು ಈ ನಿರ್ಧಾರ ತೆಗೆದ್ಕೊಳ್ತಿದ್ದೇನೆ ಅನ್ನುವುದು ಮೊದಲು ಸ್ಪಷ್ಟವಿರಬೇಕು. ಮನೆಯವರ ಒತ್ತಾಯಕ್ಕೋ ಯಾರೋ ಪ್ರಪೋಸ್ ಮಾಡಿ ಬಲವಂತ ಮಾಡಿದರೆಂದೋ ಕೊರಳೊಡ್ಡಿದರೆ, ಆಮೇಲೆ ಪಾಡು ಪಡಬೇಕಾಗುತ್ತದೆ. ಅಗತ್ಯ, ಅನಿವಾರ್ಯತೆಗಳ ಜೊತೆಗೆ, ಯಾರೊಡನೆ ಪ್ರೇಮದಿಂದಲೂ ಇರಲು ಸಾಧ್ಯವಾಗಬಹುದು ಎನ್ನಿಸುತ್ತದೆಯೋ ಅಂಥವರನ್ನೆ ಆಯ್ಕೆ ಮಾಡಿಕೊಳ್ಳಿ. ಆಯ್ಕೆಯೊಂದು ಸರಿಯಾಗಿದ್ದುಬಿಟ್ಟರೆ, ಸುಖ ಬದುಕಿನ ಕನಸು ಮುಕ್ಕಾಲು ನೆರವೇರಿದಂತೆಯೇ.
************************
ಸಕ್ಸಸ್ ಸೂಕ್ತಿ
ಚೂರು ಜಾಗ್ರತೆಯಾಗಿ  ಹೆಜ್ಜೆಯಿಟ್ಟರೆ ಎರಡನೆ ಮದುವೆಯನ್ನ ಸಿಹಿಯಾಗಿಸ್ಕೊಳ್ಳಬಹುದು. ಬಹಳಷ್ಟು ಬಾರಿ ನಮ್ಮ ಸೆಕೆಂಡ್ ಚಾಯ್ಸೇ ಗೆದ್ದಿರುತ್ತೆ ಅಲ್ವೆ?
* ಬದುಕಿನ ಪ್ರತಿ ಕ್ಷಣ ಹೊಸತು. ಹೊಸ ಸಂಬಂಧ, ಹೊಸ ಸಂಗಾತಿಯೊಂದಿಗೆ ಬದುಕನ್ನೂ ನವೀಕರಿಸಿಕೊಳ್ಳಿ. ಮುಗಿದುಹೋದ ಬದುಕನ್ನ ನೆನಪಿನ ಕೋಶದಿಂದ ಪೂರ್ತಿ ಖಾಲಿ ಮಾಡಿ.
* ಮಗು ಇದ್ದರೆ, ಮರುಮದುವೆಗೆ ಮುಂಚೆ ನಿಮ್ಮ ಸಂಗಾತಿ ಹಾಗೂ ಮಗು- ಇಬ್ಬರಿಗೂ ಒಡನಾಟಗಳನ್ನ ಏರ್ಪಡಿಸಿ. ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲಿ. ಅವರಿಬ್ಬರಲ್ಲಿ ಯಾವ ಹೊಂದಾಣಿಕೆಯೂ ಸಾಧ್ಯವಾಗ್ತಿಲ್ಲ ಅನ್ನಿಸಿದರೆ, ಮದುವೆ ಯೋಚನೆ ಬಿಟ್ಟುಬಿಡಿ. ಯಾಕಂದರೆ ಆಮೇಲಿನ ಸಂಸಾರ ಖಂಡಿತ ಬಿರುಕು ಬಿಡುವುದು. ಮುರಿದ ಮನೆಯಲ್ಲಿ ಬದುಕೋದಕ್ಕಿಂತ ಕಟ್ಟದೆ ಇರುವ ಮನೆಯಲ್ಲಿ ಬದುಕೋದೇ ಒಳ್ಳೆಯದು.
* ಎರಡನೆ ಮದುವೆಗೆ ಸಂಗಾತಿಯನ್ನ ಆಯ್ದುಕೊಳ್ಳುವಾಗ ಏನೆಲ್ಲವನ್ನು ಪರಿಗಣಿಸಿದ್ದೀರಿ? ಪ್ರಾಮಾಣಿಕವಾಗಿ ಯೋಚಿಸಿ. ನಿರೀಕ್ಷೆಗಳಿಗೆ ಕಡಿವಾಣ ಇರಲಿ. ಮಿ.ರೈಟ್ ಸ್ವರ್ಗದಲ್ಲೂ ಸೃಷ್ಟಿಯಾಗೋದಿಲ್ಲ. ಮೊದಲ ಸಂಗಾತಿಯಲ್ಲಿದ್ದ ಕೊರತೆಗಳನ್ನೆಲ್ಲ ಇವರು ತುಂಬಿಕೊಡಬೇಕು ಅಂತ ಬಯಸೋದು ಪೆದ್ದುತನವಷ್ಟೆ.

ಅಭಿವ್ಯಕ್ತಿಗಿರಲಿ ಅವಕಾಶ…

ಇದನ್ನ ಅಪ್ಪ ಮಗಳ ಕಥೆಯಿಂದ ಶುರು ಮಾಡೋಣ.
ಆತನಿಗೆ ಮಗಳೆಂದರೆ ತುಂಬಾ ಪ್ರೀತಿ. ತಾನು ಏನು ಮಾಡಿದರೂ ಅವಳ ಒಳ್ಳೆಯದಕ್ಕೇ ಅನ್ನುವ ನೆಚ್ಚಿಕೆ. ಒಮ್ಮೆ ಅವನು ಮಗಳನ್ನ ಕರೆದುಕೊಂಡು ಅಮ್ಯೂಸ್‌ಮೆಂಟ್‌ಪಾರ್ಕಿಗೆ ಹೊರಡ್ತಾನೆ. ದಾರಿಯಲ್ಲಿ ಒಂದು ದೊಡ್ಡ ಐಸ್‌ಕ್ರೀಮ್ ಪಾರ್ಲರ್. ಅದರ ಹತ್ತಿರ ಬರ್ತಿದ್ದ ಹಾಗೇ ಮಗಳು, `ಅಪ್ಪಾ…’ ಅನ್ನುತ್ತಾಳೆ. ಆತ ಕಾರ್ ನಿಲ್ಲಿಸಿ, `ಹಾ, ಹಾ… ನನಗ್ಗೊತ್ತು, ತರ್ತೀನಿ ಇರು…’ ಅನ್ನುತ್ತಾ ಹೋಗಿ ದೊಡ್ಡ ಸ್‌ಕ್ರೀಮ್ ಕೋನ್ ತರುತ್ತಾನೆ.
ಮುಂದೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮಗಳು ಮತ್ತೆ `ಅಪ್ಪಾ…’ ಅನ್ನುತ್ತಾಳೆ. ಅವಳು ಹಾಗಂದ ಕಡೆ ಮುಸುಕಿನ ಜೋಳದ ಗಾಡಿಯವ ಇರುತ್ತಾನೆ. ಅಪ್ಪ ಮುಗುಳ್ನಕ್ಕು, `ನೀನು ಕೇಳೋದೇ ಬೇಡ…’ ಅನ್ನುತ್ತಾ ಅದನ್ನೂ ತಂದು ಮಗಳ ಬಾಯಿಗಿಡುತ್ತಾನೆ. ಅಮ್ಯೂಸ್‌ಮೆಂಟ್ ಪಾರ್ಕ್ ತಲುಪೋವರೆಗೂ ಮಗಳು ತುಟಿಪಿಟಕ್ ಅನ್ನುವುದಿಲ್ಲ. ಅಲ್ಲಿ ಇಳೀತಿದ್ದ ಹಾಗೇ ಅಪ್ಪ ಜೈಂಟ್‌ವೀಲ್‌ಗೆ ಟಿಕೆಟ್ ಕೊಂಡು ತರುತ್ತಾನೆ. ಅದನ್ನು ಏರುವ ಮೊದಲೇ ಮಗಳು ವಾಮಿಟ್ ಮಾಡಲು ಶುರುವಿಡುತ್ತಾಳೆ. ಅಪ್ಪನಿಗೆ ಆತಂಕ. `ನಾನು ನಿನಗಾಗಿ ಇಷ್ಟೆಲ್ಲಾ ಮಾಡಿದೆ, ನಿನಗೆ ವಾಮಿಟ್ ಬರತ್ತೆ ಅಂತ ಮೊದಲೇ ಹೇಳೋಕೆ ಏನಾಗಿತ್ತು?’ ಅಂತ ಗದರುತ್ತಾನೆ. ಮಗಳು ಕಣ್ತುಂಬಿಕೊಂಡು, `ನಾನು ಮನೆಯಿಂದ ಅದನ್ನ ಹೇಳ್ಬೇಕಂತನೇ ನಿನ್ನ ಕರ್‍ದೆ. ನೀನು ನಂಗೆ ಮಾತಾಡಕ್ಕೆ ಬಿಡ್ಲೇ ಇಲ್ಲ. ನಂಗೆ ಈ ಅಮ್ಯೂಸ್‌ಮೆಂಟ್ ಪಾರ್ಕ್ ಇಷ್ಟ ಇಲ್ಲ. ಭಯ ಆಗತ್ತೆ ಇದರಲ್ಲೆಲ್ಲ ಕೂರೋದಿಕ್ಕೆ’  ಅನ್ನುತ್ತಾಳೆ.
ಮಗಳನ್ನ ಸಾಧ್ಯವಾದಷ್ಟು ಖುಷಿಯಾಗಿಡಬೇಕು ಅಂತ ಟ್ರೈ ಮಾಡೋ ಅಪ್ಪ, ಯಾವುದರಿಂದ ಅವಳು ಖುಷಿಯಾಗಿರ್ತಾಳೆ ಅಂತ ತಿಳ್ಕೊಳೋ ಗೋಜಿಗೇ ಹೋಗೋದಿಲ್ಲ. ಮಗಳು ಕೂಡ ಅಪ್ಪನಿಗೆ ಬೇಜಾರಾಗಬಾರ್ದು ಅಂತ ಎಲ್ಲವನ್ನೂ ಅಕ್ಸೆಪ್ಟ್ ಮಾಡ್ತಾ ಇರ್ತಾಳೆ. ತನಗೆ ಇಂಥಾದ್ದು ಬೇಕು ಅಂತ ಬಾಯಿಬಿಟ್ಟು ಕೇಳೋದಿಲ್ಲ. ಇದರಿಂದ ಒಂದಕ್ಕೊಂದು ಇಂಟರ್‌ಲಿಂಕ್ ಹೊಂದಿದ ಸಮಸ್ಯೆಗಳ ದೊಡ್ಡ ಚೈನ್ ಕುತ್ತಿಗೆಗೆ ಉರುಳಾಗುತ್ತೆ. ಹೀಗೆ ಭಾವನೆಗಳನ್ನ ಅದುಮಿಟ್ಟುಕೊಳ್ಳೋದು, ಎಕ್ಸ್‌ಪ್ರೆಸ್ ಮಾಡದೆ ಇದ್ದುಬಿಡೋದು ಇದೆಯಲ್ಲ, ಇದನ್ನೇ ರಿಪ್ರೆಶನ್ ಅನ್ನೋದು. ಹೀಗೆ ಮನಸಿನ ಮೂಲೆಗೆ ದಬ್ಬಿಟ್ಟ ಅನ್ನಿಸಿಕೆಗಳು, ಬಯಕೆಗಳೆಲ್ಲ ಯಾವತ್ತೋ ಒಂದಿನ ವಾಲ್ಕೆನೋ ಥರ ಉಕ್ಕಿ ಹರಿದು, ತಮಗೂ ಇತರರಿಗೂ ಸಾಕಷ್ಟು ಕಿರುಕುಳ ಕೊಡುವುದು.
`ರಿಪ್ರೆಶನ್’ ಬರೀ ಪರ್ಸನಲ್ ಲೆವೆಲ್ ಮಾತ್ರ ಅಲ್ಲ, ಆಡಳಿತ, ದುಡ್ಡು ಈ ಥರದ ಲೆವೆಲ್‌ಗಳಲ್ಲೂ ಸರಿಸುಮಾರು ಇದೇ ಅರ್ಥದ ಬೇರೆ ಆಯಾಮಗಳಲ್ಲಿಯೂ ಇರುತ್ತದೆ.  ಮನಸ್ಸನ್ನ ಅದುಮಿಟ್ಟುಕೊಳ್ಳುವ ಸೈಕಿಕ್ ರಿಪ್ರೆಶನ್ ಹಲವು ಮಾನಸಿಕ ಸಮಸ್ಯೆಗಳ ತಾಯಿ ಎನ್ನುತ್ತದೆ ಸೈಕಾಲಜಿ. ಇದು ಕೀಳರಿಮೆ, ಹೊಟ್ಟೆಕಿಚ್ಚು, ಸ್ಪರ್ಧೆ, ವಿಕೃತಿಗಳನ್ನು ಪ್ರಚೋದಿಸುತ್ತದೆ.
ಮನೆಮನೆ ಕಥೆ
ಅಪ್ಪ ಅಮ್ಮನಿಗೆ, ಮಕ್ಕಳಿಗೇನು ಬೇಕು ಅನ್ನೋದು ತಮಗೆ ಚೆನ್ನಾಗಿ ಗೊತ್ತಿದೆ ಅನ್ನುವ ಓವರ್ ಕಾನಿಡೆನ್ಸ್. ಗಂಡನಿಗೆ, ಹೆಂಡತಿಗಿಂತ ತಾನು ಚೆನ್ನಾಗಿ ತಿಳಿದವನು, ವ್ಯವಹಾರ ಬಲ್ಲವನು ಅನ್ನುವ ಜಂಭ. ಹಿರಿಯರಿಗೆ ತಾವು ಅನುಭವಸ್ಥರೆನ್ನುವ ಮೇಲರಿಮೆ. ಇಂತಹ ತಮಗೆ ತಾವೇ ಆರೋಪಿಸಿಕೊಂಡ ಗುಣಗಳಿಂದ ಗೊತ್ತೇ ಆಗದಂತೆ ಮತ್ತೊಬ್ಬರ ಮಾತನ್ನು, ಸ್ಪೇಸ್ ಅನ್ನು ಕಸಿಯುತ್ತಿರುತ್ತಾರೆ. ಕೆಲವೊಮ್ಮೆ ಒಂದು ಬದಿಯಲ್ಲಿರುವವರ ಈ ಥರದ ಮೇಲ್ಮೆ ನಿಜವೂ ಆಗಿರುತ್ತದೆ. ಹಾಗಂತ ತಮ್ಮ ಅಭಿಪ್ರಾಯವನ್ನೇ ಎಲ್ಲರ ಮೇಲೆ ಹೇರುತ್ತ ಹೋದರೆ, ಆಯಾ ಸಂದರ್ಭಗಳಲ್ಲಿ ಸುಮ್ಮನಿರುವ ಉಳಿದ ಸದಸ್ಯರು ಇನ್ಯಾವುದೋ ದಿನ ಕಹಿಯನ್ನೆಲ್ಲ ಹೊರಹಾಕುತ್ತಾರೆ. ಅಕಾರಣ ವಾಗ್ವಾದಗಳು, ಅಸಹನೆಗಳಿಂದಾಗಿ ಮನಸುಗಳು ಮುರಿಯುತ್ತ ಹೋಗುತ್ತವೆ. ಯಾಕೆಂದರೆ, ಪ್ರತಿ ವ್ಯಕ್ತಿಯೂ ತನ್ನ ಇರುವಿಕೆ ಐಡೆಂಟಿಫೈ ಆಗಲೆಂದು ಬಯಸುತ್ತಾನೆ. ಒಂದು ಚಿಕ್ಕ ಮಗುವಿನಿಂದ ಹಿಡಿದು ಮುದುಕರವರೆಗೂ `ತಮ್ಮ ಅಭಿಪ್ರಾಯವನ್ನೂ’ ಕೇಳಬೇಕೆಂದು ಅಂದುಕೊಳ್ಳುತ್ತಾರೆ. ಇದು ಸಹಜ. ಮನೆಯ ಹಿರಿಯರು ಅಂತಿಮ ನಿರ್ಧಾರ ಏನೇ ತೆಗೆದುಕೊಳ್ಳಿ, ಎಲ್ಲರೊಡನೆ ಕುಳಿತು ಡಿಸ್ಕಸ್ ಮಾಡೋದು ಅಗತತ್ಯ. ಹಾಗೆ ಮಾಡಿದಾಗ ಎಲ್ಲರಿಗೂ ಸಮಾಧಾನ ಮೂಡುತ್ತದೆ ಮಾತ್ರವಲ್ಲ, ಒಂದು ಹಾರ್ಮೊನಿಯಸ್ ಆದ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಕೂಡ.

ಸುಮ್ಮನಿದ್ದರೆ ಸೋಲು
ಸಾಮಾನ್ಯವಾಗಿ ರಿಪ್ರೆಶನ್‌ನಲ್ಲಿ ಇರುವವರಿಗೆ ಅದರ ಅರಿವಿರುತ್ತದೆ. ಬೇರೆಯವರ ಮಾತಿಗೆ ನಾನು ತಾಳ ಹಾಕಬೇಕು, ನನಗೆ ನನ್ನದೇ ಆದ ಬದುಕಿಲ್ಲ ಅನ್ನುವ ಗೊಣಗಾಟ ಇಂಥವರಲ್ಲಿ ಸಾಮಾನ್ಯ. ತಮ್ಮ ಅನ್ನಿಸಿಕೆಗಳನ್ನ ಹೇಳಿಕೊಳ್ಳೋದಕ್ಕೆ ಬೇರೆಯವರು ಅವಕಾಶ ಕೊಡಲೆಂದು ಕಾಯುತ್ತಾ ಕೂರೋದು ಸರಿಯಲ್ಲ. ಎಕ್ಸ್‌ಪ್ರೆಸ್ ಮಾಡೋದು ಕೂಡ ಒಂದು ಕೌಶಲ್ಯ. ತಮ್ಮ ಒಪೀನಿಯನ್ ಬಗ್ಗೆಯೂ ಒಮ್ಮೆ ಯೋಚಿಸುವಂತೆ ನಿರೂಪಿಸುವ ಜಾಣತನ ರೂಢಿಸ್ಕೊಳ್ಳಬೇಕು. ಅನ್ನಿಸಿದಾಗೆಲ್ಲ ಮಾತಾಡಿಬಿಡಬೇಕು. ತಮ್ಮ ಬೇಕು ಬೇಡಗಳನ್ನು ಸ್ಪಷ್ಟ ಹೇಳಿಕೊಳ್ಳಬೇಕು. ಹಾಗೆಲ್ಲ ಅನ್ನಿಸಿದ್ದನ್ನು ಹೇಳುತ್ತ ಹೋದರೆ ಎಲ್ಲಿ ಇತರ ಪ್ರಿವಿಲೇಜ್‌ಗಳನ್ನ ಕಳ್ಕೊಳ್ಳಬೇಕಾಗುತ್ತೋ ಎಂದು ಹೆದರಿ ಸುಮ್ಮನಿದ್ದರೆ ರಿಪ್ರೆಶನ್‌ನಿಂದ ಹೊರಬರಲು ಸಾಧ್ಯವೇ ಇಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೆ ಉಂಟಾಗುವ ರಿಪ್ರೆಶನ್ ಕ್ರಮೇಣ ಜನರ ಭಯ, ಹಿಂಜರಿಕೆ, ಕೀಳರಿಮೆಗಳ ಮೊತ್ತವಾಗಿ ಹಬ್ಬುತ್ತಾ ವ್ಯಕ್ತಿಯ ಅಂತಃಸ್ಸತ್ವವನ್ನೇ ಹೀರಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅವರನ್ನು ಪ್ರೀತಿ ವಿಶ್ವಾಸಗಳಿಂದ ಹೊರಮುಖಿಯಾಗಿಸಬೇಕು. ಮಾತಾಡಲು, ಸ್ವತಃ ಡಿಸಿಶನ್ಸ್ ತೆಗೆದುಕೊಳ್ಳಲು ಬಿಡಬೇಕು. ಅವರಿಗೆ ತಾವೆಷ್ಟು ಇಂಪಾರ್ಟೆನ್ಸ್ ಕೊಡುತ್ತೇವೆ ಎಂಬುದು ಎದ್ದು ತೋರುವಂತೆ ವರ್ತಿಸಬೇಕು. ಹೀಗೆ ಮಾಡುವುದರಿಂದ ಆ ವ್ಯಕ್ತಿ ಮಾತ್ರ ಅಲ್ಲ, ಮನೆಯೂ ಖುಷಿಯ ಆರೋಗ್ಯದಿಂದ ಸೊಂಪಾಗಿರುತ್ತದೆ.

ಕೊರತೆ ಮರೆತರೇನೆ ಸುಖ

ಪ್ರತಿ ವರ್ಷ ಕೊಡಮಾಡುವ ಪ್ರಶಸ್ತಿಯೊಂದಕ್ಕೆ ಕೊಡುವಾತನ ಮಗಳ ಹೆಸರಿದೆ. ಅಲ್ಲೊಬ್ಬ ಹೆಣ್ಣುಮಗಳು ತನ್ನ ಗಂಡನ ಹೆಸರಲ್ಲಿ ಶಾಲೆ ತೆರೆದಿದ್ದಾಳೆ. ಪ್ರತಿ ಊರು, ಹಳ್ಳಿಯಲ್ಲೂ ದೊಡ್ಡ ಮೊತ್ತದಿಂದ ಹಿಡಿದು ಚಿಕ್ಕ ಸರ್ಟಿಪಿಕೇಟ್‌ವರೆಗೂ `ಸ್ಮಾರಕ ಪ್ರಶಸ್ತಿ’ ಒಂದಾದರೂ ಇರುತ್ತದೆ. ಅದರ ಹಿಂದೆ ಇಲ್ಲವಾದವರ ಬಗೆಗಿನ ಪ್ರೀತಿ, ಅವರನ್ನು ತಮ್ಮ ನಡುವೆ ನಿರಂತರವಾಗಿ ಇರಿಸಕೊಳ್ಳುವ ಕಾಳಜಿ ಇರುತ್ತದೆ. ಹೀಗೆ ತೊರೆದುಹೋದವರ ಕೊರತೆಯನ್ನ ತುಂಬಿಕೊಳ್ಳುವ ಒಳ್ಳೊಳ್ಳೆ ದಾರಿಗಳನ್ನು ಕೆಲವಷ್ಟು ಜನ ಹುಡುಕಿಕೊಂಡಿರುತ್ತಾರೆ. ಆದರೆ ಎಲ್ಲರಿಗೂ ಇಂಥಾದ್ದು ಸಾಧ್ಯಾನಾ? ಪ್ರೀತಿ ಪಾತ್ರರ, ಇಷ್ಟ ವಸ್ತುವಿನ ಕೊರತೆಯನ್ನ ತುಂಬಿಕೊಳ್ಳೋದು ಸುಲಭಾನಾ? ಖಂಡಿತ ಇಲ್ಲ. ಅದು ಪ್ರೀತಿಪಾತ್ರರ ಜೀವ ನಷ್ಟವೂ ಆಗಿರಬಹುದು, ವ್ಯವಹಾರದ ನಷ್ಟವೂ ಆಗಿರಬಹುದು. ಅಥವಾ ಮನೆಮುದ್ದಿನ ನಾಯಿ ಮರಿಯೂ ಆಗಿರಬಹುದು. ಅವರ ಜೀವತಂತು ಇಲ್ಲವಾಗಿರುವ ವ್ಯಕ್ತಿ/ ವಸ್ತುವಿನ ಜತೆ ಗಟ್ಟಿಯಾಗಿ ಅಂಟಿಕೊಂಡುಬಿಟ್ಟಿರುತ್ತೆ. ಅದಕ್ಕೇ ಅದರ ಕೊರತೆ ಅಂಥವರಿಗೆ ಭರಿಸಲಾಗದ ನೋವು ಮೂಡಿಸಿಬಿಡುತ್ತೆ.
ಯಾವ್ದೂ ಪರ್ಮನೆಂಟ್ ಅಲ್ಲ- ಹಾಗಂದರೆ ಫಿಲಾಸಫಿ ಹೇಳ್ತಾರೆ ಅನ್ನಿಸಬಹುದು. ಆದರೆ ಈ ಮಾತು ನಿಜದಲ್ಲಿ ನಿಜ. ಅದು ಗೊತ್ತಿದ್ದೂ ಯಾವುದೋ ಒಂದು ವಸ್ತು, ವಿಷಯ ಅಥವಾ ವ್ಯಕ್ತಿಗೆ ಅಂಟಿಕೂರೋದು ನಮ್ಮ ಸಹಜ ಸ್ವಭಾವ. ಹಾಗೆ ಯಾರನ್ನೂ ಯಾವುದನ್ನೂ ಹಚ್ಕೊಳ್ಳಕೂಡದು ಅಂದ್ರೆ, ಅದು ಪ್ರಾಕ್ಟಿಕೆಬಲ್ ಅನಿಸೋದಿಲ್ಲ. ಎಲ್ಲವುದಕ್ಕೂ ಒಂದು ಮಿತಿ ಇರಬೇಕು ಅನ್ನುವ ಒಂದೇಒಂದು ಸೂಕ್ತಿ ನಮ್ಮ ಜೀವನದ ಎಲ್ಲ ಸಂಗತಿಗಳಿಗೂ ಅಪ್ಲೇ ಆಗತ್ತೆ. ಸಂಬಂಧಗಳು ಮತ್ತು ಅವುಗಳ ಆಳದ ವಿಷಯದಲ್ಲೂ.

ನನ್ನ ಲೈಫು ನನ್ನದು
ಅಂತಿಮವಾಗಿ ನಮ್ಮ ಲೈಫು ನಮ್ಮದೇ. ನಮ್ಮ ನಮ್ಮ ತಲೆಗೆ ನಮ್ಮದೇ ಕೈ ಅನ್ನುವ ಹಾಗೆ. ಇದನ್ನೇನೂ ಸಿನಿಕತನದ ಗೊಣಗಾಟವಾಗಿ ತೆಗೆದುಕೊಳ್ಳಬೇಕಿಲ್ಲ. ನಮ್ಮ ಒಟ್ಟಾರೆ ಜೀವನ ನಮ್ಮ ಸುತ್ತಲಿನ ಜನರಿಂದ ರೂಪುಗೊಂಡಿರುತ್ತೆ ಸರಿ. ಆದರೆ ಅದರ ವಾರಸುದಾರರು ಪೂರ್ತಿ ನಾವೇ ಆಗಿರೋದ್ರಿಂದ, ಬದುಕೋ ಜವಾಬ್ದಾರಿಯನ್ನೂ ನಾವೇ ಹೊತ್ತುಕೊಳ್ಬೇಕು. ನಾವು ನಮ್ಮ ಫ್ಯಾಮಿಲಿ ಮೇಲೆ ಡಿಪೆಂಡ್ ಆಗಿರೋದ್ರಿಂದ್ಲೇ ಭಾವನಾತ್ಮಕ ಸಂಬಂದವೂ ನಮ್ಮೊಳಗೆ ಗಟ್ಟಿಯಾಗಿರುತ್ತೆ. ಇದನ್ನ ಸ್ವಾರ್ಥ ಅಂತ ಕರೆಯಲಾಗದು. ಮನುಷ್ಯನ ಜೀವನ ರಚನೆಯೇ ಹಾಗಿದೆ. ಇದನ್ನ ಅರ್ಥ ಮಾಡಿಕೊಂಡುಬಿಟ್ಟರೆ, ಇಲ್ಲವಾಗಿರುವ ವ್ಯಕ್ತಿಯೊಟ್ಟಿಗಿನ ಬಾಂಧವ್ಯ ಮಧುರ ನೆನಪಾಗಿ ಉಳಿಯುತ್ತದೆ ಹೊರತು, ಅವರ ಗೈರುಹಾಜರಿಯೊಂದು ಕೊರತೆಯಾಗಿ ಕಾಡುವುದಿಲ್ಲ.
ಇಲ್ಲಿ ಮತ್ತೊಂದು ಅಂಶ ಗಮನಿಸಬೇಕು. ಮನೋವೈಜ್ಞಾನಿಕ ವಿಶ್ಲೇಷನೆಗಳು ನಮ್ಮ ಪ್ರತಿಕ್ರಿಯೆಗಳ ಅಂತರಾಳವನ್ನು ಬಿಚ್ಚಿಡುವಮೂಲಕ ನಿರ್ಲಿಪ್ತತೆ ಬೆಳೆಸಿಕೊಳ್ಳುವ ಕೆಲಸ ಹಗುರ ಮಾಡಿದೆ. ನಮ್ಮೊಳಗಿನ ಭಾವನಾತ್ಮಕ ಏರುಪೇರುಗಳು ಹಾರ್ಮೋನ್‌ಗಳ ಕರಾಮತ್ತಿನಿಂದ ಉಂಟಾಗುತ್ತವೆ ಹೊರತು ನಮ್ಮ ಸ್ವಂತದ ಆಪ್ತತೆ, ಅನುಭವಗಳಿಂದಲ್ಲ ಅನ್ನುವುದನ್ನು ಇವು ಸ್ಪಷ್ಟಪಡಿಸ್ತವೆ. ನಮ್ಮ ಪ್ರೀತಿಪಾತ್ರರು ಅಗಲಿದಾಗ ಹೊಮ್ಮುವ ರಿಯಾಕ್ಷನ್ ಕೂಡಾ ಇದರಿಂದ ಪ್ರೆರಿತವಾದದ್ದೇ. ಆದ್ದರಿಂದ, ನಮ್ಮ ಪ್ರೀತಿಪಾತ್ರರು ಅಗಲಿದಾಗ ನಾವು ಎಷ್ಟು ಅಳ್ತೇವೆ, ಎಷ್ಟು ಮಿಸ್ ಮಾಡ್ಕೊಳ್ತೇವೆ ಅಥವಾ ಎಷ್ಟು ಕಾಲ ಶೋಕಾಚರಣೆ ಮಾಡ್ತೇವೆ ಅನ್ನೋದರ ಮೇಲೆ ನಮ್ಮ ಪ್ರೇಮದ ಪ್ರಮಾಣ ನಿರ್ಧಾರವಾಗೋದಿಲ್ಲ.

ಕಣ್ಣಾಚೆ, ಮನದಾಚೆ
ಮನೆಯಲ್ಲಿ ಸಾವು ಸಂಭವಿಸಿದಾಗ ತೀರಾ ನಿರ್ಭಾವುಕರಾಗಿರಲು ಸಾಧ್ಯವಿಲ್ಲ. ಒಂದಷ್ಟು ದಿನಗಳ ವರೆಗೆ, ತಿಂಗಳವರೆಗೆ, ಕೆಲವರ ಪಾಲಿಗೆ ವರ್ಷದವರೆಗೂ ಅದರ ಶೋಕ ಇರುತ್ತದೆ. ಅದನ್ನು ಗಂಭಿರವಾಗಿ ತೆಗೆದುಕೊಂಡು ಬದುಕಿರುವವರೂ ಸತ್ತಂತೆ ಇದ್ದುಬಿಟ್ಟರೆ, ಸತ್ತವರ ಬಗ್ಗೆ ಅವರಿಗಿರುವ ಪ್ರೀತಿಯನ್ನು ಮೆಚ್ಚಿಕೊಳ್ಳಲು ಮನಸು ಬರುತ್ತದೆಯೇ? `ಔಟ್ ಆಫ್ ಸೈಟ್, ಔಟ್ ಆಫ್ ಮೈಂಡ್’ ಅನ್ನುವ ಮಾತನ್ನ ಕೇಳಲು ಚೂರು ಕಹಿ ಅನ್ನಿಸಿದರೂ ಅದೇ ನಿಜ. ಅಥವಾ ಅದೇ ನಿಜವಾಗಬೇಕು ಕೂಡಾ. ಅಲ್ಲವೆ?
ಕೊರತೆಯ ಕೊರಗಿಗೆ ಮುಲಾಮು ಕಂಡುಹಿಡಿದುಕೊಂಡವರು ಸಾಕಷ್ಟಿದ್ದಾರೆ. ಮತ್ತೆ ಕೆಲವರ ಮನಸ್ಸಿನ ಗಾಯ, ಕಾಲದೊಂದಿಗೆ ಮಾಯುತ್ತದೆ. ಆದರೆ ಒಂದು ಬಗೆಯ ಸ್ವಾನುಕಂಪದ ಜನರಿಗೆ ಮಾತ್ರ ಇಂಥಾ `ಕಳೆದುಕೊಳ್ಳುವ ನೋವು’ಗಳು ವಾಸಿಯಾಗದ ಕಾಯಿಲೆಯಾಗಿ ಉಳಿದುಬಿಡುತ್ತದೆ. ಅಂಥವರು ಆಪ್ತರೊಡನೆ ಸಮಾಲೋಚನೆ ನಡೆಸಿ, ಅಗತ್ಯ ಬಿದ್ದರೆ ಕೌನ್ಸೆಲಿಂಗ್ ಅಥವಾ ಚಿಕಿತ್ಸೆ ಪಡೆದು ಜೀವನೋಲ್ಲಾಸ ಮರಳಿ ಪಡೆಯಬೇಕು.
ನಮ್ಮ ಹೆಸರಿನ ಕ್ರಾಸ್ಡ್ ಚೆಕ್‌ನಲ್ಲಿ ನೆಮ್ಮದಿಯ ಬದುಕು ಬರೆದು ಕಳಿಸಿರುವಾಗ, ನಾವೇ ಅದನ್ನ ಎನ್‌ಕ್ಯಾಶ್ ಮಾಡ್ಕೊಳ್ಳಬೇಕಲ್ವಾ? ಇಲ್ಲಾ ಅಂದ್ರೆ, ಅದು ಹಾಗೇ ವೇಸ್ಟ್ ಆಗಿಹೋಗುತ್ತೆ. ಹೀಗೆ ನಷ್ಟ ಮಾಡಿಕೊಳ್ಳೋದಾದರೂ ಯಾವ ಪುರುಷಾರ್ಥಕ್ಕೆ!?

ಹೆಣ್ಣಪ್ಪಿ ಹುಡುಗರು

ಅವನಿಗೆ ಕ್ರಿಕೆಟ್ ಇಷ್ಟ ಇಲ್ಲ. ಅವನು ಹುಡುಗರೊಟ್ಟಿಗೆ ಕುಸ್ತಿ ಆಡೋದಕ್ಕೆ ಹೋಗೋದಿಲ್ಲ. ಆಕ್ಷನ್ ಸಿನಿಮಾಗಳಿಗಿಂತ ರೊಮ್ಯಂಟಿಕ್ ಕಾಮಿಡೀಸ್ ನೋಡೋದೇ ಜಾಸ್ತಿ. ಗರ್ಲ್ ಫ್ರೆಂಡ್‌ಗೆ ದಿನಕ್ಕೆ ಹತ್ತು ಸಲ ಕಾಲ್ ಮಾಡ್ತಾನೆ. ಊಟ ಆಯ್ತಾ, ತಿಂಡಿ ಆಯ್ತಾ ವಿಚಾರಿಸ್ತಾನೇ ಇರ್ತಾನೆ. ನೆಂಟರಿಷ್ಟರಮನೆಗಳಿಗೆ ಹೋಗೋದು, ಯಾವ ಫಂಕ್ಷನ್ ಅನ್ನೂ ಮಿಸ್ ಮಾಡದೆ ಇರೋದು ಇವನ ಹೆಚ್ಚುಗಾರಿಕೆ.
ಅವನು ಚಿಕ್ಕವನಿರುವಾಗಿಂದ್ಲೂ ಹಾಗೇನೇ. ಅಡುಗೆ ಮನೇಲಿ ಅಮ್ಮನಿಗೆ ಜತೆಯಾಗೋದು ಅಂದ್ರೆ ಅವಂಗೆ ಇಷ್ಟ. ರಂಗೋಲಿ ಹಾಕೋದಿರಲಿ, ಹೂ ಕಟ್ಟೋದಿರಲಿ,ಕಸೂತಿ ಹಾಕೋದಿರಲಿ… ಎಲ್ಲಾದರಲ್ಲೂ ಸಿಕ್ಕಾಪಟ್ಟೆ ಆಸಕ್ತಿ. ಅಕ್ಕ ತಂಗಿಯರು ಅದನ್ನೆಲ್ಲ ಮಾಡುವಾಗ ಮೂಗು ತೂರಿಸಿ, `ಗಂಡ್ಸಿಗ್ಯಾಕೆ ಗೌರೀ ಸಂಗ್ತಿ? ಹೋಗೋ ಅತ್ಲಾಗಿ’ ಅಂತ ಬೈಸಿಕೊಂಡೇ ಬೆಳೆದವನು. ದೊಡ್ಡವನಾದ್ಮೇಲೂ ಅದೇ ಪಾಡು. ಗೆಳೆಯರ ಜತೆ ಶಾಪಿಂಗಿಗೆ ಹೋದಾಗ್ಲೂ ಈ ಫಿಲ್ಟರ್ರು, ಆ ಹೂಜಿ ಅಂತ ಕೊಂಡು ತರುವ ಕಾಳಜಿ. ಮದುವೆಯಾದ ಮೇಲೆ ಹೆಂಡತಿಯ ಸೀರೆ ಆರಿಸೋದಕ್ಕೆ, ಅಡಿಗೆಯ ಉಪ್ಪು ಖಾರ ನೋಡಲಿಕ್ಕೆ, ಹಬ್ಬದ ಡೆಕೋರೇಷನ್ನಿಗೆ ನಡುನಡುವೆ ಕಾಲ್ತೊಡರಿ `ಒಳ್ಳೆ ಹೆಂಗಸರ ಹಾಗೆ ಆಡ್ತಾರಪ್ಪ’ ಅನ್ನೋ ಅಸಹನೆಗೆ ಒಳಗಾದವನು. ಗಳಗಳನೆ ಅತ್ತು ಹಗುರಾಗುವ ರೂಢಿಗೆ ಬಿದ್ದವನು. ಹಾಗಂತ ಇವನನ್ನ ಮೂರನೆ ಥರ ಅಂತ ತಿಳಿದರೆ ಪ್ರಮಾದವಾಗಿಬಿಟ್ಟೀತು. ಹಾಗೇನಿಲ್ಲ. ಅವನ ಆಸಕ್ತಿ, ಇಷ್ಟಾನಿಷ್ಟಗಳೆಲ್ಲ ಹೆಣ್ಣುಹೆಣ್ಣಾಗಿರತ್ತೆ ಅಷ್ಟೆ.  ಅರ್ರೆ! ಇದೆಂಥ ಸ್ವಭಾವ?

ಹೆಣ್ಣಿಗ ಅನ್ನುತ್ತಾರೆ
ಇಂಥ ಗಂಡಸರನ್ನ `ಹೆಣ್ಣಪ್ಪಿಗಳು’ ಅಂತಾರೆ ಹಳ್ಳಿಗರ ಭಾಷೇಲಿ. `ಹೆಣ್ಣಿಗ’ ಅಂದ ಕೂಡಲೆ ಏನೋ ಬಯ್ತಿದ್ದಾರೆ ಅನ್ನಿಸುತತೆ ಅಲ್ವೆ? ಇದು ಇಂಥಾ ಸ್ವಭಾವದವರನ್ನು ಕರೆಯಲು ಬಳಸುವ ಪದ. ಇಂಗ್ಲೀಷಿನಲ್ಲಿ ಇಂಥವರನ್ನ `ಸಿಸ್ಸೀಸ್’ ಅಂತಾರೆ. ಈ ಹೆಸರೇ ಒಂಥರಾ ಜಿಗುಪ್ಸೆಯನ್ನ, ಅವಗಣನೆಯನ್ನ ಸೂಚಿಸತ್ತೆ. ಯಾಕೋ ಈ ಸಮಾಜ ಕೂಡ ಹೆಣ್ಣಪ್ಪಿ – ಸಿಸ್ಸೀಗಳನ್ನ, ಗಂಡುಬೀರಿ – ಟಾಮ್‌ಬಾಯ್‌ಗಳಿಗಿಂತ ಹೆಚ್ಚು ಅವಮಾನಕರ ಅಂತ ಭಾವಿಸುತ್ತೆ.
`ಈ ಹೆಣ್ಣು ಸ್ವಭಾವ ಹೊಂದಿರುವ ಗಂಡಸರ ಬಗ್ಗೆ ಜಿಗುಪ್ಸೆ ಪಡಬೇಕಾಗಿಲ್ಲ. ಹೇಗೆ ಹೆಣ್ಣುಮಕ್ಕಳಲ್ಲಿ ಗಂಡುಬೀರಿಯರು ಇರುತ್ತಾರೋ, ಹಾಗೇ ಇವರೂ ಗಂಡಸರಿಗೆ ಸಹಜ ಎನ್ನಿಸದ ಸ್ವಭಾವಗಳನ್ನು ಹೊಂದಿರುತ್ತಾರಷ್ಟೆ. ಇಂಥವರನ್ನು ಗೇಲಿಮಾಡುವುದು ಕಿಡಿಗೇಡಿತನವಾಗುತ್ತದೆ.’  ಎಂದು ಹೇಳುವ ಸಲಹಾತಜ್ಞ  ಶ್ರೀನಾಗೇಶ್, `ಅವರ ಆಸಕ್ತಿ ಮತ್ತು ಭಾವನೆಗಳಿಗೆ ಸಹಜವಾಗಿ ಸ್ಪಂದಿಸುತ್ತ ಅಂಥವರಲ್ಲಿ ಕೀಳರಿಮೆ ಮೂಡದಂತೆ, ತಾನು ಉಪೇಕ್ಷಿತ ಅನ್ನುವ ಕೊರಗು ಬರದಂತೆ ಸಹಕರಿಸಬೇಕು. ಹಾಗಿಲ್ಲವಾದರೆ ಇಂಥ ಹೆಣ್ಣುಮನಸಿನ ಗಂಡಸರು ಅಂತರ್ಮುಖಿಗಳಾಗಿ, ಬಾಡಿಹೋಗುವ ಅಪಾಯವಿರುತ್ತದೆ’ ಎನ್ನುವ ಕಿವಿಮಾತನ್ನೂ ಹೇಳುತ್ತಾರೆ.

ಹಾಗಂತ ಛೇಡಿಸ್ತಾರೆ
ಕೆಲವರು ನಿಜಕ್ಕೂ ಹೆಣ್ಣುಮಕ್ಕಳಂಥ ಅಭಿರುಚಿ ಹೊಂದಿರ್‍ತಾರೆ, ಹೆಣ್ಣಿಗ ಅನ್ನಿಸಿಕೊಳ್ತಾರೆ. ಆದರೆ ಕೆಲವೊಮ್ಮೆ ಈ ಪದವನ್ನ ಛೇಡಿಸೋದಕ್ಕೆ, ಪ್ರಚೋದಿಸಲಿಕ್ಕೆ ಕೂಡಾ ಬಳಸಲಾಗುತ್ತೆ. ಸಿಗರೇಟ್ ಒಲ್ಲೆ ಎನ್ನುವ, ಜತೆಯ ಗೆಳೆಯರ ಗ್ಲಾಸಿಗೆ ಗ್ಲಾಸು ತಾಕಿಸಿ ಬಿಯರ್ ಕುಡಿಯದ, ರಾತ್ರಿ ವೇಳೆ ಹೊತ್ತೊ ಮೀರುವ ಮುನ್ನ ಮನೆಯಲ್ಲಿ ಆತಂಕಪಡ್ತಾರೆ ಅಂತಲೋ ಹೆಂಡತಿ ಗಲಾಟೆ ಮಾಡ್ತಾಳೆ ಅಂತಲೋ ಮನೆ ಸೇರಿಕೊಳ್ಳುವ ಗಂಡುಗಳನ್ನ ಹೀಗೆಲ್ಲ ಆಡಿಕೊಳ್ಳಲಾಗತ್ತೆ. ಈ ನಿಟ್ಟಿನಿಂದ ನೋಡಿದರೆ, ಹೆಣ್ಣಪ್ಪಿ ಅಂತ ಕಾಲೆಳೆಸಿಕೊಂಡ್ರೂ ಪರವಾಗಿಲ್ಲ, ಹುಡುಗರು ತಮ್ಮ ಪಾಡಿಗೆ ತಾವು `ನೀಟಾಗಿ’ ಇರೋದಷ್ಟೆ ಮುಖ್ಯ ಅನ್ನಿಸಿಬಿಡುತ್ತೆ.  ಕೆಲವು ಪೋಷಕರು ಈ ಬಗ್ಗೆ ಸಮಾಧಾನ ಪಡುವುದೂ ಸುಳ್ಳಲ್ಲ. ಪದವಿಯ ಕೊನೆ ತರಗತಿಯಲ್ಲಿರುವ ನಿಕೇತ್‌ನ ತಾಯಿ ಈ ಬಗ್ಗೆ ಹೇಳುತ್ತಾ, `ಮೊದಲೆಲ್ಲ ಮನೆಯಿಂದ ಹೊರಗೆ ಹೋಗದ, ತಂಗಿಯ ಜೊತೆ ಆಡುತ್ತ ಕೂರುವ ನಿಕೇತನ ಬಗ್ಗೆ ಆತಂಕವಿತ್ತು. ಅವನು ಹೊರಗಿನ ಆಟಗಳಿಗಿಂತ ಡ್ರಾಯಿಂಗ್, ಹಾಡು- ಹಸೆ ಅಂದುಕೊಂಡು ನನ್ನ ಸೆರಗು ಹಿಡಿದು ಸುತ್ತುತ್ತಿದ್ದ. ಆದರೆ ಈಗ ಅವನು ಹಾಗಿರೋದೇ ಎಷ್ಟೋ ಮೇಲು ಅನ್ನಸಿತೊಡಗಿದೆ. ಇಷ್ಟು ವರ್ಷದಲ್ಲಿ ಒಮ್ಮೆಯೂ ಮನೆ ಬಾಗಿಲಿಗೆ ಕಂಪ್ಲೇಂಟ್ ತಂದಿಲ್ಲ. ಒಳ್ಳೆ ಹುಡುಗ ಅಂತಲೇ ಹೆಸರು ಪಡೆದಿದ್ದಾನೆ’ ಅನ್ನುತ್ತಾರೆ.

ಹುಡುಗಿಯರಿಗೆ ಇಷ್ಟ
ಸಿಸ್ಸೀ ಬಾಯ್ಸ್ ಸಾಮಾನ್ಯವಾಗಿ ಹುಡುಗಿಯರಿಗೆ ಇಷ್ಟವಾಗ್ತಾರೆ. ಸಾಮಾನ್ಯ ಬಯಕೆಯಂತೆ ದೇಹದಲ್ಲೇನೂ ಕುಂದಿಲ್ಲದ ಈ ಗಂಡುಗಳ ಮನಸ್ಸು ಮೃದುವಾಗಿಯೂ ನಾಜೂಕಿನದ್ದೂ ಆಗಿರುತ್ತದಲ್ಲ, ಅದೇ ಪ್ಲಸ್ ಪಾಯಿಂಟ್ ಅನ್ನಿಸಿಕೊಳ್ಳುತ್ತದೆ. ತನ್ನ ಎಲ್ಲ ಆಯ್ಕೆ, ಕೆಲಸಗಳಲ್ಲಿ ಮೂಗು ತೂರಿಸುವಿಕೆ ಅತಿರೇಕಕ್ಕೆ ಹೋದರೆ ಮಾತ್ರ ಹೆಣ್ಣುಮಕ್ಕಳು ಇಂಥವರನ್ನು ದೂರುತ್ತಾರಷ್ಟೆ. ಉಳಿದಂತೆ ತಮ್ಮಂತೆಯೇ ಭಾವುಕರಾದ, ತಮಗೆ ಸ್ಪಂದಿಸಬಲ್ಲ ಹಾಗೂ ತಮ್ಮ ಅಭಿರುಚಿಯನ್ನು ಮೆಚ್ಚಿ ಶ್ಲಾಘಿಸಬಲ್ಲ ಇಂಥ ಹುಡುಗರನ್ನು ಅವರು ಮೆಚ್ಚಿಕೊಳ್ತಾರೆ ಹಾಗೂ ಇಂಥವರ ಜತೆ ಸಂಸಾರ ಸೇಫ್ ಎಂದು ಭಾವಿಸುತ್ತಾರೆ. ಆದರೆ ಟಾಮ್‌ಬಾಯ್‌ಗಳಿಗೆ ಈ ಸಿಸ್ಸೀ ಬಾಯ್ಸ್ ಇಷ್ಟವಾಗೋದಿಲ್ಲ!

ಗುಟ್ಟು ಬಚ್ಚಿಡಲು ಕಲಿಯಿರಿ

ಹೆಣ್ಣುಮಕ್ಕಳಿಗೆ ಮಾತು ಜಾಸ್ತಿ. ಹಾಗೇನೇ ಎಲ್ಲವನ್ನೂ ಹೇಳಿಕೊಂಡುಬಿಡುವ ಆತುರ. ಹಿಂದಿನ ಕಾಲದ ಹರಟೆ ಕಟ್ಟೆಯಿಂದ ಹಿಡಿದು ಇವತ್ತಿನ ಟ್ವಿಟರ್ ತನಕ ನೋಡಿ ಬೇಕಿದ್ದರೆ, ತಾವು ಹೊಸ ಕರ್ಚಿಫ್ ಪರ್ಚೇಸ್ ಮಾಡಿದ್ದರಿಂದ ಹಿಡಿದು ಬಾಯ್ ಫ್ರೆಂಡ್ ಜತೆಗಿನ ಜಗಳದವರೆಗೆ ಎಲ್ಲವನ್ನೂ ಹೇಳಿಕೊಳ್ಳುವವರೇ. ಫಿಲ್ಟರ್ ಇಲ್ಲದೆ ಬದುಕಬೇಕು ಅನ್ನೋ ಫಿಲಾಸಫಿ ಸರಿಯೇ. ಹಾಗಂತ ಫಿಲ್ಟರ್ ಹಾಕಬೇಕಾದಲ್ಲಿ ಹಾಕದೆ ಹೋದರೆ ಕೊಳೆ ಕಸಗಳೆಲ್ಲ ಹರಿದುಬಂದು ಸಂಬಂಧಗಳ ಸ್ವಾಸ್ಥ್ಯ ಕೆಡೋದು ಗ್ಯಾರಂಟಿ. ಕೆಲವೊಂದಷ್ಟು ಮಾತುಗಳನ್ನ ನಾವು ನಮಗಾಗಿ ಉಳಿಸ್ಕೊಂಡಿರಬೇಕು. ಯಾವುದೋ ಒಂದು ಘಟನೆ ಕಾಲದಿಂದ ಕಾಲಕ್ಕೆ ಬೇರೆ ಬೇರೆ ಅರ್ಥಗಳನ್ನ ಪಡೆದುಕೊಳ್ಳುತ್ತಾ ಹೋಗುತ್ತದೆ. ಹೀಗೆ ವ್ಯಾಖ್ಯೆಗಳು ಬದಲಾಗಬಲ್ಲ  ಸಾಧ್ಯತೆಗಳಿರುವಂಥ ಸಂಗತಿಗಳನ್ನು ಸರಿಯಾದ ಸಮಯ ಬರುವವರೆಗೆ ಹೇಳಿಕೊಳ್ಳದೆ ಇರುವುದೇ ಒಳ್ಳೆಯದು. ಹಾಗೊಮ್ಮೆ ಅಂಥಾ ಸರಿಸಮಯ ಬರಲೇ ಇಲ್ಲ ಅಂತಿಟ್ಟುಕೊಳ್ಳಿ, ಹೇಳಿಕೊಳ್ಳದೆ ಸುಮ್ಮನಿದ್ದುಬಿಡಿ, ನಷ್ಟವೇನೂ ಆಗದು.
ಹೀಗೆ ಯಾಕೆ ಗೊತ್ತಾ? ತೆರೆದುಕೊಂಡಷ್ಟೂ ನಾವು ಹಗುರಾಗುತ್ತೇವೆ. ಎಲ್ಲ ಹೇಳಿಕೊಂಡೆವು ಅನ್ನುವ ನಿರಾಳದ ಹಗುರತನ ಸಿಗುತ್ತೆ ಅನ್ನೋದು ನಿಜವೇ. ಅದರ ಜತೆಗೆ, ನಮ್ಮಲ್ಲಿ ಗುಟ್ಟಿನ ಘನತೆಯ ಭಾರ ಇಲ್ಲವಾಗಿ, ವ್ಯಕ್ತಿತ್ವದಲ್ಲೂ ಹಗುರಾಗಿಬಿಡುವ ಅಪಾಯ ಇರುತ್ತೆ. ಒಂದು ಪುಸ್ತಕದಲ್ಲಿ ಕೆಲವಾದರೂ ಪುಟ ಮಡಿಚಿಟ್ಟಿರಬೇಕು. ನಮ್ಮ ಬಗ್ಗೆ ಕುತೂಹಲ ಇರಬೇಕು, ಇತರರು ನಮ್ಮ ಬಗ್ಗೆ ಚೂರಾದರೂ ಆಸಕ್ತಿ ವಹಿಸಬೇಕು ಅಂತ  ಬಯಸೋದಾದರೆ ನಾವು ಸ್ವಲ್ಪವಾದರೂ ನಿಗೂಢತೆ ಉಳಿಸ್ಕೊಂಡಿರಬೇಕು. ಇಷ್ಟಕ್ಕೂ ಸಂಬಂಧದಲ್ಲಿ ಆನೆಸ್ಟ್ ಆಗಿರೋದು ಅಂದ್ರೆ ನಮ್ಮ ಎಲ್ಲವನ್ನೂ ಹೇಳ್ಕೊಳ್ಳೋದು ಅಂತಲ್ಲ. ಹಾಗಂತ ಸುಳ್ಳು ಹೇಳಬೇಕು ಅಂತಲೂ ಅಲ್ಲ. ಅಪಾರ್ಥಕ್ಕೆ ಒಳಗಾಗಬಹುದಾದ ವಿಷಯಗಳನ್ನ, ನಮ್ಮ ಕೈಮೀರಿ ಹೋದ ಘಟನೆಗಳನ್ನ ಡಿಸ್ಕಸ್ ಮಾಡದೆ ನಮ್ಮ ಸ್ಪೇಸ್‌ನಲ್ಲಿ ನಾವಿರಬೇಕು ಅಷ್ಟೆ.
ನಾವು ಹೆಣ್ಣುಮಕ್ಕಳದೊಂದು ಡ್ರಾಬ್ಯಾಕ್ ಇದೆ. ನಮಗೆ ಚಿಕ್ಕಪುಟ್ಟ ನಿರೀಕ್ಷೆಗಳು ವಿಪರೀತ. ನಾವು ನಮ್ಮ ಎಲ್ಲವನ್ನೂ ಶೇರ್ ಮಾಡಿಕೊಳ್ಳೋದೇ ನಮ್ಮ ಪ್ರೀತಿಯನ್ನ ಸಾಬೀತುಪಡಿಸೋದಕ್ಕೆ. ಷ್ಟಕ್ಕೆ ಸುಮ್ಮನಾಗದೆ ನಮ್ಮ ಸಂಗಾತಿಯಿಂದಲೂ ಅದನ್ನೆ ಬಯಸತೊಡಗ್ತೇವೆ. ಆದರೆ ಅವರ ಸಹಜ ನೇಚರ್ ಬೇರೆಯೇ ಇರುತ್ತೆ. ಅವರು ಸಂಪೂರ್ಣವಾಗಿ ನಮ್ಮ ಜತೆಗಿದ್ದೂ ತಮ್ಮ ಜತೆಗೂ ತಾವಿರುವ ವೈಶಿಷ್ಟ್ಯ ಹೊಂದಿರುತ್ತಾರೆ. ಬಹಳಷ್ಟು ಹೆಂಗಸರಿಗೆ ಅದು ಅರ್ಥವಾಗುವುದಿಲ್ಲ. ನಾನು ಎಲ್ಲವನ್ನೂ ಹೇಳಿಕೊಳ್ತೇನೆ, ಅವರು ಮಾತ್ರ ನನ್ನಿಂದ ಮುಚ್ಚಿಡುತ್ತಾರೆ, ನನ್ನ ವಂಚಿಸ್ತಿದಾರೆ ಅಂದುಕೊಳ್ತೇವೆ. ಅಲ್ಲಿಂದ ಮುನಿಸು, ಕೋಪ ತಾಪಗಳು ಶುರುವಾಗ್ತವೆ. ಸಂಗಾತಿಯಾದ ಮಾತ್ರಕ್ಕೆ ನಿಮ್ಮ ಬದುಕನ್ನೇ ಅವರೂ ಅಥವಾ ಅವರ ಬದುಕನ್ನೆ ನೀವೂ ಬಾಳಬೇಕನ್ನುವ  ಪ್ರಾಮಾಣಿಕತನದ ಅತಿರಂಜಿತ ರಮ್ಯ ಚಿಂತನೆಗಳಿಂದ ನಾವು ಮೊದಲು ಹೊರಗೆ ಬರಬೇಕಿದೆ. ವಾಸ್ತವ ಯಾವತ್ತೂ ಅವರವರ ಬದುಕನ್ನು ಅವರವರು ಬಾಳುವುದೇ ಆಗಿರುತ್ತದೆ. ಗುಟ್ಟು ಕಾಪಾಡಿಕೊಳ್ಳೋದು ಅಂದರೆ ನಮ್ಮ ನಿಜಗಳನ್ನು ಮುಚ್ಚಿಡೋದು ಅಂತ ಅಲ್ಲ. ಹಾಗಂದರೆ, ನಮ್ಮ ಪ್ರೈವೆಸಿಯನ್ನ ಕಾಪಾಡ್ಕೊಳ್ಳೋದು ಅನ್ನುವ ವಿಷಯ ನಮಗೆ ಗೊತ್ತಿರಬೇಕು. ಆಗ ಸಂಗಾತಿಯಿಂದ ನಿರೀಕ್ಷಿಸುವ ಉಸಾಬರಿಯೂ ತಪ್ಪುತ್ತದೆ.

ಕ್ರಿಯೇಟಿವ್ ವೇ
ಬಟ್ ಹೀಗೆ ಮುಚ್ಚಿಟ್ಟುಕೊಂಡು ಬದುಕೋದು ಕೆಲವರಿಗೆ ಕಷ್ಟ. `ಅನ್ನಿಸಿದ್ದನ್ನ, ಅನುಭವಿಸಿದ್ದನ್ನ ಹೇಳ್ಕೊಂಡ್ರೆ ಏನಿವಾಗ?’ ಅನ್ನುವ ಧೋರಣೆ ಇರುತ್ತದೆ. ಇಂಥಾದ್ದು ಇರಬಾರದು ಎಂದಲ್ಲ. ಸಿಕ್ಕಾಪಟ್ಟೆ ಹೊರಮುಖಿಯಾಗಿಬಿಟ್ರೆ ಲೈಫು ನಮ್ಮನ್ನ ಕಾಡಿಸಿಬಿಡತ್ತೆ. ಅದನ್ನ ತಡ್ಕೊಳ್ಳೋ ಕೆಪಾಸಿಟಿ ಇರಬೇಕು. ಎಲ್ಲವನ್ನೂ ಹೇಳಿಕೊಂಡು, ಎದುರಾಗುವ ಪ್ರಶ್ನೆಗಳನ್ನ ನಿಭಾಯಿಸ್ತೀನಿ, ಕನ್ವಿನ್ಸ್ ಮಾಡಿ ಸಂಬಂಧವನ್ನ ಉಳಿಸ್ಕೊಳ್ತೀನಿ ಅನ್ನುವ ವಿಶ್ವಾಸ ಇರಬೇಕು. ಕೊನೆಯಪಕ್ಷ, ಸಂಗಾತಿ ಅನುಮಾನಿಸಿದರೂ ಅವಮಾನಿಸಿದರೂ ಸರಿಯೇ, ನಾನು ಇರುವುದೇ ಹೀಗೆ, ನೇರನೇರವಾಗಿ ಅನ್ನುವ ದಾರ್ಷ್ಟ್ಯವಾದರೂ ಸರಿ- ಇರಬೇಕು.
ಕೆಲವು ಹೆಣ್ಣುಮಕ್ಕಳು ಇಂತಹ ವಿಶ್ವಾಸವನ್ನು ರೂಢಿಸಿಕೊಂಡು ಗೆದ್ದಿದ್ದಾರೆ. ತಮ್ಮ ಬದುಕಲ್ಲಿ ಗುಟ್ಟುಗಳನ್ನೇ ಇಟ್ಟುಕೊಳ್ಳದೆ ಜೀವಿಸಿದ ಪ್ರತಿ ಕ್ಷಣವನ್ನ ದಾಖಲು ಮಾಡಿ ಗೆದ್ದಿದ್ದಾರೆ. ಆದರೆ ಇವರೆಲ್ಲರಲ್ಲಿ ಒಂದು ವೈಶಿಷ್ಟ್ಯವಿದೆ. ಇಂಥಾ ಹೆಣ್ಣುಗಳು ಯಾರೂ ತಮ್ಮ ಅಂತರಂಗವನ್ನ ಗಾಸಿಪ್ ಜಗಲಿಯಮೇಲೆ ತೆರೆದಿಟ್ಟವರಲ್ಲ. ಅದನ್ನು ಹೇಳಿಕೊಳ್ಳಲಿಕ್ಕಾಗಿ ಸೃಜನಶೀಲ ಮಾಧ್ಯಮವನ್ನ ರೂಢಿಸ್ಕೊಂಡವರು. ಹಾಡು, ಹಸೆ, ಚಿತ್ರಕಲೆ, ಬರಹಗಳ ಮೂಲಕ ಅನ್ನಿಸಿಕೆಗಳನ್ನ ಎಕ್ಸ್‌ಪ್ರೆಸ್ ಮಾಡಿದವರು. ಹಿಂದಿನ ಕಾಲದ ವಚನ- ಪದಗಳು, ಜನಪದ ಹಾಡು- ಕಥೆಗಳು, ಈವತ್ತಿನ ನೋಡುವ- ಕೇಳುವ- ಓದುವ ಮಾಧ್ಯಮಗಳೆಲ್ಲವೂ ಈ ನಿಟ್ಟಿನಲ್ಲಿ ಬಳಕೆಯಾಗಿವೆ. ಇಂತಹ ಕ್ರಿಯೇಟಿವ್ ವೇ ಆಫ್ ಟೆಲ್ಲಿಂಗ್ ಸೀಕ್ರೆಟ್ಸ್ ನಿಮಗೆ ಸಾಧ್ಯವಿದೆಯಾ? ಅಥವಾ ಹೇಳಿಕೊಂಡು ತಾಳಿಕೊಳ್ಳುವ ಸೈರಣೆ ಇದೆಯಾ? ಇದ್ದರೆ ಫಿಲ್ಟರ್ ತೆಗೆದುಬಿಡಿ. ಇಲ್ಲವಾದರೆ, ಏನೇನೋ ಇಟ್ಟುಕೊಂಡಿರುವ ಹೊಟ್ಟೆಯಲ್ಲಿ ನಿಮ್ಮ ಗುಟ್ಟಿಗೂ ಚೂರು ಜಾಗ ಕೊಡಿ.
ಕೊನೆಯಲ್ಲಿ ಮತ್ತೊಂದು ವಿಷಯ. ಇಷ್ಟರತನಕ ಹೇಳಿದ `ಸೀಕ್ರೆಟ್ಸ್’ ಯಾವುದೋ ಅನೈತಿಕ ಅಸಥವಾ ವಿಶ್ವಾಸಘಾತದ ಕೆಲಸಗಳದ್ದು ಅಂದುಕೊಳ್ಳಬಾರದು. ಏನನ್ನೋ ಕೊಂಡ, ಯಾರಿಗೋ ಕೊಟ್ಟ, ಕೈಮೀರಿ ನಡೆದ ಘಟನೆಗಳು ಇದರಲ್ಲಿ ಸೇರುತ್ತವೆ. ಮದುವೆಗೆ ಮುಂಚಿನ ಸಂಗತಿಗಳು, ತವರು ಮನೆಯ ಕೆಲವು ವಿಷಯಗಳು ಇಂಥವೂ ಕೆಲವನ್ನು ಗುಟ್ಟು ಮಾಡಬೇಕಾಗುತ್ತದೆ. ಯಾಕಂದರೆ ಹೆಣ್ಣುಮಕ್ಕಳು ಯಾವತ್ತೂ (ದುರದೃಷ್ಟವಶಾತ್) ಎರಡನೇ ಸ್ಥಾನದಲ್ಲಿರುತ್ತಾರೆ. ಮೂದಲಿಕೆಗೆ ಒಳಗಾಗುವುದು, ಯಾರಯಾರ ತಪ್ಪುಗಳಿಗೋ ಅವಮಾನಿತರಾಗುವುದು ಇಂಥವೆಲ್ಲ ನಾವು ಅನುಭವಿಸಬೇಕಿರುತ್ತೆ. ಆದ್ದರಿಂದ, ಸಾಂಗತ್ಯ- ಸಂಬಂಧಗಳನ್ನ ನಿಭಾಯಿಸಲಿಕ್ಕೆ ಎಷ್ಟು ಬೇಕೋ ಆ ಎಲ್ಲವನ್ನೂ ಪ್ರಾಮಾಣಿಕವಾಗಿ ಮಾಡಬೇಕು. ಜೊತೆಜೊತೆಗೇ ನಮ್ಮ ಪ್ರೈವೆಸಿಯನ್ನೂ ಕಾಪಾಡಿಕೊಳ್ಳುವ ಎಚ್ಚೆರ ಇಟ್ಟುಕೊಳ್ಳಬೇಕು.

ಮುಟ್ಟಿದ್ರೆ ಅಂಟ್ಕೊಳ್ತಾರೆ!

ಹೊತ್ತಲ್ಲದ ಹೊತ್ತಲ್ಲಿ ಬಡಕೊಳ್ಳುವ ಸೆಲ್‌ಫೋನ್ ಸ್ಕ್ರೀನ್ ಮೇಲೆ `ಕಿರಿಕಿರಿ’ ಅಂತಲೋ `ಫೆವಿಕಾಲ್’ ಅಂತಲೋ ಹೆಸರು. ಆ ಹೆಸರು ಅಂಟಿಸ್ಕೊಂಡವರು ಯಾರು ಬೇಕಾದರೂ ಆಗಿರಬಹುದು. ತೀರಾ ಸ್ವಂತ ಹೆಂಡತಿಯೂ ಅಥವಾ ಮುಖವೂ ಗೊತ್ತಿಲ್ಲದ ಯಾರೋ ಫೇಸ್‌ಬುಕ್ ಗೆಳೆಯನೂ.
ಕೆಲವರು ಹಾಗಿರ್ತಾರೆ. ಯಾರಾದರೂ ಒಂಚೂರು ಸ್ಪಂದಿಸಿದರೂ ಚಕ್ಕಂತ ಕಚ್ಕೊಂಡುಬಿಡ್ತಾರೆ. ಇಂಥವರನ್ನ `ಗೋಂದು’ ಅಂತಲೋ `ಗಮ್ ಪಾರ್ಟಿ’ ಅಂತಲೋ ಆಡಿಕೊಂಡು ನಗೋದುಂಟು. ಇಂಥಾ ಅಂಟುತನ ಬೇರೆಯವರಲ್ಲಿ ತಮ್ಮ ಬಗ್ಗೆ ಇರಿಟೇಶನ್ ಬೆಳೆಸುತ್ತೆ ಅಂತ ಇವರು ಯೋಚಿಸೋದೂ ಇಲ್ಲ. ಅವರಿಗೇನೋ ತಾವು ತುಂಬಾ ಕೇರಿಂಗ್, ಸಂಬಂಧಕ್ಕೆ ಬೆಲೆ ಕೊಡುವವರು, ಗೆಳೆತನವನ್ನ ಅದ್ಭುತವಾಗಿ ನಿಭಾಯಿಸ್ತಿರುವವರು ಅಂತೆಲ್ಲ ಭ್ರಮೆ ಇರುತ್ತೆ. ಆದರೆ ಈ ಥರದ ಅವರ ಕಾಳಜಿ – ಕಮ್ಯುನಿಕೇಶನ್, ಮತ್ತೊಂದು ತುದಿಯಲ್ಲಿ ಇರುವವರ ಪಾಲಿಗೆ `ಡ್ರಾಮಾ’ದಂತೆಯೂ ‘ಡಿಸ್ಗಸ್ಟಿಂಗ್’ ಆಗಿಯೂ ಕಾಣ್ತಿರುತ್ತೆ.

ಅಂಟ್ಕೊಳ್ತಾರಪ್ಪೋ!
ಒಂದು ಬಗೆಯ ಗಮ್ ಇದೆ. ಒಂದು ಹನಿಯಷ್ಟು ಹಾಕಿದರೂ ಗಪ್ಪಂತ ಹಿಡಿದುಕೊಂಡುಬಿಡುತ್ತೆ. ಹಾಗೆ, ಸಮಾನ ಆಸಕ್ತಿಯದೋ,ಒಂದೇ ಊರು ಅಂತಲೋ, ಬಾದರಾಯಣ ಸಂಬಂಧವೋ ಏನೋ ಒಂದು ಎಳೆ ಹಿಡಿದು ತಮ್ಮ ಸ್ನೇಹ ಸಂಬಂಧ ಎಸ್ಟಾಬ್ಲಿಶ್ ಮಾಡ್ಕೊಳ್ಳುವ ಜನರೂ ಇರ್ತಾರೆ. ಇಂಥವರ ಅಂಟಂಟಿನ ನಂಟು ಸಹಿಸ್ಕೊಳ್ಳೋದು ಬಹಳ ಕಷ್ಟ.
ಬರೀ ಫೋನ್‌ನಲ್ಲಿ, ಫೇಸ್‌ಬುಕ್ಕಲ್ಲಿ ಅಂಟ್ಕೊಳ್ಳೋರನ್ನ ಹೇಗಾದ್ರೂ ನಿಭಾಯಿಸಬಹುದು. ಬೆರಳು ತೋರಿಸಿದ್ರೆ ಕೈನೇ ನುಂಗುವ ಹಾಗೆ ಮೈಮೇಲೆ ಬೀಳೋರನ್ನ ಏನು ಮಾಡೋದು? ಅದೂ ಮನೆಗೆ ಬಂದು ಕೂತುಬಿಟ್ರೆ?
ಹಾಗಂತ ಇಂಥಾ ಗ್ಲೂಲೈಕ್ ಜನಗಳ ಜೊತೆ ತೀರಾ ಹಾರ್ಶ್ ಆಗಿ ಬಿಹೇವ್ ಮಾಡಬೇಕಿಲ್ಲ. ವಾಸ್ತವವಾಗಿ ಅಂಥವರಲ್ಲಿ ಪ್ರತಿಯೊಂದಕ್ಕೂ ಓವರ್ ರೆಸ್ಪಾಂಡ್ ಮಾಡುವ, ಸಂಬಂಧಗಳಿಗೆ ಎಕ್ಸ್‌ಟ್ರಾ ಇಂಪಾರ್ಟೆನ್ಸ್ ಕೊಡುವ ಭೋಳೇತನ ಇರುತ್ತದೆ. ನಿಜದಲ್ಲಿ ತೀರಾ ಸಾಮಾನ್ಯವಾಗಿರುವ ಅಂಶಗಳು ಅವರಿಗೆ ದೊಡ್ಡದಾಗಿ ಕಾಣುತ್ತವೆ. ಔಪಚಾರಿಕ ಸ್ನೇಹವನ್ನು ಅವರು ಜನ್ಮಾಂತರದ ಗೆಳೆತನವಾಗಿ ಪರಿಗಣಿಸುವಷ್ಟು ಅಮಾಯಕರಾಗಿರುತ್ತಾರೆ. ಇಂಥವರಿಗೆ ಖಂಡಿತವಾಗಿಯೂ ನಿಮಗೆ ತೊಂದರೆ ಕೊಡಬೇಕೆಂಬ ಉದ್ದೇಶ ಇರೋದಿಲ್ಲ. ಇಂಥಾ ಅಂಟುಪುರಲೆಗಳಲ್ಲಿ ಕೆಲವು ಮಿಥ್‌ಗಳು ಮನೆ ಮಾಡಿರುತ್ತವೆ. ಅವರು, ತಮ್ಮ ಆಟಿಟ್ಯೂಡ್‌ನಿಂದ ಸಂಬಂಧಗಳು ಗಟ್ಟಿಗೊಳ್ಳಬಹುದು ಅಂದುಕೊಳ್ತಾರೆ. ನಿಜದಲ್ಲಿ ಅದರ ಪರಿಣಾಮ ಉಲ್ಟಾ. ಅವರ ಸಹವಾಸದಲ್ಲಿರುವವರು ಇಂಥವರನ್ನು ಕಂಡರೆ ಆದಷ್ಟೂ ತಪ್ಪಿಸ್ಕೊಳ್ಳಲು ಪ್ರಯತ್ನಿಸ್ತಾರೆ. ಬಹುತೇಕ ಫೋನ್‌ಕಾಲ್‌ಗಳನ್ನು ಸ್ಕಿಪ್ ಮಾಡತೊಡಗುತ್ತಾರೆ. ಹತ್ತು ಮೆಸೇಜುಗಳಲ್ಲಿ ಒಂದಕ್ಕೆ ಉತ್ತರಿಸಿದರೆ, ಅದು ಅವರ ದೊಡ್ಡತನವಷ್ಟೆ! ಯಾಕಂದರೆ ಈ `ಗಮ್ ಪಾರ್ಟಿ’ಗಳ ಇನ್ನೊಸೆಂಟ್ ಟಾರ್ಚರ್ ಆ ಲೆವೆಲ್‌ಗೆ ಇರುತ್ತದೆ.
ಇಲ್ಲಿ ನೆನಪಿಡಬೇಕಾದ ಮತ್ತೊಂದು ಸಂಗತಿ, ನೀವೆಷ್ಟೇ ಅವಾಯ್ಡ್ ಮಾಡಿದರೂ ಇಗ್ನೋರ್ ಮಾಡಿದರೂ ಅವರು ಸುಧಾರಿಸುವುದಿಲ್ಲ. ಅವರ ನಿಶ್ಚಯ, ನಿಮಗೆ ಅಂಟ್ಕೊಳ್ಳೋದಷ್ಟೆ. ನೀವು ಅಂಟಿಸ್ಕೊಳ್ತೀರೋ ಅಥವಾ ದೂರವಿರ್ತೀರೋ ಅನ್ನೋದು ಬೇಕಿರೋಲ್ಲ. ಸೋ, ಇಂಥವರ ವಿಷಯದಲ್ಲಿ ನಾವು ಸುಮ್ಮನಿರುವುದೇ ಜಾಣತನ.

ಜೊತೆಗಿದ್ದೇ ಕಾಡುವ ಎನಿಮಿ

`ಓಹ್! ಅವ್ಳಾ? ಅದೊಂಥರಾ ವಿಚಿತ್ರ ಹೆಣ್ಣು. ನಾನಂತೂ ಇಚೀಚೆಗೆ ಅವಳ ಜತೆ ಬೆರೆಯೋದೇ ಬಿಟ್ಟಿದೀನಿ’ ಅಂತ ತನ್ನ ಗೆಳತಿಯ ಬಗ್ಗೆ ಕಮೆಂಟ್ ಮಾಡೋ ಹುಡುಗಿ, ವಿಂಡೋ ಶಾಪಿಂಗ್‌ಗೆ ಹೋಗೋದು ಅವಳೊಟ್ಟಿಗೇನೇ. ಅವಳ ಎಲ್ಲಾ ಪ್ರೋಗ್ರಾಮ್‌ಗಳೂ ಇವಳ ಡೈರಿಯಂತೆ ಫಿಕ್ಸ್ ಆಗುತ್ತೆ. ಇಬ್ಬರಲ್ಲಿ ಯಾರಾದರೂ ಒಬ್ಬರೇ ಕಾಣಸಿಕ್ಕರೆನ್ನಿ, ಅದೊಂದು ಅಸಂಗತ ವಿಷಯ ಅನ್ನುವಂತೆ ಅಪನಂಬಿಕೆಯಿಂದ ವಿಚಾರಿಸಿಕೊಳ್ಳುತ್ತಾರೆ ಉಳಿದವರು. ಹೊರನೋಟಕ್ಕೆ ಅವರಿಬ್ಬರು ಅಷ್ಟೊಂದು ಖಾಸಾಖಾಸಾ. ಹಾಗಿದ್ದೂ ಅವರಲ್ಲೊಬ್ಬಳು ತನ್ನ ಗೆಳತಿ ಬಗ್ಗೆ ಹಾಗೆಲ್ಲ ಹೇಳಿದ್ದು ಯಾಕೆ? ಈ ಫ್ರೆಂಡ್‌ನಲ್ಲೊಬ್ಬಳು ಹೆಸರುಗೆಡಿಸುವ ಎನಿಮಿಯೂ ಇದ್ದಾಳಾ? ಈ ವಿಷಯ ಆ ಮತ್ತೊಬ್ಬಳಿಗೆ ಗೊತ್ತಾದರೆ ಏನು ಗತಿ? ಅವಳೆಷ್ಟು ಹರ್ಟ್ ಆಗಬಹುದು?
ಅನ್ನುವ ಯೋಚನೆ ಬರುವ ಹೊತ್ತಿಗೆ, ಅವಳಿಗೆ ಗೊತ್ತಾಗಿಯೂ ಬಿಡುತ್ತದೆ. ಚೂರೂ ಗುಟ್ಟು ಉಳಿಸ್ಕೊಳ್ಳದೆ ಎಲ್ಲವನ್ನೂ ಹೇಳಿಕೊಂಡಿದ್ದು ಇದೇ ಗೆಳತಿಯೊಟ್ಟಿಗೆ. ಈಗ ಈ ಚಿಕ್ಕಪುಟ್ಟ ವಿದ್ರೋಹಗಳನ್ನೆ ದೊಡ್ಡ ಮಾಡಿಕೊಂಡು ಜಗಳಾಡಬೇಕಾ? ತನ್ನ ಬಗ್ಗೆ ಇಷ್ಟೆಲ್ಲ ಕಹಿ ಇಟ್ಟುಕೊಂಡೇ ಎದುರಲ್ಲಿ  ನಗುನಗುತ್ತ ಇರುತ್ತಾಳೆ. ನನ್ನ ಬಗ್ಗೆ ಕಾಳಜಿ ತೋರುತ್ತಾಳೆ. ನೂರಾಒಂದು ನಿರ್ದೇಶನ ಕೊಟ್ಟು `ಜೋಪಾನ’ ಹೇಳುತ್ತಾಳೆ. ಒಟ್ಟಿಗೆ ಇರುವಾಗ ಯಾವತ್ತೂ ಅಸಮಾಧಾನ ತೋರದವಳು ಇಲ್ಲದಾಗ ಹೀಗೆಲ್ಲ ಯಾಕೆ? ಅನ್ನುವ ನೋವು ಪೀಡಿಸತೊಡಗುತ್ತೆ. ನೇರಾನೇರ ಹಗೆ ಮಾಡುವವರೊಂದಿಗೆ ಡೀಲ್ ಮಾಡುವುದು ಸುಲಭ. ಈ ಇಬ್ಬಗೆ ಯಾಕೆಂದು ಗೊತ್ತಿರದೆ ಗೆಳತಿಯೊಟ್ಟಿಗೆ ಜಗಳಾಡೋದು ಹೇಗೆ? ಅವಳನ್ನ ಕಳಕೊಳ್ಳೋಕೂ ಇಷ್ಟವಿಲ್ಲದಾಗ ಫ್ರೆನಿಮಿತನ ಉಂಟುಮಾಡುವ ಬಿರುಕನ್ನು ಮುಚ್ಚಿಕೊಳ್ಳೋದು ಹೇಗೆ? ಭಾವುಕತೆಯನ್ನ ಬದುಕಿನ ಮುಖ್ಯ ಭಾಗ ಮಾಡಿಕೊಂಡಿರುವ ಹೆಣ್ಣುಮಕ್ಕಳಿಗೆ ನಿಜಕ್ಕೂ ಇದು ಚಡಪಡಿಕೆಯ ವಿಷಯ. ಆದರೆ ಇದೇನೂ ಹೀಲ್ ಮಾಡಲಾಗದ ಸಂಗತಿಯಲ್ಲ. ಮೊದಲು ಅಷ್ಟನ್ನು ಮನದಟ್ಟು ಮಾಡಿಕೊಂಡರೆ ಉಳಿದ ಕೆಲಸ ಸಲೀಸು. ಎಲ್ಲಕ್ಕಿಂತ ಮೊದಲು, ನಾವು ಗೆಳೆತನ ಬೆಳೆಸಿಕೊಳ್ಳೋದು ಯಾರದೋ ಉಪಕಾರಕ್ಕಲ್ಲ, ನಮ್ಮ ಹಿತಾನುಭವಕ್ಕೆ ಅನ್ನುವುದನ್ನು ನೆನಪಿಡಬೇಕು. ಆಗಷ್ಟೆ ಅದರ ಫಲಿತಾಂಶಗಳಿಗೆ ಅತಿಯಾಗಿ ರಿಯಾಕ್ಟ್ ಮಾಡುವುದರಿಂದ ಮುಕ್ತರಾಗುತ್ತೇವೆ.

ಮಾತೇ ಕುತ್ತು
ಹೆಣ್ಣು ಮಕ್ಕಳನ್ನ ಜೊತೆ ಸೇರಿಸೋದು ಯಾವುದು? ಅಂತ ಕೇಳಿದರೆ ಸಿಗುವ ಉತ್ತರ, `ಮಾತು’. ಇದು ಸಹಸ್ರಮಾನಗಳ ಸತ್ಯ. ಹೆಂಗಸರು ಜತೆಯಾಗೋದು ಮಾತಿನಿಂದ್ಲೇ, ಬೇರೆಯಾಗೋದೂ ಮಾತಿನಿಂದ್ಲೇ. ಪರದೆಯಿಲ್ಲದೆ ತಮ್ಮ ಎಲ್ಲವನ್ನೂ ಒಮ್ಮೆಗೆ ಹೇಳಿಕೊಳ್ಳುವ ತವಕ, ಅದನ್ನು ಕೇಳಿಸಿಕೊಳ್ಳಲು, ಅರ್ಥ ಮಾಡಿಕೊಳ್ಳಲು ಆಪ್ತರೊಬ್ಬರು ಬೇಕು ಅನ್ನುವ ಬಯಕೆ ನಮ್ಮಲ್ಲಿ ಸಾಮಾನ್ಯ. ಭಾವನೆಗಳನ್ನು ಮುಚ್ಚಿಟ್ಟುಕೊಳ್ಳಲಾಗದ ನಮ್ಮ ಇನ್‌ಬಿಲ್ಟ್ ಸ್ವಭಾವವೇ ನಮ್ಮನ್ನು ಹೆಚ್ಚು ಮಾತಿಗೆ ಪ್ರೆರೇಪಿಸುತ್ತೆ. ಇದು ಎಲ್ಲವನ್ನೂ ಕೇಳಿಸಿಕೊಳ್ಳುತ್ತಾ ಸಹಾನುಭೂತಿ ತೋರಿಸುವ ಗೆಳತಿಯನ್ನು ಬೇಡುತ್ತೆ. ಹೇಳಿಕೊಳ್ಳುವಿಕೆಯೊಂದು ವ್ಯಸನವಾಗತೊಡಗಿದಾಗ, ಕೇಳಿಸಿಕೊಳ್ಳುವವರ ಮೇಲಿನ ಅವಲಂಬನೆ ವಿಪರೀತ ಹೆಚ್ಚುತ್ತೆ. ಸಮಸ್ಯೆ ಶುರುವಾಗೋದು ಇಲ್ಲಿಂದಲೇ.
ಇಷ್ಟಲ್ಲದೆ, ನಾವು ಮಾತಾಡುವಾಗ ನಮ್ಮ ನಮ್ಮ ಸಂಗತಿಗಳನ್ನಷ್ಟೆ ಆಡಿಕೊಂಡು ಸುಮ್ಮನಿರುತ್ತೀವಾ? ಹಾಗೆ ಸುಮ್ಮನಿರುವವರು ಬಹಳ ಕಡಿಮೆ. ನಾವು ಎಷ್ಟು ಹೆಚ್ಚು ಬೇರೆಯವರ ಬಗ್ಗೆ ಮಾತನಾಡ್ತೀವೋ ಫ್ರೆನಿಮಿತನಕ್ಕೆ ಅಷ್ಟು ಹೆಚ್ಚಿನ ಅವಕಾಶ ಮಾಡಿಕೊಡ್ತಿರ್‍ತೀವಿ. ಗೆಳತಿ ಶತ್ರುವೂ ಆಗುವ ಸಂದರ್ಭದಲ್ಲಿ ಈ `ಮೂರನೆಯವರ ಬಗೆಗಿನ ಮಾತು’ಗಳು ಆಕೆಯ ಸಹಾಯಕ್ಕೆ ಒದಗುತ್ತವೆ. ನಮ್ಮ ಗಮನಕ್ಕೆ ಬಾರದ, ಒಂದು ಸಣ್ಣ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಗೆಳತಿ, ಒಳಗಿಂದೊಳಗೆ ನಮ್ಮನ್ನು ದ್ವೇಷಿಸತೊಡಗುತ್ತಾಳೆ. ಅದನ್ನು ಹೊರಹಾಕಲು ಆಕೆ ಕಂಡುಕೊಳ್ಳುವ ದಾರಿ, ಇತರರ ಎದುರು ನಮ್ಮನ್ನು ಹೀಗಳೆದು ಮಾತನಾಡೋದು ಅಥವಾ ನಮ್ಮ ಅಸ್ತಿತ್ವವನ್ನೇ ಹಗುರಗೊಳಿಸಿ ಕಮೆಂಟ್ ಮಾಡುವುದು. ಹಾಗೇನೆ, ಮತ್ತೊಬ್ಬರ ಬಗ್ಗೆ ನಮ್ಮ ಬಳಿ ಬರೀ ಕೆಡುಕನ್ನೇ ಹೇಳಿ ಅವರ ಬಳಿ ಹೋಗದಂತೆ ತಡೆಯುವುದು ಮತ್ತು ಖುದ್ದು ತಾನು ಆ ವ್ಯಕ್ತಿಯ ಜೊತೆ ಸ್ನೇಹದಿಂದ ಇರುವುದು. ಅಥವಾ ಇತರರನ್ನು ನಮ್ಮ ಬಳಿ ಬರದಂತೆ ತಡೆದು, ತಾನೊಬ್ಬಳೇ ನಿನ್ನ ಗೆಳತಿ ಎಂಬಂತೆ ನಟಿಸುವುದು. ತನ್ನ ಬಗ್ಗೆ ನಮ್ಮಲ್ಲಿ ಅಡಿಕ್ಷನ್ ಬೆಳೆಯುವಂತೆ, ಪ್ರತಿಯೊಂದಕ್ಕೂ ಅವಳ ಮೆಲೆ ಡಿಪೆಂಡ್ ಆಗುವಂತೆ ಸನ್ನಿವೇಶ ಸೃಷ್ಟಿಸುವುದು ಮತ್ತು ತಾನು ಮಸೀಹಾಳಂತೆ ಬಂದು ಸಹಾಯ ಮಾಡುವುದು.
ನಿಮಗೆಲ್ಲಾದರೂ ನಿಮ್ಮ ಫ್ರೆಂಡ್ ಫ್ರೆನಿಮಿಯಾಗುತ್ತಿದ್ದಾಳೆ ಅನಿಸತೊಡಗಿದರೆ ಒಂದೆರಡು ಸರಳ ಟೆಸ್ಟ್‌ಗಳ ಮೂಲಕ ಖಚಿತಪಡಿಸಿಕೊಳ್ಳಿ. ನೀವು ಅತ್ಯಂತ ಗುಟ್ಟಿನದು  ಎನ್ನುತ್ತಾ ಯಾವುದಾದರೊಂದು ವಿಷಯವನ್ನು ಆಕೆಗೆ ತಿಳಿಸಿ. ಅದು ಶೀಘ್ರದಲ್ಲೇ ರಿಬೌಂಡ್ ಆಗಿ ನಿಮ್ಮನ್ನು ತಲುಪುತ್ತದೆಯಾದರೆ, ನಿಮ್ಮ ಅನುಮಾನ ನಿಜ, ಬೀ ಕೇರ್‌ಫುಲ್. ಯಾರೋ ಮೂರನೆಯವರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾತಾಡಿದರೆ, ಆ ಕೂಡಲೆ ಕ್ಲಾರಿಫಿಕೇಶನ್ ಕೇಳಿ. ಉತ್ತರಕ್ಕಾಗಿ ತಡಬಡಾಯಿಸಿದರೆ, ಯು ಆರ್ ರೈಟ್. ಅಗೈನ್, ಬೀ ಕೇರ್‌ಫುಲ್.
ಈ ಟೆಸ್ಟ್ ನಂತರದ ಹೆಜ್ಜೆ ನೀವು ಎಚ್ಚರಿಕೆಯಿಂದ ಇಡಬೇಕು. ತತ್‌ಕ್ಷಣ ಸ್ನೇಹ ಕಳಚಿಕೊಂಡರೆ ಅದರಿಂದ ತೊಂದರೆ ತಪ್ಪಿದ್ದಲ್ಲ. ನಿಮ್ಮ ಅದೆಷ್ಟೋ ಖಾಸಗಿ ಸಂಗತಿಗಳು ಅವರ ಮನಸ್ಸಿನಲ್ಲಿ ಹಸಿರಾಗಿರುತ್ತವೆ. ಸಿಕ್ಕಿಬಿದ್ದ ಅವಮಾನ ಅವೆಲ್ಲವನ್ನೂ ಹೊರಹಾಕುವಂತೆ ಮಾಡಬಹುದು. ಕ್ಲೀಷೆಯಾದರೂ ಸರಿಯೇ, ಮುಳ್ಳಿನ ಮೇಲೆ ಬಿದ್ದ ಬಟ್ಟೆ, ತೆಗೆಯುವಾಗ ಹುಷಾರು. ಅವರೊಂದಿಗೆ ಔಪಚಾರಿಕವಾಗಿ ಇರುತ್ತಲೇ ಮಾತು ಕಡಿಮೆ ಮಾಡುವುದೊಂದೇ ಸದ್ಯದ ಉಪಾಯ.

ಸ್ಪರ್ಧಿಯನ್ನು ಹುಡುಕಿಕೊಳ್ಳಿ
ಜೊತೆಗೇ ಇರುವ ಗೆಳತಿ ಹೀಗೆ ಇಬ್ಬಗೆ ಮಾಡುತ್ತಿದ್ದಾಳೆ ಎನ್ನುವುದು ಗೊತ್ತಾಗಿದೆ. ಮಾತು ಕಡಿಮೆ ಮಾಡುವ ಮೊದಲ ಹೆಜ್ಜೆ ಇಟ್ಟಾಗಿದೆ. ಮುಂದೇನು? ಇದರಿಂದ ಅವಳೊಂದಿಗಿನ ಆಪ್ತತೆ ಕಡಿಮೆ ಮಾಡಿಕೊಳ್ಳಬಹುದೇ ಹೊರತು, ಸಂಪೂರ್ಣ ಬಿಟ್ಟುಬಿಡಲಾಗುವುದಿಲ್ಲ. ಅಲ್ಲದೆ, ಮನಸಿಗಾದ ನೋವೂ ಮಾಯುವುದಿಲ್ಲ. ಹಾಗಂತ ನೀವು ಆಕೆಯ ಬಗ್ಗೆ ತಪ್ಪು ಸುದ್ದಿಗಳನ್ನು ಬಿತ್ತರಿಸಲು, ನಮಗೆ ಗೊತ್ತಿರುವ ಆಕೆಯ ಖಾಸಗಿ ವಿಚಾರಗಳನ್ನು ಬಯಲು ಮಾಡಲು ಹೊರಡಬಾರದು. ಮೊರಾಲಿಟಿಯ ಪ್ರಶ್ನೆಗಲ್ಲ, ನಮ್ಮದೇ ಮಾನಸಿಕ ಆರೋಗ್ಯಕ್ಕಾಗಿ- ಇದೆಲ್ಲ ಬೇಡ, ಅಷ್ಟೆ.
ಫ್ರೆನಿಮಿ ಒಂದು ಬಗೆಯಲ್ಲಿ ನಮಗೆ ಉಪಕಾರವನ್ನೂ ಮಾಡುತ್ತಾಳೆ. ಯಾರಿಗೂ ಅಗತ್ಯಕ್ಕಿಂತ ಹೆಚ್ಚಿನ ಸ್ಪೇಸ್ ಕೊಡಬಾರದೆನ್ನುವ, ಡಿಪೆಂಡ್ ಆಗಬಾರದೆನ್ನುವ ಪಾಠವನ್ನು ಕಲಿಸುತ್ತಾಳೆ. ಅವಳ ಡಬಲ್‌ಗೇಮ್ ತಿಳಿದು ಕೂಡ ನಾವು ಫ್ರೆಂಡ್ ಆಗಿ ಮುಂದುವರೆಯುತ್ತೇವಲ್ಲ, ಅದು ನಮಗೆ ತಾಳಿಕೊಳ್ಳುವ, ಕಹಿಯನ್ನು ಮರೆಮಾಚಿಕೊಳ್ಳುವ ಗುಣಗಳನ್ನು ಕಲಿಸುತ್ತದೆ.
ಹಾಗಂತ, ಫ್ರೆನಿಮಿಗೆ ಪಾಠ ಕಲಿಸದೆ ಇರಲೂ ಆಗುವುದಿಲ್ಲವಲ್ಲ? ಆಕೆಯ ಪಾಸಿಟಿವ್ ಗುಣಗಳನ್ನು, ಸಾಧನೆಗಳನ್ನು ಮತ್ತು ಆಸಕ್ತಿಗಳನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಇದನ್ನೂ ಮಾಡಬಹುದು. ಆಕೆಯ ಆಸಕ್ತಿಯ ಕ್ಷೇತ್ರಗಳಲ್ಲಿ  ನಾವು ಕಾಲಿಟ್ಟರೆ, ತೀವ್ರವಾಗಿ ತೊಡಗಿಕೊಂಡು ಆಕೆಗಿಂತ ಹೆಚ್ಚಿನ ರಿಸಲ್ಟ್ ಪಡೆದರೆ, ಮತ್ತು ಅದರ ನಂತರವೂ ಬಾಂಧವ್ಯ ಉಳಿಸಿಕೊಂಡರೆ, ಅದೇ ನಾವು ಫ್ರೆನಿಮಿಗೆ ವಿಧಿಸಬಹುದಾದ ಅತಿ ದೊಡ್ಡ ದಂಡ. ಆದರೆ ಇಲ್ಲಿ ಮಾಡಬಾರದ ಕೆಲಸ ಒಂದಿದೆ. ಯಾವತ್ತೂ ಫ್ರೆನಿಮಿಯೊಂದಿಗೆ ಆಕೆಯ ನಿಜ ನಮಗೆ ಗೊತ್ತಾಗಿರುವ ಬಗ್ಗೆ ಮಾತಾಡಬಾರದು. ಆಕೆ ಯಾವ ಕಾರಣಕ್ಕೂ ತನ್ನ ತಪ್ಪು ಒಪ್ಪಿಕೊಳ್ಳುವುದಿಲ್ಲ. ಬದಲಿಗೆ, `ನೀನು ತಪ್ಪು ತಿಳಿದಿದ್ದೀ’ ಎನ್ನುವ ಸಮಜಾಯಿಷಿಯಷ್ಟೆ ನಮಗೆ ದೊರಕುವುದು.
ಇಂದಿನ ಸ್ಪರ್ಧಾ ಯುಗದಲ್ಲಿ  ಹತ್ತರಲ್ಲಿ ನಾಲ್ಕು ಮಂದಿ ಫ್ರೆನಿಮಿಗಳಾಗಿರುತ್ತಾರೆ. ಜಲಸಿ, ಕೀಳರಿಮೆ, ಏಕಾಂಗಿತನ, ಡಾಮಿನೇಟಿಂಗ್ ಮನೋಭಾವಗಳು ಜತಯ ಗೆಳತಿಯರನ್ನೇ ದ್ವೇಷಿಸುವಂತೆ ಮಾಡುತ್ತವೆ. ಯುವತಿಯರಲ್ಲಿ ಯಾರೋ ಒಬ್ಬ ಹುಡುಗನ ವಿಷಯಕ್ಕೆ ಇಂತಹ ಫ್ರೆನಿಮಿಶಿಪ್ ಏರ್ಪಡಬಹುದು. ಮಧ್ಯವಯಸ್ಕ ಮಹಿಳೆಯರಲ್ಲಿ ಸಾಮಾಜಿಕ ಅಂತಸ್ತು, ಕುಟುಂಬದ ಸ್ಥಿತಿಗತಿ ಕುರಿತಾದ ಹೆಚ್ಚುಗಾರಿಕೆ ಮತ್ತು ಅಸಹನೆಗಳು ಇದನ್ನು ಪ್ರೇರೇಪಿಸುವುದು. ಗಂಡಸರ ನಡುವೆ ಸ್ಪರ್ಧೆ ಮತ್ತು ಅಸೂಯೆಗಳಿಗೆ ಹೆಣ್ಣು ಮತ್ತು ಸಂಪತ್ತು ಎರಡು ಮುಖ್ಯ ಕಾರಣಗಳಾಗಬಹುದು. ಆದರೆ ಹೆಣ್ಣುಮಕ್ಕಳಿಗೆ ಸೌಂದರ್ಯ, ಪ್ರತಿಷ್ಠೆ, ಬುದ್ಧಿವಂತಿಕೆ, ಆಕರ್ಷಣಾ ಸಾಮರ್ಥ್ಯ, ಮೆಚ್ಚಿಕೊಳ್ಳುವವರ ಸಂಖ್ಯೆ- ಇತ್ಯಾದಿ ಮುಂದುವರೆಯಬಲ್ಲ ಒಂದು ಪಟ್ಟಿಯಷ್ಟು ಕಾರಣಗಳಿವೆ.

ಎಮೋಷನಲ್ ಅತ್ಯಾಚಾರ

ಯಾರದ್ದೇ ಪರ್ಸನಾಲಿಟಿ ತನ್ನಷ್ಟಕ್ಕೆ ತಾನು ಪೂರ್ಣ ಅನ್ನಿಸಿಕೊಳ್ಳಬೇಕಾದರೆ ಅವರಿಗೆ ಅವರದ್ದೇ ಆದ ಒಂದು ಸ್ಪೇಸ್ ಇರಬೇಕು. ಅವರವರ ಖಾಸಗಿ ಭಾವನೆಗಳಿಗೆ, ಅನ್ನಿಸಿಕೆಗಳನ್ನ ಗುಟ್ಟಾಗಿಟ್ಟುಕೊಳ್ಳಲು, ತಮ್ಮ ಬಯಕೆಗಳನ್ನ ಮನದಟ್ಟು ಮಾಡಿಕೊಂಡು ಅದರಂತೆ ಯೋಜನೆ ಹಾಕಿಕೊಳ್ಳಲು- ಇಂಥವಕ್ಕೆಲ್ಲ ಒಂದು ಪ್ರೈವೇಟ್ ರೂಮ್‌ನಂಥ ಜಾಗ ವ್ಯಕ್ತಿತ್ವದೊಳಗೆ ಸಹಜವಾಗಿ ಇರಬೇಕು. ಆದರೆ ಎಲ್ಲರಿಗೂ ಇಂತಹ ಅವಕಾಶ ದೊರಕುವುದು ಕಷ್ಟ. ಅದರಲ್ಲೂ ಹೆಚ್ಚಿನಂಶ ಹೆಣ್ಣುಗಳಿಗೆ ಇಂಥ ಖಾಸಗಿ ಕೋಣೆ ಕನಸಿನ ಮಾತೇ ಸರಿ. ಅವರ ಹೊರವಲಯದ ಬದುಕಲ್ಲಿ ಹೇಗೋ ಹಾಗೇ ಒಳಗಿನ ಬದುಕಲ್ಲೂ ಅತಿಕ್ರಮ ಪ್ರವೇಶ ಮಾಡುವವರು ಇರುತ್ತಾರೆ. ಹೀಗೆ ನುಗ್ಗುವವರು ಗಂಡಸರೇ ಆಗಬೇಕೆಂದಿಲ್ಲ. ಸ್ವತಃ ಸ್ಪೇಸ್ ಕಳಕೊಂಡಿರುವ ಹೆಣ್ಣುಗಳು ಕೂಡ ಇದನ್ನು ಮಾಡಬಹುದು.
ಹೀಗೆ ಭಾವುಕ ಜಗತ್ತಿನೊಳಗೆ ಅತಿಕ್ರಮವಾಗಿ ಬಂದು ಹರ್ಟ್ ಮಾಡುವುದನ್ನು ಎಮೋಶನಲ್ ರೇಪ್ ಅಥವಾ ಭಾವುಕ ಅತ್ಯಾಚಾರ ಎನ್ನಲಾಗುತ್ತದೆ. ಇದು, ವ್ಯಕ್ತಿಯೊಬ್ಬನನ್ನು ವ್ಯವಸ್ಥಿತವಾಗಿ ಇಲ್ಲವಾಗಿಸುವ ಸಂಚು. ಯಾರನ್ನಾದರೂ ಭಾವನಾತ್ಮಕವಾಗಿ ಮುಗಿಸಿಹಾಕಲು ಇರುವ ಅತ್ಯಂತ ಅಮಾನವೀಯ ದಾರಿ, ಅವರನ್ನು ಕಡೆಗಣಿಸುವುದು, ಅವರಿಗೊಂದು ಅಸ್ತಿತ್ವವೇ ಇಲ್ಲವೆಂಬಂತೆ ನಡೆಸಿಕೊಳ್ಳುವುದು, ಈ ಮೂಲಕ ಅವರೊಳಗೆ ಕೀಳರಿಮೆ ಮೂಡಿಸಿ ಅವರ ಸ್ಪಿರಿಟ್ ಅನ್ನೇ ಕಸಿದುಕೊಳ್ಳುವುದು. ವಾಸ್ತವವಾಗಿ ಇದು ದೇಹದ ಮೇಲಿನ ಅತ್ಯಾಚಾರಕ್ಕಿಂತ ಕ್ರೂರವಾದುದು.
ದೈಹಿಕ ಅತ್ಯಾಚಾರ ಆದಾಗ ಅಲ್ಲಿ ಮುಖ್ಯವಾಗಿ ರೇಪಿಸ್ಟ್‌ನ ದೈಹಿಕ ವಿಕೃತಿ ಕೆಲಸ ಮಾಡಿರುತ್ತದೆ. ಅದಕ್ಕೆ ಒಳಗಾದ ಹೆಣ್ಣು ಕೂಡ ದೇಹದ- ಕಣ್ಣಿಗೆ ಕಾಣುವಂಥ ಯಾತನೆ ಮತ್ತು ಇನ್ಸಲ್ಟ್ ಅನುಭವಿಸಿರುತ್ತಾಳೆ. ಇಂಥಲ್ಲಿ ರೇಪಿಸ್ಟ್‌ನ ದೇಹದೊಟ್ಟಿಗೆ ಅವನ ಅಹಂಕಾರ, ಡಾಮಿನೇಟಿಂಗ್ ಮನೋಭಾವಗಳು ಕೂಡ ತೃಪ್ತಿಗೊಳ್ಳುತ್ತವೆ. ಎಮೋಶನಲ್ ಅತ್ಯಾಚಾರದಲ್ಲಿ ದೇಹತೃಪ್ತಿಯ ಪಾತ್ರವೇ ಇಲ್ಲ. ಇದನ್ನು ನಡೆಸುವವರ ಮುಖ್ಯ ಉದ್ದೇಶ ಕೇವಲ ಮನಸ್ಸನ್ನು ಹರ್ಟ್ ಮಾಡುವುದು ಇಲ್ಲವೇ ಮುದುಡಿಸುವುದು. ಎರಡಕ್ಕೂ ಇರುವ ಸಮಾನ ಅಂಶವೆಂದರೆ, ಇಲ್ಲಿ ಕೂಡ ರೇಪಿಸ್ಟ್‌ನ ಅಹಂಕಾರ ಮತ್ತು ಅಂಕೆಯಲ್ಲಿಟ್ಟುಕೊಳ್ಳಬೇಕೆನ್ನುವ ಹುನ್ನಾರ ತೃಪ್ತಗೊಳ್ಳುತ್ತದೆ ಅನ್ನೋದು. ದೇಹದ ವಿಷಯದಲ್ಲಿ ಅತ್ಯಾಚಾರವೆಂದರೆ, ಸಹಮತವಿಲ್ಲದೆ ಅದನ್ನು ದುರ್ಬಳಕೆ ಮಾಡಿಕೊಳ್ಳುವುದು ಎಂದಾಗುತ್ತದೆ. ಮನಸ್ಸಿನ ವಿಚಾರಕ್ಕೆ ಬಂದಾಗಲೂ ಸಹಮತವಿಲ್ಲದೆ ಖಾಸಗಿ ಭಾವನೆಗಳನ್ನು, ಮತ್ತೊಬ್ಬರೆಡೆಗಿನ ಉನ್ನತ ಪ್ರೇಮವನ್ನು, ಮೌಲ್ಯಗಳನ್ನು ದುರ್ಬಳಕೆ ಮಾಡಿಕೊಂಡು ಕೆಡಿಸುವುದು ಎಂದು ಡಿಫೈನ್ ಮಾಡಲಾಗಿದೆ.
ಹೆಣ್ಣುಮಕ್ಕಳು ಮನೆಯಲ್ಲಿ, ಸ್ಕೂಲ್, ಕಾಲೇಜ್, ಆಫೀಸ್‌ಗಳಲ್ಲಿ ಅಥವಾ ಯಾವುದೇ ಕೆಲಸದ ಜಾಗದಲ್ಲಿ ಎಮೋಶನಲ್ ಅತ್ಯಾಚಾರಕ್ಕೆ ಒಳಗಾಗಬಹುದು. ಮನೆಯಲ್ಲೇ ಇದರ ಮೊದಲ ಅನುಭವ ಆಗಿಬಿಡುವುದರಿಂದ, ಅದರ ಜೊತೆಗೆ ಹೊಂದಿಕೊಂಡು ಹೋಗುವವರೇ ಹೆಚ್ಚು. ದುರಂತವೆಂದರೆ, ಬಹಳಷ್ಟು ಹೆಣ್ಣುಮಕ್ಕಳಿಗೆ ತಮ್ಮ ಜೀವಮಾನವಿಡೀ ಹೀಗೆ ತಮ್ಮ ಖಾಸಗಿತನವು ಆಕ್ರಮಿಸಲ್ಪಟ್ಟಿದ್ದು ಗೊತ್ತೇ ಆಗಿರೋದಿಲ್ಲ.

ಮನೆಯಲ್ಲೇ ಮೊದಲು
ಯಾರನ್ನಾದರೂ ತಮ್ಮ ಅಂಕೆಗೆ ತೆಗೆದ್ಕೊಳ್ಳಬೇಕಂದರೆ, ಅವರಲ್ಲಿ ಗಿಲ್ಟಿ ಫೀಲಿಂಗ್ ಮೂಡಿಸುವುದು ಒಂದು ಸರಳ ವಿಧಾನ. ಹೆಣ್ಣುಮಕ್ಕಳು ಅಂಕೆಯಲ್ಲಿದ್ದರೆ ಸಂಸಾರ ಸಲೀಸಾಗಿ ನಡೆಯುತ್ತದೆ ಎನ್ನುವ ಪುರಾತನ ನಂಬಿಕೆಯು ಅವರ ಮೇಲೆ ಅನಗತ್ಯವಾಗಿ ತಪ್ಪುಗಳ ಹೊರೆ ಹೊರಿಸುತ್ತಾ ಸಾಗುತ್ತದೆ. ಮನೆಯಲ್ಲಿ ಹೊಂದಿಕೊಂಡು ಹೋಗಬೇಕೆನ್ನುವ ಮೊದಲ ಪಾಠ ಒಳಿತಿನ ದೃಷ್ಟಿಯಿಂದ ಎಷ್ಟೋ ಹೆಚ್ಚೂಕಡಿಮೆ ಅಷ್ಟೇ ಪ್ರಮಾಣದ ತಾರತಮ್ಯ ದೃಷ್ಟಿಯನ್ನೂ ಹೊಂದಿರುತ್ತದೆ. ತಾನು ಕೂಡ ಇಂಥ ಅತ್ಯಾಚಾರಗಳನ್ನು ಹಾದುಬಂದ ಅಮ್ಮನೆ ಮಗಳ ಇಷ್ಟಗಳನ್ನು ಚಿವುಟುತ್ತ, ಘಾಸಿ ಮಾಡುತ್ತ ನಡೆಯುತ್ತಾಳೆ. ಅಳು, ಬೇಡಿಕೊಳ್ಳುವಿಕೆ, ಬಯ್ಗುಳಗಳು, ಶಿಕ್ಷೆ ಇವೆಲ್ಲ ಕಾಲಕ್ರಮದಲ್ಲಿ ಹೂಡಿಕೊಳ್ಳುತ್ತಾ ಆ ಹೆಣ್ಣುಮಗಳಲ್ಲಿ ನ್ಯಾಚುರಲ್ ಆಗಿ ಅರಳಿಕೊಂಡಿರುವ ಜೀವಂತಿಕೆಯನ್ನು ಮುದುಡಿಸುತ್ತ ಸಾಗುತ್ತವೆ.
ಮನೆಯಲ್ಲಿ ಇದರ ಮೊದಲ ಪರಿಚಯ ಆಗುವಂತೆಯೇ ಇದನ್ನು ಮುಚ್ಚಿಟ್ಟುಕೊಳ್ಳುವ ರೂಢಿಯೂ ಮೊದಲಾಗುತ್ತದೆ. ತಮ್ಮ ಖಾಸಗಿತನದೊಳಕ್ಕೆ ಯಾರೇ ಬಂದರೂ ಅದೊಂದು ಆಕ್ಷೇಪಾರ್ಹ ಸಂಗತಿ ಎಂದು ಕನ್ಸಿಡರ್ ಮಾಡುವುದೇ ಇಲ್ಲ. ಪ್ರತಿಕ್ರಿಯೆ ಬರುವುದಿಲ್ಲ ಎನ್ನುವುದು ಖಾತ್ರಿಯಾದಾಗ, ಸ್ಪಂದನೆಯ ಬದಲಿಗೆ ವ್ಯಂಗ್ಯ ಮತ್ತು ಅನುಸರಿಸಿಕೊಂಡು ಹೋಗೆನ್ನುವ ಬುದ್ಧಿವಾದವೇ ದೊರೆಯುತ್ತದೆ ಎಂದು ಗೊತ್ತಾದಾಗ `ಸುಮ್ಮನಿದ್ದುಬಿಡುವುದೇ ಸುಖ’ ಎನ್ನಿಸತೊಡಗುತ್ತದೆ.
ಮನಶ್ಶಾಸ್ತ್ರಜ್ಞ  ರಿಚರ್ಡ್ ಡ್ರೇಫಸ್ ಹೇಳುವ ಹಾಗೆ, `ಎಮೋಶನಲ್ ರೇಪ್‌ಗೆ ಒಳಗಾದವರು ಅತ್ಯುತ್ತಮ ನಟರಾಗಿ ರೂಪುಗೊಳ್ಳುತ್ತಾರೆ.ಯಾಕೆಂದರೆ, ತಮ್ಮದಲ್ಲದ ಯೋಚನೆಗಳನ್ನು ಅವರು ಇಷ್ಟಪಡಬೇಕಿರುತ್ತದೆ. ತಮ್ಮ ಇಡಿಯ ಜೀವನವನ್ನ ಅವರು ತಮಗಾಗಿರುವ ಭಾವನಾತ್ಮಕ ಆಘಾತ ಹಾಗೂ ನೋವುಗಳನ್ನು ಮುಚ್ಚಿಟ್ಟುಕೊಳ್ಳುತ್ತಾ ಏನೂ ಸಮಸ್ಯೆಯಾಗಿಲ್ಲ ಎನ್ನುವಂತೆ ಪೋಸ್ ಕೊಡುತ್ತಾ ಕಳೆಯಬೇಕಿರುತ್ತದೆ.’ ಒಳಗೆ ಚಡಪಡಿಕೆ ಇಟ್ಟುಕೊಂಡು ಹೊರಗೆ ತಣ್ಣಗೆ ತೋರಿಸಿಕೊಳ್ಳುವುದು ಜಗತ್ತಿನ ಶ್ರೇಷ್ಟ ನಟನೆಯಂತೆ. ನಿಜ ಬದುಕಿನಲ್ಲಿ ಗಂಡಿಗಿಂತ ಹೆಣ್ಣು  ಹೆಚ್ಚು ಚೆನ್ನಾಗಿ ನಟಿಸುತ್ತಾಳಂತೆ. ಇದನ್ನು ನಮಗೇನೇ ಬಹಳಷ್ಟು ಬಾರಿ  ನಟಿಸಿ ಗೊತ್ತುಮಾಡಿಕೊಂಡಿದ್ದೇವಲ್ಲವೆ?

ವೈವಿಧ್ಯತೆ ಇದೆ!
ಹೆಣ್ಣುಮಕ್ಕಳನ್ನ ಭಾವುಕವಾಗಿ ಎಕ್ಸ್‌ಪ್ಲಾಯ್ಟ್ ಮಾಡೋದು ಬಹಳ ಸುಲಭ. ಮನೋವಿಜ್ಞಾನ ಹೆಣ್ಣಿನ ಮನಸ್ಸನ್ನು ಬಿಚ್ಚಿಡುತ್ತಾ, ಅದರ ಸೂಕ್ಷ್ಮತೆ, ಸ್ಪಂದನೆ ಮತ್ತು ಆಸಕ್ತಿಗಳನ್ನು ಅನಲೈಸ್ ಮಾಡಿ ಈ ಮಾತನ್ನು ಹೇಳಿದೆ. ಗಂಡಸರಿಗಿಂತ ಹೆಚ್ಚು ರಂಜನೀಯ ಬದುಕು ಮತ್ತು ಸಾಧ್ಯತೆಗಳನ್ನು ಹೊಂದಿರುವ ಹೆಣ್ಣುಗಳು ಹರ್ಟ್ ಆಗಲು ಕೂಡ ಅಷ್ಟೇ ವೈವಿಧ್ಯಮಯ ಆಯ್ಕೆಗಳಿವೆ.
ಮನೆಯ ವಾತಾವರಣವು ಸಾಮಾಜಿಕ ರೀತಿರಿವಾಜಿಗೆ ಒಳಪಡುವ ಪಾರಂಪರಿಕ ಕಾರಣಗಳಿಂದಾಗಿ ಪರಸ್ಪರ ಅರಿವಿಲ್ಲದೆ ನಿರಂತರ ಭಾವುಕ ಅತ್ಯಾಚಾರದ ತಾಣವಾಗಿ ರೂಪುಗೊಂಡಿರುತ್ತದೆ. ಇಲ್ಲಿದು ಅರಿವಿನ ಹೊರತಾಗಿ ನಡೆಯುವ ಪ್ರಕ್ರಿಯೆಯಾದ್ದರಿಂದ ಪರಿಹಾರ ಹುಡುಕುವುದು ಕಷ್ಟ. ಏಕೆಂದರೆ ಇಲ್ಲಿಯ ಎಮೋಶನಲ್ ರೆಪಿಸ್ಟ್‌ಗಳು ಹಾನಿ ಮಾಡಲೇಬೇಕೆನ್ನುವ ದುರುದ್ದೇಶ ಹೊಂದಿರುವುದಿಲ್ಲ.
ಹೊರಗಿನ ಬದುಕಿಗೆ ಬಂದಾಗ, ದೇಹದ ನಿಲುವು, ರೂಪ, ಬಟ್ಟೆಬರೆ, ಆಯ್ಕೆಗಳು ಇವೆಲ್ಲವೂ ಮಾತಿನ- ನೋಟದ ಲೂಟಿಗೊಳಗಾಗುತ್ತ ಸಾಗುತ್ತವೆ. ಇಲ್ಲಿ ಗಾಸಿಪಿಂಗ್, ಮುಖ್ಯ ಆಯುಧವಾಗಿ ಬಳಸಲ್ಪಡುತ್ತದೆ. ಹೆಣ್ಣುಮಕ್ಕಳ ಲವ್ ಅಫೇರ್‌ಗಳನ್ನು ಕಲ್ಪಿಸಿಕೊಂಡು ಅದನ್ನೇ ಸುದ್ದಿಯಾಗಿಸುವುದು, ನಡತೆಯ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುವುದು, ಅನಾನಿಮಸ್ ಆಗಿ ಪತ್ರಗಳನ್ನು ಬರೆಯುವುದು, ಸುಳ್ಳು ಪ್ರೀತಿ ನಟಿಸುತ್ತ ಅವರ ವಿಷಯಗಳನ್ನು ತಿಳಿದುಕೊಂಡು ಅನಂತರ ಬ್ಲಾಕ್‌ಮೇಲ್ ಮಾಡುವುದು- ಇವೆಲ್ಲ ಕೈಮೀರಿದ ಹಂತದಲ್ಲಿ ಜೀವವನ್ನೇ ತೆಗೆದುಕೊಳ್ಳಬಹುದಾದ ಅತ್ಯಾಚಾರಗಳು. ಯಾವುದೆ ದೇಶದ ಕಾನೂನು ಕೂಡ ಈವರೆಗೆ ಇಂಥ ಎಮೋಶನಲ್ ಅತ್ಯಾಚಾರಗಳಿಗೆ ಕಠಿಣ ಶಿಕ್ಷೆ ವಿಸಿಲ್ಲ. ಇಂಥವನ್ನು ‘ಕ್ರೈಮ್’ ಎಂದು ಪರಿಗಣಿಸತೊಡಗಿದ್ದೇ ಇತ್ತೀಚಿನ ದಶಕಗಳಲ್ಲಿ.
ಎಮೋಶನಲ್ ರೇಪ್‌ನ ಆಘಾತದಿಂದ ಹೊರಬರುವುದು ಕಷ್ಟಸಾಧ್ಯ ಎನ್ನಿಸುವ ಪ್ರಕ್ರಿಯೆ. ಏಕೆಂದರೆ ಇಲ್ಲಿ ಆಗಿರುವ ನಷ್ಟಗಳು ಕಣ್ಣಿಗೆ ಕಾಣುವಂಥದ್ದಲ್ಲ, ಯಾವುದೇ ಪರೀಕ್ಷೆಯಿಂದ ಖಚಿತ ಮಾಡಿಕೊಳ್ಳುವಂಥದ್ದಲ್ಲ. ಎಷ್ಟೋ ಬಾರಿ ಅದಕ್ಕೆ ಒಳಗಾದವರಿಗೇ ಅದರ ಅರಿವಿರುವುದಿಲ್ಲ. ಅಲ್ಲದೆ, ಇದು ಒಮ್ಮಿಂದೊಮ್ಮೆಗೆ ಎಸಗಬಹುದಾದ ಅತ್ಯಾಚಾರವಲ್ಲ. ವಿವಿಧ ಸನ್ನಿವೇಶಗಳಲ್ಲಿ, ಬಹಳ ಸ್ಕಿಲ್‌ಫುಲ್ ಆಗಿ ಇದನ್ನು ನಡೆಸಲಾಗುತ್ತದೆ. ಆದ್ದರಿಂದಲೇ ಇದರ ಪರಿಣಾಮ ಹೆಣ್ಣಿನ ವ್ಯಕ್ತಿತ್ವದೊಳಗೆ ವ್ಯಾಪಿಸಿಕೊಳ್ಳುತ್ತಾ ಅವಳ ಸ್ಪೇಸ್ ಅನ್ನು ನುಂಗುತ್ತಾ, ಅವಳ ಪರ್ಸನಾಲಿಟಿಯನ್ನು ಇಲ್ಲವಾಗಿಸುತ್ತಾ ಸಾಗುತ್ತದೆ. ಎಮೋಶನಲ್ ರೇಪ್‌ನಿಂದಾಗಿ ಹೆಣ್ಣುಮಕ್ಕಳ ಜೀವನ ಮೌಲ್ಯವೆ ದೊಡ್ಡ ಕುಸಿತ ಕಾಣುತ್ತದೆ.

ಕೆಲವು ಪರಿಹಾರಗಳು
ಮೈಗಾದ ಗಾಯ ಮಾಯುವುದು ಸುಲಭ, ಮನಸ್ಸಿಗಾದ ಗಾಯ ಹುಡುಕೋದೇ ಕಷ್ಟ! ಹೀಗಿರುವಾಗ ಹರ್ಟ್ ಆಗದಂತೆ ತಡೆದುಕೊಳ್ಳುವ ಸಾಧ್ಯತೆ ಇದೆಯೇ? ಈ ನಿಟ್ಟಿನ ಪ್ರಯತ್ನವನ್ನಂತೂ ಮಾಡಬಹುದು. ಯಾರಿಗೆಷ್ಟು ಜಾಗ ಕೊಡಬೇಕೋ, ಯಾವ ಸ್ಥಾನ ಕೊಡಬೇಕೋ ಅಷ್ಟನ್ನು ಮಾತ್ರ ಕೊಡುವ ಎಚ್ಚರಿಕೆ ಇರಬೇಕು. ಯಾವುದೇ ಸಂಗತಿಯಾದರೂ ನೀವು ಅವಕಾಶ ಕೊಟ್ಟಾಗ ಮಾತ್ರ ಅದು ನಿಮ್ಮಲ್ಲಿ ಸಂಭವಿಸುತ್ತದೆ. ನಿಮ್ಮ ಪರ್ಸನಾಲಿಟಿಯ ಗೋಡೆಗಳನ್ನು ಸಾಧ್ಯವಾದಷ್ಟು ಗಟ್ಟಿ ಇಟ್ಟುಕೊಳ್ಳಬೇಕು.
ಎಲ್ಲಕ್ಕಿಂತ ಮೊದಲು ನಮ್ಮಲ್ಲಿ ೨೪ X ೭ ಅವೇರ್‌ನೆಸ್ ಇರಬೇಕು. ನಮ್ಮ ಖಾಸಗಿ ವಲಯದೊಳಕ್ಕೆ ಯಾರೂ ಅನಧಿಕೃತವಾಗಿ ಹೊಕ್ಕಿಕೊಳ್ಳದಂತೆ ಎಚ್ಚರ ವಹಿಸಬೇಕು. ಎಳವೆಯಲ್ಲಿದು ಕಷ್ಟ. ಆದರೆ ನಮಗೇನು ಬೇಕು ಎಂದು ಅರಿವಾಗತೊಡಗುವ ಹೊತ್ತಲ್ಲೇ ನಮಗೇನು ಬೇಡ ಅನ್ನುವುದರ ಅರಿವನ್ನೂ ಬೆಳೆಸಿಕೊಳ್ಳುತ್ತ ಬೆಳೆಯಬೇಕು. ಇಲ್ಲಿ ಪ್ರತಿರೋಧ, ಪರಿಹಾರಗಳಿಗಿಂತ ಮುನ್ನೆಚ್ಚರಿಕೆಯೇ ಮಹತ್ವದ್ದು.