ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ


ಈಗ ಅದೆಲ್ಲ ಮಜಾ ಅನಿಸತ್ತೆ.
ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ ಬರೆದಿರಲಿಲ್ಲ! ( ಆಮೇಲೆ ಬರ್ದೆ ಅಂದ್ಕೊಳ್ಬೇಡಿ… ನಾನು ಓದು ನಿಲ್ಲಿಸಿದ್ದು ಆಗಲೇ. ಮದ್ವೆ ಆಯ್ತಲ್ಲ, ಅದ್ಕೆ…) ಆದ್ರೂ ನಾನು ಮೊದಲ ಮೂರು ಪ್ಲೇಸಲ್ಲಿ ಇರ್ತಿದ್ದೆ ಅನ್ನೋದು ನಾನು ಕೊಟ್ಕೊಳೋ ಸಮಜಾಯಿಶಿ! (ನೀವು ನನ್ನ ಶತದಡ್ಡಿ ಅಂದ್ಕೋಬಾರದಲ್ಲ, ಅದ್ಕೆ!!)
ಹಾಗಾದ್ರೆ, ದಪ್ಪ ದಪ್ಪ ರಟ್ಟಿನ ನೂರು- ಇನ್ನೂರು ಪುಟಗಳ ‘ಲೇಖಕ್’ ನೋಟ್ ಬುಕ್ ಗಳನ್ನ ನಾನೇನು ಮಾಡ್ತಿದ್ದೆ?
ಕೊನೆ ಪುಟದಿಂದ ಹಿಡಿದು ಉಲ್ಟಾ ಮಾಡ್ಕೊಂಡು ಚಿತ್ರ, ಕವನ ಬರೀತಿದ್ದೆ! ರಾಮಾಯಣ, ಮಹಾಭಾರತದ ಕಥೆಗಳ್ನ ಗೀಚಿಟ್ಕೊಳ್ತಿದ್ದೆ!!

ಹೀಗೊಮ್ಮೆ ಕಂಬಳಿ ಹುಳದ ಕವನ ಬರೆದಾಗಲೆ ನಾನು ಸಿಕ್ಕಿಬಿದ್ದಿದ್ದು. ಐದನೇ ಕ್ಲಾಸಲ್ಲಿ ಟೀಚರ್ರು ‘ಚಿಟ್ಟೆಯ ಜೀವನ ಚರಿತ್ರೆ’ ಪಾಠದ ನೋಟ್ಸು ಕೊಡ್ತಿದ್ದರೆ, ನಾನು ತಲೆ ತಗ್ಗಿಸ್ಕೊಂಡು ನೆಲ್ಲಿಕಾಯಿ ತಿನ್ನುತ್ತ ಕವಿತೆ ಬರೆಯುತ್ತಿದ್ದೆ!
ಆವರೆಗೂ ನೋಟ್ಸು ನೋಡುವ ದಿನ ಊರುಕೇರಿಯದೆಲ್ಲಾ ಬುದ್ಧಿ ಉಪಯೋಗಿಸಿ ಪಾರಾಗಿಬರ್ತಿದ್ದ ನಾನು ಅವತ್ತು ಸಿಕ್ಕಿಬಿದ್ದಿದ್ದೆ. ಕ್ಲಾಸ್ ಮೇಟುಗಳೆಲ್ಲ ಶೇಮ್ ಶೇಮ್ ಅಂದುಬಿಟ್ಟರು! ಇನ್ನೊಂದು ತಿಂಗಳಲ್ಲಿ ಆವರೆಗಿನ ಎಲ್ಲ ನೋಟ್ಸು ಬರೆದು ತೋರಿಸುವವರೆಗೂ ಯಾರೂ ನನ್ನ ಹತ್ರ ಮಾತಾಡಬಾರದು ಅಂತ ಟೀಚರ್ ತಾಕೀತು ಮಾಡಿದರು. ಅಮ್ಮನಿಗೆ ಬುಲಾವು ಹೋಯಿತು.
ನನಗೆ ಅದ್ಯಾವುದೂ ದೊಡ್ಡ ಶಿಕ್ಷೆ ಅನಿಸಲೇ ಇಲ್ಲ! ಯಾಕೆಂದರೆ, ನಾನಂತೂ ನೋಟ್ಸು ಬರೆಯುವುದೇ ಇಲ್ಲ ಅಂತ ನಿರ್ಧಾರ ಮಾಡಿಬಿಟ್ಟಿದ್ದೆ!!
ಈಗಲೂ ನನ್ನದದೊಂದು ಮೊಂಡು ವಾದವಿದೆ. ಫಲಿತಾಂಶ ಮುಖ್ಯವೇ ಹೊರತು ಪ್ರೊಸೀಜರ್ ಅಲ್ಲ ಅನ್ನೋದು!
ಆದ್ರೆ ಗಣಿತದಲ್ಲಿ ಪ್ರತಿ ಪ್ರಕ್ರಿಯೆಗೂ ಮಾರ್ಕ್ಸ್ ಇದೆ, ಫಲಿತಾಂಶ ತಪ್ಪಿದ್ರೂ ಒಂದಷ್ಟು ಮಾರ್ಕ್ಸು ಸಿಗತ್ತೆ… ಬಹುಶಃ ಫಲಿತಾಂಶಕ್ಕೆ ಮೊರೆ ಹೋಗುವ ನಾನು ಲೆಕ್ಕಾಚಾರ ತಪ್ಪೋದು ಅಲ್ಲಿಯೇ ಅನಿಸುತ್ತೆ…

ಸರಿ… ನನಗೆ ಹೀಗಾಯ್ತಲ್ಲ ಅಂತ ಬೇಜಾರಿರಲಿಲ್ಲ. ನಾಳೆ ನನ್ನಮ್ಮ ಬರ್ತಾಳಲ್ಲ, ಈ ಟೀಚರ್ ಅದೇನೇನು ಹೇಳ್ತಾರೋ ನನ್ ಬಗ್ಗೆ ಅಂತೆಲ್ಲ ಚಿಂತೆ ಕಾಡತೊಡಗಿತು. ಅಮ್ಮನೂ ಬಂದೇಬಂದಳು. ಟೀಚರ್ ಹೇಳಿದ್ದನ್ನೆಲ್ಲ ಕೇಳಿಕೊಂಡು ನನ್ನ ಕಡೆಗೊಮ್ಮೆ ತಿರುಗಿ,  ‘ಮನೆಗ್ ಬಾ, ಮಾಡ್ತೀನಿ’ ಅನ್ನೋ ಥರ ನೋಡ್ಕೊಂಡು ಹೋದಳು.
ಕೆಂಪು ಕೆಂಪು ಅಮ್ಮನನ್ನ ಊಹಿಸ್ಕೊಂಡು ಹೋಗಿದ್ದ ನಂಗೆ ಒಂದು ಥರ ನಿರಾಶೆಯೇ ಆಯ್ತು! ಅವಳು ನನ್ನ ದೊಡ್ಡಮ್ಮನಿಗೆಲ್ಲ ಕಥೆ ಹೇಳಿ ನಗ್ತಿದ್ದಳು!! ಕೊನೆಗೆ, ಅಪ್ಪ ಬರಲಿ ತಾಳು, ಅಂದು ಸುಮ್ಮಗಾದಳು.
ಅಪ್ಪನೂ ಬಂದಿದ್ದಾಯ್ತು. ನನ್ನ ನೋಟ್ಸುಗಳನ್ನ ನೋಡಿ ಅದರೊಳಗಿದ್ದ ಚಿತ್ರಗಳನ್ನ ನೋಡಿ ಅವರು ತಲೆ ಮೇಲೊಂದು ಕುಟ್ಟಿದ್ದು, ನಾನು ನೋವಿಗಿಂತ ಹೆಚ್ಚಾಗಿ ಸಿಟ್ಟು- ಅಸಹಾಯಕತೆಗಳಿಂದ ಅತ್ತಿದ್ದು, ಎಲ್ಲಾ ಮುಗೀತು. ಆದರೂ ಅವರು ಹೆಚ್ಚು ದಂಡಿಸುವ ಹಾಗಿರಲಿಲ್ಲ. ಯಾಕಂದರೆ ನನ್ನ ಮಾರ್ಕುಗಳು ನನಗೆ ಬೆಂಬಲವಾಗಿದ್ದವಲ್ಲ!?.
ಹಾಳೆ ತಿರುಗಿಸ್ತ, ತಿರುಗಿಸ್ತ ಅಪ್ಪ ‘ಚಿಂತೆ’ ಅನ್ನುವ ಕವಿತೆ ಓದಿದರು. ಏಕ್ ದಂ ಇಡಿಯ ಮನೆ ತಣ್ಣಗಾಗಿ ಹೋಯ್ತು. ಅಪ್ಪನ ಮುಖ ಪೂರ್ತಿ ಬದಲಾಯ್ತು. “ಇದನ್ಯಾವಾಗ ಬರೆದೆ ಮಗಳೇ?’ ಅಂದರು.
ಅದನ್ನ ನಾನು, ಅಪ್ಪ ಮನೆ ರಿಪೇರಿಗೆ ದುಡ್ಡು ಹೊಂಚುವುದು ಹೇಗೆ ಅಂತ ಚಿಂತಿಸ್ತಿದ್ದನ್ನ ನೋಡಿ ಬರೆದಿದ್ದೆ!

ಮುಗಿಯಿತು. ಅಪ್ಪ ಮತ್ತೆಂದೂ ಕವಿತೆ ಬರೆದಿದ್ದಕ್ಕೆ ನನಗೆ ಹೊಡಿಯಲಿಲ್ಲ! ಶಿಸ್ತು ಕಲಿ ಅಂತ ಆಗಾಗ ರೇಗಿದರೂ ಒತ್ತಡ ಹೇರಲಿಲ್ಲ. ನಾನು ಏನೊಂದೇ ಬರೆದರೂ ಅದನ್ನ ತಾವೇ ಟೈಪ್ ಮಾಡಿಕೊಂಡು ಬಂದು ಅವರಿವರಿಗೆ ಹಂಚತೊಡಗಿದರು. ಮೊದಲೇ ಸಂಕೋಚದ ಮುದ್ದೆಯಾಗಿದ್ದ, ಒಂಟಿಬಡಕಿಯಾಗಿದ್ದ ನಾನಂತೂ ನಾಚಿಕೆಯಿಂದ ಮುದ್ದೆಯಾಗಿಹೋಗ್ತಿದ್ದೆ. ಹೀಗೆಲ್ಲ ತಮ್ಮ ಮಗಳ ಬಗ್ಗೆ ತಾವೇ ಹೇಳ್ಕೊಂಡ್ರೆ ಜನ ಏನಂದ್ಕೊಳ್ತಾರೆ? ಅಂತ ಮುಜುಗರಪಡ್ತಿದ್ದೆ. ಅಡುಗೆ ಮನೇಲಿ ಅಮ್ಮನ ಜತೆ ಪಿಸುಗುಟ್ಟುತ್ತ ಬಯ್ಕೊಳ್ತಿದ್ದೆ…

ಈಗ ನನ್ನ ಬಗ್ಗೆ ನಾನೇ ಹೇಳ್ಕೊಳ್ತಿದೀನಲ್ಲ? ನೀವು ಕೇಳಬಹುದು… ಇದನ್ನೆಲ್ಲ ಹೇಳಿಕೊಳ್ಳಲೇಬೇಕೆಂಬ ಬಯಕೆಯಲ್ಲಿ, ನೀವೇನೆಂದುಕೊಳ್ತೀರೋ ಅನ್ನೋ ಮುಜುಗರದಲ್ಲೇ ಈಗ ಇದನ್ನ ಬರೀತಿದೇನೆ. ( ಮತ್ತೆ ಸಮಜಾಯಿಷಿ!) ಮತ್ತಿದು, ಬಹುತೇಕರ ಬಾಲ್ಯದಲ್ಲಿ ನಡೆದಿರಬಹುದಾದ ಘಟನೆಯೇ ಅಲ್ಲವೇ?

ಬಹುಶಃ ನನ್ನ ವಿಧಿಗೆ ಗೊತ್ತಿತ್ತು, ನನಗೆ ಶಾಲೆಯ ಓದು, ನೋಟ್ಸಿಗಿಂತ ಈ ರೀತಿಯ ಬರೆಯುವ ತೆವಲೇ ಬದುಕು ನೀಡೋದು ಅಂತ.  ಬೆಂಗಳೂರಿಗೆ ಕಾಲಿಟ್ಟ ಮೂರು ವರ್ಷದಿಂದ ನಾಲ್ಕು ಕೆಲಸ ಬದಲಿಸಿದ್ದೇನೆ. ಪ್ರತಿ ಸಾರ್ತಿಯೂ ವಿದ್ಯಾರ್ಹತೆ ಎದುರಿಗೆ ‘ಸೆಕೆಂಡ್ ಪಿಯುಸಿ’ ಅಂತ ಬರೆಯುವಾಗೆಲ್ಲ ಮುಖ ಸಣ್ಣ ಮಾಡ್ಕೊಂಡಿದ್ದೇನೆ. ಆದರೂ ಅದಕ್ಕಿಂತ ಹೆಚ್ಚಾಗಿ ಅಕ್ಷರಗಳ ಕರುಣೆಯಲ್ಲೇ ಇವತ್ತು ನೆಮ್ಮದಿಯಾಗಿ ಉಳಿದಿದ್ದೇನೆ. ತಲೆಯಲ್ಲಿ ಇಂಥದೊಂದು ಮೆದುಳಿಟ್ಟು ಕಳಿಸಿದ ದೇವಿಗೆ ಥ್ಯಾಂಕ್ಸ್ ಹೇಳುವುದಷ್ಟೆ ನಾನು ಮಾಡಬಹುದಾದ ಕೆಲಸ ಅನಿಸುತ್ತೆ…

ಇವತ್ತಿದನ್ನೆಲ್ಲ ನಾನ್ಯಾಕೆ ಹೇಳ್ಕೊಳ್ತಿದೇನೆ? ಕಾರಣವಿದೆ…
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ. ಅದಕ್ಕೇ, ಇದೊಂದು ಪುಟ್ಟ ಫ್ಲ್ಯಾಶ್ ಬ್ಯಾಕು!

ಜಿ.ಎನ್.ಮೋಹನ್ ಬಹಳ ಮುದ್ದಾಗಿ, ನೀಟಾಗಿ ಪುಸ್ತಕವನ್ನ ಹೊರತಂದಿದ್ದಾರೆ. ಅವರ ಕೈವಾಡವಿಲ್ಲದಿದ್ದರೆ, ನಾನೇ ಪ್ರಕಾಶನದ ಹೊಣೆ ಹೊತ್ತುಕೊಂಡಿದ್ದರೆ ಖಂಡಿತ ಇಷ್ಟು ಒಳ್ಳೆಯ ಪುಸ್ತಕ ಹೊರಬರ್ತಿರಲಿಲ್ಲ.
ಅಪಾರ ಸೊಗಸಾದ ಮುಖ ಪುಟ- ಪುಟ ವಿನ್ಯಾಸಗಳನ್ನು ಮಾಡಿಕೊಟ್ಟಿದ್ದಾರೆ.
ಪ.ಸ ಕುಮಾರ್ ರೇಖೆಗಳು ಅರ್ಥಪೂರ್ಣವೂ ಆಪ್ತವೂ ಆಗಿವೆ.
ಜೋಗಿಯವರು ಮುನ್ನುಡಿ ಬರೆದು ಪ್ರೋತ್ಸಾಹಿಸಿದರೆ, ನಟರಾಜ್ ಹುಳಿಯಾರ್ ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.
 ‘ಭಾಮಿನಿ ಷಟ್ಪದಿ’ಗೆ ಮೂಲ  ಕಾರಣರಾದ ವೆಂಕಟ್ರಮಣ ಗೌಡರು ‘ಉಫೀಟ್’ ಕವನ ಸಂಕಲನಕ್ಕೆ ಬರೆದುಕೊಟ್ಟ ನಲ್ನುಡಿಗಳು ಇಲ್ಲಿಯೂ ಇವೆ.

ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.

ನಿಮ್ಮಲ್ಲಿ ಶೇ.೯೦ ಮಂದಿಯನ್ನು ನಾನು ನೋಡಿಲ್ಲ. ಆದರೆ ನಿಮ್ಮೆಲ್ಲರ ಸ್ನೇಹ- ಪ್ರೀತಿಗಳ ಸವಿಯನ್ನು ಈ ಒಂದು ವರ್ಷದಿಂದ ಉಣ್ಣುತ್ತಲೇ ಬಂದಿದ್ದೇನೆ. ನಿಮಗೆಲ್ಲರಿಗೂ ನಾನು ಋಣಿ.
ನೀವು ‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ. ನೀವೆಲ್ಲರೂ ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

22 thoughts on “ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ

Add yours

  1. ಭಾಮಿನಿ ಷಟ್ಪದಿಗೆ ಮತ್ತು ಭಾಮಿನಿಗೆ ಅಭಿನಂದನೆಗಳು. 🙂

    ಪುಸ್ತಕ ಎಲ್ಲಿ ಬಿಡುಗಡೆಯಾಗಲಿದೆ ಅಂತ ಹೇಳಿದ್ರೆ ಚೆನ್ನಾಗಿರ್ತಿತ್ತು.
    ಇಲ್ಲಾಂದ್ರೆ ನಾವು ಸೋಮವಾರ ಸಾಯಂಕಾಲ ಬೈಕು ಹಾಕ್ಕೊಂಡು ಹುಡುಕಿ ಹುಡುಕಿ ಸುಸ್ತಾಗೋಗ್ತೀವಿ 🙂

  2. ಹದಿನಾಲ್ಕನೇ ತಾರೀಕು ಊರಿಗೆ ಹೋಗ್ತಿದೀನಿ. ವಾಪಾಸ್ ಬರ್ಲಿಕ್ಕೆ ಇನ್ನೂ ಟಿಕೇಟ್ ಸಿಕ್ಕಿಲ್ಲ. ಸಿಕ್ರೆ, ಹದಿನೇಳನೇ ತಾರೀಕು ರಾತ್ರಿಗೇ ಸಿಕ್ರೆ, ನಿಮ್ ಫಂಕ್ಷನ್ ಅಟೆಂಡ್ ಮಾಡೋದು ಗ್ಯಾರೆಂಟಿ. 🙂

    ಯಾವ್ದಕ್ಕೂ ಒಂದು ಪ್ರಿಕಾಶನರೀ ಶುಭಾಶಯಾನ ಇಟ್ಕೊಂಡಿರಿ. 😉

  3. ಅಭಿನಂದನೆಗಳು.
    ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ. ಎಲ್ಲರಿಗೂ ಖುಷಿ ತರಲಿ.

    ಶುಭ ಹಾರೈಕೆಗಳೊಂದಿಗೆ,
    ಮೋಹನ ಬಿಸಲೇಹಳ್ಳಿ

  4. ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

    ಕಾರ್ಯಕ್ರಮದ ವೀಡಿಯೋ ರೆಕಾರ್ಡಿಂಗ್ ಮಾಡಿ ಅಪ್ಲೋಡಿಸಿ.

    @ವಿಕಾಸ್,
    ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ…ನೋಡ್ಲಿಲ್ವಾ?

  5. ಅಕ್ಕಾ ನಿಮ್ಮ ಪುಸ್ತಕ ಬಿಡುಗಡೆ ಸುದ್ದಿ ಕೇಳಿ ತುಂಬಾ ಸಂತೋಷವಾಗುತ್ತಿದೆ. ಬದುಕು ನಾವಂದುಕೊಂಡತೆ ಯಾವತ್ತು ಸಾಗುವುದೇ ಇಲ್ಲ. ಎಲ್ಲರೂ ಬದಿಕಿನ ಕುರಿತಾಗಿ ಕಟ್ಟಿದ ಕನಸುಗಳು ಸಫಲವಾಗುತ್ತವೆ ಅಂತಾನೂ ಇಲ್ಲ. ಕೆಲ ಸಾಧಕರು ಪಟ್ಟು ಬಿದ್ದು ತಮ್ಮ ಕನಸನ್ನೇ ಬದುಕಾಗಿಸಿಕೊಳ್ಳುತ್ತಾರೆ. ಅನಿ ವೇ ಆಲ್ ದಿ ಬೆಸ್ಟ್. ನಿಮ್ಮ ಪುಸ್ತಕ ಬಿಡುಗಡೆಗೆ ತಪ್ಪದೇ ಬರಲು ಪ್ರಯತ್ನಿಸುತ್ತೇನೆ. ದುಡ್ಡು ಕೊಟ್ಟೆ ಪುಸ್ತಕ ಖರೀದಿಸುತ್ತೇನೆ!
    ಪ್ರೀತಿಯಿಂದ
    ವಿನಾಯಕ

  6. ಒಳ್ಳೇದಾಗಲಿ ಚೇತನಾರವರೆ.
    ನಿಮ್ಮ ಲೇಖನಗಳನ್ನ ಮೊದ ಮೊದಲು ಅವಧಿಯಲ್ಲಿ ಓದಿದಾಗ ಸಿಕ್ಕಾಬಟ್ಟೆ fan ಆಗ್ಬಿಟ್ಟೆ. ಆಮೆಲೆ ಸ್ವಲ್ಪಕಾಲ “ಇವರು ಯಾಕೊ ಅತಿಯಾದ ಮಹಿಳಾವಾದಿಗಳಿರಬೇಕು” ಅಂತ ಸ್ವಲ್ಪ ಅಭಿಮಾನ ಕಡಿಮೆ ಆಗಿದ್ದು ಇದೆ. ಆದರೆ ಕೊನೆಗೆ ಅದನ್ನೆಲ್ಲ ವಿಶ್ಲೇಶಿಸಿ ನೋಡಿದ್ರೆ ನೀವು ಏನು ಹೇಳ್ಬೋಕೋ ಅದನ್ನ ಅದ್ಭುತವಾಗಿ ಹೇಳ್ತೀರ, ನಿಮ್ಮ ಲೇಖನಗಳು ಯಾವತ್ತು ಎರಡು ನಿಮಿಷ ಸುಮ್ನೆ ಯೋಚನೆ ಮಾಡೋ ಹಾಗೆ ಮಾಡುತ್ತೆ. ಹೀಗೆ ಮುಂದುವರಿಲಿ.

  7. ಪ್ರೀತಿಯ ಚೇತನಾ…
    ಪುಸ್ತಕ ಬಿಡುಗಡೆಯಾಗ್ತಿರೋದಕ್ಕೆ ಶುಭಾಶಯಗಳು. ಫೋಟೋಗಳ ಜೊತೆಯಲ್ಲಿ ಕಾರ್ಯಕ್ರಮ ಚಂದವಾಗಿ ಸಾಗಿದ ವರದಿಯನ್ನ ಓದೋಕೆ ಕಾಯ್ತಿರ್ತೀನಿ. ಊರಿಗೆ ಬಂದಾಗ ‘ಭಾಮಿನಿ ಷಟ್ಪದಿ’ಯನ್ನ ಖರೀದಿಸಿ ಓದೋಕೆ ಮರೆಯೋಲ್ಲ. 🙂

  8. ಚೇತನಾ:
    ಅಭಿನಂದನೆಗಳು. ಯಥಾ ಪ್ರಕಾರ ನಾನು ಈ ಕಾರ್ಯಕ್ರಮವನ್ನೂ ಮಿಸ್ ಮಾಡುತ್ತೇನೆ. ಅವಕಾಶ ಸಿಕ್ಕಾಗ ಪುಸ್ತಕ ತೊಗೊಂಡು ಓದುತ್ತೇನೆ.

  9. ಚೇತನಾ, ಅಭಿನಂದನೆಗಳು. ನಿಮ್ಮ ಬರವಣಿಗೆ ಹೀಗೇ ಯಾವ ಅಡೆತಡೆಯಿಲ್ಲದೆ ಸಾಗಲಿ. ನಿಮ್ಮ ಇನ್ನಷ್ಟು ಮತ್ತಷ್ಟು ಪುಸ್ತಕಗಳು ಹೊರಬರಲಿ.

    -ಮೀರ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑