ನಾನು ಹೆಂಗಸಾದ ದಿನ….

ಪ್ರತಿ ಸಾರ್ತಿಯಂತೆ ಈ ಸಲವೂ ‘ಸಾಂಗತ್ಯ’ ಸಿನೆಹಬ್ಬದಲ್ಲಿ ಒಳ್ಳೊಳ್ಳೆ ಸಿನೆಮಾಗಳನ್ನ ನೋಡಿದ್ವಿ, ಚರ್ಚೆ ಮಾಡಿದ್ವಿ. ಅವುಗಳಲ್ಲೊಂದು The Day I became Woman ಅನ್ನುವ ಇರಾನಿ ಸಿನೆಮಾ. ನಂಗೆ ಈ ಸಿನೆಮಾ ಬಹಳ ಇಷ್ಟವಾಯ್ತು.  ಅದರ ಮೇಕಿಂಗ್ ಖುಷಿ ಕೊಡ್ತು. ಇದರ ಜತೆ ಪುಟಾಣಿ ಪಾರ್ಟಿ, ಎಲ್ ವಯೋಲಿನೋ, ರೆಡ್ ಬಲೂನ್, ಪೊನೆಟ್ ಮೊದಲಾದ ಚೆಂದದ ಸಿನೆಮಾಗಳನ್ನೂ, ಅಘನಾಶಿನಿ, ದ ಹೋಮ್ ಮೊದಲಾದ ಸಾಕ್ಷ್ಯಚಿತ್ರಗಳನ್ನೂ ನೋಡಿದ್ವಿ.
ಅದೆಲ್ಲ ಇರ್ಲಿ…  ‘ದ ಡೇ…’ ಬಗ್ಗೆ ಅನಿಸಿಕೆ ಬರೆದು ನನ್ನ ಗೆಳೆಯರೊಬ್ಬರಿಗೆ mail ಮಾಡಿದ್ದೆ. ಅವರು ನೇರಾನೇರ ‘ಎಲ್ಲಾದ್ನೂ ನೀವು ಅದೇ ಭಾಮಿನಿ ಷಟ್ಪದಿ ಸ್ಟೈಲಲ್ಲೇ ಹೇಳ್ತೀರಲ್ರೀ… ಫಿಲ್ಮ್ ಬಗ್ಗೆ ಹೇಳುವಾಗ್ಲೂ!’ ಅಂತ ಅಂದರು. ಅವರು ನನ್ನನ್ನ ಹೀಗೆ ಎಚ್ಚರಿಸಿದ್ದಕ್ಕೆ ಋಣಿ, ಆಭಾರಿ…
(ಇದನ್ನ ನೀವು, ನೀವೂ ಹಾಗನ್ನುವ ಮೊದಲೇ ನಾನು ಕೊಡ್ತಿರೋ ಸಮಜಾಯಿಷಿ ಅಂತಲೂ ಅಂದ್ಕೊಳ್ಬಹುದು 🙂  )
~ ಚಿತ್ರ ಒಂದು~
ದೋಣಿಗೆ ಕಟ್ಟಿದ ಹಾಯಿ, ಅವಳ ದುಪಟ್ಟಾ.
ಗಂಡಸಿನ ದೋಣಿ ಸರಾಗ ಸಾಗಲಿಕ್ಕೆ ಅವಳ ಹಾಯಿ ಬೇಕು.
ಆ ಸಿನೆಮಾ ಶುರುವಾಗೋದೇ ಕರೀ ದುಪಟ್ಟಾ (ಪರ್ದಾ) ದೋಣಿಯ ಹಾಯಿಯಾಗಿ ಪಟಪಟಿಸೋದರಿಂದ. ಅದನ್ನ ಪತರಗುಟ್ಟಿಸುವ ಗಾಳಿಯೇ ಹವಾಳ ಟೆಂಟಿನ ಬಟ್ಟೆಯನ್ನೂ ಪಟಪಟಿಸುತ್ತದೆ. ಮನೆಯ ಮೇಲೆ ಯಾಕೆ ಆ ಹುಡುಗಿಗೆ ಟೆಂಟು ಹಾಕಿಕೊಟ್ಟಿದಾರೆ? ಅವಳು ದೊಡ್ಡವಳಾಗಿಬಿಟ್ಟಿದಾಳಾ?
ಅಮ್ಮ ಹೇಳ್ತಾಳೆ, ‘ಹವಾ, ನೀನಿನ್ನು ಹುಡುಗರೊಟ್ಟಿಗೆ ಆಡಹೋಗಲಿಕ್ಕಿಲ್ಲ. ನೀನು ದೊಡ್ಡವಳಾಗ್ತಿದೀ’.
ಅತ್ತ ಹಸನ ಅವಳಿಗೆ ಐಸ್‌ಕ್ರೀಮಿನ ಆಮಿಷವೊಡ್ಡುತ್ತಿದಾನೆ. ಹುಡುಗಿ ಗೋಗರೀತಿದಾಳೆ. ಅಮ್ಮ, ಅಜ್ಜಿಗೆ ಅವಳಿಗೊಂದು ಪರ್ದಾ ತಯಾರುಮಾಡುವ ಸಡಗರ.
‘ನಾನು ಹುಟ್ಟಿದ್ದು ಮಧ್ಯಾಹ್ನ ತಾನೇ? ದೊಡ್ಡೋಳಾಗಲಿಕ್ಕೆ ಮಧ್ಯಾಹ್ನದವರೆಗೂ ಸಮಯವಿದೆ. ಅಲ್ಲೀವರೆಗೆ ಆಡಿಕೊಂಡು ಬರ್ತೀನಿ’ ಹುಡುಗಿಯ ತರ್ಕ. ಅದಕ್ಕೆ ಹಿರಿಯರ ತಾತ್ಕಾಲಿಕ ಸೋಲು.
ಅಮ್ಮ ಕೈಲೊಂದು ಕಡ್ಡಿಯಿಟ್ಟು ಹೇಳ್ತಾಳೆ. ‘ನೋಡು, ಇದರ ನೆರಳು ಮಾಯವಾಗ್ತದಲ್ಲ, ಆಗ ಮಧ್ಯಾಹ್ನವಾಗ್ತದೆ. ವಾಪಸು ಬಂದ್ಬಿಡಬೇಕು’.
ಹೊರಗೆ ಹೋದ ಪೂರ್ತಿ ಹುಡುಗಿಗೆ ನೆರಳು ಅಳೆಯೋದೇ ಕೆಲಸ. ಹಹ್ಹ್! ಒಂದು ಕಡ್ಡಿ, ಹುಡುಗಿಯೊಬ್ಬಳ ಸ್ವಾತಂತ್ರ್ಯವನ್ನ ನಿರ್ಧರಿಸ್ತಿದೆ!!
ಅಮ್ಮ ಹೊಚ್ಚಿ ಕಳಿಸಿದ ದುಪಟ್ಟಾವನ್ನ ಹುಡುಗರ ದೋಣಿಗೆ ಹಾಯಿ ಮಾಡಲು ಕೊಟ್ಟುಬಿಡ್ತಾಳೆ ಹವಾ. ಹಸನನೊಟ್ಟಿಗೆ ಎಂಜಲು ಮಾಡಿಕೊಂಡು ಲಾಲಿಪಪ್ ಸವಿಯುತ್ತಾಳೆ. ಅಷ್ಟರಲ್ಲಿ ಕಡ್ಡಿ ಕೆಳಗಿನ ನೆರಳು ಮಾಯ.
ಅಮ್ಮ ಬರ್ತಾಳೆ. ಮತ್ತೊಂದು ಉದ್ದದ ಸ್ಕಾರ್ಫ್ ತಲೆಗೆ ಹೊಚ್ಚುತಾಳೆ. ಮಗಳ ಮುಖದಲ್ಲಿ ಅಂಥ ವಿಷಾದವೇನೂ ಇಲ್ಲ. ಮಧ್ಯಾಹ್ನವಾಯ್ತು, ತಾನು ದೊಡ್ದವಳಾಗಿರಬೇಕು ಅನ್ನುವ ಭಾವ. ಅಮ್ಮನ ಜತೆ ಸಮುದ್ರದತ್ತ ಹೊರಡುತ್ತಾಳೆ…
**
~ಚಿತ್ರ ಎರಡು~
ಕುದುರೆಯೇರಿದ ಅಂವ ಅರಚಿಕೊಳ್ತಿದಾನೆ… ‘ಆಹೂ…’
ಅವಳಲ್ಲಿ, ಸೈಕಲ್ ರೇಸಲ್ಲಿ ಎಲ್ಲರನ್ನ ಹಿಂದಿಕ್ಕಿ ಮುಂದೆ ಮುಂದೆ. ಬಂದವ ಅವಳ ಗಂಡ. ಸೈಕಲಿನಿಂದ ಇಳಿದು ಬರುವಂತೆ ತಾಕೀತು ಮಾಡ್ತಾನೆ. ಅವಳು ಕೇಳೋಲ್ಲ. ತಲ್ಲಾಖ್ ಕೊಡ್ತೀನಂತ ಹೆದರಿಸ್ತಾನೆ. ಊಹೂ… ಜಗ್ಗೋದಿಲ್ಲ. ಅವನ ಅಟಾಟೋಪ ಹೆಚ್ಚಿದಂತೆಲ್ಲ ಅವಳು ಮತ್ತಷ್ಟು ಬಲನೂಕಿ ಮುಂದೆ ಸಾಗ್ತಾಳೆ.
ಅದೇ, ಅವನು ಅತ್ತ ಹೋದಾದಮೇಲೆ ಕುದುರೆಯ ಖುರಪುಟದ ಭ್ರಮೆ ಅವಳನ್ನ ಹಿಂದಕ್ಕೆಳೆಯುತ್ತದೆ.
ಮತ್ತೆ ಅವನೊಟ್ಟಿಗೆ ಇಮಾಮ್ ಬರ್ತಾನೆ. ನೀತಿ ಪಾಠ ಹೇಳಿ ಬೆದರಿಸ್ತಾನೆ. ಅವಳ ಅಜ್ಜ, ಅಪ್ಪ… ಎಲ್ಲರೂ ಸೈಕಲ್ ಇಳಿದು ಬರಲು ಹೇಳುವವರೇ.
ಅವರೆಲ್ಲ ನಿಜವಾಗಿಯೂ ಸುತ್ತುವರೆದಾಗ ಆಹೂಗೆ ಎಲ್ಲಿಲ್ಲದ ಆವೇಗ. ಆಗೆಲ್ಲ ಅವಳು ಅವರನ್ನ ಧಿಕ್ಕರಿಸಿ ಮುಂದುವರೆದು ಗೆಲುವಿನಂಚಿಗೆ ಸಾಗುವವಳೇ.
ಅವರಿಲ್ಲದಾಗ… ಅವರ ಬೆದರಿಕೆಯ ಭ್ರಮೆ , ಹಾದಿ ಬದಿ ಹೆಂಗಸರ ಕೆಣಕು ಮಾತುಗಳು ಅವಳನ್ನ ಹಿಂದಕ್ಕೆ ತಳ್ಳುವವು. ಅವನ್ನೆಲ್ಲ ಮೀರಿ ಆಹೂ ಮುಂದಾಗ್ತಾಳೆ.
ಆದರೇನು? ಅವಳ ಅಣ್ಣ ತಮ್ಮಂದಿರು ಅವಳನ್ನ ಅಡ್ಡಗಟ್ಟುತಾರೆ. ಬಲವಂತವಾಗಿ ಸೈಕಲ್ ಕಿತ್ತುಕೊಳ್ತಾರೆ. ಆಹೂ ರೇಸಿನಿಂದ ಹೊರಗುಳೀತಾಳೆ.
**
~ಚಿತ್ರ ಮೂರು~
ಹೂರಾ ಏರೋಪ್ಲೇನಿಂದ ಕೆಳಗಿಳೀತಾಳೆ. ಅವಳ ಹತ್ತೂ ಬೆರಳು ತುಂಬ ಬಟ್ಟೆ ಪಟ್ಟಿಗಳ ಕಟ್ಟು! ಅವೆಲ್ಲ ಅವಳ ಬಯಕೆ ಪಟ್ಟಿಗಳಂತೆ.
ಹುಡುಗನೊಬ್ಬ ತಳ್ಳುಗಾಡಿಯಲ್ಲಿ ಅವಳನ್ನ ಕೂರಿಸ್ಕೊಂಡು ಶಾಪಿಂಗ್ ಮಾಡಿಸ್ತಾನೆ. ಎಲ್ಲ, ಎಲ್ಲ ಆಧುನಿಕ ವಸ್ತುಗಳನ್ನೂ ಕೊಳ್ಳುತ್ತ ಸಾಗುತ್ತಾಳೆ. ಜತೆಗೇ ಬೆರಳು ಕಟ್ಟುಗಳೂ ಕರಗುತ್ತಾ ಕೈ ಖಾಲಿಯಾಗ್ತದೆ. ಆದರೆ, ಒಂದೇ ಒಂದು ಕಟ್ಟೂ ಉಳಿದುಬಿಡ್ತದಲ್ಲಾ?
ಆದರೆ, ಅದೇನೆಂದು ಅವಳಿಗೆ ನೆನಪಾಗೋದೇ ಇಲ್ಲ. ಅವಳಿಗದೇ ಯೋಚನೆ.
ಅವನ್ನೆಲ್ಲ ಸಮುದ್ರ ತೀರಕ್ಕೆ ತಂದು ಬಿಚ್ಚಿಸುತ್ತಾಳೆ. ಎಲ್ಲವನ್ನೂ ಜೋಡಿಸಿಟ್ಟು ನೋಡಿ ಸಂಭ್ರಮಿಸ್ತಾಳೆ. ಅವಳದಲ್ಲಿ ಕೆಲಕಾಲ ಗೋಡೆಗಳಿಲ್ಲದ ಮನೆ. ಮುಪ್ಪಿನ ಹೊತ್ತಲ್ಲಿ ಅದವಳಿಗೆ ಸಿಕ್ಕ ಸ್ವಾತಂತ್ರ್ಯವಾ?
ಕೊನೆಗೆ ತೆಪ್ಪದ ಥರದ ದೋಣಿಯಲ್ಲಿ ಅದನೆಲ್ಲ ಹೇರಿಕೊಂಡು ಅವಳು ತೇಲಿಹೋಗ್ತಾಳೆ. ಆ ಕೊನೆಯ ದೃಶ್ಯ ಹೀಗಿದೆ…
ಹೂರಾ ತೆಪ್ಪದ ಮೇಲೆ ಸೋಫಾದಲ್ಲಿ. ಅವಳ ಸುತ್ತ ಮನೆಯ ಎಲ್ಲ ವಸ್ತುಗಳು. ಗೋಡೆಗಳಿಲ್ಲದ, ತೀರಗಳಿಲ್ಲದ ವಿಶಾಲ ಸಮುದ್ರದಲ್ಲಿ, ಮರೆತ ಅದೊಂದು ಬಯಕೆಯ ಕಟ್ಟಿನೊಂದಿಗೆ ಕೈಬೀಸಿ ಹೊರಟಿದಾಳೆ. ಇತ್ತ ಹವಾ ಅವಳಮ್ಮನ ಜತೆ ನಿಂತವಳು ದಿಟ್ಟಿಸಿ ಅದನ್ನೇ ನೋಡ್ತಿದಾಳೆ.
ಹೂರಾ ಹೊರಟುಹೋಗ್ತಾಳೆ.
ಅವಳು ಮರೆತ ಆಸೆ ಯಾವುದು? ಸ್ವಾತಂತ್ರ್ಯದ ಬಯಕೆಯಾ? ಎಲ್ಲ ಸಿಗುವ ಹೊತ್ತಿಗೆ ಅವಳಿಗದು ಮರೆತೇ ಹೋಗಿರ್ತದಾ? ಪಾರದರ್ಶಕ ಟೀಪಾತ್ರೆಯನ್ನ ನಾಚಿಗ್ಗೆಟ್ಟ ಬೆತ್ತಲು ಪಾತ್ರೆ ಅಂತ ಮೂಗುಮುರೀತಾಳಲ್ಲ? ಅವಳಿಗೆ ಆ ಹೊತ್ತಿಗೆ ಸ್ವಾಂತಂತ್ರ್ಯದ, ಒಳಗನ್ನ ತೆರೆದಿಡುವ, ಸ್ವೇಚ್ಛೆಯ ಬಯಕೆ ಸತ್ತು ಹೋಗಿರ್ತದಾ? ಅಥವಾ ಅವಳು ಎಲ್ಲ ಸಿಕ್ಕರೂ ಹಳೆಯ ಕಟ್ಟುಪಾಡುಗಳಿಗೆ ಒಗ್ಗಿದ್ದ ಮನಃಸ್ಥಿತಿಯಿಂದ ಹೊರಬರದವಳಾಗಿರ್ತಾಳಾ?
~~
ಈ ಮೂರೂ ತುಣುಕುಗಳು ‘ದ ಡೇ ಐ ಬಿಕೇಮ್ ವುಮನ್’ ಅನ್ನುವ ಇರಾನಿ ಚಿತ್ರದ್ದು. Marzieh Makhmalbaf (ಮಾರ್ಜಿಯಾ ಮಕ್ಮಲ್ಬಫ್) ಇದರ ನಿರ್ದೇಶಕಿ. (Marzieh Makhmalbaf (dialogue) Mohsen Makhmalbaf (writer)..)
ನಾಟಕದ ಶೈಲಿಯಲ್ಲಿರುವ ಸಿನೆಮಾ ಇದು. ಇಲ್ಲಿ ರೂಪಕಗಳದೇ ಸಾಮ್ರಾಜ್ಯ.
ಕಡ್ಡಿಯ ನೆರಳು ಅಳೀತಾ ಸಿಕ್ಕ ಸ್ವಾತಂತ್ರ್ಯದಲ್ಲೇ ಸುಖ ಸೂರೆ ಮಾಡಹೊರಡುವ ಮುಗ್ಧ ಹುಡುಗಿ…
ಅವಳಿಗಿರೋದು ಅಮ್ಮನ ಮಾತಲ್ಲಿ ನಂಬಿಕೆಯಷ್ಟೆ. ಅಮ್ಮ ಹೇಳ್ತಾಳೆ, ಕಡ್ಡಿಯ ನೆರಳು ಮಾಯವಾಗೋ ಹೊತ್ತು ಮಧ್ಯಾಹ್ನ. ನೀನು ಹೆಂಗಸಾಗ್ತೀ!
ಅದನ್ನ ನೆಚ್ಚಿಕೊಂಡ ಮಗಳಿಗೆ ಅದಷ್ಟೆ ತಲೆಯಲ್ಲಿ. ಅಮ್ಮನ ಮಾತು ಮುರಿಯುವ ಯೋಚನೆಯೇ ಅಲ್ಲಿಲ್ಲ. ಹೆಣ್ಣನ್ನು ಹುಟ್ಟಿದ ನಂತರ ಹೇಗೆ ಹೆಂಗಸನ್ನಾಗಿ ‘ಮಾಡಲಾಗುತ್ತದೆ’ ಅನ್ನುವುದು ಇಲ್ಲಿ ಅದೊಂದೇ ಸರಳ ಸಂಕೇತದ ಮೂಲಕ ಸಮರ್ಥವಾಗಿ ಹೇಳಲ್ಪಟ್ಟಿದೆ. ಇದು ಇರಾನಿಗೆ, ಯಾವುದೋ ಒಂದು ಪಂಥ, ದೇಶ ಕಾಲಕ್ಕೆಮಾತ್ರ ಸೀಮಿತವಾದುದಲ್ಲ. ಇದು ಮೂಲಭೂತವಾದದ ಒಲವಿರುವ ಮನಸುಗಳಿರುವ ಕಡೆಗೆಲ್ಲ ಅನ್ವಯವಾಗುವಂಥದ್ದು.
ಎರಡನೇ ಚಿತ್ರಣದಲ್ಲಿ ನಿಮಗಿದು ಸ್ಪಷ್ಟವಾಗುತ್ತೆ. ನೀವೇನಾದರೂ ಮೊದಲ ತುಣುಕನ್ನ ನೋಡಿ ‘ಇರಾನಿನಲ್ಲಿ ಹೆಂಗಸರ ಪಾಡು ಹೀಗೆ’ ಅಂತ ತೀರ್ಮಾನಿಸಿದರೆ ಪೆದ್ದರಾಗ್ತೀರಿ. ಎರಡನೇ ಚಿತ್ರಣದಲ್ಲಿ ಸೈಕಲ್ ರೇಸಲ್ಲಿ ಪಾಲ್ಗೊಂಡ ಆಹೂ ಹೊರತು ಇನ್ನಾವ ಹೆಣ್ಣುಗಳಿಗೂ ಬೆದರಿಕೆಯ ಸಮಸ್ಯೆಯಿರೋದಿಲ್ಲ. ಅಲ್ಲಿ ಅವಳನ್ನು ಪ್ರಾತಿನಿಧಿಕವಾಗಿ ತೆಗೆದ್ಕೊಂಡಿದಾರೆ ಅನ್ನುವ ಹಾಗೂ ಇಲ್ಲ. ಯಾಕೆಂದರೆ, ಉಳಿದವರಲ್ಲಿ ಇಬ್ಬರು ಅವಳ ಸ್ಥಿತಿಯನ್ನ ಆಡಿಕೊಳ್ತಾರೆ. ಸೋ, ಉಳಿದವರು ಅದರಿಂದ ದೂರವೇ ಇದ್ದಾರೆ.
ವೈಯಕ್ತಿಕವಾಗಿ ನನಗಿಷ್ಟವಾಗಿದ್ದು ಎರಡನೇ ತುಣುಕಿನ ರೂಪಕಗಳು. ಕುದುರೆಯ ಓತದ ಕಾಲುಗಳ ಭ್ರಮೆಯಲ್ಲಿ ಹಿಂಜರಿಯುವ ಆಹೂ… ನಿಜದ ಜನದ ಬೆದರಿಕೆಗೆ ಸೆಡ್ಡು ಹೊಡೆದು ಮುನ್ನುಗುವ ಅವಳು…
ಹೆಣ್ಣು, ಸವಾಲು ಎದುರಾಗೇಬಿಟ್ಟಾಗ ಧೈರ್ಯದಿಂದ ಎದುರಿಸ್ತಾಳೆ. ಆದರೆ ಅವಳಲ್ಲಿನ ಭಯ ಅವಳನ್ನ ಹೈರಾಣು ಮಾಡುತ್ತೆ. ಜನದ ಮಾತು ಕೀಳರಿಮೆ ಮೂಡಿಸುತ್ತೆ. ಸಮುದ್ರ ಈ ಕಥನದ ಹಿನ್ನೆಲೆಯಲ್ಲಿ ಸಮರ್ಥವಾಗಿ ಬಳಕೆಯಾಗಿದೆ. ತೆರೆಗಳು ಹಿಂಜರಿಯುತ್ತಲೇ ಮುನ್ನುಗ್ಗುವ ಹಾಗೆ, ಕಡಲಲ್ಲೂ ಉಳಿಯಲಾಗದೆ, ದಡದಲ್ಲೂ ನಿಲ್ಲಲಾಗದೆ ತಳಮಳಿಸುವಂತೆ…
ಇಷ್ಟೆಲ್ಲ ಮಾತಿನ ಅಗತ್ಯವೇ ಬೇಕಿಲ್ಲ. ಸುಮ್ಮನೆ ಈ ಸಿನೆಮಾ ನೊಡಬೇಕು.
ಹಿರಿಯರ ಮಾತಿಗೆ ಕಟ್ಟುಬೀಳುವ ಅರಿಯದ ಹರೆಯದ ಹುಡುಗಿ,
ಅರಿತು, ಕಲಿತು ಮುನ್ನುಗ್ಗಬಯಸಿ ಗೆದ್ದರೂ ಒಡಹುಟ್ಟಿದವರ ದೈಹಿಕ ಬಲಕ್ಕೆ ಸೋಲಲೇ ಬೇಕಾದ ಅನಿವಾರ್ಯತೆ (ಹೆಣ್ಣು ಎಷ್ಟು ಗಟ್ಟಿಗಳಾದರೂ ದೇಹಬಲ ಪ್ರಕೃತಿಯೆಸಗಿದ ಮೋಸವೋ ಅಥವಾ ಇದ್ದೂ ಅವಲದನ್ನು ಪ್ರಯೋಗಿಸದೆ ಸುಮ್ಮನಿರುವಳೋ…)
ಮುದಿ ವಯಸ್ಸಲ್ಲಿ ಸಿಕ್ಕ ಸ್ವಾತಂತ್ರ್ಯವನ್ನ ಭೋಗವಸ್ತುಗಳ ಕೊಳ್ಳುವಿಕೆಯ ಹಳೆಬಯಕೆಯ ಈಡೇರಿಕೆಯಲ್ಲಿ ವಿನಿಯೋಗಿಸುವ, ಆ ಭರದಲ್ಲಿ ನಿಜದೊಂದು ಬಯಕೆಯನ್ನೇ ಮರೆತು ಹೋಗುವ ಎಲ್ಲ ಹೆಣ್ಣುಮಕ್ಕಳ ನಿಜದ ಪಾಡು…
ಇವು ಹೆಣ್ಣಿನ ಮೂರು ಘಟ್ಟಗಳ ಸಂಕೇತಗಳು.
ಒಟ್ಟಾರೆ ಹಿಡಿತವಿಲ್ಲದೆ ಬರೀ ಭಾವುಕಳಾಗಿ ಬರೆದ ಈ ಲೇಖನ ಮುಗಿಸುವ ಮೊದಲೊಮ್ಮೆ ಪ್ರಶ್ನೆ.
ಕೊನೆಯಲ್ಲಿ ಹವಾ ಮತ್ತು ಹೂರಾಳನ್ನು ಮುಖಾಮುಖಿ ತೋರಿಸೋದ್ಯಾಕೆ? ಹಾಗೆ ಬೆಳೆದವಳ ಕೊನೆ ಹೀಗಾಗ್ತದೆ ಅಂತಲಾ? ಹಾಗಾದರೆ ಹೂರಾ ಮರೆತ ಬಯಕೆ ಏನು? ಖುಷಿಖುಷಿಯಾಗಿ ಆಡಿಕೊಂಡು ತನ್ನ ಬದುಕು ಬದುಕಬೇಕು ಅನ್ನೋದಾ?
ಸಿನೆಮಾ ಕಾಡ್ತಲೇ ಇದೆ…
(ಸಾವಿರ ಮಾತುಗಳು, ಭಾವಾತಿರೇಕದ ನಾಟಕಗಳು ಕಟ್ಟಿಕೊಡಲಾಗದ ಎದೆನೋವನ್ನ ಈ ಚಿತ್ರದ ಕೆಲವೇ ರೂಪಕಗಳು ಕೊಟ್ಟಿವೆ, ಯೋಚನೆಗೆ ಹಚ್ಚಿವೆ ಅಂದರೆ ಅದು ಚಿತ್ರದ ಒಳ್ಳೆ ಗುಣವೋ? ಕೆಟ್ಟದ್ದೋ??)
Advertisements

ಸಿನೆಮಾ `ಸಾಂಗತ್ಯ’

ವರ್ಷದ ಹಿಂದಿನ ಮಾತು. ಕುಪ್ಪಳ್ಳಿಗೆ ಹೊರಟಾಗ ನನಗೆ ಗೊತ್ತಿದ್ದುದು ನಾನು ಸಿನೆಮಾ ನೋದಲಿಕ್ಕೆ ಹೋಗ್ತಿದೇನೆ, ಅದೂ ನನ್ನ ಮೆಚ್ಚಿನ ಮಲೆನಾಡಲ್ಲಿ ತಣ್ಣಗೆ ಕುಂತು ನೋಡಲಿದ್ದೇನೆ, ಮತ್ತಿದನ್ನ ನಾವಡ, ಸುಧೀರ್ ಕುಮಾರ್ (ನನ್ನ ಪ್ರೀತಿಯ ಗೆಳತಿ ದೀಪಾಳ ಪತಿಯೂ ಆಗಿರುವ), ಮಧು, ವಾದಿರಾಜ್ ಮೊದಲಾದ ಗೆಳೆಯರು `ಸಾಂಗತ್ಯ ವೇದಿಕೆಯಡಿ ಆಯೋಜಿಸಿದಾರೆ ಅನ್ನುವುದಷ್ಟೆ. ಅಲ್ಲಿ ಹೋಗಿ ಸಿನೆಮಾ ನೊಡಿ ಬರುವುದು ಬಿಟ್ಟು ಬೇರೆ ಏನೂ ನಿರೀಕ್ಷೆ ಇರಲೂ ಇಲ್ಲ, ಅವರು ಅದರ ಹೊರತಾಗಿ ಮತ್ತೇನೋ ಮಾಡಲಿದ್ದಾರೆ ಅನ್ನುವ ನಿರೀಕ್ಷೆಯಂತೂ ಇರಲೇ ಇಲ್ಲ.

ಆದರೆ ಅಲ್ಲಿ ತಲುಪುವ ಹೊತ್ತಿಗಾಗಲೇ ನಾವಡರು ಪ್ರವೀಣ್ ಜತೆ ಸೇರಿಕೊಂಡು ಸಾಂಗತ್ಯ ಹೆಸರಿನ ಬ್ಲಾಗ್ ಒಂದನ್ನು ತೆರೆದಾಗಿತ್ತು. ಅದು ಕೂಡ ಕೊಪ್ಪ ಎಂಬ ಬೆಂಗಳೂರು ದೂರದ ಪುಟ್ಟ ಊರಲ್ಲಿ ಕುಂತು! (ಸಾಂಗತ್ಯ ಬ್ಲಾಗ್: www.saangatya.wordpress.com)

ಈಗ ಸಾಂಗತ್ಯಕ್ಕೆ ವರ್ಷ ತುಂಬಿದ ಹೊತ್ತಲ್ಲಿ ಅವತ್ತಿನಮೊದಲ ಸಿನೆಮೋತ್ಸವದ ನೆನಪು. ನಿಜಕ್ಕೂ ಅದು ಎಲ್ಲ ಥರದಲ್ಲೂ ಯಶಸ್ವೀ ಕಾರ್ಯಕ್ರಮ. ನನ್ನ ನೆಚ್ಚಿನ ಬೆಂಗಾಲಿ ಭಾಷೆಯ ಜುಕ್ತಿ ಟಕೋ…, ಪೋಸ್ಟ್ ಮೆನ್ ಇನ್ ದ್ ಮೌಂಟೆನ್ಸ್, ಎಲ್ ಪೋಸ್ಟಿನೋ ಥರದ ಕ್ಲಾಸಿಕ್‌ಗಳನ್ನ ನೋಡಿ ಸಂವಾದ ನಡೆಸಿದ್ದು ಇನ್ನೂ ಕಣ್ಮುಂದಿದೆ. ಈ ಕಾರ್ಯಕ್ರಮದಲ್ಲೇ ಮೊದಲು ಭೇಟಿಯಾದ ಪರಮೇಶ್ವರ ಗುರುಸ್ವಾಮಿಯವರ ಸಿನೆ ಪ್ರೀತಿ, ಅದನ್ನು ನಮಗೂ ಹಂಚುವ ಆಸಕ್ತಿ, ಅವರು ಪ್ರತಿ ಕೋನವನ್ನೂ ಎಳೆ ಎಳೆಯಾಗಿ ವಿವರಿಸುವ ಬಗೆ ಸಿನೆಮಾ ಅಂದರೆ ಬರೀ ತೆರೆ ಮೇಲೆ ಕುಣಿದಾಡುವ ಚಿತ್ರಗಳಾಚೆಗೂ ಇರುವ ಅದ್ಭುತ ಲೋಕ ಅನ್ನುವುದನ್ನ ಮತ್ತಷ್ಟು ಮನದಟ್ಟುಮಾಡಿಕೊಟ್ಟಿತ್ತು.

ಇರಲಿ. ಸಾಂಗತ್ಯದ ಬಗ್ಗೆ ಹೇಳ್ತಿದ್ದೆ. ನಾನು ಅಂದ್ಕೊಂಡಿದ್ದೆ. ಎಲ್ಲ ಬ್ಲಾಗುಗಳ ಹಾಗೆ ಇದು ಕೂಡ ಯಾವುದಾದ್ರೂ ವಿವಾದಕ್ಕೆ ಸಿಲುಕಿಯೋ, ನಿರ್ವಹಿಸಲಾಗದೆಯೋ, ಸಮಯದ ಕೊರತೆಯಿಂದ್ಲೋ ಅಥವಾ ಆಸಕ್ತಿ ಮುಗಿದೋ ಕುಂಟುತ್ತ ಸಾಗುತ್ತೆ ಅಥವಾ ನಿಲ್ಲುತ್ತೆ ಅಂತ. ಯಾಕೆಂದರೆ, ಒಬ್ಬ ವ್ಯಕ್ತಿಯ ಹೆಸರಿಲ್ಲದ ಯಾವುದೇ ನಿಸ್ವಾರ್ಥ ಅಟೆಂಪ್ಟ್ ಹಾಗೆಲ್ಲ ಬರಖತ್ತಾಗೋದು ಕಷ್ಟ ನೋಡಿ!? ಆದರೆ, ನನ್ನ ಅಚ್ಚರಿಗೆ, ಸಾಂಗತ್ಯಕ್ಕೆ ಬ್ಲಾಗ್ ಲೋಕದಾಚೆಗಿನ ಆಸಕ್ತರೂ ಬರೆಯತೊಡಗಿದರು! ಮತ್ತೆ, ಬೇರೆ ಬೇರೆ ವಲಯಗಳ, ಊರುಗಳ ಸಿನೆಪ್ರಿಯರೆಲ್ಲರೂ ಭೇಟಿಕೊಡತೊದಗಿದ್ದರು!! ಸ್ಲಮ್‌ಡಾಗ್ ಮಿಲೆನಿಯರ್ ಬಗ್ಗೆ ಮೊದಲಬಾರಿಗೆ ನಡೆದ ವ್ಯಾಪಕ ಸಂವಾದವಿರಬಹುದು, ಸಿನೆಮಾ ಹೇಗಿರಬೇಕೆಂಬ ಬಗ್ಗೆಯದಿರಬಹುದು, ಚಿತ್ರವೊಂದುನೋಟ ಹಲವು ಥರದ ಸಂವಾದಗಳಿರಬಹುದು, ಎಲ್ಲವೂ ಯಾವ ಅತಿರೇಕವಿಲ್ಲದೆ, ಆರೋಗ್ಯಕರವಾಗಿ ನಡೆದುಕೊಂಡು ಹೋಗಿದ್ದು ಅದರ ಹೆಗ್ಗಳಿಕೆ. ಜೊತೆಗೆ, .ಗು., ಸೃಜನ್ ನಿಯಮಿತ ಅಂಕಣಗಳು, ಬಿ.ಸುರೇಶ್‌ರಂತೆ ಸಿನೆವಲಯದಲ್ಲಿದ್ದವರ ಪ್ರತಿಕ್ರಿಯೆಗಳು, ಇವೆಲ್ಲ ಸಾಂಗತ್ಯಕ್ಕೊಂದು ಶಿಸ್ತು ತಂದುಕೊಟ್ಟವು. ಬಹುಶಃ ಇದನ್ನು ಆರಂಭಿಸಿದವರು ಶುರುಮಾಡುವಾಗ ಇಂಥದೊಂದು ನಿರೀಕ್ಷೆ ಇಟ್ಟುಕೊಂಡಿರಲಿಲ್ಲವೇನೋ?

ಹಾಗಾದರೆ ಸಾಂಗತ್ಯ ಈ ಒಂದು ವರ್ಷದಲ್ಲಿ ಏನು ಮಾಡಿದೆ? ಬರೀ ಬ್ಲಾಗ್ ಮಾಡಿದ್ದೇ ಹೆಗ್ಗಳಿಕೆಯಾ? ಊಹೂಅದು ಬೇರೆಬೇರೆ ಭಾಗಗಳ ಸಿನೆಪ್ರಿಯರನ್ನು ಒಂದುಗೂಡಿಸಿದೆ. ಪರಸ್ಪರ ಸಂವಾದಬ್ಲಾಗ್ ಆಚೆಯೂ ನಿರಂತರ ನಡೆಯುವಂತೆ ಮಾಡಿದೆ. ಒಳ್ಳೊಳ್ಳೆ ಸಿನೆಮಾ ನೋಡುವಿಕೆ ಸಾಧ್ಯ ಮಾಡಿಕೊಟ್ಟಿದೆ. ನನಗೆ ಗೊತ್ತಿರುವ ಹಾಗೆ, ಮೊದಲ ಸಾರ್ತಿ ಸಿನೆಮೋತ್ಸವಕ್ಕೆ ಹೋಗಿಬಂದ ನಂತರ ಅಲ್ಲಿ ಪಾಲ್ಗೊಂಡಿದ್ದವರೆಲ್ಲರೂ ಬೇರೆಬೇರೆ ಭಾಷೆಯ ಕನಿಷ್ಠ ಇಪ್ಪತ್ತು ಸಿನೆಮಾಗಳನ್ನು ನೋಡಲು ಸಾಧ್ಯವಾಗಿದೆ. ನಾನೊಬ್ಬಳೇ ನನ್ನ ಅಭಿರುಚಿಯನ್ನು ಮತ್ತಷ್ಟು ಉತ್ತಮಗೊಳಿಸ್ಕೊಂಡು ಮೂವತ್ತು ಸಿನೆಮಾಗಳನ್ನ ಒಂದು ವರ್ಷದಲ್ಲಿ ನೋದಲು ಸಾಧ್ಯವಾಯ್ತೆಂದರೆ! ಆ ಮೂಲಕ ಅರಿವಿನ ವಿಸ್ತರಣೆ ಸಾಧ್ಯವಾಯ್ತೆಂದರೆಮನರಂಜನೆಯ ಮತ್ತೊಂದು ಮಗ್ಗಲು ಸಿದ್ಧಿಸಿತೆಂದರೆ ಲೆಕ್ಕ ಹಾಕಿಕೊಳ್ಳಿ. …

ಈ ವರೆಗೆ ಸಾಂಗತ್ಯ ಒಟ್ಟು ಎರಡು ಫಿಲ್ಮ್ ಫೆಸ್ಟಿವಲ್ ಗಳನ್ನು ಮಾಡಿದೆ. ಈಗ ಮೂರನೆಯದಕ್ಕೆ ರೆಡಿಯಾಗ್ತಿದೆ (೧೬೧೭ಕ್ಕೆ, ಕುಪ್ಪಳ್ಳಿಯಲ್ಲಿ). ಇನ್ನೊಂದು ವಿಷಯ, ಅದು ಶೀಘ್ರದಲ್ಲೇ ಸದಭಿರುಚಿಯ, ಅಗಾಧ ಮಾಹಿತಿಯ ಪತ್ರಿಕೆಯನ್ನೂ ಹೊರತರ್ತಿದೆ! ತ್ರೈಮಾಸಿಕ ಎಂದು ಕೇಳಿಪಟ್ಟಿದೇನೆ. ಅದರಲ್ಲಿ ಇರಬಹುದಾದ ಸಂಗತಿಗಳನ್ನ ಸಧ್ಯಕ್ಕೆ ನೀವು ಊಹಿಸಲೂ ಸಾಧ್ಯವಿಲ್ಲವೆಂದು ನಾನು ಬೆಟ್ ಕಟ್ತೇನೆ!

ಬಹುಶಃ ಸ್ವಲ್ಪ ಜಾಸ್ತಿಯೇ ಬರೆದುಬಿಟ್ಟೆ. ಸಾಂಗತ್ಯದ ಮೇಲಿನ ನನ್ನ ಪ್ರೀತಿ ಅಂಥದ್ದು. ಯಾವುದೇ ಆಗಲಿ, ಒಳ್ಳೆಯ ಪ್ರಯತ್ನವನ್ನ ಮೆಚ್ಚದಿರಲು, ಹುರಿದುಂಬಿಸದಿರಲು ಸಾಧ್ಯವಾಗೋಲ್ಲ ನೋಡಿ! ಪತ್ರಿಕೆ ಆರಂಭವಾದ ಮೇಲೆ ಅರಿಕೆ ಹೊತ್ತುಕೊಂಡು ಮತ್ತೆ ಬರ್ತೇನೆ. ಅಲ್ಲೀವರೆಗೂ, ಸಾಂಗತ್ಯದ (ಕನ್ನಡದಲ್ಲಿ ಇದು ವಿಶಿಷ್ಟ ಪ್ರಯತ್ನ) ಯೋಜನೆಗಳಿಗೆ ನನ್ನ ಜತೆ ನೀವೂ ಪ್ರೀತಿಯಿಂದ ವಿಶಸ್ ಹೇಳ್ತೀರಲ್ಲ?

ಥ್ಯಾಂಕ್ಸ್.

ಕನಸು ‘ನೋಡೋಣ’ ಬನ್ನಿ!

ಜಗತ್ತಿನ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಕಿರಾ ಕುರಸೋವಾ   ಅವರ ‘ಡ್ರೀಮ್ಸ್’ ಸಿನೆಮಾವನ್ನು ನೋಡುವ ಅವಕಾಶ ಒದಗಿಸಿಕೊಟ್ಟಿದೆ ಸಾಂಗತ್ಯ. ಇನ್ನು ಮುಂದೆಯೂ ಈ ಬಗೆಯ ವಿಭಿನ್ನ ಪ್ರಯೋಗಗಳನ್ನು ಬ್ಲಾಗ್ಲೋಕದಲ್ಲಿ ಮಾಡಲಿದೆ ಈ ಉತ್ಸಾಹಿ ತಂಡ.

ಅದಾಗಲೇ ಚಿತ್ರ ಖಜಾನೆಯಂತಹ ವಿನೂತನ ಪ್ರಯೋಗಕ್ಕೆ ಕೈಹಾಕಿರುವ ಸಾಂಗತ್ಯ, ಸಿನೆಮಾ ಜಗತ್ತಿನ ಎಲ್ಲವನ್ನೂ ಕನ್ನಡದಲ್ಲಿ ಒದಗಿಸಿಕೊಡುವ ಮಹದಾಸೆ ಹೊಂದಿದೆ. ಇದಕ್ಕೆ ಬ್ಲಾಗ್ಗೆಳೆಯರೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹಗಳು ಬೇಕಷ್ಟೆ.

ಇನ್ನೇಕೆ ತಡ, ಕನಸು ನೋಡಲು ಸಾಂಗತ್ಯಕ್ಕೆ ಹೊರಡೋಣ, ಬನ್ನಿ!

‘ಸಾಂಗತ್ಯ’ದ ಸಂಗಾತ…

ದಿನಾಂಕ ೨.೧.೨೦೦೯ರ ರಾತ್ರಿ ಒಂಭತ್ತೂವರೆಗೆ ಮನೆಯಿಂದ ಹೊರಟ ನಾನು, ಟೀನಾ ಒಂಭತ್ತೂ ಐವತ್ತಕ್ಕೆ ಮೆಜಸ್ಟಿಕ್ ಸೇರಿ, ಸ್ವಲ್ಪ ಹೊತ್ತಿಗೇ ಬಂದುನಿಂತಿದ್ದ ಬಿಳಿಯ ಬಸ್ಸನ್ನ ಮಹರಾಯನೊಬ್ಬ ‘ಚಿಕ್ ಮಗ್ಳೂರ್ ಬಸ್ಸು’ ಅಂದು, ನಾವು ಆಸುಪಾಸಿನ ಜನರನ್ನ ‘ಇವ್ರೂ ಕುಪ್ಪಳ್ಳಿಗೆ ಹೊಂಟವರಿರಬೇಕು’ ಅಂತ ಗುಮಾನಿ ಕಣ್ಣಲ್ಲಿ ನೋಡುತ್ತ ಗಾಸಿಪ್ ಮಾಡ್ಕೊಂಡು ಕುಂತಿರುವಾಗ ಇದ್ದಕ್ಕಿದ್ದ ಹಾಗೇ ಟೀನಾ ತಲೆಮೇಲೆ ಬೋಧಿವೃಕ್ಷ ಚಿಗುರಿ, ‘ಮತ್ತೊಂದ್ಸಲ ವಿಚಾರಿಸ್ಕೊಂಡ್ ಬಾರೇ’ ಅಂದು, ನಾನು ಹೋಗಿ ಕೇಳಲಾಗಿ ಅದೇ ಬಿಳಿ ಬಸ್ಸು ಕುಪ್ಪಳ್ಳಿಗೆ ಹೋಗೋದು ಗ್ಯಾರಂಟಿಯಾಗಿ, ನಮ್ಮ ಪೆದ್ದುತನಕ್ಕೆ ಬಿದ್ದೂ ಬಿದ್ದೂ ನಗುತ್ತ ಬಸ್ ಹತ್ತಿದಾಗ ಟೈಮು ಹತ್ತೂ ಇಪ್ಪತ್ತೆಂಟು. ಡಿಪಾರ್ಚರಿಗೆ ಬರೀ ಎರಡು ನಿಮಿಶ ಬಾಕಿ!
~
ಹೀಗೆ ನಾವು ಹೋಗಿದ್ದು ಕುಪ್ಪಳ್ಳಿಯಲ್ಲಿ ‘ಸಾಂಗತ್ಯ’ ವತಿಯಿಂದ ಆಯೋಜನೆಯಾಗಿದ್ದ ಚಿತ್ರೋತ್ಸವಕ್ಕೆ. ಅರವಿಂದ ನಾವಡ, ವಾದಿರಾಜ್, ಸುಧೀರ್ ಕುಮಾರ್, ಮ್ಧು ಮೊದಲಾದ ಮಿತ್ರರು ಇದರ ಹೊನೆ ಹೊತ್ತಿದ್ದರು. “ಏನೇನೋ… ಹೆಂಗ್ ಹೆಂಗೋ…” ಅಂದ್ಕೊಂಡೇ ಕುಪ್ಪಳ್ಳಿಯಲ್ಲಿ ಬಸ್ಸಿಳಿದ ನಾವು ಅಲ್ಲಿನ ವ್ಯವಸ್ಥೆಗೆ, ಅಚ್ಚುಕಟ್ಟುತನಕ್ಕೆ ದಂಗುಬಡಿದು ಹೋದೆವು. ನಮ್ಮ ಪುಣ್ಯದಿಂದಾಗೇ ೨೯ಕ್ಕ್ಕೆ ಕುವೆಂಪು ಶತಮಾನೋತ್ಸವ ಭವನದಲ್ಲೊಂದು ಎ.ವಿ ಹಾಲ್ ಉದ್ಘಾಟನೆಯಾಗಿತ್ತು. ಅಲ್ಲಿ ನಮ್ಮ ಕಾರ್ಯಕ್ರಮವೇ ಮೊಟ್ಟಮೊದಲನೆಯದು! ( ಸಾಂಗತ್ಯ ಈಗ ‘ಅವರ’ ಟೀಮ್ ಆಗಿ ಉಳಿಯದೆ, ನಮ್ಮದೂ ಆಗಿಹೋಗಿದೆ!!)
~
ಅದು ಬಹಳ ಅಕ್ಕರೆಯಿಂದ ರೂಪಿಸಿದ ಚಿತ್ರೋತ್ಸವ. ಅದಕ್ಕಾಗಿ ಆಯ್ಕೆ ಮಾಡಿದ್ದ ಸಿನೆಮಾಗಳೂ ಒಂದಕ್ಕಿಂತ ಒಂದು ಭಿನ್ನ. ಅಲ್ಲಿ ಜಮಾವಣೆಯಾಗಿದ್ದವರೂ ಅಷ್ಟೇ… ಮೊದಲ ಸಾರ್ತಿ ಈ ಬಗೆಯ ಸಿನೆಮಾ ನೋಡ್ತಿರುವವರು, ನೋಡಿ ಮಾತಾಡ್ತಿರುವವರು, ಈಗಾಗಲೇ ಸಿನೆಮಾ ಹುಚ್ಚು ಹತ್ತಿಸ್ಕೊಂಡವರು… ಹೀಗೇ…
ವಾಪಸು ಹೊರಡುವ ಹೊತ್ತಿಗೆ ನಮಗೆಲ್ಲರಿಗೂ ಬರೀ ಕಥೆಯನ್ನಲ್ಲದೆ ಒಂದು ಸಿನೆಮಾದಲ್ಲಿ ಬೇರೆ ಏನೆಲ್ಲವನ್ನು ಗಮನಿಸಬಹುದು ಮತ್ತು ಯಾಕೆ ಗಮನಿಸಬೇಕು ಎನ್ನುವ ಬಗ್ಗೆ ಮೊದಲ ಪಾಠವಾಗಿತ್ತು. ಎಲ್ಲಿಯೂ ಬೋರ್ ಆಗದಂತೆ ಇಂಥದೊಂದು ಪಾಠವನ್ನು ಹೇಳಿಕೊಟ್ಟವರು ಪರಮೇಶ್ವರ ಗುರುಸ್ವಾಮಿ.
~
“ಪರಮೇಶ್ವರ ಗುರುಸ್ವಾಮಿಯವರನ್ನ ಕುಪ್ಪಳ್ಳಿಗೆ ಕರೀಬೇಕು ಅಂತಿದೀವಿ” ನಾವಡರು ಹೇಳಿದಾಗ ಖುಷಿಯಾಗಿಬಿಟ್ಟಿತ್ತು. ಅದಾಗಲೇ ಪ.ಗು ಅವರು ಮ್ಯಾಜಿಕ್ ಕಾರ್ಪೆಟ್ಟಿನಲ್ಲಿ ನನ್ನದೊಂದು ಸಿನೆಮಾ ಹುಡುಕಿಕೊಟ್ಟಿದ್ದರು. ಮಾತ್ರವಲ್ಲ, ಅದಕ್ಕೊಂದು ಚೆಂದದ ಟಿಪ್ಪಣಿಯನ್ನು ಕೂಡ ನೀಡಿದ್ದರು. ಎರಡು ದಿನವೂ ನಮ್ಮೊಡನೆ ನಮ್ಮಂತೆಯೇ ಇದ್ದ ಅವರ ಸಹವಾಸದಿಂಡ ಖುಷಿಯಾಗಿದ್ದು ಮಾತ್ರವಲ್ಲ, ಲಾಭವೂ ಆಯ್ತು. ಸಿನೆಮಾ ಬಗ್ಗೆ ಮಾತಿಗೆ ಶುರುವಿಟ್ತರೆ ಅದರ ಪ್ರತಿಯೊಂದು ಆಯಾಮವನ್ನೂ ಎಳೆ ಎಳೆಯಾಗಿ ಬಿಡಿಸಿಡುತ್ತಿದ್ದ ಪ.ಗು, ತಾಂತ್ರಿಕವಾಗಿ ಒಂದು ಸಿನೆಮಾವನ್ನು ಹೇಗೆಲ್ಲ ಗಮನಿಸಬಹುದು , ಹೇಗೆ ನೋಡುಗ ಒಂದು ಸಿನೆಮಾಕ್ಕೆ ನ್ಯಾಯ ಸಲ್ಲಿಸಬಹುದು ಎನ್ನುವುದನ್ನು ಹೇಳಿಕೊಟ್ಟರು. ಅವರ ಸಿನೆಮಾ ಜ್ಞಾನ ಭಂಡಾರ ಅತ್ಯದ್ಭುತ.
~
ಈ ಚಿತ್ರೋತ್ಸವ ಆಯೋಜಿಸಿ, ನಮಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟ ನಾವಡರಿಗೆ ಥ್ಯಾಂಕ್ಸ್ ಹೇಳಿದರೆ, ಅವರು ‘ಸಾಂಗತ್ಯ’ ಟೀಮ್ ಕಡೆ ಕೈತೋರಿಸಿ ಜಾರಿಕೊಳ್ತಾರೆ. ಆದರೂ, ನಮಗೆ ಅವಕಾಶವಾಗಿದ್ದು ಅವರ ಮೂಲಕವೇ ಆಗಿರೋದ್ರಿಂದ ನಾವೂ ಪಟ್ಟುಬಿದದೆ ಅವರಿಗೇ ಮೊತ್ತಮೊದಲ ಥ್ಯಾಂಕ್ಸ್ ಹೇಳ್ತೇವೆ.
ಇನ್ನು ಕುಪ್ಪಳ್ಳಿಯ ಬಗ್ಗೆ ಹೇಳುವುದೇನು? ಆ ಹಸಿರು, ಕುವೆಂಪು ಮನೆ, ಕವಿ ಶೈಲ…
ಬಿಸಿ ನೀರು, ಹೊತ್ತುಹೊತ್ತಿಗೆ ರುಚಿರುಚಿಯಾದ ಊಟ-ತಿಂಡಿಗಳು, ಕಾಫಿ-ಟೀ…
ಉಳಿದುಕೊಳ್ಳಲಿಕ್ಕೆ ಸುಸಜ್ಜಿತ ಕೋಣೆ ಮತ್ತಿತರ ವ್ಯವಸ್ಥೆಗಳು…

ಎಲ್ಲಾ ಸರಿ, ಅಲ್ಲಿ ನೋಡಿದ ಫಿಲಮ್ಮುಗಳ ಬೆಗ್ಗೆ ಹೇಳಲೇ ಇಲ್ವಲ್ಲ ಅಂತ ಕೇಳ್ತೀರಾ? ಅದಕ್ಕಾಗೇ ಸಾಂಗತ್ಯ ಟೀಮ್ ಒಂದು ಬ್ಲಾಗ್ ಶುರು ಮಾಡಿದೆ. ಚಿತ್ರೋತ್ಸವದಲ್ಲಿ ನಾವು ನೋಡಿದ ಸಿನೆಮಾಗಳು, ಅದರ ವಿವರ, ಸಂವಾದ, ಸಾರಾಂಶಗಳು ಇವೆಲ್ಲವನ್ನೂ ನೀವು www.saangatya.wordpress.com  ನಲ್ಲಿ ನೋಡಬಹುದು.  ಓದಿ, ನೀವು ಬಾರದೆ ಹೋದುದಕ್ಕೆ ಹೊಟ್ಟೆ ಉರಿಸಿಕೊಳ್ಳಬಹುದು! ಸಿನೆಮಾ ಸಂವಾದಕ್ಕೆಂದೇ ಈ ಬ್ಲಾಗ್ ಇರುವುದರಿಂದ ನೀವೂ ಅದರಲ್ಲಿ ಭಾಗವಹಿಸಬಹುದು.

ಮುಂದಿನ ‘ಸಾಂಗತ್ಯ’ ಚಿತ್ರೋತ್ಸವದ ಕುರಿತ ಹೆಚ್ಚಿನ ಮಾಹಿತಿ- ವಿವರಗಳಿಗಾಗಿ, ಸಿನೆಮಾ ಕುರಿತ ಬರಹಗಳಿಗಾಗಿ saangatya@gmail.com ಗೆ ಮೇಲ್ ಮಾಡಿ.