ಖುಶಿಪಡಲೆರಡು ಸಂಗತಿಗಳು!

 ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು.

 

ನೆನ್ನೆ ತಾನೆ ಗೆಳತಿಯೊಟ್ಟಿಗೆ ಮಾತನಾಡಿದ್ದೆ. ಈ ಪೂರ್ವಗ್ರಹ ಪೀಡಿತ ಮಂದಿಯೆದುರು ಮಾತಾಡಿ ಉಪಯೋಗವಿಲ್ಲ, ಸದ್ಯಕ್ಕೆ ನನ್ನ ಪಾಡಿಗೆ ನಾನು ಕಥೆ ಕವನದ ಥರದ್ದೇನಾದರೂ ಬರೆದ್ಕೊಂಡು ಇದ್ದುಬಿಡ್ತೇನೆ ಅಂತ. ಬಹುಶಃ ನನ್ನ ವಿಧಿಗೆ ಅದು ಸೈರಣೆಯಗಲಿಲ್ಲವೇನೋ? ಸದಾ ಒಳಗೊಳಗೆ ಕುದಿಯುತ್ತಿರುವ ನನಗೆ ಭಗ್ಗೆನ್ನಲು ಅನಾಯಾಸವಾಗಿ ಮತ್ತೊಂದು ಲೀಟರ್ ತುಪ್ಪ (ಸೀಮೆ ಎಣ್ಣೆ ಅಂದರೇ ಸರಿಯೇನೋ!?) ಸುರಿಯಿತು. ಇನ್ನು, ಸುಮ್ಮನಿರುವುದು ಹೇಗೆ, ನೀವೇ ಹೇಳಿ?

ನನ್ನ ಈ ತಲೆ ಬುಡವಿಲ್ಲದ ಮಾತಿನ ಅರ್ಥ ನೀವು ಮಾಡಿಕೊಳ್ಳಬೇಕೆಂದರೆ, ಇತ್ತೀಚೆಗೆ ಕನ್ನಡ ಅಂತರ್ಜಾಲ ಪತ್ರಿಕೆಯೊಂದರಲ್ಲಿ ನಡೆದ- ನಡೆಯುತ್ತಿರುವ ಒಂದು ಚರ್ಚೆಯನ್ನು ಓದಬೇಕು. ನಿಮ್ಮಲ್ಲಿ ಬಹುತೇಕರು ಓದಿಯೇ ಇರುತ್ತೀರಿ ಬಿಡಿ. ಇಲ್ಲಾ, ಕೇಳಿಯಾದರೂ ಇರುತ್ತೀರಿ.

ವಿಷಯ, ಅದಕ್ಕೆ ಸಂಬಂಧ ಪಟ್ಟಿದ್ದೇ.
ಆ ಚರ್ಚೆಯ ಪ್ರತಿಕ್ರಿಯೆಗಳ ಸರಪಳಿಗೆ ನನ್ನದೊಂದು ಕೊಂಡಿ ಸೇರಿಸಿದ್ದೆ. ಯಾರೋ ಉತ್ತರ ಅಂದುಕೊಂಡು ಬರೆಯುತ್ತಾ ಪ್ರಶ್ನೆಗಳನ್ನು ಕೇಳಿದರು. ನನ್ನ ಉತ್ತರಗಳಿಗೆ ಪ್ರತಿವಾದ ಹೂಡುತ್ತಾ….. ಥೋ… ಬಿಡಿ.
ಆದರೂ, ಮಜವಾಗಿತ್ತು. ಎಂಥೆಂಥ ಆರೋಪಗಳು ಅಂತೀರಾ? ಈಗ ನನಗೆ ಸಮಾಧಾನವಾಯಿತು. ಅಸಲಿಗೆ ನಾನು ಬ್ಲಾಗ್ ತೆಗೆದದ್ದೇ ಮೇಲ್ವರ್ಗದವರನ್ನ ಒಟ್ಟುಗೂಡಿಸಿ ಗುಂಪುಗಾರಿಕೆ ನಡೆಸಲಿಕ್ಕಲ್ಲವೆ? ಅದೀಗ ಯಶಸ್ವಿಯಾಗಿದೆ ಅನ್ನೋದನ್ನ ಮಹಾಶಯರೊಬ್ಬರು ಘೋಷಿಸಿದ್ದಾರೆ. ಸೆಲೆಬ್ರೇಟ್ ಮಾಡಲೊಂದು ಪಾಯಿಂಟು. ಎರಡನೇ ಪಾಯಿಂಟು, ಬ್ಲಾಗ್ ದುನಿಯಾದಲ್ಲಿ ಬಿರುಕು ತಂದು ಹೊಸ ಬಣ ಕಟ್ಟಿದ್ದು!! ನಿಮಗೆ ಗೊತ್ತಾ? ಅದರ ಕ್ರೆಡಿಟ್ಟೂ ನನಗೇ ಸಿಕ್ಕಿದೆ!! ಪಾರ್ಟಿ ಕೊಡಿಸಲಿಕ್ಕೆ ಮತ್ತೊಂದು ಪಾಯಿಂಟು!!

                                                       

ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು.

ಒಂದೇ ಒಂದು ಗಮ್ಮತ್ತಿನ ಸಂಗತಿ ಹೇಳ್ಬೇಕು ನಿಮಗೆ. ಹಾಗೆ ಆ ಚರ್ಚೆ ನಡೀತಿದೆಯಲ್ಲ, ಅಲ್ಲಿ ಲೇಖನದ ಪರ ಮಾತಾಡುವ, ಮೇಲ್ಜಾತಿಯವರನ್ನು (?) ಬಯ್ಯುತ್ತಿರುವ ಬಹುತೇಕರಿಗೆ ಹೆಸರೇ ಇಲ್ಲ. ಲೇಖನದ ವಿರೋಧ ಮಾತಾಡ್ತಿರೋರ ಸೊಕ್ಕು(!?) ಎಷ್ಟು ಗೊತ್ತಾ? ಅವ್ರಲ್ಲಿ ಹೆಚ್ಚಿನ ಪಾಲು ಜನ ತಮ್ಮ ಹೆಸರು ಹಾಕ್ಕೊಂಡೇ ವಾದ ಮಾಡಿದಾರೆ. ಎಷ್ಟು ಗರ್ವ ಇರಬಹುದಲ್ವಾ? ಅದನ್ಯಾರೋ ತಾಖತ್ತು ಅಂತಿದ್ರಪ್ಪ… ನಂಗೊತ್ತಿಲ್ಲ.

ಮತ್ತೊಂದು ಗಮ್ಮತ್ತು…
ಶತಮಾನದ ಹಿಂದೆ ನಡೆದ ಆಕ್ರಮಣ, ಮತಾಂತರಗಳನೆಲ್ಲ ಹಿಡ್ಕೊಂಡು (ಈಗಲೂ ಅವೆಲ್ಲ ಸುಸೂತ್ರವಾಗಿ ನಡೀತಲೇ ಇವೆ ಅನ್ನೋದು ಬೇರೆ ವಿಷಯ) ಈಗ ಕಾರಿಕೊಳ್ಳೋದು ಅಮಾನವೀಯ ಅಂತ ಅರಚಾಡ್ತಿರೋರೇ ಆ ಮಹರಾಯ ಮನು ಬರೆದಿಟ್ಟು ಹೋಗಿದ್ದನ್ನ ಈಗ ನೆನೆಸ್ಕೊಳ್ತಾನೂ ಇಲ್ಲದ ಸೋ ಕಾಲ್ಡ್ ಮೇಲ್ವರ್ಗದವ್ರನ್ನ ‘ಮನುವಾದಿಗಳು’, ದಲಿತರನ್ನ ತುಳಿದವರು ಅಂತೆಲ್ಲ ಕಾರಿಕೊಳ್ತಲೇ ಇದಾರೆ! ಎಷ್ಟು ಮಜವಾಗಿದೆ ನೋಡಿ!!
( ಇದನ್ನೂ ಮೀರಿ ಅಸ್ಪೃಶ್ಯತೆ ಆಚರಿಸುವವರು ಪಶುಗಳಿಗಿಂತ ಕಡೆ ಎಂದು ನಾನಂತೂ ಭಾವಿಸ್ತೇನೆ)

ಇಲ್ಲಿ ಒಂದೆರಡು ಎಕ್ಸಾಂಪಲ್ಲು ಕೊಟ್ಟಿದೀನಷ್ಟೇ. ಈ ಥರದ ಸಂಗತಿಗಳು ಸಾಕಷ್ಟಿವೆ ಅಲ್ಲಿ. ಎಲ್ಲ ಗಿಳಿಪಾಠ. ಅಷ್ಟನ್ನ ಬಿಟ್ಟು ಬೇರೆ ಮಾತಾಡಿದರೆ ಉತ್ತರಿಸಲು ಗೊತ್ತಾಗದೆ ವೈಯಕ್ತಿಕ ದಾಳಿಗಿಳಿಯುವುದು. ಹ್ಹ್! ಹಣೆ ಬರಹವೇ ಅಷ್ಟಾಯಿತಲ್ಲ!

ಏನು ಮಾಡ್ಲೀ ಈಗ? ನನ್ ಬ್ಲಾಗ್ ನನ್ನ ಸ್ವಂತದ ಕನವರಿಕೆಗೆ ಸೀಮಿತವಾಗಿತ್ತು ಇಷ್ಟು ದಿನ. ಈಗ ನನ್ನ ಮೇಲೆ, ಮೇಲ್ವರ್ಗದವರನ್ನು ಕಟ್ಟಿಕೊಂಡು ಗುಂಪುಗಾರಿಕೆ ಸೃಷ್ಟಿಸಬೇಕೆನ್ನುವ ಹೊಸ ಜವಾಬ್ದಾರಿ ಹೊರಿಸಲಾಗಿದೆ. ಯೋಚಿಸ್ತಿದೀನಿ ನಾನೂ…
ಹೀಗೆ ಮಾಡಿದ್ರೆ ಹೇಗೆ?
ಹಿಂದುಳಿದ ಗ್ರಾಮಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ಎಲ್ಲೆಲ್ಲಿ ‘ಮಾತಾಡುವ ಮಂದಿ’ ಹೋಗೋದಿಲ್ವೋ ಅಲ್ಲೆಲ್ಲಾ ಕೆಲವು ‘ಕೆಲಸವಿಲ್ಲದವರು’ ಹೋಗಿ ಜೀವ- ಜೀವನಗಳನ್ನ ಮುಡಿಪಾಗಿಟ್ಟು ಸೇವೆ ಅಂದ್ಕೊಂಡು ಮಾಡ್ತಿರ್ತಾರಲ್ಲ, ಆ ಪ್ರದೇಶಗಳಲ್ಲಿ ನಡೆಸ್ತಿರೋ ಕೆಲಸಗಳ ಬಗ್ಗೆ ಮಾಹಿತಿ ಕೊಡೋಕೇ ಅಂತಲೇ ಒಂದು ಪೇಜ್ ಕ್ರಿಯೇಟ್ ಮಾಡಿದ್ರೆ ಹೇಗಿರತ್ತೆ?

ಸಿಮಿ ಉಗ್ರರ ಬಯೋಡೇಟಾ, ನಕ್ಸಲರ ಚರಿತ್ರೆ, ಮತಾಂತರದ ಜಾಲ- ಪರಿಣಾಮ, ಹಿಂದೆ ಮುನ್ನುಡಿದಿದ್ದ ಸಂಗತಿಗಳಲ್ಲಿ ನಿಜವಾದುದರ, ಆಗುತ್ತಿರುವುದರ ಮಾಹಿತಿ… ಇವೆಲ್ಲವನ್ನೂ ಕೊಡುತ್ತಾ ಹೋದರೆ…?

ರಾಷ್ಟ್ರೀಯ ವಿಚಾರ ಧಾರೆಗಳ ವೆಬ್ ಸೈಟ್ ಗಳ ಲಿಂಕು? ಸೋ ಕಾಲ್ಡ್ ಬುದ್ಧಿ ಜೀವಿಗಳ ಅಜೆಂಡಾಗಳ ಅನಾವರಣ? ಸೌಹಾರ್ದದ ಹೆಸರಲ್ಲಿ ಮನಸುಗಳನ್ನು ಒಡೆಯುತ್ತಿರುವವರ, ಜಾತಿ ಜಾತಿ ಅನ್ನುತ್ತಾ ಕ್ರಾಂತಿಯ ಭ್ರಾಂತಿಯಲ್ಲಿ ಮುಳುಗಿ ಹೋದವರ ಬಗ್ಗೆ ಬರೆದರೆ…?

ಅಯ್ಯೋ! ಅಷ್ಟು ಸುಲಭಾನಾ ಅದೆಲ್ಲಾ? ಎಷ್ಟು ಅಧ್ಯಯನ ಮಾಡಬೇಕೂ, ಏನು ಕಥೇ? ನಂಗಂತೂ ಹಾಗೆಲ್ಲ ‘ಯಾರೋ ಹೇಳಿದ ವೇದ ವಾಕ್ಯವನ್ನೇ’ ನಂಬಿ ಹೆಳುತ್ತ ಹೋಗಲು ಬರೋದಿಲ್ಲ. ನಾನೇ ಅಧ್ಯಯನ ಮಾಡ್ಬೇಕು, ಸರಿ- ತಪ್ಪು ಗ್ರಹಿಸ್ಬೇಕು, ಆಮೇಲೇ ನಿಮಗೆ ಹೇಳ್ಬೇಕು. ನನ್ ತಪ್ಪಿದ್ರೆ, ಸಾರಿ ಕೇಳಿ ತಿದ್ಕೊಳ್ಬೇಕು, ಅಷ್ಟೇ.

ಸಿಕ್ಕಾ ಪಟ್ಟೆ ಹರಟಿಬಿಟ್ಟೆ ಅಲ್ವಾ?
ಏನು ಮಾಡ್ತೀರಿ? ನನಗೆ ಅನಾಯಾಸವಾಗಿ ದಕ್ಕಿದ ಯಶಸ್ಸನ್ನ ಅರಗಿಸ್ಕೊಳೋಕೆ ಇಷ್ಟೆಲ್ಲಾ ಮಾಡಬೇಕಾಯ್ತು. ಇನ್ನು ಬಾಕಿ ಉಳಿದಿರೋದು, ಮೇಲೆ ಹೇಳಿದ ಸಂಗತಿಗಳನ್ನ ಕಲೆ ಹಾಕಿ, ಕನ್ನಡಕ್ಕೆ ಅನುವಾದಿಸಿ… ಸಾಕಷ್ಟು ಕೆಲಸವಿದೆ.
ಬೈ.

ವಂದೇ,
ಚೇತನಾ ತೀರ್ಥಹಳ್ಳಿ