ಸಮೂಹ ಗಾನ

ನೀವೂ ಜೊತೆಯಲ್ಲಿದ್ದೀರೆಂಬ ನಂಬಿಕೆ ನನ್ನದು…

ಇದು ನಿರಂತರ ನೋವು…
ಮತೀಯ ದ್ವೇಷ, ಮತಾಂಧತೆ, ತಮ್ಮ ಮೇಲ್ಮೆ ಸಾಧಿಸುವ ವಿಕೃತಿಗೆ ಬಲಿಯಾಗಿ ನಡೆಸುವ ಭಯೋತ್ಪಾದನೆ… ಇವೆಲ್ಲ.
ಇದು ನಮ್ಮಂಥ ಸಾಮಾನ್ಯರಲ್ಲೂ ಅಸಹನೆ ಹುಟ್ಟುಹಾಕಿಬಿಡುತ್ತದೆ. ಸಮಾಜದಲ್ಲಿ ಒಡಕು ಮೂಡಿಸಿಬಿಡುತ್ತದೆ. ಸ್ನೇಹಿತರ ನಡುವೆ ವಾಗ್ವಾದ ಶುರುವಿಟ್ಟುಕೊಳ್ಳುತ್ತದೆ. ಎಷ್ಟು ಬೇಡವೆಂದುಕೊಂಡರೂ…

ಭಾರತೀಯರು ‘ಲೋಕದ ಡೊಂಕ ನೀವೇಕೆ ತಿದ್ದುವಿರಿ?” ಎನ್ನುವ ತತ್ತ್ವದಲ್ಲಿ ನಂಬಿಕೆಯಿಟ್ಟವರು. ಈ ನಂಬಿಕೆ ಸ್ವಲ್ಪ ಅತಿಯಾಯಿತೇನೋ? ಅದಕ್ಕೇ, ಏನೇ ಘಟನೆ ನಡೆದರೂ ಅದನ್ನು ವಿರೋಧಿಸೋದನ್ನ ಬಿಟ್ಟು, ಎದುರಾಳಿಗಳ ಮೇಲೆರಗೋದು ಬಿಟ್ಟು, ತಮ್ಮೊಳಗಿನ ಕೊಳಕುಗಳನ್ನ ಬಗೆಬಗೆದು ಎರಚಾಡಿಕೊಳ್ಳುತ್ತ ಮೈಮರೆತು ಶತ್ರುಗಳಿಗೆ ಕೆಂಪು ಹಾಸು ಹಾಸಿಕೊಡುವರು. ಇತಿಹಾಸದಿಂದ ನಾವಿನ್ನೂ ಪಾಠ ಕಲಿತಿಲ್ಲ ಎನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?

ಸಾಮ್ರಾಟ ಅಶೋಕ ನೆನಪಾಗ್ತಾನೆ. ಅಹಿಂಸೆಯತ್ತ ಮುಖ ಮಾಡಿದ ಅಶೋಕ, ತನ್ನ ರಾಜ್ಯದ ಕಾವಲಿಗೆ ಸೈನಿಕರನ್ನಿರಿಸಿಕೊಂಡಿದ್ದ.
ನಿಜವಾಗಿಯೂ ಅವನಿಗೆ ಹಿಂಸೆ ಬೇಡವಿತ್ತು. ತನ್ನ ಪ್ರಜೆಗಳು ಶತ್ರುಗಳ ಆಕ್ರಮಣಕ್ಕೆ ಸಿಕ್ಕು ನರಳೋದೂ ಬೇಡವಾಗಿತ್ತು. ಅಹಿಂಸೆಯ ನೆವದಲ್ಲಿ ರಾಷ್ಟ್ರ ರಕ್ಷಣೆಯ ಹೊಣೆಯಿಂದ ಆತ ನುಣುಚಿಕೊಳ್ಳಲಿಲ್ಲ.

ನಮಗೂ ಯುದ್ಧ ಬೇಡ. ಹಾಗಂತ, ಮೈಮೇಲೆರಗೋ ರಣಹದ್ದುಗಳಿಗೆ ಸುಖಾಸುಮ್ಮನೆ ನಮ್ಮ ಪ್ರಾಣಗಳನ್ನ ಒಪ್ಪಿಸಬೇಕೇನು? ಈ ಯೋಚನೆ ನನ್ನನ್ನ ಗಲಿಬಿಲಿಗೊಳಿಸುತ್ತೆ. ನಮ್ಮ ನೆಮ್ಮದಿಗೆ ಗಡಿಯಲ್ಲಿ ನಿಂತ ಸಾವಿರ ಸಾವಿರ ಯೋಧರು ನಿದ್ರೆ ಬಿಟ್ಟು ಕಾಯುತ್ತಿದ್ದಾರೆನ್ನುವ ವಾಸ್ತವ, ದೇಶದೊಳಗಿನ ನನ್ನ ಜವಾಬ್ದಾರಿಯನ್ನ ಮನವರಿಕೆ ಮಾಡಿಕೊಡುತ್ತೆ. ಭ್ರಷ್ಟಾಚಾರದ, ಒಳಜಗಳಗಳ, ವಿಕೃತ ಮನಸ್ಸುಗಳ ಕೊಂಪೆಯನ್ನ ಕಾಯಲಿಕ್ಕೆ ಆ ಜೀವಗಳು ಬಲಿಯಾಗಬೇಕೇನು?
ಖಂಡಿತ ಸಲ್ಲದು. ನಮ್ಮಲ್ಲಿ ಒಗ್ಗಟ್ಟು ಮೂಡಬೇಕು. ಮತೀಯ ಭ್ರಾಂತಿಗಳು ಇಲ್ಲವಾಗಬೇಕು. ಸಿದ್ಧಾಂತಗಳ ಮೇಲಾಟ ತೊಲಗಬೇಕು. ಆಗ ಮಾತ್ರ, ನಾವೊಂದು ‘ರಾಷ್ಟ್ರ’ವಾಗಿರುವುದರ ಹೆಮ್ಮೆ ಉಳಿದುಕೊಳ್ಳುತ್ತದೆ.

ನನ್ನನ್ನು ಸ್ಕ್ಯಾನ್ ಮಾಡಿಕೊಳ್ಳುವ ಪ್ರಯತ್ನ ನಾನು ನಡೆಸಿದ್ದೇನೆ. ತಪ್ಪುಗಳಾಗದಂತೆ ಎಚ್ಚರವಹಿಸುವೆ. ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ನೀವೂ ಜೊತೆಗಿದ್ದೀರೆಂಬ ನಂಬಿಕೆ ನನ್ನದು.

ವಂದೇ,
ಚೇತನಾ ತೀರ್ಥಹಳ್ಳಿ

17 thoughts on “ಸಮೂಹ ಗಾನ

Add yours

  1. ನಮ್ಮನ್ನು ಆಳ್ವಿಕೆ ಮಾಡಲು ಹೊರಟಿರುವ ರಾಜಕೀಯ ಭ್ರಷ್ಟರ ತಲೆ ಸರಿ ಆಗದ ಹೊರತು ಈ ದೇಶ ಸುಧಾರಣೆ ಕಷ್ಟ ಎನಿಸೋಲ್ಲವಾ ? ಏನೇ ಇರಲಿ ನಮ್ಮದೊಂದು ಗುಂಪು ಸದಾ ನೀವು ಹೇಳಿದ ರೀತಿಯಲ್ಲೇ ನಿರಂತರ ಯೋಚನೆ ಮಾಡುತ್ತಾ ಇತ್ತು… ಈಗಲೂ ಮುಂದೆಯೂ ಅದೇ ಹಾದಿಯಲ್ಲಿ ಸಾಗುತ್ತದೆ.

  2. ನಾವೊಂದು ಗ್ರೂಪ್ ಆಗಿ ಬ್ಲಾಗು ಶುರು ಮಾಡಿದ್ದೆವು, ಇದೇ ಉದ್ದೇಶವಿಟ್ಟುಕೊಂಡು. ಅದು ನಿಮ್ಮ ಆಶಯಕ್ಕೆ ಕೂಡ ಹೊಂದುತ್ತದೆ ಅಂತ ನನಗನಿಸುತ್ತದೆ, ನೋಡಿ. http://naagarika.blogspot.com. ಹಳೆಯ ಕಮೆಂಟು ಡಿಲೀಟ್ ಮಾಡಿ.

  3. “ಏನೇ ಘಟನೆ ನಡೆದರೂ ಅದನ್ನು ವಿರೋಧಿಸೋದನ್ನ ಬಿಟ್ಟು, ಎದುರಾಳಿಗಳ ಮೇಲೆರಗೋದು ಬಿಟ್ಟು, ತಮ್ಮೊಳಗಿನ ಕೊಳಕುಗಳನ್ನ ಬಗೆಬಗೆದು ಎರಚಾಡಿಕೊಳ್ಳುತ್ತ ಮೈಮರೆತು ಶತ್ರುಗಳಿಗೆ ಕೆಂಪು ಹಾಸು ಹಾಸಿಕೊಡುವರು. ಇತಿಹಾಸದಿಂದ ನಾವಿನ್ನೂ ಪಾಠ ಕಲಿತಿಲ್ಲ ಎನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?”

    -ಈ ಮಾತುಗಳಂತೂ ಸತ್ಯಸ್ಯ ಸತ್ಯ. ಎಲ್ಲರೂ ರಾಜಕಾರಣಿಗಳ ಹಾದೀನೇ ಹಿಡೀತಾ ಇದ್ದಾರೆ. ಒಂದು ವಿಷಯದ ಬಗ್ಗೆ ಹೋರಾಡೋದು ಬಿಟ್ಟು, ನಮ್ಮೊಳಗೆ ಜಗಳಕ್ಕೆ ತೊಡಗಿಬಿಡ್ತಾರೆ.
    -ಅವಿನಾಶ್

  4. ನಾವೆಲ್ಲರೂ ನಮ್ಮನ್ನು ನಾವು scan ಮಾಡಿಕೊಳ್ಳಲೇಬೇಕಾದ ಕಾಲ ಸನ್ನಿಹಿತವಾಗಿದೆ. ನಮ್ಮ ನಂಬಿಕೆಗಳನ್ನು, ನಮ್ಮ ವಿಚಾರಗಳನ್ನು, ನಮ್ಮ ಸಿದ್ಧಾಂತಗಳನ್ನು ಎಲ್ಲವನ್ನೂ ಆತ್ಮವಿಮರ್ಷೆಯ ಒರೆಗಲ್ಲಿಗೆ ಹಚ್ಚಿ ನೋಡೋಣ. ಭ್ರಷ್ಟರು ನಮ್ಮನ್ನು ಆಳುವ ನಾಯಕರಾಗಿರುವುದಕ್ಕೆ, ಮೋಸ-ವಂಚನೆಗಳನ್ನೇ ತಮ್ಮ ಕಾಯಕವನ್ನಾಗಿಸಿಕೊಂಡವರು ಅಧಿಕಾರಿಗಳಾಗಿರುವುದಕ್ಕೆ, ಸಮಾಜವನ್ನು ಕಟ್ಟಬೇಕಿರುವ ಯುವಕರು ಮತಾಂಧರಾಗಿ ಕೊಲೆಗಡುಕರಾಗುತ್ತಿರುವುದಕ್ಕೆ ನಾವೆಲ್ಲ ಪರೋಕ್ಷವಾಗಿಯೋ ಅಪರೋಕ್ಷವಾಗಿಯೋ ಖಂಡಿತವಾಗಿಯೂ ಕಾರಣರು.

    ~ಪದ್ಮಿನಿ

  5. ತುಂ ಹಾಥ್ ಬಢಾಕರ್ ತೊ ದೇಖೋ ಹಂ ಸಾಥ್ ಕಹಾಂ ತಕ್ ದೇತೇ ಹೈಂ
    ಘಮ್ ಖಾರ್ ಹೊ ಕೋಯೀ ಸಾಥ್ ಅಗರ್ ಮುಶ್ಕಿಲ್ ರಸ್ತೆ ಕಟ್ ಜಾತೇ ಹೈಂ

  6. ನಿಜ ಮಾತು ಸ್ವಸ್ಥ ಸಮಾಜಕ್ಕೆ ಕೀಲಿ ನಮ್ಮ ಕೈಯಲ್ಲಿಯೇ ಇದೆ ಚೇತನಾ. ಆದರೆ ದಿಕ್ಕು ಕೆಟ್ಟಿರುವ ಯುವಜನಾಂಗದ ಬಗ್ಗೆ ಹೇಳಲೆ ಬೇಕಾಗಿದೆ. ಕಾಲೇಜು ಹೋಗುವ ಹುಡುಗರೂ ಕೂಡಾ ಅದು ಹೇಗೆ ಮೂಲಭೂತವಾದದ ಕಡೆ ವಾಲಿದ್ದಾರೆ. ಹೇಗೆ ಮದ ಬಂದ ಹಾಗೆ ವರ್ತಿಸುತ್ತಾರೆ. ಆತಂಕವಾಗುತ್ತೆ. ನಾವು ಸ್ವಸ್ಥವಾಗಿದ್ದು ಇವರನ್ನು ಸರಿಮಾಡುವ ಅಲ್ಲ ಸರಿದಾರಿಗೆ ತರುವ ಹೊಣೆಗಾರಿಕೆ ನಮ್ಮ ಮೇಲಿದೆ. ಖಂಡಿತವಾಗಿಯೂ ಈ ದೆಸೆಯಲ್ಲಿ ಎಲ್ಲರೂ ಕೈ ಜೋಡಿಸ ಬೇಕಿದೆ.

  7. 🙂 🙂 🙂 🙂 🙂 ಹೇಳುವುದು ಸುಲಭ… ಆದ್ರೆ ಎಷ್ಟೊಂದು ಸಲ ನಮಗೆ ಗೊತ್ತಿದ್ದು ಗೊತ್ತಿದ್ದೂ ಹೊಣೆಗಾರಿಕೆ ಅಂದ್ರೇನು ಅಂತ ಗೊತ್ತಿದ್ದೂ, ನಮ್ಮಿಂದ್ಲೇ ತಪ್ಪುಗಳಾಗಿಬಿಡ್ತವಲ್ವಾ… ಯಾರೋ ಮಾಡಿದ ತಪ್ಪಿಗೆ ಹೆಣಗಳುರುಳ್ತವೆ… ರಾಜ್ಯಕ್ಕೆ ರಾಜ್ಯವೇ ಅರಾಜಕತೆ ತುಂಬಿಬಿಡುತ್ತೆ… ಅದಕ್ಕೆ ನಾವು ನೀವು ಎಲ್ರೂ ಕಾರಣರಾಗ್ತೀವಲ್ವಾ….

  8. ಶ್ರೀ,
    ಇಷ್ಟೊಂದು ನಗು, ಈ ಸಂದರ್ಭದಲ್ಲಿ ಸಲ್ಲದು.
    ನಡೆದುದ್ದನ್ನು ಸಮರ್ಥಿಸಿಕೊಳ್ಳುವಷ್ಟು ಹೊಣೆಗೇಡಿ ನಾನಲ್ಲ. ಯಾರೋ ಮಾಡಿದ ತಪ್ಪು ಅಂತ ತಿಪ್ಪೆ ಸಾರಿಸುವ ಉಡಾಫೆತನವೂ ನನಗಿಲ್ಲ. ನಮ್ಮ ಸುತ್ತಲಿನ, ನಮ್ಮಂಥದೇ ಜವಾಬ್ದಾರಿಯುಳ್ಳ ವ್ಯಕ್ತಿಯ, ದುರದೃಷ್ಟವಶಾತ್ ಪ್ರಮಾದ ಇದು. ನನಗೆ ದಟ್ಟ ವಿಷಾದವಿದೆ. ಆದರ್, ಇಂಥ ಸಂದರ್ಭದಲ್ಲಿ ಇಣುಕಿ ಹೀಗೆ ಕಮೆಂಟ್ ಮಾಡುವುದಿದೆಯಲ್ಲ, ಅಸಲು ವಿಷಯದ ಚರ್ಚೆಯನ್ನು ಬಿಟ್ಟು…. ಇದನ್ನು ನಾನು ವಿಕೃತಿ ಅನ್ನುತ್ತೇನೆ. ನಮ್ಮ ಮನಸುಗಳು ಹೊಂದುತ್ತಿರುವ ಸ್ಥಿತಿಯ ಬಗ್ಗೆ ನೋವೆನಿಸುತ್ತಿದೆ. ದಯವಿಟ್ಟು ಸರಿಪಡಿಸಿಕೊಳ್ಳಿ.
    ಪ್ರೀತಿಯಿಂದ,
    ಚೇತನಾ

  9. ಇಷ್ಟಕ್ಕು ಆ ಲೇಖನದಿ೦ದ ಅಷ್ಟೆಲ್ಲ ಗಲಭೆ, ಪ್ರಾಣ ಹಾನಿಯಾಗಿದೆ ಅ೦ದರೆ ಖ೦ಡಿತ ಆ ಪತ್ರಿಕೆಯ ತಪ್ಪಲ್ಲ… ಇಷ್ಟಕ್ಕು ಆ ಲೇಖನದಲ್ಲಿ ಅ೦ತಹದೆನಿದೆ…? ಅವರಿ೦ದ ಅರಗಿಸಿಕೊಳ್ಳಲು ಆಗದ ಸತ್ಯ ಇದೆ ಅಷ್ಟೆ….. ಸತ್ಯ ಹೇಳುವುದು ತಪ್ಪಾ….?

  10. ತುಸು ವಿಳಂಬದಿಂದ ಈ ನಿಮ್ಮ ಬರಹ ಓದುತ್ತಿರುವೆನೇನೋ.. ನಾನು ಇದುವರೆಗೂ ಪಾಲಿಸಿಕೊಂಡು ಬಂದ ಆದರ್ಶವೂ ಈ ಸಮೂಹ ಗಾನದ ಧ್ವನಿಯಂತಿತ್ತು.. ಚೇತನಾ, ಮನುಕುಲದ ದ್ವೇಷದ ಇತಿಹಾಸ ತುಂಬಾ ದೊಡ್ಡದು. ರಾಷ್ಟ್ರ-ರಾಷ್ಟ್ರಗಳ ನಡುವೆ ಮಾತ್ರವಲ್ಲ, ರಾಜ್ಯ-ರಾಜ್ಯಗಳ ನಡುವೆ ನೀರಿಗಾಗಿಯೋ, ಧರ್ಮ-ಧರ್ಮಗಳ ನಡುವೆ ಅಸ್ತಿತ್ವಕ್ಕಾಗಿಯೋ, ಜಾತಿ-ಜಾತಿಗಳ ನಡುವೆ ಅಸ್ಪ್ರಶ್ಯತೆಗಗಿಯೋ, ೩೦X೪೦ ಭೂಮಿಗಾಗಿಯೋ, ದಾಯಾದಿ ಕಲಹವೋ, ಅತ್ತೆ ಸೊಸೆ ಜಗಳವೋ ಇನ್ನೂ ಏನೇನೋ.. ಮನುಷ್ಯನ ಈ ಹೋರಾಟದ ಗೀಳಿಗೆ ಕೊನೆ ಎಂದೋ.. ರಾಷ್ಟ್ರವಾದಿ ಚಿಂತನೆ ಈ ಕ್ಷಣದ ಅಗತ್ಯ. ಮೊದಲು ಭಾರತೀಯರಾಗೋಣ. ನಂತರ ವಿಶ್ವ ಮಾನವರಗೋಣ, ಅನಿಕೇತನರಾಗೋಣ, ಜಂಗಮರಾಗೋಣ.. ರೂಪ ರೂಪಗಳನು ದಾಟಿ, ನಾಮ ಕೋಟಿಗಳನು ಮೀಟಿ…

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑