ಸಹಜೀವಿಗಳಿಗೊಂದಿಷ್ಟು ಜೀವಜಲವನಿರಿಸಿ….

ಚಿತ್ರ ~೧~
ಅದು- ಗಂಗೆ, ಗೌರಿ, ಲಕ್ಷ್ಮೀ, ತುಂಗೆ… ಯಾವ ಹೆಸರೂ ಇಲ್ಲದ ಬೇವಾರ್ಸಿ ಹಸು. ಮೊದಲೇ ಟ್ರಾಫಿಕ್ಕು ತುಂಬಿ ಗೋಳುಗುಂಡಿಯಾದ ರಸ್ತೆಯಲ್ಲಿ ನೆಟ್ಟಾನೇರ ನಿಂತು ಶಾಪ ತಿನ್ನುತ್ತಿದೆ. ಇಷ್ಟಗಲ ದಾರಿಯಲ್ಲೂ ಅಡ್ಡ ಮಲಗಿ ಜಾಗ ನುಂಗಿದೆ. ಅದರ ಕೆಚ್ಚಲೋ, ಕೊಳಚೆ ಬಿಂದಿಗೆ. ಚರ್ಮಕ್ಕೆ ನೀರು ಬೀಳಲು ಮತ್ತೆ ಮಳೆಗಾಲವೇ ಬರಬೇಕು.
ದಿನವೆಲ್ಲ ಪಾರ್ಕಿನ ಬದಿಯೋ, ಟ್ರಾನ್ಸ್ ಫಾರ್ಮರಿನ ಕೆಳಗೋ ರಾಶಿಯೊಡ್ಡಿದ ಪ್ಲಾಸ್ಟಿಕ್, ಗಾರ್ಬೇಜನ್ನು ಮೆದ್ದು ಮಲಗಿರುತ್ತದೆ.
ಅದೇನೋ ಈ ಊರಿನ ಜನಕ್ಕೆ ಹಸುಗಳೆಂದರೆ ಹೆದರಿಕೆ! ಹತ್ತಿರ ಹೋಗುವ ಮಕ್ಕಳಿಗೆ, ‘ಹಾಯುತ್ತೆ’ ಅಂದು ಹೆದರಿಸ್ತಾರೆ. ಉಳಿದ ಮುಸುರೆಯನ್ನ ಕವರಿನಲ್ಲಿ ಸುರಿದು ಪಕ್ಕದ ರೋಡಿನ ತಿರುವಲ್ಲಿಟ್ಟು ಬರುವರೇ ಹೊರತು, ಬಕೇಟಿಗೆ ಸುರಿದು, ಅಕ್ಕಚ್ಚು ಕುಡಿಸುವರಿಲ್ಲ. ಮನೆ ಮನೆಯೆದುರು ಹಾದು ಹೋದರೂ ‘ನೀನೇ’ ಅನ್ನುವರಿಲ್ಲದೆ ತಲೆ ತಗ್ಗಿಸಿ ಬರುವ ಹಸು, ಮತ್ತೆ ಅವರಿವರ ಹಾದಿಯಲ್ಲಿ ಅಡ್ಡಮಲಗಿ ಶಾಪಕ್ಕೆ ತಲೆ ಕೊಡುತ್ತದೆ.
ಈ ಹಸು, ಹೆಸರಿಲ್ಲದ ಮಾತ್ರಕ್ಕೆ ಪೂರಾ ಬೇವಾರ್ಸಿಯೇನಲ್ಲ! ಅವನೊಬ್ಬ ದಿನಾ ಬೆಳಗ್ಗೆ, ಸಾಯಂಕಾಲ- ತಪ್ಪದೆ ಎರಡು ಸಾರ್ತಿ ಟೀವೀಎಸ್ಸಲ್ಲಿ ಬರುತ್ತಾನೆ. ಅದರ ಕತ್ತು ನೇವರಿಸಿ, ಹಾಲು ಹಿಂಡಿಕೊಂಡು ಹೋಗುತ್ತಾನೆ. ಅವನು ಅಲ್ಲಿದ್ದಷ್ಟು ಹೊತ್ತೂ ಅದರ ಹಿಂಚಾಚಿದ ಕಿವಿ, ಅರಳಿದ ಮೂಗಿನ ಹೊಳ್ಳೆಗಳು, ಮುದ್ದು ಸೂಸುವ ಕಣ್ಣುಗಳು- ತನಗೂ ಒಬ್ಬ ವಾರಸುದಾರನಿರುವ ಹೆಮ್ಮೆಯನ್ನ ಹೊರಹಾಕುತ್ತವೆ.
ಹೆಚ್ಚೆಂದರೆ ಹತ್ತು ನಿಮಿಷ…. ಅಂವ ಕ್ಯಾನು ತೂಗಿಹಾಕಿಕೊಂಡು ಮೊಪೆಡ್ ಏರುತ್ತಾನೆ, ಮತ್ತೊಂದು ಇಂತಹದೇ ಬೀಡಾಡಿ ದನದ ಯಜಮಾನಿಕೆ ಸ್ಥಾಪಿಸಲು ಹೊರಡುತ್ತಾನೆ.
ಚಿತ್ರ ~೨~
ಇಗೋ ಇಲ್ಲಿ… ಈ ಮರದಲ್ಲಿ…
ಪ್ರತಿ ವರ್ಷ ವಸಂತ ಮಾಸದ ಶುರುವಿಗೆ ಹಸಿರು ಹಕ್ಕಿ ಹಿಂಡು ಎಲ್ಲಿಂದಲೋ ವಲಸೆ ಬಂದು ಕೂರುತ್ತಿತ್ತು. ದಿನಾ ಬೆಳಗ್ಗೆ- ಸಂಜೆ ಅದರ ಚಿಲಿಪಿಲಿಚಿಲಿ ಉಲಿ! ಭರ್ರನೆ ಹಾರುವಾಗ ಉದುರಿಬೀಳುವ ಎಳೆ ಹಸಿರು ಪುಕ್ಕಗಳು ಮಕ್ಕಳ ಬ್ಯಾಗಲ್ಲಿ ಭದ್ರವಾಗಿ ಸೇರಿ ಸ್ನೇಹ ಬೆಳೆಸುತ್ತಿದ್ದವು.
ಅದೆಂಥದೋ ಅಪರೂಪದ ಮರವಿದ್ದಿರಬೇಕು. ಇಡೀ ಹಕ್ಕಿ ಹಿಂಡಿನ ಒಂದೇ ಒಂದು ಪಿಳ್ಳೆ ಕೂಡ ಪಕ್ಕದ ಮರದಲ್ಲಿ ಕೂತಿದ್ದು ಯಾರೂ ನೋಡಿಲ್ಲ.
ವಲಸೆ ಹಕ್ಕಿಗಳು ಮರಳಿಬರುವ ನೆಚ್ಚಿಗೆಯಲ್ಲಿ, ನೆಲೆ ಭದ್ರವಿರುವ ನೆಮ್ಮದಿಯಲ್ಲಿ ನಿತ್ಯದ ಸಂಚಾರ ಹೊರಟಿವೆ. ಮರಳಿ ಬರುವ ಹೊತ್ತಿಗೆ ಅದಕ್ಕೆಲ್ಲ ಸಂಚಕಾರ! ಮರ ಕಡಿದುರುಳಿ, ಟೊಂಗೆ ಟೊಂಗೆಯ ಗುಡುಗಳು ಚೆಲ್ಲಾಪಿಲ್ಲಿ…
ಮೊಟ್ಟೆ, ಎಳೆ ಮರಿಗಳು ನೆಲಕ್ಕಪ್ಪಳಿಸಿ ತಲೆಯೊಡೆದು ಬಿದ್ದಿವೆ. ಗೂಡು ಕಾಣೆಯಾದ ಹಕ್ಕಿಗಳ ಗಾಬರಿಯ ಕೂಗು ಮುಗಿಲು ಮುಟ್ಟುತ್ತಿದೆ. ಅವುಗಳಲ್ಲಿ ಮೊಟ್ಟೆ- ಮರಿ ಕಳೆದ ತಾಯಿಹಕ್ಕಿಗಳ ರೋದನೆ ಅದೆಷ್ಟಿತ್ತೋ?
ಯಾರೋ ಹೇಳುತ್ತಿದ್ದಾರೆ- “ಮೆಟ್ರೋನವ್ರು ಮನುಷ್ಯರ ಅಂಗ್ಡಿ- ಮನೇನೇ ಒಡೆದು ಹಾಕಿಲ್ವಾ? ಇನ್ನು, ಕಾಂಪ್ಲೆಕ್ಸ್ ಕಟ್ಟೋಕೆ ಮರ ಉರುಳಿಸಿದ್ರೆ ಏನು ಮಹಾ? ಹಕ್ಕಿಗಳ್ಗೇನು ಮನೆಯಾ? ಸಂಸಾರವಾ?”
ಬುಡಮಟ್ಟ ಕಡಿದು ಬಿದ್ದ ಮರವನ್ನ ಗರ ಗರ ಕೊಯ್ಯುತ್ತಿದ್ದಾರೆ. ಹಕ್ಕಿಗಳ ಚೀರಾಟ ಕರುಳು ಕೊಯ್ಯುತ್ತಿದೆ.
~ ಚಿತ್ರ ೩ ~
ಸ್ಕೂಲ್ ಬಸ್ ಇಳಿದು ಟೈ ಜಾರಿಸ್ತಾ ಬಂದ ಹುಡುಗ ಗೇಟಿನ ಖಾಲಿಯೆದುರು ಗಕ್ಕನೆ ನಿಂತುಬಿಟ್ಟಿದಾನೆ. ಒಳಹೊರಟವನ ಹೆಜ್ಜೆಯಲ್ಲಿ ಬಿರುಸು. ಕಂಪೌಂಡಿನೊಳಗನ್ನು ಜಾಲಾಡಿದ್ದಾನೆ. ಹೊರಗೆ ಬಂದು ಮನೆಯ ಸುತ್ತ ಮುತ್ತ…. ರಸ್ತೆಯ ಆ ತುದಿ, ಈ ತುದಿಯವರೆಗೂ ಕಣ್ಣು ಹಾಸಿದ್ದಾನೆ.
ಸೋತು ಒಳಬಂದು ಕುಂತವನಿಗೆ ಅಮ್ಮ ಕೊಟ್ಟ ನೂಡಲ್ಸು, ಕೋಂಪ್ಲಾನು ಗಂಟಲಿನಲ್ಲಿ ಇಳಿಯುತ್ತಿಲ್ಲ. ಅಮ್ಮನ ಮುಖ ಕೂಡ ನೋವು ಹೊದ್ದಿದೆ. ಹೌದು, ಮಗನ ದುಃಖ ಅವಳ ದುಃಖವೂ… ‘ಬೆಳಗಿಂದ ಪಿಂಕೂ ಕಾಣುತ್ತಿಲ್ಲ!’
ಗಂಡನಿಗೆ ಫೋನು ಹಚ್ಚಿದಾಳೆ. ‘ನಾಳೆಯ ಪೇಪರಿನಲ್ಲಿ ಹಾಕಿಸುವಾ’ ಅಂದಿದೆ ಅತ್ತಲಿನ ದನಿ. ಜನವೆಲ್ಲ, “ಒಂದು ನಾಯಿಗಾಗಿ ಎಷ್ಟು ಮರುಕ! ಏನು ಪ್ರೀತಿ !!” ಎಂದು ಆಡಿಕೊಳ್ತಿದಾರೆ. ಊಹೂಂ… ಪಿಂಕೂವನ್ನ ಹಾಗೆಲ್ಲ ‘ನಾಯಿ’ ಅನ್ನುವ ಹಾಗಿಲ್ಲ. ಅದವರ ಫ್ಯಾಮಿಲಿ ಮೆಂಬರ್ರು. ಊಟ- ತಿಂಡಿ ಬಿಟ್ಟುಕುಂತವರ ಪ್ರಾಣಿಪ್ರೇಮ ಜಾಹೀರಾದ ಎರಡನೇ ದಿನಕ್ಕೆ, ಮೈ- ಮೂತಿಯೆಲ್ಲ ಕೆಟ್ಟಾ ಕೊಳಕು ಮಾಡಿಕೊಂಡ ಪಿಂಕೂ ಜೋಲು ಮೋರೆ ಹೊತ್ತು ಮನೆ ಸೇರಿದೆ.
~ಚಿತ್ರ ೪~
ಆರ್ಕಿಟೆಕ್ಟಿಗೆ ತಲೆ ಬಿಸಿ. ಕಾಂಪ್ಲೆಕ್ಸು ಕಟ್ಟಬೇಕೆನ್ನುವ ಉದ್ಯಮಿಗೆ ಗಾಜಿನ ಗೋಡೆಗಳೇ ಆಗಬೇಕು. ಈಗಾಗಲೇ ನಗರದ ತುಂಬೆಲ್ಲ ಗಾಜು, ಗಾಜು, ಗಾಜು… ಆಫೀಸು, ಮಾಲ್, ಸ್ಕೂಲು… ಮನೆಗಳಿಗೂ!
ದೊಡ್ಡ ದೊಡ್ಡ ಬಿಲ್ಡಿಂಗುಗಳ ಸಂದಿಯಲ್ಲಿ ನೆಲೆ ಕಂಡಿದ್ದ ಪಾರಿವಾಳಗಳಿಗೆ ಚಿಂತೆಯಾಗಿರಬಹುದು, ‘ಮರಿಗಳ ಕಾಲಕ್ಕೆ ಬದುಕಲು ಜಾಗವೆಲ್ಲಿ ಸಿಕ್ಕೀತು!?’ ಕಾಂಕ್ರೀಟು ಕಾಡಲ್ಲೂ ಜೇನು ಹುಡುಕಿ ಗೂಡು ಕಟ್ಟಿಕೊಂಡಿದ್ದ ಹುಳುಗಳಿಗೆ ಕೂಡ ಅದೇ ಚಿಂತೆ. ಮುಂದಿನ ನೆಲೆ ಎಲ್ಲಿ?
ಬೆಚ್ಚನೆ ಮನೆಯುಳ್ಳ ಈ ಆರ್ಕಿಟೆಕ್ಟಿನ ಚಿಂತೆಯೇ ಬೇರೆ. ಅಂವಂಗೀಗ ಪಾಪ ಪ್ರಜ್ಞೆ ಕಾಡಿದೆ.
ಗಾಜು ಗೋಪುರಗಳಿಗೆ ಢಿಕ್ಕಿ ಹೊಡೆದು ಸತ್ತ ಹಕ್ಕಿಗಳ ಸ್ಟ್ಯಾಟಿಸ್ಟಿಕ್ಸು ಅವನು ಓದಿಕೊಂಡಿದ್ದಾನೆ. ಸೂರ್ಯನ ಬೆಳಕು- ಶಾಖ ಪ್ರತಿಫಲಿಸುವ ಗಾಜುಗಳು, ಧಗೆ ಹೆಚ್ಚಿಸಿ ಮನುಷ್ಯರನ್ನು ಸುಡುತ್ತದೆಯೆಂದೂ (ಗ್ಲೋಬಲ್ ವಾರ್ಮಿಂಗು), ಸಣ್ಣಪುಟ್ಟ ಜೀವಿಗಳನ್ನ ಕೊಂದೇಹಾಕುತ್ತದೆಯೆಂದೂ ಅವನು ಬಲ್ಲ.
ಸಾಲದ್ದಕ್ಕೆ, ಪುಟ್ಟ ಕರಿ ಹಕ್ಕಿಯೊಂದು ಗಾಜಿಗೆ ಕುಕ್ಕಿ ಕುಕ್ಕಿ ತಲೆಚಿಟ್ಟು ಹಿಡಿಸಿಕೊಂಡು, ಅಲ್ಲೇ ಸುತ್ತಿ ಸುತ್ತಿ ಸುತ್ತಿ ಸತ್ತಿದ್ದನ್ನ ಅಂವ ಕಣ್ಣಾರೆ ನೋಡಿದಾನೆ.  ಅದಕ್ಕೇ ಈಗ, ಗಾಜಿನ ಗೋಡೆಯ ಆ ಪ್ರಾಜೆಕ್ಟಿಗೆ ರಿಸೈನು ಮಾಡಿ ಹೊರಬರುತ್ತಿದ್ದಾನೆ. ಜನರ ಕಾಡಲ್ಲಿ ಕೊನೆಗೂ ಒಬ್ಬ ಮನುಷ್ಯ ಕಾಣಿಸುತ್ತಿದ್ದಾನೆ!
~ ೫~
ಈ ಚಿತ್ರ ಕಪ್ಪು- ಬಿಳುಪಿನದು…
ಮುಂಜಾನೆಯಾಯ್ತೆಂದು ತಿಳಿಸಲಿಕ್ಕೆ ಹುಂಜವೊಂದು ಬೇಲಿಯೇರಿ ಕೂಗುತ್ತಿದೆ. ಅಮ್ಮ ಅದಾಗಲೇ ಎದ್ದು ಕೊಟ್ಟಿಗೆಗೆ ನಡೆದಿದ್ದಾಳೆ. ಪ್ರತಿ ಹಸುವಿನೆದುರೂ ಒಂದು ಬಟ್ಟಲು. ಅದರಲ್ಲಿ ನೆನೆಸಿದ ಅಕ್ಕಿ, ಬೆಲ್ಲದುಂಡೆ.
ಅವಳು ಅಡುಗೆ ಮನೆ ಸೇರುವ ಹೊತ್ತಿಗೆ ಕಾಫಿ ಕಾದಿದೆ. ಕುಡಿಯುವ ಮುನ್ನ ಒಂದು ತಟ್ಟೆಯಲ್ಲಿ ಎರಡು ಲೋಟಗಳು, ಅದರಲ್ಲಿ ನೀರು, ಹಾಲು. ಮತ್ತಷ್ಟು ಕಾಳುಗಳನ್ನ ತುಂಬಿಕೊಂಡಿದ್ದಾಳೆ. ಹೊರಗೆ ಬಂದು ತುಳಸೀ ಕಟ್ಟೆಯ ಆಚೆ ಹಾಲನ್ನೂ ನೀರನ್ನೂ ಸುರುವಿದ್ದಾಳೆ. ಕಾಳು ಚೆಲ್ಲಿ ಸದ್ದು ಮಾಡದೆ ಮರಳಿದ್ದಾಳೆ. ಕಾಗೆ, ಗುಬ್ಬಿಗಳು ಬಂದು ಬಾಯಿಟ್ಟ ಮೇಲೆಯೇ ಕಾಫಿ ಲೋಟವನ್ನ ಕೈಗೆತ್ತಿಕೊಳ್ಳುತ್ತಿದ್ದಾಳೆ.
ಮೊನ್ನೆ ತಾನೆ ಮೊಟ್ಟೆಯಿಟ್ಟ ಪಿಕಳಾರ ಹಕ್ಕಿ ಯಾಕೋ ಬಂದಿಲ್ಲವೆಂದು ವಾರಗಿತ್ತಿಯೊಟ್ಟಿಗೆ ಹೇಳಿಕೊಳ್ಳುತ್ತಿದ್ದಾಳೆ.
ಕಪ್ಪು- ಬಿಳುಪಿನ ಚಿತ್ರಕ್ಕೆ ಬಣ್ಣ ತುಂಬಿಕೊಳ್ಳುತ್ತಿದೆ…..
ಅಮ್ಮನಿಗೆ ಅದೆಲ್ಲ ಮರೆತೇ ಹೋಗಿದೆ. ಅವಳ ದಿನವೂ ಹುಂಜದ ಕೂಗಿನೊಟ್ಟಿಗೆ ಶುರುವಾಗುತ್ತಿಲ್ಲ. ಇದಕ್ಕೆ, ಕಾಲ ಬದಲಾಗಿದೆ ಅನ್ನುತ್ತಾರೆ.
~
ಎಷ್ಟೊಂದು ಚಿತ್ರಗಳು ಕಣ್ಣಮುಂದೆ!
ಇವುಗಳನ್ನ ಕಣ್ಣೊಳಗಿಟ್ಟುಕೊಂಡು ನಮ್ಮ ನಮ್ಮ ಮಾತು- ಮೌನಗಳನ್ನ ಕಟ್ಟಿಕೊಂಡು ಹೋಗಬೇಕಷ್ಟೆ ಹೊರತು, ವಿಷ್ಲೇಶಣೆಗೆ ಅವಕಾಶವಿಲ್ಲ.
ಅಂದಹಾಗೆ, ಈ ಚಿತ್ರದೊಳಗಿನ ಜನರಲ್ಲಿ ನಮ್ಮ ಚಹರೆಯೂ ಕಾಣುತ್ತಿರುವಂತಿದೆಯಲ್ಲವೆ? ಅಲ್ಲವೆ?
~
ಭೂಮಿಯ ಮೇಲೆ ಬದುಕಲು ಮೊತ್ತಮೊದಲ ಹಕ್ಕು ಮಾನವನದು ಅಂತ ನಾವು ಯಾವತ್ತೋ ತಿರ್ಮಾನ ಮಾಡಿಕೊಂಡಾಗಿದೆ. ನಾಯಿ- ಬೆಕ್ಕುಗಳನ್ನ ಮುದ್ದಿಸುತ್ತಾ, ಪಂಜರದ ಲವ್ ಬರ್ಡ್ ಗಳಿಗೆ ಕಾಳು ಹಾಕುತ್ತಾ, ಅಕ್ವೇರಿಯಮ್ಮಿನೊಳಗೆ ಮೀನು ಕೂಡಿಟ್ಟು ಶೋಕಿ ಮಾಡುತ್ತಾ, ‘ಪ್ರಾಣಿ ಪ್ರೇಮವಿದೆ’ ಎಂದು ಪೋಸು ಕೊಡುತ್ತೇವೆ. ಡಾರ್ವಿನ್ನನ ‘ಸರ್ವೈವಲ್’ ಥಿಯರಿ ಇಲ್ಲಿ, ಈ ಥರದಲ್ಲಿ ಅನ್ವಯವಾಗ್ತಿರೋದು ದುರಂತ.
ಹಾಗಂತ, ಮನುಷ್ಯರೆಲ್ಲರೂ ದುಷ್ಟರೇ ಅಂದುಕೊಳ್ಳಬೇಕಿಲ್ಲ. ನಮಗೆ ಪ್ರಾಣಿಗಳ ಬಗ್ಗೆ ಸಹಾನುಭೂತಿಯಿದ್ದರೂ ಅದು ನಮ್ಮ ಹೊರಪ್ರಜ್ಞೆಗೆ ನಿಲುಕಿರೋದಿಲ್ಲ ಅಷ್ಟೇ. ಅಥವಾ ಅದನ್ನ ತೋರ್ಪಡಿಸುವ ದಾರಿ ಗೊತ್ತಿರೋದಿಲ್ಲ. ಇದರ ಅಭಿವ್ಯಕ್ತಿಗೆ ನಮ್ಮ ಕೈಯೆಟುಕಿನ ದಾರಿಗಳೇ ಸಾಕು.
ಇದಾಗಲೇ ಬೇಸಿಗೆ ಧಾಂಗುಡಿಯಿಟ್ಟು ಕಾವೇರುತ್ತ ಸಾಗಿದೆ. ದೂರ ದೂರದಿಂದ ಹಾರಿಬರುವ ಹಕ್ಕಿಗಳ ಗಂಟಲೊಣಗಿ ಚಡಪಡಿಸುತ್ತಿವೆ. ಗಣತಿಯ ಪ್ರಕಾರ ಪ್ರತಿ ಬೇಸಿಗೆಯಲ್ಲಿ ದೊಡ್ಡ ನಗರಗಳಲ್ಲಿ ಸಾವಿರಾರು ಪಕ್ಷಿಗಳು ಬಾಯಾರಿಕೆಯಿಂದ ಅಸು ನೀಗುತ್ತಿವೆ.
ಬೀಡಾಡಿ ದನಗಳು ಕೂಡ ರಸ್ತೆಯಲೆದು ನೀರು ಕಾಣದೆ ಸೊರಗುತ್ತಿವೆ. (ಸ್ವಾರ್ಥದ ವಿಷಯಕ್ಕೆ ಬಂದರೆ, ಲಾಭದ ಆಸೆಯಿಂದ ಇಂತಹ ಹಸುಗಳ ಹಾಲನ್ನೇ ಕರೆದು ಮಾರಲಾಗುತ್ತದೆ, ಮತ್ತಿದು ನಮ್ಮ ಆರೋಗ್ಯಕ್ಕೆ ಹಾನಿಕರ. ನಾವು ‘ಡೈರಿ’ ಹಾಲನ್ನೇ ಕುಡಿಯುವುದು ಎಂದು ಜಂಭ ಪಡಬೇಡಿ. ಈ ಹಾಲು ಕೂಡ ಡೈರಿಯನ್ನು ಸೇರಲು ಸಾಕಷ್ಟು ದಾರಿಗಳಿವೆ!)
ಹೆಚ್ಚೇನಿಲ್ಲ… ನಾವು ಕಂಪೌಂಡಿನ ಮೇಲೋ, ತಾರಸಿಯ ಮೇಲೋ ಇಡುವ ಒಂದು ಬಟ್ಟಲು ನೀರು ಈ ಪುಟ್ಟ ಹಕ್ಕಿಗಳ ದಾಹ ತೀರಿಸಿ ಜೀವ ದಾನ ಮಾಡಬಲ್ಲದು. ಮನೆಯೆದುರಿನ ಮುರುಕು ಬಕೆಟಿನಲ್ಲಾದರೂ ಒಂದಷ್ಟು ನೀರು ತುಂಬಿಟ್ಟರೆ ಹಸುಗಳ ಗಂಟಲು ನೆನೆದು ತ್ರಾಣವೊದಗಿಸಬಲ್ಲದು.
ಹಕ್ಕಿಗಳಿಗೆ ನೀರಿಡುವುದೇ ಆದರೆ, ಮನುಷ್ಯರ ಗದ್ದಲವಿರದ ಕಡೆ- ತಾರಸಿಯ ಮೇಲೇ ಸೂಕ್ತ- ಇಡಿ. ಅಗಲ ಬಾಯಿಯ ಬಟ್ಟಲು/ಕುಡಿಕೆಗಳಲ್ಲಿ ಇರಿಸಿದರೆ ಮತ್ತೂ ಅನುಕೂಲ.  ಮೊದಲೇ ಅಂಜುಬುರುಕವಾಗಿರುವ ಈ ಜೀವಿಗಳ ಕಣ್ಣಿಗೆ ನೀರು ಕಂಡರೂ ಭಯದಿಂದ ಕುಡಿಯದೆ ಹೋಗುವಂತಾಗುವುದು ಬೇಡ. ಜೊತೆಗೆ ನಾಲ್ಕು ಕಾಳು ಧಾನ್ಯವಿಟ್ಟರೂ ನಷ್ಟವೇನಿಲ್ಲ. ನಿತ್ಯ ಕಮೋಡಿಗೇ ಲೀಟರುಗಟ್ಟಲೆ ನೀರು ಸುರಿಯುತ್ತಿರುವಾಗ, ಒಂದು ಬಕೀಟು ನೀರನ್ನು ಪ್ರಾಣಿ- ಪಕ್ಷಿಗಳಿಗೆಂದು ಎತ್ತಿಡುವುದು ಮಹತ್ಕಾರ್ಯವೂ ಅಲ್ಲ, ನಮ್ಮ ಮಹದುಪಕಾರವೂ ಆಗುವುದಿಲ್ಲ.
ಈವರೆಗೆ ನಾವು ನಮ್ಮ ಸಹಜೀವಿಗಳಿಗೆ ಸಾಗರ ಪ್ರಮಾಣದ ಅನ್ಯಾಯವೆಸಗಿಯಾಗಿದೆ. ಈ ಹೊತ್ತಲ್ಲಿ ನಾವು ತೆಗೆದಿಡುವ ಒಂದು ಬಟ್ಟಲು ನೀರು, ಈ ಅಗಾಧ ಪಾಪರಾಶಿಗೆ ಒಂದು ಹನಿಯಷ್ಟಾದರೂ ಪ್ರಾಯಶ್ಚಿತ್ತವೆನಿಸಬಲ್ಲದು!

(ಕಳೆದ ವರ್ಷ ‘ಸಖಿ’ಗೆ ಬರೆದ ಲೇಖನ… ಈ ವರ್ಷವೂ ಬೇಸಿಗೆ ಬಂದಿದೆಯಲ್ಲ, ಅದಕ್ಕೆ…)