ಥೇರಿಯರ ಹಾಡು

ಥೇರಿಯರ (ಹಿರಿಯ ಬೌದ್ಧ ಬಿಕ್ಖುಣಿಯರು) ರಚನೆಗಳ ಅನುವಾದ ಯತ್ನವಿದು….

ನನ್ನಿರುವ ಕಾಂತಿ, ಕಣ್ ಹೊಳಪು
ರೂಪ, ಮೈಬಣ್ಣಗಳಿಂದ
ನೆರಕೆಯ ಹೆಣ್ಣುಗಳ ಹೊಟ್ಟೆಯುರಿಸುತಿದ್ದೆ.
ಮೂರ್ಖ ಗಂಡಸರನ್ನ ಸೆಳೆಯಲಿಕ್ಕಾಗಿ
ದೇಹವಲಂಕರಿಸಿ ನಿಂತು
ಕೋಠಿ ಬಾಗಿಲ ಮುಂದೆ ಕಾಯುತಿದ್ದೆ.
ಬೇಟೆಗಾತಿಯ ಹಾಗೆ ಹೊಂಚುತ್ತ
ನನ್ನಾಭರಣಗಳ ಕುಲುಕಿ ಸೆಳೆದು
ಮೋಹದ ಬಲೆಗೆ ಕೆಡವುತಿದ್ದೆ,
ಬಿದ್ದವನ ಕಂಡು ಗುಂಪು ಸೀಳುವಂತೆ
ಅಬ್ಬರಿಸಿ ನಗುತಲಿದ್ದೆ.

ಈಗ…
ಅದೇ ದೇಹ ದುಪ್ಪಟಿ ಕಾವಿ ಸುತ್ತಿಕೊಂಡಿದೆ;
ತಲೆಗೂದಲು ತೆಗೆದು ಸಪಾಟು.
ಭಿಕ್ಷೆಗಾಗಿ ಅಲೆದ ದಣಿವಲ್ಲಿ
ಮರದ ಬೊಡ್ಡೆಗೆ ಮೈಯಾನಿಸಿ ಕೂತಿದೇನೆ.
ಯಾವ ಯೋಚನೆಯೂ ಇಲ್ಲದ
ನಿತ್ಯಾನಂದ ಸ್ಥಿತಿಯ  ಪಡೆದಿದೇನೆ.
ಎಲ್ಲ ಬಂಧಗಳ – ಮನುಷ್ಯ , ದೈವಿಕ ಬಂಧಗಳೆಲ್ಲದರ
ಹೊರೆ ಇಳಿಸಿ ಹಗುರಾಗಿದೇನೆ,
ತಣ್ಣಗೆ ಒಬ್ಬಂಟಿ, ಎಲ್ಲ  ಬಂಧಗಳ ಕಳಚಿ.
– ವಿಮಲಾ (ದೊರೆಸಾನಿ)

~

ನಾನೀಗ ಮುಕ್ತಳು!
ನಾನು ಸಂಪೂರ್ಣ ಮುಕ್ತಳು!!
ಒರಳು, ಒನಕೆ, ಮೂತಿಮುರುಕ ಪತಿಯ ಬಂಧ ಕಳಚಿ
ನಾನು ಪರಿಪೂರ್ಣ ಮುಕ್ತಳು..
– ಮುತ್ತಾ

~

ಭಿಕ್ಷೆಗಾಗಿ ಅಲೆಯುತ್ತ
ಬೆರಳ ತುದಿಗಳು ಕಂಪಿಸುತ್ತಿವೆ.
ಗೆಳತಿಯರ ಹೆಗಲ ಮೇಲೆ ಕೈಯೂರಿ ನಡೆಯುತ್ತೇನೆ.
ಕಾಲು ಸಾಗದೆ ಕೃಶ ಶರೀರವಿದು ನೆಲವನಪ್ಪುತ್ತಿದೆ.
ಓಹ್! ಈ ದೇಹದ ದುರ್ಗತಿಯನ್ನು
ನಾನು ಕಣ್ಣಾರೆ ಕಾಣುತ್ತಿದ್ದೇನೆ,
ಮನಸ್ಸು ಅದರಿಂದ ಮುಕ್ತವಾಗಿ ಹೊರ ಬರುತ್ತಿದೆ!
– ಧಮ್ಮಾ

~

ಪುನ್ನಾ,
ಸಕಲ ಸದ್ಗುಣಗಳಿಂದ ಬೆಳೆ- ಬೆಳಗು,
ಹುಣ್ಣಿಮೆಯ ಚಂದಿರನಂತೆ.
ಪಡೆದುಕೋ ಪರಿಪೂರ್ಣತೆಯ,
ಸಂಪನ್ನಳಾಗು
ಕತ್ತಲ ರಾಶಿಯ ತೊಡೆದು.
– ಪುನ್ನಾ

Advertisements

ಹಳಬನಾಗೋದಿಲ್ಲ ರಾಮ….

ch39

ನಕ್ಕರೆ, ನೋಡಿದರೆ, ಬೆವರಿದರು – ಸೀನಿದರೂ ಮಕ್ಕಳಾಗ್ತವೆ ಪುರಾಣಗಳಲ್ಲಿ.
ರಾಮ ನಡೆದಲ್ಲೆಲ್ಲ ರೋಮ ಉದುರಿಸಿದ್ದನೇನೋ!
ನಮ್ಮ ಬಹಳಷ್ಟು ಗಂಡಸರಿಗೆ ಸಂಶಯ ವಂಶವಾಹಿ!!
~
ಬೆಂಕಿಗೆ ಸೀತೆಯನ್ನ ಸುಡಲಾಗಲಿಲ್ಲ
ರಾಮನ ಸಂಶಯವನ್ನೂ…
~
ಹಳಬನಾಗೋದಿಲ್ಲ ರಾಮ, ಅವನ ಕಥೆಯೂ…
ಇಲ್ಲಿ ಹೆಣ್ಣುಗಳು ಇನ್ನೂ ತಿರಸ್ಕರಿಸಲ್ಪಡುತ್ತಲೇ ಇದ್ದಾರೆ
ಅನುಮಾನದಲ್ಲಿ.
~

ರಾಮನಿಗೆ ಅಗ್ನಿದಿವ್ಯಕ್ಕಿಂತ ಮಡಿವಾಳನ ಮಾತೇ ಹೆಚ್ಚಾಗಿದ್ದು
ಅವು ತನ್ನವೂ ಆಗಿದ್ದವೆಂದೇ ತಾನೆ?
ಇಲ್ಲದಿದ್ದರೆ ಅಂವ ಶಂಭೂಕನನ್ನ ಕೊಲ್ತಿರಲಿಲ್ಲ…
~

ಶಂಭೂಕರು ಮತ್ತು ಸೀತೆಯರನ್ನು  ಗೋಳಾಡಿಸುವ ನೆಲಕ್ಕೆ
ನೆಮ್ಮದಿ ಮರೀಚಿಕೆ.
ರಾಮನಿಗಾಗಿ ಇಟ್ಟಿಗೆ ಹೊರುವವರಿಗೆ ತಾವು
ದೇಶದ ಗೋರಿ ಕಟ್ಟುವ ತಯಾರಿಯಲ್ಲಿರೋದು ಗೊತ್ತಿಲ್ಲವಾ?
~

ದೇವಯಾನಿಯರ ದುಃಖಾಂತ

ಮುಂಜಾನೆಯ ಅಂಗಳದಲ್ಲಿ ಪಾರಿಜಾತ ಚೆಲ್ಲಿ ಬಿದ್ದಿದೆ. ಚಿಗುರು ಬೆರಳಿನ ಹುಡುಗಿಯಿನ್ನೂ ಆಯಲು ಬಂದಿಲ್ಲ. ಅವಳಿಗಿನ್ನೂ ಬೆಳಗಾಗಿಲ್ಲ.
ಅವಳಿಗಿನ್ನೂ ಬೆಳಗಾಗಿಲ್ಲ, ಅಗುವುದೂ ಇಲ್ಲ. ಎಷ್ಟು ಹಗಲು ಹುಟ್ಟಿಬಂದರೂ ಅವಳ ಪಾಲಿನ ಕತ್ತಲು ಕಳೆಯುವುದಿಲ್ಲ. ಇದು ನಿಶ್ಚಿತ. ಯಾಕಂದರೆ ಅವಳ ಬೆಳಕನ್ನೆಲ್ಲ ಅವನು ಗಂಟು ಕಟ್ಟಿ ಒಯ್ದುಬಿಟ್ಟಿದ್ದಾನೆ ಜೊತೆಗೆ. ಅದೇ ಅವನು, ಶಿಷ್ಯನ ಸೋಗಿನಲ್ಲಿ ಬಂದು ಅವಳಪ್ಪನ ವಿದ್ಯೆಯನ್ನು ವಂಚಿಸಿ ಒಯ್ದವನು. ಕಚ ಅನ್ನುತ್ತಾರೆ ಅವನನ್ನ. ಮತ್ತವಳು ದೇವಯಾನಿಯಲ್ಲದೆ ಇನ್ಯಾರು?
~
ಸುರ ಪಾಳಯದ ಹುಡುಗ ಕಚ ಸಂಜೀವನಿ ಮಂತ್ರ ಕಲಿಯೋಕೆ ಬಂದವ. ಅದನ್ನ ತನ್ನ ಆಶ್ರಯದಾತರಾದ ದೈತ್ಯರಿಗೇ ಹೇಳಿಕೊಟ್ಟಿದ್ದಿಲ್ಲ ಶುಕ್ರ. ಇನ್ನು ಈ ಶತ್ರುವಿಗೇನು ಹೇಳಿಕೊಟ್ಟಾನು? ಆದರೂ ಆಚೆಯಿಂದ ಯಾರದರೂ ‘ವಿದ್ಯಾಮ್ ದೇಹಿ’ಯೆಂದು ಬಂದಾಗ ಒಪ್ಪಿಕೊಳ್ಳೋದು ಪ್ರತಿಷ್ಟೆಯ ಸಂಗತಿಯೆಂದು ಬಳಿ ಸೇರಿಸಿಕೊಂಡಿದ್ದ.
ಶುಕ್ರನ ರಾಜಕಾರಣ ಬಡ್ಡು ದೈತ್ಯರ ತಲೆ ಹೊಕ್ಕದು. ಅವರಂತೂ ಆ ಚೆಂದದ ಮೈಕಟ್ಟಿನ ಸುಂದರ ಯುವಕನ್ನ ಕಂಡು ಹಲ್ಲು ಕಡಿಯುತ್ತಿದ್ದರು. ಅವನು ವಿದ್ಯೆ ಅಪಹರಿಸುತ್ತಾನೆ ಅನ್ನೋದು ಒಂದು ಕಾರಣವಾದರೆ, ತಮ್ಮ ಹೆಣ್ಣುಗಳ ಚಿತ್ತವನ್ನೂ ಅಪಹರಿಸ್ತಾನೆ ಅನ್ನೋದು ಅದಕ್ಕಿಂತ ಮುಖ್ಯ ಕಾರಣ. ಸಾಲದ್ದಕ್ಕೆ ಅವನು ಗುರುಮಗಳು ದೇವಯಾನಿಯ ಬಳಿ ನಗುನಗುತ್ತ ಮಾತಾಡುತ್ತಾನೆ! ಅವಳ ಕಣ್ಣುಗಳಲ್ಲಿ ಇತ್ತೀಚೆಗೆ ಏನೋ ಥರದ ಹೊಳಪು- ಶುಕ್ರನ ಕಣ್ಣಿಗೂ ಬಿದ್ದಿದೆ. ಆದರೆ ಆಗಲಿ, ಸುರರ ಕಡೆಯವನೊಬ್ಬನನ್ನ ತಮ್ಮ ಕಡೆಗೆ ಎಳೆದುಕೊಂಡ ಹಾಗೆ ಆಗುವುದು ಅಂತ ಅವರೂ ಸುಮ್ಮನಿದ್ದಾರೆ.
ಶುಕ್ರರೇನೋ ಸುಮ್ಮನಿದ್ದರು. ದೈತ್ಯ ಯುವಕರು ಸುಮ್ಮನಿರಬೇಕಲ್ಲ? ‘ಆ ಮುದುಕನಿಗೆ ಮೊದಲೇ ಒಂದು ಕಣ್ಣು ಕಡಿಮೆ!’ ಅಂತ ಆಡಿಕೊಳ್ಳುತ್ತ ತಾವೇ ಕಚನಿಗೊಂದು ಗತಿ ಕಾಣಿಸೋಕೆ ತೀರ್ಮಾನಿಸಿದರು. ಹಸು ಮೇಯಿಸಲು ಹೋದ ಕಚನನ್ನ ಕತ್ತರಿಸಿ ಬಿಸಾಡಿದರು.
ಇತ್ತ ಎಂದಿನಂತೆ ಸಂಜೆ ಕಚ ಬರೋದನ್ನೆ ಕಾಯ್ತಿದ್ದ ದೇವಯಾನಿಗೆ ಆತಂಕ. ‘ಓ ದೇವಯಾನೀ… ನಮ್ಮ ಪ್ರೀತಿಯಾಣೆ! ಕಾಪಾಡು!!’ ಸುಳಿದು ಬಂದ ಸದ್ದು ಎದೆಹೊಕ್ಕಿತು. ಅಪ್ಪನ್ನ ಕೂಗಿದಳು. ಶುಕ್ರನಿಗೆ ಮಗಳೆಂದರೆ ವಿಪರೀತ ವ್ಯಾಮೋಹ. ಅವಳ ಕಣ್ಣೀರು ಕಥೆ ಹೇಳಿತು. ಶುಕ್ರ ತಡ ಮಾಡಲಿಲ್ಲ. ಸಂಜೀವನಿ ಮಂತ್ರ ಅವನ ಕಂಚಿನ ಕಂಠ ನೂಕಿ ಬಂತು. ಕಚ ನಿದ್ದೆಯಿಂದಲೆನ್ನುವಂತೆ ಎದ್ದು ಬಂದ.
ಅದೊಂದು ಬೆಳಗು… ಕಚ ಶುಕ್ರನ ಪೂಜೆಗೆ ನೀರು ತರಲೋಗಿದ್ದ. ದೈತ್ಯರು ನುಗ್ಗಿ ಬಂದರು. ಅವನ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಕಲ್ಲು ಕಟ್ಟಿ ನೀರಿಗೆ ತಳ್ಳಿದರು.
ಅಪ್ಪನ ಪೂಜೆಗೆ ಅಣಿ ಮಾಡುತ್ತಿದ್ದ ದೇವಯಾನಿಯ ಎದೆಯಲ್ಲಿ ತಳಮಳ…. ‘…..ಪ್ರೀತಿಯಾಣೆ! ಕಾ….’
ನೀಲಾಂಜನದ ದೀಪ ಆರಿತು. ದೇವಯಾನಿ ನಲುಗಿಹೋದಳು. ಮಡಿಯುಟ್ಟ ಬಂದ ಶುಕ್ರನ ಪಾದಬಿದ್ದಳು. ಶುಕ್ರನಿಗೆ ಇದೇನಿದು ಪದೇಪದೇ ಅನ್ನುವ ಕಿರಿಕಿರಿ. ಮಗಳ ಮುಖ ನೋಡಿ ಸಹಿಸಿಕೊಂಡ. ಮತ್ತೆ ಸಂಜೀವನಿ ಶಬ್ದವಾಯ್ತು. ಕಚ ಮೈಮುರಿಯುತ್ತ ಎದ್ದು ಬಂದ.
ದೈತ್ಯ ಹುಡುಗರು ಕುದ್ದು ಹೋದರು. ಮುಸ್ಸಂಜೆಗೆ ಕಾದರು. ಅಡ್ಡಾಡುತ್ತಿದ್ದ ಕಚನನ್ನ ಹೊತ್ತೊಯ್ದು ಚೂರುಚೂರೆ ಸಿಗಿದರು. ಸುಟ್ಟು ಭಸ್ಮ ಮಾಡಿದರು. ಇರುಳು ಹೊತ್ತಿಗೆ ದುಷ್ಟರ ಬುದ್ಧಿ ಬಲು ಚುರುಕು! ಭಸ್ಮವನ್ನ ಮದ್ಯದ ಗಡಂಗಿಗೆ ತುಂಬಿದರು. ಶುಕ್ರನ ಮುಂದೆ ಇಟ್ಟರು.
ಶುಕ್ರ ಉಲ್ಲಸಿತನಾದ. ಮದ್ಯಗೋಷ್ಟಿ ಶುಕ್ರನಿಗೆ ಅಪ್ರಿಯವೆ? ‘….ಪ್ರೀತಿಯಾಣೆ…..ದೇ ವ ಯಾ ನೀ….’ ಎಲ್ಲಿಂದಲೊ ಕ್ಷೀಣ ದನಿ. ಅಪ್ಪನ ಪಕ್ಕ ಕುಂತು ಹರಟುತ್ತಿದ್ದ ದೇವಯಾನಿಯ ಬಲಗಣ್ಣು ಅದುರಿತು. ಶುಕ್ರ ತನ್ನ ಗಂಟಲಿಗೆ ಮದ್ಯ ಹೊಯ್ದುಕೊಳ್ಳುತ್ತಿದ್ದ. ಎದುರಲ್ಲಿ ದೈತ್ಯ ಕನ್ಯೆಯರ ನರ್ತನ. ಆಜೂಬಾಜೂ ಕುಂತ ಯುವಕರು ಅವನನ್ನ ಹುರಿದುಂಬಿಸ್ತಿದ್ದರು. ‘ಪ್ರೀತಿಯಾಣೆ….’ ಮತ್ತೆ ಮತ್ತೆ ಗಾಳಿ ಕೊರೆದಂತೆ ಕೇಳುತ್ತಿದೆ ದೇವಯಾನಿಗೆ. ‘ಅಪ್ಪಾ!’ ಅಂದರೆ ಅವನೆಲ್ಲಿ? ದೈತ್ಯ ಹುಡುಗಿಯೊಬ್ಬಳ ಹೆಗಲಿಗೆ ಕೈಹಚ್ಚಿ ನಡೆದಿದ್ದಾನೆ. ಇನ್ನು ಅವನು ಈಚೆ ಬರುವುದು ಬೆಳಗು ಕಲೆದ ಮೇಲೇನೆ! ಅಷ್ಟರಲ್ಲೆ ತಡೆಯಬೇಕು.
ದೇವಯಾನಿಯೆಂದರೆ ಸ್ವಾಭಿಮಾನದ ಪರ್ಯಾಯ. ಈ ಹೊತ್ತು ಅಪ್ಪನ್ನ ತಡೆಯುವುದೆ? ಪ್ರಿಯತಮನಿಗಾಗಿ? ಎಲ್ಲರೆದುರು ಕಣ್ಣೀರಿಡುವುದೆ? ತನ್ನ ಪ್ರಾಣಕ್ಕಾಗಿ!?
ಯೋಚಿಸುತ್ತ ಉಳಿಯಲಿಲ್ಲ. ತಾನು ಎಲ್ಲರ ಕಣ್ಣಲ್ಲಿ ಸತ್ತರೂ ಅವನನ್ನ ಬದುಕಿಸಿಯೇ ಸಿದ್ಧ! ಎದ್ದೋಡಿದಳು. ಬಾಗಿಲಿಗಡ್ಡ ನಿಂತಳು. ಕೈಮುಗಿದಳು, ‘ತಂದೆ, ಒಂದೇ ಒಂದು ಸಲ… ಕೊನೆಯ ಬಾರಿಗೆ… ನನ್ನ ಪ್ರೇಮದಾಣೆಯಿದೆ ತಂದೆ!’
ಶುಕ್ರ ಕರಗಿದ. ಮಗಳಂದರೆ ವ್ಯಾಮೋಹ ಅಂದೆನಲ್ಲವೆ? ಸಂಜೀವನಿ ಶುರುವಿಟ್ಟ. ದೈತ್ಯರು ನಗತೊಡಗಿದರು. ಶುಕ್ರ ತಡೆದು ಕೇಳಿದ, ‘ಯಾಕೆ?!’
‘ಕಚನ ಭಸ್ಮವನ್ನ ನಿಮ್ಮ ಮದ್ಯಕ್ಕೆ ಬೆರೆಸಿದ್ದೆವು. ಅವ ಬದುಕಿ ಬರಬೇಕಂದರೆ ನಿಮ್ಮ ಹೊಟ್ಟೆಯೊಡೆದು ಬರಬೇಕಾಗುತ್ತೆ!! ಗುರು, ಬಿಟ್ಟುಬಿಡಿ, ಅವನು ನಾಳೆಗೆ ಗೊಬ್ಬರವಾಗುತ್ತಾನೆ!!’
ದೇವಯಾನಿ ಕುಸಿದು ಕೂತಳು. ಕಚನ ಕರೆ ಅವಳೊಳಗೆ ಮೊರೆಯುತಿತ್ತು… ಇತ್ತ ತನ್ನ ತಂದೆಯನ್ನೂ ಬಿಟ್ಟುಕೊಡಲಾರಳು. ಶುಕ್ರನೆಂದರೆ ಅವಳ ಮತ್ತೊಂದು ಪ್ರಾಣವೇ. ಹಾಗೆಯೇ ಕಚನೂ.
ದೇವಯಾನಿಯನ್ನ ಸಂತೈಸುತ್ತ ಶುಕ್ರನೆಂದ,  ‘ದೇವಾ, ನಾನು ಸಂಜೀವನಿ ಪಠಿಸಿ ಅವನನ್ನ ಬದುಕಿಸಿಕೊಡ್ತೀನಿ. ನಾನು ಹೊಟ್ಟೆಯೊಡೆದು ಬಿದ್ದರೆ, ಅದೇ ಸಂಜೀವನಿ ಹೇಳಿ ನನ್ನ ಮರಳಿ ಬದುಕಿಸಬಲ್ಲೆಯಾ?’
ಅಷ್ಟು ಸುಲಭವಾಗಿರಲಿಲ್ಲ ಆ ಮಂತ್ರ ಕಲಿಯುವುದು. ಅಷ್ಟು ಸುಲಭವಿದ್ದರೆ ಮೊದಲ ಸಲ ಬದುಕಿಸಿಕೊಳ್ಳುವಾಗ ಕೇಳಿದ್ದ ಕಚ ಕಲಿತುಬಿಟ್ಟಿರುತ್ತಿದ್ದ, ಈ ಹೊತ್ತಿಗೆ ದೇವಲೋಕ ಸೇರಿರುತ್ತಿದ್ದ. ಮೂರು ಬಾರಿ ಕೇಳಿ ಸಾಕಷ್ಟು ಕಲಿತಿದ್ದ ಆತ ಇನ್ನೊಂಚೂರು ಪಳಗಬೇಕಿತ್ತು.
ದೇವಯಾನಿ ತಲೆಯಾಡಿಸಿದಳು. ಕಚನ ದನಿ ಎಲ್ಲಿಂದಲೋ ತೇಲಿಬಂತು, ‘ನಾನು ಬದುಕಿಸ್ತೀನಿ ಗುರುವೇ, ನಿಮ್ಮಿಂದಲೇ ಸಾಕಷ್ಟು ಕಲಿತಿದ್ದೀನಿ…’
ಶುಕ್ರರು ಮಂತ್ರ ಮೊಳಗಿದರು. ಕೊನೆಯ ಪದದೊಂದಿಗೆ ಉರುಳಿ ಬಿದ್ದರು, ಕಚನೆದ್ದು ಬಂದ. ಹಾಗೆ ಬಂದವ ತಾನೂ ಅದೇ ಮಂತ್ರವನ್ನ ಹೇಳಿ ಗುರುವನ್ನ ಬದುಕಿಸಿಕೊಂಡ.
‘ನೀನಿನ್ನು ಇಲ್ಲೇ ಇದ್ದರೆ ಅಪಾಯ. ಹೇಗಿದ್ದರೂ ನಿನ್ನ ಕೆಲಸ ಮುಗಿಯಿತು ಅನ್ನಿಸತ್ತೆ. ತಗೋ, ಈ ನನ್ನ ಮಗಳ ಕೈ ನಿನಗೆ ಕೊಡುತ್ತೇನೆ. ಇಬ್ಬರೂ ಹೊರಟುಹೋಗಿ!’ ಶುಕ್ರನೆಂದ.
ಕಚನೇನೋ ಹೊರಡಲು ತುದಿಗಾಲಲ್ಲಿ ನಿಂತಿದ್ದ. ಆದರೆ ದೇವಯಾನಿಯೊಟ್ಟಿಗೆ ಅಲ್ಲ!
‘ಹೇಗಾಗುವುದು ಗುರುವೇ? ನಮ್ಮಲ್ಲಿ ಈ ಪದ್ಧತಿ ಸಮ್ಮತವಲ್ಲ. ಗುರು ತಂದೆಗೆ ಸಮ. ಗುರುಪುತ್ರಿ ಸಹೋದರಿಯಂತಾಗೋದಿಲ್ವೆ? ನಾವು ಅಸುರರಂತಲ್ಲ!’
‘ಪ್ರೀತಿಯಾಣೆ?’ ದೇವಯಾನಿ ಬಿಕ್ಕಿದಳು. ಖದೀಮ ಕಚ, ‘ಅದು ಸಹೋದರ ಪ್ರೀತಿ ಕಣೇ ರಾಕ್ಷಸಿ!’ ಅನ್ನುತ್ತ ನಕ್ಕ.
ಅವನ ನಗುವಲ್ಲಿ ಎಂಥ ಮೂದಲಿಕೆ!? ದೇವತೆಗಳ ಹಣೆಬರಹವೆ ಅಷ್ಟಲ್ಲವೆ?
~
ಆ ಹೊತ್ತು ಸತ್ತ ದೇವಯಾನಿ ಮತ್ತೆ ಬಹಳ ಸಲ ಸತ್ತಳು. ಈಗಲೂ ಸಾಯುತ್ತಲೇ ಇದ್ದಾಳೆ.
ಅವನಿಗಾಗಿ ಜೀವ ಕೊಡುತ್ತೇನಂದಿದ್ದಳು. ತನ್ನವರನೆಲ್ಲ ಬಿಟ್ಟುಬಿಡುತ್ತೇನೆಂದೂ….
‘ಗೆಳೆತನವನ್ನ ಕೊಳಕು ಮಾಡಿಬಿಟ್ಟೆ, ಬಯಸಿದ್ದೇಕೆ ನನ್ನ ನೀನು? ಹೇಗಾದರೂ….!?’ ಅಂದು ಹೋದವ ಮತ್ತೆ ಬರುವುದೂ ಇಲ್ಲ.
ಟೆರೇಸಿನ ಮೇಲೆ ಬಿದ್ದ ಹೂಗಳಲ್ಲಿ ತನ್ನೆದೆ ಚೂರುಗಳನ್ನೆ ಕಾಣುತ್ತ ಕಣ್ಣೊರೆಸಿಕೊಳ್ತಿದ್ದಾಳೆ ದೇವಯಾನಿ. ಅವನ ಹೆಸರು ಕಚ ಎಂದೇನಲ್ಲ. ಆದರೂ, ನೂರು ದೇವಯಾನಿಯರ ದುಃಖ ಒಂದೇನೇ…

’ಮಗು’ ~ ಮೂರು ಪದ್ಯಗಳು

ಈ ಮೂರು ಕವಿತೆಗಳು ಕಾಲಕ್ರಮದಲ್ಲಿ ಮಗನ ಹುಟ್ಟುಹಬ್ಬದ ಸಂದರ್ಭಗಳಲ್ಲಿ ಬರೆದವು. ಈ ಮೂರೂ ಕವಿತೆಗಳು ಬದುಕಿನ ಪಲ್ಲಟಗಳನ್ನು ಸಂಕೇತಿಸುತ್ತವೆಂದು ಅಂದುಕೊಳ್ಳುತ್ತೇನೆ. ಮೂರನೆ ಪದ್ಯ ಈಗಿನದು, ಹೊಸತು…

ಮಗುವಲ್ಲಿ ಅವನ ನಗು!

ಮಗು.
ಅರೆ! ನನ್ನದೇ ಜೀವ, ನನ್ನ ನಿರಂತರತೆ.
ಆದರೆ ಅದು ನಾನಲ್ಲ. ಅದು ನಾನು ಮಾತ್ರ ಅಲ್ಲ.
ಅಂವ ಕೂಡ ಅಂದುಕೊಳ್ತಾನೇನೋ, ನನ್ನ ಮಗು, ನನ್ನದೇ ನಿರಂತರತೆ!

ಮಗು. . .
ಈಗ ತಾನೆ ಕಡೆದು ತೆಗೆದ ಮೆದು ಬೆಣ್ಣೆ.
ಕಾದು ಕಾದು ಹೊನ್ನುಗಟ್ಟಿದ ಹಾಲುಕೆನೆ.
ಮಗು,
ಹುಲ್ಲಿನೆಳೆಯ ಮೇಲಿನ ಇಬ್ಬನಿ ಮುತ್ತು!
ಅಯ್ಯೋ! ಅದೇನು ಮಗ್ಗುಲ ಮುಳ್ಳು?
ಮಗು-
ವಲ್ಲಿ ಅವನ ನಗು!!
ಅವನ ಕಣ್ಣು, ಮೂಗು, ಬಾಯಿ. . . ಅವನದೇ ಪಡಿಯಚ್ಚು.
ಇತಿಹಾಸ ಕೆದಕುವ ವಾಸ್ತವ.

ಮತ್ತೆ ಮಗು.
ಅದು ನಾನಲ್ಲ. ಅವನೂ ಅಲ್ಲ.
ಅದರ ಹುಟ್ಟಿಗೆ ನಾವೊಂದು ಪಿಳ್ಳೆ ನೆವ ಮಾತ್ರ.
ನಾವು ಕೊಟ್ಟಿದ್ದು ಬರಿ ಜೀವಕೋಶಗಳನ್ನ, ಜೀವವನ್ನಲ್ಲ!
-ಹಾಗಂದುಕೊಳ್ಳುತ್ತೇನೆ.
ಇವನ ಮುಖದಲ್ಲಿ ಅವನ ನಗು ಕಾಣದಂತೆ ತೇಪೆ ಹಾಕುತ್ತೇನೆ.
ಆದರೂ,
ಅಂವ ಹಣಕುತ್ತಾನೆ.
ಅವನ ಧಗಾ, ಧೋಕಾ, ಮೈತುರಿಕೆಗಳೆಲ್ಲ ನೆನಪಾಗಿ ಉಮ್ಮಳಿಕೆ ಬರುತ್ತದೆ.
ಗೋರಿ ಸ್ವಾತಂತ್ರ್ಯದ ಕವನ ಕಟ್ಟಿ, ಕಣ್ಣೀರಲ್ಲಿ ಕೈತೊಳೆದು, ಬೇಲಿಗಳಲ್ಲಿ ಉಸಿರು ಬಿಗಿದು. . .
’ದೌರ್ಜನ್ಯ!’ ಚೀರುತ್ತೇನೆ. ಹೆಣ್ತನದ ವಕೀಲಿಗಿಳಿಯುತ್ತೇನೆ.
ಅದಕ್ಕಾಗೇ ಹೊಸಿಲು ದಾಟಿ ಹೊರಡುತ್ತೇನೆ.

ಅವನ ನಗು ಹೊತ್ತ ಮಗು, ಬಾಗಿಲಾಚೆಯೇ ಉಳಿಯುತ್ತದೆ.

ಸತ್ಯಕಾಮರ ಸಾಲು: ಒಬ್ಬಳು ಹೆಣ್ತನವನ್ನ ಮೀರಿದಾಗ ಮಾತ್ರ ತಾಯಿಯಾಗುತ್ತಾಳೆ.
~

ಮಗುವಿಗೊಂದು ಪತ್ರ

ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ.
ಮುಳ್ಳು ಕಿತ್ತ ನೋವು,
ಮುಳ್ಳು ಕಿತ್ತ ನಿರುಮ್ಮಳ,
ಹಾಗೇ ಇದೆ.

ಕಿವುಡಾಗಲೇಬೇಕಿತ್ತು ನಾನು,
ಕುರುಡಾಗಲೇಬೇಕಿತ್ತು.
ಮೂಕತನವನೆಲ್ಲ ಹುಗಿದು
ಮಾತಾಡಲೇಬೇಕಿತ್ತು.
ಅಬ್ಬರದ ಸಂತೆಯಲಿ ನೀನು
ಅಮ್ಮಾ ಅಂದಿದ್ದು-
ಎದೆಯ ಆಚೆಗೇ ನಿಂತು ಹೋಗಿತ್ತು…

ನಿನ್ನ ಪುಟ್ಟ ಕೈಗಳು ನನ್ನ
ತಡೆಯಲಾಗಲಿಲ್ಲ.
ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ
ಕಣ್ಣುಗಳನ್ನ
ತಪ್ಪಿಸಿಬರಬೇಕಿತ್ತು…

ನಾ ಕಳೆದ ನಿನ್ನ ಬದುಕಿನ ಮೊತ್ತ
ಲೆಕ್ಕವಿಟ್ಟಿದೇನೆ ಮಗೂ,
ನಿನ್ನ ನೋವಿನ ಋಣ
ನನ್ನ ಹೆಗಲ ಮೇಲಿದೆ.
ನೆನಪಿಗೊಂದು ಕಂಬನಿ ಸುರಿದು
ಸಾಗರವಾಯ್ತೆಂದು ಸುಳ್ಳಾಡಲಾರೆ,
ನಿನ್ನ ನೆನೆಯುವ ಧೈರ್ಯ ನನಗಿಲ್ಲವಾಗಿದೆ.

ಮಗೂ,
ಸೋಗು ನಗುವಿನ ನನ್ನ
ಕಣ್ಣುಗಳನೊರೆಸಿ,
ಉತ್ತರ ಗೊತ್ತೆಂದು ಹೇಳುವ ದಿನಕಾಗಿ
ಕಾದಿದ್ದೇನೆ.

ಅದಕೆಂದೇ ಅಕ್ಷರಗಳ ಸಾಲು ಹಾಸಿ,
ಸೇತುವೆ ಕಟ್ಟಿದೇನೆ.
ನಿನ್ನ ಹೆಮ್ಮೆಗೆ ಉಬ್ಬಿ,
ಹಗುರಾಗುವ ದಿನಕಾಗಿ
ಕಾದಿದ್ದೇನೆ ಮಗೂ,
ಮುಳ್ಳು ಕಿತ್ತ ಗಾಯ
ಮಾಯುವುದನ್ನೆ ಕಾಯುತ್ತಿದ್ದೇನೆ…
~

ಅವನ ಹುಟ್ಟಿಗೆ ಹದಿನಾಲ್ಕು ವರ್ಷ!

ಸ್ಕರ್ಟ್ ಹಾಕ್ಕೊಬೇಡ ಹೊರಬರುವಾಗ,
ಟಾಪ್ ಚೂರು ಉದ್ದವಿರಲಿ…
ಎಷ್ಟು ಮಾತು ಫೋನಲ್ಲಿ!
ಚಾಟ್‌ನ ತುದಿಯಲ್ಯಾರು?
– ಅವನು ಗಂಡಸಾಗುತ್ತಿದ್ದಾನೆ;
ನನಗೆ ಅಚ್ಚರಿ ಮತ್ತು ಆತಂಕ.

ಹೆಚ್ಚೂಕಡಿಮೆ ಒಟ್ಟಿಗೇ
ಹುಟ್ಟಿಕೊಂಡವರು ನಾವು.
ಎರಡು ದಶಕದಂತರವಷ್ಟೆ;
ಅವನೆಷ್ಟು ಬೆಳದಿದ್ದಾನೆ!
ನನಗಿಂತ ಎತ್ತರ, ಮಾತಿನಲ್ಲೂ…
ಅವನ ಪುಟ್ಟ ಪಾದವೀಗ
ನನ್ನೆದೆ ಮೀರುವಷ್ಟುದ್ದ,
ಒದೆಯಬಹುದೇ ಎಂದಾದರೂ
ಪುಂಡ ಮಕ್ಕಳಂತೆ?
ಅವನ ತೊದಲು ನುಡಿಯೀಗ
ನಾಲಗೆ ಮೀರುವಷ್ಟುದ್ದ,
ಹಾಯಬಹುದೇ ನನ್ನ ಮೇಲೆ
ಸಾಕಿದ್ದು ಸರಿಯಿಲ್ಲವೆಂದು?
ಏನೆಲ್ಲ ಮಳ್ಳು ಚಿಂತೆ!
ಎಷ್ಟು ಬೆಳೆದರೂ ಅವನು,
ನನ್ನ ಹೊಕ್ಕುಳ ಹಣ್ಣು.

‘ಗಲ್ಸ್…’ ಅನ್ನುವಾಗ ಮಿಂಚುತ್ತವನ ಕಣ್ಣು…
ಕನ್ನಡಿಯೆದುರು ಪದೇಪದೇ
ಮೀಸೆ ಮೂಡಿಲ್ಲ ಇನ್ನೂ, ಗಂಟಲೊಡೆದಿಲ್ಲ –
ಅವನ ಚಿಂತೆ ಅವನಿಗೆ…
ಏನೋದಿಯಾನು, ಏನಾದಾನು,
ನೊಗ ಹೊರುವ ಕಾಲ ಬಂದೇಬಿಡುವುದು
ಎಷ್ಟು ದಿನ ಗೂಡಲ್ಲಿರಬಹುದು ಹಕ್ಕಿಮರಿ?
– ನನ್ನ ಚಿಂತೆ ನನಗೆ…

ಅವನು,
ನನ್ನ ಹುಚ್ಚಾಟಗಳಿಗೆ ಚೌಕಟ್ಟು
ಬಡಾಯಿಗೆ ಬೇಲಿ
ರೆಕ್ಕೆಗೆ ಕಲ್ಲು
ಕಾಲಿಗೆ ಚಕ್ರ
ಬದುಕಿಗೊಂದು ಚೆಂದದ ನೆವ;
ಅವನು,
ಬಾಣಲೆಗೆ ಬೀಳದಂತೆ ನನ್ನ
ತಡೆದಿರುವ ಜಾಲರಿ ಕೂಡಾ….
ಅವನ್ಹುಟ್ಟಿಗೀಗ ವನವಾಸದಷ್ಟು ವರ್ಷ!
ಲೆಕ್ಕ ಹಾಕುವಾಗ ಬಯಕೆ,
ಕೇಡು ಕಳೆಯಬಹುದು
ರಾಜ್ಯ ಕೊಡಿಸಬಹುದು;
ರಣಚೋರಳಾಗದೆ ಇನ್ನೂ
ಕಾದಾಡಬೇಕು ನಾನು.

ಭಾಮಿನಿ ಷಟ್ಪದಿ

bs

ಭಾಮಿನಿ ಷಟ್ಪದಿಯ ಪ್ರತಿಗಳು ಖಾಲಿಯಾಗಿವೆ. ಪುನರ್‌ಮುದ್ರಣ ಮಾಡುವ ಬದಲು ಹೀಗೆ ಪಿಡಿಎಫ್ ಪ್ರತಿ ಅಪ್‌ಲೋಡ್‌ ಮಾಡಿದರೆ ಆಸಕ್ತರೆಲ್ಲರೂ ಓದಿಕೊಳ್ಳಬಹುದು. ಇಷ್ಟವಾಗಲಿಲ್ಲವೆಂದರೆ ದುಡ್ಡು ದಂಡವಾಯ್ತೆಂದು ಗೊಣಗಿಕೊಳ್ಳುವ ಗೋಜಿಲ್ಲ…  bhamini ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಪುಟಗಳು ತೆರೆದುಕೊಳ್ಳುವವು….    bhamini

ಸೆಕ್ಸ್‌: ನಿರಾಕರಣೆಯ ಹಕ್ಕು

ದೆಹಲಿ ಹೈಕೋರ್ಟ್ ಒಂದು ಐತಿಹಾಸಿಕ  ತೀರ್ಪು ನೀಡಿತು. ಹೆಂಡತಿ ಮೊದಲ ರಾತ್ರಿಯಿಂದ ಹಿಡಿದು ಮದುವೆಯಾದ ಐದು ತಿಂಗಳ ಪರ‍್ಯಂತ ಸೆಕ್ಸ್ ಅನ್ನು ನಿರಾಕರಿಸಿದಳು ಎನ್ನುವುದು ಫಿರ‍್ಯಾದಿಯ ದೂರಾಗಿತ್ತು. ದಂಪತಿಗಳಲ್ಲಿ ಯಾರೊಬ್ಬರ ಕಡೆಯಿಂದ ಸೆಕ್ಸ್ ನಿರಾಕರಿಸಲ್ಪಟ್ಟರೂ ಅದನ್ನು ಕ್ರೌರ‍್ಯವೆಂದು ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಆಧಾರವಾಗಿಟ್ಟುಕೊಂಡು ಡೈವೋರ್ಸ್ ಪಡೆಯಬಹುದು ಎಂದು ಹೈಕೋರ್ಟ್ ಹೇಳಿತು.
ಈಗ ಈ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಗಂಡಸರು ಈ ಅವಕಾಶದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಕೆಲವರು ವಾದಿಸಿದರೆ, ದೈಹಿಕ, ಮಾನಸಿಕ ಮೊದಲಾದ ಹತ್ತು ಹಲವು ಕಾರಣಗಳಿಂದಾಗಿ ಹೆಂಡತಿಯು ಸೆಕ್ಸ್ ನಿರಾಕರಿಸುವ ಹಕ್ಕನ್ನು ಇದು ಕಿತ್ತುಕೊಳ್ಳುತ್ತದೆ ಎಂದು ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ತೀರ್ಪಿನಲ್ಲಿ ಗಂಡ ಮತ್ತು ಹೆಂಡತಿ – ಇಬ್ಬರಿಗೂ ಸಮಾನ ಅವಕಾಶ ನೀಡಲಾಗಿದೆ ಎಂದು ಮತ್ತೆ ಕೆಲವರು ಸಮಾಧಾನ ಹೇಳುತ್ತಿದ್ದಾರೆ.
ಇವೆಲ್ಲ ಸರಿ. ಆದರೆ, ದಾಂಪತ್ಯದಲ್ಲಿ ಸೆಕ್ಸ್ ಅನ್ನುವ ವಿಷಯವನ್ನು ಮುಂದಿಟ್ಟುಕೊಂಡು ಮಾತಾಡಬೇಕಾದ ಅಂಶ ಮತ್ತೊಂದೇ ಇದೆ.

ಯಾರಿಗೆಷ್ಟು ಪಾಲು?
ಹೆಂಗಸರಿಗೆ ನಿರಾಕರಿಸಲ್ಪಟ್ಟಿರುವ ಹಲವಾರು ಹಕ್ಕುಗಳಲ್ಲಿ ಲೈಂಗಿಕತೆಯ ಹಕ್ಕೂ ಒಂದು ಎಂದು ಧಾರಾಳವಾಗಿ ಹೇಳಬಹುದು. ಅಥವಾ, ಹೆಂಗಸರು ಲೈಂಗಿಕತೆಯನ್ನು ನಿರಾಕರಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದೂ ಹೇಳಬಹುದು. ಯಾಕೆಂದರೆ ‘ಸೆಕ್ಸ್ ’, ಹೆಂಗಸರು ಉಚ್ಚರಿಸಲೂ ಬಾರದ ಪದ. ಒಂದೊಮ್ಮೆ ಹೆಂಡತಿ ತನ್ನ ವಾಂಛೆಯನ್ನು ಗಂಡನಲ್ಲಿ ತೋರಿಕೊಂಡರೆ ಆಕೆಯನ್ನು ಅಸಭ್ಯಳೆನ್ನುವಂತೆ ನೋಡಲಾಗುತ್ತದೆ. ಆಕೆ ಮುಕ್ತವಾಗಿ ಸೆಕ್ಸ್ ಅನ್ನು ಬಯಸುವಂತಿಲ್ಲ. ಹಾಗೆಯೇ ತನ್ನ ಆರೋಗ್ಯ, ಖಿನ್ನತೆ ಅಥವಾ ಮನೆವಾಳ್ತೆಯ ತಲೆಬಿಸಿಗಳಿಂದಾಗಿ ಗಂಡನೊಂದಿಗೆ ಸೆಕ್ಸ್ ನಿರಾಕರಿಸಿದರೆ ಆಕೆಯನ್ನು ಅವಿಧೇಯಳೆಂಬಂತೆ ನೋಡಲಾಗುತ್ತದೆ. ಅವಳು ಗಂಡನನ್ನು ವಂಚಿಸುತ್ತಿದ್ದಾಳೆಂದು ಅನುಮಾನಿಸಲಾಗುತ್ತದೆ. ಈ ನಿಟ್ಟಿನಿಂದ ಸೆಕ್ಸ್ ಹೆಣ್ಣು ಬಯಸಲೂಬಾರದ, ತಿರಸ್ಕರಿಸಲೂಬಾರದ ಸಂಗತಿ ಎನ್ನಬಹುದು.
ಸಾಮಾನ್ಯವಾಗಿ ಹೆಂಗಸರು ದಾಂಪತ್ಯದಲ್ಲಿ ಸೆಕ್ಸ್ ತಮಗೆ ತೃಪ್ತಿ ನೀಡುತ್ತಿದೆಯೇ ಇಲ್ಲವೇ ಎಂಬುದನ್ನು ಆಪ್ತರೊಡನೆ ಡಿಸ್ಕಸ್ ಮಾಡಲೂ ಹಿಂಜರಿಯುತ್ತಾರೆ. ಸಿನಿಮಾಗಳಲ್ಲಿ ತೋರಿಸುವಂತೆ ಮಲ್ಲಿಗೆ ಹೂ ಮುಡಿದು ಉಂಗುಷ್ಟದಿಂದ ನೆಲೆ ಕೆರೆಯುತ್ತಾ ನಿಂತುಬಿಟ್ಟರೆ ಅರ್ಥ ಮಾಡಿಕೊಳ್ಳುವಷ್ಟು ಸೂಕ್ಷ್ಮತೆ ಗಂಡಸರಿಗೆ ಇರುವುದಿಲ್ಲ. ಅಲ್ಲದೆ, ಸೆಕ್ಸ್ ಗಂಡ ಬಯಸಿದಾಗ ಮಾತ್ರ ನಡೆಯಬೇಕಿರುವ ಪ್ರಕ್ರಿಯೆ ಎಂಬ ಸಾಂಪ್ರದಾಯಿಕ ಮನೋಭಾವವೂ ಇಲ್ಲಿ ಕೆಲಸ ಮಾಡುತ್ತದೆ. ಹೆಂಡತಿಯ ಋತು ಸಮಸ್ಯೆ, ಆರೋಗ್ಯ, ಮೂಡ್ – ಇವೆಲ್ಲ ನಗಣ್ಯ ವಿಷಯಗಳಾಗಿಬಿಡುತ್ತವೆ.

ಲೀಗಲ್ ರೇಪ್
ಹೆಣ್ಣಿನ ಸಮ್ಮತಿ ಇಲ್ಲದೆ ನಡೆಸುವ ಸೆಕ್ಸ್ ಅನ್ನು ರೇಪ್ ಅನ್ನಬಹುದಾದರೆ, ಮದುವೆಯಾದ ಬಹುತೇಕ ಹೆಣ್ಣುಮಕ್ಕಳು ಪ್ರತಿನಿತ್ಯವೂ ‘ಲೀಗಲ್ ರೇಪ್’ಗೆ ಒಳಗಾಗುತ್ತಲೇ ಇರುತ್ತಾರೆ ಅನ್ನುವುದು ಬಹಳ ಹಳೆಯ ಅಬ್ಸರ್ವೇಷನ್. ಆದರೆ ಇದಕ್ಕೆ ಪರಿಹಾರ ಮಾತ್ರ ಈ ಕ್ಷಣಕ್ಕೂ ದೊರೆತಿಲ್ಲ. ಹಿಂದಿನ ದಿನಗಳಲ್ಲಿ ಬಹ್ವಂಶ ಹೆಂಗಸರಿಗೆ ತಾವು ಸೆಕ್ಸ್‌ಗೆ ಅಸಮ್ಮತಿ ತೋರಬಹುದು ಅಥವಾ ಒಳಗಿಂದೊಳಗೆ ಅಸಮಾಧಾನ ಪಟ್ಟುಕೊಳ್ಳಬಹುದು ಎಂಬುದೂ ತಿಳಿದಿರಲಿಲ್ಲ. ಇಂದಿನವರು ಕೊನೆಯ ಪಕ್ಷ ನಮಗೇನು ಬೇಕು, ಏನು ಬೇಡ ಎಂದಾದರೂ ಅರಿತುಕೊಳ್ಳಬಲ್ಲವರಾಗಿದ್ದಾರೆ. ನಡೆಯುತ್ತದೋ ಇಲ್ಲವೋ, ತಮ್ಮ ಮಟ್ಟಿನ ಪ್ರತಿರೋಧವನ್ನು ತೋರಬಲ್ಲವರಾಗಿದ್ದಾರೆ ಎನ್ನುವುದೇ ಸಮಾಧಾನ.
ಇಷ್ಟ ಇಲ್ಲದ ತಿಂಡಿಯನ್ನು ಮುಲಾಜಿಲ್ಲದೆ ಬೇಡ ಎಂದುಬಿಡುವ ನಾವು, ಇಷ್ಟವಿಲ್ಲದ ಸೆಕ್ಸ್ ಅನ್ನು ಯಾಕಾದರೂ ಒಪ್ಪಿಕೊಳ್ಳಬೇಕು? ಇಂಥ ನಿಲುವಿನ ಪ್ರಶ್ನೆಗಳು ದಾಂಪತ್ಯದ ತಳಪಾಯವನ್ನು ಅಲುಗಿಸುತ್ತವೆ ಎನ್ನುವುದೇನೋ ನಿಜ. ಆದರೆ ಎಲ್ಲ ಸಂದರ್ಭದಲ್ಲಿಯೂ ಹೆಂಗಸರೇ ಕಾಂಪ್ರೊಮೈಸ್ ಆಗಬೇಕು, ಧರ್ಮ, ಸಂಸ್ಕೃತಿ, ದಾಂಪತ್ಯ, ಕುಟುಂಬ- ಈ ಯಾವುದನ್ನು ಉಳಿಸಿಕೊಂಡು ಪರಂಪರೆಯನ್ನು ಸಾಗಿಸಿಕೊಂಡು ಹೋಗಬೇಕಾದರೂ ಹೆಂಗಸರೇ ಬಲಿಯಾಗಬೇಕು ಅಂತ ಬಯಸುವುದು ಮಾತ್ರ ಅನ್ಯಾಯ.
ಇಷ್ಟಕ್ಕೂ ಹೆಂಡತಿಯೊಂದಿಗೆ ಈ ನಿಟ್ಟಿನಲ್ಲಿ ಸಹಕರಿಸದೆ ಬ್ರಹ್ಮಚಾರಿಗಳಂತೆ ಇರುವ, ಸಮಾಜಕ್ಕೋ ಅಧ್ಯಾತ್ಮಕ್ಕೋ ಮುಡಿಪಾದ ಗಂಡಸರನ್ನು ನಾವು ಪೂಜ್ಯ ಭಾವನೆಯಿಂದ ಕಾಣುತ್ತೇವೆ.  ಅವರು ಕಾಮವನ್ನು ಗೆದ್ದವರೆಂದು ಗೌರವಿಸುತ್ತೇವೆ. ಆದರೆ ಮದುವೆಯ ನಂತರ ತಮ್ಮದೇ ಆಯ್ಕೆಯಿಂದ ಬ್ರಹ್ಮಚರ್ಯ ಅನುಸರಿಸುತ್ತೇನೆ, ಸಮಾಜ ಕಾರ್ಯಕ್ಕೆ ತನ್ನನ್ನು ಕೊಟ್ಟುಕೊಳ್ಳುತ್ತೇನೆ ಎಂದು ಹೊರಡುವ ಎಷ್ಟು ಹೆಂಗಸರನ್ನು ನಾವು ಗೌರವಿಸಿದ್ದೇವೆ? ಹೋಗಲಿ, ಅಂತಹದೊಂದು ನಿರ್ಧಾರಕ್ಕೆ ಅನುವು ಮಾಡಿಕೊಟ್ಟ ಗಂಡಸರ ಸಂಖ್ಯೆಯಾದರೂ ಎಷ್ಟಿದೆ!?

ಶೃಂಗಾರ ಸಮರಸ
ದಾಂಪತ್ಯದಲ್ಲಿ ಸೆಕ್ಸ್ ಗಂಡ ಹೆಂಡತಿಯರನ್ನು ಆಪ್ತವಾಗಿ ಬೆಸೆದಿಡುವ ಮುಖ್ಯ ಸೂತ್ರ. ಸೆಕ್ಸ್ ಇಲ್ಲದ ಮದುವೆ, ಮದುವೆಯಾದರೂ ಹೇಗೆ ಆದೀತು? ಆದರೆ ಪ್ರತಿಯೊಂದರಲ್ಲಿ ಇರಬೇಕಾದಂತೆ ಇಲ್ಲಿಯೂ ಸಮಾನತೆ ಇರಬೇಕು. ಪುರಾತನ ಸಾಹಿತ್ಯಕೃತಿ ಕಾಮಸೂತ್ರದಲ್ಲಿ ಹೇಳಿರುವಂತೆ ಗಂಡ ಹೆಂಡತಿಯರಿಬ್ಬರ ಬಯಕೆ, ಆಯ್ಕೆಗಳಿಗೆ ಸಮಾನ ಮನ್ನಣೆ ಇರಬೇಕು. ಮಂಚದ ಮೇಲೆ ಹೆಣ್ಣು ತನ್ನ ಬೇಕು- ಬೇಡಗಳನ್ನು ಎಗ್ಗಿಲ್ಲದೆ ಹೇಳಿಕೊಳ್ಳುವ ಮುಕ್ತತೆ ಇರಬೇಕು. ಆಗಷ್ಟೆ ದಾಂಪತ್ಯ ಅರ್ಥಪೂರ್ಣವಾಗುತ್ತದೆ.
ಸಂಗಾತಿಯಿಂದ ದೇಹದ ಕಾಮನೆಯನ್ನ ಪೂರೈಸಿಕೊಳ್ಳುವ ಬಯಕೆ ಸಾಮಾನ್ಯವೇ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ದೊರಕದಿದ್ದರೆ ಎಲ್ಲಿ ತಪ್ಪಾಗಿದೆ, ಏನು ತೊಂದರೆಯಾಗಿದೆ ಎನ್ನುವುದನ್ನ ಗಂಡ ಹೆಂಡತಿ ಕುಳಿತು ಚರ್ಚಿಸಬೇಕು. ವೈದ್ಯರು ಅಥವಾ ಆಪ್ತಸಲಹೆಗಾರರ ಬಳಿ ಅದರ ಪರಿಹಾರಕ್ಕೆ ಪ್ರಯತ್ನಿಸಬೇಕು. ಕೂತು ಮಾತಾಡುವುದರಿಂದ ಬಗೆಹರಿಯದೆ ಇರುವುದು ಯಾವುದಿದೆ? ಹೆಣ್ಣು ಗಂಡುಗಳಲ್ಲಿ ಪರಸ್ಪರ ಗೌರವವೊಂದಿದ್ದರೆ ಯಾವುದೂ ಕಷ್ಟವಲ್ಲ ಅಲ್ಲವೆ?

ಅಪ್ಪನೂ ಅಮ್ಮನೂ ನೀನೇ…

ಮಗು ತಲೆ ತಗ್ಗಿಸಿ ನಿಂತುಕೊಂಡಿದೆ. ಆ ಹೊತ್ತಿನ ತನಕ ಹೀರೋ ಆಗಿ ಮೆರೀತಿದ್ದುದು ಇದ್ದಕಿದ್ದಹಾಗೆ ಭೂಮಿಗಿಳಿದು ಹೋಗಿದೆ. ಅವಮಾನಿತ ಮುಖ, ಕಣ್ಣಲ್ಲಿ ಬಿಗಿಹಿಡಿದ ನೀರ ಹನಿ. ಸಹಪಾಠಿಗಳಲ್ಲಿ ಕೆಲವರಿಗೆ ಅನುಕಂಪ, ಕೆಲವರಿಗೆ ಆತಂಕ, ಮತ್ತೆ ಕೆಲವರಿಗೆ ನಾವು ಗೆದ್ದೆವೆಂಬ ಹೆಮ್ಮೆ. ವಿಷಯ ಇಷ್ಟೇ. ಆ ಮಗುವಿನ ಮನೆಯಲ್ಲಿ `ಅಪ್ಪ’ ಇಲ್ಲ. ಅಂವ ಓಡಿಹೋಗಿದಾನೆ ಅಥವಾ ಅಮ್ಮನೇ ಮನೆಯಿಂದ ಈಚೆ ಬಂದಿದಾಳೆ. ಒಟ್ಟಿನಲ್ಲಿ ಮಗುವಿಗೆ ಅದು ಸಂಕಟದ ವಿಷಯ. ಸ್ವಂತಕ್ಕೆ ಅಪ್ಪನ ಕೊರತೆ ಕಾಡದಿದ್ದರೂ ಸುತ್ತಲಿನವರ ಜತೆ ಏಗಲಿಕ್ಕಾದರೂ ಅಪ್ಪ ಬೇಕು ಆ ಮಗುವಿಗೆ, ಅಂತಹ ಎಷ್ಟೋ ಮಕ್ಕಳಿಗೆ.
ಈವತ್ತು ಇಂತಹ ಸೀನ್ ಅಪರೂಪ. ವಿಭಜಿತ ಸಂಸಾರಗಳ ಸಂಖ್ಯೆ ಹೆಚ್ಚುತ್ತಿದ್ದರೂ ಅಪ್ಪ ಅಥವಾ ಅಮ್ಮ ಜತೆಗಿಲ್ಲದಿರುವುದು ಭಾವನಾತ್ಮಕ ವಿಷಯವಾಗಷ್ಟೆ ಕೌಂಟ್ ಆಗುತ್ತಿದೆ. ಈ ಕುರಿತಂತೆ ಸಾಮಾಜಿಕ ಕೊಂಕು ಸಾಕಷ್ಟು ಮಟ್ಟಿಗೆ ತಗ್ಗಿರುವುದು ಸಮಾಧಾನದ ಸಂಗತಿ. ಇಂದು ಸುತ್ತಲಿನವರು ಮಾತು ಮೌನಗಳ ಚಿಂತೆ ಬಿಟ್ಟು, ಮಕ್ಕಳಿಗೆ ಸಂಗಾತಿಯ ಇಲ್ಲದಿರುವ ಕೊರತೆ ಕಾಡದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು.
ಹಿಂದೆಲ್ಲ ಹೆಚ್ಚಾಗಿ ಹೆಂಗಸರು ಒಂಟಿಯಾಗಿ ಮಕ್ಕಳನ್ನು ಬೆಳೆಸುವ ಪರೀಕ್ಷೆಗೆ ಒಳಗಾಗುತ್ತಿದ್ದರು. ಎರಡನೆ ಹೆಣ್ಣಿನ ಹಿಂದೆ ಹೋಗಿಯೋ, ಸಂಸಾರದಿಂದ ಓಡಿ ಸಂನ್ಯಾಸಿಯೋ ಆಗಿಬಿಡುವ ಅಪ್ಪಂದಿರು ಇಂತಹ ಪರಿಸ್ಥಿತಿ ತಂದೊಡ್ಡುತ್ತಿದ್ದರು. ಮರುಮದುವೆಗಳು ಅಪರಾಧವಾಗಿದ್ದ ಕಾಲಕ್ಕೆ ಅಮ್ಮನಾದವಳೊಬ್ಬಳೇ ಮಕ್ಕಳನ್ನು ಸಾಕುವುದು ಅನಿವಾರ್ಯವಾಗಿರುತ್ತಿತ್ತು. ಕಡಿಮೆ ಅವಕಾಶಗಳು, ಸೀಮಿತ ಸವಲತ್ತುಗಳ ನಡುವೆಯೂ ಅವತ್ತಿನ ಒಂಟಿ ಅಮ್ಮಂದಿರು ತಮ್ಮ ಮಕ್ಕಳನ್ನು ದಡ ಹತ್ತಿಸುವಲ್ಲಿ ಯಶಸ್ಸು ಕಾಣ್ತಿದ್ದರು.
ಇಂದಿನ ಸ್ಥಿತಿ ಚೂರು ಬೇರೆ. ಈವತ್ತು ಸಂಸಾರ ಬಿಡುವ ಆಯ್ಕೆ, ಸದವಕಾಶ ಅಥವಾ ದುರ್ಬುದ್ಧಿಗಳು ಹೆಣ್ಣಿಗೂ ಇವೆ. ಹೆಂಗಸರಂತೆಯೇ ಗಂಡಸರು ಕೂಡ ಒಂಟಿಯಾಗಿ ಮಕ್ಕಳನ್ನು ಸಾಕುವುದರ ಅನುಭವ ಪಡೆಯುತ್ತಿದ್ದಾರೆ. ಗಂಡು- ಹೆಣ್ಣುಗಳಿಬ್ಬರಿಗೂ ಮರುಮದುವೆಯ ಸಾಕಷ್ಟು ಅವಕಾಶಗಳಿವೆ. ಹಾಗಿದ್ದೂ ಏಕಾಂಗಿತನದ ಸುಖಕ್ಕೆ ಸೋತಿರುವ ಇಂದಿನ ಪೀಳಿಗೆ ಒಮ್ಮೆ ಸಂಸಾರ ಮುರಿದ ನಂತರ ಮತ್ತೆ ಅದರ ಜಾಲಕ್ಕೆ ಬೀಳಲು ಒಪ್ಪುತ್ತಿಲ್ಲ. ಆದ್ದರಿಂದ ಸಿಂಗಲ್ ಪೇರೆಂಟಿಂಗ್ ಇಂದು ಸಾಮಾನ್ಯ ಸಂಗತಿ ಎನ್ನುವಂತಾಗಿಬಿಟ್ಟಿದೆ. ಸಮಾಜದ ಒಟ್ಟು ಮನಸ್ಥಿತಿಯ ಬದಲಾವಣೆ ಕೂಡ ಅದಕ್ಕೆ ಪೂರಕವಾಗಿ ಸಹಕರಿಸುತ್ತಿದೆ. ಇನ್ನು ಮಕ್ಕಳು ಒಂಟಿತನದ ಭಾವನೆ ಬೆಳೆಸಿಕೊಳ್ಳದಂತೆ ಕಾಳಜಿ ವಹಿಸುವುದಷ್ಟೆ ಮುಂದುಳಿಯುವ ಚಾಲೆಂಜ್.

ಕಲಿಕೆಗೆ ಕಾಲ
ಸಿಂಗಲ್ ಪೇರೆಂಟ್ ಆಗುವುದು ಅಂದರೆ ಹೆಚ್ಚುವರಿ ಜವಾಬ್ದಾರಿ ಹೊತ್ತಂತೆ ಎಂದು ಕೆಲವರು ಆತಂಕಪಡುತ್ತಾರೆ. ಲೈಫಲ್ಲಿ ಅಚಾನಕ್ ಎದುರಾಗುವ ಯಾವ ತಿರುವನ್ನೂ ನೆಗೆಟಿವ್ ಆಗಿ ನೋಡಬಾರದು. ಎಂಥದೋ ಮನಸ್ಥಿತಿ- ಪರಿಸ್ಥಿತಿಗಳ ಫಲವಾಗಿ ಏಕಾಂಗಿ ಬದುಕು ಸಿಕ್ಕಿರುತ್ತದೆ. ಜೊತೆಯಲ್ಲಿ ಸಂಗಾತಿ ಬಿಟ್ಟುಹೋದ ಮಗುವಿದೆ. ಈ ಸನ್ನಿವೇಶದಲ್ಲಿ ಜವಾಬ್ದಾರಿ ಹೊತ್ತವರು ಅಪ್ಪ ಅಮ್ಮ ಎರಡೂ ರೋಲ್‌ಗಳನ್ನು ನಿಭಾಯಿಸುತ್ತ ಬೆಳೆಸುವುದು ಕಷ್ಟವೇ. ನಿಜ ಏನೆಂದರೆ, ಹಾಗೆ ಮತ್ತೊಂದು ಪಾತ್ರವನ್ನು ನಿಭಾಯಿಸಬೇಕಾದ ಅಗತ್ಯವಿಲ್ಲ. ಏನಿದ್ದರೂ ಅಮ್ಮ ಅಪ್ಪನಂತೆ ಹಾಗೂ ಅಪ್ಪ ಅಮ್ಮನಂತೆ ನಟಿಸಬಲ್ಲರು ಹೊರತು ಯಥಾವತ್ ಅವರೇ ಆಗಿ ವರ್ತಿಸಲು ಸಾಧ್ಯವೇ ಇಲ್ಲ.  ಮೊದಲು ಇಷ್ಟನ್ನು ತಿಳಿದುಕೊಂಡರೆ, ಮುಂದಿನ ಹೆಜ್ಜೆಗಳು ಸಲೀಸು.
ಸಿಂಗಲ್ ಪೇರೆಂಟಿಂಗ್ ಅನ್ನು ಶಿಕ್ಷೆಯಾಗಿ ತೆಗೆದುಕೊಳ್ಳದೆ, ಅದನ್ನು ಮಗುವಿನೊಟ್ಟಿಗೆ ನಮ್ಮ ವ್ಯಕ್ತಿತ್ವವನ್ನೂ ರೂಪಿಸ್ಕೊಳ್ಳುವ ಅವಕಾಶವನ್ನಾಗಿ ನೋಡಬೇಕು. ಇದು ನಮ್ಮಿಂದ ಹೆಚ್ಚಿನ ಅವೇರ್‌ನೆಸ್ ಅನ್ನು, ಕಮಿಟ್‌ಮೆಂಟ್ ಅನ್ನು ಬೇಡುವಂಥ ಪ್ರಕ್ರಿಯೆ. ಅಪ್ಪ ಅಮ್ಮ ಇಬ್ಬರೂ ಇರುವ ಮನೆಗಳಲ್ಲಿ  ಮಗುವಿನ ಬೆಳವಣಿಗೆಯ ಲೋಪ ದೋಷಗಳನ್ನು ಪರಸ್ಪರರ ತಲೆಗೆ ಕಟ್ಟಿ ನುಣುಚಿಕೊಳ್ಳಬಹುದು. ಆದರೆ ಸಿಂಗಲ್ ಪೇರೆಂಟ್ ವಿಷಯದಲ್ಲಿ ಹಾಗಿಲ್ಲ. ಮಗುವಿನ ಒಳಿತಿಗೂ ಕೆಡುಕಿಗೂ ಅವರೇ ಜವಾಬುದಾರರು. ಎಲ್ಲಿದ್ದರೂ ಬೆಳೆಯುವ ಮಕ್ಕಳಿಗೆ ಬೇಕಾದ ಆಪ್ತತೆ, ಶಿಕ್ಷಣ ಮತ್ತು ಸನ್ನಡತೆಯ ಪಾಠಗಳು- ಇವಿಷ್ಟನ್ನು ಒದಗಿಸಿಕೊಟ್ಟರೆ `ಬೆಸ್ಟ್ ಸಿಂಗಲ್ ಪೇರೆಂಟ್’ ಅನ್ನುವ ಹೆಮ್ಮೆ ದಕ್ಕಿಸಿಕೊಳ್ಳಬಹುದು. ಮಾತು ಇಲ್ಲಿ ಪೇರೆಂಟ್ ಮತ್ತು ಮಗುವನ್ನು ಬೆಸೆಯುವ ಮ್ಯಾಜಿಕ್ ಬಾಂಡ್‌ನಂತೆ ಕೆಲಸ ಮಾಡುತ್ತದೆ. ಮನೆಯ ಪ್ರತಿ ಸಂಗತಿಯನ್ನೂ ಮಗುವಿನೊಂದಿಗೆ ಚರ್ಚಿಸುವುದು, ಮಕ್ಕಳ ಅಭಿಪ್ರಾಯಕ್ಕೆ, ಸಲಹೆಗೆ ಬೆಲೆ ಕೊಡುತ್ತಾ ತಾವೆಷ್ಟು ಮನ್ನಣೆ ನೀಡುತ್ತೇವೆ ಎಂದು ತಿಳಿಯಪಡಿಸುತ್ತಿರುವುದು- ಇವೆಲ್ಲ ಇಲ್ಲಿ ಮುಖ್ಯವಾಗುತ್ತದೆ. ಬೆಳೆಯುತ್ತಿರುವ ಮಕ್ಕಳ ಖಾಸಗಿ ದಿನಚರಿಯನ್ನು ಹಕ್ಕಿನಿಂದ ಕೇಳುವಂತೆಯೇ ತಮ್ಮ ಖಾಸಾ ಸಂಗತಿಗಳನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಳ್ಳುವುದು ಕೂಡ ಅವರೊಡನೆ ಆಪ್ತತೆ ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಮಿಥ್‌ಗಳಿಂದ ದೂರ
ಸಿಂಗಲ್ ಪೇರೆಂಟಿಂಗ್ ಅನ್ನು `ಆಯ್ಕೆ’ ಮಾಡಿಕೊಳ್ಳುವ ಸನ್ನಿವೇಶ ನಮ್ಮ ದೇಶದಲ್ಲಿ ಇನ್ನೂ ಇಲ್ಲ. ತೀರ ಅಪರೂಪಕ್ಕೆ ಸೆಲೆಬ್ರಿಟಿಗಳು ಮದುವೆಯಿಲ್ಲದೆ ಮಕ್ಕಳನ್ನು ಪಡೆದು ಗೌರವದಿಂದಲೇ ಅವರನ್ನು ಬೆಳೆಸಿದ ಉದಾಹರಣೆಗಳಿವೆ ಅಷ್ಟೆ. ಇಲ್ಲಿ ಸಿಂಗಲ್ ಪೇರೆಂಟಿಂಗ್ ಮದುವೆ ಮುರಿತ ಅಥವಾ ಸಂಗಾತಿಯ ಮರಣದ ನಂತರದ ಅನಿವಾರ್‍ಯ ಪಾತ್ರ. ಪ್ರಿಕಾಶನ್ ಇಲ್ಲದೆ ಬಂದೆರಗುವ ಇದಕ್ಕೆ ತಮ್ಮನ್ನು ಒಗ್ಗಿಸಿಕೊಳ್ಳುವಾಗಲೇ ಭಯ ಕಾಡತೊಡಗಿರುತ್ತದೆ. ಒಂಟಿಯಾಗಿ ಬೆಳೆಯುವ ಮಕ್ಕಳು ದಾರಿ ತಪ್ಪುತ್ತಾರೆ, ಮಾನಸಿಕವಾಗಿ ಕುಗ್ಗಿಹೋಗುತ್ತಾರೆ ಇತ್ಯಾದಿ ಮಿಥ್‌ಗಳು ಹೆದರಿಸುತ್ತವೆ. ವಾಸ್ತವ ಹಾಗಿಲ್ಲ. ಸಿಂಗಲ್ ಪೇರೆಂಟ್ ಕೇರ್‌ನಲ್ಲಿ ಬೆಳೆಯುವ ಮಕ್ಕಳು ಕೂಡ ಎಲ್ಲ ಮಕ್ಕಳಂತೆ ನಾರ್ಮಲ್ ಇರುವರು. ಸಹಜ ಸಂಸಾರದಲ್ಲಿ ಬೆಳೆದ ಮಕ್ಕಳು ದಾರಿ ತಪ್ಪಿದಾಗ ಅದು ವಿಶೇಷವಾಗಿ ಗುರುತಿಸಲ್ಪಡುವುದಿಲ್ಲ ಅಷ್ಟೆ.
ಹಾಗೆ ನೋಡಿದರೆ ಸಿಂಗಲ್ ಪೇರೆಂಟಿಂಗ್‌ನಲ್ಲಿ ಮಕ್ಕಳನ್ನು ಹೆಚ್ಚು ಸ್ವತಂತ್ರರೂ ಸ್ವಾಭಿಮಾನಿಗಳೂ ಆಗಿ ಬೆಳೆಸಬಹುದು. ಅದು ಮಕ್ಕಳನ್ನು `ಬೆಳೆಸುವ’ ಪ್ರಾಸೆಸ್‌ಗಿಂತ ಅವರೊಟ್ಟಿಗೆ ಬದುಕನ್ನು `ಶೇರ್ ಮಾಡಿಕೊಳ್ಳುವ’ ಪ್ರಕ್ರಿಯೆಯಾಗಬೇಕು. ಆಗ ಪೇರೆಂಟ್ ಮತ್ತು ಮಗು ಇಬ್ಬರ ಬದುಕೂ ಉಲ್ಲಾಸ ಹಾಗೂ ಒಳ್ಳೆಯ ಬೆಳವಣಿಗೆಗಳಿಂದ ಶ್ರೀಮಂತವಾಗುತ್ತದೆ. ಸಿಂಗಲ್ ಅಮ್ಮಂದಿರ ವಿಷಯ ಬಂದಾಗ ಖರ್ಚು ನಿರ್ವಹಣೆಯ ಆತಂಕವೇ ದೊಡ್ಡದು ಎನಿಸುವುದುಂಟು. ಈ ವರೆಗೆ ಅದನ್ನು ಯಶಸ್ವಿಯಾಗಿ ಮೀರಿದವರ ಉದಾಹರಣೆಗಳು ಈ ನಿಟ್ಟಿನಲ್ಲಿ ಸ್ಫೂರ್ತಿಯಾಗಬಲ್ಲವು. ಇಂತಹ ಸಂದರ್ಭಗಳಲ್ಲಿ ಮಕ್ಕಳಲ್ಲಿ ಕೀಳರಿಮೆ ಮೂಡದಂತೆ, ಬದುಕಿನ ಸೂಕ್ಷ್ಮಗಳನ್ನು ಗೊತ್ತುಮಾಡಿಕೊಳ್ಳುವಂತೆ ಜವಾಬ್ದಾರಿಯಿಂದ ಬೆಳೆಸುವುದು ಅಗತ್ಯ.
ಇಂದು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿಂಗಲ್‌ಪೇರೆಂಟ್ ಸಮುದಾಯಗಳು, ಕ್ಲಬ್‌ಗಳು ಅಸ್ತಿತ್ವದಲ್ಲಿವೆ. ಇಲ್ಲಿ ಪೆರೆಂಟ್‌ಗಳು ಪರಸ್ಪರ ಕಲೆತು ತಮ್ಮ ಅನುಭವ, ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಏಕಾಕಿಯಾಗಿ ಮಕ್ಕಳನ್ನು ಬೆಳೆಸುವಾಗ ಬರುವ ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆಗಳೂ ಇಲ್ಲಿ ಇರುತ್ತವೆ. ಅನಿವಾರ್ಯ ಸಂದರ್ಭಗಳಲ್ಲಿ ಸಮುದಾಯದ ಇದರ ಸದಸ್ಯರು ತಮ್ಮ ಮಗುವನ್ನು ಮತ್ತೊಬ್ಬ ಸಿಂಗಲ್ ಪೇರೆಂಟ್ ಮನೆಯಲ್ಲಿ ಬಿಡಬಹುದಾದ ಅವಕಾಶಗಳೂ ಇಲ್ಲಿರುತ್ತವೆ. ಒಬ್ಬರಿಗೊಬ್ಬರು ಆಸರೆಯಾಗುತ್ತಾ ಸಿಂಗಲ್ ಪೇರೆಂಟಿಂಗ್ ಅನ್ನು ಹೊರೆಯಾಗಿಸಿಕೊಳ್ಳದೆ ನಿಭಾಯಿಸುವ ಅನುಕೂಲವನ್ನು ಇಂತಹ ಸಮುದಾಯಗಳು ಮಾಡಿಕೊಡುತ್ತವೆ. ಈ ನೆಟ್‌ವರ್ಕ್ ಇನ್ನೂ ಚಿಗುರಿನ ಹಂತದಲ್ಲಿದ್ದು ಮತ್ತಷ್ಟು ಚಾಚಿಕೊಳ್ಳಬೇಕಿದೆ.

ಎರಡನೇ ಮದ್ವೆ ಗೆಲ್ಲುತ್ತಾ?

ಮ್ಯಾಟ್ರಿಮೊನಿಯಲ್  ವೆಬ್‌ಸೈಟಿನ ಮೂಲೆಯಲ್ಲೊಂದು ಜಾಹೀರಾತು ಪಿಳಿಪಿಳಿ ಅನ್ನುತ್ತಿದೆ.
`ನನ್ ಹೆಸ್ರು ಅನಾಮಿಕಾ. ಡೈವೋರ್ಸಿ. ವಯಸ್ಸು ೩೨. ರೆಪ್ಯುಟೆಡ್ ಕಂಪೆನಿ ಒಂದ್ರಲ್ಲಿ ಕೆಲಸ ಮಾಡ್ತಿದೀನಿ. ನಂಗೆ ನನ್ನ ಮಗೂನ ಅಕ್ಸೆಪ್ಟ್ ಮಾಡ್ಕೊಳ್ಳಬಲ್ಲ, ಒಳ್ಳೆ ಮನಸ್ಸಿನ, ಹ್ಯಾಂಡ್‌ಸಮ್ ಆಗಿರೋ ಗಂಡು ಬೇಕು. ಕ್ಯಾಸ್ಟ್  ನೋ ಬಾರ್.  ಮತ್ತೆ ಮದ್ವೆಯಾಗಿ ಲೈಫ್‌ನಲ್ಲಿ ಸೆಟಲ್ ಆಗ್ಬೇಕು ಅನ್ನೋದು ನನ್ನಾಸೆ ಅಷ್ಟೆ…’ ಅನ್ನುತ್ತಾ ಫೋಟೋ ಅಟ್ಯಾಚ್ ಮಾಡಿರುವ ಹೆಣ್ಣು ನಿಜಕ್ಕೂ ಚೆಂದವಿದ್ದಾಳೆ. ನಗುಮುಖದ ಒಳಗೆ ಎಲ್ಲೋ ನೋವಿನ ಎಳೆ ಕಂಡಂತಾಗುತ್ತೆ. ಅವಳ ಹುಡುಕಾಟ ಗೆದ್ದು, ಒಳ್ಳೆ ಗಂಡು ಕೈಹಿಡಿಯಲಿ ಅನ್ನೋ ಹಾರೈಕೆ ತಾನಾಗಿ ಹೊಮ್ಮಿದರೆ ಆಶ್ಚರ್ಯವೇನಿಲ್ಲ. ಇಷ್ಟು ಲಕ್ಷಣವಾಗಿರೋ ಹುಡುಗಿಯ ಮೊದಲನೆ ಗಂಡ ಅದು ಹೆಂಗೆ ಬಿಟ್ಟನಪ್ಪಾ!? ಅನ್ನುವ ಯೋಚನೆಯೂ ಸುಳಿದುಹೋಗದೆ ಇರದು. ಏನು ಮಾಡೋದು? ಮದುವೆ ಸ್ವರ್ಗದಲ್ಲಿ ನಿಶ್ಚಯವಾದ ಹಾಗೆ, ಡೈವೋರ್ಸ್‌ಗಳು ನರಕದಲ್ಲಿ ನಿಶ್ಚಯವಾಗಿಬಿಟ್ಟಿರುತ್ತವೆ.
ಹೆಣ್ಣುಮಕ್ಕಳ ಬದುಕು ಶುರುವಾಗೋದು ಮದುವೆಯ ನಂತರ ಅನ್ನೋದು ಹಳೆ ಮಾತು. ಹಾಗಂತ ತಪ್ಪು ಮಾತೇನಲ್ಲ. ಇವತ್ತಿನ ಹೆಣ್ಣುಗಳು  ಓದು, ದುಡಿಮೆ, ಸಾಧನೆಗಳ ಬೇರೆ ಬೇರೆ ದಿಕ್ಕಿನಲ್ಲಿ ಬದುಕು ಕಂಡುಕೊಳ್ಳುತ್ತಿದ್ದರೂ ಮದುವೆಗೆ ಕೊಡುವ ಇಂಪಾರ್ಟೆನ್ಸ್ ಕಡಿಮೆ ಏನೂ ಆಗಿಲ್ಲ. ಎಲ್ಲ ಯಶಸ್ಸುಗಳ ಜತೆಗೆ ಅಚ್ಚುಕಟ್ಟಾದ ಮನೆ, ಬೆಚ್ಚಗಿನ ಸಂಸಾರಕ್ಕೆ ನಮ್ಮ ಆದ್ಯತೆ ಇದ್ದೇ ಇದೆ. ಆದರೆ ಈ ಕನಸು ಕೈಗೂಡದೆ ಹೋದಾಗ? ಮದುವೆಯೇ ಬದುಕಾಗಿದ್ದ ದಿನಗಳಲ್ಲಿ, ಎಲ್ಲವೂ ಮುಗಿದುಹೋಯ್ತು ಅನ್ನೋ ನಿಶ್ಚಯಕ್ಕೆ ಬಂದುಬಿಡ್ತಿದ್ದರು. ಈಗಿನ ಸ್ಥಿತಿ ಗತಿ ಅಷ್ಟು ಸಂಕುಚಿತವಾಗಿಲ್ಲ. ಸಮಾನತೆ, ಮೌಲ್ಯ ಇತ್ಯಾದಿಗಳ ಜತೆಗೆ ಕುಸೀತಿರೋ ಗಂಡು ಹೆಣ್ಣು ಅನುಪಾತ ಬೇರೆ ಎರಡನೆ ಮದುವೆಯ ಅವಕಾಶಗಳನ್ನ ದೊಡ್ಡ ಸಂಖ್ಯೆಯಲ್ಲಿ ಕಟ್ಟಿಕೊಡುತ್ತಿದೆ.

ಅದು ಸರಿ, ಆದ್ರೆ…
ಅವಕಾಶಗಳು ಇದ್ದೇ ಇವೆ. ಕಾಲವೂ ಬದಲಾಗಿ ಎರಡನೆ ಮದುವೆ ಕಾಮನ್ ಆಗ್ತಿದೆ. ಎಲ್ಲಾ ಸರಿ. ಆದ್ರೆ… ಈ ಸೆಕೆಂಡ್ ಮ್ಯಾರೇಜ್ ಸಕ್ಸೆಸ್ ಆಗತ್ತಾ? ಹೊಸ ಸಂಗಾತಿ, ಹೊಸತೇ ಒಂದು ಪರಿಸರ, ಸಂಬಂಧಗಳು, ಎಲ್ಲ ಸೇರಿ ಗೋಜಲಾಗಿಬಿಟ್ರೆ? ಇಂಥದೊಂದು ಆತಂಕದ ಜೊತೆಗೇ ಹೆಣ್ಣೂಮಕ್ಕಳು ಮತ್ತೆ ಮದುವೆಯಾಗೋ ಬಗ್ಗೆ  ಯೋಚಿಸ್ತಾರೆ. ಇದಕ್ಕೆ ಕಾರಣ ಇಲ್ಲದಿಲ್ಲ. ಜಮಾನಾದಿಂದಲೂ ಗಂಡಿಗೆ ಹೆಣ್ಣು ತನ್ನೊಬ್ಬಳ ಸಂಗಾತಿಯಾಗಿರಬೇಕು ಅನ್ನುವ ಹಂಬಲ  ಇರೋದು ಮೊದಲ ಕಾರಣ. ಆದರೆ, ಇದು ತಪ್ಪು ಅಂತ ಹೇಳೋಕಾಗಲ್ಲ. ಇದು ಗಂಡಸಿನ ಇನ್‌ಬಿಲ್ಟ್ ಗುಣ. ಮೊದಲನೆಯ ಗಂಡ ಬದುಕಿಲ್ಲದೆ ಇದ್ದಾಗ ಎರಡನೆ ಮದುವೆಯಾದವರಿಗೆ ಈ ಸಮಸ್ಯೆ ಎದುರಾಗೋದು ಕಡಿಮೆ. ಡೈವೋರ್ಸ್ ನಂತರ ಮದುವೆಯಾದವರು ಸಾಮಾನ್ಯವಾಗಿ ಈ ವಿಷಯದಲ್ಲಿ ಹೊಸ ಸಂಗಾತಿಯ ಅನುಮಾನಗಳನ್ನು, ಅಸಹನೆಯನ್ನು ಎದುರಿಸಬೇಕಾಗುತ್ತೆ.
ಇಲ್ಲಿ ಮತ್ತೊಂದು ಭಾವನಾತ್ಮಕ ಸಮಸ್ಯೆಯೂ ಎದುರಾಗುತ್ತೆ. ಮಕ್ಕಳನ್ನು ಹೊಂದಿದ್ದು , ಎರಡನೆ ಮದುವೆಯ ಬಗ್ಗೆ ಯೋಚಿಸುವವರು ವಿಪರೀತ ತೊಳಲಾಟ ಅನುಭವಿಸ್ತಾರೆ. ವಯಸ್ಸಿದ್ದು, ಬದುಕಿಡೀ ಸಂಗಾತಿಯಿಲ್ಲದ ಒಂಟಿತನದಲ್ಲಿ ಕಳೆಯುವ ಯೋಚನೆಯೇ ಭಯಾನಕ ಎನಿಸುತ್ತಿರುವಾಗ, ಮಕ್ಕಳನ್ನು ಕಡೆಗಣಿಸಿ ಮದುವೆಯಾಗುವುದು ಹೇಗೆ ಎನ್ನುವ ಆತಂಕ. ಅಥವಾ ತನ್ನ ಎರಡನೆ ಮದುವೆಗೆ ಮಗು ಒಪ್ಪುತ್ತದೆಯೋ ಇಲ್ಲವೋ, ಅದು ಹೊಸ ಸಂಗಾತಿಯನ್ನು ಹೇಗೆ ಬರಮಾಡಿಕೊಳ್ಳುವುದೋ ಎನ್ನುವ ತುಮುಲ. ಇವನ್ನೆಲ್ಲ ಯೋಚಿಸಿ ಯೋಚಿಸಿಯೇ, ಅಂತಿಮವಾಗಿ ಒಂಟಿತನದ ಅನಿವಾರ್ಯತಯನ್ನೆ ಅಪ್ಪಿ ಮುಂದುವರೆಯುವವರು ಹೆಚ್ಚು.
ಹಾಗೊಮ್ಮೆ ಮಗುವನ್ನು ಒಪ್ಪಿಸಿ ಮದುವೆಯಾದರೆ ಇಂಥ ಸಮಸ್ಯೆ ಬರೋದಿಲ್ಲ ಅಂತಲ್ಲ. ಸಂಗಾತಿ ಸಹಜವಾಗಿ ತಾನೇ ಮೊದಲ ಆದ್ಯತೆಯಾಗಿರಬೇಕೆಂದು ಬಯಸುತ್ತಾನೆ. ಇತ್ತ ಮಗುವಿಗೂ ಅಮ್ಮನ ಮೊದಲ ಆದ್ಯತೆ ತಾನಾಗಿರಬೇಕೆಂಬ ನಿರೀಕ್ಷೆ ಇರುತ್ತೆ. ಮತ್ತೆ ಇವರಿಬ್ಬರಲ್ಲಿ ಯಾರು ಮೊದಲು? ಯಾರನ್ನ ಹೆಚ್ಚು ಫೋಕಸ್ ಮಾಡಬೇಕು? ಅನ್ನೋ ಗೊಂದಲದಲ್ಲಿ ಅವಳು ಹೈರಾಣಾಗುತ್ತಾಳೆ. ಈ ಗೊಂದಲ ಹೊಸ ಸಂಬಂಧದಲ್ಲಿ ಆಪ್ತತೆ ಬೆಳೆಯಲು ಅಡ್ಡಿಯಾಗುತ್ತೆ. ಇಷ್ಟು ಮಾತ್ರವಲ್ಲ, ಹಳೆ ಸಂಬಂಧದ ಬಗ್ಗೆಮತ್ತೆ ಮತ್ತೆ ಮಾತಾಡುತ್ತಲೇ ಇರುವುದು, ಆತನ ಬಗ್ಗೆ ಸಾಫ್ಟ್‌ಕಾರ್ನರ್ ವ್ಯಕ್ತಪಡಿಸೋದು ಕೂಡ ಈಗಿನ ಸಂಗಾತಿಯನ್ನ ಇರಿಟೇಟ್ ಮಾಡುತ್ತೆ.
ಹಾಗಂತ ಎರಡನೆ ಮದುವೆ ಸಕ್ಸಸ್ ಆಗೋದೇ ಇಲ್ಲ ಅಂತಲ್ಲ. ಅಥವಾ ಹಾಗೆ ಆಗುವ ಹೆಣ್ಣುಮಕ್ಕಳು ಎಲ್ಲವನ್ನೂ ಸಹಿಸ್ಕೊಂಡು ತಗ್ಗಿಬಗ್ಗಿ ನಡೀಬೇಕಂತಲೂ ಅಲ್ಲ. ಚೂರು ಜಾಣತನ, ಚೂರು ಕಾಂಪ್ರೊಮೈಸ್, ಮೊಗೆದಷ್ಟೂ ಪ್ರೀತಿ, ಬೆಟ್ಟದಷ್ಟು ಆತ್ಮವಿಶ್ವಾಸ – ಇಷ್ಟಿದ್ದರೆ ಸಾಕು. ಗಟ್ಟಿಮೇಳಕ್ಕೆ ಹೊತ್ತು ನಿಕ್ಕಿ ಮಾಡೋದೊಂದೇ ಬಾಕಿ!

ಬಹಳಷ್ಟು ಗೆದ್ದಿವೆ
ಯಾವಾಗಲೂ ಆಗೋದು ಹಾಗೇ. ಸಂಸಾರದಮಟ್ಟಿಗೆ ಗೆಲುವು ಅಷ್ಟು ಸುಲಭಕ್ಕೆ ಮನೆಮಾತಾಗೋದಿಲ್ಲ. ಅದೇನಿದ್ದರೂ ಸೋತವರ ಖಾತೆಯನ್ನ ತೆಗೆತೆಗೆದು ನೋಡುತ್ತೆ. ಮುರಿದುಬಿದ್ದ ಮನೆಗಳ ಬಗ್ಗೆ ಗಾಸಿಪ್ ಮಾಡೋದು, ಸುದ್ದಿ ಹರಡೋದು ಒಂಥರಾ ಕಡಿತದಂಥ ಖುಷಿ. ಈ ಕಾರಣದಿಂದ್ಲೇ ಗೆದ್ದು ಸುಖವಾಗಿರುವ ಎರಡನೆ ಮದುವೆಗಳ ಬಗ್ಗೆ ನಮ್ಮಲ್ಲಿ ಮಾಹಿತಿ ಕಡಿಮೆ. ಜೊತೆಗೆ, ಮರುಮದುವೆಗೆ ಮುಂಚೆ ಯೋಚಿಸಬೇಕಾದ ವಿಷಯಗಳು ಕೆಲವಿದೆ. ಯಾಕಾಗಿ ನಾನು ಈ ನಿರ್ಧಾರ ತೆಗೆದ್ಕೊಳ್ತಿದ್ದೇನೆ ಅನ್ನುವುದು ಮೊದಲು ಸ್ಪಷ್ಟವಿರಬೇಕು. ಮನೆಯವರ ಒತ್ತಾಯಕ್ಕೋ ಯಾರೋ ಪ್ರಪೋಸ್ ಮಾಡಿ ಬಲವಂತ ಮಾಡಿದರೆಂದೋ ಕೊರಳೊಡ್ಡಿದರೆ, ಆಮೇಲೆ ಪಾಡು ಪಡಬೇಕಾಗುತ್ತದೆ. ಅಗತ್ಯ, ಅನಿವಾರ್ಯತೆಗಳ ಜೊತೆಗೆ, ಯಾರೊಡನೆ ಪ್ರೇಮದಿಂದಲೂ ಇರಲು ಸಾಧ್ಯವಾಗಬಹುದು ಎನ್ನಿಸುತ್ತದೆಯೋ ಅಂಥವರನ್ನೆ ಆಯ್ಕೆ ಮಾಡಿಕೊಳ್ಳಿ. ಆಯ್ಕೆಯೊಂದು ಸರಿಯಾಗಿದ್ದುಬಿಟ್ಟರೆ, ಸುಖ ಬದುಕಿನ ಕನಸು ಮುಕ್ಕಾಲು ನೆರವೇರಿದಂತೆಯೇ.
************************
ಸಕ್ಸಸ್ ಸೂಕ್ತಿ
ಚೂರು ಜಾಗ್ರತೆಯಾಗಿ  ಹೆಜ್ಜೆಯಿಟ್ಟರೆ ಎರಡನೆ ಮದುವೆಯನ್ನ ಸಿಹಿಯಾಗಿಸ್ಕೊಳ್ಳಬಹುದು. ಬಹಳಷ್ಟು ಬಾರಿ ನಮ್ಮ ಸೆಕೆಂಡ್ ಚಾಯ್ಸೇ ಗೆದ್ದಿರುತ್ತೆ ಅಲ್ವೆ?
* ಬದುಕಿನ ಪ್ರತಿ ಕ್ಷಣ ಹೊಸತು. ಹೊಸ ಸಂಬಂಧ, ಹೊಸ ಸಂಗಾತಿಯೊಂದಿಗೆ ಬದುಕನ್ನೂ ನವೀಕರಿಸಿಕೊಳ್ಳಿ. ಮುಗಿದುಹೋದ ಬದುಕನ್ನ ನೆನಪಿನ ಕೋಶದಿಂದ ಪೂರ್ತಿ ಖಾಲಿ ಮಾಡಿ.
* ಮಗು ಇದ್ದರೆ, ಮರುಮದುವೆಗೆ ಮುಂಚೆ ನಿಮ್ಮ ಸಂಗಾತಿ ಹಾಗೂ ಮಗು- ಇಬ್ಬರಿಗೂ ಒಡನಾಟಗಳನ್ನ ಏರ್ಪಡಿಸಿ. ಅವರಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡಲಿ. ಅವರಿಬ್ಬರಲ್ಲಿ ಯಾವ ಹೊಂದಾಣಿಕೆಯೂ ಸಾಧ್ಯವಾಗ್ತಿಲ್ಲ ಅನ್ನಿಸಿದರೆ, ಮದುವೆ ಯೋಚನೆ ಬಿಟ್ಟುಬಿಡಿ. ಯಾಕಂದರೆ ಆಮೇಲಿನ ಸಂಸಾರ ಖಂಡಿತ ಬಿರುಕು ಬಿಡುವುದು. ಮುರಿದ ಮನೆಯಲ್ಲಿ ಬದುಕೋದಕ್ಕಿಂತ ಕಟ್ಟದೆ ಇರುವ ಮನೆಯಲ್ಲಿ ಬದುಕೋದೇ ಒಳ್ಳೆಯದು.
* ಎರಡನೆ ಮದುವೆಗೆ ಸಂಗಾತಿಯನ್ನ ಆಯ್ದುಕೊಳ್ಳುವಾಗ ಏನೆಲ್ಲವನ್ನು ಪರಿಗಣಿಸಿದ್ದೀರಿ? ಪ್ರಾಮಾಣಿಕವಾಗಿ ಯೋಚಿಸಿ. ನಿರೀಕ್ಷೆಗಳಿಗೆ ಕಡಿವಾಣ ಇರಲಿ. ಮಿ.ರೈಟ್ ಸ್ವರ್ಗದಲ್ಲೂ ಸೃಷ್ಟಿಯಾಗೋದಿಲ್ಲ. ಮೊದಲ ಸಂಗಾತಿಯಲ್ಲಿದ್ದ ಕೊರತೆಗಳನ್ನೆಲ್ಲ ಇವರು ತುಂಬಿಕೊಡಬೇಕು ಅಂತ ಬಯಸೋದು ಪೆದ್ದುತನವಷ್ಟೆ.

ಅಭಿವ್ಯಕ್ತಿಗಿರಲಿ ಅವಕಾಶ…

ಇದನ್ನ ಅಪ್ಪ ಮಗಳ ಕಥೆಯಿಂದ ಶುರು ಮಾಡೋಣ.
ಆತನಿಗೆ ಮಗಳೆಂದರೆ ತುಂಬಾ ಪ್ರೀತಿ. ತಾನು ಏನು ಮಾಡಿದರೂ ಅವಳ ಒಳ್ಳೆಯದಕ್ಕೇ ಅನ್ನುವ ನೆಚ್ಚಿಕೆ. ಒಮ್ಮೆ ಅವನು ಮಗಳನ್ನ ಕರೆದುಕೊಂಡು ಅಮ್ಯೂಸ್‌ಮೆಂಟ್‌ಪಾರ್ಕಿಗೆ ಹೊರಡ್ತಾನೆ. ದಾರಿಯಲ್ಲಿ ಒಂದು ದೊಡ್ಡ ಐಸ್‌ಕ್ರೀಮ್ ಪಾರ್ಲರ್. ಅದರ ಹತ್ತಿರ ಬರ್ತಿದ್ದ ಹಾಗೇ ಮಗಳು, `ಅಪ್ಪಾ…’ ಅನ್ನುತ್ತಾಳೆ. ಆತ ಕಾರ್ ನಿಲ್ಲಿಸಿ, `ಹಾ, ಹಾ… ನನಗ್ಗೊತ್ತು, ತರ್ತೀನಿ ಇರು…’ ಅನ್ನುತ್ತಾ ಹೋಗಿ ದೊಡ್ಡ ಸ್‌ಕ್ರೀಮ್ ಕೋನ್ ತರುತ್ತಾನೆ.
ಮುಂದೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮಗಳು ಮತ್ತೆ `ಅಪ್ಪಾ…’ ಅನ್ನುತ್ತಾಳೆ. ಅವಳು ಹಾಗಂದ ಕಡೆ ಮುಸುಕಿನ ಜೋಳದ ಗಾಡಿಯವ ಇರುತ್ತಾನೆ. ಅಪ್ಪ ಮುಗುಳ್ನಕ್ಕು, `ನೀನು ಕೇಳೋದೇ ಬೇಡ…’ ಅನ್ನುತ್ತಾ ಅದನ್ನೂ ತಂದು ಮಗಳ ಬಾಯಿಗಿಡುತ್ತಾನೆ. ಅಮ್ಯೂಸ್‌ಮೆಂಟ್ ಪಾರ್ಕ್ ತಲುಪೋವರೆಗೂ ಮಗಳು ತುಟಿಪಿಟಕ್ ಅನ್ನುವುದಿಲ್ಲ. ಅಲ್ಲಿ ಇಳೀತಿದ್ದ ಹಾಗೇ ಅಪ್ಪ ಜೈಂಟ್‌ವೀಲ್‌ಗೆ ಟಿಕೆಟ್ ಕೊಂಡು ತರುತ್ತಾನೆ. ಅದನ್ನು ಏರುವ ಮೊದಲೇ ಮಗಳು ವಾಮಿಟ್ ಮಾಡಲು ಶುರುವಿಡುತ್ತಾಳೆ. ಅಪ್ಪನಿಗೆ ಆತಂಕ. `ನಾನು ನಿನಗಾಗಿ ಇಷ್ಟೆಲ್ಲಾ ಮಾಡಿದೆ, ನಿನಗೆ ವಾಮಿಟ್ ಬರತ್ತೆ ಅಂತ ಮೊದಲೇ ಹೇಳೋಕೆ ಏನಾಗಿತ್ತು?’ ಅಂತ ಗದರುತ್ತಾನೆ. ಮಗಳು ಕಣ್ತುಂಬಿಕೊಂಡು, `ನಾನು ಮನೆಯಿಂದ ಅದನ್ನ ಹೇಳ್ಬೇಕಂತನೇ ನಿನ್ನ ಕರ್‍ದೆ. ನೀನು ನಂಗೆ ಮಾತಾಡಕ್ಕೆ ಬಿಡ್ಲೇ ಇಲ್ಲ. ನಂಗೆ ಈ ಅಮ್ಯೂಸ್‌ಮೆಂಟ್ ಪಾರ್ಕ್ ಇಷ್ಟ ಇಲ್ಲ. ಭಯ ಆಗತ್ತೆ ಇದರಲ್ಲೆಲ್ಲ ಕೂರೋದಿಕ್ಕೆ’  ಅನ್ನುತ್ತಾಳೆ.
ಮಗಳನ್ನ ಸಾಧ್ಯವಾದಷ್ಟು ಖುಷಿಯಾಗಿಡಬೇಕು ಅಂತ ಟ್ರೈ ಮಾಡೋ ಅಪ್ಪ, ಯಾವುದರಿಂದ ಅವಳು ಖುಷಿಯಾಗಿರ್ತಾಳೆ ಅಂತ ತಿಳ್ಕೊಳೋ ಗೋಜಿಗೇ ಹೋಗೋದಿಲ್ಲ. ಮಗಳು ಕೂಡ ಅಪ್ಪನಿಗೆ ಬೇಜಾರಾಗಬಾರ್ದು ಅಂತ ಎಲ್ಲವನ್ನೂ ಅಕ್ಸೆಪ್ಟ್ ಮಾಡ್ತಾ ಇರ್ತಾಳೆ. ತನಗೆ ಇಂಥಾದ್ದು ಬೇಕು ಅಂತ ಬಾಯಿಬಿಟ್ಟು ಕೇಳೋದಿಲ್ಲ. ಇದರಿಂದ ಒಂದಕ್ಕೊಂದು ಇಂಟರ್‌ಲಿಂಕ್ ಹೊಂದಿದ ಸಮಸ್ಯೆಗಳ ದೊಡ್ಡ ಚೈನ್ ಕುತ್ತಿಗೆಗೆ ಉರುಳಾಗುತ್ತೆ. ಹೀಗೆ ಭಾವನೆಗಳನ್ನ ಅದುಮಿಟ್ಟುಕೊಳ್ಳೋದು, ಎಕ್ಸ್‌ಪ್ರೆಸ್ ಮಾಡದೆ ಇದ್ದುಬಿಡೋದು ಇದೆಯಲ್ಲ, ಇದನ್ನೇ ರಿಪ್ರೆಶನ್ ಅನ್ನೋದು. ಹೀಗೆ ಮನಸಿನ ಮೂಲೆಗೆ ದಬ್ಬಿಟ್ಟ ಅನ್ನಿಸಿಕೆಗಳು, ಬಯಕೆಗಳೆಲ್ಲ ಯಾವತ್ತೋ ಒಂದಿನ ವಾಲ್ಕೆನೋ ಥರ ಉಕ್ಕಿ ಹರಿದು, ತಮಗೂ ಇತರರಿಗೂ ಸಾಕಷ್ಟು ಕಿರುಕುಳ ಕೊಡುವುದು.
`ರಿಪ್ರೆಶನ್’ ಬರೀ ಪರ್ಸನಲ್ ಲೆವೆಲ್ ಮಾತ್ರ ಅಲ್ಲ, ಆಡಳಿತ, ದುಡ್ಡು ಈ ಥರದ ಲೆವೆಲ್‌ಗಳಲ್ಲೂ ಸರಿಸುಮಾರು ಇದೇ ಅರ್ಥದ ಬೇರೆ ಆಯಾಮಗಳಲ್ಲಿಯೂ ಇರುತ್ತದೆ.  ಮನಸ್ಸನ್ನ ಅದುಮಿಟ್ಟುಕೊಳ್ಳುವ ಸೈಕಿಕ್ ರಿಪ್ರೆಶನ್ ಹಲವು ಮಾನಸಿಕ ಸಮಸ್ಯೆಗಳ ತಾಯಿ ಎನ್ನುತ್ತದೆ ಸೈಕಾಲಜಿ. ಇದು ಕೀಳರಿಮೆ, ಹೊಟ್ಟೆಕಿಚ್ಚು, ಸ್ಪರ್ಧೆ, ವಿಕೃತಿಗಳನ್ನು ಪ್ರಚೋದಿಸುತ್ತದೆ.
ಮನೆಮನೆ ಕಥೆ
ಅಪ್ಪ ಅಮ್ಮನಿಗೆ, ಮಕ್ಕಳಿಗೇನು ಬೇಕು ಅನ್ನೋದು ತಮಗೆ ಚೆನ್ನಾಗಿ ಗೊತ್ತಿದೆ ಅನ್ನುವ ಓವರ್ ಕಾನಿಡೆನ್ಸ್. ಗಂಡನಿಗೆ, ಹೆಂಡತಿಗಿಂತ ತಾನು ಚೆನ್ನಾಗಿ ತಿಳಿದವನು, ವ್ಯವಹಾರ ಬಲ್ಲವನು ಅನ್ನುವ ಜಂಭ. ಹಿರಿಯರಿಗೆ ತಾವು ಅನುಭವಸ್ಥರೆನ್ನುವ ಮೇಲರಿಮೆ. ಇಂತಹ ತಮಗೆ ತಾವೇ ಆರೋಪಿಸಿಕೊಂಡ ಗುಣಗಳಿಂದ ಗೊತ್ತೇ ಆಗದಂತೆ ಮತ್ತೊಬ್ಬರ ಮಾತನ್ನು, ಸ್ಪೇಸ್ ಅನ್ನು ಕಸಿಯುತ್ತಿರುತ್ತಾರೆ. ಕೆಲವೊಮ್ಮೆ ಒಂದು ಬದಿಯಲ್ಲಿರುವವರ ಈ ಥರದ ಮೇಲ್ಮೆ ನಿಜವೂ ಆಗಿರುತ್ತದೆ. ಹಾಗಂತ ತಮ್ಮ ಅಭಿಪ್ರಾಯವನ್ನೇ ಎಲ್ಲರ ಮೇಲೆ ಹೇರುತ್ತ ಹೋದರೆ, ಆಯಾ ಸಂದರ್ಭಗಳಲ್ಲಿ ಸುಮ್ಮನಿರುವ ಉಳಿದ ಸದಸ್ಯರು ಇನ್ಯಾವುದೋ ದಿನ ಕಹಿಯನ್ನೆಲ್ಲ ಹೊರಹಾಕುತ್ತಾರೆ. ಅಕಾರಣ ವಾಗ್ವಾದಗಳು, ಅಸಹನೆಗಳಿಂದಾಗಿ ಮನಸುಗಳು ಮುರಿಯುತ್ತ ಹೋಗುತ್ತವೆ. ಯಾಕೆಂದರೆ, ಪ್ರತಿ ವ್ಯಕ್ತಿಯೂ ತನ್ನ ಇರುವಿಕೆ ಐಡೆಂಟಿಫೈ ಆಗಲೆಂದು ಬಯಸುತ್ತಾನೆ. ಒಂದು ಚಿಕ್ಕ ಮಗುವಿನಿಂದ ಹಿಡಿದು ಮುದುಕರವರೆಗೂ `ತಮ್ಮ ಅಭಿಪ್ರಾಯವನ್ನೂ’ ಕೇಳಬೇಕೆಂದು ಅಂದುಕೊಳ್ಳುತ್ತಾರೆ. ಇದು ಸಹಜ. ಮನೆಯ ಹಿರಿಯರು ಅಂತಿಮ ನಿರ್ಧಾರ ಏನೇ ತೆಗೆದುಕೊಳ್ಳಿ, ಎಲ್ಲರೊಡನೆ ಕುಳಿತು ಡಿಸ್ಕಸ್ ಮಾಡೋದು ಅಗತತ್ಯ. ಹಾಗೆ ಮಾಡಿದಾಗ ಎಲ್ಲರಿಗೂ ಸಮಾಧಾನ ಮೂಡುತ್ತದೆ ಮಾತ್ರವಲ್ಲ, ಒಂದು ಹಾರ್ಮೊನಿಯಸ್ ಆದ ನಿರ್ಧಾರ ತೆಗೆದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ ಕೂಡ.

ಸುಮ್ಮನಿದ್ದರೆ ಸೋಲು
ಸಾಮಾನ್ಯವಾಗಿ ರಿಪ್ರೆಶನ್‌ನಲ್ಲಿ ಇರುವವರಿಗೆ ಅದರ ಅರಿವಿರುತ್ತದೆ. ಬೇರೆಯವರ ಮಾತಿಗೆ ನಾನು ತಾಳ ಹಾಕಬೇಕು, ನನಗೆ ನನ್ನದೇ ಆದ ಬದುಕಿಲ್ಲ ಅನ್ನುವ ಗೊಣಗಾಟ ಇಂಥವರಲ್ಲಿ ಸಾಮಾನ್ಯ. ತಮ್ಮ ಅನ್ನಿಸಿಕೆಗಳನ್ನ ಹೇಳಿಕೊಳ್ಳೋದಕ್ಕೆ ಬೇರೆಯವರು ಅವಕಾಶ ಕೊಡಲೆಂದು ಕಾಯುತ್ತಾ ಕೂರೋದು ಸರಿಯಲ್ಲ. ಎಕ್ಸ್‌ಪ್ರೆಸ್ ಮಾಡೋದು ಕೂಡ ಒಂದು ಕೌಶಲ್ಯ. ತಮ್ಮ ಒಪೀನಿಯನ್ ಬಗ್ಗೆಯೂ ಒಮ್ಮೆ ಯೋಚಿಸುವಂತೆ ನಿರೂಪಿಸುವ ಜಾಣತನ ರೂಢಿಸ್ಕೊಳ್ಳಬೇಕು. ಅನ್ನಿಸಿದಾಗೆಲ್ಲ ಮಾತಾಡಿಬಿಡಬೇಕು. ತಮ್ಮ ಬೇಕು ಬೇಡಗಳನ್ನು ಸ್ಪಷ್ಟ ಹೇಳಿಕೊಳ್ಳಬೇಕು. ಹಾಗೆಲ್ಲ ಅನ್ನಿಸಿದ್ದನ್ನು ಹೇಳುತ್ತ ಹೋದರೆ ಎಲ್ಲಿ ಇತರ ಪ್ರಿವಿಲೇಜ್‌ಗಳನ್ನ ಕಳ್ಕೊಳ್ಳಬೇಕಾಗುತ್ತೋ ಎಂದು ಹೆದರಿ ಸುಮ್ಮನಿದ್ದರೆ ರಿಪ್ರೆಶನ್‌ನಿಂದ ಹೊರಬರಲು ಸಾಧ್ಯವೇ ಇಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದೆ ಉಂಟಾಗುವ ರಿಪ್ರೆಶನ್ ಕ್ರಮೇಣ ಜನರ ಭಯ, ಹಿಂಜರಿಕೆ, ಕೀಳರಿಮೆಗಳ ಮೊತ್ತವಾಗಿ ಹಬ್ಬುತ್ತಾ ವ್ಯಕ್ತಿಯ ಅಂತಃಸ್ಸತ್ವವನ್ನೇ ಹೀರಿಬಿಡುತ್ತದೆ. ಇಂತಹ ಸಂದರ್ಭದಲ್ಲಿ ಅವರನ್ನು ಪ್ರೀತಿ ವಿಶ್ವಾಸಗಳಿಂದ ಹೊರಮುಖಿಯಾಗಿಸಬೇಕು. ಮಾತಾಡಲು, ಸ್ವತಃ ಡಿಸಿಶನ್ಸ್ ತೆಗೆದುಕೊಳ್ಳಲು ಬಿಡಬೇಕು. ಅವರಿಗೆ ತಾವೆಷ್ಟು ಇಂಪಾರ್ಟೆನ್ಸ್ ಕೊಡುತ್ತೇವೆ ಎಂಬುದು ಎದ್ದು ತೋರುವಂತೆ ವರ್ತಿಸಬೇಕು. ಹೀಗೆ ಮಾಡುವುದರಿಂದ ಆ ವ್ಯಕ್ತಿ ಮಾತ್ರ ಅಲ್ಲ, ಮನೆಯೂ ಖುಷಿಯ ಆರೋಗ್ಯದಿಂದ ಸೊಂಪಾಗಿರುತ್ತದೆ.

ಮಲೆಗಳಲ್ಲಿ ಮದುಮಗಳು- ರಂಗ ಪ್ರಯೋಗ ಮತ್ತು ಪ್ರಸ್ತುತತೆ

ಹೊರ ನೋಟಕ್ಕೆ ನಾವೆತ್ತಲೋ ಸಾಗಿಬಿಟ್ಟಿದ್ದೇವೆ, ಚಂದ್ರನನ್ನು ಜೇಬೊಳಗಿಟ್ಟುಕೊಂಡಿದ್ದೇವೆ ಎನ್ನುವಂತೆ ಕಂಡರೂ ಭಾರತೀಯ ಸಂದರ್ಭದಲ್ಲಿ ಕೌಟುಂಬಿಕ, ಸಾಮಾಜಿಕ ಸಂಗತಿಗಳು ಅವೇ ಹಳೆಯ ಹಳವಂಡಗಳನ್ನೆ ಹೊತ್ತುಕೊಂಡಿವೆ. ಮಲೆಗಳಲ್ಲಿ ಮದುಮಗಳು ರಂಗಪ್ರಯೋಗದ ಪ್ರಸ್ತುತತೆಯ ಬಗ್ಗೆ ಚರ್ಚಿಸುವಾಗ ಈ ಅಂಶವನ್ನು ಗಮನಿಸಬೇಕಾಗುತ್ತದೆ.

ಹತ್ತೊಂಭತ್ತನೇ ಶತಮಾನದ ಕಥಾವಸ್ತುವುಳ್ಳ ಕಾದಂಬರಿಯೊಂದು ಇಪ್ಪತ್ತನೇ ಶತಮಾನದಲ್ಲಿ ಬರೆಯಲ್ಪಟ್ಟಾಗ ಒಂದು ಸಂಚಲನವನ್ನು ಹುಟ್ಟು ಹಾಕಿತ್ತು. ರಾಮಾಯಣ ದರ್ಶನಮ್‌ ಬರೆದ ಕುವೆಂಪು ಮಲೆಗಳಲ್ಲಿ ಮದುಮಗಳು ಮಹತ್ಕೃತಿಯನ್ನು ಬರೆದಾಗ ಆ ಕಾಲಘಟ್ಟದಲ್ಲಿ ಅದನ್ನು ಮೆಚ್ಚಿಕೊಂಡವರಿಗಿಂತ ತೇಲಿಸಿ ಮಾತನಾಡಿದವರೇ ಹೆಚ್ಚು. ಕುವೆಂಪು ಅವರಿಂದ ಇಂತಹ ನವಿರು ವಸ್ತುವಿನ, ಅಷ್ಟೇ ಸಂಕೀರ್ಣವಾದ, ಅಗಾಧ ಸಾಧ್ಯತೆಗಳ ಕಾದಂಬರಿಯನ್ನು ಅಂದಿನವರು ನಿರೀಕ್ಷಿಸಿರಲಿಲ್ಲವೇನೋ. ಕನ್ನಡ ಕಾದಂಬರಿ ಪ್ರಕಾರಕ್ಕೆ ತನ್ನ ವಿಶಿಷ್ಟ ನಿರೂಪಣಾ ತಂತ್ರ, ರಚನಾ ಕ್ರಮ ಹಾಗೂ ಪ್ರಮಾಣಗಳಿಂದ ಬಹು ಮುಖ್ಯ ಕೊಡುಗೆ ಕೊಟ್ಟ ಕೃತಿ ಇದಾಗಿತ್ತು.
ಕಾದಂಬರಿಯ ಪ್ರಸ್ತಾವನೆಯಲ್ಲಿಯೇ ‘ಇಲ್ಲಿ ಯಾರೂ ಮುಖ್ಯರಲ್ಲ; ಇಲ್ಲಿ ಯಾರೂ ಅಮುಖ್ಯರಲ್ಲ; ಇಲ್ಲಿ ಯಾವುದು ಯಃಕಶ್ಚಿತವಲ್ಲ’ ಎಂಬ ದಾರ್ಶನಿಕ ಹೇಳಿಕೆಯ ಮೂಲಕ ಪ್ರವೇಶ ಒದಗಿಸುವ ಕುವೆಂಪು, ಅದನ್ನು ಹೇಗೆ ಓದಿಕೊಳ್ಳಬೇಕೆಂದು ಸೂಕ್ಷ್ಮವಾಗಿ ಸೂಚಿಸುತ್ತಾರೆ.  ಈ ಸೂಚನೆಯ ಬೆರಳು ಹಿಡಿದು ನಡೆದ ರಂಗಕರ್ಮಿ ಸಿ.ಬಸವಲಿಂಗಯ್ಯನವರು ’…ಮದುಮಗಳು’ ಕಾದಂಬರಿಯನ್ನು ಅದರ ಯಾವ ಸತ್ವವೂ ನಷ್ಟವಾಗದಂತೆ ರೂಪಾಂತರಿಸಿ ಬೃಹತ್ ನಾಟಕವಾಗಿಸಿದ್ದಾರೆ. ಈ ರಂಗ ರೂಪಾಂತರವು ಕಾದಂಬರಿಯ ಮರು ಓದಿಗೆ ಅಥವಾ ಮೊದಲ ಓದಿಗೆ ತುಡಿಯುವಂತೆ ಮಾಡುತ್ತದೆ. ಆದರೆ ಈ ಓದು ಇಂದಿನ ಪೀಳಿಗೆಯನ್ನು ಯಶಸ್ವಿಯಾಗಿ ತಟ್ಟುತ್ತದೆಯೆ? ಅಥವಾ ಕೇವಲ ಹಳ್ಳಿ ಬಿಟ್ಟು ನಗರ ಸೇರಿದವರ ಹಾಗೂ ಜೀವನದ ಮುಸ್ಸಂಜೆಯಲ್ಲಿರುವವರ ನೆನಪಿನ ಹಳಹಳಿಕೆಯನ್ನು ತೃಪ್ತಗೊಳಿಸುವುದಕ್ಕೆ ಸೀಮಿತವಾಗುತ್ತದೆಯೆ? ಇಂತಹ ಸಂದರ್ಭದಲ್ಲಿ ಕಾದಂಬರಿಯ ರಂಗ ಪ್ರಯೋಗ ಇಂದಿನ ಪೀಳಿಗೆಯ ಮೇಲೆ ಯಾವ ಬಗೆಯಿಂದ ಪ್ರಭಾವ ಬೀರಬಲ್ಲದು? ಪ್ರಶ್ನೆಗಳು ಸಹಜ.
ಒಂದು ರಂಗಪ್ರಯೋಗದ ಹಿಂದೆ ಇಷ್ಟೆಲ್ಲ ಜಿಜ್ಞಾಸೆ ಏಳುವಂತಾಗಿದ್ದು ಸುಮ್ಮನೆಯಲ್ಲ. ಮಲೆಗಳಲ್ಲಿ ಮದುಮಗಳು ಕಾದಂಬರಿಯು ರಂಗ ರೂಪಾಂತರವಾಗಲಿದೆ ಎಂದಾಗ ಅಚ್ಚರಿ ಮತ್ತು ಮೆಚ್ಚುಗೆಗಳ ಜೊತೆಗೆ ಅಪಸ್ವರಗಳೂ ಮೂಡಿದ್ದವು. ಕಳೆದೊಂದು ದಶಕದಿಂದ ನಿತ್ಯ ಬರಗಾಲದಲ್ಲಿರುವ ರಾಜ್ಯಕ್ಕೆ ಕೋಟ್ಯಂತರ ರೂಪಾಯಿ ಖರ್ಚಿನ ಈ ಪ್ರಯೋಗದ ಅವಶ್ಯಕತೆ ಏನಿದೆ ಎಂಬ ಆಕ್ಷೇಪ ಹುಟ್ಟಿಕೊಂಡಿತ್ತು. ಆದರೆ ಅದು ವ್ಯಾಪಕ ಚರ್ಚೆಗೆ ಒಳಗಾಗಲಿಲ್ಲ. ಈ ನಾಟಕದ ಮೌಲಿಕತೆ ಹಾಗೂ ಕಾದಂಬರಿ ಕಟ್ಟಿಕೊಡುವ ಆಶಯಗಳು ನಮ್ಮ ರಾಜ್ಯದ ಸಾಂಸ್ಕೃತಿಕ ಅಗತ್ಯವೂ ಆಗಿತ್ತಾದ್ದರಿಂದ ಯಾರೂ ಈ ಚರ್ಚೆಯನ್ನು ಬೆಳೆಸಲಿಲ್ಲ ಅನ್ನಿಸುತ್ತದೆ. ಬಹುಶಃ ಮದುಮಗಳು ನಾಟಕದ ಪ್ರಸ್ತುತತೆಗೆ ಈ ಒಂದು ಘಟನೆ ಕನ್ನಡಿಯಾಗಬಹುದು. ಈ ರಂಗ ರೂಪಾಂತರವು ವೈಚಾರಿಕ ಪ್ರಚೋದನೆ ನೀಡುವುದಕ್ಕಿಂತ ಹೆಚ್ಚಾಗಿ ಮತ್ತು ಮುಖ್ಯವಾಗಿ ಸಂಸ್ಕೃತಿಯ ಬೇರುಗಳೊಂದಿಗೆ ಪೀಳಿಗೆಯನ್ನು ಬೆಸೆಯುವ ಕೆಲಸ ಮಾಡುತ್ತದೆ. ರಾಮಾಯಣ ದರ್ಶನಮ್‌ನಷ್ಟೇ ಪ್ರಮುಖವಾದ ಈ ಕೃತಿಯ ಪಾತ್ರಗಳನ್ನು ಕಾಲಾನುಕಾಲಕ್ಕೆ ಕನ್ನಡಿಗರ ಮನಸಿನಲ್ಲಿ ಉಳಿಸುವ, ಅವುಗಳನ್ನು ಸಂಕೇತಗಳಾಗಿ ಬಿಂಬಿಸುವ ಹಾಗೆಯೇ ಮುಂದಿನ ಬರಹಗಳಲ್ಲಿ ರೂಪಕಗಳಾಗಿ ಒದಗಿ ಬರುವ ಸಾಧ್ಯತೆಯನ್ನು ಈ ನಾಟಕ ಜೀವಂತವಾಗಿಡುತ್ತದೆ.

ಇಂದಿಗೆ ಸಲ್ಲುವಂತೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಸಿಕ್ಕ ಪ್ರತಿಕ್ರಿಯೆ ನಿರೀಕ್ಷಿತವೇ ಆಗಿತ್ತು. ಆದರೆ ಇದು ಬೆಂಗಳೂರಿನಲ್ಲಿ ಅದ್ಭುತವಾದ ಯಶಸ್ಸಿನೊಂದಿಗೆ ಪ್ರದರ್ಶನಗೊಳ್ಳುತ್ತಿದೆ. ವಿಶೇಷವಾಗಿ ವಾರಾಂತ್ಯಗಳಲ್ಲಿ ಪ್ರೇಕ್ಷಕರು, ಅದರಲ್ಲಿಯೂ ಯುವ ಜನರು ಕಲಾಗ್ರಾಮದತ್ತ ಧಾವಿಸುತ್ತಿದ್ದಾರೆ. ರಂಗಪ್ರಯೋಗದ ವಿನೂತನ ಶೈಲಿ, ಅಭೂತಪೂರ್ವ ರಂಗಸಜ್ಜಿಕೆಗಳು ಹಾಗೂ ಪ್ರಚಾರಗಳು ಈ ಯಶಸ್ಸಿಗೆ ಎಷ್ಟು ಕಾರಣವೋ ಕಾದಂಬರಿಯ ಮೂಲಸತ್ವವೂ ಅಷ್ಟೇ ಕಾರಣವಾಗಿದೆ. ಎರಡು ತಲೆಮಾರುಗಳಷ್ಟು ಹಿಂದಿನ ತಲ್ಲಣಗಳು, ಸಾಮುದಾಯಿಕ ಆತಂಕಗಳು, ಭೇದ ಭಾವಗಳೆಲ್ಲವೂ ಇಂದಿನ ಹೊಸ ರೂಪದಲ್ಲಿ ಆದರೆ ಅಷ್ಟೇ ಪ್ರಸ್ತುತವಾಗಿ ಇರುವುದರಿಂದ ಕಥಾವಸ್ತುವಿನ ಜೊತೆಗೆ ಈ ತಲೆಮಾರಿನ ಪ್ರೇಕ್ಷಕರು ತಮ್ಮನ್ನು ತಾವು ಕನೆಕ್ಟ್ ಮಾಡಿಕೊಳ್ಳಬಲ್ಲರು.
ಉದಾಹರಣೆಗೆ ಕಾದಂಬರಿಯಲ್ಲಿ ಬರುವ, ರಂಗ ಪ್ರಯೋಗದಲ್ಲಿ ಸೊಗಸಾಗಿ ಅಳವಡಿಸಿಕೊಂಡಿರುವ ಬೆಟ್ಟಳ್ಳಿ ದೇವಯ್ಯನ ಬೀಸೇಕಲ್ಲು ಸವಾರಿ. ಬೈಸಿಕಲ್ಲನ್ನು ಅಂದಿನ ಜನರು ಭೀತಿ ಬೆರಗಿನಿಂದ ನೋಡಿದ್ದನ್ನು ಇಂದಿನವರು  ರಿಲೇಟ್ ಮಾಡಿಕೊಳ್ಳಬಲ್ಲರು. ನಿರಾಕರಿಸುತ್ತಲೇ ಅನುಮಾನದಿಂದ ನೋಡುತ್ತಲೇ ಹೊಸತನ್ನು ಒಪ್ಪಿಕೊಳ್ಳುವ ಮನಸ್ಥಿತಿ ಅಂದಿಗೂ ಇಂದಿಗೂ ಹಾಗೇ ಇದೆ. ಹೊಸತರ ಆಗಮನ ಕೆಡುಕನ್ನೇ ತರುತ್ತದೆ ಎನ್ನುವ ಹಳಬರ ಹೊಯ್ಲು, ಹೊರಗಿನದ್ದೆಲ್ಲವೂ ಶ್ರೇಷ್ಠ ಎನ್ನುವ ಯುವ ಜನಾಂಗದ ಮೂಢ ನಂಬಿಕೆಗಳು ಸೇರಿದಂತೆ ಎರಡು ತಲೆಮಾರುಗಳ ಸಂಘರ್ಷವೂ ಸಾರ್ವಕಾಲಿಕ.
ಹೊರ ನೋಟಕ್ಕೆ ನಾವೆತ್ತಲೋ ಸಾಗಿಬಿಟ್ಟಿದ್ದೇವೆ, ಚಂದ್ರನನ್ನು ಜೇಬೊಳಗಿಟ್ಟುಕೊಂಡಿದ್ದೇವೆ ಎನ್ನುವಂತೆ ಕಂಡರೂ ಭಾರತೀಯ ಸಂದರ್ಭದಲ್ಲಿ ಕೌಟುಂಬಿಕ, ಸಾಮಾಜಿಕ ಸಂಗತಿಗಳು ಅವೇ ಹಳೆಯ ಹಳವಂಡಗಳನ್ನೆ ಹೊತ್ತುಕೊಂಡಿವೆ. ರಂಗಪ್ರಯೋಗದ ಪ್ರಸ್ತುತತೆಯ ಬಗ್ಗೆ ಚರ್ಚಿಸುವಾಗ ಈ ಅಂಶವನ್ನು ಗಮನಿಸಬೇಕಾಗುತ್ತದೆ. ಕಾದಂಬರಿಯಲ್ಲಿನ ಬೈಸಿಕಲ್, ಕಾಪಿ, ಮತಾಂತರ, ಶಾಲಾ ಕಟ್ಟಡ ನಿರ್ಮಾಣಗಳೊಂದಿಗೆ ನಮ್ಮ ಇಂದಿನ ತಲ್ಲಣಗಳನ್ನು ರಿಪ್ಲೇಸ್ ಮಾಡಿಕೊಂಡು ನೋಡಬಹುದು. ಅಷ್ಟೇ ಅಲ್ಲ, ಹಸುವಿನ ಕಳ್ಳವು, ಕಾವೇರಿಯ ಸಾವು, ನಾಗಕ್ಕಳ ಮೇಲಾಗುವ ವಂಚನೆ ಮೊದಲಾದ ದುರಂತಗಳನ್ನೂ.
ಜಾಗತೀಕರಣ, ವರ್ಗ ಸಂಘರ್ಷ, ಮೂಢ ನಂಬಿಕೆಗಳು, ಪುರೋಹಿತಷಾಹಿಗಳ ಜೊತೆಜೊತೆಗೆ ಮಲೆಗಳಲ್ಲಿ ಮದುಮಗಳು ಕಾದಂಬರಿ ಬಿಂಬಿಸುವ ಮತ್ತೊಂದು ಮುಖ್ಯ ಸಂಗತಿ ಸ್ತ್ರೀ ಸಂವೇದನೆ. ಜೀತದಾಳಿನಿಂದ ಹಿಡಿದು ಒಡತಿಯವರೆಗೂ ತಮ್ಮ ತಮ್ಮ ಚೌಕಟ್ಟಿಯಲ್ಲಿ ಮರ್ಜಿ ಹೂಡುತ್ತಲೇ ಸಾಮಾಜಿಕ ವಿಸ್ತಾರದಲ್ಲಿ ದಬ್ಬಾಳಿಕೆಗೆ ಒಳಗಾಗುವ ಹೆಣ್ಣಿನ ಅಸಹಾಯಕತೆಯನ್ನು ಈ ಕಾದಂಬರಿ ಬಿಚ್ಚಿಡುತ್ತದೆ. ನಾಗಕ್ಕನ ವಿಷಯದಲ್ಲಿ ದೇಹ, ಅದಕ್ಕಿಂತ ಹೆಚ್ಚಾಗಿ ಆಕೆಯ ಮನಸ್ಸಿನ ಮೇಲೆ ಎಸಗುವ ವಂಚನೆ ಒಂದೆಡೆಯಾದರೆ, ಕಾವೇರಿಯ ವಿಷಯದಲ್ಲಿ ನಡೆಯುವ ಕ್ರೂರ ಬಲಾತ್ಕಾರ ಮತ್ತೊಂದೆಡೆ. ಈ ಎರಡೂ ಸಂಗತಿಗಳು ಸಾರ್ವಕಾಲಿಕವಾದಂಥವು.
ಈ ನಿಟ್ಟಿನಿಂದ ನೋಡಿದಾಗ ಬಸವ ಲಿಂಗಯ್ಯ ಶಾಪದ ಉಂಗುರವನ್ನು ಕೇಂದ್ರವಾಗಿಟ್ಟುಕೊಂಡು ರಂಗರೂಪ ಕಟ್ಟಿದ್ದು ಸೂಕ್ತವಾಗಿಯೇ ಇದೆ. ಜಾಗತೀಕರಣದಂತಹ ರಾಷ್ಟ್ರೀಯ ಆತಂಕದ ವಿಷಯವಾಗಲೀ ಮತಾಂತರದಂತಹ ವರ್ಗವನ್ನು ಕಲಕುವ ವಿಷಯವಾಗಲೀ ಸಾಮುದಾಯಿಕ ನೆಲೆಯದ್ದು. ಇದರ ಭುಕ್ತಿಯೂ ಸಾಮುದಾಯಿಕವಾಗಿಯೇ ಇರುವುದು. ಆದರೆ ದೈಹಿಕ – ಮಾನಸಿಕ ಅತ್ಯಾಚಾರದಂತಹ ಸೂಕ್ಷ್ಮ ವಿಷಯ ಸಂಪೂರ್ಣ ವ್ಯಕ್ತಿ ನೆಲೆಯದ್ದು. ವ್ಯಕ್ತಿ ನೆಲೆಯಲ್ಲಿ ಸುಧಾರಣೆ ಸಾಧ್ಯವಾಗದೆ ಹೋದರೆ ಯಾವ ಸಮುದಾಯವೂ ರಾಷ್ಟ್ರವೂ ಬದಲಾವಣೆ ಕಾಣಲಾಗದು. ಬಹುಶಃ ಬಸವಲಿಂಗಯ್ಯನವರ ಆಶಯವೂ ಇದೇ ಆಗಿದ್ದಿರಬೇಕು. ಹಾಗೆಂದೇ ಉಂಗುರದ ಕಥೆಯಿಂದ ಆರಂಭವಾಗುವ ನಾಟಕದ ನಿರೂಪಣೆ ಕಾವೇರಿಯ ದುರಂತವನ್ನು ಎದುರು ನಿಲ್ಲಿಸಿ ಅದನ್ನೆ ಮುಖ್ಯ ಕೇಂದ್ರವಾಗಿಸುತ್ತದೆ. ಮೂಲ ಕಾದಂಬರಿಯಲ್ಲಿ ಚರ್ಚೆಗೊಳಪಡಬೇಕಾದ ಅನೇಕ ಸಂಗತಿಗಳಿದ್ದರೂ ಇದನ್ನೆ ಮುಖ್ಯವಾಗಿ ಆಯ್ದುಕೊಂಡಿರುವುದು ಮೆಚ್ಚುಗೆಯಾಗುತ್ತದೆ.
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಚಿನ್ನಮ್ಮನ ಕಷ್ಟ ಕಾರ್ಪಣ್ಯಗಳಿಗೆ ಹಾಗೂ ಅವಳ ಮತ್ತು ಮುಕುಂದಯ್ಯನ ಪ್ರೇಮಕ್ಕೆಒತ್ತು ಕೊಡಲಾಗಿದೆ. ಈ ಕಾದಂಬರಿಯಲ್ಲಿ ಅನೇಕ ಕೇಂದ್ರಗಳಿದ್ದರೂ ಆ ಎಲ್ಲ ಕೇಂದ್ರಗಳನ್ನು ಹಿಡಿದಿಟುವ ಸೂತ್ರದಂತೆ ಚಿನ್ನಮ್ಮ- ಮುಕುಂದಯ್ಯನ ಟ್ರಾಕ್ ಸಾಗುತ್ತದೆ. ಆದರೆ ರಂಗ ರೂಪಾಂತರದಲ್ಲಿ ಈ ಟ್ರಾಕ್ ಹೆಚ್ಚೂಕಡಿಮೆ ಗೌಣವೆಂದೇ ಹೇಳಬಹುದು. ಇಲ್ಲಿ ಮೇಲ್ವರ್ಗದ ಈ ಇಬ್ಬರ ಜೋಡಿಗಿಂತ ಹೆಚ್ಚಾಗಿ ಕೆಳವರ್ಗದ (ಹಾಗೆಂದು ಕರೆಯಲಾಗುವ) ಪ್ರೇಮ ಜೋಡಿಗಳೇ ವಿಜೃಂಭಿಸುತ್ತವೆ. ಅದು ಐತ – ಪೀಂಚಲುವಿನ ದಾಂಪತ್ಯವಿರಬಹುದು, ಗುತ್ತಿ – ತಿಮ್ಮಿಯ ಒಲವಿರಬಹುದು. ಬಹುಶಃ ಬಸವ ಲಿಂಗಯ್ಯನವರ ಈ ಆಯ್ಕೆಯೂ ಉದ್ದೇಶಪೂರ್ವಕವೇ.
ರಂಗರೂಪಾಂತರವನ್ನು ಸಮಕಾಲೀನಗೊಳಿಸುವಲ್ಲಿ ನಿರ್ದೇಶಕರ ಮತ್ತೊಂದು ಪ್ರಯತ್ನ ಎದ್ದು ಕಾಣುತ್ತದೆ. ಅದು ಮಠಮಾನ್ಯಗಳ ವಿಡಂಬನೆ. ಕಾವಿಧಾರಿಗಳ ವಿವಿಧ ಮೋಸಜಾಲಗಳನ್ನು, ದೌರ್ಬಲ್ಯಗಳನ್ನು ನಗ್ಬಗೊಳಿಸುವ ಒಂದು ನೃತ್ಯವನ್ನೇ ರಂಗದಲ್ಲಿ ಅಳವಡಿಸಲಾಗಿದೆ. ಮತ್ತು ಈ ಅಳವಡಿಕೆಯಲ್ಲಿ ಇತ್ತೀಚೆಗೆ ನಡೆದ ಹಗರಣಗಳನ್ನು ಜಾಗರೂಕವಾಗಿ ಬಿಂಬಿಸಲಾಗಿದೆ.
ಹಾಗೆಯೇ ನಿರ್ದೇಶಕರು ಸಾಕಷ್ಟು ಸ್ವಾತಂತ್ರ‍್ಯ ವಹಿಸಿ ಕುವೆಂಪು ಹೇಳದೆ ಉಳಿಸಿದ್ದ ಸಮಜಾಯಿಷಿಯನ್ನು ತುಂಬಿದ್ದಾರೆ. ಹೊನ್ನಳ್ಳಿ ಹೊಡೆತದ ಸಾಬರ ಹಾಡು ಈ ನಿಟ್ಟಿನಲ್ಲಿ ತುಸು ಆಕ್ಷೇಪಾರ್ಹ. ಆದರೆ, ಇಂದಿನ ಸನ್ನಿವೇಶಕ್ಕೆ ಅದನ್ನಿಟ್ಟು ನೋಡಿದರೆ ಈ ಸೇರ್ಪಡೆ ಅನಗತ್ಯವಂತೂ ಅಲ್ಲವೆನ್ನಿಸುತ್ತದೆ. ನಾಟಕ ಅಥವಾ ಕಾದಂಬರಿಯ ಈ ಒಂದು ಅಂಶವನ್ನೆ ಮುಂದಿಟ್ಟುಕೊಂಡು ಒಡೆಯುವ ಕಾರ್ಯಗಳು ಯಾವ ಕ್ಷಣದಲ್ಲಾದರೂ ಆಗಬಹುದಾದಷ್ಟು ಸೂಕ್ಷ್ಮ ಸನ್ನಿವೇಶ ಇಂದಿನದು. ಈ ನಿಟ್ಟಿನಲ್ಲಿ ಆಕ್ಷೇಪವನ್ನು ಹಿಂಪಡೆದು ಒಪ್ಪಿಕೊಳ್ಳಬಹುದು. ಇದೇ ಮಾತು ಪಾದ್ರಿಯ ಹೆಚ್ಚುವರಿ ಹೇಳಿಕೆಗೂ ಅನ್ವಯಿಸುತ್ತದೆ. ಕುವೆಂಪು ಮತಾಂತರದ ವಿರುದ್ಧ ಸ್ಪಷ್ಟ ದನಿ ಎತ್ತಿದವರು. ಪುರೋಹಿತಷಾಹಿ, ಮೇಲ್ವರ್ಗಗಳ ದಮನಕಾರಿ ನೀತಿಗಳೇ ಇದಕ್ಕೆ ಕಾರಣ ಎಂದು ಅವರು ಘಂಟಾಘೋಷವಾಗಿ ಹೇಳುತ್ತಿದ್ದರು. ಆದರೂ ಕ್ರೈಸ್ತ ಮಿಷನರಿಗಳು ಮತಾಂತರಕ್ಕೆ ಅಂದಿಗೂ ಇಂದಿಗೂ ಬಳಸು ದಾರಿ ಹಿಡಿಯುವುದನ್ನು ಅಲ್ಲಗಳೆಯುವಂತಿಲ್ಲ. ಕುವೆಂಪು ಅವರ ’ಕ್ರಿಸ್ತನಲ್ಲ, ಪಾದ್ರಿಯ ಮಗಳು’ ಎಂಬ ಕಿರು ಕಥೆ ಕುವೆಂಪು ಅವರ ನಿಲುವಿಗೆ ಒಂದು ಉದಾಹರಣೆ. ಕಾದಂಬರಿಯಲ್ಲೂ ಅವರು ಪಾದ್ರಿ ಜೀವರತ್ನಯ್ಯನವರ ಮಗಳನ್ನು ಮುಂದೆ ಮಾಡಿ ದೇವಯ್ಯನ ಮತಾಂತರದ ಪ್ರೇರಣೆಯಂತೆ ತೋರಿಸುತ್ತಾರೆ ಹೊರತು ಧರ್ಮದೊಳಗಿನ ಮೌಢ್ಯಗಳನ್ನು ಮುಖ್ಯವಾಗಿಸಿಯಲ್ಲ. ರಂಗರೂಪಾಂತರದಲ್ಲೂ ಪಾದ್ರಿಯ ಮಗಳ ಪ್ರಭಾವವನ್ನು ಕಾಣಿಸಲಾಗಿದೆ. ಮದುವೆಯ ಒಂದೇ ಕಾರಣಕ್ಕಾಗಿ ಹೇಗೆಂದರೆ ಹಾಗೆ ಮತಾಂತರಗೊಳ್ಳುವ ಕೆಟ್ಟ ಟ್ರೆಂಡಿನ ಈ ಕಾಲಕ್ಕೆ ಹತ್ತೊಂಭತ್ತನೆ ಶತಮಾನದ ಅಂತಹದ್ದೇ ಚಿತ್ರಣ ಅಪರಿಚಿತವಾಗಿ ಉಳಿಯುತ್ತದೆ ಎಂದು ಹೇಳುವುದಾದರೂ ಹೇಗೆ!?
——————–

ರಂಗಸಜ್ಜಿಕೆಯ ಬೆರಗು
ಮಲೆಗಳಲ್ಲಿ ಮದುಮಗಳು ರಂಗರೂಪಾಂತರದ ಯಶಸ್ಸಿನಲ್ಲಿ ರಂಗಸಜ್ಜಿಕೆಯ ಪಾತ್ರ ಮಹತ್ವದ್ದು. ಇದಕ್ಕಾಗಿ ನಾಲ್ಕು ವೇದಿಕೆಗಳಲ್ಲಿ ಮಲೆನಾಡಿನ ಒಂದು ಭಾಗವನ್ನೇ ಪುನರ್ ಸೃಷ್ಟಿ ಮಾಡಲಾಗಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಈ ವೇದಿಕೆಗಳನ್ನು ನಿರ್ಮಿಸಲು ಒಂದು ತಿಂಗಳಿಗೂ ಮೀರಿದ ಸಮಯ ತೆಗೆದುಕೊಳ್ಳಲಾಗಿದೆ.
ಒಟ್ಟಾರೆ ನಾಟಕ ಆಪ್ತವಾಗಲು ತೊಡಗುವುದೇ ಮಲೆನಾಡಿನ ಪರಿಸರದಿಂದ. ಇದರ ಹೊರತಾಗಿ ವೀಕ್ಷಣೆಗೆ ತೊಡಗಿದರೆ ಖಮಡಿತವಾಗಿಯೂ ಈ ಮಟ್ಟದ ಫೀಲ್ ದೊರಕುತ್ತಿರಲಿಲ್ಲ. ಕ್ಲಾಸಿಕ್ ಕೃತಿಯೊಂದನ್ನು ರಂಗದ ಮೇಲೆ ತರಲು ಇಂಥ ಸಾಹಸ ಅನಿವಾರ್ಯವಾಗಿತ್ತು. ಕಥೆಯ ಓಘ ಮತ್ತು ಅದಕ್ಕೆ ಪೂರಕವಾದ ಹಿನ್ನೆಲೆಗಳು ದೀರ್ಘಾವಧಿಯವರೆಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಸಹಕರಿಸುತ್ತದೆ, ಪ್ರೇಕ್ಷಕರನ್ನು ಒಂದರಿಂದ ಮತ್ತೊಂದು ರಂಗಸಜ್ಜಿಕೆಗೆ ಕರೆದೊಯ್ಯುತ್ತಾ ಕಥೆ ಹೇಳುವ ವಿಶಿಷ್ಟ ತಂತ್ರವನ್ನು ನಿರ್ದೇಶಕರು ಆಯ್ದುಕೊಂಡಿದ್ದಾರೆ. ವೇದಿಕೆ ಶಿಫ್ಟ್ ಆಗುತ್ತಿದ್ದಂತೆ ನಾಟಕದ ಮೂಡ್‌ ಕೂಡಾ ಶಿಫ್ಟ್‌ ಆಗುತ್ತದೆ. ಪ್ರೇಕ್ಷಕರೂ ಸುಲಭವಾಗಿ ಅದಕ್ಕೆ ಹೊಂದಿಕೊಳ್ಳುತ್ತಾರೆ.

ಕಲಾವಿದರ ಬದ್ಧತೆ
ಒಟ್ಟಾರೆ ಎಪ್ಪತ್ತು ಕಲಾವಿದರಲ್ಲಿ ಬಹುತೇಕರು ಹೊಸಬರು. ಮೈಸೂರಿನಲ್ಲಿ ರಂಗಾಯಣದ ಕಲಾವಿದರನ್ನು ಬಳಸಿಕೊಂಡು ಪ್ರದರ್ಶನ ನೀಡಲಾಗಿತ್ತು. ಆದರೆ ಇಲ್ಲಿ ಮುಖ್ಯ ಪಾತ್ರಗಳೂ ಸೇರಿದಂತೆ ಹೊಸಬರ ಸಂಖ್ಯೆಯೇ ಹೆಚ್ಚು. ಹಾಗಿದ್ದೂ ತಿಂಗಳ ಅವಧಿಯಲ್ಲಿ ತಾಲೀಮು ನಡೆಸಿ ಅತ್ಯದ್ಭುತ ಅಭಿನಯ ನೀಡಿದ್ದಾರೆ. ಇರುಳಿಡೀ ನಿದ್ದೆಗೆಟ್ಟು ನಟಿಸುತ್ತಿದ್ದರೂ ಉತ್ಸಾಹ ತಗ್ಗದೆ ಇರುವುದು ಕಲಾವಿದರ ಬದ್ಧತೆಯನ್ನು ತೋರುತ್ತದೆ. ಹಾಗೆಂದು ಅವರಿಗೆ ಈ ನಿದ್ದೆಗೆಡುವಿಕೆಯಿಂದ ಉಂಟಾಗಿರುವ ಸಮಸ್ಯೆಯೇನೂ ಕಡಿಮೆಯದಲ್ಲ. “ಹೊರದೇಶದಿಂದ ಭಾರತಕ್ಕೆ ಬಂದಾಗ ಉಂಟಾಗುವ ಜೆಟ್‌ಲ್ಯಾಗ್‌ನ ಹಾಗೆಯೇ ಅಲ್ಪ ಸ್ವಲ್ಪ ಕಸಿವಿಸಿ ಆಗಬಹುದು ಅಂದುಕೊಂಡಿದ್ದೆ. ಆದರೆ ಕಲಾವಿದರು ಅದಕ್ಕಿಂತ ಹೆಚ್ಚಿನ ಆರೋಗ್ಯ ಹಾಗೂ ಮಾನಸಿಕ ಕಸಿವಿಸಿ ಅನುಭವಿಸುತ್ತಿದ್ದಾರೆ. ದಿನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ತುಸು ಕಷ್ಟವೆನ್ನಿಸುತ್ತಿದೆ” ಎನ್ನುತ್ತಾರೆ ತಂಡದ ನಿರಂತರ ಒಡನಾಟದಲ್ಲಿರುವ ಒಬ್ಬ ಸದಸ್ಯರು.

ಇತರ ಪ್ರಯೋಗಗಳು
ಮಲೆಗಳಲ್ಲಿ ಮದುಮಗಳು ಕನ್ನಡದ ಮಟ್ಟಿಗೆ ಒಂದು ವಿಶಿಷ್ಠ ರಂಗಾನುಭವ. ರಾಷ್ಟ್ರಮಟ್ಟದಲ್ಲಿ ಹಿಂದೆ ಈ ಬಗೆಯ ಪ್ರಯೋಗಗಳು ನಡೆದಿವೆ. ದೆಹಲಿಯ ಹೆಸರಾಂತ ರಂಗಕರ್ಮಿ ಅಮೀರ್ ರಜಾ ಹುಸೇನ್ ಕೆಲ ವರ್ಷಗಳ ಹಿಂದೆಯೇ “ದಿ ಲೆಜೆಂಡ್ ಆಫ್ ರಾಮಾ” ಹಾಗೂ ಕಾರ್ಗಿಲ್ ಕುರಿತ “ಫಿಫ್ಟಿ ಡೇ ವಾರ್” ಪ್ರಯೋಗಗಳನ್ನು ಈ ಮುಕ್ತ ವಿನ್ಯಾಸದಲ್ಲಿ ನಿರ್ದೇಶಿಸಿ ಭಾರತೀಯ ರಂಗಭೂಮಿಗೊಂದು ಹೊಸ ಆಯಾಮ ನೀಡಿದ್ದರು. ಕಾರ್ಗಿಲ್ ಕುರಿತ ನಾಟಕದಲ್ಲಿ ಅವರು ಹೆಲಿಕಾಪ್ಟರ್, ಯುದ್ಧದ ಸನ್ನಿವೇಶಗಳನ್ನೆಲ್ಲ ಹಾಹಾಗೇ ಸೃಷ್ಟಿಸಿದ್ದರು. ಪ್ರೇಕ್ಷಕರು ದೃಶ್ಯದಿಂದ ದೃಶ್ಯಕ್ಕೆ ವಿವಿಧ ವೇದಿಕೆಗಳಿಗೆ ಶಿಫ್ಟ್ ಆಗುವ ಯೋಜನೆಯೂ ಇವರದ್ದೇ. ಹುಸೇನ್ “ಫಿಫ್ಟಿ ಡೇ ವಾರ್”ಗಾಗಿ ಆರು ಎಕರೆ ವಿಸ್ತಾರದ ಪ್ರದೇಶವನ್ನು ಬಳಸಿಕೊಂಡಿದ್ದರು.