ನಾನು ಹೆಂಗಸಾದ ದಿನ….

ಪ್ರತಿ ಸಾರ್ತಿಯಂತೆ ಈ ಸಲವೂ ‘ಸಾಂಗತ್ಯ’ ಸಿನೆಹಬ್ಬದಲ್ಲಿ ಒಳ್ಳೊಳ್ಳೆ ಸಿನೆಮಾಗಳನ್ನ ನೋಡಿದ್ವಿ, ಚರ್ಚೆ ಮಾಡಿದ್ವಿ. ಅವುಗಳಲ್ಲೊಂದು The Day I became Woman ಅನ್ನುವ ಇರಾನಿ ಸಿನೆಮಾ. ನಂಗೆ ಈ ಸಿನೆಮಾ ಬಹಳ ಇಷ್ಟವಾಯ್ತು.  ಅದರ ಮೇಕಿಂಗ್ ಖುಷಿ ಕೊಡ್ತು. ಇದರ ಜತೆ ಪುಟಾಣಿ ಪಾರ್ಟಿ, ಎಲ್ ವಯೋಲಿನೋ, ರೆಡ್ ಬಲೂನ್, ಪೊನೆಟ್ ಮೊದಲಾದ ಚೆಂದದ ಸಿನೆಮಾಗಳನ್ನೂ, ಅಘನಾಶಿನಿ, ದ ಹೋಮ್ ಮೊದಲಾದ ಸಾಕ್ಷ್ಯಚಿತ್ರಗಳನ್ನೂ ನೋಡಿದ್ವಿ.
ಅದೆಲ್ಲ ಇರ್ಲಿ…  ‘ದ ಡೇ…’ ಬಗ್ಗೆ ಅನಿಸಿಕೆ ಬರೆದು ನನ್ನ ಗೆಳೆಯರೊಬ್ಬರಿಗೆ mail ಮಾಡಿದ್ದೆ. ಅವರು ನೇರಾನೇರ ‘ಎಲ್ಲಾದ್ನೂ ನೀವು ಅದೇ ಭಾಮಿನಿ ಷಟ್ಪದಿ ಸ್ಟೈಲಲ್ಲೇ ಹೇಳ್ತೀರಲ್ರೀ… ಫಿಲ್ಮ್ ಬಗ್ಗೆ ಹೇಳುವಾಗ್ಲೂ!’ ಅಂತ ಅಂದರು. ಅವರು ನನ್ನನ್ನ ಹೀಗೆ ಎಚ್ಚರಿಸಿದ್ದಕ್ಕೆ ಋಣಿ, ಆಭಾರಿ…
(ಇದನ್ನ ನೀವು, ನೀವೂ ಹಾಗನ್ನುವ ಮೊದಲೇ ನಾನು ಕೊಡ್ತಿರೋ ಸಮಜಾಯಿಷಿ ಅಂತಲೂ ಅಂದ್ಕೊಳ್ಬಹುದು 🙂  )
~ ಚಿತ್ರ ಒಂದು~
ದೋಣಿಗೆ ಕಟ್ಟಿದ ಹಾಯಿ, ಅವಳ ದುಪಟ್ಟಾ.
ಗಂಡಸಿನ ದೋಣಿ ಸರಾಗ ಸಾಗಲಿಕ್ಕೆ ಅವಳ ಹಾಯಿ ಬೇಕು.
ಆ ಸಿನೆಮಾ ಶುರುವಾಗೋದೇ ಕರೀ ದುಪಟ್ಟಾ (ಪರ್ದಾ) ದೋಣಿಯ ಹಾಯಿಯಾಗಿ ಪಟಪಟಿಸೋದರಿಂದ. ಅದನ್ನ ಪತರಗುಟ್ಟಿಸುವ ಗಾಳಿಯೇ ಹವಾಳ ಟೆಂಟಿನ ಬಟ್ಟೆಯನ್ನೂ ಪಟಪಟಿಸುತ್ತದೆ. ಮನೆಯ ಮೇಲೆ ಯಾಕೆ ಆ ಹುಡುಗಿಗೆ ಟೆಂಟು ಹಾಕಿಕೊಟ್ಟಿದಾರೆ? ಅವಳು ದೊಡ್ಡವಳಾಗಿಬಿಟ್ಟಿದಾಳಾ?
ಅಮ್ಮ ಹೇಳ್ತಾಳೆ, ‘ಹವಾ, ನೀನಿನ್ನು ಹುಡುಗರೊಟ್ಟಿಗೆ ಆಡಹೋಗಲಿಕ್ಕಿಲ್ಲ. ನೀನು ದೊಡ್ಡವಳಾಗ್ತಿದೀ’.
ಅತ್ತ ಹಸನ ಅವಳಿಗೆ ಐಸ್‌ಕ್ರೀಮಿನ ಆಮಿಷವೊಡ್ಡುತ್ತಿದಾನೆ. ಹುಡುಗಿ ಗೋಗರೀತಿದಾಳೆ. ಅಮ್ಮ, ಅಜ್ಜಿಗೆ ಅವಳಿಗೊಂದು ಪರ್ದಾ ತಯಾರುಮಾಡುವ ಸಡಗರ.
‘ನಾನು ಹುಟ್ಟಿದ್ದು ಮಧ್ಯಾಹ್ನ ತಾನೇ? ದೊಡ್ಡೋಳಾಗಲಿಕ್ಕೆ ಮಧ್ಯಾಹ್ನದವರೆಗೂ ಸಮಯವಿದೆ. ಅಲ್ಲೀವರೆಗೆ ಆಡಿಕೊಂಡು ಬರ್ತೀನಿ’ ಹುಡುಗಿಯ ತರ್ಕ. ಅದಕ್ಕೆ ಹಿರಿಯರ ತಾತ್ಕಾಲಿಕ ಸೋಲು.
ಅಮ್ಮ ಕೈಲೊಂದು ಕಡ್ಡಿಯಿಟ್ಟು ಹೇಳ್ತಾಳೆ. ‘ನೋಡು, ಇದರ ನೆರಳು ಮಾಯವಾಗ್ತದಲ್ಲ, ಆಗ ಮಧ್ಯಾಹ್ನವಾಗ್ತದೆ. ವಾಪಸು ಬಂದ್ಬಿಡಬೇಕು’.
ಹೊರಗೆ ಹೋದ ಪೂರ್ತಿ ಹುಡುಗಿಗೆ ನೆರಳು ಅಳೆಯೋದೇ ಕೆಲಸ. ಹಹ್ಹ್! ಒಂದು ಕಡ್ಡಿ, ಹುಡುಗಿಯೊಬ್ಬಳ ಸ್ವಾತಂತ್ರ್ಯವನ್ನ ನಿರ್ಧರಿಸ್ತಿದೆ!!
ಅಮ್ಮ ಹೊಚ್ಚಿ ಕಳಿಸಿದ ದುಪಟ್ಟಾವನ್ನ ಹುಡುಗರ ದೋಣಿಗೆ ಹಾಯಿ ಮಾಡಲು ಕೊಟ್ಟುಬಿಡ್ತಾಳೆ ಹವಾ. ಹಸನನೊಟ್ಟಿಗೆ ಎಂಜಲು ಮಾಡಿಕೊಂಡು ಲಾಲಿಪಪ್ ಸವಿಯುತ್ತಾಳೆ. ಅಷ್ಟರಲ್ಲಿ ಕಡ್ಡಿ ಕೆಳಗಿನ ನೆರಳು ಮಾಯ.
ಅಮ್ಮ ಬರ್ತಾಳೆ. ಮತ್ತೊಂದು ಉದ್ದದ ಸ್ಕಾರ್ಫ್ ತಲೆಗೆ ಹೊಚ್ಚುತಾಳೆ. ಮಗಳ ಮುಖದಲ್ಲಿ ಅಂಥ ವಿಷಾದವೇನೂ ಇಲ್ಲ. ಮಧ್ಯಾಹ್ನವಾಯ್ತು, ತಾನು ದೊಡ್ದವಳಾಗಿರಬೇಕು ಅನ್ನುವ ಭಾವ. ಅಮ್ಮನ ಜತೆ ಸಮುದ್ರದತ್ತ ಹೊರಡುತ್ತಾಳೆ…
**
~ಚಿತ್ರ ಎರಡು~
ಕುದುರೆಯೇರಿದ ಅಂವ ಅರಚಿಕೊಳ್ತಿದಾನೆ… ‘ಆಹೂ…’
ಅವಳಲ್ಲಿ, ಸೈಕಲ್ ರೇಸಲ್ಲಿ ಎಲ್ಲರನ್ನ ಹಿಂದಿಕ್ಕಿ ಮುಂದೆ ಮುಂದೆ. ಬಂದವ ಅವಳ ಗಂಡ. ಸೈಕಲಿನಿಂದ ಇಳಿದು ಬರುವಂತೆ ತಾಕೀತು ಮಾಡ್ತಾನೆ. ಅವಳು ಕೇಳೋಲ್ಲ. ತಲ್ಲಾಖ್ ಕೊಡ್ತೀನಂತ ಹೆದರಿಸ್ತಾನೆ. ಊಹೂ… ಜಗ್ಗೋದಿಲ್ಲ. ಅವನ ಅಟಾಟೋಪ ಹೆಚ್ಚಿದಂತೆಲ್ಲ ಅವಳು ಮತ್ತಷ್ಟು ಬಲನೂಕಿ ಮುಂದೆ ಸಾಗ್ತಾಳೆ.
ಅದೇ, ಅವನು ಅತ್ತ ಹೋದಾದಮೇಲೆ ಕುದುರೆಯ ಖುರಪುಟದ ಭ್ರಮೆ ಅವಳನ್ನ ಹಿಂದಕ್ಕೆಳೆಯುತ್ತದೆ.
ಮತ್ತೆ ಅವನೊಟ್ಟಿಗೆ ಇಮಾಮ್ ಬರ್ತಾನೆ. ನೀತಿ ಪಾಠ ಹೇಳಿ ಬೆದರಿಸ್ತಾನೆ. ಅವಳ ಅಜ್ಜ, ಅಪ್ಪ… ಎಲ್ಲರೂ ಸೈಕಲ್ ಇಳಿದು ಬರಲು ಹೇಳುವವರೇ.
ಅವರೆಲ್ಲ ನಿಜವಾಗಿಯೂ ಸುತ್ತುವರೆದಾಗ ಆಹೂಗೆ ಎಲ್ಲಿಲ್ಲದ ಆವೇಗ. ಆಗೆಲ್ಲ ಅವಳು ಅವರನ್ನ ಧಿಕ್ಕರಿಸಿ ಮುಂದುವರೆದು ಗೆಲುವಿನಂಚಿಗೆ ಸಾಗುವವಳೇ.
ಅವರಿಲ್ಲದಾಗ… ಅವರ ಬೆದರಿಕೆಯ ಭ್ರಮೆ , ಹಾದಿ ಬದಿ ಹೆಂಗಸರ ಕೆಣಕು ಮಾತುಗಳು ಅವಳನ್ನ ಹಿಂದಕ್ಕೆ ತಳ್ಳುವವು. ಅವನ್ನೆಲ್ಲ ಮೀರಿ ಆಹೂ ಮುಂದಾಗ್ತಾಳೆ.
ಆದರೇನು? ಅವಳ ಅಣ್ಣ ತಮ್ಮಂದಿರು ಅವಳನ್ನ ಅಡ್ಡಗಟ್ಟುತಾರೆ. ಬಲವಂತವಾಗಿ ಸೈಕಲ್ ಕಿತ್ತುಕೊಳ್ತಾರೆ. ಆಹೂ ರೇಸಿನಿಂದ ಹೊರಗುಳೀತಾಳೆ.
**
~ಚಿತ್ರ ಮೂರು~
ಹೂರಾ ಏರೋಪ್ಲೇನಿಂದ ಕೆಳಗಿಳೀತಾಳೆ. ಅವಳ ಹತ್ತೂ ಬೆರಳು ತುಂಬ ಬಟ್ಟೆ ಪಟ್ಟಿಗಳ ಕಟ್ಟು! ಅವೆಲ್ಲ ಅವಳ ಬಯಕೆ ಪಟ್ಟಿಗಳಂತೆ.
ಹುಡುಗನೊಬ್ಬ ತಳ್ಳುಗಾಡಿಯಲ್ಲಿ ಅವಳನ್ನ ಕೂರಿಸ್ಕೊಂಡು ಶಾಪಿಂಗ್ ಮಾಡಿಸ್ತಾನೆ. ಎಲ್ಲ, ಎಲ್ಲ ಆಧುನಿಕ ವಸ್ತುಗಳನ್ನೂ ಕೊಳ್ಳುತ್ತ ಸಾಗುತ್ತಾಳೆ. ಜತೆಗೇ ಬೆರಳು ಕಟ್ಟುಗಳೂ ಕರಗುತ್ತಾ ಕೈ ಖಾಲಿಯಾಗ್ತದೆ. ಆದರೆ, ಒಂದೇ ಒಂದು ಕಟ್ಟೂ ಉಳಿದುಬಿಡ್ತದಲ್ಲಾ?
ಆದರೆ, ಅದೇನೆಂದು ಅವಳಿಗೆ ನೆನಪಾಗೋದೇ ಇಲ್ಲ. ಅವಳಿಗದೇ ಯೋಚನೆ.
ಅವನ್ನೆಲ್ಲ ಸಮುದ್ರ ತೀರಕ್ಕೆ ತಂದು ಬಿಚ್ಚಿಸುತ್ತಾಳೆ. ಎಲ್ಲವನ್ನೂ ಜೋಡಿಸಿಟ್ಟು ನೋಡಿ ಸಂಭ್ರಮಿಸ್ತಾಳೆ. ಅವಳದಲ್ಲಿ ಕೆಲಕಾಲ ಗೋಡೆಗಳಿಲ್ಲದ ಮನೆ. ಮುಪ್ಪಿನ ಹೊತ್ತಲ್ಲಿ ಅದವಳಿಗೆ ಸಿಕ್ಕ ಸ್ವಾತಂತ್ರ್ಯವಾ?
ಕೊನೆಗೆ ತೆಪ್ಪದ ಥರದ ದೋಣಿಯಲ್ಲಿ ಅದನೆಲ್ಲ ಹೇರಿಕೊಂಡು ಅವಳು ತೇಲಿಹೋಗ್ತಾಳೆ. ಆ ಕೊನೆಯ ದೃಶ್ಯ ಹೀಗಿದೆ…
ಹೂರಾ ತೆಪ್ಪದ ಮೇಲೆ ಸೋಫಾದಲ್ಲಿ. ಅವಳ ಸುತ್ತ ಮನೆಯ ಎಲ್ಲ ವಸ್ತುಗಳು. ಗೋಡೆಗಳಿಲ್ಲದ, ತೀರಗಳಿಲ್ಲದ ವಿಶಾಲ ಸಮುದ್ರದಲ್ಲಿ, ಮರೆತ ಅದೊಂದು ಬಯಕೆಯ ಕಟ್ಟಿನೊಂದಿಗೆ ಕೈಬೀಸಿ ಹೊರಟಿದಾಳೆ. ಇತ್ತ ಹವಾ ಅವಳಮ್ಮನ ಜತೆ ನಿಂತವಳು ದಿಟ್ಟಿಸಿ ಅದನ್ನೇ ನೋಡ್ತಿದಾಳೆ.
ಹೂರಾ ಹೊರಟುಹೋಗ್ತಾಳೆ.
ಅವಳು ಮರೆತ ಆಸೆ ಯಾವುದು? ಸ್ವಾತಂತ್ರ್ಯದ ಬಯಕೆಯಾ? ಎಲ್ಲ ಸಿಗುವ ಹೊತ್ತಿಗೆ ಅವಳಿಗದು ಮರೆತೇ ಹೋಗಿರ್ತದಾ? ಪಾರದರ್ಶಕ ಟೀಪಾತ್ರೆಯನ್ನ ನಾಚಿಗ್ಗೆಟ್ಟ ಬೆತ್ತಲು ಪಾತ್ರೆ ಅಂತ ಮೂಗುಮುರೀತಾಳಲ್ಲ? ಅವಳಿಗೆ ಆ ಹೊತ್ತಿಗೆ ಸ್ವಾಂತಂತ್ರ್ಯದ, ಒಳಗನ್ನ ತೆರೆದಿಡುವ, ಸ್ವೇಚ್ಛೆಯ ಬಯಕೆ ಸತ್ತು ಹೋಗಿರ್ತದಾ? ಅಥವಾ ಅವಳು ಎಲ್ಲ ಸಿಕ್ಕರೂ ಹಳೆಯ ಕಟ್ಟುಪಾಡುಗಳಿಗೆ ಒಗ್ಗಿದ್ದ ಮನಃಸ್ಥಿತಿಯಿಂದ ಹೊರಬರದವಳಾಗಿರ್ತಾಳಾ?
~~
ಈ ಮೂರೂ ತುಣುಕುಗಳು ‘ದ ಡೇ ಐ ಬಿಕೇಮ್ ವುಮನ್’ ಅನ್ನುವ ಇರಾನಿ ಚಿತ್ರದ್ದು. Marzieh Makhmalbaf (ಮಾರ್ಜಿಯಾ ಮಕ್ಮಲ್ಬಫ್) ಇದರ ನಿರ್ದೇಶಕಿ. (Marzieh Makhmalbaf (dialogue) Mohsen Makhmalbaf (writer)..)
ನಾಟಕದ ಶೈಲಿಯಲ್ಲಿರುವ ಸಿನೆಮಾ ಇದು. ಇಲ್ಲಿ ರೂಪಕಗಳದೇ ಸಾಮ್ರಾಜ್ಯ.
ಕಡ್ಡಿಯ ನೆರಳು ಅಳೀತಾ ಸಿಕ್ಕ ಸ್ವಾತಂತ್ರ್ಯದಲ್ಲೇ ಸುಖ ಸೂರೆ ಮಾಡಹೊರಡುವ ಮುಗ್ಧ ಹುಡುಗಿ…
ಅವಳಿಗಿರೋದು ಅಮ್ಮನ ಮಾತಲ್ಲಿ ನಂಬಿಕೆಯಷ್ಟೆ. ಅಮ್ಮ ಹೇಳ್ತಾಳೆ, ಕಡ್ಡಿಯ ನೆರಳು ಮಾಯವಾಗೋ ಹೊತ್ತು ಮಧ್ಯಾಹ್ನ. ನೀನು ಹೆಂಗಸಾಗ್ತೀ!
ಅದನ್ನ ನೆಚ್ಚಿಕೊಂಡ ಮಗಳಿಗೆ ಅದಷ್ಟೆ ತಲೆಯಲ್ಲಿ. ಅಮ್ಮನ ಮಾತು ಮುರಿಯುವ ಯೋಚನೆಯೇ ಅಲ್ಲಿಲ್ಲ. ಹೆಣ್ಣನ್ನು ಹುಟ್ಟಿದ ನಂತರ ಹೇಗೆ ಹೆಂಗಸನ್ನಾಗಿ ‘ಮಾಡಲಾಗುತ್ತದೆ’ ಅನ್ನುವುದು ಇಲ್ಲಿ ಅದೊಂದೇ ಸರಳ ಸಂಕೇತದ ಮೂಲಕ ಸಮರ್ಥವಾಗಿ ಹೇಳಲ್ಪಟ್ಟಿದೆ. ಇದು ಇರಾನಿಗೆ, ಯಾವುದೋ ಒಂದು ಪಂಥ, ದೇಶ ಕಾಲಕ್ಕೆಮಾತ್ರ ಸೀಮಿತವಾದುದಲ್ಲ. ಇದು ಮೂಲಭೂತವಾದದ ಒಲವಿರುವ ಮನಸುಗಳಿರುವ ಕಡೆಗೆಲ್ಲ ಅನ್ವಯವಾಗುವಂಥದ್ದು.
ಎರಡನೇ ಚಿತ್ರಣದಲ್ಲಿ ನಿಮಗಿದು ಸ್ಪಷ್ಟವಾಗುತ್ತೆ. ನೀವೇನಾದರೂ ಮೊದಲ ತುಣುಕನ್ನ ನೋಡಿ ‘ಇರಾನಿನಲ್ಲಿ ಹೆಂಗಸರ ಪಾಡು ಹೀಗೆ’ ಅಂತ ತೀರ್ಮಾನಿಸಿದರೆ ಪೆದ್ದರಾಗ್ತೀರಿ. ಎರಡನೇ ಚಿತ್ರಣದಲ್ಲಿ ಸೈಕಲ್ ರೇಸಲ್ಲಿ ಪಾಲ್ಗೊಂಡ ಆಹೂ ಹೊರತು ಇನ್ನಾವ ಹೆಣ್ಣುಗಳಿಗೂ ಬೆದರಿಕೆಯ ಸಮಸ್ಯೆಯಿರೋದಿಲ್ಲ. ಅಲ್ಲಿ ಅವಳನ್ನು ಪ್ರಾತಿನಿಧಿಕವಾಗಿ ತೆಗೆದ್ಕೊಂಡಿದಾರೆ ಅನ್ನುವ ಹಾಗೂ ಇಲ್ಲ. ಯಾಕೆಂದರೆ, ಉಳಿದವರಲ್ಲಿ ಇಬ್ಬರು ಅವಳ ಸ್ಥಿತಿಯನ್ನ ಆಡಿಕೊಳ್ತಾರೆ. ಸೋ, ಉಳಿದವರು ಅದರಿಂದ ದೂರವೇ ಇದ್ದಾರೆ.
ವೈಯಕ್ತಿಕವಾಗಿ ನನಗಿಷ್ಟವಾಗಿದ್ದು ಎರಡನೇ ತುಣುಕಿನ ರೂಪಕಗಳು. ಕುದುರೆಯ ಓತದ ಕಾಲುಗಳ ಭ್ರಮೆಯಲ್ಲಿ ಹಿಂಜರಿಯುವ ಆಹೂ… ನಿಜದ ಜನದ ಬೆದರಿಕೆಗೆ ಸೆಡ್ಡು ಹೊಡೆದು ಮುನ್ನುಗುವ ಅವಳು…
ಹೆಣ್ಣು, ಸವಾಲು ಎದುರಾಗೇಬಿಟ್ಟಾಗ ಧೈರ್ಯದಿಂದ ಎದುರಿಸ್ತಾಳೆ. ಆದರೆ ಅವಳಲ್ಲಿನ ಭಯ ಅವಳನ್ನ ಹೈರಾಣು ಮಾಡುತ್ತೆ. ಜನದ ಮಾತು ಕೀಳರಿಮೆ ಮೂಡಿಸುತ್ತೆ. ಸಮುದ್ರ ಈ ಕಥನದ ಹಿನ್ನೆಲೆಯಲ್ಲಿ ಸಮರ್ಥವಾಗಿ ಬಳಕೆಯಾಗಿದೆ. ತೆರೆಗಳು ಹಿಂಜರಿಯುತ್ತಲೇ ಮುನ್ನುಗ್ಗುವ ಹಾಗೆ, ಕಡಲಲ್ಲೂ ಉಳಿಯಲಾಗದೆ, ದಡದಲ್ಲೂ ನಿಲ್ಲಲಾಗದೆ ತಳಮಳಿಸುವಂತೆ…
ಇಷ್ಟೆಲ್ಲ ಮಾತಿನ ಅಗತ್ಯವೇ ಬೇಕಿಲ್ಲ. ಸುಮ್ಮನೆ ಈ ಸಿನೆಮಾ ನೊಡಬೇಕು.
ಹಿರಿಯರ ಮಾತಿಗೆ ಕಟ್ಟುಬೀಳುವ ಅರಿಯದ ಹರೆಯದ ಹುಡುಗಿ,
ಅರಿತು, ಕಲಿತು ಮುನ್ನುಗ್ಗಬಯಸಿ ಗೆದ್ದರೂ ಒಡಹುಟ್ಟಿದವರ ದೈಹಿಕ ಬಲಕ್ಕೆ ಸೋಲಲೇ ಬೇಕಾದ ಅನಿವಾರ್ಯತೆ (ಹೆಣ್ಣು ಎಷ್ಟು ಗಟ್ಟಿಗಳಾದರೂ ದೇಹಬಲ ಪ್ರಕೃತಿಯೆಸಗಿದ ಮೋಸವೋ ಅಥವಾ ಇದ್ದೂ ಅವಲದನ್ನು ಪ್ರಯೋಗಿಸದೆ ಸುಮ್ಮನಿರುವಳೋ…)
ಮುದಿ ವಯಸ್ಸಲ್ಲಿ ಸಿಕ್ಕ ಸ್ವಾತಂತ್ರ್ಯವನ್ನ ಭೋಗವಸ್ತುಗಳ ಕೊಳ್ಳುವಿಕೆಯ ಹಳೆಬಯಕೆಯ ಈಡೇರಿಕೆಯಲ್ಲಿ ವಿನಿಯೋಗಿಸುವ, ಆ ಭರದಲ್ಲಿ ನಿಜದೊಂದು ಬಯಕೆಯನ್ನೇ ಮರೆತು ಹೋಗುವ ಎಲ್ಲ ಹೆಣ್ಣುಮಕ್ಕಳ ನಿಜದ ಪಾಡು…
ಇವು ಹೆಣ್ಣಿನ ಮೂರು ಘಟ್ಟಗಳ ಸಂಕೇತಗಳು.
ಒಟ್ಟಾರೆ ಹಿಡಿತವಿಲ್ಲದೆ ಬರೀ ಭಾವುಕಳಾಗಿ ಬರೆದ ಈ ಲೇಖನ ಮುಗಿಸುವ ಮೊದಲೊಮ್ಮೆ ಪ್ರಶ್ನೆ.
ಕೊನೆಯಲ್ಲಿ ಹವಾ ಮತ್ತು ಹೂರಾಳನ್ನು ಮುಖಾಮುಖಿ ತೋರಿಸೋದ್ಯಾಕೆ? ಹಾಗೆ ಬೆಳೆದವಳ ಕೊನೆ ಹೀಗಾಗ್ತದೆ ಅಂತಲಾ? ಹಾಗಾದರೆ ಹೂರಾ ಮರೆತ ಬಯಕೆ ಏನು? ಖುಷಿಖುಷಿಯಾಗಿ ಆಡಿಕೊಂಡು ತನ್ನ ಬದುಕು ಬದುಕಬೇಕು ಅನ್ನೋದಾ?
ಸಿನೆಮಾ ಕಾಡ್ತಲೇ ಇದೆ…
(ಸಾವಿರ ಮಾತುಗಳು, ಭಾವಾತಿರೇಕದ ನಾಟಕಗಳು ಕಟ್ಟಿಕೊಡಲಾಗದ ಎದೆನೋವನ್ನ ಈ ಚಿತ್ರದ ಕೆಲವೇ ರೂಪಕಗಳು ಕೊಟ್ಟಿವೆ, ಯೋಚನೆಗೆ ಹಚ್ಚಿವೆ ಅಂದರೆ ಅದು ಚಿತ್ರದ ಒಳ್ಳೆ ಗುಣವೋ? ಕೆಟ್ಟದ್ದೋ??)

SAMSARAದ ಒಳಹೊರಗೆ….

” What is more important? To satisfy one thousand desires, or to conquer just one?”

“………. There are things we must unlearn inorder to learn………. There are things we must own to renounce them”

 ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.

ಕಾಲಕ್ಕೆ ಸದಾ ಓಡುವ ಕಾಲು.

ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?

ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ-  ” What is more important? To satisfy one thousand desires, or to conquer just one?”

~

samsara-a-review31

ಸನ್ಯಾಸ ವಸ್ತ್ರ ಬಿಚ್ಚಿ, ಬೋಳುತಲೆಯಲ್ಲಿ ಕೂದಲು ಬೆಳೆಸಿ, ಸಂಸಾರಿಗರ ಬಟ್ಟೆ ತೊಟ್ಟು ಹೆಂಡತಿಯನ್ನ ಕಟ್ಟಿಕೊಂಡಿರುತ್ತಾನೆ ಲಾಮಾ ಆಗಿದ್ದ ತಾಶಿ.

ಇದೀಗ ಸಂಸಾರಿಗರ ಬಟ್ಟೆ ಕಳಚುತ್ತಿದಾನೆ, ಅದೇ ಕೊಳದಲ್ಲಿ ಮೀಯುತ್ತಿದಾನೆ. ತಲೆ ಬೋಳಿಸಿಕೊಂಡು ಸನ್ಯಾಸಿಯಾದೆಂದುಕೊಳ್ಳುತಿದಾನೆ. ಅವನು ಮುಖ ನೋಡಿಕೊಳ್ತಿರುವ ಕನ್ನಡಿ ಒಡೆದಿದೆ. ಅದರ ಸಂಕೇತವೇನಿರಬಹುದು? ಹೇಳಿ ವಾಚ್ಯವಾಗಿಸಬಾರದಲ್ಲವ?

~

ನಡು ರಾತ್ರಿಯಲ್ಲಿ ಮಗನ ತಲೆ ನೇವರಿಸಿ, ಮನೆಬಿಟ್ಟು ಸಿದ್ಧಾರ್ಥನಂತೆ ಹೊರಟಿರುತ್ತಾನೆ ತಾಶಿ. ಆದರೆ ಪೇಮಾ ಯಶೋಧರೆಯಂತಲ್ಲ. ಕುದುರೆಯೇರಿ ಅವನೆದುರು ಬಂದೇ ಬರುತ್ತಾಳೆ. ಶತಮಾನಗಳ ಕಾಲದಿಂದ ಎಲ್ಲ ಸ್ತ್ರೀಸಂವೇದನೆಯ ಮನಸುಗಳು ಕೇಳಿದ ‘ಯಶೋಧರೆಯ ಪ್ರಶ್ನೆ’ಗಳನ್ನ ಕೇಳ್ತಾಳೆ.

ಬುದ್ಧನ ಹಾಗಲ್ಲ ತಾಶಿ. (ಬುದ್ಧನಾಗಿ ಅರಗಿಸಿಕೊಳ್ಳುವ ತಾಖತ್ತಿದ್ದರೆ ಮನೆ ಬಿಟ್ಟು ಹೋಗುವ ಎಲ್ಲ ಗಂಡಸರನ್ನೂ ಮಾಫ್ ಮಾಡಿಬಿಡಬಹುದಿತ್ತೇನೋ!?). ಅಂವ ಕಣ್ಣೀರಿಡ್ತಾನೆ. ನಾನೆಲ್ಲಿಗೆ ಸೇರಿದೇನೋ ಅಲ್ಲಿಗೇ ಬರ್ತೇನೆ, ನಿನ್ನ ಜತೆ ಬರ್ತೇನೆ ಅನ್ನುತಾನೆ. ಆದರೆ ಪೇಮಾ?  ‘ಸುಖಪ್ರಯಾಣ’ದ ಗಂಟನ್ನ ಅವನ ಮಡಿಲಿಗೆ ಹಾಕಿ ಹೊರಟುಹೋಗ್ತಾಳೆ.(ನನಗೆ ಸಖತ್ ಖುಷಿಯಾಗಿದ್ದು ಇವಾಗ್ಲೇ! ಅವನ ಬಗ್ಗೆ ಪಾಪ ಅನಿಸ್ತಾದ್ರೂ, ಅದು ಅನುಕಂಪ ಮಾತ್ರ. ಪೇಮಾಳ ಉತ್ತರ ಎಂಥ ದೊಡ್ಡ ಸಂದೇಶ!). ಸರಿ, ಇಂವ ಬಿಕ್ಕಿ ಬಿಕ್ಕಿ ಬಿಕ್ಕಿ…

~

ಸುಮಾರು ವರ್ಷಗಳ ಕೆಳಗೆ… ತಾಶಿ ಮೂರು ವರ್ಷ-ಮೂರು ತಿಂಗಳು-ಮೂರು ವಾರ-ಮೂರು ದಿನ ತಪಸ್ಸು ಮಾಡಿದ ನಂತರ ಬುದ್ಧ ವಿಹಾರಕ್ಕೆ ಒಯ್ಯಲ್ಪಡುತ್ತಿರ್ತಾನಲ್ಲ, ಆಗ ವಿಹಾರದ ಬಳಿಯ ಒಂದು ಬಂಡೆಗಲ್ಲಿನ ಮೇಲೆ ಓದಿರ್ತಾನೆ- “How can one prevent a drop of water from drying up?”

ಈಗ ಉತ್ತರ ಹುಡುಕುವ ಕಾಲ ಸನ್ನಿಹಿತ. ಪ್ರಶ್ನೆಯ ಬೆನ್ನಲ್ಲೆ ಉತ್ತರವಿದೆ. ಅಂದರೆ, ಬಂಡೆಗಲ್ಲಿನ ಹಿಂಭಾಗದಲ್ಲಿ… “By throwing it in to the sea”!

ತಾಶಿಗೆ ಅರ್ಥವಾಯ್ತಾ?

ನಮಗೆ?

ಇಲ್ಲಿ ಎರಡು ಅರ್ಥಗಳಿರಬಹುದು. “ಸಂಸಾರ ಸಾಗರದಲ್ಲಿ ಒಂದಾಗಿಹೋಗುವುದು” ಅಂತಲೂ, “ಪರಮಾರ್ಥದಲ್ಲಿ ಒಂದಾಗುವುದು (ಮೋಕ್ಷ))” ಅಂತಲೂ…

ಕೊನೆಯ ಬಗ್ಗೆ ನಮಗೆ ಸಿಗುವ ಹಿಂಟ್- ಮಾಗಿದ ಎಲೆಗಳ ಮರ (ಇದು ಚಿತ್ರದುದ್ದಕ್ಕೂ ವಿವಿಧ ಋತುಗಳನ್ನು ಸಂಕೇತಿಸುತ್ತ, ಪೂರಕ ಅರ್ಥಗಳನ್ನು ಕೊಡುತ್ತ ನಮಗೆ ಬಹಳ ಕಡೆ ಎದುರಾಗುತ್ತದೆ), ಮತ್ತು ಅವನು ಪ್ರವೇಶಿಸುವ ಮಾಗಿದ ಹಳದಿ ಎಲೆಗಳ ಕಾಡು. ಇದನ್ನು ನಾವು ತಾಶಿಯ ಮಾಗುವಿಕೆಯಾಗೂ ಅರ್ಥೈಸಿಕೊಳ್ಳಬಹುದು ಬೇಕಿದ್ದರೆ.

ಹಾ… ಸಿನೆಮಾದ ಶುರುವಲ್ಲಿ ಹದ್ದೊಂದು ಕುರಿಯ ತಲೆಮೇಲೆ ಕಲ್ಲು ಹೊತ್ತಾಕಿ ಜೀವ ತೆಗೆಯುವ ದೃಶ್ಯವಿದೆ. ತಾಶಿ ಬಂಡೆಗಲ್ಲಿನ ಬರಹವನ್ನೋದಿ ತಲೆ ಎತ್ತಿದಾಗ ಅದೇ ಹದ್ದು ಚಕ್ರಚಕ್ರ ತಿರುಗುತ್ತ ಹಾರಾಡುತ್ತ, ನಮ್ಮಿಂದ ಕಲ್ಲು ಬೀಳುವುದನ್ನೆ ಕಾಯುವ ಹಾಗೆ ಮಾಡುತ್ತದೆ.

but, sorry… ಅಲ್ಲಿಗೆ ಸಿನೆಮಾ ಮುಗಿಯುತ್ತದೆ!

 ಒಂದು ನೀತಿ ಕಥೆಯ ಹಾಗೆ ನೋಡಿ ನಮ್ಮ ಕೆಲಸ ಮುಂದುವರೆಸ್ಕೊಂಡು ಹೋಗಬೇಕಾದಂಥದಲ್ಲವಾ ಇದು? ಅಂದರೆ, ಸೀರಿಯಸ್ಸಾಗಿ ತೊಗೊಳ್ದೆ ನಮ್ಮ ಸಂಸಾರ, ಗೊಂದಲ, ಗೋಜಲು, ಸುಖ- ಸಂತೋಷ….?

~

ಕಣ್ಣಗಲಿಸಿ ಹೀರುವಂಥ ಛಾಯಾಗ್ರಹಣ, ಚೆಂದಚೆಂದದ ಲ್ಯಾಂಡ್‌ಸ್ಕೇಪುಗಳು, ಮುದ್ದು ಮುದ್ದಾದ ತಾಶಿ-ಪೇಮಾ, ಕೂಲ್ ಆಗಿ ನೋಡಿಸಿಕೊಂಡು ಹೋಗುವ ಎರಡು ಗಂಟೆಯ ಸಿನೆಮಾ- ಅದು SAMSARA.

ಈ ಸಿನೆಮಾ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದೆ. ಪೂರ್ವ ಪಶ್ಚಿಮವೆನ್ನದೆ ಎಲ್ಲ ಚಿತ್ರಪ್ರೇಮಿಗಳು ಇದನ್ನ ಮೆಚ್ಚಿಕೊಂಡಿದಾರೆ. ಬೇರೆ ಬೇರೆ ದೇಶಗಳ ಮಂದಿ ಒಂದು ತಂಡವಾಗಿ ಈ ಸಿನೆಮಾ ಮಾಡಿದಾರನ್ನೋದು ಇದರ ಖಾಸಿಯತ್ತುಗಳಲ್ಲೊಂದು.

2001ರ ಈ ಸಿನೆಮಾದ ಭಾಷೆ- ಟಿಬೆಟನ್ / ಲಡಾಖಿ

ನಿರ್ದೇಶಕ- ಪಾನ್ ನಲಿನ್

ಮುಖ್ಯ ಪಾತ್ರದಲ್ಲಿ- ಶಾನ್ ಕು (ತಾಶಿ), ಕ್ರಿಸ್ಟೀ ಚಂಗ್ (ಪೇಮಾ), ನೀಲೇಶಾ ಬಾವೋರಾ (ಸುಜಾತಾ)

~

ಈ SAMSARA ನನ್ನ ಯಾವ ಪರಿ ಹೊಕ್ಕುಕುಂತಿದೆ ಅನ್ನೋದು ಈ ಅಸ್ತವ್ಯಸ್ತ ಬರಹ ನೋಡಿದರೆ ಗೊತ್ತಾಗಬಹುದು. ಯಾವುದಕ್ಕೂ ಇದು, ನೀವು ಕೂಡ ಒಮ್ಮೆ ನೋಡಲೇಬೇಕಾದ ಸಿನೆಮಾ ಅನ್ನೋದು ನನ್ನ ಶಿಫಾರಸು.